ಈ ಮಳೆಗಾಲದಲ್ಲಿ ಕೆಸರಿನಿಂದ ನೆಲ ಸಾರಿಸಿದ ಮನೆಗಳ, ಹಿತ್ತಲ ಗೋಡೆಯಿಂದ ಕರಿ ಇರುವೆಗಳು ಮನೆ ತುಂಬಾ ನುಗ್ಗುತ್ತವೆ, ಈ ಇರುವೆಗಳನ್ನು ಮನೆಯಿಂದ ತೆಗೆದು ಹೊರಗೆ ಹಾಕುವುದೇ ಒಂದು ಸಾಹಸ. ಇವು ಸ್ವಲ್ಪ ಕಚ್ಚಿದರೂ ಸಾಕು ಚರ್ಮ ಕಿತ್ತು ಬರುವಂತೆ ಹಿಡಿದಿರುತಿದ್ದವು. ಈ ಇರುವೆಗಳು ನಮ್ಮ ಮಳೆಗಾಲದ ಖಾಯಂ ಅಥಿತಿಗಳು. ಹಿತ್ತಲ ಗೋಡೆಯಿಂದ ನುಗ್ಗಿ ದೊಡ್ಡ ಗಡಿಗಿಗಳ ಸಾಲಿಂದ ಹೊರ ಬರುವ ಈ ಇರುವೆಗಳಿಗೆ ಒನಕೆ ಓಬವ್ವಳಂತೆ ಕೈಯಲ್ಲಿ ಒಂದು ಕಟ್ಟಿಗೆಗೆ ಬಟ್ಟೆ ಕಟ್ಟಿ ಸೀಮೆ ಎಣ್ಣೆ ಸುರಿದು ಅದಕ್ಕಿ ಉರಿ ಹಚ್ಚಿ ಕೈಯಲ್ಲಿ ಹಿಡಿದಿರುತ್ತಿದ್ದಳು.
ಕಪಿಲ ಪಿ. ಹುಮನಾಬಾದೆ ಬರೆದ ಲೇಖನ

 

ಕಥೆ ಬರೆಯುವ ಹುಚ್ಚು ತಲೆಗೇರಿದಾಗ ಕಥೆಗಾರ ಆಗುವವನು ಏನೇನೋ ಹುಡುಕುತ್ತಲೇ ಇರುತ್ತಾನೆ. ಅವನು ತನ್ನೂರಿನ ಬಾಲ್ಯದ ಪಾದಗಳನ್ನು ಆಗಾಗ ನೋಡಿಕೊಳ್ಳುತ್ತಲೋ ಅಥವಾ ಹಳಹಳಿಕೆಯಲ್ಲಿಯೋ ಎಲ್ಲೋ ಬದುಕುತ್ತಿರುತ್ತಾನೆ. ಇಲ್ಲವೇ ಬದುಕುತ್ತಿರುವಂತೆ ನಟಿಸುತ್ತಿರುತ್ತಾನೆ. ಅವನಿಗೆ ಯಾಕೋ ಈ ನಗರದ ಬೀದಿಗಳು ಉಸಿರಿನೊಂದಿಗೆ ಒಳಗೆಳೆದುಕೊಳ್ಳುವುದು ಕಷ್ಟವೇ ಆಗಿರುತ್ತದೆ. ಇಲ್ಲಿ ಬೀಳುವ ಮಳೆ ಬಿಸಿಲಿಗೆ ಮುಟ್ಟಿ ನೋಡಿದಾಗ ಜೀವವೇ ಇಲ್ಲವೆನಿಸುತ್ತದೆ. ಆದರೆ ಕಥೆಗಾರ ಸುಮ್ಮನಿರುವುದಿಲ್ಲ. ಈ ಜೀವವಿರದ ಮಳೆಗಾಳಿಗೂ ರೆಕ್ಕೆ ಕಟ್ಟಿ ಕಥೆ ಹೆಣೆಯುತ್ತಾನೆ. ಹೀಗೆ ಮಳೆ ನೋಡುತ್ತ ಕೂತ ಕಥೆಗಾರನಿಗೆ ತನ್ನೂರ ಮಳೆಗಾಲ ನೆನಪಾಗುತ್ತದೆ.

