ನಮ್ಮೂರಿನಲ್ಲಿದ್ದಂತೆ ಈ ನಗರದಲ್ಲಿ ಗದ್ದೆ ಇದೆಯಾ? ಗೊಣಬೆ ಇದೆಯಾ? ಅಥವಾ ಭತ್ತದ ಕಣಜವೋ, ಅಕ್ಕಿ ಮೂಟೆಯೋ ಅವಕ್ಕೆ ಸಿಗುತ್ತಾ? ಅಂದ್ಮೇಲೆ ಯಾರಾದ್ರೂ ಚೂರುಪಾರು ತರಕಾರಿ ಬೆಳೆಯೋಣ ಅಂತ ಹೊರಟರೆ ಅದರಲ್ಲಿ ಬಿಡೋ ಕಾಯಿಗಳನ್ನುತಿನ್ನದೇ ಮತ್ತೇನು ಮಾಡಲು ಸಾಧ್ಯ. ಅಕ್ಕಿ ಭತ್ತ, ತರಕಾರಿ ಏನಾದರೂ ಸರಿ, ಹೊಟ್ಟೆಪಾಡು ನೋಡಿಕೊಳ್ಳಬೇಕು. ಆದರೂ ಈ ಸುಂಡಿಲಿಗಳು ಚಳ್ಳೇ ಹಣ್ಣು ತಿನ್ನಿಸುವುದರಲ್ಲಿ ಭಾರೀ ಹುಶಾರು. ಇಲಿ ಬೇಟೆ ಪ್ರಸಂಗದ ಲಘುಬರಹವನ್ನು ಬರೆದಿದ್ದಾರೆ ಚಂದ್ರಮತಿ ಸೋಂದಾ.

 

ಎಂದಿನಂತೆ ಆವತ್ತು ರಾತ್ರಿ ಯಾವುದೋ ಹೊತ್ತಿನಲ್ಲಿ ಎದ್ದು ಹೋಗಿದ್ದೆ. ಹಿಂದಿನ ಬಾಗಿಲು ತೆರೆಯುತ್ತಿದ್ದಂತೆ ಎದುರಿನ ಮೊಳೆಯಲ್ಲಿ ಸಿಕ್ಕಿಸಿದ್ದ ಪ್ಲಾಸ್ಟಿಕ್ ಚೀಲ ಅಲ್ಲಾಡುತ್ತಿದ್ದುದು ನನ್ನ ಗಮನಕ್ಕೆ ಬಂತು. ಇನ್ನೊಮ್ಮೆ ಸರಿಯಾಗಿ ಕಣ್ಣುಜ್ಜಿಕೊಂಡು ಗಮನಿಸಿದೆ. ಅದರಿಂದ ಸರಬರ ಎನ್ನುವ ಸದ್ದೂ ಕೇಳಿಸಿತು. `ಅರೆ, ಜಿರಲೆ ಆದ್ರೆ ಹೀಗೆ ಸದ್ದು ಆಗೋದಿಲ್ಲ. ಪ್ರಾಯಶಃ ಹಲ್ಲಿ ಇರಬಹುದು’ ಅಂತ ಯೋಚನೆ ಮಾಡುತ್ತ ನನ್ನ ಕೆಲಸ ಮುಗಿಸಿ ಇನ್ನೇನು ಹಿಂದಿನ ಬಾಗಿಲು ಮುಚ್ಚಬೇಕು ಎನ್ನುವಷ್ಟರಲ್ಲಿ ಆ ಪ್ಲಾಸ್ಟಿಕ್ ಚೀಲದಿಂದ ಇಲಿಯೊಂದು ಪುಳಕ್ಕನೆ ಜಿಗಿದು ಗೋಡೆಹತ್ತಿ ಕಬ್ಬಿಣದ ಕಂಬಿಯನ್ನು ನೆಗೆದು ಮಾಯವಾಯಿತು. ಆಗ ನೆನಪಾಯಿತು. ಕಳೆದೆರಡು ಮೂರು ದಿನದಿಂದ ನಾನು ಪ್ರೀತಿಯಿಂದ ಬೆಳಸಿದ್ದ ಅಲಸಂದೆ ಬಳ್ಳಿಯಲ್ಲಿದ್ದ ಕೆಲವು ಕಾಯಿಗಳು ರಾತ್ರಿ ಬೆಳಗಾಗುವಷ್ಟರಲ್ಲಿ ಕಾಣೆಯಾಗುತ್ತಿದ್ದುದು ಮತ್ತು ಕೆಲವು ಕಾಯಿಗಳು ಅರ್ಧಕತ್ತರಿಸಿಕೊಂಡು ನೇತಾಡುತ್ತಿದ್ದುದರ ರಹಸ್ಯ.

