ನನ್ನಲ್ಲಿನ ಅದಮ್ಯ ಕುತೂಹಲಕ್ಕೆ ಈ ದೇಶದ ವಿಶ್ವವಿದ್ಯಾಲಯಗಳು ಹೇಗಿರುತ್ತವೆ ಎಂದು ತಿಳಿವ ದಾಹವಿತ್ತು. ಜೊತೆಗೆ ಇವರೇನು ಮಹಾ ಹೇಳಿಕೊಡಲು ಸಾಧ್ಯ ಎನ್ನುವ ಉಡಾಫೆಯಿತ್ತು. ಎರಡು ಮಕ್ಕಳ ತಾಯಿಯಾಗಿದ್ದ ನಾನು ಮತ್ತು ನನ್ನಂತೆ ಸೇರಿದ್ದ ಇತರೆ ಹತ್ತು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಪಡೆವ ಗುರಿಯಿಟ್ಟವರು. ಆ ಮೂಲಕ ಆತ್ಮವಿಶ್ವಾಸವನ್ನು ಮತ್ತು ಗಳಿಕೆಯನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರವಿತ್ತು. ಎಲ್ಲರೂ ‘ವಯಸ್ಸಾದ’ ಅಥವಾ ಈ ದೇಶದ ಭಾಷೆಯಲ್ಲಿ ‘ಮೆಚೂರ್’ ವಿದ್ಯಾರ್ಥಿಗಳೇ. ಒಟ್ಟಾರೆ ಇಂತಹ ಹತ್ತು ಜನರಿದ್ದೆವು. ನಮ್ಮದೇ ಒಂದು ತರಗತಿ!
ಡಾ.ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ.

 

ಅವತ್ತು ನನ್ನ ಮನಸ್ಸಿನ ತುಂಬೆಲ್ಲ ಸಂಭ್ರಮ ತುಂಬಿತ್ತು. ಆ ದಿನ ನಾನು ಹೋಗಲಿದ್ದ ವಿಶ್ವವಿದ್ಯಾಲಯದಿಂದ ಹೊರಬಂದವರಲ್ಲಿ ಒಬ್ಬರಲ್ಲ ಅಂತ ಇಪ್ಪತ್ತೈದು ಜನರಿಗೆ ನೋಬೆಲ್ ಪಾರಿತೋಷಕ ಬಂದಿತ್ತು. ಇಂತಹ ಹಲವರು ಇನ್ನೂ ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ ಅಂತ ಕೇಳಿದ್ದೆ. ಅದುವರೆಗೆ ಈ ದೇಶದ ಕೇಂಬ್ರಿಡ್ಜ್, ಆಕ್ಸ್ಫರ್ಡ್ ಇನ್ನಿತರ ಹಲವು ವಿಶ್ವವಿದ್ಯಾಲಯಗಳನ್ನು ‘ಟೂರಿಸ್ಟ್’ ಆಗಿ ಮಾತ್ರ ನೋಡಿದ್ದೆ. ಅಮೆರಿಕಾದ ಹಾರ್ವರ್ಡ್, ಮಿಶಿಗನ್ ಕ್ಯಾಂಪಸ್ಸು ಗಳಿಗೂ ಭೇಟಿ ನೀಡಿದ್ದೆ. ಆದರೆ ಅವತ್ತು ಇಂಗ್ಲೆಂಡಿನ ವಿಶ್ವವಿದ್ಯಾಲಯವೊಂದಕ್ಕೆ ವಿದ್ಯಾರ್ಥಿಯಾಗಿ ಸೇರಿ ಮೊದಲ ತರಗತಿಗೆ ಹಾಜರಾಗಲಿದ್ದೆ. ಹಾಗಾಗಿ ಸಹಜವಾಗಿಯೇ ನನ್ನ ಸಂತೋಷ, ಕುತೂಹಲ ಎಲ್ಲ ಗರಿಗೆದರಿತ್ತು. ಜೊತೆಗೆ ನನ್ನ ಬಗ್ಗೆಯೇ ಕುಚೋದ್ಯವೂ ಅಣಕವಾಡಿತ್ತು.

ಮತ್ತೆ ಕಾಲೇಜು ಮೆಟ್ಟಿಲು ಹತ್ತುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆದರೆ ಮ್ಯಾಂಚೆಸ್ಟರ್ ಯೂನಿವರ್ಸಿಟಿಗೆ ಸೇರುವ ಪ್ರೇರಣೆಯಿಂದಲೇ ನಾನು ಸ್ಕಾಟ್ಲ್ಯಾಂಡ್ ಅನ್ನು ತೊರೆದು ಇಂಗ್ಲೆಂಡಿಗೆ ಮರಳಲು ಒಪ್ಪಿದ್ದು. ನಾನು ಆರಿಸಿಕೊಂಡ ವೃತ್ತಿಪರ ಸ್ನಾತಕೋತ್ತರ ಪದವಿ ಸ್ಕಾಟ್ಲ್ಯಾಂಡ್ ನಲ್ಲಿರಲಿಲ್ಲ. ನನ್ನ ಫೀಸನ್ನು ನನ್ನ ದುಡಿಮೆಯಿಂದಲೇ ಕಟ್ಟಿದ್ದೆ. ಕೈ ತುಂಬ ದುಡಿಮೆಯಿದ್ದ ಕೆಲಸವನ್ನು ಎರಡೇ ದಿನಗಳಿಗೆ ಇಳಿಸಿ ಓದಿಗಾಗಿ ಸಮಯ ಮಾಡಿಕೊಂಡಿದ್ದೆ. ಫೀಸು ಕಟ್ಟಿ ಓದುವ ಅವಕಾಶವಿದೆ ಎನ್ನುವ ವಿಚಾರ ಬಂದಾಗ ಯಾವ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವ ಪ್ರಶ್ನೆ ಎದುರಾಗಿತ್ತು. ಕೊನೆಗೆ ಮ್ಯಾಂಚೆಸ್ಟರ್ ನ ಹೆಸರನ್ನು ನನ್ನ ಕೆಲವು ತರಬೇತುದಾರರು ಶಿಫಾರಸ್ಸು ಮಾಡಿದ್ದರು. ನನ್ನ ತುಡಿತ ಎಷ್ಟಿತ್ತೆಂದರೆ ನಾನು ಒಂದಲ್ಲ ಅಂತ ಎರಡು ವಿಷಯದಲ್ಲಿ ಓದಲು ಅರ್ಜಿ ಸಲ್ಲಿಸಿದ್ದೆ. ಬಹುಷಃ ಇನ್ಯಾರಾದರೂ ಹಾಗೆ ಮಾಡಿದ್ದರೋ ಇಲ್ಲವೋ ಗೊತ್ತಿಲ್ಲ. ಒಮ್ಮೆಗೇ ಎರಡು ವಿಷಯಗಳನ್ನು ಓದಲು ಬಿಡುವುದಿಲ್ಲ ಅಂತ ಸಂಸ್ಥೆ ನನಗೆ ತಿಳಿಸಿತು. ಕೊನೆಗೆ ಪ್ರವೇಶ ಸಿಕ್ಕಿದ್ದು ಒಂದು ವಿಷಯಕ್ಕೆ ಮಾತ್ರ.

