ಶನಿವಾರಗಳಲ್ಲಿ ಶ್ರದ್ಧೆಯಿಂದ ಭಜನೆ ಮಾಡುತ್ತಿದ್ದ ಯಾವ ಗಂಡುಮಗನೂ ಶ್ರೀಮಾತಾ ಭಜನಾ ಮಂಡಳಿಯ ಹೆಣ್ಣುಮಕ್ಕಳಿಗೆ ಎಂದೂ ಅವರ ಭಜನೆಯಲ್ಲಿ ಸಹಾಯ ಮಾಡಿದ್ದಿಲ್ಲ. ಹೆಂಗಳೆಯರೆಲ್ಲಾ ಭಜನೆಗೆ ಸೇರಿದರೆ ಗಂಡಸರು ಮನೆಯಲ್ಲಿ ಬೇಕಾದ ಚಾನೆಲ್ ತಿರುಗಿಸುತ್ತಾ ಟಿವಿ ನೋಡುವುದು ಮಠದ ಪ್ರಾಂಗಣದಲ್ಲಿ ಹರಟೆ ಕೊಚ್ಚುವುದೂ, ಸಾಬರ ಬೀದಿಯಲ್ಲಿ ಕೂತು ಸ್ನೇಹಿತರೊಟ್ಟಿಗೆ ಬೀಡಿ ಸೇದುವುದು ಮಾಡುತ್ತಿದ್ದರು. ಆದರೆ ಈ ಗಂಡುಭಜನೆಗಳಿಗೆ ಮಹಿಳಾಮಣಿಗಳು ಪ್ರಸಾದ ಮಾಡುವುದರಿಂದ ಹಿಡಿದು ಸಮಸ್ತ ತಯಾರಿಗಳನ್ನು ಮಾಡಿಕೊಡುವುದಲ್ಲದೇ ಚಂದದ ಸೀರೆಗಳನ್ನುಟ್ಟು ಅಲಂಕಾರ ಮಾಡಿಕೊಂಡು ಗುಡಿಯ ಪ್ರಾಂಗಣದಲ್ಲಿ ತಿರುಗುತ್ತಿದ್ದರು.
ಮಧುರಾಣಿ ಬರೆಯುವ ‘ಮಠದ ಕೇರಿ’ ಕಥಾನಕ

 

ಊರ ಹೊರಾಂಗಣಕ್ಕೆ ಇರುವಂತೆ ಮಠದ ಕೇರಿಯ ಹೊರಗೂ ಒಂದು ಆಂಜನೇಯನ ಗುಡಿ ಇತ್ತು. ಬೇರೆ ದೇವರುಗಳೆಲ್ಲ ಒಟ್ಟಾಗಿ ಗುಂಪುಗುಂಪಾಗಿ ದೇವಸ್ಥಾನಗಳ ಒಳಗಿದ್ದರೆ ಆಂಜನೇಯ ಮಾತ್ರ ನಂಗೇನು ಭಯವಿಲ್ಲ ಎಂಬಂತೆ ಒಂಟಿಯಾಗಿ ಗದೆ ಹೊತ್ತು ಮೂತಿ ಊದಿಸಿಕೊಂಡು ಹೊರಗೆ ನಿಂತಿದ್ದ. ಹಗಲಿನಲ್ಲಿ ಗಿಜಿಗುಟ್ಟುತ್ತಿದ್ದ ಗುಡಿಯ ಪ್ರಾಂಗಣದ ಹೊರಗೆ ಮಾತ್ರ ವಿದ್ಯುದ್ದೀಪಗಳಿದ್ದು, ಹಳೆ ಕಾಲದ ಕಲ್ಲಿನ ಗರ್ಭಗುಡಿಯಲ್ಲಿ ಸಂಜೆ ಹೊತ್ತು ಬರೀ ಹಣತೆಯ ಬೆಳಕು. ಆಳೆತ್ತರಕ್ಕೆ ನಿಂತಿರುತ್ತಿದ್ದ ಕರೀಕಲ್ಲಿನ ಹನುಮನ ಮೈಗೆಲ್ಲಾ ಬಳಿದಿರುತ್ತಿದ್ದ ಕೇಸರಿ ಬೇರೆ! ಇಷ್ಟಗಲ ಕಣ್ಣಿನ ಹನುಮ ದೇವರಾದರೂ ಒಮ್ಮೊಮ್ಮೆ ಭಯಂಕರವಾಗಿ ಕಾಣುತ್ತಿದ್ದ. ಉಳಿದಂತೆ ಅಲ್ಲೊಂದು ಗುಡಿ ಇರುವುದನ್ನೇ ಮರೆತಿರುತ್ತಿದ್ದ ಕೇರಿಯವರು ಶನಿವಾರ ಹುಟ್ಟಿದರೆ ಅನ್ಯದೈವವಿಲ್ಲ ಎಂಬಂತೆ ಹನುಮನಿಗೆ ಪೂಜೆ ಸಲ್ಲಿಸುತ್ತಿದ್ದರು.

