ಆ ಪುಟ್ಟ ನೀಲಿಹಕ್ಕಿ ಬಂದು ದಿನಾಲು ಬೆದರುಬೊಂಬೆಯ ಮೇಲೆ ಕುಳಿತುಕೊಳ್ಳುತ್ತಿತ್ತು. ಬೆದರು ಬೊಂಬೆಮೇಲೆಯೇ ಯಾಕೆ ಆ ಹಕ್ಕಿ ಅದು ಹೇಗೆ ಕೂತುಕೊಳ್ಳುತ್ತೆ ಅಂತ ಅದರ ಒಡೆಯ ರೈತನಿಗೆ ಆಶ್ಚರ್ಯ, ಕುತೂಹಲ. ಬೊಂಬೆ ಒಳಗೆ ಒಂದಷ್ಟು ಬತ್ತದಕಾಳು ಇತ್ತು. ಅದನು ತಿನ್ನಲು ಆ ಹಕ್ಕಿ ಬರುತ್ತಿತ್ತು. ಅದನ್ನು ದಿನಾ ಹೆಕ್ಕಿ ತಿನ್ನುತ್ತಾ ಇತ್ತು.

ರೈತನಿಗೆ ಚಿಂತೆ ಹತ್ತಿತು ಆ ಹಕ್ಕಿಯನ್ನು ಹೇಗೆ ಓಡಿಸುವುದು ಅಂತ. ಆ ಹಕ್ಕಿಯೇನು ರೈತನ ಹೊಲದಕಾಳುಗಳ ತಂಟೆಗೆ ಹೋಗುತ್ತಿರಲಿಲ್ಲ. ಅದಕ್ಯಾಕೆ ರೈತನಿಗೆ ಚಿಂತೆ? ಯಾಕಂದ್ರೆ ಆ ಹಕ್ಕಿ ಎಲ್ಲಿ ಚೆಂದದ ಬೆದರುಬೊಂಬೆ ಸ್ನೇಹನಾ ಮಾಡಿ ಅದು ಜಾಸ್ತಿಯಾಗಿ ಅಲ್ಲಿಂದ ಇಬ್ಬರೂ ಕಾಲುಕಿತ್ತರೆ ಅಂತ ಅವನಿಗೆ ಹೆದರಿಕೆ! ರೈತ ದಿನಾ ರಾತ್ರಿ ಬಂದು ಕಾವಲು ಕೂರ್ತಿದ್ದ. ಹಕ್ಕಿ ಎಲ್ಲಿ ಅದನ್ನ ಹಾರಿಸಿಕೊಂಡು ಹೋದೀತೋ ಅಂತ. ಮುಂಜಾನೆಯೆಲ್ಲ ಹೊಲದಲ್ಲೇ ಹೆಚ್ಚು ಕಾಲ ಕಳೆಯೋದರಿಂದ ಅದರಚಿಂತೆ ಇರಲಿಲ್ಲ. ಆದರೆ ದಿನಾರಾತ್ರಿ ಕಾದುಕೂತು ರೈತನಿಗೆ ನಿದ್ದೆ ಇಲ್ಲದ ಹಾಗೆ ಆಯಿತು. ಅವನು ಬಡಕಲಾಗತೊಡಗಿದ. ರೈತನ ಹೆಂಡತಿಗೆ ಚಿಂತೆ ಹತ್ತಿತು. ಗಂಡನ್ನ ಕೇಳಿದಳಂತೆ: ಯಾಕೆ ಹೀಗೆ ನಿದ್ದೆಗೆಟ್ಟು ದಿನಾರಾತ್ರಿ ಕಾಯ್ತೀರಿ ಅಂತ. ಅದಕ್ಕವನು ಕಾಯೋಕತೆಯನ್ನೆಲ್ಲಾ ಹೆಂಡತಿಗೆ ಹೇಳಿದ. ಆಗ ಅವಳು ಹೇಳಿದಳು: ಹೋಗಿ ಬೆದರುಬೊಂಬೆನೇ ಕೇಳಿಬಿಡಿ. ಆ ಹಕ್ಕಿಗೆ ಯಾಕೆ ಜಾಗಕೊಡ್ತೀಯ ಅಂತ. ರೈತ ಹೆಂಡತಿ ಹೇಳಿದ ಹಾಗೆಯೇ ಮಾಡಿದ.

