೨೦೦೮ರ ಮ್ಯಾನ್ ಬುಕರ್ ಪ್ರಶಸ್ತಿಯ ಕಿರುಪಟ್ಟಿಯಲ್ಲಿ ಆಯ್ಕೆಗೊಂಡಿದ್ದ ಅಮಿತಾವ್ ಘೋಷರ ‘ಸೀ ಆಫ್ ಪೊಪಿಸ್’ (Sea of Poppies) ಕಾದಂಬರಿ ಪರಿಚಯ:

ಈವತ್ತು ನಾವು ಬದುಕುವ ಹಾಗು ಯೋಚಿಸುವ ಪರಿಗೂ ಬ್ರಿಟೀಷರು ಕಲ್ಕತ್ತಾದಲ್ಲಿ ಈಸ್ಟ್ ಇಂಡಿಯಾ ಕಂಪೆನಿ ಶುರು ಮಾಡಿದ್ದಕ್ಕೂ ತಾಳೆ ಹಾಕಿ ಚಿಂತಿಸುವುದೇ ಹಲವರಿಗೆ ದೇಶಭ್ರಷ್ಟ ಯೋಚನೆಯಂತೆ ಕಾಣುವ ಹೊತ್ತಿದು. ವಸಾಹತು ಕೇಂದ್ರಿತ ವಿವರಣೆಯನ್ನು ಧಿಕ್ಕರಿಸುವ, ತನ್ಮೂಲಕ ಆ ತಾಳೆಯನ್ನು ಮೀರಬೇಕೆನ್ನುವ ವಸಾಹತೋತ್ತರವನ್ನೂ ಮೀರುವ ತುರ್ತು ಒಂದು ಪಕ್ಕೆಗೆ ತಿವಿಯುತ್ತಿದ್ದರೆ, ಆ ಕೊಂಡಿಯ ಹಂಗೇ ಬೇಡ ಎಂಬ ಗದ್ದಲದ ಸಂತೆಯಲ್ಲಿ ಕೂತು‘ಸೀ ಆಫ್ ಪೊಪಿಸ್’ ಓದಬೇಕಾಗಿರುವುದನ್ನು ಮರೆಯುವಂತಿಲ್ಲ. ಹತ್ತೊಂಬತ್ತನೇ ಶತಮಾನದ ಒಂದು ಅರ್ಥಪೂರ್ಣ ಕಾಲಘಟ್ಟದಲ್ಲಿ ನಿಂತು ಹಿಂದಕ್ಕೂ ಮುಂದಕ್ಕೂ ನೋಡುವ ಅವಕಾಶ ಕಲ್ಪಿಸುವ ಕೃತಿ ಅದು. ಹಲವಾರು ಮಜಲುಗಳಲ್ಲಿ ನಾವೇನು ‘ಆಗಿದ್ದೇವೋ’ ಅದನ್ನು ಮತ್ತೆ ಮತ್ತೆ ವಿಮರ್ಶಿಸಿಕೊಳ್ಳಲು ಅವಕಾಶ ಕಲ್ಪಿಸುವ ಕೃತಿ ಕೂಡ ಹೌದು.

