ರಾತ್ರಿ ಮಗಳು ಫೋನ್ ಮಾಡಿದ್ದಳು. ಬಿಕ್ಕುತ್ತಲೇ ಮಾತನಾಡಿದಳು. ಮೇಲಿಂದ ಮೇಲೆ ಸಾರಿ ಕೇಳುತ್ತಿದ್ದಳು. ಅವಳಿಗೆ ವಿಶ್ವಾಸ ತುಂಬಿ ನಾಕು ಸಮಾಧಾನದ ಮಾತು ಹೇಳಿದಾಗ ರಾಧಾಳಲ್ಲೂ ನಿರಾಳತೆಯ ಭಾವ. ಆದರೆ ಬೆಳಿಗ್ಗೆ ಬಂದ ಫೋನು ಅವಳನ್ನು ವ್ಯಗ್ರಳನ್ನಾಗಿಸಿತು. ಅನಿಲ ಕಪೂರ ಫೋನ್ ಮಾಡಿದ್ದ. ಎಲ್ಲದಕ್ಕೂ ರಾಧಾಳೇ ಹೊಣೆ, ಅವಳ ಮಹತ್ವಾಕಾಂಕ್ಷೆಗೆ ಮಗಳು ಬೋರ್ಡಿಂಗ್ ಸೇರುವಂತಾಯಿತು. ಮತ್ತು ಅಲ್ಲಿಯ ಸಹವಾಸದಿಂದ ಲೆಸ್ಬಿಯನ್ ಆಗಬೇಕಾತು, ಇದು ಅವನ ವಾದ. ಅವನ ಮಾತು ತೀರ ಖಾರವಾಗಿದ್ದವು. ಅರಗಿಸಿಕೊಳ್ಳುವುದು ಅಷ್ಟು ಸುಲಭದ್ದಾಗಿರಲಿಲ್ಲ. ಮಾತು ಕೇಳಿದಾಗ ಇಂತಹ ಮನುಷ್ಯನ ಜೊತೆ ಬಾಳುವೆ ಮಾಡಿದ್ದೆನೇಯೇ ಅಂತ ಪಿಚ್ಚೆನ್ನಿಸಿದ್ದು ಸುಳ್ಳಲ್ಲ.
ಉಮೇಶ ದೇಸಾಯಿ ಬರೆದ ವಾರದ ಕಥೆ

 

ಬಾಗಿಲಹೊರಗೆ ನಿಂತವ ಪಾಟೀಲನೇ ಅಂತ ಖಾತರಿ ಮಾಡಿಕೊಂಡೇ ಬಾಗಿಲು ತೆರೆದಿದ್ದಳು ರಾಧಾ. ಮನೆಯ ಗೇಟಿನ ಹೊರಗೆ ಅನೇಕ ಚಾನೆಲ್ ನವರು ನಿಂತಿದ್ದರು. ಒಂದುವೇಳೆ ಸೆಕ್ಯುರಿಟಿಯವ ಇರದಿದ್ದರೆ ಮನೆಯ ಒಳಗಡೆಯೆ ನುಗ್ಗುತ್ತಿದ್ದರೇನೋ.. ರಾಧಾಳಿಗೆ ಪಾಟೀಲ ಬಂದಿದ್ದು ಸಮಾಧಾನ ತಂದಿತ್ತು. ಅದನ್ನು ಹೇಳಿ ತೋರಿಸಿದಳು. ಅವಳ ಮಾತಿನ ಕಡೆ ಗಮನ ಕೊಡದ ಪಾಟೀಲ ಕುರ್ಚಿಯ ಮೇಲೆ ಕುಳಿತ. ಮುಖ ವ್ಯಗ್ರವಾಗಿತ್ತು.

“ಅಲ್ಲ ಮಾರಾಯ್ತಿ ನಿನಗ ಏನು ಹೇಳಬೇಕು ಏನು ಹೇಳಬಾರದು ಅಂತ ಗೊತ್ತಾಗೂದಿಲ್ಲ… ಹೋಗಿ ಹೋಗಿ ಅಕಿ ಮುಂದ ಯಾಕ ಹೇಳಿದಿ….” ದನಿಯಲ್ಲಿ ಆಕ್ಷೇಪಣೆ ತುಂಬಿತ್ತು.

“ಹಾಗಲ್ಲ ಇನ್ನೂ ಅನೇಕ ಸಂಗತಿ ಹಂಚಿಗೊಂಡಿದ್ದೆ ಅವಳ ಜೊತೆ ವಿ ಬಿಕೇಮ್ ಗುಡ್ ಫ್ರೆಂಡ್ಸ್.. ಅನಿಸಿತ್ತು…” ರಾಧಾಳ ದನಿಯಲ್ಲಿ ಕಾಳಜಿಯಿತ್ತು.

“ಅಗದೀ ಸೀದಾಸಾದಾ ಮಾತದ.. ನಿನ್ನ ಕಾಲಮ್ಯಾಲೆ ನೀನ ಕೊಡ್ಲಿ ಹಾಕಿಕೊಂಡಂಗ ಅದ ಈಗ. ಒಂದುವಾರ ಕಳದರ ಮಂತ್ರಿಮಂಡಳ ರಚನಾ ಆಗತದ… ನಿನಗ ಕ್ಯಾಬಿನೆಟ್ ಮಂತ್ರಿ ಮಾಡೂದು ಖಾತ್ರಿ ಆಗಿತ್ತು. ಸಾಹೇಬರು ಹಂಗ ಸುಕೇಶಜಿ ಮುದ್ರಿ ಒತ್ತಿದ್ದರು.. ನೋಡು ಎಲ್ಲಾ ಅವಘಡ ಆತು.. ನೋಡು ನಮ್ಮದು ಸನಾತನಿಗಳ ಪಕ್ಷ.. ಇಂತಹ ವಿಚಾರ ಅಷ್ಟು ಲಗೂನ ರುಚಸೂದಿಲ್ಲ.. ನಾವು ಇನ್ನು ಬಹಳ ಹಿಂದ ಉಳದೇವಿ ಅಂತ ಬೇಕಾದರ ತಿಳಕೋ… ಅದರಾಗ ಈ ಸುಕೇಶಜಿಗೆ ಇಂತಹ ಯಾವ ಸಂಗತಿನೂ ಪಥ್ಯಾಗೂದಿಲ್ಲ.” ಅವನ ದನಿಯಲ್ಲಿ ವ್ಯಂಗ್ಯವಿತ್ತು. ಇವ ತನ್ನನ್ನು ಆಡಿಕೊಳ್ಳುತ್ತಿದ್ದಾನೋ ಅಥವಾ ಪಾರ್ಟಿಗೋ… ಗೊಂದಲವಿತ್ತು.

“ನಂಬಿದೆ ಅವಳಿಗೆ ಬಯೋಪಿಕ್ ಮಾಡತೇನಿ ಅಂತ ಫಾಕ್ಸ್ ಕಂಪನಿಯವರು ಬಂದು ಕೇಳಿದರು. ಆಸೆಗೆ ಒಳಗಾದೆ.. ಯಾರಿಗೆ ಬೇಡ ಕಿರೀಟ.. ಸಿನೇಮಾರಂಗದಾಗ ಅದೂ ಕನ್ನಡ ಸಿನೇಮಾರಂಗದಾಗ ಹೆಂಗಸಿನ ಜೀವನಚರಿತ್ರಾದ ಮ್ಯಾಲೆ ಬಯೋಪಿಕ್ ಮಾಡತಾರೆ ಅಂತ ತಿಳಿದು ಖುಶಿಯಾಗಿತ್ತು… ಆದರೆ ಒಂದು ಹೇಳು ಈ ನ್ಯೂಸ ಚಾನೆಲ್ಲಿನವರಿಗೆ ಜನರ, ಅದರಲ್ಲಿ ಹೆಸರುಗಳಿಸಿದವರ ಖಾಸಗಿ ಜೀವನ ಯಾಕ ಬೇಕು? ಅದೂ ನನ್ನ ಮಗಳ ಖಾಸಗಿ ಸಂಗತಿ.. ಅವಳಿಗೂ ಒಂದು ಜೀವನವಿದ… ಸೆಕ್ಸುವಲ್ ಒರಿಯಂಟೇಶನ್ ಇದೆ, ನನಗೇ ಅಡ್ಡಿಯಾಗದ್ದು ಇವರಿಗ್ಯಾಕೆ ಆಗಬೇಕು ಪಾಟೀಲ…” ಅವಳ ಪ್ರಶ್ನೆಗೆ ಅವ ವ್ಯಂಗ್ಯವಾಗಿ ನಕ್ಕ.

