ಭೈರಪ್ಪನವರ ಕವಲು ಕಾದಂಬರಿಯ ಕುರಿತಾಗಿ ಎದ್ದಿರುವ ಚರ್ಚೆಯ ಸಂದರ್ಭದಲ್ಲಿ ಈ ಟಿಪ್ಪಣಿ ಮಾಡಬೇಕೆನಿಸಿತು.

ಕನ್ನಡದಲ್ಲಿ ಪುಸ್ತಕೋದ್ಯಮ ಅವನತಿಯ ಅಂಚಿನಲ್ಲಿದೆ. ಕನ್ನಡಿಗರು ಪುಸ್ತಕಗಳನ್ನು ಕೊಂಡು ಓದುವುದಿಲ್ಲ. ಮಾರಾಟವಾಗುವ ಪುಸ್ತಕಗಳಲ್ಲಿ ವ್ಯಕ್ತಿತ್ವ ವಿಕಸನ, ಆಧ್ಯಾತ್ಮ, ಅಡುಗೆ, ಸಾಮಾನ್ಯ ಜ್ಞಾನ ಸಂಬಂಧಿ ಪುಸ್ತಕಗಳೇ ಹೆಚ್ಚು. ಸೃಜನಶೀಲ ಸಾಹಿತ್ಯವನ್ನು ಕೊಳ್ಳುವವರು ಇಲ್ಲವೇ ಇಲ್ಲ ಎನ್ನುವಷ್ಟು ವಿರಳ ಎನ್ನುವ ಸಾಮೂಹಿಕ ಅಭಿಪ್ರಾಯ ಗಟ್ಟಿಯಾಗುತ್ತಿರುವ ಸಮಯದಲ್ಲಿ ಕಾದಂಬರಿಯೊಂದು, ಅದರಲ್ಲೂ ಚೇತನ್ ಭಗತ್ ಮಾದರಿಯ ಮಸಾಲಾ ವಸ್ತುವನ್ನು ಆಧರಿಸಿರದ ಗಂಭೀರ ಕಾದಂಬರಿ ಪ್ರಕಟವಾದ ತಿಂಗಳೊಂದರಲ್ಲೇ ಐದು ಮುದ್ರಣಗಳನ್ನು ಕಾಣುತ್ತದೆ, ಪ್ರಕಟಣೆಯ ಮುನ್ನವೇ ಪತ್ರಿಕೆಗಳಲ್ಲಿ ಅದರ ಬಗ್ಗೆ ವರದಿಯಾಗುತ್ತದೆ, ಜನರು ಬಿಡುಗಡೆಗಾಗಿ ಕಾತರಿಸುತ್ತಾರೆ ಎಂದರೆ ಕನ್ನಡಿಗರು ಸಂತೋಷ ಪಡಬೇಕು.

ಭೈರಪ್ಪನವರ ಹಿಂದಿನ ಕಾದಂಬರಿಗಳು ಅದ್ಯಾವ ರೀತಿ ಜನಪ್ರಿಯತೆಯನ್ನು ಗಳಿಸಿದವೋ ತಿಳಿದಿಲ್ಲ ಆದರೆ ನಾನು ಗಮನಿಸಿದಂತೆ ಆವರಣ ಹಾಗೂ ಕವಲು ಕಾದಂಬರಿಗಳು ಭೈರಪ್ಪನವರ ತಾತ್ವಿಕ ವಿರೋಧಿಗಳಿಂದಲೇ ಹೆಚ್ಚು ಪ್ರಚಾರವನ್ನು ಗಿಟ್ಟಿಸಿಕೊಂಡವು. ಕವಲು ಕಾದಂಬರಿಯನ್ನು ನಾನಿನ್ನೂ ಓದಿಲ್ಲವಾದರೂ ವಿಮರ್ಶೆಗಳ ಕನ್ನಡಿಯಲ್ಲಿ ಕಂಡ ಅಂಶಗಳನ್ನು ಗಮನದಲ್ಲಿರಿಸಿಕೊಂಡು ಈ ಟಿಪ್ಪಣಿ ಬರೆಯುತ್ತಿರುವೆ.