(ಮ್ಯಾಂಚೆಸ್ಟರ್ ಯೂನಿವರ್ಸಿಟಿ)

ಹಾಗಾಗಿ ಆಗ ನಾವಿದ್ದ ಜಾಗದಿಂದ 107 ಕಿ.ಮೀ. ದೂರದಲ್ಲಿದ್ದ ಮ್ಯಾಂಚೆಸ್ಟರ್ ಗೆ ಪ್ರತಿವಾರ ಎರಡು ವರ್ಷಗಳ ಕಾಲ ಓಡಾಡಲು ತಯಾರಾದೆ. ನಾವಿದ್ದ ಊರಿನಿಂದಲೇ ರೈಲಿನ ವ್ಯವಸ್ಥೆಯಿರಲಿಲ್ಲ. ಇನ್ನೊಂದು ಊರಿಗೆ ಹೋಗಿ ಕಾರನ್ನು ನಿಲ್ಲಿಸಿ ನಂತರ ಎರಡು ರೈಲನ್ನು ಬದಲಿಸಿ ಮತ್ತೆ ಬಸ್ಸನ್ನು ಹಿಡಿದು ಯೂನಿವರ್ಸಿಟಿ ತಲುಪಲು ನನಗೆ ಮೂರು ಗಂಟೆ ಬೇಕಿತ್ತು. ನನಗಾಗ 18 ತಿಂಗಳ ಮಗು ಕೂಡ ಇತ್ತಾದ್ದರಿಂದ ಪ್ರತಿದಿನ ಮನೆಗೆ ಮರಳಿ ಮತ್ತೆ ಬೆಳಗೆದ್ದು ಹೋಗುತ್ತಿದ್ದೆ. ಇನ್ನು ಕೆಲವೊಮ್ಮೆ ಅಲ್ಲಿಯೇ ಹೋಟಲಿನಲ್ಲಿ ಉಳಿಯಬೇಕಾಗುತ್ತಿತ್ತು.

ನನ್ನಲ್ಲಿನ ಅದಮ್ಯ ಕುತೂಹಲಕ್ಕೆ ಈ ದೇಶದ ವಿಶ್ವವಿದ್ಯಾಲಯಗಳು ಹೇಗಿರುತ್ತವೆ ಎಂದು ತಿಳಿವ ದಾಹವಿತ್ತು. ಜೊತೆಗೆ ಇವರೇನು ಮಹಾ ಹೇಳಿಕೊಡಲು ಸಾಧ್ಯ ಎನ್ನುವ ಉಡಾಫೆಯಿತ್ತು. ಎರಡು ಮಕ್ಕಳ ತಾಯಿಯಾಗಿದ್ದ ನಾನು ಮತ್ತು ನನ್ನಂತೆ ಸೇರಿದ್ದ ಇತರೆ ಹತ್ತು ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು ಪಡೆವ ಗುರಿಯಿಟ್ಟವರು. ಆ ಮೂಲಕ ಆತ್ಮವಿಶ್ವಾಸವನ್ನು ಮತ್ತು ಗಳಿಕೆಯನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರವಿತ್ತು. ಎಲ್ಲರೂ ‘ವಯಸ್ಸಾದ’ ಅಥವಾ ಈ ದೇಶದ ಭಾಷೆಯಲ್ಲಿ ‘ಮೆಚೂರ್’ ವಿದ್ಯಾರ್ಥಿಗಳೇ. ಒಟ್ಟಾರೆ ಇಂತಹ ಹತ್ತು ಜನರಿದ್ದೆವು. ನಮ್ಮದೇ ಒಂದು ತರಗತಿ! ಎರಡು ವರ್ಷಗಳ ಈ ಕಲಿಕೆಗಾಗಿ ಭಾರತದ ನಾನು, ಭಾರತೀಯ ಮೂಲದ ಇಲ್ಲಿಯೇ ಪದವಿ ಪಡೆದ ಇಬ್ಬರು, ಸಿರಿಯಾ ಮತ್ತು ಅರಬ್ಬೀ ದೇಶಗಳಿಂದ ಬಂದ ಮೂವರು, ಗ್ರೀಸ್ ನ ಒಬ್ಬ ವಿದ್ಯಾರ್ಥಿ, ರಶಿಯಾದ ಮತ್ತೊಬ್ಬ ಮತ್ತು ಇನ್ನಿಬ್ಬರು ಇಂಗ್ಲೀಷರು ಒತ್ತಟ್ಟಿಗೆ ಬಂದಿದ್ದೆವು. ನನಗಿಂತ ಹತ್ತು ವರ್ಷ ದೊಡ್ಡವರು ಕೂಡ ಇದ್ದದ್ದು ನನಗೆ ಈ ನಿರ್ಧಾರಕ್ಕೆ ಬರಲು ನಾನು ತೀರ ತಡಮಾಡಲಿಲ್ಲ ಎಂಬ ಸಮಾಧಾನ ಕೊಟ್ಟಿದ್ದವು.

(ಆಕ್ಸ್ ಫರ್ಡ್ ಯೂನಿವರ್ಸಿಟಿ)

ಅದುವರೆಗೆ ಮ್ಯಾಂಚೆಸ್ಟರ್ ಎನ್ನುವ ಹೆಸರನ್ನು ಫುಟ್ಬಾಲ್ ಆಟದ ಕಾರಣಕ್ಕೆ ಬಾರಿಬಾರಿ ಕೇಳಿದ್ದೆ. ಮ್ಯಾಂಚೆಸ್ಟರ್ ಯುನೈಟೆಡ್ ಮತ್ತು ಮ್ಯಾಂಚೆಸ್ಟರ್ ಸಿಟಿ ಫುಟ್ಬಾಲ್ ಕ್ಲಬ್ ಗಳು ಈ ದೇಶದಲ್ಲಿ ಹೆಸರುಮಾಡಿದ ತಂಡಗಳು. ಇಲ್ಲಿನ ಓಲ್ಡ್ ಟ್ರಾಫರ್ಡ್ ಫುಟ್ಬಾಲ್ ಸ್ಟೇಡಿಯಂ ಜಗತ್ತಿನಲ್ಲೇ ಹೆಸರು ಮಾಡಿದ ಜಾಗ. ಇದನ್ನು ನೋಡಲು ಬರುವ ಯಾತ್ರಾರ್ತಿಗಳು ಬಹಳ ಜನ. 108 ವರ್ಷ ಹಳೆಯ ಈ ಫುಟ್ಬಾಲ್ ಸ್ಟೇಡಿಯಂ ಲಂಡನ್ ಹತ್ತಿರದ ವೆಂಬ್ಲಿ ಸ್ಟೇಡಿಯಂ ಅನ್ನು ಬಿಟ್ಟರೆ ಈ ದೇಶದ ಅತಿದೊಡ್ಡ ಸ್ಟೇಡಿಯಂ. ಇದರಲ್ಲಿ ಒತ್ತಟ್ಟಿಗೆ 74,994 ಜನರು ಕೂತು ಪಂದ್ಯವನ್ನು ನೋಡಬಹುದು. 1996 ರಲ್ಲಿ ಇಲ್ಲಿ ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿ ನಡೆದಿತ್ತು. 2002 ರ ಕಾಮನ್ ವೆಲ್ತ್ ಆಟಗಳು, 2012ರಲ್ಲಿ ಒಲಿಂಪಿಕ್ಸ್ ಫುಟ್ಬಾಲ್ ಪಂದ್ಯಾವಳಿಗಳು ಕೂಡ ನಡೆದಿದ್ದವು. ಫುಟ್ಬಾಲ್ ಈ ದೇಶದ ಅತಿ ಜನಪ್ರಿಯ ಕ್ರೀಡೆ. ಈ ಕಾರಣ ಫುಟ್ಬಾಲ್ ಆಸಕ್ತರಿಗೆ ಮ್ಯಾಂಚೆಸ್ಟರ್ ಕಾಶಿಯಿದ್ದಂತೆ.

