ಅವರ ಕ್ರಿಕೆಟ್ ಜೀವನದಲ್ಲಿ ಕೋಚ್ ಆಗಿದ್ದ ರಮೇಶ್ ಪವಾರ್ ಅವರ ಜೊತೆ ಹೊಂದಾಣಿಕೆ ಇಲ್ಲದೆ ಕೆಲವು ಘರ್ಷಣೆಗಳಾದವು. ಬಿಸಿಸಿಐ ತನಕ ದೂರುಗಳು ಹೋದವು. ಅವರ ಮತ್ತು ಈಗಿನ ಕಪ್ತಾನ್‌ರ ಹರ್ಮನ್‌ಪ್ರೀತ್ ಕೌರ್ ಮಧ್ಯೆಯೂ ಅಷ್ಟು ಹೊಂದಾಣಿಕೆ ಇರಲಿಲ್ಲ. ಆದರೂ ವೃತ್ತಿಪರ ಸಂಬಂಧವನ್ನು ಬದಿಗಿಟ್ಟು ತಂಡದ ಹಿತಕ್ಕಾಗಿ ಜೊತೆಗೆ ಚೆನ್ನಾಗಿ ಆಡುತ್ತಿದ್ದಾರೆ. ಇದು ಬಹಳ ಮುಖ್ಯ. ವೈಯುಕ್ತಿಕವಾಗಿ ಏನೇ ಒಡಕು ತೊಡಕುಗಳಿರಲಿ ಅದನ್ನು ಬದಿಗಿಟ್ಟು ತಂಡದ ಏಳಿಗೆಗಾಗಿ ಶ್ರಮಿಸುವವರ ಕೊಡುಗೆ ಬಹಳ ಮಹತ್ತರವಾದದ್ದು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ಬರಹ ನಿಮ್ಮ ಓದಿಗೆ

ಭಾರತದಲ್ಲಿ ಮಹಿಳೆಯರ ಕ್ರಿಕೆಟ್ 1970ರ ದಶಕದಲ್ಲಿ ಶುರುವಾಯಿತು. ಆಗ ಟೆಸ್ಟ್ ಮ್ಯಾಚುಗಳನ್ನು ಆಡುತ್ತಿದ್ದು, 2018 ರಿಂದ ಎರಡು ಅಥವ ಮೂರು ಟೀಮುಗಳ ಜೊತೆ ಟಿ 20 ಮ್ಯಾಚುಗಳನ್ನು ಆಡುವುದಕ್ಕೆ ಶುರುಮಾಡಿದರು.

2022ರಲ್ಲಿ ಅಧ್ಯಕ್ಷ ಸೌರವ್ ಗಂಗೂಲಿಯವರ ನೇತೃತ್ವದಲ್ಲಿ ಬಿಸಿಸಿಐ ಒಂದು ಐತಿಹಾಸಿಕ ನಿರ್ಣಯ ತೆಗೆದುಕೊಂಡಿತು. 2023ರಿಂದ ಐಪಿಎಲ್ ಮಾದರಿ ಮಹಿಳೆಯರ ಒಂದು ಟೂರ್ನಮೆಂಟನ್ನು ಶುರುಮಾಡಬೇಕೆಂಬ ನಿರ್ಣಯ ಬಹಳ ಮಹತ್ತರವಾದದ್ದು ಮತ್ತು ಮಹಿಳೆಯರ ಅಂತರ್ರಾಷ್ಟ್ರ ಮಟ್ಟದಲ್ಲಿ ಇದು ಒಂದು ಮುನ್ನಡೆಯ ಹೆಜ್ಜೆ.

ವಿಮೆನ್ಸ್ ಪ್ರೀಮಿಯರ್ ಲೀಗ್ ( ಡಬ್ಲ್ಯೂ ಪಿ ಎಲ್) ಎಂದು ಕರೆಯುವ ಟೂರ್ನಮೆಂಟನ್ನು ಮಾಡಿ 5 ಟೀಮುಗಳನ್ನು ಇಟ್ಟು ಶುರುಮಾಡುವುದೆಂದು ನಿರ್ಷರ್ಷೆಯಾಯಿತು. ಈ ಲೀಗಿಗೆ ಟಾಟ ಕಂಪನಿಯವರು ಪ್ರಾಯೋಜಕರಾದರು. 5 ಟೀಮಿರುವ ಮೊದಲ ವರ್ಷ ಎಲ್ಲಾ ಮ್ಯಾಚುಗಳನ್ನು ಮುಂಬೈನ ಬ್ರೇಬರ್ನ್‌ ಸ್ಟೇಡಿಯಂ ಮತ್ತು ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ಆಡಿಸಬೇಕೆಂದು ನಿಶ್ಚಯ ಮಾಡಿದರು.

