ರಾಜ ತರಂ’ಗಿಣಿ’

ಪಂಜರದಲ್ಲಿದೆ ಒಂದು ಅರಗಿಣಿ.
ಯಾರೋ ಕಲಿಸಿದ ಮಾತು,
ಕೊಟ್ಟ ಕುಮ್ಮಕ್ಕು.
ಕಂಬಿಗೆ ತಲೆ ಚಚ್ಚಿಕೊಳ್ಳುತ್ತ,
ಅದರದ್ದೊಂದೇ ವರಾತ:
“ಬಿಡಿ ನನ್ನ ಹೊರಕ್ಕೆ,
ನನ್ನ ಪಾಡಿಗೆ ನಾನು
ಸ್ವಚ್ಛಂದ ಹಾರಾಡಲಿಕ್ಕೆ”

ಹೊರಗೆ ಹೊಂಚಿ ಕೂತಿದೆ
ಒಂದು ಮಾಳ ಬೆಕ್ಕು
ಜೊಲ್ಲು ಸುರಿಸುತ್ತ:
“ಬಾ ಹೊರಕ್ಕೆ, ನನಗೆ ಸಿಕ್ಕು,
ಗಬಕಾಯಿಸ್ತೀನಿ ಒಂದೇ ಗುಕ್ಕಿಗೆ”

ಮೊದಲು ಮೈತುಂಬ ಬರೆ ಹಾಕಬೇಕು
ಆ ಖೂಳ ಬೆಕ್ಕಿಗೆ.
ಒದ್ದೋಡಿಸಬೇಕು, ಇನ್ನೊಮ್ಮೆ ನೋಡದಂತೆ
ನಿನ್ನ ದಿಕ್ಕಿಗೆ.
ಆಮೇಲೆ ಹಾರಾಡುವೆಯಂತೆ
ನಮ್ಮ ಮನೆ ತುಂಬ
ಮನೆವಂದಿಗಳಾಗಿ.

ಅಲ್ಲಿಯ ತನಕ ಕೊಂಚ ತಾಳೇ,
ಅರಗಿಣಿಯೇ,
ಇದು ನಿನ್ನ ಒಳಿತಿಗಾಗಿಯೇ,
ನೀ ತಿಳಿಯೇ.

“ಹಾಗಾದರೆ, ಅಯ್ಯಾ,
ನಾನು ನಿಮ್ಮ ಈ ಪ್ರತಿಷ್ಠೆಯ ಆಟಕ್ಕೆ
ಕಾದಾಟಕ್ಕೆ
ಒಂದು ದಾಳವಾಗಿಯೇ
ಉಳಿಯಬೇಕೆನ್ನುವೆಯಾ?”
ಕೇಳಿತು ಪಂಜರದೊಳಗಿಂದ ಅರಗಿಣಿ,
ಸುರಿಸುತ್ತ ಕಂಬನಿ.

******

ಮೇಲಿನವರು

ಮಂದಿ ಘೋಷಣೆ ಚೀರಿದರು
ಮೇಲಿನವರು ಹೇಳಿದರೆಂದು.
ಮಂದಿ ಕಲ್ಲು ತೂರಿದರು
ಮೇಲಿನವರು ಹೇಳಿದರೆಂದು.
ಪೋಲೀಸರು ಗುಂಡು ಹಾರಿಸಿದರು
ಮೇಲಿನವರು ಹೇಳಿದರೆಂದು.
ಆ ಮೇಲಿನವರು ಹೇಳಿದರು
ತಮ್ಮ ಮೇಲಿನವರು ಹೇಳಿದರೆಂದು.
ಆ ಮೇಲಿನ ಮೇಲಿನ ಮೇಲಿನವರು ಹೇಳಿದರು
ಆಕಾಶಕ್ಕೆ ಕೈ ತೋರಿ
ಆ ಮೇಲಿನವನು ಹೇಳಿದನೆಂದು.
ಆ ಮೇಲಿನವನೋ ಕಕ್ಕಾಬಿಕ್ಕಿ
ತಾನು ಯಾರನ್ನು ತೋರುವುದೆಂದು!
ಯಾರನ್ನು ದೂರುವುದೆಂದು!!

 

(ಬಿ.ಆರ್. ಲಕ್ಷ್ಮಣ ರಾವ್)