ಪೂಜೆಯ ಭಾಗವಾಗಿ ಬೆಳಗಿನಜಾವಕ್ಕೆ ರಂಗೋಲಿ ಹಾಕುವುದೇ ಹುಡುಗಿಯರಿಗೆ ದೊಡ್ಡ ಸಂಭ್ರಮ. ಹನುಮನು ಬ್ರಹ್ಮಚಾರಿ ದೈವವಾದ್ದರಿಂದ ಅಂದು ಬ್ರಹ್ಮಚಾರಿಗಳ ದೊಡ್ಡ ದಂಡೇ ಗುಡಿಗೆ ಸಾಗಿ ಬರುತ್ತಿತ್ತು. ಈ ಗಂಡು ಭಕ್ತರ ಸ್ನೇಹಿತೆಯರೇ ಭಾಗಶಃ ಇಲ್ಲಿ ರಂಗೋಲೆ ನೆಪದಲ್ಲಿ ಸೇರುತ್ತಿದ್ದರು. ಇದರ ಪರಿವೆಯೇ ಇಲ್ಲದ ನಮ್ಮಂತಹ ಚಿಳ್ಳೆಪಿಳ್ಳೆಗಳು ಅವರ ಸುತ್ತಾ ಮುತ್ತಿಕೊಂಡು ಭಾರೀ ಪೀಡಿಸುತ್ತಿದ್ದೆವು. “ಅಕ್ಕ ನಮಗೂ ಸ್ವಲ್ಪ ಬಣ್ಣ ಕೊಡೇ.. ನಾನೂ ಚುಕ್ಕಿ ಸೇರಿಸುತ್ತೇನೆ ಪ್ಲೀಸ್…” ಅನ್ನುವ ನಮ್ಮ ಅಸಹಾಯಕ ಮನವಿಗಳಿಗೆ ಬದಲಾಗಿ ಅವರು ಚೀಟಿಗಳನ್ನೋ ಉಡುಗೊರೆಗಳನ್ನೋ ನಮ್ಮ ಮಧ್ಯಸ್ಥಿಕೆಯಲ್ಲಿ ಬದಲಾಯಿಸಿಕೊಳ್ಳುತ್ತಿದ್ದರು. ಆಮೇಲೆ ಮನೆಯಲ್ಲಿ ಹಿರಿಯರಿಗೆ ಹೇಳಬಾರದೆಂದು ತಾಕೀತು ಮಾಡುತ್ತಿದ್ದರು. ದುರಂತವೆಂದರೆ ಅವುಗಳಲ್ಲಿ ಅರ್ಧ ಪ್ರೇಮಕಥೆಗಳು ಸ್ವಗೋತ್ರ ಎಂದೋ ಕೌಟುಂಬಿಕ ದ್ವೇಷಕ್ಕೆ ಗುರಿಯಾಗಿಯೋ ಮುರಿದು ಬೀಳುತ್ತಿದ್ದವು. ಹಾಗೆ ದುರಂತ ಕಂಡ ನಂತರ ಆ ಹುಡುಗಿಯರೆಲ್ಲ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ನಿಂಬೆಹಣ್ಣಿನ ದೀಪ ಹಚ್ಚಲು ಹೋಗುತ್ತಿದ್ದರು.

ಇಂತಿಪ್ಪ ಮುಖ್ಯಪ್ರಾಣನ ಗುಡಿಯಲ್ಲಿ ಪ್ರತಿ ಶನಿವಾರ ಸಂಜೆ ಭಯಂಕರ ಭಜನಾ ಕಾರ್ಯಕ್ರಮವೊಂದು ಏರ್ಪಾಡಾಗುತ್ತಿತ್ತು. ಅಂದು ಸಂಜೆ ಕೇರಿಯ ದೊಡ್ಡ ಗಂಡಸರೆಲ್ಲಾ ನೆರೆದು ವಿವಿಧ ವಾದ್ಯಗಳೊಂದಿಗೆ ಕರ್ಣಕಠೋರವಾದ ಗೀತೆಗಳನ್ನು ಹಾಡಿಕೊಂಡು ಸುಮಾರು ಮೂರು ಗಂಟೆಗಳ ಕಾಲ ಬಹುದೊಡ್ಡ ಗದ್ದಲವೆಬ್ಬಿಸುತ್ತಿದ್ದರು. ಎರಡೆರಡು ಜೋಡಿ ತಬಲ, ಮೃದಂಗ, ತಾಳವಾದ್ಯಗಳು, ತಂಬೂರಿ ಹಾರ್ಮೋನಿಯಂಗಳು, ಗಂಟೆ-ಜಾಗಟೆಗಳು ಹೊರಡಿಸುವ ಭಯಾನಕ ಧ್ವನಿತರಂಗಗಳಿಗೆ ಹೆದರಿ ನಾವೆಲ್ಲಾ ಸುಂಡಿಲಿ ಮರಿಗಳಂತೆ ಅಡಗಿ ಕೂರುತ್ತಿದ್ದೆವು. ಅದರಲ್ಲೂ ಕೆಲವರು ಭಜನೆಯ ಲಯ ಹತ್ತಿ ಕೈಗೆ ಸಿಕ್ಕ ವಾದ್ಯಗಳನ್ನು ಭೂಮ್ಯಾಕಾಶ ಸೀಳುವಂತೆ ಬಾರಿಸುತ್ತಾ ಕಣ್ಣುಮುಚ್ಚಿ ಜ್ಞಾನವಿಲ್ಲದೆ ಹಾಡುತ್ತಾ ನರನಾಡಿಗಳು ಸೀಳುವಂತೆ ಭೋರಿಡುತ್ತಿದ್ದರು. ಅದು ಯಾವ ರಾಗವೋ.. ಯಾವ ತಾಳವೋ… ಯಾವ ಶೃತಿಯೋ ಲಯವೋ… ಅದೂ ಸಾಲದೆಂಬಂತೆ ನಾವು ಮಕ್ಕಳು ಕಣ್ಣಿಗೆ ಬಿದ್ದರೆ ಸಾಕು, ಜೋರಾಗಿ ತಾಳ ಬಡಿಯುತ್ತಾ ನಮ್ಮನ್ನೇ ಕೆಕ್ಕರಿಸುತ್ತಿದ್ದರು.

