ಎಲ್ಲ ಮಕ್ಕಳಿಗೂ ಒಂದು ಒಳ್ಳೆಯ ಸ್ವಾಗತ ಸಿಗುವುದಿಲ್ಲ. ಕೆಲ ಮಕ್ಕಳು ತಮ್ಮ ಭ್ರೂಣಾವಸ್ಥೆಯಲ್ಲಿಯೇ ತಮ್ಮ ಜೀವ ಕಳೆದುಕೊಳ್ಳಬೇಕಾಗಿ ಬಂದುಬಿಡುತ್ತದೆ. ಅದು ದುರಂತ. ಪ್ರತಿಯೊಂದು ಜೀವಿಗೂ ಇಲ್ಲಿ ಜೀವಿಸುವ ಹಕ್ಕಿದೆ. ಅದನ್ಯಾಕೆ ನಾವು ಮರೆತುಬಿಡುತ್ತೇವೆ. ಪ್ರಾಣಿಗಳಲ್ಲಿ ಸಂತಾನ ಹರಣವೂ ಇಲ್ಲ, ಅವುಗಳ ಸಂಖ್ಯೆಯಲ್ಲಿ ಅಂತಹ ವ್ಯತ್ಯಯವೂ ಇಲ್ಲ. ಆದರೆ ತುಂಬಿ ತುಳುಕುತ್ತಿರುವ ಮನುಷ್ಯ ಜಾತಿಗೆ ಸಂತಾನಹರಣದ ಅವಶ್ಯಕತೆ ಇದೆ. ಜೊತೆಗೆ ಹೆಣ್ಣು ತನ್ನ ಅಧಿಕಾರ ಮತ್ತು ಅವಕಾಶಗಳಿಂದ ವಂಚಿತಳಾಗದೆ ಇರಲಿಕ್ಕಾಗಿ ಇದನ್ನು ಇಂದು ನಾವು ಬಳಸುತ್ತಿದ್ದೇವೆ. ಆದರೆ ನಮ್ಮದೇ ಸ್ವಯಂ ಕೃತ ತಪ್ಪಿಗೆ ಒಂದು ಜೀವವನ್ನು ಬಲಿಕೊಡುವುದು ಯಾವ ನ್ಯಾಯ?
ಆಶಾ ಜಗದೀಶ್ ಅಂಕಣ

 

ಇತಿಹಾಸಕು ಹಳೆಯ ನಿನ್ನ ಪರಂಪರೆಗೆ ಹೂಡಿ ನನ್ನ
ಸೊನ್ನೆಯಾದ ಮಗುವಿಗೊಂದು ಸಣ್ಣ ಪಾಲು ನೀಡಿದೆ
ನಿನ್ನ ಹಿರಿಯ ಕಂದರಿರುವ ಎಡೆಗೆ ತಂದು ನಿಲಿಸಿದೆ
(ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ)

ಸೃಷ್ಟಿಯ ಮೂಲಭೂತ ಕ್ರಿಯೆಗಳಲ್ಲಿ ಹುಟ್ಟು ಎನ್ನುವುದು ಒಂದು ಅದ್ಭುತ ಮತ್ತು ಅಪೂರ್ವ ಕ್ರಿಯೆ. ಸಣ್ಣದಾದ ಕಣವೊಂದು ಭ್ರೂಣವಾಗಿ ಹಲವಾರು ಹಂತಗಳ ಬೆಳವಣಿಗೆಯನ್ನು ಪೂರೈಸಿ ಮಗುವಾಗಿ ಹುಟ್ಟುವ ಈ ಕ್ರಿಯೆ ಜಗತ್ತಿನ ಅತ್ಯದ್ಭುತಗಳ್ಲೊಂದು. ಅದನ್ನು ಪ್ರತಿ ಜೀವಿಯೂ ಕಾಣಲು ಬಯಸುತ್ತದೆ. ಪ್ರತಿ ಜೀವಿಯೂ ಸಾಯುವ ಮೊದಲು ತನ್ನ ಪ್ರತಿನಿಧಿಯೊಂದನ್ನು ಸೃಷ್ಟಿಸಿ ಜಗತ್ತಿಗೆ ಕೊಟ್ಟು ಹೋಗಲು ಬಯಸುತ್ತದೆ. ಅದರಲ್ಲೂ ಮುಂದುವರಿದ ಮೆದುಳು ಹೊಂದಿರುವ ಮತ್ತು ಅದರ ಪರಿಣಾಮದಿಂದಾಗಿ ಮಹತ್ವಾಕಾಂಕ್ಷಿಯಾದ ಮನುಷ್ಯನಿಗೆ ಮತ್ತೂ ಹಲವಾರು ಕಾರಣಗಳಿವೆ ತನ್ನದೆನ್ನುವ ಮಗುವೊಂದನ್ನು ಹೊಂದಲು.

ಇತರೆ ಪ್ರಾಣಿಗಳಲ್ಲಿ ಇದೊಂದು ಸಂತಾನೋತ್ಪತ್ತಿ ಮತ್ತು ಪೀಳಿಗೆಯನ್ನು ಮುಂದುವರಿಸುವ ಕ್ರಿಯೆ. ಅವೂ ತಮ್ಮ ಮರಿಗಳನ್ನು ಒಂದು ಹಂತದವರೆಗೆ ಪ್ರೀತಿಸುತ್ತವೆ. ಕೆಲವು ಪ್ರಾಣಿಗಳು ಮರಿಗಳನ್ನು ಲಾಲಿಸಿ ಪಾಲಿಸುತ್ತವೆ ಸಹ. ಆದರೆ ಮನುಷ್ಯನ ಭಾವಪ್ರಪಂಚ ವಿಶಾಲವಾದದ್ದು ಮತ್ತು ಮನುಷ್ಯನ ಸಮಾಜ, ಕೌಟುಂಬಿಕ ಜೀವನ ಅವನಿಗೆ ಬಹಳಷ್ಟು ಸಂಸ್ಕಾರ ಕೊಟ್ಟಿರುವುದೊಟ್ಟಿಗೆ ಬಹಳಷ್ಟನ್ನು ನಿರೀಕ್ಷಿಸುತ್ತದೆಯೂ ಸಹ. ಹಾಗಾಗಿ ಮಗು ಎನ್ನುವ ಶಬ್ದವೇ ಅವನಲ್ಲಿ ಪುಳಕವನ್ನುಂಟುಮಾಡುತ್ತದೆ.

