ಅವಳ ಮನಃಪಟಲದಲ್ಲಿ ಎರಡು ಘಟನೆ ಸದಾ ಕೊರೆಯುತ್ತಲೇ ಇರುತ್ತದೆ. ಒಂದು ಓಡಿ ಹೋದವನು ಮತ್ತೊಂದು ಓಡಿ ಬಂದು ಈಜಲು ಹೋದವ ಬಾರದವನು. ಓಡಿ ಹೋದವನು.. ಓಡಿಯೇ ಹೋಗಿರಬಹುದಾ, ಮತ್ತೇನಾದರೂ ಆಗಿರಬಹುದಾ ಅವಳಿಗೆ ಗೊತ್ತಿಲ್ಲ. ಒಂದು ದಿನ ಬೆಳಗ್ಗೆ ಮನೆಯೆದುರು ಆಟ ಆಡುತ್ತಿದ್ದವ ನಾಪತ್ತೆಯಾಗಿದ್ದ. ಸಮುದ್ರ ತಟದಲ್ಲಿರಬಹುದಾ ಎಂದು ಹುಡುಕಿದಳು ಶರಾವತಕ್ಕ. ಎಲ್ಲಕಡೆಯೂ ನೋಡಿ, ಕೂಗಿ ಕೂಗಿ ಗಂಟಲು ಹರಿದು ಹೋಗುವಷ್ಟು ಕೂಗಿದರೂ ಅವನ ಸುಳಿವಿಲ್ಲ. ಸಮುದ್ರದ ಅಲೆಗಳ ಹೊಡೆತದ ಭೋರ್ಗರೆತದ ಶಬ್ದಕ್ಕೆ ಇವಳ ಕೂಗು ಕ್ಷೀಣವಾಗುತ್ತಿತ್ತು.
ಪತ್ರಕರ್ತೆ ಭಾರತಿ ಹೆಗಡೆ ಬರೆಯುವ ಸಿದ್ದಾಪುರ ಸೀಮೆಯ ಕತೆಗಳ ಇಪ್ಪತ್ತನೆಯ ಕಂತು

 

‘ಹೋಯ್… ಹೋಯ್… ಎಂತ ಇದು.. ಯಾರ್ರಾ ನಿಂಗ…’ ಎಂಬ ಕಿರುಚಿದಂತಹ ಮಾತುಗಳು ಬರುವವರೆಗೂ ಆ ನಾಲ್ವರು ಸರಬರನೇ ನಡೆಯುತ್ತಲೇ ಇದ್ದರು. ಅದು ಜೋರು ಮಳೆಗಾಲ. ಜುಲೈ ತಿಂಗಳ ಎರಡನೇ ವಾರವಿರಬಹುದು. ಆಗಷ್ಟೇ ಒಂದು ಮಳೆ ಬಂದು ಹಳುವಾಗಿ ಆಕಾಶ ಸ್ವಚ್ಛವಾಗಿತ್ತು. ಮಳೆಗಾಲವಾದ ಕಾರಣ, ಸೂರ್ಯನಿರಬಹುದೆಂದು ಒಪ್ಪಿಕೊಳ್ಳುವಷ್ಟು ಮಂದಬೆಳಕು ಅಲ್ಲಿತ್ತು. ಮಳೆ ಹೊಯ್ದೂ ಹೊಯ್ದೂ ನೆಲ ಒದ್ದೆಯಾಗಿ ಕಾಲಿಟ್ಟರೆ ಸಾಕು ಜಾರಿ ಬೀಳುವಷ್ಟು ಅನೇಕ ಕಡೆ ನೆಲ ಹಮಾಸ್ಲು ಗಟ್ಟಿತ್ತು. ಅವರು ನಡೆಯುತ್ತಿದ್ದದ್ದು ಸಮತಟ್ಟಿನ ಜಾಗದಲ್ಲಾಗಿರಲಿಲ್ಲ. ಆ ನಾಲ್ವರೂ ಒಂದು ಗುಡ್ಡವನ್ನು ಹತ್ತಿದ್ದರು. ಒಂದು ಗುಡ್ಡ ದಾಟಿ ಮತ್ತೊಂದು ಬ್ಯಾಣದಂತಹ ಗುಡ್ಡ ಹತ್ತುವವರಿದ್ದರು. ಮಳೆಗಾಲವಾದ್ದರಿಂದ ಮಳೆಯಲ್ಲಿ ನೆಂದ ಚಿಕ್ಕಚಿಕ್ಕ ಹಸಿರು ಹುಲ್ಲು, ಹಸಿರು ಗಿಡ, ಅದರೊಳಗೆ ಹಳದಿ ಹೂವು ಬಿಟ್ಟುಇಡೀ ಬ್ಯಾಣ ಹಸಿರು, ಹಳದಿ, ಕೆಂಪುಗಳಿಂದ ತುಂಬಿಹೋಗಿತ್ತು. ಮಳೆಯಲ್ಲಿ ನೆನೆದ ಆಗಷ್ಟೇ ಬಿರಿದು ನಿಂತ ಆ ಹೂವುಗಳನ್ನು ನೋಡುವುದೇ ಒಂದು ಸೊಗಸು. ದಟ್ಟ ಮೋಡ ತುಂಬಿದ ಆಕಾಶ, ಕೊರೆವ ಕುಳಿರ್ಗಾಳಿ, ಬೆಟ್ಟ ಏರುತ್ತಿದ್ದಂತೆಯೇ ಸಣ್ಣದಾಗಿ ಹನಿಯುವ ಮಳೆ, ನಿಜಕ್ಕೂ ಮುದಕೊಡವಂಥ ವಾತಾವರಣ. ಆದರೆ ಅದ್ಯಾವುದನ್ನೂ ಲೆಕ್ಕಿಸುವ ಸ್ಥಿತಿಯಲ್ಲಿ ಅವರಿರಲಿಲ್ಲ.

ಬಹುಶಃ ಈ ಮಾತು ಕೇಳಿಬರದಿರುತ್ತಿದ್ದರೆ ಅವರೆಲ್ಲ ಒಬ್ಬರಿಗೊಬ್ಬರು ಅಪರಿಚಿತರೇನೋ ಅನಿಸುವಷ್ಟು ಮೌನದಿಂದ ನಡೆಯುತ್ತಿದ್ದರು. ಒಂದು ಗುಡ್ಡ ದಾಟಿ, ಇನ್ನೊಂದು ಗುಡ್ಡ ದಾಟಬೇಕು ಎನಿಸುವಷ್ಟರಲ್ಲಿ ‘ನಿಂತ್ಕಳಿ ಅಲ್ಲೇಯ…’ ಎಂದು ಪುರುಷನ ಧ್ವನಿ ಅವರನ್ನು ಹಾಗೆಯೇ ನಿಲ್ಲಿಸಿತು. ತಿರುಗಿ ನೋಡುವಷ್ಟರಲ್ಲೇ ಇವರಿಗೆ ಹೊಡೆಯಲು ಬರುತ್ತಾನೋ ಎನ್ನುವಂತೆ.. ‘ಅಲ್ಲ, ಈ ಬೇಲಿದಾಟಿ ಬೈಂದ್ರಲ ನಿಂಗ, ತಿಳೀತಿಲ್ಯ ನಿಂಗಕ್ಕೆ, ಬೇಲಿ ಹಾಳಾದ್ರೆ ನಿಂಗ ಬತ್ರ ಕಟ್ಟಿಕೊಡಲೇ..’ ಎಂದ ಸಿಟ್ಟಿನಲ್ಲಿ.

ಹಮಾಸ್ಲು ಬಣ್ಣಕ್ಕೆ ತಿರುಗಿದ ಅಂಗವಸ್ತ್ರ ಪಂಜೆಯನ್ನು ಕಟ್ಟಿಕೊಂಡು, ಬೆನ್ನಿಗಂಟಿದ ಹೊಟ್ಟೆ, ಈ ಮಳೆಯಲ್ಲೂ ಬರೀ ಮೈ ಬಿಟ್ಟುಕೊಂಡು, ತಲೆಮೇಲೊಂದು ಕಂಬಳಿಕೊಪ್ಪೆಯನ್ನು ಹಾಕಿಕೊಂಡು ಒಂದೇ ಸಮನೆ ಜೋರುಮಾಡುತ್ತಿದ್ದ. ಈಗ ಈ ನಾಲ್ವರ ಪೈಕಿ ಒಬ್ಬವ ಹಿರಿಯವನಿಗೆ ಇವ ಹೇಳಿದ್ದನ್ನು ಕೇಳಿ ಸ್ವಲ್ಪ ಕುಶಾಲು ಮಾಡಬೇಕೆನಿಸಿ, ‘ಈ ಗುಡ್ಡಕ್ಕೆಂತ ಬೇಲಿ. ಇಲ್ಲೆಂಥ ದನ ಬತ್ತು, ಬೇಲಿ ಇದ್ರೆಷ್ಟು, ಬಿಟ್ರೆಷ್ಟು’ ಎಂದ ಉಡಾಫೆಯಲ್ಲಿ. ಅದನ್ನು ಕೇಳಿದ ಆ ಮನುಷ್ಯನಿಗೆ ಮತ್ತಷ್ಟು ಸಿಟ್ಟು ಏರಿ, ‘ಬೇಲಿ ಮುರುಕಂಡು ಹೋದ್ರೆ ಇಲ್ಲಿ ದನ ಬಂದು ಎಲ್ಲ ತಿಂದಕಂಡು ಹೋಗ್ತಿಲ್ಯಾ. ಇಲ್ಲಿ ಇಷ್ಟು ಹುಲ್ಲು ಬೆಳದದ್ದು ಕಾಣ್ತಿಲ್ಯಾ ನಿಂಗಕ್ಕೆ, ನಿಂಗ ಎಂತ ದನವಾ ನೋಡ್ತೆ.. ಹೀಂಗೆಲ್ಲ ನುಗ್ಗಿ ಬತ್ರಲಿ..’ ಎಂದ ಮತ್ತಷ್ಟು ಜೋರು ಧ್ವನಿಯಲ್ಲಿ. ಅದಕ್ಕೆ ಈ ಹಿರಿಯವನೂ ‘ದನ ಆಗಿದ್ದಿದ್ರೆ ಇಲ್ಲಿ ಹುಲ್ಲು ಇರ್ತಿತ್ತಾ ನೋಡ್ತೆ..’ ಎಂದು ಅವನದ್ದೇ ಧಾಟಿಯಲ್ಲಿ ಹೇಳಿದ. ಇವನಿಗೆ ಕುಶಾಲು, ಅವನಿಗೆ ಸಿಟ್ಟು, ಇಬ್ಬರ ಜಗಳ ಏರುತ್ತಿದ್ದಂತೆ ಇವರೊಂದಿಗೆ ಬಂದವ ಮತ್ತೊಬ್ಬನಿಗೆ ಭಯ ಶುರುವಾಯಿತು.

