ಮೊನ್ನೆ ನೀವೊಂದು ಸುದ್ದಿ ಓದಿರಬಹುದು ಯಾ ಕೇಳಿರಬಹುದು. ಬೆಲರೂಸಿನ ಮಿನ್‌ಸ್ಕ್‌ನಿಂದ ಭಾರತಕ್ಕೆ ಬರುತ್ತಿರುವ ವಿಮಾನವೊಂದರಲ್ಲಿ ನಡೆದ ಘಟನೆ. ವೈದ್ಯಕೀಯ ಓದಿಗೆಂದು ಹೋಗಿದ್ದ ಭಾರತೀಯ ತರಳೆಯೊಬ್ಬಳು ಹಿಂದಿರುಗುವಾಗ ನಡೆದದ್ದು. ಆಕೆ ತುಂಬಿದ ಬಸುರಿ. ವಿಮಾನದಲ್ಲೇ ವಾಷ್‌ರೂಮಿನಲ್ಲಿ ಹೆರಿಗೆಯಾಗಿದೆ. ಆಕೆ ತನ್ನ ಸೀಟಿಗೆ ಮರಳಿದ್ದಾಳೆ. ವಿಮಾನದವರು ಆ ಮಗುವಿನ ಬಗ್ಗೆ ಕೇಳಿದಕ್ಕೆ ಅದು ನನ್ನ ಮಗುವೇ ಅಲ್ಲ ತನಗೇನೂ ಗೊತ್ತಿಲ್ಲ ಎಂದಳಂತೆ. ವಿಮಾನ ಭಾರತದಲ್ಲಿ ಇಳಿದ ಕೂಡಲೆ ಆಕೆಯನ್ನು ಪೋಲೀಸರಿಗೆ ಒಪ್ಪಿಸಿದ್ದಾರೆ. ಹುಷಾರಿಲ್ಲದ ಮಗುವನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

ಆ ಹುಡುಗಿಯ ಬಗ್ಗೆ ಯೋಚಿಸಿ. ಓದಲು ಹೋಗಿದ್ದಾಳೆ. ಬಸುರಾಗಿದ್ದಾಳೆ. ಭಾರತಕ್ಕೆ ಮರಳುತ್ತಿದ್ದಾಳೆ. ಹೆರಿಗೆಯಾಗಿದೆ. ಮಗು ತನ್ನದಲ್ಲ ಎಂದು ಸಾಧಿಸಲು ಹೊರಟಿದ್ದಾಳೆ. ಸುದ್ದಿಯಲ್ಲಿ ಬೇರೆ ಹೆಚ್ಚೇನೂ ವಿವರವಿಲ್ಲ. ಬೆಲರೂಸಿಗಿಂತಲೂ ಭಾರತದಲ್ಲಿ ಬೇಡದ ಮಗುವನ್ನು ಸಾಗ ಹಾಕುವುದು ಸುಲಭ ಎಂದು ಆಕೆ ಯೋಚಿಸಿರಬಹುದು. ಮನೆಯವರಿಗೆ ಹೇಳದೆ, ಬೇರೆಲ್ಲಾದರೂ ಉಳಿದುಕೊಂಡು, ಹೆರಿಗೆಯಾಗಿ ಮಗುವನ್ನು ಕಳೆದುಕೊಂಡರೆ ಯಾರಿಗೂ ತಿಳಿಯುವುದಿಲ್ಲ ಎಂದುಕೊಂಡಿರಬಹುದು. ಮನೆಯವರಿಗೂ ಹೇಳಬೇಕಾದ ಗರಜಿಲ್ಲ ಎಂದುಕೊಂಡಿರಬಹುದು. ಸ್ವಂತ ಮಗುವಿನ ಬಗ್ಗೆ ಸಂಭ್ರಮಪಡಬೇಕಾದ ಜೀವ ಹೀಗೆಲ್ಲ ಆತಂಕಪಡಬೇಕಾಗಿ ಬಂದಿರಬಹುದು.