ಒಂದು ಹೊಸ ಜೀವದ ಆಗಮನ ಒಂದು ಕುಟುಂಬಕ್ಕೆ ಹೊಸ ಜೀವಚೈತನ್ಯವನ್ನು ತುಂಬುತ್ತದೆ. ಮದುವೆಯಾದ ಪ್ರತಿ ದಂಪತಿಯೂ ಕಾತರದಿಂದ ನಿರೀಕ್ಷಿಸುವ ಶುಭ ಸಮಾಚಾರವೇ ಮಗು. ಹಾಗೇ ಪ್ರತಿ ಹೆಣ್ಣಿಗೂ ತಾಯಿಯಾಗಬೇಕೆನ್ನುವುದು ಅವಳ ಬದುಕಿನ ಬಹು ದೊಡ್ಡ ಸಂಭ್ರಮ. ಅದರ ಜೊತೆಗೇ ತನಗೇ ಪರಿಚಯವಿರದ ತನ್ನ ದೇಹದ ಮತ್ತೊಂದು ಮುಖವನ್ನು ಪರಿಚಯಿಸಿಕೊಳ್ಳುವ ಘಳಿಗೆ. ಅವಳು ಯಾವತ್ತೂ ತನ್ನ ಅಂಗಗಳಿಗೆ ಪರಿಚಿತಳಲ್ಲ. ತನ್ನೊಳಗಿನ ಜೀವ ತಂತುವನ್ನು ಕಾಪಿಡುವ ಅಂಗಕ್ಕೆ ಇತರರಷ್ಟೇ ತಾನೂ ಅಪರಿಚಿತಳು. ಲೈಂಗಿಕ ಜೀವನಕ್ಕೆ ಅಡಿ ಇಡುವಷ್ಟೇ ತಾಯಾಗುವ ಘಳಿಗೆಗೂ ಅವಳದು ಅಚ್ಚರಿಯ ಹೆಜ್ಜೆಗಳೇ.

ಹುಟ್ಟಲಿರುವ ಮಗುವಿನ ಬಗ್ಗೆ ನಮಗೆ ಅದೆಷ್ಟೋ ಆಸೆ, ಕನಸುಗಳು. ನಮ್ಮೆಲ್ಲಾ ಕೊರತೆಗಳನ್ನು ಆ ಮಗುವಿನಲ್ಲಿ ಕಾಣಬಯಸತೊಡಗುತ್ತೇವೆ. ಆದರೆ ಇದಾವುದೂ ಆ ಮಗುವಿಗೆ ಗೊತ್ತಿಲ್ಲ. ಅದೊಂದು ಸ್ನಿಗ್ಧ ಹೂವು. ಇಂಥ ಯಾವ ಹೊರೆಗಳಿಲ್ಲದ ಸ್ವಚ್ಛಂದದ ಹಾರಾಟಕ್ಕಾಗಿಯೇ ಹುಟ್ಟಿದ ಹಕ್ಕಿ. ಆದರೆ ಎಲ್ಲ ಮಕ್ಕಳಿಗೂ ಒಂದು ಒಳ್ಳೆಯ ಸ್ವಾಗತ ಸಿಗುವುದಿಲ್ಲ. ಕೆಲ ಮಕ್ಕಳು ತಮ್ಮ ಭ್ರೂಣಾವಸ್ಥೆಯಲ್ಲಿಯೇ ತಮ್ಮ ಜೀವ ಕಳೆದುಕೊಳ್ಳಬೇಕಾಗಿ ಬಂದುಬಿಡುತ್ತದೆ. ಅದು ದುರಂತ. ಪ್ರತಿಯೊಂದು ಜೀವಿಗೂ ಇಲ್ಲಿ ಜೀವಿಸುವ ಹಕ್ಕಿದೆ. ಅದನ್ಯಾಕೆ ನಾವು ಮರೆತುಬಿಡುತ್ತೇವೆ. ಪ್ರಾಣಿಗಳಲ್ಲಿ ಸಂತಾನ ಹರಣವೂ ಇಲ್ಲ, ಅವುಗಳ ಸಂಖ್ಯೆಯಲ್ಲಿ ಅಂತಹ ವ್ಯತ್ಯಯವೂ ಇಲ್ಲ. ಆದರೆ ತುಂಬಿ ತುಳುಕುತ್ತಿರುವ ಮನುಷ್ಯ ಜಾತಿಗೆ ಸಂತಾನಹರಣದ ಅವಶ್ಯಕತೆ ಇದೆ. ಜೊತೆಗೆ ಹೆಣ್ಣು ತನ್ನ ಅಧಿಕಾರ ಮತ್ತು ಅವಕಾಶಗಳಿಂದ ವಂಚಿತಳಾಗದೆ ಇರಲಿಕ್ಕಾಗಿ ಇದನ್ನು ಇಂದು ನಾವು ಬಳಸುತ್ತಿದ್ದೇವೆ. ಆದರೆ ನಮ್ಮದೇ ಸ್ವಯಂ ಕೃತ ತಪ್ಪಿಗೆ ಒಂದು ಜೀವವನ್ನು ಬಲಿಕೊಡುವುದು ಯಾವ ನ್ಯಾಯ? ಅಷ್ಟರ ಮಟ್ಟಿಗಿನ ಜವಾಬ್ದಾರಿಯನ್ನಾದರೂ ಹೊರದೇ ಹೋದರೆ, ಮನುಷ್ಯತ್ವ ಎನ್ನುವ ನಾವೇ ಕಟ್ಟಿಕೊಂಡ, ನಂಬಿ ಮುನ್ನಡೆಯುತ್ತಿರುವ ಮಹಲಿನ ಗತಿಯೇನು?

