ಮಡಕೆ ಮಾರುತ್ತಾ ಮಾರುತ್ತಾ ಆಕೆ ಬಂದು ಜಗಲಿಯಲ್ಲಿ ಕುಳಿತುಕೊಂಡು ಮಡಕೆ ಕೊಂಡರೂ, ಕೊಳ್ಳದಿದ್ದರೂ ಒಂದಿಷ್ಟು ಊರಿನ ಕಥೆಗಳನ್ನು ಹೇಳುತ್ತಿದ್ದಳು. ಆಕೆ ಮಾತಾಡಲು ಪ್ರಾರಂಭಿಸುತ್ತಿದ್ದರೆ ನಾವೇಕೆ, ದೊಡ್ಡವರೇ ಬಾಯಿ ತೆರೆದುಕೊಂಡು ಕೂತು ಬಿಡುತ್ತಿದ್ದರು. ಅವಳ ಬತ್ತಳಿಕೆಯಲ್ಲಿನ ಕಥೆಗಳಾದರೂ ಹಾಗೆಯೇ ಇರುತ್ತಿದ್ದವು. ಆಕೆ ಅಯ್ಯಪ್ಪನ ಪರಮಭಕ್ತೆ. ಎಷ್ಟೆಂದರೆ ಮಣಿಕಂಠನ ಹೆಸರಿನ ಹಚ್ಚೆಯನ್ನು ಕತ್ತಿನ ಕೆಳಗೆ ಹಾಕಿಸಿಕೊಳ್ಳುವಷ್ಟು. ಆಕೆ ಮಡಕೆ ಮಾರಲು ಬಂದಾಗೆಲ್ಲಾ ಕತ್ತಿನ ಸೆರಗು ಸರಿಸಿ, ಹಚ್ಚೆ ತೋರಿಸಿ ಈ ಅಯ್ಯಪ್ಪ ನನ್ನನ್ನು ಕಾಯುತ್ತಾನೆ ನೋಡ್ತಾ ಇರಿ ಎಂದು ನಗುತ್ತಿದ್ದರೆ ನಾವವಳ ಮುಖ ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುತ್ತಿದ್ದೆವು.
ಫಾತಿಮಾ ರಲಿಯಾ ಬರೆಯುವ ಪಾಕ್ಷಿಕ ಅಂಕಣ.
ಹಿಂದೆಲ್ಲಾ ನಮ್ಮ ಕರಾವಳಿಯಲ್ಲಿ ಸಂಜೆಯಾಗುತ್ತಿದ್ದಂತೆ ಹಿತ್ತಲುಗಳಿಗೆ ವಿಶೇಷ ಕಳೆ ಬಂದುಬಿಡುತ್ತಿದ್ದವು. ಆಚೀಚೆ ಮನೆಗಳ ನಾಲ್ಕು ಮಹಿಳಾಮಣಿಗಳು, ಗದ್ದೆ ಕೆಲಸ ಮುಗಿಸಿ ಈಗಷ್ಟೇ ಮನೆಗೆ ಮರಳುತ್ತಿರುವ ಹೆಂಗಸರು, ಕ್ಷಣ ಮಾತ್ರದಲ್ಲಿ ಅಡಕೆ ಸುಲಿಯುವ, ತೆಂಗಿನ ಸಿಪ್ಪೆ ಬಿಡಿಸುವ ಪ್ರತಿಭಾವಂತರು ಕಾರಣವಿಲ್ಲದೆಯೇ ಯಾವುದಾದರೊಂದು ಮನೆಯ ಜಗಲಿ ಸೇರಿಬಿಡುತ್ತಿದ್ದರು. ಅಲ್ಲಿ ಇಡೀ ಊರಿನ ಚರ್ಚೆ ಗಹನವಾಗಿ ನಡೆಯುತ್ತಿದ್ದರೆ ಇತ್ತ ಅಂಗಳದಲ್ಲಿ ಆ ಎಲ್ಲಾ ಮಹಿಳೆಯರ ಮಕ್ಕಳು ಒಂದು ಮಿನಿ ಒಲಿಂಪಿಕ್ ಗ್ರಾಮವನ್ನೇ ಸೃಷ್ಟಿಸಿಬಿಡುತ್ತಿದ್ದರು.