ಇವರು ಭಜನೆಯ ನೆಪದಲ್ಲಿ ಯಾವುದೋ ಸಿಟ್ಟು ತೀರಿಸಿಕೊಳ್ಳುತ್ತಿದ್ದುದು ಎಂತಹವರಿಗೂ ತಿಳಿಯುತ್ತಿತ್ತು. ಈ ರೌದ್ರಾವತಾರಗಳಿಗೆ ಹೆದರಿದ ನಾವು ಗುಡಿಯ ಅಜ್ಞಾತ ಮೂಲೆಗೆ ಕಚ್ಚಿಕೊಂಡು ಕೈ-ಕೈ ಹಿಡಿದು ಕೂರುತ್ತಿದ್ದೆವು. ಶನಿವಾರದ ಭಜನೆಗಳಿಗೆ ಮಾತ್ರ ತ್ರಿಮತಸ್ಥರೂ ಯಾವುದೇ ಭೇದಭಾವವಿಲ್ಲದೇ ಒಂದಾಗಿ ಸೇರುತ್ತಿದ್ದರು.

ಈ ಗಂಡಸರ ಭಜನೆಗಳು ಹೆಣ್ಣುಮಕ್ಕಳ ‘ಶ್ರೀಮಾತಾ ಮಹಿಳಾ ಮಂಡಳಿ’ಯ ಭಜನೆಗಳಂತೆ ಸುಮಧುರ ಅನುನಯದ ಗಾಯನದಿಂದ ಮನತಣಿಸುವಂತೆ ಇರುತ್ತಿರಲಿಲ್ಲ. ಕೇರಿಯ ಮಾತೆಯರೆಲ್ಲರೂ ಶಾಸ್ತ್ರೀಯ ಹಿನ್ನೆಲೆಯ ಚಂದದ ಭಕ್ತಿಗೀತೆಗಳನ್ನು ದಾಸರಪದಗಳನ್ನು ಲಲಿತಾ ಸಹಸ್ರನಾಮ ಸ್ತೋತ್ರವನ್ನು ಹಾಡುತ್ತಿದ್ದರು. ಆದರೆ ಅದೇ ಮನೆಯ ಗಂಡು ಸಂತಾನಗಳೆಲ್ಲ ಇವರ ಮೇಲೆ ಹಗೆ ಸಾಧಿಸಲೆಂಬಂತೆ ಶನಿವಾರ ಆಂಜನೇಯನ ಮೇಲೆ ಮುಗಿ ಬೀಳುತ್ತಿದ್ದರು. ಇದೆಲ್ಲಾ ಗೊತ್ತಿದ್ದೂ ಈ ಸಂಭ್ರಮದಲ್ಲಿ ಪಾಲ್ಗೊಳ್ಳಲು ಹೆದರಿಕೊಂಡೇ ಭಜನೆ ತಂಡದ ಬೆನ್ನಹಿಂದೆ ಸಾಧ್ಯವಾದಷ್ಟು ಹೊತ್ತು ಕೂರುತಿದ್ದೆವು.

ಭಜನೆಯ ಕೊನೆಯಲ್ಲಿ ಕೊಡಮಾಡುವ ಪ್ರಸಾದ ನಮ್ಮ ಪ್ರಮುಖ ಆಕರ್ಷಣೆ. ಗುಡಿಯ ಕಡಲೆಕಾಳು ಉಸುಳಿ, ಕಡ್ಲೆ ಹಿಟ್ಟು ಅದೇನೋ ರುಚಿ! ಬರಗೆಟ್ಟವರಂತೆ ಸರತಿ ಸಾಲಿನಲ್ಲಿ ನಿಂತು ಮುಷ್ಟಿ ತುಂಬುವಷ್ಟು ಕಾಳುಗಳನ್ನು ಧನ್ಯತಾಭಾವದಿಂದ ಸ್ವೀಕರಿಸಿ ಒಂದೊಂದೇ ಕಾಳುಗಳನ್ನು ತಿನ್ನುತ್ತಾ ಮಾತಾಡತೊಡಗಿದರೆ ರಾತ್ರಿ ಊಟಕ್ಕೇ ಮನೆಯ ಮುಖ ನೋಡುತ್ತಿದ್ದುದು, ಅದೂ ಬೈಗುಳ‌ ಬಿದ್ದ ಮೇಲೆಯೇ…