ಮಾರನೆ ಬೆಳಗ್ಗೆ ಗಿಡಗಳಿಗೆ ನೀರು ಹಾಕಲು ಹೋದ ನಮ್ಮವರು `ಬಾ ಇಲ್ಲಿ’ ಎಂದು ಕರೆದರು. ಹೋಗಿ ನೋಡಿದರೆ, ಬಳ್ಳಿಯಲ್ಲಿದ್ದ ಉಳಿದ ಆರೆಂಟು ಕಾಯಿಗಳು ರಿಯಾಯಿತಿಯಲ್ಲಿ ಕೊಂಡುತಂದ ಸೀರೆಯ ತರಹ ಅರ್ಧಂಬರ್ಧವಾಗಿ ನನ್ನನ್ನು ಅಣಕಿಸುವಂತಿದ್ದವು. ಸುಮ್ಮನೆ ನೋಡುತ್ತ ನಿಂತಿರುವುದನ್ನು ಕಂಡು `ನಿನ್ನೆ ನೀನು ಹೇಳಿದಾಗಿ ಅಳಿಲೋ, ಇನ್ಯಾವುದೋ ಪ್ರಾಣಿ ತಿಂದಿರ್ಬಹುದು ಅಂದುಕೊಂಡಿದ್ದೆ. ಇವತ್ತು ಅದನ್ನು ಪತ್ತೆಮಾಡ್ಲೇಬೇಕು’ ಎಂದು ಹೇಳಿದರು. `ಪತ್ತೆಯಾಗಿದೆ’ ಎಂದೆ. `ಅಂದ್ರೆ?’ ಹಿಂದಿನ ರಾತ್ರಿ ಏನಾಯಿತೆನ್ನುವುದನ್ನು ಅರುಹಿದೆ. `ಛೇ! ಎಂಥ ಕೆಲ್ಸ ಮಾಡ್ದೆ. ನನ್ನ ಎಬ್ಬಿಸಬೇಕಿತ್ತು, ರಾತ್ರಿನೇ ಅದನ್ನು ಬೇಟೆಯಾಡ್ಬಹುದಿತ್ತು’ ಎಂದರು.

ಅವತ್ತು ಶನಿವಾರ. ಅಜ್ಜ ಮೊಮ್ಮಗನ ಯೋಜನೆ ಮಧ್ಯಾಹ್ನದಿಂದಲೇ ಶುರುವಾಯಿತು. ಅಟ್ಟ ಸೇರಿದ್ದ ಇಲಿಬೋನು ಧೂಳು ಕೊಡವಿಕೊಂಡು ಬಲಿಗೆ ಸಿದ್ಧವಾಯಿತು.

`ಅಜ್ಜ, ನೀನು ಇಲಿನ ಸಾಯಿಸಲ್ಲ ಅಲ್ವಾ?’
`ಇಲ್ಲ ಮಾರಾಯ, ಅದನ್ನು ಬೋನಲ್ಲಿ ಹಿಡಿಯೋದಷ್ಟೆ’
`ಹಿಡಿದಿದ್ದನ್ನ ಎಂಥ ಮಾಡ್ತೀಯೆ?’
`ಮೊದ್ಲು ಅದು ಬೋನಿಗೆ ಬೀಳ್ಲಿ, ಆಮೇಲೆ ತೊಗೊಂಡ್ಹೋಗಿ ದೂರ ಬಿಟ್ಟುಬರೋಣಂತೆ’
`ಅದುಕ್ಕೆ ಅಲ್ಲಿ ತಿನ್ನಕ್ಕೆ ಸಿಕ್ಕುತ್ತಾ?`
`ಇರು ಮಾರಾಯ, ಮೊದ್ಲು ಅದ್ನ ಮನೆಯಿಂದ ಓಡ್ಸೋಣ’

