”ಕೆಲಸದಲ್ಲಿ ಚೂಟಿಯಾಗಿ, ಬೇಗ ಕಲಿತ ಮಂಜು ಎಲ್ಲರಿಗೂ ಅಚ್ಚುಮೆಚ್ಚಾದ. ಸಂಬಳ ಕಡಿಮೆ ಆಯಿತೆಂದು ಹತ್ತಿರದಲ್ಲೇ ನಾನು ನನ್ನ ಅಣ್ಣ ಇದ್ದ ರೂಮಿಗೆ ಬಂದು ಮನೆ ಗುಡಿಸಿ, ಸಾರಿಸಿ, ಕಾಫಿ ಪಾತ್ರೆ ತೊಳೆದು ಹೋಗುತ್ತಿದ್ದ. ಮಂಜುವಿಗೆ ಇಂಗ್ಲಿಷ್ ಕಲಿಯಬೇಕೆಂದು ಬಹಳ ಇಷ್ಟ, ಅದನ್ನು ಹುಚ್ಚೆಂದೇ ಹೇಳಬೇಕು. ಅವನು ಕೆಲಸ ಮುಗಿಸಿ ರಾತ್ರಿ ನಮ್ಮ ರೂಮಿಗೆ ಕಲಿಯಲು ಬರುತ್ತಿದ್ದ. ನಾನು ಅವನಿಗೆ ಎ, ಬಿ, ಸಿ, ಡಿ ಹೇಳಿಕೊಟ್ಟು ಕ್ರಮೇಣ ಒಂದೆರೆಡು ಪದಗಳನ್ನು ಫೋನಿನಲ್ಲಿ ಮಾತನಾಡಲು ಕಲಿಸಿ ಕೊಟ್ಟೆ”
ಇ.ಆರ್.ರಾಮಚಂದ್ರನ್ ಬರೆದ ವ್ಯಕ್ತಿಚಿತ್ರ.

 

ಎಪ್ಪತ್ತರ ದಶಕದಲ್ಲಿ ಮೊದಲ ಸಲ ಮಂಜು ( ಹೆಸರು ಬದಲಾಯಿಸಿದೆ ) ಬೊಂಬಾಯಿಗೆ ( ಈಗ ಮುಂಬೈ ) ಬಂದಾಗ ಅವನಿಗೆ ಆ ದೊಡ್ಡ ದೊಡ್ಡ ಮಹಲುಗಳನ್ನು ನೋಡಿ ಆಶ್ಚರ್ಯವೇ ಆಯಿತು. ಇಷ್ಟು ದೊಡ್ಡ ಮಹಡಿಗಳಿರುವ ಮನೆಗಳಲ್ಲಿ ಮನುಷ್ಯರು ಹೇಗೆ ವಾಸ ಮಾಡುತ್ತಾರೆ, ಹೇಗೆ ಹತ್ತಿಳಿಯುತ್ತಾರೆ ಅನ್ನುವುದೇ ಅವನಿಗೆ ದೊಡ್ಡ ಸೋಜಿಗ. ಊರಿನಿಂದ ಅವನನ್ನು ಕರೆದುಕೊಂಡು ಬಂದಿದ್ದ ರಮೇಶ, ‘ಹುಚ್ಚಪ್ಪ, ಅದಕ್ಕೆ ಲಿಫ್ಟ್ ಇದೆ. ಅದರಲ್ಲಿ ಹತ್ತಿ ಝರ್ ಎಂದು ಒಂದೇ ನಿಮಿಷದಲ್ಲಿ ಕೆಳಗೆ ಬರುತ್ತಾರೆ, ಮೇಲೂ ಹೋಗುತ್ತಾರೆ. ಇದೆಲ್ಲ ಮುಂದೆ ನಿನಗೆ ಅಭ್ಯಾಸವಾಗುತ್ತೆ. ಸದ್ಯಕ್ಕೆ ನೀನು ಕೆಲಸ ಮಾಡುವ ಜಾಗದಲ್ಲಿ ಲಿಫ್ಟ್ ಇಲ್ಲ. ನಿನಗೆ ಯಾವ ಯೋಚನೆಯೂ ಇರುವುದಿಲ್ಲ,’ ಎಂದ.

ಮುಂಬೈ ಜೀವನದಲ್ಲಿ ರಮೇಶ ಪಳಗಿದ ಕೈ. ಮೈಸೂರು ಅಸೋಸಿಯೇಷನ್ ನ ಮೆಸ್ ನಲ್ಲಿ ಅವನ ಕೆಲಸ.

