”ಬಚ್ಚಲಿನಲ್ಲಿ ಕೋಳಿನಿದ್ದೆ ಹೊಡೆದುಕೊಂಡು ಹಲ್ಲು ಉಜ್ಜುತ್ತಿದ್ದ ನನಗೆ ಹೊಟ್ಟೆಯಲ್ಲಿ ಸಂಕಟ ಶುರುವಾಯಿತು. ಇಂಥಾ ಸಮಯದಲ್ಲಿ ನಾವೆಲ್ಲಾ ಗೆಳೆಯರು ನಮ್ಮ ಜೀವದ ಗೆಳೆಯ ಅಬೀಬಾನ ಹತ್ತಿರ ಇರಬೇಕು, ಹೌದು ಅದೇ ಒಳಿತೆನಿಸಿತು. ಎಲ್ಲರು ನಮ್ಮ ಮನೆಗಳ ಹಿಂದಿನ ಬೀದಿಯ ಸಾಬರ ಬೀದಿಗೆ ಹೋದೆವು. ದೂರದಿಂದಲೇ ಅಬೀಬಾನ ಮನೆಯ ಹತ್ತಿರದ ಜನಸಂದಣಿ ನೋಡಿ ಭಯವಾಯ್ತು. ಒಬ್ಬೊಬ್ಬರನ್ನೇ ಪಕ್ಕಕ್ಕೆ ಸರಿಸಿ ಮುಂದೆ ಹೋಗಿ ನಿಂತೆವು. ಖಾಸೀಮ್ ಸಾಬರನ್ನು ಅವರ ಮನೆಯ ವರಾಂಡದಲ್ಲಿ ಮಲಗಿಸಿದ್ದರು. ಅಬೀಬನ ತಾಯಿ ಅತ್ತೂ ಕಣ್ಣು ಬತ್ತಿ ಹೋಗಿ ಯಾವ ಶಕ್ತಿಯೂಇಲ್ಲದಂತಾಗಿ ವರಾಂಡಾದ ಗೋಡೆಗೆ ಒರಗಿದ್ದರು”
ದರ್ಶನ್ ಜೆ. ಬರೆದ ಸಣ್ಣಕಥೆ ಈ ಭಾನುವಾರದ ಓದಿಗಾಗಿ.

ನಮ್ಮೂರಿನ ಸರ್ಕಾರಿ ಬಾಲಕರ ಪಾಠಶಾಲೆಗೆ ನಾವು ‘ಸಾಬಾಪಾಶ ‘ ಅನ್ನುವುದುಂಟು. ಈ ಪದದ ಉದ್ದೇಶ ಅಂತಾ ಹಿರಿದೇನಿಲ್ಲವಾದರೂ ಇದರಿಂದ ಹಲವು ಬಾರಿ ಉಪಯೋಗವೇ ಆಗಿದೆ. ಹೇಗೆ ಅಂತೀರಾ? ತಮ್ಮ ಮನೆಗಳಲಿದ್ದ ಗೆಳೆಯರನ್ನು ಕ್ರಿಕೆಟ್ ಆಟಕ್ಕೆ ಕರೆಯಲು ನಾವು ಉಪಯೋಗಿಸುತ್ತಿದ್ದ ಕೋಡ್ ವರ್ಡ್ ‘ಸಾಬಾಪಾಶ’. ನಮ್ಮ ಮನೆಗಳ ಹಿಂದಿನ ಕನ್ಸರ್ವೆನ್ಸಿಯನ್ನು ದಾಟಿ ಆಳೆತ್ತರದ ಗೋಡೆಯನ್ನು ಜಿಗಿದರೆ ಸಾಬಾಪಾಶದ ಒಳಹೊಕ್ಕೆವೆಂದೇ ಅರ್ಥ.

ಎಲ್ಲ ಸರ್ಕಾರಿ ಪಾಠಶಾಲೆಗಳಂತೆ ಇದೂ ಬಹಳ ಹಳೆಯದು. ನೆತ್ತಿಯ ಮೇಲೆ ಸ್ಥಾಪನೆ ೧೯೦೧ ಎಂದು ಬರೆಯದೆ ಇದ್ದಿದ್ದರೆ ನಮಗೆ ಆ ವಯಸ್ಸಿನಲ್ಲಿ ಈ ವಿಷಯ ತಿಳಿಯುತ್ತಿರಲಿಲ್ಲವೇನೋ? ಕಟ್ಟಡದ ಮಧ್ಯಭಾಗ ಕಾಂಕ್ರಿಟಿನದ್ದು. ಅಲ್ಲಿ ಪ್ರಾಥಮಿಕ ಹಂತದ ತರಗತಿಗಳು. ಎಡಗಡೆಗೆ ಹೆಂಚಿನ ಚಿಕ್ಕ ಕೋಣೆಗಳು. ಅಲ್ಲಿ ಮಾಧ್ಯಮಿಕ ಹಂತದ ತರಗತಿಗಳು. ಹಿತ್ತಲಲ್ಲಿ ಒಂದು ಹಲಸಿನಮರ, ನಾಲ್ಕು ತೆಂಗಿನ ಮರಗಳು, ಒಂದು ಗಂಟೆ ಹೂವಿನ ಮರ, ಮತ್ತೊಂದು ಮಲ್ಲೆ ಹೂವಿನದ್ದು. ಕಟ್ಟಡದ ಎರಡೂ ಪಾರ್ಶ್ವದಲ್ಲೂ ಚಿಕ್ಕದಾದ ಎರಡು ಆಟದ ಮೈದಾನಗಳು. ಎಡಗಡೆಯ ಮೈದಾನದ ಗೋಡೆಯ ಬದಿಗೆಲ್ಲ ಬಣ್ಣ ಬಣ್ಣದ ಹೂ ಗಿಡಗಳನ್ನು ಹಾಕಿದ್ದರಿಂದ ಅಲ್ಲಿ ಕ್ರಿಕೆಟ್ ಆಟ ನಿಷಿದ್ಧ. ಕೆಲವೊಮ್ಮೆ ಇದನ್ನು ಉಲ್ಲಂಘಿಸಿ ಉಗಿಸಿಕೊಂಡಿದ್ದರಿಂದ ಆಡುವುದಾದರೆ ಬಲಗಡೆಯ ಮೈದಾನದಲ್ಲೇ ಎಂಬುದಾಗಿ ನಿರ್ಣಯಿಸಿದ್ದೆವು. ಬಲಗಡೆಯದ್ದು ಚಿಕ್ಕ ಮೈದಾನ ಮತ್ತು ಬದಿಯಲ್ಲಿ ಶೌಚಾಲಯಗಳಿದ್ದವು (ಅವನ್ನು ನಾವು ಓಪನ್ ಏರ್ ಥಿಯೇಟರ್ ಅನ್ನುತ್ತಿದ್ದೆವು). ಇದೇ ಕಾರಣಕ್ಕೆ ಬಾಲು ಒಂದು ವೇಳೆ ಅಲ್ಲಿಗೆ ಹೊಡೆಯಲ್ಪಟ್ಟರೆ ಸ್ವಲ್ಪ ಕಿರಿಕಿರಿಯಾಗುತ್ತಿತ್ತು. ಆದರೂ ಹೊಂದಿಕೊಂಡು ಗಬ್ಬುನಾಥ ಸಹಿಸಿಕೊಂಡು ಆಡುತ್ತಿದ್ದದಕ್ಕೆ ಕಾರಣ ಅದು ಅಬೀಬನ ಅಂಗಡಿಗೆ ಹತ್ತಿರವಾಗಿದ್ದುದ್ದು.

ಅಬೀಬಾ ಕಾಸಿಮ್ ಸಾಬರ ಐದನೆಯ ಮಗ, ಅವನಿಗೆ ನಾಲ್ಕುಮಂದಿ ಅಕ್ಕಂದಿರು ಒಬ್ಬಳು ತಂಗಿ. ಕಾಸಿಮ್ ಸಾಬರು ಎಲ್ಲರಿಗೂ ಗೊತ್ತಿದ್ದ ಮನುಷ್ಯ ಅದಕ್ಕೆ ಕಾರಣ, ಪೇಟೆಯ ಬೇರೆ ಬೇರೆ ಮಗ್ಗುಲುಗಳಲ್ಲಿ ಅವರ ಪೆಟ್ಟಿಗೆ ಅಂಗಡಿಗಳಿದ್ದವು. ಎಲ್ಲದರಲ್ಲೂ ಅವರ ಕುಟುಂಬದವರೇ ಇರುತ್ತಿದ್ದರು, ಒಳ್ಳೆಯ ವ್ಯಾಪಾರ, ದುಡ್ಡು ಈಕಡೆ ಆಕಡೆಯಾಗುವ ಪ್ರಮೇಯವೇ ಇಲ್ಲ. ಸಾಬ್ ಜುಗ್ಗರಲ್ಲ, ಒಳ್ಳೆಯ ಮನೆಕಟ್ಟಿಸಿದ್ದರು, ಮಕ್ಕಳಿಗೆಲ್ಲ ಒಳ್ಳೆಯ ಬಟ್ಟೆಬರೆ, ಬಾಬಯ್ಯನನ್ನು ಮಾಡಿದಾಗ ದೇಣಿಗೆ ಕೊಡುವುದರ ಜೊತೆಗೆ ರಂಜಾನ್ ಹಬ್ಬದಲ್ಲಿ ದಾನ ಮಾಡುತ್ತಿದ್ದುದರಿಂದ ಜನ ಅವರನ್ನುಅಪಾರವಾಗಿ ಇಷ್ಟ ಪಡುತ್ತಿದ್ದರು. ನಾವು ಅಬೀಬಾನನ್ನು ಇಷ್ಟಪಡುತ್ತಿದ್ದ ಹಾಗೆ.

