ಕನ್ನಡ, ಉರ್ದು ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಕವಿ, ಕತೆಗಾರ, ಕಾದಂಬರಿಕಾರ ಮತ್ತು ಅನುವಾದಕರಾಗಿದ್ದ ಬಹುಭಾಷಾ ಲೇಖಕ ಅಬ್ದುಲ್ ಮಜೀದ್ ಖಾನ್ ಅವರು ಶುಕ್ರವಾರ 22.11.2019 ರಂದು ಬೆಂಗಳೂರಿನ ತಮ್ಮ ಮನೆಯಲ್ಲಿ ತಮ್ಮ 83ನೇ ವಯಸ್ಸಿನಲ್ಲಿ ತೀರಿಕೊಂಡರು. ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರು. ಸಾಗರ(ಶಿವಮೊಗ್ಗ) ಮೂಲದ ಖಾನ್ ಹುಬ್ಬಳ್ಳಿಯಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ ವೃತ್ತಿಯನ್ನು ಆರಂಭಿಸಿ ನಂತರ ಬೆಂಗಳೂರಿನ ಕೆ.ಎಲ್.ಇ ವಿದ್ಯಾಸಂಸ್ಥೆಯಲ್ಲಿ ಬಹುಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರು ಕನ್ನಡದಲ್ಲಿ ಹದಿನೆಂಟು, ಉರ್ದುವಿನಲ್ಲಿ ಮೂರು ಮತ್ತು ಇಂಗ್ಲೀಷ್ ನಲ್ಲಿ ಒಂಭತ್ತು ಕೃತಿಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಮತ್ತು ಉರ್ದು ಸಾಹಿತ್ಯ ಅಕಾಡೆಮಿ ಎರಡರಿಂದಲೂ ಗೌರವ ಪ್ರಶಸ್ತಿ ಪುರಸ್ಕೃತರಾಗಿದ್ದ ಅಬ್ದುಲ್ ಮಜೀದ್ ಖಾನ್ ರ ‘ಆಳು’ (ಕಥಾಸಂಕಲನ), ‘ಅಂಧೇರಿ ನಗರಿ’ (ಕಾದಂಬರಿ), ಮತ್ತು ಗಾಲಿಬ್ ಕುರಿತ ಕವಿ-ಕಾವ್ಯ ಪರಿಚಯ ಗ್ರಂಥಗಳು ಸಾಹಿತ್ಯ ಲೋಕದ ಮನ್ನಣೆಯನ್ನು ಗಳಿಸಿವೆ.

ಕನ್ನಡ-ಉರ್ದು- ಇಂಗ್ಲೀಷ್ ನಡುವಿನ ಚಿಂತನಶೀಲ ಸಹೃದಯಿ ಸೇತುವೆಯಂತಿದ್ದ ಅಬ್ದುಲ್ ಮಜೀದ್ ಖಾನ್ ಆಕಾಶವಾಣಿಯ ‘ಚಿಂತನ’ದ ಮೂಲಕವೂ ಕನ್ನಡಿಗರಿಗೆ ಆಪ್ತರಾಗಿದ್ದರು.

ಎಂಭತ್ತರ ದಶಕದ ಹುಬ್ಬಳ್ಳಿ-ಧಾರವಾಡ ಸಾಂಸ್ಕೃತಿಕ ವಲಯದಲ್ಲಿ ಕ್ರಿಯಾಶೀಲರಾಗಿದ್ದರು.

ಜಯಂತ ಕಾಯ್ಕಿಣಿ
23.11.2019

0
0