ನಿಸ್ಸಂಶಯವಾಗಿ ಭೈರಪ್ಪ ಒಬ್ಬ ಅದ್ಭುತ ಕಾದಂಬರಿಕಾರ. ಕಾದಂಬರಿಯ ವಸ್ತು, ತಂತ್ರ, ಭಾಷಾ ಪ್ರಯೋಗ, ಸಂಭಾಷಣೆಗಳ ನೈಜತೆ, ಪ್ರಾದೇಶಿಕತೆ ಮೊದಲಾದವುಗಳನ್ನು ಅತೀವ ಶ್ರದ್ಧೆಯಿಂದ ರಚಿಸುತ್ತಾರೆ. ಪಾತ್ರಗಳ ಒಳತೋಟಿಯನ್ನು ಅತ್ಯಂತ ಸಮರ್ಥವಾಗಿ ಭಾಷೆಯಲ್ಲಿ ಬಿಂಬಿಸುತ್ತಾರೆ. ಅನ್ವೇಷಣೆಯಲ್ಲಿ ಕಂಠಿ ಜೋಯಿಸರು ಕುದುರೆಯ ಮೇಲೆ ಸವಾರಿ ಮಾಡುತ್ತಾ ಹೋಗುವಾಗ ಅವರ ಮನಸ್ಸಿನಲ್ಲಿ ನಡೆಯುವ ಆಲೋಚನೆಗಳ ಚಿತ್ರಣ ಇಂದಿಗೂ ನನ್ನ ಮನಸ್ಸಿನಲ್ಲಿ ಛಾಪು ಒತ್ತಿದ ಹಾಗೆ ನಿಂತಿದೆ. ಎಲ್ಲಿಂದಲೋ ಶುರುವಾಗಿ ಯಾವುದರಲ್ಲೋ ತೊಡಗಿಕೊಂಡು ಇನ್ನೆಲ್ಲಿಗೂ ಹರಿಯುತ್ತಾ ಇದ್ದಕ್ಕಿದ್ದ ಹಾಗೆ ಇನ್ನೇನನ್ನೋ ನೆನಪಿಸಿಕೊಳ್ಳುವ ಒಳಮನಸ್ಸಿನ ವ್ಯಾಪಾರವನ್ನು ಅಕ್ಷರಗಳಲ್ಲಿ ಕಡೆದಿರಿಸುವುದರಲ್ಲಿ ಅವರ ಹೆಚ್ಚುಗಾರಿಕೆಯಿದೆ. ‘ಪರ್ವ’ದಲ್ಲಿನ ಅರ್ಜುನನ ಮನಸ್ಸಿನ ಆಲೋಚನೆಗಳ ವೇಗ, ಕುಂತಿಯ ಮನಸ್ಸಿನ ತುಮುಲಗಳ ಆವೇಗ ಎಲ್ಲವೂ ಅತ್ಯದ್ಭುತ. ಕಾದಂಬರಿಯ structure, ಶೈಲಿಯ ಬಗ್ಗೆ ಭಾರಿ ಕಾಳಜಿ ವಹಿಸುವ ಭೈರಪ್ಪನವರ ಶ್ರದ್ಧೆ, ಕಸುಬುದಾರಿಕೆ, ಪರಿಶ್ರಮವನ್ನು ಅವರ ವಿರೋಧಿಗಳೂ ಮೆಚ್ಚುವರು.