ಅಬೀಬಾ ಸಾಬಾಪಾಶದ ಬಳಿಯ ಅವರ ಪೆಟ್ಟಿಗೆ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದ. ಅವನ ವಿದ್ಯಾಭ್ಯಾಸ ನಾಲ್ಕೋ ಐದೋಕ್ಲಾಸಿನವರೆಗೆ ಅಷ್ಟೇ, ಆಮೇಲೆ ಓದು ತಲೆಯೊಳಗೆ ಇಳಿಯದ್ದಿದ್ದನ್ನು ನೋಡಿದ ಅವರಪ್ಪ ಸ್ಕೂಲು ಬಿಡಿಸಿದ್ದೇ ಒಂದೆರಡು ವರ್ಷಗಳ ಕಾಲ ‘ಸಂಕಪ್ಪನ ಸೈಕಲ್ ಶಾಪಿಗೆ’ ಸೇರಿಸಿದರು. ಪರವಾಗಿಲ್ಲ ಒಂದು ಕಡೆ ಕೂತು ಕೆಲಸ ಮಾಡಬಲ್ಲನೆಂಬ ನಂಬಿಕೆ ಬಂದಮೇಲೆ ಸಾಬಾಪಾಶದ ಬಳಿ ಅಂಗಡಿ ಹಾಕಿಕೊಟ್ಟರು.

ಪ್ರತಿ ಶನಿವಾರ ಸ್ಕೂಲು ಮುಗಿದಮೇಲೆ ಎಲ್ಲರೂ ಖಾಲಿಯಾಗುವುದನ್ನೇ ಕಾದಿರುತ್ತಿದ್ದ ನಾವು, ಚಂಗನೆ ಗೋಡೆ ಹಾರಿ ಮೈದಾನದಲ್ಲಿ ಹಾಜರಿಗೊಳ್ಳುತ್ತಿದ್ದೆವು. ನಾವು ಅಂದರೆ ನಾನು, ಮಂಜ, ನಟ, ಮಧು, ರವಿ, ಒಮ್ಮೊಮ್ಮೆ ಇಬ್ಬರು ಮೂವರಿದ್ದರೂ ಸೂರ್ಯ ಮುಳುಗಿ ಕತ್ತಲಾಗುವವರೆಗೆ ಆಡುತ್ತಿದ್ದೆವು. ಅಂಥ ದಿನಗಳಲ್ಲಿ ಅಬೀಬಾ ನಮಗೆ ಹತ್ತಿರವಾಗತೊಡಗಿದ. ಅವನಿಗಾದರೂ ಪ್ರತೀ ದಿನ ಕುಂತಲ್ಲೇ ಕುಂತು ಬೋರು ಹೊಡೆಯುತ್ತಿತ್ತು ಅನ್ನಿಸುತ್ತದೆ. ಯಾವಾಗ ಶನಿವಾರವಾಗುತ್ತೋ ಅಂತ ನಮ್ಮಂತೇ ಅವನೂ ಕಾಯುತ್ತಿದ್ದಿರಬಹುದು. ಮೊದಮೊದಲು ಅಂಗಡಿಯಲ್ಲೇ ಕುಂತು ಗೋಡೆಯಾಚೆಗಿನ ನಮ್ಮ ಆಟವನ್ನು ನೋಡುತ್ತಿದ್ದವನು, ಆಮೇಲಾಮೇಲೆ ಗೋಡೆಯಮೇಲೆ ಕುಂತು ಅತ್ತ ಅಂಗಡಿಯನ್ನೂ ಇತ್ತ ನಮ್ಮ ಆಟವನ್ನೂ ನೋಡುತ್ತಿದ್ದ. ಒಮ್ಮೆ ಹೀಗೇ ಗೋಡೆಯ ಮೇಲೆ ಕುಂತು ನಮ್ಮ ಆಟವನ್ನು ನೋಡುತ್ತಿರುವಾಗ, ಮಂಜ “ಬಾರೋ ಅಮೀಬಾ, ನೀನೂ ಆಡುವಂತೆ, ಯಾಕೆ ಹಂಗೆ ಯಾವಾಗ್ಲೂ ಕೋತಿ ಕುಣಿಯೋದು ನೋಡೋ ಹಂಗೆ ನೋಡ್ತಾಇರ್ತೀಯಾ” ಅಂದಾಗ ಅಬೀಬನಿಗೆ ಎಷ್ಟೋ ದಿನಗಳ ತನ್ನ ಆಸೆ ಇವತ್ತು ನೆರವೇರಬಹುದೆನಿಸಿ “ಇರೋ ಈಗ ಬರ್ತೀನಿ” ಅಂತ ಹೇಳಿ, ಗೋಡೆಯ ಆ ಬದಿಗೆ ಜಿಗಿದು ರಸ್ತೆದಾಟಿ, ಅಂಗಡಿಯ ಬಳಿಗೆ ಓಡಿ, ಪಕ್ಕದಲ್ಲಿ ಎಳನೀರು ಮಾರುತ್ತಿದ್ದ ರೆಹಮಾನರಿಗೆ ಏನೋ ಹೇಳಿ ರಸ್ತೆ ದಾಟಿ, ಗೋಡೆಜಿಗಿದು, ನಮ್ಮೊಡನೆ ಆಟಕ್ಕೆ ಸೇರಿದ.

ಆಗಾಗ ಗೋಡೆಯ ಬಳಿಬಂದು ಅಂಗಡಿಯ ಕಡೆಗೊಮ್ಮೆ ನೋಡಿಮತ್ತೆ ಆಟಕ್ಕೆ ಮರಳುತ್ತಿದ್ದ. ಆಟವೆಲ್ಲ ಮುಗಿದಮೇಲೆ ನಾವೆಲ್ಲಾ ಗೋಡೆಯೇರಿ ರಸ್ತೆಗೆ ಅಭಿಮುಖವಾಗಿ ಕುಳಿತರೆ, ಅಬೀಬಾ ಅಂಗಡಿ ಹೊಕ್ಕು ಎಲ್ಲವನ್ನೂ ಒಮ್ಮೆ ಪರಿಶೀಲಿಸಿಕೊಂಡು ಪೊರಕೆಹಿಡಿದು ಕಸಗುಡಿಸಿದವನಂತೆ ಮಾಡಿ, ಒಂದೇ ಲೋಟದ ನೀರನ್ನು ನೆಲಕ್ಕೆ ಚುಮುಕಿಸಿ ಲಾಟೀನು ಹಚ್ಚುತ್ತಿದ್ದ.

ಝಗಮಗಿಸುವ ಬೀದಿ ದೀಪಗಳಿದ್ದ ರಸ್ತೆಯಲ್ಲಿ ಅಬೀಬನ ಪೆಟ್ಟಿಗೆಯ ಗೂಡಂಗಡಿ ಬೇರೆಯೇ ತೆರೆನಾಗಿ ಕಾಣುತ್ತಿತ್ತು. ಮಂದ ಲಾಟೀನು ದೀಪದ ಬೆಳಕಿನಲ್ಲಿ ತೂಗುತ್ತಿದ್ದ ಏಲಕ್ಕಿಬಾಳೆಯ ಗೊನೆ, ಹಣ್ಣಾಗಿ ಚಿಕ್ಕೆ ಹೊಡೆದ ಪಚ್ಚಬಾಳೆ ಗೊನೆ, ಪಾನ್ ಪರಾಗ್, ಮಾಣಿಕ್ಚಂದ್, ರಾಜ ಸುಪಾರಿ, ವಿಮಲ್ ಗುಟ್ಕಾದ ಸರಗಳು, ಗಾಜಿನ ಬಾಟಲಿಗಳಲಿದ್ದ ಶುಂಠಿ ಪೆಪ್ಪರಮಿಂಟು, ಪ್ಯಾರಿಸ್ ಚಾಕೋಲೇಟು, ನಿಂಬೆ ಹುಳಿ ಮಿಂಟು, ಬತ್ತಾಸು, ಕುಟ್ಟು ಉಂಡಿ ಕಣ್ಣು ಕೋರೈಸುತ್ತಿದ್ದರೂ ‘ಮಂಜನ’ ಕಣ್ಣುಮಾತ್ರ ಸಾಲಾಗಿ ಜೋಡಿಸಿಟ್ಟ ಚಾರ್ಮಿನಾರ್, ವಿಲ್ಸ್, ಗೋಲ್ಡ್ ಫ್ಲೇಕ್ ಕಿಂಗ್ ನ ಮೇಲೆ ಬೀಳುತ್ತಿದ್ದುದ್ದು! ಅವನ ಅಪ್ಪ ಪೊಲೀಸ್ ಕಾನ್ಸ್ಟೇಬಲ್ ಆಗಿದ್ದರು ಮತ್ತು ಪ್ರತೀದಿನ ಮಂಜನಿಗೆ ದುಡ್ಡುಕೊಟ್ಟು ಸಿಗರೇಟು ತರಿಸಿಕೊಳ್ಳುತ್ತಿದ್ದರು. ಮಂಜ ಆಗಾಗ ಒಂದೆರಡು ರೂಪಾಯಿ ಎಗರಿಸಿ ತಾನೂ ಸಿಗರೇಟು ಸೇದಲು ಕಲಿತದ್ದು ಹಾಗೆಯೇ .

ಹೀಗೇ ಕಾಲಕಳೆಯುತ್ತಾ ಎಂಟು ಗಂಟೆಯಾಗಿಬಿಟ್ಟರೆ ‘ನಟ’ ನಮ್ಮನ್ನು ಎಚ್ಚರಿಸಿ “ನಡೀರೋ ಕೋತಿ ತೋಪಿಗೆ ಹೋಗಿ ನೀರುಬೇರೆ ತರಬೇಕು, ಇವಾಗ ಜನಕಮ್ಮಿ ಆಗಿರ್ತಾರೆ, ನೀರು ಫೋರ್ಸ್ ಆಗಿರುತ್ತೆ” ಅನ್ನುತ್ತಿದ್ದ. ಆಗೆಲ್ಲ ನಮ್ಮೂರಿಗೆ ಹೇಮಾವತಿ ನೀರು ಬಂದಿರಲಿಲ್ಲ. ಹಾಸನದವರು ಹೇಮಾವತಿಯನ್ನು ದಾರಾಳವಾಗಿ ಕನ್ನಂಬಾಡಿಗೆ ಹರಿಸಿ ಅದು ಅಲ್ಲಿಂದ ತಮಿಳುನಾಡಿಗೆ ಹೋದರೂ ಅಡ್ಡಿಯಿಲ್ಲ ತುಮಕೂರಿಗೆ ಮಾತ್ರ ಹೋಗಕೂಡದು ಅಂದುಕೊಂಡಿದ್ದರೋ ಏನೋ? ಅಂತೂ ನಮಗೆ ಆಗ ನೀರಿಗೆ ಬವಣೆ, ಒಂದು ಬಿಂದಿಗೆಗೆ ಹೆಂಗಸರು ಬೀದಿಬೀದಿಯಲ್ಲಿ ಕಿತ್ತಾಡುವ, ಕೆಟ್ಟ ಕೆಟ್ಟದಾಗಿ ಕರೆದುಕೊಳ್ಳುವ ಪರಿಸ್ಥಿತಿ! ಅಬೀಬಾ ನಮಗೆ ಪರಿಚಯವಾದದ್ದು ಹೀಗೆ.

