ಆ ಹಿಮಗಿರಿಯ ಬೆಳ್ನೊರೆಯ ಹಾಲು ಕರೆದು ಇಲ್ಲಿ ಹೂ ಅರಳಿದ ಭಾಗ್ಯ. ಜೀವ ತಡಿಯದೆ ಅಣ್ಣ ಮನೆಯಿಂದ ತಿರುಗಿಬಂದಿದ್ದ. ತನ್ನ ಬೆವರು ಹನಿಯ ಕಷ್ಟಕ್ಕೆ ಇಳಿದುಬಂದ ಕೈಲಾಸದ ಸಿರಿಯನ್ನು ಅವನು ನನಗೆ ತೋರುತ್ತಿದ್ದರೆ ಅಣ್ಣನ ಮಗಳ ಕಣ್ಣು ಪ್ರೀತಿಯಿಂದ ಅತ್ತಿತ್ತ ತಿರುಗುತ್ತಿದ್ದವು. ನೋಡಿ ನೋಡಿ ದಣಿದು ದಣಿದು ಹೂಜೇನಿನ ಸಜ್ಜೆ ಮನೆಯನ್ನು ಅದರ ಪಾಡಿಗೆ ಅಲ್ಲೇ ಬಿಟ್ಟು ಆ ಸ್ವರ್ಗವನ್ನು ದಾಟಿ ಕಾರು ಹತ್ತಿದೆವು. ಊರ ಕಾಯುವ ಮಾರಮ್ಮ ಕಣ್ಣರಳಿ ಹರಸಿದಂತಾಯ್ತು.
ಹೆಚ್. ಆರ್. ಸುಜಾತಾ ತಿರುಗಾಟ ಕಥನ

 

ಕಾಪಿ ಅನ್ನುವ ಬೆಳೆ ಬಾಬಾನ ಜೇಬಲ್ಲಿ ಬಾಬಾಬುಡನ್ ಗಿರಿಗೆ ಬಂದಿದ್ದೆ, ಇಡೀ ಪಶ್ಚಿಮಘಟ್ಟದ ಮೂಲೆಮೂಲೆಗೂ ಬೀಜ ಸಿಡಿದು ಹರಡಿ ಬಂಪರ್ ಬೆಳೆಯಾಗಿ ಸುತ್ತಮುತ್ತಲ ಜನಕ್ಕೆ ಕಾಪಿ ಪ್ಲಾಂಟರ್ಸ್ ಅನ್ನುವ ಕೋಡು ಮೂಡಿಸಿತ್ತು. ಈಗಿನ ಸಾಪ್ಟವೇರ್ ಕಂಪೆನಿಯ ಜಾಗತೀಕರಣವನ್ನು ಅಂದಿನ ಕಾಲದಲ್ಲಿ ಕಾಫಿ ಕ್ಯೂರಿಂಗ್ ಎಂಬ ಹಾರ್ಡ್ ವೇರ್ ಗಳು ಮಾಡಿದ್ದವು.

ಇದು ಅಂದ ಕಾಲತ್ತಿಲ್ಲೆ ಮಾತು. ಈಗ ಸಧ್ಯದ ಪರಿಸ್ಥಿತಿ ವಿಷಾದನೀಯ. ಇದಕ್ಕೊಂದು ಉದಾಹರಣೆ, ತಮಾಷೆಯೆನಿಸಿದರೂ ಸತ್ಯದ ಮಾತು.

ತವರಿನ ಬೇಲೂರಿನಲ್ಲಿ ಐವತ್ತೆಕೆರೆ ಕಾಫಿ, ಆಲೂರಿನಲ್ಲಿ ಐವತ್ತೆಕರೆ ತೋಟ, ಗೊರೂರು ದಾರಿಯಲ್ಲಿ ಇಪ್ಪತ್ತೆಕರೆ ತೋಟ, ಬೆಂಗಳೂರಿನಲ್ಲಿ ಹತ್ತೆಕರೆ ತೋಟ, ಹೀಗೆ ತೋಟದ ವೈವಿಧ್ಯಗಳಲ್ಲಿ ಮುಳುಗಿ ತಮ್ಮ ವರುಷಗಳನ್ನೇ ಕಳೆದು ಜೀವ ತೇದು ಮುದುಕರಾಗುತ್ತಿರುವ… ಯಾವುದೇ ಸಮಾರಂಭಗಳಿಗೆ ಬಂದರೂ ಉಳಿಯದೆ ಮರಳಿ ಊರ ದಾರಿ ಹಿಡಿದುಹೋಗಿ ವ್ಯವಸಾಯ ನಿಭಾಯಿಸುವ ನನ್ನಣ್ಣಂದಿರು ಹಿಂದೆ ಒಂದಿನ ಬೆಂಗಳೂರಿಗೆ ಬಂದು ಸೇರಿದ್ದರು.