ಯಾಕೆ ಹೀಗೆಲ್ಲಾ ಯೋಚಿಸುತ್ತಿದ್ದೇನೆಂದು ಹೇಳುತ್ತೇನೆ. ಹೋದ ವರ್ಷ ಆಸ್ಟ್ರೇಲಿಯಾದ ರೇಡಿಯೋದಲ್ಲಿ ಡಾಕ್ಟರೊಬ್ಬರ ಸಂದರ್ಶನ ಕೇಳಿದ್ದೆ. ಅಡಿಲೇಡ್ ವಿಶ್ವವಿದ್ಯಾಲಯದವರು ನಡೆಸಿದ ಸ್ಟಡಿಯ ಪ್ರಕಾರ ಹೊರನಾಡಿನಿಂದ ಓದಲು ಬಂದ ವಿದ್ಯಾರ್ಥಿಗಳಲ್ಲಿ ಲೈಂಗಿಕ ತಿಳುವಳಿಕೆ ತುಂಬಾ ಕಡಿಮೆ. ಹೊಸ ನಾಡು, ಹೊಸ ಗೆಳೆಯರು, ಹೊಸದಾಗಿ ಸಿಕ್ಕ ಸ್ವಾತಂತ್ಯ್ರ ಅವರನ್ನು ಮತ್ತರನ್ನಾಗಿಸುವುದರಲ್ಲಿ, ಲೈಂಗಿಕ ಚಟುವಟಿಕೆ ಹೆಚ್ಚಿಸುವುದರಲ್ಲಿ ಸೋಜಿಗವೇನಿಲ್ಲ. ಆದರೆ ಇದರ ಪರಿಣಾಮ ಮಾತ್ರ ಯಾವಾಗಲೂ ಸುಗಮ ಆಗಿರುವುದಿಲ್ಲ. ಹೀಗೆ ಬಸಿರಾದ ಹೆಣ್ಣು ಮಕ್ಕಳಲ್ಲಿ ಬ್ಯಾಕ್‌ಯಾರ್ಡ್ ಅಬಾರ್ಷನ್‌ಗಳು ಹೆಚ್ಚುತ್ತಿರುವುದರ ಬಗ್ಗೆ ಆ ಡಾಕ್ಟರು ಆತಂಕ ವ್ಯಕ್ತಪಡಿಸಿದ್ದರು. ಸಾಧಾರಣವಾಗಿ ಮದುವೆಯಾಗದ ಹೆಣ್ಣುಮಕ್ಕಳೇ ಈ ಬಗೆಯ ಅಬಾರ್ಷನ್‌ಗಳಿಗೆ ಮೊರೆಹೋಗುವುದು. ಅವರ ನಿರ್ಧಾರದ ಹಿಂದೆ ಕುಟುಂಬದ ಹಾಗು ಸಮಾಜದ ನೈತಿಕ ಒತ್ತಡ ಕೆಲಸ ಮಾಡುತ್ತಿರುವುದು ತಿಳಿದಿರುವ ಸಂಗತಿಯೇ. ರೇಡಿಯೋದಲ್ಲಿ ಆ ಡಾಕ್ಟರ ಮಾತು ಕೇಳುತ್ತಾ ಭಾರತದ ಹೆಣ್ಣುಮಕ್ಕಳೂ ಇದಕ್ಕೆ ಹೊರತಲ್ಲ ಎಂಬುದು ಅರಿವಾಯಿತು. ಭಾರತದಿಂದ ಇತ್ತೀಚೆಗೆ ಹೆಚ್ಚೆಚ್ಚು ವಿದ್ಯಾರ್ಥಿಗಳು ಬರುತ್ತಿರುವದರಿಂದ ಅದು ಅಸಹಜವೂ ಅಲ್ಲವೇನೋ.

