ಮಾತು-ಕವಿತೆ

ಕಿವಿಯಲಿ ಪಿಸುಗುಟ್ಟಿದ
ಎಲ್ಲ ಮಾತುಗಳು
ಅವನೆದೆಯ ಸೇರಿ
ಮುತ್ತಾಗಬಹುದಿತ್ತು
ಪರವಾಗಿಲ್ಲ ಈಗವು
ಎಲ್ಲರೂ ಕೇಳುವ
ಕವಿತೆಗಳಾಗಿ ಬಿಟ್ಟವು ॥

ಕತ್ತಲೆ ಮರೆಯ ಬಿಕ್ಕುಗಳು
ಸೀರೆ ತುದಿಯ ಅಶೃಬಿಂದುಗಳಿನ್ನು
ಜನ ಸಂತೆಯೆದುರು
ಬಿಕರಿಯಾಗುವ
ಪದಗಳಾಗಿ ಬಿಟ್ಟವು॥

ಎದೆಯಲುಕ್ಕುವ
ಲಾವಾರಸವು ನೋವಿನ
ದನಿಗಂಜಿ
ತಾಳಲಾರದೆ
ಬಜಾರಿನಲ್ಲಿ ಶೃತಿಹಿಡಿದು
ಮಿಡಿಯುವ ರಾಗಗಳಾಗಿಬಿಟ್ಟವು॥

ನವಿರು ನಾಚಿಕೆ
ಕನಸಲುಂಡ ಕನವರಿಕೆ
ನಿನಗೆಂದೇ ಮೀಸಲಾದ
ಒನಪು ವಯ್ಯಾರಗಳೂ
ಬಡವಿಯ ಬಹು ಬಯಕೆಯ
ಒಡವೆಗಳಾಗಿ ಬಿಟ್ಟವು॥

ಅತ್ತು ನಗಿಸಬೇಕಿದ್ದ
ಮಡಿಲ ಸೇರಬಹುದಾಗಿದ್ದ
ಹಸುಗೂಸೊಂದು
ಚೂರು ಚೂರು
ಮಾಂಸ ಮುದ್ದೆಯಂತೆ
ರಕ್ತಸ್ರಾವವಾಗಿ ಬಿಟ್ಟವು॥

ಮಂಜುಳ ಸಿ.ಎಸ್. ಹಾಸನದ ಮಹಿಳಾ ಸಕಾ೯ರಿ ಪ್ರಥಮ ದಜೆ೯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರು 
ಹವ್ಯಾಸಿ ಪತ್ರಕರ್ತರೂ ಕೂಡ
ಕವಿತೆ, ಅಂಕಣ ಬರಹ, ಲಘು ಬರಹ, ಸಮಕಾಲೀನ ವಸ್ತು -ವಿಶ್ಲೇಷಣೆ, ಪುಸ್ತಕ ವಿಮರ್ಶೆ ಇವರ ಆಸಕ್ತಿಗಳು