ಈ ಕೊನೆಯ ಅಂಶದ ಕಾರಣದಿಂದ ಮಾರ್ಫಾ ಮನಸ್ಸಿಗೆ ಬಹಳ ಸಮಾಧಾನ ಆದಹಾಗಿತ್ತು. ಅವಳು ಜಾಣೆ. ನಾನು ಬರಿಯ ಹೆಣ್ಣು ಹುಚ್ಚಿನವನು, ಲಂಗದ ಅಂಚು ಕಂಡರೆ ಆಸೆ ಪಡುವವನು, ಗಂಭೀರವಾದ ಪ್ರೀತಿ ನನ್ನ ಮಟ್ಟಿಗೆ ಸಾಧ್ಯವೇ ಇಲ್ಲ ಅಂದುಕೊಂಡಿದ್ದಳು. ಜಾಣೆ ಹೆಂಗಸು, ಹೊಟ್ಟೆಯ ಕಿಚ್ಚಿನ ಹೆಂಗಸು ಇಬ್ಬರೂ ಬೇರೆ ಬೇರೆ. ಅದೇ ದೊಡ್ಡ ತಾಪತ್ರಯ.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

 

ಭಾಗ ಆರು: ನಾಲ್ಕನೆಯ ಅಧ್ಯಾಯ

ಸ್ವಿದ್ರಿಗೈಲೋವ್ ಶುರು ಮಾಡಿದ: ‘ನಾನು ಸಾಲ ತೀರಿಸಲಾಗದೆ ಇಲ್ಲಿನ ಸಾಲಗಾರರ ಜೈಲಿನಲ್ಲಿದ್ದದ್ದು ನಿನಗೆ ಗೊತ್ತಿರಬಹುದು ಅದನ್ನ ನಾನೇ ನಿನಗೆ ಹೇಳಿದ್ದೆ. ಸಾಲ ದೊಡ್ಡ ಮೊತ್ತದ್ದು, ಏನು ಮಾಡಿದರೂ ತೀರಿಸುವ ಹಾಗಿರಲಿಲ್ಲ. ಆಗ ಮಾರ್ಫಾ ಹೇಗೆ ನನ್ನನ್ನ ಜೈಲಿನಿಂದ ಬಿಡಿಸಿದಳು ಅನ್ನುವ ವಿವರ ಹೇಳುವುದರಲ್ಲಿ ಅರ್ಥವಿಲ್ಲ. ಪ್ರೀತಿಗೆ ಬಿದ್ದ ಹೆಂಗಸರು ಒಂದೊಂದು ಸಲ ಎಷ್ಟು ಮೂರ್ಖರಾಗುತ್ತಾರೆ, ನಿನಗೆ ಗೊತ್ತಾ? ಅವಳು ಪ್ರಾಮಾಣಿಕಳು. ಓದಿರದಿದ್ದರೂ ಪೆದ್ದಿ ಅಲ್ಲ. ಹೊಟ್ಟೆ ಕಿಚ್ಚು ಕೂಡ ಇರುವ ಇದೇ ಪ್ರಾಮಾಣಿಕ ಹೆಂಗಸು. ನನ್ನ ಮೇಲೆ ಹುಚ್ಚಿಯ ಹಾಗೆ ಕೂಗಾಡಿ, ಬಾಯಿಗೆ ಬಂದ ಹಾಗೆ ಬೈದು, ಕೊನೆಗೂ ನನ್ನ ಜೊತೆ ಒಂದು ಥರ ಒಪ್ಪಂದಕ್ಕೆ ಬಂದಳು. ನಾವು ಮದುವೆಯಾಗಿದಷ್ಟು ಕಾಲವೂ ಅವಳು ಒಪ್ಪಂದ ಪಾಲಿಸಿದಳು. ನಿಜ ಏನಂದರೆ ವಯಸಿನಲ್ಲಿ ಅವಳು ನನಗಿಂತ ಸಾಕಷ್ಟು ದೊಡ್ಡವಳು. ಬಾಯಲ್ಲಿ ಯಾವಾಗಲೂ ಲವಂಗ ಹಾಕಿಕೊಂಡು ಜಗಿಯುತ್ತಾ ಇದ್ದಳು. ನನ್ನ ಆತ್ಮಕ್ಕೆ ಹಂದಿಯ ಗುಣ ಒಂದಷ್ಟಿದೆ, ಜೊತೆಗೆ ಒಂದು ಥರ ಪ್ರಾಮಾಣಿಕತೆಯೂ ಇದೆ. ನಾನು ಅವಳಿಗೆ ಪೂರ್ಣ ನಿಷ್ಠನಾಗಿರುವುದಿಲ್ಲ ಅಂತ ಮೊದಲೇ ಹೇಳಿಬಿಟ್ಟಿದ್ದೆ. ಅದನ್ನು ಕೇಳಿ ಹುಚ್ಚಿಯ ಹಾಗಾಡಿದಳು. ಆದರೂ ನನ್ನ ಒಡ್ಡ ಪ್ರಾಮಾಣಿಕತೆ ಅವಳಿಗೆ ಇಷ್ಟವಾಯಿತು ಅಂದುಕೊಂಡಿದೇನೆ. ‘ಹೀಗೇ ಮೊದಲೇ ಹೇಳುವ ಮನುಷ್ಯ ನಿಜವಾಗಲೂ ನನಗೆ ಮೋಸಮಾಡುವಂಥವನಲ್ಲ,’ ಅಂದುಕೊಂಡಿರಬೇಕು. ಹೊಟ್ಟೆಯ ಕಿಚ್ಚಿನ ಹೆಂಗಸಿಗೆ ಇಂಥ ನಂಬಿಕೆ ಬಹಳ ಮುಖ್ಯ. ಬಹಳಷ್ಟು ಕಣ್ಣೀರು ಸುರಿಸಿ ಆದಮೇಲೆ ಬಾಯಿ ಮಾತಿನ ಒಪ್ಪಂದ ಮಾಡಿಕೊಂಡೆವು: ಮೊದಲನೆಯದಾಗಿ, ನಾನು ಮಾರ್ಫಾಳನ್ನ ಎಂದೂ ದೂರ ಮಾಡದೆ ಅವಳ ಗಂಡನಾಗೇ ಉಳಿದಿರುತ್ತೇನೆ; ಎರಡನೆಯದಾಗಿ, ಅವಳ ಒಪ್ಪಿಗೆ ಇಲ್ಲದೆ ನಾನು ಎಲ್ಲಿಗೂ ಹೋಗುವುದಿಲ್ಲ; ಮೂರನೆಯದಾಗಿ, ನಾನು ಪರ್ಮನೆಂಟಾಗಿ ಯಾವ ಹೆಂಗಸನ್ನೂ ಇಟ್ಟುಕೊಳ್ಳುವುದಿಲ್ಲ. ನಾಲ್ಕನೆಯದಾಗಿ, ನನ್ನ ಈ ವಾಗ್ದಾನಗಳಿಗೆ ಪ್ರತಿಯಾಗಿ ನಾನು ಆಗೀಗ ಕೆಲಸದ ಹುಡುಗಿಯರ ಮೇಲೆ ಕಣ್ಣು ಹಾಕುವುದಕ್ಕೆ ಮಾರ್ಫಾ ಅವಕಾಶ ಕೊಡಬೇಕು, ಈ ವಿಚಾರ ಅವಳಿಗೆ ಗೊತ್ತಾಗಬಾರದು; ಐದನೆಯದಾಗಿ, ನಮ್ಮ ಅಂತಸ್ತಿನ ಹೆಂಗಸಿನ ಜೊತೆ ಸಂಬಂಧ ಇಟ್ಟುಕೊಳ್ಳಬಾರದು; ಅಕಸ್ಮಾತ್ ಯಾರ ಮೇಲಾದರೂ ನನಗೆ ಗಾಢವಾದ ಪ್ರೀತಿ ಹುಟ್ಟಿದರೆ ಅದನ್ನು ಮಾರ್ಫಾ ಹತ್ತಿರ ಹೇಳಿಕೊಳ್ಳಬೇಕು.

ಈ ಕೊನೆಯ ಅಂಶದ ಕಾರಣದಿಂದ ಮಾರ್ಫಾ ಮನಸ್ಸಿಗೆ ಬಹಳ ಸಮಾಧಾನ ಆದಹಾಗಿತ್ತು. ಅವಳು ಜಾಣೆ. ನಾನು ಬರಿಯ ಹೆಣ್ಣು ಹುಚ್ಚಿನವನು, ಲಂಗದ ಅಂಚು ಕಂಡರೆ ಆಸೆ ಪಡುವವನು, ಗಂಭೀರವಾದ ಪ್ರೀತಿ ನನ್ನ ಮಟ್ಟಿಗೆ ಸಾಧ್ಯವೇ ಇಲ್ಲ ಅಂದುಕೊಂಡಿದ್ದಳು. ಜಾಣೆ ಹೆಂಗಸು, ಹೊಟ್ಟೆಯ ಕಿಚ್ಚಿನ ಹೆಂಗಸು ಇಬ್ಬರೂ ಬೇರೆ ಬೇರೆ. ಅದೇ ದೊಡ್ಡ ತಾಪತ್ರಯ. ಕೆಲವು ಜನರ ಬಗ್ಗೆ ನಿಷ್ಪಕ್ಷವಾದ ತೀರ್ಮಾನ ಮಾಡುವುದಕ್ಕೆ ನಾವು ಮನಸಿನಲ್ಲಿ ಅವರ ಬಗ್ಗೆ ಮೊದಲೇ ಅಂದುಕೊಂಡಿರುವುದನ್ನು ಕೈಬಿಡಬೇಕು, ನಮ್ಮ ಸುತ್ತಲೂ ಇರುವ ವಸ್ತುಗಳನ್ನು ನಮಗೆ ಅಭ್ಯಾಸವಾಗಿರುವ ರೀತಿಯಲ್ಲಿ ನೋಡುವುದನ್ನು ಬಿಡಬೇಕು. ಮಾರ್ಫಾ ಬಗ್ಗೆ ತಮಾಷೆಯ, ಅಸಂಗತವಾದ ಕತೆಗಳನ್ನು ನೀನಾಗಲೇ ಕೇಳಿರಬಹುದು. ಅವಳ ಎಷ್ಟೋ ಅಭ್ಯಾಸಗಳು ತಮಾಷೆಯಾಗಿದ್ದವು. ಲೆಕ್ಕವಿಲ್ಲದಷ್ಟು ಬಾರಿ ಅವಳಿಗೆ ದುಃಖವಾಗಲು ನಾನೇ ಕಾರಣ ಅನ್ನುವ ಬಗ್ಗೆ ನಿನ್ನ ಹತ್ತಿರ ಮೊದಲೇ ಒಪ್ಪಿಕೊಂಡು ಬಿಡತೇನೆ. ಸಾಕು. ದಿವಂಗತ ಪತ್ನಿಯ ಗುಣಗಾನ ಮಾಡುವುದಕ್ಕೆ ಪ್ರಿಯ ಗಂಡನಾದವನು ಇಷ್ಟು ಹೇಳಿದರೆ ಸಾಕು ಅನಿಸುತ್ತದೆ. ಕೆಲವು ಸಾರಿ ನಾವು ಜಗಳವಾಡಿದಾಗ ನಾನು ರೇಗದೆ ಸುಮ್ಮನೆ ಇದ್ದುಬಿಡುತ್ತಿದ್ದೆ. ಅವಳಿಗೆ ಖುಷಿಯಾಗುತ್ತಿತ್ತು, ಕೆಲವು ಸಾರಿ ನನ್ನ ಬಗ್ಗೆ ಹೆಮ್ಮೆಯೂ ಹುಟ್ಟುತ್ತಿತ್ತು. ನನ್ನ ಉದ್ದೇಶ ನೆರವೇರುತ್ತಿತ್ತು. ಆದರೂ, ನಿನ್ನ ತಂಗಿಯನ್ನು ಸಹಿಸಿಕೊಳ್ಳುವುದಕ್ಕೆ ಆಗಲಿಲ್ಲ ಅವಳಿಗೆ. ಅಂಥ ಸುಂದರಿಯನ್ನು ಗೌರ್ನೆಸ್ ಆಗಿ ಮನೆಗೆ ಸೇರಿಸಿಕೊಳ್ಳಲು ಅದು ಹೇಗೆ ಸಾಧ್ಯವಾಯಿತೋ! ಅವಳು ಬೆಂಕಿಯಂಥವಳಾದರೂ ಬಲು ಬೇಗ ಮನಸ್ಸು ಸೋಲುವವಳು. ಹಾಗಾಗಿ ನಿನ್ನ ತಂಗಿಯ ಮೇಲೆ ಅವಳಿಗೇ ಪ್ರೀತಿ ಹುಟ್ಟಿತ್ತು ಅನ್ನಿಸತ್ತೆ.