ಒಂದೊಂದು ಟೀಮೂ ಮಿಕ್ಕ ಟೀಮಿನ ಜೊತೆ ಎರಡು ಸರ್ತಿ ಆಡುವ ವ್ಯವಸ್ಥೆ -ರೌಂಡ್ ರಾಬಿನ್- ಆಡಿಸುವುದಾಗಿ ಇತ್ಯರ್ಥವಾಯಿತು.

ಹೂಡಿಕೆದಾರರು ಒಟ್ಟು ರೂ. 4669 ಕೋಟಿ ಹಣವನ್ನು ಹಾಕಿದರು. ($ 5800 ಲಕ್ಷ)

ಆಟಗಾರರನ್ನು ಹರಾಜಿಗೆ ಹಾಕಿದಾಗ ಸ್ಮೃತಿ ಮಂದಣ್ಣ ಅವರನ್ನು 3.4 ಕೋಟಿಗೆ ( $ 4.30.000) ಆರ್ ಸಿ ಬಿ ಕೊಂಡುಕೊಂಡರು. ವ್ಯಕೋಮ್ ರೂ. 950 ಕೊಟಿ ( $ 1200 ಲಕ್ಷ) ಕೊಟ್ಟು ಟಿವಿಯಲ್ಲಿ ಭಿತ್ತಿರಿಸುವುದಕ್ಕೆ ಅಧಿಕಾರವನ್ನು ಪಡೆದುಕೊಂಡರು.
ಮಾರ್ಚಿನಲ್ಲಿ ಕೊನೆಗೆ ವಿಮೆನ್ಸ್ ಪ್ರೀಮಿಯರ್ ಲೀಗ್ ಶುರುವಾಯಿತು. ಮೊದಲ ವರ್ಷದಲ್ಲಿ ಅಂದರೆ 2023ರಲ್ಲಿ ಮುಂಬೈ ಇಂಡಿಯನ್ಸ್ ಯುಪಿ ವಾರಿಯರ್ಸ್ ಮೇಲೆ ಗೆದ್ದು ಚಾಂಪಿಯನ್‌ಷಿಪ್ ಪಡೆದುಕೊಂಡರು.

ಡಬ್ಲ್ಯೂ ಪಿ ಎಲ್ ಕಪ್ ಮುಂದೆ ಇನ್ನೂ ಜಾಸ್ತಿ ಟೀಮುಗಳು ಸೇರಿ, ಮ್ಯಾಚುಗಳು ಬೇರೆ ಬೇರೆ ನಗರದಲ್ಲಿ ಆಡಿಸುವ ಹಾಗೆ ಬೆಳೆಯುತ್ತೆ ಹಾಗೂ ಮಹಿಳೆಯರ ಏಳಿಗೆಗೆ ಬಹಳ ಮುಖ್ಯವಾಗುತ್ತೆ. ಐಪಿಎಲ್ ತರಹಾನೇ ಹಳ್ಳಿಯಿಂದ ಪ್ರತಿಭಾವಂತ ಹುಡುಗಿಯರು/ ಮಹಿಳೆಯರಿಗೆ ಆಡುವ ಅವಕಾಶ ಸಿಗುವುದರಲ್ಲಿ ಸಂದೇಹವಿಲ್ಲ. ಅದರ ಜೊತೆಗೆ ಅವರಿಗೆ ಆರ್ಥಿಕ ಪರಿಹಾರ ಸಿಕ್ಕು, ಅವರ ಕುಟುಂಬದ ಏಳಿಗೆಗೆ ಮುಖ್ಯ ಕಾರಣವಾಗುತ್ತೆ. ಅನೇಕ ಹುಡುಗಿಯರಿಗೆ ಇದೊಂದು ಆಶಾಕಿರಣದ ಅವಕಾಶ ಎಂದರೆ ಏನೂ ಸಂದೇಹವಿಲ್ಲ.