ಅವ್ನು ಕೇಳಿದ್ದು ಸರಿ. ನಮ್ಮೂರಿನಲ್ಲಿದ್ದಂತೆ ಇಲ್ಲಿ ಗದ್ದೆ ಇದೆಯಾ? ಗೊಣಬೆ ಇದೆಯಾ? ಅಥವಾ ಭತ್ತದ ಕಣಜವೋ, ಅಕ್ಕಿ ಮೂಟೆಯೋ ಅವಕ್ಕೆ ಸಿಗುತ್ತಾ? ಅಂದ್ಮೇಲೆ ಯಾರಾದ್ರೂ ಚೂರುಪಾರು ತರಕಾರಿ ಬೆಳೆಯೋಣ ಅಂತ ಹೊರಟರೆ ಅದರಲ್ಲಿ ಬಿಡೋ ಕಾಯಿಗಳನ್ನು ತಿಂದಾದ್ರೂ ಅವು ಬದುಕಬೇಡ್ವಾ? ನಂಗೆ ಈಗಲೂ ನೆನಪಿದೆ. ನಮ್ಮಣ್ಣ ಮಿಲ್ಲಿಗೆ ಭತ್ತ ತೊಗೊಂಡು ಹೋಗಿ ಮೂರು ಮೂಟೆ ಅಕ್ಕಿ ಮಾಡಿಸಿ ತಂದು ಜಗಲಿಯಲ್ಲಿ ಪೇರಿಸಿಟ್ಟಿದ್ದ. ರಾತ್ರಿಯಾದ್ದರಿಂದ ಬೆಳಗ್ಗೆ ಆ ಚೀಲಗಳನ್ನು ಇಲಿಗೆ ಸಿಗದಂತೆ ವ್ಯವಸ್ಥೆ ಮಾಡಬಹುದು ಎನ್ನುವುದು ಅವನ ಲೆಕ್ಕಾಚಾರ. ಮಾರನೆ ಬೆಳಗ್ಗೆ ಜಗಲಿ ಗುಡಿಸಲು ಹೋದ ಅಕ್ಕ `ಅಕ್ಕಿಚೀಲನ ಇಲಿ ಕಡಿದಿದೆ’ ಅಂತ ಕೂಗಿದಳು. ಅವಳು ಕೂಗಿದ ಹೊಡೆತಕ್ಕೆ ಏನಾಯಿತೆಂದು ತಿಳಿಯದೆ ಮನೆಯವರೆಲ್ಲ ಜಗಲಿಗೆ ಓಡಿದರು. ಅಂಗೈಯಗಲದ ತೂತಿನಲ್ಲಿ ಅಕ್ಕಿ ಕೆಳಗೆ ಸುರಿಯುತ್ತಿತ್ತು. `ಅಯ್ಯೋ ನನ್ನ ಕಾಲಿಗೆ ಇರುವೆ ಕಚ್ತು’ ಅಂತ ತಮ್ಮ ಕೂಗಿದ. ನೋಡಿದರೆ ಸಾವಿರಾರು ಇರುವೆಗಳು ತಮ್ಮ ಕಾಯಕದಲ್ಲಿ ಮಗ್ನವಾಗಿದ್ದವು. ಜಗಲಿ ತುಂಬ ಅಕ್ಕಿ ಹರಡಿತ್ತು.