ಹೀಗೆ ಏನೇನೋ ವಿಚಾರ ಸರಣಿ ತಲೆ ಹೊಕ್ಕ ಸಂದರ್ಭದಲ್ಲಿ ಕೆಲವೊಂದು ಚಲನಚಿತ್ರಗಳು ನೆನಪಾದವು. ಅದರಲ್ಲಿ “ಗೌರಿ-the unborn” ಅನ್ನುವುದೂ ಒಂದು. ಸುದೀಪ್ ಮತ್ತು ರೋಶನಿ ಇಬ್ಬರೂ ಒಬ್ಬರನ್ನೊಬ್ಬರು ಬಹಳ ಪ್ರೀತಿಸುವ ದಂಪತಿಗಳು. ಇಬ್ಬರೂ ಇಂಟಿಮೇಟ್ ಆಗಿದ್ದ ಘಳಿಗೆಯೊಂದರಲ್ಲಿ ತಮಗೆ ಹುಟ್ಟುವ ಮೊದಲ ಮಗು ಹೆಣ್ಣು ಮಗುವೇ ಆಗಿರಬೇಕು ಮತ್ತು ನಾವದಕ್ಕೆ ಗೌರಿ ಎಂದು ಹೆಸರಿಡೋಣ ಎಂದೆಲ್ಲಾ ಮಾತನಾಡಿಕೊಂಡಿರುತ್ತಾರೆ. ಆದರೆ ಆ ಕ್ಷಣ ಅವರು ನಿರೀಕ್ಷಿಸುತ್ತಿರುವ ಆ ಮಗುವಿನ ಕುಡಿಯೊಂದು ಆಗಲೇ ಮೊಳೆಯಲು ಶುರು ಆಗಿದೆ, ಅದು ತಮ್ಮೆಲ್ಲ ಮಾತುಗಳನ್ನೂ ಆಲಿಸುತ್ತಿದೆ ಎನ್ನುವ ಯಾವ ಸುಳಿವೂ ಅವರಿಗಿರುವುದಿಲ್ಲ.

ಅವರಿಗೆ ಬದುಕಿನ ಬಗ್ಗೆ ಹಲವಾರು ಕನಸುಗಳಿರುತ್ತವೆ. ದುಡಿಯಬೇಕು, ಸೆಟಲ್ ಆಗಬೇಕು, ನಂತರ ಮಗು… ಹೀಗೆ. ಆದರೆ ಅವರ ಪ್ಲ್ಯಾನಿನ ವಿರುದ್ಧವಾಗಿ ರೋಶನಿ ಗರ್ಭಿಣಿಯಾಗಿರುವುದು ನಂತರ ತಿಳಿಯುತ್ತದೆ. ಇದರಿಂದ ಸುದೀಪನ ತಂದೆಗೆ(ಅನುಪಮ್ ಖೇರ್) ಬಹಳ ಖುಷಿಯಾಗುತ್ತದೆ. ಆದರೆ ದಂಪತಿಗಳು ಮಾತ್ರ ಈಗಲೇ ಮಗು ಬೇಡ ಎನ್ನುವ ನಿರ್ಧಾರಕ್ಕೆ ಬರುತ್ತಾರೆ ಮತ್ತು ಮಗುವನ್ನು ತೆಗೆಸಿಬಿಡುತ್ತಾರೆ. ಇದರಿಂದ ನೊಂದ ತಂದೆ ದೂರವಾಗುತ್ತಾರೆ. ಒಂದಷ್ಟು ವರ್ಷಗಳು ಕಳೆಯುತ್ತವೆ. ಅವರಿಗೀಗ ಏಳೆಂಟು ವರ್ಷದ ಶಿವಾನಿ ಎನ್ನುವ ಮುದ್ದಾದ ಹೆಣ್ಣುಮಗುವಿದೆ. ಅವರದೀಗ ಸುಖಸಂಸಾರ. ಈ ನಡುವೆ ಶಿವಾನಿಯ ವರ್ತನೆ ಬದಲಾಗುತ್ತದೆ. ತಾತನ ಮನೆಗೆ ಹೋಗಬೇಕೆಂದು ಹಟ ಹಿಡಿಯುತ್ತಾಳೆ. ಅಲ್ಲಿಯೇ ಅವರು ತಮ್ಮ ಮೊದಲ ಮಗುವನ್ನು ಅಬಾರ್ಟ್ ಮಾಡಿಸಿರುತ್ತಾರೆ. ಅಲ್ಲಿಗೆ ಬಂದ ಮೇಲೆ ಶಿವಾನಿ ವಿಚಿತ್ರವಾಗಿ ವರ್ತಿಸತೊಡಗುತ್ತಾಳೆ. ಕೊನೆಗೆ ಅದಕ್ಕೆ ಕಾರಣ ತಾವು ಕೊಂದ ತಮ್ಮ ಮೊದಲ ಮಗು ಗೌರಿಯ ಆತ್ಮ ಎನ್ನುವುದು ಅವರಿಗೆ ತಿಳಿದುಬರುತ್ತದೆ.