ಈ ಮಹಾನಗರದ ನಾಲ್ಕು ಮಾರ್ಗದಲ್ಲಿ ಓಡಾಡುವ ಬಸ್ಸುಗಳು ಎಲ್ಲರಿಗೂ ಉಚಿತ ಅಂತ ತಿಳಿದು ಭಾರೀ ಆಶ್ಚರ್ಯವಾಗಿತ್ತು. ಆದರೆ ನಮ್ಮ ಕಾಲೇಜಿದ್ದ ಮಾರ್ಗಕ್ಕೆ ನಾವು ಹಣ ತೆರಬೇಕಿತ್ತು. ಇಲ್ಲಿನ ವಿದ್ಯಾರ್ಥಿಗಳಿಗಾಗಿಯೇ ಒಬ್ಬ ವೈದ್ಯರೂ, ದಂತ ವೈದ್ಯರೂ ಕ್ಯಾಂಪಸ್ಸಿನಲ್ಲಿದ್ದರು. ಕ್ಯಾಂಪಸ್ಸಿನ ಎಲ್ಲೆಡೆ ಗರ್ಭ ನಿರೋಧಕಗಳನ್ನು ಬಿಟ್ಟಿಯಾಗಿ ರಾಶಿ ರಾಶಿ ಇಟ್ಟಿರುವುದನ್ನು ನೋಡಿ ಆಚ್ಚರಿಯಾಗಿತ್ತು.  ನಾನು ಸೇರಿದ್ದ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ 1824 ರಲ್ಲಿ ಶುರುವಾದ ಹಳೆಯ ಕಟ್ಟಡಗಳಿದ್ದ ಜಾಗ. ಜೊತೆಗೆ ಹಲವು ಹೊಸ ಕಟ್ಟಡಗಳು ಸೇರಿಕೊಂಡಿದ್ದವು. ಇಲ್ಲಿನ ಸುಸಜ್ಜಿತ ಲೈಬ್ರರಿಯ ಕಟ್ಟಡ ಅತ್ಯಾಧುನಿಕವಾದ್ದು. ದೇಶ ವಿದೇಶಗಳ ನಾನಾ ರೀತಿಯ ವಿದ್ಯಾರ್ಥಿಗಳು, ನಾನಾ ವಿಭಾಗಗಳಲ್ಲಿ ಓದುತ್ತಿದ್ದರು. ನಡುವೆ ನಾವು ಬಹುಬೇಗ ಒಂದಾಗಿ ಕಳೆದು ಹೋದೆವು. ವಯಸ್ಸಾದ ನಂತರ ಕಲಿಯುವ ಶಿಕ್ಷಣ, ವಿದೇಶಿ ವ್ಯವಸ್ಥೆ ಮತ್ತು ಬಹು ಭಿನ್ನವಾದ ಮನಸ್ಥಿತಿಯಲ್ಲಿ ಮತ್ತೆ ವಿದ್ಯಾರ್ಥಿಗಳಾಗುವ ಮೋಜು ಬಹಳ ಬೇರೆಯಾಗಿರುತ್ತದೆ!

ಪ್ರಪ್ರಥಮ ಬಾರಿಗೆ ವಿಶ್ವವಿದ್ಯಾಲಯವೊಂದಕ್ಕೆ ನಾನು ಸೇರಿದ್ದು ಧಾರವಾಡದಲ್ಲಿ. ಈ ಊರಿಗೆ ಸಂಬಂಧಿಸಿದಂತೆ ಮನಸ್ಸಲ್ಲಿ ಒಂದು ಹಿತವಾದ ನೆನಪೂ ಇತ್ತು. ರಾಜ್ಯಮಟ್ಟದ ದ್ವಿತೀಯ ಮಕ್ಕಳ ಸಾಹಿತ್ಯ ಸಮ್ಮೇಳನವೊಂದು ಇಲ್ಲಿ ನಡೆದಿತ್ತು. ಇದರ ಮಕ್ಕಳ ಸಮ್ಮೇಳನದ ಅಧ್ಯಕ್ಷೆಯಾಗಿ ತುಮಕೂರಿನಿಂದ ನಾನು ಆಯ್ಕೆಯಾಗಿ ಹೋಗಿದ್ದೆ. ಶಿವರಾಮ ಕಾರಂತರು, ಸಿಸು ಸಂಗಮೇಶ, ಸಿದ್ದಯ್ಯ ಪುರಾಣಿಕರು ಇನ್ನಿತರ ಹಲವಾರು ಹಿರಿಯ ಸಾಹಿತಿಗಳು, ಮುಖ್ಯಮಂತ್ರಿ ಬೊಮ್ಮಾಯಿ, ಸಚಿವರಾದ ಯಾವಗಲ್, ಗೋವಿಂದೇ ಗೌಡ ಇನ್ನಿತರ ರಾಜಕಾರಣಿಗಳು, ವ್ಯವಸ್ಥಾಪಕರ ನಡುವೆ ಸಾಹಿತ್ಯದ ಬಗ್ಗೆ ಏನೂ ತಿಳಿಯದಿದ್ದ 12-13 ವರ್ಷದ ನಾನು ಭರ್ಜರಿ ಭಾಷಣ ಬಿಗಿದು ಬಚಾವಾಗಿದ್ದೆ! ಧಾರವಾಡದ ಕಾಲೇಜಿಗೆ ಸೇರಿದ ಸಮಯದಲ್ಲಿ ಪತ್ರ ಮಿತ್ರರಾಗಿ ಉಳಿದಿದ್ದ ಮಕ್ಕಳ ಸಮ್ಮೇಳನವನ್ನು ಸಂಘಟಿಸಿದ ಜಗದೀಶ ಮಳಗಿ ಎನ್ನುವವರನ್ನು ಬಿಟ್ಟರೆ ನನಗೆ ತಿಳಿದವರು ಯಾರೂ ಇರಲಿಲ್ಲ. ಹೊರರಾಜ್ಯದ ವಿದ್ಯಾರ್ಥಿಗಳಿಂದ ಎಲ್ಲೆಲ್ಲೂ ರಾಗಿಂಗ್ ನಡೆದಿತ್ತು. ಮನೆಯನ್ನು ಧೈರ್ಯವಾಗಿ, ಖುಷಿಯಿಂದಲೇ ಬಿಟ್ಟು ಹೋಗಿದ್ದರೂ, ಧಾರವಾಡದ ಬಗ್ಗೆ ಪ್ರೀತಿಯಿದ್ದರೂ ಅಲ್ಲಿನ ಕಾಲೇಜಿನ ವಾತಾವರಣ ಆ ಕಾಲದಲ್ಲಿ ಅತ್ಯಂತ ಅವ್ಯವಸ್ಥಿತವಾಗಿತ್ತು. ಸಿಕ್ಕಾಪಟ್ಟೆ ಹಣವಿದ್ದ ಇತರೆ ರಾಜ್ಯಗಳ ಸಿರಿವಂತ ವಿದ್ಯಾರ್ಥಿಗಳ ನಡುವೆ ಸರಕಾರೀ ಸೀಟಿನಲ್ಲಿ ಹೋಗಿದ್ದವರು ಹೆಚ್ಚಿರಲಿಲ್ಲ. ಆಗ ಅಲ್ಲಿದ್ದ ಸೊಳ್ಳೆಗಳು, ಇರದಿದ್ದ ವಿದ್ಯಾರ್ಥಿನಿಲಯ, ಜೊತೆಯಲ್ಲಿದ್ದವರ ಹುಚ್ಚಾಪಟ್ಟೆ ವರ್ತನೆ ನೋಡಿ ಮನೆಯ ಹೊರತಾದ ಪ್ರಪಂಚದ ಅರಿವಾಗಿತ್ತು. ಹಲವು ಹಳೆಯ ಮನೆಗಳನ್ನು ಬಾಡಿಗೆ ಪಡೆದು ವಿದ್ಯಾರ್ಥಿ ನಿಲಯಗಳಂತೆ ಉಪಯೋಗಿಸುತ್ತಿದ್ದರು. 13-14 ಜನಕ್ಕೆ ಒಂದೇ ಸಂಡಾಸು! ಹೋದ ಎರಡೇ ತಿಂಗಳಲ್ಲಿ ಸೊಳ್ಳೆಗಳ ಕಡಿತದಿಂದ ಮಲೇರಿಯ ಮತ್ತು ಪ್ಯಾರಾ ಟೈಫಾಯ್ಡ್ ಎರಡೂ ಆದ ಕಾರಣ ಇನ್ನೊಬ್ಬ ವಿದ್ಯಾರ್ಥಿಯೊಡನೆ ಮ್ಯೂಚುಯಲ್ ಟ್ರಾನ್ಸ್ ಫರ್ ಪಡೆದು ಬೆಂಗಳೂರಿಗೆ ಬಂದಿದ್ದೆ.

