ಅಪ್ಪುಗೆಯ ಧ್ಯಾನದಲ್ಲಿ

ಮೈಗೆ ಮೈ ತಾಕಲಿಲ್ಲ
ಆತ್ಮಗಳ ಸಂಭಾಷಣೆ ಯಾರಿಗೂ ಕೇಳಿಸಲಿಲ್ಲ
ಬಚಾವಾದೆವು,
ಗಾಳಿಯಲ್ಲಿ ಸಂವಾದ ಬೆಚ್ಚಗೆ ಬಚ್ಚಿಡುವುದೆಂದರೆ,
ಎದೆಗೆ ನೀಗದ ವಿಷಯ

ನಮ್ಮಿಬ್ಬರ ಮಧ್ಯೆ ಒಂದು ಝರಿಯೂ ಹರಿದಿಲ್ಲ
ಸೇತುವೆಗಳ ಅಶಾಶ್ವತ ಸ್ವರ್ಗದಲ್ಲಿ ಕೂಡುವ ಮಾತು
ಭೂಮಿಯ ತುಂಬ ಗೂಡುಗಳಲ್ಲಿ
ಸಂಬಂಧಗಳೆಂಬ ಅಲಂಕೃತ
ಸತ್ಯಗಳು.

ಪರಸ್ಪರ ಮುಗುಳುನಗುವೊಂದು ಇಡೀ ಇಹದ ಹಣೆಗೆ ಮುತ್ತಿರಿಸಿದಂತೆ
ಆತ್ಮವ ತಡವಿದರೆ,
ಸಂಜೀವಿನಿಯೊಂದರಲ್ಲಿ
ಜೀವ ಹುಡುಕುವುದೇ…
ಒಂದು ಅಪ್ಪುಗೆಯ ಧ್ಯಾನದಲ್ಲಿ

ಕೂಡುವಿಕೆಯನ್ನು ಆಯ್ಕೆ ಮಾಡುವ ಲೋಕದಲ್ಲಿ
ಕಳೆದುಕೊಂಡವರು ನಾವು,
ಒಂದು ಹೆಸರು
ಒಂದು ಮನೆ
ಒಂದು ಕತೆ,
ಅದೇ ಅಪ್ಪುಗೆಯ ಧ್ಯಾನದಲ್ಲಿ

ಸ್ವರ್ಗದ ಕದ ತೆರೆದಾಗ

ಸ್ವರ್ಗದ ಕದ ತೆರೆದಾಗ
ನಿನ್ನನ್ನೇ ಸೇರಿದೆ
ನೀನು ಸ್ವರ್ಗಕ್ಕೆ ಕಿಚ್ಚು ಹಚ್ಚಿದೆ

ಕಣ್ಣ ಹನಿಗಳಲಿ ಇಣುಕುತ್ತ
ಆಸೆ ತೋರಿಸುವ ಸುಖ
ನಿನ್ನ ಬೆರಳುಗಳಿಗೆ ಹಸ್ತಾಂತರಗೊಂಡು
ಕಣ್ಣ ಮಿಂಚುಹುಳ
ಗಡಿರೇಖೆಗಳ ದಾಟಿ
ಭೂಗೋಳದ ಅಳತೆ ಹೆಚ್ಚಿದಾಗ
ನಿನಗೆ ಜ್ಞಾನೋದಯವಾಯಿತು

ಪಕ್ಕಕ್ಕೆ ಕುಳಿತವರಿಗೆಲ್ಲ
ಎದೆ ಬಿಸಿ ಮಾಡುವ ತಾಕತ್ತಿಲ್ಲ
ನಿನ್ನ ಕಣ್ಣು
ಎದೆಯ ಹರವು
ಸುರಿವ ಮಳೆ
ಕೊರೆವ ಚಳಿ
ಯಾವುದೂ ಮುಖ್ಯವಲ್ಲ
ಆತ್ಮದ ಇರುವಿಕೆಯನ್ನು
ಅಪ್ಪಿಕೊಳ್ಳಬಲ್ಲೆನೆ ಹೊರತು
ಮುಟ್ಟಿ ಮುಟ್ಟಿ ನೋಡಲಾರೆ,
ನಿನ್ನ ಅಸ್ತಿತ್ವಕ್ಕೆ ಹೆದರಿ ಓಡಿಬಿಡುತ್ತಿ.

ಅದೆಷ್ಟು ಬಾರಿ ಮಂಜಿನ ಕೋಣೆಗಳ ಹೊಕ್ಕು
ಚಿಲಕ ಬಿಗಿದುಕೊಂಡಿಲ್ಲ ಹೇಳು ನಾವು?
ಸ್ಪರ್ಶಕ್ಕೆ ಕೈಗಳ ನೆಚ್ಚಿಕೊಂಡವರಲ್ಲ ನಾವು
ಸಾಂಗತ್ಯಕ್ಕೆ ರಾತ್ರಿಗಳ ಖಾತೆ
ತೆರೆಯುವ ಮಾಮೂಲಿ ಜಾತ್ರೆಯಲ್ಲಿ ಕಳೆದುಹೋಗಲಾರೆವು

ಮನಸುಗಳ ಹಬ್ಬಕ್ಕೆ ಅಮವಾಸ್ಯೆಯನ್ನೇ ಹಿಂಬಾಲಿಸಲೇಬೇಕೆಂದಿಲ್ಲ,
ಪುರುಷೋತ್ತಮನಾಗಬೇಡ
ಮಡಿ ಮೈಲಿಗೆಯೆಂಬುದು
ಮೂರು ದಿನಗಳ ಸಂತೆ
ಮುಂಬರುವ ಜನ್ಮಗಳ
ವೇಳಾಪಟ್ಟಿ ತಿಳಿಯದೆ ಕಾಯುತ್ತಾ ನಿಂತ ನಿಲ್ದಾಣಕ್ಕೆ
ಮೇಲ್ಛಾವಣಿಯೇ ಇಲ್ಲ
ಬಂದುಬಿಡು ಒಮ್ಮೆ

ಭುವನಾ ಹಿರೇಮಠ ಯುವ ಕವಯತ್ರಿ
ಬೆಳಗಾವಿ ಜಿಲ್ಲೆಯವರು
ಸರಕಾರಿ ಪ್ರೌಢಶಾಲೆ ಹಿರೇನಂದಿಹಳ್ಳಿಯಲ್ಲಿ ಗಣಿತ ಶಿಕ್ಷಕಿ

 

(ಇಲ್ಲಸ್ಟ್ರೇಷನ್ ಕಲೆ:ರೂಪಶ್ರೀ ಕಲ್ಲಿಗನೂರ್)