*****

1970ರ ದಶಕದಿಂದಲೇ ಭಾರತದಲ್ಲಿ ಮಹಿಳೆಯರ ಕ್ರಿಕೆಟ್ ಆಟ ಶುರುವಾಯಿತು. ಆಗ ಅದರಲ್ಲಿ ಮುಖ್ಯ ಪಾತ್ರ ವಹಿಸಿದವರೊಬ್ಬರು ಶಾಂತ ರಂಗಸ್ವಾಮಿ. ಅವರ ಜೊತೆ ಮುಂದೆ ಅಂಜುಂ ಚೋಪ್ರ, ಶುಭಾಂಗಿ ಕುಲಕರ್ಣಿ, ಡಯಾನ ಎಡುಜಿ, ಪೂರ್ಣಿಮ ರಾವ್ ಮುಂತಾದವರು ಭಾರತದ ಟೀಮಿನಲ್ಲಿ ಆಡಿದ್ದಾರೆ.

1976ರಿಂದ 1991ವರೆಗೆ 16 ಟೆಸ್ಟ್ ಆಡಿದ ಶಾಂತ 12 ಮ್ಯಾಚುಗಳಿಗೆ ಭಾರತದ ಪ್ರಥಮ ಕ್ರಿಕೆಟ್ ನಾಯಕಿಯಾದರು. ಶಾಂತ ಅವರ ನೇತೃತ್ವದಲ್ಲಿ ಭಾರತ ತನ್ನ ಪ್ರಪ್ರಥಮ ವಿಜಯವನ್ನು ವೆಸ್ಟ್ ಇಂಡೀಸ್‌ನ ವಿರುದ್ಧ 1976ರಲ್ಲಿ ಪಾಟ್ನದಲ್ಲಿ ಗಳಿಸಿತು.

ಬಲಗೈ ಆಟಗಾರ್ತಿಯಾದ ಶಾಂತ 1981ರಿಂದ 1986 ವರೆಗೆ 19 ಒಡಿಐ ಮ್ಯಾಚುಗಳನ್ನಾಡಿ ಅದರಲ್ಲಿ 16 ಮ್ಯಾಚುಗಳಿಗೆ ತಂಡಕ್ಕೆ ಕಪ್ತಾನರಾದರು.

ಶಾಂತ ಟೆಸ್ಟ್ ಮ್ಯಾಚಿನಲ್ಲಿ ಸರಾಸರಿ 32.60 ಮೇರೆಗೆ, 750 ರನ್ ಹೊಡೆದು ಅದರಲ್ಲಿ ಒಂದು ಶತಕ ಮತ್ತು 6 ಅರ್ಧ ಶತಕ ಬಾರಿಸಿದ್ದರು. 108 ಅವರ ಅತ್ಯುತ್ತಮ ಸ್ಕೋರಾಗಿತ್ತು. ಬೋಲಿಂಗ್‌ನಲ್ಲಿ 31.61 ಸರಾಸರಿಯಲ್ಲಿ ಅವರು 21 ವಿಕೆಟ್ ತೆಗೆದರು. 1982 ರಿಂದ 1987ವರೆಗೆ ಒಡಿಐಲಿ ಅವರು 19 ಮ್ಯಾಚ್ ಆಡಿ 287ರನ್ ಹೊಡೆದರು. ಅದರಲ್ಲಿ ಒಂದು ಅರ್ಧ ಶತಕವಿತ್ತು. 12 ವಿಕೆಟ್ ತೆಗೆದರು.

ಟೆಸ್ಟ್‌ನಲ್ಲಿ 4/42 ಮತ್ತು ಒಡಿಐನಲ್ಲಿ 3/25 ಅವರ ಅತ್ಯುತ್ತಮ ಬೋಲಿಂಗ್ ಪ್ರಯತ್ನವಾಗಿತ್ತು. ಟೆಸ್ಟ್‌ನಲ್ಲಿ 10 ಕ್ಯಾಚ್ ಮತ್ತು ಒಡಿಐ ನಲ್ಲಿ 6 ಕ್ಯಾಚ್ ಹಿಡಿದರು.

(ಶಾಂತ ರಂಗಸ್ವಾಮಿ)

