ಒಂದು ಕಡೆ ನೆಲ ನಡುಗಿ ಮನೆಮಠ, ಆಸ್ತಿಪಾಸ್ತಿಯನ್ನು ನೆಲಸಮ ಮಾಡುತ್ತಿದೆ. ಇನ್ನೊಂದು ಕಡೆ ಪ್ರವಾಹ, ತ್ಸುನಾಮಿ ಅವೆಲ್ಲವನ್ನು ನುಂಗಿ ಹಾಕುತ್ತಿದೆ. ಮತ್ತೊಂದು ಕಡೆ ಜನ ದಂಗೆ ಏಳುತ್ತಿದ್ದಾರೆ. ಕೆಲವು ಸರ್ವಾಧಿಕಾರಿಗಳು ಓಡುತ್ತಿದ್ದಾರೆ, ಕೆಲವು ಸರ್ವಾಧಿಕಾರಿಗಳು ಕೂತಲ್ಲೇ ನಡುಗುತ್ತಿದ್ದಾರೆ, ಇನ್ನು ಕೆಲವರು ಹಲ್ಲುಕಡಿಯುತ್ತಾ ಕತ್ತಿ ಮಸೆಯುತ್ತಿದ್ದಾರೆ.

ನ್ಯೂಜಿಲಾಂಡಿನ ಸರದಿ ಭೂಕಂಪ ನೂರಾರು ಜನರನ್ನು ಬಲಿ ತೆಗೆದುಕೊಂಡು, ಕ್ರೈಸ್ಟ್‌ಚರ್ಚನ್ನು ಬಹುಪಾಲು ನೆಲಸಮ ಮಾಡಿದೆ. ಹೋದ ವರ್ಷದ ಭೂಕಂಪಕ್ಕೆ ಸಡಿಲಾಗಿದ್ದ ಆ ಊರಿನ ಕಟ್ಟಡಗಳನ್ನು, ಈಗ ನೆಲದಿಂದ ಕೇವಲ ಐದೇ ಕಿಮಿ ಆಳದಲ್ಲಿ ಜರುಗಿದ ಮೊನ್ನೆಯ ಭೂಕಂಪ ನಿರ್ದಾಕ್ಷಣ್ಯವಾಗಿ ಉರುಳಿಸಿತು. ಪ್ರೀತಿಪಾತ್ರರನ್ನು ಕಳಕೊಂಡ ಜನರ ಕಣ್ಣೀರು ಲೋಕದ ಈ ಭಾಗದಲ್ಲಿ ಮನಕರಗಿಸಿತು.

ಆಸ್ಟ್ರೇಲಿಯಾದ ಕ್ವೀನ್ಸ್‌ಲಾಂಡಿನಲ್ಲಿ ಶತಮಾನದಿಂದಲೂ ಕಂಡಿರದಂತಹ ಪ್ರವಾಹ ನೂರಾರು ಊರುಗಳನ್ನು ಮುಳುಗಿಸಿ ಹತ್ತಾರು ಜನರ ಬಲಿ ತೆಗೆದುಕೊಂಡಿತು. ನದಿಗಳ ಮಟ್ಟ ಏರಿದ ವೇಗಕ್ಕೆ ಜನ, ಊರು ಹಾಗು ಸರ್ಕಾರಗಳು ತತ್ತರಿಸಿ ಹೋದವು. ಪ್ರವಾಹದಿಂದ ಸಾವರಿಸಕೊಳ್ಳುವಷ್ಟರಲ್ಲೇ ಹರಿಕೇನ್ ಯಾಸಿ ಪೆಸಿಫಿಕ್ ಸಾಗರದಿಂದ ಬಂದು ಅಪ್ಪಳಿಸಿ ಮತ್ತಷ್ಟು ಊರು ಮನೆಗಳನ್ನು ಹೊಡೆದುರುಳಿಸಿತು. ಇಲ್ಲಿಯ ಫೆಡರಲ್ ಸರ್ಕಾರ ಫ್ಲಡ್ ಲೆವಿ ಎಂಬ ಒಂದು ಪುಟ್ಟ ಕರವನ್ನೇ ಘೋಷಿಸಿ ಇವೆಲ್ಲವನ್ನು ಸಂಭಾಳಿಸಬೇಕಾಗಿ ಬಂದಿದೆ.