ಶನಿವಾರಗಳಲ್ಲಿ ಶ್ರದ್ಧೆಯಿಂದ ಭಜನೆ ಮಾಡುತ್ತಿದ್ದ ಯಾವ ಗಂಡುಮಗನೂ ಶ್ರೀಮಾತಾ ಭಜನಾ ಮಂಡಳಿಯ ಹೆಣ್ಣುಮಕ್ಕಳಿಗೆ ಎಂದೂ ಅವರ ಭಜನೆಯಲ್ಲಿ ಸಹಾಯ ಮಾಡಿದ್ದಿಲ್ಲ. ಹೆಂಗಳೆಯರೆಲ್ಲಾ ಭಜನೆಗೆ ಸೇರಿದರೆ ಗಂಡಸರು ಮನೆಯಲ್ಲಿ ಬೇಕಾದ ಚಾನೆಲ್ ತಿರುಗಿಸುತ್ತಾ ಟಿವಿ ನೋಡುವುದು ಮಠದ ಪ್ರಾಂಗಣದಲ್ಲಿ ಹರಟೆ ಕೊಚ್ಚುವುದೂ, ಸಾಬರ ಬೀದಿಯಲ್ಲಿ ಕೂತು ಸ್ನೇಹಿತರೊಟ್ಟಿಗೆ ಬೀಡಿ ಸೇದುವುದು ಮಾಡುತ್ತಿದ್ದರು. ಆದರೆ ಈ ಗಂಡುಭಜನೆಗಳಿಗೆ ಮಹಿಳಾಮಣಿಗಳು ಪ್ರಸಾದ ಮಾಡುವುದರಿಂದ ಹಿಡಿದು ಸಮಸ್ತ ತಯಾರಿಗಳನ್ನು ಮಾಡಿಕೊಡುವುದಲ್ಲದೇ ಚಂದದ ಸೀರೆಗಳನ್ನುಟ್ಟು ಅಲಂಕಾರ ಮಾಡಿಕೊಂಡು ಗುಡಿಯ ಪ್ರಾಂಗಣದಲ್ಲಿ ತಿರುಗುತ್ತಿದ್ದರು. ಇದು ಭಜನಾಕಾರರ ಹುಮ್ಮಸ್ಸನ್ನು ಇಮ್ಮಡಿಗೊಳಿಸುತ್ತಿತ್ತು.

ಕೇರಿಯಲ್ಲಿ ಸಮಸ್ತ ಸಂಗೀತಗಾರರಿಗೂ ಏಕೈಕ ಶಾಸ್ತ್ರೀಯ ಸಂಗೀತದ ಗುರುವೆಂದರೆ ಪರಿಮಳ ಮಾಮಿ. ಅವರ ಸಂಗೀತದ ಗರಡಿಯಲ್ಲಿ ಎಲ್ಲಾ ವಯಸ್ಸಿನ ಮಕ್ಕಳು, ಹೆಂಗಳೆಯರು, ದೊಡ್ಡವರು ಶಿಷ್ಯತ್ವ ಪಡೆದಿದ್ದರು. ನಾನು ಚಿಕ್ಕಂದಿನಲ್ಲಿ ಅಜ್ಜಿಮನೆಯಲ್ಲಿ ಬೆಳೆದ ಕಾರಣ ಸ್ವಲ್ಪ ದೊಡ್ಡವಳಾದ ಮೇಲೆ ಅವರ ಶಿಷ್ಯತ್ವ ಶಿರಸಾವಹಿಸುವ ಪುಣ್ಯ ದೊರಕಿತು. ನನಗಿಂತ ಪಾಠಗಳಲ್ಲಿ ಮುಂದೆ ಹೋಗಿದ್ದ ಕಿರಿಯರು ನನಗೆ ಸೀನಿಯರ್ಸ್..! ನಾನಿನ್ನೂ ಯಾವಾಗ ‘ಪದುಮನಾಭ… ಪರಮಪುರುಷ..’ ಎನ್ನುವೆನೋ ಎಂದು ಕನಸುವುದರಲ್ಲೇ ಹಲವು ರಾತ್ರಿಗಳನ್ನು ಕಳೆಯುತ್ತಿದ್ದೆ. ಜೊತೆಜೊತೆಗೆ ಕಾರ್ಯಕ್ರಮಗಳಲ್ಲಿ ಹಾಡಲೆಂದು ಪರಿಮಳ ಮಾಮಿ ತಿಂಗಳಿಗೊಂದರಂತೆ ದಾಸರ ಪದಗಳನ್ನು ಕಲಿಸುತ್ತಿದ್ದರು.