ರಾತ್ರಿ ಊಟವಾದ್ಮೇಲೆ ವಡೆ ಮಾಡಿ ಕಟ್ಟೋದೋ, ಕೊಬ್ಬರಿ ಸುಟ್ಟು ಕಟ್ಟೋದಾ ಅಂಥ ಜಿಜ್ಞಾಸೆ ನಡೆದು ಕೊಬ್ಬರಿ ಸುಟ್ಟು ಕಟ್ಟುವುದು ಅಂತ ಸರ್ವಾನುಮತದ ತೀರ್ಮಾನವಾಯಿತು. ಸುಟ್ಟಕೊಬ್ಬರಿಯ ವಾಸನೆ ನಮ್ಮನೆಗೆ ಬರುತ್ತಿದ್ದ ಇಲಿ ಹಿಡಿಯಲಿಕ್ಕಷ್ಟೆ ಅಲ್ಲ ಪಕ್ಕದ ಬೀದಿಯ ಯಾರಾದಾದ್ರೂ ಮನೆಗೆ ಇಲಿ ಬರ್ತಿದ್ದರೆ ಅದನ್ನು ಹಿಡಿಯಲು ಸಾಕಾಗುವಷ್ಟು ಘಾಟನ್ನು ಬೀರಿತು. ಮನೆಮಂದಿಯೆಲ್ಲ ಕೆಮ್ಮಿದ್ದೂ ಆಯಿತು. ರಾತ್ರಿ ಮಲಗುವಾಗ ಮೊಮ್ಮಗ `ಬೆಳಗ್ಗೆ ತಾನು ಏಳೋದ್ರಲ್ಲಿ ಇಲಿಗೆ ಏನೂ ಮಾಡಬಾರದು’ ಅಂತ ಅಜ್ಜನಿಂದ ಮಾತು ತಗೊಂಡು ಮಲಗಿದ. ರಾತ್ರಿ ತುಸು ಸದ್ದಾದರೂ ಸಾಕು, ನಮ್ಮವರು ಎದ್ದು ಲೈಟು ಹಾಕಿ ಹೊರಗೆ ಹೋಗಿ ಎರಡು ಮೂರು ಬಾರಿ ನೋಡಿಬಂದರು. ಅವರ ಒದ್ದಾಟ ಕಂಡು ನನಗೆ ನಗುಬಂತು. .

ಬೆಳಗ್ಗೆ ಎದ್ದುಬಂದವನೇ ಮೊಮ್ಮಗ `ಅಜ್ಜ ಇಲಿ ಬೋನಿಗೆ ಬಿತ್ತಾ?’ ಅಂತ ಕೇಳಿದ. `ಇಲ್ಲ ಮಾರಾಯ, ಅದು ಭಾರೀಘಾಟಿ. ಕಾಯಿ ಮಾತ್ರ ತಿಂದುಹೋಗಿದೆ’ `ಅಯ್ಯೋ! ಅಲಸಂದೆ ಕಾಯಿ ಒಂದೂ ಅಜ್ಜಿಗೆ ಸಿಗೋದಿಲ್ಲ’ ಅಂತ ಬೇಸರಿಸಿದ. `ಇವತ್ತು ರಾತ್ರಿ ಮತ್ತೆ ಪ್ರಯತ್ನ ಮಾಡೋಣ’ ಅಂತ ಅಜ್ಜನ ಸಾಂತ್ವನ. ಒಣಹಾಕಿದ ಬಟ್ಟೆ ತೆಗೆದುಕೊಂಡು ಬಂದ ಮಗಳು `ಅಮ್ಮ, ನನ್ನ ಟವೆಲ್ ನೋಡು’ ಅಂತ ತೋರಿಸಿದಳು. ಅಲ್ಲೊಂದು ಕರ್ನಾಟಕದ ನಕ್ಷೆ ನಗುತ್ತಿತ್ತು.

ಅವಳು ಕೂಗಿದ ಹೊಡೆತಕ್ಕೆ ಏನಾಯಿತೆಂದು ತಿಳಿಯದೆ ಮನೆಯವರೆಲ್ಲ ಜಗಲಿಗೆ ಓಡಿದರು. ಅಂಗೈಯಗಲದ ತೂತಿನಲ್ಲಿ ಅಕ್ಕಿ ಕೆಳಗೆ ಸುರಿಯುತ್ತಿತ್ತು.

ಅವತ್ತು ಮನೆಗೆ ಯಾರೋ ಬಂದಿದ್ರಿಂದ ಇಲಿ ಬೇಟೆ ಮುಂದುವರಿಲಿಲ್ಲ. ಮಧ್ಯರಾತ್ರಿ ಅಡಿಗೆ ಮನೆಯ ಬೆಳಕು ಕಂಡು ಎಚ್ಚರವಾಯಿತು. ಗಡಿಯಾರ ನೋಡಿದೆ. ಇನ್ನೂ ಮೂರುಗಂಟೆ. ನಮ್ಮವರು ನೀರು ಕುಡಿಯುತ್ತಿರಬಹುದು ಎಂದುಕೊಂಡೆ. ಕಟಪಟ ಅಂತ ಸದ್ದು ಕೇಳಿಸಿತು. ಎದ್ದು ನೋಡಿದರೆ ಒಂದು ಕೈಯಲ್ಲಿ ಬ್ಯಾಟರಿ, ಇನ್ನೊಂದರಲ್ಲಿ ಚಿಕ್ಕಬಡಿಗೆ ಹಿಡಿದು ಅಡಿಗೆ ಮನೆ ತುಂಬ ಆಚೆ ಈಚೆ ಓಡಾಡುತ್ತಿದ್ದರು.