ಒಂದು ಭಾನುವಾರ ನಾವೆಲ್ಲಾ ಬ್ಯಾಟು ಬಾಲು ಹಿಡಿದು ಸಾಬಾಪಾಶದ ಕಂಪೌಂಡಿನ ಮೇಲೆ ನಿಂತಿದ್ದೆವು. ಮಂಜ ಒಳಗೆ ಧುಮುಕಿದ್ದೇ ತೆಂಗಿನಮರ ಹತ್ತಲು ಸಜ್ಜಾಗುತ್ತಿದ್ದ. ಆಗ ರಸ್ತೆಯ ಆಚೆಕಡೆಯಿಂದ ಬಂದ ಅಬೀಬಾ ‘ಏನ್ರೋ’? ಅಂದ. ನಾನು ಮಾತಾಡದೆ ಒಳಗಿನ ಕಂಪೌಂಡಿನ ಕಡೆಗೆ ಕೈಮಾಡಿದೆ, ಅವನಿಗದು ತಿಳಿಯದೆ ಇರಲಿಲ್ಲ. ಬೇಗನೆ ಓಡಿಬಂದು ಗೋಡೆ ಏರಿದ. ಮಂಜ ಅದಾಗಲೇ ತನ್ನ ಎರಡೂ ಕಾಲುಗಳ ಹೆಬ್ಬೆಟ್ಟಿಗೆ ಟೈನ್ ದಾರ ಸಿಕ್ಕಿಸಿಕೊಂಡು ಮರ ಏರುತಿದ್ದ ಮತ್ತು ಹಿಂದಿನ ದಿನ ಮಳೆಯಾಗಿದ್ದರಿಂದಲೋ ಏನೋ ಆಗಾಗ ಜಾರುತಿದ್ದ. ಇದನ್ನು ನೋಡಿದ ಅಬೀಬಾ “ಲೇ ಬದ್ಮಾಶ್ ಉತರ್, ಮರ ಜಾರ್ತಾ ಐತೆ, ಬಿದ್ರೆ ಖಲಾಸ್ ಆಗ್ಬಿಟ್ಟಿ ಒಡೆ ಮಾಡ್ಬಿಡ್ತಾರೆ ನಿಮ್ ಮನೇಲಿ” ಅಂದ.

ಯಾರ ಮಾತಿಗೂ ಸಾಮಾನ್ಯವಾಗಿ ಜಗ್ಗದ ಆಸಾಮಿ ಮಂಜ ಅದ್ಯಾಕೋ ಅಬೀಬನಿಗೆ ಬೆಲೆಕೊಟ್ಟು ಮರ ಇಳಿದು ಗೋಡೆಯೇರಿದ. ಅಬೀಬನಿಗೆ ಖುಷಿಯಾಯ್ತು.
“ಚಲ್ ನಿಂಗೆ ಕಾಯಿ ತಾನೆ ಬೇಕು? ನಾನು ಉದ್ರಿಸಿ ಕೊಡ್ತೀನಿ. ಸೀದಾ ಹೋಗಿ ಮೋಲ್ಡ್ ಮೇಲೆ ಹತ್ತು, ನಾನೂ ಬರ್ತೀನಿ” ಅಂದು ನಮ್ಮ ಕಡೆಗೆ ತಿರುಗಿ
“ಲೋ ಒಂದಷ್ಟು ದಪ್ಪು ಕಲ್ಲು ಹುಡ್ಕಿ ಮೇಲುಕ್ಕೆ ಕ್ಯಾಚ್ ಹಾಕ್ರೋ” ಅಂದ.

ನಾವು ಗೋಡೆಯಿಂದ ಕೆಳಗಿಳಿದು ಕನ್ಸರ್ವೆನ್ಸಿಯಲ್ಲೆಲ್ಲಾ ಹುಡುಕಾಡಿ ಒಂದಷ್ಟು ಸಾಮಾನ್ಯ ಗಾತ್ರದ ಕಲ್ಲುಗಳನ್ನು ಒಟ್ಟು ಮಾಡಿ ಮೇಲಕ್ಕೆ ಎಸೆಯುತ್ತಿದ್ದರೆ, ಅಬೀಬಾ ಅವನೆಲ್ಲಾ ಹಿಡಿದು ಗುಡ್ಡೆ ಮಾಡಿಕೊಳ್ಳುತ್ತಿದ್ದ. ನಂತರ ನಮ್ಮನ್ನೆಲ್ಲ ಸ್ವಲ್ಪ ದೂರಹೋಗುವಂತೆ ಹೇಳಿ ದಪ್ಪನಾದ ಕಲ್ಲೊಂದನ್ನು ಬರ್ರನೆ ಕಾಯಿಯಗೊಂಚಲುಗಳತ್ತ ಬೀಸಿದ.

‘ದಪ್’ ಅನ್ನುವ ಸದ್ದು, ಒಂದೆರಡು ಸೆಕೆಂಡಿನಲ್ಲಿ ‘ತೊಪ್’ ಎನ್ನುವ ಸದ್ದು ಕೇಳಿಸಿತು. ಕಲ್ಲು ತೆಂಗಿನಕಾಯಿಗೆ ಬೀಳುವ ಬದಲಿಗೆ ಅದರ ಬುಡ್ಡೆಗೆ ಬಿದ್ದು ಗುರಿತಪ್ಪಿತ್ತು. ಮಂಜ ಅಬೀಬನ ಮುಖ ನೋಡಿ ಮುಗುಳ್ನಕ್ಕಿದಕ್ಕೆ ಅಬೀಬಾ “ಅಬ್ ದೇಖ್ ರೇ” ಅಂದವನೇ ಮತ್ತೊಂದು ಕಲ್ಲನ್ನು ಬಲವಾಗಿ ಬೀಸಿದ. ಈ ಬಾರಿ ಕಲ್ಲು ಒಣಗಿದ ಗೊಂಚಲಿನ ಬುಡಕ್ಕೇ ಬಿದ್ದದ್ದರಿಂದ ಒಂದಿಡೀ ಗೊಂಚಲು ‘ಧಡಾರನೆ’ ಕಾಂಪೌಂಡ್ ನ ಒಳಗಡೆ ಬಿತ್ತು. ಸುಮಾರು ಹತ್ತರಿಂದ ಹದಿನೈದು ಕಾಯಿಗಳು, ಮಂಜನ ಮುಖ ಅರಳಿದರೆ ಅಬೀಬಾ ಗರ್ವದಿಂದ ಬೀಗುತ್ತಿದ್ದ. ನಮಗೆ ಎಷ್ಟ್ ಕಾಯಿ, ಎಂತಹುದು ಎಂದು ನೋಡುವ ತವಕದಿಂದ ಗೋಡೆ ಏರಿದೆವು, ಮರದ ಪಕ್ಕಕ್ಕೆ ಗೊಂಚಲು ಬಿದ್ದು ಒಂದೆರಡು ಕಾಯಿಗಳು ಪಕ್ಕಕ್ಕೆ ಓಡಿದ್ದವು. ಮಂಜ ತಾನೂ ಒಂದು ಕಲ್ಲನ್ನು ಬೀಸುವ ಹುನ್ನಾರದಲ್ಲಿದ್ದ. ಆದರೆ ಅಬೀಬಾ “ಲೇ ಜಾಂಟ್, ಎಲ್ಲಕಾಯಿ ಬಿದ್ರೆ ನಾಳೆ ಹೆಡ್ ಮಾಸ್ಟರ್ ಗೆ ಗೊತ್ತಾಗಲ್ಲ? ಇವತ್ತು ಸಾಕು ಇಳಿ” ಅಂದ. ಮಂಜನಿಗೆ ಸರಿಯೆನಿಸಿತೇನೋ, ತಾರಸಿಯಿಂದ ಇಳಿದು ಗೋಡೆಯ ಮೇಲೆ ಬಂದು ಅಲ್ಲಿಂದ ಒಳಕ್ಕೆ ಜಿಗಿದು, ಮೊದಲು ಗೊಂಚಲನ್ನು ಮೇಲಕ್ಕೆ ಮುಟ್ಟಿಸಿ ನಂತರ ಅಲ್ಲಿದ್ದ ಒಂದೆರಡು ಕಾಯಿಗಳನ್ನು ಮೇಲಕ್ಕೆಸೆದು ಗೋಡೆಹತ್ತಿದ. ಏಳನೇ ಕ್ಲಾಸಿನವರೆಗೆ ಮಂಜ ಸಾಬಾಪಾಶದಲ್ಲೇ ಓದಿದ್ದರಿಂದ ಅಲ್ಲಿನ ಒಂದೊಂದು ಗೋಡೆ, ಕಿಟಕಿ, ರೂಮು, ಚಿಲಕ, ಮರ, ಗಿಡ, ಟಾಯ್ಲೆಟ್ಟು, ಬೆಂಚು, ಹಲಗೆ ಅವನಿಗೆ ಚಿರಪರಿಚಿತ.

ಅಬೀಬಾ ನಮ್ಮ ಕಡೆಗೆ ತಿರುಗಿ “ಹೆಂಗಾರ ಮಾಡಿ ,ಈ ಕಾಯಿನ ಒಳ್ಳೆ ಕಡೆ ಸೇರಿಸ್ಬಿಡಿ, ಆಮೇಲೆ ಏನ್ಮಾಡ್ಬೇಕೋ ನೋಡನ” ಅಂದ.

ನಾವು ಅದೇನೋ ಮಹದ್ ಕಾರ್ಯವೆಂಬಂತೆ ಆಚೀಚೆ ಹತ್ತುಸಲ ನೋಡಿ ಹೇಗೋ ಮಾಡಿ ಅಷ್ಟೂ ಕಾಯಿಗಳನ್ನು ‘ನಟ’ ನ ಮನೆಯ ಅಟ್ಟದ ಮೇಲಿರಿಸಿದೆವು. ನಮಗೆ ಅದಕ್ಕಿಂತಾ ಒಳ್ಳೆಯ ಜಾಗ ಗೊತ್ತಿರಲಿಲ್ಲ.

