1. ನಕ್ಷತ್ರ ದೇವತೆ

ನಕ್ಷತ್ರ ದೇವತೆಯೊಬ್ಬಳು
ನನ್ನ ಕೇಳುತಿರುವಳು;
ಯಾಕಿಷ್ಟು ದೂರ ನಮ್ಮ ನಡುವೆ
ಆರಿಹೋಗುವ ಹಾಗೆ ನಾನು ಕ್ಷೀಣಗೊಳುತಿರುವೆ
ಕಣ್ಣ ಬೆಳಕನು ಎರೆದು
ಉದ್ದೀಪಿಸಲು ನೀನು
ಬಾನೆದೆಯಿಂದ ನಿನ್ನ ಎದೆಬಾನೊಳಗೆ
ಬಂದುಬಿಡುವೆ; ಇಲ್ಲದಿದ್ದರೆ ನೀನೇ
ಆಗುವೆ ನಿನ್ನ ಹೊರಗೆ!

‘ಯಾವುದದು ಕಣ್ಣ ಬೆಳಕು?’

‘ತನಗೆ ಮುನಿವವಗೆ ತಾನು ಒಲಿಯುವುದು’

ಸಾಧ್ಯವೇ ಅದು ಸಾಧ್ಯವೇ ನನಗೆ
ಮಬ್ಬಾಗಿ ಮಸಕಾಗಿ ಮಂಕಾಗಿ
ಹೋಗುತಿರುವಳು ದೇವತೆ

(ಬಸವಣ್ಣನವರ ಮಾತಿದೆ: ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ? ಎಂದು. ಹಾಗೇ ಯೇಸು ಅಥವಾ ಕಾದಂಬರಿಕಾರ ದಾಸ್ತೊವ್ಸ್ಕಿ ಅದನ್ನು ‘ಧನಾತ್ಮಕ ಪ್ರೇಮ‘ ಎನ್ನುತ್ತಾರೆ. ಎಂಥ ಕಷ್ಟದ್ದು ಅದು. ನಮ್ಮನ್ನು ದ್ವೇಷಿಸುವವರನ್ನೂ ಪ್ರೀತಿಸುವುದು. ಅದು ಹೆಚ್ಚೂ ಕಮ್ಮಿ ಅಪ್ರಾಕೃತಿಕವಾದ್ದು, ಅಸಹಜವಾದ್ದು. ಅಥವಾ ದೈವಿಕವಾದ್ದು. ನಮ್ಮಂಥ ಸಾಮಾನ್ಯರಿಗೆ ಅಸಾಧ್ಯವೆನಿಸುವಂಥದು. ನಮ್ಮ ಎಂಥ ಪ್ರೀತಿಯೂ ಅವರು ನಮ್ಮನ್ನು ಪ್ರೀತಿಸುತ್ತಾರೋ ಇಲ್ಲವೋ ಎನ್ನುವುದರ ಮೇಲೇ ಆಧರಿಸಿದ್ದು. ನಾವು ನಮ್ಮನ್ನು ಹೇಗೇ ನಂಬಿಸಿಕೊಂಡರೂ ಇದು ನಿಜ.

ನಮಗೆಲ್ಲರಿಗೂ ಸಾಮಾನ್ಯವಾಗಿ ಇತರರನ್ನು ದ್ವೇಷಿಸಲು ಇರುವ ಕಾರಣವೆಂದರೆ ಅವರು ನಮ್ಮನ್ನು ದೇಷಿಸುತ್ತಾರೆ ಎಂಬುದು. ಇದು ಪರಸ್ಪರ. ಹಾಗಾಗಿ ಇದೊಂದು ತುಂಡರಿಯದ ಕರ್ಮಚಕ್ರ. ಇದನ್ನು ತುಂಡರಿಸಬೇಕಾದರೆ, ಯಾರಾದರೂ ಒಬ್ಬರಿಗೆ ಈ ಪಾಸಿಟೀವ್ ಲವ್ ಇರಬೇಕಾಗುತ್ತದೆ. ಇಲ್ಲದಿದ್ದರೆ ಈ ಚಕ್ರ ಮುಂದುವರಿಯುವುದು ನಮ್ಮ ಹಣೆ ಬರಹ)

2.

