ಡಾ. ಮೊಗಳ್ಳಿ ಗಣೇಶ್ ಕನ್ನಡದ ಕಥೆಗಾರರಾಗಿ ಹೆಸರಾದವರು. ಅವರ ಬುಗುರಿ, ನನ್ನಜ್ಜನಿಗೊಂದಾಸೆಯಿತ್ತು, ಒಂದು ಹಳೆಯ ಚಡ್ಡಿ ಇತ್ಯಾದಿ ಕಥೆಗಳು ಕನ್ನಡದ ಅತ್ಯುತ್ತಮ ಸಣ್ಣ ಕಥೆಗಳಾಗಿ ಗುರುತಿಸಲ್ಪಟ್ಟಿವೆ. ಮೊಗಳ್ಳಿ ಗಣೇಶ್ ತೊಟ್ಟಿಲು, ಕಿರೀಟ ಇತ್ಯಾದಿ ಕಾದಂಬರಿಗಳನ್ನೂ ಬರೆದಿದ್ದಾರೆ. ಆದರೆ ಅವರು ಮೊದಲು ಬರೆಯಲು ಶುರುಮಾಡಿದ್ದು ಕವಿತೆಗಳನ್ನು. ಈಗಲೂ ಅವರಿಗೆ ಆಸೆ ಇರುವುದು ಒಳ್ಳೆಯ ಕವಿಯಾಗಬೇಕು ಎಂಬುದು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದುತ್ತಿರುವಾಗಲೇ ಹಠ ಹಿಡಿದು ಸಣ್ಣ ಸಣ್ಣ ಹಾಳೆಗಳಲ್ಲಿ ಕವಿತೆಗಳನ್ನು ಬರೆದು ಗೆಳೆಯರ ಮುಂದೆ ಹಿಂಜರಿಯುತ್ತಾ ಓದುತ್ತಿದ್ದ ಗಣೇಶರನ್ನು ಅವರ ಗೆಳೆಯರು ಈಗಲೂ ನೆನಪಿಸಿಕೊಳ್ಳುತ್ತಾರೆ.

ಕಥೆಯಲ್ಲಿ ಹೇಳಿಕೊಳ್ಳಲಾಗದ ಸುಖದುಃಖಗಳನ್ನು ಕವಿತೆಯಲ್ಲಿ ಹೇಳುವುದು ಹೆಚ್ಚು ಸಲೀಸು, ಆಪ್ತ ಹಾಗೂ ಸುಖಕರ ಎನ್ನುವುದು ಅವರ ಮಾತು. ತೀರ ಸಂಕಟವೆನಿಸಿದಾಗ ಕವಿತೆಯೇ ತೀರಾ ಹತ್ತಿರದ ಸಂಬಂಧಿಯಂತೆ ಕಾಣಿಸುತ್ತದೆ, ನನ್ನನ್ನು ನಾನೇ ಸಂತೈಸಿಕೊಳ್ಳಲು ಕಾವ್ಯಕ್ಕಿಂತ ಒಳ್ಳೆಯ ಉಪಕರಣ ಬೇರೇನಿದೆ ಎಂದು ಅವರು ಹೇಳುತ್ತಾರೆ.

ಕೆಂಡಸಂಪಿಗೆಯ ಈ ಬಾರಿಯ ಭಾನುವಾರದ ವಿಶೇಷದಲ್ಲಿ ಮೊಗಳ್ಳಿ ಬರೆದ ನಾಲ್ಕು ಹೊಸ ಕವಿತೆಗಳಿವೆ. ಕವಿತೆ ಓದಿ ನಿಮಗೇನನಿಸಿತು ನಮಗೆ ಬರೆಯಿರಿ.

ಅನಾದಿ ಮಗು

 

 

 

 

 

 

ಆಡಿಕೊಳ್ಳುತ್ತಿದೆ ಕಾಲಾತೀತ ಮಗು
ದಿಕ್ಕಿಲ್ಲ ದೆಸೆಯಿಲ್ಲ ದೇವರಂಥ ಹಸುಗೂಸು
ರುಂಡವಿಲ್ಲದ ಗೊಂಬೆಗೆ ಮರು ಜೀವ ತುಂಬಿ
ಬಿಸಾಡಿದ ಆಟಿಕೆಗಳಲ್ಲೆ ಮಾಟದ ನೋಟ ಕಂಡು
ಮುರಿದ ರೆಕ್ಕೆಯಲ್ಲೆ ದಿಗಂತಗಳ ದಾಟಿ
ತುಕ್ಕು ಹಿಡಿದ ಬಂಡಿಯಲ್ಲೆ ಭೂಮಿ ಸುತ್ತಿ