ಅವತ್ತು ರಾತ್ರಿ ಬೆದರುಬೊಂಬೆನ ಕೇಳಿಯೇಬಿಟ್ಟ: ‘ನೀನು ಯಾಕೆ ಆ ಹಕ್ಕಿಗೆ ಆಶ್ರಯ ಕೊಡ್ತೀಯ?’ ಅಂತ. ಅದಕ್ಕೆಅದು ಹೇಳಿತು: ನೋಡು ಯಜಮಾನ, ನಿನಗಾದ್ರೆ ನಿನ್ನ ಹೊಲ, ಮನೆ, ಹೆಂಡತಿ ಎಲ್ಲಾ ಇದ್ದಾರೆ. ನನಗೆ ಮಾತ್ರ ಯಾರು ಇದ್ದಾರೆ? ‘ನನ್ಜೊತೆ ಮಾತಾಡೋಕೆ ಯಾರಾದ್ರು ಬೇಡವಾ..’ ಅಂತ ಕಣ್ಣೀರು ಸುರಿಸಿತು.

ರೈತ ತುಂಬಾ ನೊಂದುಕೊಂಡು, ನಿನಗೆ ಇನ್ನೊಂದು ಬೊಂಬೆ ಜೋಡಿಮಾಡ್ತೀನಿ ಅಂದ. ಇಲ್ಲ. ನಂಗೆ ಆ ನೀಲಿಹಕ್ಕಿನೇಬೇಕು ಅಂದಿತು ಬೆದರುಬೊಂಬೆ. ರೈತ ಬೇರೆದಿಕ್ಕು ತೋಚದೆ ಹಾಗೇ ಆಗಲಿ ಎಂದು ಹೇಳಿ, ಇನ್ನೊಂದಷ್ಟು ಕಾಳು ತಂದು ಗೊಂಬೆಯಲ್ಲಿ ತುಂಬಿದ. ಆ ಹಕ್ಕಿ ದಿನಾ ಬಂದು ಆ ಕಾಳುಗಳನ್ನು ತಿನ್ನುತ್ತಾ, ಬೆದರುಬೊಂಬೆಯೊಡನೆ ಮಾತನಾಡುತ್ತಾ, ಹಾರಾಡಿಕೊಂಡು ಸಂತೋಷವಾಗಿ ಇತ್ತು!