“ಸಿನೇಮಾದಾಕಿ ನೀನು, ನೀನ ಹೇಳು ಎಂದರೆ ಖಾಸಗಿ ಜೀವನ ನಿಂಗ ಸಿಕ್ಕಿತ್ತೇನು? ಎಂಜಾಯ್ ಮಾಡಿ ಏನು.. ನಾವು ಪಬ್ಲಿಕ ಫಿಗರಗೋಳು ನೂರಕಣ್ಣು ಕಾವಲಿರತಾವ ನಮ್ಮ ಮ್ಯಾಲೆ.. ಸದಾ ಹುಶಾರಿಯೊಳಗ ಇರಬೇಕು.. ಅಂತಾದ್ರಾಗ ನೀನು ಎಲ್ಲ ತೆರೆದಿಟ್ಟಿ ಅಕಿ ಮುಂದ, ಬಿಡತಾರೇನು ಆ ಮಂದಿ, ನೀನ ನಿನ್ನೆ ಹೇಳಿದಿ, ಐವ್ವತ್ತು ಕೋಟಿ ಕೇಳತಾನ ಆ ನಾಯರ್ ಮುಚ್ಚಿಡಲಿಕ್ಕೆ ಅಂತ”

“ಆದ್ರ ಇದು ಅನ್ಯಾಯ ಅಲ್ಲ, ಇದು ಬ್ಲಾಕಮೇಲಿಂಗ್ ಅದ” ಅವಳ ದನಿ ಕಂಪಿಸುತ್ತಿತ್ತು.

“ನಾಳೆ ಸಾಹೇಬರು ಬಾ ಅಂದಾರ. ಅವರ ಏನಾದರೂ ದಾರಿ ತೋರಿಸಬಹುದು ನೋಡೋಣ… ಆದರ ಬಂಗಾರದಂತ ಚಾನ್ಸು ಮಾರಾಯ್ತಿ.. ಈ ಹಾಳು ಚಾನೆಲ್ಲಿನವರ ಸಲುವಾಗಿ ಎಲ್ಲಿ ಮಣ್ಣ ಆಗತದೊ ಅಂತ ಹೆದರಿಕಿ ನಂಗ..”

“ನಾ ಆ ಚಾನೆಲ್ಲಿನವರ ಜೋಡಿ ಮಾತಾಡಲಿಕ್ಕೆ ಹೋಗಲಿಲ್ಲ, ಮತ್ತೇನಾದರೂ ಅನಾಹುತ ಮಾಡಬಹುದು ಈ ಹೆದರಿಕೆ ಇದೆ..”
ಪಾಟೀಲ ನಕ್ಕ.

“ಹುಚ್ಚಿದ್ದೀ ನೀನು. ನಾ ಆ ನಾಯರ ಜೋಡಿ ಮಾತಾಡಿದೆ, ಬಗ್ಗುವ ಮನಿಶಾ ಅಲ್ಲ ಅವ… ನಿಂಗ ಬಲಿಯೊಳಗ ಹಾಕ್ಯಾರ ಅವರು… ಅಂದರ ವಿರೋಧ ಪಕ್ಷದವರು ಶಾಮೀಲಾಗ್ಯಾರ…”ರಾಧಾಳ ಮುಖ ಸಪ್ಪಗಾತು. ಪಾಟೀಲ ಮೆತ್ತಗಾದ.

“ಹೋಗಲಿ ಅಕಿ ಅವತ್ತು ಬಂದದ್ದು ಮೊದಲ ಸಲ ಏನ ಅಲ್ಲಲ್ಲ. ಆದರ ಅವತ್ತ ಯಾಕ ಅಕಿ ರೆಕಾರ್ಡ್ ಮಾಡಕೊಂಡಳು.. ನೀ ಯಾಕ ಅದಕ್ಕ ಅಲಾವ್ ಮಾಡಿದಿ…? ಅವತ್ತು ಏನೇನಾತು ಎಲ್ಲಾ ಡಿಟೇಲಾಗಿ ಹೇಳು…”

ರಾಧಾ ಮೆಲುಕು ಹಾಕಿದಳು. ಫಾಕ್ಸ್ ಚಾನೆಲಿನವರು ಕನ್ನಡದಾಗ ತನ್ನ ಬಯೋಪಿಕ್ ಮಾಡಲು ಆಸಕ್ತಿ ತಳೆದಿದ್ದಾರೆ. ಈ ವಿಷಯವೇ ಖುಶಿತಂದಿತ್ತು. ಅವರೇ ಮಾಯಾಳನ್ನು ನಿಯೋಜಿಸಿದ್ದರು.. ರಾಧಾಳ ಜೀವನಚರಿತ್ರೆ ಜನಜನಿತವಾಗಿತ್ತು. ಆದರೂ ಕೆಲವು ಒಳಸುಳಿಗಳ ಬಗ್ಗೆ ವಿವರ ಬೇಕಾಗಿತ್ತು. ಮಾಯಾ ಕೆಲವೇ ದಿನಗಳಲ್ಲಿ ಆತ್ಮೀಯ ಗೆಳತಿಯಂತಾದಳು. ಅವಳೊಡನೆ ಮನಬಿಚ್ಚಿ ಮಾತಾಡಬಹುದಾಗಿತ್ತು.

********

ತನ್ನ ಸಿನೆಮಾದ ಸುರುವಾತಿನ ದಿನಗಳ ಬಗ್ಗೆ, ಕಿಟ್ಟಣ್ಣ ಎಂಬ ನಿರ್ದೇಶಕನ ಒಡನಾಟ, ಅವನ ಜೊತೆ ಮಾಡಿದ ಹಿಟ್ ಸಿನೇಮಾಗಳು, ಇದ್ದಕ್ಕಿದ್ದಂತೆ ಲಭಿಸಿದ ಸೂಪರ್ ಸ್ಟಾರ್ ಪಟ್ಟ, ಕನ್ನಡ ಸಿನೇಮಾದ ಸಾಮ್ರಾಜ್ಞಿಯಾಗಿದ್ದು… ದಿನಗಳೆದಂತೆ ಕಿಟ್ಟಣ್ಣನಲ್ಲಿ ಬೆಳೆದ ಪೊಸೆಸಿವನೆಸ್… ತನ್ನ ಅಪ್ಪಣೆ ಮೀರಕೂಡದೆಂಬ ಅವನ ಒತ್ತಾಯ ದಿನಗಳೆದಂತೆ ಇರಿಟೇಟ್ ಆಗಿದ್ದು… ಸಿಡಿದುನಿಂತಾಗ ಅವ ರೇಗಿದ್ದು, ತಾನೇ ಚಾನ್ಸ್ ಕೊಟ್ಟವ ಎಂಬ ಹಮ್ಮು ಬೇರೆ… ಇದೇ ಸದರದಿಂದ ತನಗೆ ಹಾಸಿಗೆಗೆ ಕರೆದಿದ್ದು, ತಾನು ಕಪಾಳಕ್ಕೆ ಬಾರಿಸಿದ್ದು.. ಇದೇ ಗೊಂದಲದಲ್ಲಿ ಅನಿಲ್ ಕಪೂರ್ ಜೀವನದಲ್ಲಿ ಬಂದಿದ್ದು, ಅವನೊಡನೆ ಮದುವೆ, ಯಶುಳ ಜನನ ಹೀಗೆ ಹೊರಗಡೆ ಹೇಳದ ಅನೇಕ ಖಾಸಗಿ ಸಂಗತಿಗಳು ಮಾಯಾ ಜೊತೆ ಶೇರ್ ಮಾಡಿಕೊಂಡಿದ್ದಳು.