ನಾನು ಗುರುತಿಸಿದಂತೆ ಭೈರಪ್ಪನವರ ಕಾದಂಬರಿಗಳ ಕೊರತೆಗಳು ಕೆಲವಿವೆ. ಮೊದಲನೆಯದಾಗಿ, ಅವರು ಕಾದಂಬರಿಗಾಗಿ ಆಯ್ದುಕೊಳ್ಳುವ ವಸ್ತು. ಇದು ಅವರ ಕಾದಂಬರಿಗಳ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ಅತಿ ಕ್ಲಿಷ್ಟಕರವಾದ, ಸಾವಿರಾರು ಆಯಾಮಗಳಿರುವ, ಕಪ್ಪು-ಬಿಳುಪೆಂದು ವರ್ಗೀಕರಿಸಲಾರದಷ್ಟು ಸಂಕೀರ್ಣವಾದ ವಸ್ತುವನ್ನು ಭೈರಪ್ಪ ಆರಿಸಿಕೊಳ್ಳುತ್ತಾರೆ. ಅವರು ಆ ವಸ್ತುವಿನ ಬಗೆಗೆ ಸ್ಪಷ್ಟತೆಯನ್ನು ಪಡೆಯುವುದಕ್ಕೆ ಬಹಳಷ್ಟು ಸಂಶೋಧನೆ, ಅಧ್ಯಯನಗಳನ್ನು ಮಾಡುತ್ತಾರೆ. ಇಡೀ ಕಾದಂಬರಿಯ ತಿರುಳನ್ನು ಒಂದು ಪ್ಯಾರಾದಲ್ಲಿ ಇಲ್ಲವೇ ಒಂದೇ ಸಾಲಿನಲ್ಲಿ ಹೇಳಬಲ್ಲಷ್ಟು ಸ್ಪಷ್ಟವಾಗಿ ಕಾದಂಬರಿಯ ವಸ್ತು ಅವರ ಪ್ರಜ್ಞೆಯಲ್ಲಿ ಬೇರೂರಿರುತ್ತದೆ. ಅದಕ್ಕೆ ಕಾದಂಬರಿಯ ರೂಪ ಕೊಡುವಾಗಲೂ ಅವರು ಆ ವಸ್ತುವಿನ ಆಳಕ್ಕೆ ಇಳಿಯುತ್ತಾರೆ. ಪಾತ್ರಗಳ ವರ್ತನೆ, ಕ್ರಿಯೆಗಳ ಮೂಲಕ ಆ ಸಮಸ್ಯೆಯ ಎಲ್ಲಾ ಮುಖಗಳನ್ನು ಅನಾವರಣಗೊಳಿಸುತ್ತಾ ಹೋಗುತ್ತಾರೆ. ಇಲ್ಲಿಯವರೆಗೆ ಕಾದಂಬರಿಕಾರ ಭೈರಪ್ಪ ಯಶಸ್ವಿಯಾಗುತ್ತಾರೆ. ಇಲ್ಲಿಂದ ಮುಂದಕ್ಕೆ ಕೆಲವು ಕಾದಂಬರಿಗಳಲ್ಲಿ ಸಮಾಜ ಶಾಸ್ತ್ರಜ್ಞ ಭೈರಪ್ಪ, ತತ್ವಜ್ಞಾನಿ ಭೈರಪ್ಪ, ದಿಗ್ಧರ್ಶಕ ಭೈರಪ್ಪ, ರಾಜಕಾರಣಿ ಭೈರಪ್ಪನವರ ಕೈ ಮೇಲಾಗುತ್ತದೆ. ಕಾದಂಬರಿಯಲ್ಲಿ ವಸ್ತುವೆಂಬ ಬೃಹತ್ ಕಟ್ಟದ ಬಾಗಿಲುಗಳನ್ನೆಲ್ಲಾ ತೆರೆದುಕೊಂಡು ಕಾದಂಬರಿಕಾರ ಒಳನುಗ್ಗಿರುತ್ತಾನೆ. ಅನಂತರ ಬರುವ ಚಿಂತಕ ಆ ಎಲ್ಲಾ ಬಾಗಿಲುಗಳನ್ನು ಮುಚ್ಚುತ್ತಾ ಬರುತ್ತಾನೆ. ಇಲ್ಲಿಯೇ ಅನೇಕ ವೇಳೆ ಕಸಿವಿಸಿಯಾಗುವುದು. ಅಲ್ಲಿಯವರೆಗೆ ಸಮರ್ಥವಾಗಿ ಬೆಳೆದು ನಿಂತು ಕಾದಂಬರಿಕಾರನ ತಾತ್ವಿಕತೆಗೆ ಸೆಡ್ಡು ಹೊಡೆದ, ಆತನ ಜೀವನಾದರ್ಶಕ್ಕೆ ಸವಾಲು ಹಾಕಿ ಸಂಕೀರ್ಣತೆಯನ್ನು ಸೃಷ್ಟಿಸಿದ ಪಾತ್ರಗಳು ಸೋಲೊಪ್ಪಿಕೊಂಡು ಬಿಡುತ್ತವೆ. ಇದರಿಂದ ಇಡೀ ಕಾದಂಬರಿಯಲ್ಲಿ ಜರುಗಿದ ಸಂಘರ್ಷ ಕಾದಂಬರಿಯ ಕಡೆಗೆ ಅಂತ್ಯವನ್ನು ತಲುಪಿಬಿಡುತ್ತದೆ.