ನಕ್ಷತ್ರದ ಸ್ನೇಹಚಂದಮಾಮನ ರಾಯಭಾರ

ಬೆಳದಿಂಗಳ ಒಂದು ರಾತ್ರಿಯಲ್ಲಿ ಉಲ್ಕೆಯೊಂದು ಉರಿದು ನೆಲಕ್ಕೆಬಿತ್ತು. ರಾತ್ರಿಯ ಚಂದಮಾಮನನ್ನು ನೋಡುತ್ತಾ ಊಟ ಮಾಡುತ್ತಿದ್ದ ಹುಡುಗಿಯೊಬ್ಬಳು ಉಲ್ಕೆ ಬೀಳುವುದನ್ನು ನೋಡಿದಳು. ತಮ್ಮನನ್ನು ಕರೆದುಕೊಂಡು ಉಲ್ಕೆ ಬಿದ್ದಜಾಗಕ್ಕೆ ಹೋಗಿ ನೋಡಿದರೆ ಅದು ಮೆಲ್ಲಗೆ ಕಣ್ಣುಬಿಟ್ಟು ಅವಳನ್ನು ನೋಡಿತು. ‘ಉಲ್ಕೆಯಣ್ಣ ಯಾಕೆ ನೆಲಕ್ಕೆಬಿದ್ದೆ, ಯಾರು ನಿನ್ನ ಬೀಳಿಸಿದವರು?’ ಎಂದು ಕೇಳಿದಳು. ಉಲ್ಕೆ ಅವಳ ಮಾತಿಗೆ ಉತ್ತರವನ್ನು ಕೊಡದೆ ಮೆಲ್ಲಗೆ ದಣಿವಾರಿಸಿಕೊಳ್ಳುತ್ತಾ ಕೂತಿತು. ‘ಯಾಕೆ ಮಾತನಾಡುತ್ತಿಲ್ಲ’ ಹುಡುಗಿಯ ಪ್ರಶ್ನೆ. ಅವಳ ಮಾತಿಗೆ ಮೆಲ್ಲಗೆ ತಲೆ ಎತ್ತಿಹೇಳಿತು, ‘ನಾನು ಹೇಗೆ ಬಿದ್ದರೇನು ಈ ಮುಂಚೆ ನನ್ನ ಕಡೆ ನಿಮ್ಮ ಗಮನವೇ ಇರಲಿಲ್ಲವಲ್ಲ’ ಎಂದು ಅದು ತೋಡಿದ ಗುಳಿಯನ್ನು ಹತ್ತಲು ಪ್ರಯತ್ನಿಸಿತು. ಹುಡುಗಿಯು ಉತ್ತರ ದಿಕ್ಕಿಗೆ ಬೆರಳು ತೋರಿ ‘ಅಲ್ಲಿ ಇದ್ದವನಲ್ಲವೇ ನೀನು. ನಿನ್ನವರನ್ನು ಬಿಟ್ಟು ಇಲ್ಲಿಗೆ ಹೇಗೆ ಬಂದೆ?’ ಎಂದು ಮತ್ತೆ ಕೇಳಿದಳು. ಉಲ್ಕೆಗೆ ಸಂತೋಷವಾಗಿ ಹುಡುಗಿಯ ಕಡೆ ತಿರುಗಿತು. ಅವಳು ಮುಂದುವರಿಸಿ ‘ನಿನ್ನನ್ನು ದಿನವೂ ನೋಡುತ್ತಿದ್ದೆ’ ಎಂದಳು. ‘ಅಷ್ಟುದೂರ…’ ಎಂದು ನಕ್ಕಿತು ಅದು. ‘ಹೌದು ನೋಡಬಹುದು ಪ್ರೀತಿಯ ಕಣ್ಣಿದ್ದರೆ’ ಎ೦ದಳು!

ಅಷ್ಟು ದೂರದಿಂದ ತನ್ನನ್ನು ಗಮನಿಸಿದ ಬಗ್ಗೆ ಉಲ್ಕೆಗೆ ತುಂಬಾ ಸಂತೋಷವಾಯಿತು. ‘ಹಾಗಾದರೆ ನನ್ನನ್ನು ಅಲ್ಲಿಬಿಡು’ ಎನ್ನುತ್ತಾ ಉಲ್ಕೆ ಪಿಳಿಪಿಳಿ ಕಣ್ಣುಬಿಟ್ಟಿತು. ಹುಡುಗಿಯು ಚಂದಮಾಮನನ್ನು ಕರೆದು ಉಲ್ಕೆಯ ಕತೆ ಹೇಳಿದಳು. ಚಂದಮಾಮ ಹುಡುಗಿಯ ತಲೆನೇವರಿಸಿ ಉತ್ತರದಿಕ್ಕಿಗೆ ರಾಯಭಾರ ಹೊರಟಿತು!