ರಾಧಾ ಹಾಗೂ ಅನಿಲ ಕಪೂರರ ಹೊಸ ಬಾಳು ಸುಂದರವಾಗಿತ್ತು. ಯಶು ಹುಟ್ಟಿದಮೇಲಂತೂ ಅವಳು ಹೋಮ್ ಮೇಕರ್ ಆಗಿ ಬದಲಾದಳು. ಅವಳಲ್ಲಿ ಹುದುಗಿದ್ದ ಕಲಾವಿದೆ ನಿವೃತ್ತಿ ಹೊಂದಿದಂತೆ.. ಯಶು ಎಲ್ ಕೆಜಿ ಸೇರಿದಾಗ ಜಗದಲ್ಲಿ ಅದರಲ್ಲಿ ಭಾರತದಲ್ಲಿ ಅನೇಕ ಬದಲಾವಣೆಗಳಾಗಿದ್ದವು. ಸಂಪರ್ಕಕ್ರಾಂತಿಯ ಹೊಸ ಪರ್ವ ಇಂಟರ್ನೆಟ್ ಸೌಲಭ್ಯದಿಂದ ದೊರೆಯಿತು. ಅದುವರೆಗೂ ರಾಧಾ ಹೊರ ಜಗತ್ತಿನ ವಿದ್ಯಮಾನಗಳಿಗೆ ಸ್ಪಂದಿಸಿರಲಿಲ್ಲ. ಪರ್ಯಾವರಣಕ್ಕೆ ಆಗುತ್ತಿದ್ದ ಹಾನಿಯ ಬಗ್ಗೆ ಅವಳು ಓದಿದ ಒಂದು ಲೇಖನ ಅವಳಿಗೆ ಬ್ಲಾಗ್ ಸುರುಮಾಡಲು ಪ್ರೇರೆಪಿಸಿತು. ಮಾಜಿನಟಿಯೊಬ್ಬಳು ಬರೆಯತೊಡಗಿದ ಬ್ಲಾಗನ್ನು ಜನ ಸ್ವಾಗತಿಸಿದರು. ಅವಳ ಬ್ಲಾಗುಗಳ ಲೇಖನದ ವಿಸ್ತಾರ ವ್ಯಾಪಿಸತೊಡಗಿತು. ಮಲೆನಾಡಿನ ಸುಂದರ ಪರಿಸರಕ್ಕೆ ಹೊಸದಾಗಿ ಸುರುಆದ ಕಾರ್ಖಾನೆಯಿಂದ ಆದ ಹಾನಿಯ ಬಗ್ಗೆ ಅವಳು ಅಧ್ಯಯನ ಮಾಡಿ ಬರೆದ ಲೇಖನ ನಾಡಿನ ಪ್ರಮುಖ ಪತ್ರಿಕೆಯಲ್ಲಿ ಪ್ರಕಟವಾಯಿತು.

ಆದರೆ ಆ ಕಾರ್ಖಾನೆಯ ಮಾಲೀಕ ಕಪೂರ ಕುಟುಂಬಕ್ಕೆ ತೀರ ಆತ್ಮೀಯನಾಗಿದ್ದ. ಅನಿಲ ಕಪೂರನಿಗೆ ಒತ್ತಡ ಹೇರಲಾಯಿತು. ತನ್ನ ಹೆಂಡತಿಯ ಕಡೆ ವಿವರಣೆ ಪಡೆಯಲು ಅಂತೆಯೇ ಬರೆದಿದ್ದು ತಪ್ಪು ಮಾಹಿತಿಯಿಂದ ಹುಟ್ಟಿದ್ದು ಅದು ಅಂತ ಸ್ಪಷ್ಟೀಕರಣ ಕೊಡಲು ಒತ್ತಾಯ ಹೇರಬೇಕು ಅಂತ. ಹೆಂಡತಿಯ ಜೊತೆ ವಿಶ್ವಾಸದಿಂದಲೇ ಮಾತಾಡಿದ ಅನಿಲ. ಆದರೆ ರಾಧಾ ಮಣಿಯಲಿಲ್ಲ. ತಾನು ಬರೆದ ಲೇಖನ ಆಧಾರದಿಂದ ಕೂಡಿದೆ, ಸುಕಾಸುಮ್ಮನೇ ಬರೆದದ್ದಲ್ಲ… ಇದು ಅವಳ ವಾದ. ಕೊನೆಗೆ ಅನಿಲಕಪೂರ ತನಗೆ ಬಂದ ಒತ್ತಡದ ಬಗ್ಗೆ ಹೇಳಿಕೊಂಡ. ಬಿನ್ನವಿಸಿಕೊಂಡ. ಆದರೆ ರಾಧಾ ತನ್ನ ತತ್ವಗಳಿಗೆ ಅಂಟಿಕೊಂಡಳು.. ಗಂಡ ಹೆಂಡತಿಯ ನಡುವೆ ವಿರಸ ಟಿಸಿಲೊಡೆಯಲು ಇದು ಕಾರಣವಾಯಿತು.

ಅದೇ ಸುಮಾರು ಓರ್ವ ತರುಣ ನಿರ್ದೇಶಕ ಒಂದು ಕತೆ ತಗೊಂಡು ಬಂದು ರಾಧಾಳಿಗೆ ಭೇಟಿಯಾದ. ಅವ ಕತೆ ಹೇಳಿದ ಶೈಲಿ ಹಾಗೂ ತಾನು ಮಾಡಲಿರುವ ಪಾತ್ರದ ವ್ಯಾಪ್ತಿ ಅವಳಿಗೆ ಹಿಡಿಸಿತು. ಸಿನೇಮಾಕ್ಕೆ ಅವಳು ಮರು ಪ್ರವೇಶ ಮಾಡಿದಳು. ಈ ವಿಷಯ ಅನಿಲನಿಗೆ ಅಪಥ್ಯವಾತು. ವಾದ ವಿವಾದ ತಾರಕಕ್ಕೇರಿದವು.. ಈ ಎಲ್ಲದರ ಒಟ್ಟು ಪರಿಣಾಮ ಡೈವೋರ್ಸ್ ಒಂದೇ ಅಂತ ಇಬ್ಬರೂ ತೀರ್ಮಾನಿಸಿದರು. ಯಶು ರಾಧಾಳ ಬಳಿಯೇ ಇರಬೇಕು, ಅನಿಲ ಆಗಾಗ ಅವಳಿಗೆ ಹೋಗಿ ಭೇಟಿಯಾಗಬಹುದು ಅಂತ ಕೊರ್ಟ ತೀರ್ಪು ಕೊಟ್ಟಿತು. ಯಶು ಹೆಸರಿನಲ್ಲಿ ಸಾಕಷ್ಟು ದೊಡ್ಡ ಮೊತ್ತ ಬ್ಯಾಂಕಿನಲ್ಲಿ ಅನಿಲ ಇಟ್ಟ.

ರಾಧಾಳ ಸಿನೇಮಾದ ಮರುಪ್ರವೇಶ ಸುಗಮವಾಗಿತ್ತು. ಜನ ಇನ್ನೂ ತನ್ನ ಮರೆತಿಲ್ಲ, ಇದು ಅವಳಿಗೆ ಸಂತೋಷ ಕೊಟ್ಟ ಸಂಗತಿ. ಈಗ ಕನ್ನಡ ಸಿನೇಮಾದಲ್ಲಿ ಹೊಸನೀರು ಹರದಿತ್ತು. ಹೊಸ ಹೊಸ ನಿರ್ದೇಶಕರು ಹೊಸ ವಿಚಾರಗಳು ಅಂತೆಯೇ ಹೊಸ ಕತೆಗಳು ರಾಧಾ ಖುಶಿಯಾದಳು. ತನ್ನ ವ್ಯಸ್ತ ಜೀವನ ಯಶು ಮೇಲೆ ಪರಿಣಾಮ ಬೀರಬಾರದೆಂದು ಅವಳನ್ನು ಬೋರ್ಡಿಂಗ ಸ್ಕೂಲಿಗೆ ಹಾಕಿದಳು. ದೂರದ ದೆಹರಾಡೂನಗೆ ಕಳಿಸಿಕೊಡುವಾಗ ಅರೆಕ್ಷಣ ಪಿಚ್ಚೆನ್ನಿಸಿತ್ತು… ಆದರೆ ಮರಳಿ ತನ್ನ ಅಸ್ತಿತ್ವ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ತ್ಯಾಗ ಅನಿವಾರ್ಯ ಅಂತ ಸಮಾಧಾನಪಟ್ಟುಕೊಂಡಳು ರಾಧಾ.

ಮಾಯಾ ಮಾಮೂಲಿ ಸಂಜೆವೇಳೆ ಬರುತ್ತಿದ್ದಳು. ಅದಾಗಲೇ ಎರಡು ಮೂರು ಚಾನೆಲ್ಲಿನಲ್ಲಿ ಕೆಲಸ ಮಾಡಿದ ಅನುಭವ ಅವಳಿಗೆ. ಆತ್ಮೀಯ ಗೆಳತಿಯಂತಾಗಿದ್ದಳು… ಮಗಳು ಯಶು ಮುಂಬೈಯಲಿ ಕಾಲೇಜ ಓದುತ್ತಿದ್ದಳು. ಇಡೀ ಮನೆಗೆ ಒಂಟಿಯಾದ ರಾಧಾ ಮಾಯಾಳ ಬರುವಿಕೆಗೆ ಕಾಯುತ್ತಿದ್ದಳು. ಆಗೀಗ ಇಬ್ಬರೂ ವೈನ್ ಕುಡಿಯುತ್ತಿದ್ದರು. ಸಹಜವಾಗಿಯೇ ಅವಳು ತಮ್ಮಿಬ್ಬರ ನಡುವೆ ನಡೆಯುವ ಸಂಭಾಷಣೆಗಳನ್ನು ರೆಕಾರ್ಡ್ ಮಾಡುತ್ತಿದ್ದಳು. ರೆಕಾರ್ಡ್ ಮಾಡಿದ್ದನ್ನು ಮನೆಗೆ ಹೋದ ನಂತರ ಕಾಗದದಲ್ಲಿ ಇಳಿಸುವುದು ಅವಳ ರೂಢಿ. ಅಂದು ಸಹ ಹಾಗೆಯೇ ಆಗಿದ್ದು.