ಯೌವ್ವನದ ಉತ್ಕಟತೆಯಲ್ಲಿ ಮೆಚ್ಚಿದ ಹುಡುಗನಿಗೆ ಬಸಿರಾಗಿರುತ್ತಾರೆ. ಥಟ್ಟನೆ ಬೆಟ್ಟದಷ್ಟು ಜವಾಬ್ದಾರಿಯನ್ನೂ ತಾವೇ ಹೊರಬೇಕಾಗಿ ಬರುತ್ತದೆ. ಅವರ ಬಗ್ಗೆ ನೆನೆದರೇ ಮೈ ನಡುಗುತ್ತದೆ. ಆ ವಯಸ್ಸಿನಲ್ಲಿ, ಆ ಪರಿಸ್ಥಿಯಲ್ಲಿ ಅವರಿಗೆ ಎಷ್ಟು ಬೆಂಬಲ ಸಿಕ್ಕರೂ ಸಾಲದಾಗಿರುತ್ತದೆ. ಆದರೆ ಹೊರದೇಶದಲ್ಲಿ ಓದುತ್ತಿರುವ ಇವರು ಆಸ್ಪತ್ರೆಗೆ ಡಾಕ್ಟರ ಬಳಿಗೆ ಹೋಗಲು ಹಿಂಜರಿಯುತ್ತಾರೆ. ಎಲ್ಲಿ ತಮ್ಮ ವೀಸಾಕ್ಕೆ ತೊಂದರೆ ಬರುತ್ತದೋ, ವಾಪಸು ಕಳಿಸಿಬಿಡುತ್ತಾರೋ ಎಂಬ ಹೆದರಿಕೆಯಿಂದ ಹೇಗೇಗೋ ಅಬಾರ್ಷನ್ ಮಾಡಿಕೊಳ್ಳಲು ಹೋಗಿ ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಆಸ್ಟ್ರೇಲಿಯಾಕ್ಕೆ ಬರುವ ವಿದ್ಯಾರ್ಥಿಗಳಿಗೆ ಇಲ್ಲಿ ಡಾಕ್ಟರ ಬಳಿ ಹೋಗಲು ಹೆದರಬೇಡಿ ಎಂದು ಒತ್ತಿ ಹೇಳಬೇಕು. ಅವರು ಬಂದಿಳಿದ ಕೂಡಲೆ ಇಮಿಗ್ರೇಷನ್‌ನವರು ಆ ಕೆಲಸ ತಪ್ಪದೆ ಮಾಡಬೇಕೆಂಬುದು ರೇಡಿಯೋ ಸಂದರ್ಶನದ ಡಾಕ್ಟರರ ಒತ್ತಾಯವಾಗಿತ್ತು.