ಟ್ರಿಲಜಿಯಾಗಿ ಹೊರಬರಲಿರುವ ಈ ಎಪಿಕ್ ಗಾಥೆಯ ಮೊದಲ ಕಾದಂಬರಿ ‘ಸೀ ಆಫ್ ಪೊಪಿಸ್’ ಮೂರು ಭಾಗಗಳಲ್ಲಿದೆ. ‘ನೆಲ’, ‘ನದಿ’ ಹಾಗು ‘ಕಡಲು’. ನೆಲದಿಂದ ಸಿಡಿದು, ನದಿಯಲಿ ಕೊಚ್ಚಿಹೋಗಿ ಕಡಲು ಸೇರುವ ಕತೆಗಳು ಹಾಗು ಪಾತ್ರಗಳು ನಮ್ಮೊಳಗೂ ಬಿರುಗಾಳಿ ಎಬ್ಬಿಸಿ, ಸಮತೋಲನ ತಪ್ಪಿಸಿ, ತುಯ್ದಾಡಿಸಿ ಬಿಡುತ್ತವೆ. ನೆಲದ ಮೇಲಿನ ಬೆಳಕು, ಕತ್ತಲು; ನದಿಯ ನೀರಿನ ಸುಳಿ ಸೆಳೆತ; ಕಡಲಿನ ಕಪ್ಪು ನೀರು ಹಾಗು ಬಿಡುಗಡೆ ಒಂದು ಅನಿವಾರ್ಯವಾಗಿ, ಒಂದು ಅವ್ಯಾಹತವಾಗಿ ನಮ್ಮೆದುರು ಬಿಚ್ಚಿಕೊಳ್ಳುತ್ತದೆ. ಹಿಂದೆ ಸ್ಲೇವ್-ಶಿಪ್ ಆಗಿದ್ದ ಆದರೆ ಈಗ indentured labourers – ಗಿರ್ಮತೀಯ ಕೂಲಿಗಳನ್ನು ತುಂಬಿಕೊಂಡು ಮಾರೀಷಿಯಸಿಗೆ ಹೊರಟ ಐಬಿಸ್ ಎಂಬ ಹಡಗು ತನ್ನ ಒಡಲಲ್ಲಿ ನಡೆಯುವ ರೋಚಕ ಘಟನೆಗಳಿಂದ, ರೋಮಾಂಚನಕಾರಿ ತಿರುವುಗಳಿಂದ ನಮ್ಮನ್ನು ಸ್ಥಂಭಿತರನ್ನಾಗಿಸಿ ಅಗಾಧ ಕಡಲಿನಲ್ಲಿ ತೇಲಿಹೋಗುತ್ತದೆ.

ಗಂಗಾನದಿ ಹಾಗು ಅದರ ಸಾವಿರಾರು ಉಪನದಿಗಳ ಎಡೆಗಳಲ್ಲಿದ್ದ ನೂರಾರು ವರ್ಷಗಳ ಬೇಸಾಯ ಪದ್ಧತಿಯನ್ನು ಮುರಿಯುವ ಮೂಲಕ ಬ್ರಿಟೀಷರು ಅಲ್ಲಿನ ಬದುಕಿನ ಬೆನ್ನೆಲುಬನ್ನೇ ನಾಶ ಮಾಡಿದ ಹೊತ್ತದು. ಮುಕ್ತ ಮಾರುಕಟ್ಟೆಯ ಮೂಲಕ ಚೀನಾಕ್ಕೆ ಅಫೀಮು ಮಾರಿ ಸಿರಿವಂತವಾಗುವುದೇ ಪ್ರಗತಿಯ ಹಾಗು ಸ್ವಾತಂತ್ರ್ಯದ ಸಂಕೇತ ಎಂದು ಬಗೆದು ಚೀನಾದ ಎದುರು ಯುದ್ಧಕ್ಕೆ ಸಜ್ಜಾಗಿ ನಿಂತ ಹೊತ್ತದು. ಆಫೀಮಿಗಾಗಿ poppy – ಗಸಗಸೆ ಬೆಳೆಯಲು ಉತ್ತೇಜಿಸಿ, ಒತ್ತಾಯಿಸಿ, ಬಲವಂತ ಮಾಡಿ ಇಂಡಿಯಾದ ರೈತರನ್ನು ಒಂದು ಕಡೆ ಬಗ್ಗು ಬಡಿದು, ಇನ್ನೊಂದು ಕಡೆ ಚೀನಾದ ಜನರಿಗೆ ಅಫೀಮಿನ ಮತ್ತು ಹಿಡಿಸಿ, ಹುಚ್ಚು ಏರಿಸಿ ತಾವು ಸಂಪತ್ತಿಗರಾಗಲು ಹೊರಟ ಬ್ರಿಟೀಷರನ್ನು ದ್ವೇಷಿಸುವುದು ತುಂಬಾ ಸುಲಭ. ಆದರೆ ಸಾವಧಾನದಿಂದ ಬ್ರಿಟೀಷ್ ಪಾತ್ರಗಳನ್ನೂ ಎಲ್ಲರಂತೆ ಪರಿಚಯಿಸಿ, ಚಿತ್ರಿಸಿ ಸಾದರ ಪಡಿಸುವುದು ಅಮಿತಾವ್ ಘೋಷರಂತಹ ಬರಹಗಾರರಿಗೆ ಮಾತ್ರ ಸಾಧ್ಯವೇನೋ ಅನಿಸದೇ ಇರದು.