`ಏನಾಯಿತು? ಎಂದು ಕೇಳಿದೆ. `ಆ ಕಳ್ಳ ಇಲಿ ಯಾವುದೋ ಮಾಯದಲ್ಲಿ ಅಡಿಗೆ ಮನೆಸೇರ್ಕೊಂಡಿದೆ’ ಅಂದರು.

`ನೀವು ನೋಡಿದ್ರಾ?’

`ನೋಡಲ್ಲಿ, ರೆಡಿಯೋ ಪಕ್ಕದಲ್ಲಿರೋ ಗಡಿಯಾರ ಕೆಳಗಿದೆ. ಬಾಗಿಲ ಪರದೆ ಮೇಲ್ಬಾಗದಲ್ಲಿದ್ದ ಟೆಡ್ಡಿಗೊಂಬೆ ಕೆಳಗೆ ಬಿದ್ದಿದೆ’

`ಒಳಗೆ ಬಂದಿದ್ದಲ್ಲದೆ ಧಾಂದಲೆ ಬೇರೆ ಮಾಡ್ತಿದೆ. ಈಗೆಲ್ಲಿ ಹೋಯ್ತದು?’

`ಫ್ರಿಜ್ಜಿನ ಹಿಂಭಾಗ ಸೇರಿರ್ಬೇಕು’

`ಅಲ್ಲಿಂದ ಹ್ಯಾಂಗೆ ಹೊರಹಾಕೋದು’

`ಇರು ಬಂದೆ’ ಅಂತ ಹೊರಗೆ ಹೋಗಿ ನನ್ನ ಕೈಗೆ ಮನೆಯೊರಸೋ ಬಟ್ಟೆ, ಕೋಲುಕೊಟ್ಟು `ನಾನದ್ನ ಅಲ್ಲಿಂದ ಓಡುಸ್ತೇನೆ. ಈ ಕಡೆ ಬರದ ಹಾಗೆ ನೋಡ್ಕೊ. ಜಗ್ಲಿ ಸೇರಿದ್ರೆ ಓಡಸೋದು ಕಷ್ಟ’ ಎಂದರು. ನಾನು ಒನಕೆ ಓಬವ್ವನ ಥರ ಕೈಯಲ್ಲಿ ಆ ಕೋಲು ಹಿಡ್ದು ಜಗ್ಲಿಬಾಗ್ಲಲ್ಲಿ ನಿಂತೆ. ಆದ್ರೆ ಎಷ್ಟೇ ಪ್ರಯತ್ನಪಟ್ರೂ ಅದು ಹೊರಬರಲಿಲ್ಲ. ವ್ಯಾಕ್ಯೂಮ್ ಕ್ಲೀನರ್ ತಂದು ಜೋರಾಗಿ ಗಾಳಿ ಬಿಟ್ಟರೂ ಅದು ಜಪ್ಪಯ್ಯ ಅನ್ನಲಿಲ್ಲ. ಸಾಕಾಗಿ ನಾವು ಸುಮ್ಮನಾದೆವು.