ಮದುವೆಮನೆ ಸಮಾರಂಭದಲ್ಲಿ ಬಂಧುಗಳೊಡನೆ ಕುಳಿತಿದ್ದೆವು. ವೀಣಾವಾದದ ಅಲೆ ಅಲೆ. ಮಾತುಮಾತಿಗೆ ವೀಣಾವಾದನಕ್ಕೆ ೩ ಲಕ್ಷ ಮೊತ್ತ ಕೊಟ್ಟಿರುವ ಮಾತು ಬಂತು.

ನನ್ನ ದೊಡ್ದಣ್ಣನ ತಮಾಶೆ ಮಾತು ಶುರು…. ನಮ್ಮ ನಡುವೆ ……
“ಅಲ್ಲಾ, ತಿಂಗಳಿಗೆ ಎರಡು ದಿನ ಕಾರು ಡಿಕ್ಕೀಲಿ ಒಂದು ವೀಣೆ ತಗಬಂದು ಬಾರ್ಸಿ ಹೋದ್ರೆ ವರ್ಷಕ್ಕೆ 72 ಲಕ್ಷ. ಏನು ಖರ್ಚು ಕಳದ್ರೂ 60 ಲಕ್ಷ ವರುಷಕ್ಕೆ ಉಳಿದೇ ಉಳಿಯುತ್ತೆ.

ನಮ್ಮ ಎಲ್ಲ ತೋಟದಿಂದ ದಿನಕ್ಕೆ 40 ಜನದಂಗೆ ಲೆಕ್ಕ ಹಾಕುದ್ರೆ…. ಕೆಲಸಗಾರರಿಗೆ ಮುನ್ನೂರ ಅರವತ್ತೈದು ದಿನವೂ ಕೂಲಿಯೇನು? ಕಾಪಿ ಕುಯ್ಯದೇನು? ವಣಗ್ಸದೇನು? ತುಂಬದೇನು? ಮುನ್ನೂರರವತ್ತೈದು ದಿನ ಕೆಲ್ಸ ಮಾಡಿದ್ರೂ ನಾವು ಇಷ್ಟು ಸಂಪಾದನೆ ಮಾಡಕ್ಕೆ ಇಡೀ ಊರನೇ ಹರವ್ಕಬೇಕಲ್ಲ!”

“ವರ್ಷೆಲ್ಲ ಮನೆಮಕ್ಕಳು, ಆಳುಗಳು ಮೈಮುರ್ಕಂದು ಮುಕ್ಕುರಿಬೇಕಲ್ಲ! ಏನು ಹೊಡೆದಾಡಿದ್ರೂ ಒಂದು ವರ್ಷ ಬಂತು. ಒಂದ್ವರ್ಷ ಹೋಯ್ತು. ಮಳೆ ಬಂದಂಗೆ. ಅಷ್ಟು ಜನದ ಕೆಲ್ಸವ ಈ ಯಮ್ಮ ಒಂದು ವೀಣೆ ತಕಬಂದು ಮಾಡ್ಕ ಹೊಯ್ತಳೆ ನೋಡಪ್ಪ!“ ಜೋರು ನಗೆ ಅಲೆ….