ಮೋಡದ ಕಥೆ, ಬೆದರು ಬೊಂಬೆಯ ವ್ಯಥೆ

ಪ್ರತಿರಾತ್ರಿ ಬೆಳದಿಂಗಳ ಮೋಡವೊ೦ದು ಹೊಲದಲ್ಲಿ ನಿಂತ ಬೆದರು ಬೊಂಬೆಯನ್ನು ಮಾತನಾಡಿಸಿ ಹೋಗುತ್ತಿತ್ತು. ಬೆದರು ಬೊಂಬೆ ಮೋಡದ ಕುಶಲ ಸಮಾಚಾರ ಕೇಳುತ್ತಿತ್ತು. ಹೀಗೆ ದಿನ ಕಳೆದವು. ಯಾವುದೋ ಕಾರಣಕ್ಕೆ ಮೋಡ ಅತ್ತಕಡೆ ತಲೆ ಹಾಕಿರಲಿಲ್ಲ. ಇಡೀ ದಿನ ಬಿಸಿಲಿನಲಿ ನಿಂತು ಬೆದರು ಬೊಂಬೆಗೆ ಜ್ವರ ಬಂದು ಒಂಟಿಯಾಗಿ ನರಳುತ್ತಿತ್ತು. ಆ ಬೇಸಿಗೆಯ ರಾತ್ರಿ ಸೆಖೆ ಜಾಸ್ತಿಯಾಗಿ ಇನ್ನಷ್ಟು ನರಳಿತು. ಬೆವರ ಹನಿ ಬೆದರು ಬೊಂಬೆಯ ಹಣೆಯಲ್ಲಿ ಸಾಲುಗಟ್ಟಿ ನಿಂತಿದ್ದವು. ಅದನ್ನು ಒರೆಸಿಕೊಳ್ಳಲು ಸಹಾ ಕೈ ಎತ್ತಲಾರದಷ್ಟು ಸುಸ್ತಾಗಿತ್ತು. ಜ್ವರ ಜಾಸ್ತಿಯಾಗುತ್ತಿತ್ತು. ಬೆದರು ಬೊಂಬೆ ಮೋಡವನ್ನು ನೆನೆಸಿಕೊಂಡು ದುಃಖಿಸಿತು.

ಬಾರದ ಗೆಳೆಯನನ್ನು ಪದೇಪದೇ ನೆನಪಿಸಿಕೊಂಡು ನರಳಿತು. ಅದರ ಕಷ್ಟ ನೋಡಲಾಗದ ಬೆವರುಹನಿಯೊಂದು ಆವಿಯಾಗಿ ಮೋಡವನ್ನು ಹುಡುಕಿತಂದಿತು. ತನ್ನ ಗೆಳೆಯನ ಅವಸ್ಥೆಯನ್ನು ನೋಡಿ ಮೋಡಕ್ಕೆ ತುಂಬ ದುಃಖವಾಯಿತು. ತಾನು ಇಷ್ಟುದಿನ ಬಾರದಿರುವ ಕುರಿತು ಕಥೆ ಹೇಳಿತು. ಮೋಡವು ತನ್ನ ಹಗುರವಾದ ಕೈಯಿಂದ ಬೆದರುಬೊಂಬೆಯ ಮೈದಡವಿ ಉಪಚರಿಸಿತು. ಮೋಡದ ಮೆತ್ತನೆಯ ಆರೈಕೆಯಿಂದ ಚೇತರಿಸಿಕೊಂಡ ಬೆದರುಬೊಂಬೆ, ಮೋಡವನ್ನು ಕರೆದುತಂದ ಬೆವರುಹನಿಗೆ ಕೃತಜ್ಞತೆ ಹೇಳಿತು!