ಇನ್ನೇನು ನಿದ್ದೆ ಹತ್ತಬೇಕು ಅನ್ನುವಷ್ಟರಲ್ಲಿ ಅಡಿಗೆ ಮನೆಯಿಂದ ಮತ್ತೆ ಸದ್ದು. ಇನ್ನೊಂದು ಯುದ್ಧಕ್ಕೆ ನಾವು ತಯಾರಾದೆವು. ಈ ಬಾರಿ ಕಷ್ಟಪಟ್ಟು ಫ್ರಿಜ್ಜನ್ನು ತುಸು ಮುಂದೆ ಎಳದು ಹುಡುಕಿದರೆ ಕಂಪ್ರಶರ್ ಸಂಧಿಯಲ್ಲಿ ರಾಬಿ ಮಲಗಿದ್ದ ಇಲಿರಾಯ. ಕೋಲಿನಿಂದ ಜೋರಾಗಿ ದೂಡಿದರೆ ಅಲ್ಲಿಂದ ಹೊರಬಿದ್ದು ಮನೆಯೆಲ್ಲ ಸುತ್ತಬಹುದು ಎಂದು ಹಿಂದಿನ ಬಾಗಿಲು ತೆರೆದೆವು. ಆದರೆ ಅಲ್ಲಿಂದ ಓಡಿಸಿದಾಗ ಅದು ಮತ್ತೆ ರೆಡಿಯೋ ಗೂಡಿನಲ್ಲಿ ಸೇರಿಕೊಂಡಿತೇ ವಿನಾ ಹಿಂಬಾಗಿಲಿನತ್ತ ಹೋಗಲೇ ಇಲ್ಲ. ಏನು ಮಾಡಬಹುದು ಅಂತ ಯೋಚಿಸಿ ಮುಂಬಾಗಿಲು ತೆರೆದು ಮತ್ತೆ ನಮ್ಮ ಆಪರೇಶನ್ ಶುರುಮಾಡಿದೆವು. ಈ ಬಾರಿ ಅದಕ್ಕೆ ಗಾಬರಿಯಾಗಿ ನನ್ನ ಕಾಲಸಂದಿಯಿಂದಲೇ ಜಗಲಿ ಸೇರಿತು. ಹುಡುಕಿದರೆ ಎಲ್ಲೂ ಕಾಣಲೇ ಇಲ್ಲ. ಕುರ್ಚಿ, ಸೋಫಾಗಳ ಕೆಳಗೆ ಬ್ಯಾಟರಿ ಹೊಡೆದು ನೋಡಿದರೆ ಕಾಣಲಿಲ್ಲ. ಆಗ ನೆನಪಾಯಿತು.

ನಾವು ಈ ಮನೆಗೆ ಬಂದ ಹೊಸದು. ಆಗಿನ್ನೂ ಬಡಾವಣೆ ಬೆಳೆದಿರಲಿಲ್ಲ. ಯಾವ ಸವಲತ್ತೂ ಇರಲಿಲ್ಲ. ನಮ್ಮ ರಸ್ತೆಯಲ್ಲಿ ನಾವು ವಾಸಕ್ಕೆ ಬಂದುದು ನಾಲ್ಕನೆಯವರಾಗಿ. ಸುತ್ತಲೂ ಬಯಲು. ರಾತ್ರಿಯಾದರೆ ಕಪ್ಪೆಗಳ ವಟವಟ. ಅಲ್ಲಿ ಹಾವು ಕಂಡೆ, ಇಲ್ಲೆ ಹಾವು ಹರಿದು ಹೋಗ್ತಾ ಇತ್ತು ಎನ್ನುವ ಮಾತು ಸಾಮಾನ್ಯ. ಎಷ್ಟು ಎಚ್ಚರಿಕೆಯಿಂದ ಇದ್ದರೂ ಸ್ನೇಕ್‌ಶ್ಯಾಮನಿಗೆ ಫೋನಿಸುವುದು ನಡೆದೇ ಇತ್ತು. ಆಗ ಒಂದಿನ ಹೀಗೆಯೇ ನಮ್ಮ ಇಲಿಬೇಟೆ. ಸಂಜೆಹೊತ್ನಲ್ಲಿ ಮನೆಯ ಹಿಂದೆ `ಚಿಂವ್‌ಚಿಂವ್’ ಅನ್ನುವ ಸದ್ದು. ಇಲಿರಾಯನ ಪ್ರವೇಶವಾಗಿದೆ ಎಂದು ಗೊತ್ತಾಯಿತು. ಆಗಿನ್ನೂ ನಮಗೆ ಪ್ರಾಯವಿತ್ತು. ಇಲಿ ಹೊಡೆಯಲು ದೊಡ್ಡದಾದ ದೊಣ್ಣೆ ಹಾಗೂ ಪೊರಕೆ ಹಿಡಿದು ಸಜ್ಜಾದೆವು. ಇನ್ನೇನು ನಮ್ಮ ಹೋರಾಟ ಆರಂಭವಾಗಬೇಕು, ಅಷ್ಟರಲ್ಲಿ ಇದನ್ನು ತಿಳಿದಂತೆ ಇಲಿ ಒಳಗೆ ಬಂದು ಬಚ್ಚಲ ಮನೆಯ ಒಲೆಯೊಳಗೆ ಅವಿತುಕೊಂಡಿತು. ಎಷ್ಟು ಹುಡುಕಿದರೂ ಕಾಣಲಿಲ್ಲ. ಒಲೆ ಬೂದಿಯನ್ನ ಅಲ್ಲೆಲ್ಲ ಚೆಲ್ಲಾಡಿದ್ದಷ್ಟೆ ಬಂತು. ಪ್ರಾಯಶಃ ಅದು ಹೊಗೆ ಪೈಪಿನಲ್ಲಿ ಹೊಕ್ಕಿರಬಹುದೆಂದು ಅಂದಾಜಿಸಿ ಒಂದು ಪಾತ್ರೆ ಬಿಸಿನೀರು ಕಾಯಿಸಿ, ಮಹಡಿ ಮೇಲೇರಿ ಪೈಪಿನಲ್ಲಿ ನೀರು ಸುರಿದೆ. ಕೆಳಗೆ ಸನ್ನದ್ಧರಾಗಿ ನಿಂತಿದ್ದ ನಮ್ಮವರು ಅದನ್ನು ಹೊಡೆದು ಬಿಸಾಕಿದ್ದರು. ಇವತ್ತಿನದು ನಮ್ಮ ಎರಡನೆಯ ಯುದ್ಧ.

