ಕೆಂಪು ಇಸವಿಗಳ ಗೋರಿಗಲ್ಲುಗಳು

ಧಗೆಯ ಕಾಲದಲ್ಲೂ ನಿವೃತ್ತ ಪ್ರಧಾನಿಯೊಬ್ಬ ನೇಗಿಲು ಹಿಡಿದು ಉಳುತ್ತಿರುವನು, ಸೈನಿಕರ ಹೆಣಗಳೇ ಹೆಣೆದುಕೊಂಡು ದೊಡ್ಡ ಹಗ್ಗದಂತಾದ ಹೊಲವನ್ನು, ಸದಾ ಬೆವರಿಳಿಯುವ ತನ್ನ ಮೈಯಾಗಿಸಿಕೊಂಡು.

ಸೂರ್ಯ ಅಸ್ತಮಿಸಿ ಕೆಲವು ಗಂಟೆಗಳೇ ಕಳೆದಿರಬಹುದು, ಅವನೋ ಶಿಸ್ತುಬದ್ಧ ಪ್ರಾಣಿ, ಹಗಲು ರಾತ್ರಿಗಳ ಕುರಿತು ಎಡೆಬಿಡದೆ ಚಿಂತಿಸುವ ಠಕ್ಕಿಗ. ಇಂಥಾ ಧೂರ್ತನನ್ನು ತನ್ನ ಕೈಗವಸಿನಲ್ಲಿ ಸಿಂಬೆ ಸುತ್ತಿಕೊಂಡಂತೆ ತುರುಕಿಟ್ಟುಕೊಂಡು ಸಮಾಜವಾದಿ ಬೇಟೆಗಾರ ಕಾಡಿನೊಳಗೆ ಜಾರಿರುತ್ತಾನೆ; ಕುಡುಕನೊಬ್ಬ ತನ್ನ ಮದ್ಯದ ಸೀಸೆಯೊಳಗೆ ಇವನನ್ನು ಸುರಿದುಕೊಂಡು ಹಿಂಸೆಗೀಡಾಗಿಸುತ್ತಾನೆ, ಬೆಳಗಿನ ಜಾವ ವಾಕರಿಸುತ್ತಾನೆ.

ಚಿಮಣಿಗಳು ನಿಸ್ತೇಜಗೊಳ್ಳುವ ಗಳಿಗೆಗಳು, ರಸ್ತೆಯಂಚಿನ ಕಕ್ಕಸುಬಾವಿಗಳಲ್ಲಿ ರಂಜನೀಯ ಗುಲಾಬಿಗಳು ಕರ್ಕಶವಲ್ಲದ, ನಿಷ್ಠಾವಂತ ವೃತ್ತಿ ಗುನುಗತೊಡಗುವವು. ಸುಖಾಸೀನ ಕುರ್ಚಿಯಲ್ಲಿ ವಕ್ಕರಿಸುವ ಸರ್ಕಾರಿ ಅಧಿಕಾರಿ ಕಾರ್ಯ ನಿರ್ವಹಿಸಲಾರ, ಅವನು ದೇಹದ ತುಂಬಾ ಹಣ ವಸೂಲಿ ಮಾಡುವ ಜಿಗಣೆ, ಹೆಣ್ಣು, ಕಚ್ಚುವ ಹೆಸರಿಸಲಾಗದ ಮೃಗ; ಬ್ಯೂರೋಕ್ರಸಿ ಮತ್ತೊಂದು ಹೊಲಸಿನಾಳವೇ ಇದ್ದೀತು!

ಬೊಂಬು, ಹಗ್ಗ, ಗಳ, ಟಿನ್ನುಗಳನ್ನು ಹೆಗಲು ಕಿವುಚಿಕೊಳ್ಳುವಂತೆ ಸೆಳೆಸೆಳೆವ ಅಂಗೈಗಳು ಬಿಳಿಗೋಡೆಗೆ ತಟ್ಟುವಾಗ ಒಡಮೂಡುವ ರಕ್ತಚಿತ್ರ, ಧೀರೋದಾತ್ತ ಚಳುವಳಿಯ ಲಾಂಛನ; ಅಂಬೇಡ್ಕರ್, ಗಾಂಧಿ ಸೃಜಿಸುವ ಶಿಖರ ಮಾರ್ಗ! ಇವರು ಊರಿದ ಹೆಜ್ಜೆಗಳೊಳಗೆ ಅಕ್ಷರಗಳು ಮಿನುಗುವ ಗೌಜು, ಗದ್ದಲದ ಸಂತೆ.