ಶಾಂತ, ರಂಗಸ್ವಾಮಿ ಮತ್ತು ರಾಜಲಕ್ಷ್ಮಿ ದಂಪತಿಗಳಿಗೆ 1 ಜನವರಿ 1954ರಲ್ಲಿ ಮದ್ರಾಸ್, ಈಗಿನ ಚೆನ್ನೈನಲ್ಲಿ ಹುಟ್ಟಿದರು. ಹುಟ್ಟಿನಿಂದ ಅವರಿಗೆ ಮನೆಯವರಿಂದ ಪ್ರೋತ್ಸಾಹ ಸಿಕ್ಕಿದ್ದರಿಂದ ಮುಂದೆ ಬರಲು ಸಹಾಯವಾಯಿತು. ಆಗಿನ ಕಾಲದಲ್ಲಿ ಹುಡುಗಿಯರಿಗೆ ಆಟದಲ್ಲಿ ಇಷ್ಟವಿದ್ದರೂ ಅನೇಕ ಮನೆಗಳಲ್ಲಿ ಅದಕ್ಕೆ ಉತ್ತೇಜನ ಸಿಗುತ್ತಿರಲಿಲ್ಲ. ಆಗಿನ ಕಾಲದವರ ಸ್ವಭಾವ ಹಾಗಿತ್ತು. ಸಂಗೀತ, ಸ್ವಲ್ಪ ಮಟ್ಟಿಗೆ ನೃತ್ಯಕ್ಕೆ ಉತ್ತೇಜನ ಕೊಡುವವರಿದ್ದರು. ಹೊರಗಡೆ ಹೋಗಿ ಆಡುವುದಕ್ಕೆ ಬಹಳ ಮನೆಗಳಲ್ಲಿ ಮೀನ ಮೇಷ ಎಣಿಸುತ್ತಿದ್ದರು. ಹಾಗಿದ್ದಾಗ ಶಾಂತಗೆ ಸಿಕ್ಕಿದ ಉತ್ತೇಜನ ಶ್ಲಾಘಿಸುವುದಕ್ಕೆ ಅರ್ಹ.

ಶಾಂತಗೆ ಅರ್ಜುನ ಪುರಸ್ಕಾರವನ್ನು ಭಾರತ ಸರ್ಕಾರ 1976 ರಲ್ಲಿ ಕೊಟ್ಟು ಗೌರವಿಸಿತು. ಅವರೇ ಮೊಟ್ಟ ಮೊದಲಿನ ಅರ್ಜುನ ಪ್ರಶಸ್ತಿತ ಮಹಿಳೆ. ಅವರಿಗೆ 2017ರಲ್ಲಿ ಇಂಡಿಯನ್ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್ ಮತ್ತು ಕರ್ನಾಟಕದ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡನ್ನು ಕೊಟ್ಟು ಗೌರವಿಸಿದರು.

ಕಪಿಲ್ ದೇವ್ ಮತ್ತು ಅನ್ಶುಮನ್ ಗಾಯಕ್ವಾಡ್ ಅವರ ಜೊತೆ ಪ್ರಪ್ರಥಮ ಮಹಿಳಾ ಸದಸ್ಯೆ ಆಗಿದ್ದ ಶಾಂತ, 2019ರಲ್ಲಿ ಬಿಸಿಸಿಐ ಸಿಎಸಿ ಮತ್ತು ಐಸಿಎ ಕಮಿಟಿಯಿಗಳಿಂದ ಹಿತಾಸಕ್ತಿ ಸಂಘರ್ಷ – ಕಾನ್‌ಫ್ಲಿಕ್ಟ್ ಆಫ್ ಇನ್ಟರೆಸ್ಟ್- ಆಗುತ್ತೆ ಎಂದು ರಾಜೀನಾಮೆ ಕೊಟ್ಟರು. 2020-22 ರಿಂದ ರದ್ದಾಗಿರುವ ಮಹಿಳೆಯರ 23 ವಯಸ್ಸು ಒಳಗಿರುವ ಒಡಿಐ ಮತ್ತು ಟಿ20 ಟೂರ್ನಮೆಂಟನ್ನು ವಾಪಸ್ಸು ತರಬೇಕೆಂದು ಈಗ ಬಿಸಿಸಿಐಲಿ ಎಪೆಕ್ಸ್ ಕೌನ್ಸಿಲ್‌ನ ಸದಸ್ಯೆ ಆಗಿರುವ ಶಾಂತ ರಂಗಸ್ವಾಮಿ ಬಿಸಿಸಿಐಯನ್ನು ಒತ್ತಾಯ ಮಾಡಿದ್ದಾರೆ.

ಶಾಂತ ರಂಗಸ್ವಾಮಿಗೆ ಭಾರತ ಇನ್ನೂ ಹೆಚ್ಚು ಟೂರ್ನಮೆಂಟುಗಳಲ್ಲಿ ಭಾಗವಹಿಸಿ ವಿಶ್ವ ಕಪ್ ಗೆಲ್ಲಬೇಕೆಂದು ಹಿರಿದಾಸೆ. ಅನೇಕ ಸಲ ಬಹಳ ಹತ್ತಿರಬಂದು ಸೋತದ್ದನ್ನು ಮರೆತು ನಮ್ಮ ಮಹಿಳೆಯರ ತಂಡ ಮೂರು ಕ್ರಿಕೆಟ್ ಸ್ವರೂಪದಲ್ಲೂ – ಟೆಸ್ಟ್, ಒಡಿಐ, ಮತ್ತು ಟಿ20 – ಚಾಂಪಿಯನ್ ಆಗಬೇಕೆಂಬ ಅವರ ಹಿರಿದಾಸೆ ನೆರವೇರಲೆಂದು ನಮ್ಮ ಆಸೆಯೂ ಅದರಲ್ಲಿ ಸೇರಿದೆ.

