ಒಬ್ಬ ವ್ಯಕ್ತಿ ಹೀಗೆ ದೇವನಾಗಲು ಹೇಗೆ ಸಾಧ್ಯ ಎಂದು ವಿಚಾರವಾದಿಗಳಿಗೆ ಅನಿಸದೆ ಇರದು. ಜನಸಮುದಾಯಗಳ ಬಗ್ಗೆ ಅತೀವ ಕಾಳಜಿಯುಳ್ಳ ಸಾಮಾಜಿಕ ಮನುಷ್ಯ ಜನಪದರ ಕಣ್ಣಲ್ಲಿ ದೇವರಾಗಿ ಕಾಣುತ್ತಾನೆ. ತಮ್ಮ ಮೇಲೆ ನಿಷ್ಕಾಮ ಪ್ರೀತಿಯ ಮಳೆಗೆರೆಯುವವನನ್ನು ಜನಸಾಮಾನ್ಯರು ಹೀಗೆ ದೇವರಾಗಿಸುತ್ತಾರೆ. ಅಮೋಘಸಿದ್ಧನಂಥ ಅಖಂಡ ಪ್ರೀತಿಯೇ ದೈವೀ ಗುಣ. ಅಂಥ ಗುಣವುಳ್ಳವರೇ ದೇವರು. ಅದ್ದರಿಂದ ಇಂಥ ಸಿದ್ಧರ ಕುರಿತ ಡೊಳ್ಳಿನ ಪದಗಳೆಲ್ಲ “ನಮ್ಮಯ ದೇವರು ಬಂದಾರ ಬನ್ನಿರೇ” ಎಂದೇ ಪ್ರಾರಂಭವಾಗುತ್ತವೆ.
ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಹದಿನಾರನೇ ಕಂತು

ವಿಜಾಪುರದ ನಾವಿಗಲ್ಲಿಯಲ್ಲಿ ಶಿವಪ್ಪ ಎಂಬಾತ ಇದ್ದ. ಆತ ಪಾನಪಟ್ಟಿ (ಬೀಡಾ) ಅಂಗಡಿ ಇಟ್ಟುಕೊಂಡಿದ್ದ. ನಮ್ಮ ಮನೆಗೆ ಬಂದಾಗ, ವಿಜಾಪುರ ತಾಲ್ಲೂಕಿನ ಅರಕೇರಿ ಅಮೋಘಸಿದ್ಧನ ಜಾತ್ರೆಯಲ್ಲಿ ಪಾನಪಟ್ಟಿ ಅಂಗಡಿ ಹಾಕುವ ವಿಚಾರ ತಿಳಿಸಿದ. ನನಗೋ ಅಮೋಘಸಿದ್ಧನ ಜಾತ್ರೆ ನೋಡುವ ಆಸೆ. ೬೦ ವರ್ಷಗಳ ಹಿಂದೆ, ವಿಜಾಪುರ ಜಿಲ್ಲೆಯಲ್ಲೇ ಬಹುದೊಡ್ಡ ಜಾತ್ರೆಗಳಲ್ಲಿ ಅದು ಒಂದಾಗಿತ್ತು.

ಹಾಲುಮತದಲ್ಲಿ ಜನಿಸಿದ ವಿಶ್ವಮಾನವ ಅಮೋಘಸಿದ್ಧನಿಗೆ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಲಕ್ಷಾಂತರ ಭಕ್ತರಿದ್ದಾರೆ. ಆಗ ಒಂದು ತಿಂಗಳವರೆಗೆ ನಡೆಯುತ್ತಿದ್ದ ಆ ಜಾತ್ರೆ ಈಗ ಮೂರು ದಿನಕ್ಕೆ ಇಳಿದ ಬಗ್ಗೆ ಓದಿದ ನೆನಪು.

(ಅಮೋಘಸಿದ್ಧನ ಜಾತ್ರೆಯಲ್ಲಿ, ನೂರಾರು ಪಲ್ಲಕ್ಕಿಗಳಲ್ಲಿ ಒಂದು)

ಅಂತೂ ಇಂತೂ ಮನೆಯಲ್ಲಿ ಹಟ ಮಾಡಿ ಶಿವಪ್ಪನ ಜೊತೆ ಅರಕೇರಿಗೆ ಹೋಗಲು ಒಪ್ಪಿಗೆ ಪಡೆದೆ. ಆತ ಸಂಭಾವಿತ ವ್ಯಕ್ತಿಯಾಗಿದ್ದರಿಂದ ಇದು ಸಾಧ್ಯವಾಯಿತು. ಶಿವಪ್ಪ ವಿಜಾಪುರದ ಅಂಗಡಿ ಬಂದ್ ಮಾಡಿದ. ಬೇಕಾದ ಸಾಮಾನುಗಳನ್ನೆಲ್ಲ ಎತ್ತಿನ ಗಾಡಿಯಲ್ಲಿ ಹೇರಿಕೊಂಡು ತನ್ನ ಗೆಳೆಯನ ಜೊತೆ ನನ್ನನ್ನೂ ಕರೆದುಕೊಂಡು ಹೊರಟ. ಅಂತೂ ಅರಕೇರಿಯ ದಾರಿ ಹಿಡಿದೆವು. ಮಧ್ಯೆ ಇಟಂಗಿಹಾಳದ ಹಳ್ಳದ ದಂಡೆಯಲ್ಲಿ ಬುತ್ತಿ ಬಿಚ್ಚಿ ನೀರು ತುಂಬಿಕೊಂಡೆವು. ಲಂಟಾನ ಪೊದೆ ಅಲ್ಲಿನ ಪರಿಸರವನ್ನು ಹಸಿರಾಗಿಸಿತ್ತು. ಒಂದೇ ಗೊಂಚಲಲ್ಲಿನ ಕೆಂಪು ಹಳದಿ ಹೂಗಳು ಮನದಲ್ಲಿ ಇನ್ನೂ ಬಾಡದೆ ಉಳಿದಿವೆ.

ಅಲ್ಲಿಬಾದಿಯಿಂದ ವಿಜಾಪುರಕ್ಕೆ ಬಂದ ನಂತರ ಇಂಥ ಹಳ್ಳಿಗಾಡಿನ ಪ್ರದೇಶಕ್ಕೆ ಬಂದದ್ದು ಇದೇ ಮೊದಲು. ಈ ಪ್ರದೇಶ ಅಲ್ಲೀಬಾದಿಗಿಂತಲೂ ವಿಶಾಲವಾಗಿತ್ತು.

ಕಾರ್ತಿಕ ಅಮಾವಾಸ್ಯೆ ದಿನ ಅಮೋಘಸಿದ್ಧನ ಜಾತ್ರೆ ನಡೆಯುತ್ತದೆ. ಅಮೋಘಸಿದ್ಧನಿಗೆ ‘ಭಂಡಾರದ ಒಡೆಯ’ ಎಂದು ಕರೆಯುತ್ತಾರೆ. ಜಾತ್ರೆಯ ದಿನ ಲಕ್ಷಾಂತರ ಜನ ಭಕ್ತರು ನೂರಾರು ಪಲ್ಲಕ್ಕಿಗಳ ಮೆರವಣಿಗೆಗೆ ಸಾಕ್ಷಿಯಾಗುತ್ತಾರೆ. ಅರ್ಚಕರು ಭಂಡಾರ ಎರಚುತ್ತಿದ್ದಂತೆ ಜನ ಭಾವಪರವಶರಾಗುತ್ತಾರೆ. ಇದು ಅವರ ಬದುಕಿನ ಅತ್ಯಂತ ಸಂಭ್ರಮದ ಉತ್ಸವ ಆಗಿರುತ್ತದೆ. ನೋಡುಗರಿಗೆ ಹಳದಿಮಳೆ ಸುರಿದ ಹಾಗೆ ಅನಿಸುತ್ತದೆ. ಭಕ್ತರೆಲ್ಲ ಭಂಡಾರ ಎರಚುವ ಕುಬಿಯಲ್ಲಿರುವ ಕಾರಣ ಆ ವಿಶಾಲ ಪ್ರದೇಶವೆಲ್ಲ ಹಳದಿಮಯವಾಗಿ ಬಂಗಾರಲೋಕದಲ್ಲಿ ನಿಂತ ಅನುಭವವಾಗುವುದು. ಭಕ್ತರ ಉನ್ಮಾದ ಅದಕ್ಕೆ ಮೆರಗು ನೀಡುವುದು. ಆ ಕ್ಷಣದಲ್ಲಿ ಅವರು ಯಾವುದೋ ಲೋಕದಿಂದ ಬಂದವರ ಹಾಗೆ ಕಾಣುವರು. ನಿಬ್ಬೆರಗಾಗುವಂತೆ ಪಲ್ಲಕ್ಕಿಗಳನ್ನು ತಿರುಗಿಸುವ ಅವರ ಗತ್ತು ಮುಂತಾದವು ಎಲ್ಲ ನವನವೀನವಾಗಿ ಕಾಣುತ್ತವೆ. ಅವರ ಡೊಳ್ಳಿನ ಹಾಡುಗಳೆಲ್ಲ ‘ದೇವರು ಬಂದಾವ ಬನ್ನಿರೋ’ ಎಂದೇ ಪ್ರಾರಂಭವಾಗುತ್ತವೆ. ಹಾಡು ಮತ್ತು ಡೊಳ್ಳು ಕುಣಿತದ ಜೊತೆ ಈ ಸಂಭ್ರಮ ನಮ್ಮನ್ನು ನಮಗೆ ಗೊತ್ತಿರದ ಹೊಸದೊಂದು ಲೋಕಕ್ಕೆ ಒಯ್ಯುತ್ತದೆ.