(ಎತಿಹ್ಯಾಡ್ ಫುಟ್ಬಾಲ್ ಕ್ರೀಡಾಂಗಣ)

ನಾನು ಸೇರಿದ್ದ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ 1824 ರಲ್ಲಿ ಶುರುವಾದ ಹಳೆಯ ಕಟ್ಟಡಗಳಿದ್ದ ಜಾಗ. ಜೊತೆಗೆ ಹಲವು ಹೊಸ ಕಟ್ಟಡಗಳು ಸೇರಿಕೊಂಡಿದ್ದವು. ಇಲ್ಲಿನ ಸುಸಜ್ಜಿತ ಲೈಬ್ರರಿಯ ಕಟ್ಟಡ ಅತ್ಯಾಧುನಿಕವಾದ್ದು. ದೇಶ ವಿದೇಶಗಳ ನಾನಾ ರೀತಿಯ ವಿದ್ಯಾರ್ಥಿಗಳು, ನಾನಾ ವಿಭಾಗಗಳಲ್ಲಿ ಓದುತ್ತಿದ್ದರು. ನಡುವೆ ನಾವು ಬಹುಬೇಗ ಒಂದಾಗಿ ಕಳೆದು ಹೋದೆವು.

ಬೆಂಗಳೂರಿನ ಸರ್ಕಾರೀ ಕಾಲೇಜಿನ ವಾತಾವರಣಕ್ಕೆ ಬಹುಬೇಗ ಹೊಂದಿಕೊಂಡಿದ್ದೆ. ಇಲ್ಲಿ ಎಲ್ಲರೂ ನನ್ನಂತವರೇ. ಆದರೆ ಕಾಲೇಜಿನಲ್ಲಿ ಪಾಠಗಳು ನಡೆಯುತ್ತಿದ್ದುದು ಬಹಳ ಕಡಿಮೆ. ವಿದ್ಯಾರ್ಥಿಗಳೇ ಮುಗಿಬಿದ್ದು ಓದಿಕೊಳ್ಳುತ್ತಿದ್ದರು. ಕಾಲೇಜಿನಲ್ಲಿ ಯಾರಾದರೂ ವಿದ್ಯಾರ್ಥಿಗಳು ಅಲ್ಪ ಸ್ವಲ್ಪ ಜೋರಾಗಿ ಮಾತಾಡಿಕೊಂಡು ಸಂತೋಷವಾಗಿದ್ದರೆ ಅವರನ್ನು ಬೋಧಕರು ಪರಿಕ್ಷೆಗಳಲ್ಲಿ ನಪಾಸು ಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಎಲ್ಲ ಹೆಣ್ಣು ಮಕ್ಕಳು ಸೀರೆಯಲ್ಲೇ ಕಾಲೇಜಿಗೆ ಬರಬೇಕು ಎನ್ನುವ ನಿಯಮವನ್ನೂ ಜಾರಿಗೆ ತರಲು ಒಬ್ಬರು ಪ್ರಯತ್ನಿಸಿದ್ದರು. ಒಮ್ಮೆ ಹೊರಗಡೆಯಿಂದ ಬಂದ ಪರೀಕ್ಷಕನೊಬ್ಬ ಮೌಖಿಕ ಪರೀಕ್ಷೆ ತೆಗೆದುಕೊಳ್ಳುವಾಗ ಸಿಗರೇಟು ಸೇದುತ್ತ ಹೊಗೆಯನ್ನು ನನ್ನ ಗೆಳತಿಯ ಮುಖಕ್ಕೆ ಬೇಕೆಂತಲೇ ಗುರಿಯಿಟ್ಟು ಉಗುಳಿ ಅವಳನ್ನು ಅಳಿಸಿ ಕಳಿಸಿದ್ದ. ನಮ್ಮದೇ ಕಾಲೇಜಿನ ಆ ವಿಭಾಗದ ಮುಖ್ಯಸ್ಥ ಸುಮ್ಮನೇ ಕುಳಿತಿದ್ದದ್ದು ದೊಡ್ಡ ಗುಲ್ಲಾಗಿತ್ತು. ಕೊನೆಯ ವರ್ಷದ ಪರೀಕ್ಷೆಯ ಹೊತ್ತಿಗೆ ಏನಕ್ಕೂ ಬಾರದಿದ್ದ ನಮ್ಮನ್ನು ತಮ್ಮ ಮುಂದಿನ ಸವಾಲುಗಳಂತೆ ಕೂಡ ಅಲ್ಲಿದ್ದ ಲೆಕ್ಚರರ್ ಗಳು ನೋಡುತ್ತಿದ್ದರು. ತಮ್ಮ ಏರಿಯಾದ ಹುಡುಗನೇ ಆದರೆ, ಪಾಸಾದ ನಂತರ ಅವನೆಲ್ಲಿ ಒಂದು ಕ್ಲಿನಿಕ್ಕು ತೆಗೆದು ಸ್ಪರ್ಧೆಗಿಳಿಯುತ್ತಾನೋ ಎಂಬ ಕಾರಣಕ್ಕೆ ನಪಾಸು ಮಾಡುತ್ತಿದ್ದರು. ಕೆಲವು ಬಾರಿ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ತಮ್ಮ ಪಾದರಕ್ಷೆಗಳನ್ನು ರಿಪೇರಿ ಮಾಡಿ ತರಲು ಕಳಿಸುತ್ತಿದ್ದರು. ಉತ್ತರ ಭಾರತೀಯ ವಿದ್ಯಾರ್ಥಿಗಳನ್ನು ಕನ್ನಡ ಭಾಷೆ ಬರದ ಕಾರಣ ಎಲ್ಲರ ಮುಂದೆ ’ ‘ಏ ಕತ್ತೆ’ ಎಂತಲೇ ಕೂಗಿ ಮಾತಾಡಿಸುವ ವಿಲಕ್ಷಣ ಸುಖವನ್ನೂ ಪಡೆಯುತ್ತಿದ್ದರು. ಅದಕ್ಕೆ ನಗುವ ಪಟಾಲಂ ಇವರ ಮೆಚ್ಚಿನ ಶಿಷ್ಯರಾಗಿದ್ದರು. ಹಾಗಾಗಿ ಇಂತಹ ‘ಮೆಡುಸ್ಸಾ’ ಗಳ ಕಣ್ಣಿಗೆ ಬೀಳದಿರಲು ಎಲ್ಲ ಪ್ರಯತ್ನಗಳನ್ನು ಮಾಡಬೇಕಿತ್ತು. ಹಾಗಾಗಿ ನಮ್ಮೆಲ್ಲ ಚಟುವಟಿಕೆಗಳು ನಮ್ಮ ಕಾಲೇಜಿನ ಹೊರಗೇ ನಡೆಯುತ್ತಿದ್ದುದು. ನನ್ನ ಗರಿಗಳು ಬಿಚ್ಚಿ ಹಾರಾಡಿದ್ದು ಕಾಲೇಜಿನ ಹೊರಗಿನ ಬೆಂಗಳೂರಿನಲ್ಲಿ. ಅದಕ್ಕೆ ಹೇರಳ ಅವಕಾಶಗಳೂ ಇದ್ದವು.