ನಮ್ಮ ಬಯಲು ಸೀಮೆಯ ಮಳೆ, ಮಲೆನಾಡಿನ ಹಾಗೆ ಬೀಳುವ ಜಿಟಿಜಿಟಿ ಮಳೆ ಏನಲ್ಲ. ನಮ್ಮ ಮಂದಿಗೆ ಮಳೆ ಬಂದರೆ ಬಿರುಸಾಗಿ ಬರಬೇಕು ಇಲ್ಲದಿದ್ದರೆ ಮಳೆಯೇ ಬೇಡ. ಈ ಜಿಟಿಜಿಟಿ ಸುರಿಯುವ ಸುಸ್ತಾದ ಮಳೆ ನಮ್ಮ ಜನಕ್ಕೆ ಒಂದು ದೊಡ್ಡ ಕಿರಿಕಿರಿ. ಒಂದು ವೇಳೆ ಬರಗಾಲದ ನೆರಳು ಊರ ಗುಡ್ಡ, ಹೊಲ, ಮನೆ ಮಾಳಿಗೆ ಮೇಲೆ ಬಿದ್ದರೆ ಸಾಕು ನಮ್ಮೂರ ಜನ ರೆಕ್ಕೆ ಬಂದವರಂತೆ ಎಲ್ಲಿಗೋ ಹೋಗುತ್ತಾರೆ. ಅಂಗಳದಲ್ಲಿ ಬಡಿಗಿ ಹಿಡಿದು ಕೂತ ನಮ್ಮಾಯಿ ಹೇಳುತಿದ್ದಳು “ಏನ ಖೋಡಿ ಹತ್ಯಾದೆ ಅಕಡಿ, ಒಂದ ನಾಕ್ ಹನಿ ದಬಾದಬಾ ಬಿದ್ದ ಹೋದ್ರ ನೆಲಾರ ಹಸಿ ಆಗ್ತದ, ಇದು ಏನ? ಸಣ್ಣ ಕೂಸು ಉಚ್ಚಿ ಹೊಯಿದಂಗ್ ಬೀಳಾಕತ್ತದ” ಅಂತಿದ್ದಳು.

ಆಗಾಗ ಮಲೆನಾಡಿಗೆ ಪ್ರವಾಸ ಹೋಗಿ ಬಂದ ನನಗೆ ಅಲ್ಲಿ ಹುಚ್ಚೆದ್ದು ಕುಣಿಯುವ ಹಸಿರು ಸೆಳೆದಿದೆ. ಆದರೆ ಅದು ಒಂದೆರೆಡು ಫೋಟೋ ತೆಗೆದುಕೊಂಡು ಅಥವಾ ಒಂದಿಷ್ಟು ಹೊತ್ತು ಕೊಡೆ ಹಿಡಿದುಕೊಂಡು ನಿರ್ಲಿಪ್ತವಾಗಿ ಮಳೆ ನೋಡುವುದರಲ್ಲಿಯೇ ಕುತೂಹಲ ಮುಗಿದುಹೊಗುತ್ತದೆ. ಆದರೆ ನಮ್ಮೂರ ಮಳೆ ಹಾಗಲ್ಲ, ಪೌಡರಿನಂತಹ ಕೆಂಪು ಮಣ್ಣು , ಅದರ ಮೇಲೆ ಮಳೆ ಹನಿಗಳು ಬಿದ್ದರೆ ಸಾಕು ಅದು ಎಬ್ಬಿಸುವ ವಾಸನೆ ಯಾವ ಪದಗಳು ಹಿಡಿದಿಡಲಾರವು. ಈ ನಗರದ ಮನೆಯ ಪೊರ್ಟಿಕೋದಲ್ಲಿ ಕೂತ ಕಥೆಗಾರನಿಗೆ ಮಳೆ ಬಂದರೆ ಸಾಕು, ತನ್ನೂರ ಗಾಳಿ ಹೊತ್ತು ತರುವ ಮಳೆ ವಾಸನೆ ನೆನೆಯುತ್ತಾನೆ.

