ಆ ಭೀಕರ ಭೂಕಂಪದ ದಿನ ಮೋಡಗಳಿಲ್ಲದೆ ಕತ್ತಲಾವರಿಸಿತು. ಉರಿಯುತ್ತಿದ್ದ ಬೇಸಿಗೆಯ ಬೇಗೆಯಲ್ಲಿ ಜನ ಬೇಯುತ್ತಿದ್ದರು. ಆದರೆ ಶುಭ್ರ ನೀಲಾಕಾಶ ಕಣ್ಮರೆಯಾಗಿ ಶರತ್ಕಾಲದ ಆಗಸವನ್ನು ನೆನಪಿಸುವಂತಿತ್ತು. ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಯಾವುದೇ ಬಗೆಯ ಮುನ್ಸೂಚನೆಯಿಲ್ಲದೆ ಇದ್ದಕ್ಕಿದ್ದಂತೆ ಭೀಕರ ಬಿರುಗಾಳಿ ಎದ್ದಿತು. ತಾರಸಿಯ ಮೇಲೆ ನಾನು ಮಾಡಿಟ್ಟಿದ್ದ ಹಕ್ಕಿಯಾಕಾರದ ಗಾಳಿದಿಕ್ಸೂಚಿಯು ಹಾರಿಹೋಯಿತು. ಈ ಗಾಳಿಗೂ ಭೂಕಂಪಕ್ಕೂ ಏನು ಸಂಬಂಧವೋ ಗೊತ್ತಿಲ್ಲ. ಆದರೆ ತಾರಸಿಯ ಮೇಲೆ ಹತ್ತಿ ಆ ಗಾಳಿದಿಕ್ಸೂಚಕವನ್ನು ಮತ್ತೆ ಅಲ್ಲೇ ಇಟ್ಟು ಆಕಾಶ ನೋಡುತ್ತಾ “ಏನಿದು ವಿಚಿತ್ರ!” ಅಂತ ಯೋಚಿಸಿದ್ದು ನೆನಪಿದೆ.
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವ ಆತ್ಮಕತೆಯ ಮತ್ತೊಂದು ಅಧ್ಯಾಯ.

 

ಅಂದು ನನ್ನ ಪಾಲಿನ ಕರಾಳ ದಿನ. ಬೇಸಿಗೆ ರಜೆ ಮುಗಿದ ಮಾರನೆಯ ದಿನ. ಬಹಳಷ್ಟು ವಿದ್ಯಾರ್ಥಿಗಳಿಗೆ ಶಾಲೆಯ ಪುನರಾರಂಭ ಬಹಳ ಖುಷಿ ನೀಡುವ ದಿನ. ನನಗೆ ಹಾಗನ್ನಿಸುವುದಿಲ್ಲ. ಆವತ್ತು ಎರಡನೆಯ ಅವಧಿಯ ತರಗತಿಗಳ ಆರಂಭೋತ್ಸವ. ನನಗೆಂದೂ ಆ ಕಾರ್ಯಕ್ರಮ ಇಷ್ಟವಾಗುತ್ತಿರಲಿಲ್ಲ.

ಘಟಿಕೋತ್ಸವ ಮುಗಿಯುತ್ತಿದ್ದಂತೆ ಕ್ಯೊಬಾಶಿ (Kyōbashi ) ಜಿಲ್ಲೆಯ ಮರುಜೆನ್ (Maruzen) ಎನ್ನುವ ಪಟ್ಟಣದಲ್ಲಿದ್ದ ಜಪಾನಿನ ಅತಿದೊಡ್ಡ ವಿದೇಶಿ ಪುಸ್ತಕಗಳ ಮಳಿಗೆಗೆ ಹೋದೆ. ನನ್ನ ದೊಡ್ಡಕ್ಕ ವಿದೇಶಿ ಭಾಷೆಯೊಂದರ ಪುಸ್ತಕ ತಂದುಕೊಡಲು ಹೇಳಿದ್ದಳು. ಆದರೆ ನಾನಲ್ಲಿಗೆ ಹೋಗುವಷ್ಟರಲ್ಲಿ ಅಂಗಡಿ ಇನ್ನೂ ತೆರೆದಿರಲಿಲ್ಲ. ಬೇಸರದಿಂದ ಮಧ್ಯಾಹ್ನ ಮತ್ತೊಮ್ಮೆ ಬಂದರಾಯಿತು ಅಂದುಕೊಂಡು ಮನೆಯ ಕಡೆ ಹೊರಟೆ.

