ನಾನು ಬೈಕಿನ ಕೊಂಡಿಗೆ ನನ್ನ ಕೈಯಲ್ಲಿದ್ದ ಚೀಲಗಳನ್ನೆಲ್ಲಾ ಸಿಕ್ಕಿಸಿ, ರಾಯರ ಭುಜದ ಮೇಲೆ ಕೈಯಿಟ್ಟು ಇನ್ನೇನು ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಗಾಡಿ ಮುಂದೆ ಹೋಗಿಯೇ ಬಿಟ್ಟಿತು. ನಾನು ನಿಂತಲ್ಲೇ ತಲೆ ಮೇಲೆ ಕೈಇಟ್ಟುಕೊಂಡೆ. ರೀ…. ರೀ… ಎಂದು ಬೊಬ್ಬೆ ಹಿಡಿದರೂ ಕೇಳಲಿಲ್ಲ. ‘ಕರೆದರೂ ಕೇಳದೆ….’ ಎನ್ನುವ ಹಾಡು ನನಗಾಗಿಯೆ ಬರೆದಿದ್ದಾರೆ ಎನ್ನಿಸಿತು. ಹೆಚ್ಚು ಬೊಬ್ಬೆ ಹೊಡೆಯಲು ಭಯವೂ ಆಯಿತು.
ವಿಭಾ ಕೃಷ್ಣಪ್ರಕಾಶ ಉಳಿತ್ತಾಯ ಬರೆದ ‘ಹೋಗೋಣ ಜಂಬೂ ಸವಾರಿ’ ಲಲಿತ ಪ್ರಬಂಧಗಳ ಸಂಕಲನದಿಂದ ಒಂದು ಪ್ರಬಂಧ

 

ಪತಿರಾಯರು ಹೊಸಾ ಬೈಕ್ ತೆಗೆದುಕೊಂಡ ದಿನ. ಭಾರಿ ಖುಷಿಯೋ ಖುಷಿ. ಅವರಿಗೋ ನನಗೋ ಕೇಳಬೇಡಿ. ಅವರ ಖುಷಿಗಾಗಿ ನನ್ನ ಅಕೌಂಟೂ ಬರಿದಾಗಿತ್ತು. ಅದು ನನ್ನ ಖುಷಿ ಕಳೆದು ಹೋಗಲು ಕಾರಣವಾಗಿತ್ತು. ಹೊಸ ಬೈಕ್ ನಲ್ಲಿ ಇವತ್ತು ಒಟ್ಟಿಗೇ ಹೋಗೋಣ ಎಂದು ಹೇಳಿ, ನನ್ನ ಗಾಡಿಯನ್ನು ನನ್ನ ಆಫೀಸಿನಲ್ಲೇ ಇಡುವಂತೆ ರಾಯರು ತಮ್ಮ ಬಯಕೆ ನಿವೇದಿಸಿಕೊಂಡರು. ಹೊಸ ಬೈಕ್ ನಲ್ಲಿ ಒಟ್ಟಿಗೆ ಹೋಗುವ ಪರಮಾನಂದವನ್ನು ಮನದಲ್ಲೇ ನೆನೆದೆ. “ಬಾರೆ ರಾಜ ಕುಮಾರಿ ಹೋಗೋಣ ಜಂಬೂ ಸವಾರಿ……” ಎಂದು ಮನದಲ್ಲೇ ಹಾಡಿದೆ.

ರಾಯರಿಗಾಗಿ ಒಂದು ಗಂಟೆ ಕಾದೂ ಕಾದೂ ಸುಸ್ತಾದೆ. ಆ ಒಂದು ಗಂಟೆಯಲ್ಲಿ ನಾನು ನನ್ನ ಗಾಡಿಯಲ್ಲೇ ಮನೆಗೆ ಹೋಗ್ತೇನೆ ಅಂತ ಹಲವು ಸಲ ‘ಕೀ’ ಗಾಗಿ ಬ್ಯಾಗ್ ಝಿಪ್ಪನ್ನು ಪರ್ರನೆ ಎಳೆದು ಮುಚ್ಚಿದ್ದೆ.