ಅಮೋಘಸಿದ್ಧನನ್ನು ‘ಭಂಡಾರದ ಒಡೆಯ’ ಎನ್ನುವ ಕಾರಣದಿಂದಲೇ ಭಕ್ತರು ಹೀಗೆ ಭಂಡಾರದ ಲೋಕವನ್ನೇ ಸೃಷ್ಟಿಸಲು ತಮ್ಮೆಲ್ಲ ಶಕ್ತಿ ಸಾಮರ್ಥ್ಯವನ್ನು ಬಳಸಿಕೊಳ್ಳುತ್ತಾರೆ ಎಂದು ಅನಿಸುತ್ತದೆ. ಭಂಡಾರದೊಡೆಯನ ಕ್ಷೇತ್ರದಲ್ಲಿ ಎಲ್ಲವೂ ಭಂಡಾರಮಯ! ಆ ಹಳದಿಲೋಕದಲ್ಲಿ ನೂರಾರು ಪಲ್ಲಕ್ಕಿಗಳು ತಿರುಗಾಟ ಮತ್ತು ಅವುಗಳನ್ನು ತಿರುಗಿಸುವ ಕಲೆಯ ಪ್ರದರ್ಶನವನ್ನು ನೋಡುತ್ತ ನೋಡುತ್ತ ಭಕ್ತರು ಮೈಮರೆಯುತ್ತಾರೆ. ಭಕ್ತರು ಅಮೋಘಸಿದ್ಧನ ಪವಾಡಗಳಿಗೆ ‘ಪವಾಡಗಳು’ ಎಂದು ಕರೆಯುವುದಿಲ್ಲ. ಅವರ ದೃಷ್ಟಿಯಲ್ಲಿ ಅವೆಲ್ಲ ಸಿದ್ಧಾಟಗಳು. ಭಕ್ಕರೇ ಸೃಷ್ಟಿಸಿದ ಈ ಭಂಡಾರಲೋಕ ಕೂಡ ಸಿದ್ಧಾಟದಂತೇ ಕಾಣುತ್ತದೆ.

(ಭಂಡಾರ)

ಒಬ್ಬ ವ್ಯಕ್ತಿ ಹೀಗೆ ದೇವನಾಗಲು ಹೇಗೆ ಸಾಧ್ಯ ಎಂದು ವಿಚಾರವಾದಿಗಳಿಗೆ ಅನಿಸದೆ ಇರದು. ಜನಸಮುದಾಯಗಳ ಬಗ್ಗೆ ಅತೀವ ಕಾಳಜಿಯುಳ್ಳ ಸಾಮಾಜಿಕ ಮನುಷ್ಯ ಜನಪದರ ಕಣ್ಣಲ್ಲಿ ದೇವರಾಗಿ ಕಾಣುತ್ತಾನೆ. ತಮ್ಮ ಮೇಲೆ ನಿಷ್ಕಾಮ ಪ್ರೀತಿಯ ಮಳೆಗೆರೆಯುವವನನ್ನು ಜನಸಾಮಾನ್ಯರು ಹೀಗೆ ದೇವರಾಗಿಸುತ್ತಾರೆ. ಅಮೋಘಸಿದ್ಧನಂಥ ಅಖಂಡ ಪ್ರೀತಿಯೇ ದೈವೀ ಗುಣ. ಅಂಥ ಗುಣವುಳ್ಳವರೇ ದೇವರು. ಅದ್ದರಿಂದ ಇಂಥ ಸಿದ್ಧರ ಕುರಿತ ಡೊಳ್ಳಿನ ಪದಗಳೆಲ್ಲ “ನಮ್ಮಯ ದೇವರು ಬಂದಾರ ಬನ್ನಿರೇ” ಎಂದೇ ಪ್ರಾರಂಭವಾಗುತ್ತವೆ. “ಭಕ್ತರಿಗೆ ಭಾಗ್ಯ ಕೊಡು. ಮಕ್ಕಳಿಗೆ ಬಡತನ ಕೊಡು” ಎಂದು ಅಮೋಘಸಿದ್ಧ ಶಿವನಲ್ಲಿ ಬೇಡಿಕೊಳ್ಳುವುದರಲ್ಲಿ ಆತನ ವ್ಯಕ್ತಿತ್ವದ ವಿರಾಟ್ ದರ್ಶನವಾಗುವುದು. ಅವನ ಈ ಬೇಡಿಕೆ ಜನಪದರ ಬಾಯಲ್ಲಿ ಇಂದಿಗೂ ಜೀವಂತವಾಗಿದೆ.

ಅಮೋಘಸಿದ್ಧ ಮೂವರು ಮಕ್ಕಳನ್ನು ಸಾಕಿದ್ದ. ಅವರಿಗೆ ‘ಪುಣ್ಯದ ಮಕ್ಕಳು’ ಎಂದು ಕರೆಯುತ್ತಾರೆ. ಆತನಿಗೆ ಮಕ್ಕಳಾಗಿರಲಿಲ್ಲ. ಅಮೋಘಸಿದ್ಧನ ಪತ್ನಿ ತನ್ನ ಪುಣ್ಯದ ಮಕ್ಕಳ ಮುಂದೆ ಬಂಜೆತನದ ನೋವನ್ನು ವ್ಯಕ್ತಪಡಿಸುತ್ತಾಳೆ. ಅವರು ಅಮೋಘಸಿದ್ಧನಿಗೆ ಈ ಕುರಿತು ತಿಳಿಸುತ್ತಾರೆ. ತದನಂತರ ನಾಲ್ಕು ಮಕ್ಕಳಾಗುತ್ತವೆ. ಅವರಿಗೆ ‘ವರವಿನ ಮಕ್ಕಳು’ ಎಂದು ಕರೆಯುತ್ತಾರೆ. ಅಮೋಘಸಿದ್ಧನ ಮೊದಲ ಪ್ರೀತಿ ಭಕ್ತರ ಮೇಲೆ. ನಂತರ ಪುಣ್ಯದ ಮಕ್ಕಳ ಮೆಲೆ. ತದನಂತರ ತನಗೆ ಹುಟ್ಟಿದ ಮಕ್ಕಳ ಮೇಲೆ! ಮನುಷ್ಯರು ದೇವರಾಗುವ ಕ್ರಮವಿದು. ಸಕಲಜೀವಾತ್ಮರಿಗೆ ಲೇಸನೇ ಬಯಸುವಾತ ಹೀಗೆ ದೇವರಾಗುತ್ತಾನೆ.