ಈ ಬಾರಿ ಕಲ್ಲು ಒಣಗಿದ ಗೊಂಚಲಿನ ಬುಡಕ್ಕೇ ಬಿದ್ದದ್ದರಿಂದ ಒಂದಿಡೀ ಗೊಂಚಲು ‘ಧಡಾರನೆ’ ಕಾಂಪೌಂಡ್ ನ ಒಳಗಡೆ ಬಿತ್ತು. ಸುಮಾರು ಹತ್ತರಿಂದ ಹದಿನೈದು ಕಾಯಿಗಳು, ಮಂಜನ ಮುಖ ಅರಳಿದರೆ ಅಬೀಬಾ ಗರ್ವದಿಂದ ಬೀಗುತ್ತಿದ್ದ.

ತಿರುಗಿಬಂದು ನೋಡಿದರೆ ಮಂಜ, ಅಬೀಬಾ ಗೋಡೆಯ ಮೇಲಿರಲಿಲ್ಲ. ಬಹುಷಃ ಫೀಲ್ಡ್ ನ ಒಳಗಡೆ ಇರಬೇಕೆಂದು ಹತ್ತಿನೋಡಿದರೆ ಎಂಥಾ ನೋಟ! ಗೋಡೆಯ ಒತ್ತಟಿಗಿರುವ ಹೊಂಗೆಯ ಮರದಡಿ ಇಬ್ಬರೂ ಕುಕ್ಕರಗಾಲಿನಲ್ಲಿ ಕುಳಿತಿದ್ದಾರೆ, ಮಂಜನ ಬಾಯಲ್ಲಿ ಸಿಗರೇಟಿದೆ ಮತ್ತು ಅದನ್ನು ಕಡ್ಡಿಗೀರಿ ಅಬೀಬಾ ಹೊತ್ತಿಸುತ್ತಿದ್ದಾನೆ. ಅಬೀಬಾ ನಮ್ಮನ್ನೆಲ್ಲಾ ನೋಡಿ ಅಡಿಕೆ ಪಟ್ನ, ಕುಟ್ಟುನ್ಡಿ, ಚಾಕೊಲೇಟು, ಶುಂಠಿ ಮಿಂಟು ಎಲ್ಲ ಕೊಟ್ಟು ಸಂತಸಪಡಿಸಿದ. ನಮಗೆ ಇವನು ಮೊದಲೇ ನಮ್ಮ ಗೆಳೆಯನಾಗಬಾರದಿತ್ತಾ ಅನ್ನಿಸಿತು. ಹೀಗಿರುವಾಗ ಕಾಯಿಗಳನೆಲ್ಲ ಏನು ಮಾಡುವುದು ಎಂಬ ಪ್ರಶ್ನೆ ಮೂಡಿತು.

ನಾನಿದ್ದವನು “ಮತ್ತೇನು? ಸಿಪ್ಪೆಸುಲಿದು ಎಬ್ಬಿ ನೀರುಕುಡಿದು ಕಾಯಿ ತಿನ್ನೋದು” ಅಂದೆ.
ಅದಕ್ಕೆ ಅಬೀಬಾ “ಏ ಬದ್ಮಾಶ್ ಯಾವತ್ತೂ ಕಾಯಿ ತಿಂದಿಲ್ಲಾ? ನಿನ್ನ ಬುದ್ಧಿಗಿಷ್ಟು” ಅಂತ ಬೈದ.

ಮಂಜ ಇದ್ದವನು “ಲೇ ಅಮೀಬಾ, ಹೇಂಗೂ ಹನ್ನೆರಡು ಕಾಯಿ ಐತೆ, ನಾವು ಆರು ಜನ ಎಲ್ಲಾರ್ಗೂ ಎಲ್ಡ್ ಕಾಯಿ ಬತ್ತೈತೆ, ಮನೆಗ್ಕೊಟ್ಟುಬಿಡಾನ” ಅಂದ, ನಾವೂ ಹ್ಞೂಂಗುಟ್ಟಿದೆವು. ಅಬೀಬಾ “ನನ್ ಮಕ್ಳ ಮನೆಗೆ ಕೊಟ್ರೆ ಎಲ್ಲಿಂದ ಬಂತು ಅಂತ ಕೇಳಲ್ವಾ? ಚೋರಿ ಕಾ ಮಾಲ್ ಅಂತೀರಾ?” ಅಂದಾಗ ನಾವೆಲ್ಲಾ ಒಬ್ಬರ ಮುಖ ಒಬ್ಬರು ನೋಡಿಕೊಂಡೆವು. ಅವನು ನಮೆಲ್ಲರಿಗಿಂತಾ ಚಾಲಾಕಿ ಅಂತ ಬೇರೆ ಹೇಳಬೇಕಾಗಿಲ್ಲ. ಅವನನ್ನೇ ಕೇಳಿದೆವು, ಅದಕ್ಕವನು “ನೋಡಿ ನಮ್ಮಹತ್ರ ಹನ್ನೆರಡ್ ಕಾಯಿ ಐತೆ, ಅಂಗ್ಡಿ ಬೆಲೆ ಎಂಟು ರುಪಾಯ್, ಮಂಡಿಗೆ ಕೊಟ್ರೆ ಆರ್ರುಪಾಯ್ ಕೊಡ್ತಾರೆ, ನಾಳೇನೇ ನಾನು ಮಂಜ ಹೋಗಿ ಮಂಡಿಗೆ ಮಾರಿ ಬತ್ತೀವಿ, ಆಮೇಲೆ ಬಂದಿದ್ ದುಡ್ನ ಏನ್ಮಾಡೋದ್ ಅಂತಯೋಚ್ನೆ ಮಾಡನಂತೆ” ಅಂದ. ನಾವೆಲ್ಲರೂ ತಲೆಯಾಡಿಸಿದೆವು.

ಅದರಂತೆ ಅವರು ಮರುದಿನವೇ ಅಷ್ಟೂ ಕಾಯಿಗಳನ್ನು ಮಂಡಿಗೆ ಮಾರಿ ಬಂದರು. ಸಂಜೆ ಶಾಲೆ ಮುಗಿದ ನಂತರ ಎಲ್ಲರೂ(ಅಬೀಬಾನನ್ನು ಬಿಟ್ಟು ) ಮಂಜನ ಮನೆಯ ಜಗುಲಿಯ ಮೇಲೆ ಆಸೀನರಾದೆವು. ಮಂಜ ಮಾತಾಡತೊಡಗಿದ.
“ನೋಡ್ರೋ ಹನ್ನೆರಡು ಕಾಯ್ನೂ ಆರು ರೂಪಾಯಿಗೇ ಮಾರಿದ್ವಿ, ಆದ್ರೂ ಶುರುನಲ್ಲಿ ಯಾವ ಮಂಡಿಯವನೂ ತಗೋಳಾಕೆ ರೆಡಿ ಇರ್ಲಿಲ್ಲ, ಐದುಕ್ ಕೊಡು, ನಾಕುಕ್ ಕೊಡು ಅನ್ನೋರೆ ಎಲ್ಲ, ನಾನು ಐದುಕ್ ಆದ್ರೆ ಕೊಟ್ಬುಡಾನ ಅಮೀಬಾ ಅಂದೆ, ಆದ್ರೆ ಅವ್ನು ಹಿಡ್ದಿದ್ಪಟ್ಟೆ ಬಿಡ್ಲಿಲ್ಲ, ಕಡೆಗೆ ಒಬ್ಬ ಶೆಟ್ಟಿ ಹತ್ರ ಹೋದ್ವಿ. ಅವ್ನು ಕಾಯಿನ ತಿನ್ನೊಹಂಗ್ ನೋಡಿ, ಕೈಗೆ ಎತ್ಕೊಂಡು, ಟಕ್ ಅಂತ ಬಡ್ದು, ನೋಡ್ರಪ್ಪಾ ಐದುಕ್ಕಾದ್ರೆ ಕೊಡ್ರಿ ಎಲ್ಲಾ ತಗಂತಿನಿ ಇಲ್ಲಾ ಅಂದ್ರೆ ಎತ್ಕಂಡ್ ಹೋಗ್ರಿ ಅನ್ನೋದಾ? ನಾನು ಮತ್ತೆ, ಅಮೀಬಾ ಕೊಟ್ಬುಡಾನ ಕಣೋ ಅಂದೆ, ಅವ್ನು ಮತ್ತೆ ಒಪ್ಲಿಲ್ಲ! ಆರುಪಾಯ್ಗೆ ನಯಾ ಪೈಸಾ ಕಮ್ಮಿಗೆ ಕೊಡಾದ್ ಬೇಡ, ನಡಿ ಎತ್ಕಂಡು ಅನ್ನೋದಾ? ನಂಗೆ ಸ್ಕೂಲ್ಗೆ ತಡ ಆಗುತ್ತೋ, ನೀನ್ ಬೇರೆ ಅಂಗಡಿಗ್ಹೋಬೇಕು” ಅಂದೆ.