ಮೈಸೂರು ಅಸೋಸಿಯೇಷನ್ ಬಹಳ ವರ್ಷದ ಹಿಂದೆ ಮೈಸೂರು ಮಹಾರಾಜರ ಧನ ಸಹಾಯದಿಂದ ಶುರುವಾಗಿ, ಅಲ್ಲಿ ಓದುವ, ಕೆಲಸ ಮಾಡುವ ಕನ್ನಡಿಗರಿಗೆ ಉಪಯೋಗವಾಗಲಿ ಎಂದು ಮಾಟುಂಗ ಬಡಾವಣೆಯಲ್ಲಿ ಒಂದು ಕಟ್ಟಡ ಕಟ್ಟಿ, ಅದರಲ್ಲಿ ಉಳಕೊಳ್ಳಕ್ಕೆ ಒಂದೆರೆಡು ರೂಮ್ ಗಳು, ಪುಸ್ತಕ, ಮ್ಯಾಗಜಿನ್ ಗಳ ಲೈಬ್ರರಿ, ಆಟವಾಡುವುದಕ್ಕೆ ಬಿಲಿಯರ್ಡ್ಸ್ /ಸ್ನೂಕರ್ ಟೇಬಲ್, ರಾತ್ರಿ ಊಟಕ್ಕೆ ಒಂದು ಮೆಸ್ ಶುರುಮಾಡಿದ್ದರು. ಬಹಳ ಹೆಸರುವಾಸಿಯಾಗಿ ಆಗಾಗ್ಗೆ ಅಲ್ಲಿನ ಸದಸ್ಯರು ನಾಟಕ, ಸಂಗೀತ ಕಾರ್ಯಕ್ರಮ ಇಟ್ಟುಕೊಂಡಿದ್ದರು. ರಾಜ್ಯದ ಬೇರೆ ಬೇರೆ ಜಾಗದಿಂದ ಕಲಾವಿದರು ಅಲ್ಲಿಗೆ ಹೋಗಿ ಸಂಗೀತ, ನಾಟಕ ಮತ್ತು ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದರು. ಗಣೇಶನ ಹಬ್ಬ, ರಾಜ್ಯೋತ್ಸವ, ದಸರೆ ಹಬ್ಬಗಳನ್ನಾಚರಿಸುವ ಮೂಲಕ, ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿಯನ್ನು ಕಾಪಾಡಿಕೊಳ್ಳಲು ಸುಸಜ್ಜಿತ ವೇದಿಕೆಯಾಗಿತ್ತು. ರಮೇಶನ ತರಹ ಇನ್ನೊಂದಿಬ್ಬರಿಗೆ, ಸಂಜೆಯಾದರೆ ಕೆಲಸದಿಂದ ಬರುವ ಸದಸ್ಯರಿಗೆ ಫಿಲ್ಟರ್ ಕಾಫಿ ಕೊಡುವುದು, ಅವರು ಇಸ್ಪೀಟು ಆಡುವಾಗ, ಬೇಕಾದವರಿಗೆ ಪಕ್ಕದಲ್ಲೇ ಇರುವ ಅಂಗಡಿಯಿಂದ ಸಿಗರೇಟು ತರುವುದು, ರಾತ್ರಿ 8 ಗಂಟೆಯಾದರೆ ಊಟ ಬಡಿಸಿ, ಆಮೇಲೆ ಅಡುಗೆ ಮನೆ ಸಾರಿಸಿ 10.30ಕ್ಕೆ ಹತ್ತಿರದಲ್ಲಿದ್ದ ಚಾಳ್ -ವಠಾರದಲ್ಲಿ ಹೋಗಿ ಬಿದ್ದುಕೊಳ್ಳುವುದು. ಬೆಳಗ್ಗೆ ಮಾರ್ಕೆಟ್ಟಿಗೆ ಹೋಗಿ ಆವತ್ತಿನ ಅಡುಗೆಗೆ ಬೇಕಾದ ತರಕಾರಿ ಸಾಮಾನು ತರುವುದು ವಾಡಿಕೆಯಾಗಿತ್ತು.

ಯಾಂತ್ರಿಕ ಜೀವನಕ್ಕೆ ಹೆಸರುವಾಸಿಯಾದ ಮುಂಬೈ ಜೀವನದಲ್ಲಿ ಏರುಪೇರು ಆಗುವುದು ಮಳೆಯಾದಾಗಲೇ! ಅದೆಂಥ ಮಳೆ! ಉಡುಪಿ, ಮಂಗಳೂರಿನಲ್ಲಿ ಸಾಕಷ್ಟು ಮಳೆಯಾಗುತ್ತೆ. ಇಲ್ಲಿನ ಮಳೆ 3 ವರ್ಷ ನೋಡಿದಮೇಲೆ ಅದು ಮಳೆಯೇ ಅಲ್ಲ ಅನ್ನುವ ಮಟ್ಟಿಗೆ ರಮೇಶನ ಅನುಭವ!

ಊರಿನಲ್ಲಿ ಕೆಲಸವಿಲ್ಲದೆ ಓಡಾಡುತ್ತಿದ್ದ ಮಂಜುವಿಗೆ ನೀನೂ ನನ್ನ ಜೊತೆಗೆ ಯಾಕೆ ಬಂದು ಕೆಲಸ ಮಾಡಬಾರದು ಎಂದು ಸ್ನೇಹಿತನು ಅವನನ್ನ ಹುರಿದುಂಬಿಸಿ, ಅವನ ತಾಯಿಗೆ ಸಮಾಧಾನ ಹೇಳಿ ಅವನನ್ನು ಮುಂಬೈಗೆ ಕರೆದುಕೊಂಡು ಬಂದಿದ್ದ. ರಮೇಶನ ಜೊತೆ ಅವನ ಚಾಳಿಗೆ ಹೋಗುವ ತನಕವೂ ಮಂಜು ಅಚ್ಚರಿಯಿಂದ ಪೂರ್ತಿ ಬಿಚ್ಚುಗಣ್ಣಿನಿಂದಲೇ ಎಲ್ಲವನ್ನೂ ನೋಡಿಕೊಂಡು ಬಂದಿದ್ದ. ಅದೆಷ್ಟು ಕಾರುಗಳು, ಕೆಂಪು ಬಸ್ಸುಗಳು… ಅವುಗಳು ಹೋಗುವ ಸ್ಪೀಡೇನು.. ಅಬ್ಬಬ್ಬ! ಎಲ್ಲಾ ಕಡೆ ಡಬಲ್-ರಸ್ತೆ. ಎಲ್ಲೆಲ್ಲೂ ಹೋಟೆಲ್ ಗಳು. ಎಲ್ಲೆಲ್ಲೂ ಜನ. ಇಲ್ಲಿರೋವ್ರಿಗೆ ಯಾವಾಗಲೂ ತಿನ್ನುವುದೇ ಕೆಲಸವೇ?