ಅವದೋತ್ಯ ರೊಮನೋವ್ನ ಕೂಡ ತುಂಬ ಒಳ್ಳೆಯವರು! ಮೊದಲ ಸಲ ನೋಡಿದ ತಕ್ಷಣ ನನಗೆ ತಿಳಿಯಿತು, ಯಾಕೋ ಇದು ಸರಿಹೋಗಲ್ಲ ಅನ್ನಿಸಿತು. ಗೊತ್ತಾ? ಆ ಕ್ಷಣವೇ ತೀರ್ಮಾನ ಮಾಡಿದೆ ನಿನ್ನ ತಂಗಿಯನ್ನ ಕಣ್ಣೆತ್ತಿ ಕೂಡ ನೋಡಬಾರದು ಅಂತ. ನನ್ನತ್ತ ಮೊದಲ ಹೆಜ್ಜೆ ಇಟ್ಟಿದ್ದು ಅವದೋತ್ಯ ಅವರೇನೇ. ನಂಬತೀಯಾ? ನಿನ್ನ ತಂಗಿಯ ಬಗ್ಗೆ ನಾನು ಏನೂ ಹೇಳುವುದೇ ಇಲ್ಲ, ಉದಾಸೀನ ಮಾಡತೇನೆ, ಅವಳ ಬಗ್ಗೆ ತಾನೇ ಮೆಚ್ಚಿ ಮಾತಾಡಿದರೂ ನಾನು ಕಿವಿಗೆ ಹಾಕಿಕೊಳ್ಳುವುದಿಲ್ಲ ಅಂತ ಮೊದಮೊದಲು ಮಾರ್ಫಾ ಸಿಟ್ಟುಮಾಡಿಕೊಳ್ಳುತ್ತಿದ್ದಳು. ಅವಳಿಗೇನು ಬೇಕಾಗಿತ್ತೋ ನನಗೆ ತಿಳಿಯಲೇ ಇಲ್ಲ. ಮಾರ್ಫಾ ನನ್ನ ಬಗ್ಗೆ ತನ್ನ ಒಳಗಿನ ಗುಟ್ಟನ್ನೆಲ್ಲ ಅವದೋತ್ಯ ಹತ್ತಿರ ಹೇಳಿಕೊಂಡಿದ್ದಳು. ನಮ್ಮ ಮನೆಯ ಎಲ್ಲ ವಿಚಾರ ಎಲ್ಲರ ಹತ್ತಿರ ಹೇಳಿಕೊಳ್ಳುವ ಸ್ವಭಾವ ಅವಳದ್ದು. ಎಲ್ಲರ ಹತ್ತಿರ ನನ್ನ ಮೇಲೆ ದೂರು ಹೇಳುತ್ತಿದ್ದಳು. ಅವದೋತ್ಯಳಂಥ ಹೊಸ ಗೆಳತಿ ಸಿಕ್ಕರೆ ಸುಮ್ಮನಿರುತ್ತಾಳಾ? ನನ್ನ ವಿಚಾರ ಬಿಟ್ಟು ಅವರು ಬೇರೆ ಏನೂ ಮಾತಾಡತಾನೇ ಇರಲಿಲ್ಲ, ನನ್ನ ಬಗ್ಗೆ ಇದ್ದ ಕೆಟ್ಟ ಕಥೆಗಳೆಲ್ಲ ಅವದೋತ್ಯಾ ಅವರಿಗೆ ತಿಳಿದಿತ್ತು ಅನಿಸುತ್ತದೆ… ಅಂಥ ಕೆಲವು ಸಂಗತಿ ನಿನ್ನ ಕಿವಿಗಗೂ ಬಿದ್ದಿರತ್ತೆ…ಬೇಕಾದರೆ ಬೆಟ್ ಕಟ್ಟತೇನೆ.’

‘ಒಂದು ಮಗುವಿನ ಸಾವಿಗೆ ನೀನು ಕಾರಣ ಅಂತ ಪೀಟರ್ ಪೆಟ್ರೊವಿಚ್ ಹೇಳಿದ. ನಿಜವಾ?ʼ

‘ದಯವಿಟ್ಟು ಇಂಥ ಚಿಲ್ಲರೆ ವಿಚಾರ ಬಿಟ್ಟುಬಿಡು,’ ಸ್ವಿದ್ರಿಗೈಲೋವ್ ಪ್ರಶ್ನೆಯನ್ನು ಪಕ್ಕಕ್ಕೆ ದಬ್ಬಿದ. ಸ್ವಲ್ಪ ಒರಟಾಗಿ, ಅಸಹ್ಯ ಪಟ್ಟುಕೊಂಡು, ‘ಇವೆಲ್ಲ ನಾನ್ಸೆನ್ಸ್ ತಿಳಿದುಕೊಳ್ಳುವುದು ನಿನಗೆ ಅಷ್ಟು ಮುಖ್ಯವಾಗಿದ್ದರೆ ಆಮೇಲೆ ಯಾವತ್ತಾದರೂ ಹೇಳತೇನೆ, ಈಗ ಬೇಡ…’ ಅಂದ.

‘ನಿಮ್ಮ ಎಸ್ಟೇಟಿನಲ್ಲಿ ಯಾರೋ ಆಳಿಗೆ ಏನೋ ಆಗಿದ್ದಕ್ಕೆ ನೀನೇ ಕಾರಣ ಅಂತ ಸುದ್ದಿ ಇತ್ತು…’

‘ಪ್ಲೀಸ್, ಸಾಕು!’ ಸ್ವಿದ್ರಿಗೈಲೋವ್ ಮಾತು ತಡೆದ. ಅಸಹನೆ ಸ್ಪಷ್ಟವಾಗಿ ಕಾಣುತ್ತಿತ್ತು.

‘ಸತ್ತಮೇಲೂ ನಿನ್ನ ಪೈಪು ತುಂಬಿಸಿಕೊಡುವುದಕ್ಕೆ ಬಂದಿದ್ದ ಸೇವಕ ಅವನೇನಾ… ಅವನ ವಿಚಾರ ನೀನೇ ಹೇಳಿದ್ದೆಯಲ್ಲಾ?’ ರಾಸ್ಕೋಲ್ನಿಕೋವ್ ಕೆರಳುತ್ತಿದ್ದ.

ಸ್ವಿದ್ರಿಗೈಲೋವ್ ದಿಟ್ಟಿಸಿ ನೋಡಿದ. ಅವನ ನೋಟದಲ್ಲಿ ಸೇಡು ಒಂದು ಕ್ಷಣ ಮಿಂಚಿತು ಅನ್ನಿಸಿತು ರಾಸ್ಕೋಲ್ನಿಕೋವ್‍ಗೆ. ಆದರೂ ಸ್ವಿದ್ರಿಗೈಲೋವ್ ತಾಳ್ಮೆ ತಂದುಕೊಂಡು ತಕ್ಕಮಟ್ಟಿಗೆ ಸೌಜನ್ಯದಿಂದಲೇ ಉತ್ತರ ಹೇಳಿದ:

‘ಅವನೇನೇ. ನೀನು ಕೂಡ ಇಂಥ ಕುತೂಹಲ ತುಂಬಿಟ್ಟುಕೊಂಡಿದೀಯ, ತಿಳೀತಿದೆ. ಎಲ್ಲ ವಿಷಯದ ಬಗ್ಗೆ ನಿನ್ನ ಎಲ್ಲಾ ಕುತೂಹಲಕ್ಕೂ ಸಮಾಧಾನ ಹೇಳತೇನೆ, ಸಮಯ ಸಿಕ್ಕ ತಕ್ಷಣ. ನನ್ನ ಕರ್ತವ್ಯ ಅದು. ದೆವ್ವ ಹಿಡೀಲಿ! ನಾನು ಬಹಳ ರೊಮಾಂಟಿಕ್ ಅನ್ನುವ ಹಾಗೆ ಜನದ ಕಣ್ಣಿಗೆ ಕಾಣತಿರಬಹುದು. ಅಂದರೆ ತೀರಿಕೊಂಡ ನನ್ನ ಹೆಂಡತಿಗೆ ಎಷ್ಟು ಕೃತಜ್ಞತೆ ತೋರಿಸಬೇಕು ನಾನು? ತೀರ್ಮಾನಮಾಡು ನೀನೇ. ಅವಳು ನಿನ್ನ ತಂಗಿಗೆ ನನ್ನ ಬಗ್ಗೆ ಎತೆಂಥಾ ಕಥೆ ಎಷ್ಟೊಂದು ಹೇಳಿರಬೇಕು! ಅಂತೂ ಅದರಿಂದ ನನಗೆ ಅನುಕೂಲವಾಗಿದ್ದು ನಿಜ. ಅವದೋತ್ಯಾಗೆ ಸಹಜವಾಗಿಯೇ ನನ್ನ ಬಗ್ಗೆ ಅಸಹ್ಯವಿದ್ದರೂ, ಜನರನ್ನ ದೂರ ತಳ್ಳುವ ನನ್ನ ಮಂಕು ಮುಖ ನೋಡಿಯೂ ನನ್ನ ಬಗ್ಗೆ ಕರುಣೆ ತೋರಿಸಿದಳು. ಅಂದ ಹಾಗೆ ಹುಡುಗಿಯ ಮನಸಿನಲ್ಲಿ ಕರುಣೆ ಹುಟ್ಟಿದರೆ ಅವಳಿಗೇ ಅದರಿಂದ ಅಪಾಯ. ತನ್ನಲ್ಲಿ ಕರುಣೆ ಹುಟ್ಟುವ ಹಾಗೆ ಮಾಡಿದ ಮನುಷ್ಯನನ್ನು ‘ಕಾಪಾಡು’ವುದು, ಅವನಲ್ಲಿ ವಿವೇಕ ಮೂಡುವ ಹಾಗೆ ಮಾಡುವುದು, ಅವನ ಕೈ ಹಿಡಿದು ಮೇಲೆತ್ತುವುದು, ಅವನಿಗೆ ಹೊಸ ಬದುಕು ಸಿಗುವ ಹಾಗೆ ಮಾಡುವುದು—ಇಂಥವೆಲ್ಲ ಕನಸು ಶುರುವಾಗುತ್ತವೆ ಹುಡುಗಿಯ ಮನಸಿನಲ್ಲಿ.

