ಏನೋ ಶಬ್ದ ಕೇಳಿದಂತಾಗಿ ಬೆಚ್ಚಿಬಿದ್ದು ಎದ್ದು ಕುಳಿತುಕೊಂಡಳು ವಾಸಂತಿ. ತನ್ನ ನಾಳಿನ ಇವೆಂಟ್‌ ಬಗ್ಗೆ ಏನಾದರೂ ಬರಬಹುದೇನೋ ಎಂಬ ಕುತೂಹಲದಲ್ಲಿ ಸುದ್ದಿಚಾನೆಲ್‌ ನೋಡುತ್ತಾ, ಮಂಚದ ಮೇಲೆ ಒರಗಿದ್ದ ಅವಳಿಗೆ ಹಿಂದಿನ ದಿನ ತಡರಾತ್ರಿವರೆಗಿನ ರಿಹರ್ಸಲ್‌, ಪ್ರಯಾಣದ ಸುಸ್ತು ಎಲ್ಲವೂ ಸೇರಿ ಹಾಗೆಯೇ ನಿದ್ದೆ ಆವರಿಸಿಕೊಂಡಿತ್ತು. ಎಷ್ಟುಹೊತ್ತು ಮಲಗಿಬಿಟ್ಟೆ ಎನ್ನುತ್ತಾ ವಾಚಿನತ್ತ ದೃಷ್ಟಿ ಹರಿಸಿದಳು. ರಾತ್ರಿ ಎಂಟು ಗಂಟೆ. ಪರಿಚಯಸ್ಥರ ಮನೆಗೆ ಹೋಗಿದ್ದ ಸ್ನೇಹಿತೆ ವೈಷ್ಣವಿ ಇನ್ನೂ ಬಂದಿಲ್ಲವಲ್ಲ ಎಂಬುದು ನೆನಪಾಗಿ ತುಸು ಗಾಬರಿಗೊಂಡ ಅವಳಿಗೆ ತನ್ನ ಸುತ್ತಮುತ್ತಲಿನ ವಾತಾವರಣ ಯಾಕೋ ಅಸಹಜವಾಗಿದೆಯಲ್ಲ ಎಂದನಿಸತೊಡಗಿತು. ಟಿವಿಯಲ್ಲಿ ಸುದ್ದಿಚಾನೆಲ್‌ ವರದಿಗಾರ ಭಯಮಿಶ್ರಿತ ಆತಂಕದ ಧ್ವನಿಯಲ್ಲಿ ಏನೇನೋ ಒದರುತ್ತಿದ್ದ. ಕೊಠಡಿಯ ಹೊರಗಡೆ ಏನೋ ಕೂಗಾಟ, ಸದ್ದು. ನ್ಯೂಸ್‌ ಚಾನೆಲ್‌ ವರದಿಗಾರನಿಗೂ ಅಲ್ಲಿ ಮೂಡುತ್ತಿದ್ದ ಚಿತ್ರಗಳಿಗೂ ಏನೋ ಧಾವಂತ.

ಆ ಹೊತ್ತಿಗೆ ಹೊರಗಿನ ವರಾಂಡದಲ್ಲಿ ಪಟ ಪಟಾರನೆ ಪಟಾಕಿ ಸಿಡಿದಂಥ ಶಬ್ದ, ಜನರ ಕಿರುಚಾಟ ಕೇಳಿಬಂದಾಗ ವಾಸಂತಿಯ ನಿದ್ರೆ ಗುಂಗು ಸಂಪೂರ್ಣ ಇಳಿದುಹೋಗಿತ್ತು. ಹೊರಗೆ ಏನು ನಡೆಯುತ್ತಿದೆ ಎಂದು ತಿಳಿದುಕೊಳ್ಳಲು ಬಾಗಿಲು ತೆರೆಯಹೋದವಳಿಗೆ ಟಿವಿ ಪರದೆ ಮೇಲೆ ಮೂಡುತ್ತಿರುವ ಪಂಚತಾರಾ ಹೋಟೆಲ್‌ನಲ್ಲೇ ತಾನಿರುವುದು ಎಂಬುದು ಅರಿವಾಗಿ ಕುತೂಹಲದಿಂದ ಅತ್ತ ದೃಷ್ಟಿ ನೆಟ್ಟಳು. ಟಿವಿಯಲ್ಲಿ ತೋರಿಸುತ್ತಿರುವ ಹೋಟೆಲ್‌ನ ಮುಂದೆ ಆಗಲೇ ಪೊಲೀಸರು, ಜನ, ಟಿವಿ ಚಾನೆಲ್‌ ವರದಿಗಾರರು ಜಮಾಯಿಸಿದ್ದಾರೆ. ಹೋಟೆಲ್‌ನ ಮೊದಲ ಮಹಡಿಯ ಒಂದು ಕೊಠಡಿ ಬೆಂಕಿಯಿಂದ ಉರಿಯುತ್ತಿದೆ. ಹೋಟೆಲ್‌ಗೆ ಬೆಂಕಿ ಬಿದ್ದಿರಬಹುದೇ ಎಂದುಕೊಂಡವಳ ದೃಷ್ಟಿ ‘ಬ್ರೆಕಿಂಗ್‌ ನ್ಯೂಸ್‌’ ನತ್ತ ಬಿತ್ತು. ಹೋಟೆಲ್‌ಗೆ ಭಯೋತ್ಪಾದಕರು ದಾಳಿ ಮಾಡಿದ್ದಾರೆ, ತಾನಿದ್ದ ಕೊಠಡಿ ಹೊರಗಿನ ವರಾಂಡದಲ್ಲಿ ಕೇಳಿಬರುತ್ತಿರುವುದು ಗನ್ನುಗಳ ಸದ್ದು, ಅದಕ್ಕೆ ಎದುರಾದವರ ಆರ್ತನಾದ ಎಂಬುದು ಗೊತ್ತಾಗಲು ಅವಳಿಗೆ ಬಹಳ ಸಮಯ ಬೇಕಾಗಲಿಲ್ಲ. ತಕ್ಷಣ, ಬಾಗಿಲು ತೆಗೆಯಲು ಹೋಗಿದ್ದ ತನ್ನ ಕೈಗಳನ್ನು ಹಾಗೆಯೇ ಹಿಂದಕ್ಕೆಳೆದುಕೊಂಡಳು. ಆಗಲೇ ಯಾರೋ ಕಿರುಚಾಡುತ್ತಾ ದಬದಬ ಬಾಗಿಲು ಬಡಿದ ಸದ್ದು ಕೇಳಿಸಿ ಅವಳ ಹೃದಯ ಬಾಯಿಗೇ ಬಂದಂತಾಯಿತು. ಇದ್ದಕ್ಕಿದ್ದಂತೆಯೇ ಸಾವಿನ ಭಯದ ಅನುಭವವಾಗಿ ಅವಳು ಬೆವೆತುಹೋದಳು.