*****

ತಮಿಳುನಾಡಿನ ಕುಟುಂಬವೊಂದರಿಂದ ಬಂದ ಮಿತಾಲಿ ರಾಜ್ ಭಾರತದ ಟೆಸ್ಟ್ ನಾಯಕಿಯಾಗಿದ್ದರು. 12 ಟೆಸ್ಟ್ ಆಡಿದ ಮಿತಾಲಿ ರಾಜ್, 43.68 ಸರಾಸರಿಯಲ್ಲಿ 699 ರನ್ ಹೊಡೆದರು. ಅದರಲ್ಲಿ ಒಂದು ಶತಕ ಮತ್ತು 4 ಅರ್ಧಶತಕವೂ ಸೇರಿತ್ತು. ಜನವರಿ 2002 ರಿಂದ ಸೆಪ್ಟಂಬರ್ 2021 ವರೆಗೆ ಸೇವೆ ಸಲ್ಲಿಸಿದ ಮಿತಾಲಿ 232 ಒಡಿಐ ನಲ್ಲಿ ಆಡಿ 50.68 ಸರಾಸರಿಯಲ್ಲಿ 7805 ರನ್ ಹೊಡೆದರು. ಅದರಲ್ಲಿ 7 ಶತಕ ಮತ್ತು 64 ಅರ್ಧ ಶತಕವನ್ನು ಬಾರಿಸಿದ್ದರು! ಒಬ್ಬ ಉತ್ತಮ ಬ್ಯಾಟರ್ ಆಗಿ ಅನೇಕ ದಾಖಲೆಗಳನ್ನು ಸ್ಥಾಪಿಸಿದ್ದಾರೆ ಮಿತಾಲಿ. ಹಳೆಯ ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ಸ್ಥಾಪಿಸಿದ್ದಾರೆ.

(ಮಿತಾಲಿ ರಾಜ್)

ಟೆಸ್ಟ್‌ನಲ್ಲಿ ಅವರ ಅತ್ಯುತ್ತಮ ಸ್ಕೋರ್ 214, ಒಡಿಐನಲ್ಲಿ 125 ಔಟಾಗದೆ; ಅವರು ಒಡಿಐಲಿ ಓಪನಿಂಗ್ ಬ್ಯಾಟರ್ ಆಗಿದ್ದರು.
ಮಿತಾಲಿ ಅತ್ಯಂತ ಹೆಚ್ಚು – 7805 ರನ್ ಹೊಡೆದು ಒಡಿಐ ಆಟದಲ್ಲಿ ಅತ್ಯಂತ ಅಧಿಕ ರನ್ ಗಳಿಸಿದವರಾಗಿದ್ದಾರೆ.

ಅನೇಕ ಪುರಸ್ಕಾರಗಳು, ಪ್ರಶಸ್ತಿಗಳು ಅವರನ್ನು ಬೆನ್ನಟ್ಟಿ ಬಂದವು. 2015ರಲ್ಲಿ ಪದ್ಮಶ್ರೀ, 2003ರಲ್ಲಿ ಅರ್ಜುನ ಪುರಸ್ಕಾರ, ವಿಸ್ಡನ್‌ ಅವರ ವರ್ಷದ ಅತ್ಯುತ್ತಮ ಕ್ರಿಕೆಟರ್ 2017ರಲ್ಲಿ ಮತ್ತು 2021ರಲ್ಲಿ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಸಿಕ್ಕಿತು.

20 ವರ್ಷಕ್ಕೂ ಮೇಲೆ ಸತತವಾಗಿ ಅಂತರ್ರಾಷ್ಟ್ರೀಯ ಕ್ರಿಕೆಟ್ ಆಡಿರುವ ಮಿತಾಲಿ, 2019ರಲ್ಲಿ ನ್ಯೂಜಿಲೆಂಡ್ ಮೇಲೆ ಆಡಿದಾಗ ಅದು ಅವರ 200 ನೇ ಒಡಿಐ ಮ್ಯಾಚ್ ಆಗಿತ್ತು.