ಅಮೀಬಾ ನನ್ ಕೈಯಲ್ಲಿದ್ದ ಚೀಲ ಕಿತ್ಕೊಂಡು ಕಾಯೆಲ್ಲ ಕೆಳಗೆ ಸುರಿದು “ಏಳ್ ರುಪಾಯ್ ಒಂದ್ ಕಾಯಿ, ಏಳ್ರುಪಾಯ್ ಒಂದ್ ಕಾಯಿ ಅಂತಾ ಕೂಗೋಕೆ ಶುರು ಮಾಡ್ಬುಟ್ಟ! ಶೆಟ್ಟಿ ಹತ್ರ ಇದಕ್ಕಿಂತಾ ಚಿಕ್ಕು ಕಾಯಿತ್ತು ಅದುನ್ನ ಅವ್ನು ಎಂಟ್ರುಪಾಯಿಗೆ ಮಾರ್ತಾಯಿದ್ದ, ಎಲ್ಲಿ ನಮ್ಮಿಂದ ಅವನ ವ್ಯಾಪಾರಕ್ಕೆ ಕುತ್ ಬೀಳುತ್ತೋ ಅಂತ, ಪಕ್ ಅಂತ ಹತ್ರ ಬಂದು ಆರ್ರುಪಾಯಿಗೆ ಕೊಡ್ರೋ ನಾನೇ ಎಲ್ಲಾ ತಗೋತೀನಿ ಅನ್ನೋದಾ! ನಾವು ಎಲ್ಲಾ ಅವ್ನಿಗ್ ಮಾರಿ ಕಾಸ್ ಇಸ್ಕೊಂಡ್ ಬಂದ್ವಿ ನೋಡ್ರಪ್ಪಾ, ನೀವ್ ಏನೇ ಹೇಳ್ರೋ ನಮ್ಮ ಅಮೀಬಾ ವ್ಯಾಪಾರದಲ್ಲಿ ಶೆಟ್ಟ್ರುನೇ ಮೀರುಸ್ತಾನೆ ಬಿಡು” ಅಂದಾಗ ನಮ್ಮ ಕಣ್ಣುಗಳು ಅಭಿಮಾನದಿಂದ ಹೊಳೆಯುತ್ತಿದ್ದವು. ಜೊತೆಗೆ ಕಾಯಿಮಾರಿದ ಹಣವೆಲ್ಲಾ ಮಂಜನ ಹತ್ತಿರವೇ ಇರುವುದನ್ನು ಕೇಳಿ ಮತ್ತಷ್ಟು ಖುಷಿಯಾಯಿತು. ಸ್ನೇಹಿತರೆಲ್ಲಾ ಅದನ್ನ ಹೇಗೆ ಖರ್ಚು ಮಾಡುವುದೆಂದು ಚರ್ಚಿಸುತ್ತಿರುವಾಗ ನಾನು ಅಬೀಬನನ್ನ ಒಂದು ಮಾತುಕೇಳಬೇಕಿತ್ತು ಅಂದದ್ದಕ್ಕೆ ಮಂಜ “ಏನು ಪ್ರಾಬ್ಲಮ್ಮ್ ಇಲ್ಲ ಅವ್ನುನಿಮಗೆ ಹೆಂಗ್ ಬೇಕೋ ಹಂಗ್ ಖರ್ಚು ಮಾಡ್ರೋ, ನಂದ್ ಏನ್ತಕ್ರಾರ್ ಇಲ್ಲ” ಅಂದಿದ್ದನಂತೆ.

ರವಿ, ನಾವೆಲ್ಲಾ ಒಟ್ಟಿಗೆ ಹೋಗಿ ದಾವಣಗೆರೆ ಬೆಣ್ಣೆ ಮಸಾಲೆ ತಿನ್ನೋದಾ ಅಂದಾಗ ಎಲ್ಲರ ಬಾಯಲ್ಲೂ ಬೆಣ್ಣೆಯಾಡತೊಡಗಿತು! ಈ ಐಡಿಯಾ ಎಲ್ಲರಿಗೂ ಒಪ್ಪಿಗೆಯೂ ಆಯಿತು. ಮಾರನೆಯ ದಿನಸಂಜೆ ಅಬೀಬನನ್ನೂ ಕರೆದುಕೊಂಡು ಹೋಟೆಲ್ಲಿಗೆ ಹೋಗಿ ಎಲ್ಲಾ ದೋಸೆ ತಿಂದು ಬಂದೆವು, ಎಂತಾ ಅನುಭವ ಅದು! ನಾವೆಲ್ಲಾ ಗೆಳೆಯರು ಒಟ್ಟಿಗೆ ಹೋಗಿ ಹೋಟೆಲ್ಲಿನಲ್ಲಿ ತಿಂದದ್ದು ಅದೇ ಮೊದಲಬಾರಿ. ನಾವು ಒಂದೆರಡು ದಿನ ಅದರ ಗುಂಗಿನಿಂದ ಹೊರ ಬರಲೇಇಲ್ಲ.

***
ನಮಗೆ ಯಾವತ್ತಿಗೂ ಸುಲಭವಾಗಿ ಅಷ್ಟು ಹಣಸಿಗಬಹುದೆನ್ನುವುದರ ಬಗ್ಗೆ ಅಂದಾಜೇ ಇರಲಿಲ್ಲ. ಒಮ್ಮೆ ರುಚಿಕಂಡ ನಾವು ಮತ್ತೆ ಮತ್ತೆ ಸಾಬಾಪಾಶಕ್ಕೆ ಲಗ್ಗೆ ಹಾಕಿದೆವು. ಎಳೆಯ, ಒಣಗಿದ ಎಲ್ಲ ಕಾಯಿಗಳನ್ನೂ ಹೊಡೆದುರುಳಿಸಿದೆವು. ಕೆಲವು ದಿನಗಳಲ್ಲೇ ಎಲ್ಲ ಮರಗಳೂ ಬರಿದಾದವು. ಸ್ಕೂಲಿನ ಹೆಡ್ ಮಾಸ್ಟರಿಗೆ ಇದು ಕಿರಿಕಿರಿ ಉಂಟು ಮಾಡಿತು. ಬಹುಷಃ ತಮ್ಮ ಪಾಲಿನ ಆಸ್ತಿ ಬೇರೆಯವರ ಪಾಲಾಗುತ್ತಿದೆ ಅಂತ ಇರಬಹುದು. ವರ್ಷವರ್ಷ ತೆಂಗಿನಕಾಯಿ, ಹಲಸನ್ನು ತಮ್ಮ ಅಧ್ಯಕ್ಷತೆಯಲ್ಲಿ ಕೆಡವಿಸಿ, ಕೀಳಿಸಿ ಎಲ್ಲ ಶಿಕ್ಷಕರಿಗೂ ಒಂದೊಂದನ್ನೂ ಔಪಚಾರಿಕವಾಗಿ ಕೊಟ್ಟು, ತಾವು ಚೀಲದಲ್ಲಿ ತುಂಬಿಕೊಂಡು ಹೋಗುತ್ತಿದ್ದರಿಂದ ಈ ವರ್ಷ ಅದಕ್ಕೆ ಕತ್ತರಿ ಬಿದ್ದದ್ದನ್ನು ನೋಡಿ ವ್ಯಗ್ರರಾದರು. ತಮ್ಮ ವಿದ್ಯಾರ್ಥಿಗಳಿಗೆ, ಆಚೀಚೆಗಿನ ಅಂಗಡಿಯವರಿಗೆ ಈ ಬಗ್ಗೆ ಹೇಳಿ ನಿಗಾ ವಹಿಸಲು ಕೋರಿದರು. ಸಾಬಾಪಾಶದಲ್ಲಿ ಕ್ರಿಕೆಟ್ ಆಡುವುದಕ್ಕೆ ಕಡಿವಾಣ ಹಾಕಿದರು. ಅದನ್ನೂ ಲೆಕ್ಕಿಸದೆ ನಾವು ಅಲ್ಲಿ ಆಡತೊಡಗಿದೆವು.

ಒಂದು ದಿನ ಹೀಗೆ ಆಡುತ್ತಿರುವಾಗ ಬಾಲು ತಾರಸಿಯ ಮೇಲೆ ಹೋಯಿತು. ಮಂಜ ಮೇಲೆ ಹತ್ತಿ ಸುತ್ತ ಹರಡಿದ್ದ ಎಲೆಗಳ ನಡುವೆ ಹುಡುಕುತ್ತಾ ನಿಂತಾಗ, ಎದಿರು ಅಂಗಡಿಯ ಗಂಗಾಧರಯ್ಯನವರಿಗೆ ಸ್ಪಷ್ಟವಾಗಿ ಕಂಡಿತು. ಅವರೋ ಮುನಿಸಿಪಲ್ ಕೌನ್ಸಿಲ್ಲರ್ ಆಗಿದ್ದವರು. ತಮ್ಮ ಟೈಮಿನಲ್ಲಿ ಸಾಬಾಪಾಶಕ್ಕಾಗಿ ಶ್ರಮಿಸಿ ಹಳೆಯ ಗೋಡೆ ರಿಪೇರಿ, ಶೌಚಾಲಯದ ಸ್ವಚ್ಛತೆ, ಹೆಂಚುಗಳ ದುರಸ್ಥಿ, ಸುಣ್ಣ-ಬಣ್ಣ ಹೀಗೆ ಹಲವಾರು ಕೆಲಸಗಳನ್ನು ಮಾಡಿಸಿ ಇಲ್ಲೊಂದು ಶಾಲೆಯಿದೆ ಅನ್ನುವುದನ್ನು ಹೋಗಿ ಬರುವವರಿಗೆ ಮನದಟ್ಟು ಮಾಡಿಸಿದ್ದರು. ಈಗ ಶಾಲೆ ಸರ್ಕಾರದ ಯಾವ್ಯಾವುದೋ ಸ್ಕೀಮುಗಳಿಂದ ಬಹಳಷ್ಟು ಅಭಿವೃದ್ಧಿ ಹೊಂದಿದೆಯಾದರೂ ತಾನು ಕೈಗೊಂಡ ಕಾರ್ಯಗಳಿಂದಲೇ ಇಲ್ಲಿಯವರೆಗೂ ಶಾಲೆ ಉಳಿದಿದೆಯೆಂದು ಬಲವಾಗಿ ನಂಬಿದ್ದರು. ಕೆಲವು ದಿನಗಳಿಂದ ಕಾಯಿ, ಹಣ್ಣು ಕಳವಾಗುವುದರ ಬಗ್ಗೆ ತಿಳಿದು ಸಿಟ್ಟಾಗಿದ್ದರು.

“ಹೀಗೆ ಬಿಟ್ಟರೆ ನಾಳೆ ಹೆಂಚು, ತೀರು, ಬೋರ್ಡು, ಬೆಂಚು, ಟೇಬಲ್ಲು ಏನೂ ಬಿಡಲ್ಲ ಕಳ್ಳ ಮುಂಡೆ ಮಕ್ಳು, ಗವರ್ನಮೆಂಟ್ ಸ್ಕೂಲು ಅಂದ್ರೆ ಯಾರೂ ಹೇಳೋವ್ರ್ ಕೇಳೋವ್ರ್ ಇಲ್ಲ ಅನ್ಕೊಂಬುಟ್ಟವ್ರೆ” ಅಂತ ತಮ್ಮ ಓರಗೆಯವರ ಹತ್ತಿರ ಗುಡುಗಿದ್ದರು.