ನಿಜವಾಗಿ ಆ ನಾಲ್ವರ ಪೈಕಿ ಒಬ್ಬ ಹೊರಗಿನವನು. ಒಬ್ಬ ತಾಯಿ, ಅವಳ ಇಬ್ಬರು ಮಕ್ಕಳು ಮತ್ತು ತಾಯಿಯ ಅಣ್ಣ, ಅಂದರೆ ಆ ಮಕ್ಕಳ ಸೋದರಮಾವ, ಇವಿಷ್ಟೂ ಜನ ಅವಳ ಗಂಡ ಅಕಾಲ ಮರಣಕ್ಕೆ ತುತ್ತಾಗಿ ಒಂದು ವರ್ಷವಾಗಿ, ಅವನ ವರ್ಷದ ತಿಥಿ ಮಾಡಲು ಗೋಕರ್ಣಕ್ಕೆ ಬಂದವರು, ಅಲ್ಲಿ ಪುರೋಹಿತರ ಮಗ ಶಿವರಾಮನನ್ನು ಕರೆದುಕೊಂಡು ಉಮಾ ಮಹೇಶ್ವರಕ್ಕೆ ಅವರ ನೆಂಟರಮನೆಗೆ ಹೋಗಲು ಆ ಬೆಟ್ಟ ಹತ್ತಿದ್ದರು. ಇವ ಬಂದು ಹೀಗೆಲ್ಲ ಕೂಗುವಾಗಲೇ ಅವರಿಗೆ ಗೊತ್ತಾಗಿದ್ದು, ತಾವು ಆ ಗುಡ್ಡದ ಬೇಲಿಯನ್ನು ಮುರಿದು ಆಚೆ ಬಂದದ್ದು ಎಂದು. ಅಲ್ಲಿಯವರೆಗೆ ಅವರ್ಯಾರಿಗೂ ತಾವು ಎಲ್ಲಿಗೆ ಹೊರಟಿದ್ದೇವೆ, ಎಲ್ಲಿದ್ದೇವೆಂಬ ಕಬರೂ ಇಲ್ಲದೆ ಹೊರಟಿದ್ದರು. ಎಲ್ಲರಿಗೂ ಅವರದ್ದೇ ಆದ ಚಿಂತೆಯಿತ್ತು.

ಮಕ್ಕಳಿಬ್ಬರಿಗೂ ಅಪ್ಪನನ್ನು ಕಳೆದುಕೊಂಡ ದುಃಖವಿದ್ದರೂ, ಮುಂದಿನ ಭವಿಷ್ಯದ ಕನಸು ಹೊತ್ತವರು. ಅಣ್ಣ ಜಯರಾಮ, ತಂಗಿಯ ಸಂಸಾರದ ಗತಿ ಏನು, ಕಾಲೇಜಿಗೆ ಹೋಗುವ ಇಬ್ಬರು ಮಕ್ಕಳು, ಬದುಕಿಗೆ ಯಾವ ಆಸರೆಯೂ ಇಲ್ಲದ ಸಣ್ಣ ಪ್ರಾಯದ ತಂಗಿ ಹೇಗೆ ಸಂಸಾರ ತೂಗಿಸಿಕೊಂಡು ಹೋದಾಳು ಎಂದು ಯೋಚಿಸುತ್ತಿದ್ದರೆ, ತಂಗಿ ಗೌರಿ ಮಾತ್ರ ತನ್ನ ಗಂಡ ತೀರಿ ಹೋಗಿ ಒಂದು ವರ್ಷವಾದರೂ ಇನ್ನೂ ಅವನ ನೆನಪುಗಳಿಂದ ಹೊರಬರಲಾಗದೆ, ಎದುರಿಗೆ ನಿಂತ ಮಕ್ಕಳೆಂಬ ಈ ಭವಿಷ್ಯ, ಕಾಡುವ ಗಂಡನ ಭೂತದ ನೆನಪುಗಳು, ಎಲ್ಲವನ್ನೂ ನೆನೆನೆದು ಒಳಗೊಳಗೇ ನೋಯುತ್ತ ಮಂಕಾಗಿದ್ದಳು.

ಹೀಗೆ ಈ ನಾಲ್ವರದ್ದೂ ಒಂದೊಂದು ಯೋಚನೆಯಾಗಿ ಒಬ್ಬರೂ ಮಾತನಾಡದೆ ಆಗಷ್ಟೇ ವರ್ಷಾಂತಿಕವನ್ನೂ ಮುಗಿಸಿ ಸುಮ್ಮನೆ ಮನಬಂದಂತೆ ಸಾಗುತ್ತಿದ್ದರು. ಅವರು ನಡೆಯುವುದನ್ನು ನೋಡಿದರೆ ಯಾರೋ ಅವರನ್ನು ನಡೆಸುತ್ತಿದ್ದಾರೇನೋ ಎಂಬಂತಿತ್ತು, ಎದುರಿಗೇನಿದೆ, ಏನು ಬರುತ್ತದೆ ಎಂಬುದು ಅವರಿಗೆ ಗೊತ್ತಾಗದವರ ಹಾಗೆ ನಡೆಯುತ್ತಿದ್ದರು. ಆದರೆ ಇವರಿಬ್ಬರ ಜಗಳ ನೋಡಿ ಹೆದರಿಕೊಂಡವ ಆ ಪುರೋಹಿತರ ಮಗ ಶಿವರಾಮ. ‘ಅಯ್ಯೋ ನಿಂಗ ಹೀಂಗೆಲ್ಲ ಹೇಳಡದ್ರೋ ಅವಕ್ಕೆ. ಅವು ಜೋರಿನ ಜನ. ನಾಳೆ ಎಮ್ಮನಿಗೇ ಬಂದುಬಿಡ್ತ ಜಗಳಕ್ಕೆ’ ಎಂದ. ಆದರೂ ಅದ್ಯಾಕೋ ಈ ಜೈರಾಮನಿಗೆ ಕುಶಾಲು ಮಾಡುವ ತಲುಬು ಹೋದಂತೆ ಕಂಡಿರಲಿಲ್ಲ. ಹೀಗೆ ಅವರ ಜಗಳ ತಾರಕಕ್ಕೇರಿ ಇನ್ನೇನು ಅವನು ಹೊಡೆದೇ ಬಿಡುತ್ತಾನೇನೋ ಎಂಬಂತೆ ಕೈಯೆತ್ತಿ ಬರುವುದನ್ನು ನೋಡಿ, ತಂಗಿ ಗೌರಿಯೇ ಸುಮ್ಮನಿರಿಸಿ ಈಚೆಕಡೆ ಕರೆದುಕೊಂಡು ಬಂದಳು. ಆ ಬಡೀ ಮನುಷ್ಯ ಇವರನ್ನು ಕೆಟ್ಟದಾಗಿ ಬೈದುಕೊಂಡು, ಅವ ಹಾಕಿಕೊಂಡ ಕಂಬಳಿಕೊಪ್ಪೆ ಹಾರಿ ಹೋಗುತ್ತೇನೋ ಎಂದೆನಿಸುವಂತೆ ಸಿಟ್ಟಿನಿಂದ ತಲೆ ಕುಣಿಸುತ್ತಾ ಹೊರಟ.

ಅವನನ್ನೊಂದಿಷ್ಟು ತಮಾಶೆ ಮಾಡಿದ್ದಕ್ಕೋ ಏನೋ… ಈ ನಾಲ್ವರಿಗೆ ಸ್ವಲ್ಪ ಚೇತರಿಕೆ ಬಂದು ಅವರೀಗ ಸ್ವಲ್ಪ ವಾಸ್ತವಕ್ಕೆ ಬಂದಿದ್ದರು.

‘ಉಮಾ ಮಹೇಶ್ವರದಲ್ಲಿ ಕೇಶವ ಭಟ್ರಿಲ್ಲೆ ಈಗ, ಅವರು ತೀರಿಕೊಂಡು ಬಾಳ ವರ್ಷ ಆಗ್ಹೋತು, ಈಗ ಅವರ ಹೆಂಡತಿ ಶರಾವತಕ್ಕ ಮಾತ್ರ ಇದ್ಲಡ’ ಎಂದ ಜಯರಾಮ. “ಹೌದಡ.. ಗೊತ್ತಾತು, ಅವಳಿಗೆ 3-4 ಜನ ಮಕ್ಕಳು ಅಲ್ದನಾ” ಎಂದಳು.

‘ಹೂಂ. ಇಬ್ಬರು ಗಂಡು ಮಕ್ಕಳು ಹೇಳಿ ನೆನಪಿದ್ದು, ಮತ್ತೆ ಗೊತ್ತಿಲ್ಲೆ’ ಎಂದ.

ಈ ಶರಾವತಕ್ಕನ ಗಂಡ ಕೇಶವ ಭಟ್ರು ಈ ಜಯರಾಮನ ಮನೆಯ ಪುರೋಹಿತ ಭಟ್ರಾಗಿದ್ದರು. ಒಂದು ಕಾಲಕ್ಕೆ ಸಿದ್ದಾಪುರ ಸಮೀಪದ ಹಳ್ಳಿಯವರಾದರೂ ಅವರೆಲ್ಲ ಮನೆಬಿಟ್ಟು ಗೋಕರ್ಣ ಬಳಿಯ ಉಮಾ ಮಹೇಶ್ವರ ಬೆಟ್ಟದ ತಪ್ಪಲಲ್ಲಿ ಮನೆಮಾಡಿ ಬಹಳ ವರ್ಷಗಳೇ ಸಂದಿದ್ದವು. ಅವರು ಮನೆಬಿಟ್ಟು ಬರುವಾಗ ಅವರಿಗೆ ದೊಡ್ಡ ಮಗ ಮಾತ್ರ ಹುಟ್ಟಿದ್ದ. ನಂತರ ಉಮಾಮಹೇಶ್ವರ ದೇವಸ್ಥಾನದ ಪೂಜೆ ಮಾಡುತ್ತಲೇ ಭಟ್ರು ಒಂದು ದಿನ ಕಣ್ಣುಮುಚ್ಚಿದ್ದ ಕತೆ ಅವರಿಗೆ ಗೊತ್ತಿತ್ತು. ಅದನ್ನು ನೆನೆದೇ ‘ಪಾಪ ಭಟ್ಟರು ಉಮಾ ಮಹೇಶ್ವರ ಪೂಜೆಯನ್ನು ತುಂಬ ಶ್ರದ್ಧೆಯಿಂದ ಮಾಡುತ್ತಿದ್ದವರು, ತುಂಬ ಸಣ್ಣ ಪ್ರಾಯದಲ್ಲೇ ಕಣ್ಣುಮುಚ್ಚಿದರು. ಅಷ್ಟರ ನಂತರ ಶರಾವತಕ್ಕನ ಮೇಲೇ ಸಂಸಾರದ ಜವಾಬ್ದಾರಿ ಬಿತ್ತು’ಎಂದು ಜಯರಾಮಣ್ಣ ಹೇಳುತ್ತಿದ್ದರೆ, ತಂಗಿ ಗೌರಿಯಿಂದ ಒಂದು ನಿಟ್ಟುಸಿರು, ‘ಪಾಪ, ಹ್ಯಾಂಗ್ ಮಾಡಿದ್ಲೋ ಏನೋ’ ಎಂದು. ಹಾಗೆ ಹೇಳುವಾಗ ಅವಳಿಗಿದ್ದದ್ದು ಅವಳ ಭವಿಷ್ಯವೇ ಕಣ್ಣಮುಂದೆ ಬಂದಂತೆ ಭಾಸವಾಗುತ್ತಿತ್ತು.