ಹದಗೆಟ್ಟಿತು ಇಸವಿ. ಒಡೆದ ಮನೆಗಾಜು, ಸುಟ್ಟ ರೈಲುಬೋಗಿಗಳು, ಅಧಿಕೃತ ಅತ್ಯಾಚಾರಗಳು; ಹುಟ್ಟಿದ ರಕ್ತ ಪಿಪಾಸು `ಹಿಂದೂ!’ ಪುಸ್ತಕಗಳ ಹಣೆಗಳಲ್ಲಿ ಗುಂಡುಗಳ ನೂಕುನುಗ್ಗಲು, ಅಲ್ಲಿ ಚಿಮ್ಮಿದ, ಸ್ರವಿಸಿದ ನೆತ್ತರ ದಾರಿಗಳಲ್ಲಿ ನಿರಾಶ್ರಿತ ಬರಹಗಾರರ ಕೊಂಪೆ; ಅಡವಿಟ್ಟ ರೊಟ್ಟಿ ಮತ್ತೆ ಸಿಕ್ಕಿತು ತಬ್ಬಲಿ ನಾವೆಯೊಳಗೆ.

ಅದು ಯುದ್ಧಭೂಮಿಯಿಂದ ಹಿಂತಿರುಗಿದ ಇಂಡಿಯಾದ ಮಿಲಿಟರಿ ವ್ಯಾನ್, ಅದರ ಚಕ್ರಗಳಡಿಯಲ್ಲಿ ಇಸವಿಗಳು ಸಿಕ್ಕಿಕೊಂಡಿದ್ದವು, ಲಕ್ಷಾಂತರ ತಿರಚು ಹೆಣಗಳ ಮುದ್ದೆಯಲ್ಲಿ.

ದೇಹಗಳ ಇಕ್ಕೆಲಗಳಲ್ಲಿ ಮೈಹಾಸಿಕೊಂಡು ಸವೆದ ಕಾಲದ ಅಡ್ಡರಸ್ತೆಗಳ, ಮೊನಚು ಕಳೆದುಕೊಂಡ ಹುಲಿ ಘರ್ಜನೆಯ ಕುರಿತು ದುಃಖಿಸಲಾರರು. ಇವರ ಶೋಕತಪ್ತ ಗಳಿಗೆಗಳು ಎಲ್ಲಿ ಅಡಗಿರುತ್ತವೆಯೆಂದರೆ, ಗುಲಾಬಿಗಳ ಆಳದಲ್ಲಿ ಅಡರಿದ ದಟ್ಟಮುಳ್ಳುಗಳಂತೆ ಇವರಲ್ಲೇನೂ ಇಲ್ಲ, ಆ ಗುಲಾಬಿಗಳಲ್ಲೂ ಇಲ್ಲ; ಏಕೆಂದರೆ ಕಾಲ ಮತ್ತು ಜಗತ್ತು ಇವರಲ್ಲಿ ವಶಗೊಂಡ ಬೇಜವಾಬ್ದಾರಿ ಖೈದಿಗಳು!

ಜೂಜು ಉಗಿದು ಇವನ ಕೈಬಿಟ್ಟಿತ್ತಷ್ಟೇ, ಬಂದೂಕು ಹೆಗಲಿಗೇರಿಸಿಕೊಂಡು ನಡೆಯತೊಡಗಿದ ಕುಡಿದುಳಿಸಿದ ಬಿಳಿರಮ್ಮನ್ನು ಅವಳ ತುಟಿಗೆ ಸುರಿದು, ಅಂದರೆ ಪದ್ಯದಾವಳಿಗೆ ಅಂದರೆ ಜಗತ್ತಿನ ನಗ್ನತೆಗೆ.

ಇವನು ಗಿಟಾರಿಗ, ಬಲುಮೋಜಿನ ಹೆಣ್ಣಿಗ. ಕೊಳದಂಚಿನಲ್ಲಿ ಮಲಗಿಕೊಂಡು ಮೈಥುನದಲ್ಲಿ ತೊಡಗಲಾರ, ನಗ್ನತೆ ಇವನ ಪ್ರಿಯ ಹವ್ಯಾಸಗಳಲ್ಲೊಂದು. ತನ್ನ ಬೆರಳುಗಳನ್ನು ತಾನೇ ನಂಬಲಾರದ ಕೃಷಿಕ; ಅದಕ್ಕೇ ಇವನು ವ್ಯವಸ್ಥೆಯ ಅನ್ಯಾಯಗಳ ವಿರುದ್ಧ ನಿಂತು ಗರ್ಜಿಸಬಹುದಾದ ಲಾಯಕ್ಕಿನ ಗೂಳಿ.