ಕಡಲನ್ನೇ ನೋಡಿರದ ದೀತಿಗೆ, ಕಡಲಿಂದ ನೂರಾರು ಮೈಲುಗಳ ತನ್ನ ಊರಲ್ಲೇ – ದೂರದಲ್ಲಿ ಹಕ್ಕಿಯಂತೆ ರೆಕ್ಕೆ ಬಿಚ್ಚಿದ ಹಾಯಿ ಹಡಗೊಂದು ಕಂಡಂತಾಗಿ, ಯಾವುದೋ ಪ್ರಯಾಣಕ್ಕೆ ನಾಂದಿ ಎಂದು ಅನಿಸುವುದುರ ಮೂಲಕ ಕತೆ ತೊಡಗುತ್ತದೆ. ಅಫೀಮು ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಅವಳ ಗಂಡ – ಅಫೀಮಿನ ಚಾಳಿಗೆ ಬಿದ್ದು ನಶಿಸುತ್ತಿರುವವ. ಸಂಭೋಗವನ್ನು ಅರಿಯದ ವಯಸ್ಸಿನಲ್ಲಿ ಮದುವೆಯಾಗಿ, ನಂತರದ ಕೆಟ್ಟ ಗಳಿಗೆಯಲ್ಲಿ, ಅತ್ತೆ ಹಾಗು ಮೈದುನನ ದುಷ್ಟತೆಯಲ್ಲಿ, ಯಾರಿಗೆ ಬಸುರಾದೆ ಎಂದೂ ತಿಳಿಯದೆ ಪಡಕೊಂಡ ಅವಳ ಮಗಳು ಕಬೂತರಿ ಅವಳ ಜೀವದ ಜೀವ. ದುಷ್ಟ ಅತ್ತೆಗೆ ಊಟದಲ್ಲಿ ತುಸುತುಸುವೇ ಅಫೀಮು ಬೆರೆಸಿ ಅವಳನ್ನೂ ನಾಶಮಾಡುವ ದಿಟ್ಟೆ ಈ ದೀತಿ. ಆದರೆ ಗಂಡ ಸತ್ತಾಗ ಸೋತು ಸುಣ್ಣಾಗಿ ಸತಿ ಹೋಗುವುದೇ ತನ್ನ ವಿಧಿಯೆಂದು ಒಪ್ಪಿಕೊಳ್ಳುವವಳು. ಆದರೆ ಆ ವಿಧಿ ಆಕೆಯನ್ನು ಕಲುವ ಎಂಬ ಕುಲಹೀನನೊಂದಿಗೆ ಐಬಿಸ್ ಎಂಬ ಹಡಗಿನತ್ತ ಒಯ್ಯುವ ಕತೆ ದಟ್ಟವಾಗಿ ಮನಸ್ಸಿನಲ್ಲಿ ಹಬ್ಬುವಂತಹದು.

