ಒಂದ ೧೦-೧೫ ದಿವಸ ಆತು ಮಳಿ ಹಿಡದ ಬಿಟ್ಟದ ,ಎಲ್ಲಿನೂ ಹೊರಗ ಹೊಗೋಹಂಗಿಲ್ಲ, ಯಾವಾಗ ಮಳಿ ಬರತದ ಯಾವಗ ಇಲ್ಲಾ ಅಂತ ಗೊತ್ತ ಆಗಂಗಿಲ್ಲ, ಮೊನ್ನೆ ೨-೩ ಸಲ ಮಳ್ಯಾಗ ತೋಯ್ಸಕೊಂಡ ನೆಗಡಿ ಬ್ಯಾರೇ ಆಗಿತ್ತು. ಒಂದ ಸ್ವಲ್ಪ ಮೈಯಾಗ ಬ್ಯಾರೆ ಕಣಿ-ಕಣಿನು ಅನಸ್ತಿತ್ತು. ಅದರಾಗ ನನಗ ನೆಗಡಿ ಬಂದರ ಲಗೂನ ಹೊಗಂಗನೂ ಇಲ್ಲಾ. ಯಾವಾಗಲೂ ಮೂಗ ಸುರ್-ಸುರ್ ಅಂತಿರ್ತದ.

“ಲೇ ಒಂದ ಸಿಕ್ಸ್ಟೀ ಹೂಡಿ ಎಲ್ಲಾ ಆರಾಮ ಆಗತೈತಿ” ಅಂತ ಏನಿಲ್ಲಾ ಅಂದರು ಮೂರ-ನಾಲ್ಕ ಮಂದಿ ಗೆಳ್ಯಾರೂ ಮೂರ-ನಾಲ್ಕ ಸರತೆ ಹೇಳಿದ್ರು, ಆದರ ನಾನ ಯಾಕ ರಿಸ್ಕ ತೊಗೊಳೊದು ಅಂತ ಸುಮ್ಮನ ಬಿಟ್ಟಿದ್ದೆ. ಅದರಾಗ ನನಗ ಈ ನೆಗಡಿ ಹಿಟಿಂದೋ, ತಂಪಿಂದೋ ಅನ್ನೊದು ಲಗೂನ ಗೂತ್ತಾ ಆಗಂಗಿಲ್ಲಾ, ತಂಪಿಂದ ನೆಗಡಿ ಇದ್ರ ಒಂದ ಸಿಕ್ಸ್ಟೀ ಹಾಟ್ ಹೊಡಿಬಹುದು, ಇಲ್ಲಾಂದ್ರ ಇಂತಹಾ ಮಳೆಗಾಲದಾಗ ಹೆಂಗ ಚಿಲ್ಲ್ಡ ಬೀರ್ ಕುಡಿಬೇಕು? ಹಿಂಗಾಗಿ ಒಂದ ವಾರತನಕ ಬರೇ ನಮ್ಮವ್ವಂದ ಮೂರ ಹೊತ್ತು ಥರ್ಟಿ – ಥರ್ಟಿ ಕಶಾಯದ ಮ್ಯಾಲೇ ದೂಡಿದೆ ಆದರೂ ಏನ ಬದಲಾಗಲಿಲ್ಲ. ಸರಿ ಹಂಗರ ಒಂದ ರೌಂಡ ಹೋಗಿ ಬರೋಣ ಅಂತ ೩-೪ ಮಂದಿ ದೋಸ್ತರನ್ನ ಕಟಕೊಂಡ ನಮ್ಮ ರೆಗ್ಯೂಲರ ಬಾರಗೆ ಹೋದೆ.