ಗೌರಿ ಹೇಳಿಕೊಳ್ಳುವ ಅವಳ ಅಂತರಂಗದ ನೋವು ಕಣ್ಣೀರು ತರಿಸುತ್ತದೆ. “ನೀವಿಬ್ಬರೂ ನನಗೆ ಗೌರಿ ಎನ್ನುವ ಹೆಸರಿಟ್ಟಿದ್ದೀರಿ, ನಾನು ನಿಮ್ಮ ಮಗುವಾಗಿ ಈ ಜಗತ್ತನ್ನು ನೋಡಬೇಕು ಎಂದು ಎಷ್ಟು ಆಸೆಯಲ್ಲಿದ್ದೆ, ಆದರೆ ನೀವು ನನ್ನನ್ನು ಕೊಂದುಬಿಟ್ಟಿರಿ. ಈಗ ನೀವು ಶಿವಾನಿಗೆ ತೋರಿಸುವ ಪ್ರೀತಿಯನ್ನು ನೋಡುವಾಗ ನನಗೆ ಹೊಟ್ಟೆಕಿಚ್ಚಾಗುತ್ತದೆ. ಅದು ನನ್ನದು ಎನಿಸತೊಡಗುತ್ತದೆ… ನಾನವಳನ್ನು ಕೊಂದು ಸೇಡು ತೀರಿಸಿಕೊಳ್ಳುತ್ತೇನೆ..” ಎನ್ನುತ್ತಾಳೆ ಗೌರಿ. ಆಗ ಅವಳ ತಂದೆ ತಾಯಿ ಅಂಗಲಾಚಿ ಬೇಡಿಕೊಳ್ಳುತ್ತಾರೆ. ತಮ್ಮ ಪ್ರಾಣ ಬೇಕಾದರೆ ತೆಗೆದುಕೋ ಆದರೆ ಶಿವಾನಿಗೆ ಏನೂ ಮಾಡಬೇಡ ಎನ್ನುತ್ತಾರೆ. “ನನಗೆ ಈ ಕತ್ತಲೆಂದರೆ ಭಯ. ಗುಡುಗು ಸಿಡಿಲು ಬಂದಾಗಲಂತೂ ವಿಪರೀತ ಭಯವಾಗುತ್ತದೆ. ಆಗೆಲ್ಲಾ ನನಗೆ ನಿನ್ನ ಮಡಿಲಲ್ಲಿ ಬಚ್ಚಿಟ್ಟುಕೊಳ್ಳಬೇಕು ಅನಿಸ್ತದೆ ಅಮ್ಮ…” ಎನ್ನುತ್ತಾಳೆ ಗೌರಿ. ಕೊನೆಗೆ “ಸರಿ ನಾನು ಶಿವಾನಿಯನ್ನು ಬಿಟ್ಟುಬಿಡುತ್ತೇನೆ. ಆದರೆ ನನಗೆ ಭಯವಾದಾಗಲೆಲ್ಲಾ ನಾನು ನಿಮ್ಮ ಬಳಿ ಬರುತ್ತೇನೆ, ನೀವು ನನ್ನನ್ನು ಮುದ್ದಿಸಬೇಕು, ಪ್ರೀತಿಸಬೇಕು…” ಎಂದು ಕೇಳುತ್ತಾಳೆ ಗೌರಿ. ಅದಕ್ಕೆ ಅವಳ ಅಪ್ಪ ಅಮ್ಮ ತಮ್ಮ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಒಪ್ಪುತ್ತಾರೆ. ಅಪ್ಪ ಅಮ್ಮನ ಪ್ರೀತಿಗಾಗಿ ಹಂಬಲಿಸುತ್ತಿರುವ ಆ ಮಗುವಿನ ಆತ್ಮ ಮತ್ತು ತಮ್ಮ ತಪ್ಪಿನ ಅರಿವಾದರೂ ತಮ್ಮ ಮಗು ಹಿಂದಿರುಗಿ ಬರಲಾರಳು ಎನ್ನುವ ಕಟು ವಾಸ್ತವದೆದುರು ಮಂಡಿಯೂರುವ ತಂದೆತಾಯಂದಿರು ನಿಜಕ್ಕೂ ಕರಾಳ ಸತ್ಯವನ್ನು ತೀವ್ರ ಸಂತಾಪವನ್ನೂ ನೋಡುಗರ ಎದೆಗೆ ದಾಟಿಸುತ್ತಾರೆ.

ಈ ಚಿತ್ರ ನನ್ನನ್ನು ಅದೆಷ್ಟು ಕಲಕಿತ್ತೆಂದರೆ, ನಾವು ಅದೆಷ್ಟೋ ಮಕ್ಕಳನ್ನು ಹೀಗೆ ನಿರ್ದಾಕ್ಷಿಣ್ಯವಾಗಿ ಹೊಸಕಿ ಹಾಕಿಬಿಡುತ್ತೇವಲ್ಲ… ಅದಕ್ಕಾಗಿ ಕನಿಷ್ಟ ಪ್ರಮಾಣದ ಪಾಪಪ್ರಜ್ಞೆಯೂ ನಮ್ಮನ್ನು ಕಾಡುವುದಿಲ್ಲವಲ್ಲ… ಗರ್ಭಪಾತವೆನ್ನುವುದು ಅನಿವಾರ್ಯವಾಗಿದ್ದಾಗ ಮಾತ್ರ ಅದು ನ್ಯಾಯದ ಕರುಣೆಯನ್ನು ಪಡೆಯುತ್ತದೆಯೇ ಹೊರತು ನಮ್ಮ ಅನುಕೂಲಕ್ಕಾಗಿ ಮತ್ತು ನಮ್ಮ ಸ್ವಾರ್ಥಕ್ಕಾಗಿ ಆದಾಗ ಖಂಡಿತಾ ಅಲ್ಲ. ಪ್ರಕೃತಿ ನಮಗೆ ಹಲವು ದಾರಿಗಳನ್ನು ಕೊಟ್ಟಿದೆ. ನಮ್ಮ ದೇಹ ಪ್ರಕೃತಿಯನ್ನು ನಾವು ಅನುಸರಿಸಿದರೂ ಇಂತಹ ಅಪಸವ್ಯಗಳು ನಡೆಯಲಾರವು. ಆದರೂ ನಾವು ಎಡವುತ್ತೇವೆ. (ಅತ್ಯಾಚಾರಗಳಂತಹ ಸಂದರ್ಭಗಳನ್ನು ಬೇರೆಯದೇ ರೀತಿಯಲ್ಲಿ ನೋಡಬೇಕಾಗುತ್ತದೆ)