(ವಿಭಾ ಕೃಷ್ಣಪ್ರಕಾಶ ಉಳಿತ್ತಾಯ)

ಅಂತೂ ಇಂತೂ ಗಾಡಿ ನನ್ನ ಮುಂದೆ ಬಂದು ನಿಂತಿತು. ಅಯ್ಯಬ್ಬಾ ಎಂದು ನಿಟ್ಟುಸಿರು ಬಿಟ್ಟೆ. ನನ್ನ ಕೈಯಲ್ಲಿ ಬುತ್ತಿ ಚೀಲ, ತರಕಾರಿ ಚೀಲ, ದಿನಸಿ ಸಾಮಾನು, ಎಲ್ಲಾ ಇದ್ದು ಕೈ ನೋವಾಗುತ್ತಿತ್ತು. ರಾಯರು ಫೋನಿನಲ್ಲಿ ಅವರ ಗೆಳೆಯನ ಜೊತೆ ಯಕ್ಷಗಾನದ ವಿಷಯ ಮಾತನಾಡುತ್ತಿದ್ದರು. ಕಿವಿಯನ್ನು ಇಯರ್ ಫೋನ್ ಕಚ್ಚಿ ಹಿಡಿದಿದ್ದರಿಂದ ನಾನು ಬೈದದ್ದೂ ಕೇಳಿಸಲಿಲ್ಲ. ನಾನು ಬೈಕಿನ ಕೊಂಡಿಗೆ ನನ್ನ ಕೈಯಲ್ಲಿದ್ದ ಚೀಲಗಳನ್ನೆಲ್ಲಾ ಸಿಕ್ಕಿಸಿ, ರಾಯರ ಭುಜದ ಮೇಲೆ ಕೈಯಿಟ್ಟು ಇನ್ನೇನು ಕುಳಿತುಕೊಳ್ಳಬೇಕು ಎನ್ನುವಷ್ಟರಲ್ಲಿ ಗಾಡಿ ಮುಂದೆ ಹೋಗಿಯೇ ಬಿಟ್ಟಿತು. ನಾನು ನಿಂತಲ್ಲೇ ತಲೆ ಮೇಲೆ ಕೈಇಟ್ಟುಕೊಂಡೆ. ರೀ…. ರೀ… ಎಂದು ಬೊಬ್ಬೆ ಹಿಡಿದರೂ ಕೇಳಲಿಲ್ಲ. ‘ಕರೆದರೂ ಕೇಳದೆ….’ ಎನ್ನುವ ಹಾಡು ನನಗಾಗಿಯೆ ಬರೆದಿದ್ದಾರೆ ಎನ್ನಿಸಿತು. ಹೆಚ್ಚು ಬೊಬ್ಬೆ ಹೊಡಿಯಲು ಭಯವೂ ಆಯಿತು. ಅಕ್ಕಪಕ್ಕದ ಅಂಗಡಿಯವರೆಲ್ಲಾ ಪರಿಚಯದವರೇ ಆದ್ದರಿಂದ ಮರ್ಯಾದೆ ಹೋಗುವ ಸಂಭವ ಹೆಚ್ಚಿತ್ತು. ಆದರೆ ನನ್ನ ಕೈಚೀಲ ನನ್ನ ಕಂಕುಳಲ್ಲೇ ಭದ್ರವಾಗಿದ್ದದ್ದು  ಅಭೂತ ಧೈರ್ಯ ಕೊಟ್ಟಿತು. ನಾನು ಸಿಟ್ಟಿನಲ್ಲಿ ನನ್ನ ಗಾಡಿ ‘ಕೀ’ ಗಾಗಿ ಕೈಚೀಲ ತಡಕಾಡಿದೆ. ಕೀ ಜೊತೆ ಮೊಬೈಲ್ ಕೂಡಾ ಸಿಕ್ಕಿತು. ಯಾವುದಕ್ಕೂ ಫೋನಿನಲ್ಲಿ ಒಮ್ಮೆ ವಿಚಾರಿಸಿಕೊಂಡು, ಮತ್ತಿನದು ಮತ್ತೆ ನೋಡುವ ಎಂದು ಕರೆ ಮಾಡಿದೆ. “ನೀವು ಕರೆ ಮಾಡಿದ ಚಂದಾದಾರರು ಬೇರೊಂದು ಕರೆಯಲ್ಲಿ ನಿರತರಾಗಿದ್ದಾರೆ, ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ…….” ಎನ್ನುವ ನಾರಿಮಣಿಯ ಸ್ವರ ನನ್ನ ಕೋಪಾಗ್ನಿಗೆ ತುಪ್ಪ ಸುರಿಯತೊಡಗಿತು, ಆಕೆಗೇನು ಗೊತ್ತು ಸ್ವಲ್ಪ ಸಮಯದ ನಂತರ ಅವರು ಮನೆಯಲ್ಲೇ ಇರುತ್ತಾರೆಂದು, ಅದಕ್ಕಿಂತ ಮುಂಚೆ ನಾನು ಅವರಲ್ಲಿ ಮಾತನಾಡಲೇಬೇಕಿತ್ತು. ಛಲಬಿಡದ ತ್ರಿವಿಕ್ರಮನಂತೆ ಮತ್ತೆ ಮತ್ತೆ ಕರೆ ಮಾಡತೊಡಗಿದೆ. ಪದೇ ಪದೇ ಯಾರಪ್ಪಾ ಹೇಗೆ ಕಾಲ್ ಮಾಡುವುದು ಎಂದುಕೊಂಡು ರಾಯರು ಗಾಡಿಯನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಿ ಫೋನ್ ನೋಡಿದಾಗ, ಎಲ್ಲೋ ತಾಳ ತಪ್ಪಿದ ಅರಿವಾಯಿತು.