ಇನ್ನೊಂದು ಕಡೆ, ಅಫೀಮು ಮಾರುವ ಇಂಗ್ಲೀಷ್ ಪಾದ್ರಿ ಬೆಂಜಮಿನ್ ಬರ್ನಮ್‌ ಎಂಬವನ ಕಪಟಕ್ಕೆ ಬಲಿಯಾಗಿ ಜಮೀನ್ದಾರಿ ರಾಜ ನೀಲ ರತನ್ ಹವಲ್ದಾರ್ ತನ್ನ ಆಸ್ತಿ-ಪಾಸ್ತಿ, ಗೌರವ, ಮಾನ, ಮರ್ಯಾದೆ, ಕುಟುಂಬ ಎಲ್ಲವನ್ನು ಕಳಕೊಳ್ಳುವುದಲ್ಲದೇ ಐಬಿಸ್‌ನಲ್ಲಿ ಗಡಿಪಾರಾಗುವುದು ನಮ್ಮನ್ನು ವಿಚಿತ್ರ ಸಂದಿಗ್ಧದಲ್ಲಿ ಸಿಕ್ಕಿಸುವ ಎಳೆ. ಅವನೊಡನೆ ಬಂಧಿತನಾಗಿರುವ ಚೀನಾದ ಅಫಾಟ್, ಅರೆಜೀವನಾಗಿ ನೀಲನಿಂದ ಮತ್ತೆ ಜೀವ ಪಡಕೊಂಡು ಉಳಿಯುತ್ತಾನೆ. ಭಾರತ, ಚೀನಾ ಹಾಗು ಬ್ರಿಟೀಷರ ವಿಭಿನ್ನ ಹಾಗು ಒಂದಕ್ಕೊಂದು ಒಗ್ಗದ ನಾರುಗಳನ್ನು ಕಾಲದ ತೀವ್ರತೆಯಲ್ಲಿ ಒಟ್ಟಾಗಿ ಬಿಗಿದು ಹೆಣೆದ ಹಿಂಸೆಯ ಒರಟು ಹಗ್ಗವಾಗಿ ಕಾಣುವ ಅಫಾಟ್‌ ಒಂದು ಅಭೂತಪೂರ್ವ ಪಾತ್ರ.

ಮತ್ತೊಂದು ಕಡೆ, ಅಂಬಿಗರ ಹುಡುಗ ಜೋದು ತನ್ನ ತಂದೆ, ತಾಯಿ, ಅಜ್ಜಿಯನ್ನು ಕಳಕೊಂಡು ಅನಾಥಭಾವದಲ್ಲಿ ಬಂದು ವಿಭಿನ್ನ ಸದಸ್ಯರ ಐಬಿಸ್ ಕುಟುಂಬಕ್ಕೆ ಸೇರಿಕೊಳ್ಳುತ್ತಾನೆ. ಹಾಗೆ ಸೇರಿಕೊಳ್ಳುವ ಮೊದಲು ತನ್ನ ಬಾಲ್ಯದ ಗೆಳತಿ, ಫ್ರಾನ್ಸಿನ ಬಾಟನಿಸ್ಟ್‌ ಒಬ್ಬನ ಮಗಳಾದ ಪಾಲೆಟ್ ಲಾಂಬೆರ್ಟ್‌ಳನ್ನು ಅರಸುತ್ತಾ ಬಂದಿರುತ್ತಾನೆ. ಪುತಲಿ, ಪಗಲಿ ಎಂದೆಲ್ಲಾ ಕರೆಸಿಕೊಳ್ಳುವ ಪಾಲೆಟ್‌ಳ ಹುಟ್ಟಿನ ಕಾಳರಾತ್ರಿ ಗೋದುವಿನ ತಂದೆ ತಾಯಿಯೇ, ಆಸ್ಪತ್ರೆಗೆಂದು