ಹೀಗೆ ಅವತ್ತೆಲ್ಲ ನಡೆದೂ ನಡೆದೂ ಶರಾವತಕ್ಕನ ಮನೆ ತಲುಪುವಷ್ಟರಲ್ಲಿ ಮದ್ಯಾಹ್ನ 3-4 ಗಂಟೆಯೇ ಆಗಿದ್ದಿರಬಹುದು. ಒಟ್ಟಿನಲ್ಲಿ ಸೂರ್ಯ ಮುಳುಗುವತ್ತ ತಿರುಗಿದ್ದ.

ಒಳಕ್ಕೆ ಕಾಲಿಟ್ಟೊಡನೆಯೇ ಭಟ್ರ ಹೆಂಡತಿ ಇರಬಹುದು, ಸ್ವಲ್ಪ ವಯಸ್ಸಾದ ಹೆಂಗಸೊಬ್ಬರು ‘ಬನ್ನಿ ಬನ್ನಿ…’ ಎಂದು ಸಂಭ್ರಮದಿಂದ ಬರಮಾಡಿಕೊಂಡಳು. ತಲೆಕೂದಲು, ಹುಬ್ಬು ಕೂಡ ಬೆಳ್ಳಗಾಗಿರುವ ವೃದ್ಧೆ ಶರಾವತಕ್ಕ ಜೈರಾಮ ಮತ್ತು ಗೌರಿ ಈ ಇಬ್ಬರನ್ನು ನೋಡಿ ಸಂತೋಷ ಪಟ್ಟುಕೊಂಡು ಮಾತನಾಡಲು ಶುರುಮಾಡಿದಳು. ಬಿಸಿಬಿಸಿ ಚಹಾ ತಯಾರಿಸಿ, ಅವಲಕ್ಕಿ ಚುಡುವಾ ಕೊಟ್ಟು ಉಪಚರಿಸಿದಳು. ಆ ಹೊತ್ತು, ಆ ಗಾಳಿ, ಆ ಸಮುದ್ರದ ಅಲೆಗಳ ಬಡಿತದ ಶಬ್ದ, ಆ ಆಯಾಸಕ್ಕೆ ಈ ಚಹಾ ಅಮೃತದಂತೆ ಅನಿಸಿತ್ತು ಬಂದವರಿಗೆ. ಗುಟುಕು ಗುಟುಕಾಗಿ ಹೀರತೊಡಗಿದರು. ‘ಕಡಿಗೆ ಜೈರಾಮ, ಅಮ್ಮ, ಸಾವಿತ್ರಿ ಹಿರಿಯಮ್ಮ ಎಲ್ಲರನ್ನೂ ಕಳಿಸ್ದೆ ಹಂಗರೆ…’ ಎಂದು ಮಾತಿಗೆ ಶುರು ಮಾಡಿದ ಶರಾವತಕ್ಕನನ್ನು ನಿಧಾನಕ್ಕೆ ಅವಲೋಕಿಸತೊಡಗಿದ ಜೈರಾಮ. ಏನೋ ವಿಚಿತ್ರವೆನಿಸಿತು ಅವನಿಗೆ, ಮೊದಲಿನ ಆ ಶರಾವತಕ್ಕನೇ ಬೇರೆ, ಇಲ್ಲಿನವಳೇ ಬೇರೆ ಎನಿಸತೊಡಗಿತು. ಹಾಗೆ ನೋಡಿದರೆ ಆ ಇಡೀ ವಾತಾವರಣವೇ ಅವನಿಗೆ ವಿಚಿತ್ರವೆನಿಸುತ್ತಿತ್ತು.

ನಿಜಕ್ಕೂ ಆ ಮನೆ ಪುರಾತನ ಕಾಲದ ಪರ್ಣಕುಟೀರವೊಂದು ಆ ಸಮುದ್ರದ ಅಂಚಿನಲ್ಲಿ ಬಂದು ಕುಳಿತಂತೆ ಭಾಸವಾಗುತ್ತಿತ್ತು. ಉಮಾ ಮಹೇಶ್ವರ ದೇವಸ್ಥಾನ ಮಾತ್ರ ಗುಡ್ಡದ ತುದಿಯಲ್ಲಿದ್ದು, ಸುತ್ತ ಸಮುದ್ರದಿಂದ ಆವೃತವಾಗಿ ಒಂದು ದ್ವೀಪದಂತೆ ಅನಿಸುತ್ತಿತ್ತು. ಗುಡ್ಡ ಇಳಿದು ಸ್ವಲ್ಪ ದೂರ ನಡೆದು ಹೋದರೆ ಸಮುದ್ರದ ಅಂಚಿನಲ್ಲಿ ಸ್ವಲ್ಪವೇ ಎತ್ತರದಲ್ಲಿರುವಂಥ ಸಣ್ಣ ಗುಡಿಸಿಲಿನಂಥ ಮನೆಯದು. ಎಷ್ಟು ಅಂಚಿನಲ್ಲಿತ್ತೆಂದರೆ ಸಮುದ್ರದ ಅಲೆಗಳೆಲ್ಲ ಅವರ ಮನೆಯ ಹಿಂಬದಿಯ ಗೋಡೆಗೆ ಅಪ್ಪಳಿಸುತ್ತಿರುವಂತೆ ಭಾಸವಾಗುತ್ತಿತ್ತು. ಸಮುದ್ರದ ಭೋರ್ಗರೆತ, ಸುಯ್ ಎಂದು ಬೀಸುವ ಗಾಳಿ, ಮಣ್ಣಿನ ನೆಲ, ಗೋಡೆ, ನೆಲಕ್ಕೆ ಕಾಲಿಟ್ಟರೆ ಸಾಕು ಒದ್ದೆಒದ್ದೆ ಎನಿಸುವಷ್ಟು, ನೆಲ ಮತ್ತು ಗೋಡೆಗಳೆಲ್ಲ ತೇವಭರಿವಾಗಿತ್ತು. ಅಡುಗೆ ಮನೆ ಮತ್ತು ಊಟದ ಕೋಣೆಯ ನೆಲಕ್ಕೆ ಬಿಳೆಹುಲ್ಲಿನಿಂದ ಮುಚ್ಚಿದ್ದರು. ಹಾಗಾಗಿ ತೇವಾಂಶ ಅಷ್ಟು ಕಾಲಿಗೆ ತಾಗುತ್ತಿರಲಿಲ್ಲ. ಆ ಗುಡಿಸಲು, ಸುತ್ತ ಸಮುದ್ರ, ಅಲೆಗಳ ಅಪ್ಪಳಿಸುವಿಕೆ, ಭೋರ್ ಎಂಬ ಶಬ್ದ ಎಲ್ಲವೂ ವಿಚಿತ್ರವೆನಿಸಿ, ಇದು ರಾಮಾಯಣದಲ್ಲಿ ಬರುವ ಪರ್ಣಕುಟೀರವನ್ನು ನೆನೆಪಿಸಿದರೆ ಈ ಶರಾವತಕ್ಕ ಮಾತ್ರ ಪಕ್ಕಾ ಶಬರಿಯಂತೆ ಯಾರಿಗಾಗಿಯೋ ಅಲ್ಲಿ ಕಾಯುತ್ತಿದ್ದಾಳೋ ಎಂದೆನಿಸುತ್ತಿತ್ತು.

ಅವರು ಮೂವರೂ ಒಂದೇ ಸಮನೆ ಹರಟುತ್ತಿದ್ದರು. ಅಷ್ಟೊತ್ತಿಗೆ ಎಲ್ಲೋ ಹೋಗಿದ್ದ ಅವಳ ದೊಡ್ಡ ಮಗ ಶಂಭು ಭಟ್ಟನೂ ಬಂದ. ‘ಅರೆ ಇವನ ಗುರುತೇ ಸಿಗ್ತಿಲ್ಯಲೇ.. ಆವಾಗ ನಿಂಗ ಮನೆಬಿಟ್ಟಿಕ್ಕೆ ಬಪ್ಪಕಾರೆ ಸಣ್ಣಕಿದ್ದಿಯಿದ್ದ ಇವ. ಈಗ ದೊಡ್ಡ ಗಂಡಸೇ ಆಗ್ಹೋಯದ್ನಲೆ ಮಾರಾಯ್ತೀ…’ ಎಂದ ಜೈರಾಮನ ಮಾತಿಗೆ ಶಂಭು ಭಟ್ಟ ಸುಮ್ಮನೆ ನಕ್ಕರೆ, ಶರಾವತಕ್ಕ ಏನೂ ಹೇಳಲಿಲ್ಲ.