ಹಕ್ಕಿ ತಾನಾಗೇ ನನ್ನ ಬಲೆಗೆ ಬಂದು ಬೀಳುತ್ತಿದೆ ಅನ್ನುವುದು ಗೊತ್ತಾಯಿತು ನನಗೆ. ನಾನೂ ಸಿದ್ಧನಾದೆ. ಸಿಟ್ಟು ಬರತಾ ಇದ್ದಹಾಗಿದೆಯಲ್ಲಾ, ರೋಡಿಯೋನ್ ರೊಮಾನ್ಯೊವಿಚ್? ಇರಲಿ, ಅದೆಲ್ಲ. ಈ ಅಫೇರ್‍ ಎಲ್ಲೂ ಮುಟ್ಟದೆ ಹಾಗೇ ಮುಗಿದು ಹೋಯಿತು. (ದೆವ್ವ ಹಿಡಿಯಲಿ, ನಾನು ಕುಡಿದದ್ದು ಜಾಸ್ತಿ ಆಯಿತು!) ಮೊದಲಿನಿಂದಲೂ ವಿಧಿ ನಿನ್ನ ತಂಗಿಗೆ ಅನ್ಯಾಯ ಮಾಡಿತು ಅನ್ನಿಸತಿತ್ತು. ಅವಳು ನಮ್ಮ ಕ್ರಿಶದ ಎರಡನೆಯದೋ ಮೂರನೆಯದೋ ಶತಮಾನದಲ್ಲಿ ಹುಟ್ಟಬೇಕಾಗಿತ್ತು. ಯಾವನೋ ರಾಜಕುಮಾರನ, ರಾಜನ ಮಗಳೋ, ಏಶಿಯ ಮೈನರಿನ ಯಾವನೋ ಮಂತ್ರಿಯ ಮಗಳೋ ಆಗಬೇಕಾಗಿತ್ತು. ಖಂಡಿತವಾಗಲೂ ಹುತಾತ್ಮಳೆನ್ನುವ ಪಟ್ಟ ದೊರೆಯುತ್ತಿತ್ತು. ಅವಳ ಎದೆಯ ಮೇಲೆ ಕಾದ ಕಬ್ಬಿಣದ ಬರೆ ಹಾಕಿದರೂ ನಗುನಗುತ್ತ ಇರುವಂಥವಳು ಅವಳು. ಇಂಥ ಹುತಾತ್ಮಪಟ್ಟವನ್ನ ಅವಳು ಆಸೆಪಟ್ಟುಕೊಂಡೇ ಅನುಭವಿಸುತ್ತಿದ್ದಳು. ಕ್ರಿಶದ ನಾಲ್ಕು-ಐದನೆಯ ಶತಮಾನದಲ್ಲಿ ಹುಟ್ಟಿದ್ದಿದ್ದರೆ ಈಜಿಪ್ಟಿನ ಮರುಭೂಮಿಗೆ ಹೋಗಿ ಮೂವತ್ತು ವರ್ಷ ಬೇರು ನಾರು ತಿಂದುಕೊಂಡು, ದಿವ್ಯ ದರ್ಶನದ ಉನ್ಮಾದದಲ್ಲಿ ಬದುಕುತ್ತಿದ್ದಳು. ಹುತಾತ್ಮಳಾಗುವ ಬಾಯಾರಿಕೆ ಅವಳಿಗೆ. ಬೇರೆಯವರಿಗಾಗಿ ಹಿಂಸೆ ಅನುಭವಿಸುವ ಆಸೆ ಅವಳಿಗೆ. ಅದು ನಡೆಯದಿದ್ದರೆ ಕಿಟಕಿಯಿಂದ ಹಾರಿ ಬಿಡುವಂಥವಳು. ಯಾರೋ ರಝುಮಿಖಿನ್ ಅಂತೆ. ಅವನ ಬಗ್ಗೇನೂ ಕೇಳಿದೇನೆ. ಬಹಳ ವಿಚಾರವಂತನಂತೆ (ಅವನ ಹೆಸರು ನೋಡಿದರೆ ಸೆಮಿನೇರಿಯನ್ ಇರಬೇಕು)—ಸರಿ ಅವನೇ ನಿನ್ನ ತಂಗಿಯ ಜವಾಬ್ದಾರಿ ನೋಡಿಕೊಳ್ಳಲಿ. ನಿನ್ನ ತಂಗೀನ ಅರ್ಥ ಮಾಡಿಕೊಂಡಿದೇನೆ ಅನ್ನಿಸತ್ತೆ. ಅದನ್ನ ನನ್ನ ಲೆಕ್ಕಕ್ಕೆ ಜಮಾಮಾಡಬೇಕು. ಆ ಕಾಲದಲ್ಲಿ, ಅಂದರೆ ಗಂಡು-ಹೆಣ್ಣು ಪರಿಚಯವಾದಾಗ —ನಿನಗೇ ಗೊತ್ತಲ್ಲ, ನಾವು ಲಘು ಮನಸಿನವರು, ಮೂರ್ಖರು ಆಗಿರುತೇವೆ, ಇಲ್ಲದ್ದೆಲ್ಲ ಕಲ್ಪನೆ ಮಾಡಿಕೊಳ್ಳತಾ ಇಲ್ಲದ್ದೆಲ್ಲ ಕಾಣತಾ ಇರತೇವೆ. ದೆವ್ವ ಹಿಡೀಲಿ, ಅವಳು ಅಷ್ಟು ಚೆನ್ನಾಗಿರುವುದು ಯಾಕೆ? ಅದು ನನ್ನ ತಪ್ಪಲ್ಲ! ನನ್ನ ಮನಸಿನಲ್ಲಿ ಅವಳ ಬಗ್ಗೆ ಆಸೆ ಹುಟ್ಟಿತು. ನಿನ್ನ ತಂಗಿ ಯಾರೂ ಕಂಡಿರದಷ್ಟು, ಕೇಳಿರದಷ್ಟು ಭಯಂಕರ ಪವಿತ್ರಳು (ದಯವಿಟ್ಟು ಗಮನಿಸು, ನಾನು ನಿನ್ನ ತಂಗಿಯ ಬಗ್ಗೆ ನಿಜ ಹೇಳತಾ ಇದೇನೆ. ಪವಿತ್ರವಾಗಿರಬೇಕು ಅನ್ನುವುದು ಅವಳಿಗೆ ರೋಗದ ಹಾಗೆ.. ಅವಳು ಜಾಣೆಯಾಗಿದ್ದರೂ ಪಾವಿತ್ರ್ಯದ ಈ ಗೀಳು ಅವಳಿಗೆ ತೊಂದರೆ ಮಾಡತ್ತೆ). ನಮ್ಮನೆಯಲ್ಲಿ ಇನ್ನೊಬ್ಬ ಹುಡುಗಿ ಇದ್ದಳು, ಪರಶಾ ಅಂತ, ಕಪ್ಪು ಕಣ್ಣಿನ ಪರಶಾ.

ಆಗ ತಾನೇ ಇನ್ನೊಂದು ಹಳ್ಳಿಯಿಂದ ಬಂದಿದ್ದಳು. ಮನೆ ಕೆಲಸದ ಹುಡುಗಿ. ಅವಳನ್ನ ನಾನು ಯಾವತ್ತೂ ಕಂಡಿರಲಿಲ್ಲ. ಬಹಳ ಮುದ್ದಾಗಿದ್ದಳು, ಆದರೆ ಪೆದ್ದಿ, ಮನೆಯ ಚಾವಣಿ ಹಾರಿ ಹೋಗುವ ಹಾಗೆ ಅಳತಿದ್ದಳು. ಏನೇನೋ ಪುಕಾರು ಹುಟ್ಟಿತು. ಒಂದು ಸಲ, ರಾತ್ರಿ ಊಟ ಆದ ಮೇಲೆ ಅವದೋತ್ಯ ನನ್ನ ಹುಡುಕಿಕೊಂಡು ಬಂದಳು. ಮನೆಯ ಮುಂದಿನ ತೋಟದಲ್ಲಿದ್ದೆ. ಅವಳ ಕಣ್ಣು ಹೊಳೆಯುತಿದ್ದವು. ನಾನು ಪರಶಾಳ ತಂಟೆಗೆ ಹೋಗಬಾರದು ಅಂದಳು. ಇದು ನಾವು ಪರಸ್ಪರ ನಡೆಸಿದ ಮಾತುಕತೆ. ಅವಳ ಆಸೆ ನೆರವೇರಿಸುವುದು ನನ್ನ ಕರ್ತವ್ಯ ಅಂದುಕೊಂಡೆ. ಆಘಾತವಾದ ಹಾಗೆ, ಮುಜುಗರವಾದ ಹಾಗೆ ನಟಿಸಿದೆ. ತಕ್ಕಮಟ್ಟಿಗೆ ಚೆನ್ನಾಗೇ ಆಕ್ಟು ಮಾಡಿದೆ. ಹೀಗೆ ಮಾತು, ಗುಪ್ತ ಸಂಭಾಷಣೆ, ಉಪದೇಶ, ಭಾಷಣ, ಬೇಡಿಕೆ, ಯಾಚನೆ, ಕಣ್ಣೀರು ಎಲ್ಲ ಆದವು. ಹ್ಞೂಂ, ಅಳು ಕೂಡ! ಕೆಲವು ಹುಡುಗಿಯರಿಗೆ ಬೇರೆಯವರ ಮನಸ್ಸು ಬದಲಾಯಿಸುವ ಹುಚ್ಚು ಜೋರಾಗಿರತ್ತೆ! ಎಲ್ಲಾ ನನ್ನ ವಿಧಿ ಅಂದೆ, ಕಗ್ಗತ್ತಲಿನಿಂದ ಬೆಳಕಿಗೆ ಬರುವ ಹಂಬಲ ಇದೆ ಅಂದೆ, ಕೊನೆಗೆ ಹೆಣ್ಣು ಮನಸನ್ನು ಗೆಲ್ಲುವುದಕ್ಕೆ ಇರುವ ಎಂದೂ ಗುರಿ ತಪ್ಪದ ಅಸ್ತ್ರ ಬಳಸಿದೆ. ಈ ಅಸ್ತ್ರ ಯಾವತ್ತೂ ವಿಫಲವಾಗಿಲ್ಲ. ಎಲ್ಲರೂ ಇದಕ್ಕೆ ಸುಲಭವಾಗಿ ಗುರಿಯಾಗತಾರೆ. ಅದು ‘ಹೊಗಳಿಕೆ’ ಎಂಬ ಸುಪ್ರಸಿದ್ದ ಅಸ್ತ್ರ.

ಪ್ರಾಮಾಣಿಕತೆಗಿಂತ ಕಷ್ಟವಾದದ್ದು, ಹೊಗಳಿಕೆಗಿಂತ ಸುಲಭವಾದದ್ದು ಈ ಜಗತ್ತಿನಲ್ಲಿ ಯಾವುದೂ ಇಲ್ಲ. ಪ್ರಾಮಾಣಿಕತೆಯ ಹಾಡಿನಲ್ಲಿ ಒಂದೇ ಒಂದು ಸ್ವರ ಶ್ರುತಿ ತಪ್ಪಿದರೂ ಹಾಡು ಕೆಟ್ಟು ಅಧ್ವಾನವಾಗುತ್ತದೆ, ಮನಸ್ತಾಪ ಹುಟ್ಟುತದೆ. ಹೊಗಳಿಕೆಯಲ್ಲಿ ಇರುವುದೆಲ್ಲ ಬರಿಯ ಸುಳ್ಳೇ ಆಗಿದ್ದರೂ, ಒಂದೇ ಒಂದು ಸ್ವರವೂ ಶ್ರುತಿಬದ್ಧವಾಗಿರದಿದ್ದರೂ ಕೇಳುವುದಕ್ಕೆ ಖುಷಿಯಾಗುತದೆ, ಆ ಸಂತೋಷ ಸ್ವಲ್ಪ ಒರಟೋ, ಒಡ್ಡೋ ಆಗಿರತ್ತೆ. ಆದರೂ ಅದು ಸಂತೋಷವೇ. ಹೊಗಳಿಕೆ ಎಷ್ಟೇ ಒಡ್ಡೊಡ್ಡಾಗಿದ್ದರೂ ಅದರಲ್ಲಿ ಕೊನೆಯ ಪಕ್ಷ ಅರ್ಧದಷ್ಟಾದರೂ ನಿಜ ಅನ್ನಿಸುವುದು ಗ್ಯಾರಂಟಿ. ಸಮಾಜದ ಎಲ್ಲ ವರ್ಗದ ಎಲ್ಲ ಜನರ ಮಟ್ಟಿಗೂ ಇದು ನಿಜ. ಎಂಥಾ ಅಚ್ಚ ಕನ್ಯೆಯನ್ನಾದರೂ ಹೊಗಳಿಕೆಯಿಂದ ಬೀಳಿಸಿಕೊಳ್ಳಬಹುದು. ಸಾಮಾನ್ಯರ ವಿಚಾರ ಬಿಡು. ಒಬ್ಬ ಹೆಂಗಸಿದ್ದಳು. ನೆನಪಾದರೆ ನಗು ಬರತ್ತೆ.