ಕುಣಿಯುತ್ತಿದೆ ಮಗು ದಣಿವಿಲ್ಲ
ಕಾಲಾತೀತ ಹಿಗ್ಗಿಗೆ ಕೊನೆಯಿಲ್ಲ
ಹಾಡಿನ ನಾಡಿ ಬಡಿತಕ್ಕೆ ಬಿಡುವಿಲ್ಲ
ಆಡುತ್ತಿದೆ ಮಗು ಆಕಾಶದ ಮೈದಾನದಲ್ಲಿ

ಚೂರುಪಾರು ಬಣ್ಣದ ಕಾಗದದಲ್ಲೆ ಕಾಮನ ಬಿಲ್ಲು ಬಿಡಿಸಿ
ಹರಿದ ಗಾಳಿ ಪಟವನೆ ದಿಗಂತದಾಚೆಗೂ ಹಾರಿಸಿ
ನಗುತ್ತಿದೆ ಮಗು ನೋವಿಲ್ಲ ನಂಜಿಲ್ಲ ಅನಾದಿಗೆ ಆಕಾಶವೆ ಆಧಾರವಾಗಿ
ನಲಿಯುತ್ತಿದೆ ಬೀದಿ ಬದಿಯ ಮಗು ಹೆಬ್ಬುಲಿಗಳ ಚೆದುರಿಸಿ
ಹೆಮ್ಮಾರಿ ಮುಡಿ ಹಿಡಿದಾಡಿಸಿ ಕಾಳಿಂಗದೆಡೆ ಮೇಲೆ ನರ್ತಿಸಿ
ವಿಷದ ಕಡಾಯದಲ್ಲೆ ಮಿಂದೆದ್ದು ಬಂದು ಬೊಬ್ಬಿರಿದು
ನಗುತ್ತಿದೆ ಮಗುವಿಗಾವ ಭಯವೂ ಇಲ್ಲ ಯಾರ ಶಂಕೆಯೂ ಇಲ್ಲ
ಬೆಳೆಯುತ್ತಿದೆ ಆಕಾಶದ ಉದ್ದಗಲಕ್ಕೂ ಅನಾದಿ ಮಗು.

=======================================

ಪೋಲಿ ಧ್ಯಾನ

ಏನಯ್ಯ ಇಂತಹ ಸಮುದ್ರದ ಎದಿರು
ಕುಂಡಿ ತೋರುತ್ತ ಮರಳ ಮನೆಯ ಕಟ್ಟುತ್ತ

ಕುಂತವಳ ಅಂಡು ದಿಟ್ಟಿಸುತ್ತಿರುವೆಯಲ್ಲ
ಕಾಣದೇನು ಸೂರ್ಯ ಸಿರಿ ನಿನ್ನೊಳಗಣ್ಣಿಗೆ

ಪುಣ್ಯವಂತರ ದರ್ಶನವನ್ನೆ ಯಾಕೆ ಕಾಣಬೇಕು
ಸುಮ್ಮನಿರು ಪಾಪಿಯ ಧ್ಯಾನವೆ ಬೇರೊಂದು ದಾರಿ

ಕಾಣುತ್ತಿದೆ ತಾಳು ದಿವ್ಯ ದರ್ಶನ ತೊಡೆ ನಡುವೆ
ಜಾರುತ್ತಿದ್ದಾನೆ ಸೂರ್ಯ ಅವಳಲ್ಲೆ ದಿಗಂತದಂಚಿಗೆ.
=====================================

ಸಕ್ಕರೆ ಹೊತ್ತ ಇರುವೆ

ಹೊತ್ತು ಸಾಗುತ್ತಿತ್ತು ಇರುವೆ ಭೂಮಿಯನ್ನೆ
ಹೊತ್ತಂತೆ ಹೊರಳಾಡಿ ತೂರಾಡಿ ಉರುಳುರುಳಿ
ಹರಿಡಾಡಿ ಎಡೆಬಿಡದೆ ಧೃತಿಗೆಡದೆ

ಅಡ್ಡದಿಡ್ಡಿ ತಡೆಗೋಡೆಗಳ ದಾಟುತ್ತ
ಕೊನೆಯಿಲ್ಲದ ದಾರಿಯ ಕ್ರಮಿಸುತ್ತ
ಸಾಗುತ್ತಿತ್ತು ಪುಟ್ಟ ಜೀವದ ಇರುವೆ

ಸವಿ ಸಕ್ಕರೆಯ ಹರಳ ಹೊತ್ತು
ಕಾಲದಲೆಯ ಹಂಗು ತೊರೆದು

ನೋಡುತ್ತಲೆ ಇದ್ದೆ
ನಿದ್ದೆ ತುಂಬ ಇರುವೆಯೆ ತುಂಬಿ
ಹರಿಯುತ್ತಲೇ ಇತ್ತು ಕನಸಲ್ಲೂ ಬೆಟ್ಟಗುಡ್ಡ
ಗಿರಿಶಿಖರ ಕಣಿವೆ ದಾಟಿ ಬಯಲು ಆಲಯಗಳ ಮೀರಿ