ಇನ್ನೂ ಒಳಗ ಕಾಲಿಡತನ ಎದುರಿಗೆ ನಮ್ಮ ಟೇಬಲನ ಕಾಯಂ ಸಪ್ಲಾಯರ ಶಿವಣ್ಣಾ “ಬರ್ರೀ ಸರ್, ಏನ ಬಾಳ ದಿವಸಾತ ಕಂಡೆಯಿಲ್ಲಾ, ಎಲ್ಲಿ ನಮ್ಮ ಬಾರ್ ಮರತರಿ ಅನಕೊಂಡಿದ್ದೆ ” ಅಂದಾ. ಅಂವಾ ಕರದದ್ದ ನೋಡಿದ್ರ ಬೀಗರ ಮನಿಗೆ ಹೋದಾಗ ತಮ್ಮ ಅಳಿಯಾನ್ನು ಹಿಂಗ ಕರಿಯಂಗಿಲ್ಲ ಅಷ್ಟ ಛಂದ ಕರದಾ ಅನಸ್ತು. “ಎನಿಲ್ಲಾ, ಆರಾಮ ಇದ್ದಿದ್ದಿಲ್ಲಾ, ಹಿಂಗಾಗಿ ಬಂದಿಲ್ಪಾ” ಅಂದೆ” ಇಲ್ಲೇ ಬರ್ಕೊತ್ತಿರ್ರಿ ಸರ್, ಎಲ್ಲಾ ಆರಾಮ ಇರತಿರಿ”. “ಅಲ್ಲೇ ನಾಲ್ಕ ನಂಬರ್ ಟೇಬಲಗೆ ಕೂಡ್ರಿ ಸರ್ ಅಲ್ಲೇ ನಂದ ಸರ್ವಿಸ್” ಅಂತ ನಮಗ ಟೇಬಲ್ನೂ ಬುಕ್ ಮಾಡಿದಾ. ನಮ್ಮ ಪುಣ್ಯಾ ಟೇಬಲ್ ಸಿಕ್ಕತಲಾ ಅನ್ಕೊಂಡೆ, ಇಲ್ಲಾಂದ್ರ ಯಾವಾಗಲೂ ಬಾರನಾಗ ಸಿಕ್ಕಾ ಪಟ್ಟಿ ಗದ್ಲ ಇರತದ, ಸರ್ವೀಸ್ ಸರಿಯಾಗಿ ಸಿಗಂಗಿಲ್ಲಾ, ಒಂದಂದ ಐಟಂಗೆ ಹತ್ತ-ಹತ್ತ ಸಲ ಕರದ ಸಪ್ಲಾಯರನ ಮರ್ಜಿ ಹಿಡಿಬೇಕು.

“ಓ ರಾಜಾ ಬಾ ಪಾ”, “ಶಿವಣ್ಣಾ ಲಗೂನ ತಾ ಪಾ,” “ಓ ಹಲೋ ಡ್ರಿಂಕ್ಸ ಮುಗಿಲಿಕ್ಕೆ ಬಂತ, ಇನ್ನೂ ಸ್ನ್ಯಾಕ್ಸ ಬಂದಿಲ್ಲಲ್ಲೋ” ” ಎ, ಮೂರ ಐ.ಟಿ.ಸಿ ಕಿಂಗ ಹೇಳಿದ್ದೆ, ಏನಾತ?” ” ಕಡ್ಡಿ ಪೆಟಗಿ ತೊಗಂಬಾ ಪಾ” ಅಂತ ಬೇಡ್ಕೋ ಬೇಕು. ಪಾಪ ಅವರರ ಏನ ಮಾಡಬೇಕು. ಟೇಬಲ್ಲೂ ಅಷ್ಟ ಅವ, ಸಪ್ಲಾಯರೂ ಅಷ್ಟ ಇದ್ದಾರ ಆದರ ಬರೋ ಜನ ಬರ-ಬರತ ಜಾಸ್ತಿ ಆಗಲಿಕತ್ತಾರ. ಒಮ್ಮೂಮ್ಮೆ ಅನಸ್ತಿತ್ತು, ಸಂಭಂದ ಇಲ್ಲಾ ಸಾಟಿ ಇಲ್ಲಾ, ಇಲ್ಲೇ ಬಂದ ಸಪ್ಲಾಯರ್ ಮರ್ಜಿ ಹಿಡಿಯೂದ್ಕಿಂತ ‘ಮನ್ಯಾಗ ಹಡದ ಅವ್ವ -ಅಪ್ಪಾ, ಕಟಗೊಂಡ ಹೆಂಡತಿದ ಕೈ ಕಾಲಹಿಡದ ಅಲ್ಲೆ ಮನ್ಯಾಗ ಕೂಡಿಯೋದ ಭಾಳ ಛೋಲೋ ‘ಅಂತ, ಹೆಂಗಿದ್ರು ಕುಡದ ಮನಿಗೆ ಹೋದ ಮ್ಯಾಲೆ ‘ಇದ ಲಾಸ್ಟ’ ಅಂತ ಹೆಂಡತಿದ ಕೈ ಕಾಲ ಹಿಡದ ಹಿಡಿತೇವಿ, ಇನ್ನ ಮದ್ಲ ಹಿಡದರಾತು. ಆದರ ಅದು ಅಂದಕೊಂಡಷ್ಟು ಸುಲಭ ಅಲ್ಲಾ. ಪಾಪಾ ಅವರಿಗೇನ್ ಗೊತ್ತ ನಾವು ಹೊರಗ ಎಷ್ಟ ದೈನಾಸ ಪಡತೇವಿ ಕುಡಿಲಿಕ್ಕೆ ಅಂತ. ಗೊತ್ತಾದ್ರೂ ಅವರೇನ ಅವಕಾಶ ಕೊಡಂಗಿಲ್ಲಾ ಆ ಮಾತ ಬ್ಯಾರೆ.