ಒಂದರೆಕ್ಷಣ ಏನು ಮಾಡುವುದೆಂದು ತೋಚದೆ ಕೊಠಡಿಯೊಳಗಿನ ಎಲ್ಲಾ ದೀಪಗಳನ್ನು, ಟಿವಿಯನ್ನು ಆರಿಸಿಬಿಟ್ಟಳು ವಾಸಂತಿ. ಕಿಟಕಿ ಬಾಗಿಲುಗಳನ್ನು ಭದ್ರಪಡಿಸುತ್ತಿರುವಾಗ ಅವಳಿಗೆ ಮೊಬೈಲ್‌ ಸೈಲೆಂಟ್‌ ಮೋಡ್‌ನಲ್ಲಿಟ್ಟಿದ್ದು ನೆನಪಾಯಿತು. ನೋಡಿದರೆ ಅದರಲ್ಲಿ ಆಗಲೇ ಹನ್ನೊಂದು ಮಿಸ್‌ಕಾಲ್‌ಗಳಿದ್ದವು. ಅವುಗಳಲ್ಲಿ ಬಹುತೇಕವು ಸ್ನೇಹಿತೆ ವೈಷ್ಣವಿಯದು. ಕೆಲವು ಸ್ನೇಹಿತರದು. ಮೊಬೈಲ್‌ ಹಿಡಿದುಕೊಂಡೇ ಆಚೀಚೆ ನೋಡಿದಳು. ಕೈಕಾಲುಗಳು ಇನ್ನಿಲ್ಲದಂತೆ ನಡುಗುತ್ತಿದ್ದವು. ಕಿಟಕಿ ಮೂಲಕ ತೂರಿಕೊಂಡು ಬರುತ್ತಿದ್ದ ಹೊರಗಿನ ಬೆಳಕಿನಲ್ಲಿ ಅವಳಿಗೆ ರೂಮಿನ ಪುಟ್ಟ ಕಬೋರ್ಡ್‌ ಕಂಡಿತು. ತಕ್ಷಣ ಅದರೊಳಗೆ ತೂರಿಕೊಂಡು ಬಾಗಿಲು ಮುಚ್ಚಿಕೊಂಡಳು. ಅವಳು ಭಯದಿಂದ ಜೋರಾಗಿ ಉಸಿರಾಡುತ್ತಿದ್ದುದು ಆ ಕಬೋರ್ಡ್‌ನೊಳಗೆ ಸ್ಪಷ್ಟವಾಗಿ ಮೊಳಗುತ್ತಿತ್ತು. ಒಂದರೆಕ್ಷಣ ಏನು ಮಾಡಲೂ ತೋಚದೆ ಸುಮ್ಮನೆ ಕುಳಿತಳು. ಬಹುಶಃ ತನ್ನ ಮನೆಯವರಿಗೆ ಇನ್ನೂ ವಿಷಯ ತಿಳಿದಿಲ್ಲ ಎಂದುಕೊಳ್ಳುತ್ತಾ ಮೊಬೈಲ್‌ನಲ್ಲಿ ಮೆಸೇಜ್‌ ಟೈಪ್‌ ಮಾಡತೊಡಗಿದಳು.
******

ಬೆಳಗಾವಿಯ ವಿದ್ಯಾನಗರ ಬಡಾವಣೆಯ ಮೂಲೆಯಲ್ಲಿದ್ದ ನಿರಂಜನ ಉಪಾಧ್ಯಾಯರ ಮನೆಗೆ ಆಗಿನ್ನೂ ಮುಂಬೈನ ಈ ಭಯೋತ್ಪಾದಕರ ದಾಳಿಯ ಬಿಸಿ ತಟ್ಟಿರಲಿಲ್ಲ. ಬಡಾವಣೆಯ ಹೆಂಗಸರೆಲ್ಲ ಎಂದಿನಂತೆ ಸಂಜೆಯ ಕಣ್ಣೀರ ಧಾರಾವಾಹಿಗಳಲ್ಲಿ ಮುಳುಗಿಹೋಗಿದ್ದರು. ಅತ್ತೆಯ ಮಾತು ಕೇಳಿ ಮಗ ಇನ್ನೇನು ತನ್ನ ಹೆಂಡತಿಯನ್ನು ಮನೆಯಿಂದ ಹೊರದೂಡುತ್ತಾನೆ ಎಂಬ ಖುಷಿಯೋ ಏನೋ, ನಿರಂಜನ ಉಪಾಧ್ಯಾಯರ ತಾಯಿ ಪದ್ಮಾವತಮ್ಮ ‘ಸತ್ತಬದುಕು’ ಧಾರಾವಾಹಿ ನೋಡುತ್ತಾ ಟಿವಿಯೊಳಗೇ ಪ್ರವೇಶಿಸಿಬಿಟ್ಟಿದ್ದರು. ಆ ಧಾರಾವಾಹಿಯೊಳಗೆ ಅವರು ಎಷ್ಟರಮಟ್ಟಿಗೆ ಅಂತರ್ಗತರಾಗಿದ್ದರೆಂದರೆ, ಅತ್ತೆ ಮತ್ತು ಅವರ ಮಗ ಆಡುವ ಪ್ರತಿಯೊಂದು ಚುಚ್ಚು ಮಾತನ್ನೂ ಸಂಭ್ರಮಿಸುತ್ತಾ, ಮಧ್ಯೆ ಮಧ್ಯೆ ‘ಹಾಗೇ ಆಗಬೇಕು’ ಎನ್ನುತ್ತಾ ಕಮೆಂಟ್‌ ಉದುರಿಸುತ್ತಿದ್ದರು. ಅತ್ತೆಯ ಕಮೆಂಟ್‌ ಕೇಳುತ್ತಲೇ ಧಾರಾವಾಹಿಯಲ್ಲಿ ಏನೇನು ನಡೆಯುತ್ತಿರಬಹುದು ಎಂಬುದನ್ನು ಊಹಿಸಿಕೊಳ್ಳುತ್ತಾ, ಆಗಾಗ ಟಿವಿಯತ್ತ ಇಣುಕಿ ನೋಡುತ್ತಿದ್ದ ನಿರಂಜನರ ಮಡದಿ ಪ್ರಭಾದೇವಿ ರಾತ್ರಿ ಅಡುಗೆ ತಯಾರಿಯಲ್ಲಿದ್ದರು.