ಯಶುಳ ಬಗ್ಗೆ ಯಾವಾಗ ಮಾತು ಶುರುವಾತು ಗೊತ್ತಿಲ್ಲ. ತನ್ನ ಹಾಗೂ ಅನಿಲನ ವಿಷಮ ದಾಂಪತ್ಯ , ಬೋರ್ಡಿಂಗ್ ವಾಸದ ಮುಕ್ತತೆ ಅಥವಾ ಒಟ್ಟಾರೆಯಾಗಿ ಬಂದ ಒಳಗಿನ ಒತ್ತಾಸೆ ಹಿಗೆ ಯಶು ಲೆಸ್ಬಿಯನ್ ಆಗಲು ಕಾರಣವೇನು ಇದು ರಾಧಾಳಿಗೂ ಬಿಡಿಸದ ಒಗಟು. ತಾನು ಓದಿದ ಪಾಶ್ಚಾತ್ಯ ಸಾಹಿತ್ಯ ಬದಲಾದ ಭಾರತದ ಮುಕ್ತತೆ ಈ ಎಲ್ಲ ಯಶು ಮಾಡುವುದರಲ್ಲಿ ಅಂತಹ ಗಂಭೀರ ತಪ್ಪು ಇಲ್ಲ ಅಂತ ನಂಬಿಕೆ ಹುಟ್ಟಿಸಿದ್ದವು. ವಿಚಾರ ಮಾಡಿದಾಗ ಹೌದೆಂದು ಮನವರಿಕೆಯಾಗಿತ್ತು. ವ್ಯಕ್ತಿ ವ್ಯಕ್ತಿಯ ಸ್ವಭಾವ ಬೇರೆಬೇರೆ ಆಗಿರುತ್ತದೆ. ಅವರಿಗೆ ಅವರದೇ ಆದ ನಿಲುವುಗಳಿರುತ್ತವೆ. ಬಹುಶಃ ತನ್ನ ಕಾಲದಲ್ಲಿದ್ದ ಕಟ್ಟುಪಾಡುಗಳು ಸಂಕೋಲೆಗಳು ಈಗ ಇಲ್ಲ. ಬದಲಾದ ಸ್ಥಿತಿಗೆ ಹೊಂದಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ.

ಓದಿನ ಕೊನೆಯ ವರ್ಷದಲ್ಲಿದ್ದ ಯಶು ಮನೆಗೆ ಬಂದಿದ್ದಳು. ಅದಾಗಲೆ ಮುಂಬೈಯ ಒಂದು ಕಂಪನಿಯ ಆಫರ್ ಸಿಕ್ಕಿತ್ತು ಅವಳಿಗೆ. ಒಬ್ಬಳೇ ಬಂದಿರಲಿಲ್ಲ. ಜೊತೆಗೆ ಜಾಹ್ನವಿ ಎಂಬ ಹುಡುಗಿ ಬಂದಿದ್ದಳು. ತನ್ನ ಪಾರ್ಟನರ್ ಅಂತ ಮಗಳು ಪರಿಚಯಿಸಿದ್ದಳು. ಬಂದ ದಿನವೇ ಇಬ್ಬರ ಒಡನಾಟ ಸಹಜ ಇಲ್ಲ ಅನಿಸಿತ್ತು. ರಾತ್ರಿ ಇಬ್ಬರೂ ಒಂದೇ ರೂಮಿನಲ್ಲಿ ಮಲಗಿದಾಗ ಅಂತೆಯೇ ಅಂಟಿಕೊಂಡೇ ಸದಾ ಇರುವವರ ನೋಡಿ ಯಶುಗೆ ಕೇಳಿಯೇ ಬಿಟ್ಟಳು. ಬಂದ ಉತ್ತರ ಸಂಶಯ ಬಲಪಡಿಸಿತ್ತು.

“ಯಸ್ ಮಮ್ಮಾ, ಜಾಹ್ನವಿ ಜೊತೆ ನನಗೆ ರಿಲೇಶನಶಿಪ್ ಇದೆ. ನಿನಗೆ ಇದು ಸೇರದಿರಬಹುದು. ಆದರೆ ನಾನು ಇದನ್ನು ಆಯ್ದುಕೊಂಡಿದ್ದಲ್ಲ. ಅವಳು ನಾನು ಬೋರ್ಡಿಂಗನಲ್ಲಿದ್ದಾಗಿನಿಂದಲೂ ರೂಮ್ ಶೇರ್ ಮಾಡುತ್ತಿದ್ದೆವು.. ಇಂಟಿಮಸಿ ಬೆಳೀತು. ಹೀಗೆ ಸಂಬಂಧದಲ್ಲಿ ಅದು ಮುಗಿದಿದೆ…” ಯಶು ಎದುರು ಕೂತು ಹೇಳುವಾಗ ಜಾಹ್ನವಿಯೂ ಜೊತೆಗಿದ್ದಳು.

“ಬೇಟಾ ಏನು ಹೇಳಬೇಕು ತಿಳೀತಿಲ್ಲ. ನೀನು ಹುಡುಗನ ಜೊತೆ ಗೆಳೆತನ ಬೆಳೆಸಿದ್ದು ಆದರೆ ನಾರ್ಮಲ್ ಅನಿಸುತ್ತಿತ್ತೇನೋ…” ಅಳೆದು ತೂಗಿ ಅಳುಕಿನಿಂದಲೇ ರಾಧಾ ಅಂದಿದ್ದಳು.

“ಯಸ್ ಮಮ್ಮ. ಇದು ಎಕ್ಸಪೆಕ್ಟ್ ಮಾಡಿದ್ದೆ… ಏನು ಓದಿದರೇನು? ಅಭಿನೇತ್ರಿಯಾದರೇನು? ನೀನೂ ಸಹ ತಾಯಿಯೇ… ನಿನಗೆ ನೋವಾಗಿರುವುದು ಸಹಜವೇ. ಆದರೆ ನಾನು ಕಮಿಟ್ ಆಗಿರುವೆ. ಯು ನೋ ಜಾಹ್ನವಿಯ ಗೆಳೆತನ, ಆತ್ಮೀಯತೆ ಎಲ್ಲೂ ಸಿಕ್ಕಿಲ್ಲ. ಶಿ ಈಸ್ ಲೈಕ ಎ ಬೂನ್. ವರದಾನ ಅವಳು. ಅವಳಿಲ್ಲದಿದ್ದರೆ ನಾನೇನಾಗುತ್ತಿದ್ದೇನೋ ಗೊತ್ತಿಲ್ಲ.”

ಪಕ್ಕದಲ್ಲಿ ಕೂತ ಜಾಹ್ನವಿಯ ಅಪ್ಪಿಕೊಳ್ಳುತ್ತ ಮಗಳು ನುಡಿದಾಗ ತಟಕ್ಕನೇ ರಾಧಾಳಲ್ಲಿ, ಮಗಳು ಹೀಗೆ ಲೆಸ್ಬಿಯನ್ ಆಗಿ ಪರಿವರ್ತನೆ ಆಗಿದ್ದರಲ್ಲಿ ನನ್ನ ಪಾತ್ರ ಇದೆ ಅನ್ನುವ ಅಪರಾಧಿಭಾಬವ ಜಾಗೃತವಾಯಿತು. ಅದಾವುದೋ ನಿಲುವು ತತ್ವಕ್ಕೆ ಗಂಡನಿಗೆ ಎದುರಾಗಿ ಅವನಿಂದ ಬೇರೆಯಾಗಿರದಿದ್ದರೆ ಯಶು ಬೋರ್ಡಿಂಗಿಗೆ ಹೋಗುವ ಪ್ರಮೇಯ ಬರುತ್ತಿತ್ತೋ ಇಲ್ಲವೋ. ಹಾಗಾದರೆ ನಾ ತಪ್ಪು ಮಾಡಿದೆನೇ? ಅವ ಬೇಡ ಅಂದ, ಆದರೂ ಮತ್ತೆ ಮಿಂಚಬೇಕು, ಮೆರೆಯಬೇಕು, ಅಂತ ಮರಳಿ ಮೇಕಪ್ ಮಾಡಿಕೊಂಡು ಸಿನೆಮಾಕ್ಕೆ ಮರುಪ್ರವೇಶ ಮಾಡಬಾರದಾಗಿತ್ತೇನೋ… ಈ ದ್ವಂದ್ವ ಕಾಡಿತ್ತು. ಇದೇ ಭಾವ ಬಲವಾಗಿ ಏನೂ ಮಾತಾಡಲಿಲ್ಲ. ರಾತ್ರಿಯಿಡೀ ನಿದ್ದೆ ಸಹ ಬರಲಿಲ್ಲ. ಮರುದಿನ ಎದ್ದಾಗ ಭಾವ ತಿಳಿಯಾಗಿತ್ತು. ನನ್ನನ್ನು ನಾನು ಹಳಿದುಕೊಂಡರೇನೂ ಆಗದು. ಓಕೆ ಮಗಳ ಸೆಕ್ಷುವಲ್ ಓರಿಯಂಟೇಶನ್ ಬೇರೆ ಇದೆ, ಅದು ಅವಳ ಆಯ್ಕೆ ಕೂಡ. ನಾ ವಿರೋಧಿಸಿದರೆ ಅದು ಬದಲಾಗದು. ಇದು ಮನಸ್ಸಿಗೆ ಬಂದಿದ್ದು. ಯಶುಗೆ ಹೇಳಿದಾಗ ಅಮ್ಮನನ್ನು ಅಪ್ಪಿಕೊಂಡಿದ್ದಳು. ಜಾಹ್ನವಿಯ ಕಡೆ ತಿರುಗಿ ಬೀಗಿದಳು.