ಇಷ್ಟು ಮಾತ್ರವಲ್ಲದೆ ಅವರ ಬೈಕಿನ ಹಿಂದಿದ್ದ ಕಾರಿನವನು ಒಂದೇ ಸವನೆ ಹಾರನ್ ಹಾಕುತ್ತಿದ್ದನಂತೆ, ನೀ ನಿನ್ನ ಪಾಡಿಗೆ ಹೋಗೋ ಮಾರಾಯ ಅಂತ ಸೈಡ್ ಬಿಟ್ಟು ಕೊಟ್ಟರೂ ಹಾರನ್ ಹಾಕುವುದು ನಿಲ್ಲಿಸಲಿಲ್ಲವಂತೆ. ಕೊನೆಗೆ ಬೈಕ್ ನಿಲ್ಲಿಸಿದ್ದನ್ನು ಕಂಡು, ಆತ ಕಾರಿನೊಳಗಿಂದ ನಗುಮುಖದೊಂದಿಗೆ ಕೈ ಸನ್ನೆ ಮಾಡಿ “ಹಿಂದೆ… ಹಿಂದೆ… ಅಲ್ಲೇ” ಎಂದು ಹೋದನಂತೆ., ಹಿಂದಿರುಗಿ ನೋಡಿದಾಗ ಮಡದಿ ಕಾಣದಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿರುವುದು ಗಮನಕ್ಕೆ ಬಂತು, ಫೋನ್ ಮಾಡಿದರು. “ಎಲ್ಲಿ ಬಿದ್ದೆ ಮಾರಾಯ್ತಿ? ಪೆಟ್ಟಾಯಿತಾ?” ಎಂದ್ರು. “ಬೀಳಲು ಹತ್ತಿದ್ದರೆ ತಾನೇ? ಹತ್ತುವ ಮುಂಚೆಯೇ ಗಾಡಿ ಓಡಿಸಿದಿರಿ…. ಇರ್ಲಿ, ನೀವು ಹೋಗಿ, ನಾನು ನನ್ನ ಗಾಡಿಯಲ್ಲಿಯೇ ಮನೆಗೆ ಬರ್ತೇನೆ” ಎಂದು ಸಿಟ್ಟಿನಲ್ಲಿ ಹೇಳಿದೆ. (ರಾತ್ರಿಯಾದ್ದರಿಂದ ಒಬ್ಬಳನ್ನೇ ಬಿಟ್ಟು ಹೋಗ್ಲಿಕ್ಕಿಲ್ಲ ಎನ್ನುವ ಧೈರ್ಯದಲ್ಲಿಯೇ ಹೇಳಿದ್ದು) “ಸ್ವಾರಿ… ಸ್ವಾರಿ… ಒಂದು ನಿಮಿಷ ಅಲ್ಲೇ ನಿಲ್ಲು, ಈಗ ಬಂದೆ, ಪ್ಲೀಸ್… ಪ್ಲೀಸ್….” ಎಂದರು. ಸ್ವಲ್ಪ ಹೊತ್ತಿನಲ್ಲಿ ಮತ್ತೆ ಕಾಲ್ ಮಾಡಿದರು. “ಸ್ವಲ್ಪ ಮುಂದೆ ನಡ್ಕೊಂಡು ಬಾ ಮಾರಾಯ್ತಿ, ಫುಲ್ ಟ್ರಾಫಿಕ್ ಜಾಮ್ ಆಗಿದೆ, ನಾನು ಅಲ್ಲಿಗೆ ಬಂದು ಯೂಟರ್ನ್ ತಗೊಂಡು ಮತ್ತೆ ತಿರುಗಿ ಬರಲಿಕ್ಕೆ ತುಂಬಾ ಹೊತ್ತಾಗ್ತದೆ. ಒಂದು ನಾಲ್ಕು ಹೆಜ್ಜೆ ಮುಂದೆ ಬಾ… ಪ್ಲೀಸ್….” ಎಂದು ಮುದ್ದುಮುದ್ದಾಗಿ ಹೇಳಿದರು. ನನಗೆ “ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೆ….” ಎಂಬ ಹಾಡಿನ ನೆನಪಾಯಿತು. ನಾಲ್ಕು ಹೆಜ್ಜೆ ಮುಂದೆ ಹೋದೆ….. ಆದರೆ ಆಮೇಲೆ ಗೊತ್ತಾಯ್ತು ಅವರು ಇದ್ದದ್ದು ಬರೀ ನಾಲ್ಕು ಹೆಜ್ಜೆ ಮುಂದೆ ಅಲ್ಲ, ನಾಲ್ಕು ಗುಣಿಸು ನಾಲ್ಕು ಅಂತ. ನಡೆದು ಸುಸ್ತಾಗಿ, ಗಾಡಿ ಹತ್ತಿ ಕುಳಿತೆ ಮುಖ ಒಂದು ರೌಂಡು ದೊಡ್ಡದಾಗಿತ್ತು. ಕುಳಿತ್ಯಾ…. ಕುಳಿತ್ಯಾ… ಸರೀ ಕುಳಿತ್ಯಾ…? ಎಂದು ನಾಲ್ಕು ಸಲ ಕೇಳಿ ಗಾಡಿ ಸ್ಟಾರ್ಟ್ ಮಾಡಿದರು. ಇನ್ನೂ ಹೊಸ ಬೈಕಿನ ಸವಾರಿ ಹಿಡಿತ ಸಿಗದೇ ಇದ್ದುದರಿಂದ ಬ್ಯಾಲೆನ್ಸ್ ಮಾಡಲು ಕಷ್ಟ ಆಗಿ ಪದೇ ಪದೇ ನನ್ನಲ್ಲಿ “ಕೂತ್ಕೋ, ನೀನು ಈಗ ಸ್ವಲ್ಪ ಭಾರ ಆಗಿದ್ದಿ…..” ಎಂದು ಹೇಳಿ, ನನಗೆ ಸಾಕಪ್ಪ ಸಾಕು ಈ ಬೈಕ್ ಸಹವಾಸ ಎನ್ನುವಂತೆ ಮಾಡಿಬಿಟ್ಟರು.