ಇದೇ ರೀತಿ ಕಾಡಿದ ಮತ್ತೊಂದು ಚಲನಚಿತ್ರ ತೆಲುಗಿನ “ಕಣಂ” (The embryo). ಇಬ್ಬರು ಅಪ್ರಾಪ್ತ ವಯಸ್ಸಿನ ಪ್ರೇಮಿಗಳು ಯಾವುದೋ ಒಂದು ಅಚಾತುರ್ಯದ ಘಳಿಗೆಯಲ್ಲಿ ದೇಹಸಂಪರ್ಕ ಬೆಳೆಸಿಬಿಡುತ್ತಾರೆ. ಇದರ ಪರಿಣಾಮ ತುಳಸಿ(ನಾಯಕಿ) ಗರ್ಭಿಣಿಯಾಗಿಬಿಡುತ್ತಾಳೆ. ಇದು ಇಬ್ಬರ ಮನೆಯವರಿಗೂ ತಿಳಿಯುತ್ತದೆ. ತಿಳಿದಾಗ ಅವರೆಲ್ಲ ಇವರ ಪ್ರೇಮವನ್ನು ವಿರೋಧಿಸುವುದಿಲ್ಲ. ಆದರೆ ಈ ವಯಸ್ಸಿನಲ್ಲಿ ಮಗುವಾದರೆ ಅವರ ಭವಿಷ್ಯದ ಗತಿಯೇನು ಎನ್ನುವ ಚಿಂತೆ ಅವರನ್ನು ಕಾಡುತ್ತದೆ. ಕೊನೆಗೆ ಇದಕ್ಕೆಲ್ಲ ಪರಿಹಾರವೆಂದರೆ ಬೇಡದ ಗರ್ಭವನ್ನು ತೆಗೆಸಿಹಾಕುವುದು ಎಂದು ಹುಡುಗನ ಅಪ್ಪ ಮತ್ತು ಹುಡುಗಿಯ ಅಮ್ಮ ತೀರ್ಮಾನಿಸುತ್ತಾರೆ.

ತುಳಸಿಗೆ ತನ್ನ ಮಗುವನ್ನು ತೆಗೆಸಲು ಇಷ್ಟವಿರುವುದಿಲ್ಲ. ಯಾವ ತಪ್ಪೂ ಮಾಡದ ತನ್ನ ಕಂದ ಏಕೆ ಸಾಯಬೇಕು ಎಂದು ಪರಿತಪಿಸುತ್ತಾಳೆ. ನಂತರ ತುಳಸಿ ತನ್ನ ಸೋದರ ಮಾವನ ಬಳಿ ಹೋಗಿ “ಮಾವ ನೀವಾದ್ರೂ ಈ ಮಗೂನ ತೆಗ್ಸೋದು ಬೇಡ ಅಂತ ಹೇಳಿ. ಒಂದು ವೇಳೆ ನಿಮ್ಮ ಮಗಳಿಗೇ ಈ ಸ್ಥಿತಿ ಬಂದಿದ್ದರೆ ನೀವು ಏನು ಮಾಡ್ತಿದ್ರಿ?” ಎಂದು ಕೇಳುತ್ತಾಳೆ. ಆಗ ಅವಳ ಮಾವ ನಿಷ್ಠುರವಾಗಿ, “ನನ್ನ ಮಗಳೇನಾದರೂ ಇಂಥ ಕೆಲಸ ಮಾಡಿದ್ದಿದ್ದರೆ ಅಲ್ಲೇ ಕತ್ತರಿಸಿ ಹಾಕ್ತಿದ್ದೆ” ಅನ್ನುತ್ತಾನೆ. ನಂತರ ಅವಳು ತನ್ನ ಹುಡುಗ ಕೃಷ್ಣನನ್ನು ಕೇಳುತ್ತಾಳೆ. ಅವನೂ ಅವರು ಹೇಳಿದ್ದನ್ನೇ ಅನುಮೋದಿಸುತ್ತಾನೆ. ಹಿರಿಯರೆಲ್ಲರೂ ತಮ್ಮ ಮದುವೆಗೆ ಒಪ್ಪಿದ್ದಾರೆ. ಹಾಗಾಗಿ ನಾವು ಅವರ ಈ ಮಾತನ್ನು ಕೇಳಲೇಬೇಕು ಅನ್ನುತ್ತಾನೆ. ಕೊನೆಗೆ ಅವಳು ಅಬಾರ್ಷನ್ ಮಾಡಲು ಬಂದ ವೈದ್ಯರನ್ನು ಪರಿಪರಿಯಾಗಿ ಕೇಳಿಕೊಳ್ಳುತ್ತಾಳೆ. ಅವರೂ ಸಹ ಅವಳ ಮಾತನ್ನು ಕೇಳದೆ “ನಿನ್ನ ಭವಿಷ್ಯದ ದೃಷ್ಟಿಯಿಂದ ಈ ಮಗುವನ್ನು ತೆಗೆಯಲೇ ಬೇಕು” ಅನ್ನುತ್ತಾರೆ. ಕೊನೆಗೆ ನಿರ್ವಾಹವಿಲ್ಲದೆ ಅವಳು ತನ್ನ ಮಗುವನ್ನು ಕಳೆದುಕೊಳ್ಳುತ್ತಾಳೆ.

ಅವಳು ಯಾವತ್ತೂ ತನ್ನ ಅಂಗಗಳಿಗೆ ಪರಿಚಿತಳಲ್ಲ. ತನ್ನೊಳಗಿನ ಜೀವ ತಂತುವನ್ನು ಕಾಪಿಡುವ ಅಂಗಕ್ಕೆ ಇತರರಷ್ಟೇ ತಾನೂ ಅಪರಿಚಿತಳು. ಲೈಂಗಿಕ ಜೀವನಕ್ಕೆ ಅಡಿ ಇಡುವಷ್ಟೇ ತಾಯಾಗುವ ಘಳಿಗೆಗೂ ಅವಳದು ಅಚ್ಚರಿಯ ಹೆಜ್ಜೆಗಳೇ.