ಸೋಮವಾರ ಬೆಳಿಗ್ಗೆ ಬೇಗ ಎದ್ದು ಇಬ್ಬರೂ ತಯಾರಾದ ಮೇಲೆ ರಮೇಶ ಮಂಜುವನ್ನು ಕರೆದುಕೊಂಡು ಮೈಸೂರು ಅಸೋಸಿಯೇಷನ್ ಗೆ ಹೋಗಿ ಅಲ್ಲಿನ ಕಾರ್ಯದರ್ಶಿಗಳಿಗೆ, ಅಡುಗೆ ಭಟ್ಟರಿಗೆ ಮಂಜುವನ್ನು ಗುರ್ತು ಮಾಡಿಸಿ, ಮಿಕ್ಕ 4 , 5 ಸಹೋದ್ಯೋಗಿಗಳನ್ನು ಪರಿಚಯ ಮಾಡಿಸಿದ; ಒಂದಿಬ್ಬರು ಅವರಿದ್ದ ಚಾಳಿನಲ್ಲೇ ಅವರೂ ಇದ್ದರು. ಅಸೋಸಿಯೇಷನ್ ನಲ್ಲಿ ಸುಮಾರು 150ರಿಂದ 200 ಸದಸ್ಯರು ದಿನಾ ರಾತ್ರಿ ಊಟಕ್ಕೆ ಬರುತ್ತಿದ್ದರು. ಶನಿವಾರ, ಭಾನುವಾರ 300 ಜನ ಅಲ್ಲಿ ಸೇರುತ್ತಿದ್ದರು. ಭಾನುವಾರ ಬೆಳಿಗ್ಗೆ ತಿಂಡಿ ಮಸಾಲೆ ದೋಸೆಯಾದರೆ ಅದನ್ನು ತಿನ್ನುವುದಕ್ಕೆ ಬಹಳ ಸದಸ್ಯರು ತಮ್ಮ ಅಥಿತಿಗಳ್ನೂ ಕರೆದುಕೊಂಡು ಬರುತ್ತಿದ್ದರು. ಮಂಜುವಿನ ಕೆಲಸ ಊಟವಾದಮೇಲೆ ತಟ್ಟೆಯನ್ನು ಟೇಬಲ್ ನಿಂದ ತೆಗೆದು ಅದನ್ನು ತೊಳೆದು, ಒರೆಸಿ ಮುಂದಿನ ಸರ್ತಿ ಊಟಕ್ಕೆ ಕೂತುಕೊಳ್ಳುವ ಮುಂಚೆ ಹಾಕಿಡುವುದು ಮತ್ತು ಕುಡಿಯುವ ಲೋಟದಲ್ಲಿ ನೀರು ತುಂಬಿಸಿಡುವುದು.

ರಮೇಶನ ತರಹ ಇನ್ನೊಂದಿಬ್ಬರಿಗೆ, ಸಂಜೆಯಾದರೆ ಕೆಲಸದಿಂದ ಬರುವ ಸದಸ್ಯರಿಗೆ ಫಿಲ್ಟರ್ ಕಾಫಿ ಕೊಡುವುದು, ಅವರು ಇಸ್ಪೀಟು ಆಡುವಾಗ, ಬೇಕಾದವರಿಗೆ ಪಕ್ಕದಲ್ಲೇ ಇರುವ ಅಂಗಡಿಯಿಂದ ಸಿಗರೇಟು ತರುವುದು, ರಾತ್ರಿ 8 ಗಂಟೆಯಾದರೆ ಊಟ ಬಡಿಸಿ, ಆಮೇಲೆ ಅಡುಗೆ ಮನೆ ಸಾರಿಸಿ 10.30ಕ್ಕೆ ಹತ್ತಿರದಲ್ಲಿದ್ದ ಚಾಳ್ -ವಠಾರದಲ್ಲಿ ಹೋಗಿ ಬಿದ್ದುಕೊಳ್ಳುವುದು. ಬೆಳಗ್ಗೆ ಮಾರ್ಕೆಟ್ಟಿಗೆ ಹೋಗಿ ಆವತ್ತಿನ ಅಡುಗೆಗೆ ಬೇಕಾದ ತರಕಾರಿ ಸಾಮಾನು ತರುವುದು ವಾಡಿಕೆಯಾಗಿತ್ತು.