ನದಿ ದಾಟಿಸುವಾಗ ಪಾಲೆಟ್‌ನ ತಾಯಿ ಇವರ ದೋಣಿಯಲ್ಲಿ ಪಾಲೆಟ್‌ಳನ್ನು ಹೆತ್ತು ತಾನು ಅಸುನೀಗಿದ್ದಾಳೆ. ಗೋದು ಕೂಡ ಹಸುಳೆ; ಅವನ ತಾಯಿಯೇ ತಬ್ಬಲಿ ಪಾಲೆಟ್‌ಗೆ ಮೊಲೆಯುಣಿಸಿ ಬದುಕಿಸಿದ್ದಾಳೆ, ಬೆಳೆಸಿದ್ದಾಳೆ. ಅದೇ ದೋಣಿ ದೊಡ್ಡವರಾದ ಮೇಲೆ ಅವರಿಬ್ಬರ ಕಣ್ಣ ಮುಂದೆಯೇ ಐಬಿಸ್‌ಗೆ ಡಿಕ್ಕಿ ಹೊಡೆದು ನುಚ್ಚು ನೂರಾಗುವುದು ಹಲವು ಸ್ಥರದಲ್ಲಿ, ವಿಭಿನ್ನ ಧ್ವನಿಗಳನ್ನು ಹೊರಡಿಸುವ ರೂಪಕವಾಗುತ್ತದೆ. ಪಾಲೆಟ್‌ಳ ಅಜ್ಜಿಯ ಕತೆ ಇನ್ನೊಂದು ಬಗೆಯಲ್ಲಿ ಇವಳಲ್ಲಿ ಪುನರಾವರ್ತನೆಗೊಳ್ಳುವ ವಿಚಿತ್ರದಂತೆಯೇ, ವಿಧಿಯೊಡನೆ ಸೆಣಸುತ್ತಾ ತಮ್ಮತನ್ನವನ್ನು ಸ್ಥಾಪಿಸಿಕೊಳ್ಳುವ ಗುಣ ಎಲ್ಲ ಪಾತ್ರಗಳಲ್ಲೂ ಕಾಣುತ್ತದೆ. ದಬ್ಬಾಳಿಕೆ ಹಾಗು ಶೋಷಣೆಯ ಕರಾಳತೆಯ ಅಡಿಯಲ್ಲಿ ಅದನ್ನು ಮೀರಿಕೊಳ್ಳುವ, ಬಿಡುಗಡೆಯ ದಾರಿ ಕಂಡುಕೊಳ್ಳುವ ಅದಮ್ಯ ಶಕ್ತಿಯಿಂದ ಪಾತ್ರಗಳು ಇಲ್ಲಿ ಚಲಿಸುತ್ತವೆ. 

ಅಲ್ಲದೆ ಕೂಲಿಗಳ ಮೇಲ್ವಿಚಾರಕನಾಗಿ ಹಡಗು ಹತ್ತಿರುವ ಬ್ರಾಹ್ಮಣ ನೊಬ್ ಕಿಸನ್ ಪಾಂಡ ಮಾ ತಾರಾಮಣಿ ತನ್ನೊಳಗೆ ಅಂತರ್ಧಾನವಾಗಿದ್ದಾಳೆಂದು ನಂಬಿದ್ದಾನೆ. ದೂರದ ದ್ವೀಪದಲ್ಲಿ ಆಕೆಗೊಂದು ದೇಗುಲ ಕಟ್ಟುವ ಕನಸ್ಸು ಕಂಡಿದ್ದಾನೆ. ತನ್ನ ಭಾಷೆ, ನಡೆ, ನುಡಿಯಿಂದಾಗಿ ವ್ಯಂಗ್ಯಪೂರ್ಣ ಪಾತ್ರವಾಗಿ ಕಂಡರೂ ಅದೊಂದು