ನಂತರ ಅವರಿಬ್ಬರೂ ತಮ್ಮ ಓದು ಮುಗಿಯುವವರೆಗೂ ಒಬ್ಬರನ್ನೊಬ್ಬರು ಭೇಟಿಯಾಗುವುದಿಲ್ಲ. ನಂತರ ಅವರ ಮದುವೆಯಾಗುತ್ತದೆ. ತುಳಸಿ ಯಾವಾಗಲೂ ತನ್ನ ಮಗುವಿನ ಚಿತ್ರ ಬರೆಯುತ್ತಿರುತ್ತಾಳೆ. ಅವಳು ಇದ್ದಿದ್ದರೆ ಈಗ ಆರು ವರ್ಷವಾಗಿರುತ್ತಿತ್ತು ಎಂದುಕೊಳ್ಳುತ್ತಾಳೆ. ಅದಕ್ಕೆ “ದಿಯಾ” ಎಂದು ಹೆಸರಿಡುತ್ತಾಳೆ. ಅವಳಿಗೆ ಈಗಲೂ ಆ ಪಾಪ ಪ್ರಜ್ಞೆಯಿಂದ ಹೊರಬರಲಾಗಿಲ್ಲ. ಆದರೆ ಅವಳ ಕಲ್ಪನೆಯ ಕೂಸು ಆತ್ಮದ ರೂಪದಲ್ಲಿ ಅವಳ ಮುಂದೆ ಬಂದು ನಿಲ್ಲುವುದು ವಿಪರ್ಯಾಸ.

ಕೊನೆಗೆ ದಿಯಾ ತನ್ನನ್ನು ಕೊಲ್ಲಲು ಒತ್ತಾಯ ಮಾಡಿದ ಎಲ್ಲರನ್ನೂ ಕೊಲ್ಲುತ್ತಾ ಹೋಗುತ್ತಾಳೆ. ಅವಳಿಗೆ ಅಮ್ಮನನ್ನು ಬಿಟ್ಟರೆ ಬೇರೆ ಯಾರೂ ಬೇಕಿಲ್ಲ. ಕೊನೆಯದಾಗಿ ತನ್ನ ಅಪ್ಪನನ್ನು ಕೊಲ್ಲಲು ಪ್ರಯತ್ನಿಸುವಾಗ ತುಳಸಿ ಪಡುವ ಪಡಿಪಾಟಲು ಹೇಳತೀರದು. ಒಂದು ಹಂತದಲ್ಲಿ ಅಪಘಾತಕ್ಕೊಳಗಾಗಿ ತುಳಸಿ ಕೋಮಾಗೆ ಹೋಗಿಬಿಡುತ್ತಾಳೆ. ಆಗ ಅವಳ ಆತ್ಮ ತನ್ನ ಮಗು ದಿಯಾಳ ಬಳಿ ಹೋಗುತ್ತದೆ. ಆಗ ದಿಯಾ ಮೊಟ್ಟ ಮೊದಲ ಬಾರಿಗೆ ಅಮ್ಮ ಎಂದು ಉಚ್ಛರಿಸುವುದು, ಇವಳು ಹೋಗಿ ಅಮ್ಮನ ಪ್ರೀತಿಗಾಗಿ ಹಂಬಲಿಸುತ್ತಿರುವ ಆ ಕಂದನ ತಬ್ಬಿ ಮುದ್ದುಗರೆಯುವುದು ಮನೋಜ್ಞವಾಗಿದೆ. ಅಂತಃಕರಣವಿರುವ ಯಾರ ಕಣ್ಣೂ ಒಂದು ಕ್ಷಣ ಒದ್ದೆಯಾಗದೆ ಇರುವುದಿಲ್ಲ. ಅಮ್ಮನ ಅಪ್ಪುಗೆಯಿಂದ ತೃಪ್ತಗೊಂಡ ಮಗುವಿನ ಆತ್ಮಕ್ಕೆ ಕೊನೆಗೂ ಶಾಂತಿ ಸಿಗುತ್ತದೆ. ತುಳಸಿಯ ಆತ್ಮ ಮರಳಿ ಅವಳ ದೇಹ ಸೇರಿ ಅವಳು ಕೋಮಾದಿಂದ ಹೊರಬಂದು ಕಣ್ಣುಬಿಡುತ್ತಾಳೆ.

ಸ್ವತಃ ವೈದ್ಯಳಾಗಿರುವ ನಟಿ ಸಾಯಿಪಲ್ಲವಿ ತುಳಸಿಯ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದವಳಂತೆ ಅಭಿನಯಿಸಿದ್ದಾಳೆ. ಒಂದೊಳ್ಳೆಯ ಸಂದೇಶವನ್ನು ಅಷ್ಟೇ ಪರಿಣಾಮಕಾರಿಯಾಗಿ ಮುಟ್ಟಿಸುವ ಒಂದೊಳ್ಳೆ ಚಿತ್ರವಿದು.

ಭ್ರೂಣ ಹತ್ಯೆಯ ವಿರುದ್ಧ ಸಾಕಷ್ಟು ಕಾನೂನುಗಳಿವೆ. ವೈದ್ಯರೂ ಸಹ ಇದನ್ನು ಉತ್ತೇಜಿಸುತ್ತಿಲ್ಲ. ಇದರ ನಡುವೆಯೂ ಒಂದಷ್ಟು ಜನ ಕಳ್ಳದಾರಿ ಹುಡುಕುವುದನ್ನು ಇನ್ನೂ ಬಿಟ್ಟಿಲ್ಲ. ಎಲ್ಲೋ ಕೆಲ ವೈದ್ಯರೂ ತಮ್ಮ ವೃತ್ತಿಗೆ ದ್ರೋಹವೆಸಗುತ್ತಿದ್ದಾರೆ. ಕೆಲವೊಮ್ಮೆ ವಿಷಮ ಪರಿಸ್ಥಿತಿ, ಮತ್ತೆ ಕೆಲವೊಮ್ಮೆ ಹಣದ ಆಮಿಷ. ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಭ್ರೂಣ ಹತ್ಯೆ ಎನ್ನುವುದು ಒಂದು ಅಪರಾಧವಾಗಿದೆ.