ಶಾಸ್ತ್ರೀಯ ಸ್ವರಪ್ರಸ್ತಾರದ ರಾಗವಾಗಿ ಹಾಡುವಂತೆ ಇರುತ್ತಿದ್ದ ಈ ಭಜನೆಗಳ ಪ್ರಭಾವದಿಂದ ಶಾಲೆಗಳಲ್ಲಿ ದೇವಸ್ಥಾನಗಳಲ್ಲಿ ಏರ್ಪಡುತ್ತಿದ್ದ ಹಾಡಿನ ಸ್ಪರ್ಧೆಗಳಲ್ಲಿ ಪರಿಮಳ ಮಾಮಿಯ ಶಿಷ್ಯರಿಗೇ ಮೊದಲ ಸ್ಥಾನ! ನಾವು ದೊಡ್ಡ ಸಂಗೀತಗಾರರು ಎಂಬ ಕೊಬ್ಬು ಬರಲು ಇದೇ ಮುಖ್ಯ ಕಾರಣ. ಹಾಗಾಗಿಯೇ ದೇವಸ್ಥಾನದ ಭಜನೆಗಳ ಬೆನ್ನಿಗೆ ಕೂರುವುದು ನಮ್ಮ ಜನ್ಮಸಿದ್ಧ ಹಕ್ಕು, ಘನತೆಗೆ ತಕ್ಕ ನಡವಳಿಕೆಯೆಂಬ ಗರ್ವ ನಮಗೆ. ಈ ಆಂಜನೇಯ ಭಜನಾ ಮಂಡಳಿಯ ಗಂಡಸರೆಲ್ಲಾ ಚಿಕ್ಕಂದಿನಲ್ಲಿ ನಾವು ಮತ್ತು ನಮ್ಮ ಸ್ನೇಹಿತರಂತೆ ಪರಿಮಳ ಮಾಮಿಯ ಬಳಿ ಸಂಗೀತ ಕಲಿತವರೇ. ಪರೀಕ್ಷೆ ಕಟ್ಟದೇ ಕೇವಲ ತಳಮಟ್ಟದ ಸಂಗೀತ ಜ್ಞಾನದಲ್ಲಿ ಕಲಿತ ಪದಗಳನ್ನೇ ಈಗಲೂ ಹಾಡುತ್ತಿದ್ದರು. ಅವೇ ಪದಗಳನ್ನು ಕೀರ್ತನೆಗಳನ್ನು ನಮ್ಮ ಕಾಲಕ್ಕೆ ನಾವು ಕಲಿಯುತ್ತಿದ್ದೆವು. ಹಾಗಾಗಿ ನಾವೆಲ್ಲ ಒಂದೇ ಸಂಗೀತ ಗುರುಕುಲದ ರೆಂಬೆಕೊಂಬೆಗಳಾಗಿದ್ದೆವು.

ಯಾರಿಗೆ ಯಾವ ಹಾಡು ಎಷ್ಟು ಲೀಲಾಜಾಲವಾಗಿ ಬರುತ್ತದೆ ಎಂಬುದರ ಮೇಲೆ ಅವರು ಪರಿಮಳ ಮಾಮಿಯಲ್ಲಿ ಎಷ್ಟು ಕಾಲ ಶಿಷ್ಯವೃತ್ತಿ ಮಾಡಿದವರು ಎಂಬುದು ತಿಳಿದುಬರುತ್ತಿತ್ತು. ಉದಾಹರಣೆಗೆ “ಬ್ರೋssಚೇsವಾ..sರೆವರುರಾ..” ಎಂಬಂತಹ ಕೀರ್ತನೆಗಳನ್ನು ಲೀಲಾಜಾಲವಾಗಿ ಹಾಡಿದರೆ ಅವರು ಬಹುಕಾಲದವರೆಗೆ ಕಲಿತ ಸೀನಿಯರ್ಸ್! ಹಾಗಲ್ಲದೆ ಕೇವಲ “ದಾಸನ ಮಾಡಿಕೊ ಎನ್ನ..” ಎಂದು ಹಾಡಿಬಿಟ್ಟರೆ ಅವರು ಚಿಲ್ಲರೆ ಶಿಷ್ಯರು. ಸುಮಾರು ಮೂರು ತಲೆಮಾರುಗಳ ಮಠದ ಕೇರಿಯ ಸಂಗೀತ ಸಾಮ್ರಾಜ್ಯದ ಬೆನ್ನೆಲುಬು ಪರಿಮಳ ಮಾಮಿಯೇ ಎಂಬುದು ಹೆಗ್ಗಳಿಕೆ.

ಕೆಲವರು ಭಜನೆಯ ಲಯ ಹತ್ತಿ ಕೈಗೆ ಸಿಕ್ಕ ವಾದ್ಯಗಳನ್ನು ಭೂಮ್ಯಾಕಾಶ ಸೀಳುವಂತೆ ಬಾರಿಸುತ್ತಾ ಕಣ್ಣುಮುಚ್ಚಿ ಜ್ಞಾನವಿಲ್ಲದೆ ಹಾಡುತ್ತಾ ನರನಾಡಿಗಳು ಸೀಳುವಂತೆ ಭೋರಿಡುತ್ತಿದ್ದರು. ಅದು ಯಾವ ರಾಗವೋ.. ಯಾವ ತಾಳವೋ… ಯಾವ ಶೃತಿಯೋ ಲಯವೋ…