ಸಂಕೀರ್ಣವಾದ ಪಾತ್ರವೇ. ತನ್ನ ಹಿನ್ನೆಲೆಯನ್ನು ಮರೆಮಾಚಿಕೊಂಡು ಸಾಹಸದ ಬೆನ್ನು ಹತ್ತಿರುವ ಅಮೇರಿಕಾದ ಝಕಾರಿ ರೀಡ್ ಕೂಡ ಅದೇ ಹಡಗಿಗೆ ಬಂದು ಸೇರಿದ್ದಾನೆ. ಇವರೆಲ್ಲರ ಜತೆ ಸಣ್ಣಪುಟ್ಟ ಕತೆಗಳ ಕಳ್ಳಖದೀಮರನ್ನು, ಪೊಲೀಸರನ್ನು, ನಾವಿಕರನ್ನು, ಸಾಹಸಿಗಳನ್ನು, ಕೂಲಿಗಳನ್ನು ಐಬಿಸ್‌ ಹಡಗಿಗೆ ಘೋಷರು ಹತ್ತಿಸುತ್ತಾರೆ. ಎಲ್ಲರನ್ನೂ ತುಂಬಿಕೊಂಡು ಹೊಸ ದಿಗಂತದತ್ತ ತೇಲುವ ಆ ಐಬಿಸ್ ಹಡಗಿನಲ್ಲಿ ಕೈಗೆ ಮೆಹಂದಿ ಬಳಕೊಂಡು ಕೂಲಿಯಂತೆ ವೇಷಮರೆಸಿಕೊಂಡ ಬಿಳಿಯ ಹೆಣ್ಣೂ, ಬಿಳಿಯನೆಂದು ಹೇಳಿಕೊಂಡು ಕೆಲಸ ಗಿಟ್ಟಿಸುವ ಅರೆಕರಿಯನೂ, ತಪ್ಪು ಮಾಡಿ ಬಚ್ಚಿಟ್ಟುಕೊಂಡವರೂ, ತಪ್ಪು ಮಾಡದೆ ಸಿಕ್ಕಿಕೊಂಡವರೂ ನಮಗೆ ಸಿಗುತ್ತಾರೆ.

ಐಬಿಸ್‌ನ ವಿವಿಧ ಅಟ್ಟಗಳಲ್ಲಿ ವಿವಿಧ ಆಟಗಳು, ಹೋರಾಟಗಳು, ವಿಜೃಂಭಣೆಗಳು, ಹಿಂಸೆಗಳು ಈ ಕಾದಂಬರಿಯಲ್ಲಿ ಅಸಮಾನ್ಯ ಸಹಜತೆಯಲ್ಲಿ ನಿರೂಪಿತವಾಗಿದೆ. ಮನುಷ್ಯತ್ವದ ಬಗ್ಗೆ ಒಂದು ಕ್ಷಣ ಅನುಮಾನ, ಮತ್ತೊಂದು ಕ್ಷಣ ಉನ್ಮಾದ, ಒಂದು ಕ್ಷಣ ಅಸಹನೆ, ಮತ್ತೊಂದು ಕ್ಷಣ ಪ್ರೀತಿ ಮತ್ತು ಆ ಎಲ್ಲ ಕ್ಷಣಗಳ ನಡುವಿನ ಲೆಕ್ಕವಿಲ್ಲದ ಹಲವಾರು ಭಾವಗಳಲ್ಲಿ ನಮ್ಮನ್ನು ಘೋಷರು ತುಯ್ದಾಡಿಸುತ್ತಾರೆ. ಐಬಿಸ್ ಹಡಗಿನ ಏರಿಳಿತ ಅವಕ್ಕೆಲ್ಲಾ ತಾಳ ಕುಟ್ಟುತ್ತಿದ್ದಂತೆ ಭಾಸವಾಗುತ್ತದೆ.