ಹಿಂಗ ಕೂತಗೊಂಡ ನಮಗೇನ ಬೇಕ ಆರ್ಡರ ಮಾಡಿ ಅತ್ತಲಾಗ ಇತ್ತಲಾಗ ಬ್ಯಾರೇ ಟೇಬಲ್ ಮ್ಯಾಲೇ ಕಣ್ಣಾಡಿಸಿದೆ. ಎಲ್ಲಾ ಹಳೇ ಮುಖಾನ- ಹೆಸರು ಗೂತ್ತಿಲ್ಲಾ ಅಂದ್ರು, ಬ್ರ್ಯಾಂಡ ಗೊತ್ತ. ಅಷ್ಟರಾಗ ನಮ್ಮ ಸ್ವಾದಿ ಬ್ರದರ್ಸ್ ಒಳಗ ಬಂದ್ರು “ಏನೋ ದೀಕ್ಷೀತಾ ಭಾಳ ದಿವಸಾತ ಕಂಡೇಯಿಲ್ಲಾ” ಅಂದರು “ಎ ಆರಾಮ ಇದ್ದಿದ್ದಿಲೋ ಪಾ” ಅಂದೆ, “ಬ್ರ್ಯಾಂಡಿ ಹೊಡಿ, ನೆಗಡಿಯಲ್ಲಾ ಕಿತ್ತ ಹೋಗತದ” ಅಂತ ತಮ್ಮ ಅನುಭವದ ಮಾತ ಹೇಳಿದ್ರು. “ಬರೇ ಐಸ್ ಕ್ಯೂಬ ಹಾಕ್ಕೋ, ಸಾಪ್ಟ್ ಡ್ರಿಂಕ್ಸ ಬ್ಯಾಡಾ” ಅಂತ ಹೇಳೊದು ಮರಿಲಿಲ್ಲಾ. ೫-೬ ವರ್ಷದ ಹಿಂದ ನಾವು ‘ಯಾವಾಗರ ಒಮ್ಮೆ ಕದ್ದು-ಮುಚ್ಚಿ ಹೋಗೋರು’ ಹೋದಾಗ ಒಮ್ಮೆ ಯಾರರ ಪರಿಚಯದವ್ರು ನೋಡಿದ್ರ ಹೆಂಗ ಅಂತ ಹೆದರಿ- ಹೆದರಿ ನಮ್ಮ ಕೆಲಸ ಮುಗಿಸಿಕೊಂಡ ಹೊರಗ ಬರೋರು. ನಮ್ಮ ಗಾಡಿ ಯಾರರ ನೋಡಿ ಗಿಡ್ಯಾರ ಅಂತ ಮಂದಿ ಗಾಡಿ ಮ್ಯಾಲೆ ಹೋಗೊರು. ಒನ್ನೇ ಸಲ ಈ ಸ್ವಾದಿ ಬ್ರದರ್ಸ್ ಭೆಟ್ಟಿ ಆದಾಗ ಭಾಳ ಹೆದರಿದ್ದೆ, ಎಲ್ಲಿ ಹೋಗಿ ನಮ್ಮಪ್ಪಗ ಹೇಳ್ತಾರೋ ಅಂತ, ಆದರ ಹಂಗೇನ ಆಗಲಿಲ್ಲ. ಬಹುಶಃ ಅವರೂ ಅವಾಗ ನನ್ನ ನೋಡಿ ಹಂಗ ಹೆದರಿರಬೇಕು. ಎನೋ ಇಬ್ಬರಿಗೂ ಪ್ರೋಫೆಶನಲ್ ಎಥಿಕ್ಸ ಇತ್ತಂತ ಯಾರ ಮನ್ಯಾಗೂ ಗದ್ಲ ಆಗಲಿಲ್ಲ. ಅವತ್ತಿನಿಂದ ಮ್ಯಾಲಿಂದ ಮ್ಯಾಲೇ ಭೆಟ್ಟಿ ಆಕ್ಕೋತ ಇದ್ದೇವಿ. ಇವತ್ತ ಒಬ್ಬರನ್ನ ಒಬ್ಬರು ಬಾರನಾಗ ಮಿಸ್ ಮಾಡ್ಕೋಳೊ ಅಷ್ಟು ಕ್ಲೋಸ್ ಆಗೇವಿ ಅನಸಲಿಕತ್ತು.
ಅಷ್ಟರಾಗ ಮೂಲ್ಯಾಗಿನ ಟೇಬಲನಿಂದ ಪ್ರಕಾಶ ಕೈಮಾಡಿದಾ, ನಾನು ಕೈ ಮಾಡಿದೆ, ಅವನ ಎದ್ದ ಬಂದ
“ಎನಲೇ, ಭಾಳ ದಿವಸದ ಮ್ಯಾಲೇ ಬಂದಿ, ಐ ಪಿ ಲ್ ಮ್ಯಾಚ್ ಮುಗದ ಮ್ಯಾಲೆ ಕಂಡೆ ಇಲ್ಲಾ” ಅಂದ.