ಇಂಥ ಲೋಕಪ್ರಿಯ ವ್ಯಕ್ತಿತ್ವದ ಹಿಂದಿನ ಮಿಥ್‌ಗಳು ಕೂಡ ಆಪ್ಯಾಯಮಾನವಾಗಿರುತ್ತವೆ. ಅಮೋಘಸಿದ್ಧ ಶಿವನಲ್ಲಿ ಐದು ವರಗಳನ್ನು ಕೇಳುತ್ತಾನೆ. ಹೋಮದ ಕಂಬಳಿ, ನೇಮದ ಬತ್ತ, ಮಳಿ ಕೀಲು – ಬೆಳೆ ಕೀಲು, ಹುಟ್ಟು ಬಂಜೆಯರಿಗೆ ತೊಟ್ಟಿಲು ಭಾಗ್ಯ ಮತ್ತು ನನ್ನ ಜೊತೆ ನೀನೂ ಭೂಮಿಗೆ ಬರಬೇಕು ಎಂಬುವು ಅಮೋಘಸಿದ್ಧನ ಬೇಡಿಕೆಯಾಗಿದ್ದವು. ಇವೆಲ್ಲ ವ್ಯಕ್ತಿಗತವಾದ ಬೇಡಿಕೆಯಾಗಿರದೆ ಸಮಷ್ಟಿಗತ ಬೇಡಿಕೆಯಾಗಿವೆ. ಅಂದರೆ ಸಕಲಜೀವಾತ್ಮರ ಲೇಸನ್ನೇ ಬಯಸುವ ಬೇಡಿಕೆಗಳಾಗಿವೆ.

(ಜಾತ್ರೆಯ ಕಹಳೆ)

“ವ್ಯೋಮದ ಕಂಬಳಿ ಎಂಬುದು ಜನಭಾಷೆಯಲ್ಲಿ ‘ಹೋಮದ ಕಂಬಳಿ’ ಆಗಿದೆ’ ಎಂದು ಡಾ. ಚೆನ್ನಪ್ಪ ಕಟ್ಟಿ ಅವರು ತಿಳಿಸುತ್ತಾರೆ. ಇದು ಸರಿಯಾದ ತರ್ಕವಾಗಿದೆ. ಏಕೆಂದರೆ ಪ್ರಕೃತಿಯ ವಶೀಕರಣದ ರಹಸ್ಯ ಈ ಬೇಡಿಕೆಯಲ್ಲಿದೆ. ಪ್ರಕೃತಿಯನ್ನು ನಿಯಂತ್ರಿಸುವ ಶಕ್ತಿಯನ್ನು ಶಿವನಲ್ಲಿ ಅಮೋಘಸಿದ್ಧ ಕೇಳುತ್ತಾನೆ. ಈ ಶಕ್ತಿಯನ್ನು ಸಾಧಿಸಿದಾಗಲೇ ಪ್ರಕೃತಿಯು ಅಮೋಘಸಿದ್ಧನ ಹಿಡಿತಕ್ಕೆ ಬರುತ್ತದೆ. ರೈತಾಪಿ ಮುಂತಾದ ಲೌಕಿಕರ ಬದುಕೆಲ್ಲ ಪ್ರಕೃತಿಯ ಆಟದ ಮೇಲೆಯೆ ನಿಂತಿದೆ. ಮಳೆಯೆ ಪ್ರಕೃತಿಯ ದೊಡ್ಡ ವರದಾನವಾಗಿದೆ. ಸಿದ್ಧರು, ಸಂತರಲ್ಲಿ ಮತ್ತು ೧೫ನೇ ಶತಮಾನದ ನಂತರ ಬರುವ ಶರಣರಲ್ಲಿ ಕೆಲವರು ಕಂಬಳಿ ಬೀಸಿ ಮಳೆ ತರಿಸುವ ಪವಾಡ ಮೆರೆದಿದ್ದಾರೆ. ಹೀಗೆ ಮಳೆ ತರಿಸುವ ಅಮೋಘಸಿದ್ಧರ ಕಂಬಳಿಯು ‘ವ್ಯೋಮದ ಕಂಬಳಿ’ ಆಗುತ್ತದೆ. ಇಂಥ ಸಿದ್ಧಿಗೆ ಕಠಿಣ ಸಾಧನೆ ಅವಶ್ಯವಾಗಿದೆ. ಅಂತೆಯೆ ಶಿವನಿಂದ ಅಮೋಘಸಿದ್ಧ ‘ನೇಮದ ಬೆತ್ತ’ವನ್ನು ಬಯಸುತ್ತಾನೆ. ಈ ವ್ರತ ನೇಮಗಳು ಸಾಧಕನಿಗೆ ಕಟ್ಟುನಿಟ್ಟಿನ ಬದುಕನ್ನು ರೂಪಿಸುವಲ್ಲಿ ಮತ್ತು ಆತ ವಿಶ್ವಮಾನವನಾಗಿ ಬೆಳೆಯುವಲ್ಲಿ ಮೂಲಾಧಾರವಾಗುತ್ತವೆ.

‘ಮಳಿ ಕೀಲು – ಬೆಳಿ ಕೀಲು’ ಎಂದರೆ ಮಳೆ ಬೆಳೆ ಕುರಿತ ರಹಸ್ಯ. ಈ ರಹಸ್ಯವನ್ನು ಭೇದಿಸುವುದಕ್ಕೆ ವಾಣಿ ಎನ್ನುತ್ತಾರೆ. ಮುಂದೆ ಸಂಭವಿಸುವ ಮಳೆ ಬೆಳೆಗಳ ರಹಸ್ಯವನ್ನು ಭೇದಿಸಿ ಜನಸಮುದಾಯಕ್ಕೆ ತಿಳಿಸುವ ವಾಣಿ (ವಾಕ್ ಶಕ್ತಿ) ಯನ್ನು ಶಿವನಲ್ಲಿ ಅಮೋಘಸಿದ್ಧ ಕೇಳುತ್ತಾನೆ. ಕಂಬಳಿ ಬೀಸಿ ಮಳೆ ಬೆಳೆಗಳ ಕುರಿತು ಭವಿಷ್ಯ ನುಡಿಯುವುದೇ ಮಳಿ ಕೀಲು – ಬೆಳಿ ಕೀಲು.

‘ಹುಟ್ಟು ಬಂಜೆಯರಿಗೆ ತೊಟ್ಟಿಲು ಭಾಗ್ಯದ ವರ’ ಕೇಳಿದ್ದು ಅಮೋಘಸಿದ್ಧನ ಜೀವನಪ್ರೀತಿಯ ಸಂಕೇತವಾಗಿದೆ. ಆತ ಈ ಬದುಕನ್ನು ಎಂದೂ ನಿರಾಶೆಯಿಂದ ಕಾಣಲಿಲ್ಲ. ಜೀವಸೃಷ್ಟಿಯ ಪರವಾಗಿರುವ ಆತ ಸಕಲ ಜೀವಿಗಳ ಬಗ್ಗೆ ಉದಾತ್ತ ಹಾಗೂ ಆಪ್ತ ಭಾವ ಹೊಂದಿದ್ದರಿಂದಲೇ ಇಂಥ ವರವನ್ನು ಕೇಳಲು ಸಾಧ್ಯವಾಯಿತು.