ಕಾದಂಬರಿಯುದ್ದಕ್ಕೂ ಘೋಶರು ಬಳಸುವ ಹಲವು ಭಾಷೆಗಳು ಅತ್ಯಂತ ಕುತೂಹಲವನ್ನೂ, ನೈಜತೆಯನ್ನೂ ಕೃತಿಗೆ ತಂದುಕೊಟ್ಟಿದೆ. ಅವರ ಮಾನವಶಾಸ್ತ್ರದ ಹಿನ್ನೆಲೆ, ಭಾಷೆಯ ಬಗೆಗಿನ ಆಸ್ಥೆ ಹಾಗು ಹಲವು ವರ್ಷಗಳ ಆಳದ ಮತ್ತು ವಿಶಾಲವಾದ ಸಂಶೋಧನೆ ಇಲ್ಲಿ ಅವತರಿಸುವಾಗ ತುಸುವೂ ಕಲಾತ್ಮಕತೆ ಕಳಕೊಳ್ಳದೆ ಬೃಹತ್ ರೂಪದಲ್ಲಿ ಹೆಪ್ಪುಗಟ್ಟುತ್ತದೆ. ಕಾದಂಬರಿಯಲ್ಲಿ ಬರುವ ಹಲವು ನುಡಿಗಳ ನುಡಿಗಟ್ಟುಗಳನ್ನು ಅರ್ಥೈಸಲು ಲೇಖಕರೇ ತಮ್ಮ ವೆಬ್‌ಸೈಟಿನಲ್ಲಿ ಕೊಟ್ಟಿರುವ ‘The Ibis Chrestomathy’ ಒಂದು ಅಮೂಲ್ಯವಾದ ಸಂಗ್ರಹ. ಭೋಜಪುರಿ, ಉರ್ದು, ಬೆಂಗಾಲಿ, ಹಿಂದೂಸ್ತಾನಿ, ಹಲವು ಬಗೆಯ ಇಂಗ್ಲಿಷ್ ಅಲ್ಲದೆ ಇವೆಲ್ಲವೂ ಒಂದರಿಂದ ಮತ್ತೊಂದು ಕೊಟ್ಟು ಪಡಕೊಂಡು ರೂಪಿತವಾದ ನಡುಭಾಷೆಗಳು, ನುಡಿಗಟ್ಟುಗಳು ಅತ್ಯಂತ ಮನೋಹರವಾಗಿವೆ. ಬೆಂಗಾಲಿ ಬೆರೆತ ಹಿಂದೂಸ್ತಾನಿ, ಹಿಂದೂಸ್ತಾನಿ ಬೆರೆತ ಇಂಗ್ಲಿಷ್, ಇಂಗ್ಲಿಷ್ ಬೆರೆತ ಹಿಂದೂಸ್ತಾನಿ ಸುಲಲಿತವಾಗಿ ಪಾತ್ರಗಳ ಮಾತಿನಲ್ಲಿ ಹರಿದಾಡುತ್ತವೆ. ಪಕ್ಕಾ, ಬುರಾ, ಶೈತಾನ್, ಡೇಕೋ ಇವೆಲ್ಲಾ ಇಂಗ್ಲೀಷಿನೊಳಗೆ ಎಗ್ಗಿಲ್ಲದೆ ಒಂದಾಗುತ್ತವೆ. ಹೀಗೆ ಇಲ್ಲಿ ಭಾಷೆಯದೇ ಒಂದು ವಿಶಿಷ್ಟ ಪಾತ್ರ ಹಾಗು ಅದರ ಬಗ್ಗೆಯೇ ಒಂದು ಧೀರ್ಘ ಪ್ರಬಂಧ ಬರೆಯಬಹುದಾದಷ್ಟು ಸಂಗತಿಗಳಿವೆ.

ಚರಿತ್ರೆಯ ಒಂದು ಕಾಲಘಟ್ಟದ ಜನರ ಬದುಕನ್ನು ವಿಧಿ ರೂಪಿಸುತ್ತದೋ, ವಿಧಿಯೊಡನೆ ಸೆಣಸುತ್ತಾ ತಮ್ಮ ಬದುಕನ್ನು ಅವರು ರೂಪಿಸುಕೊಳ್ಳುತ್ತಾರೋ, ಅಥವಾ ಆ ಸೆಣಸಾಟದ ಪ್ರಕ್ರಿಯೆಯಲ್ಲಿ ಚರಿತ್ರೆಯ ಹಲವಾರು ವಿದ್ಯಮಾನಗಳು ಒಂದು ಜನಸಮೂಹದ ಭವಿಷ್ಯವನ್ನು ರೂಪಿಸುತ್ತದೋ ಎಂಬೆಲ್ಲಾ ಪ್ರಶ್ನೆಗಳ ವಿಚಿತ್ರ ವರ್ತುಲದಲ್ಲಿ ನಮ್ಮನ್ನು ಚಿಂತನೆಗೆ ತೊಡಗಿಸುವ ಅಮೂಲ್ಯವಾದ ಕೃತಿ ‘ಸೀ ಆಫ್ ಪೊಪಿಸ್’.