ಯಾವ ದೇಶದಲ್ಲೂ ಇದನ್ನು ಒಪ್ಪಿಕೊಳ್ಳುವುದಿಲ್ಲ.. ಭಾರತದಂತಹ ದೇಶದಲ್ಲಿ ಅನಕ್ಷರತೆ, ಅಜ್ಞಾನ, ಲೈಂಗಿಕ ಶಿಕ್ಷಣದ ಕೊರತೆ, ಪುರುಷ ಪ್ರಾಧಾನ್ಯ ಸಮಾಜ, ಹೆಣ್ಣು ಮಕ್ಕಳ ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲಾಗುವ ಅತ್ಯಾಚಾರ… ಹೀಗೆ ಈ ಸಮಸ್ಯೆಯ ಹತ್ತು ಹಲವು ಕರಾಳ ಮುಖಗಳಿವೆ. ಇವುಗಳ ಹಿನ್ನಲೆಯಲ್ಲಿ ಬಂದ ಬಹಳಷ್ಟು ಚಲನಚಿತ್ರಗಳ ಪೈಕಿ ನನಗೆ ಈ ಎರೆಡು ಚಿತ್ರಗಳು ಸದಾ ಕಾಡುತ್ತವೆ.

ಭ್ರೂಣ ಹತ್ಯೆಯ ವಸ್ತುವನ್ನಿಟ್ಟುಕೊಂಡು ಬರೆದ ಹಲವಾರು ಕವಿತೆಗಳ ಪರಿಚಯ ಸಹ ನಮಗಿದೆ. ಅವುಗಳಲ್ಲಿ ಭವಾನಿ ಲೋಕೇಶರ ಈ ಕವಿತೆಯೂ ಒಂದು. ಈ ಕವಿತೆಯ ಶೀರ್ಷಿಕೆಯೇ “ಭ್ರೂಣ ಹತ್ಯೆ”. ಭೂಮಿಗೆ ಬರದ ಹೆಣ್ಣು ಮಗುವೊಂದು ಮಾತನಾಡುತ್ತದೆ ಇಲ್ಲಿ. ತನ್ನಪ್ಪ ಹೇಗಿರಬಹುದು? ಎಂಥವನಾಗಿರಬಹುದು? ಎಂದೆಲ್ಲಾ ತನ್ನ ಕಲ್ಪನೆಗಳನ್ನು ಬಿಚ್ಚಿಡುತ್ತಾ ಹೋಗುತ್ತದೆ. ಅಪ್ಪನೆಂದರೆ ಹೀಗೆ ಇರಬಹುದು ಅಲ್ಲವೇನೇ ಅವ್ವ ಎಂದು ತನ್ನಮ್ಮನನ್ನು ಕೇಳುತ್ತ ಕೇಳುತ್ತ ತನ್ನನ್ನು ಅರಳುವ ಮುಂಚೆಯೇ ಚೆಂಡಾಡಿ ಮಣ್ಣುಪಾಲು ಮಾಡಿದ ತನ್ನಪ್ಪ ತನ್ನ ಕಲ್ಪನೆಗಳಿಂದ ಬಹು ದೂರ ಎನ್ನುವುದನ್ನು ಹೇಳುತ್ತದೆ. ಕೊನೆಯ ಸಾಲುಗಳಂತೂ ಕರುಣಾಜನಕ! ಆದರೆ ಕಟ್ಟಕಡೆಯ ಸಾಲೊಂದು ನಮ್ಮಲ್ಲಿ ಆಶಾಭಾವನೆ ಮೂಡಿಸುತ್ತದೆ.

“ಅಪ್ಪನೆಂದರೆ ಹೀಗೆ ಇರಬಹುದು
ಅಲ್ಲವೇನೆ ಅವ್ವ
ಆದರೆ,
ಆದರೆ ನನ್ನಪ್ಪ ಹಾಗಲ್ಲ
ನನ್ನಂತೆಯೇ ನನ್ನಕ್ಕಂದಿರನ್ನೂ
ನಿನ್ನ ಗರ್ಭದಲ್ಲೇ ಜಗವ
ನೋಡುವ ಮೊದಲೇ
ಹೊಡೆದು ಕೊಂದವನು
ಬೆಳಕು ಮೂಡುವ ಮೊದಲೇ
ತಿರೆ ತೋರಿದವನು
ಹೆಣ್ಣೆಂದು ತಿಳಿದು ನನ್ನ
ಕಣ್ಣ ಚುಚ್ಚಿದವನು
ಅಳಬೇಡ ಬಿಡು ಅವ್ವ !
ನಿನ್ನಂತೆ ಕಣ್ಣೀರು ಸುರಿಸುವುದೆ ತಪ್ಪಿತು
ಬದುಕ ಬಂಧನದಿಂದ
ಬಿಡುಗಡೆಯೆ ಸಿಕ್ಕಿತು
ನೀ ಹೆಣ್ಣಾಗಿ ಹುಟ್ಟಿದ ತಪ್ಪಿಗೆ
ಅತ್ತುಬಿಡು ಜೋರಾಗಿ
ಸುರಿಯಲಿ ಕಣ್ಣೀರು
ಹರಿಯಲಿ ಈ
ಇಳೆಯೆ ನೆನೆಯಲಿ ಯಾಕೆಂದರೆ
ಅವ್ವ ನನ್ನಪ್ಪ ಹೂತ ಮಣ್ಣ
ಕಣದೊಳಗೆ ನಾನಿದ್ದೇನೆ”

ತಾನು ಈ ಜಗತ್ತಿಗೆ ಬರದಿದ್ದುದರಿಂದ ತನ್ನ ತಾಯಿ ಹೆಣ್ಣಾಗಿ ಅನುಭವಿಸಿದ ಕಷ್ಟಗಳನ್ನೆಲ್ಲಾ ಅನುಭವಿಸುವ ದುರ್ಗತಿಯೇ ಇಲ್ಲವಾಯಿತು ಎಂದುಕೊಳ್ಳುತ್ತದೆ ಭ್ರೂಣ. ನೀನು ಹೆಣ್ಣಾಗಿ ಹುಟ್ಟಿದ ತಪ್ಪಿಗೆ ಭೂಮಿ ನೆನೆಯುವಂತೆ ಅತ್ತು ಬಿಡು ಅಮ್ಮ, ಕಾರಣ ಅದರ ಮಣ್ಣ ಕಣದೊಳಗೆ ನಾನಿದ್ದೇನೆ ಎಂದು ಭ್ರೂಣ ತನ್ನ ತಾಯಿಗೆ ಹೇಳುವ ಮಾತಿಗೆ ಓದುಗರ ಕಣ್ಣು ನೆನೆಯುತ್ತದೆ.