ಪರಿಮಳ ಮಾಮಿಯ ಶಿಷ್ಯರಲ್ಲಿ ಮಾಮೂಲಿನಂತೆ ಮೂರು ಭಾಗ. ಮೂರು ಭಾಗಗಳು ಮೂರು ಬಣಗಳಾಗಿ ನಂತರದಲ್ಲಿ ಒಂದಕ್ಕೊಂದು ಭಯಾನಕ ಎದುರಾಳಿಗಳಾಗಿ “ನೀನು ನೀನೇ…. ಇಲ್ಲಿ ನಾನು ನಾನೇ..” ಎಂದು ಸಂಗೀತ ಯುದ್ಧ ನಡೆಸುತ್ತಿದ್ದವು. ಕೆನೆ ಪದರದ ಶಿಷ್ಯರನ್ನು ಮೂರನೇ ಬಣದ ಶಿಷ್ಯರು ತಾನ್‌ಸೇನರೆಂದು ಗೇಲಿ ಮಾಡುತ್ತಿದ್ದರು. ‘TS’ ಎಂದೇ ಖ್ಯಾತರಾಗಿದ್ದ ಮೊದಲ ಬಣದ ಶಿಷ್ಯರು ಎರಡು ಮೂರರವರನ್ನು *ಕಣ್ಣೀರುಗಳು* ಎಂದು ಛೇಡಿಸುತ್ತಿದ್ದರು.

ಸಾಧಾರಣವಾಗಿ ಮೂರನೇ ಬಣದವರು ಜನ್ಮತಃ ಸಂಗೀತಗಾರರಾಗಿದ್ದ ಅವರ ಅಪ್ಪ ಅಮ್ಮನ ಬಲವಂತದಿಂದ ಪ್ರತಿಷ್ಠೆಯ ಪ್ರಶ್ನೆಗಾಗಿ ಮಾಮಿಯ ಮನೆಗೆ ದೂಡಲ್ಪಟ್ಟವರು. ಪರಿಪರಿಯ ಬೈಗುಳಗಳನ್ನು ತಿಂದು ಒಂದು ಆಲಾಪ ತೆಗೆಯುವಷ್ಟರಲ್ಲಿ ಅವರಿಗೆ ಅಳುವೇ ಬರುತ್ತಿತ್ತು. ಈಗ ಆಂಜನೇಯನ ಗುಡಿಯಲ್ಲಿ ಪ್ರತಿ ಶನಿವಾರ ಕರ್ಕಶವಾದ ಹೊರಡಿಸುವವರಲ್ಲಿ ಬಹುತೇಕ ಆ ‘ಕಣ್ಣೀರು’ಗಳೇ ಇದ್ದರು ಎನ್ನುವುದು ವಿಪರ್ಯಾಸವೋ ಸುಸ್ಪಷ್ಟವೋ ಅಥವಾ ಕೇಳುಗರ ಹಣೆಬರಹವೋ ಆಂಜನೇಯನೇ ಬಲ್ಲ. ಆಂಜನೇಯನೂ ಕೂಡ ಒಬ್ಬ ಭಯಂಕರ ದೇವರೇ ಆಗಿರುವುದರಿಂದ ಅವನಿಗೆ ಈ ಪರಿಯ ಕರ್ಕಶ ಭಜನೆಗಳು ಇಷ್ಟವಾಗಬಹುದೆಂದು ದೀಪದ ಬೆಳಕಲ್ಲಿ ಅವನನ್ನು ಕಂಡು ಹೆದರಿದ ನಾವುಗಳು ತೀರ್ಮಾನಿಸಿದ್ದೆವು.

ಇದು ಇಷ್ಟಕ್ಕೆ ನಿಲ್ಲದೆ ಈ ಭಜನೆಗಳು ಪ್ರತಿಷ್ಠೆಯೇ ಕೇಂದ್ರಗಳೂ ಆಗಿದ್ದವು ಮತ್ತು ಆ ಪ್ರತಿಷ್ಠೆಗಳು ರೋಚಕ ಹಾಗೂ ವಿಚಿತ್ರದವೂ ಆಗಿರುತ್ತಿದ್ದವು. ಒಂದು ಶ್ರಾವಣ ಮಾಸ ಪೂರ್ತಿ ಪ್ರಸಾದ ಮಾಡಿಸುವುದು, ಕಾರ್ತಿಕ ಮಾಸ ಪೂರ್ತಿ ದೀಪ ಬೆಳಗುವುದು, ಚೈತ್ರ ಮಾಸ ಪೂರ್ತಿ ಹೂವಿನ ಅಲಂಕಾರ, ಆಷಾಢದ ಅಷ್ಟೂ ಶನಿವಾರಗಳಲ್ಲಿ ಬೆಣ್ಣೆ-ಹಣ್ಣು ಇತ್ಯಾದಿಗಳ ಅಲಂಕಾರ ಮಾಡಿಸುವುದು, ನೂರಾವೊಂದು ಜನರಿಗೆ ಶಲ್ಯ ಸೇವೆ (ಹೊದೆಯಲು ಮಾತ್ರ ಕೊಟ್ಟರೆ ಸಾಕೇ ಎಂಬುದು ನನ್ನ ಯಾವತ್ತಿನ ಪ್ರಶ್ನೆ) ಹೀಗೆ..! ಈ ಪ್ರತಿಷ್ಠೆ ನಡೆಸುವುದೂ ಇದಕ್ಕೆ ಭಾಜನರಾಗುವದೂ ಬಹಳ ಗರ್ವದ ವಿಚಾರವಾಗಿತ್ತು. ಭಜನೆಯ ದಿನಗಳಲ್ಲಿ ಹಾಗೂ ಇಂತಹ ಪ್ರತಿಷ್ಠೆಯ ಆಚರಣೆಗಳಲ್ಲಿ ತ್ರಿಮತಸ್ಥರೂ ಒಗ್ಗೂಡುತ್ತಿದ್ದರು. ಮತಗಳು ಬೆರೆತರೂ ಬಡವ-ಶ್ರೀಮಂತ ಬೆರೆಯುವುದು ಕಷ್ಟವಿತ್ತು ಎನ್ನುವುದು ಯಾವತ್ತಿನ ವಾಸ್ತವ.