ಜೂನ್ 2021ರಲ್ಲಿ 10,273 ರನ್ ಹೊಡೆದು, ಶಾರ್ಲಟ್‌ ಎಡ್ವರ್ಡರ ದಾಖಲೆಯನ್ನು ಮುರಿದು, ಹೊಸ ದಾಖಲೆ ಏರ್ಪಡಿಸಿದ ಮಿತಾಲಿ ಕ್ರಿಕೆಟ್‌ನಿಂದ ಸಂಪೂರ್ಣ ವಿಶ್ರಾಂತಿಯನ್ನು ಘೋಷಿಸಿದರು.

ಆಗಿನ ಕಾಲದಲ್ಲಿ ಹುಡುಗಿಯರಿಗೆ ಆಟದಲ್ಲಿ ಇಷ್ಟವಿದ್ದರೂ ಅನೇಕ ಮನೆಗಳಲ್ಲಿ ಅದಕ್ಕೆ ಉತ್ತೇಜನ ಸಿಗುತ್ತಿರಲಿಲ್ಲ. ಆಗಿನ ಕಾಲದವರ ಸ್ವಭಾವ ಹಾಗಿತ್ತು. ಸಂಗೀತ, ಸ್ವಲ್ಪ ಮಟ್ಟಿಗೆ ನೃತ್ಯಕ್ಕೆ ಉತ್ತೇಜನ ಕೊಡುವವರಿದ್ದರು. ಹೊರಗಡೆ ಹೋಗಿ ಆಡುವುದಕ್ಕೆ ಬಹಳ ಮನೆಗಳಲ್ಲಿ ಮೀನ ಮೇಷ ಎಣಿಸುತ್ತಿದ್ದರು. ಹಾಗಿದ್ದಾಗ ಶಾಂತಗೆ ಸಿಕ್ಕಿದ ಉತ್ತೇಜನ ಶ್ಲಾಘಿಸುವುದಕ್ಕೆ ಅರ್ಹ.

ಮಿತಾಲಿ ರಾಜ್ ಜೋಧ್ಪುರದಲ್ಲಿ ಡಿಸೆಂಬರ್ 3, 1982 ರಲ್ಲಿ ದೊರೈರಾಜ್, ಮತ್ತು ಲೀಲಾ ರಾಜ್ ತಮಿಳು ದಂಪತಿಗಳಿಗೆ ಹುಟ್ಟಿದರು. ಅವರು ಹೈದರಾಬಾದಿನಲ್ಲಿ ವಾಸಮಾಡುತ್ತಾರೆ.

ಸಿಕಂದರಾಬಾದಿನಲ್ಲಿ ಕ್ರಿಕೆಟ್‌ನ ತರಪೇತಿ ಹೊಂದಿ, ಮುಂದೆ ಅವರು ಏರ್ ಇಂಡಿಯಾಗೆ ಆಡಿ ಆಮೇಲೆ ರೈಲ್ವೆಗೆ ಕೆಲಸಕ್ಕೆ ಸೇರಿ ಆ ಟೀಮಿನ ಪರ ಆಡುತ್ತಿದ್ದರು.

1999ರಲ್ಲಿ ಐರ್ಲೆಂಡ್ ವಿರುದ್ಧ ಕ್ರಿಕೆಟ್ ರಂಗ ಪ್ರವೇಶ ಮಾಡಿದ ಮೊದಲ ಮ್ಯಾಚಿನಲ್ಲಿಯೇ ಶತಕವನ್ನು ಬಾರಿಸಿದರು! 2002ರಲ್ಲಿ ಇನ್ನೂ 19 ವರ್ಷದ ಮಿತಾಲಿ ಆಗಿನ ಅತ್ಯಂತ ಹೆಚ್ಚಿನ ಸ್ಕೋರ್ 209 ರನ್ ದಾಟಿ ಇಂಗ್ಲೆಂಡಿನ ವಿರುದ್ಧ ಟೆಸ್ಟ್‌ನಲ್ಲಿ 214 ರನ್ ಹೊಡೆದರು! ಅವರು ಒಮ್ಮೆ ಬೋಲಿಂಗ್‌ನಲ್ಲಿ 4 ರನ್‌ಗೆ 3 ವಿಕೆಟ್ ತೆಗೆದರು.