ಆ ನೆನಪಿನಿಂದ ಪ್ರಾಯಶಃ ಇಲಿ ಸೋಫಾದ ಕಾಲನ್ನು ಹಿಡಿದು ಕೂತಿರಬಹುದೆಂದು ಅಂದಾಜಿಸಿ ಅದನ್ನು ಬಡಿದಾಗ ಅಲ್ಲಿಂದ ಚಂಗನೆ ನೆಗೆದು ಮುಂಬಾಗಿಲ ಮೂಲಕ ಪಾರಾಯಿತು. ಬೆಳಗಿನ ಜಾವದ ತಂಪಿನಲ್ಲೂ ನಾವು ಸಾಕಷ್ಟು ಬೆವರು ಹರಿಸುವಂತಾಯಿತು. ಅಷ್ಟರಲ್ಲಿ ಮೂಡಣ ಕೆಂಪಾಯಿತು. ಸದ್ಯಕ್ಕೆ ನಿರಾಳವಾದರೂ ಸುಮ್ಮನಿರುವಂತಿಲ್ಲ. `ಹೋದ್ಯಾ ಪಿಶಾಚಿ ಅಂದ್ರೆ ಬಂದೆ ಗವಾಕ್ಷೀಲಿ’ ಅನ್ನೋ ಹಾಗೆ ಮತ್ತೆ ಅದು ವಕ್ಕರಿಸುತ್ತದೆ ಅಂತ ನಮಗೆ ಗೊತ್ತಿತ್ತು. ಮತ್ತೆಲ್ಲೂ ಹೋಗಿರುವುದಿಲ್ಲ, ನಮ್ಮ ಪಕ್ಕದ ಖಾಲಿ ನಿವೇಶನವೇ ಅದರ ಮನೆ. ರಾತ್ರಿಯ ನಮ್ಮ ಸಾಹಸ ತಿಳಿದ ಮೊಮ್ಮಗ ತನ್ನನ್ನು ಎಬ್ಬಿಸಬೇಕಿತ್ತೆಂದೂ, ತಾನೂ ನಮಗೆ ಸಹಾಯ ಮಾಡುತ್ತಿದ್ದೆನೆಂದು ಹೇಳಿದ. `ಇವತ್ತು ರಾತ್ರಿ ಅದಕ್ಕೆ ಬೋನಿಟ್ಟು ಹಿಡಿಯೋಣ’ ಎಂದಾಗ `ನಾನಿವತ್ತು ನಮ್ಮನೆಗೆ ಹೋಗ್ಬೇಕು, ನಾಳೆ ಸ್ಕೂಲಿದೆ, ಅದನ್ನು ಬೋನಲ್ಲೇ ಇಟ್ಟಿರು ಅಜ್ಜಾ, ಸಂಜೆ ನಾನು ಮನೆಗೆ ಬಂದ್ಮೇಲೆ ಇಲ್ಲಿಗೆ ಬರ್ತೇನೆ, ನಾವಿಬ್ರೂ ಹೋಗಿ ಬಯಲಲ್ಲಿ ಬಿಟ್‍ಬರೋಣ’ ಅಂದ. ಈಗಾಗಲೇ ಎರಡ್ಮೂರು ಸರಿ ಇಲಿಯನ್ನು ಬೋನಲ್ಲಿ ಹಿಡ್ದು ದೂರ ತೆಗೆದುಕೊಂಡು ಹೋಗಿ ಅಜ್ಜ ಮೊಮ್ಮಗ ಬಿಟ್ಟುಬಂದಾಗಿದೆ. ಪ್ರತಿಬಾರಿ ಇಲಿಬೋನಿಗೆ ಬಿದ್ದಾಗಲೂ ತನ್ನೆಲ್ಲ ಗೆಳೆಯರ ಬಳಗಕ್ಕೆ ತಮ್ಮ ಸಾಹಸವನ್ನು ಅವನು ವರ್ಣಿಸುತ್ತಿದ್ದುದನ್ನು ಕೇಳಿಸಿಕೊಂಡರೆ ಅವರು ಬೋನಿಗೆ ಕೆಡವಿದ್ದು ಇಲಿನಾ? ಅಥವಾ ಹುಲಿನಾ? ಅಂತ ಸಂಶಯ.