ಇವನು ಹಲವು ಬಯಕೆಗಳಲ್ಲಿ ಬಹು ಬೇಗನೆ ಕಲಿತದ್ದೆಂದರೆ ಕನಸು ಕಾಣುವ ಬಗೆ ಮತ್ತು ಕಾಣದಿರುವ ನ್ಯಾಯಗಳಲ್ಲಿ ಕಣ್ಣುಗಳನ್ನು ಮೀಟಿ ಹಾಕುವ ಗುಣಿಗಳನ್ನು ಸದಾಕಾಲ ತೊರೆಯಬಲ್ಲ ಶವ; ಪ್ರೇಮದ ಅನೇಕ ಕತೆಗಳಲ್ಲಿ ತಿದ್ದುಪಡಿ.

ಹಳದಿ ಮತ್ತು ಹಸಿರುವರ್ಣದ ಕೆರೆಬಯಲು, ವ್ಯಾಪಕವಾಗಿ ಹಬ್ಬಿದ ನೀರು. ಹಿಂಡಿಂಡು ಕಪ್ಪುಬಿಳಿವರ್ಣದ ನೀರುಕೋಳಿಗಳು. ಮುರಿದ ಮನೆ, ಬಿದಿರುಕಾಡು; ಬೊಂಬುಗಳಿಗೊಬ್ಬಬ್ಬ ಹುಡುಗಿಯರು.

ತಾನೇ ಬೀಸಿದ ಬಲೆಯಲ್ಲಿ ಸಿಕ್ಕು ಮೃತಗೊಂಡವನ ಅಸ್ತವ್ಯಸ್ತ ಮುಖ, ಕೆಸರಿನಾಳದಲ್ಲಿ ಹೂತ ಅವನ `ಎಡ’ಗಾಲಿನ ಚಪ್ಪಲಿ, ಮೀನುಗಳ ತುಂಬಿಕೊಳ್ಳಲೆಂದು ತಂದ ಟಿನ್ನಿನಲ್ಲಿ ವಡ್ರ್ಸ್ವರ್ತ್ನ ಮೋಹಕ ಗಿರಾಕಿಯರು; ಬುಡ್ಡೆಸೊಪ್ಪಿನ ಕಳಂಕಿತ ನೀಲಿಹೂಗಳು, ಸಿಗಡಿ; ಜಿನುಗಿ ಭೂಪಟವಾದ ರಕ್ತ, ರಕ್ತ, ರಕ್ತ…

ತಲೆಗಳಿಲ್ಲದೆ ಅಲೆದಾಡುವ ಹೊಲಗಳ್ಳ, ಭೂಗಳ್ಳ ಮಿಡತೆಗಳು, ಛಿದ್ರಗೊಂಡ ಅಡಕತ್ತರಿಗಳಲ್ಲಿ ಒಂದಾದ ಯುದ್ಧದ ದೀರ್ಘ ಕಥಾನಕಗಳು.

ವಿಸ್ತೃತ ಅಧ್ಯಯನಕ್ಕೆಂದು ಮೀಸಲಿಟ್ಟ ಸೀಳುನಾಯಿಗಳು ಹೆಣೆದವು ಮೂರು ದಾರಿಗಳನ್ನು, ಕಪ್ಪುಹಾಳೆಯ ಮೇಲೆ ಏನೋ ಬರೆದಿತ್ತು; ಹುಯಿಲೆಬ್ಬಿಸುವ, ರಾದ್ಧಾಂತದ ತಾರ್ಕಿಕ ಜನಪದ ಕಥೆಗಳು. ನಗೆಹಬ್ಬದ ಕನವರಿಕೆ, ನೆನಪು ಆ ವೃದ್ಧನಿಗೆ; ಬಣ್ಣಗೆಟ್ಟ ನೂರು ಅಂಗಿಗಳಲ್ಲಿ ಕಳೆದ ಶತಮಾನದ ಪಹಣಿ ಪತ್ರಗಳ ದಾಂಧಲೆ.

ಅಗರಬತ್ತಿ ತಯಾರಿಸುವ ಕಾರ್ಖಾನೆಯಲ್ಲಿ ನಿತ್ಯ ಜಗಳ, ಬೆಟ್ಟದ ತುದಿಯ ರಂಗಭೂಮಿಯ ಹೊಸ ಕತೆ; ಅಲ್ಲಿ ಶೇಕ್ಸ್ಪಿಯರ್, ಚೆಕಾವ್, ಬ್ರೆಕ್ಟ್, ಬೆಕೆಟ್, ಲಂಕೇಶ್- ಹಗ್ಗ, ಕುಡಗೋಲು, ನೇಗಿಲು ಹಿಡಿದು ಜೀತಕ್ಕೆ ತೆರಳುವ ಎಂದಿನ ಸಂಜೆಯ ಕರಾಳ ಆವೃತ್ತಿ.