(ಜಾತ್ರೆಯ ಊಟ)

ಇಷ್ಟೆಲ್ಲ ಕೇಳಿದ ನಂತರ ‘ನನ್ನ ಜೊತೆ ನೀನೂ ಭೂಮಿಗೆ ಬರಬೇಕು’ ಎಂದು ಶಿವನಿಗೆ ತಿಳಿಸುತ್ತಾನೆ. ಒಂದು ಷರತ್ತಿನ ಮೇಲೆ ಶಿವನು ಒಪ್ಪುತ್ತಾನೆ. ‘ನಾ ಬರುವ ಬಗ್ಗೆ ಸಂಶಯ ತಾಳಿ ತಿರುಗಿ ನೋಡಬಾರದು’ ಎಂಬುದೇ ಆ ಷರತ್ತು. ಷರತ್ತನ್ನು ಒಪ್ಪಿಕೊಂಡ ಅಮೋಘಸಿದ್ಧ ಮುಂದೆ ಮುಂದೆ ಸಾಗುತ್ತಾನೆ. ಆತ ಶಿವನನ್ನು ಭೂಮಿಗೆ ತರುವ ಉದ್ದೇಶ ಯಾವುದೇ ಸ್ವಹಿತಾಸಕ್ತಿಯಿಂದ ಕೂಡಿರದೆ ಲೋಕದ ಜನರ ಕಷ್ಟನಷ್ಟಗಳನ್ನು ಶಿವನಿಗೆ ತೋರಿಸುತ್ತ ಜನರು ಸುಖ ಸಂತೋಷಗಳಿಂದಲೇ ಬದುಕಬೇಕು ಎಂಬುದಾಗಿತ್ತು. ಇಂಥ ಜನಪರ ಆಶಯದ ಮಿಥ್ ಇದು. (ಅಮೋಘ ಸಿದ್ಧ ೧೬ನೇ ಶತಮಾನದವನು. ೧೨ನೇ ಶತಮಾನದಲ್ಲೇ ಭೂಮುಖಿ ಸಿದ್ಧಾಂತದ ಶರಣರು ಶಿವನನ್ನು ಭೂಮಿಗೆ ತರುವ ‘ಕಾರ್ಯ’ ಮಾಡಿದ್ದರು. “ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟ” ಎಂದು ಬಸವಣ್ಣನವರು ಹೇಳಿದ್ದಾರೆ. ‘ನಿನ್ನ ಕೆಲಸ ಇಲ್ಲಿದೆ’ ಎಂದು ಶಿವನಿಗೆ ಸೂಚಿಸಿದ್ದಾರೆ. ೧೨ನೇ ಶತಮಾನದಲ್ಲಿ ಅನೇಕ ಸಿದ್ಧರು, ನಾಥರು, ಪಾಶುಪಥರು, ಗಾಣಪತ್ಯರು, ಕಾಳಾಮುಖರು, ಭವಿಶೈವರು ಮುಂತಾದವರು ಬಸವಮಾರ್ಗದಲ್ಲಿ ಒಂದಾಗಿ ಮುನ್ನಡೆಯುವ ಮೂಲಕ ಮಹಾ ಸಾಧನೆ ಮಾಡಿದರು. ಪಟ್ಟಭದ್ರ ಹಿತಾಸಕ್ತಿಗಳು ಬಸವಾದಿ ಶರಣರ ಈ ಸಾಧನೆ ತಮ್ಮ ಶೋಷಕ ಪ್ರವೃತ್ತಿಗೆ ವಿರುದ್ಧ ಎಂಬುದನ್ನರಿತವು. ವೈದಿಕರ ಶಾಸ್ತ್ರಗಳು ಮತ್ತು ಬಿಜ್ಜಳನ ಶಸ್ತ್ರಗಳು ಈ ಪಟ್ಟಭದ್ರರಿಗೆ ಸಹಾಯಕವಾಗಿದ್ದವು. ಬಿಜ್ಜಳ ತಮ್ಮ ಪರ ನಿಲ್ಲುವಂಥ ಪರಿಸ್ಥಿತಿ ನಿರ್ಮಾಣ ಮಾಡಿದವು. ವೈದಿಕರ ಶಾಸ್ತ್ರಗಳು ಹೇಳಿದಂತೆ ಬಿಜ್ಜಳನ ಶಸ್ತ್ರಗಳು ಕೇಳಿದವು. ಶರಣರ ಹತ್ಯಾಕಾಂಡ ಮಾಡಿದವು. ಅವರ ವಚನಕಟ್ಟುಗಳನ್ನು ಸುಟ್ಟವು. ಈ ಸಂದರ್ಭದಲ್ಲಿ ಅಳಿದುಳಿದ ಶರಣರು ಚೆಲ್ಲಾಪಿಲ್ಲಿಯಾದರು. ನಂತರ ಅವರ ವಂಶದವರು ಮುಂದಿನ ಮೂರು ಶತಮಾನಗಳವರೆಗೆ ಕಷ್ಟಪಟ್ಟು ಬದುಕಿದರು. ೧೫ನೇ ಶತಮಾನದಲ್ಲಿ ಪ್ರೌಢದೇವರಾಯನ ಕಾಲದಲ್ಲಿ ಶರಣಸಂತತಿಗೆ ನಿಟ್ಟುಸಿರು ಬಿಡುವಂತಾಯಿತು. ಆದರೆ ಪ್ರೌಢದೇವರಾಯನ ಆಸ್ಥಾನದಲ್ಲಿ ಸ್ಥಾನ ಪಡೆದ ಈ ಸಂತತಿಯ ಒಂದಿಷ್ಟು ಜಾಣರು ಮತ್ತೆ ಹಳೆಯ ಸಂಪ್ರದಾಯಗಳ ಕಡೆಗೆ ವಾಲಿದರು. ‘ಲಿಂಗೀಬ್ರಾಹ್ಮಣ’ ಭ್ರಮೆಗೆ ಒಳಗಾದರು. ಇಂಥ ಸ್ಥಿತಿಯಲ್ಲಿ ಕೊಡೆಕಲ್ ಬಸವಣ್ಣನಂಥವರು ವಿಜಯನಗರ ಪ್ರದೇಶದಿಂದ ಹೊರಬಿದ್ದು ಕೊಡೆಕಲ್‌ಗೆ ಬಂದರು.

ಅಷ್ಟೊತ್ತಿಗಾಗಲೆ ಸೂಫಿಗಳು ಜನಮಾನಸದಲ್ಲಿ ತಮ್ಮ ಪ್ರಭಾವ ಬೀರಿದ್ದರು. ಹೀಗೆ ೧೫ನೇ ಶತಮಾನದ ಉತ್ತರಾರ್ಧದಿಂದ ಸೂಫಿಗಳು, ಶರಣರು, ಸಂತರು, ಸಿದ್ಧರು ದಾಸರು ಮತ್ತು ದತ್ತ ಸಂಪ್ರದಾಯದವರು ತಮ್ಮದೇ ರೀತಿಯಲ್ಲಿ ಜನರನ್ನು ಒಂದುಗೂಡಿಸುವ ಕಾರ್ಯದಲ್ಲಿ ನಿರತರಾದರು. ಅದನ್ನೇ ಅನುಭಾವಿ ತತ್ವ ಪದಕಾರರು ಮುಂದುವರಿಸಿದರು. ೧೬ನೇ ಶತಮಾನದ ಆರಂಭದ ಘಟ್ಟದಲ್ಲಿ ಬಂದ ಅಮೋಘಸಿದ್ಧ ಈ ಮಾನವ ಏಕತೆಯ ಪರಂಪರೆಯನ್ನು ಮುಂದುವರಿಸಿದ.)