ಮನೆ ತಲುಪಿದ ಮೇಲೆ ನಾನು ಅಮ್ಮನಿಗೆ ಫೋನ್ ಮಾಡಿದೆ. ನನಗಾದ ನೋವನ್ನು ಅವರ ಬಳಿ ಹೇಳಿಕೊಳ್ಳುವ ಬಯಕೆಯಾಯಿತು. ಅಮ್ಮನಿಗೆ ಅವರ ಮಗಳಿಗಿಂತ ಅಳಿಯನ ಮೇಲೆ ಒಂದಿಂಚು ಪ್ರೀತಿ ಜಾಸ್ತಿ ಅಂತ ಗೊತ್ತು ನನಗೆ. ಆದರೂ ಅಳಿಯನ ದೂರು ಹೇಳಿದೆ. ಆಗ ಅಮ್ಮ “ಹೋಗ್ಲಿ ಬಿಡಮ್ಮ, ನಿನ್ನನ್ನ ಮರ್ತು ಹೋಗಿದ್ದಾನೆ, ಆಮೇಲೆ ಗೊತ್ತಾಗಿ ಕರ್ಕೊಂಡು ಹೋಗಿದ್ದಾನಲ್ಲ, ಬೇರೆ ಯಾವಳನ್ನೋ ಕರ್ಕೊಂಡು ಹೋಗ್ಲಿಲ್ಲ ಅಲ್ವಾ? ಸುಮ್ನೆ ಅವನಿಗೆ ಕಿರಿಕಿರಿ ಮಾಡ್ಬೇಡ” ಎಂದು ಉಪದೇಶ ನೀಡಲು ಪ್ರಾರಂಭಿಸಿದರು. ಫೋನ್ ಇಟ್ಟ ಮೇಲೆ ಅಮ್ಮನ ಮೇಲಿನ ಸಿಟ್ಟೂ ರಾಯರಿಗೇ ಸಮರ್ಪಣೆ ಆಯಿತು.