ಈ ಕಾಲೇಜಿನಲ್ಲಿ ಭೋದಕರ ನಡುವೆಯೇ ಯಾರು ಹೆಚ್ಚೆಂಬ ಸಮರಗಳು ನಡೆಯುತ್ತಿದ್ದುದೂ ಇತ್ತು. ಹೀಗೊಮ್ಮೆ ‘ಥಟ್ಟಂತ ಹೇಳಿ’ ಪ್ರಸಿದ್ಧಿಯ ಡಾ. ಸೋಮೇಶ್ವರರ ಮೂಲಕ ದೂರದರ್ಶನಕ್ಕೆ ಯಾರನ್ನಾದರೂ ಒಬ್ಬರು ಹಿರಿಯ ವೈದ್ಯರನ್ನು ಸಂದರ್ಶಿಸುವ ಅವಕಾಶ ಸಿಕ್ಕಿತು. ನಾನು ನನ್ನ ನೆಚ್ಚಿನ ಭೋದಕರಾದ ಫೈಝುದ್ದೀನ್ ಎಂಬುವವರನ್ನು ಕೇಳಿದೆ. ಇವರಿಗೆ ಭಾಷೆ, ಯೋಗ, ಆಧ್ಯಾತ್ಮ ಎಲ್ಲದರ ಬಗ್ಗೆ ಅರಿವಿತ್ತು. ಭಾರೀ ಖುಷಿಯಿಂದಲೇ ಅವರು ಒಪ್ಪಿಕೊಂಡರು. ಆದರೆ ಅದರ ಮುಂದಿನ ವಾರ ‘ಶೆಟ್ಟಿ’ ಎನ್ನುವವರು ಹೇಳಿಕೊಡುತ್ತಿದ್ದ ವಿಷಯದ ಬಗ್ಗೆ ಪರೀಕ್ಷೆಯಿತ್ತು. ಹಾಗಾಗಿ ‘ಫೈಝುದ್ದೀನ್’ ರಿಗೆ ಶೆಟ್ಟಿಗೆ ಈ ಸಂದರ್ಶನದ ವಿಚಾರದ ಬಗ್ಗೆ ಏನೂ ತಿಳಿಸಬೇಡಿ ಎಂದು ಮನವಿಮಾಡಿಕೊಂಡಿದ್ದೆ. ಮರುದಿನ ದೂರದರ್ಶನ ಕೇಂದ್ರವನ್ನು ತಲುಪಿದಾಗ ನನಗೆ ಆಘಾತ ಕಾದಿತ್ತು. ‘ಈ’ ಮೇಷ್ಟ್ರು, ‘ಆ’ ಮೇಷ್ಟ್ರನ್ನು ಜೊತೆಗೇ ಕರೆತಂದಿದ್ದರು.! ಜೊತೆಗೆ ‘ಗೌಪ್ಯವಾಗಿಡಿ’ ಎಂದ ವಿಚಾರ ಕೂಡ ಶೆಟ್ಟಿಗೆ ಗೊತ್ತಿರುತ್ತದೆ ಎಂಬುದನ್ನು ತಿಳಿಯಲು ತಡವಾಗಲಿಲ್ಲ. ಪರೀಕ್ಷೆಯಲ್ಲಿ ಹೇಗೆ ಮಾಡಿದರೂ ಫೇಲ್ ಆಗುತ್ತೇನೆಂದುಕೊಂಡಿದ್ದೆ ಆದರೆ ಪಾಸಾದ ನಂತರವೇ ಸಮಾಧಾನವಾಗಿದ್ದು. ಪದವಿ, ಪ್ರತಿಷ್ಠೆ, ರಾಜಕೀಯಗಳೆ ತುಂಬಿದ್ದ ಈ ಕಾಲೇಜಿಗೆ ಈ ವರ್ಷ ಮತ್ತೆ ಭೇಟಿ ನೀಡಿದಾಗಲೂ ಯಾವ ಪರೀಕ್ಷಕರು ಎಷ್ಟು ದುಡ್ಡು ತಗೊಳ್ಳುತ್ತಾರೆ, ವಿದ್ಯಾರ್ಥಿಗಳ ಮೇಲೆ ಹೇಗೆ ಗುಂಪು ಕಟ್ಟಿ ದ್ವೇಷ ಸಾಧಿಸಿ ನಪಾಸು ಮಾಡುತ್ತಾರೆ ಎಂಬುದರ ಬಗ್ಗೆ ಅಲ್ಲಿ ಕೆಲಸ ಮಾಡುತ್ತಿರುವವರಿಂದಲೇ ಕೇಳಿ ‘ಇವರೆಲ್ಲ ಯಾವಾಗ ಸುಧಾರಿಸುತ್ತಾರೆ’ ಎಂದು ಅನ್ನಿಸದೆ ಇರಲಿಲ್ಲ!

(ಸಂಗೀತ ಅಭ್ಯಾಸ ಮಾಡುತ್ತಿರುವ ಚರ್ಚ್ ಸೇವಾರ್ಥಿಗಳು)

ಇಂತಹ ಹಿನ್ನೆಲೆಯ ಸರ್ಕಾರೀ ಕಾಲೇಜುಗಳ ನಮ್ಮಂತ ವಿದ್ಯಾರ್ಥಿಗಳಿಗೆ ವಿದೇಶದ ವಿಶ್ವವಿದ್ಯಾಲಯಗಳು ಅದೆಷ್ಟು ಅಚ್ಚರಿಯಾಗಿ ಕಂಡಿರಬಹುದು ಎನ್ನುವುದನ್ನು ಹೇಳಲೆಂದೇ ಇದನ್ನೆಲ್ಲ ಹೇಳಿದ್ದು. ಅದರ ಜೊತೆಗೆ ಇಂತಹ ವಿಶ್ವವಿದ್ಯಾಲಯಗಳಲ್ಲಿ ಓದಿ ನಿಭಾಯಿಸಿಕೊಂಡು ಹೊರಬಂದ ನಮ್ಮಂತವರಿಗೆ ವಿದೇಶದ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯ ಯಾವ ಮಾಹಾ ಎನ್ನುವ ಅಣಕವೇ ನನ್ನಲ್ಲಿ ಕುಚೋದ್ಯದ ನಗು ಬರಿಸಿತ್ತು!

ವಿಶ್ವವಿದ್ಯಾಲಯದಲ್ಲಿ ಪಾಠಗಳು ಚೆನ್ನಾಗಿಯೇ ನಡೆಯುತ್ತಿದ್ದವು. ನಾವು ಅನುಭವಸ್ಥ ವೈದ್ಯರುಗಳೇ ಆಗಿದ್ದ ಕಾರಣ ಮತ್ತು ಜೊತೆಗೆ ಈ ವಿಚಾರದ ಬಗ್ಗೆ ಈಗಾಗಲೇ ಹಲವು ಕೋರ್ಸ್ ಗಳನ್ನು ಮಾಡಿದ್ದ ಕಾರಣ ಓದಬೇಕಾದ ಮುಖ್ಯ ವಿಷಯದ ಬಗ್ಗೆ ತೊಂದರೆಯಿರಲಿಲ್ಲ. ಆದರೆ ಹಲವು ಅಂಕಿ-ಅಂಶಗಳನ್ನು ಕಲೆಹಾಕುವುದು, ಮಹಾಪ್ರಭಂದವನ್ನು ರಚಿಸುವುದು ಇವೆಲ್ಲ ನನಗೆ ತಿಳಿಯದ ವಿಚಾರಗಳು. ಹಾಗಾಗಿ ಅವನ್ನೆಲ್ಲ ಕಲಿತದ್ದಾಯ್ತು. ಆದರೆ ನಿಜವಾಗಿ ನನಗೆ ಆಶ್ಚರ್ಯವಾದದ್ದು ಬೇರೆ ಕಾರಣಗಳಿಗೆ. ನಮ್ಮ ತರಗತಿಯ ಮುಖ್ಯಸ್ಥ ಒಬ್ಬ ಸ್ಕಾಟ. ಪ್ರತಿ ಕಾಲೇಜಿನಲ್ಲಿಯೂ ಒಬ್ಬರಲ್ಲ ಒಬ್ಬರು ವಿಚಿತ್ರ ಸ್ವಭಾವದ ಹುಚ್ಚು ಪ್ರೊಫೆಸರ್/ ಭೋದಕರು ಇರುವಂತಯೆ ನಮಗೆ ಸಿಕ್ಕಿದ್ದ ಈತ ವಿಚಿತ್ರ ಮನುಷ್ಯನಾಗಿದ್ದ. ಮಾತು ಮಾತಿಗೆ ನಮ್ಮನ್ನು ಭೀಕರವಾಗಿ ಹೆದರಿಸುವುದು, ಬೈಯುವುದು ಎಲ್ಲ ಇತ್ತು. ಇದನ್ನೆಲ್ಲ ದೊಡ್ಡ ಮನರಂಜನೆ ಅಂತ ತಿಳಿದ ನಾವೆಲ್ಲ ಮನಸ್ಸಲ್ಲೇ ನಕ್ಕು ಸುಮ್ಮನಾಗುತ್ತಿದ್ದೆವು. ಬೆಣ್ಣೆಯಲ್ಲಿ ಕೂದಲು ತೆಗೆಯುವಂತೆ ಮಾತನಾಡುವ ಈ ದೇಶದಲ್ಲಿ ಇಂಥವರು ಹೇಗೆ ಬದುಕಬಲ್ಲರು ಎಂದು ನನಗೆ ಅಚ್ಚರಿಯಾಗುತ್ತಿತ್ತು. ಉದಾಹರಣೆಗೆ:

‘You should get this right. If not I will hang you all by your private parts” ಎಂದು ಇಡೀ ಗುಂಪಿಗೆ ಗುಡುಗಿ ಬಚಾವಾಗಬಲ್ಲ ಇಂತಹವರನ್ನು ನಾನು ಈ ದೇಶದಲ್ಲಿ ನೋಡಿರಲೇ ಇಲ್ಲ. ಆತನ ಬಾಯಿ, ಆತನ ದೌರ್ಬಲ್ಯವೂ ಆಗಿತ್ತು. ಹಲವು ತಿಂಗಳ ನಂತರ ವೇಳಾಪಟ್ಟಿ ಪದೇ ಪದೇ ಬದಲಾಗಹತ್ತಿತು. ಈ ರೀತಿಯ ವೇಳಾಪಟ್ಟಿಯನ್ನು ವಿರೋಧಿಸಿ ನಾನು ಅಲ್ಲಿದ್ದ ಯುವ ಗುಮಾಸ್ತೆಗೆ ಮೇಲ್ ಕಳಿಸಿದೆ. ನಿಗಧಿತ ದಿನಗಳನ್ನು ಹೊರತು ಪಡಿಸಿ ಕಾಲೇಜಿಗೆ ತಕ್ಷಣ ಹಾಜರಾಗಲು ಮೊದಲೇ ಬುಕ್ ಆಗಿರುವ ರೋಗಿಗಳನ್ನು ಮುಂದೂಡುವುದು ನನಗೆ ತೊಂದರೆಯಾಗುತ್ತದೆ ಎಂಬುದು ನನ್ನ ವಕ್ಕಣೆಯಾಗಿತ್ತು. ಈ ವರದಿ ಇವನಿಗೆ ತಲುಪಿತ್ತು. ಬಹುಶಃ ಅದರಲ್ಲಿ ಗುಮಾಸ್ತೆಯ ಕೈವಾಡ ಏನೂ ಇರಲಿಲ್ಲ. ಆದರೆ ಅದು ಈತನ ವೇಳಾಪಟ್ಟಿಯಾದ್ದರಿಂದ ಇವನಿಗೆ ಕಿರಿ ಕಿರಿಯಾಗಿತ್ತು. ನಾನು ಬರೆದದ್ದು ಎರಡೇ ಸಾಲುಗಳು. ಆದರೆ ಈತ ತರಗತಿಯ ನಂತರ ಎಲ್ಲರನ್ನು ಹೊರಗೆ ಕಳಿಸಿ ನನಗೆ ಮಾತ್ರ ಹತ್ತು ನಿಮಿಷ ‘ಕ್ಲಾಸ್’ ತಗೊಂಡ. ನಾನೂ ತೋಳೇರಿಸಿದೆ. ನನ್ನ ಮುಂದಿನ ಮೇಲ್ ವಿದ್ಯಾಲಯದ ಉಪಕುಲಪತಿಗಳಿಗೆ ಹೋಯಿತು. ಇಬ್ಬರನ್ನೂ ಉಪಕುಲಪತಿ ಕರೆದು ಮಾತಾಡಿಸಿದ. ಆತನಿಗೆ ಈ ಸ್ಕಾಟನ ಬಾಯಿಯ ಬಗ್ಗೆ ಚೆನ್ನಾಗಿ ಅರಿವಿದ್ದ ಕಾರಣ ಮತ್ತು ಬ್ರಿಟನ್ ಆದ ಕಾರಣ ಇದರಿಂದ ನನಗೆ ಯಾವ ತೊಂದರೆಯೂ ಆಗಲಿಲ್ಲ. ಹತ್ತು ಜನ ವಿದ್ಯಾರ್ಥಿಗಳಲ್ಲಿ ಮೊಟ್ಟ ಮೊದಲ ಪ್ರಬಂಧವನ್ನು ನಾನು ಮುಗಿಸಿಕೊಟ್ಟೆ. ಬೇಕಿದ್ದ ಹಲವು ಕೇಸುಗಳನ್ನು ಅವರದೇ ಆಸ್ಪತ್ರೆಯಲ್ಲಿ ಮುಗಿಸಿ ಒಪ್ಪಿಸಿದೆ. ಎರಡು ವರ್ಷಗಳ ಕೊನೆಯಲ್ಲಿ ಹತ್ತು ಜನರಲ್ಲಿ ಪಾಸಾದ ಐದು ವಿದ್ಯಾರ್ಥಿಗಳಲ್ಲಿ ನಾನು ಕೂಡ ಒಬ್ಬಳಾಗಿದ್ದೆ! ನಮ್ಮ ದೇಶದಲ್ಲಿಯೇ ಹೆಚ್ಚು ಅಡಗುವ ನಮ್ಮ ಧ್ವನಿಗಳು, ನ್ಯಾಯ ಹೆಚ್ಚಿರುವ ದೇಶಗಳಲ್ಲಿ ಹೇಗೆ ಶಕ್ತಿಯನ್ನು ಪಡೆಯುತ್ತವೆ ಎಂಬುದಕ್ಕೆ ಇದು ಉದಾಹರಣೆಯೂ ಹೌದು.

(ಮ್ಯಾಂಚೆಸ್ಟರ್ ನಗರ)

ಭಾರತಕ್ಕೂ, ಬ್ರಿಟನ್ನಿಗೂ ಮತ್ತು ವಿದ್ಯಾಭ್ಯಾಸಕ್ಕೂ ನೂರಾರು ವರ್ಷಗಳ ನಂಟಿದೆ. ಸ್ವಾತಂತ್ರ್ಯಾ ಪೂರ್ವ ಭಾರತದಲ್ಲಿ , ಸ್ವತಂತ್ರ ಬಂದ 70 ವರ್ಷಗಳ ನಂತರವೂ ಮುಂದುವರೆದ ಹೊರದೇಶಗಳಲ್ಲಿ ಓದುವುದು, ಕಲಿಯುವುದು, ತರಬೇತಿ ಹೊಂದುವುದು ಎಂದರೆ ಅದು ದೊಡ್ಡ ಅವಕಾಶವೇ. ಈ ಹಂಬಲ ಭಾರತೀಯರಲ್ಲಿ ಎಷ್ಟಿತ್ತೆಂದರೆ 1999 ರ ನಂತರ ಕೆಲವೊಂದು ವರ್ಷಗಳಲ್ಲಿ ವಿದ್ಯಾರ್ಥಿ ವಲಸೆ 123% ರವರೆಗೆ ಏರುಮುಖವಾದ ಮಾಹಿತಿಯಿದೆ. ಭಾರತೀಯ ವಲಸೆ ವಿದ್ಯಾರ್ಥಿಗಳಿಂದ ಪ್ರತಿವರ್ಷ 2.3 ಬಿಲಿಯನ್ ಪೌಂಡುಗಳ ವಹಿವಾಟು ನಡೆಯುತ್ತಿತ್ತಂತೆ. ಗಾಂಧೀಜಿ, ನೆಹರೂ, ವಲ್ಲಭಬಾಯಿ ಪಟೇಲ್, ಅಂಬೇಡ್ಕರ್, ಇಂದಿರಾ ಗಾಂಧಿ, ಮನ್ ಮೋಹನ್ ಸಿಂಗ್, ಅನಿಲ್ ಅಂಬಾನಿ, ರತನ್ ಟಾಟ, ಬಜಾಜ್, ಸಲ್ಮಾನ್ ರಷ್ದೀ, ಬರ್ಕಾ ದತ್ತ ಹೀಗೆ ಇಲ್ಲಿ ವಿದ್ಯೆ ಪಡೆದವರ ಉದ್ದ ಪಟ್ಟಿಯೇ ಇದೆ.