ಕೆಲಸದಲ್ಲಿ ಚೂಟಿಯಾಗಿ, ಬೇಗ ಕಲಿತ ಮಂಜು ಎಲ್ಲರಿಗೂ ಅಚ್ಚುಮೆಚ್ಚಾದ. ಸಂಬಳ ಕಡಿಮೆ ಆಯಿತೆಂದು ಹತ್ತಿರದಲ್ಲೇ ನಾನು ನನ್ನ ಅಣ್ಣ ಇದ್ದ ರೂಮಿಗೆ ಬಂದು ಮನೆ ಗುಡಿಸಿ, ಸಾರಿಸಿ, ಕಾಫಿ ಪಾತ್ರೆ ತೊಳೆದು ಹೋಗುತ್ತಿದ್ದ. ಮಂಜುವಿಗೆ ಇಂಗ್ಲಿಷ್ ಕಲಿಯಬೇಕೆಂದು ಬಹಳ ಇಷ್ಟ, ಅದನ್ನು ಹುಚ್ಚೆಂದೇ ಹೇಳಬೇಕು. ಅವನು ಕೆಲಸ ಮುಗಿಸಿ ರಾತ್ರಿ ನಮ್ಮ ರೂಮಿಗೆ ಕಲಿಯಲು ಬರುತ್ತಿದ್ದ. ನಾನು ಅವನಿಗೆ ಎ, ಬಿ, ಸಿ, ಡಿ ಹೇಳಿಕೊಟ್ಟು ಕ್ರಮೇಣ ಒಂದೆರೆಡು ಪದಗಳನ್ನು ಫೋನಿನಲ್ಲಿ ಮಾತನಾಡಲು ಕಲಿಸಿ ಕೊಟ್ಟೆ. ಮಂಜುವಿಗೆ ಓದು ಸುಲಭವಾಗಿ ಬರುತ್ತಿರಲಿಲ್ಲ. ಆದರೆ ಅಸಾಧಾರಣ ಪ್ರಯತ್ನ ಮಾಡುತ್ತಿದ್ದ. ರಾತ್ರಿ ಮನೆಗೆ ಹೋಗಿ, ಮಧ್ಯರಾತ್ರಿವರೆಗೂ ಮತ್ತೆ ಓದಿ ಅದನ್ನು ಬರೆದು ಮುಂದಿನ ದಿನ ತರುತ್ತಿದ್ದ. ತಪ್ಪು ಇರೋದು, ಆದರೆ ಅದನ್ನು ಮತ್ತೆ ಮತ್ತೆ ಓದಿ ಕಲಿಯಲು ಶ್ರಮ ಪಡುತ್ತಿದ್ದ. ಕಲಿಯಲೇಬೇಕೆನ್ನುವ ಛಲ ಅವನಲ್ಲಿತ್ತು.

ಒಂದು ಸಂಜೆ ಇಸ್ಪೀಟು ಆಡುತ್ತಿರುವಾಗ, ಒಬ್ಬ ಸದಸ್ಯರು, ‘ಹಗಲೆಲ್ಲಾ ಸುಮ್ಮನೆ ಕೂತಿರ್ತಿರಾ.. ನಾರಿಮನ್ ಪಾಯಿಂಟ್ ನಲ್ಲಿ ದೊಡ್ಡ ದೊಡ್ಡ ಬಿಲ್ಡಿಂಗ್ ಕಟ್ತಿದಾರೆ. ಅಲ್ಲಿ ಲಿಫ್ಟ್ ಹಾಕುವ ಕಂಪನಿಯವರಿಗೆ ತಾತ್ಕಾಲಿಕವಾಗಿ ಕೆಲಸದವರು ಬೇಕಾಗಿದ್ದಾರೆ. ನೀವೆಲ್ಲಾ ಹೋಗಿ ಇವರನ್ನು ನೋಡಿ ಅಂತ ವಿಸಿಟಿಂಗ್ ಕಾರ್ಡು ಕೊಟ್ಟರು. ಅಸೋಸಿಯೇಷನ್ ಕೆಲಸದವರು ಮೂರು, ನಾಲ್ಕು ದಿನ ಹೋಗಿ ಬಂದರು. ಅಲ್ಲಿ ಭಾರದ ಕಬ್ಬಿಣದ ಸಾಮಾನು ಹೊರುವ ಕೆಲಸ. ಮೈ ಕೈ ನೋವೆಂದು ಮತ್ತೆ ಯಾರೂ ಹೋಗಲಿಲ್ಲ. ‘ನರಪೇತಲ ನಾರಾಯಣ’ನಾಗಿದ್ದ ಮಂಜುವಿಗೆ ದೇಹದಲ್ಲಿ ಎಲ್ಲಾ ಕಡೆ ನೋವಾದರೂ ದಿನಾ ಹೋಗಿ ಬರುತ್ತಿದ್ದ.