ನಾನು ನಗುತ್ತಲೆ ಅಣ್ಣನ ಬಾಯ್ ಮುಚ್ಚಿಸಿದೆ. “ಸುಮ್ನಿರಣ್ಣ, ನಿಮ್ಮಿಂದ ಅಷ್ಟು ಜನದ ಮನೇರು ಹೊಟೆ ಹೊರೆಯಲ್ವಾ? ಹಕ್ಕಿಪಕ್ಕಿ, ಹುಳಹುಪ್ಪಟೆ, ನಾಯಿನರಿ, ಇಲಿ ಹೆಗ್ಗಣ ಎಲ್ಲ ತಿಂದು ಉಳಿದ್ರೂನ ಇಷ್ಟು ಸಂಸಾರ ಹೊರ್ಯಂಥ ನಿಮ್ಮ ಕೆಲಸನೇ ದೊಡ್ದಲ್ವಾ?” ಎಲ್ರೂ ನಗ್ತಾ ಊಟ ಮಾಡಿ ಮನೆಗೆ ಎದ್ದು ಬಂದೆವು.

ನನ್ನ ತವರು ಅರೆ ಮಲೆನಾಡು. ನಮ್ಮ ಸುತ್ತಲೂ ಐದಾರು ಮೈಲಿಯಲ್ಲಿ ಕಾಪಿ ತೋಟಗಳಿದ್ದರೂ ನಮ್ಮ ಪಕ್ಕದ ಮರಸಿನಲ್ಲಿ ಕಾಪಿ ತೋಟ ಇದ್ದರೂ ನಮ್ಮೂರಿನಲ್ಲಿ ಆ ಬೆಳೆ ಇರಲಿಲ್ಲ. ಗದ್ದೆ ಬೆಳೆ ಹೆಚ್ಚು. ನನ್ನ ಕೊನೇ ಅಣ್ಣ ಕುಶಲ ಬೇಸಾಯಗಾರ. ಎದ್ದೂ ಬಿದ್ದು ಅದೇ ಗೀಳು. ಅವನಿಗೆ ಇರೋರು ಇಬ್ರೂ ಹೆಣ್ಣುಮಕ್ಕಳು. “ಮದುವೆಯಾಗಿ ಹೋದಮೇಲೆ ಹೆಣ್ಣುಮಕ್ಕಳು ಬಂದು ಇದೆಲ್ಲ ಮಾಡ್ತಾರಾ? ತೋಟ ತುಡಿಕೆ ನೋಡೋರ್ಯಾರು?”

ತನ್ನ ಹೆಂಡತಿಯ ಮಾತಿಗೆ ಸೊಪ್ಪೂ ಹಾಕದೆ ಅವಳನ್ನ ಕೂರಲು ಬಿಡದೆ “ನಾ ಸಾಯೋತಂಕ ಗಿಡ ನೆಡೋನೆ. ನಂಗೆ ನಿಮ್ಮಂಗೆ ಯೋಚ್ನೆ ಮಾಡಕ್ಕಾಗಲ್ಲ!” ಅನ್ನುವ ಅವನು ೨೦ ವರುಶದಲ್ಲಿ ೪೦ ಎಕರೆ ತೋಟ ಮಾಡಿದ್ದು, ಎಲ್ಲಾ ವಿವಿಧ ಸಸ್ಯ ಸಂಕುಲಗಳನ್ನು ಹೆಚ್ಚು ಕಡಿಮೆ ಹತ್ತಾರು ಸಾವಿರ ಮರಗಳನ್ನು ಬೆಳೆಸಿದ್ದಾನೆ. “ಅಯ್ಯೋ ಇದು ಸಾಬಿ ಗದ್ದೇನಾ? ದೊಡ್ಡಗದ್ದೇನಾ? ಅಳ್ಳಿ ಮರದ ಗಣ್ಣನಾ?“ ಅಂತ ಅಪರೂಪಕ್ಕೆ ಹೋದ ಮನೆಮಕ್ಕಳಾದ ನಮಗೆ ಕಕ್ಕಾಮಿಕ್ಕಿ ಆಗುವುದೂ ಅಲ್ಲದೆ ಉಳಿದ ೧೬ ಎಕರೆ ಹೊಲದಲ್ಲಿ ಎಲ್ಲಾ ವಾಣಿಜ್ಯ ಬೆಳೆಗಳನ್ನು ಬೆಳೆದು ಸೈ ಅನ್ನಿಸಿಕೊಂಡವನು. ಈಗ ಗೋಡಂಬಿ ಬೆಳೆಯ ಪ್ರಯೋಗ ನಡೀತಿದೆ.