ಗಂಡ, ಮಕ್ಕಳು, ಮನೆಗೆ ನಿಷ್ಠವಾಗಿದ್ದಳು. ತುಂಬ ಗುಣವಂತೆ. ಪತಿವ್ರತೆ. ನಾನು ಮಾಡಿದ್ದು ಇಷ್ಟೇ- ಅವಳು ಕಂಡಾಗಲೆಲ್ಲ ಅವಳಿಗೆ ನಾನು ಮರುಳಾದವನ ಹಾಗೆ ನಟಿಸುತ್ತ ಅವಳ ಪಾವಿತ್ರ್ಯವನ್ನು ಹೊಗಳಿ ನಮಸ್ಕಾರ ಮಾಡುತ್ತಿದ್ದೆ. ಸಿಕ್ಕಾಪಟ್ಟೆ ಹೊಗಳಿದೆ. ಬಲು ಬೇಗನೆ ನನ್ನ ಕೈ ಹಿಡಿದು ಒತ್ತುವಷ್ಟು ಸಡಿಲಾದಳು, ನನ್ನತ್ತ ನೋಡುವುದಕ್ಕೆ ಶುರು ಮಾಡಿದಳು. ಅವಳು ಎಷ್ಟು ವಿರೋಧ ತೋರುತ್ತಿದ್ದಳು ಅಂದರೆ ಅವಳಿಂದ ಇದನ್ನೆಲ್ಲ ಕಿತ್ತುಕೊಂಡೆನಲ್ಲ ಅಂತ ನನ್ನನ್ನೆ ಬೈದುಕೊಳ್ಳುತ್ತಿದ್ದೆ. ‘ನಾನೆಷ್ಟು ಕೆಟ್ಟವನು, ನಾನು ಬಲವಂತ ಮಾಡಿರದಿದ್ದರೆ ನೀನು ನನ್ನ ಮುಟ್ಟಿ ಕೂಡ ಮುಟ್ಟತಿರಲಿಲ್ಲ,’ ಅಂದೆ. ಅವಳು ಮುಗ್ಧವಾಗಿ, ಯಾವುದೇ ಥರ ಭ್ರಷ್ಟತೆ ಕಾಣದೆ, ಶರಣಾದಳು—ಆಕಸ್ಮಿಕ ಅನ್ನುವ ಹಾಗೆ, ಯೋಚನೆ ಕೂಡ ಮಾಡದೆ ಶರಣಾದಳು. ಅವಳಿಂದ ನನಗೆ ಬೇಕಾದ್ದೆಲ್ಲವನ್ನೂ ಪಡೆದೆ. ಆ ಹೆಂಗಸು ತಾನು ಬಹಳ ಪವಿತ್ರವಾದವಳು, ಏನೂ ಅರಿಯದವಳು, ತನ್ನ ಕರ್ತವ್ಯ, ಹೊಣೆ ಎಲ್ಲಾ ನಿಭಾಯಿಸುತಿದ್ದೇನೆ, ಅಕಸ್ಮಾತ್ತಾಗಿ ಜಾರಿದೆ ಅಷ್ಟೇ ಅಂದುಕೊಂಡಿದ್ದಳು. ಕೊನೆಗೆ ನಾನು ಅವಳಿಗೆ ಹೇಳಿದೆ: ನನಗೆ ಸುಖದ ಆಸೆ ಎಷ್ಟಿತ್ತೋ ನಿನಗೂ ಅಷ್ಟೇ ಇತ್ತು ಅಂದೆ. ಅವಳಿಗೆ ಸಿಕ್ಕಾಪಟ್ಟೆ ಕೋಪ ಬಂತು. ಪಾಪ, ಮಾರ್ಫಾ ಕೂಡ ಹೊಗಳಿಕೆಗೆ ಮಾರುಹೋಗುತಿದ್ದಳು. ನನಗೆ ಬೇಕು ಅನಿಸಿದ್ದರೆ ಅವಳು ಬದುಕಿದ್ದಾಗ ಇಡೀ ಎಸ್ಟೇಟು ಮತ್ತೆ ಅವಳ ಎಲ್ಲ ಆಸ್ತಿ ಸಲೀಸಾಗಿ ನನ್ನ ಹೆಸರಿಗೆ ಮಾಡಿಸಿಕೊಳ್ಳಬಹುದಾಗಿತ್ತು. (ಇವತ್ತು ಮಾತ್ರ ಸಿಕ್ಕಾಪಟ್ಟೆ ವೈನು ಕುಡಿದು ಬಾಯಿಗೆ ಬಂದದ್ದು ಮಾತಾಡತ ಇದೇನೆ.) ಇಂಥದೇ ಪರಿಣಾಮ ಅವದೋತ್ಯ ಮೇಲು ಆಗುವುದಕ್ಕೆ ಶುರುವಾಯಿತು. ಈ ಮಾತು ಕೇಳಿ ನೀನು ಕೋಪ ಮಾಡಿಕೊಳ್ಳಲ್ಲ ಅಂದುಕೊಂಡಿದೇನೆ.

ಅವದೋತ್ಯಾಗೆ ಸಹಜವಾಗಿಯೇ ನನ್ನ ಬಗ್ಗೆ ಅಸಹ್ಯವಿದ್ದರೂ, ಜನರನ್ನ ದೂರ ತಳ್ಳುವ ನನ್ನ ಮಂಕು ಮುಖ ನೋಡಿಯೂ ನನ್ನ ಬಗ್ಗೆ ಕರುಣೆ ತೋರಿಸಿದಳು. ಅಂದ ಹಾಗೆ ಹುಡುಗಿಯ ಮನಸಿನಲ್ಲಿ ಕರುಣೆ ಹುಟ್ಟಿದರೆ ಅವಳಿಗೇ ಅದರಿಂದ ಅಪಾಯ.

ನಾನೋ ಸಹನೆ ಇಲ್ಲದ ಮೂರ್ಖ. ಎಲ್ಲಾ ಹಾಳುಮಾಡಿಕೊಂಡೆ. ಅದಕ್ಕೆ ಮೊದಲೂ ಎಷ್ಟೋ ಸಾರಿ, ವಿಶೇಷವಾಗಿ ಒಂದು ಸಾರಿ) ನನ್ನ ನೋಟದಿಂದ ಬಹಳ ಕಸಿವಿಸಿ ಪಟ್ಟಿದ್ದಳು ನಿನ್ನ ತಂಗಿ—ನಂಬತೀಯಾ? ಸ್ವಲ್ಪದರಲ್ಲಿ ಹೇಳಬೇಕು ಅಂದರೆ ನನ್ನ ಕಣ್ಣಿನಲ್ಲಿದ್ದ ಬೆಂಕಿ ಧಗಧಗಿಸುವುದು ಹೆಚ್ಚಾಯಿತು, ನನ್ನ ನೋಟ ನಾಚಿಕೆ ತೊರೆಯುತಿತ್ತು. ಅವಳ ಭಯ ಹೆಚ್ಚುತ್ತ ಅದು ನನ್ನ ಮೇಲಿನ ದ್ವೇಷವಾಗಿ ಬದಲಾಯಿತು. ವಿವರಗಳನ್ನು ಹೇಳಿ ಏನೂ ಉಪಯೋಗವಿಲ್ಲ. ನಾವು ಬೇರೆಯಾದೆವು. ಮತ್ತೆ ಮೂರ್ಖತನದ ಕೆಲಸ ಮಾಡಿದೆ. ಅವಳ ಮಾತು, ನೀತಿಯ ಉಪದೇಶಗಳನ್ನು ಒರಟಾಗಿ ಲೇವಡಿ ಮಾಡುವುದಕ್ಕೆ ಶುರು ಮಾಡಿದೆ. ಪರಶಾ ಮತ್ತೆ ಕಾಣಿಸಿಕೊಂಡಳು.

ಅವಳೊಬ್ಬಳೇ ಅಲ್ಲ. ನನ್ನ ವಿಲಾಸವೂ ಹೆಚ್ಚಿತು. ಆಹಾ, ರೋಡಿಯಾನ್ ರೊಮಾನ್ಯಿಚ್, ನಿನ್ನ ತಂಗಿಯ ಕಣ್ಣು ಒಂದೊಂದು ಸಲ ಹೇಗೆ ಮಿಂಚತ್ತೆ, ಅದನ್ನ ನಿನ್ನ ಜೀವನದಲ್ಲಿ ಒಂದು ಸಾರಿಯಾದರೂ ನೋಡಬೇಕು! ಈಗ ನಾನು ಕುಡಿದಿದೇನೆ, ಸತ್ಯ ಹೇಳತಿದೇನೆ ನನ್ನ ಕನಸಿನಲ್ಲೂ ನಿನ್ನ ತಂಗಿಯ ಕಣ್ಣನ್ನೇ ಕಾಣತಿದ್ದೆ. ಅವಳ ಉಡುಪಿನ ಸರಬರ ಸದ್ದು ಕೇಳಿದರೆ ಸಹಿಸಕ್ಕಾಗತಿರಲಿಲ್ಲ. ನಿಜವಾಗಲೂ ನನಗೇನೋ ಕಾಯಿಲೆ ಅಂದುಕೊಂಡೆ. ನನಗೆ ಇಂಥ ಹುಚ್ಚು ಅಡರುತದೆ ಅಂತ ಅಂದುಕೊಂಡೇ ಇರಲಿಲ್ಲ. ಶಾಂತಿ ಬೇಕಾಗಿತ್ತು, ಶಾಂತಿ ಸಿಗುತ್ತಿರಲಿಲ್ಲ. ಆಗ ಏನು ಮಾಡಿದೆ, ಗೊತ್ತಾ? ಸಿಟ್ಟು ಬಂದರೆ ಮನುಷ್ಯ ಹೇಗೆ ದಿಕ್ಕುತಪ್ಪುತಾನೆ, ಗೊತ್ತಾ! ಸಿಟ್ಟಿದ್ದಾಗ ಯಾವ ಕೆಲಸಾನೂ ಮಾಡಬೇಡ, ರೊಡಿಯಾನ್ ರೊಮಾನ್ಯೊವಿಚ್! ಅವದೋತ್ಯ ರೊಮನೋವ್ನಾ ಮೂಲತಃ ಭಿಕ್ಷುಕಿ (ಆಹ್, ಆ ಮಾತು ಹೇಳಬೇಕು ಅಂತಿರಲಿಲ್ಲ… ಪದ ಯಾವುದಾದರೇನು ಅರ್ಥ ಮುಖ್ಯ ಅಲ್ಲವಾ?) ಅಂದರೆ ಅವಳು ಕೈಯಾರ ದುಡಿದು ಉಣ್ಣುವವಳು. ಅವಳ ತಾಯಿಯನ್ನೂ ಅಣ್ಣನಾದ ನಿನ್ನನ್ನ ನೋಡಿಕೊಳ್ಳುತ್ತ ಇರುವವಳು. (ಅಯ್ಯೋ ದೆವ್ವಾ, ಮತ್ತೆ ದುರುಗುಟ್ಟುತಾ ಇದೀಯ…!) ಅವಳಿಗೆ ನನ್ನ ದುಡ್ಡೆಲ್ಲ ಕೊಡಬೇಕು ಅಂತ ತೀರ್ಮಾನ ಮಾಡಿದೆ. ಅವಳು ನನ್ನ ಜೊತೆ ಪೀಟರ್ಸ್‌ಬರ್ಗ್‌ಗೆ ಓಡಿ ಬಂದರೆ ದುಡ್ಡು ಕೊಡತೇನೆ (ಆಗಲೇ ಮೂವತ್ತು ಸಾವಿರ ಕೊಡಬೇಕು ಅಂದುಕೊಂಡಿದ್ದೆ) ಅಂದೆ. ನನ್ನ ಪ್ರೀತಿ ಅಮರ, ನಿನ್ನ ಸುಖವಾಗಿ ನೋಡಿಕೊಳ್ಳತೇನೆ ವಗೈರೆ, ವಗೈರೆ ಹೇಳಿದೆ. ನಾನೆಂಥಾ ಪ್ರೀತಿಯಲ್ಲಿ ಬಿದ್ದಿದ್ದೆ ಅಂದರೆ ಅವಳೇನಾದರೂ ‘ಮಾರ್ಫಗೆ ಚಾಕು ಹಾಕು, ವಿಷ ತಿನ್ನಿಸು, ನನ್ನ ಮದುವೆಯಾಗು,’ ಅಂತ ಕೇಳಿದ್ದಿದ್ದರೆ ಆ ಕೆಲಸ ತಕ್ಷಣ ಮಾಡತಿದ್ದೆ! ಕಥೆ ಮುಗಿದದ್ದು ಮಾತ್ರ ಬೇರೆ ಥರ. ಅದೆಲ್ಲಾ ವಿಷಯ ನಿನಗೆ ಈಗಾಗಲೇ ಗೊತ್ತಿದೆ. ಮಾರ್ಫಾ ಹೋಗೀ ಹೋಗೀ ಅ ದರಿದ್ರ ಪೀಟರ್ ಪೆಟ್ರೊವಿಚ್‌ನ ಜೊತೆ ಅವಳ ಮದುವೆ ನಿಕ್ಕಿ ಮಾಡಿದಳು ಅಂತ ಗೊತ್ತಾದಾಗ ನನಗೆ ಎಂಥಾ ಕೋಪ ಬಂದಿರಬೇಕು ಊಹೆ ಮಾಡಿಕೋ. ನನ್ನ ಮಾತು ಕೇಳಿದ್ದರೆ ಅವಳಿಗೆ ಏನು ಸಿಗುತ್ತಿತ್ತೋ ಪೆಟ್ರೋವಿಚ್‍ನಿಂದ ಸಿಗುತಿದ್ದದ್ದೂ ಅದೇ. ಅಲ್ಲವಾ? ಸರಿ ಅಲ್ಲವಾ? ಗಮನ ಕೊಟ್ಟು ಕೇಳಿಸಿಕೊಳ್ಳತಾ ಇದೀಯ ಅಂತ ಗೊತ್ತಾಗತಿದೆ…ಎಂಥಾ ಕುತೂಹಲ ಹುಟ್ಟಿಸತೀಯಯ್ಯಾ ನೀನು….’