ಈಗ ನೋಡಿದರೆ ಕಳ್ಳ ತಾರಸಿಯ ಮೇಲೇ ಇದ್ದಾನೆ! ಹೇಗಾದರೂ ಮಾಡಿ ಹಿಡಿಯುಬೇಕು ಅಂತ ತಮ್ಮ ಊರುಗೋಲು ಹಿಡಿದು ಶಾಲೆಯ ಹಿಂಬದಿಯ ಕನ್ಸರ್ವೆನ್ಸಿಯ ಗೋಡೆಯ ಬಳಿ ಬಂದುನಿಂತರು. ಮಂಜ ಸಿಕ್ಕ ಬಾಲನ್ನು ನಮ್ಮಲ್ಲಿಗೆ ಎಸೆದು ತಾರಸಿಯ ಗೋಡೆಯ ಮೇಲಿನಿಂದ ಜೋಪಾನವಾಗಿ ಇಳಿದು ಅಲ್ಲಿಂದ ನಡೆದು, ಫೀಲ್ಡಿನ ಚಿಕ್ಕ ಗೋಡೆಯ ಬಳಿ ಬರುವಾಗ ಅಲ್ಲೇಕಾಯುತ್ತಿದ್ದ ಗಂಗಾಧರಯ್ಯನವರು ಜೋರಾಗಿ ಕೋಲು ಬೀಸಿದರು. ಅದು ಅವನ ಹಿಮ್ಮಡಿಗೆ ಬಲವಾಗಿ ತಗುಲಿ ಸಮತೋಲನ ಸಿಗದೆ ಅದೃಷ್ಟವಶಾತ್ ಕನ್ಸರ್ವೆನ್ಸಿಯ ಕಡೆ ಬಿದ್ದು, ತಡವರಿಸಿ ಎದ್ದು ಹಿಂದೆನೋಡದೆ, ಸತ್ತೆನೋ ಕೆಟ್ಟೆನೋ ಅಂತ ಓಟ ಕಿತ್ತ. ಬಾಲು ಕೊಟ್ಟು ಎಷ್ಟು ಹೊತ್ತಾದರೂ ಮಂಜ ಬಾರದಿರುವುದನ್ನು ನೋಡಿ ನಟ ಗೋಡೆ ಹತ್ತಲು ಹೋದವನು ದೊಪ್ಪನೆ ಹಿಂದಕ್ಕೆ ಜಿಗಿದು “ಲೋ ಗಂಗಾಧರಯ್ಯ ಬತ್ತಾ ಅವ್ನೆ” ಅಂದಾಗ ಬ್ಯಾಟು, ಬಾಲು ಎಲ್ಲಹಿಡಿದು ಒಟ್ಟಿಗೆ ಮುಂದಿನ ಗೇಟಿನಿಂದ ಎಲ್ಲರೂ ಒಟ್ಟಿಗೆ ಓಡಿದೆವು.

ಮನೆಯ ಹತ್ತಿರ ಬಂದಾಗ, ಮಂಜ ಜಗುಲಿಯ ಮೇಲೆ ಕೂತಿದ್ದ. ಅವನ ಹಿಮ್ಮಡಿ ಊದಿ ಕೆಂಪಾಗಿತ್ತು. ಬಲವಾಗಿ ಹೊಡೆತಬಿದ್ದನಂತರ ಓಡಿದ್ದರಿಂದ ಈಗ ಒಂದು ಹೆಜ್ಜೆ ಇಡುವುದೂ ಅಸಾಧ್ಯವಾಗಿತ್ತು. ನಮಗೆ ಅವನ ಪರಿಸ್ಥಿತಿ ಕಂಡು ದುಖ:ವಾಗಿತ್ತು. ಒಂದುವೇಳೆ ನಾವ್ಯಾರಾದರೂ ಅವನ ಸ್ಥಿತಿಯಲ್ಲಿ ಇದ್ದಿದ್ದರೆ ಖಂಡಿತಾ ಸಿಕ್ಕಿಬಿದ್ದು ಮತ್ತೊಂದಷ್ಟು ಏಟು ತಿಂದು ಬರುತ್ತಿದ್ದೆವು ಎಂದು ರವಿ ಹೇಳಿದಾಗ ಎಲ್ಲರೂ ‘ಹೂ೦’ ಗುಟ್ಟಿದೆವು. ಅದರಿಂದ ಸ್ವಲ್ಪ ಉತ್ತೇಜಿತನಾದಂತೆ ಮಂಜ ನಡೆದುದ್ದೆಲ್ಲವನೂ ವಿವರಿಸಿದ. ಅನಂತರ ಒಂದಷ್ಟು ದಿನಗಳು ಸಾಬಾಪಾಶಕ್ಕೆ ಹೋಗುವುದೇ ಬೇಡವೆಂದು ನಿರ್ಧರಿಸಿದೆವು.

***

ಆ ದಿನ ಬುಧವಾರ ಸ್ಕೂಲಿಗೆ ಕಲರ್ ಡ್ರೆಸ್. ಯುನಿಫಾರ್ಮ್, ಬೆಲ್ಟ್, ಶೂ, ಟೈ ಅಂತ ಟೈಮ್ ವೇಸ್ಟ್ ಆಗುವುದಿಲ್ಲವಾದ್ದರಿಂದ ಎಂಟುಗಂಟೆಯಾದರೂ ಇನ್ನೂ ಹಾಸಿಗೆಯ ಮೇಲೆ ಹೊರಳಾಡುತ್ತಿದ್ದೆ. ಅಮ್ಮ ಒಂದೆರಡು ಬಾರಿ “ಬೇಗ ಏಳೋ ಸೋಂಬೇರಿ” ಎಂದು ಕೂಗಿದ್ದಳು. ನಾನು ಇನ್ನೂ ಮಲಗೇ ಇದ್ದೆ. ಹೊರಗೆ ದೂರದಲ್ಲಿ ಅಪ್ಪನ ಬೈಕ್ ಸದ್ದು ಮಾಡಿದಾಗ ‘ಛಂಗನೆ’ ಎದ್ದೆ. ಹೊದ್ದಿದ್ದ ಬೆಡ್ ಶೀಟನ್ನು ಬೇಗನೆ ಮಡಿಚಿಟ್ಟು, ಹಾಸಿಗೆ ಸರಿಮಾಡಿ ಸುತ್ತಿ, ಮೂಲೆಸೇರಿಸಿ, ಒಳಬಾಗಿಲಿನ ಮೇಲೆ ಹಾಕಿದ್ದ ಟವೆಲ್ ಎಳೆದು ಕೊಂಡು ಸ್ನಾನದಮನೆ ಸೇರಿ ಬಾಗಿಲು ಜಡಿದೆ. ಅಮ್ಮ ಇದನ್ನೆಲ್ಲಾ ಗಮನಿಸಿ “ಇದಕ್ಕೇನು ಕಡಿಮೆ ಇಲ್ಲ ನೋಡು” ಅಂದಳು.

ಅಪ್ಪ ಮನೆಯೊಳಗೆ ಬಂದಾಗ ನಾನು ಬಚ್ಚಲಿನ ಒಳಗೆ ಹಲ್ಲು ಉಜ್ಜುತ್ತಿದ್ದೆ. ಆಗ ಅವರು “ಇವಳೇ, ನಮ್ಮ ಪೆಟ್ಟಿಗೆ ಅಂಗಡಿ ಕಾಸಿಂಸಾಬರು ಇರಲಿಲ್ವಾ? ಇವತ್ತು ಬೆಳಿಗ್ಗೆ ನಾಲ್ಕೂವರೆ ಐದು ಗಂಟೆ ಸುಮಾರಿಗೆ ಎದೆ ನೋವು ಅಂದ್ರಂತೆ, ಅವರ ಹೆಂಡ್ತಿ ಬಿಸಿನೀರು ಕಾಯಿಸಿ ತರೋದ್ರೊಳ್ಗೆ ಪ್ರಾಣ ಹೊರಟು ಹೋಗಿದೆ. ಐದಾರ್ ಜನ ಹೆಣ್ಮಕ್ಳು ಒಬ್ರಿಗೂ ಮದ್ವೆ ಆಗಿಲ್ಲ, ಆ ಗಂಡುಮಗ ಬೇರೆ ನಮ್ ನವೀನನ ವಯಸ್ಸಿನವನು, ಆವಮ್ಮ ಅದೇನ್ಮಾಡುತ್ತೋ ಏನ್ ಕಥೇನೋ ಆ ದೇವರೇ ಬಲ್ಲ” ಅಂದರು.