“ನಾ ಹೇಳಿರಲಿಲ್ಲವೇ.. ಮಮ್ಮಾ ವಿಲ್ ಅಂತ. ಐ ಲವ್ ಯೂ ಮಮ್ಮಾ…” ಕಣ್ಣೀರು ಸುರಿಸಿದಳು.

********

ಅಂದು ರಾಧಾ ಅನುಭವಿಸಿದ ಭಾವೋದ್ವೇಗ ಅದರ ತೀವ್ರತೆ ಶಬ್ದರೂಪದಲ್ಲಿ ಮಾಲಿನಿಗೆ ಹೇಳಿದಾಗ ಅವಳ ಕಣ್ಣೂ ಮಿನುಗುತ್ತಿದ್ದವು.

“ಇಟ್ ಈಸ್ ರೇರ್ ಟು ಕಮ್ ಎಕ್ರಾಸ್ ಅ ಮಾಮ್ಸ ಲೈಕ್ ಯು. ಅದರಲ್ಲೂ ನೀವು ಹಿಂದೆ ಮಾಡುತ್ತಿದ್ದ ಆ ತ್ಯಾಗಮಯಿ ಹೆಂಗಸಿನ ಪಾತ್ರಗಳ ನಿಲುವಿಗೆ ತೀರ ವ್ಯತಿರಿಕ್ತವಾಗಿ ನಿಜಜೀವನ ಇದೆ ನಿಮ್ಮದು. ಲೈಕ್ ಇಟ್..” ಅವಳು ಹೇಳಿದಾಗ ಉಬ್ಬಿ ಹೋಗಿದ್ದಳು. ಲಿಬರಲ್ ಮೈಂಡೆಡ್ ಅಂತ ಹೇಳಿದಳು, ಗರ್ವ ಬರುವಂತೆ ನಡೆದುಕೊಂಡಳು. ಬಹುಷಃ ರಾಧಾಳಿಗೂ ಈ ಹೊಗಳಿಕೆಯ ರೂಢಿ ತಪ್ಪಿಹೋಗಿತ್ತೇನೋ.. ಅಪ್ಪಿಕೊಂಡಿದ್ದಳು ಮಾಯಾಳಿಗೆ. ಆದರೆ ಮರುದಿನ ಬಂದ ಫೋನ್ ಎಲ್ಲ ಉಲ್ಟಾ ಮಾಡಿತ್ತು. ಸಕ್ಕರೆ ಬೆರೆತ ದನಿ ನಾಯರ್ ದು. ಆದರೆ ಹೇಳಿದ ಸಂಗತಿ ವಿಷದ್ದು. ದುಡ್ಡು ಕೊಡದಿದ್ದರೆ ಮಾಯಾ ಮಾಡಿಕೊಂಡ ಸಂಭಾಷಣೆಯ ಆಡಿಯೋ ರಿಲೀಸ್ ಮಾಡುವುದಾಗಿ ಹೇಳಿದ್ದ. ಮಾಯಾಳನ್ನು ಸಂಪರ್ಕಿಸಲು ಪ್ರಯತ್ನ ಪಟ್ಟಳು ರಾಧಾ. ಅವಳು ಫೋನ್ ತೆಗೆಯಲೇ ಇಲ್ಲ. ವಿಷಯ ನಾ ಹಬ್ಬಿಸಬೇಕಾಗಿರಲಿಲ್ಲ.

ಅಸಲು ಆ ನಾಯರ್ ವಿರೋಧಪಕ್ಷದವ. ದುಡ್ಡು ಕೊಟ್ಟಿದ್ದರೂ ಅವ ಲೀಕ್ ಮಾಡುತ್ತಿದ್ದ ಆಡಿಯೋ. ಬಲೆಯಲ್ಲಿ ಸಿಕ್ಕಿಹಾಕಿಕೊಂಡಂತಹ ಅನುಭವ. ಅತ್ಯಂತ ಖಾಸಗಿ ಹಾಗೂ ಆತ್ಮೀಯತೆಯ ಒಂದು ಸಂಭಾಷಣೆ ಹೀಗೆ ರೂಪಾಂತರ ಹೊಂದಬಹುದು, ಇದು ರಾಧಾಳಿಗೆ ಅಪಥ್ಯದ ಸಂಗತಿಯಾಗಿತ್ತು. ನನ್ನನ್ನು ಪೂರ್ತಿ ಬಳಸಿಕೊಳ್ಳಲಾಗಿದೆ ಈ ಮೂಲಕ ವಿರೋಧಪಕ್ಷದವರು ನನ್ನ ಮುಗಿಸಲು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನನ್ನ ಮೇಲೆ ದ್ವೇಷ ಇರಬೇಕಾದದ್ದೇ, ಉತ್ತರ ಕರ್ನಾಟಕದಲ್ಲಿ ನಾನು ನಿರಂತರವಾಗಿ ಸಂಚಾರ ಮಾಡಿದೆ, ಭಾಷಣ ಮಾಡಿದೆ, ಮನೆಮನೆಗೆ ಹೋದೆ, ಹಲವು ಮನೆಯವರು ಉಡಿ, ಖಣ ತುಂಬಿ ಗೌರವಿಸಿದರು. ಇದೆಲ್ಲ ನಿರ್ಣಾಯಕ ವೋಟುಗಳು ಪಕ್ಷಕ್ಕೆ ಬಂದಿದ್ದು ರಾಧಾ ಹಾಗೂ ಪಾಟೀಲರ ನಿರಂತರ ಓಡಾಟದಿಂದ ಅಂತೆಲ್ಲ ಫಲಿತಾಂಶ ಬಂದ ನಂತರ ರಾಜಕೀಯ ಪಂಡಿತರು ವಿಶ್ಲೇಷಿಸಿದ ರೀತಿ. ಈಗ ರಾಧಾ ಆಡಿದ ನಿಜವಾದ ಮಾತೇ ಅವಳ ವಿರುದ್ಧವಾಗಿದೆ. ಅದನ್ನೇ ಒಂದು ಆಯುಧವಾಗಿ ಅವರು ಬಳಸಿಕೊಳ್ಳುತ್ತಿದ್ದಾರೆ.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಅವ ಕತೆ ಹೇಳಿದ ಶೈಲಿ ಹಾಗೂ ತಾನು ಮಾಡಲಿರುವ ಪಾತ್ರದ ವ್ಯಾಪ್ತಿ ಅವಳಿಗೆ ಹಿಡಿಸಿತು. ಸಿನೇಮಾಕ್ಕೆ ಅವಳು ಮರು ಪ್ರವೇಶ ಮಾಡಿದಳು. ಈ ವಿಷಯ ಅನಿಲನಿಗೆ ಅಪಥ್ಯವಾತು. ವಾದ ವಿವಾದ ತಾರಕಕ್ಕೇರಿದವು.. ಈ ಎಲ್ಲದರ ಒಟ್ಟು ಪರಿಣಾಮ ಡೈವೋರ್ಸ್ ಒಂದೇ ಅಂತ ಇಬ್ಬರೂ ತೀರ್ಮಾನಿಸಿದರು.