ಅತ್ತ, ಮಗಳು ವಾಸಂತಿಯ ನಾಳಿನ ಇವೆಂಟ್‌ ಬಗ್ಗೆ ಸ್ನೇಹಿತನ ಬಳಿ ಮಾತಾಡಿಕೊಂಡು ಸ್ಕೂಟರ್‌ ಏರಿ ಹಿಂತಿರುಗುತ್ತಿದ್ದ ನಿರಂಜನ ಉಪಾಧ್ಯಾಯರಿಗೆ ಯಾವತ್ತಿಗಿಂತ ಹೆಚ್ಚು ಫೋನ್‌ ಕಾಲ್‌ಗಳು ಬರುತ್ತಿವೆಯಲ್ಲ ಎಂದೆನ್ನಿಸಿ ಅಚ್ಚರಿಯಾಗಿತ್ತು. ಯಾವತ್ತೂ ಸ್ಕೂಟರ್‌ ಚಲಾಯಿಸುವಾಗ ಮೊಬೈಲ್‌ ಕರೆ ಸ್ವೀಕರಿಸದ ಉಪಾಧ್ಯಾಯರು ಅವತ್ತು ಸ್ಕೂಟರನ್ನು ಪಕ್ಕಕ್ಕೆ ನಿಲ್ಲಿಸಿ ಮೊಬೈಲ್‌ ತೆರೆದು ನೋಡಿದರು. ಅದರಲ್ಲಿ ಆಗಲೇ ಐದಾರು ಮಿಸ್‌ಕಾಲ್‌ಗಳಿದ್ದವು. ಜೊತೆಗೆ ವಾಸಂತಿಯ ಒಂದು ಮೆಸೇಜ್‌. ಏನಿರಬಹುದು ಎಂಬ ಕುತೂಹಲದಲ್ಲಿ ಮೆಸೇಜ್‌ ತೆರೆದು ಓದಿದ ನಿರಂಜನ ಉಪಾಧ್ಯಾಯರಿಗೆ ನಿಂತ ನೆಲವೇ ಕುಸಿದ ಅನುಭವವಾಗಿ ಕ್ಷಣಕಾಲ ಅದುರಿಹೋದರು. ಅಲ್ಲಿಂದಲೇ ತಕ್ಷಣ ವಾಸಂತಿಗೆ ಕರೆ ಮಾಡಿದರೂ ವಾಸಂತಿ ಕರೆ ಸ್ವೀಕರಿಸಲಿಲ್ಲ. ಬದಲಿಗೆ ಮೆಸೇಜ್‌ ಬಂತು: ‘ನಾನು ರೂಮಿನ ಕಬೋರ್ಡ್‌ನೊಳಗೆ ಬಚ್ಚಿಟ್ಟುಕೊಂಡಿದ್ದೇನೆ. ಕಾಲ್‌ ಮಾಡಬೇಡಿ. ಮೆಸೇಜ್‌ ಮಾಡಿ.’

*******

ವಿದ್ಯಾನಗರದ ಸರ್ಕಾರಿ ಶಾಲೆ ಶಿಕ್ಷಕರಾಗಿ ಕೆಲಸ ಮಾಡುತ್ತಿರುವ ನಿರಂಜನ ಉಪಾಧ್ಯಾಯರದು ಮಧ್ಯಮ ವರ್ಗದ ಕುಟುಂಬ. ಅವರ ತಾಯಿ ಪದ್ಮಾವತಮ್ಮ ಸಂಪ್ರದಾಯಸ್ಥರು. ಮಡಿ, ಮೈಲಿಗೆ ಮಾಡುವವರು. ಆ ಕಾರಣಕ್ಕೋ ಏನೋ ನಿರಂಜನ ಉಪಾಧ್ಯಾಯರು ಮತ್ತು ಮಡದಿ ಪ್ರಭಾದೇವಿ ಸಂಪೂರ್ಣವಾಗಿ ಆಧುನಿಕತೆಗೆ ತೆರೆದುಕೊಂಡಿರಲಿಲ್ಲ. ನಿರಂಜನರು ಇನ್ನೂ ಹಳೆಕಾಲದ ಅಂಗಿಪಂಚೆಯಲ್ಲೇ ಇದ್ದರೆ, ಪ್ರಭಾದೇವಿ ಅತ್ತೆ ಎದುರು ಇಡೀ ದಿನ ಮಡಿಬಟ್ಟೆ ಉಟ್ಟುಕೊಂಡೇ ಇರುತ್ತಿದ್ದರು. ವಾಸಂತಿ ಮಾತ್ರ ಈ ಯಾವ ನಿರ್ಬಂಧಗಳಿಗೂ ಒಳಗಾಗದೆ ಸ್ವಚ್ಛಂದವಾಗಿ ಬೆಳೆದಿದ್ದಳು. ತನ್ನ ಮಗಳು ತನ್ನಂತೆ ಶಿಕ್ಷಕ ವೃತ್ತಿ ಹಿಡಿಯಬೇಕು ಅಥವಾ ಡಾಕ್ಟರ್‌, ಇಂಜಿನಿಯರ್‌ ಆಗಬೇಕು ಎಂದು ಉಪಾಧ್ಯಾಯರು ಬಯಸಿರಲಿಲ್ಲ. ಹಾಗಾಗಿ, ವಾಸಂತಿ ತನ್ನಿಷ್ಟದಂತೆ ಫ್ಯಾಷನ್‌ ಡಿಸೈನಿಂಗ್‌ ಕೋರ್ಸ್‌ ತೆಗೆದುಕೊಂಡಿದ್ದಳು.