ಒಂದು ದಿನ ರಾತ್ರಿ ಊಟದ ಮಧ್ಯೆ ಮೆಸ್ ನಲ್ಲಿ ಜೋರಾಗಿ ಮಾತು ಕೇಳಿ ಬಂತು. ಹೋಗಿ ನೋಡಿದರೆ, ಅಡುಗೆ ಭಟ್ಟರು ಮಂಜುವಿನ ಕೈಯಿಂದ ಅನ್ನ ಬಡಿಸುವ ಪಾತ್ರೆ ಕಿತ್ತುಕೊಂಡಿದ್ದರು. ಮಾತಿಗೆ ಮಾತು ಬೆಳದು, ಮಂಜು ಅಲ್ಲಿಂದ ಸೀದಾ ಹೊರಗಡೆ ಓಡಿ ಹೋದ. ಆಮೇಲೆ ಗೊತ್ತಾಯಿತು ಏನಾಯಿತೆಂದು. ಆವತ್ತು ಬಡಿಸುವರಿಬ್ಬರು ಕೆಲಸಕ್ಕೆ ಬಂದಿರಲಿಲ್ಲ. ಊಟಕ್ಕೆ ಕೂತವರು ಕಾಯುತ್ತಿದ್ದುದ್ದರಿಂದ ಮಂಜು ಅಡುಗೆ ಮನೆಗೆ ಹೋಗಿ ಅನ್ನದ ಪಾತ್ರೆ ತೆಗೆದು ಕೊಂಡು ಬಂದು ಬಡಿಸಲು ಬಂದ. ಅದನ್ನು ನೋಡಿದ ಭಟ್ಟರು, ಅವನಿಗೆ ಬೈದು ಕಿತ್ತುಕೊಳ್ಳಲು ಬಂದರು. ನಾನು ಬಡಿಸುತ್ತೇನೆ ಬಿಡಿ ಅಂದಾಗ, ಭಟ್ಟರು, ‘ನಿನ್ನ ಕೆಲಸ ಎಂಜಲು ತಟ್ಟೆ ಎತ್ತುವುದು ಅಷ್ಟೆ! ಅನ್ನದ ಪಾತ್ರೆ ಯಾರನ್ನು ಕೇಳಿ ಎತ್ತಿಕೊಂಡೆ? ನೀನು ಅದನ್ನು ಮುಟ್ಟುವ ಹಾಗಿಲ್ಲ’ ಎಂದು ಪಾತ್ರೆಯನ್ನು ಕಿತ್ತುಕೊಂಡರು. ಎಲ್ಲರ ಎದುರಿಗೆ ಅವಮಾನಗೊಂಡ ಮಂಜು ಮತ್ತೆ ಅಡುಗೆ ಮನೆಗೆ ಬರಲಿಲ್ಲ. ಬೆಳಿಗ್ಗೆ ರಾತ್ರಿ ಊಟಕ್ಕೂ ಬರಲಿಲ್ಲ. ಎರಡು ದಿವಸ ‘ಇಂಗ್ಲಿಷ್’ ಕ್ಲಾಸಿಗೂ ರಾತ್ರಿ ಬರಲಿಲ್ಲ. ಮೂರನೇ ದಿವಸ ಅಲ್ಲಿಯ ತನಕ ಮಾಡಿದ್ದ ಪಾಠವನ್ನೆಲ್ಲಾ ಮತ್ತೆ ತಿದ್ದಿ ಬರೆದು ಕೊಂಡು ಬಂದಿದ್ದ. ಊಟದ ಮನೆಯಲ್ಲಾದ ಜಗಳವನ್ನು ಕೇಳಿದಾಗ, ಏನೂ ಹೇಳಲಿಲ್ಲ, ಬರೀ ತಲೆ ತಗ್ಗಿಸಿ ಕೂತಿದ್ದ.

ಇದಾದ ಸ್ವಲ್ಪ ದಿವಸದಲ್ಲಿ ನನಗೆ ದೆಹಲಿಗೆ ವರ್ಗವಾಯಿತು. ನನ್ನ ಬಟ್ಟೆಬರೆಯನ್ನು ಚೆನ್ನಾಗಿ ಒಗೆದು, ಇಸ್ತ್ರಿ ಮಾಡಿ, ಪೆಟ್ಟಿಗೆಗೆ ಹಾಕಿ ರೆಡಿ ಮಾಡಿಟ್ಟಿದ್ದ. ಬೊಂಬಾಯಿ ಸೆಂಟ್ರಲ್ ಸ್ಟೇಷನ್ ಗೆ ಬಂದು ಬಿಕ್ಕಿ ಬಿಕ್ಕಿ ಅತ್ತು ನನ್ನ ಬೀಳ್ಕೊಟ್ಟ. ಗಾಡಿಯ ಜೊತೆ ಸ್ವಲ್ಪ ದೂರ ಓಡಿ ಬಂದ.