ಅತ್ತ ಉತ್ತರ ಆಫ್ರಿಕಾದ ಟುನೀಶಿಯದಲ್ಲಿ ಜನ ಸಿಟ್ಟಿಗೆದ್ದು ಅರಮನೆಯಲ್ಲಿ ನಿರಂತರ ಕೂತಿದ್ದ ಸರ್ವಾಧಿಕಾರಿಯನ್ನು ಹೊರದೂಡಿಬಿಟ್ಟರು. ಅಕ್ಕಪಕ್ಕದ ದೇಶದ ಜನರಿಗೆ ಅದು ಇಂಬುಗೊಟ್ಟಂತೆ ಆಯಿತು. ಈಜಿಪ್ಟಿನ ಜನತೆ ತಫೀರ್ ಚೌಕದಲ್ಲಿ ಹಟಹಿಡಿದು ಮೊಂಡು ಕೂತು ಮುಬಾರಕನನ್ನು ಇಳಿಸಿಯೇ ಬಿಟ್ಟರು. ಪೌರ ಸೈನ್ಯವಿರುವ ಈಜಿಪ್ಟಿನಲ್ಲಿ ಚಳವಳಿಗಾರರು ಸೈನ್ಯವನ್ನು ನೆಚ್ಚಿದ್ದು, ಸೈನ್ಯ ಜನತೆಯನ್ನು ನೆಚ್ಚಿದ್ದು ಎಲ್ಲ ಸುಗಮವಾಗಲು ಅನುವು ಮಾಡಿಕೊಟ್ಟಿತು. ಇಲ್ಲದಿದ್ದರೆ ಈಜಿಪ್ಟು ಕೂಡ ಲಿಬ್ಯಾದಂತೆ ಆಗುವ ಸಾಧ್ಯತೆಯೇ ಹೆಚ್ಚಾಗಿತ್ತು.

ಯುದ್ಧದಲ್ಲಿ ತನ್ನ ಎದುರು ಹೋರಾಡಿದವರನ್ನು, ಅಥವಾ ಕೈಗೆಸಿಕ್ಕವರನ್ನು ಹಿಡಿದು ಅಕಾರಣವಾಗಿ ವೈರಿಗಳೆಂದು ಈಜಿಪ್ಟಿಗೆ ಕಳಿಸುತ್ತಿದುದು ಈಗ ಗೊತ್ತಿರುವ ಸಂಗತಿ. ಅಲ್ಲಿನ ಸೆಕ್ಯುರಿಟಿಯವರಿಂದ ತಾವು ತಮ್ಮ ಊರಲ್ಲಿ ಮಾಡಲಾಗದ ಹೇಯ ಕೆಲಸಗಳನ್ನು ಮಾಡಿಸಿದ್ದು ಇವೇ ಪಶ್ಚಿಮದ ಸರ್ಕಾರಗಳು. ಇಂತಹ ಕೆಲಸಕ್ಕೆ ಈಜಿಪ್ಟಿನಲ್ಲೊಬ್ಬ ಸರ್ವಾಧಿಕಾರಿ ಇರುವುದು ಅವರಿಗೆ ಒಳೆಯದೇ ಆಗಿತ್ತು. ಮಿಡ್ಲ ಈಸ್ಟಿನಲ್ಲಿ ರಾಜಕೀಯ ಸಮತೋಲನಕ್ಕಾಗಿ ಈಜಿಪ್ಟನ್ನು ನೆಚ್ಚಿಕೊಳ್ಳುವುದು ಪಶ್ಚಿಮಕ್ಕೆ ಒಂದು ನೆಪವಾಗಿತ್ತು. ಆದರೆ, ಅಲ್ಲಿಯ ಜನರಿಗೆ ಈ ಎಲ್ಲ ಕಾರುಭಾರು ಬೇಕಾಗಿತ್ತೆ ಎಂದು ಇನ್ನು ಮುಂದೆ ನಿಚ್ಚಳವಾಗಲಿದೆ.