ಎರಡು ಗಂಟೆಗಳ ತರುವಾಯ ಕಾಂಟೊದ ಭೀಕರ ಭೂಕಂಪದ ದುರಂತದ ತೀವ್ರತೆಗೆ ಸಾಕ್ಷಿಯಾಗಿ ನಿರ್ನಾಮವಾಗಿ ಹೋದ ಮರುಜೆನ್ (Maruzen) ಕಟ್ಟಡದ ಅವಶೇಷಗಳ ಫೋಟೊವನ್ನು ಇಡೀ ವಿಶ್ವದಲ್ಲಿ ಪ್ರಸಾರಮಾಡಲಾಯಿತು. ಒಂದು ವೇಳೆ ಬೆಳಿಗ್ಗೆ ಆ ಪುಸ್ತಕದಂಗಡಿ ತೆರೆದಿದ್ದರೆ ನನ್ನ ಗತಿ ಏನಾಗಬಹುದಿತ್ತು ಎನ್ನುವುದನ್ನು ಯೋಚಿಸದೆ ಇರಲಾಗಲಿಲ್ಲ. ಎರಡು ಗಂಟೆ ನನ್ನಕ್ಕನ ಪುಸ್ತಕ ಹುಡುಕುತ್ತ ಅಲ್ಲಿ ಕೂರುತ್ತಿರಲಿಲ್ಲ. ಹಾಗಾಗಿ ಆ ಕಟ್ಟದ ಕೆಳಗೆ ಸಿಕ್ಕು ನಜ್ಜುಗಜ್ಜಾಗುತ್ತಿರಲಿಲ್ಲ. ಆದರೆ ಭೂಕಂಪದಿಂದಾಗಿ ಇಡೀ ಮಧ್ಯ ಟೊಕಿಯೊವನ್ನೇ ನಾಶ ಮಾಡಿದ ಬೆಂಕಿ ಅವಘಡದಿಂದ ಹೇಗೆ ತಪ್ಪಿಸಿಕೊಳ್ಳುತ್ತಿದ್ದೆ?

ಆ ಭೀಕರ ಭೂಕಂಪದ ದಿನ ಮೋಡಗಳಿಲ್ಲದೆ ಕತ್ತಲಾವರಿಸಿತು. ಉರಿಯುತ್ತಿದ್ದ ಬೇಸಿಗೆಯ ಬೇಗೆಯಲ್ಲಿ ಜನ ಬೇಯುತ್ತಿದ್ದರು. ಆದರೆ ಶುಭ್ರ ನೀಲಾಕಾಶ ಕಣ್ಮರೆಯಾಗಿ ಶರತ್ಕಾಲದ ಆಗಸವನ್ನು ನೆನಪಿಸುವಂತಿತ್ತು. ಸುಮಾರು ಹನ್ನೊಂದು ಗಂಟೆಯ ಹೊತ್ತಿಗೆ ಯಾವುದೇ ಬಗೆಯ ಮುನ್ಸೂಚನೆಯಿಲ್ಲದೆ ಇದ್ದಕ್ಕಿದ್ದಂತೆ ಭೀಕರ ಬಿರುಗಾಳಿ ಎದ್ದಿತು. ತಾರಸಿಯ ಮೇಲೆ ನಾನು ಮಾಡಿಟ್ಟಿದ್ದ ಹಕ್ಕಿಯಾಕಾರದ ಗಾಳಿದಿಕ್ಸೂಚಿಯು ಹಾರಿಹೋಯಿತು. ಈ ಗಾಳಿಗೂ ಭೂಕಂಪಕ್ಕೂ ಏನು ಸಂಬಂಧವೋ ಗೊತ್ತಿಲ್ಲ. ಆದರೆ ತಾರಸಿಯ ಮೇಲೆ ಹತ್ತಿ ಆ ಗಾಳಿದಿಕ್ಸೂಚಕವನ್ನು ಮತ್ತೆ ಅಲ್ಲೇ ಇಟ್ಟು ಆಕಾಶ ನೋಡುತ್ತಾ “ಏನಿದು ವಿಚಿತ್ರ!” ಅಂತ ಯೋಚಿಸಿದ್ದು ನೆನಪಿದೆ.