ಸ್ವಿಡ್ರಿಗೈಲೋವ್ ಅಸಹನೆಯಿಂದ ಮೇಜನ್ನು ಗುದ್ದಿದ. ಮುಖ ಕೆಂಪಾಗಿತ್ತು. ಅವನಿಗೇ ಗೊತ್ತಾಗದ ಹಾಗೆ ಗುಟುಕು ಗುಟುಕಾಗಿ ಒಂದೂವರೆ ಗ್ಲಾಸಿನಷ್ಟು ವೈನು ಹೀರಿದ್ದು ಈಗ ತಲೆಗೇರಿತ್ತು, ಜಡ್ಡು ಹಿಡಿದವನ ಹಾಗಾಗಿದ್ದ. ಎಲ್ಲದರ ಬಗ್ಗೆ ಸಂಶಯಪಡುತ್ತಿದ್ದ.

‘ಆಮೇಲೆ ನೀನು ನನ್ನ ತಂಗಿಯನ್ನೇ ಮನಸಿನಲ್ಲಿಟ್ಟುಕೊಂಡು ಪೀಟರ್ಸ್‍ಬರ್ಗ್‍ಗೆ ಬಂದೆ,’ ಸ್ವಿದ್ರಿಗೈಲೋವ್‍ನನ್ನು ಇನ್ನೂ ಕೆರಳಿಸಬೇಕೆಂದೇ ರಾಸ್ಕೋಲ್ನಿಕೋವ್ ಮುಚ್ಚು ಮರೆ ಇಲ್ಲದೆ ನೇರವಾಗಿ ಕೇಳಿದ.

‘ಹ್ಞಾ, ಕಮಾನ್,’ ಸ್ವಿದ್ರಿಗೈಲೋವ್ ಹುಷಾರಾದ. ‘ನಿನಗೆ ನಾನು ಹೇಳಲಿಲ್ಲವಾ… ಅಲ್ಲದೆ, ನಿನ್ನ ತಂಗಿಗೆ ನನ್ನ ಕಂಡರೆ ಆಗಲ್ಲ.’

‘ನನ್ನ ತಂಗಿಗೆ ನಿನ್ನ ಕಂಡರೆ ಆಗಲ್ಲ ಅಂತ ನನಗೂ ಗೊತ್ತಾಗಿದೆ. ವಿಷಯ ಅದಲ್ಲ ಈಗ.’

‘ನಿನಗೂ ಗೊತ್ತಾಗಿದೆಯಾ?’ (ಸ್ವಿದ್ರಿಗೈಲೋವ್ ಕಣ್ಣು ಕಿರಿದು ಮಾಡಿ ಅಣಕಿಸುವ ಹಾಗೆ ನಕ್ಕ.) ‘ಸರಿ, ನೀನು ಹೇಳಿದ್ದು. ಅವಳಿಗೆ ನನ್ನ ಮೇಲೆ ಪ್ರೀತಿ ಇಲ್ಲ. ಆದರೂ ಗಂಡ ಹೆಂಡತಿ ಮಧ್ಯ ಪ್ರೇಮಿಗಳ ಮಧ್ಯ ಇರುವ ಸಂಬಂಧದ ಬಗ್ಗೆ ಯಾವತ್ತೂ ಪ್ರಮಾಣ ಮಾಡಿ ಇದು ಹೀಗೇ ಅಂತ ಹೇಳಬಾರದು. ಇಡೀ ಜಗತ್ತಿಗೆ ತಿಳಿದಿರದ, ಅವರಿಬ್ಬರಿಗೆ ಮಾತ್ರ ಗೊತ್ತಿರುವ ಗುಟ್ಟಿನ ಮೂಲೆಯೊಂದು ಇದ್ದೇ ಇರತ್ತೆ. ಅವದೋತ್ಯ ತಿರಸ್ಕಾರ ಪಡುತ್ತ, ಅಸಹ್ಯಪಡುತ್ತ ನನ್ನ ಕಡೆಗೆ ನೋಡಿದಳು ಅಂತ ಪ್ರಮಾಣ ಮಾಡಿ ಹೇಳತೀಯೇನು?’

‘ನೀನು ಆಡಿದ ಕೆಲವು ಮಾತು ಕೇಳಿದರೆ, ನಿನ್ನ ಕಥೆ ಕೇಳಿದರೆ, ನನ್ನ ದುನ್ಯಾ ಬಗ್ಗೆ ಏನೋ ಪ್ಲಾನು ಮಾಡಿದ್ದೀಯ, ಅದು ದುಷ್ಟ ಪ್ಲಾನು ಅನಿಸತ್ತೆ.’

‘ಏನು! ಅಂಥಾ ಯಾವ ಮಾತು ನನ್ನ ಬಾಯಿಂದ ಬಂತು?ʼಸ್ವಿದ್ರಿಗೈಲೋವ್ ಮುಗ್ಧನ ಹಾಗೆ ಭಯಪಟ್ಟ. ದುಷ್ಟ ಪ್ಲಾನು ಅನ್ನುವ ಮಾತು ಕಿವಿಗೇ ಹಾಕಿಕೊಳ್ಳಲಿಲ್ಲ.

‘ಹ್ಞೂಂ, ಈಗಲೂ ಅಂಥ ಮಾತು ಆಡತಿದ್ದೀಯ. ಉದಾಹರಣೆಗೆ ಅಷ್ಟೊಂದು ಭಯ ಯಾಕೆ ನಿನಗೆ? ಇದ್ದಕಿದ್ದ ಹಾಗೆ ಭಯ ಯಾಕೆ ಬಂತು?’

‘ಯಾರು ನಾನಾ? ಭಯವಾ? ನಿನ್ನ ಬಗ್ಗೆನಾ? ನಾನಲ್ಲ, ಭಯಪಡಬೇಕಾದವನು ನೀನು ಗೆಳೆಯಾ. ಏನು ತಲೆಹರಟೆ… ನಾನು ಕುಡಿದಿದೀನಿ, ಗೊತ್ತು. ನನ್ನ ಬಾಯಿಂದ ಏನು ಬರತ್ತೋ ಬಂದುಕೊಳ್ಳಲಿ! ಈ ವೈನು, ಅಯ್ಯಪ್ಪಾ! ಯಾರಲ್ಲೀ! ನೀರೂ!’
ಗಬಕ್ಕನೆ ಬಾಟಲಿ ಎತ್ತಿ ಕಿಟಕಿಯಿಂದಾಚೆಗೆ ಎಸೆದ. ಫಿಲಿಪ್ಪ್ ನೀರು ತಂದುಕೊಟ್ಟ,

‘ಎಲ್ಲಾ ನಾನ್ಸೆನ್ಸ್,’ ಟವೆಲನ್ನು ನೀರಲ್ಲಿ ಅದ್ದಿ ತಲೆಯ ಮೇಲೆ ಇಟ್ಟುಕೊಳ್ಳುತ್ತ ಸ್ವಿದ್ರಿಗೈಲೋವ್ ಹೇಳಿದ. ‘ಒಂದು ಮಾತಲ್ಲಿ ನಿನ್ನ ಬಾಯಿ ಮುಚ್ಚಿಸಬಹುದು, ನಿನ್ನ ಸಂಶಯ ನಾಶ ಮಾಡಬಹುದು. ಗೊತ್ತಾ ನಾನು ಮದುವೆ ಆಗತಿದೇನೆ?’

‘ಅದನ್ನ ಮೊದಲೇ ಹೇಳಿದ್ದೆ.’

‘ಹೌದಾ? ಮರೆತುಹೋಗಿತ್ತು. ನಿನಗೆ ಹೇಳಿದಾಗ ಮದುವೆ ಆಗಬೇಕು ಅಂದುಕೊಂಡಿದ್ದೆ, ಇನ್ನೂ ಹುಡುಗಿ ಪಕ್ಕಾ ಆಗಿರಲಿಲ್ಲ. ಈಗ ಹುಡುಗಿ ನೋಡಿದೇನೆ, ವಿಷಯ ಇತ್ಯರ್ಥ ಆಗಿದೆ, ನನಗೆ ಈಗ ಅರ್ಜೆಂಟು ಕೆಲಸ ಇರದಿದ್ದರೆ ಈಗಲೇ ನಿನ್ನ ಕರಕೊಂಡು ಹೋಗಿ ತೋರಿಸತಿದ್ದೆ. ಯಾಕೆ ಅಂದರೆ, ನಿನ್ನ ಅಭಿಪ್ರಾಯ ಬೇಕಾಗಿತ್ತು. ಅಯ್ಯೋ ದೆವ್ವಾ! ಹತ್ತೇ ನಿಮಿಷ ಇನ್ನು ಟೈಮು ಇರುವುದು! ನೋಡು, ಟೈಮು ನೋಡು. ಇರಲಿ, ನಿನಗೆ ಆ ವಿಚಾರ ಹೇಳತೇನೆ, ಅಂದರೆ ನನ್ನ ಮದುವೆ ಬಹಳ ಇಂಟರೆಸ್ಟಿಂಗಾಗಿರತ್ತೆ. ಎಲ್ಲಿಗೆ ಹೋಗತಿದ್ದೀಯ? ಮತ್ತೆ ನನ್ನ ಬಿಟ್ಟು ಹೊರಟೆಯಾ?’