ಮೊದಲ ಬಾರಿಗೆ ಗರ್ಭಿಣಿಯಾಗಿದ್ದಾಗ ಒಮ್ಮೆ ನನ್ನ ಪರಿಚಯದ ಹೆಣ್ಣುಮಗಳೊಬ್ಬರು ಸಿಕ್ಕಿದ್ದರು. ಹೀಗೆ ಎಷ್ಟು ತಿಂಗಳು, ಏನು, ಅದು ಇದು ಅಂತ ಮಾತನಾಡುತ್ತಾ ಹೋದವರು ಸಡನ್ನಾಗಿ ನಿನಗೆ ಗಂಡು ಮಗು ಬೇಕಾ, ಹೆಣ್ಣು ಮಗು ಬೇಕಾ ಎಂದು ಕೇಳಿದರು. ನಾನದಕ್ಕೆ ಯಾವುದಾದರೂ ಸರಿ, ಅದು ನನ್ನ ಮಗು ಅಂದೆ. ಅವರಿಗೆ ಸಮಾಧಾನವಾಗಲಿಲ್ಲ. ಮುಂದುವರಿದು, “ಅಲ್ಲ ನೋಡು ನನಗೆ ಗೊತ್ತಿರೋ ಒಬ್ಬ ನಾಟಿ ವೈದ್ಯರಿದಾರೆ. ಅವರ ಬಳಿ ಔಷಧಿ ತಗೊಂಡಿರೋ ಎಲ್ಲರಿಗೂ ಗಂಡು ಮಗೂನೇ ಆಗಿದೆ. ಈಗಲೂ ಬೇಕಾದ್ರೆ ಹೇಳು ನಾನೇ ಕರ್ಕೊಂಡು ಹೋಗ್ತೀನಿ. ಬಾ ನಿನಗೂ ಗಂಡು ಮಗು ಆಗುತ್ತೆ ” ಅಂದರು. ನನಗೆ ಅವರ ಮನಸ್ಥಿತಿಯ ಬಗ್ಗೆ ಜಿಗುಪ್ಸೆಯಾಯಿತು. “ನೋಡಿ ನನಗೆ ಗಂಡು ಮಗುವೇ ಆಗಬೇಕು ಅಂತ ಏನೂ ಇಲ್ಲ. ಗಂಡು ಮಗು ಇಲ್ಲದೇ ಹೋದರೂ ತೊಂದರೆ ಇಲ್ಲ. ಯಾವ ಮಗು ಆದರೂ ನಮಗೆ ಸಂತೋಷವೇ” ಎಂದು ಹೇಳುತ್ತಾ ಹೋದೆನಾದರೂ ಅವರ ತಲೆಯೊಳಗೆ ಏನೊಂದೂ ಹೋಗಲಿಲ್ಲ. ಇಂಥವರ ತಲೆ ಸರಿಮಾಡುವುದು ಕಷ್ಟವೆನಿಸಿ ತಿರುಗಿ ಕೂತೆ. ಆದರೂ ಆಕೆ ಬಿಡದೆ “ಹೋಗಲಿ ಈ ಸರ್ತಿ ಏನಾದರೂ ಆಗಲಿ, ಮುಂದಿನ ಸರ್ತಿ ನಂಜೊತೆ ಬಾ. ಅವರಿಂದ ಔಷಧಿ ತಗೊಂಡ್ರೆ ಗ್ಯಾರಂಟಿ ಗಂಡು ಮಗು ಆಗೇ ಆಗುತ್ತೆ. ತಗೋ ನನ್ ನಂಬರ್ ಸೇವ್ ಮಾಡ್ಕೋ” ಅಂದರು. ನಾನು ಮುಖ ಮತ್ತು ಮಾತು ಮುರಿದುಕೊಂಡು ತಿರುಗಿ ಕೂತೆ.

ಇಂತಹ ಮನಸ್ಥಿತಿ ತೊಲಗುವವರೆಗೂ ಹೆಣ್ಣುಭ್ರೂಣಗಳು ಆತ್ಮವಾಗಿ ಕಾಡುವ, ಪ್ರಶ್ನೆಯಾಗಿ ಉಳಿಯುವ ಪರಿಸ್ಥಿತಿ ಬದಲಾಗದು ಎಂದು ಬಲವಾಗಿ ಅನಿಸುವ ಈ ಹೊತ್ತಿನಲ್ಲಿ ಮಾತುಗಳು ಬೇಡವಾಗುತ್ತಿವೆ. ನಮ್ಮದೇ ಗರ್ಭಗಳು ಚಿಗುರುವ ಹೊತ್ತಿಗೆ ಕಾತರಿಸುವ ಹೊತ್ತಿನಲ್ಲೇ ಆ ಗರ್ಭಗಳನ್ನು ನಿರಾಕರಿಸಿ ಬೆನ್ನುಮಾಡಿ ಭ್ರೂಣಗಳು ಗುಳೆ ಹೊರಟುಬಿಟ್ಟರೆ ನಮ್ಮ ಅಭಿಮಾನವೋ, ಅಹಮ್ಮೋ, ಅಸ್ತಿತ್ವವೋ… ಒಟ್ಟಾರೆ ಅದರ ಉಳಿವು ಅಸಾಧ್ಯ ಅನಿಸುತ್ತಿದೆ. ಒಂದೇ ಒಂದು ಭ್ರೂಣದ ನಿಟ್ಟುಸಿರಿಗೆ ಸುಟ್ಟುಹೋಗುವ ಕಾಲಕ್ಕೆ ಅಣಿಯಾಗಬೇಕಾದ ದಿನಗಳೂ ಹೆಚ್ಚು ದೂರವಿಲ್ಲ…