ಪದವಿಗಳಲ್ಲಿ ಇಲ್ಲಿನ ಬ್ರಿಟಿಷ್ ವಿದ್ಯಾರ್ಥಿಗಳ ಸಂಖ್ಯೆಯದೇ ಮೇಲುಗೈ ಆದರೂ, ಸ್ನಾತಕೋತ್ತರ ಪದವಿಯ 42% ವಿದ್ಯಾರ್ಥಿಗಳು ಯೂರೋಪಿನ ಹೊರಗಿನವರು. ಹೀಗೆ ಕಲಿಯಲು ಬರುವ ವಿದ್ಯಾರ್ಥಿಗಳಲ್ಲಿ ಚೈನಾದ ವಿದ್ಯಾರ್ಥಿಗಳ ಸಂಖ್ಯೆಯೇ ಅತಿ ಹೆಚ್ಚು. ನಂತರ ಭಾರತದವರದ್ದೇ ಮೇಲುಗೈ. ಆದರೆ 2012-13 ರ ನಂತರ ಚೈನಾದವರ ಸಂಖ್ಯೆ ಶೇಕಡ 14% ಹೆಚ್ಚಾದರೆ, ಭಾರತದ ವಿದ್ಯಾರ್ಥಿಗಳ ಸಂಖ್ಯೆ ಇದೇ ವರ್ಷದಿಂದ 26% ಇಳಿಮುಖವಾಗಿದೆ. ಇದಕ್ಕೆ ಕಾರಣಗಳು ಹಲವು. ಮೊದಲೆಲ್ಲ ಬ್ರಿಟನ್, ಅಮೆರಿಕಾ, ಆಸ್ಟ್ರೇಲಿಯ, ಕೆನಡ, ನ್ಯೂಜಿಲೆಂಡ್ ಎಂದು ಹೋಗುತ್ತಿದ್ದ ಭಾರತೀಯ ವಿದ್ಯಾರ್ಥಿಗಳು ಈಗ ಚೈನಾ ಮತ್ತು ಜರ್ಮನಿಗಳನ್ನು ತಮ್ಮ ಓದುವ ಜಾಗಗಳನ್ನಾಗಿ ಆರಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಬಲ್ಗೇರಿಯಾ, ಸ್ವೀಡನ್, ಚೆಕ್ ರಿಪಬ್ಲಿಕ್ ಗಳತ್ತ ಕೂಡ ತಮ್ಮ ಗಮನ ಹರಿಸಿದ್ದಾರೆ. ಜೊತೆಗೆ ಇಲ್ಲಿನ ಶಿಕ್ಷಣ ಪದ್ಧತಿಗಳು ಈಗ ಭಾರತ ಮತ್ತಿತರ ಕಡೆ ದೊರಕುತ್ತಿರುವುದು ಮತ್ತೊಂದು ಕಾರಣ. ಪದವಿ ಪಡೆದ ನಂತರ ಯೂರೋಪಿನ ಜನರು ಮಾತ್ರ ವೀಸಾ ಇಲ್ಲದೆ ಇಲ್ಲಿ ಉಳಿದು ಕೆಲಸ ಮಾಡಬಹುದು. ಭಾರತೀಯರಿಗೆ ಇದು ಕಷ್ಟವಾಗುತ್ತಿದ್ದುದು ಮತ್ತೊಂದು ಕಾರಣ. ಭಾರತದ ವಾಣಿಜ್ಯ ಮಟ್ಟ ಮುಂದುವರೆಯುತ್ತಿದ್ದು ಆಕರ್ಷಕ ಕೆಲಸ, ಸಂಬಳಗಳು ಭಾರತದಲ್ಲೇ ಸಿಗುತ್ತಿರುವುದು ಮತ್ತೊಂದು ಕಾರಣ. 2018 ರಲ್ಲಿ ಬ್ರಿಟನ್ ಭಾರತವನ್ನು ಅಪಾಯದ ಮಟ್ಟ ಹೆಚ್ಚು ಇರುವ ದೇಶದ ಪಟ್ಟಿಗೆ ಸೇರಿಸಿ ವಿದ್ಯಾರ್ಥಿಗಳ ವೀಸಾ ಮತ್ತು ಆರೋಗ್ಯ ವಿಚಾರಗಳ ಫೀಸನ್ನು ಮತ್ತಷ್ಟು ಹೆಚ್ಚಿಸಿರುವ ಕಾರಣ ಈ ಸಂಖ್ಯೆಯಲ್ಲಿ ಮತ್ತೆ ಇಳಿಮುಖ ಕಾಣುವ ಸಾಧ್ಯತೆಗಳಿವೆ.

ಹತ್ತು ಜನ ವಿದ್ಯಾರ್ಥಿಗಳಲ್ಲಿ ಮೊಟ್ಟ ಮೊದಲ ಪ್ರಬಂಧವನ್ನು ನಾನು ಮುಗಿಸಿಕೊಟ್ಟೆ. ಬೇಕಿದ್ದ ಹಲವು ಕೇಸುಗಳನ್ನು ಅವರದೇ ಆಸ್ಪತ್ರೆಯಲ್ಲಿ ಮುಗಿಸಿ ಒಪ್ಪಿಸಿದೆ. ಎರಡು ವರ್ಷಗಳ ಕೊನೆಯಲ್ಲಿ ಹತ್ತು ಜನರಲ್ಲಿ ಪಾಸಾದ ಐದು ವಿದ್ಯಾರ್ಥಿಗಳಲ್ಲಿ ನಾನು ಕೂಡ ಒಬ್ಬಳಾಗಿದ್ದೆ!

ಅತಿ ಹೆಚ್ಚು ದುಡ್ಡಿರುವ ಭಾರತೀಯರು ತಮ್ಮ ಮಕ್ಕಳನ್ನು ಇಲ್ಲಿಯೇ ಪದವಿಗಳಿಗೆ ಸೇರಿಸುವುದನ್ನು ನಾವು ನೋಡುತ್ತಿದ್ದೇವೆ. ಒಂದು ಒಪ್ಪಂದದ ಮೇಲೆ ಮಧ್ತ ಪ್ರಾಚ್ಯ ದೇಶಗಳು ಕೂಡ ತಮ್ಮ ಜನರನ್ನು ಇಲ್ಲಿಗೆ ಕಳಿಸಿ ತರಬೇತಿ ಪಡೆದು ತಮ್ಮ ದೇಶಗಳಿಗೆ ಮರಳಿ ಹೋಗಿ ಕಡಿಮೆಯೆಂದರೂ ಇಂತಿಷ್ಟು ವರ್ಷ ಎಂದು ಅವರಿಂದ ಕೆಲಸ ತೆಗೆಯುತ್ತಾರೆ.