ಬಚ್ಚಲಿನಲ್ಲಿ ಕೋಳಿನಿದ್ದೆ ಹೊಡೆದುಕೊಂಡು ಹಲ್ಲು ಉಜ್ಜುತ್ತಿದ್ದ ನನಗೆ ಹೊಟ್ಟೆಯಲ್ಲಿ ಸಂಕಟ ಶುರುವಾಯಿತು. ಇಂಥಾ ಸಮಯದಲ್ಲಿ ನಾವೆಲ್ಲಾ ಗೆಳೆಯರು ನಮ್ಮ ಜೀವದ ಗೆಳೆಯ ಅಬೀಬಾನ ಹತ್ತಿರ ಇರಬೇಕು, ಹೌದು ಅದೇ ಒಳಿತೆನಿಸಿತು. ಬೇಗ ಬೇಗ ಸ್ನಾನಮಾಡಿ, ಸಿಕ್ಕ ಬಟ್ಟೆ ಹಾಕಿಕೊಂಡು, ದೇವರ ಮನೆಯ ಕಡೆಗೂ ಹೋಗದೆ ಮನೆಯಿಂದಾ ಹೊರಬಿದ್ದು ಮಂಜ, ನಟ, ರವಿ, ಮಧು ಎಲ್ಲರನ್ನೂ ಕರೆದು ವಿಷಯ ತಿಳಿಸಿದೆ. ನಂತರ ಎಲ್ಲರು ನಮ್ಮ ಮನೆಗಳ ಹಿಂದಿನ ಬೀದಿಯ ಸಾಬರ ಬೀದಿಗೆ ಹೋದೆವು. ದೂರದಿಂದಲೇ ಅಬೀಬಾನ ಮನೆಯ ಹತ್ತಿರದ ಜನಸಂದಣಿ ನೋಡಿ ಭಯವಾಯ್ತು. ಒಬ್ಬೊಬ್ಬರನ್ನೇ ಪಕ್ಕಕ್ಕೆ ಸರಿಸಿ ಮುಂದೆ ಹೋಗಿ ನಿಂತೆವು. ಖಾಸೀಮ್ ಸಾಬರನ್ನು ಅವರ ಮನೆಯ ವರಾಂಡದಲ್ಲಿ ಮಲಗಿಸಿದ್ದರು. ಅಬೀಬನ ತಾಯಿ ಅತ್ತೂ ಕಣ್ಣು ಬತ್ತಿ ಹೋಗಿ ಯಾವ ಶಕ್ತಿಯೂಇಲ್ಲದಂತಾಗಿ ವರಾಂಡಾದ ಗೋಡೆಗೆ ಒರಗಿದ್ದರು. ಹೆಣ್ಣು ಮಕ್ಕಳು ಒಬ್ಬರನ್ನೊಬ್ಬರು ಸಂತೈಸುತ್ತಾ ಅಳಲೂ ಆಗದೆ, ಸುಮ್ಮನಿರಲೂ ಆಗದೆ ವ್ಯಥೆ ಪಡುತ್ತಿದ್ದರು. ಅಬೀಬ ಮಾತ್ರ ಒಳಗೂ ಹೊರಗೂ ಓಡಾಡುತ್ತಾ ಏನಕ್ಕೋ ಸಿದ್ಧತೆ ಮಾಡುತ್ತಿದ್ದ. ಅವನನ್ನೂ ಸಂತೈಸಲು ಬಂದ ನಾವುಗಳು ಕೃಶವಾಗಿ ಹೋದರೂ ಅಬೀಬ ಧೈರ್ಯವಾಗಿದ್ದ. ಆ ಕ್ಷಣದಲ್ಲಿ ನನಗೆ “ಅಲ್ಲಾಹ್” ಯಾವುದೋ ಅಧ್ಭುತ ಶಕ್ತಿಯನ್ನು ಇವನಿಗೆ ದಯಪಾಲಿಸಿದ್ದಾನೆ ಅನ್ನಿಸಿತು.

ಮಂಜ ಸಿಕ್ಕ ಬಾಲನ್ನು ನಮ್ಮಲ್ಲಿಗೆ ಎಸೆದು ತಾರಸಿಯ ಗೋಡೆಯ ಮೇಲಿನಿಂದ ಜೋಪಾನವಾಗಿ ಇಳಿದು ಅಲ್ಲಿಂದ ನಡೆದು, ಫೀಲ್ಡಿನ ಚಿಕ್ಕ ಗೋಡೆಯ ಬಳಿ ಬರುವಾಗ ಅಲ್ಲೇಕಾಯುತ್ತಿದ್ದ ಗಂಗಾಧರಯ್ಯನವರು ಜೋರಾಗಿ ಕೋಲು ಬೀಸಿದರು. ಅದು ಅವನ ಹಿಮ್ಮಡಿಗೆ ಬಲವಾಗಿ ತಗುಲಿ ಸಮತೋಲನ ಸಿಗದೆ ಅದೃಷ್ಟವಶಾತ್ ಕನ್ಸರ್ವೆನ್ಸಿಯ ಕಡೆ ಬಿದ್ದು, ತಡವರಿಸಿ ಎದ್ದು ಹಿಂದೆನೋಡದೆ, ಸತ್ತೆನೋ ಕೆಟ್ಟೆನೋ ಅಂತ ಓಟ ಕಿತ್ತ.

ಸ್ವಲ್ಪ ಸಮಯಕ್ಕೆ ನಾಲ್ಕು ಜನ ಅದೆಂತಹುದೋ ಪೆಟ್ಟಿಗೆಯೊಂದನ್ನು ತಂದರು. ಅದರ ಮೇಲೆ ಹಸಿರುಬಟ್ಟೆಹೊದಿಸಿದ್ದರು. ಕಾಸೀಮ ಸಾಬರನ್ನು ಅದರೊಳಗೆ ಮಲಗಿಸಿ ಸೆಂಟುಗಳನ್ನು ಚುಮುಕಿಸಿ ಕೊನೆಯ ದರ್ಶನ ಮಾಡಿಕೊಳ್ಳುವವರು ಮಾಡಿಕೊಳ್ಳಿ ಎಂದರು. ನಂತರ ಪೆಟ್ಟಿಗೆಯನ್ನು ಮುಚ್ಚಿ ಹಸಿರುಬಟ್ಟೆಯ ಮೇಲೆ ಮಲ್ಲಿಗೆ ಹೂವಿನ ಅಲಂಕಾರ ಮಾಡಿ ಎತ್ತಿಕೊಂಡು ಮಸೀದಿಯ ಬಳಿ ಪ್ರಾರ್ಥನೆಗೆ ಕೊಂಡೊಯ್ಯುವಾಗ ಹೆಂಗಸರೆಲ್ಲಾ ಮನೆಯಲ್ಲಿಯೇ ಉಳಿದರೆ ಗಂಡಸರು ಹೆಗಲಿಗೆ ಹೆಗಲು ಕೊಡುತ್ತಾ ಮುನ್ನಡೆದರು. ನಾವೆಲ್ಲಾ ಸ್ಮಶಾನದವರೆಗೆ ಹೋಗುವುದೆಂದು ಮೊದಲು ತೀರ್ಮಾನಿಸಿದ್ದನ್ನು ಕೈಬಿಟ್ಟು ನಮ್ಮಗಳ ಮನೆಗಳತ್ತ ನಡೆದೆವು.

***

ಕಾಸಿಮ್ ಸಾಬರ ನಿಧನದ ನಂತರ ಎಲ್ಲ ಜವಾಬ್ದಾರಿಗಳು ಅಬೀಬನ ಮೇಲೆ ಬಿದ್ದವು. ಅವರ ಬಹುಪಾಲು ಅಂಗಡಿಗಳನ್ನು ಅವನ ಅಕ್ಕ ತಂಗಿಯರು ನೋಡಿಕೊಳ್ಳುತ್ತಿದ್ದರಿಂದ ಅವನು ಮತ್ತಷ್ಟು ಎಚ್ಚರಿಕೆ ವಹಿಸಬೇಕಿತ್ತು. ಹೀಗಿರುವಾಗ ನಮ್ಮೊಡನೆ ಕೆಲಸಕ್ಕೆ ಬಾರದ ಆಟವಾಡಲು, ಹರಟೆ ಹೊಡೆಯಲು ಸಾಧ್ಯವೇ? ದಿನೇ ದಿನೇ ಅಬೀಬಾ ಅವನ ಕೆಲಸ ಕಾರ್ಯಗಳಲ್ಲಿ ಮಗ್ನನಾದ. ವರ್ಷ ಕಳೆವುದರೊಳಗೆ ದೊಡ್ಡ ಅಕ್ಕ ತಬಸೂಮಳ ಮದುವೆಯಾಯ್ತು. ಆ ಸಮಯಕ್ಕೇ ಮುನಿಸಿಪಲ್ ಆಫೀಸಿನಲ್ಲಿ ಅಕೌಂಟೆಂಟ್ ಆಗಿದ್ದ ನನ್ನಪ್ಪನಿಗೆ ಕೋಲಾರಕ್ಕೆ ವರ್ಗ ಆಯ್ತು. ನಾನಾಗ ಹತ್ತನೇ ತರಗತಿಗೆ ಕಾಲಿಟ್ಟಿದ್ದೆ. ನಂತರದ ದಿನಗಳಲ್ಲಿ ಓದು, ಪಾಠ, ಉದ್ಯೋಗ ಅಂತಲೇ ಓಡಾಡಿದ್ದರಿಂದ ಹಳೆಯ ನೆನಪುಗಳೆಲ್ಲಾ ಹಿತ್ತಲಿಗೆ ಸರಿದವು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಮತ್ತೆ ನಾನು ತುಮಕೂರಿಗೆ ಹೋಗಬೇಕಾಗಿ ಬಂದದ್ದು ಅಕ್ಕನ ಮದುವೆಯ ಸಂಧರ್ಭದಲ್ಲಿ. ಆಗ ನಾವಿದ್ದದ್ದು ಮೈಸೂರಿನಲ್ಲಿ, ನಾವು ಅಪ್ಪನ ಜೊತೆ ಸಾಕಷ್ಟು ಊರುಗಳನ್ನು ಅಲೆದೆವಾದರೂ ತುಮಕೂರಿನ ನೆರೆ-ಹೊರೆ ನಮಗೆ ಬೇರೆಲ್ಲೂ ಸಿಕ್ಕಲಿಲ್ಲ. ಆ ಕಾರಣಕ್ಕಾಗಿಯೇ ಅಮ್ಮ ನನ್ನ ಜೊತೆಗೆ ಖುದ್ದಾಗಿ ಲಗ್ನಪತ್ರಿಕೆ ಹಂಚಲು ಬರುವುದಾಗಿ ಹೇಳಿದಳು. ಒಂದು ಭಾನುವಾರದ ದಿನ ನಸುಕಿಗೇ ಎದ್ದು ತುಮಕೂರಿನ ಬಸ್ಸು ಹಿಡಿದೆವು. ಊರು ತಲುಪಿದಾಗ ಒಂಭತ್ತು ಗಂಟೆ. ಆರಕ್ಕೇರದ ಮೂರಕ್ಕಿಳಿಯದ ತುಮಕೂರು ಪ್ರಶಾಂತವಾಗಿತ್ತು. ನಡೆದೇ ನಾವಿದ್ದ “ಗಂಗಮ್ಮಜ್ಜಿ” ವಠಾರಕ್ಕೆ ಹೋದೆವು. ವಠಾರದ ಹೆಂಗಸರೆಲ್ಲಾ ಅಮ್ಮನನ್ನು ನಾಮುಂದು ತಾಮುಂದು ಎಂಬಂತೆ ತಮ್ಮ ಮನೆಗಳಿಗೆ ಕರೆದರೆ ನನ್ನನ್ನು ಮಾತ್ರ “ಈವಪ್ಪ ಯಾರು?” ಎಂದು ಕೇಳುವುದು, ನನ್ನಮ್ಮ “ಅಯ್ಯೋ ಇದು ನಮ್ಮ ನವೀನ” ಅಂದರೆ “ಓಹ್ ಗುರುತೇ ಸಿಗಲಿಲ್ಲಾ ನೋಡು! ಇಲ್ಲಿದ್ದಾಗ ಕುಳ್ಳಕ್ಕೆ -ತೆಳ್ಳಕ್ಕೆ ಇದ್ದೆ” ಅನ್ನುವುದು ಸ್ವಾಭಾವಿಕ ಅನಿಸಿತು.