ಅವನ ಮಾತ ಕೇಳಿದ್ರ ದಿವಸಾ ಐ ಪಿ ಲ್ ಮ್ಯಾಚ್ ನೋಡ್ಲಿಕ್ಕ ನಾ ಇಲ್ಲೇ ಬರತಿದ್ದೆ ಅಂತ ತಿಳ್ಕೊಬೇಕು. ನಾ ಹೋಗಿದ್ದ ಬರೇ ಬೆಂಗಳೂರ ಮ್ಯಾಚ್ ಇದ್ದಾಗ, ಅವು ಬರೇ ಒಂದ ೧೬ ಮ್ಯಾಚ್ ಅಷ್ಟ. ಬಾರನಾಗ ಕೂತ ಮ್ಯಾಚ್ ನೋಡೊ ಮಜಾನ ಬ್ಯಾರೆ. ಕುಡದಾಗ ಅಗದಿ ನಾವ ಆಡದಂಗ ಅನಸ್ತದ. “ಏ ಹಂಗೇನ ಇಲ್ಲ ಸ್ವಲ್ಪ ಬ್ಯುಸಿ ಇದ್ದೆ ” ಅಂದೆ ” ಅಲ್ಲೇ ನಮ್ಮ ಟೇಬಲಗೆ ಬಾ, ನಾ ಒಬ್ಬನ ಇದ್ದೇನಿ” ಅಂದಾ “ಇಲ್ಲಾ, ನಮ್ಮ ದೋಸ್ತರು ಇದ್ದಾರ, ನೀ ಮುಗಿಸ್ಕೂ” ಅಂದೆ. ಅವಂಗು ನಮಗು ಸೆಟ್ ಆಗಂಗಿಲ್ಲಾ, ಅಂವಾ ಡ್ರಂ ಇದ್ದಂಗ, ಎಷ್ಟ ಕುಡದರು ಕಡಿಮಿನ. ಆಮೇಲೆ ನಮಗೂ ಒತ್ತಾಯ ಮಾಡ್ತಾನ. ಎಲ್ಲಿದೂ, ನಮಗ ತಡ್ಕೊಳಾಕ ಆಗಂಗಿಲ್ಲಾ, ಮದ್ಲ ನಾವು ನಾಜೂಕ ಮಂದಿ. ನಂಬದ ಒಂದ ರೌಂಡ ಮುಗದಂಗ ಆತು, ಲಾಸ್ಟ ರೌಂಡ ಆರ್ಡರ್ ಮಾಡಿ ಅದರ ಜೊತಿಗೆ ಊಟಾನು ಹೇಳಿದ್ವಿ, ನಾ ಒಂದ ಬಾಥರೂಂ ಬ್ರೆಕ್ ತಗೊಂಡ್ರಾತು ಅಂತ ಎದ್ದ ಹೊದೆ, ಅಲ್ಲೇ ಕೈ ತೊಳ್ಕೊಬೇಕಾರ ಬಾಜು ವಾಶ್ ಬೆಶನ್ ಒಳಗ ನಮ್ಮ ಪ್ರಭ್ಯಾನು ಕೈ ತೊಳ್ಕಳ್ಳಿಕ್ಕತ್ತಿದ್ದಾ
“ಏ ಎನಲೇ ಪ್ರಭ್ಯಾ ನೀ ಇಲ್ಲೇ ” ಅಂದೆ ನನಗ ಆಶ್ಚರ್ಯ ಆಗಿದ್ದ ಅಂವಾ ಬಾರಗೆ ಬಂದದಕ್ಕ ಅಲ್ಲಾ, ನಮ್ಮ ಏರಿಯಾ ಬಾರ್ ಗೆ ಬಂದದಕ್ಕ. ನನಗ ಇತ್ತೀಚಿಗೇ ಬಾರ್ ನಾಗ ಯಾರ್ ಭೆಟ್ಟಿ ಆದರೂ ಆಶ್ಚರ್ಯ ಆಗಂಗಿಲ್ಲಾ. ಎಲ್ಲಾರೂ ಅವರ. ತಂದಿ- ಮಕ್ಕಳ ಕೂಡಿ ಕುಡಿಯೋ ಕಾಲರಿ ಇದ. ಏನೋ ನಮ್ಮ ಮಗಾ ಸಣ್ಣಾಂವ ಇದ್ದಾನಂತ ದೋಸ್ತರನ್ನ ಕರಕೋಂಡ ಹೋಗ್ತೇನಿ ಇಷ್ಟ.