ಶಂಭು ಭಟ್ಟ ಬರುತ್ತಿದ್ದಂತೆ ಇದ್ದಕ್ಕಿದ್ದಹಾಗೆ ಒಂದು ವಿಚಿತ್ರ ಮೌನ ಅಲ್ಲಿ ಆವರಿಸಿದಂತಾಗಿ, ಏನು ಮಾತನಾಡಲೂ ತಿಳಿಯದೇ ಜೈರಾಮ ‘ಇಲ್ಲಿ ಭಾಳಾ ಚೊಲೋ ಇದ್ದು ಜಾಗ’ ಎಂದ. ಆಗ ‘ಹೌದು, ಇದು ಒಂಥರಾ ಟೂರಿಸ್ಟ್ ಸ್ಪಾಟ್ ಥರ ಆಗ್ಹೋಯ್ದು. ದೇವಸ್ಥಾನಕ್ಕೆ ಬಂದವೆಲ್ಲ ಇಲ್ಲಿ ಬರಗಿದ್ದೇ ಹೋಗ್ತ್ವೇ ಇಲ್ಲೆ’ ಎಂದ ಶಂಭು ಭಟ್ಟ ಉತ್ಸಾಹದಿಂದ. ತಕ್ಷಣ ಶರಾವತಕ್ಕ ‘ಹಂಗ್ಹೇಳಿ ನಿಂಗ ಹೋಗಡಿ ಮತ್ತೆ, ಇದು ಅಪಾಯದ ಸ್ಥಳ ಹೇಳಿ ಸರ್ಕಾರದವ್ರೇ ಬೋರ್ಡ್ ಹಾಕಿದ್ದ, ಎಷ್ಟು ಜನ ಹೀಂಗೇ ಈಜಲು ಬಂದವರು ಸತ್ಹೋದ್ವೋ ಏನೋ’ ಎಂದಳು.

‘ಅದು ಸಮುದ್ರ ಹೇಳಿಪ್ಪಲ್ಲೆಲ್ಲ ಅಪಾಯ ಇಪ್ಪದೇಯ. ನೀ ಎಂತೆಂತಾದ್ರೂ ಹೇಳಡ’ ಎಂದು ಗದರಿದಂತೆ ಹೇಳಿದ ಶಂಭು. ಅಷ್ಟೊತ್ತಿಗೆ ಅವನನ್ನು ಕರೆಯಲು ಯಾರೋ ಬಂದರೆಂದು ಎದ್ದು ಹೋದ.

‘ಇವ ಹೇಳ್ತ. ಆದ್ರೆ ಇಲ್ಲಿ ಎಷ್ಟು ಅಪಾಯ ಇದ್ದು ಗೊತ್ತಿದ್ದ. ಸುಮಾರ್ ಜನ ಇಲ್ಲಿ ಸತ್ಹೋಯ್ದ. ವಿದೇಶದ ಜನವೇ ಹೆಚ್ಚಾಗಿ ಇಲ್ಲಿಗೆ ಬತ್ತ. ಒಬ್ಬವಂತೂ ಅದೆಷ್ಟು ಚೆಂದಿದ್ದಿದ್ನೇ ನೋಡಲೆ. ಇನ್ನೂ ಸಣ್ಣಪ್ರಾಯ. ಕೆಂಪುಕೆಂಪಗೆ ಇದ್ದ, ಕೆಂಪು ಜರ್ಕಿನ್ ಬ್ಯಾರೆ ಹಾಕ್ಯಂಡಿಯಿದ್ದ. ಅವನ ಮೈ ಬಣ್ಣಕ್ಕೂ, ಅವ ಹಾಕ್ಯಂಡಿದ್ದ ಜರ್ಕಿನ್ಗೂ ಸರೀ ಮ್ಯಾಚ್ ಆಗ್ತಿತ್ತು.. ಅವಂಗೆ ಹೇಳಲೆ ಎಂಗೆ ಭಾಷೆ ಬತ್ತಿಲ್ಲೆ. ಬ್ಯಾರೇವು ಹೇಳತ್ವಿಲ್ಲೆ. ಆದ್ರೂ ಬ್ಯಾಡ್ದೋ ತಮ ಹೋಗಡ ಹೇಳಿ ಸನ್ನೆ ಮಾಡಿ ಹೇಳಿದ್ರೂ ಕೇಳದೆ ಹೋದ. ಬುರ್ ಎಂದು ಬೈಕ್ ತಗಂಡು ಒಂದು ಮೂರು ದಿನ ಬಂದ ನೋಡು. ಚೂರು ಚೂರು ಕನ್ನಡ ಮಾತಾಡ್ತಿಯಿದ್ದ. ಹಿಂಗೇ… ಹೋಗ್ತಿ ಹೇಳಿ ಹೋದವ ಕಡಿಗೆಲ್ಲ.. ಬೈನ್ನೇ ಇಲ್ಲೆ..’ ಎಂದು ಹೊರಗಡೆ ಕಟ್ಟೆ ಮೇಲೆಕೂತ ಶರಾವತಕ್ಕ, ಎದುರಿಗಿನ ದೊಡ್ಡ ಗುಡ್ಡ ನೋಡುತ್ತ ತಾರಮ್ಮಯ್ಯ ಥರ ಕೈ ಆಡಿಸುತ್ತ ಹೇಳಿದಳು.

ಅವಳ ಮಗನೊಬ್ಬ ತುಂಬ ಚಿಕ್ಕ ವಯಸ್ಸಿನಲ್ಲೇ ಊರು ಬಿಟ್ಟು ಹೋಗಿದ್ದ ಸುದ್ದಿ ಊರಲ್ಲಿದ್ದ ಜೈರಾಮನವರೆಗೂ ತಲುಪಿತ್ತು. ಅದಕ್ಕಾಗಿ ಭಟ್ರ ದಂಪತಿ ಹುಡುಕದ ಊರಿಲ್ಲ, ಕೇಳಿಸದ ಜ್ಯೋತಿಷ್ಯವಿಲ್ಲ. ಯಾರಬಳಿ ಕೇಳಿದರೂ ಅವ ಬರುತ್ತಾನೆ, ಬದುಕಿಯೇ ಇದ್ದಾನೆ ಎಂಬ ಉತ್ತರ ಬರುತ್ತಿತ್ತು. ಆದರೆ ಅವ ಹೋಗಿ ಹೆಚ್ಚೂಕಮ್ಮಿ 18 ವರ್ಷಗಳೇ ಆಗಿ, ಈಗವನ ಆಸೆಯನ್ನೂ ಬಿಟ್ಟಿದ್ದರು. ಅವನನ್ನು ನೆನೆನೆದು ಕಣ್ಣೀರು ಹಾಕದ ದಿನವೇ ಇಲ್ಲ. ಅದೇ ಕೊರಗಿನಲ್ಲೇ ಭಟ್ಟರು ತೀರಿಕೊಂಡರು. ಒಮ್ಮೊಮ್ಮೆ ಅವಳಿಗನಿಸಿದ್ದೂ ಇದೆ, ಅವ ಓಡಿ ಹೋದದ್ದೇ ಹೌದಾ ಅಥವಾ ಯಾರಾದರೂ ಅವನನ್ನು ಎತ್ತಿಕೊಂಡು ಹೋಗಿರಬಹುದಾ ಎಂದು? ಮೊದಲಿನಿಂದಲೂ ಟೂರಿಸ್ಟ್ ಪ್ಲೇಸ್ ಅದು. ದೇವಸ್ಥಾನಕ್ಕೆ ಬಂದವರು, ಇವರ ಮನೆಯ ಕೆಳಗಡೆ ಬಂದು ಸಮುದ್ರದಲ್ಲಿ ಆಟವಾಡಿಕೊಂಡು ಹೋಗುವುದು ವಾಡಿಕೆ. ಅವತ್ತೂ ಹಾಗೆಯೇ. ಶರಾವತಕ್ಕ ಎಂದಿನಂತೆ ಕೆಲಸದಲ್ಲಿರುವಾಗಲೇ… ಆಟವಾಡಲು ಹೋದ, ಇನ್ನೂ 5-6 ವರ್ಷವೂ ಮೆಟ್ಟದ ಪುಟ್ಟ ಹುಡುಗ ಮಧ್ಯಾಹ್ನವಾದರೂ ಮನೆಗೆ ಬರದಿದ್ದಾಗ ಆತಂಕವಾಯಿತು. ದೇವಸ್ಥಾನ ಪೂಜೆ ಮುಗಿಸಿ ಬಂದ ಭಟ್ರೂ, ಹುಡುಕಿದರೂ ಅವ ಸಿಗಲೇ ಇಲ್ಲ. ಅದನ್ನೇ ನೆನೆದು ಶರಾವತಕ್ಕ ಈ ಸಮುದ್ರದ ಅಲೆಗಳ ಥರವೇ ಕಣ್ಣೀರು ಹಾಕುತ್ತಿದ್ದರೆ, ಇದೇ ಕೊರಗಲ್ಲೇ ಭಟ್ರು ಅಸುನೀಗಿದರು.

ನಂತರ ದೊಡ್ಡ ಮಗ ಶಂಭೂ ಭಟ್ಟ ಕೈಗೆ ಬಂದು, ಅದೂ ಇದೂ ಮಾಡಿ, ದೇವಸ್ಥಾನದ ಪೂಜೆಯನ್ನೂ ಮಾಡುತ್ತಿದ್ದರೂ ಅದರಲ್ಲೇನೂ ಅಂಥ ವರಮಾನವಿರಲಿಲ್ಲ. ಅಲ್ಲೇ ಬೋಟ್ ಬ್ಯುಸಿನೆಸ್ ಶುರುಮಾಡಿದ್ದವರೊಂದಿಗೆ ಸೇರಿಕೊಂಡು, ದೇವಸ್ಥಾನಕ್ಕೆ ಬಂದ ಭಕ್ತಾದಿಗಳನ್ನೆಲ್ಲ ಅಲ್ಲಿಗೆ ಕರೆದುಕೊಂಡು ಹೋಗುತ್ತಿದ್ದ. ಪ್ರವಾಸಿಗರನ್ನು ಬೋಟ್ ನಲ್ಲಿ ಸಮುದ್ರವನ್ನು ಸುತ್ತಾಡಿಸಿ ಬರುವುದು ಅವನ ಡ್ಯೂಟಿಯಾಗಿತ್ತು. ಹಾಗಂತ ಅದು ಅಪಾಯದ ಜಾಗವಾಗಿತ್ತು.