ನಮ್ಮೂರ ಮಳೆಗಾಲದಲ್ಲಿ ನಾವು ಆಡುವ ಆಟಗಳು ಸಹ ಬದಲಾಗುತ್ತಿದ್ದವು. ಚೂಪಾದ ಕಟ್ಟಿಗೆಯೊಂದು ನೆಲಕ್ಕೆ ನೇರವಾಗಿ ಬೀಸಿ ಒಗೆಯುತ್ತಿದ್ದವು, ಯಾರ ಕಟ್ಟಿಗೆ ನೆಲಕ್ಕೆ ಊರದೆ ಹೋದರೆ ಅವ ವಾಪಸ್ ಕುಂಟುತ್ತಾ ಬರಬೇಕು. ಅವನ ಹಿಂದೆ ಉಳಿದವರು ಚೀರುತ್ತಾ, ನಗುತ್ತಾ ಕುಣಿಯುತ್ತಿದ್ದೆವು. ಮಳೆಗಾಲದಲ್ಲಿ ಮಳೆ ಹುಳಗಳೆಲ್ಲ ಲೈಟ್ ಕಂಬದ ಕೆಳಗೆ ಸುತ್ತು ಹಾಕಿ ಬೀದಿ ತುಂಬಾ ಸತ್ತು ಬಿದ್ದಿರುತ್ತಿದ್ದವು. ಸ್ಕೂಲ್ ಮುಂದಿನ ಮೈದಾನದಲ್ಲಿ ಬೆಳೆದು ನಿಲ್ಲುವ ಹುಲ್ಲು, ಅವುಗಳ ಮಧ್ಯೆ ಎಲ್ಲಿಂದಲ್ಲೋ ಬರುವ ಕಪ್ಪೆಮೀನುಗಳು, ಅವುಗಳ ಮಧ್ಯೆ ನಾವು ಬಿಟ್ಟ ಪೇಪರ್ ದೋಣಿಗಳು ಆಹಾ….! ಎಂತಹ ದಿನಗಳವು.

ನಮ್ಮೂರಲ್ಲಿ ಮಳೆಗಿಂತಲೂ ಅದರ ರಂಪಾಟವೇ ಜಾಸ್ತಿ. ಕೂಸುಗಳು ಕಾರಣ ಹೇಳದೆ ಒಮ್ಮೆಲೆ ಬಿಕ್ಕಿ ಬಿಕ್ಕಿ ಅಳುವಂತೆ ನಮ್ಮೂರ ಮಳೆ ಅಳುವುದು ಕಡಿಮೆ. ಈ ಮಳೆಗಾಲದಲ್ಲಿ ಕೆಸರಿನಿಂದ ನೆಲ ಸಾರಿಸಿದ ಮನೆಗಳ, ಹಿತ್ತಲ ಗೋಡೆಯಿಂದ ಕರಿ ಇರುವೆಗಳು ಮನೆ ತುಂಬಾ ನುಗ್ಗುತ್ತವೆ, ಈ ಇರುವೆಗಳನ್ನು ಮನೆಯಿಂದ ತೆಗೆದು ಹೊರಗೆ ಹಾಕುವುದೇ ಒಂದು ಸಾಹಸ. ಇವು ಸ್ವಲ್ಪ ಕಚ್ಚಿದರೂ ಸಾಕು ಚರ್ಮ ಕಿತ್ತು ಬರುವಂತೆ ಹಿಡಿದಿರುತಿದ್ದವು. ಈ ಇರುವೆಗಳು ನಮ್ಮ ಮಳೆಗಾಲದ ಖಾಯಂ ಅಥಿತಿಗಳು. ಹಿತ್ತಲ ಗೋಡೆಯಿಂದ ನುಗ್ಗಿ ದೊಡ್ಡ ಗಡಿಗಿಗಳ ಸಾಲಿಂದ ಹೊರ ಬರುವ ಈ ಇರುವೆಗಳಿಗೆ ಒನಕೆ ಓಬವ್ವಳಂತೆ ಕೈಯಲ್ಲಿ ಒಂದು ಕಟ್ಟಿಗೆಗೆ ಬಟ್ಟೆ ಕಟ್ಟಿ ಸೀಮೆ ಎಣ್ಣೆ ಸುರಿದು ಅದಕ್ಕಿ ಉರಿ ಹಚ್ಚಿ ಕೈಯಲ್ಲಿ ಹಿಡಿದಿರುತ್ತಿದ್ದಳು. ಅವು ಬರುವ ಸಂಧಿಯಲ್ಲಿ ಈ ಬೆಂಕಿ ಕಟ್ಟಿಗೆ ಇಟ್ಟರೆ ಸಾಕು ಚಟಪಟ ಅಂತ ಸತ್ತು ಹೋಗುತ್ತಿದ್ದವು. ಇಂದಿಗೂ ಇವುಗಳ ಮೂಲ ಯಾವುದೆಂದು ಗೊತ್ತಾಗಿಲ್ಲ. ಎಲ್ಲಿಂದ ಬರುತ್ತವೋ ಏನೋ?!. ಇಗೀಗ ಸಿಮೆಂಟ್ ಗೋಡೆಗಳು ಬಂದು ಇರುವೆಗಳು ಮನೆ ನುಗ್ಗುವುದನ್ನೆ ಬಿಟ್ಟಿವೆ.