‘ಇಲ್ಲ, ಈಗ ನಿನ್ನ ಬಿಟ್ಟು ಹೋಗಲ್ಲ.’

‘ಹೋಗೋದೇ ಇಲ್ಲವಾ? ನೋಡಣ. ನಿನ್ನ ಕರಕೊಂಡು ಹೋಗತೇನೆ, ನಿಜವಾಗಲೂ. ಹುಡುಗಿಯನ್ನ ನೋಡುವೆಯಂತೆ. ಈಗಲ್ಲ. ನೀನು ಹೊರಡುವ ಟೈಮು ಬಂದಿದೆ, ನೀನು ಬಲಕ್ಕೆ, ನಾನು ಎಡಕ್ಕೆ. ಈ ರೆಸ್ಸ್ಲಿಚ್ ಗೊತ್ತಾ ನಿನಗೆ? ಅದೇ, ನನಗೆ ರೂಮು ಬಾಡಿಗೆಗೆ ಕೊಟ್ಟಿದಾಳಲ್ಲ, ಅವಳು, ಹ್ಞಾ? ಇಲ್ಲವಾ? ಏನು ಯೋಚನೆ ಮಾಡತಾ ಇದೀಯ? ಕೇಳಿಸತಾ ಇದೆಯಾ? ಗೊತ್ತಾ, ಹೋದ ಚಳಿಗಾಲದಲ್ಲಿ ನೀರಿನಿಂದ ಎತ್ತಿದ್ದು ಅಂತಾರಲ್ಲ—ಕೇಳಿಸತಾ. ಅದೇ ಹುಡುಗಿಯನ್ನ ನಾನು ಮದುವೆ ಆಗಬೇಕು ಅನ್ನುವುದೇ ಪ್ಲಾನು. ‘ನಿಮಗೆ ಬೋರಾಗಿದೆ, ಸ್ವಲ್ಪ ತಮಾಷೆಯಾಗಿರೋದು ಕಲಿತುಕೊಳ್ಳಿ’ ಅಂದಳು ರೆಸ್ಲಿಚ್. ನಿಜವಾಗಲೂ ನಾನು ಮಂಕಾಗಿರುವ, ಬೋರಾಗಿರುವ ಮನುಷ್ಯ. ನಾನು ಖುಷಿಯಾಗಿದೀನಿ ಅಂದುಕೊಂಡಿದೀಯಾ? ಇಲ್ಲ. ನಾನು ಯಾರಿಗೂ ಕೆಟ್ಟದ್ದು ಮಾಡಲ್ಲ. ಸುಮ್ಮನೆ ಮೂಲೇಲ್ಲಿ ಕೂತಿರತೀನಿ. ಒಂದೊಂದು ಸಲ ಮೂರು ದಿನ ಕಳೆದರೂ ನಾನು ಒಂದೂ ಮಾತಾಡಲ್ಲ. ಮತ್ತೆ, ಈ ರೆಸ್ಸ್ಲಿಚ್, ಪಾಕಡಾ, ಪಕ್ಕಾ ತಲೆಹಿಡುಕಿ. ಅವಳ ಮನಸಲ್ಲಿ ಏನಿದೆ ಹೇಳತೇನೆ: ಮದುವೆ ಆದ ಮೇಲೆ ನನಗೆ ಬೋರಾಗತ್ತೆ, ಹೆಂಡತೀನ ಬಿಟ್ಟುಬಿಡತೇನೆ, ಆಮೇಲೆ ಆ ಎಳೆಯ ಹುಡುಗಿಯನ್ನ ಕರಕೊಂಡು ಹೋಗಿ ಸಂಪಾನೆಗೆ ಬಿಡತಾಳೆ—ನಮ್ಮಂಥವರ ಸೊಸೈಟಿಯಲ್ಲಿ. ಲಕ್ವಾ ಹೊಡೆದಿರುವ ಅಪ್ಪ ಇದಾನಂತೆ, ರಿಟೈರಾಗಿರುವ ಅಧಿಕಾರಿ, ಗಾಲಿ ಕುರ್ಚಿ ಮೇಲಿರತಾನಂತೆ, ಮೂರು ವರ್ಷದಿಂದ ನಡೆದದ್ದೇ ಇಲ್ಲವಂತೆ. ಇನ್ಯಾರೋ ತಾಯಿ ಇದಾಳಂತೆ, ಅವಳ ಮಗ ಎಲ್ಲೋ ಕೆಲಸದ ಮೇಲಿದಾನಂತೆ. ಅವಳನ್ನ ನೋಡಿಕೊಳ್ಳುವವರು ಇಲ್ಲವಂತೆ. ಒಬ್ಬ ಮಗಳ ಮದುವೆ ಆಗಿದೆ, ಗಂಡನ ಮನೆಯಲ್ಲಿದಾಳೆ. ಇವಳನ್ನ ನೋಡಕ್ಕೆ ಬರಲ್ಲ. ಇಬ್ಬರು ನೆವ್ಯೂಗಳಿದ್ದಾರೆ, ಚಿಕ್ಕವರು. ಕೊನೆಯ ಮಗಳು ಇನ್ನೂ ಚಿಕ್ಕವಳು, ಸ್ಕೂಲಿಗೆ ಹೋಗತಾಳೆ. ಈಗ ಸ್ಕೂಲು ಬಿಡಿಸಿದಾರೆ. ಇನ್ನೊಂದು ತಿಂಗಳಲ್ಲಿ ಹದಿನಾರು ತುಂಬತ್ತೆ ಅವಳಿಗೆ. ಆಗ ಮದುವೆ ಮಾಡಬಹುದು. ಅಂದರೆ, ನನ್ನ ಜೊತೆ ಮದುವೆ ಮಾಡಬಹುದು.

ಅವರ ಮನೆಗೆ ಹೋದೆವು. ತಮಾಷೆಯಾಗಿತ್ತು. ನನ್ನನ್ನ ಜಮೀನ್ದಾರ, ಹೆಂಡತಿ ಇಲ್ಲದವನು, ದೊಡ್ಡ ಮನೆತನ, ಇಂತಿಂಥಾವರೆಲ್ಲ ಗೊತ್ತು, ಇಷ್ಟು ಆಸ್ತಿ ಇದೆ ಅಂತ ಪರಿಚಯ ಮಾಡಿದರು. ನನಗೆ ಐವತ್ತು, ಅವಳಿಗೆ ಇನ್ನೂ ಹದಿನಾರು ತುಂಬಿಲ್ಲ. ಅದಕ್ಕೇನಂತೆ? ಅದಕ್ಕೆ ಯಾರು ತಲೆಕೆಡಿಸಿಕೊಳ್ಳತಾರೆ? ಒಂಥರಾ ಆಸೆ ಹುಟ್ಟುತ್ತೆ, ಅಲ್ಲವಾ? ಆಸೆ, ಹಾಹಾ! ಆ ಹುಡುಗಿಯ ಪಪ್ಪ ಮಮ್ಮನ ಹತ್ತಿರ ನಾನು ಮಾತಾಡಿದ್ದು ನೋಡಬೇಕಾಗಿತ್ತು ನೀನು! ಆಗ ಟಿಕೇಟು ಇಟ್ಟಿದ್ದಿದ್ದರೂ ಜನ ದುಡ್ಡು ಕೊಟ್ಟು ಬಂದು ನೋಡತಿದ್ದರು ನನ್ನ. ಕನ್ಯೆ ಬಂದಳು, ಗೊತ್ತಾ, ಇನ್ನೂ ಅವಳು ಗಿಡ್ಡ ಡ್ರೆಸ್ಸು ಹಾಕಿಕೊಂಡಿರುವ ಹುಡುಗಿ. ಅರಳದೆ ಇರುವ ಮೊಗ್ಗು. ನಾಚತಾಳೆ. ಬೆಳಗಿನ ಜಾವದ ಆಕಾಶದ ಹಾಗೆ ಕೆಂಪಾಗತಾಳೆ. ಹೆಂಗಸರ ಬಗ್ಗೆ ನಿನಗೇನನ್ನಿಸತ್ತೋ ಗೊತ್ತಿಲ್ಲ. ನನಗಂತೂ ಹದಿನಾರು ವರ್ಷದ ಹುಡುಗಿಯರು ತುಂಬ ಇಷ್ಟ. ಇನ್ನೂ ಮಗು ಥರಾ ಇರುವ ಕಣ್ಣು. ನಾಚಿಕೆ, ಹಿಂಜರಿಕೆ, ಕಣ್ಣಿನ ವದ್ದೆಯಲ್ಲೂ ಎಂಥಾ ನಾಚಿಕೆ ಇರತ್ತೆ. ಚೆಲುವು ಅನ್ನುವುದಕ್ಕಿಂತ ಬಹಳ ಬಹಳ ಹೆಚ್ಚಿನದು. ಇವಳು ಚಿತ್ರದ ಹಾಗಿದ್ದಳು. ಸುಂದರವಾಗಿ, ಮುದ್ದು ಮೇಕೆಯ ಮರಿಯ ಥರ ಗುಂಗುರು ಕೂದಲಿಟ್ಟುಕೊಂಡು, ತುಂಬು ಕೆಂಪು ತುಟಿ, ಪುಟ್ಟ ಪಾದ—ಚೆಲುವೆ, ಚೆಲುವೆ! ಸರಿ, ನಮ್ಮ ಪರಿಚಯ ಆಯಿತು. ಮನೆಯಲ್ಲಿ ಏನೋ ಕೆಲಸ ಇದೆ, ಅರ್ಜೆಂಟಾಗಿ ಹೋಗಬೇಕು ಅಂದೆ. ಮಾರನೆಯ ದಿನ, ಅಂದರೆ, ಎರಡು ದಿನದ ಹಿಂದೆ, ಮದುವೆಗೆ ಒಪ್ಪಿ ಆಶೀರ್ವಾದ ಮಾಡಿದರು. ಆವಾಗಿನಿಂದ ಅವರ ಮನೆಗೆ ಹೋದ ತಕ್ಷಣ ಅವಳನ್ನ ನನ್ನ ತೊಡೆಯ ಮೇಲೆ ಕೂರಿಸಿಕೊಳ್ಳತೇನೆ. ಇಳಿಯಕ್ಕೆ ಬಿಡೋದೇ ಇಲ್ಲ… ನಾಚತಾಳೆ. ಮುತ್ತು ಕೊಡತೇನೆ. ಅವರಮ್ಮ ‘ಇವರು ನಿನ್ನ ಗಂಡ, ಇದೆಲ್ಲ ಮಾಮೂಲು, ಇರೋದೇ ಹೀಗೆ’ ಅಂತ ಹೇಳತಾರೆ, ನೋಡು. ಒಂದು ಮಾತಲ್ಲಿ ಹೇಳಬೇಕಂದರೆ ನನಗೆ ಹೇಳಿ ಮಾಡಿಸಿದಂಥ ಸನ್ನಿವೇಶ!