ಇಲ್ಲಿ ಸಮುದ್ರಕ್ಕೆ ಇಳಿಯಬೇಡಿ, ಅಪಾಯದ ಸ್ಥಳವೆಂದೂ ಬೋರ್ಡ್ ಇತ್ತು. ಆದರೂ ಅದೇ ಜಾಗದಲ್ಲೇ ಅವ ಅದನ್ನು ಪ್ರಾರಂಭಿಸಲೊಂದು ಕಾರಣವಿತ್ತು. ಒಂದು ದಿವಸ ಒಂದಷ್ಟು ವಿದೇಶಿಗರು ಅಲ್ಲಿಗೆ ಬಂದಿದ್ದರು. ಬರುವಾಗಲೇ ಬುರ್ ಎಂದು ಬೈಕ್ ಓಡಿಸಿಕೊಂಡು ಕೇಕೆ ಹಾಕುತ್ತ ಬಂದಿದ್ದರು. ಪ್ರಾಯಕ್ಕೆ ಬಂದ ಹುಡುಗ-ಹುಡುಗಿಯರವರು. ಬೈಕ್ ಗಳನ್ನು ಇವರ ಮನೆ ಎದುರೇ ನಿಲ್ಲಿಸಿ, ಬಳಿಯಲ್ಲೇ ಇದ್ದ ಬೋಟ್ ಹತ್ರ ಬರುತ್ತಿದ್ದರು. ಒಂದು ಸುತ್ತು ಬೋಟಲ್ಲಿ ಹೋಗಿ ಬಂದರೂ ಮತ್ತೆ ಈಜಲು ಹೋಗುತ್ತಿದ್ದರು. ಅವರನ್ನು ನೋಡಿ ಇವನೂ ಹೋಗಿ ಈಜುತ್ತಿದ್ದರೆ ಅಲ್ಲಿರುವವರೆಲ್ಲೂ ಜೋರಾಗಿ ಕೂಗುತ್ತಿದ್ದರು. ಹೀಗೆ ಅವನಿಗೆ ಅಪಾಯದ ಸ್ಥಳದಲ್ಲಿ ಈಜುವುದು ಮತ್ತು ಬೇರೆಯವರನ್ನು ಈಜಿಸುವುದು ಒಂದು ಚಟವಾಗಿ, ಕಲೆಯಾಗಿ, ಅಲ್ಲಿಗೆ ಬರುವವರನ್ನೆಲ್ಲ ನಿಧಾನಕ್ಕೆ ಬೈಕ್ ಮೇಲೆ ಅಲ್ಲಿಗೆ ಕರೆದುಕೊಂಡು ಹೋಗಲು ಶುರುಮಾಡಿದ. ಹಾಗೆ ಕರೆದುಕೊಂಡು ಹೋದಮೇಲೆ ಇವನ ಕೈಗೆ ಒಂದಷ್ಟು ದುಡ್ಡೂ ಕೊಟ್ಟು ಹೋಗುತ್ತಿದ್ದರು. ಇವನಿಗೆ ಇದು ಹವ್ಯಾಸ, ವೃತ್ತಿ – ಪ್ರವೃತ್ತಿ ಎರಡೂ ಆಗಿ ಇದರಿಂದಲೇ ಒಂದಷ್ಟು ದುಡ್ಡು ಬರತೊಡಗಿತು. ಬರಬರುತ್ತಾ ಮಗನ ಕೈಯ್ಯಲ್ಲಿರುವ ದುಡ್ಡು ಶರಾವತಿಗೂ ತಿಳಿಯತೊಡಗಿತು. ಶರಾವತಕ್ಕನಿಗೆ ಅದುವರೆಗೆ ಉಡಲೊಂದು ಒಳ್ಳೆಯ ಸೀರೆಯೂ ಇರದೆ, ಊರು ಬಿಟ್ಟು ಬರುವಾಗಲೂ ಅರೆ ಹೊಟ್ಟೆ ಉಂಡು, ಊರವರ ಮುಂದೆ ಅವಮಾನ ಪಟ್ಟೂಪಟ್ಟೂ, ಇದ್ದ ಇಬ್ಬರು ಮಕ್ಕಳನ್ನು ಕಟ್ಟಿಕೊಂಡು ಪಡಬಾರದ ಕಷ್ಟ ಅನುಭವಿಸಿ, ಇಲ್ಲಿಗೆ ಬಂದು, ತಮ್ಮದೇ ಆ ಪ್ರತ್ಯೇಕ ಸಂಸಾರ ಹೂಡಿದ ಮೇಲಾದರೂ ಎಲ್ಲವೂ ಸರಿಹೋದೀತೆಂದೆಣಿಸಿದರೆ ಅದೂ ಆಗದೆ, ಅದೇ ಬಡತನದಲ್ಲೇ ಕಾಲ ನೂಕುತ್ತಿದ್ದವಳಿಗೆ ಮಗನಿಗೆ ಸಿಗುತ್ತಿದ್ದ ಈ ವರಮಾನ ಅವಳಿಗೂ ಒಂಥರದ ಬಿಡುಗಡೆ ಸಿಕ್ಕಂತೆನಿಸುತ್ತಿತ್ತು. ಹಾಗಾಗಿ ಮಗನ ಯಾವ ವ್ಯವಹಾರಕ್ಕೂ ಅಡ್ಡಿಬಂದವಳಲ್ಲ.

ಹೀಗೆ ಅಮ್ಮ-ಮಗ ಇಬ್ಬರೂ ಸೇರಿ ಈ ವ್ಯವಹಾರ ಮಾಡತೊಡಗಿ ಒಂದಷ್ಟು ಕಾಸು ಓಡಾಡತೊಡಗಿತು. ಆಗಲೇ ಅದುವರೆಗೆ ಒಣಗಿ ಕಟ್ಟಿಗೆಯಂತಿದ್ದ ಶರಾವತಿ ಮೈ ಕೈ ತುಂಬಿಕೊಂಡು ಚೆಂದ ಕಾಣಿಸತೊಡಗಿದಳು. ಮೈಮೇಲೆ ಒಂದಷ್ಟು ಬಂಗಾರ, ದುಬಾರಿ ಬೆಲೆಯ ಸೀರೆ, ಮಗ ಕಾರು ತಗೊಂಡಿದ್ದಲ್ಲದೆ, ಎದುರಿಗೇ ಒಂದು ದೊಡ್ಡದಾದ ಮನೆಯನ್ನೂ ಕಟ್ಟಿಸತೊಡಗಿದ್ದು, ಊರವರ ಕೆಂಗಣ್ಣಿಗೆ ಗುರಿಯಾಗಿ, ಇದು ಪೊಲೀಸರವರೆಗೂ ತಲುಪುವುದು ಕಷ್ಟವೇನಾಗಲಿಲ್ಲ. ಒಂದು ದಿವಸ ಅವರೂ ಬಂದು, “ಇಂಥ ಅಪಾಯದ ಸ್ಥಳದಲ್ಲಿ ನೀವು ಪ್ರವಾಸಿಗರನ್ನು ನೀರಿಗೆ ಇಳಿಸುತ್ತೀರಿ, ಅವರನ್ನು ಈಜಲು ಬಿಡುತ್ತೀರಿ ಎಂದೆಲ್ಲ ಸುದ್ದಿ ಬಂದಿದೆ ನಮಗೆ” ಎಂದೆಲ್ಲ ಜೋರುಮಾಡಿದರು. ಅದಕ್ಕೆ ಶಂಭು ಭಟ್ಟ ‘ದೇವಸ್ಥಾನದ ಪೂಜೆ ಮಾಡುವವನಿಗೆ ಇವೆಲ್ಲ ಯಾಕೆ ಸಾಹೇಬ್ರೇ.. ಆ ಉಮಾಮಹೇಶ್ವರ ಮೆಚ್ತಾನಾ’ ಎಂದು ಕೇಳಿ, ಅವರ ಹೆಸರಲ್ಲೊಂದು ಪೂಜೆ ಮಾಡಿ, ಅವರಿಗೆ ತೀರ್ಥ ಪ್ರಸಾದ ಕೊಟ್ಟು ಕಳುಹಿಸಿಬಿಟ್ಟ.

ಹೀಗೆ ಈ ನಾಲ್ವರದ್ದೂ ಒಂದೊಂದು ಯೋಚನೆಯಾಗಿ ಒಬ್ಬರೂ ಮಾತನಾಡದೆ ಆಗಷ್ಟೇ ವರ್ಷಾಂತಿಕವನ್ನೂ ಮುಗಿಸಿ ಸುಮ್ಮನೆ ಮನಬಂದಂತೆ ಸಾಗುತ್ತಿದ್ದರು. ಅವರು ನಡೆಯುವುದನ್ನು ನೋಡಿದರೆ ಯಾರೋ ಅವರನ್ನು ನಡೆಸುತ್ತಿದ್ದಾರೇನೋ ಎಂಬಂತಿತ್ತು, ಎದುರಿಗೇನಿದೆ, ಏನು ಬರುತ್ತದೆ ಎಂಬುದು ಅವರಿಗೆ ಗೊತ್ತಾಗದವರ ಹಾಗೆ ನಡೆಯುತ್ತಿದ್ದರು.

‘ಯಾರ್ಯಾರೋ ಎಂಗಳ ಮೇಲೆ ಹೊಟ್ಟೆಕಿಚ್ಚಿಗೆ ದೂರು ಕೊಟ್ಟವೂ ಇದ್ದ. ಆದರೆ ನಿಂಗಕ್ಕೇ ಗೊತ್ತಿದ್ದಲಿ, ಎಂಗ ಎಷ್ಟು ಕಷ್ಟಪಟ್ಟಿದ್ಯ ಹೇಳಿ’ ಎಂದು ಶರಾವತಕ್ಕ ಅನುನಯಿಸುತ್ತ ಹೇಳಿದರೆ ಜಯರಾಮನಿಗೆ ಶಿವರಾಂ ಭಟ್ರ ಬಡತನ, ಮನೆಯಲ್ಲಿ ಊಟಕ್ಕೂ ಗತಿ ಇಲ್ಲದೆ ಈ ಶರಾವತಕ್ಕನನ್ನೂ, ಇದ್ದೊಬ್ಬ ಮಗನನ್ನೂ ಕಟ್ಟಿಕೊಂಡು ರಾತ್ರೋರಾತ್ರಿ ಮನೆಬಿಟ್ಟು ಓಡಿಹೋಗಿದ್ದು ಕಣ್ಣಮುಂದೆ ಬಂತು. ಆಗಿನ ಅವರ ಜೀವನಕ್ಕೂ, ಈಗಿನ ಇವರ ಬದುಕಿನ ರೀತಿಗೂ ಸಾಕಷ್ಟು ವ್ಯತ್ಯಾಸವೇ ಇತ್ತು. ಆ ಸಣ್ಣಕೆ, ಮಾಸಲು ಸೀರೆ ಉಟ್ಟು ಬಡಿಬಡೀಕಿದ್ದ ಆಗಿನ ಶರಾವತಕ್ಕ ಎಲ್ಲಿ, ಮೈಕೈ ತುಂಬಿಕೊಂಡ, ಕೊರಳ ತುಂಬ, ಕೈತುಂಬ ಬಂಗಾರ ಹಾಕಿಕೊಂಡ ಈಗಿನ ಶರಾವತಕ್ಕ ಎಲ್ಲಿ? ಹೀಗೆಲ್ಲ ಜೈರಾಮ ಯೋಚಿಸುತ್ತಿರುವಾಗಲೇ ಎದೆಯೆತ್ತರಕ್ಕೆ ಬೆಳೆದ ಗೌರಿಯ ಮಗನನ್ನು ಶರಾವತಕ್ಕ ನೋಡುತ್ತಿದ್ದುದನ್ನು ಗಮನಿಸಿದ.