ಪಾಟೀಲ ಹೋದ ನಂತರ ರಾಧಾ ಟಿವಿ ಹಚ್ಚಿದಳು. ಎಲ್ಲಾ ಚಾನೆಲ್ಲಿನಲ್ಲೂ ಒಂದೇ ಸುದ್ದಿ. ಇವಳು ಅಭಿನಯಿಸಿದ ಹಳೆಯ ಚಿತ್ರಗಳ ತುಣುಕು, ಅದರಲ್ಲಿ ಭಾರತೀಯ ನಾರಿಯ ಪ್ರತಿರೂಪದಂತಿರುವ ರಾಧಾ ಪಾತ್ರವಾಗಿ ಆಡಿದ ಮಾತುಗಳು, ಜೊತೆಗೆ ಆಯ್ದ ಮಂದಿಯ ಬಿಸಿಬಿಸಿ ಚರ್ಚೆ. ಅದರಲ್ಲಿ ಭಾಗವಹಿಸಿದವರೆಲ್ಲರದೂ ಒಂದೇ ದನಿ… ಇಂತಹ ಮನೋಧೋರಣೆ ಇರುವ ಹೆಂಗಸು ನಮ್ಮ ರಾಜ್ಯಕ್ಕೆ ಮಂತ್ರಿಯಾಗಬಾರದು ಅಂತ.
ಆಶ್ಚರ್ಯವೆಂದರೆ ಅನೇಕರು ಇವಳ ಜೊತೆ ಕೆಲಸ ಮಾಡಿದವರೇ. ಒಂದಾನೊಂದು ಕಾಲದಲ್ಲಿ ಇವಳಿಂದ ಆರ್ಥಿಕ ಸಹಾಯ ಪಡೆದವರೇ. ಈಗ ಇವಳ ವಿರುದ್ಧ ಮಾತನಾಡುತ್ತಿದ್ದಾರೆ.

ಜನ ಬದಲಾಗಿದ್ದಾರೆ. ಇದು ಅಪ್ರಿಯ ಸತ್ಯ. ತನ್ನ ಹಾಗೂ ಕಿಟ್ಟಣ್ಣನ ನಡುವೆ ನಡೆದ ಸಂಗತಿಗಳಿಗೆ ಬಣ್ಣ ಹಚ್ಚಿ ಮಾತಾಡಿದ್ದು ವಿಚಿತ್ರ ಅನಿಸಿತು. ಒಂದು ಖಾಸಗಿ ಸಂಗತಿ ಹೀಗೆ ಜನರ ಬಾಯಲ್ಲಿ ರೂಪ ಪಡೆಯುವ ಪರಿ ರೇಜಿಗೆ ತರುತ್ತಿತ್ತು. ಇವಳ ಜೊತೆ ಪಾತ್ರ ಮಾಡುತ್ತಿದ್ದ ಸಹನಟಿ ಮುಖ್ಯ ಅಂದರೆ ಸಂಸ್ಕಾರ ಮುಖ್ಯ ಅದು ತಂದೆ ತಾಯಿಯಿಂದನೇ ಬರಬೇಕು ಅಂತ ಒತ್ತಿ ಒತ್ತಿ ಹೇಳುತ್ತಿದ್ದಳು. ಬೇಸರ ಅನಿಸಿತು ಟಿ ವಿ ಆಫ್ ಮಾಡಿದಳು. ಹೊರಗಡೆ ಗೇಟ್ ಮುಂದೆ ಇನ್ನೂ ಚಾನೆಲ್ಲಿನವರು ಕೆಮರಾ ಹಿಡಿದುಕೊಂಡು ನಿಂತಿದ್ದರು. ಸೆಕ್ಯುರಿಟಿಯವ ಹೆಣಗಾಡುವುದು ನಡೆದೇ ಇತ್ತು.

********

ರಾತ್ರಿ ಮಗಳು ಫೋನ್ ಮಾಡಿದ್ದಳು. ಬಿಕ್ಕುತ್ತಲೇ ಮಾತನಾಡಿದಳು. ಮೇಲಿಂದ ಮೇಲೆ ಸಾರಿ ಕೇಳುತ್ತಿದ್ದಳು. ಅವಳಿಗೆ ವಿಶ್ವಾಸ ತುಂಬಿ ನಾಕು ಸಮಾಧಾನದ ಮಾತು ಹೇಳಿದಾಗ ರಾಧಾಳಲ್ಲೂ ನಿರಾಳತೆಯ ಭಾವ. ಆದರೆ ಬೆಳಿಗ್ಗೆ ಬಂದ ಫೋನು ಅವಳನ್ನು ವ್ಯಗ್ರಳನ್ನಾಗಿಸಿತು. ಅನಿಲ ಕಪೂರ ಫೋನ್ ಮಾಡಿದ್ದ. ಎಲ್ಲದಕ್ಕೂ ರಾಧಾಳೇ ಹೊಣೆ, ಅವಳ ಮಹತ್ವಾಕಾಂಕ್ಷೆಗೆ ಮಗಳು ಬೋರ್ಡಿಂಗ್ ಸೇರುವಂತಾಯಿತು. ಮತ್ತು ಅಲ್ಲಿಯ ಸಹವಾಸದಿಂದ ಲೆಸ್ಬಿಯನ್ ಆಗಬೇಕಾತು, ಇದು ಅವನ ವಾದ. ಅವನ ಮಾತು ತೀರ ಖಾರವಾಗಿದ್ದವು. ಅರಗಿಸಿಕೊಳ್ಳುವುದು ಅಷ್ಟು ಸುಲಭದ್ದಾಗಿರಲಿಲ್ಲ. ಮಾತು ಕೇಳಿದಾಗ ಇಂತಹ ಮನುಷ್ಯನ ಜೊತೆ ಬಾಳುವೆ ಮಾಡಿದ್ದೆನೇಯೇ ಅಂತ ಪಿಚ್ಚೆನ್ನಿಸಿದ್ದು ಸುಳ್ಳಲ್ಲ. ಹೆಚ್ಚಿಗೆ ಮಾತಾಡದೆ ಫೋನ್ ಕಟ್ ಮಾಡಿ ಮುಖ್ಯಮಂತ್ರಿ ಕರೆದಿರುವ ಮೀಟಿಂಗಿಗೆ ಹೋಗಲು ಅನುವಾದಳು.

********

ಮೀಡಿಯಾದವರನ್ನು ತಪ್ಪಿಸಿ ಕಾರು ಹತ್ತಿ ಗೃಹಕಚೇರಿಗೆ ಬರುವಾಗ ಸಾಕಾಯಿತು ರಾಧಾಳಿಗೆ. ಇವಳ ಹಿಂದೆಯೇ ಕಾರಿನಿಂದಿಳಿದ ಪಾಟೀಲನನ್ನು ನೋಡಿ ಖುಶಿಯಾಯಿತು. ನಿಯೋಜಿತ ಮುಖ್ಯಮಂತ್ರಿಗಳು ಇವರದೇ ದಾರಿ ಕಾಯುತ್ತಿದ್ದರು. ಸುಕೇಶಜಿ, ಸಂಸ್ಥಾದ ರಾಜ್ಯ ಪ್ರಮುಖರು ಇದ್ದರು. ಮುಖ್ಯಮಂತ್ರಿಗಳು ಸನ್ನೆ ಮಾಡಿದಾಗ ತಿಂಡಿ ಕಾಫಿ ಸರಬರಾಜಾಯಿತು. ಪರಿಚಾರಕರು ಹೊರಗಡೆ ಹೋಗುವವರೆಗೂ ಯಾರೂ ಮಾತನಾಡಲಿಲ್ಲ. ಮುಖ್ಯಮಂತ್ರಿಗಳೇ ಮಾತಿಗೆ ಸುರುವಿಟ್ಟರು.

“ಮೇಡಂ ನಿಮ್ಮ ಉಪಕಾರ ಪಾರ್ಟಿಮೇಲೆ ಬಹಳವಿದೆ. ಉತ್ತರಕರ್ನಾಟಕದಲ್ಲಿ ನಮ್ಮ ಪಕ್ಷಕ್ಕೆ ಸ್ಕೋಪೇ ಇರಲಿಲ್ಲ ಇಷ್ಟುದಿನ. ನಿಮ್ಮ ಹಾಗೂ ಪಾಟೀಲನ ಹೋರಾಟದಿಂದ ಸೀಟು ಬಂದವು. ನಾವು ಯಾವುದೇ ಬೆಂಬಲವಿಲ್ಲದೆ ಸರಕಾರ ರಚಿಸುವಷ್ಟು. ಮೊದಲಬಾರಿ ಕೇಂದ್ರ ಹಾಗೂ ರಾಜ್ಯದಲ್ಲಿ ನಮ್ಮದೇ ಪಾರ್ಟಿಯ ಸರಕಾರ ಇರಲಿದೆ. ರಾಜ್ಯದ ಜನರ ನಿರೀಕ್ಷೆ ಬಹಳ ಇವೆ. ಈ ಖುಶಿಯಲ್ಲಿ ನೀವು ಆ ರಿಪೋರ್ಟರ್ ಜೊತೆ ಮಾತಾಡಿದ್ದು ಮೈನರ್ ಹಿಕಪ್ ಆದಹಾಗಿದೆ. ವಿರೋಧಪಕ್ಷದವರ ನಾಲಿಗೆಗೆ ಜೀವ ಬಂದಿದೆ..” ಮುಖ್ಯಮಂತ್ರಿಗಳ ದನಿಯಲ್ಲಿ ಖಚಿತತೆ ಇತ್ತು. “ಸುಕೇಶಜಿ ನಾನು ಹಾಗೂ ನಮ್ಮ ಪಕ್ಷದ ಮುಖಂಡರು ವಿವರವಾಗಿ ಚರ್ಚಿಸಿದೆವು. ಸುಕೇಶಜಿ ನಿಮಗೆ ಪ್ಲಾನ್ ಏನು ಅಂತ ತಿಳಸತಾರೆ…”

ರಾಧಾ ಸುಕೇಶಜಿಯೆಡೆಗೆ ಹೊರಳಿದಳು. ಕಟ್ಟಾ ಮನುಷ್ಯ ಪಾಟೀಲ ಹೇಳಿದ ಹಾಗೆ ಯಶುಳ ಈ ನಿಲುವು ಅವನಿಗೆ ಸಮ್ಮತವಲ್ಲ.