ನಾನು ನಾಲ್ಕು ವರ್ಷವಾದ ಮೇಲೆ ಮತ್ತೆ ಮುಂಬೈಗೆ ವರ್ಗವಾಗಿ ಬಂದೆ. ನನಗೆ ಈ ಮಧ್ಯೆ ಮದುವೆಯಾಗಿ ಬೇರೆ ಮನೆ ಮಾಡಿದ್ದೆ. ಮೈಸೂರು ಆಸೋಸಿಯೇಷನ್ ಗೆ ಹೋದಾಗ ಮಂಜುವಿನ ವಿಚಾರ ತಿಳೀತು. ಭಟ್ಟರ ಜೊತೆ ಜಗಳವಾದ ಮೇಲೆ ಮಂಜು 2, 3 ದಿನ ಊಟ ಮಾಡಲಿಲ್ಲ. ದಿನಾ ಬೆಳಿಗ್ಗೆ ಭಾರವಾದ ಲಿಫ್ಟಿನ ಸಾಮಾನುಗಳನ್ನು ಹೊರಲು ಹೋಗುತ್ತಿದ್ದ. ಅದರಲ್ಲಿ ಆಸಕ್ತಿ ಬೆಳೆದು ಇನ್ನೊಬ್ಬ ಉಡುಪಿಯವನು – ಎಲೆಕ್ಟ್ರಿಷಿಯನ್ – ಲಿಫ್ಟ್ ಹೇಗೆ ಕೆಲಸ ಮಾಡುತ್ತದೆ ಎಂದು ತೋರಿಸಿ ಕೊಟ್ಟ. ಅದರ ಕಾಪಿಯನ್ನು ಮನೆಗೆ ತಂದು, ಮಾಟುಂಗದಲ್ಲಿದ್ದ ಅವರ ಚಾಳಿನಲ್ಲಿದ್ದ ಎಲೆಕ್ಟ್ರಿಷಿಯನ್ ಜೊತೆ ರಾಮಮಂದಿರದ ಜಗುಲಿಯ ಮೇಲೆ ಕೂತು, ಚಾಕ್ ಪೀಸಿನಿಂದ ಆ ಸರ್ಕ್ಯುಟ್ ಗಳು ಹೇಗೆ ಕೆಲಸ ಮಾಡುತ್ತಿದೆಯೆಂದು ಕಲಿತುಕೊಂಡ. ಹೀಗೆ ಲಿಫ್ಟಿನಲ್ಲಿ ಯಾವ ಯಾವ ಭಾಗಗಳಿವೆ, ಅದು ಹೇಗೆ ಕೆಲಸ ಮಾಡುತ್ತದೆ ಎಂದು ಒಂದೊಂದಾಗಿ ಅವನು ಶೀಘ್ರವಾಗಿ ಕಲಿತಿರುವುದನ್ನು ನೋಡಿ, ಓಟಿಸ್ ಕಂಪನಿಯವರು ಅವನಿಗೆ ಕೆಲಸ ಕೊಟ್ಟರು. ನಾರೀಮನ್ ಪಾಯಿಂಟಿನಲ್ಲಿ ಒಂದೆರೆಡು ಕಡೆ ಹೊಸ ಲಿಫ್ಟ್ ಹಾಕಲು ಅವರ ಜೊತೆಗೂಡಿ ಕೆಲಸ ಮಾಡಿ ಚೆನ್ನಾಗಿ ಕಲಿತುಕೊಂಡ. ಒಂದು ದಿನ ಅವನಿಗೆ ಅವನ ಪಾಸ್ಪೋರ್ಟಿನ ಫೋಟೊ ತರಲು ಹೇಳಿದರು. ಅದಾದ ಒಂದು ತಿಂಗಳಾದ ಮೇಲೆ ಅವನನ್ನು ದೋಹ-ಕತಾರ್ ಗೆ ಮೆಕ್ಯಾನಿಕ್ ಆಗಿ ಕೆಲಸಮಾಡಲು ಕರೆದುಕೊಂಡು ಹೋದರು. ಅಲ್ಲಿ ಹೋಗಿ ಸ್ವಲ್ಪ ವರ್ಷಗಳಾದ ಮೇಲೆ ಅವನನ್ನು ಸರ್ವಿಸ್ ಸೂಪರ್ವೈಸರ್ ಆಗಿ ನೇಮಿಸಿದರು. ಬೇರೆಯವರಿಗೆ ಮಂಜು ಈಗ ಕಲಿಸುತ್ತಿದ್ದ. ಅವನ ನೇತೃತ್ವದಲ್ಲಿ ಹೊಸ ಲಿಫ್ಟ್ ಗಳು ಅಲ್ಲಿ ಹಾಕಲಾರಂಭಿಸಿದರು.

ಆವತ್ತು ಬಡಿಸುವರಿಬ್ಬರು ಕೆಲಸಕ್ಕೆ ಬಂದಿರಲಿಲ್ಲ. ಊಟಕ್ಕೆ ಕೂತವರು ಕಾಯುತ್ತಿದ್ದುದ್ದರಿಂದ ಮಂಜು ಅಡುಗೆ ಮನೆಗೆ ಹೋಗಿ ಅನ್ನದ ಪಾತ್ರೆ ತೆಗೆದು ಕೊಂಡು ಬಂದು ಬಡಿಸಲು ಬಂದ. ಅದನ್ನು ನೋಡಿದ ಭಟ್ಟರು, ಅವನಿಗೆ ಬೈದು ಕಿತ್ತುಕೊಳ್ಳಲು ಬಂದರು. ನಾನು ಬಡಿಸುತ್ತೇನೆ ಬಿಡಿ ಅಂದಾಗ, ಭಟ್ಟರು, ‘ನಿನ್ನ ಕೆಲಸ ಎಂಜಲು ತಟ್ಟೆ ಎತ್ತುವುದು ಅಷ್ಟೆ! ಅನ್ನದ ಪಾತ್ರೆ ಯಾರನ್ನು ಕೇಳಿ ಎತ್ತಿಕೊಂಡೆ? ನೀನು ಅದನ್ನು ಮುಟ್ಟುವ ಹಾಗಿಲ್ಲ’ ಎಂದು ಪಾತ್ರೆಯನ್ನು ಕಿತ್ತುಕೊಂಡರು.