2005 ವಿಶ್ವ ಕಪ್ ಒಡಿಐ ಕಪ್ತಾನರಾಗಿ ಬಂದು ಫೈನಲ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋಲನ್ನು ಅನುಭವಿಸಿತು. 2006ರಲ್ಲಿ ಮೊದಲ ಬಾರಿ ಇಂಗ್ಲೆಂಡಿನಲ್ಲಿ ಟೆಸ್ಟ್ ಸರಣಿ ಅವರ ನೇತೃತ್ವದಲ್ಲಿ ಭಾರತ ಗೆದ್ದು ಅದೇ ವರ್ಷ ಏಷಿಯಾ ಕಪ್ ಕೂಡ ಗೆದ್ದು ಬೀಗಿತು.

2017ರಲ್ಲಿ ಅವರನ್ನು ಐಸಿಸಿ ಒಡಿಐಲಿ ನೇಮಿಸಲ್ಪಟ್ಟರು. 2018ರಲ್ಲಿ ಟಿ20 ಐಸಿಸಿ ಯ ಟೀಮಿನಲ್ಲಿ ನೇಮಿಸಲ್ಪಟ್ಟರು.

ಅವರು ಪಡೆದುಕೊಂಡ ಬಹಳ ದೊಡ್ಡ ಪ್ರಶಸ್ತಿಯೆಂದರೆ, ಅವರನ್ನು ದಶಕದ ಅತ್ಯುತ್ತಮ ಕ್ರಿಕೆಟರ್ ಎಂದು ಘೋಶಿಸಲ್ಪಟ್ಟದ್ದು! ಅವರು ಕೋಚ್ ಮತ್ತು ಪ್ಲೇಯರ್ ಆಗಿಯೂ ಕಾರ್ಯನಿರ್ವಹಿಸಿದವರು.

ಮಿತಾಲಿಯವರನ್ನು ಲೇಡಿ ಟೆಂಡೂಲ್ಕರ್ ಎಂದೂ ಕರೆಯುತ್ತಾರೆ! ಅವರು ಟೆಸ್ಟ್, ಒಡಿಐ, ಟಿ20 ವಿಶ್ವದಲ್ಲಿ ಎಲ್ಲಾ ರೂಪಕದಲ್ಲೂ ಅತ್ಯುತ್ತಮ, ಅತಿ ಹೆಚ್ಚಿನ ಸ್ಕೋರ್‌ಗಳನ್ನು ಗಳಿಸಿದ್ದಾರೆ. 2017ರಲ್ಲಿ 7 ನೇ ಸತತ ಅರ್ಧ ಶತಕವನ್ನು ಬಾರಿಸಿ ಒಂದು ದಾಖಲೆಯನ್ನು ಸ್ಥಾಪಿಸಿದ್ದಾರೆ.

ಅವರ ಕ್ರಿಕೆಟ್ ಜೀವನದಲ್ಲಿ ಕೋಚ್ ಆಗಿದ್ದ ರಮೇಶ್ ಪವಾರ್ ಅವರ ಜೊತೆ ಹೊಂದಾಣಿಕೆ ಇಲ್ಲದೆ ಕೆಲವು ಘರ್ಷಣೆಗಳಾದವು. ಬಿಸಿಸಿಐ ತನಕ ದೂರುಗಳು ಹೋದವು. ಅವರ ಮತ್ತು ಈಗಿನ ಕಪ್ತಾನ್‌ರ ಹರ್ಮನ್‌ಪ್ರೀತ್ ಕೌರ್ ಮಧ್ಯೆಯೂ ಅಷ್ಟು ಹೊಂದಾಣಿಕೆ ಇರಲಿಲ್ಲ. ಆದರೂ ವೃತ್ತಿಪರ ಸಂಬಂಧವನ್ನು ಬದಿಗಿಟ್ಟು ತಂಡದ ಹಿತಕ್ಕಾಗಿ ಜೊತೆಗೆ ಚೆನ್ನಾಗಿ ಆಡುತ್ತಿದ್ದಾರೆ. ಇದು ಬಹಳ ಮುಖ್ಯ. ವೈಯುಕ್ತಿಕವಾಗಿ ಏನೇ ಒಡಕು ತೊಡಕುಗಳಿರಲಿ ಅದನ್ನು ಬದಿಗಿಟ್ಟು ತಂಡದ ಏಳಿಗೆಗಾಗಿ ಶ್ರಮಿಸುವವರ ಕೊಡುಗೆ ಬಹಳ ಮಹತ್ತರವಾದದ್ದು. ಮಿತಾಲಿ ರಾಜ್ ಅವರು ಚೆನ್ನಾಗಿ ಕಲಿತ ಭರತನಾಟ್ಯದ ಕಲಾವಿದೆ ಕೂಡ!