ವಾಸಂತಿ ಈಗಿನ ಕಾಲದ ಹುಡುಗಿಯರ ಥರ ಮೈಕೈ ತೋರಿಸಿಕೊಂಡು ಓಡಾಡುವುದು ಸಂಪ್ರದಾಯವಾದಿ ಪದ್ಮಾವತಮ್ಮನವರಿಗೆ ಸರ್ವಥಾ ಇಷ್ಟವಿರಲಿಲ್ಲ. ವಾಸಂತಿಯನ್ನು ಆ ಅವತಾರದಲ್ಲಿ ನೋಡಿದಾಗಲೆಲ್ಲ ಅವರು ಭುಸುಗುಡುತ್ತಿದ್ದರು. ‘ಕಾಲ ಕೆಟ್ಟೋಯ್ತು’ ಎನ್ನುತ್ತಾ ಧಾರಾವಾಹಿಗಳಿಗೆ ಉದುರಿಸುವಂತೆಯೇ ಕಮೆಂಟ್‌ ಉದುರಿಸುತ್ತಿದ್ದರು. ‘ನಾವೆಲ್ಲ ಆ ಕಾಲದಲ್ಲಿ ಗಂಡಸರನ್ನು ಕಣ್ಣೆತ್ತಿಯೂ ನೋಡಿದವರಲ್ಲ’ ಎನ್ನುತ್ತಾ ಪಕ್ಕದ ಮನೆಯ ವಿಶಾಲಮ್ಮನವರ ಜೊತೆ ಫ್ಲ್ಯಾಶ್‌ಬ್ಯಾಕ್‌ಗೆ ಮರಳುತ್ತಲೇ, ತಮ್ಮ ಮೊಮ್ಮಗಳ ಹೊಸ ಹೊಸ ಅವತಾರಗಳ ಬಗ್ಗೆ ಸಿಟ್ಟಿನಿಂದ ಮಾತನಾಡುತ್ತಿದ್ದರು. ‘ಅದೇನೋ ನೈಟಿಯಂತೆ, ಮಿನಿಯಂತೆ, ಮಿಡಿಯಂತೆ. ಅದರಲ್ಲಿ ವಾಸಂತಿ ಆ ಸತ್ತಬದುಕು ಧಾರಾವಾಹಿಯ ನಿಶಾಗಿಂತ ಗಲೀಜಾಗಿ ಕಾಣಿಸುತ್ತಾಳೆ’ ಎನ್ನುತ್ತಾ ಆಗಲೂ ತಮ್ಮ ಧಾರಾವಾಹಿ ಪ್ರೀತಿಯನ್ನು ಮೆರೆಯುತ್ತಿದ್ದರು. ಅಜ್ಜಿಯ ಈ ಗೊಣಗಾಟಗಳನ್ನು ಕೇಳುತ್ತಲೇ ಬೆಳೆದಿದ್ದ ವಾಸಂತಿ ಅದೆಲ್ಲ ಸಹಜ ಎಂಬಂತೆ ಸುಮ್ಮನಿದ್ದಳೇ ವಿನಃ ಎಂದೂ ಅವರಿಗೆ ಎದುರಾಡಿರಲಿಲ್ಲ. ಬದಲು, ‘ಪದ್ಮಜ್ಜಿ, ಈಗಿನ ಕಾಲದಲ್ಲಿ ಇದೆಲ್ಲ ಕಾಮನ್‌. ನಿನಗೂ ಬೇಕಾದ್ರೆ ಹೇಳು, ನೈಟಿ ತಂದುಕೊಡುತ್ತೇನೆ ’ ಎನ್ನುತ್ತಾ ಛೇಡಿಸುತ್ತಿದ್ದಳು. ಆಗೆಲ್ಲ ‘ಹೋಗೇ ದರಿದ್ರದವಳೇ’ ಎನ್ನುತ್ತಿದ್ದ ಪದ್ಮಜ್ಜಿ ತಾನು ಆ ಮಾತನ್ನು ಪ್ರೀತಿಯಿಂದ ಹೇಳಿದೆನೋ ಸಿಟ್ಟಿನಿಂದಲೋ ಎಂಬುದು ಗೊತ್ತಾಗದೆ ಗೊಂದಲಕ್ಕೊಳಗಾದವರಂತೆ ಮುಖ ತಿರುಗಿಸಿಕೊಂಡು ಹೊರಟು ಹೋಗುತ್ತಿದ್ದರು. ಆದರೆ, ಅಜ್ಜಿಗೆ ತನ್ನ ಮೇಲೆ ಅತೀವ ಪ್ರೀತಿ ಇದೆ ಎಂಬುದನ್ನು ಅರಿತಿದ್ದ ವಾಸಂತಿ, ದೇವಸ್ಥಾನಕ್ಕೆ ಹೋಗುವಾಗ ಮತ್ತು ಹಬ್ಬ ಹರಿದಿನಗಳ ಸಮಯದಲ್ಲಿ ಅಪ್ಪಟ ಸಾಂಪ್ರದಾಯಿಕ ಬಟ್ಟೆಗಳನ್ನು ಧರಿಸಿಕೊಂಡು ಓಡಾಡಿ ಅಜ್ಜಿಯನ್ನು ಖುಷಿಪಡಿಸುತ್ತಿದ್ದಳು. ಆ ದಿನ ಮಾತ್ರ ಪದ್ಮಜ್ಜಿಯ ಕೋಪದ ಜೊತೆಗೆ ಅವರ ವಯಸ್ಸು ಕೂಡ ಅರ್ಧಕ್ಕರ್ಧ ಇಳಿದುಹೋಗುತ್ತಿತ್ತು!