ಗಾಳಿಯರೆಕ್ಕೆ

ಮರದಿಂದ ಉದುರಿದ ಎಲೆಯೊಂದು ಬಹುದೂರ ಹೋಗಿಬಿದ್ದಿತು. ಜೋರಾಗಿ ಬೀಸಿದ ಗಾಳಿ ಅದನ್ನು ದೂರ ಎತ್ತಿ ಒಗೆಯಿತು. ಜೊತೆಗಾರರಿಂದ ದೂರವಾದ ಎಲೆ ತನ್ನಲ್ಲೇ ದುಃಖಿಸಿ ಕಣ್ಣಹನಿಗಳನ್ನು ಹರಿಸಿತು. ಹನಿಗಳ ಜಾಡನ್ನು ಹಿಡಿದ ಪುಟ್ಟ ಇರುವೆಯೊಂದು ಎಲೆಯ ಬಳಿಬಂದು, ‘ಎಲೆಯೇ, ಯಾಕೆ ಅಳುತ್ತಿರುವೆ? ನಿನ್ನ ದುಃಖ ನನ್ನ ಹತ್ತಿರ ಹೇಳಿಕೋ’ ಎಂದು ಕೇಳಿತು. ಇನ್ನಷ್ಟು ಕಣ್ಣಹನಿಗಳನ್ನು ಹರಿಸಿದ ಎಲೆ ಮರದಿಂದ ಬಿದ್ದದ್ದನ್ನು ಹೇಳಿತು.

ಇರುವೆ ‘ಅಳಬೇಡ ಇರು’ ಎಂದು ಸಮಾಧಾನ ಮಾಡಿ ಮರದ ಬಳಿ ಬಂದು ‘ಮರವೇ ಎಲೆಯನ್ನು ಯಾಕೆ ಉದುರಿಸಿದೆ’ ಎಂದು ಕೇಳಿತು. ಅದಕ್ಕೆ ಮರವು ‘ನಾನೇನು ಮಾಡಲಿ, ಗಾಳಿ ಬಂದು ಎಲೆಯನ್ನು ಜೋರಾಗಿ ಬೀಸಿ ಒಗೆಯಿತು’ಎಂದಿತು. ಇರುವೆ ಗಾಳಿಯನ್ನು ಗದರಿ ‘ಎಲೇಗಾಳಿ, ಬಡಪಾಯಿ ಎಲೆಯನ್ನೇಕೆ ಮರದಿಂದ ದೂರ ಮಾಡಿದೆ’ ಎಂದು ಕೇಳಿತು. ಇರುವೆಯ ಮಾತನ್ನು ಕೇಳಿಗಾಳಿಯು ‘ನನ್ನದು ತಪ್ಪಾಯಿತು. ಮೈ ಮರೆತು ಕನಸು ಕಂಡೆ. ಕನಸಿನಲ್ಲಿ ನನ್ನ ರೆಕ್ಕೆಯನ್ನು ಕೊಂಚ ಜೋರಾಗಿ ಬೀಸಿದೆ’ ಎಂದಿತು. ಅದಕ್ಕೆ ಇರುವೆಯು, ‘ಆದದ್ದು ಆಯಿತು ಎಲೆಯನ್ನು ಅದರ ಜೊತೆಗಾರರ ಹತ್ತಿರಸೇರಿಸು’ ಎಂದಿತು.

ಗಾಳಿಯು ಹಾಗೇ ಆಗಲಿ ಎಂದು ಹೇಳಿ ಎಲೆಯನ್ನು ಮೆಲ್ಲಗೆ ಹಗುರವಾಗಿ ಎತ್ತಿ ತನ್ನ ರೆಕ್ಕೆಯ ಮೇಲೆ ಕೂರಿಸಿಕೊಂಡು ಮರದ ಹತ್ತಿರ ತಂದುಬಿಟ್ಟಿತು. ನನ್ನ ಜೊತೆಗಾರರ ಹತ್ತಿರ ಸೇರಿದ ಎಲೆ ಮುದ್ದಾಗಿ ನಕ್ಕಿತು. ಪುಟ್ಟ ಇರುವೆ ಗಾಳಿಯ ರೆಕ್ಕೆಯ ಮೇಲೆ ಕುಳಿತು ಪಯಣ ಹೊರಟಿತು !

ಚಿತ್ರಗಳು: ರಿಷಬ್ ಕಾರ್ತಿಕೇಯ