ಈ ಐತಿಹಾಸಿಕ ದುರಂತಕ್ಕೂ ಮುನ್ನ ಪಕ್ಕದಮನೆಯಲ್ಲಿದ್ದ ನನ್ನ ಗೆಳೆಯನ ಜೊತೆ ಕ್ಯೋಬಾಶಿಯಲ್ಲಿನ (Kyōbashi) ನಮ್ಮ ಮನೆಯ ಮುಂದಿದ್ದ ಬೀದಿಯಲ್ಲಿ ನಡೆದು ಬರುತ್ತಿದ್ದೆ. ಆ ದಾರಿಯಲ್ಲಿ ಗಿರವಿ ಅಂಗಡಿಯಿತ್ತು. ಆ ಅಂಗಡಿಯ ಗೋದಾಮಿನ ನೆರಳಲ್ಲಿ ನಿಂತು ನಮ್ಮ ಮನೆಯ ಗೇಟಿನ ಮುಂದಿದ್ದ ಕೊರಿಯನ್ ಎತ್ತಿನತ್ತ ಕಲ್ಲುಗಳನ್ನು ಎಸೆಯುತ್ತಿದ್ದೆವು. ಈ ಎತ್ತು ನಮ್ಮ ಪಕ್ಕದಮನೆಯವನಿಗೆ ಸೇರಿದ್ದು. ಆತ ಎತ್ತಿನಗಾಡಿ ಓಡಿಸುತ್ತಿದ್ದ. ಟೊಕಿಯೊದ ಹಿಗ್ಷಿನಕಾನೋ (Higashi Nakano)ದ ಹಳ್ಳಿಯೊಂದರಲ್ಲಿದ್ದ ಹಂದಿ ಫಾರಂಗೆ ಮೇವನ್ನು ಹಾಕುತ್ತಿದ್ದ. ಹಿಂದಿನ ರಾತ್ರಿ ಅದೇಕೋ ಏನೋ ಅವನು ಎತ್ತನ್ನು ನಮ್ಮ ಮನೆಯ ನಡುವಿದ್ದ ಗಲ್ಲಿಯಲ್ಲೇ ಕಟ್ಟಿಹಾಕಿಬಿಟ್ಟಿದ್ದ. ಆ ಎತ್ತು ಇಡೀ ರಾತ್ರಿ ಕಿರುಚುತ್ತಿದ್ದರಿಂದ ನನಗೆ ನಿದ್ದೆ ಮಾಡಲಾಗಿರಲಿಲ್ಲ. ಆ ಸಿಟ್ಟಿನಲ್ಲಿ ಆ ದೆವ್ವದತ್ತ ನನ್ನೆಲ್ಲ ಶಕ್ತಿ ಬಳಸಿ ಕಲ್ಲುಗಳನ್ನು ಎಸೆಯುತ್ತಿದ್ದೆ.