ಮಿತಾಲಿಯವರ ಜೀವನ ಚರಿತ್ರೆಯನ್ನು ಹಿಂದಿಯಲ್ಲಿ ಸಿನಿಮಾವಾಗಿ ತಯಾರಿಸಿ ಅದರಲ್ಲಿ ‘ತಾಪಸಿ ಪನ್ನು’ ಮಿತಾಲಿಯಾಗಿ ಅಭಿನಯಿಸಿದರು. ಕೋವಿಡ್ 19ರಿಂದ ಸಿನಿಮಾ ತಯಾರಿಕೆಯಲ್ಲಿ ನಿಧಾನವಾಯಿತು. ಅದು ಬಿಡುಗಡೆಯಾಗಿ ಅಷ್ಟು ಚೆನ್ನಾಗಿ ಓಡಲಿಲ್ಲ.

ಶಾಂತ ರಂಗಸ್ವಾಮಿ ಮತ್ತು ಮಿತಾಲಿ ರಾಜ್ ಅವರಿಬ್ಬರೂ ಮಹಿಳಾ ಕ್ರಿಕೆಟ್ಟಿನ ಏಳಿಗೆಗೆ ಬಹಳ ಶ್ರಮ ಪಟ್ಟಿದ್ದಾರೆ. 1970ರಲ್ಲಿ ಶಾಂತ, 2000 ನಂತರ ಬಂದ ಮಿತಾಲಿ ಟೀಮಿನ ನಾಯಕರಾಗಿ, ಕೋಚ್, ಆಡಳಿತ ಮತ್ತು ಬಿಸಿಸಿಐನಲ್ಲಿ ಮಹಿಳಾ ಕ್ರಿಕೆಟ್ಟನ್ನು ಸೇರಿಸಿ ಅದರ ಭವಿಷ್ಯವನ್ನು ಉಜ್ವಲಗೊಳಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಮುಂದೆ ಭಾರತ ಡಬ್ಲ್ಯೂ ಪಿ ಎಲ್ ನಿಂದ ಶೀಘ್ರದಲ್ಲಿಯೇ ಮಹಿಳಾ ಕ್ರಿಕೆಟ್‌ನ ಭೂಮಿಕೆಯಲ್ಲಿ ಉನ್ನತ ಮಟ್ಟಕ್ಕೆ ಏರಲಿ ಎಂದು ಎಲ್ಲರಂತೆ ಕ್ರಿಕೆಟಾಯ ನಮಃ ದ ಆಸೆ.

ಭಾರತದ ಮಾಜಿ ಕ್ರಿಕೆಟ್ ಆಟಗಾರರಾದ ಸಲೀಮ್ ದುರಾನಿ ಅವರ 88ನೆ ವಯಸ್ಸಿನಲ್ಲಿ ಕಾಲವಾದರೆಂದು ತಿಳಿಸಲು ವಿಷಾದಿಸುತ್ತೇವೆ. ದುರಾನಿ ಬ್ಯಾಟಿಂಗ್ ಮತ್ತು ಬೊಲಿಂಗ್‌ನಲ್ಲಿ ದಿಗ್ಗಜರಾಗಿದ್ದರು. ವೆಸ್ಟ್ ಇಂಡೀಸ್ ಮೇಲೆ ಭಾರತದ ಐತಿಹಾಸಿಕೆ ವಿಜಯಕ್ಕೆ ಅವರ ಬೋಲಿಂಗ್‌ನಿಂದ ಸೋಬರ್ಸ್ ಮತ್ತು ಲಾಯ್ಡ್ ಅವರನ್ನು ಔಟ್ ಮಾಡಿ ಭಾರತ 405 ರನ್ ಹೊಡೆದು ಗೆದ್ದರು.. ‘ಸಿಕ್ಸರ್, ಸಿಕ್ಸರ್’ ಎಂದು ಎಲ್ಲಿಂದ ಕೂಗು ಬರುವುದೋ ಅಲ್ಲಿಗೆ ಅವರು ಸಿಕ್ಸರ್ ಹೊಡೆಯುತ್ತಿದ್ದರು! ದೇವರ ಅವರ ಆತ್ಮಕ್ಕೆ ಶಾಂತಿ ನೀಡಲಿ ಎಂದು ಕ್ರಿಕೇಟಾಯ ನಮಃ ದಿಂದ ಪ್ರಾರ್ಥಿಸುತ್ತೇವೆ.