ಸಿಡ್ನಿಯಲ್ಲಿ ಪ್ಲಂಟನ್ ಎಂಬ ಬಡಾವಣೆಯಿದೆ. ಅಲ್ಲಿಯ ಹೈಸ್ಕೂಲಿನ ಪ್ರಿನ್ಸಿಪಾಲರು ಗ್ಲೆನ್ ಸಾರ್ಜೆನ್ಟ್. ಕೆಲವು ವರ್ಷಗಳ ಹಿಂದೆ ಒಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಅದರ ಹೆಸರು ‘ಯಂಗ್ ಮದರ್ಸ್’ ಎಂದು. ಹೈಸ್ಕೂಲ್ ವಯಸ್ಸಲ್ಲೇ ಮಕ್ಕಳಾದ ಹೆಣ್ಣುಮಕ್ಕಳ ಬಗ್ಗೆ ಅತೀವ ಆಸ್ಥೆಯ ಆಧಾರದ ಮೇಲೆ ಕಟ್ಟಿಕೊಂಡ ಕೆಲಸವದು. ಆ ಕಾರ್ಯಕ್ರಮದಡಿಯಲ್ಲಿ ಅಂತಹ ಹೆಣ್ಣುಮಕ್ಕಳಿಗೆ ಬೇಕಾದ ಸೌಕರ್ಯಗಳನ್ನು ಒದಗಿಸುವುದು, ಕ್ಲಾಸುಗಳನ್ನು ವ್ಯವಸ್ಥೆ ಮಾಡುವುದು ಎಲ್ಲ ಮಾಡುತ್ತಾರೆ. ಅಷ್ಟೇ ಅಲ್ಲದೆ ಗ್ಲೆನ್ ಆ ಮಕ್ಕಳ ವಯ್ಯಕ್ತಿಕ ತೊಂದರೆಗಳನ್ನೂ ಅರಿತುಕೊಂಡು ಅವರು ಶಾಲೆ ಬಿಡದಂತೆ ಒತ್ತಾಯಿಸುವುದು, ಮನೆಗೂ ಹೋಗಿ ಮಾತಾಡಿಸಿ ಅವರು ಶಾಲೆ ಬಿಡದಂತೆ ನೋಡಿಕೊಳ್ಳುವುದು. ಹೀಗೆ ತನ್ನ ಶಕ್ತಿಮೀರಿ ಕೆಲಸ ಮಾಡಿದ್ದಾರೆ.

“ಪ್ಲಂಟನ್ ಹೈ ಬೇಬೀಸ್” ಎಂಬ ಟೀವಿ ಡಾಕ್ಯುಮೆಂಟರಿ ಒಂದರಲ್ಲಿ ಅವರು ಹೇಳಿದ ಮಾತು ಈಗಲೂ ನೆನಪಾಗುತ್ತದೆ. “ಅಂತಹ ಅತಂತ್ರ ಸ್ಥಿತಿಯಲ್ಲಿರುವ, ಕುಟುಂಬ ಹಾಗು ಸಮಾಜದ ಯಾವುದೇ ಬೆಂಬಲವಿಲ್ಲದೆ ತತ್ತರಿಸುತ್ತಿರುವ ಮಕ್ಕಳನ್ನು ಪ್ರಜ್ಞಾವಂತರಾದ ನಾವೂ ಕೈಬಿಟ್ಟರೆ ಮತ್ತಾರು ಕೇಳಬೇಕು? ಯೌವ್ವನದ ದುಡುಕೊಂದು ಅವರ ಬದುಕನ್ನೇ ಹಾಳು ಮಾಡದ ಹಾಗೆ ನೋಡಿಕೊಳ್ಳುವುದು ನಮ್ಮ ಕರ್ತವ್ಯ” ಎಂದು ಆ ಪ್ರಿನ್ಸಿಪಾಲರು ಆರ್ತವಾಗಿ ಹೇಳಿದಾಗ ಅವರ ಕಣ್ಣಂಚಲ್ಲಿ ಹನಿಗೂಡಿತ್ತು. ಅವರ ಕೈಯಡಿ ಓದಿದ ಎಷ್ಟೋ ಹೆಣ್ಣು ಮಕ್ಕಳೀಗ ಕಾಲೇಜು ಮುಗಿಸಿದ್ದಾರೆ, ದೊಡ್ಡ ಕೆಲಸಗಳಲ್ಲಿದ್ದಾರೆ. ಮದುವೆಯಾಗಿ ನೆಮ್ಮದಿಯಿಂದ ಜೀವನ ಸಾಗಿಸಿದ್ದಾರೆ. ಅದು ಗ್ಲೆನ್‌ರ ಆಸ್ಥೆಯ ಫಲವಷ್ಟೇ ಅಲ್ಲ, ಅವಕಾಶದ ಲಾಭ ಪಡೆದ ಆ ಹೆಣ್ಣುಮಕ್ಕಳ ಕಷ್ಟದ ದುಡಿಮೆಯ ಫಲವೂ ಹೌದು.