ನಾನು ಬೊಂಬಾಯಿಗೆ ವಾಪಸ್ಸು ಬಂದ ಸುದ್ದಿಕೇಳಿ, ರಜಕ್ಕೆ ಬಂದಿದ್ದ ಮಂಜು ಮನೆ ಹುಡುಕಿಕೊಂಡು ಬಂದ. ನಾನು ಅವನನ್ನು ಅಪ್ಪಿಕೊಳ್ಳಲು ಹೋದರೆ ಅವನು ಅದಕ್ಕೆ ಮೊದಲೇ ಸಾಷ್ಟಾಂಗ ನಮಸ್ಕಾರ ಮಾಡಿದ. ಆವಾಗ ತಾನೆ ಕ್ಯಾಲ್ಕ್ಯುಲೇಟರ್ ಬಂದಿತ್ತು. ಅದು, ಜೊತೆಗೆ ಬಟ್ಟೆ ಬರೆ, ಬಾದಾಮಿ ಇತ್ಯಾದಿ, ನನ್ನ ಹೆಂಡತಿಗೆ ಸೀರೆ ಎಲ್ಲಾ ತಂದಿದ್ದ. ನಾನು ಅವನಿಗೆ ಪಾಠ ಹೇಳಿ ಕೊಡುವಾಗ ರೇಡಿಯೋನಲ್ಲಿ ಹಳೇ ಹಿಂದಿ ಹಾಡು ‘ಬೂಲೆ ಬಿ¸’ಡೇ’ ಕಾರ್ಯಕ್ರಮ ವಿವಿಧ ಭಾರತಿಯಲ್ಲಿ ಕೇಳುತ್ತಿದ್ದೆ. ಸೈಗಾಲ್, ಪಂಕಜ್ ಮಲ್ಲಿಕ್ಕ್, ತಲತ್ ಮಹಮೂದ್, ರಫಿ ಇತರ ಹಾಡುಗಳಿರುವ 20 ಕ್ಯಾಸೆಟ್ ತಂದು ಎದುರಿಗಿಟ್ಟ. ನಾಲ್ಕು ವರ್ಷದಲ್ಲಿ ನಡೆದ ಆಗು ಹೋಗುಗಳ ಮಾತನಾಡ ಬೇಕಾದ ವಿಷಯ ಬಹಳವಿತ್ತು. ಕೆಲಸದಲ್ಲಿ ಮಂಜು ಬಹಳ ಉನ್ನತ ಸಾಧನೆ ಮಾಡಿದ್ದ.

ನನ್ನ ಮನಸ್ಸಿನಲ್ಲಿ ಒಂದೇ ಪ್ರಶ್ನೆ ಕಾಡುತ್ತಿತ್ತು. ಜಗಳವಾದಾಗ, ಏನಾಯಿತು ಆ ರಾತ್ರಿ? ಮಂಜು ಹೇಳಿದ : ಭಟ್ಟರು ನೀನು ಬಡಿಸಬಾರದು ಎಂದು ಮಾತ್ರ ಹೇಳಿ ನನ್ನನ್ನು ತಡೆದಿದ್ದರೆ ನನ್ನ ಮನಸ್ಸಿಗೆ ಅಷ್ಟು ಪೆಟ್ಟಾಗುತ್ತಿರಲಿಲ್ಲ. ಎರಡು ಏಟು ಕೊಟ್ಟಿದ್ದರೂ ತಡಕೊಳ್ಳುತ್ತಿದ್ದೆ. ‘ನಿನ್ನ ಕೆಲಸ ಎಂಜಿಲು ಎತ್ತಬೇಕು ಅಷ್ಟೆ’ ಭಟ್ಟರ ಆ ಮಾತು ಶೂಲದಂತೆ ಇರಿಯುತು. ನಿದ್ದೆ ಮಾಡಲಾಗಲಿಲ್ಲ. ಊಟ ಸೇರುತ್ತಿರಲಿಲ್ಲ. ಮನಸ್ಸಿನಲ್ಲಿ ಆ ಮಾತುಗಳೇ ಮತ್ತೆ ಮತ್ತೆ ಮರುಕಳಿಸಿ ತಲೆ ಸಿಡಿದುಹೋಗುತ್ತಿತ್ತು. ಆ ಸಮಯದಲ್ಲಿ ನನಗೆ ಕೆಲಸವೇ ಮದ್ದಾಯಿತು. ಅದು ಇಲ್ಲದಿದ್ದರೆ ನನಗೆ ಹುಚ್ಚು ಹಿಡಿಯುತ್ತಿತ್ತು. ಈಗ ಬಿಡಿ ಅದೆಲ್ಲಾ ಆಗಿ ಬಹಳ ವರ್ಷಗಳಾಯಿತು. ಎಷ್ಟಾದರೂ ಭಟ್ಟರು ನನಗಿಂತ ದೊಡ್ಡವರು’ ಎಂದ.

ಮಂಜು ಎರಡು ವರ್ಷವಾದ ಮೇಲೆ ಮೊದಲ ಬಾರಿಗೆ ಇಂಡಿಯಾಗೆ ಬಂದು ಮೈಸೂರು ಅಸೋಸಿಯೇಷನ್ ಗೆ ಹೋದಾಗ, ಅಲ್ಲಿದ್ದವರು ಯಾರೊ ಹೇಳಿದರಂತೆ : ‘ನೀನು ಮತ್ತೆ ಕೆಲಸಕ್ಕೇಂತ ಬಂದಿದ್ದರೆ ಅದು ಮರೆತು ಬಿಡು… ನಿನಗೆ ಕೆಲಸಕೊಡೋಕೆ ಆಗಲ್ಲ. ನೀನು ಯಾವಾಗ ಹೇಳದೆ ಕೇಳದೆ ಹೋದೆಯೋ ಅಲ್ಲಿಗೆ ಮುಗಿಯಿತು ನಿನ್ನ ಕಥೆ’. ನಿಜ ಹೇಳುವುದಾದರೆ, ಮಂಜುವಿನ ಹತ್ರ ಎಷ್ಟು ದುಡ್ಡು ಇತ್ತೆಂದರೆ, ಅವನ ಜೊತೆಯಲ್ಲಿ ಕೆಲಸಮಾಡುತ್ತಿದ್ದವರನ್ನು ಅವನೇ ಕೆಲಸಕ್ಕೆ ಇಟ್ಟುಕೊಳ್ಳಬಹುದಾಗಿತ್ತು! ಪ್ರತಿಯೊಬ್ಬರಿಗೂ ಮರೆಯದೆ ಒಂದೊಂದು ಉಡುಗೊರೆ ತಂದಿದ್ದ. ಅಡುಗೆ ಭಟ್ಟರಿಗೆ ಮಾತ್ರ ಸ್ಪೆಷಲ್; ಸಿಲ್ಕ್ ಪಂಚೆ, ಷರ್ಟು.