“ಏ ಅಲ್ಲೆ ಹಗಲಗಲಾ ಹೋಗಿ ಬ್ಯಾಸರ ಆಗಿತ್ತು, ಅದರಾಗ ಬ್ಯಾರೆ ಅಲ್ಲೆ ಜಗಾನು ಇರಲಿಲ್ಲ ಅಂತ ಈ ಕಡೆ ಬಂದೆ” ಅಂದಾ.

ಹಿಂಗ ಒಬ್ಬರ ಮ್ಯಾಲೆ ಒಬ್ಬರು ಬಾರ್ ನಾಗ ಪರಿಚಯದವ್ರು ಭೆಟ್ಟಿ ಆಗ್ತಾನ ಇರತಾರ. ಕೆಲವಬ್ಬರೂ ಭೆಟ್ಟಿ ಆಗಿ ಆಗಿ ಪರಿಚಯ ಆಗ್ತಾರ. ಒಟ್ಟನಾಗ ಹೇಳಬೇಕಂದರ ಬಾರ್ ನಾಗ ಎಲ್ಲಾರೂ ನಮ್ಮವರ ಅನಸ್ತಾರ. ಯಾರೂ ಹೊರಗಿನವರ ಅಲ್ಲಾ, ಎಲ್ಲಾರೂ ಒಳಗಿನವರ. ಒಮ್ಮೆ ಎದುರಿಗಿನ ಟೇಬಲ್ ಮ್ಯಾಲೇ ಕೂತವನ್ನ ಏಲ್ಲೋ ನೋಡೆನಲಾ ಅನಸ್ತು. ವಿಚಾರ ಮಾಡಿ ಮಾಡಿ ಸಾಕಾಗಿ ಹೋತು, ಆಗಿದ್ದಾಗಲಿ ಅವರನ ಒಂದ ಮಾತು ಕೇಳಿ ಬಿಡೋಣ ಅವರಿಗೆ ಗೊತ್ತಿದ್ದರು ಇರಬಹುದು ಅಂತ ಕೇಳಿದೆ. “ಇಲ್ಲೇರಿ, ವಾರದಾಗ ೨-೩ ಸಲ ಇಲ್ಲೇ ನೊಡಿರತೇವಿ ಮತ್ತೇಲ್ಲೆ, ನಾ ನೋಡಿದ್ದು ನಿಮ್ಮನ್ನ ಇಲ್ಲೇ, ನಾ ಅಂತೂ ದಿನಾ ಮನಿಗೆ ಹೋಗಬೇಕಾರ ಒಂದ ನೈಂಟಿ ಹೊಡದ ಹೋಗೋದು” ಅಂದ ಮ್ಯಾಲೆ ನನಗು “ಹೌದಲಾ! ಇಲ್ಲೇ ನೋಡಿದ್ದು” ಅಂತ ಅನಸ್ತು.
ಇನ್ನ ಕೂತಗೂಂಡಾಗ ಜನಾ ( ಅಂದರ ನಮ್ಮನ್ನೂ ಹಿಡದ ) ಹೆಂತಿಂತಾ ವಿಷಯಾ ಚರ್ಚೆ ಮಾಡ್ತಾರ ಅನ್ಕೊಂಡಿರಿ, ಅಷ್ಟ ಚರ್ಚೆ ವಿಧಾನಸೌಧದಾಗೂ ಆಗಂಗಿಲ್ಲಾ, ಇಲ್ಲೇ ಎಲ್ಲಾ ಸಮಸ್ಯೆಗೆ ಪರಿಹಾರನೂ ಒಂದ ಕ್ವಾರ್ಟರ ಮುಗಿಯೋದರಾಗ ಹೊರಗ ಬರತದ, ನನಗ ಅನಸ್ತದ ಕೆಲವೂಮ್ಮೆ ಭಾಳ ಕಠಿಣ ಸಾಮಾಜಿಕ ಸಮಸ್ಯೆ ಇದ್ದಾಗ ಒಂದ ೧೦ ಮಂದಿ ಶಾಣ್ಯಾರನ್ನ ಕೂಡಿಸಿ, ಕುಡಿಸಿ ಕೇಳಿನೋಡ್ರಿ ಒಂದ ಹೊಸಾ ನಮೂನಿ ಪರಿಹಾರ ಸಿಗೋದು ಅಂತು ಗ್ಯಾರಂಟೀ.