ಈಗಿರುವ ಸ್ಥಿತಿಯಲ್ಲಿ ಗಂಡನಾಗುವುದಕ್ಕಿಂತ ನಿಶ್ಚಯಗೊಂಡ ವರ ಆಗಿರುವುದೇ ಒಳ್ಳೆಯದು. ನೈಸರ್ಗಿಕ ಸತ್ಯ ಅನ್ನತಾರಲ್ಲ, ಅದೇ ಇದು! ಹ್ಹಾ ಹ್ಹಾ! ಹುಡುಗಿ ಪೆದ್ದಿ ಅಲ್ಲ. ಆವಾಗ ಇವಾಗ ನನ್ನ ಕದ್ದು ನೋಡತಾಳೆ. ನನ್ನ ಎದೆಗೆ ಬೆಂಕಿ ಬಿದ್ದ ಹಾಗಾಗತ್ತೆ. ರಾಫೇಲ್ ಮಡೋನ್ನಾ ಚಿತ್ರದ ಥರ ಮುಖ ಅವಳದ್ದು. ಅದ್ಭುತವಾದ ಮುಖ. ವಿಷಾದ ತುಂಬಿದ ಪವಿತ್ರ ಮೂರ್ಖ ಮುಖ. ರಾಫೇಲ್ ಚಿತ್ರ ಯಾವತ್ತಾದರೂ ಹಾಗೆ ಕಂಡಿದೆಯಾ ನಿನಗೆ? ಈ ಹುಡುಗಿ ಮುಖಾನೂ ಅಂಥಾದ್ದೇ. ಅವಳ ಅಪ್ಪ ಅಮ್ಮ ಮದುವೆಗೆ ಒಪ್ಪಿದ ತಕ್ಷಣ ಮಾರನೆಯ ದಿನವೇ ಹದಿನೈದು ಸಾವಿರ ರೂಬಲ್ ಬೆಲೆಯ ವಜ್ರದ ಒಡವೆ, ಮುತ್ತಿನ ಒಡವೆ, ಬೆಳ್ಳಿಯ ದೊಡ್ಡ ಮೇಕಪ್ ಡಬ್ಬ ಕೊಡಿಸಿದೆ ಅದರೊಳಗೆ ಬೇಕಾದ ಸಾಮಗ್ರಿ ಎಲ್ಲಾ ಇದ್ದವು. ಹಾಗಾಗಿ ಮಡೊನ್ನಾ ಮುಖ ಕೂಡ ಹೊಳೆಯುವುದಕ್ಕೆ ಶುರುವಾಯಿತು. ನಿನ್ನೆ ಅವಳನ್ನ ಎಳೆದು ತೊಡೆಯ ಮೇಲೆ ಕೂರಿಸಿಕೊಂಡಿದ್ದೆ, ಸ್ವಲ್ಪ ಒರಟಾಗಿದ್ದೆನೇನೋ. ಅವಳ ಮುಖ ಕೆಂಪಾಯಿತು, ಕಣ್ಣಲ್ಲಿ ನೀರು ತುಳುಕಿತು. ತೋರಿಸಬಾರದು ಅಂದುಕೊಂಡರೂ ಅವಳ ಮೈ ಬಿಸಿಯೇರಿದ್ದು ತಿಳಿಯುತ್ತಿತ್ತು. ಸ್ವಲ್ಪ ಹೊತ್ತು ಎಲ್ಲರೂ ಹೊರಕ್ಕೆ ಹೋದರು. ನಾವಿಬ್ಬರೇ ಇದ್ದೆವು. ಇದ್ದಕಿದ್ದ ಹಾಗೆ ಅವಳು ನನ್ನ ಕೊರಳು ಬಳಸಿ (ಅದೇ ಮೊದಲ ಬಾರಿ ಅವಳೇ ಸ್ವತಃ ನನ್ನ ಅಪ್ಪಿದ್ದು) ಪುಟ್ಟ ಕೈಗಳಲ್ಲಿ ನನ್ನ ಅಪ್ಪಿಕೊಂಡು, ಮುತ್ತಿಟ್ಟಳು. ವಿಧೇಯಳಾಗಿರತೇನೆ, ನಿಷ್ಠೆಯಿಂದ ಇರತೇನೆ, ಒಳ್ಳೆಯ ಹೆಂಡತಿಯಾಗಿದ್ದು ನಿಮಗೆ ಸಂತೋಷ ಕೊಡುತ್ತೇನೆ, ಇಡೀ ಬದುಕು, ಬದುಕಿನ ಪ್ರತಿ ನಿಮಿಷ ನಿಮಗಾಗಿ ಎಲ್ಲಾನೂ ತ್ಯಾಗ ಮಾಡಿ ಬದುಕತೇನೆ, ಪ್ರತಿಯಾಗಿ ನೀವು ನನಗೆ ಗೌರವ ಕೊಟ್ಟರೆ ಸಾಕು, ನನಗಿನ್ನೇನೂ, ಉಡುಗೊರೆ ಇಂಥಾವೆಲ್ಲ ಬೇಡ, ಅಂದಳು. ದೇವತೆಯಂಥ ಹದಿನಾರು ವರ್ಷದ ಹುಡುಗಿ, ಕಸೂತಿ ಉಡುಪು ತೊಟ್ಟವಳು, ಗುಂಗುರು ಕೂದಲವಳು, ಕನ್ಯೆಯ ಲಜ್ಜೆ ತೋರುತ್ತ, ಕಣ್ಣಲ್ಲಿ ಉದ್ರೇಕದ ತೇವ ಇಟ್ಟುಕೊಂಡು ಹೀಗೆ ಖಾಸಗಿಯಾಗಿ ಹೇಳಿದ್ದನ್ನು ಕೇಳುವುದೇ ಉತ್ಸಾಹ ಹುಟ್ಟಿಸುತ್ತದೆ, ಕೆರಳಿಸುತ್ತದೆ, ಅಲ್ಲವಾ? ಸರಿ… ಇಲ್ಲಿ ಕೇಳು. ನಾವು ಹೋಗಿ ನನಗೆ ನಿಶ್ಚಯ ಆಗಿರುವ ಹುಡುಗಿಯನ್ನು ನೋಡೋಣ…ಈಗ ಬೇಡ, ಅಷ್ಟೆ!’

‘ಅಂದರೆ ನಿಮ್ಮಿಬ್ಬರ ನಡುವೆ ಇರುವ ವಯಸಿನ ವ್ಯತ್ಯಾಸ, ನಿನಗಿರುವ ಲೋಕಾನುಭವ ಎರಡೂ ಸೇರಿ ನಿನ್ನ ಮೈಯ ಹಸಿವನ್ನು ಕೆರಳಿಸಿವೆ. ನಿಜವಾಗಲೂ ಹೀಗೆ ನೀನು ಮದುವೆ ಆಗಕ್ಕೆ ಆಗತ್ತಾ?’

‘ಯಾಕಾಗಲ್ಲ? ಅವರವರ ಸುಖ ಅವರೇ ಕಂಡುಕೊಳ್ಳಬೇಕು. ತನ್ನ ಮನಸಿಗೆ ತಾನೇ ಮೋಸ ಮಾಡಿಕೊಳ್ಳೋನು ಎಲ್ಲಾರಿಗಿಂತ ಸುಖವಾಗಿರತಾನೆ! ಹಾ, ಹ್ಹಾ! ಸರಿ, ನನಗೆ ನೀತಿ ಪಾಠ ಹೇಳಕ್ಕೆ ನೀನು ಯಾರು? ನನ್ನ ಪಾಡಿಗೆ ಬಿಟ್ಟುಬಿಡು ಗೆಳೆಯ, ನಾನು ಪಾಪಿ, ಹ್ಹೆಹ್ಹೆಹ್ಹೇ!’

‘ಹಾಗಿದ್ದರೂ ನೀನು ಕ್ಯಾತರೀನ ಇವಾನೋವ್ನಾಳ ಮಕ್ಕಳಿಗೆ ಸಹಾಯ ಮಾಡಿದೆ… ನಿನಗೆ ಬೇರೆ ಇನ್ನೇನೋ ಉದ್ದೇಶ ಇದೆ ಅಂತ ಈಗ ಅರ್ಥವಾಗತಾ ಇದೆ.’

‘ಮಕ್ಕಳು ಅಂದರೆ ನನಗಿಷ್ಟ,’ ಸ್ವಿದ್ರಿಗೈಲೋವ್ ಗಹಗಹಿಸಿ ನಕ್ಕ. ‘ಈ ವಿಚಾರವಾಗಿ ನಿನಗೊಂದು ಸಂಗತಿ ಹೇಳಬೇಕು. ಹಾಗೆ, ಅದಿನ್ನೂ ನಡೀತಾ ಇದೆ. ಇಲ್ಲಿಗೆ ಬಂದ ಮೊದಲನೆಯ ದಿನವೇ ಇಲ್ಲಿನ ಕೆಟ್ಟ ಜಾಗಗಳ ಟೂರ್ ಮಾಡಿದೆ. ಏಳು ವರ್ಷವಾದ ಮೇಲೆ ಸುಖದ ಮಡುವಿಗೆ ಧುಮುಕಿದೆ! ನನ್ನ ಹಳೆಯ ಗೆಳೆಯರನ್ನು ಭೇಟಿ ಮಾಡಬೇಕು ಅನ್ನುವ ಧಾವಂತ ಇಲ್ಲ, ಅದನ್ನ ನೀನೂ ಗಮನಿಸಿರಬಹುದು. ಎಷ್ಟು ಕಾಲ ಹೀಗೇ ಇರಕ್ಕೆ ಸಾಧ್ಯವಾಗತ್ತೋ ಅಷ್ಟು ಕಾಲ ಹೀಗೇ ಇರತೇನೆ. ಗೊತ್ತಾ, ನಾನು ಮಾರ್ಫಾ ಜೊತೆ ಎಸ್ಟೇಟಿನಲ್ಲಿರುವಾಗ ಈ ಎಲ್ಲ ಗುಪ್ತ ಸ್ಥಳಗಳ ಸುಖ ನೆನಪಿಗೆ ಬಂದು ಅಪಾರ ಹಿಂಸೆ ಅನುಭವಿಸುತ್ತಿದ್ದೆ. ಬೇಕಾದ್ದನ್ನ ಹೇಗೆ ಪಡೆಯಬಹುದು ಅನ್ನುವುದನ್ನ ಕಲಿಸುವ ಇಂಥ ಸುಖದ ಮೂಲೆಗಳು ಇಲ್ಲಿ ಬೇಕಾದಷ್ಟಿವೆ. ದೆವ್ವಾ ಹಿಡೀಲಿ! ಸಾಮಾನ್ಯ ಜನ ಕುಡೀತಾರೆ, ಓದಿದ ಯುವಕರು ಎಂದೂ ನಿಜವಾಗದ ಕನಸು, ಕಲ್ಪನೆಗಳ, ಬೆನ್ನು ಹತ್ತಿ ಸೋಮಾರಿತನದಲ್ಲಿ ಕಾಲ ಕಳೆಯುತಾ ಥಿಯರಿಗಳನ್ನು ನಂಬಿ ಹೆಳವರಾಗುತ್ತಾರೆ.

ಎಲ್ಲೆಲ್ಲಿಂದಲೋ ಬಂದ ಯಹೂದಿಗಳು ದುಡ್ಡು ಬಚ್ಚಿಡತಾರೆ. ಮಿಕ್ಕ ಮಹಾ ಜನತೆ ಲಂಪಟತನದಲ್ಲಿ ಬಿದ್ದು ಹೊರಳಾಡತಾರೆ. ಈ ಊರಿಗೆ ಕಾಲಿಟ್ಟ ತಕ್ಷಣ ಪರಿಚಿತ ವಾಸನೆಗಳೆಲ್ಲ ಬಂದು ಮುತ್ತಿಕೊಂಡವು. ಡಾನ್ಸ್ ಹಾಲ್ ಅಂತಾರಲ್ಲ ಅಲ್ಲಿಗೆ ಹೋಗಿದ್ದೆ. ಗಟಾರದಂಥ ಜಾಗ. (ಸ್ವಲ್ಪ ಕೊಳಕಾಗಿರುವ ಜಾಗ ನನಗಿಷ್ಟವಾಗತ್ತೆ). ಅಲ್ಲಿ [ಕುಣಿಯುವ ಹುಡುಗಿಯರು ಕಾಲನ್ನು ತೀರ ಮೇಲೆತ್ತುವ ಫ್ರಾನ್ಸ್ ದೇಶದ ಕುಣಿತ] ಕಾನ್‌ಕಾನ್ ಡಾನ್ಸು ನಡೀತಿತ್ತು. ನಮ್ಮ ಕಾಲದಲ್ಲಿ ಅಂಥದ್ದು ನೋಡಿರಲಿಲ್ಲ. ಈ ವಿಚಾರದಲ್ಲಿ ಪ್ರಗತಿ ಆಗಿದೆ. ತಟ್ಟನೆ ಅಲ್ಲೊಬ್ಬಳು ಹದಿಮೂರು ವರ್ಷದ ಹುಡುಗಿ ಕಂಡಳು. ಒಳ್ಳೆಯ ಉಡುಪು ತೊಟ್ಟು ಪರಿಣಿತ ಡಾನ್ಸರ್ ಜೊತೆ ಹೆಜ್ಜೆ ಹಾಕುತಿದ್ದಳು.

