ಭೂಮಿಯಾಳದ ಬೇರುಗಳು

ಮನದ ಮೌನದೊಳಗೆ
ವಿಸ್ತಾರದ ಬಿಳಲುಗಳು ಬಿಟ್ಟು
ಪ್ರಾರ್ಥನೆಯು ಶುದ್ದತೆಗೆ ಅಣಿಯಾಗುತ್ತಿದೆ

ಹೊಳೆಯುವ ಗೋಪುರದ ಶಿಖರ
ಚಂದ್ರನನ್ನು ಅಂಟಿಸಿಕೊಂಡ ಗುಂಬಜ್
ತೂಗುವ ಶಿಲುಬೆಯ ನಕ್ಷತ್ರ
ಗೆದ್ದು ಬೀಗಿದ ವಿರಾಗಿಗಳ ತ್ಯಾಗ
ಬೋಧಿಯ ಮಂದಸ್ಮಿತ ಪ್ರೇಮ
ಎಲ್ಲವೂ ಒಂದರೊಳಗೊಂದು
ಸಮ್ಮಿಳಿತದ ಕಾಲದಲ್ಲಿವೆ

ಕಲಿಗಾಲದಲಿ ಕೇಡೆಂಬುದು ಹಾಕುತ್ತಿರುವ ಹೆಜ್ಜೆಗೆ
ನಡೆಯಬಾರದ್ದಲ್ಲ ಎಡೆಬಿಡದೆ ನಡೆಯುತ್ತಿದೆ
ಹುಟ್ಟು ಸಾವಿನ ದಿನಚರಿಯಲ್ಲಿ
ಬಾಲ್ಯ ಯೌವ್ವನ ವೃದ್ಧಾಪ್ಯ
ಒಂದೇ ಕಾಲಚಕ್ರದ
ಸರಳರೇಖೆಗೆ ಬಂದು ಸೇರುತ್ತಿವೆ

ನೋಟದ ಕನ್ನಡಿಗಳು
ಮುಖವನ್ನಷ್ಟೇ ದರ್ಶಿಸುವ ಕಾಲ ಎಂದೋ ಮರೆಯಾಗಿ
ಮೋಡಿಗಾರರ ಮುಖವಾಡಗಳು
ಕಳಚಿ ಬೀಳುತ್ತಿರುವುದು
ಗುಟ್ಟಿನ ವಿಷವೇನಲ್ಲ

ಆಕಾಶಕಾಯದಲ್ಲಿ
ಹಣ್ಣಾದ ಭಾನ್ದೇವಿ
ಲೋಕದ ಉರಿಯ ಧಾವಾಗ್ನಿಲಿ ಬೇಯುತ್ತ ಬಸವಳಿದರೂ
ಇರುಳಿನ ತಂಪಿಗೆ
ಮುದದ ಚಂದಿರನ ಕರೆತಂದು
ಉಳಿಯುವ ನಾಳೆಗೂ ಬೆಳಕನು ಕಾಯ್ದಿರಿಸಿದ್ದಾಳೆ

ಬಯಕೆಯ ತಪದಲ್ಲಿ ಉಸಿರಾದ ಭೂದೇವಿ
ಬಿಳಲಿನಷ್ಟೆ ಬೇರುಗಳ ಚಾಚಿಕೊಳ್ಳುಳ್ತ
ಅಲ್ಲೆ ಬೊಡ್ಡೆಯಲಿ ಚಿಗುರೊಡೆದು
ಕೊಡೆಯ ಬಿಡಿಸುವ ತಾವಿನಲ್ಲಿದ್ದಾಳೆ
ಭೂಮಿಯಾಳದ ಬೇರುಗಳು
ಜೀವರಸದ ಬತ್ತಿಯಲಿ
ತನ್ನನ್ನು ತಾನೇ ಕಾಪಿಟ್ಟುಕೊಂಡು ಟಿಸಿಲೊಡೆಯುತ್ತಿವೆ
ಸುತ್ತುವಯಾನದಲಿ
ಸೆರೆಯಾಗಿವೆ

ಶಿವಶಂಕರ ಸೀಗೆಹಟ್ಟಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಸೀಗೆಹಟ್ಟಿಯವರು
ಪ್ರಸ್ತುತ ದೇವದುರ್ಗದಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ
‘ಕರುಳಬಳ್ಳಿ ಮತ್ತು ಜೀವಕಾರುಣ್ಯʼ ಇವರ ಪ್ರಕಟಿತ ಕವನ ಸಂಕಲನ