ನಾನು ಬಾಣಂತನಕ್ಕೆಂದು ಅಮ್ಮನ ಮನೆಗೆ ಹೋದಾಗ ಭಜನೆಯ ಘನಘೋರ ಸದ್ದಿಗೆ ಹೆದರಿ ನನ್ನ ಆರು ತಿಂಗಳ ಕೂಸಿಗೆ ಜ್ವರವೇ ಕಾಡಿತ್ತು. ಬಡಾಮಕಾನಿಯ ಧೂಳತದಿಂದ ಮಗುವಿಗೆ ವಾಸಿಯಾಯಿತು. ಪುಟ್ಟ ಮಕ್ಕಳನ್ನು ಸಲಹುವಲ್ಲಿ ಈ ಆಂಜನೇಯನಿಗೂ ಬಡಾಮಕಾನಿಗೂ ಯಾವಾಗಲೂ ಪೈಪೋಟಿ ಬೀಳುತ್ತಿತ್ತು. ಅಲ್ಲಿ ಹೆದರಿದರೆ ಇಲ್ಲಿ, ಇಲ್ಲಿ ಹೆದರಿದರೆ ಅಲ್ಲಿ ತಾಯತುಗಳು ತಯಾರಾಗುತ್ತಿದ್ದವು. ಮನುಷ್ಯನ ಧರ್ಮಕ್ರೌರ್ಯವನ್ನು ಮೀರಿದ ವ್ಯಂಗ್ಯಚಿತ್ರದಂತೆ ಇದು ಇಂದಿಗೂ ನೆನಪಾಗುತ್ತದೆ. ಮಕ್ಕಳ ತುಂಟಾಟವನ್ನು ಹದ್ದುಬಸ್ತಿನಲ್ಲಿಡಲು ತಾಯಂದಿರು “ಸುಮ್ನಿರಲಿಲ್ಲ ಅಂದ್ರೆ ಭಜನೆ ಹೊತ್ಗೆ ನೀನೊಬ್ಬನೇ ಹೋಗಿ ಪ್ರಸಾದ ತರಬೇಕಾಗುತ್ತದೆ ನೋಡು!” ಅಂತ ಹೆದರಿಸುತ್ತಿದ್ದುದುಂಟು. ಅಂತಹ ಅರಿಭಯಂಕರ ಆರ್ಭಟದ ನಡುವೆ ತೂರಿ ಹೋಗಲು ಹೆದರಿದ ಮಕ್ಕಳು ಗಪ್ಪನೆ ಸುಮ್ಮನಾಗುತ್ತಿದ್ದರು.

ಅದಲ್ಲದೆ ಸುಮಾರು ಐವತ್ತು ಮಂಗಗಳ ಹಿಂಡೊಂದು ಶಾಶ್ವತವಾಗಿ ಗುಡಿಯ ಸೂರಿನ ಮೇಲೆ ನೆಲೆ ನಿಂತಿದ್ದವು. ಅದಕ್ಕೆ ಕಾರಣ ಗುಡಿಯ ಮುಂಭಾಗದ ಚಿಕ್ಕ ಮಾರುಕಟ್ಟೆಯಾದರೂ ದೇವಸ್ಥಾನದ ಶನಿವಾರದ ಪ್ರಸಾದದಲ್ಲಿ ಮಂಗಗಳಿಗೆ ಸಿಂಹಪಾಲು ಇತ್ತು. ಇರದಿದ್ದರೆ ಅವು ತಮ್ಮ ಹಕ್ಕು ಪ್ರತಿಷ್ಠಾಪಿಸಿ ಮಕ್ಕಳ ಸರತಿ ಸಾಲು ಬಂದಾಗ ನುಗ್ಗಿ ತಮ್ಮ ಪಾಲು ಕಸಿದುಕೊಳ್ಳುತ್ತಿದ್ದವು. ಇವು ಆಂಜನೇಯನ ಪ್ರತಿರೂಪಗಳೆಂದು ಪೂಜಿಸಲ್ಪಡುತ್ತಿದ್ದ ಕಾರಣ ಮಂಗಗಳನ್ನು ಎದುರು ಹಾಕಿಕೊಂಡು ತಮ್ಮ ಅದೃಷ್ಟ ಪರೀಕ್ಷಿಸಲು ಯಾರೂ ತಯಾರಿರಲಿಲ್ಲ. ಇದು ಭಯದ ಪರಿಣಾಮವೋ ಭಕ್ತಿಯ ಪರಿಣಾಮವೋ ಕಾಣೆ. ಇಂತಹ ಶಕ್ತಿಶಾಲಿ ಮಂಗಗಳನ್ನು ಒಂಟಿಯಾಗಿ ಅಭಿಮನ್ಯುಗಳಂತೆ ಎದುರಿಸಲಾಗದೆ ನಾವು ಒಂದೆರಡು ಸುಲಭೋಪಾಯಗಳನ್ನು ಕಂಡುಕೊಂಡಿದ್ದೆವು. “ಪ್ರಸಾದ ಕೊಡ್ತೀನಿ ಪ್ಲೀಸ್ ಹೋಗಪ್ಪ..” ಎಂದು ದೈನೇಸಿಯಾಗಿ ಬೇಡುವುದು ಅಥವಾ “ಶ್ರೀರಾಮ ಜಯ ರಾಮ ಜಯಜಯ ರಾಮ..” ಎಂದು ಜೋರಾಗಿ ರಾಮನಾಮ ಭಜಿಸುವುದು ಇತ್ಯಾದಿ…

