ಭೂಮಿಗೆ ನೆಗಡಿಯಾಗಿದೆ

ಹಠಾತ್ ಸುರಿದ ಮಳೆಗೆ
ಭೂಮಿತಾಯಿಯ ನೆತ್ತಿ ತೊಯ್ದು, ಸೀರೆ ನೆನೆದು ಒದ್ದೆಯಾಯಿತು
ಮುಖ ಮೂಗು ಮೂಗುತಿ ದಾಟಿ ತುಟಿಯಂಚು ಸವರಿ ಗದ್ದೆಯ ಹಾಳೆ ತುಂಬಿ ತುಳುಕಿ
ಬೆಳೆದು ನಿಂತ ಭತ್ತ ಪೈರು ತೆನೆಸಾಲು ಎಲ್ಲಾ ನೀರೇ‌ ನೀರು

ದಟ್ಟನೆ ಕಾನನ ಮೈತುಂಬಿ ನಕ್ಕು ಹರಿವ ಹೊಳೆ ಸಾಲು ಎಲ್ಲಕ್ಕೂ ಥಂಡಿ, ಜಗ ನಡುಗುವ ಥಂಡಿಗೆ ಭೂಮಿ ತಾಯಿಗೆ ನೆಗಡಿ

ಮೊಲೆ ಮುಡಿಯ ಕಟ್ಟಿ, ಹಾಸಿ ಹೊದ್ದು ಮಲಗಿ ಮುದ್ದೆಯಾದರೂ, ನೆಗಡಿಯದೆ ದರ್ಬಾರು ಕಾರುಬಾರು
ಬುಗುಡಿ ನೆಗಡಿ ಒಂದಾದ ಸಮಯ
ಭೂಮಿಗೆ ಒಳಗೊಳಗೆ ಬೆಚ್ಚನೆಯ ಜ್ವರ

ಬಗ್ಗದ ಬಾಗದ ನೆಗಡಿಗೆ
ಭೂಮಿತಾಯಿಗೆ ಸುಸ್ತೋ ಸುಸ್ತು
ಬೆಚ್ಚಗೆ ಹೊದ್ದ ದುಪ್ಪಡಿಗೆ ಮೈಯಲ್ಲಾ ಬೆವರು
ಜೊತೆಗೊಂದಿಷ್ಟು ಅವನ ಕಾಳಜಿಯ ಮಾತು ಆರೈಕೆ ಸಂತೈಸುವ ಇನಿದನಿಗೆ
ಮುಗಿಲ ಕಾರುಣ್ಯ
ಕಪ್ಪು ಮೋಡಗಳು ದರ್ಬಾರಿನ ನಂತರ ಇಳೆಗೆ ಮುಗಿಲಿನ ಕಾಳಜಿ
ತಾಯಿ ಮಗುವ ಸೆರಗಿನೊಳಗೆ ಅಪ್ಪಿ ಬೆಚ್ಚಗೆ ಕಾಪಿಟ್ಟಂತೆ
ಗಂಧವತಿಯ ತಬ್ಬಿದ ಮುಗಿಲ ಬಾಹು ಎದೆಯೊಳಗೆ ಬೆಚ್ಚಗಿನ ಪಿಸುದನಿ
ಎಳೆ ಬಿಸಿಲು ಬಯಲ ಗದ್ದೆಯ ಜೊತೆ ಗಾಂಧಾರ ಭಾಷೆಯಲ್ಲಿ
ಪಂಚಮನೋಂಚರವ ಉಲಿದಂತೆ

ಭೂಮಿಗೆ ನವಿರು ಬೆಚ್ಚಗಿನ ಹಿತ
ಎಳೆ ಬಿಸಿಲಿನಂತಹ ಕರುಣೆ
ಭೂಮಿಗೆ ನೆಗಡಿಯಾಗಿದೆ
ಪೈರು ತೆನೆಬಾಗಿ ಒಲವಿಗೆ ತಲೆಬಾಗಿದೆ
ಮುಂಗುರುಳು ಭೂಮಿಯ ಕೆನ್ನೆಯ ಮೇಲೆ ಸವರಿ ಸವರಿ ಸಂತೈಸಿದೆ
ಭೂಮಿಗೆ ನೆಗಡಿಯಾಗಿದೆ
ಇಡೀ ಪೃಥ್ವಿ ತನ್ನನ್ನೆ ನೆನೆದು ಬೆಚ್ಚುತ್ತಾ, ಬೆದರುತ್ತಾ ಮೂಲೆ ಸೇರಿದೆ

ಆಗ ಸುರಿದ ಮಳೆ ಈಗ
ಮತ್ತೆಲ್ಲೋ ಸುರಿದ ಸದ್ದಾಗುತ್ತಿದೆ