ವಾಸಂತಿಯ ಫ್ಯಾಷನ್‌ ಡಿಸೈನ್‌ ಕೋರ್ಸ್‌ನಲ್ಲಿ ಜೊತೆಯಾದವಳು ವೈಷ್ಣವಿ. ಆಗಷ್ಟೇ ಹದಿನೆಂಟಕ್ಕೆ ಕಾಲಿಟ್ಟಿದ್ದ ಅವರಿಬ್ಬರದು ಸಹಜ ಸೌಂದರ್ಯ. ಕಾಲೇಜಿನ ಬಳಕುವ ಬಳ್ಳಿಗಳಾಗಿದ್ದ ವಾಸಂತಿ ಮತ್ತು ವೈಷ್ಣವಿಗೆ ಮುಂಬೈನ ಆ ಪಂಚತಾರಾ ಹೋಟೆಲ್‌ನಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಮಟ್ಟದ ಫ್ಯಾಷನ್‌ ಷೋನಲ್ಲಿ ಮಾಡೆಲ್‌ಗಳಾಗಿ ರ್ಯಾಂಪ್‌ ಮೇಲೆ ಹೆಜ್ಜೆಹಾಕಲು ಕರೆಬಂದಿತ್ತು. ನಿರಂಜನ ಉಪಾಧ್ಯಾಯರು ಮೊದಲು ಇದಕ್ಕೆ ಒಪ್ಪದಿದ್ದರೂ ವಾಸಂತಿ ಜೊತೆಯಲ್ಲಿ ವೈಷ್ಣವಿಯೂ ಇರುತ್ತಾಳೆ ಎಂಬುದು ಖಾತ್ರಿಯಾದ ಮೇಲೆ ಖುಷಿಯಿಂದ ಬೀಳ್ಕೊಟ್ಟಿದ್ದರು. ಆ ಫ್ಯಾಷನ್‌ ಷೋ ಟಿವಿಯಲ್ಲೂ ನೇರ ಪ್ರಸಾರ ಕಾಣಲಿರುವುದರಿಂದ ‘ನಾನು ಟಿವಿಯಲ್ಲಿ ಬರುತ್ತೇನೆ, ನೋಡುತ್ತಿರಿ’ ಎಂದು ಊರೆಲ್ಲಾ ಹೇಳಿಕೊಂಡು ಸಂಭ್ರಮಿಸಿದ್ದಳು ವಾಸಂತಿ. ವಾಸಂತಿ ಹೀಗೆ ಎಲ್ಲರ ಮನೆಯ ಟಿವಿಗಳಲ್ಲಿ ಕಾಣಿಸಿಕೊಳ್ಳುವುದು ಅವಳ ತಂದೆ-ತಾಯಿಯಷ್ಟೇ ಅಲ್ಲ, ಬಡಾವಣೆಯ ಜನರಿಗೆಲ್ಲ ಹೆಮ್ಮೆಯ ವಿಷಯವಾಗಿ ಅವರೂ ಸಂಭ್ರಮದಿಂದ ಆ ದಿನಕ್ಕಾಗಿ ಕಾಯುತ್ತಿದ್ದರು. ಪದ್ಮಜ್ಜಿಗೆ ಇದೆಲ್ಲ ಅರ್ಥವಾಗದಿದ್ದರೂ ವಾಸಂತಿ ಟಿವಿಯಲ್ಲಿ ಬರುತ್ತಾಳೆ ಎಂಬ ಸಂಗತಿ ಅವರಿಗೂ ಖುಷಿಕೊಟ್ಟಿತ್ತು. ‘ನನ್ನ ಮೊಮ್ಮಗಳು ಟಿವಿಯಲ್ಲಿ ಬರುತ್ತಾಳಂತೆ. ನಿಶಾ ಥರ ಡ್ರೆಸ್‌ ಮಾಡಿಕೊಳ್ಳದಿದ್ದರೆ ಸಾಕು’ ಎನ್ನುತ್ತಾ ಆ ದಿನ ಸಂಜೆಯ ಪಟ್ಟಾಂಗದಲ್ಲಿ ವಿಶಾಲಮ್ಮನವರ ಬಳಿ ಮತ್ತೊಂದು ಕಮೆಂಟ್‌ ಉದುರಿಸಿ ಅವರು ನಗಾಡಿದ್ದರು.