‘ಅವನೂ ಹೀಂಗೇ ಇದ್ದಿಯಿದ್ನೆ. ಇಷ್ಟೇ ಎತ್ರ, ಇಷ್ಟೇ ಅಗಲ. ಹೀಂಗೇ, ಕೆಂಪು ಕೆಂಪಗೆ ಇದ್ದಿಯಿದ್ದ. ಗೋಕರ್ಣದಿಂದ ಬಾಡಿಗೆ ಬೈಕ್ ಮಾಡಿಸಗ್ಯಂಡು ಬೈಂದ. ಹೋಗಡ್ದ ತಮಾ ಅಂದಿ, ಕೇಳಿದ್ನಿಲ್ಲೆ. ಬುರ್ ಬುರ್… ಎಂದು ಬೈಕ್ ತಗಂಡು ಹೋಗೇ ಬಿಟ್ಟ. ಕಡಿಗೆಲ್ಲಿ, ಅವನ ಹೆಣವೂ ಸಿಕ್ಕಿದ್ದಿಲ್ಲೆ ಹೇಳಿ..’ ಹೀಗೆ ಕಣ್ಣು ಕಿರಿದುಗೊಳಿಸಿ, ಬಿಳಿ ಹುಬ್ಬನ್ನು ಗಂಟಿಕ್ಕಿ ಶರಾವತಕ್ಕ ಕತೆ ಹೇಳುತ್ತಿದ್ದಳು. ಈ ಕತೆ ಕೇಳುತ್ತ ಕೇಳುತ್ತ ಗೌರಿಯೂ.. ‘ಅಲ್ಲ ಶರಾವತಕ್ಕ, ನಿನ್ನ ಮತ್ತೊಬ್ಬ ಮಗ ಸಣ್ಣಕಿಪ್ಪಕಾರೇ ಮನೆ ಬಿಟ್ಟಿಕ್ಕೆ ಹೋದವನಲೇ… ಅವನ ಸುದ್ದಿ ಎಂತಾದ್ರೂ ಗೊತ್ತಾತನೇ, ಎಲ್ಲಿದ್ನಡ ಹೇಳೇನಾದ್ರೂ…’ ಎಂದು ಕೇಳಿದಳು. ಹಾಗೆ ಕೇಳಿದ ತಕ್ಷಣ ಶರಾವತಕ್ಕನ ಮುಖ ಬಿರುಸಾಯಿತು. ‘ಅವನ ಬಗ್ಗೆ ಹೇಳಿ ಸುಖ ಇಲ್ಲೆ ಬಿಡು…’ ಎಂದಳು ಚುಟುಕಾಗಿ. ಮತ್ತೆ ಸಮುದ್ರದಲ್ಲಿ ಹೋದವನ ಕತೆ ಹೇಳತೊಡಗಿದಳು. ಅವಕ್ಕೆ ಒಬ್ಬವನೇ ಮಗನಡ. ಕಾಲೇಜಿಗೆ ರಜೆ ಹೇಳಿ ಬಂದವ. ಇಲ್ಲೆಲ್ಲ ಸುತ್ತಾಡಿಕ್ಯಂಡು ಹೋಪಲೆ. ಬ್ಯಾಡ್ದೋ ತಮಾ… ಅವನ್ನು ಕರ್ಕಂಡು ಹೋಗಡ್ದೋ… ಹೇಳ್ದಿ ಇವಂಗೂವ. ಈ ಶಂಭುನೂ ಕೇಳಿದ್ನಿಲ್ಲೆ, ಅವನೂ ಕೇಳಿದ್ನಿಲ್ಲೆ. ಇಬ್ರೂ ಹೋದ್ವೆ, ಸಮುದ್ರದಲ್ಲಿ ಈಜಲೆ. ಕಡಿಗೆ ಒಬ್ಬಂವ ಮಾತ್ರ ಬಂದ. ಅವನ ಪತ್ತೆನೇ ಇಲ್ಲೆ. ಪಾಪ. ಇವ… ಅವನನ್ನು ಕರದೂ ಕರದೂ ಇಟ್ನಡ. ಕಡೀಗೆ ಇವಂಗೆ ಹೆದ್ರಿಕ್ಯಾಗಿ ಓಡಿ ಬಂದ..’. ಹೀಗೆ ಶರಾವತಕ್ಕ ಒಂದಾದಮೇಲೊಂದರಂತೆ ಸಮುದ್ರದಲ್ಲಿ ಈಜಲು ಹೋಗಿ ಸತ್ತವರ ಕತೆಗಳನ್ನೇ ಹೇಳುತ್ತಿದ್ದಳು.

ಮೊದಮೊದಲು ಇವರಿಗೂ ತಿಳಿಯಲಿಲ್ಲ. ಅವಳು ಸುಮ್ಮನೆ ಕತೆ ಹೇಳುತ್ತಿದ್ದಾರೆಂದೇ ಭಾವಿಸಿದರು. ಆದರೆ ಇದ್ದಕ್ಕಿದ್ದಹಾಗೇ ಜಯರಾಮನಿಗೆ ಅನುಮಾನ ಬರತೊಡಗಿತು. ಇವಳು ಸಹಜವಾಗಿದ್ದಾಳಾ ಎಂದು. ಕತೆ ಹೇಳುತ್ತ ಹೇಳುತ್ತ ಕಣ್ಣೀರಾಗುತ್ತಿದ್ದಳು, ಒಮ್ಮೊಮ್ಮೆ ರೋಷದಿಂದ ಅವಡುಗಚ್ಚುತ್ತಿದ್ದಳು. ಹೆಚ್ಚೂಕಮ್ಮಿ ಈಗಾಲೇ ಒಂದು ಹತ್ತಾದರೂ ಸತ್ತುಹೋದವರ ಕತೆ ಆಕೆ ಹೇಳಿರಬಹುದು. ಆದರೆ ಆ ಸತ್ತುಹೋದವರೆಲ್ಲ ಗಂಡುಮಕ್ಕಳೇ ಆಗಿದ್ದಿದ್ದು ವಿಚಿತ್ರ ಎನಿಸಿತು. ಅಷ್ಟೊತ್ತಿಗೆ ರಾತ್ರಿಯಾಗುತ್ತ ಬಂದು, ಸೂರ್ಯ ಮುಳುಗಿ, ಸಮುದ್ರವೂ ಕಪ್ಪಾಗಿ, ಅದರ ಅಲೆಗಳು ಒಂದೇ ಸಮನೆ ಬಡಿಯುತ್ತಿದ್ದದು ಆ ಹೊತ್ತಿಗೆ ಇನ್ನೂ ವಿಲಕ್ಷಣವಾಗಿ ತೋರಿತು ಜಯರಾಮನಿಗೆ. ತಾನು ಹುಡುಕಿಕೊಂಡು ಬಂದ ಕೇಶವ ಭಟ್ರ ಪುರೋಹಿತರ ಮನೆ ಇದೇನಾ? ಅವನ ಹೆಂಡತಿ ಶರಾವತಕ್ಕ ಇವಳೇನಾ..? ತಾವೇನಾದರೂ ಬೇರೆ ಮನೆಗೆ ಬಂದುಬಿಟ್ಟೆವಾ? ಈ ಹೆಂಗಸಿನ ಚಿತ್ರ-ವಿಚಿತ್ರ ಕತೆ ಕೇಳುತ್ತ ಕೇಳುತ್ತ ಜಯರಾಮನಲ್ಲಿ ಏನೇನೋ ಸಂಶಯದ ಪ್ರಶ್ನೆಗಳು ಏಳತೊಡಗಿದವು. ಯಾಕೋ ಆ ರಾತ್ರಿ ಅಲ್ಲಿ ವಿಶ್ರಮಿಸಲು ಅವನ ಮನಸ್ಸು ಒಪ್ಪುತ್ತಿಲ್ಲ. ಆದರೆ ತಂಗಿ ಗೌರಿ ಮತ್ತವಳ ಮಕ್ಕಳು ಆರಾಮವಾಗಿ ಕತೆ ಕೇಳುತ್ತಿದ್ದರು. ಮಕ್ಕಳಿಬ್ಬರೂ ಸಮುದ್ರ, ದಟ್ಟ ಮೋಡ, ಅಲೆಗಳು ಬಂದು ಮನೆಯ ಕಲ್ಲುಬಂಡೆಗೆ ಅಪ್ಪಳಿಸುವುದನ್ನು ನೋಡುತ್ತ ಸಂಭ್ರಮಿಸುತ್ತಿದ್ದರು.