ಲಿಬ್ಯಾದಲ್ಲಿ ಹಟಹಿಡಿದು ಕೂತಿರುವ ಗಡಾಫಿಯನ್ನು ತುಸು ಗಮನಿಸಿ. ಹಿಂದಿನ ಎಲ್ಲ ಇರುಸುಮುರುಸುಗಳನ್ನು ಮರೆತು ಪಶ್ಚಿಮ ಸರ್ಕಾರಗಳು ಅವನ ಸರ್ವಾಧಿಕಾರತ್ವವನ್ನು ಓಲೈಸಲು ತೊಡಗಿದ್ದು ನಿಮಗೆ ಗೊತ್ತೇ ಇದೆ. ಆದರೆ ಈಗ ತಟ್ಟನೆ ಜನರು ತಿರುಗಿಬಿದ್ದಿರುವುದನ್ನು ನೋಡಿದರೆ ಪಶ್ಚಿಮದ ನಾಯಕರ ಲೆಕ್ಕಾಚಾರ ಏನಾಗಿತ್ತು ಎಂಬ ಪ್ರಶ್ನೆ ಏಳುವುದಿಲ್ಲವೆ?

ಜಪಾನಿನ ಭೂಕಂಪ ಸಾವಿರ ವರ್ಷದಿಂದ ಆಗಿರದಷ್ಟು ಭೀಕರವಾಗಿದೆ. ಜಪಾನು ಇರುವ ಫೆಸಿಫಿಕ್ ಫಾಲ್ಟ್‌ ಲೈನಿನಲ್ಲಿ ಇದಕ್ಕಿಂತ ಹೆಚ್ಚು ಭೂಕಂಪಗಳು ಆಗಿಲ್ಲದಿರುವುದು ಅಚ್ಚರಿ ಎಂದೂ ಕೆಲವು ತಜ್ಞರ ಅಭಿಪ್ರಾಯ. ಜಪಾನು ಭೂಕಂಪದ ಹೊಡೆತವನ್ನು ಎದುರಿಸಲು ಕಲಿತುಕೊಂಡಿದೆ. ಸಣ್ಣಮಕ್ಕಳಿಂದ ಹಿಡಿದು ಎಲ್ಲರೂ ತಯಾರಾಗಿಯೇ ಇರುತ್ತಾರೆ. ಆದರೆ, ಈ ಭೂಕಂಪ ಹುಟ್ಟುಹಾಕಿದ ತ್ಸುನಾಮಿ ಮಾತ್ರ, ಎಲ್ಲ ನಿರೀಕ್ಷೆಯನ್ನೂ ಮೀರಿಸಿ, ಹತ್ತಾರು ಸಾವಿರ ಜನರ ಬಲಿ ತೆಗೆದುಕೊಂಡಿದೆ. ಹತ್ತು ಮೀಟರಿನಷ್ಟು ಎತ್ತರದ ನೀರಿನ ಗೋಡೆಗೆ ಮಾರುತ್ತರ ಜಪಾನಿಗರಷ್ಟೇ ಏಕೆ ಲೋಕದಲ್ಲೇ ಇದುವರೆಗೂ ಯಾರೂ ಕಂಡುಕೊಂಡಿಲ್ಲ.