ಈ ಬಗೆಯ ಕಥನ ತಂತ್ರವನ್ನು ಮೆಚ್ಚುವವರೇ ಬಹಳ ಮಂದಿ. ಹೀಗಾಗಿ ಭಯೋತ್ಪಾದನೆಯನ್ನೇ ವಸ್ತುವನ್ನಾಗಿಸಿಕೊಂಡ ನಿಶಿಕಾಂತ್ ಕಾಮತ್ ನಿರ್ದೇಶನದ ಮುಂಬೈ ಮೇರಿ ಜಾನ್ ಚಿತ್ರಕ್ಕಿಂತ ನೀರಜ್ ಪಾಂಡೆಯವರ ಎ ವೆಡ್ ನೆಸ್ ಡೇ ಹೆಚ್ಚು ಜನರಿಗೆ ಇಷ್ಟವಾಗುವುದು. ಕೇವಲ ಸಮಸ್ಯೆಯ ಪದರಗಳನ್ನು ಬಿಚ್ಚಿಟ್ಟು ಅದರ ಸಂಕೀರ್ಣತೆಯ ಅರಿವನ್ನು ಓದುಗನಿಗೆ ದಾಟಿಸಿದರೆ ಸಾಲದು ಅವುಗಳಿಗೆ ಪರಿಹಾರವನ್ನೂ ಸಹ ಕಾದಂಬರಿಯಲ್ಲಿಯೇ ಸೂಚಿಸಬೇಕು ಎನ್ನುವುದು ಅನೇಕ ಓದುಗರ ಅಪೇಕ್ಷೆಯಾಗಿರುತ್ತದೆ. ಅಂತಹ ಕಾದಂಬರಿಯನ್ನು ಓದಿದಾಗಲೇ ಅವರಿಗೆ ಓದು ಸಂಪೂರ್ಣವಾದ ತೃಪ್ತಿ ಲಭಿಸುತ್ತದೆ. ನನ್ನಂತ ತಲೆ ಪ್ರತಿಷ್ಠೆಯ ಓದುಗರಿಗೆ ಈ ಸಮಸ್ಯೆಗಳಿಗೆ ಕಾದಂಬರಿಕಾರನೇ ಪರಿಹಾರ ಸೂಚಿಸುವುದು ನಮ್ಮ ಬುದ್ಧಿವಂತಿಕೆಗೆ ಮಾಡಿದ ಅಪಮಾನ ಎಂದು ಭಾಸವಾಗುತ್ತದೆ. ತನ್ನೆಲ್ಲ ಓದುಗರಿಗಿಂತ ತಾನು ಸಮರ್ಥವಾಗಿ ಜಡ್ಜ್ ಮಾಡಬಹುದು ಎಂದು ಕಾದಂಬರಿಕಾರ ಘೋಷಿಸಿದಂತೆ ಅನ್ನಿಸುತ್ತದೆ.

ಎರಡನೆಯದು, ಇವರ ಕಾದಂಬರಿಗಳ ಪಾತ್ರಗಳು ನೇರವಾಗಿ ಸಮಸ್ಯೆಯ ಕೆಲವು ಮುಖಗಳನ್ನು ಪ್ರತಿನಿಧಿಸುತ್ತವೆ. ಉದಾಹರಣೆಗೆ ಆವರಣದಲ್ಲಿ ನಾಯಕಿ (ಜೋಹರಾ?) ಭ್ರಮನಿರಸನಗೊಂಡ, ಹಿಂದುತ್ವವನ್ನು ಪುನಃ ಅಪ್ಪುವ ಆಧುನಿಕ ಹೆಣ್ಣನ್ನು ಪ್ರತಿನಿಧಿಸುತ್ತಾಳೆ. ಆಕೆಯ ಗಂಡ ಮಾಡರೇಟ್ ಮುಸ್ಲಿಂ ಸಮಾಜವನ್ನು ಪ್ರತಿನಿಧಿಸುತ್ತಾನೆ. ಪ್ರೊಫೆಸರ್ ಎಲ್ಲಾ ಬುದ್ಧಿಜೀವಿಗಳ ರೆಪ್ರೆಸೆಂಟೇಟಿವ್ ಆಗ್ತಾನೆ. ಕಾದಂಬರಿ ಮುಟ್ಟುವ ವಸ್ತುವಿನೊಂದಿಗೆ ನೇರವಾಗಿ ಪಾತ್ರಗಳೆಲ್ಲವನ್ನೂ ಕನೆಕ್ಟ್ ಮಾಡುವ ಅನಿವಾರ್ಯತೆಯಲ್ಲಿ ಭೈರಪ್ಪ ಸಿಲುಕಿಕೊಳ್ಳುತ್ತಾರೆ. ಆದರೆ ನಿತ್ಯ ಬದುಕಿನಲ್ಲಿ ನಾವು ಹಾಗೆ ಬದುಕುವುದಿಲ್ಲ. ಎಲ್ಲಾ ತತ್ವಾದರ್ಶ, ಸಮಸ್ಯೆಗಳಿಗಿಂತಲೂ ಜೀವನ ದೊಡ್ಡದಾಗಿರುತ್ತದೆ, ಮುಖ್ಯವಾಗಿರುತ್ತದೆ. ಬೆಡ್ ರೂಮಿನಲ್ಲಿ ಪವಡಿಸಿರುವಾಗ ಇತಿಹಾಸದ ಬಿಕ್ಕಟ್ಟನ್ನು ಚರ್ಚಿಸುವುದಕ್ಕೆ ಆಸ್ಪದವಿರದಷ್ಟು ಜಂಜಡಗಳಿರುತ್ತವೆ, ಮಾತುಕತೆಯಿರುತ್ತವೆ. ಬಹುಶಃ ದೊಡ್ಡದೊಂದು ಸಮಸ್ಯೆಯನ್ನು ಎತ್ತಿಕೊಂಡಾಗ ಕ್ರಿಸ್ಪ್ ಆಗಿ ನಿರೂಪಿಸುವ ಧಾವಂತದಲ್ಲಿ ಹೀಗಾಗುತ್ತದೆಯೇನೋ. ಅಲ್ಲದೆ ಇಲ್ಲಿ ಭಿನ್ನ ಅಭಿಪ್ರಾಯದ ಪಾತ್ರಗಳು ಮುಖಾಮುಖಿಯಾಗುವಾಗ ನಡೆಯ ಡಿಬೇಟ್ ರೂಪದ ಸಂಭಾಷಣೆಗಳು ಖಂಡಿತವಾಗಿಯೂ ಓದುಗರನ್ನು ರಂಜಿಸುವ ಉದ್ದೇಶ ಹೊಂದಿರುತ್ತವೆ, ಈ ವಾಗ್ವಾದದ ಸಂದರ್ಭದಲ್ಲಿ ಓದುಗರು ಎರಡರಲ್ಲಿ ಒಂದು ಅಭಿಪ್ರಾಯ ಹೊಂದಿರುವವರಾದರಂತೂ ಅವರು ಆಸ್ಥೆಯಿಂದ ಸ್ಪಂದಿಸುವುದು ಸಾಮಾನ್ಯ. ತಮ್ಮ ಅಭಿಪ್ರಾಯದ ಕೈಮೇಲಾದಾಗ ಹಿಗ್ಗುವುದು, ತಮ್ಮ ಪಾರ್ಟಿ ಇಕ್ಕಟ್ಟಿಗೆ ಸಿಲುಕಿದಾಗ, ಸೋತಾಗ ಖಿನ್ನರಾಗುವುದು… ಹೀಗೆ ಒಂದು ರೀತಿಯ ಎಮೋಶನಲ್ ರೋಲರ್ ಕೋಸ್ಟರಿನಲ್ಲಿ ಕರೆದೊಯ್ಯುವ ನಿರೂಪಣೆ ಒಂದು ನೆಲೆಯಲ್ಲಿ ತನ್ನ ಕೆಲಸವನ್ನು ಯಶಸ್ವಿಯಾಗಿಯೇನೋ ಮಾಡುತ್ತದೆ ಆದರೆ ಸಾಹಿತ್ಯಿಕವಾಗಿ ಆ ವಾಗ್ವಾದಕ್ಕೆ ಅಂತಹ ಮಹತ್ವ ಇರದು ಎನ್ನುವುದು ನನ್ನ ಅನಿಸಿಕೆ.