ಆ ಸಮಯದಲ್ಲೇ ಭೂಮಿಯೊಳಗಿಂದ ಗುಡುಗಿದ ಸದ್ದು ಕೇಳಿಸಿತು. ಮರದ ಶೂಗಳನ್ನು ಹಾಕಿಕೊಂಡಿದ್ದೆ ಹಾಗೂ ಎತ್ತಿಗೆ ಹೊಡೆಯಲು ದೇಹವನ್ನು ಅತ್ತಿತ್ತ ಬಾಗಿಸುತ್ತಿದ್ದೆನಾದ್ದರಿಂದ ಭೂಮಿ ಅಲುಗಿದ್ದು ನನಗೆ ತಿಳಿಯಲಿಲ್ಲ. ನಾನು ಗಮನಿಸಿದ್ದೇನೆಂದರೆ ನನ್ನ ಪಕ್ಕದಲ್ಲೇ ಇದ್ದ ನನ್ನ ಗೆಳೆಯ ಇದ್ದಕ್ಕಿದ್ದಂತೆ ತಲೆಕೆಳಗಾಗಿ ನಿಂತುಬಿಟ್ಟಿದ್ದ. ಅವನತ್ತ ನೋಡಿದಾಗ ಅವನ ಹಿಂದಿದ್ದ ಅಂಗಡಿಯ ಗೋದಾಮಿನ ಗೋಡೆ ಸೀಳುಬಿಟ್ಟು ನಮ್ಮತ್ತಲೇ ಬೀಳಲಾರಂಭಿಸಿದ್ದು ಕಾಣಿಸಿತು. ತಕ್ಷಣ ನಾನೆದ್ದು ನಿಂತೆ.

ಭಾರವಾದ ಮರದ ಶೂಗಳನ್ನು ಹಾಕಿದ್ದೆನಾದ್ದರಿಂದ ನಡುಗುತ್ತಿರುವ ನೆಲದ ಮೇಲೆ ಸಮತೋಲನ ಸಾಧಿಸಿ ಓಡಲು ಸಾಧ್ಯವಾಗಲಿಲ್ಲ. ಶೂಗಳನ್ನು ಬಿಚ್ಚಿ ಒಂದೊಂದು ಕೈಯಲ್ಲಿ ಹಿಡಿದು ಸಮುದ್ರದ ನಡುವಿನ ದೋಣಿಯಲ್ಲಿರುವವರಂತೆ ನನ್ನ ಗೆಳೆಯನಿದ್ದ ಕಡೆ ಓಡಿದೆ. ಅವನು ತನ್ನ ಪ್ರಾಣ ಕಾಪಾಡಿಕೊಳ್ಳುವ ಸಲುವಾಗಿ ಅಲ್ಲಿದ್ದ ಟೆಲಿಫೋನ್ ಕಂಬವನ್ನು ಅಪ್ಪಿಹಿಡಿದಿದ್ದ. ನಾನು ಕೂಡ ಕಂಬವನ್ನು ಅಪ್ಪಿಕೊಂಡೆ. ಆ ಕಂಬ ಹುಚ್ಚಾಪಟ್ಟೆ ತೂಗುತ್ತಿತ್ತು. ಅದರಲ್ಲಿದ್ದ ವೈರುಗಳು ಸಾವಿರ ಚೂರುಗಳಾಗಿ ಬೀಳುತ್ತಿತ್ತು.

ಒಂದು ವೇಳೆ ಬೆಳಿಗ್ಗೆ ಆ ಪುಸ್ತಕದಂಗಡಿ ತೆರೆದಿದ್ದರೆ ನನ್ನ ಗತಿ ಏನಾಗಬಹುದಿತ್ತು ಎನ್ನುವುದನ್ನು ಯೋಚಿಸದೆ ಇರಲಾಗಲಿಲ್ಲ. ಎರಡು ಗಂಟೆ ನನ್ನಕ್ಕನ ಪುಸ್ತಕ ಹುಡುಕುತ್ತ ಅಲ್ಲಿ ಕೂರುತ್ತಿರಲಿಲ್ಲ. ಹಾಗಾಗಿ ಆ ಕಟ್ಟದ ಕೆಳಗೆ ಸಿಕ್ಕು ನಜ್ಜುಗಜ್ಜಾಗುತ್ತಿರಲಿಲ್ಲ.