ಮಳೆ ಬರದೆ ಎರಡು ವರ್ಷಗಳಿಂದ ತೋಟ ವಣಗಿದರೆ ಅಂತ ನಾಕಾರು ಬೋರು ಕೊರೆಸಿ, ನಾಕು ಕೆರೆ ಮಾಡಿಸಿ ಮಳೆ ನೀರು ಹಿಡಿದಿಟ್ಟು, ಗಿಡಗಳನ್ನು ಉಳಿಸಿಕೊಂಡವನು. ರಾತ್ರಿ ಇಡೀ ಪಂಪ್ ಆನ್ ಮಾಡಿಕೊಂಡು ನಿದ್ದೆಗೆಟ್ಟು ಸಮತೋಲನದಿಂದ ಹೆಮ್ಮೆಯಿಂದ ಸೈ ಅನಿಸಿಕೊಂಡವನು. ನನ್ನ ನಾಲ್ಕು ಜನ ಅಣ್ಣಂದಿರಿಗೂ ಇರುವ ಹುಚ್ಚು ಇದು. ಈಗ ಅವರ ಮಕ್ಕಳು ಸರದಿಯಂತೆ ಪ್ರಕೃತಿಯೊಡನೆ ಹೊಡೆದಾಟಕ್ಕೆ ನಿಂತಿದ್ದಾರೆ. ನನ್ನತ್ತಿಗೆಯರ ಪರಿಶ್ರಮವೂ ಇದಕ್ಕೆ ಸಾಥಿಯಾಗಿದೆ. ಈಗ ಊರ ತುಂಬ ಅಕ್ಕಪಕ್ಕದವರ ಗದ್ದೆಹೊಲಗಳೂ ತೋಟಗಳಾಗಿವೆ. ದೀಪದಿಂದ ದೀಪ ಹತ್ತಿಕೊಂಡ ಹಾಗೆ.

ಇರಲಿ. ಇದು ಎಲ್ಲಾ ರೈತ ಮಕ್ಕಳ ಹಣೆಬರಹ. ಹೋದ ವರ್ಷ ಮಸ್ತಕಾಭಿಷೇಕಕ್ಕೆಂದು ಹಾಸನಕ್ಕೆ ಹೋದವರು ನಾವು ಅಂದು ಊರಿಗೆ ಹೋಗಿದ್ದೆವು.

ಹೋದ ವರ್ಷ ಶಿವರಾತ್ರಿಗೆ ಮೊದಲೇ ಅಕಾಲ ಮಳೆ ಆಗಿತ್ತು ಬೆಂಗಳೂರಿನಲ್ಲಿ. ಅಕಾಲ ಸಕಾಲ ಎಂಬುದು ನೆಲದ ಬೇರು, ಚಿಗುರಿಗೆ ಲೆಕ್ಕವಿಲ್ಲ. ಬಿತ್ತಿ ಬೆಳೆಯುವುದಕ್ಕಾಗಿ ಕಾಲ ಕಾಲದ ಮಳೆಯ ಗುರುತನ್ನು ಮುಂಗಾರು ಹಿಂಗಾರು ಎಂದೆಲ್ಲ ವಿಂಗಡಿಸಿ ಬೇಸಾಯ ಮಾಡಲು ಗುರುತಿಟ್ಟುಕೊಳ್ಳುವುದನ್ನು, ಅದರ ಕಾಲಕ್ಕೆ ತಕ್ಕಂತೆ ಬೆಳೆಯಿಡುವುದನ್ನು ಕಲಿತವರು ನಾವು. ಭೂಮಿ ಹಾಗಲ್ಲ. ಮಳೆನೀರಿಗೆ ಚಿಗುರೊಡೆಯುತ್ತದೆ.