“ನೋಡಿಮಾ ಇದು ಪಕ್ಷದ ಮರ್ಯಾದೆಯ ಪ್ರಶ್ನೆ. ನಿಮ್ಮ ಮಗಳು ಅವಳ ಆಯ್ಕೆ ಅವಳ ಜೀವನ ಶೈಲಿ ಬಿಡಿಸಿಹೇಳುವುದಾದರೆ ಅವಳ ಲೈಂಗಿಕ ಜೀವನದ ಬಗ್ಗೆ ನಮಗೇನೂ ಆಸಕ್ತಿಯಿಲ್ಲ. ಆದರೆ ನೀವು ಅವಳ ತಾಯಿ ಆಗಿದ್ದು ಸುಮ್ಮನಿದ್ದೀರಿ ಅಂದರೆ ಅವಳ ಕೃತ್ಯಕ್ಕೆ ಬೆಂಬಲ ಕೊಟ್ಟಂತೆಯೇ ಅಂತ ಪಾರ್ಟಿ ಭಾವಿಸಿದೆ. ಮೇಲಾಗಿ ನೀವು ಅದಾವುದೋ ಗುಂಗಿನಲ್ಲಿ ಆ ರಿಪೋರ್ಟರ್ ಮುಂದೆ ಎಲ್ಲ ಹೇಳಿ ಇನ್ನೂ ಹೆಚ್ಚಿನ ಗೊಂದಲ ಮಾಡಿದಿರಿ.. ಇರಲಿ ಈಗ ಆಗಿದ್ದು ಆಗಿ ಹೋಗಿದೆ. ಒಂಥರಾ ಡ್ಯಾಮೇಜ ಕಂಟ್ರೋಲ್ ಕ್ರಮ ಇದು. ನಾವು ಆ ಚಾನೆಲ್ಲಿಗೆ ಪ್ರತಿಯಾಗಿ ಬೇರೆ ಚಾನೆಲ್ಲಿನಲ್ಲಿ ನಿಮ್ಮ ಮುಲಾಕಾತ್ ಇಡತೇವಿ. ನೀವು ಅಲ್ಲಿ ಹೇಳಿಕೊಟ್ಟಿದ್ದನ್ನು ಹೇಳಿದರಾತು.”

“ಅಂದರೆ ನಾ ಏನು ಹೇಳಬೇಕು….” ರಾಧಾಳ ದನಿ ಅಲ್ಪಸ್ವಲ್ಪ ವ್ಯಗ್ರವಾಗಿತ್ತು.

“ನೋಡಿಮಾ… ಪಾರ್ಟಿಗೆ ನಿಮ್ಮ ಯೋಗದಾನದ ಅರಿವಿದೆ.. ಹಾಗಂತ ಎಲ್ಲ ಸಹಿಸಲಾಗುವುದಿಲ್ಲ. ನಿಮ್ಮದು ಹಾಗೂ ನಿಮ್ಮ ಮಗಳದು ವೈಯುಕ್ತಿಕ ಜೀವನ ಇರಬಹುದು. ಆದರೆ ನೀವು ಪಾರ್ಟಿ ಸದಸ್ಯೆ, ನಾಳೆ ಮಂತ್ರಿಯಾಗೋರು. ನಾವು ಹೇಳೋದು ಇಷ್ಟೇ. ನೀವು ನಾವು ನಿಗದಿಪಡಿಸಿದ ಚಾನೆಲ್ಲಿಗೆ ಒಂದು ಇಂಟರ್ವ್ಯೂ ಕೊಡಿ. ನಾನು ಆ ಮಾಯಾ ಜೊತೆ ಹೇಳಿದ್ದೆಲ್ಲ ಸುಳ್ಳು ಅದು ನಿಜವಲ್ಲ ಅಂತ. ಆಡಿಯೋ ಅವರ ಬಳಿ ಇದೆ, ನಮಗೂ ಅರಿವಿದೆ. ಇಷ್ಟಾಗಿಯೂ ಅವರು ಒತ್ತಾಯಿಸಿದರೆ ತನಿಖೆಗೆ ಕಳಿಸುವ, ತನಿಖೆಯಲ್ಲಿ ಏನು ಅಡ್ಜಸ್ಟ್ ಮಾಡಬೇಕು ಅದೆಲ್ಲಮಾಡುವ, ವಿರೋಧ ಪಕ್ಷದವರ ಹಗರಣದ ಫೈಲು ಈಗ ನಮ್ಮ ಬಳಿ ಇವೆ. ಅದು ಅವರು ಮರೆಯುವಂತಿಲ್ಲ. ಡ್ಯಾಮೇಜ್ ಕಂಟ್ರೋಲಿಗೆ ನೀವು ನಾವು ಹೇಳಿದ ಹಾಗೆ ಮಾಡಿ ಸಾಕು. ಪಾಟೀಲರು ನಿಮಗೆ ಇಂಟರ್ವ್ಯೂ ದಿನಾಂಕ ಹೇಳತಾರೆ” ಅನಿಸಿದ್ದನ್ನು ನೇರವಾಗಿ ತಡೆಯಿಲ್ಲದೆ ಹೇಳಿದ ಸುಕೇಶಜಿ ಜ್ಯೂಸಿನ ಗ್ಲಾಸು ಎತ್ತಿಕೊಂಡರು.

“ಆದರೆ ನೀವು ಹೇಳಿದ ಉಪಾಯಗಳು ವಸ್ತುಸ್ಥಿತಿಯನ್ನು ಮರೆಮಾಚುವುದಿಲ್ಲ ಅಲ್ಲವೇ. ನನ್ನ ಮಗಳ ವೈಯಕ್ತಿಕ ಜೀವನ ಅವಳ ಒಂದು ತುಡಿತ ಅದು ನಿಮ್ಮ ದೃಷ್ಟಿಯಲ್ಲಿ ತಪ್ಪಾಗಿರಬಹುದು. ಬಟ್ ಅದು ವಾಸ್ತವ ಅಲ್ಲವೇ? ನನ್ನನ್ನು ಒಪ್ಪಿಕೋತೀರಿ ನೀವು ಆದರೆ ನನ್ನ ಹುಳುಕು, ಅದೂ ಕೇವಲ ನಿಮ್ಮ ದೃಷ್ಟಿಕೋನದಲ್ಲಿ, ಒಪ್ಪಿಕೊಳ್ಳಲು ತಯಾರಿಲ್ಲ ಅಲ್ವೇ…” ಅವಳ ಮಾತಿಗೆ ಸುಕೇಶಜಿ ಮುಖ ಕೆಂಪಾಯಿತು, ಮುಖ್ಯಮಂತ್ರಿಕಡೆ ನೋಡಿದರು.

“ಅದು ಹಾಗಲ್ಲ ಮೇಡಂ. ನಿಮ್ಮ ಪ್ರಚಾರ, ಹೆಸರು ನಾವು ಬಳಸಿದೆವು ನಿಜ.. ಜನ ನಿಮ್ಮನ್ನು ಭಾರತೀಯ ನಾರಿಯ ಉದಾಹರಣೆಯಾಗಿ ನೋಡುತ್ತಾರೆ. ಅವರ ಭಾವನೆಗಳಿಗೆ ನೋವಾಗಿದೆ. ನಿಜ, ಪಾರ್ಟಿ ನಿಮ್ಮನ್ನ ಮಿನಿಸ್ಟರ್ ಮಾಡಲಿದೆ, ಇದು ಬಹುಮಾನವೇ ತಾನೇ? ಹಾಗಂತ ಎಲ್ಲವನ್ನೂ ಒಪ್ಪಿಕೊಳ್ಳೋದು ಪಾರ್ಟಿಯ ನಿಲುವಿಗೆ ತಾಳೆಯಾಗುವುದಿಲ್ಲ. ಹಾಗೆ ನೋಡಿದರೆ ದೆಹಲಿಯ ಅನೇಕ ಹಿರಿಯರಿಗೂ ನಿಮ್ಮ ಇಂಟರವ್ಯೂ ವಿಷಯ ತಿಳಿದಿದೆ. ಅನೇಕರು ಆಕ್ಷೇಪ ಮಾಡಿದ್ದಾರೆ…” ನಿಯೋಜಿತ ಮುಖ್ಯಮಂತ್ರಿ ಅದೇನೋ ಉಪಕಾರ ಮಾಡಿದವರಂತೆ ಮಾತನಾಡುತ್ತಿದ್ದಾನೆ ಅನಿಸಿತು ರಾಧಾಳಿಗೆ. ಅವರು ಈಗಾಗಲೇ ನಿರ್ಧಾರ ಮಾಡಿರುವ ಹಾಗಿದೆ. ಹೆಚ್ಚಿನ ವಾದ ಮಾಡಿ ಉಪಯೋಗವಿಲ್ಲ ಅನಿಸಿತು.