ನಮ್ಮ ಕಣ್ಣ ಮುಂದೆಯೇ ಆ ಗಿರವಿ ಅಂಗಡಿಯ ಗೋದಾಮುಗಳು ತಮ್ಮ ಚರ್ಮವನ್ನು ಕಳಚಿಕೊಳ್ಳಲು ಆರಂಭಿಸಿದವು. ಮೊದಲು ನಡುಗಿ ತಮ್ಮ ತಾರಸಿಯ ಹೆಂಚುಗಳನ್ನು ಬೀಳಿಸಿ ತಮ್ಮ ದಪ್ಪ ಗೋಡೆಗಳನ್ನು ಉದುರಿಸಿಬಿಟ್ಟವು. ಕ್ಷಣಮಾತ್ರದಲ್ಲಿ ಮರದ ಅಸ್ಥಿಪಂಜರವಾಗಿಬಿಟ್ಟವು. ಇದು ಕೇವಲ ಗೋದಾಮುಗಳ ಕತೆಯಲ್ಲ. ಎಲ್ಲ ಮನೆಗಳದೂ ಇದೇ ಕತೆ. ಮನೆಯ ತಾರಸಿಯ ಹೆಂಚುಗಳನ್ನು ಯಾರೋ ಜರಡಿಗೆ ಹಾಕಿ ಅಲ್ಲಾಡಿಸಿದರೇನೋ ಎನ್ನುವ ಹಾಗೇ ಕುಣಿದು ಸರಕ್ಕನೆ ಬಿದ್ದುಹೋದವು. ಧೂಳಿನ ನಡುವೆ ತಾರಸಿಯ ತೊಲೆಗಳು ಕಾಣುತ್ತಿತ್ತು.

ಜಪಾನಿ ಮನೆಗಳನ್ನು ಕಟ್ಟುವ ವಿಧಾನ ಅದ್ಭುತವಲ್ಲವೇ? ಇಂತಹ ಸಂದರ್ಭಗಳಲ್ಲಿ ತಾರಸಿ ಹಗುರವಾಗಿಬಿಡುತ್ತದೆ ಮನೆ ಕುಸಿಯುವುದಿಲ್ಲ. ಭಯಂಕರವಾಗಿ ತೂಗಾಡುತ್ತಿದ್ದ ಆ ಟೆಲಿಫೋನ್ ಕಂಬಕ್ಕೆ ಜೋತುಬಿದ್ದು ನಾನಿದನ್ನು ಯೋಚಿಸಿದ್ದು ನೆನಪಿದೆ. ಅಂದ ಮಾತ್ರಕ್ಕೆ ನಾನು ಶಾಂತವಾಗಿದ್ದೆ ಎಂದರ್ಥವಲ್ಲ. ಮನುಷ್ಯರದು ಒಂಥರಾ ವಿಚಿತ್ರ ತಮಾಷೆ. ಅವರು ಸಿಕ್ಕಾಪಟ್ಟೆ ಹೆದರಿಕೊಂಡಾಗ ಮೆದುಳಿನ ಒಂದು ಭಾಗ ಅದರಿಂದ ಸಂಪೂರ್ಣ ಸ್ವತಂತ್ರವಾಗಿ ಅರ್ಥಾತ್ ಸಂಬಂಧವಿಲ್ಲದ ವಿಷಯಗಳನ್ನು ಯೋಚಿಸುತ್ತಿರುತ್ತದೆ. ಪಾಪ ನನ್ನ ಮೆದುಳು ಈ ಕ್ಷಣದಲ್ಲಿ ಭೂಕಂಪವನ್ನು ತಾಳಿಕೊಳ್ಳಬಲ್ಲ ಜಪಾನಿ ಮನೆಗಳ ವಾಸ್ತುಶೈಲಿಯ ಕುರಿತು ಯೋಚಿಸುತ್ತಿತ್ತು. ಮರುಕ್ಷಣದಲ್ಲಿ ನನ್ನ ಮನೆಯವರನ್ನು ನೆನೆದು ಹೆದರಿಕೆಯಿಂದ ಕಂಪಿಸಿಬಿಟ್ಟಿತು. ತಕ್ಷಣ ಒಂದೇ ಉಸಿರಿನಲ್ಲಿ ಮನೆಯತ್ತ ಓಡಿದೆ.