ಬೆಳಗಿನ ರೊಟ್ಟಿ ತಿನ್ನುವಾಗ ಮಳೆಬೆಳೆ ಸುದ್ದಿ ಬಂತು. ಮಾತಾಡುವಾಗ “ಬೇಲೂರು ತೋಟದಲ್ಲಿ (ನನ್ನ ಎರಡನೆ ಅಣ್ಣ ಇರುವ ತೋಟ) ಮಳೆ ಆಯ್ತ? ಕಾಪಿ ಹೂ ಆಗೀತಂತಾ? ವರ್ಷ ವರ್ಷ ನೋಡಕ್ಕೆ ಹೋಗ್ತಿದ್ದೆ. ಈ ವರ್ಷ ಹೋಗಕ್ಕೆ ಆಗಲ್ಲ. ಈಗ ಮಸ್ತಕಾಭಿಶೇಕ ಮುಗ್ಸಿ ಸೀದಾ ಬೆಂಗಳೂರು. ಟೈಮಿಲ್ವಲ್ಲ!” ಅತ್ತಿಗೆಯನ್ನು ಕೇಳಿದೆ. “ಇಲ್ಲ, ಅಲ್ಲಿ ಆಗಿಲ್ವಂತೆ. ಇಲ್ಲಿ ನಮ್ಮೂರಲ್ಲಿ ಒಂದೆರಡು ಹನಿ ಹಾಕತು. ತಕ್ಷಣ ಕಾಪಿ ಗಿಡ ಇನ್ನೂ ಎಳೆ ಗಿಡ ಬೇರೆ ಅಲ್ವಾ? ಅಂತ ನಿಮ್ಮಣ್ಣ sprinkler ಹಾಕಿದ್ರು”.

ಅಣ್ಣ ತೋಟದಿಂದ ಬಂದು ಕೈಕಾಲು ತೊಳಿತಿದ್ದವನು ನಮ್ಮಿಬ್ಬರ ಮಾತು ಕೇಳಿಸಿಕೊಂಡಿದ್ದನೇನೋ…. ಬಂದವನೇ “ಬೇಲೂರಿಂತಂಕ ಹೋಗ್ಬೇಕಾ? ಹೋಗ್ತಾ ಕಾರು ಇಳ್ದು ತ್ವಾಟದ ವಳಗೆ ಹೋಗಿ ನೋಡು. ಹೂವು ಆಗವೆ. ಕಣ್ತುಂಬಿಕೊಂಡು ಹೋಗಬಹುದು.” ಲಗುಬಗೆಯಲ್ಲಿ ಕಾರುಹತ್ತಿ ಮನೆಯವರಿಗೆ ಬಾಯ್ ಹೇಳಿ ತೋಟದ ಅಡ್ಡಕಲ್ಲು ನುಸುಳಿ ಹೋದದ್ದೇ ತಗೋ! ಕಾಪಿ ಹೂವಿನ ಘಾಟು ವಾಸನೆ.

ಎಲ್ಲೆಲ್ಲೂ ಜೇನಿನ ಕಿವಿಕಚ್ಚುವ ಝೇಂಕಾರ. ಮುತ್ತು…. ಸುತ್ತು…. ಮುತ್ತು. ಮೊಗ್ಗಿನ ಜಡೆ, ಹೂಗೊಂಚಲ ಮುತ್ತಿನ ಮುಡಿ. ಏನಾದರೂ ಹೆಸರಿಸಿ. ಪುರಿಕಾಳು ಉಗ್ಗಿ ಅವು ಗೆಣ್ಣುಗೆಣ್ಣಿಗೂ ಮರಿಹಾಕಿದಂತೆ. ಮೂಗಿಗೂ ಸೊಕ್ಕು. ಕಿವಿಗೂ ಸೊಕ್ಕು. ಕಣ್ಣು ಮಾತ್ರ ಮಿಟುಕಿಸಲೂ ಆರದಷ್ಟು ತಂಪು…. ತಂಪು.