ನಾನು ಅಮ್ಮನಿಗೆ ಹೇಳಿ ವಠಾರದಿಂದ ಹೊರಬಿದ್ದವನೇ ಮೊದಲು ಹೋದದ್ದು ಎದುರಿನ ಓಣಿಯ ಕೊನೆಯ ಮಂಜನ ಮನೆಗೆ. ಅವನು ಮನೆಯಲ್ಲಿ ಇರಲಿಲ್ಲ. ಅವನಮ್ಮ ಜನತಾ ಬಜಾರ್ ಬಳಿ ಅವನೊಂದು ಚಿಕ್ಕ ಟೀ ಅಂಗಡಿ ಇಟ್ಟಿರುವುದಾಗಿಯೂ ಅಲ್ಲಿಹೋದರೆ ಸಿಕ್ಕುವನೆಂದು ಹೇಳಿದರು. ಅಲ್ಲಿಂದ ನಂತರ ನಟನಮನೆಗೆ ಹೋದರೆ ತಿಳಿದದ್ದು ಆರು ತಿಂಗಳಿನಿಂದ ಬೆಂಗಳೂರಿನ ಯಾವುದೋ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಮತ್ತು ಆಗಾಗ ಊರಿಗೆ ಬಂದು ಹೋಗುತ್ತಾನೆಂಬುದು. ಮಧು ನನಗೇ ತಿಳಿದಿದ್ದಂತೆ ಹಾಸನದ ಇಂಜಿನಿಯರಿಂಗ್ ಕಾಲೇಜು ಒಂದರಲ್ಲಿ ಫೈನಲ್ ಇಯರ್ ಓದುತ್ತಿದ್ದ. ಹಾಗಾಗಿ ರವಿ ಒಬ್ಬನೇ ಮನೆಯಲ್ಲಿ ಸಿಕ್ಕಿದ್ದು. ಅವನಿಂದ ನಮ್ಮ ಇನ್ನೂ ಹಲವು ಸ್ನೇಹಿತರು ಎಲ್ಲಿ-ಏನು ಮಾಡುತ್ತಿದ್ದಾರೆಂದು ತಿಳಿಯಿತು.

ಮಾತಿನ ಮಧ್ಯೆ ಅಬೀಬನ ಹೆಸರು ಬಂದಾಗ ನಾನು ಕುತೂಹಲದಿಂದ ಹಲವು ಪ್ರಶ್ನೆಗಳನ್ನು ಕೇಳಿದೆ. ಅದರಿಂದ ತಿಳಿದು ಬಂದ್ದದೇನೆಂದರೆ , ಅಬೀಬ ಕಷ್ಟ ಪಟ್ಟು ದುಡಿಯುತ್ತಿದ್ದಾನೆ. ಈಗಾಗಲೇ ನಾಲ್ಕು ಅಕ್ಕಂದಿರ ಮದುವೆ ಮಾಡಿದ್ದಾನೆ. ಉಳಿದಿರುವವಳು ಕೊನೆಯ ತಂಗಿಯೊಬ್ಬಳೇ, ಅವಳ ಮದುವೆಗೂ ಏರ್ಪಾಟು ಮಾಡಿಕೊಳ್ಳುತ್ತಿದ್ದಾನೆ. ತಮ್ಮ ಕುಟುಂಬದವರೇ ನಡೆಸುತ್ತಿದ್ದ ಪೆಟ್ಟಿಗೆ ಅಂಗಡಿಗಳನ್ನು ಈಗ ನಂಬಿಕಸ್ಥರಿಗೆ ಬಿಟ್ಟು ಕೊಟ್ಟಿದ್ದಾನೆ. ತನಗೆ ಓಡಾಡಲು ಮೋಟಾರ್ ಬೈಕೊಂದನ್ನು ಕೊಂಡಿದ್ದಾನೆ ಎಂಬುದು.

ಇವೆಲ್ಲವೂ ಅಬೀಬನ ಮೇಲೆ ನನಗಿದ್ದ ಪ್ರೀತಿಯನ್ನುಗೌರವವನ್ನಾಗಿಸಿದವು. ಕೂಡಲೇ ರವಿಗೆ ಅಬೀಬನು ಈಗ ಎಲ್ಲಿಸಿಕ್ಕುತ್ತಾನೆಂದು ಕೇಳಿದ್ದಕ್ಕೆ ಅವನು “ಮಧ್ಯಾಹ್ನ ಒಂದೂವರೆ ಸುಮಾರಿಗೆ ಸಾಬಾಪಾಶದ ಹತ್ತಿರ ಕಲೆಕ್ಷನ್ ಗೆ ಬರುತ್ತಾನೆ. ಆಗ ಸಿಗಬಹುದು” ಅಂದ. ಸಾಬಾಪಾಶ ಎಂಬ ಹೆಸರನ್ನು ಕೇಳಿಯೇ ವರ್ಷಗಳಾಗಿದ್ದವು. ಆಗಿನ ನೆನಪುಗಳೆಲ್ಲಾ ಒಂದೊಂದಾಗಿ ಮರುಕಳಿಸಿದವು.

ಮಧ್ಯಾಹ್ನ ಒಂದರ ಸುಮಾರಿಗೆ ವಿಪರೀತ ಬಿಸಿಲಿನಲ್ಲೇ ನಾನು ಮತ್ತು ರವಿ ಸಾಬಾಪಾಶದ ಅದೇ ಗೋಡೆಯ ಮೇಲೆ ಹೋಗಿ ಕುಳಿತೆವು. ಎದುರುಗೆ ಅದೇ ಪೆಟ್ಟಿಗೆ ಅಂಗಡಿ, ಆದರೆ ಒಳಗೆ ಮತ್ಯಾರೋ ಇದ್ದರು. ಸ್ವಲ್ಪ ಸಮಯಕ್ಕೆ ಬೈಕಿನ ಮೇಲೆ ಬಂದವ್ಯಕ್ತಿಯೊಬ್ಬ ರವಿಯ ಕಡೆಗೆ ಕೈಮಾಡಿದ. ರವಿ ಪ್ರತಿಕ್ರಿಯಿಸಿ ನನ್ನಕಡೆಗೆ ತಿರುಗಿ “ನೋಡೋ ಅಬೀಬಾ” ಎಂದಾಗ ನನಗೆನಂಬಲಿಕ್ಕೇ ಆಗಲಿಲ್ಲ!

ಆಗ ನನಗಿಂತಾ ಸಣ್ಣಗಿದ್ದ ನಾವು ಕೆಲವೊಮ್ಮೆ ವಿನೋದಕ್ಕೆ “ಅಮೀಬಾ” ಅನ್ನುತ್ತಿದ್ದವನು ದಷ್ಟಪುಷ್ಟವಾಗಿ ಬೆಳೆದು ನಲವತ್ತು ವರ್ಷದವನ೦ತ್ತಿದ್ದು, ಗಡ್ಡಧಾರಿಯಾಗಿದ್ದ. ನಾನು ಕೈಬೀಸಿದಾಗ ಗೊಂದಲದಿಂದಲೇ ನನನ್ನು ಗಮನಿಸಿದ ಅಬೀಬಾ ಏನೋ ಹೊಳೆದವನಂತೆ ಗಾಡಿಯ ಸ್ಟ್ಯಾಂಡ್ ಹಾಕಿ, ರಸ್ತೆ ದಾಟಿ ಲಗುಬಗೆಯಿಂದ ನಮ್ಮ ಬಳಿ ಬಂದು ನಿಂತವನೇ “ಏ ನವೀನ ಅಲ್ವಾ?” ಅಂದ.

ನಾನು ಖುಷಿಯಿಂದಾ ಹೂ೦ಗುಟ್ಟಿದೆ. “ನೋಡ್ದಾ ಹೆಂಗೆ ಕಂಡ್ಹಿಡ್ದೆ ” ಅಂದವನೇ ನನ್ನ ಹಿಂದೂ ಮುಂದೂ ಎಲ್ಲಾ ಒಂದೇ ಜಾಡಿಗೆ ವಿಚಾರಿಸಿಬಿಡುವ ಉತ್ಸಾಹ ತೋರಿದ. ನಾನು ಕೈಚೀಲದಿಂದ “ಲಗ್ನಪತ್ರಿಕೆ” ಯೊಂದನ್ನು ತೆಗೆದು ಅದರ ಮೇಲೆ “ಅಬೀಬಾ” ಎಂದು ಬರೆಯ ಹೊರಟವನು ಮನಸಲ್ಲೇ ನನ್ನನ್ನು ನಾನು ತಿದ್ದಿಕೊಂಡು “ಅಬೀಬ್ ಸಾಬ್ ರವರು ಮತ್ತು ಕುಟುಂಬ, ತುಮಕೂರು” ಎಂದು ಬರೆದು ಅವನ ಕೈಗಿತ್ತು “ಅಕ್ಕನ ಮದುವೆ ಇನ್ನು ಹದಿನೈದು ದಿನಕ್ಕೆ ಮೈಸೂರಿನಲ್ಲಿ, ಎಲ್ಲಾ ಗೆಳೆಯರನ್ನು ನೀನೇ ಖುದ್ದಾಗಿ ಹೊರಡಿಸಿಕೊಂಡು ಬರಬೇಕು, ಅಬೀಬಾ” ಎಂದೆ.
“ಫಿಕರ್ ನಕ್ಕೋ ಬಾ, ನಾವೆಲ್ಲಾ ಹಿಂದಿನ್ ದಿನಾನೇ ಬಂದು ನಿಂಗೆಸಾತ್ ಕೊಡ್ತೀವಿ” ಅಂದ.

ಸಂಜೆ ಮೈಸೂರಿಗೆ ಮರಳಿ ಹೋಗುವಾಗ ಬಸ್ಸಿನಲ್ಲಿ ಅಬೀಬನ ಬೆಳವಣಿಗೆಯನ್ನು ನೆನೆದು ಮನಸ್ಸು ತುಂಬಿಬಂತು. ಅದು ಕಣ್ಣಂಚಿಗೆ ಬರಲು ತಡವಾಗಲಿಲ್ಲ!