ತಂದೆ ಮಗನ ಯುದ್ಧಾನಂತರ
ಕೆಂಪಿನ ಮೇಲೆ ನೀಲಿಯೊತ್ತುತ್ತ ಒತ್ತುತ್ತ
ಬಾನು ಕೆನ್ನೀಲಿ;
ಮಾನುಷವ ಗೆಲುತಿತ್ತು ಅತಿಮಾನುಷ
ಮುಗಿದಿದೆ ಇನ್ನು ಎಲ್ಲ ಹೋರಾಟ, ಧರೆಗೊರಗಿ
ವೀರಾಧಿವೀರರು;
ಜ್ವಾಲೆಯುಡುಗಿದರೂ ಹರಡಿ ನಿಗಿನಿಗಿ ಕೆಂಡ
ಸುಡುತಿರುವಂತೊಬ್ಬ- ಆತ ಮೂರು ಲೋಕದ ಗಂಡ!

ದೊರೆಯಗಲಿದ ಜನ, ಗಂಡ ಗತಿಸಿದ
ಹೆಂಡಿರು, ತಂದೆಯನು ಕೆಡೆದು ಕಳಕೊಂಡ
ಮಗ- ಸತ್ತವರಿಗಿಂತ ಹೆಚ್ಚು ಸತ್ತಂತಿರುವರು
ದುಃಖದ ನೆರೆ ಕೊಚ್ಚಿ ತೊಡೆವಾಗ ಆರ್ತ ಮೊರೆ
ಹೊರಡಿಸಲೆಂದಷ್ಟೇ ಅವರಿರುವರು
ಎದೆಗೆ ನಾಟುವುದಲ್ಲ, ಕರುಳು ಕತ್ತರಿಸುವ ಬಾಣದಿಂದಲೇ
ದೈವ ಘಾತಿಸುವುದು

ಅಳುಹೊಳೆ ಹರಿದರೂ ಸಾಕೆನಿಸಲಿಲ್ಲ ಅದಕ್ಕೆ
ಕಾದು ಉಗಿಯಾಗಿ ಹಬೆಯಾಗಿ ಸರಿದುಹೋಗುವ ತನಕ
ತೃಪ್ತಿಯಿಲ್ಲ; ಮೊದಲೇ ಬೆಂದವನೊಡನೆ ಹೋರಾಟ ವ್ಯರ್ಥ
ಚೊರೆ ಮಾಡದೇ ಇತ್ತುದು ಪಾತಾಳದ ಹಾವು-ಸ್ಪರ್ಶ ಸಂಜೀವಿನಿ ಮಣಿ
ಧಾವಿಸಿದ ಮಗ ಕಂಡದ್ದು ತಂದೆಯ ರುಂಡವಿಲ್ಲದ ಮುಂಡ
ಇನ್ನು ನಿಲ್ಲದು ಯಾವುದೇ ಪೌರುಷದ ಕಪಟ
ಶರಣು ಹೋದರೂ ಅದು ನಾನೆಂಬ ಗರುವ

ಎಲ್ಲ ಮುಗಿದ ಮೇಲೂ ಉಳಿದಿದೆ ಇನ್ನಷ್ಟು
ತಾನೇ ಇದಿರಾಗಿ ದೈವ ಆಡುವ ಚದುರಂಗ
ತನ್ನ ಒಳಕೋಣೆಯಲಿ;
ಅದಕ್ಕೂ ಕೊಡಬೇಕಿದೆ ಕೊಂಚ ಸಮಯ
ಇಲ್ಲದಿದ್ದರೆ ಪಾಪ, ಬರೀ ದೊಂಬರಾಟದಿ ಬೇಸತ್ತು
ಮುನಿಸಿಕೊಳ್ಳುವುದು, ಕೊಡಬೇಕಿದೆ ಕಡೆಗಾದರೂ ಅವಕಾಶ
ಅದರ ಸುದರ್ಶನಕ್ಕೆ, ಆತ್ಮದರ್ಶನಕ್ಕೆ