ಇಲ್ಲಿನ ಕೇಂಬ್ರಿಡ್ಜ್, ಆಕ್ಸ್ ಫರ್ಡ್ ಮತ್ತು ಲಂಡನ್ ವಿಶ್ವವಿದ್ಯಾಲಯಗಳು ವಿಶ್ವ ವಿಖ್ಯಾತಿಯನ್ನು ಪಡೆದಿವೆ. ಇವೆಲ್ಲವೂ ಅತಿ ಹಳೆಯ ಕಟ್ಟಡಗಳನ್ನು ಹೊಂದಿದ ತಳುಕು ಬಳುಕಿಲ್ಲದ ಆದರೆ ಅಗಾಧ ಚರಿತ್ರೆಯನ್ನು ಹೊಂದಿದ ವಿಶ್ವವಿದ್ಯಾಲಯಗಳು. ಅಮೇರಿಕಾದ ಹಾರ್ವರ್ಡ್ ಮತ್ತು ಮಿಶಿಗನ್ ಯೂನಿವರ್ಸಿಟಿಗಳಿಗೆ ಹೋಲಿಸಿದರೆ ಅತಿ ಸಣ್ಣ ಜಾಗದಲ್ಲಿ ಇರುವಂತವು. ಕೇಂಬ್ರಿಡ್ಜ್ ಅಥವಾ ಆಕ್ಸ್ ಫರ್ಡ್ ನಗರಗಳನ್ನು ಸಂದರ್ಶಿಸಲು ಹೋದವರಿಗೆ ಇಲ್ಲಿನ ಮಾರ್ಗದರ್ಶಿಗಳು ತಮ್ಮ ಎಂದಿನ ಬ್ರಿಟಿಷ್ ಹಾಸ್ಯ ಬೆರೆಸಿ ಇಲ್ಲಿನ ರಾಯಲ್ ಕುಟುಂಬದವರು ಓದಲು ಬಂದಾಗ ನಡೆಸಿದ ಹುಂಬತನದ ಕಥೆಗಳನ್ನು ಹೇಳಿ ನಗಿಸದೇ ಇರುವುದಿಲ್ಲ. ಹಲವು ಕಟ್ಟು ಕತೆಗಳನ್ನೂ ಜೊತೆಗೆ ಸೇರಿಸುತ್ತಾರೆ. ಬರೀ ಬುದ್ದಿವಂತರಷ್ಟೇ ಅಲ್ಲದೆ, ಪ್ರಪಂಚದ ಸಿರಿವಂತರೂ ಇಲ್ಲಿಗೆ ಅಪಾರ ದೇಣಿಗೆ ಸಲ್ಲಿಸಿ ಓದಬಹುದಾದ ಕಾರಣ ಅಂತಹ ಕೆಲವರ ತೇಜೋವಧೆಯೂ ಆಗುತ್ತದೆ.

ಈ ಮೂರು ವಿಶ್ವವಿದ್ಯಾಲಯಗಳೆ ಅಲ್ಲದೆ ಆರಿಸಿಕೊಂಡ ವಿಷಯವನ್ನು ಆಧರಿಸಿ ಬ್ರಿಟನ್ನಿನಲ್ಲಿ ಜಗತ್ತಿನ ಕೆಲವು ಪ್ರಸಿದ್ಧ ವಿಶ್ವವಿದ್ಯಾಲಯಗಳಿವೆ. ಪ್ರಾಥಮಿಕ ಹಂತದ ಶಾಲೆಗಳಲ್ಲಿ ಇಲ್ಲಿನ ಶಿಕ್ಷಣ ಮಕ್ಕಳನ್ನು ಆರಾಮವಾಗಿ ಇರಲು ಬಿಡುತ್ತದೆ. ಆದರೆ ಅವರಲ್ಲಿ ಶಿಸ್ತು, ಉತ್ತಮ ನುಡಿ ಮತ್ತು ನಡೆಗಳನ್ನು ರೂಢಿಸಿಕೊಳ್ಳಲು ಬುನಾದಿ ಹಾಕುತ್ತಾರೆ. ಸಾಮಾಜಿಕ ಕಳಕಳಿಗಳ ಬಗ್ಗೆ ಪಾಠಗಳನ್ನು ಶುರು ಮಾಡುತ್ತಾರೆ. ಉದಾಹರಣೆಗೆ ಲೈಂಗಿಕ ಶಿಕ್ಷಣ ಅಥವಾ ಅದರ ಅರಿವನ್ನು ಮೂರನೆಯ ತರಗತಿಯ ಮಕ್ಕಳಿಗೆ ಶುರುಮಾಡುತ್ತಾರೆ. ಧಾರ್ಮಿಕ ಶಿಕ್ಷಣವನ್ನೂ ಶುರು ಮಾಡುತ್ತಾರೆ. ಆಟೋಟಗಳಿಗೆ ಅತಿ ಪ್ರಾಮುಖ್ಯತೆ ಕೊಡುವ ಶಾಲೆಗಳು ಬೇಕಾದಷ್ಟಿವೆ. ಆದರೆ ಈ ತಮ್ಮ ಶೈಕ್ಷಣಿಕ ಪದ್ಧತಿ ನಿಂತ ನೀರಾಗಿದೆ ಎಂದು ಪರಿಣಿತರನ್ನು ಚೈನಾ, ಭಾರತ, ಸ್ವೀಡನ್ ದೇಶಗಳಿಗೆ ಕಳಿಸಿ ಅವರ ಶೈಕ್ಷಣಿಕ ತಂತ್ರಗಳನ್ನು ಕೂಡ ಇವರು ಅಭ್ಯಾಸ ಮಾಡುತ್ತಿದ್ದಾರೆ. ಇವತ್ತಿನ ಮಕ್ಕಳು ಮನೆಯ, ತೋಟದ ಕೆಲಸ ಮಾಡದೆ ತಮ್ಮ ಕೈ ಚಳಕವನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಹೊಸ ಮಾಹಿತಿಯ ಕಾರಣ ಆ ಬಗ್ಗೆ ಗಮನ ಹರಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸರ್ಕಾರೀ ಶಾಲೆಗಳಿಗೆ ದುಡ್ಡಿನ ಕೊರತೆಯ ಕಾರಣ ಮೊದಲೆಲ್ಲ ನಡೆಯುತ್ತಿದ್ದ ಹೊಲಿಯುವ, ಹೆಣೆಯುವ, ಅಡುಗೆ ಕಲಿಸುವ, ತೋಟ ಮಾಡಿಸುವ, ಕಲೆಯ ತರಗತಿಗಳು ಕಡಿಮೆಯಾಗುತ್ತ ಬರುತ್ತಿವೆ.

ಹಿರಿಯ ಶಾಲೆಗಳಿಗೆ ಬರುವ ವೇಳೆಗೆ ಶಿಕ್ಷಣ ಕ್ಲಿಷ್ಟವಾಗುತ್ತದೆ. ಆಳ, ಹರವು ಎಲ್ಲವೂ ದೊಡ್ಡದಾಗುತ್ತದೆ. ಆದರೆ ಇತ್ತೀಚೆಗೆ ಇಲ್ಲಿನ ಶಿಕ್ಷಣ ಸಂಸ್ಥೆಗಳು ಕೆಲವು ವಿಚಾರಗಳನ್ನು ಮುಕ್ತವಾಗಿ ಒಪ್ಪಿಕೊಳ್ಳುತ್ತಿವೆ. ಅದೆಂದರೆ ವಲಸೆ ಬರುವ ಪರದೇಶದ ಮೂಲದ ಮಕ್ಕಳು ಹೆಚ್ಚು ಕೇಂದ್ರೀಕರಿಸಿ ಕಲಿಯುತ್ತಾರೆಂದೂ, ಉನ್ನತ ಶಿಕ್ಷಣಗಳಿಗೆ ಪ್ರವೇಶಗಳಿಸುತ್ತಾರೆಂದೂ ಇವರ ಅಂಕಿ ಅಂಶಗಳು ಧೃಡಪಡಿಸುತ್ತವೆ. ಇದಕ್ಕೆ ಕಾರಣ ಮನೆಯ ವಾತಾವರಣ, ಪೋಷಕರ ಬೆಂಬಲ, ಒತ್ತಾಯ ಮತ್ತು ಸಾಧಿಸಬೇಕು ಎನ್ನುವ ಹಂಬಲ ವಲಸಿಗರಲ್ಲಿ ಹೆಚ್ಚು ಎಂದು ಇವರು ನಂಬಿದ್ದಾರೆ. ಅದು ನಿಜವೂ ಕೂಡ.