ಆ ರಾತ್ರಿ.. ಊಟವಾದ ಮೇಲೆ, ಶರಾವತಕ್ಕ ರುಚಿಕಟ್ಟಾಗಿ ಅಡುಗೆ ಮಾಡಿ ಬಡಿಸಿದ್ದಳು. ಮಗೆಕಾಯಿ ಹುಳಿ, ಹೀರೇಕಾಯಿ ಪಲ್ಯ, ಅಪ್ಪೆಕಾಯಿ ಅಪ್ಪೆಹುಳಿ ಎಲ್ಲವೂ ಆ ಬಿಳೆಹುಲ್ಲಿನ ಮೇಲೆ ಕುಳಿತು ಉಂಡು, ತೇಗಿ ಮಲಗಿದಾಗಲೂ ಇವನಿಗೆ ಏನೇನೋ ಸಂಶಯಗಳು ಕಾಡಿ ನಿದ್ದೆಹತ್ತಲಿಲ್ಲ. ಒಂದು ಕೋಣೆಯಲ್ಲಿ ಗೌರಿ ಮತ್ತವಳ ಮಗಳು ಮಲಗಿದ್ದರೆ, ಇವನು ಮತ್ತು ರವಿ ಮತ್ತು ಶಂಭು ಮೂವರೂ ಜಗುಲಿಯಲ್ಲಿ ಮಲಗಿದ್ದರು. ತುಂಬ ಹೊತ್ತಿನ ತನಕ ಜಯರಾಮನಿಗೆ ನಿದ್ದೆ ಬರಲಿಲ್ಲ. ಹೊರಗೆ ಮಳೆ ಬರುತ್ತಿತ್ತು, ಒಂದು ಮಳೆ ಬಂದು ಸ್ವಲ್ಪ ಶಾಂತವಾಗಿರಬೇಕು. ಹೊರಗಡೆ ಏನೋ ಶಬ್ದವಾದಂತಾಗಿ ನೋಡಿದರೆ ಶರಾವತಕ್ಕ ಹೆಬ್ಬಾಗಿಲ ಕಟ್ಟೆಯ ತುದಿಯಲ್ಲಿ ಒಬ್ಬಳೇ ಕೂತಿದ್ದಳು. ಅವರ ಮನೆಯ ಹೆಬ್ಬಾಗಿಲ ದಾಟಿದರೆ ಸ್ವಲ್ಪ ವಿಶಾಲವಾದ ಕಲ್ಲಿನ ಕಟ್ಟೆ ಇತ್ತು. ತುಸು ಹತ್ತಿರ ಹೋಗಿ ನೋಡಿದ. ಏನನ್ನೋ ನೆಲಕ್ಕೆ ಕುಟ್ಟುತ್ತಿದ್ದಳು. ಏನೆಂದು ನೋಡಿದರೆ ಕೈಲಿದ್ದ ಚಿನ್ನದ ಬಳೆಗಳನ್ನು ತೆಗೆದು ಒಂದೇ ಸಮನೆ ಕುಟ್ಟುತ್ತಿದ್ದಳು. ಅವಳ ಮೈಮೇಲಿದ್ದ ಒಡವೆಗಳೆಲ್ಲ ಅಲ್ಲಿಯೇ ಬಿದ್ದಿದ್ದವು. ಯಾರದ್ದೋ ಮೇಲಿನ ಸಿಟ್ಟಿನಿಂದ ಒಂದೇ ಸಮನೆ ಅವಳು ಕುಟ್ಟಿತ್ತಿದ್ದಂತೆನಿಸಿತ್ತು. ನಕ್ಷತ್ರಗಳ ಬೆಳಕು ಬಿಟ್ಟರೆ ಬೇರೇನೂ ಕಾಣದ ಆ ರಾತ್ರಿ ತುಸುವೇ ಇದ್ದ ಮಂದ ಬೆಳಕು, ಎದುರಿಗೆ ದೈತ್ಯಾಕಾರದ ಗುಡ್ಡ, ಹಿಂದುಗಡೆ ವಿಶಾಲ ಸಮುದ್ರ, ಅಲೆಗಳ ಭೋರ್ಗರೆತ, ಈ ಎಲ್ಲವುಗಳ ನಡುವೆ ಕುಳಿತ ಒಬ್ಬ ಹೆಂಗಸು, ಸಿಟ್ಟಿನಿಂದ ಚಿನ್ನದ ಬಳೆಗಳನ್ನು ನೆಲಕ್ಕೆ ಕುಟ್ಟುವ ಹೆಂಗಸು, ಅವಳನ್ನು ನೋಡಿ ಒಂದು ಕ್ಷಣ ನಡುಗಿ ಹೋದ ಜಯರಾಮ. ತಕ್ಷಣ ಸಾವರಿಸಿಕೊಂಡು ‘ಯಾರದು…’ ಎಂದು ಕೇಳಿದ. ಆ ಧ್ವನಿಗೆ ಸ್ವಲ್ಪ ಬೆದರಿದಂತೆ ಕುಟ್ಟುವುದನ್ನು ನಿಲ್ಲಿಸಿ ನಿಧಾನಕ್ಕೆ ತಿರುಗಿ

‘ಆನೇಯ..ಶರಾವತಿ..’ ಎಂದಳು.. ‘ಅರೆ, ಎಂತ ಇಲ್ಲಿ ಬಂದು ಕೂತಿದ್ಯೇ, ನಿದ್ದೆ ಬೈಂದಿಲ್ಯನೇ…’ ಎಂದು ಕೇಳಿದ್ದಕ್ಕೆ… ‘ಎಲ್ಲಿ ನಿದ್ಯೋ… ಅವೆಲ್ಲ ಹೋದಮ್ಯಾಲೆ, ಇವನೂ ಹೋದಮ್ಯಾಲೆ…’ ಎಂದು ಬಿಕ್ಕುವ ಧ್ವನಿಯಲ್ಲಿ ಹೇಳಿದ್ದು ಆ ಭೋರ್ಗರೆತದ ಶಬ್ದದ ನಡುವೆಯೂ ಜಯರಾಮನಿಗೆ ಕೇಳಿಸಿತು.

‘ಅಂದ್ರೆ… ಎಂತ ಹೇಳತ್ಯೇ ನೀನು…’ ಎಂದು ಸ್ವಲ್ಪ ಉದ್ವೇಗದಿಂದ ಕೇಳಿದ. ಅವಳೇನೋ ಹೇಳುತ್ತಿರುವಂತೆಯೇ ಹಿಂದುಗಡೆ ಶಬ್ದವಾಯಿತು.

ನೋಡಿದರೆ ಶಂಭು ನಿಂತಿದ್ದ, ‘ಇಷ್ಟೊತ್ತ ರಾತ್ರಿಲಿ ಎಂತದೇ ಅಮ್ಮ ನಿಂದು’ ಎಂದು ಜೋರು ಮಾಡಿದ. ಅವನನ್ನು ನೋಡಿದವಳೇ ದಡಕ್ಕನೆ ಎದ್ದು ಒಳಕ್ಕೆ ಹೋಗಿ ಮಲಗಿದಳು ಒಂದೂ ಮಾತನಾಡದೆ.

ಈಗಂತೂ ಜಯರಾಮನಿಗೆ ಇದು ತುಂಬ ವಿಚಿತ್ರವೆನಿಸಿತ್ತು. ಆ ಹೊತ್ತು ಶಂಭು ನಡೆದುಕೊಂಡ ರೀತಿ, ಅವಳನ್ನು ಬೈದ ರೀತಿಯೆಲ್ಲ ಒಬ್ಬ ಮಗ ತಾಯಿಗೆ ಹೇಳುವಂತೆ ಇರಲೇ ಇಲ್ಲ. ಇವನ ಈ ಯೋಚನೆ ಅವನಿಗೂ ಅರಿವಾದಂತೆ ‘ಅದಕ್ಕ ಸ್ವಲ್ಪ ಮಳ್ಳು. ಅಮಾಸಿಗೆ, ಹುಣ್ಣಿಮಿಗೆ ಹೀಂಗೆಲ್ಲ ಆಗ್ತು, ನಿಂಗ ಮಲ್ಕಳಿ…’ ಎಂದು ಹೇಳಿದವನ ಧಾಟಿ ಹೇಗಿತ್ತೆಂದರೆ ಜಯರಾಮನನ್ನು ಅವನ ಮಾತೇ ಎಳೆದು ತರುವಂತೆ ಅನಿಸಿತು. ಹಾಗೆ ಹೋಗಿ ಮಲಗಿದವನಿಗೆ ನಿದ್ರೆ ಯಾವಾಗ ಬಂತೋ… ಅಂತೂ ಬೆಳಗ್ಗೆ ಏಳುವಷ್ಟರಲ್ಲಿ ಸೂರ್ಯ ಉದಯಿಸಿದ್ದ. ಎಂದಿನಂತೆ ಎಲ್ಲರೂ ಕೆಲಸದಲ್ಲಿ ತೊಡಗಿದ್ದರು. ಶಂಭು ಬೆಳಗ್ಗೆಯೇ ಸ್ನಾನ ಮಾಡಿ ದೇವರ ಪೂಜೆಗೆ ದೇವಸ್ಥಾನಕ್ಕೆ ಹೋಗಿದ್ದ. ಶರಾವತಕ್ಕ ತಿಂಡಿ ಮಾಡುತ್ತಿದ್ದಳು. ಮಕ್ಕಳಿಬ್ಬರೂ ಸಮುದ್ರದ ಬಳಿ ಹೊರಟಿದ್ದರು. ಅವರು ಅಲ್ಲಿಗೆ ಹೋಗುತ್ತಿದ್ದಾರೆಂದು ತಿಳಿದೇ ದೋಸೆ ಮಾಡುತ್ತಿದ್ದ ಶರಾವತಕ್ಕ ಓಡಿಬಂದು ತಡೆದು, ‘ನಿಂಗ ಅಲ್ಲಿ ಹೋಗಡಿ ಹುಡುಗ್ರಾ… ವಾಪಾಸು ಬತ್ರಿಲ್ಲೆ ಅಲ್ಲಿಗೆ ಹೋದ್ರೆ…’ ಎಂದು ಚಿಕ್ಕ ಮಕ್ಕಳನ್ನು ಎಳೆದು ತರುವಂತೆ ಕೈ ಹಿಡಿದು ದರದನೆ ಎಳೆದುಕೊಂಡು ಬಂದು ಬಿಟ್ಟಳು. ಬಂದವಳೇ ನಿಂಗಕ್ಕೆಂತ ಮಳ್ಳಾ ಅಲ್ಲಿಗೆ ಹೋಪ್ಲೆ… ಎನ್ನ ಮಗೊಬ್ಬವ ಎಲ್ಲಿಗ್ಹೋದ್ನೋ ಎಂತದೋ…’ ಎಂದು ಹೇಳಿದಳು.

ಅವಳ ಮನಃಪಟಲದಲ್ಲಿ ಎರಡು ಘಟನೆ ಸದಾ ಕೊರೆಯುತ್ತಲೇ ಇರುತ್ತದೆ. ಒಂದು ಓಡಿ ಹೋದವನು ಮತ್ತೊಂದು ಓಡಿ ಬಂದು ಈಜಲು ಹೋದವ ಬಾರದವನು. ಓಡಿ ಹೋದವನು.. ಓಡಿಯೇ ಹೋಗಿರಬಹುದಾ, ಮತ್ತೇನಾದರೂ ಆಗಿರಬಹುದಾ ಅವಳಿಗೆ ಗೊತ್ತಿಲ್ಲ. ಒಂದು ದಿನ ಬೆಳಗ್ಗೆ ಮನೆಯೆದುರು ಆಟ ಆಡುತ್ತಿದ್ದವ ನಾಪತ್ತೆಯಾಗಿದ್ದ. ಸಮುದ್ರ ತಟದಲ್ಲಿರಬಹುದಾ ಎಂದು ಹುಡುಕಿದಳು ಶರಾವತಕ್ಕ. ಎಲ್ಲಕಡೆಯೂ ನೋಡಿ, ಕೂಗಿ ಕೂಗಿ ಗಂಟಲು ಹರಿದು ಹೋಗುವಷ್ಟು ಕೂಗಿದರೂ ಅವನ ಸುಳಿವಿಲ್ಲ. ಸಮುದ್ರದ ಅಲೆಗಳ ಹೊಡೆತದ ಭೋರ್ಗರೆತದ ಶಬ್ದಕ್ಕೆ ಇವಳ ಕೂಗು ಕ್ಷೀಣವಾಗುತ್ತಿತ್ತು.