ನಮ್ಮ ಮಂದಿಗೆ ಮಳೆ ಬಂದರೆ ಬಿರುಸಾಗಿ ಬರಬೇಕು ಇಲ್ಲದಿದ್ದರೆ ಮಳೆಯೇ ಬೇಡ. ಈ ಜಿಟಿಜಿಟಿ ಸುರಿಯುವ ಸುಸ್ತಾದ ಮಳೆ ನಮ್ಮ ಜನಕ್ಕೆ ಒಂದು ದೊಡ್ಡ ಕಿರಿಕಿರಿ. ಒಂದು ವೇಳೆ ಬರಗಾಲದ ನೆರಳು ಊರ ಗುಡ್ಡ, ಹೊಲ, ಮನೆ ಮಾಳಿಗೆ ಮೇಲೆ ಬಿದ್ದರೆ ಸಾಕು ನಮ್ಮೂರ ಜನ ರೆಕ್ಕೆ ಬಂದವರಂತೆ ಎಲ್ಲಿಗೋ ಹೋಗುತ್ತಾರೆ.

ನಮ್ಮ ಕಡೆ ಈ ಇರುವೆಗಳ ಒಂದು ಕಾಟವಾದರೆ ಕಪ್ಪೆಗಳದು ಇನ್ನೊಂದು ಕಾಟ. ಅಕಾಶದಿಂದಲೇ ಬೀಳುತ್ತಿದ್ದ ಕಪ್ಪೆಗಳಿಗೆಲ್ಲ ನಮ್ಮ ಆಯಿ ಕೈಯಿಂದ ಹಿಡಿಯುತ್ತಿದ್ದಳು, ನಮ್ಮ ಮೈಮೇಲೆ ಹಾಕಿದಂತೆ ಮಾಡಿ ಎರಡೆ ಹಲ್ಲಿರುವ ಬಾಯಲ್ಲಿ ಭಯಂಕರವಾಗಿ ನಗುವುದು ಅವಳ ಕೆಟ್ಟ ಚಟವಾಗಿತ್ತು. ಅಂಗಳದಲ್ಲಿ ಕಪ್ಪೆ ಕಂಡರೆ ಸಾಕು ಮುದುಡಿ ಹೋಗುತ್ತಿದ್ದೆವು.