ಬಣ್ಣಗಳು ನೊರೆಗಟ್ಟುವ ಮುದ್ರಣದ ಮನೆ ಹೊಂಡದಲ್ಲಿ ಈಜಾಡಿದವರು ಬದುಕಿದ ವೃತ್ತಾಂತಗಳು ರಾಷ್ಟ್ರೀಯ ಗ್ರಂಥಾಲಯಗಳಲ್ಲಿ ಕಂಡುಬರುವುದಿಲ್ಲ, ಗ್ರಾಮ ಪಂಚಾಯ್ತಿಯ ಗೋಡೆಗಳಲ್ಲಿ ಪಕ್ಷಿಗಳು ಆತ್ಮಹತ್ಯೆ ಮಾಡಿಕೊಂಡ ಕುರುಹುಗಳು!

ಮೇ ಹುಡುಗಿ

ಈ ನಗರದ ಅಪರೂಪದ ಕಾಡು, ಹುಚ್ಚುವೃಕ್ಷಗಳು, ಅವೈಜ್ಞಾನಿಕ ತೂಗುಸೇತುವೆಗಳು; ಅವಳು- ಆಗಾಗ, ಮತ್ತೆಮತ್ತೆ ಆ ಕಣ್ಣುಗಳನ್ನು ಹೀಗೆ ನೋಡಿರಲಿಲ್ಲ, ಅವಳ ಯೋನಿಯನ್ನಾವರಿಸಿದ್ದ ನತದೃಷ್ಟ ಸೊಂಟವನ್ನೂ.

ಎಣಿಸಬಹುದಾದಂತಹಾ ಭೇಟಿಗಳಲ್ಲಿ ಕೇವಲ ನಾಲ್ಕಾರು ಮಾತುಗಳು ಸುಖಾಸುಮ್ಮನೆ ವಿನಿಮಯವಾಗಿರಬಹುದು. ಮೋಜಿನ ಆಟಗಳಲ್ಲಿ ಅವಳು ಗೆದ್ದರೂ ಗೆಲ್ಲಬಹುದು, ಬಾವಿಕಲ್ಲುಗಳನ್ನು ಮೀಟಿದರೆ ಅಲ್ಲಿ ಆ ಮಡುವಿನಲ್ಲಿ ಆಮೆಗಳ ಕುರುಹು, ಕಳೆದ ಅವಳ ರಾತ್ರಿಗಳು ದಕ್ಕಬಹುದು.

ಇಲ್ಲೊಂದು ಇತಿಹಾಸ ಜರುಗಿದೆ, ಅವಳ ಮಾದಕ ದೇಹ. ನನ್ನ ಕೈಬೆರಳುಗಳನ್ನು ಹೆಣವಿಲ್ಲದ ಗುಂಡಿಯಲ್ಲಿಟ್ಟುಕೊಂಡಳು, ಅವಳ ಹೊಕ್ಕಳಿನಾಳ- ಅಲ್ಲಿ ಇಳಿದಿಳಿದು ಶಬ್ದಗಳನ್ನು ಸೇದತೊಡಗಿದೆ.

ನಾನು ಈಗೀಗ ಈಜುಕೊಳಕ್ಕೆ ನಡೆದುಬಿಡುವುದನ್ನು ವ್ಯಸನವಾಗಿಸಿಕೊಂಡಿದ್ದೇನೆ, ಕ್ರೀಡಾಕೋಟನ್ನು ಗೂಟಕ್ಕೆ ಸಿಕ್ಕಿಸಿ, ಅವಳ ಭಾವಚಿತ್ರವನ್ನು ನೀರಸುಳಿಗಳೊಳಗೆ ಹುಗಿದು. ಥೂ, ಬೆತ್ತಲೆ… ನೀರು ಬೆತ್ತಲೆ, ಅವಳ ಮೊಲೆಗಳನ್ನು ತಡಕಿ ಈಸಿದ ದಾರಿಯಲ್ಲೆಲ್ಲ ಗುಲ್ಲು, ಕೇಕೆ, ಹಕ್ಕಿ ಕಲರವ…

 

ಹೊಸ ತಲೆಮಾರಿನ ಪ್ರಮುಖ ಕವಿ,ಚಿತ್ರ ನಿರ್ದೇಶಕ ಮತ್ತು ಕಾದಂಬರಿಕಾರ.

 

(ಇಲ್ಲಸ್ಟ್ರೇಷನ್ ಕಲೆ:ರೂಪಶ‍್ರೀ ಕಲ್ಲಿಗನೂರ್)