ಅಮೋಘಸಿದ್ಧ ೧೬ನೇ ಶತಮಾನದ ಪೂರ್ವಾರ್ಧದಲ್ಲಿ ಜನಿಸಿದವನು ಎಂಬುದನ್ನು ಡಾ. ಚನ್ನಪ್ಪ ಕಟ್ಟಿ ಅವರು ಸರಿಯಾಗಿಯೆ ಗುರುತಿಸಿದ್ದಾರೆ. ಅಮೋಘಸಿದ್ಧನ ವಂಶಸ್ಥರು ಇಂದಿಗೂ ಇದ್ದಾರೆ. ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಅಮೋಘಸಿದ್ಧನ ನೂರಾರು ತೋರುಗದ್ದುಗೆಗಳಿವೆ. ಅವುಗಳಿಗೆಲ್ಲ ಅವರ ವಂಶಸ್ಥರೇ ಪೂಜಾರಿಗಳಾಗಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ತಾಲೂಕಿನ ಭೀವರಗಿ ಗ್ರಾಮದಲ್ಲಿನ ‘ಗುರುಮನೆ’ಯಲ್ಲಿ ಅಮೋಘಸಿದ್ಧನ ವಂಶಸ್ಥರಲ್ಲಿ ಮೋಡಿ ಲಿಪಿಯಲ್ಲಿ ಬರೆದ ಭೂಮಿ ಮಾರಾಟಕ್ಕೆ ಸಂಬಂಧಿಸಿದ ಖರೀದಿ ಪತ್ರವೊಂದು ಸಿಕ್ಕಿದೆ. ಅಮೋಘಸಿದ್ಧನ ಮಕ್ಕಳು ಭೂಮಿ ಮಾರಾಟ ಮಾಡಿದ ವಿಷಯ ಆ ಪತ್ರದಲ್ಲಿದೆ. ಆ ಪತ್ರದ ಪ್ರತಿಯನ್ನು ಡಾ. ಚನ್ನಪ್ಪ ಕಟ್ಟಿಯವರು ಅಮೋಘಸಿದ್ದನ ವಂಶಸ್ಥರಿಂದ ಕಷ್ಟಪಟ್ಟು ಸಂಪಾದಿಸಿದ್ದಾರೆ. ಮೋಡಿ ಲಿಪಿಯ ಬಗ್ಗೆ ಜ್ಞಾನವಿದ್ದ ಧಾರವಾಡದ ಪ್ರೊ. ಸಾವಂತ ಅವರು ಆ ಖರೀದಿ ಪತ್ರವನ್ನು ಓದಿ ಅದರ ಶಾಲಿವಾಹನ ಶಕೆಯ ದಿನಾಂಕ ೧೬ನೇ ಶತಮಾನದ ಕೊನೆಗೆ ಬರುವಂಥದ್ದು ಎಂದು ತಿಳಿಸಿದ್ದಾರೆ. ಆದ್ದರಿಂದ ಅಮೋಘಸಿದ್ಧನು ೧೬ನೇ ಶತಮಾನದ ಪೂರ್ವಾರ್ಧದವನು ಎಂಬುದನ್ನು ಅರಿಯಬಹುದು. (ಆದರೆ ಈ ಪತ್ರ ೧೬ನೇ ಶತಮಾನದಲ್ಲಿ ಸೃಷ್ಟಿಯಾದದ್ದೇ ಎಂಬುದನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕಿದೆ.)

ಅಮೋಘಸಿದ್ಧನು ಅರಕೇರಿ ಗುಡ್ಡಕ್ಕೆ ಬಂದು ನೆಲೆಸಿದ. ಆ ಗುಡ್ಡ ಅರಕೇರಿ, ಜಾಲವಾದಿ ಮತ್ತು ಸಿದ್ಧಾಪುರ ಗ್ರಾಮಗಳ ಮಧ್ಯೆ ಇದ್ದು ಸೀಮೆಕಲ್ಲನ್ನು ಹೊಂದಿದೆ. ಅಂತೆಯೆ ಅದಕ್ಕೆ ‘ಮುಮ್ಮೆಟ್ಟಿಗುಡ್ಡ’ ಎಂದು ಕರೆಯುತ್ತಾರೆ. ಈ ಮುಮ್ಮೆಟ್ಟಿ ಪದ ಜನರ ಬಾಯಲ್ಲಿ ‘ಮಮ್ಮಾಟ್ಯಾ’ ಆಗಿದೆ. ಅರಕೇರಿ ಅಮೋಘಸಿದ್ಧನ ಜಾತ್ರೆಗೆ ಮಮ್ಮಾಟ್ಯಾನ ಜಾತ್ರೆ ಎಂದೂ ಕರೆಯುತ್ತಾರೆ.

ಅರಕೇರಿಗೆ ಸಮೀಪದ ಮಕನಾಪುರದಲ್ಲಿ ಅಮೋಘಸಿದ್ಧನ ಗುರು ಗೌರೀಸೋಮಲಿಂಗನ ಸಮಾಧಿ ಇದೆ. ಆ ಗುರು ಸೂಫಿಗಳ ಪ್ರಭಾವಕ್ಕೆ ಒಳಗಾಗಿದ್ದ. ಆತನ ಸಮಾಧಿ ಸೂಫಿ ಸಂತರ ಮಜಾರ್ (ಸಮಾಧಿ) ಹಾಗೆ ಇದ್ದು ಅದರ ಮೇಲೆ ಮಕಮಲ್ ಬಟ್ಟೆಯ ಗಲೀಫ್ (ಸೂಫಿ ಸಂತರ ಗೋರಿಗೆ ಹೊದಿಸುವ ಬಟ್ಟೆ) ಹಾಕುತ್ತಾರೆ. ಈ ಮಕಮಲ್ ಬಟ್ಟೆ ಮೆತ್ತಗೆ ನುಣುಪಾಗಿರುತ್ತದೆ. ಸಮಾಧಿ ಸ್ಥಳದಲ್ಲಿ ಜರತಾರಿ ಟೊಪ್ಪಿಗೆ ಇದೆ. ಜೊತೆಗೆ ರುದ್ರಾಕ್ಷಿಯೂ ಇದೆ. ಹೀಗಾಗಿ ಗುರು ಗೌರೀಸೋಮಲಿಂಗ ಸೂಫಿ-ಶರಣ ಪರಂಪರೆಯವನು ಎಂಬುದು ತಿಳಿದುಬರುತ್ತದೆ.
ನಾನು ಅರಕೇರಿ ಜಾತ್ರೆಗೆ ಹೋದಾಗ ಬಹಳವೆಂದರೆ ೮ ವರ್ಷದವನಾಗಿರಬಹುದು. (ಆಗ ಮೇಲೆ ತಿಳಿಸಿದ್ದೆಲ್ಲ ಗೊತ್ತಿರಲಿಲ್ಲ.) ನಾವು ಎತ್ತಿನಗಾಡಿಯಲ್ಲಿ ಹೋದ ರಾತ್ರಿಯೆ ಶಿವಪ್ಪ ಮತ್ತು ಅವರ ಗೆಳೆಯ ಸೇರಿ, ತಂದ ಸಾಮಾನುಗಳನ್ನು ಬಳಸಿ ಪುಟ್ಟದಾದ ತಾತ್ಕಾಲಿಕ ಪಾನಪಟ್ಟಿ ಅಂಗಡಿಯನ್ನು ಸಿದ್ಧಗೊಳಿಸಿದರು. ಬೆಳಿಗ್ಗೆ ಅಂಗಡಿ ಮುಂದಿನ ಅಂಗಳ ಸಮಗೊಳಿಸಿ ನೀರು ಹೊಡೆದು ಧೂಳು ಏಳದಂತೆ ಮಾಡಿದರು. ಅಂಗಡಿಯಲ್ಲಿ ಒಬ್ಬನು ಮಾತ್ರ ಕೂಡುವ ಸಾಧ್ಯತೆ ಇತ್ತು. ಅದರೊಳಗೆ ಎತ್ತರ ಸ್ಟೂಲ್ ಇಟ್ಟಿದ್ದರು. ಪಾನಪಟ್ಟಿಗೆ ಬೇಕಾದ ಎಲೆಗಳನ್ನು ಸುಂದರವಾಗಿ ಜೋಡಿಸಿ ಪರಾತದಲ್ಲಿ ಇಟ್ಟರು. ಸಿದ್ಧಪಡಿಸಿಕೊಂಡು ಬಂದ ಕಟ್ಟಿಗೆಯ ಖಾನೆಗಳಲ್ಲಿ ಚುಟ್ಟಾ (ಬೀಡಿ) ಕಟ್ಟುಗಳನ್ನಿಟ್ಟರು. ಅಡಿಕೆಯ ಡಬ್ಬದ ಜೊತೆ ಅಡಕೊತ್ತಿನಲ್ಲಿ ಕತ್ತರಿಸಿದ ಅಡಕೆಯ ಚೂರುಗಳ ಡಬ್ಬವನ್ನು ಪಕ್ಕದಲ್ಲಿ ಇಟ್ಟರು. ಕೆಲವು ಗಿರಾಕಿಗಳು ಪೂರ್ತಿ ಅಡಿಕೆ ಕೇಳುವುದರಿಂದ ಈ ವ್ಯವಸ್ಥೆ ಮಾಡಲಾಗಿತ್ತು. ತಂಬಾಕಿನಲ್ಲೂ ಎರಡು ಪ್ರಕಾರದವುಗಳಿದ್ದವು. ಒಂದು ಸಂಸ್ಕರಿಸಿ ಪುಡಿ ಮಾಡಿದ ಹಳದಿ ಬಣ್ಣದ ತಂಬಾಕು. ಇನ್ನೊಂದು ಉದ್ದನೆಯ ತಂಬಾಕಿನ ಎಲೆಯನ್ನು ಒಣಗಿಸಿ ಕಾಫೀ ಬಣ್ಣಕ್ಕೆ ತಿರುಗಿದ ನಂತರ ನೇರವಾಗಿ ಎಲೆಯನ್ನೆ ಮಾರುವಂಥ ತಂಬಾಕು. ಆಗ ಪಾನಪಟ್ಟಿ ತಯಾರಿಸುವಲ್ಲಿ ಈಗಿನಂತೆ ಆಧುನಿಕತೆ ಇರಲಿಲ್ಲ. ಆದರೆ ಆರೋಗ್ಯಕ್ಕೆ ಬೇಕಾದ ಎಲ್ಲವೂ ಇದ್ದವು. ಎಲೆಯ ಮೇಲೆ ಮೊದಲು ಸುಣ್ಣ ಕಲಿಸಿದ ನೀರು ಸವರುವುದು, ನಂತರ ಕಾಚು ಕಲಿಸಿದ ನೀರು ಸವರುವುದು. ತದನಂತರ ಸೋಪು, ಏಲಕ್ಕಿ ಕಾಳು, ಅರಕ್ ಹಾಕಿ ಚಮನ್ ಉದುರಿಸುವುದು. ಆಮೇಲೆ ಸ್ವಲ್ಪ ಹೆಚ್ಚಿದ ಕೊಬ್ಬರಿ ಹಾಕಿದ ನಂತರ ಎಲೆ ಮಡಚಿ ಲವಂಗ್ ಸಿಗಿಸಿ ಕೊಡುವುದು. ಮೀಠಾ ಪಾನ್ ಕೇಳಿದವರಿಗೆ ಗುಲಕಂದ್ ಹಾಕಿ ಕೊಡುವುದು. ಸಾದಾ ಅರಕ್ ಚಮನ್ ಕೇಳಿದರೆ ಸುಣ್ಣ ಕಾಚು ಸವರಿದ ಎಲೆಯ ಮೇಲೆ ಅರಕ್ ಚಮನ್ ಹಾಕಿದ ನಂತರ ಅಡಿಕೆ ಚೂರು ಹಾಕಿ ಕೊಡುವುದು. ಆಗ ಎಲೆಗಳಲ್ಲಿ ಎರಡು ಪ್ರಕಾರದವು ಇದ್ದವು. ಸಪ್ಪನೆಯ ಅಂಬಾಡಿ ಎಲೆಯನ್ನು ಜನ ಹೆಚ್ಚಾಗಿ ಕೇಳುತ್ತಿದ್ದರು. ತಂಬಾಕು ಜಗಿಯುವವರು ಖಾರವುಳ್ಳ ಕರಿ ಎಲೆಯನ್ನು ಕೇಳುತ್ತಿದ್ದರು.