ಈ ಮಳೆ ಎಲ್ಲಿರುತಿತ್ತೋ ಏನೋ ಜೋರಾಗಿ ಬೀಸುತ್ತಿದ್ದ ಬಿರುಗಾಳಿ ನಮ್ಮೂರ ಮಂದಿಗೆ ನಡುಗಿಸುತಿತ್ತು. ಆ ಗಾಳಿಗೆ ಮುರಿದು ಬೀಳುವ ಗಿಡದ ಪಂಟಿಗಳು, ಎಲೆಗಳು ಗುಡಿಸಿ ತೆಗೆಯುವುದರಲ್ಲಿಯೇ ಅವ್ವಂದಿರಿಗೆ ಸಾಕಾಗಿ ಹೋಗುತಿತ್ತು. ಟೊಂಕ ಬಾಗಿಸಿ ದುಡಿಯುತ್ತಿದ್ದ ಈ ಹೆಣ್ಣುಮಕ್ಕಳೆದುರು ಆ ದೇವರು ಗಂಡಸರಿಗೂ ಸುಮ್ಮನೆ ಕೂಡಲು ಬಿಡುತ್ತಿರಲಿಲ್ಲ. ಬಿರುಗಾಳಿಗೆ ತಲೆ ಮೇಲಿನ ತಗಡಾಗಳು (ಪತರಾ) ಹಾರಿ ಹೋಗುತ್ತಿದ್ದವು. ದನದ ಕೊಟ್ಟಿಗೆ ಮೇಲೆ ಹೊದಿಸಿದ ತಗಡಾಗಳು ಹಾರಿ ಎಲ್ಲೋ ಹೋಗಿ ಬೀಳುತ್ತಿದ್ದವು, ಆ ದೆವ್ವಗಾಳಿಯಲ್ಲಿ ಯಾರೂ ಹೊರಗೆ ಕಾಲಿಡುವ ಸಾಹಸ ಮಾಡುತ್ತಿರಲಿಲ್ಲ. ಮರುದಿನ ಗಂಡಸರು ಹೋಗಿ ಆ ತಗಡಾಗಳನ್ನ ತಲೆಮೇಲೆ ಎತ್ತಿಕೊಂಡು ತರಬೇಕಾಗಿತ್ತು.

ಒಂದು ಸಲ ನಮ್ಮೂರ ಚಂಡಕ್ಯಾ ಅವರ ಕೊಟ್ಟಿಗೆ ಮೇಲಿದ್ದ ತಗಡಾಗಳು ಬಿರುಗಾಳಿಗೆ ಹಾರಿ ಹೋಗಿ ಎಲ್ಲೋ ಬಿದ್ದಿದ್ದವು, ಅವುಗಳನ್ನು ತರಲು ಹೋದ ಆಳುಗಳು ರಾತ್ರಿಯಾದರೂ ಬರಲಿಲ್ಲ. ಮುಂಜಾನೆ ಎದ್ದು ನೋಡಿದರೆ ಹನುಮಾನ ಗುಡಿ ಮುಂದೆ ಒಂದು ಆಳು ಸತ್ತು ಬಿದ್ದಿದ್ದ. ಇನ್ನೊಬ್ಬ ತಲೆಸುತ್ತಿ ಬಂದು ಅವನ ಪಕ್ಕ ಬಿದ್ದಿದ್ದ. ಅಲ್ಲಿ ಆಗಿದ್ದು ಇಷ್ಟೇ, “ತಗಡಾ ತರಲು ಹೋದ ಇವರಿಬ್ಬರೂ ಬೀಡಿ ಸೇದುತ್ತ ಮಾತಿಗೆ ಮಾತು ಹಚ್ಚಿ ಹೋಗುತ್ತಿದ್ದಾಗ, ಹಿಂದಿನಿಂದ ಬೀಸಿ ಬಂದ ತಗಡಾ ಒಂದು ಆಳು ಮನುಷ್ಯನ ತಲೆಯೇ ಕಟ್ ಮಾಡಿ ಬಿಸಾಕಿತ್ತು, ಇನ್ನೊಬ್ಬ ಸ್ವಲ್ಪ ಕುಳ್ಳನಿದ್ದ, ಹೇಗೊ ಬದುಕಿದ. ನಮ್ಮೂರಲ್ಲಿ ಈ ಘಟನೆಯ ನಂತರ ಗಾಳಿ ನಿಲ್ಲೋವರೆಗೂ ಯಾವೊಬ್ಬ ಗಂಡಸೂ ಸಹ ಹಾರಿ ಹೋದ ತಗಡಾ ತರಲು ಧೈರ್ಯ ಮಾಡುವುದಿಲ್ಲ.