ಮನೆಯ ಮುಂದಿನ ಗೇಟಿನ ತಾರಸಿ ಅರ್ಧದಷ್ಟು ಬಿದ್ದು ಹೋಗಿತ್ತು. ಮತ್ತೊಂದು ಭಾಗ ಒಂದಿಷ್ಟೂ ಅಲುಗದೆ ನಿಂತಿತ್ತು. ಆದರೆ ಗೇಟಿನಿಂದ ಮನೆಯ ಬಾಗಿಲಿನವರೆಗಿದ್ದ ಕಲ್ಲಿನ ಹಾಸಿನ ತುಂಬ ಅಕ್ಕಪಕ್ಕದ ಮನೆಗಳ ತಾರಸಿಯ ಮುರಿದ ಹೆಂಚುಗಳ ರಾಶಿ ಪರ್ವತದಂತೆ ಬಿದ್ದಿತ್ತು. ಮನೆಯ ಮುಂಬಾಗಿಲೇ ಕಾಣಿಸುತ್ತಿರಲಿಲ್ಲ. ನನ್ನ ಮನೆಯವರೆಲ್ಲ ಸತ್ತುಹೋಗಿರಬಹುದು.

ವಿಚಿತ್ರವೆಂದರೆ ಆ ಕ್ಷಣದಲ್ಲಿ ನನ್ನಲ್ಲಿ ಗಾಢ ವಿಷಾದ ಹುಟ್ಟಲಿಲ್ಲ ಬದಲಿಗೆ ತೀವ್ರ ನಿರಾಸಕ್ತಿ ಕಾಣಿಸಿಕೊಂಡಿತು. ಮನಸಲ್ಲಿ ಸುಳಿದ ಮತ್ತೊಂದು ಭಾವನೆ ಇಡೀ ಪ್ರಪಂಚದಲ್ಲಿ ನಾನು ಒಬ್ಬಂಟಿ. ಏನು ಮಾಡುವುದು ಎಂದು ಸುತ್ತಲೂ ನೋಡಿದೆ. ಟೆಲಿಫೋನ್ ಕಂಬವನ್ನು ಅಪ್ಪಿಹಿಡಿದಿದ್ದ ನನ್ನ ಗೆಳೆಯ ಅವನ ಮನೆಯವರೊಂದಿಗೆ ಅವನ ಮನೆಯಿಂದ ಹೊರಬರುತ್ತಿರುವುದು ಕಾಣಿಸಿತು. ಅವರೆಲ್ಲ ಗುಂಪಾಗಿ ದಾರಿಯ ಮಧ್ಯದಲ್ಲಿ ನಿಂತರು. ಈ ಸಂದರ್ಭದಲ್ಲಿ ನಾನು ಏನೂ ಮಾಡಲಾಗುವುದಿಲ್ಲ ಅನ್ನಿಸಿ ನನ್ನ ಗೆಳೆಯನ ಮನೆಯವರ ಜೊತೆಯಲ್ಲಿ ಇರೋಣ ಎಂದು ನಿರ್ಧರಿಸಿ ಅವರತ್ತ ನಡೆದೆ.