“ನನಗೆ ನಾಳೆಯವರೆಗೆ ಯೋಚಿಸಲು ಟೈಮ್ ಕೊಡಿ…” ಉತ್ತರಕ್ಕೂ ಕಾಯದೇ ಅವಳು ಎದ್ದು ನಿಂತಳು.

********

ಪಾಟೀಲನಿಗೆ ಫೋನು ಬಂದಾಗ ಎದ್ದೆನೋ ಬಿದ್ದೆನೋ ಅಂತ ಜೋರಾಗಿ ಕಾರು ಓಡಿಸಿಕೊಂಡು ಬಂದು ಹೋಟೆಲ್ ತಲುಪಿದ. ಅಲ್ಲಿಯ ಬಾಂಕ್ವೆಟ್ ಹಾಲಿನ ದಾರಿ ಕೇಳಿ ತಿಳಿದು ಹೋದವನಿಗೆ ನಿರಾಳವಾತು. ಪ್ರೆಸ್ ಮೀಟ್ ಇನ್ನೂ ಶುರುವಾಗಿರಲಿಲ್ಲ. ಬಿಳಿಸೀರೆ, ರವಿಕೆ ಧರಿಸಿದ ರಾಧಾಳನ್ನು ಒತ್ತಾಯದಿಂದ ಪಕ್ಕಕ್ಕೆ ಕರೆದುಕೊಂಡು ಹೋದ.

“ಏನ ಮಾರಾಯ್ತಿ, ಮತ್ತೇನಿದು ಹೊಸಾ ಕತಿ ನಿಂದು. ಅಲ್ಲ ಸಿಎಂ ಸಾಹೇಬರು ಫೋನ್ ಮಾಡಿದರು ಹೋಗಿ ನಿಲ್ಲಿಸು ಅಂತ…” ಅವನ ಮಾತು ಅರ್ಧಕ್ಕೆ ನಿಲ್ಲಿಸುತ್ತ ರಾಧಾ ಮುಗುಳ್ನಕ್ಕಳು.

“ಗಾಬರಿಯಾಗಬೇಡ. ನಿಮ್ಮ ಪಾರ್ಟಿಗೂ ಸಿಎಂ ಸಾಹೇಬರಿಗೂ ಏನೂ ತೊಂದರೆಯಾಗಲಾರದು. ಆದ್ದರಿಂದ ರಿಲ್ಯಾಕ್ಸ್…” ಅದಾರೋ ಬಂದು ಹೊತ್ತಾಗುತ್ತಿರುವುದಾಗಿ ಹೇಳಿದ. ರಾಧಾಳ ಬೆನ್ನು ಹತ್ತಿದವನಿಗೆ ಅಚ್ಚರಿ ಕಾದಿತ್ತು. ನಾಡಿನ ಪತ್ರಿಕೆಗಳ ವರದಿಗಾರರು, ನ್ಯೂಸ್ ಚಾನೆಲ್ಲಿನವರು ಬಂದಿದ್ದರು. ಶಾರ್ಟ್ ನೋಟಿಸ್ ಇದ್ದರೂ ಹಾಲ್ ತುಂಬಿಹೋಗಿತ್ತು. ಯಾರ ಪ್ರಶ್ನೆಗೂ ತಾನು ಉತ್ತರಿಸುವುದಿಲ್ಲ. ನನಗೆ ಹೇಳಬೇಕಾಗಿದ್ದನ್ನು ಓದಿ ಹೇಳಲಿರುವೆ. ಸ್ಟೇಟ್ಮೆಂಟ್ ಪ್ರತಿ ಎಲ್ಲರಿಗೂ ಸಿಗಲಿದೆ ಅಂತ ರಾಧಾ ಮೊದಲೇ ಸಾರಿದಳು. ಪಾಟೀಲ ಅವಳ ಪಕ್ಕಕ್ಕಿದ್ದ ಖಾಲಿ ಕುರ್ಚಿಯ ಮೇಲೆ ಕುಳಿತ.

ಎಲ್ಲ ಮುಗಿದು ಹೋಗಿತ್ತು. ರಾಧಾ ಎದ್ದು ಯಾವಾಗಲೋ ಹೋಗಿದ್ದಳು. ಪಾಟೀಲ ಕುಳಿತೇ ಇದ್ದ. ಅವ ಶಾಕ್ ಗೆ ಒಳಗಾಗಿದ್ದ. ಪರಿಚಯದ ಪತ್ರಕರ್ತರು ಅವನಿಗೆ ಮುತ್ತಿಕೊಂಡರು. ರಾಧಾಳ ಸ್ಟೇಟ್ಮೆಂಟ್ ಬಗ್ಗೆ ಅವನ ಅಭಿಪ್ರಾಯ ತಿಳಿಯುವುದಿತ್ತು ಅವರಿಗೆ. ಅವರಿಂದ ಬಿಡಿಸಿಕೊಂಡು ಹೊರಬಂದವನ ಫೋನ್ ರಿಂಗಣಿಸಿತು. ಸುಕೇಶಜಿ ಅದೇನೋ ಬೈಯುತ್ತಿದ್ದರು ರಾಧಾಳಿಗೆ. ಇವ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಕಾರ್ ಪಾರ್ಕಿಂಗ್ ಹತ್ತಿರ ಅದಾರೋ ಒಬ್ಬ ಫೋನ್ ಮೂಲಕ ಸಭೆಯಲ್ಲಿ ನಡೆದ ಸಂಗತಿಗಳ ವಿವರಗಳನ್ನು ತನ್ನ ಕಚೇರಿಗೆ ಹೇಳುತ್ತಿದ್ದ.

“ತೀರಾ ಓಪನ್ ಆಗಿ ರಾಧಾ ಹೇಳಿದರು. ಅವರು ತಮ್ಮ ಮಗಳು ಸಲಿಂಗಿಯಾಗಿದ್ದು, ಅವಳ ವೈಯುಕ್ತಿಕ ಸಂಗತಿ. ಆ ಕಾರಣಕ್ಕೆ ಮುಜುಗುರ ಆದರೆ ಅಂತಹ ಪಕ್ಷ ಕೊಡುವ ಅಧಿಕಾರ ಬೇಡ ಅಂತ ಹೇಳಿದರು. ನಾನು ನನ್ನ ಮಗಳ ಪರ ಅಂತ ಸಾರಿದರು. ಅವಳ ಆಯ್ಕೆ ಅದು. ಸರಿನೋ ತಪ್ಪೋ ಪಾಪವೋ ಪುಣ್ಯವೋ ಗೊತ್ತಿಲ್ಲ. ಆದರೆ ಅದನ್ನು ಗೌರವಿಸುತ್ತೇನೆ ಅಂತ ಹೇಳಿದರು. ಅಧಿಕಾರಕ್ಕಾಗಿ ಏನೆಲ್ಲ ಮಾಡುವ ರಾಜಕಾರಣಿಗಳ ನಡುವೆ ರಾಧಾ ತಳೆದ ನಿಲುವಿಗೆ ನಗಬೇಕೋ ಅಳಬೇಕೋ ಗೊತ್ತಾಗುತ್ತಿಲ್ಲ. ಇದೊಂದು ವಿಚಿತ್ರ ಸನ್ನಿವೇಶ. ಸನಾತನ ಸಂಪ್ರದಾಯ ಪಾಲಿಸಿಕೊಂಡು ಬಂದ ಅವರ ಪಾರ್ಟಿ ರಾಧಾ ಅವರ ಈ ನಿಲುವನ್ನು ಖಂಡಿತ ಬೆಂಬಲಿಸಲಾರದು…” ವರದಿಗಾರ ಹೇಳುತ್ತಲೇ ಇದ್ದ.

ಕಾರಿನಲ್ಲಿ ಕುಳಿತ ಪಾಟೀಲ ಏನೂ ತೋಚದೆ ಸುಮ್ಮನೇ ಕುಳಿತಿದ್ದ.