ಅಕಾಲ ಸಕಾಲ ಎಂಬುದು ನೆಲದ ಬೇರು, ಚಿಗುರಿಗೆ ಲೆಕ್ಕವಿಲ್ಲ. ಬಿತ್ತಿ ಬೆಳೆಯುವುದಕ್ಕಾಗಿ ಕಾಲ ಕಾಲದ ಮಳೆಯ ಗುರುತನ್ನು ಮುಂಗಾರು ಹಿಂಗಾರು ಎಂದೆಲ್ಲ ವಿಂಗಡಿಸಿ ಬೇಸಾಯ ಮಾಡಲು ಗುರುತಿಟ್ಟುಕೊಳ್ಳುವುದನ್ನು, ಅದರ ಕಾಲಕ್ಕೆ ತಕ್ಕಂತೆ ಬೆಳೆಯಿಡುವುದನ್ನು ಕಲಿತವರು ನಾವು.

ಆ ಹಿಮಗಿರಿಯ ಬೆಳ್ನೊರೆಯ ಹಾಲು ಕರೆದು ಇಲ್ಲಿ ಹೂ ಅರಳಿದ ಭಾಗ್ಯ. ಜೀವ ತಡಿಯದೆ ಅಣ್ಣ ಮನೆಯಿಂದ ತಿರುಗಿಬಂದಿದ್ದ. ತನ್ನ ಬೆವರು ಹನಿಯ ಕಷ್ಟಕ್ಕೆ ಇಳಿದುಬಂದ ಕೈಲಾಸದ ಸಿರಿಯನ್ನು ಅವನು ನನಗೆ ತೋರುತ್ತಿದ್ದರೆ ಅಣ್ಣನ ಮಗಳ ಕಣ್ಣು ಪ್ರೀತಿಯಿಂದ ಅತ್ತಿತ್ತ ತಿರುಗುತ್ತಿದ್ದವು. ನೋಡಿ ನೋಡಿ ದಣಿದು ದಣಿದು ಹೂಜೇನಿನ ಸಜ್ಜೆ ಮನೆಯನ್ನು ಅದರ ಪಾಡಿಗೆ ಅಲ್ಲೇ ಬಿಟ್ಟು ಆ ಸ್ವರ್ಗವನ್ನು ದಾಟಿ ಕಾರು ಹತ್ತಿದೆವು. ಊರ ಕಾಯುವ ಮಾರಮ್ಮ ಕಣ್ಣರಳಿ ಹರಸಿದಂತಾಯ್ತು.

ಕಾರಿನಲ್ಲಿ ಬರುವಾಗ ಹತ್ತಾರು ಆಲೋಚನೆಗಳು. ಮೂಗಿನಲ್ಲಿ ತುಂಬಿದ್ದ ಘಾಟು ಕಡಿಮೆಯಾಗುತ್ತ ಹೋದವರ್ಷ ಬೇಲೂರಿನ ತೋಟದಲ್ಲಿ ಕೆಲಸದ ಆಳು ಮಾಳಿ ಹಿಂದೆಯೇ ಬರುತ್ತ ಬುದ್ಧಿ ಹೇಳಿದ್ದು ನೆನಪಾಯಿತು.

“ಕಾಪೀ ಹೂವಾದಾಗ ತ್ವಾಟವೇ ಮೈ ನೆರ್ದಿರೋದ ನೋಡಿ ಹೋಗಕ್ಕೆ ದೇವಾನುದೇವತೆಗಳಿಂದ ಹಿಡದು ದೆಯ್ಯ ದುಗುಣೀರ ತನಕ ತಿರುಗ್ತಿರ್ತಾರೆ ಗಾಳೀಲಿ. ಅಂಥ ಸಮಯದಲ್ಲಿ ಒಬ್ಬೊಬ್ಬರೇ ಹೋಗಬಾರ್ದು. ಸಮಯ ಸಂದು ಅನ್ನದು ಒಂದೇ ಸಮನೆ ಇರುತ್ತಾ ನೀವೇ ಹೇಳಿ.”
ಆದ್ರೆ ನನ್ನ ಮನದ ಚಿತ್ರ ಬೇರೆಯಾಗಿತ್ತು. ಹತ್ತುದಿನ ಕೆಲಸದವರಿಗೆ ರಜಾ ಕೊಡುವ ಕಾರಣದ ಸುಳಿವು ಹೇಳಿದಂತಾಯಿತು. “ಗಿಡದ ಗೆಲ್ಲು ತಾಗಿ ಅಡ್ಡಾಡುವಾಗ ಸೂಕ್ಷ್ಮವಾದ ಹೂ ಉದುರಿ ಸರಿಯಾಗಿ ಕಾಯಿ ಕೂರುವುದಿಲ್ಲ. ಮಳೆ ಬರಬಾರದು ಕೂಡ. ಮಳೆಯಾದರೂ ಪುಷ್ಪಪಾತ್ರೆಗೆ ನೀರು ತುಂಬಿ ಕಾಯಿ ಕರಗುತ್ತವೆ. ಹಾಗೆಯೇ ಜೇನಿನಿಂದ ಆಗುವ ಪರಾಗಸ್ಪರ್ಷಕ್ಕೆ ತೊಂದರೆಯಾಗುತ್ತದೆ”. ಅದಕ್ಕೆ ಆದ ಒಂದು ಏಕಾಂತತೆ ಸಿಗಬೇಕಾಗಿರುವುದು ಪ್ರಕೃತಿ ಧರ್ಮ.