ಮೊದಲ ದಿನ ಶಿವಪ್ಪ ಸ್ಟೂಲ್ ಮೇಲೆ ಕುಳಿತು ಡೆಮಾನ್‌ಸ್ಟ್ರೇಷನ್ ಮಾಡಿದ. ನಾನು ಹೊರಗೆ ಪಕ್ಕದಲ್ಲಿ ನಿಂತು ತದೇಕ ಚಿತ್ತದಿಂದ ನೋಡಿದೆ. ಗಿರಾಕಿಗಳು ಇಲ್ಲದಾಗ ನಾನೇ ಈ ರೀತಿ ಮಡಚಿ ಪ್ರಾಕ್ಟಿಕಲ್ ಮಾಡಿ ತೋರಿಸಿದೆ. ಶಿವಪ್ಪಗೆ ಬಹಳ ಸಂತೋಷವಾಯಿತು.

(ಪಾನಪಟ್ಟಿ)

ಬೀಡಿ ಕೇಳುವವರು ತಾವು ಇಷ್ಟಪಡುವ ಬ್ರಾಂಡಿನ  ಬೀಡಿಯನ್ನೇ ಕೇಳುತ್ತಾರೆ ಎಂಬುದನ್ನು ಜ್ಞಾಪಿಸಿದ ಶಿವಪ್ಪ, ಅವರು ಕೇಳಿದಾಗ ‘ಆ ಬ್ರಾಂಡ್ ಬೀಡಿ ಮುಗದಾವ್ರಿ, ನಾಳಿ ಬರತಾವ ಈಗ ಇದನ್ನ ತೊಗೊಳ್ರಿ, ಇದು ಅದೇ ಥರಾ ಐತಿ’ ಎಂದು ತಿಳಿಸುವ ಮೂಲಕ ಮಾರಾಟದ ಮ್ಯಾನೇಜಮೆಂಟ್ ಕಲಿಸಿದ. ನಾ ಹೂಂಗುಟ್ಟಿದೆ. ‘ನೀ ಭಾಳ್ ಶ್ಯಾನಾ ಅದಿ. ನಾಳಿಂದ ನೀನೇ ಅಂಗಡಿ ಮೇಲೆ ಕೂಡಬೇಕು. ನಾ ವಿಜಾಪುರದಿಂದ ಸಾಮಾನ ತರಿಸಿ ಹಾಕ್ತಾ ಇರ‍್ತೀನಿ. ಕೊಡ ನೀರ ತುಂಬಿಸಿ ಇಡ್ತೀನಿ. ಗೋಣಿ ಚೀಲದಾಗ ಎಳ್ಳ ಹಚ್ಚಿದ ಸಜ್ಜಿರೊಟ್ಟಿ ತುಂಬ್ಯಾವ. ಡಬ್ಯಾಗ ಅಗಸಿ ಹಿಂಡಿ ಐತಿ. ರೊಟ್ಟಿ ಮ್ಯಾಲ ಹಿಂಡಿ ಹಾಕು, ಅದರ ಮ್ಯಾಲ ಸ್ವಲ್ಪ ನೀರ ಹಾಕಿ ಕಲಿಸಿಕೊಂಡ ತಿನ್ನು. ನಾಳೆಯಿಂದ ನೀನೇ ಅಂಗಡಿ ಮಾಲಕ’ ಎಂದು ಹುರಿದುಂಬಿಸಿದ. ಇವತ್ತ ಒಂದ ತಾಸ ಸುತ್ತಾಡಿ ಬಾ. ನಾಳೆಯಿಂದ ಎಲ್ಲೀ ಹೋಗಾಕ ಆಗೂದಿಲ್ಲ ಎಂದು ತಿಳಿಸಿದ. ನನಗೋ ಆ ಇಡೀ ಪ್ರದೇಶದಲ್ಲಿ ಸುತ್ತಾಡಬೇಕಿತ್ತು. ಅಷ್ಟೇನು ಗದ್ದಲವಿಲ್ಲದ ಆ ದಿನ ಅಮೋಘಸಿದ್ಧನ ಗುಡಿ ಮುಂತಾದ ಸ್ಥಳಗಳನ್ನು ಸುತ್ತಿದೆ. ಮಕ್ಕಳ ಆಟದ ಸಾಮಾನುಗಳ ಅಂಗಡಿ, ಮಿಠಾಯಿ ಅಂಗಡಿ, ಭಂಡಾರ (ಪ್ರಸಾದರೂಪಿ ಅರಿಷಿಣ ಪುಡಿ) ಅಂಗಡಿ ಮುಂತಾದ ತಾತ್ಕಾಲಿಕ ಅಂಗಡಿಗಳು ಸಿದ್ಧವಾಗುತ್ತಿದ್ದವು. ಕೆಲವೊಂದು ಈಗಾಗಲೆ ಸಿದ್ಧವಾಗಿ ಗಿರಾಕಿಗಳನ್ನು ಎದುರುನೋಡುತ್ತಿದ್ದವು. ಇಡೀ ಕ್ಷೇತ್ರದರ್ಶನ ಮಾಡಿಕೊಂಡು ಸಂಜೆ ಏಳು ಗಂಟೆಗೆ ವಾಪಸಾದೆ.