ಮರದ ದಿಮ್ಮಿಯ ಏರಿ
ಸಾಗರಗಳ ಸುತ್ತಿ ದಿಗಂತದಾಚೆಗೂ

ಹೊರಳೊರಳಿ ಉರುಳುರುಳಿ ಸಕ್ಕರೆಯ ಹರಳ
ನೆತ್ತಿ ಮೇಲೊತ್ತುಕೊಂಡೇ ನಡೆದು ಅಡೆಗೋಡೆಗಳ
ಕಡೆಗಣಿಸಿ ಸಾಗುತ್ತಲೇ ಇತ್ತು ಇರುವೆ

ಪುಟ್ಟ ಜೀವದ ಇರುವೆ
ಏನದರ ಸವಿಯಾಸೆಯೊ
ಯಾವ ದಾರಿಯ ಪರಿಯೊ
ಎಂಥ ದಿವ್ಯ ಸುಖದ ಗುರಿಯೊ

ಹರಿದಾಡಿ ಪರದಾಡಿ
ಕಾಲ ಪ್ರವಾಹದಲಿ ತೇಲಿ
ಆಸೆಯನ್ನೆ ಆಸರೆಯಾಗಿಡಿದು

ಆಸೆಯಲ್ಲೆ ಆಕಾಶದ ತಡಿಯಲ್ಲರಿದಾಡಿ
ಚಂದ್ರನನ್ನೆ ಹಿಡಿವಂತೆ
ಸೂರ್ಯನನ್ನೆ ಹೊರುವಂತೆ

ತಾರೆಗಳನ್ನೆ ಮುಡಿವಂತೆ
ದುಃಖದ ದಿಗಂತಗಳ ಮೀರಿ
ಸಾಗುತ್ತಲೆ ಇತ್ತು ಸವಿ ಸುಖದ ಇರುವೆ
ಭೂಗೋಲದ ಎಲ್ಲೆಗಳನ್ನೆ ಸುತ್ತಿ
ಬ್ರಹ್ಮಾಂಡವನ್ನೆ ಹಗಲಿರುಳು ಬಳಸಿ

ಹರಿಯುತ್ತಲೆ ಇತ್ತು ಇರುವೆ
ನಮ್ಮೊಳಗೇ ಸಕ್ಕರೆಯ ಹೊತ್ತು
ಕಾಲಾಂತರದ ಅನಂತ ಇರುವೆ.
=============================
ನೆನಪಿನಸಿವು

 

 

 

ಬಣ್ಣದೋಕುಳಿಯ ಜಾತ್ರೆಯಲ್ಲಿ ಒದ್ದೆಯಾದ ಅವಳ
ಕಂಡು ಎಷ್ಟು ಕಾಲವಳಿಯಿತೊ ಕುಣಿಯುತ್ತಲೆ ಇದ್ದಾಳೆ
ಈಗಲೂ ನೆನಪಿನಂಗಳದ ತುಂಬ ರಂಗು ಚೆಲ್ಲಿ

ನೀರವ ರಾತ್ರಿಯಲ್ಲವಳು ದನಿ ಎತ್ತರಿಸಿ ಹಾಡುತ್ತಿದ್ದಳು
‘ಕಲ್ಲವ್ವ ತಾಯಿ ಮೆಲ್ಲವ್ವ ರಾಗೀಯ’ ದನಿ ತುಂಬಿ ತೇಲಿ
ಬರುತ್ತಲೆ ಇದೆ ಇವತ್ತಿಗೂ ಋತುಮಾನಗಳೆ ಉರುಳಿದರೂ

ಪಕ್ಕದೂರಿನ ರಂಗು ಜಾತ್ರೆಯ ಬಂಡಿ ದಾರಿಯಲ್ಲಿ ಸನಿಹವೇ ಬಂದು
ಮೆತ್ತಗೇ ಕೂತು ಒತ್ತೊತ್ತಿ ನಗಾಡಿ ಇಳಿದು ಹೋದವಳು
ಇಳಿದೇ ಇಲ್ಲ ಇನ್ನೂ ತಟ್ಟುತ್ತಲೇ ಇದ್ದಾಳೆ ನನ್ನೆದೆಯ ಕದವನ್ನು

ಕೊನೆಗೊಂದು ಮಾತ ಕೇಳಲೆಂದೇ ಬಂದು ಕಣ್ಣಲ್ಲೆ ತುಳುಕಿ
ಕಡು ದುಃಖವ ನುಂಗಿ ಹೊರಟೇ ಹೋದವಳು
ಉಳಿದೇ ಬಿಟ್ಟಿದ್ದಾಳೆ ಎಷ್ಟು ಕಾಲವಾದರೂ ಹೋಗದಂತೆ ಎಲ್ಲೂ.