ಸುಪ್ರೀತ್ಮೂರನೆಯದು, ಇದನ್ನು ಭೈರಪ್ಪನವರ ಬುದ್ಧಿವಂತಿಕೆ ಅನ್ನಬೇಕೋ ಅಥವಾ ಅವರನ್ನು ಓದುವವರ, ಪ್ರತಿಕ್ರಿಯಿಸುವವ ಪೆದ್ದತನವೆನ್ನಬೇಕೋ ತಿಳಿಯದು. ಕೆಲವು ಕಾದಂಬರಿಗಳಲ್ಲಿ ಭೈರಪ್ಪ ಸಾಹಿತ್ಯಿಕ ಅಂಶಗಳಿಗೆ ಮಹತ್ವ ಕೊಟ್ಟಂತೆಯೇ, ಅಧ್ಯಯನ, ಹೋಂ ವರ್ಕಿಗೆ ಗಮನ ಕೊಟ್ಟಂತೆಯೇ ಜೇನು ಗೂಡಿಗೆ ಕಲ್ಲೆಸೆಯುವ ಕೆಲಸವನ್ನೂ ಕೊಂಚ ತುಂಟತನದಿಂದಲೇ ಮಾಡುತ್ತಾರೆ. ಆವರಣದಲ್ಲಿ ಅನಂತಮೂರ್ತಿಯವರನ್ನು ಹೋಲುವ ಪಾತ್ರವನ್ನು ಸೃಷ್ಟಿಸಿದ್ದಾಗಿರಬಹುದು, ಕವಲುವಿನಲ್ಲಿ ಸ್ತ್ರೀ ವಿಮೋಚನೆ ಪ್ರತಿಪಾದಕಿಯನ್ನು ಸಲಿಂಗಕಾಮಿಯಾಗಿಸಿರುವುದಾಗಿರಬಹುದು… ಹೀಗೆ ಜೇನು ಗೂಡಿಗೆ ಕಲ್ಲೆಸೆದು ಭೈರಪ್ಪ ಸುಮ್ಮನೆ ಕೂತು ಬಿಡುತ್ತಾರೆ. ಪಾಪದ ಜೇನು ನೊಣಗಳು ಕಲ್ಲು ಬೀಸಿ ಬಂದ ದಿಕ್ಕಿಗೆ ದಾಳಿಯಿಕ್ಕುತ್ತವೆ. ಕಲ್ಲೆಸೆದವನನ್ನು ಮುಕ್ಕುತ್ತವೆ. ಪತ್ರಿಕೆಗಳಲ್ಲಿ, ಬ್ಲಾಗುಗಳಲ್ಲಿ, ಜನರ ಗುಂಪಿನಲ್ಲಿ, ಫೋನ್ ಕಾಲುಗಳಲ್ಲಿ ಭಾರಿ ಉದ್ವೇಗದಿಂದ ಕೂಡಿದ ಚರ್ಚೆಗಳಾಗುತ್ತವೆ.ಈ ವಿವಾದದ ಹೊಗೆಯಲ್ಲಿ ಜನಪ್ರಿಯತೆಯ ಸಿಹಿ ಜೇನು ಭೈರಪ್ಪನವರ ಪಾಲಾಗುತ್ತದೆ. ಅಳದಿದ್ದರೆ, ರಚ್ಚೆ ಹಿಡಿಯದಿದ್ದರೆ, ಕೀಟಲೆ ಮಾಡದಿದ್ದರೆ ತಮ್ಮ ಅಸ್ತಿತ್ವ ಗುರುತಿಸಲ್ಪಡುವುದೇ ಇಲ್ಲ ಎನ್ನುವ ಸಂದೇಶವನ್ನು ಸಾಹಿತಿಗಳಿಗೆ ನಮ್ಮ ಮಾಧ್ಯಮಗಳು ಹಾಗೂ ಸಮಾಜ ತಲುಪಿಸಿದಂತಾಗುತ್ತದೆ. ಮುಂದೆ ಇಂತಹ ಹೈ ಡ್ರಾಮಾಗಳು ಹೆಚ್ಚಾಗಿ ಟಿವಿ ಚಾನಲುಗಳ ಟಿ ಆರ್ ಪಿ, ಪತ್ರಿಕೆಗಳ ಪ್ರಸಾರವೂ ಹೆಚ್ಚುತ್ತದೆ, ದಿನನಿತ್ಯದ ಯಾಂತ್ರಿಕ ಜೀವನದಿಂದ ದಣಿದ ವೀಕ್ಷಕ-ಓದುಗರಿಗೆ ಚುಚ್ಚುವ, ಕೆಣಕುವ, ಪ್ರಚೋದಿಸುವ ಮನರಂಜನೆಯೂ ದೊರೆಯುತ್ತದೆ, ಸಾಹಿತಿಯ ಕೃತಿಯೂ ಖರ್ಚಾಗುತ್ತದೆ. ಎಲ್ಲರೂ ಸುಖಿಗಳು! ಭೈ