ಸರಿಯಾಗಿ ಒಂದೇ ಹದ ಮಳೆ ಆದ ೯ ದಿನಕ್ಕೆ ಸರಿಯಾಗಿ ಎರಡು ತಿಂಗಳಿಂದ ಮೊಗ್ಗಿನ ಗೊಂಚಲನ್ನು ಹೊತ್ತು ಕಾದ ಚಿಗುರಿನ ಗೆಲ್ಲುಗಳು ಹೂವಾಗಿ ಮೂರು ದಿನ ಕಳೆದು ಕಾಯಿ ಕಟ್ಟತೊಡಗುತ್ತವೆ. ಮತ್ತೆ ಹದಿನೈದು ದಿನ ಕಳೆದು ಮಳೆಯಾದರೆ ತೊಂದರೆಯಿಲ್ಲ. ಮುಂಗಾರಿನ ಮೊದಲ ಮಳೆಗಳು ಹೀಗೆ ಕಾಪಿ ಬೆಳೆಗಾರರಿಗೆ ದಿಕ್ಕು ತೋರುತ್ತವೆ.

ಆದರೆ ಈ ಪಾಟಿ ಹೂವಿಗೆ ಮುತ್ತಿರುವ ಜೇನನ್ನು ನೋಡಿದಾಗ ಹತ್ತಾರು ದಿಕ್ಕಿಂದ ಹುಡುಕಿ ಬಂದಿರುವ ಅವು ಮುತ್ತುಗರೆದಂತೆ ಕಂಡವು. ಇಲ್ಲಿ ಹೂವಿನ ತೇರು ಎಳೆಯುವುದು ಇವಕ್ಕೆ ಹೇಗೆ ಗೊತ್ತು? ಯಾಕೆಂದರೆ ಇವಿನ್ನೂ ಮೂರು ವರುಷದ ಗಿಡ. ಈ ಬಾರಿಯೇ ಈ ಗಿಡಗಳನ್ನು ಮೊದಲ ಫಸಲಿಗೆ ಬಿಟ್ಟಿರುವುದು. ಹೋದ ವರುಷ ಅಲ್ಲೊಂದು ಇಲ್ಲೊಂದು ಇದ್ದವು.

ಜಾತ್ರೆಗೆ ಬರುವ ಜನರಂತೆ…. ಹಣ್ಣಿರುವ ಮರಕ್ಕೆ ಗಿಳಿ ಹುಡುಕಿ ಬರುವಂತೆ…. ಇವು ಎಲ್ಲಿಂದ ವಲಸೆ ಬಂದಿರಬಹುದು?