ಭೂಕಂಪಕ್ಕೆ ಜಪಾನಿಗರು ಒಗ್ಗಿಕೊಂಡಿರುವಂತೆಯೇ, ಅದಕ್ಕೆ ತಕ್ಕಂತ ಕಟ್ಟಡ ನಿರ್ಮಾಣದ ಕೌಶಲ್ಯವನ್ನೂ ಕಂಡುಕೊಂಡಿದ್ದಾರೆ. ಮುಂದೊಂದು ದಿನ ತ್ಸುನಾಮಿಗೂ ಉತ್ತರ ಕಂಡುಕೊಳ್ಳುತ್ತಾರೆಂದು ನನಗೆ ವಿಶ್ವಾಸವಿದೆ. ಮಾನವ ಮನಸ್ಸು ಅಷ್ಟು ಸುಲಭದಲ್ಲಿ ಸೋಲುವಂತಹುದಲ್ಲ. ಪ್ರಕೃತಿಯ ಎಂತೆಂತಹ ವೈಪರೀತ್ಯ ಹಾಗು ತೊಂದರೆಗಳಿಗೆ ಉತ್ತರ ಹುಡುಕಿಕೊಂಡೇ ಇಲ್ಲಿಯವರೆಗೂ ಉಳಿದುಕೊಂಡಿರುವುದು ಹಾಗು ತನ್ನ ವಿಚಾರವಂತಿಕೆಯನ್ನು ಬೆಂಗಾವಲಾಗಿಟ್ಟುಕೊಂಡು ಬೆಳೆದಿರುವುದು ಅಲ್ಲವೆ?

ಮನುಷ್ಯ ಸಮಾಜದಲ್ಲಿ ಮೇಲುಕೀಳೆನ್ನದೆ, ಹೆಣ್ಣು ಗಂಡೆನ್ನದೆ, ಎಲ್ಲರನ್ನೂ ಸಮಾನವಾಗಿ ಕಾಣುವ ಪ್ರವೃತ್ತಿಯಿಂದ ಸಾಕಷ್ಟು ಲಾಭವೇ ಆಗಿದೆ. ಲೋಕದ ಪ್ರಗತಿಯ ಹೆಜ್ಜೆಗೆ ಅದೊಂದು ಅಗತ್ಯವಾದ ಸಂಗತಿಯಾಗಿದೆ. ಆ ಸಮಾನ ನೋಟದ ರಾಜಕೀಯ ಅವತಾರವೇ ಪ್ರಜಾಪ್ರಭುತ್ವವಲ್ಲವೆ? ಆ ಸಮಾನತೆಯನ್ನು, ಸಮಾನ ದನಿಯನ್ನು ಕಿತ್ತುಕೊಂಡು, ಚಿನ್ನ ಕೈಗಿತ್ತರೂ ಕೂಡ ಎದೆಯಲ್ಲಿ ಉಳಿದುಬಿಡುವ ನಿರಾಸೆಗೆ ಈಗಿನ ಕ್ಷಿಪ್ರ ಕ್ರಾಂತಿಗಳೇ ಸಾಕ್ಷಿ ಅನಿಸುತ್ತದೆ.

ಜಪಾನಿನಲ್ಲಿ ಹತ್ತಾರು ವರ್ಷಗಳಿಂದ ನಡೆದುಕೊಂಡೇ ಬಂದಿರುವ ಅಣುವಿರೋಧಿ ಚಳವಳಿಯನ್ನು ಜಪಾನಿನ ಸರ್ಕಾರ, ಮಾಧ್ಯಮ ಕಡೆಗಣಿಸುತ್ತಲೇ ಬಂದಿದೆ. ದೊಡ್ಡ ದೊಡ್ಡ ವಿದ್ಯುತ್ ಕಂಪನಿಗಳ ಒಳಸಂಚಿನಿಂದಾಗಿ, ಆ ಅಣುವಿರೋಧಿ ಚಳವಳಿಗಳ ಬಗ್ಗೆ ಯಾವುದೇ ಮಾಧ್ಯಮದಲ್ಲೂ ಚರ್ಚೆ ನಡೆಯದ ಹಾಗೆ ನೋಡಿಕೊಳ್ಳಲಾಗಿದೆ. ಜಪಾನಿನ ಸಮಾಜದ ಬಗ್ಗೆ ಹೊರಲೋಕಕ್ಕಿರುವ ಶುಭ್ರ ನೋಟ ಅದರ ಹಲವು ಹುಳುಕಗಳನ್ನು ಗಮನಿಸುವಲ್ಲಿ ಸೋಲುವಂತೆ ಮಾಡಿದೆ. ವೇಲ್ ಹಂಟಿಂಗಿನ ಸಂಗತಿಯಲ್ಲೂ ಜಪಾನು ತಳೆದಿರುವ ನಿಲುವು ಹಾಗು ಲೋಕದ ಕಣ್ಣಿಗೆ ಮಣ್ಣೆರಚುವ ಕೆಲಸ ಅದನ್ನು ಅನುಸರಿಸಿದವರಿಗೆ ತಿಳಿದೇ ಇದೆ.