ಅವರ ಹತ್ತಿರ ಹೋಗುತ್ತಿದ್ದಂತೆ ನನ್ನ ಗೆಳೆಯನ ತಂದೆ ನನಗೆ ಏನೋ ಹೇಳಲು ಹೋದವರು ಇದ್ದಕ್ಕಿದ್ದಂತೆ ಸುಮ್ಮನಾದರು. ಅವರು ನಮ್ಮ ಮನೆಯತ್ತ ನಡೆದು ಮನೆಮುಂದೆ ಹೋಗಿ ನಿಂತರು. ಅವರು ನೋಡಿದತ್ತ ಕಣ್ಣು ಹಾಯಿಸಿದೆ. ಅಲ್ಲಿ ಮನೆಯ ಮುಂದಿನ ಗೇಟಿನಿಂದ ನಮ್ಮ ಮನೆಯವರೆಲ್ಲ ಹೊರಬರುತ್ತಿರುವುದು ಕಾಣಿಸಿತು. ಹುಚ್ಚನಂತೆ ಅವರತ್ತ ಓಡಿದೆ. ಸತ್ತುಹೋದರು ಅಂದುಕೊಂಡವರೆಲ್ಲ ಸುರಕ್ಷಿತವಾಗಿದ್ದರು. ನನಗೇನಾಯಿತೋ ಅಂತ ಅವರೆಲ್ಲ ಚಿಂತಿಸುತ್ತಿದ್ದರು. ನಾನು ಅವರತ್ತ ಓಡುತ್ತಿದ್ದಂತೆ ಅವರು ನನ್ನನ್ನು ಸ್ವಾಗತಿಸಿದರು. ಅವರ ಮುಖದಲ್ಲಿ ನಿರಾಳ ಭಾವ ಕಂಡಿತು.

ನಾನು ಅವರತ್ತ ಓಡಿ ಅತ್ತಿರಬೇಕು ಅಂತ ನೀವು ಅಂದುಕೊಂಡಿರಬಹುದು. ಆದರೆ ನಾನು ಅಳಲಿಲ್ಲ. ಅಳಲು ಸಾಧ್ಯವಾಗಲಿಲ್ಲ ಏಕೆಂದರೆ ನಮ್ಮಣ್ಣ ಸಿಟ್ಟಲ್ಲಿ ಬೈಯಲು ಶುರುಮಾಡಿದ. “ಅಕಿರ ಇದೇನಿದು? ಬರಿಗಾಲಲ್ಲಿ ಓಡಾಡುತ್ತಿದ್ದಿಯಾ ಛೀ ಕೊಳಕ!” ಅಪ್ಪ, ಅಮ್ಮ, ಅಕ್ಕ ಮತ್ತು ಅಣ್ಣ ಎಲ್ಲರೂ ತಮ್ಮ ಶೂಗಳನ್ನು ಹಾಕಿಕೊಂಡಿದ್ದರು. ನಾಚಿಕೆಯಾಗಿ ತಕ್ಷಣ ನನ್ನ ಶೂಗಳನ್ನು ಬೇಗಬೇಗ ಹಾಕಿಕೊಂಡೆ. ನಮ್ಮ ಮನೆಯವರಲ್ಲಿ ನಾನೊಬ್ಬನೇ ಯಾವಾಗಲೂ ಅರಾಜಕ ಮನುಷ್ಯ. ನಮ್ಮಪ್ಪ, ಅಮ್ಮ ಮತ್ತು ಅಕ್ಕ ದುಃಖದಲ್ಲಿ ಇದ್ದದ್ದು ಎದ್ದು ಕಾಣುತ್ತಿತ್ತು. ಆದರೆ ನನ್ನಣ್ಣ ಶಾಂತವಾಗಿದ್ದ ಮಾತ್ರವಲ್ಲ ಆ ಭೀಕರ ಭೂಕಂಪದಲ್ಲೂ ಸುಖವಾದ ಸಮಯ ಕಳೆಯುತ್ತಿರುವವನಂತಿದ್ದ.