ರಾತ್ರಿ ಅಂಗಡಿ ಪಕ್ಕದಲ್ಲಿ ಮಲಗಲು ಚಾಪೆ, ಜಮಖಾನಿ ಮತ್ತು ಕೌದಿಯ ವ್ಯವಸ್ಥೆ ಮಾಡಿದ್ದ. ತನಗೂ ತನ್ನ ಗೆಳೆಯನಿಗೂ ಹೀಗೇ ವ್ಯವಸ್ಥೆ ಮಾಡಿಕೊಂಡಿದ್ದ. ಆದರೆ ದಿನಗಳೆದಂತೆಲ್ಲ ಅವರು ರಾತ್ರಿ ಯಾವಾಗೋ ಬಂದು ಮಲಗುತ್ತಿದ್ದರು. ಬೆಳಿಗ್ಗೆ ತಾವು ನಿತ್ಯಕರ್ಮ ಪೂರೈಸಿಕೊಂಡು ಬಂದ ನಂತರ ನನಗೆ ಬಿಡುತ್ತಿದ್ದರು. ನಂತರ ಹೋದರೆಂದರೆ ಯಾವಾಗೋ ಬರುತ್ತಿದ್ದರು. ಕುಳಿತು ಕಾಲು ಹಿಡಿದ ಕಾರಣ ನಾನು ಒಂದಿಷ್ಟು ಎದ್ದು ಅಲ್ಲೇ ಪಕ್ಕದಲ್ಲೇ ಅವರ ಕಣ್ಣಿಗೆ ಕಾಣುವ ಹಾಗೆ ಸುತ್ತಾಡುತ್ತಿದ್ದೆ. ನಂತರ ಮತ್ತೆ ಹೋದರೆಂದರೆ ಸಾಯಂಕಾಲ ಬಂದು ನಿಲ್ಲುತ್ತಿದ್ದರು. ಗಲ್ಲೆಯಲ್ಲಿ ಸ್ವಲ್ಪ ಚಿಲ್ಲರೆ ಇಟ್ಟು ಉಳಿದ ಹಣವನ್ನು ಶಿವಪ್ಪ ತನ್ನ ಕುಂಬಳಛಾಟಿಯ ಜೇಬಿನಲ್ಲಿ ಸುರಕ್ಷಿತವಾಗಿ ಇಡುತ್ತಿದ್ದ.

ನಾನು ಸ್ವಲ್ಪ ಹೊರಬಂದು ಒಳಹೊಕ್ಕಿದನಂತರ ಅಂಗಡಿ ಮುಚ್ಚಿ ಮಲಗುವ ವರೆಗೂ ಅವರ ಸುದ್ದಿಯೇ ಇರುತ್ತಿರಲಿಲ್ಲ. ಎಂದಿನಂತೆ ರಾತ್ರಿ ಯಾವಾಗೋ ಬಂದು ಮಲಗುತ್ತಿದ್ದರು. ಕೆಲದಿನಗಳ ನಂತರ ನಾನು ಕೂಲಿ ಇಲ್ಲದ ಜೀತದಾಳಿನಂತಾಗಿದ್ದೇನೆ ಎಂಬುದು ಸ್ಪಷ್ಟವಾಯಿತು. ಬಹಳ ಬೇಸರವಾಗಲು ಶುರುವಾಯಿತು.

‘ಮಾಮಾ ನೀವಿಬ್ರೂ ರಾತ್ರಿ ಎಲ್ಲಿ ಹೋಗ್ತೀರಿ’ ಎಂದು ಒಂದು ದಿನ ಶಿವಪ್ಪನಿಗೆ ಕೇಳಿಯೇ ಬಿಟ್ಟೆ. ಅವನ ಗೆಳೆಯ ನಗುತ್ತ ‘ತೊಡಿ ಬದಲಾಯಿಸುವ ಹುಡುಕಾಟಕ್ಕೆ’ ಎಂದ. ನನಗೆ ಅರ್ಥವಾಗಲಿಲ್ಲ. ಆಗ ಒಬ್ಬ ಹಿರಿಯ ಗಿರಾಕಿ ನಿಂತಿದ್ದ. ಇವರಿಬ್ಬರೂ ಹೊರಟು ಹೋದರು. ನಾನು ಗೊಂದಲದಲ್ಲಿದ್ದೆ. ಆಗ ಹಿರಿಯ ಗ್ರಾಮಸ್ಥ ಭಕ್ತಿಭಾವದಿಂದ ಹೇಳಿದ ‘ತಮ್ಮಾ ನೀ ಸಣ್ಣಾವ. ನಿನಗ ತಿಳ್ಯೂದಿಲ್ಲ. ಆದರೂ ಹೇಳ್ತೀನಿ ಕೇಳು. ಇದು ಪವಿತ್ರ ಸ್ಥಳ. ಮಕ್ಕಳಾಗದವರು ಕೂಡ ಇಲ್ಲಿ ಗಂಡನ ಒಪ್ಪಿಗೆ ಪಡೆದು ಭಕ್ತಿಭಾವದಿಂದ ಬರ್ತಾರ. ಗುಡಿಸಲ ಹಾಕ್ಕೊಂಡು ಇರ್ತಾರ. ಹಗಲಹೊತ್ತು ಯಾವನಾದರೂ ಮನಸ್ಯಾನ ಕೂಡ ಪಟಾಯಿಸ್ತಂದರ ಅವನ ಕೂಡ ಮಲಗತಾರ. ಈ ಸಂಬಂಧದ ನಂತರ ಅವನ್ಯಾರೋ ಇವಳ್ಯಾರೋ. ಎಲ್ಲ ದೇವರ ಮಹಿಮೆ. ಹಿಂಗ ಬಸರಾದವರು ಮಕ್ಕಳ ಹಡದರ ಯಾವ ದೋಷ ಇಲ್ಲ ಎಂದು ಮುಂತಾಗಿ ಹೇಳಿದ. ಮುಂದೆ ಬಹಳ ದಿನಗಳ ನಂತರ ಇದರ ಮಜಕೂರ ತಿಳಿಯಿತು.

ಜಾತ್ರೆಗೆ ಹೋಗುವ ಅನೇಕ ಪರಿಚಯಸ್ಥರ ಜೊತೆ ಈ ಕುರಿತು ವಿಚಾರಿಸಿದೆ. ಆದರೆ ಈ ತೊಡಿ ಬದಲಾಯಿಸುವ ಬಗ್ಗೆ ಯಾರಿಗೂ ಗೊತ್ತಿಲ್ಲ. ಇದೊಂದು ಗೌಪ್ಯವಾದ ಎಡ್‌ಜೆಸ್ಟ್ಮೆಂಟ್ ಎಂಬುದರ ಅರಿವಾಯಿತು. ಕೊನೆಗೆ ಅಮೋಘಸಿದ್ಧನ ಬಗ್ಗೆ ಮಹಾಪ್ರಬಂಧ ಬರೆದ ಡಾ. ಚನ್ನಪ್ಪ ಕಟ್ಟಿಯವರನ್ನು ಕೇಳಿದೆ. ಅವರು ಕೂಡ ಈ ವಿಚಾರ ಗಮನಕ್ಕೆ ಬಂದಿಲ್ಲ ಎಂದು ತಿಳಿಸಿದರು. ಆದರೆ ಅಮೋಘಸಿದ್ಧನ ಕುರಿತ ಹಾಡಿನಲ್ಲಿ ಅವರೊಂದು ಸುಳಿವು ನೀಡಿದರು.

“ಬಡವಗ ಭಾಗ್ಯ ಕೊಟ್ಟವ ನೀನೆ
ಬಂಜೆಗೆ ಸಂತಾನ ಕೊಟ್ಟವ ನೀನೆ
ನಡಮನಿ ತೊಟ್ಟಿಲ ಕಟ್ಟಿಸಿದವ ನೀನೆ, ಅಮ್ಮೋಗಿ ನೀನೆ.”