ಮುಂದಿನ ಸರ್ತಿ ಬಂದಾಗ ಅಲ್ಲಿ ಇರಾಕ್- ಕುವೈತ್ ಮಧ್ಯೆ ಯುದ್ಧ ಶುರುವಾದುದರಿಂದ ಭಾರತಕ್ಕೆ ವಾಪಸ್ಸು ಬಂದು ಬೊಂಬಾಯಿಯಲ್ಲೇ ಮನೆ ಮಾಡಿ ಮದುವೆ ಮಾಡಿಕೊಂಡು ಒಟಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಮುಂಬೈಯಲ್ಲಿ ಸಾವಿರಾರು ಲಿಫ್ಟುಗಳಿವೆ. ಸ್ವಲ್ಪ ವರ್ಷವಾದ ಮೇಲೆ ಎಲ್ಲಾ ರೀತಿಯ ಲಿಫ್ಟ್ ಗಳನ್ನು ಸರ್ವಿಸ್ ಮಾಡುವ ಕಂಪನಿಯ ಮಾಲಿಕ – ಉದ್ಯಮಿಯಾದ ಮಂಜು. ಅವನು ಇನ್ನಿಬ್ಬರನ್ನಿಟ್ಟುಕೊಂಡು ಉದ್ಯಮವನ್ನು ಮುಂದುವರಿಸಿದ. ಅದರಲ್ಲಿ ಹೆಸರುವಾಸಿಯಾದ. ಓಟಿಸ್ ಕಂಪನಿಯ ಜೊತೆ ಸಂಪರ್ಕ ಇಟ್ಟುಕೊಂಡು ಅವರಿಗೆ ಸಹಾಯ ಮಾಡುತ್ತಿದ್ದ. ಹೊಸ ಲಿಫ್ಟುಗಳು ಬಂದಾಗ ಓಟಿಸ್ ನವರು ಅವನನ್ನು ಕರೆದು ಮಾರ್ಕೆಟ್ ನ ಬಗ್ಗೆ ಅವನ ಸಲಹೆ ತೆಗೆದುಕೊಳ್ಳುತ್ತಿದ್ದರು.

ಇಂಗ್ಲಿಷ್ ಕಲಿಯಬೇಕೂಂತ ಬಹಳ ಪ್ರಯಯ್ನ ಮಾಡಿದ ಮಂಜುವಿಗೆ ಇಬ್ಬರು ಮಕ್ಕಳು. ಮಗಳು, ಮಗ ಇಬ್ಬರೂ ಸಾಫ್ಟ್ವೇರ್ ನಲ್ಲಿ ಪದವೀಧರರು. ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗ ಎಂಬಿಎ ಮಾಡಿದ್ದಾನೆ. ಉಡುಪಿಗೆ ಬಂದಾಗ ಒಂದೆರೆಡು ಸರ್ತಿ ಮೈಸೂರಿಗೆ ಬಂದಿದ್ದ ಮಂಜು. ಆಗಾಗ್ಗೆ ಫೋನ್ ನಲ್ಲಿ ನಾವು ಮಾತನಾಡ್ತೀವಿ. ಮಂಜು ಪದೇ ಪದೇ ಹೇಳುವುದು ಒಂದೇ ಮಾತು… ನಾನು ಇಂಗ್ಲಿಷ್ ಕಲೀಬೇಕಾಗಿತ್ತು… ನನಗೆ ಹಿಂದಿ, ಉರ್ದು, ಮರಾಠಿ ಚೆನ್ನಾಗಿ ಬರುತ್ತೆ.. ಇಂಗ್ಲಿಷ್ ಬಿಟ್ಟು ಹೋಯ್ತು…


ಜೀವನದಲ್ಲಿ ಅನೀರಿಕ್ಷಿತವಾಗಿ ದಿಢೀರನೆ ಬಂದ ಆರಲಾರದ ಒಡಲ ಉರಿಯನ್ನು ಕೆಲಸದಲ್ಲಿ ಮುಳುಗಿಸಿ, ಅದರಲ್ಲೇ ಮಿಂದು, ಅದನ್ನು ಕೊನೆಗೆ ಅರಗಿಸಿಕೊಂಡು ಅಳಿಸಿ ಹಾಕಿ, ಹೊಸಬನಾಗಿ ಎದ್ದು ನಿಂತ ಮಂಜು. ಈಗ ಒಡಲಲ್ಲಿ ಅಳಿಯಲಾರದ ಶಾಂತಿ ನೆಲೆಸಿತ್ತು.