ನಿನ್ನೆಯ ಒಂದು ಘಟನೆ ನೆನಪಾಯಿತು. ಗೊಮ್ಮಟನ ಸೊಂಟದೆತ್ತರಕ್ಕೆ ಹಾಕಿದ ಅಟ್ಟಣಿಗೆಯಲ್ಲಿ ನಿಂತು ಹಾಲುಚಂದನದ ಸ್ನಾನ ನಡೆವಾಗ ಜೀಗುಡುತ ಜೇನೆದ್ದವು. ಗೊಮ್ಮಟನ ಸಂದುಗೊಂದಿನ ಯಾವ ಜಾಗದಲ್ಲಿ ಕಟ್ಟಿದ್ದವೋ? ಜನರ ಆರ್ಭಟ ತಾಗಿ ಎದ್ದಿದ್ದವು. ಮುಖಕ್ಕೆ ಮುತ್ತಿಕ್ಕುತ್ತವೇನೋ ಎಂದು ಆ ಉರಿಬಿಸಿಲಲ್ಲಿ ಕರಿಮೀನಿನಂದದಿ ಸೀಯುತ್ತಿದ್ದ ಜನಕ್ಕೆ ಈ ಜೇನಿನ ಆತಂಕ ಎದುರಾಗಿತ್ತು. ಅಡಗಿಕೊಳ್ಳಲಾಗಲಿ ಓಡಿ ಹೋಗಲಾಗಲಿ ತಾವಿರಲಿಲ್ಲ.
ಭಕ್ತರೊಬ್ಬರು “ಭಗವಾನ ಕಾ ಅಷೀರ್ವಾದ ಹೈ. ಢರ್ ನಾ ಮತ್: ಏನೂ ಮಾಡಲ್ಲ, ಜೈ ಬಾಹುಬಲಿ!” ಅಂದರು. ಅವು ಮಂತ್ರ ಹಾಕಿದಂತೆ ಒಂದು ಸುತ್ತು ಹಾಕಿದ್ದೆ ಚಲಿಸುವ ಕರಿ ಮೋಡದಂತೆ ಅತ್ತ ಜನರನ್ನು ಬಿಟ್ಟು ಚದುರಿ ಹೋದವು. ಪಾಪ! ಈ ಮೈಕಾಸುರ, ಮಹಿಷಾಸುರ ಜನರ ಗದ್ದಲಕ್ಕೆ ಹೆದರಿ ಅವು ಬೇರೆ ತಾವು ಹುಡುಕಿ ಹೊರಟವೇನೋ….

ಏಸು ನೀರು… ಎಳೆನೀರು…. ಕಾಮನ ಬಿಲ್ಲಿನ ಬಣ್ಣಗಳನ್ನೆಲ್ಲ ತಂದು ಗೊಮ್ಮಟನನ್ನು ಮುಳುಗಿಸಿದರೇನು? ಅವನ ಮೂಗಿನ ಕೆಳಗೆ…. ಕಂಕುಳ ಕೆಳಗೆ…. ಅವನ ಬುಲ್ಲಿಯ ಕೆಳಗೆ….. ಸಂದಿಗೊಂದಿಯ ವಳಗೆ ಉಜ್ಜಿ ತೊಳೆಯುವ ತಾಯಿಯಿರದೆ ಅವನ ಸ್ನಾನ ಮುಗಿಯದಂತೆ ಕಾಣಿಸಿತು. ಸಂಪೂರ್ಣವಾಗಿ ಆ ಮಗು ತೊಯ್ಯಲು ಗಾಳಿಮಳೆ, ಅದೂ ಜಡಿಮಳೆಗಷ್ಟೇ ಸಾಧ್ಯ ಎಂದುಕೊಂಡೆ.

“ಮಾನವ ತಾನು ಮಾಡಿದ ಕೆಲಸವನ್ನೇ ಮತ್ತೆ ತಾನೇ ಮೀರಲಾರನಲ್ಲ! ಇದ್ಯಾವ ಲೀಲೆ!” ಎಂದೂ ಅನ್ನಿಸಿತು. ಅರಳಿದ ಅಚ್ಚ ಬಿಳಿಯ ಕಾಪೀ ಹೂವುಗಳು ಗೊಮ್ಮಟನ ತುಟಿಯ ಮೇಲಿದ್ದಂತೆ ಭ್ರಮೆಯಾಗಿ ನಿದ್ದೆ ಆವರಿಸಿತು. ನೋಡಿ ನೋಡಿ ಮುಗಿಯದಷ್ಟು ಉದಾರತೆ ಹೂವಿನ ಹಾಗೂ ಬಾಹುಬಲಿಯ ಕೊಡುಗೆಯಾಗಿತ್ತು. ಕಾರು ತನ್ನ ಚಲನೆಯಲ್ಲಿತ್ತು.