******

ಸ್ಕೂಟರನ್ನು ನಿಲ್ಲಿಸಿದರೋ ತಳ್ಳಿ ಬಂದರೋ, ನಿರಂಜನ ಉಪಾಧ್ಯಾಯರು ಓಡೋಡುತ್ತಲೇ ಮನೆಯೊಳಗೆ ಪ್ರವೇಶಿಸಿದ್ದರು. ‘ಏನಾಯ್ತು?’ ಎನ್ನುತ್ತಾ ಅಡುಗೆ ಮನೆಯಿಂದ ಹೊರಬಂದ ಪ್ರಭಾದೇವಿ ಬಳಿ ಏನೋ ಹೇಳಹೊರಟ ನಿರಂಜನರು, ಅಲ್ಲಿ ಟಿವಿ ನೋಡುತ್ತಾ ಕುಳಿತಿದ್ದ ತಾಯಿಯನ್ನು ಕಂಡು ಸುಮ್ಮನಾದರು. ಮಡದಿಯನ್ನು ಪಕ್ಕಕ್ಕೆ ಕರೆದುಕೊಂಡು ಹೋಗಿ ನಡುಗುವ ಧ್ವನಿಯಲ್ಲಿ ನಿಧಾನವಾಗಿ ವಿಷಯ ತಿಳಿಸಿದರು. ಪ್ರಭಾದೇವಿಗೆ ಸಿಡಿಲೇ ಬಡಿದಂತಾಗಿತ್ತು. ವಿಷಯ ಸದ್ಯಕ್ಕೆ ಪದ್ಮಜ್ಜಿಗೆ ಗೊತ್ತಾಗುವುದು ಬೇಡ ಎಂದು ಅವರು ತಾಕೀತು ಮಾಡಿದರು. ನಂತರ ಏನೂ ಆಗಿಲ್ಲ ಎಂಬಂತೆ ಇಬ್ಬರೂ ಟಿವಿ ಮುಂದಿರುವ ಸೋಫಾದ ಮೇಲೆ ಸುಸ್ತಾದವರಂತೆ ಬಂದು ಕುಳಿತುಕೊಂಡರು. ಆಗಲೇ ನಿರಂಜನರ ಮೊಬೈಲ್‌ಗೆ ವಾಸಂತಿಯಿಂದ ಮತ್ತೊಂದು ಮೆಸೇಜ್‌ ಬಂದಿತ್ತು:
‘ಪಪ್ಪಾ, ಯಾರೋ ನನ್ನ ಕೋಣೆಯ ಬಾಗಿಲಿಗೇ ಗುಂಡು ಹಾರಿಸುತ್ತಿದ್ದಾರೆ.’

*****

ನಿರಂಜನ ಉಪಾಧ್ಯಾಯರ ಮನೆಯ ಟಿವಿ ಈಗ ಕಣ್ಣೀರ ಧಾರಾವಾಹಿಗಳನ್ನು ಬದಿಗೊತ್ತಿ ನ್ಯೂಸ್‌ ಚಾನೆಲ್‌ಗಳಿಗೆ ಅಂಟಿಕೊಂಡಿತು. ಯಾವ ನ್ಯೂಸ್‌ ಚಾನೆಲ್‌ಗೆ ಹೋದರೂ ಅದೇ ಸುದ್ದಿ, ಅದೇ ಚಿತ್ರಗಳು. ಆಗಲೇ ಇಪ್ಪತ್ತಕ್ಕೂ ಹೆಚ್ಚು ಜನ ಸಾವಿಗೀಡಾದ ವರದಿಯೂ ಬಂದಿತ್ತು. ಸತ್ತ ಕೆಲವರ, ಕಾಣೆಯಾದ ಕೆಲವರ ಹೆಸರುಗಳು ಟಿವಿ ಪರದೆ ಮೇಲೆ ಮೂಡಿಬರುತ್ತಿದ್ದರೆ ನಿರಂಜನ ಉಪಾಧ್ಯಾಯರು ಒಲ್ಲದ ಮನಸ್ಸಿನಿಂದ ಅವುಗಳಲ್ಲಿ ತಮ್ಮ ಮಗಳ ಹೆಸರನ್ನು ಹುಡುಕುತ್ತಿದ್ದರು. ಟಿವಿ ಚಾನೆಲ್‌ ವರದಿಗಾರ ಆಗಲೇ ಆ ಹೋಟೆಲ್‌ ಕಟ್ಟಿಸಲು ಅದರ ಮಾಲಿಕ ಪಟ್ಟ ಶ್ರಮವೆಷ್ಟು, ಮಾಡಿದ ಖರ್ಚೆಷ್ಟು ಎಂಬುದನ್ನು ಭಾರೀ ಮಹತ್ವದ ವಿಷಯವೇನೋ ಎಂಬಂತೆ ವಿವರಿಸುತ್ತಿದ್ದ. ಆ ಹೋಟೆಲ್‌ನೊಳಗೆ ಬಹಳ ಜನ ವಿದೇಶೀಯರು ಇದ್ದುದರಿಂದ ಮುಂದಿನ ದಿನಗಳಲ್ಲಿ ಹೋಟೆಲ್‌ನ ಇಮೇಜ್‌ ಏನಾಗಬಹುದು, ದೇಶದ ಮಾನ-ಮರ್ಯಾದೆಯ ಗತಿಯೇನು ಎಂಬುದನ್ನು ತನ್ನದೇ ಆದ ರೀತಿಯಲ್ಲಿ ವಿಶ್ಲೇಷಿಸುತ್ತಿದ್ದ. ನಡು ನಡುವೆ, ಹೊರಗೆ ಚಿಂತಾಕ್ರಾಂತನಾಗಿ ನಿಂತಿರುವ ಆ ತಾರಾ ಹೋಟೆಲ್‌ನ ಮಾಲಿಕನ ಮುಖವನ್ನೂ ಆ ಚಾನೆಲ್‌ ತೋರಿಸುತ್ತಿತ್ತು. ನಿರಂಜನ ಉಪಾಧ್ಯಾಯರು ಅವರ ಕೈಕಾಲುಗಳ ನಡುವೆ ಅಲ್ಲೆಲ್ಲಾದರೂ ತಮ್ಮ ಮಗಳು ಕಾಣಿಸಬಹುದೇನೋ, ತಮ್ಮ ಮಗಳ ಸುದ್ದಿಯನ್ನು ಅವರು ಹೇಳಬಹುದೇನೋ ಎಂಬಂತೆ ಟಿವಿಯತ್ತಲೇ ತದೇಕಚಿತ್ತರಾಗಿ ನೋಡುತ್ತಿದ್ದರು.