ಆದರೆ ಅವತ್ತು ಬಂದ ಕೆಂಪು ಮುಖದವನನ್ನೂ ಮರೆಯಲಾರಳು. ಅದೆಷ್ಟು ಚೆಂದವಿದ್ದ. ಅದೆಷ್ಟು ಎತ್ತರವಿದ್ದ. ಬಂದವನೇ ವಿದೇಶಿಯನಾದರೂ ಕಾಲಿಗೆರಗಿದ. ಅವ ಹೋದಮೇಲೆ ಗೋಕರ್ಣದ ಭಟ್ರೊಬ್ಬರು ಬಂದು ಕಡಿಗೆ ಶರಾವತಕ್ಕ, ಮಗ ಬಂದ್ಹಾಂಗಿತ್ತು… ಎಂದು ಕೇಳಿದ್ದು ಶರಾವತಕ್ಕನಿಗೆ ಸಿಡಿಲು ಬಡಿದಂತಾಗಿತ್ತು. ಅದುವರೆಗೆ ಅವಳಿಗಿದ್ದ ಒಡವೆ, ವಸ್ತ್ರ, ಕಾರು, ಎದುರಿಗೆ ತಲೆ ಎತ್ತುತ್ತಿದ್ದ ಅರಮನೆಯಂಥ ಬಂಗಲೆ ಎಲ್ಲವೂ ಅವಳೆದುರಿಗೆ ಕೂತು ಹಂಗಿಸುತ್ತಿದ್ದಂತೆನಿಸುತ್ತಿತ್ತು. ಅಲ್ಲಿಂದಲೇ ಅವಳು ಒಡವೆಗಳನ್ನೆಲ್ಲ ಎತ್ತಿಎತ್ತಿ ಒಗೆಯುತ್ತಿದ್ದಳು. ಆದರೆ ಶಂಭು… ಸುಮ್ಮಂಗಿರೇ ಅಮಾ, ಅವೆಲ್ಲಿಂದ ಬತ್ತ, ಈ ಭಟ್ರಿಗೆಂತದೋ ಮಳ್ಳು.. ಹೇಳತ್ರು ಹೇಳಿ ನೀನೂ ನಂಬಕ್ಯತ್ಯಲೇ. ಅವ ಬಪ್ಪದಾಗಿದ್ದಿಯಿದ್ರೆ ಇಷ್ಟೆಲ್ಲ ದಿವಸ ಬೇಕಾಗಿತ್ತಾ…’ ಎಂದು ಸಮಾಧಾನಿಸಿದ. ಈಗವಳು ಹೋದವ.. ಬಂದವ… ಎಂದು ಹಲುಬುತ್ತಾ ಇದ್ದವಳು ಒಮ್ಮೊಮ್ಮೆ ಏನೇನೋ ಮಾತನಾಡಿಬಿಡುತ್ತಿದ್ದಳು.

ಒಂದಂತೂ ಪಕ್ಕಾ ಆಗಿತ್ತು ಜೈರಾಮನಿಗೆ, ಈ ಶರಾವತಕ್ಕ ಏನೋ ಮುಚ್ಚಿಡುತ್ತಿದ್ದಾಳೆಂದು. ಹಾಗೆಯೇ ಈ ಶಂಭು ಭಟ್ಟನಿಗೂ ದೇವಸ್ಥಾನದಿಂದ ಬರೋ ವರಮಾನದಿಂದ ಇವೆಲ್ಲ ಖಂಡಿತ ಸಾಧ್ಯವಿಲ್ಲ, ಈಜಲು ಬರುವ ಪ್ರವಾಸಿಗರು ಕೊಡುವ ಹಣದಿಂದಲೂ ಇಷ್ಟು ವರಮಾನ ಸಾಧ್ಯವಿಲ್ಲ ಎಂದು. ಆದರೆ ಇವೆಲ್ಲ ಹೇಗೆ ಸಾಧ್ಯವಾಯಿತು?

ಹೀಗೆಲ್ಲ ಅಂದುಕೊಳ್ಳುವ ಹೊತ್ತಿಗೆ ಶಂಭು ಭಟ್ಟನಿಗೆ ಏನೆನಿಸಿತೋ… ದೇವಸ್ಥಾನದ ಪೂಜೆಗೆ ಹೋದವನು ಸೀದಾ ಬಂದವನು, “ಗೋಕರ್ಣದಿಂದ ಇಲ್ಲಿಗೆ ಬಪ್ಪದಾದರೆ ಬೈಕ್ ಮೇಲೇ ಬರವು. ಬ್ಯಾರೆ ಯಾವುದೇ ವಾಹನ ಇಲ್ಲಿಗೆ ಬತ್ತಿಲ್ಲೆ. ನಿಂಗನೆಡ್ಕಂಡು ಹೋಪದಾದ್ರೆ ಈಗ್ಲೇ ಹೊರಟುಬಿಡಿ, ಇಲ್ದಿದ್ರೆ ತಡ ಆಗ್ಹೋಗ್ತು” ಎಂದ. ಅವ ಹೇಳಿದ್ದು ಹೇಗಿತ್ತೆಂದರೆ ಇನ್ನು ನೀವು ಹೊರಡಿ ಸಾಕು ಇಲ್ಲಿಂದ ಎನ್ನುವಂತಿತ್ತು. ಬಹುಶಃ ಇವರು ಇನ್ನೂ ಹೆಚ್ಚಿಗೆ ಹೊತ್ತು ಇದ್ದರೆ ಅಮ್ಮ ಏನಾದರೂ ಬಾಯಿಬಿಟ್ಟಾಳು ಎಂಬ ಹೆದರಿಕೆ ಅವನನ್ನು ಕಾಡುತ್ತಿದ್ದಂತೆನಿಸುತ್ತಿತ್ತು.

ಆದರೆ ಅವತ್ತು ಬೆಳಗ್ಗೆ ಬೇಗ ತಿಂಡಿ ತಿಂದು ಹೊರಡುವ ಹೊತ್ತಲ್ಲಿ, ಶರಾವತಕ್ಕ ಅಡುಗೆ ಮನೆಯಲ್ಲಿ ಜೈರಾಮನನ್ನು ಕರೆದು ಗುಟ್ಟಾಗಿ, “ಜೈರಾಮಾ.. ಆನೂ ನಿಂಗ್ಲ ಜೊತಿಗೆ ಬಂದುಬಿಡ್ಲನಾ” ಎಂದು ಕೇಳಿ ಆಶ್ಚರ್ಯ ಹುಟ್ಟಿಸಿದಳು. ತಕ್ಷಣ “ಆ ಬಂದ್ರೆ ಅಲ್ಯಾರಿದ್ದ ಬಿಡಾ… ಇಲ್ಲೇ ಸಾಯ್ತಿ ಈ ಸಾವು ನೋಡಕ್ಯತ್ತ, ನಿಂಗ ಹೊರಡಿ..” ಎಂದಳು.

ಮತ್ತೆ ಮೋಡ ಕವಿದು ಇನ್ನೇನು ಮಳೆ ಬರಬಹುದೆಂಬ ವಾತಾವರಣವಿತ್ತು. ಮತ್ತೆ ಅದೇ ಗುಡ್ಡ ಹತ್ತಿ, ಇಳಿದು ಗೋಕರ್ಣಕ್ಕೆ ಹೋಗುವವರು ಅವರು. ಎಲ್ಲರೂ ಭಾರವಾದ ಹೃದಯದಿಂದ ಬೆಟ್ಟ ಏರತೊಡಗಿದರು. ನಿನ್ನೆ ಇಳಿದ ಬೆಟ್ಟವನ್ನು ಇಂದು ಹತ್ತುತ್ತಿದ್ದರು, ಅದೇ ಹಸಿರು, ಅದೇ ಕುಳಿರ್ಗಾಳಿ, ಅದೇ ಸುಂದರ ವಾತಾವರಣ. ಆದರೆ ನೋಡುವ ಮನಸ್ಸು ಈಗಲೂ ಅವರಿಗಿರಲಿಲ್ಲ. ಹೊರಡುವ ಕೊನೇ ಘಳಿಗೆಯಲ್ಲಿ ತಾನೂ ಬರುತ್ತೇನೆಂದ ಶರಾವತಕ್ಕನ ಮಾತೇ ಕೊರೆಯುತ್ತಿತ್ತು ಜೈರಾಮನಿಗೆ.

ಹಾಗಿದ್ದರೆ ಈ ಶರಾವತಕ್ಕ ಹೇಳಿದ್ದು ಯಾರ ಕತೆ? ಅಂದರೆ… ಅಂದರೆ… ಅಲ್ಲಿ ಹೋದದ್ದು… ಯಾರು? ಅವತ್ತು ಬಂದು ಸಿಕ್ಕಾಪಟ್ಟೆ ಮಾತನಾಡಿ ಪ್ರೀತಿಯ ಮಳೆ ಹರಿಸಿ ಹೋದವ ಯಾರು? ಹೀಗೆ ಪ್ರಶ್ನೆಕೇಳಿಕೊಳ್ಳುತ್ತಲೇ ಬೆಟ್ಟ ಹತ್ತತೊಡಗಿದ ಜಯರಾಮನಿಗೆ ಆ ಹೊರಡುವ ಮೊದಲು ಶಂಭು ತಮ್ಮನ್ನು ಹೊರಡಿಸಲು ಅವಸರಿಸಿದ್ದು, ಶರಾವತಕ್ಕ ಹೇಳಿದ್ದು, ನೆನಪಾಗಿ ತಕ್ಷಣ ಈ ಶಂಭು ಎಂಬುವನು ಯಾರು? ಇವನು ನಿಜಕ್ಕೂ ಶರಾವತಕ್ಕನ ಮಗನೇನಾ? ಅವನೂ ಹೋದ, ಇವನೂ ಹೋದ ಎಂದ ಶರಾವತಕ್ಕನ ಮಾತುಗಳು ಏನೇನೋ ಧ್ವನಿಸಿದಂತೆನಿಸಿತು.

“ಪಾಪ, ಶರಾವತಕ್ಕ ಮಗ ಓಡಿ ಹೋಗಿದ್ದನ್ನು ಒಪ್ಪಗ್ಯಂಬ್ಲೇ ಆಗ್ತಿಲ್ಲೆ ಅವಳಿಗೆ, ಅಲ್ಲಿಪ್ಪಲೆ ಬೇಜಾರು ಕಾಣಿಸ್ತು” ಎಂದು ಗೌರಿ ಲೊಚಗುಟ್ಟಿದ್ದು ಗಾಳಿಯಲ್ಲಿ ತೇಲಿಹೋಯಿತು.