ಹೊತ್ತು ತರಲಿ ಅದು ತಂದೆಯ ಕಳುವಾದ ರುಂಡ
ಎಲ್ಲ ಅಳು ಎಲ್ಲ ಮೊರೆ ಎಲ್ಲ ಎಲ್ಲವೂ ಅಳಿದು
ಸಕಲ ಜೀವದ ಉಸಿರಾಗಲಿದೆ ನಿರಾಮಯ ಗಾಳಿ
ಹೆಸರು ಬರೆದರೆ ಗಾಳಿಯ ಮೇಲೆ ಜೋಕೆ
ಎಲ್ಲೂ ಮೂಡದ ಅದು ಕೊರೆಯುವುದು ಬರೆದವನ ಕಣ್ಣ ಪಾಪೆ
ಗಾಳಿ ಬೆಳಕು ಇರುಳಾಗಿ ದೈವದೊಂದಿಗೆ ಬೆರೆಯುವುದು
ಸೃಷ್ಟಿಯ ಬಗೆ; ಮಾನುಷದ ಮೆರುಗೂ ಅಷ್ಟೇ, ಹಾಗೇ

ಕವಿತೆಯ ಗಂಭೀರ ಓದುಗರಿಗೆ ಸೋಜಿಗವೆನಿಸಬಹುದು-ಹುಣಸೂರು ಕೃಷ್ಣಮೂರ್ತಿ ನಿರ್ದೇಶನದ ರಾಜ್ಕುಮಾರ್ ಅಭಿನಯದ ಬಬ್ರುವಾಹನ ಸಿನಿಮಾದ ಕೊನೆಯ ಹಂತದ ದೃಶ್ಯ ನನಗೆ ಯಾವಾಗಲೂ ಇಷ್ಟವಾಗುತ್ತಿತ್ತು. ಅರ್ಜುನ ರಾಜ್ ಮಗನೊಂದಿಗೆ ಯುದ್ಧದಲ್ಲಿ ಮಡಿದು ಮಲಗಿದ್ದಾರೆ. ತಂದೆಯ ಸಾವಿಗೆ ಕಾರಣನಾದ ಮಗ ರಾಜ್ ಬಬ್ರುವಾಹನ ರೋದಿಸುತ್ತಿದ್ದಾನೆ. ಆತನೊಂದಿಗೆ ಅರ್ಜುನನ ಇಬ್ಬರು ಹೆಂಡಿರು ನೆಲದ ಮೇಲೆ ಕೂತು ದುಃಖಿತರಾಗಿದ್ದಾರೆ. ಇಡೀ ದೃಶ್ಯ ನೇರಳೆ ಬಣ್ಣದಲ್ಲಿದೆ- ನೋವು ಮಡುಗಟ್ಟಿದಂತೆ. ಆ ಮುಸ್ಸಂಜೆಯ ತೀವ್ರ ವಿಷಾದದ ವಾತಾವರಣ ಬೆಚ್ಚಿಸುತ್ತಿದೆ. ಯುದ್ಧ, ಅದರ ಆಕ್ರೋಷ ಆವೇಶ ಎಲ್ಲವೂ ಈಗ ಕೊನೆಗೊಂಡು ಕರುಣವಷ್ಟೇ ವಿಜೃಂಬಿಸುತ್ತಿದೆ. ಇದು ದೈವಾಗಮನಕ್ಕೆ ತಕ್ಕ ಸಮಯ. ಜೀವನದ ಸಮಗ್ರ ಅರಿವು ಅನಾವರಣಗೊಂಡ ಸಮಯ…..

(ಇಲ್ಲಸ್ಟ್ರೇಷನ್ ಕಲೆ:ರೂಪಶ್ರೀ ಕಲ್ಲಿಗನೂರ್)