ಬೆಳ್ಳಕ್ಕಿ

ಪ್ರಕ್ಷುಬ್ಧ ಕೆರೆದಡದ ಕಣ್ಣೆದುರು
ಒಬ್ಬಂಟಿ ಬೆಳ್ಳಕ್ಕಿ
ಕೆಸರಡಿಯ ಕಾಲಿನ ಚಿತ್ತಾರ
ಬೆಳ್ಳನೆಯ ರೆಕ್ಕೆಗಳ ಕೈಮುಗಿದು
ಉಗುರು ಬೇಡಿಕೊಳ್ಳುವ ಪೋರ ಪೋರಿಯರ ನೀರಾಟ ನೋಡುತ್ತ ಧ್ಯಾನಕ್ಕೆ ಕುಳಿತ ಬೆಳ್ಳಕ್ಕಿ

ತಪ್ಪನೆ ತೋಯಿಸಿಕೊಂಡ ಮಣ್ಣ ಮೈಯ್ಯನೆ ನೋಡುತ್ತ ತದೇಕಗೊಂಡ ಬೆಳ್ಳಕ್ಕಿ
ಹೊತ್ತುಮುಳುವ ಕಾಲಕೆ ಆಗಸದ ತುಂಬೆಲ್ಲ ರಕ್ತ ಸಿಂಪಡಿಸುವ ಸೂರ್ಯನಿಗೆ
ಬೆರಗಾಗಿ ಹೆಜ್ಜೆ ಕೀಳುವ ಬೆಳ್ಳಕ್ಕಿ

ಒಳಸುಳಿಯ ತಿರುವಿನಲಿ
ಕೊರಗಿ ಕೊರಗಿ ದಡ ಸೇರುವ
ತೆರೆಗಳಲಿ ಕಾಲುಗಳ ತೊಳೆದುಕೊಂಡು
ಮನೆ ಸೇರುವ ಬೆಳ್ಳಕ್ಕಿ

ಹೇ ವೀರನಾರಾಯಣಾ
ನಿನ್ನುಸಿರ ಉಂಡು ಬಂದೆ
ಬೆಳ್ಳಕ್ಕಿಯ ಸೂರು ಹಿಡಿದು ಗೂಡು ಸೇರಿಕೊಂಡೆ
ಹಸಿವು ಹಿಂಗಲಿಲ್ಲ
ನಿನ್ನ ಗದ್ದುಗೆಗೆ ದಾರಿ ಹುಡುಕುತ್ತಾ ಪೋರ ಪೋರಿಯರ
ವೇಷತೊಟ್ಟುಕೊಳ್ಳುತಿದೆ
ಬೆಳ್ಳನೆಯ ಬೆಳ್ಳಕ್ಕಿ

ಭುವನಾ ಹಿರೇಮಠ ಯುವ ಕವಯತ್ರಿ
ಬೆಳಗಾವಿ ಜಿಲ್ಲೆಯವರು
ಸರಕಾರಿ ಪ್ರೌಢಶಾಲೆ ಹಿರೇನಂದಿಹಳ್ಳಿಯಲ್ಲಿ ಗಣಿತ ಶಿಕ್ಷಕಿ