ಇವೆಲ್ಲದರ ನಡುವೆ ವಿದ್ಯಾನಗರಕ್ಕೆ ನಿಧಾನವಾಗಿ ಮುಂಬೈ ದಾಳಿಯ ಬಿಸಿ ತಟ್ಟತೊಡಗಿತ್ತು. ವಾಸಂತಿ ಮುಂಬೈಗೆ ಹೋಗಿದ್ದು ಗೊತ್ತಿದ್ದ ಅಕ್ಕಪಕ್ಕದ ಜನ ಉಪಾಧ್ಯಾಯರ ಮನೆಗೆ ಬರತೊಡಗಿದರು. ವಾಸಂತಿ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿಯೇ ಈ ಗುಂಡಿನ ದಾಳಿ ನಡೆಯುತ್ತಿದೆ ಎಂಬುದನ್ನು ತಿಳಿದು ಅವರೂ ಆತಂಕಕ್ಕೊಳಗಾದರು. ನಿರಂಜನ ಉಪಾಧ್ಯಾಯರ ಮೊಬೈಲ್‌ಗೆ ಪದೇ ಪದೇ ಸಂಬಂಧಿಕರು, ಸ್ನೇಹಿತರು, ಹಿತೈಷಿಗಳ ಫೋನ್‌ ಕರೆಗಳು ಬರುತ್ತಲೇ ಇದ್ದವು. ಮೊದ ಮೊದಲು ಕರೆಗಳನ್ನು ಸ್ವೀಕರಿಸಿ ಮಾತನಾಡುತ್ತಿದ್ದ ಉಪಾಧ್ಯಾಯರು, ಕೊನೆಗೆ ವಾಸಂತಿಯ ಮೆಸೇಜ್‌ಗಾಗಿ ಕಾಯುತ್ತಾ ಬಂದ ಕರೆಗಳನ್ನು ಹಾಗೆಯೇ ತಡೆಹಿಡಿಯತೊಡಗಿದರು. ಅವರಿಗೆ ವಾಸಂತಿಯ ಮೆಸೇಜ್‌ ಹೊರತುಪಡಿಸಿ ಆಗ ಬೇರೇನೂ ಬೇಕಿರಲಿಲ್ಲ. ವಾಸಂತಿಯ ಮೆಸೇಜ್‌ಗೆ ಕಾಯುವುದರ ಹೊರತಾಗಿ ಬೇರೇನು ಮಾಡುವುದೂ ಅವರಿಗೆ ಗೊತ್ತಿರಲಿಲ್ಲ.

ಇದಾಗಿ, ಹತ್ತಿಪ್ಪತ್ತು ನಿಮಿಷಗಳ ನಂತರ ವಾಸಂತಿಯಿಂದ ಮಗದೊಂದು ಮೆಸೇಜ್‌ ಬಂತು: ‘ಪಪ್ಪಾ, ಅವರೀಗ ನನ್ನ ಬಾತ್‌ರೂಂನೊಳಗೇ ಇದ್ದಾರೆ…’

*****
ನಿರಂಜನ ಉಪಾಧ್ಯಾಯರು ಎಲ್ಲವೂ ಮುಗಿಯಿತು ಎಂಬಂತೆ ಕುಸಿದುಬಿದ್ದರು. ವಾಸಂತಿಯ ಸಾವಿನ ಭಯವನ್ನು ಅವರಿಂದ ಊಹಿಸಲೂ ಅಸಾಧ್ಯವಾಗಿತ್ತು. ಪ್ರಭಾದೇವಿಗೆ ದುಃಖ ತಡೆಯಲಾಗದೆ ಜೋರಾಗಿ ಅಳತೊಡಗಿದರು. ಅಕ್ಕಪಕ್ಕದ ಮನೆಯವರು ಏನೂ ತೋಚದೆ ಇಬ್ಬರನ್ನೂ ಸಂತೈಸತೊಡಗಿದರು. ಪದ್ಮಜ್ಜಿ ಮಾತ್ರ ಯಾಕೆ, ಏನು ಎಂಬುದು ಯಾವುದೂ ಗೊತ್ತಾಗದೆ ಎಲ್ಲರನ್ನೂ ಪಿಳಿಪಿಳಿ ನೋಡುತ್ತಿದ್ದರು. ಎಲ್ಲರಂತೆ ತಾವೂ ಮಗ-ಸೊಸೆಯ ಮೈದಡವುತ್ತಾ ಸಂತೈಸುತ್ತಿದ್ದರು.

ಇದಾಗಿ ಎಷ್ಟು ಹೊತ್ತಾದರೂ ವಾಸಂತಿಯಿಂದ ಮೆಸೇಜ್‌ ಬರಲಿಲ್ಲ. ನಿರಂಜನರ ಗಾಬರಿ ಹೆಚ್ಚಾಯಿತು. ವಾಸಂತಿಗೆ ಮೇಲಿಂದ ಮೇಲೆ ಮೆಸೇಜ್‌ ಮಾಡಿದರು. ಉತ್ತರ ಬರಲಿಲ್ಲ. ವೈಷ್ಣವಿಗೆ ಫೋನ್‌ ಮಾಡಿದರೆ ಆಕೆ ತಾನು ಹೋಟೆಲ್‌ಗೆ ವಾಪಾಸಾಗುವುದರೊಳಗೆ ಅಲ್ಲಿ ಫೈರಿಂಗ್‌ ಶುರುವಾಗಿದ್ದರಿಂದ ಹೊರಗೇ ಉಳಿದಿದ್ದೇನೆ ಎಂದಳು. ಈ ನಡುವೆ, ಟಿವಿಯಲ್ಲಿ ‘ಹೋಟೆಲ್‌ನೊಳಗಿರುವ ಕೆಲವರ ಮೊಬೈಲ್‌ ಬ್ಯಾಟರಿ ಖಾಲಿಯಾಗಿದ್ದರಿಂದ ಸಂಪರ್ಕ ಸಾಧ್ಯವಾಗುತ್ತಿಲ್ಲ’ ಎಂಬ ಸುದ್ದಿ ಕೇಳಿ ನಿರಂಜನ ಉಪಾಧ್ಯಾಯರು ಚಡಪಡಿಸತೊಡಗಿದರು. ‘ವಾಸಂತಿಯ ಮೊಬೈಲ್‌ ಬ್ಯಾಟರಿಯೂ ಖಾಲಿಯಾಯಿತೇನೋ, ಅದಕ್ಕೇ ಮೆಸೇಜ್‌ ಬರುತ್ತಿಲ್ಲವೇನೋ’ ಎನ್ನುತ್ತಾ ಹಳಹಳಿಸತೊಡಗಿದರು.