ಅವಳ ತಾಯಿ ಗೋಡೆಯ ಪಕ್ಕ ಕುರ್ಚಿಯ ಮೇಲೆ ಕೂತಿದ್ದಳು. ಕಾನ್‌ಕಾನ್‌ ಗೊತ್ತಲ್ಲಾ! ಹುಡುಗಿಗೆ ಗೊಂದಲ, ನಾಚಿಕೆ, ಅವಮಾನ ಅನಿಸಿ ಅತ್ತಳು. ಪರಿಣತ ಅವಳನ್ನ ಎತ್ತಿ, ಗಿರಗಿರ ತಿರುಗಿಸಿ ಅವಳೆದುರಿಗೇ ಡಾನ್ಸಿನ ಭಂಗಿಗಳನ್ನು ಮಾಡಿ ತೋರಿಸಿದ. ಎಲ್ಲರೂ ನಕ್ಕರು. ಕಿರುಚಿದರು. ‘ಹಾಗೇ ಆಗಬೇಕು ಅವರಿಗೆ! ಮಕ್ಕಳನ್ನ ಇಂಥ ಕಡೆ ಕರಕೊಂಡು ಬರಬಾರದು,’ ಅಂದರು. ಥೂ ಅಂತೇನೆ. ಅವರು ಹಾಗೆ ಕೂಗಾಡಿದ್ದು ಸರೀನೋ ತಪ್ಪೋ ನನಗೆ ಸಂಬಂಧಪಟ್ಟಿದ್ದಲ್ಲ! ಹೋಗಿ ಆ ತಾಯಿಯ ಪಕ್ಕ ಕೂತೆ. ನಾನೂ ಹೊಸಬ ಅಂದೆ. ಈ ಜನ ಮೃಗದ ಥರ, ನಾಗರಿಕತೇನೇ ಇಲ್ಲ ಅಂದೆ. ಒಳ್ಳೆತನ ತೋರಿಸಕ್ಕೆ ಬರಲ್ಲ, ಗೌರವ ಕೊಡಕ್ಕೆ ಬರಲ್ಲ, ಅಂದೆ. ನನ್ನ ಹತ್ತಿರ ತುಂಬ ದುಡ್ಡಿದೆ ಅನ್ನುವುದು ತಿಳಿಯುವ ಹಾಗೆ ಮಾತಾಡಿದೆ. ಅವರನ್ನ ನನ್ನ ಸಾರೋಟಿನಲ್ಲಿ ಮನೆಗೆ ಕರಕೊಂಡು ಹೋಗತೇನೆ ಅಂದೆ, ಹಾಗೇ ಮಾಡಿದೆ. ಪರಿಚಯ ಮಾಡಿಕೊಂಡೆ. (ಅವರು ಹೊಸದಾಗಿ ನಗರಕ್ಕೆ ಬಂದವರು. ಯಾರದೋ ಬಾಡಿಗೆ ಮನೆಯಲ್ಲಿ ಒಂದು ರೂಮು ಒಳಬಾಡಿಗೆಗೆ ಹಿಡಿದಿದ್ದರು). ನನ್ನ ಪರಿಚಯವಾದದ್ದು ಸಂತೋಷದ ವಿಚಾರ, ಗೌರವದ ಸಂಗತಿ ಅಂದಳು ಆಕೆ. ಕಲ್ಲೂ ಇಲ್ಲ ಕೋಲೂ ಇಲ್ಲ ಅನ್ನುವ ಥರ ಬಂದಿದ್ದರು, ಯಾವುದೋ ಆಫೀಸಿನಲ್ಲಿ ಅರ್ಜಿಕೊಡುವುದಕ್ಕೆ. ಸಹಾಯ ಮಾಡಿದೆ, ದುಡ್ಡು ಕೊಟ್ಟೆ ಅವರಿಗೆ. ಡಾನ್ಸು ಕಲಿಸುವ ಸ್ಕೂಲು ಅಂತ ತಪ್ಪು ತಿಳಿದು ಡಾನ್ಸ್ ಹಾಲಿಗೆ ಬಂದಿದ್ದರಂತೆ. ಪುಟ್ಟ ಹುಡುಗಿ ಫ್ರೆಂಚು ಕಲಿಯುವುದಕ್ಕೆ, ಡಾನ್ಸು ಕಲಿಯುವುದಕ್ಕೆ ದುಡ್ಡು ಕೊಡತೇನೆ ಅಂದೆ. ಸಂತೋಷದಿಂದ ಒಪ್ಪಿಕೊಂಡರು. ನನ್ನ ಬಗ್ಗೆ ಗೌರವ ಹೆಚ್ಚಿತು… ಬೇಕು ಅಂದರೆ ಅಲ್ಲಿಗೆ ಹೋಗಣ…ಈಗಲ್ಲ, ಅಷ್ಟೇ.’

‘ನೀನು ಲುಚ್ಛ, ಲಫಂಗ, ಲಂಪಟ. ಈ ಕೆಟ್ಟ ಕೊಳಕು ಕತೆ ಸಾಕು, ನಿಲ್ಲಿಸು!’

‘ನೋಡಿ, ನಮ್ಮ ಶ್ಖಿಲರ್ ಇವನು! ನೋಡಿ! ಸದ್ಗುಣಗಳು ಬಂದು ಗೂಡು ಕಟ್ಟುವುದಕ್ಕೆ ಸರಿಯಾದ ಜಾಗ ಇವನೇ! ನೀನು ಹೀಗೆ ಕುಂಯ್‍ಗುಡೋದು ಕೇಳಕ್ಕೆ ಅಂತಲೇ ಇಂಥ ಕತೆ ಹೇಳತಾ ಇದೀನಿ. ಖುಷಿ ಆಗತ್ತೆ, ತಮಾಷೆ ಅನಿಸತ್ತೆ!’

‘ನನ್ನ ಕಣ್ಣಿಗೆ ನಾನೇ ಹಾಸ್ಯಾಸ್ಪದವಾಗಿ ಕಾಣತಾ ಇದೇನೆ ಅಲ್ಲವಾ?’ ರಾಸ್ಕೋಲ್ನಿಕೋವ್ ಸಿಡುಕಿದ.
ಸ್ವಿದ್ರಿಗೈಲೋವ್ ಗಹಗಹಿಸುತ್ತಿದ್ದ. ಕೊನೆಗೆ ಫಿಲ್ಲಿಪ್‍ನನ್ನು ಕರೆದು, ದುಡ್ಡು ಕೊಟ್ಟು, ಎದ್ದು ನಿಂತ.

‘ಖುಷಿ ನಿನಗೆ. ಇಂಥಾ ಸಾಹಸಗಳನ್ನ ಮಾಡುವ ನಿನ್ನಂಥ ಪೋಕರಿ ಮನಸಿನಲ್ಲಿ ಏನೋ ಕೆಟ್ಟ ಉದ್ದೇಶ ಇಟ್ಟುಕೊಂಡು ಇಂಥ ಸಂದರ್ಭದಲ್ಲಿ ನನ್ನಂಥವನ ಜೊತೆ ಚೆಲ್ಲಾಟ ಆಡುವುದು ಖುಷಿ ಅಲ್ಲದೆ ಇನ್ನೇನು?’

ಸ್ವಿದ್ರಿಗೈಲೋವ್ ಆಶ್ಚರ್ಯ ಪಡುತ್ತ ಹೇಳಿದ—‘ಹಾಗನ್ನುವುದಾದರೆ ನೀನು ಸಿನಿಕ, ಅಥವಾ ಇಷ್ಟರಲ್ಲೇ ಮಹಾ ಸಿನಿಕ ಆಗತೀಯ. ನಿನ್ನ ಹತ್ತಿರ ತಿಳಕೋಬೇಕಾದ್ದು ಬಹಳ ಇದೆ. ಏನೇನೋ ಕೆಲಸ ಅಚ್ಚುಕಟ್ಟಾಗಿ ಮಾಡತೀಯ. ಸದ್ಯಕ್ಕೆ ಸಾಕು. ನಿನ್ನ ಜೊತೆ ಇಷ್ಟು ಕಡಮೆ ಮಾತಾಡಿದೆ ಅಂತ ಬೇಜಾರಾಗತಿದೆ. ತಾಳು, ನೋಡತಾ ಇರು, ನನ್ನ ಕೈಯಿಂದ ತಪ್ಪಿಸಿಕೊಳ್ಳಕ್ಕಾಗಲ್ಲ ನೀನು.’

ಸ್ವಿದ್ರಿಗೈಲೋವ್ ಪಡಖಾನೆಯಿಂದ ಹೊರಟ. ರಾಸ್ಕೋಲ್ನಿಕೋವ್ ಅವನ ಹಿಂದೆಯೇ ಹೆಜ್ಜೆ ಹಾಕಿದ.. ಸ್ವಿದ್ರಿಗೈಲೋವ್ ಬಹಳ ಕುಡಿದಿರಲಿಲ್ಲ. ತಲೆಗೇರಿದ್ದ ಅಮಲು ಈಗ ನಿಮಿಷ ನಿಮಿಷವೂ ಇಳಿಯುತ್ತಿತ್ತು. ಮನಸಲ್ಲಿ ಏನೋ ಯೋಚನೆ, ಯಾವುದೋ ಮುಖ್ಯ ಕೆಲಸದ ಯೋಚನೆ, ಹುಬ್ಬುಗಂಟಿಕ್ಕಿಕೊಂಡಿದ್ದ. ಯಾವುದೋ ನಿರೀಕ್ಷೆ, ಚಡಪಡಿಸುತ್ತಿದ್ದ. ಕಳೆದ ಕೆಲವು ನಿಮಿಷಗಳಲ್ಲಿ ರಾಸ್ಕೋಲ್ನಿಕೋವ್‍ ಬಗ್ಗೆ ಇದ್ದಕಿದ್ದ ಹಾಗೆ ಬದಲಾಗಿದ್ದ. ಒರಟಾಗಿದ್ದ, ಅಣಕಿಸಿ ತಮಾಷೆ ಮಾಡುತಿದ್ದ. ರಾಸ್ಕೋಲ್ನಿಕೋವ್ ಕೂಡ ಗಮನಿಸಿ ಅಂಜಿದ್ದ. ಅನುಮಾನ ಹುಟ್ಟಿ ಅವನನ್ನು ಹಿಂಬಾಲಿಸಲು ನಿರ್ಧಾರ ಮಾಡಿದ.
ಫುಟ್ ಪಾತಿನ ಮೇಲೆ ನಡೆದರು.

‘ನೀನು ಎಡಕ್ಕೆ ಹೋಗು, ನಾನು ಬಲಕ್ಕೆ ಹೋಗತೇನೆ, ಅಥವಾ ನೀನು ಬಲಕ್ಕೆ, ನಾನು ಎಡಕ್ಕೆ. ಬೈ. ಸಂತೋಷವಾಯಿತು. ಮತ್ತೆ ಬೇಗ ಭೇಟಿಯಾಗಣ!’

ಸ್ವಿದ್ರಿಗೈಲೋವ್ ಬಲಕ್ಕೆ ತಿರುಗಿ ಹೇಮಾರ್ಕೆಟ್ಟಿನತ್ತ ಹೆಜ್ಜೆ ಹಾಕಿದ.