ಇಲ್ಲೇ ಚರ್ಚೆಗೆ ವಿಷಯ ಬೇಕಾದ್ದ ಇರಬಹುದು. ಅಂತರಾಷ್ಟ್ರೀಯ ವಿಷಯದಿಂದ ಹಿಡದ ಮನಿ ಅಂಗಳದಾಗಿನ ವಿಷಯತನಕ ಎಲ್ಲಾ ಡಿಸ್ಕಸ್ ಮಾಡ್ತಾರ. ಹೊಸಾ ವಿಷಯ ಗೊತ್ತಾಗೋದು, ಹುಟ್ಟೋದು ಇಲ್ಲೇನ. ಕ್ರಾಂತಿಕಾರಿ ವಿಚಾರ ಬರೋದು ಕುಡದ ಕಾರಕೋಂಡಾಗ. ಇಷ್ಟ ಅಲ್ಲಾ, ಮನಷ್ಯಾನ ಕ್ರಿಯೇಟಿವಿಟಿ ಹುಟ್ಟೋದ ಇಲ್ಲೇ, ಇಲ್ಲೆ ಹುಟ್ಟಿ – ಬೆಳದ ಕಡಿಗೆ ಒಂದ ದಿವಸ ಕ್ರಿಯೇಟಿವಿಟಿ ಸಾಯೋದನು ಇಲ್ಲೇನ, ನೀವ ಬೇಕಾರ ಇವತ್ತಿನ ಜಮಾನದ್ದ ಪ್ರಸಿದ್ದ ಕ್ರಿಯೇಟಿವ ರೈಟರ ಮಂದಿ ಬಗ್ಗೆ ವಿಚಾರಿಸಿ ನೋಡ್ರಿ, ಅವರ ಬಗ್ಗೆ ಜನಾ ಏನಂತಾರ ಅಂತ
“ಏನ ಬರಿತಾರ್ರೀ ಅವರು ಭಾರಿ ಬರಿತಾರ ಬಿಡ್ರೀ,”
“ಭಾರಿ ಸಿಂಪಲ್ ಮನಷ್ಯಾರಿ, ಭಾಳ ಒದ್ಕೊಂಡವರು”
“ಏ, ನಾಲ್ಕ ಅವಾರ್ಡ ಸಿಕ್ಕಾವರಿ ಅವರಿಗೆ” … ಹಂಗ ಮುಂದ ಕೇಳ್ಕೋತ್ತ ಹೋಗರಿ “ಯೇ ರಾತ್ರಿ ಒಂದ ನೈಂಟಿ ಬೇಕ ಅವರಿಗೆ ? ಅದಿಲ್ಲಾಂದ್ರ ಪೆನ್ ಒಡಾಂಗಿಲ್ಲಾ” ಅಂತಾರ.
ಅಂದರ ಬಾರ್ ಅನ್ನೋದ ಒಂದಥರಾ ಬುದ್ದಿಜೀವಿ ಮಂದಿಗೆ ಸ್ಪೂರ್ತಿಕೇಂದ್ರ ಇದ್ದಂಗ. ಸ್ಪೂರ್ತಿಯ ಶೆಲೆ ಹುಟ್ಟೋದ ಕ್ವಾರ್ಟರ ಬಾಟ್ಲ್ಯಾಗ. ನಮ್ಮ ಜಿ. ಪಿ. ರಾಜರತ್ನಂ ಅವರ ಹೇಳ್ತಿದ್ದರಲ್ಲಾ
‘ರವ್ವಿ ಕಾಣದ್ ಕವಿ ಕಂಡ’
ಅಂದ್ರೆ ಕವಿಗೊಳ್ ತತ್ವ-
‘ಕವ್ವಿ ಕಾಣದ್ ಕುಡಕ ಕಂಡ’
ಅನ್ನೊದ್ ಕುಡಕರ್ ಮಾತ್ವ!
ಹಂಗ ಯಾ ಮನಷ್ಯಾಗ ಯಾ ಬಾಟ್ಲ್ಯಾಗ ಏನ ಕಾಣತದೋ ಆ ಭಗವಂತಗ ಗೊತ್ತ.