ಅದರ ಮರುದಿನ ನಾವು ಮತ್ತೆ ಎಲ್ಲವನ್ನು ಮೊದಲಿನಿಂದ ಸಿದ್ಧಗೊಳಿಸಿ ಇಲಿಯನ್ನು ಸಾಗಹಾಕಲು ಸಜ್ಜಾದೆವು. ಸುಮಾರು ರಾತ್ರಿ ಎರಡು ಗಂಟೆ ಇರಬಹುದ, `ಟಪ್’ ಎನ್ನುವ ಸದ್ದು ಕೇಳಿಸಿತು. `ಆಹ್! ಇಲಿ ಬೋನಿಗೆ ಬಿತ್ತು’ ಅಂತ ಸಮಾಧಾನವಾಯಿತು. ಆದರೆ ಆ ಸಮಾಧಾನ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬೋನಿಗೆ ಬಿದ್ದ ಇಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಆ ಅಪರಾತ್ರಿಯಲ್ಲಿ ಅದನ್ನು ಹೊರಗೊಯ್ದು ಬಿಡುವುದು ಅಸಾಧ್ಯ. ತಾನು ಬೇಕಾದಲ್ಲಿ ಓಡಾಡಿ ತಿನ್ನುವ ತನ್ನ ಹಕ್ಕನ್ನು ಮೊಟಕುಗೊಳಿಸಿದ್ದಕ್ಕೆ ಕೋಪಗೊಂಡ ಅದು ಬೋನಿನೊಳಗೆ ಒದ್ದಾಡುವುದನ್ನು ನಿಲ್ಲಿಸಲೇ ಇಲ್ಲ. ನಮಗೆ ಬೆಳಗಿನವರೆಗೆ ಜಾಗರಣೆ. ಪದೇಪದೇ ಬ್ಯಾಟರಿ ಹೊಡೆದು ಗಡಿಯಾರ ನೋಡುವ ಕೆಲಸ. ಅಂತೂ ಬೆಳಗಾಗುತ್ತಿದ್ದಂತೆ ಇಲಿಯನ್ನು ಬಯಲಲ್ಲಿ ಬಿಟ್ಟು ಬಂದಾಯಿತು. ಇನ್ನು ಇಲಿಯ ದಾಂಧಲೆ ಸದ್ಯಕ್ಕಿಲ್ಲ ಎಂದುಕೊಂಡೆವು. ಒಂದುವಾರ ಕಳೆದಿರಬಹುದು. ಪಕ್ಕದ ಮನೆಯವರು `ನೀವು ಮೊನ್ನೆಮೊನ್ನೆ ಇಲಿ ಹಿಡುದ್ರಿ ಅಲ್ವಾ? ನಿನ್ನೆ ರಾತ್ರಿ ಇಲಿ ನಮ್ ಗಿಡದಲ್ಲಿದ್ದ ಸುಮಾರು ತೊಗರಿಕಾಯನ್ನ ತಿಂದ್ಹಾಕಿದೆ’ ಎಂದರು. ನಾವು ಮುಖಮುಖ ನೋಡಿಕೊಂಡೆವು.