ಜಪಾನಿನ ಅಣುವಿರೋಧಿ ಗುಂಪುಗಳು ಹತ್ತಾರು ವರ್ಷಗಳಿಂದ ಎಚ್ಚರಿಸಿಕೊಂಡು ಬಂದಿರುವ ಸಂಗತಿ ಈಗ ನಿಜವಾಗಿದೆ. ಫುಕುಶಿಮಾ ಅಣುಸ್ಥಾವರದ ಬಗ್ಗೆ ಅವರು ನೀಡಿದ್ದ ಅತಿಘೋರ ಭವಿಷ್ಯವಾಣಿ ನಿಜವಾಗುತ್ತಿರುವ ಸಂಕಟ ಜಪಾನಿನ ಇಡೀ ಸಮಾಜಕ್ಕೆ ಸವಾಲಾಗಿ ನಿಂತಿದೆ. ಜಪಾನಿನ ಹಲವು ಸಾಮಾನ್ಯರು ಈಗ ತಮ್ಮ ಸರ್ಕಾರವನ್ನು ನಂಬಲಾಗದ ಸ್ಥಿತಿಯಲ್ಲಿದ್ದಾರೆ. ತಮ್ಮ ಕುಟುಂಬ ಹಾಗು ಮಕ್ಕಳ ರಕ್ಷಣೆಗೆ ತಾವೇ ಮುಂದಾಗುತ್ತಿದ್ದಾರೆ. ಆರ್ಥಿಕವಾಗಿ ಮುಂದುವರಿದ ಸಮಾಜವೊಂದರ ದುರಂತ ಎಂದು ಅದನ್ನು ಹಲವರು ನೋಡುತ್ತಿದ್ದಾರೆ.

ಪ್ರಭುತ್ವ ತನ್ನ ಜನರ ಜತೆಗೆ ಬಿಚ್ಚುಮನಸ್ಸಿನಿಂದ ವ್ಯವಹರಿಸದೇ ಹೋದರೆ, ಹಾಗೆ ವ್ಯವಹರಿಸಬೇಕಾದ ವ್ಯವಸ್ಥೆಯನ್ನು ಕಟ್ಟಿಕೊಳ್ಳದೇ ಇದ್ದರೆ, ಎಲ್ಲ ಸಮಾಜಗಳೂ ಒಂದಲ್ಲ ಒಂದು ಬಗೆಯಲ್ಲಿ ಈ ರೀತಿಯ ಕೋಲಾಹಲವನ್ನು ಎದುರಿಸಲೇ ಬೇಕಾಗುತ್ತದೆ. ಹಾಗಾಗಿಯೇ ಪ್ರಕೃತಿಯ ಹಾಗು ಜನಧ್ವನಿಯ ಈ ಎಲ್ಲ ಕೋಲಾಹಲದ ಅಡಿಯಲ್ಲಿ ಇರುವ ಮುಖ್ಯವಾದ ಈ ಸಮಾನಾಂತರ ಸಂಗತಿ ನಮ್ಮ ಗಮನದಿಂದ ತಪ್ಪಿಸಿಕೊಳ್ಳಬಾರದು.