ಒಂದ ಕಾಲ ಇತ್ತು ೩-೪ ಮಂದಿ ದೊಸ್ತರ ಭೆಟ್ಟಿ ಆದರ ಎಲ್ಲಾರೂ ಸೇರಿ ದುರ್ಗದ ಬೈಲ್ ಗೆ ಹೋಗಿ ಗಿರಿಮಿಟ್ಟ, ಭಜೀ, ಮಿರ್ಚಿ ತಿಂದು ೨ ರಾಗ ೪ ಚಹಾ ಕುಡದ ಬಿಲ್ ನಾ ಕೊಡ ನೀ ಕೊಡ ಅಂತ ಗುದ್ದಾಡಿ ಮಜಾ ಮಾಡ್ತಿದ್ವಿ. ಈಗ ಕಾಲ ಬದಲಾಗೆದ, ಈಗ ನಾಲ್ಕ ಮಂದಿ ಸೇರಿದ್ರ ಸಾಕೂ ಸಾಯಾಂಕಾಲ ಎಲ್ಲಿ ಕುಡೋಣ-ಕುಡ್ಯೋಣ ಅಂತ ಡಿಸೈಡ ಮಾಡ್ತೇವಿ. ಉಳದವರನ್ನೂ ಅಲ್ಲೇ ಕರೀತೇವಿ, ಕುಡಿಯೋರು ಕುಡಿಲಾರದವ್ರು ಎಲ್ಲಾರೂ ಸೆರೋ ಜಗಾನ ಇವತ್ತ ಬಾರ್, ತಿಂಗಳಿಗೆ ಒಂದೆರಡ ಸಲಾ ಹೋಗೋದು, ವಾರಕ್ಕ ಒಂದೆರಡ ಸಲಕ್ಕ ಬಂದ ಹತ್ತೇದ. ಇವತ್ತು ಲೈಫ ಎಂಜಾಯ ಮಾಡೋದ ಅಂದರ ಕುಡಿಯೋದ ಅಂತ ಭಾಳ ಮಂದಿ ತಲ್ಯಾಗ ಹೊಕ್ಕೇದ. ಅದರಾಗ ಮಾತ ಮಾತಿಗೆ ಟೆನ್ಶನ್, ಸ್ಟ್ರೆಸ್, ಇವತ್ತ ನಂದ ಮೊಡ ಛಲೋ ಇಲ್ಲಾ, ಇವತ್ತ ನಾ ಭಾಳ ಖುಶ್ ಇದ್ದೇನಿ – ಇವೆಲ್ಲಾ ಕುಡಿಲಿಕ್ಕೆ ನಮ್ಮಕ್ಕಷ್ಟ ನಾವ ಕೊಡ್ಕೋಳೊ ಕಾರಣಗಳು. ಒಟ್ಟ ಕಾರಣ ಹುಡಕತಿರತೇವಿ. ವಾರದಾಗ ಎರಡ-ಮೂರ ಕಾರಣಂತೂ ಸಿಕ್ಕ ಸಿಗತಾವ, ಏನು ಸಿಗಲಿಲ್ಲಾಂದರ ಶನಿವಾರ ದಿವಸ “ಈ ವಾರ ಹೆಂಗಹೋತ ಗೊತ್ತ ಆಗಲಿಲ್ಲ, ಭಾರಿ ಹೆಕ್ಟಿಕ್ ಇತ್ತು, ಸ್ವಲ್ಪ ರಿಲ್ಯಾಕ್ಸ ಆಗೋಣ ಹೆಂಗಿದ್ರು ವಿಕೆಂಡ” ಅಂತ ಎಂಟ್ರೀ ಹೋಡಿತೇವಿ. ಅಕಸ್ಮಾತ ಒಂದ ಹತ್ತ ದಿವಸ ಹೋಗಲಿಲ್ಲಾ ಅಂದರ ಮುಗದ ಹೋತ, ಸತ್ತವರಂಗ ಮಾಡ್ತೇವಿ. ಯಾವಾಗ ಹೋಗ್ಯೋನೊ ಅಂತ ತುದಿಗಾಲ ಮ್ಯಾಲೆ ನಿಂತಿರ್ತೇವಿ.

ವಾರಕ್ಕ ಒಂದೆರಡ ಸಲಾ ಹೋದರ ಏನ ನಾವ ಕುಡಕರಾಗ್ತೆವೇನ, ದಿವಸಾ ಸಿಕ್ಸ್ಟೀ- ಸಿಕ್ಸ್ಟೀ ಮನ್ಯಾಗ ಕುಂತ ಹೋಡ್ಯೋರನ ಎಷ್ಟ ಮಂದಿನ ನೋಡೇವಿ, ಅವರೇನ ಕುಡಕರಾ? ನಮ್ಮ ಸೈನಿಕರ ದಿವಸಾ ಕುಡಿಂಗಿಲ್ಲೇನ ಮತ್ತ್. ನಾವು ಒಂದಥರಾ ಸೈನಿಕರ ಇದ್ದಂಗ, ಅವರು ದೇಶದ ಸಂಬಂಧ ಹೋರಾಡತಾರ ನಾವು ಸಂಸಾರದ ಸಂಬಂಧ ಹೋರಾಡತೇವಿ. ನಮ್ಮ ಪ್ರಕಾರ ಯಾರ ಕುಡದ ಕಂಟ್ರೋಲ ಆಗಲಾರದ ಟೇಬಲ ಮ್ಯಾಲೇ ವೈಕ್ ಅಂದ, ಗಟರನಾಗ, ರೋಡನಾಗ ಬಿದ್ದ ಉಳ್ಳಾಡತಾರೋ ಅವರ ಕುಡಕರು. ನಾವೇಲ್ಲಾ ಡಿಸೆಂಟ ಮಂದಿ, ಕುಡಿಯೋದು ನಮ್ಮ ಲೈಫಸ್ಟೈಲ್ ಇಷ್ಟೆ, ಹವ್ಯಾಸ ಅನ್ರಿ, ಚಟಾ ಅನಬ್ಯಾಡರಿ. ಸಮಾಜದಾಗ ಇರತೇವಿ, ಇವನ್ನೇಲ್ಲಾ ಮಾಡಬೇಕೂ ಅಂತ ಮಾಡತೇವಿ. ಇವತ್ತ ಅನಿವಾರ್ಯನೂ ಆಗೇದ ಯಾಕಂದರ,
’ಜನಾ ನಾ ತಗೂಳ್ಳೂಂಗಿಲ್ಲಾ ಅಂದರ ‘ಮಾರಿ ನೋಡ್ತಾರ,
“ಏನ್ರಿ ಇನ್ನೂ ‘ಮಾಜಾ’ ಕುಡಿತೀರಾ ” ಅಂತ ಕೇಳಿ ನಗ್ತಾರ.!