ಮಗ-ಸೊಸೆಯ ಗಾಬರಿ, ಅಳು, ಅಕ್ಕಪಕ್ಕದವರ ಅನಿರೀಕ್ಷಿತ ಆಗಮನ, ಮನೆಯೊಳಗೆ ಮಡುಗಟ್ಟಿದ್ದ ಭಯ ಹುಟ್ಟಿಸುವಂಥ ಮೌನ- ಇವುಗಳನ್ನೆಲ್ಲ ಗಮನಿಸುತ್ತಿದ್ದ ಪದ್ಮಜ್ಜಿಗೆ ಏನೋ ಆಗಬಾರದ್ದು ಆಗಿಹೋಗಿದೆ ಎಂಬ ಗುಮಾನಿ ಹುಟ್ಟಿಕೊಂಡಿತ್ತು. ಅವರಿವರ ಬಳಿ ಕೇಳಿದರೂ ಸ್ಪಷ್ಟವಾಗಿ ಏನು ನಡೆಯುತ್ತಿದೆ ಎಂಬುದು ಗೊತ್ತಾಗಲಿಲ್ಲ. ವಾಸಂತಿ ಸಾವಿನ ಎದುರಿದ್ದಾಳೆ ಎಂಬುದನ್ನು ಮಾತ್ರ ಯಾರೂ ಪದ್ಮಜ್ಜಿಗೆ ಹೇಳಲಿಲ್ಲ.

ಎಲ್ಲರಂತೆ ಪದ್ಮಜ್ಜಿ ಕೂಡ ಟಿವಿಯತ್ತಲೇ ದೃಷ್ಟಿ ನೆಟ್ಟು ಕುಳಿತಿದ್ದರು. ಅಲ್ಲಿ ಆಗಾಗ ಪೊಲೀಸರು ಬಂದೂಕು ಹಿಡಿದು ಒಂದು ಎತ್ತರದ ಕಟ್ಟಡದತ್ತ ಶೂಟ್‌ ಮಾಡುತ್ತಿದ್ದ ದೃಶ್ಯಗಳು ಮೂಡಿಬರುತ್ತಿದ್ದವು. ಅವುಗಳನ್ನು ನೋಡುತ್ತಿದ್ದರೆ ಪದ್ಮಜ್ಜಿಗೆ ಮೊನ್ನೆತಾನೇ ನೋಡಿದ ಒಂದು ಹೊಡೆದಾಟದ ಸಿನಿಮಾದ ನೆನಪು ಬರುತ್ತಿತ್ತು. ಮತ್ತೆ ಕೆಲವು ಸಲ ಕೆಂಪಾಗಿದ್ದ ನೆಲದ ಮೇಲೆ ನಿಶ್ಚಲವಾಗಿ ಬಿದ್ದುಕೊಂಡಿದ್ದ ದೇಹಗಳನ್ನು ಟಿವಿಯಲ್ಲಿ ತೋರಿಸುತ್ತಿದ್ದರು. ಆ ದೇಹಗಳಲ್ಲಿ ಕೆಲವು ಪ್ಯಾಂಟ್‌ಶರ್ಟ್‌ ತೊಟ್ಟಿದ್ದ ಪುರುಷರದ್ದಾಗಿತ್ತು. ಹೆಂಗಸರ ದೇಹಗಳಲ್ಲಿ ಕೆಲವು ನಿಶಾ ಥರ ಮಿನಿಸ್ಕರ್ಟ್‌, ಮಿಡಿ ತೊಟ್ಟಿದ್ದವು. ಇನ್ನೂ ಕೆಲವು ಮೈಗಂಟಿಕೊಂಡಿದ್ದ ಉಡುಪನ್ನು ಧರಿಸಿದ್ದವು. ಮತ್ತೂ ಕೆಲವು ದೇವಸ್ಥಾನಕ್ಕೆ ಹೋಗುವಾಗ ವಾಸಂತಿ ತೊಡುತ್ತಿದ್ದಂಥ ಸೀರೆಗಳನ್ನು ತೊಟ್ಟುಕೊಂಡಿದ್ದವು.

ತನ್ನ ಮೊಮ್ಮಗಳು ಟಿವಿಯಲ್ಲಿ ಬರುವುದನ್ನು ಸಂಭ್ರಮದಿಂದ ಎದುರು ನೋಡುತ್ತಿದ್ದ ಪದ್ಮಜ್ಜಿ ಇವುಗಳನ್ನೆಲ್ಲ ನೋಡಿ ‘ನಮ್ಮ ವಾಸಂತಿಯೂ ಹೀಗೇ ಬರುತ್ತಾಳೇನೋ ನಿರಂಜನ?’ ಎಂದು ಗಾಬರಿ ಮತ್ತು ಅನುಮಾನದಿಂದ ಪ್ರಶ್ನಿಸಿದಾಗ ಮಾತ್ರ ನಿರಂಜನರ ದುಃಖದ ಕಟ್ಟೆಯೊಡೆದಿತ್ತು. ಅವರೆಲ್ಲರ ಈ ಭಯ, ದುಃಖಕ್ಕೆ ಟಿವಿಯೇ ಮೂಲ ಕಾರಣವಿರಬೇಕು ಎಂದುಕೊಂಡ ಪದ್ಮಜ್ಜಿ, ತನಗೆಲ್ಲವೂ ಗೊತ್ತಾಯಿತು ಎಂಬಂತೆ ಸೀದಾ ಹೋದವರೇ ಟಿವಿಯನ್ನು ಆರಿಸಿಬಿಟ್ಟರು.

ಆ ಕ್ಷಣ, ವಾಸಂತಿ ಟಿವಿಯಲ್ಲಿ ಬರುವುದು ಬೇಡ ಎಂದು ಪ್ರಾರ್ಥಿಸುತ್ತಿದ್ದ ಮನಸ್ಸುಗಳೆಲ್ಲ ಆರಿಹೋದ ಆ ಟಿವಿ ಪರದೆಯ ಮೇಲೆ ಮೂಡಿಕೊಂಡವು.

0
0