ಸೋರುವ ಮನೆಮಾಳಿಗೆ ಮೇಲೆ ಮಳೆ ಬಿದ್ದು ಹೋದ ಮರುದಿನ ಜೇಡಿಮಣ್ಣು ಒಯ್ದು ತುಂಬುವುದೆ ನಮ್ಮ ಕೆಲಸ. ಮಾಳಿಗೆ ಮೇಲೆ ಹುಚ್ಚಾಗಿ ಬೆಳೆಯುತ್ತಿದ್ದ ಸಸಿಗಳನೆಲ್ಲ ಕಿತ್ತು ಎಸೆಯುವುದರಲ್ಲಿಯೇ ನಮ್ಮ ಪುಟ್ಟ ಕೈಗಳಿಗೆ ಗುಳ್ಳೆಗಳು ಬರುತಿದ್ದವು. ನಾಲ್ಕು ದಿನ ಬಿಟ್ಟು ನೋಡಿದರೆ ಇನ್ನೊಂದು ಸಸಿ ಬೆಳೆದು ನಿಂತಿರುತಿತ್ತು. ಎಲ್ಲಿ ದೊಡ್ಡವರು ಏರಿದರೆ ಮಾಳಿಗಿ ಕುಸಿದು ಬೀಳುವುದೋ ಹೇಗೋ ಎಂಬ ಭಯಕ್ಕೆ ಸಾಮಾನ್ಯವಾಗಿ ಸಣ್ಣ ಹುಡುಗರಿಗೆ ಹಸಿ ಹಿಡಿದ ಮಾಳಿಗೆಗೆ ಏರಿಸುತ್ತಿದ್ದರು.

ನಮ್ಮೂರ ತಲಿ ಮೇಲೆ ಮೋಡ ಕಪ್ಪುಗಟ್ಟಿದ ಮುಗಿಲು ಮಳೆ ಹಡೆಯದೆ ಹಂಗಿಸಿ ಹೋದಾಗ, ನಮ್ಮ ಆಯಿ ಹಣಿಗೆ ಕೈ ಹಚ್ಚಿ ಮುಗಿಲು ನೋಡಿ ಒದರುತ್ತಿದ್ದಳು. “ಮಾಡಾ ಏನ ನೆಲಕ ಹತ್ಯಾದ, ಇದರದ ಕರಿ ಮೋತಿ ಒಯ್ದು ಒಲ್ಯಾಗ ಇಡ್ಲಿ, ಜರ ನಾಕ್ ಹನಿ ಚೆಲ್ಲಿ ಹೋಗಬಾರದ” ಅನ್ನುತ್ತಿದ್ದಳು.


ಸಿಡಿಲು ಖಡಲ್ ಖಡಲ್ ಅಂದಾಗ ಬೆದರುವ ದನಕರುಗಳು, ರಾತ್ರಿ ಮಲಗದೆ ಸತಾಯಿಸುವ ಕೂಸುಗಳು, ಆ ಮಳೆಯಲ್ಲಿಯು ಮೈಬಿಸಿ ಮಾಡಿಕೊಳ್ಳುವ ಪ್ರೇಮಹಕ್ಕಿಗಳು, ಪಡಸಾಲಿಯಲ್ಲಿ ಕಣ್ಣು ಮುಚ್ಚಿ ರಾತ್ರಿ ಕೂರುತಿದ್ದ ಅಜ್ಜಿ, ಒಲೆಗೆ ಒಣ ಕಟ್ಟಿಗೆ ಸಿಗದೆ ಹಸಿ ಕಟ್ಟಿಗೆಗಳ ಮುಂದೆ ಚಿಂತೆಯಿಂದ ಕೂರುತಿದ್ದ ಅವ್ವ…. ಹೀಗೆ ಏನೇನೋ ಚಿತ್ರಗಳು ಬಂದು ಕಥೆಗಾರನಿಗೆ ಎಚ್ಚರಿಸುತ್ತವೆ.