ಬರೇ ಬೀರ್ ಕುಡದರ ” ನೀ ಸಣ್ಣ ಹುಡಗ ಏನಲೇ” ಅಂತಾರ.
ವೊಡ್ಕಾ ,ವೈನ ಕುಡದರ “ಲೇ ಹೆಣ್ಣ ಮಕ್ಕಳ ಡ್ರಿಂಕ್ಸ್ ಲೇ ಅದ” ಅಂತಾರ
’ವಿಸ್ಕೀ ತಗೋಂಡಾಗ ‘ “ಅದಕ್ಕ ಸಾಫ್ಟ್ ಡ್ರೀಂಕ್ಸ್ ಹಾಕೋತ್ತಿ ಅಲ್ಲಲ್ಲೇ” ಅಂತಾರ
ಇವತ್ತ ‘ಕುಡಿತಾನ’ ಅನ್ನೋದು ದೊಡ್ಡ ವಿಷಯ ಅಲ್ಲಾ, ಕುಡಿಂಗಿಲ್ಲಾ ಅಂದರ ಹುಬ್ಬ ಹಾರಸ್ತಾರ. ಏನೋ ಬ್ಯಾಸರ ಆದಾಗ ಆವಾಗ – ಇವಾಗ ಹೋಗಿರ್ತೇವಿ. ಹಂಗ ಮತ್ತೊಬ್ರು ಬಂದಿರತಾರ. ಇಬ್ಬರೂ ಸೇರಿ ಬ್ಯಾಸರಾ ಹಂಚಗೊಂಡ ಬೀರ ಕುಡಿತೇವಿ. ಅಷ್ಟ, ಇದರಾಗೆನ್ ವಿಶೇಷ ಇಲ್ಲಾ.

ನಾ ಬರದದ್ದ ಎಲ್ಲಾ ಓದಿ ಮತ್ತ ನೀವ ಎಲ್ಲರ ನಾನೂ ಖರೇನ ಕುಡಿತೇನಿ ಅಂತ ತಿಳ್ಕೊಂಡ-ಗಿಳ್ಕೊಂಡಿರಿ, ಅದರಾಗ ಬ್ಯಾರೆ ನನ್ನ ಇನಿಶಿಯಲ್ ನೋಡಿ ಎಲ್ಲಾರೂ ನನಗ ಪೀಕೇ ಆಡೂರ್ ಅಂತಾರ. ನನ್ನ ಇನಿಶಿಯಲ್ ಅಷ್ಟ ಪೀಕೇ, ನಾ ಪೀಕೇ ಅಲ್ಲಾ. ಏನೋ ನಿಮ್ಮಂತಾವರದ ಅನುಭವದ ಮ್ಯಾಲೆ ಒಂದ ಲೇಖನ ಬರಿ ಬೇಕ ಅನಸ್ತು ಬರದೇನಿ. ಮತ್ತ ಎನರ ವಿಷಯ ಇತ್ತಂದರ ಸಂಜಿ ಮುಂದ ಬಾರನಾಗ ಸಿಕ್ಕಾಗ ಹೇಳ್ರಿ. ಮತ್ತ ಬರಿಯೋಣ ಅಂತ. ಹೋಗ್ತ – ಹೋಗ್ತ ನಮ್ಮ ಜಿ. ಪಿ. ಯವರದ ಇನ್ನೋಂದ ಮಾತ ನೆನಪ ಇಟ್ಕೋರ್ರಿ “ಕುಡಕರ್ ಮಾತ್ವ ತಿಳಿಕೊಳ್ದೇನೆ
ನೂಕ್ಬಾರ್ದ್ ಔರನ್ ಕೆಳಗೆ;
ಯಾವ್ ಚಿಪ್ನಾಗ್ ಮುತ್ತ್ ಐತೊ-
ಒಡದ್ ನೋಡ್ಬೇಕ್ ಒಳಗೆ!”