ನಮ್ಮ ನಡುವೆ ಇಂತಹವುಗಳನ್ನು ಹುಟ್ಟಿಹಾಕುವ ಸೃಜನಶೀಲ ಗೆಳೆಯರಿಗೇನೂ ಕಡಿಮೆ ಇರಲಿಲ್ಲ. ಅಂತಹವರಿಗೆ ಮುಖ್ಯಪ್ರಾಣನ ಹೆಚ್ಚುವರಿ ಕೃಪೆ ಇದೆ ಎಂದೂ, ಕನಸಿನಲ್ಲಿ ಅವರಿಗೆ ಆಜ್ಞೆಯಾಗುತ್ತದೆ ಎಂದೂ ನಾವು ಗಟ್ಟಿಯಾಗಿ ನಂಬಿದ್ದೆವು.

ಕೆಲವೇ ಕಾಲದಲ್ಲಿ ನಾವು ಮದುವೆ ಮುಂಜಿಗಳಾಗಿ ದೊಡ್ಡವರೆನಿಸಿಕೊಂಡು ಮಠದ ಕೇರಿ ತೊರೆದು ಹೊರಬರುವಷ್ಟರಲ್ಲಿ ಭಜನೆಯ ನೆಪದಲ್ಲಿ ಬದಲಾದ ಒಂದು ಯುಗಕ್ಕೆ ಸಾಕ್ಷಿಯಾದೆವು. ನಾರಾಯಣ, ಸಾತ್ವಿಕ್, ಮುಕುಂದ, ಪ್ರದ್ಯುಮ್ನ, ಹೃಷಿಕೇಶ, ಪನ್ನಗ, ಹಂಸಿನಿ, ವೀಣಾ, ತಾರಿಣಿ, ಶ್ರೀಶ, ವೈಷ್ಣವಿ ಎಲ್ಲರೂ ಬೆಳೆದು ಮೀಸೆ ಹೊತ್ತರು, ಮೈ ನೆರೆದರು ಹಾಗೂ ಕೆಲಸ-ಮದುವೆ-ವಿದೇಶಗಳೆಂಬ ನೆಪದಲ್ಲಿ ಗೂಡು ಬಿಟ್ಟು ಹಾರಿ ಹೋದರು. ಇಂತಹ ವೈಭವದ ಇತಿಹಾಸವುಳ್ಳ ಆಂಜನೇಯನ ಗುಡಿಯ ಅರ್ಚಕರು ಇತ್ತೀಚೆಗೆ ತೀರಿಹೋದ ಸುದ್ದಿ ಬಂತು. ಬಿಳಿಗಡ್ಡ ಬಿಟ್ಟು ಹಣೆಗೆ ಉದ್ದ ತಿಲಕವಿಟ್ಟು ಧೋಂ ಧೋಂ ಎಂದು ಮಂತ್ರ ಸಹಿತ ಪೂಜೆಗೈಯುತ್ತಿದ್ದ ಅವರು ಕೂಡ ನಮಗೆ ಆಂಜನೇಯನಷ್ಟೇ ಭಯಂಕರವಾಗಿ ಕಾಣುತ್ತಿದ್ದರು.

ಮಕ್ಕಳು ಪೂಜೆಯ ಸರತಿ ಸಾಲಿನಲ್ಲಿ ನಿಂತರೆ ಮುಖಕ್ಕೆ ರಪ್ಪೆಂದು ತೀರ್ಥ ಹೊಡೆಯುತ್ತಿದ್ದರು. ಆಗೆಲ್ಲಾ ಇವರ ಮೇಲೆ ಇನ್ನಿಲ್ಲದ ಕೋಪ ಬಂದರೂ ಅಸಹಾಯಕರಾಗಿ ಈ ಘೋರಕ್ಕೆಲ್ಲಾ ತುತ್ತಾಗುತ್ತಿದ್ದೆವು. ಈಗಲೂ ಪರಿಮಳ ಮಾಮಿಯ ಪುಟ್ಟ ಶಿಷ್ಯರು ಶನಿವಾರಗಳಂದು ಶಾಸ್ತ್ರಕ್ಕೆ ನಾಲ್ಕು ಹಾಡು ಹಾಡುವರಂತೆ. ಪ್ರಸಾದವೂ ಮಂಗಗಳೂ ಶಿಷ್ಯರೂ ಹೊಸ ಅರ್ಚಕರೂ ಮತ್ತೊಂದು ಭಜನೆಯ ಯುಗಕ್ಕೆ ಸಾಕ್ಷಿಯಾಗುತ್ತಿರಬಹುದು.