ಎಂಬ ಹಾಡಿನ ಸಾಲುಗಳು ‘ಅಮೋಘಸಿದ್ಧ ಪರಂಪರೆ’ ಮಹಾಪ್ರಬಂಧದ ಪುಟ ೪೧ರಲ್ಲಿ ಇವೆ.
ಈ ಹಾಡಿನಲ್ಲಿ ಅಮೋಘಸಿದ್ಧ ಸೂಚ್ಯವಾಗಿ ಪುರುಷ ಪ್ರಾಧಾನ್ಯವನ್ನು ತಿರಸ್ಕರಿಸಿದ ಹಾಗೂ ಮಾತೆಯರ ಮಹತ್ವವನ್ನು ಸಾರಿದ ಅಂಶಗಳಿವೆ.
ಅಂತೂ ಶಿವಪ್ಪ ಮತ್ತು ಅವನ ಗೆಳೆಯ ಹರಗ್ಯಾಡುತ್ತ ಕಾಲ ಕಳೆದರು. ನನಗೋ ವಿಜಾಪುರಕ್ಕೆ ವಾಪಸ್ ಹೋದರೆ ಸಾಕಾಗಿತ್ತು. ಕೊನೆಯ ದಿನ ಮಧ್ಯಾಹ್ನದ ವೇಳೆ ಗೆಳೆಯನ ಜೊತೆ ಬೇಗ ಬಂದ ಶಿವಪ್ಪ, ‘ಇಂದು ಜಾತ್ರಿ ಐತಿ. ಎಲ್ಲಾ ಕಡೀಂದ ಭಾಳ ಪಲ್ಲಕ್ಕಿಗಳು ಬರ್ತಾವ. ನಾ ಭಾಳ ಸಲಾ ನೋಡಿನಿ. ಇವತ್ತ ನೀ ಎಲ್ಲಾ ಕಡೆ ಸುತ್ತಾಡು’ ಎಂದ.

(ಬಿಂಗ್ರಿ)

ನಾನು ನೀರಲ್ಲಿ ಕಲಿಸಿದ ಅಗಸಿ ಹಿಂಡಿ ಜೊತೆ ಸಜ್ಜಿರೊಟ್ಟಿ ತಿಂದು ತಿರುಗಾಡಲು ಹೊರಟೆ. ಜಾತ್ರೆ ನೋಡಲು ಹೋಗುವಾಗ ಆತ ಒಂದು ತೂತಿನ ದುಡ್ಡನ್ನೂ ಕೊಡಲಿಲ್ಲ. ನಾನು ಬರಿಗೈಯಿಂದ ಸುತ್ತಾಡಿದೆ. ರಸ್ತೆಯಲ್ಲಿ ಒಂದು ಹೊಸ ಬಿಂಗ್ರಿ ಸಿಕ್ಕಿತು. (ಗಾಡಿಯ ಗಾಲಿಯಂತಿರುವ ಚಿಕ್ಕದಾಗ ಚಕ್ರದಿಂದ ಕೂಡಿದ ಪ್ಲಾಸ್ಟಿಕ್  ಆಟಿಗೆ ವಸ್ತು ಅದು. ಅದಕ್ಕೆ ಮಧ್ಯದ ಗಡ್ಡಿಯ ಮೇಲೆ ಚಿಕ್ಕದಾದ ಹಿಡಿಕೆ ಇರುತ್ತದೆ. ಹೆಬ್ಬೆರಳು ಮತ್ತು ತೋರುಬೆರಳಲ್ಲಿ ಆ ಹಿಡಿಕೆ ಹಿಡಿದು ತಿರುವಿದಾಗ ಅದು ಜೋರಾಗಿ ತಿರುಗುವುದೇ ಒಂದು ಆನಂದ. ನನಗದು ಸಿಕ್ಕಾಗ ಎಲ್ಲ ಮರೆತು ಕಲ್ಪಡಿಯ ಕಡೆಗೆ ಹೋದೆ. ಅಲ್ಲಿ ಕುಳಿತು ತದೇಕ ಚಿತ್ತದಿಂದ ಬಿಂಗ್ರಿ ತಿರುಗಿಸಿದೆ ಆ ಹೊಸ ಕೆಂಪು ಬಿಂಗ್ರಿ ಜೋರಾಗಿ ತಿರುಗುತ್ತ ಧ್ಯಾನಸ್ಥ ಸ್ಥಿತಿ ತಲುಪುವುದನ್ನು ನೋಡಿದಾಗ ಖುಷಿಯಾಗಿ ಮತ್ತೆ ಮತ್ತೆ ತಿರುಗಿಸಬೇಕೆನಿಸುತ್ತಿತ್ತು.

ಇನ್ನೇನು ಕತ್ತಲಾಗುವ ಸಮಯ. ಬಿಂಗ್ರಿಯನ್ನು ಕಿಸೆಯಲ್ಲಿ ಇಟ್ಟುಕೊಂಡೆ. ಆಗ, ‘ಶಿವಪ್ಪ ನೋಡಿದರೆ?’ ಎಂಬ ಪ್ರಶ್ನೆ ತಲೆಯಲ್ಲಿ ಸುತ್ತತೊಡಗಿತು. ಚಿಂತೆ ಶುರುವಾಯಿತು. ಅವನು ನೋಡಿದರೆ ಖಂಡಿತವಾಗಿಯೂ ಗಲ್ಲಾಪೆಟ್ಟಿಗೆಯಿಂದ ನಾನು ಹಣ ಕದ್ದು ಬಿಂಗ್ರಿಯನ್ನು ಕೊಂಡಿದ್ದೇನೆ ಎಂದು ತಪ್ಪು ತಿಳಿಯುತ್ತಾನೆ. ಅವನಿಗೆ ಬಿಂಗ್ರಿ ತೋರಿಸಿ ರಸ್ತೆಯಲ್ಲಿ ಸಿಕ್ಕಿದ್ದು ಎಂಬ ಸತ್ಯ ಹೇಳಿದರೆ ಆತ ನಂಬುವುದಿಲ್ಲ ಎನಿಸುತ್ತದೆ. ಏಕೆಂದರೆ ಆ ಬಿಂಗ್ರಿ ಹೊಸದಾಗಿದೆ. ಕೊನೆಗೆ ಒಂದು ಯೋಚನೆ ಬಂತು. ಅದನ್ನು ಹಳೆಯದು ಮಾಡುವ ಉದ್ದೇಶದಿಂದ ಅದರ ಮೇಲೆ ಮಣ್ಣು ಹಾಕಿ ತಿಕ್ಕಿದೆ. ನಂತರ ಒರೆಸಿ ನೋಡಿದರೂ ಪ್ರಯೋಜನವಾಗಲಿಲ್ಲ. ಏಕೆಂದರೆ ಆ ‘ಹೊಲಸು’ ಬಿಂಗ್ರಿ ಹೊಲಸಾಗದೆ ತನ್ನ ಹೊಳಪನ್ನು ಉಳಿಸಿಕೊಂಡು ನನ್ನನ್ನು ಅಣುಕಿಸಿದಂತಾಯಿತು. ಕೊನೆಗೆ ಬಹಳ ಬೇಸರದಿಂದ ಆ ಸುಂದರ ಬಿಂಗ್ರಿಯ ಗಾಲಿಯನ್ನು ಕಟ್ ಮಾಡಿ ಬರಿ ಗಡ್ಡೆಯನ್ನು ಉಳಿಸಿಕೊಂಡೆ. ಅದನ್ನು ತಿರುಗಿಸಿದಾಗ ಅದು ತಿರುಗಿತು. ಆದರೆ ಮೊದಲಿನ ಸುಖ ಕೊಡಲಿಲ್ಲ. ಅದನ್ನು ಜೇಬಿನಲ್ಲಿ ಹಾಕಿಕೊಂಡು ವಾಪಸ್ ಹೋದೆ.

(ಚಿತ್ರಗಳು: ಸುನೀಲ ಸುಧಾಕರ)