ಆಗ ಆಡುತ್ತಿದ್ದ ಆಟಗಳಾದರೂ ಎಂಥವು? ಚಿನ್ನಿದಾಂಡು, ಮರಕೋತಿ ಆಟ, ಮುಟ್ಟಾಟ, ಗೋಲಿಯಾಟ, ಅಪ್ಪಟ ಮಣ್ಣಿನ ಘಮದ ಕಬಡ್ಡಿ, ಆಗಷ್ಟೇ ಹಳ್ಳಿಯ ಮನದ ಅಂಗಳ ಪ್ರವೇಶಿಸಿದ್ದ ಕ್ರಿಕೆಟ್… ಹೀಗೆ ತರಹೇವಾರಿ ಆಟಗಳು ಪಟ್ಟಿಯಲ್ಲಿದ್ದರೂ ನಮ್ಮಮೊದಲ ಆದ್ಯತೆ ಮಾತ್ರ ಲಗೋರಿಗೇ. ಪ್ರತಿ ಪಾಯಿಂಟ್ ಗೂ ಏರುತ್ತಿದ್ದ ಉತ್ಸಾಹ, ನಿನ್ನಿಂದಾಗಿಯೇ ಸೋತೆವು ಅನ್ನುವ ಎದುರು ಟೀಮಿನ ಆರೋಪ, ಪ್ರತ್ಯಾರೋಪ, ನಗು, ಕೇಕೆ, ಕಿರುಚಾಟಗಳ ಗೊಂದಲದಲ್ಲಿ ಹೊತ್ತು ಮುಳುಗಿದ್ದೇ ಗೊತ್ತಾಗುತ್ತಿರಲಿಲ್ಲ. ಆದರೆ ಊರ ಹೊರಗೆ ಕುಂಬಾರ ಮಹಿಳೆ ಫಕೀರಮ್ಮನ ಸ್ವರ ಕೇಳುತ್ತಿದ್ದಂತೆ ನಮ್ಮ ಉತ್ಸಾಹಕ್ಕೂ ಆಟಕ್ಕೂ ತಾತ್ಕಾಲಿಕ ಬ್ರೇಕ್! ಅಮ್ಮನ ಚಾಟಿಯೇಟಿಗೂ ಬಗ್ಗದ ನಮ್ಮ ಮೊಂಡುತನ ಫಕೀರಮ್ಮನನ ಮುಂದೆ ಮಂಡಿಯೂರಿಬಿಡುತ್ತಿದ್ದುದಾದರೂ ಹೇಗೆ ಅನ್ನುವುದೇ ಒಂದು ದೊಡ್ಡ ಅಚ್ಚರಿ ನನಗೀಗ.
ಸುಭಗರು, ಶಿಷ್ಟರು, ಸಭ್ಯರು ಅಂತೆಲ್ಲಾ ವಿಶೇಷಣ ಭಾರಗಳನ್ನು ನಮ್ಮ ಹೆಗಲ ಮೇಲೆ ನಾವೇ ಹೊತ್ತುಕೊಂಡಿರುವ ದಕ್ಷಿಣ ಕನ್ನಡದ ಮಹಿಳೆಯರ ನಡುವೆ, ಉತ್ತರ ಕರ್ನಾಟಕದ ಯಾವುದೋ ಹಳ್ಳಿಯ, ಮಂಡಿಯವರೆಗೆ ಸೀರೆ ಎತ್ತಿಕಟ್ಟುತ್ತಿದ್ದ ಫಕೀರಮ್ಮ ನಮಗೆಲ್ಲಾ ಆಪ್ತ ಅನ್ನಿಸಿಬಿಡುತ್ತಿದ್ದಳು. ಯಾಕೋ ಗೊತ್ತಿಲ್ಲ ಅವಳ ಹಾವ ಭಾವ, ಮಾತು, ಕೆಲ ಪದಗಳು ಎಲ್ಲಾ ನಮ್ಮನ್ನು ಒಂದು ವಿಚಿತ್ರ ಆಕರ್ಷಣೆಗೆ ದೂಡಿದ್ದವು. ಅಮ್ಮಂದಿರೆಲ್ಲಾ ನಮ್ಮನ್ನು ಆಕೆಯಿಂದ ದೂರವಿಡಲು ಪ್ರಯತ್ನಿಸುತ್ತಿದ್ದರೆ ನಾವು ಆಕೆಗೆ ಮತ್ತಷ್ಟು ಹತ್ತಿರವಾಗುತ್ತಿದ್ದೆವು. ಮಡಕೆ ಮಾರುತ್ತಾ ಮಾರುತ್ತಾ ಆಕೆ ಬಂದು ಜಗಲಿಯಲ್ಲಿ ಕುಳಿತುಕೊಂಡು ಮಡಕೆ ಕೊಂಡರೂ, ಕೊಳ್ಳದಿದ್ದರೂ ಒಂದಿಷ್ಟು ಊರಿನ ಕಥೆಗಳನ್ನು ಹೇಳುತ್ತಿದ್ದಳು. ಆಕೆ ಮಾತಾಡಲು ಪ್ರಾರಂಭಿಸುತ್ತಿದ್ದರೆ ನಾವೇಕೆ, ದೊಡ್ಡವರೇ ಬಾಯಿ ತೆರೆದುಕೊಂಡು ಕೂತು ಬಿಡುತ್ತಿದ್ದರು. ಅವಳ ಬತ್ತಳಿಕೆಯಲ್ಲಿನ ಕಥೆಗಳಾದರೂ ಹಾಗೆಯೇ ಇರುತ್ತಿದ್ದವು. ಆಕೆ ಅಯ್ಯಪ್ಪನ ಪರಮಭಕ್ತೆ. ಎಷ್ಟೆಂದರೆ ಮಣಿಕಂಠನ ಹೆಸರಿನ ಹಚ್ಚೆಯನ್ನು ಕತ್ತಿನ ಕೆಳಗೆ ಹಾಕಿಸಿಕೊಳ್ಳುವಷ್ಟು. ಆಕೆ ಮಡಕೆ ಮಾರಲು ಬಂದಾಗೆಲ್ಲಾ ಕತ್ತಿನ ಸೆರಗು ಸರಿಸಿ, ಹಚ್ಚೆ ತೋರಿಸಿ ಈ ಅಯ್ಯಪ್ಪ ನನ್ನನ್ನು ಕಾಯುತ್ತಾನೆ ನೋಡ್ತಾ ಇರಿ ಎಂದು ನಗುತ್ತಿದ್ದರೆ ನಾವವಳ ಮುಖ ನೋಡುತ್ತಾ ಸುಮ್ಮನೆ ಕುಳಿತುಕೊಳ್ಳುತ್ತಿದ್ದೆವು.
ನಮಗಾಕೆ ನಾವೆಂದೂ ಕಾಣದ ಕಥೆಗಳ ಜಗತ್ತು ಮತ್ತು ನಮ್ಮ ನಡುವಿನ ಕೊಂಡಿಯಂತಿದ್ದಳು. ಆಕೆ ಕೆಂಪು ಸಿಮೆಂಟ್ ನೆಲದ ಮೇಲೆ ಮಡಕೆಗಳ ಕಟ್ಟನ್ನಿಟ್ಟು ತಾನೂ ಕುಳಿತು ಸೆರಗಿನಿಂದ ಗಾಳಿ ಬೀಸಲು ಪ್ರಾರಂಭಿಸಿದಳೆಂದರೆ ಅಲ್ಲೊಂದು ಕಥಾಜಗತ್ತು ತಾನೇ ತಾನಾಗಿ ಹರವಿಕೊಳ್ಳುತ್ತಿತ್ತು. ಮಳೆ ಇರದ ತನ್ನೂರು ಮತ್ತು ಸುಖಾ ಸುಮ್ಮನೆ ನೀರು ಪೋಲು ಮಾಡುವ ನಮ್ಮೂರು ಎರಡನ್ನೂ ಹೋಲಿಸಿ ಅದೇ ಸೆರಗಿನ ತುದಿಯಿಂದ ಕಣ್ಣು ಒರೆಸಿಕೊಳ್ಳುತ್ತಿದ್ದಳು. ಅವಳೆದೆಯೊಳಗೆ ಯಾವ ನೋವಿತ್ತೋ ಗೊತ್ತಿಲ್ಲ. ಒಮ್ಮೊಮ್ಮೆ ತನ್ನೂರನ್ನು, ತಾನು ಮದುವೆಯಾಗಿ ಬರುವಾಗ ತನ್ನ ಅಯ್ಯ ವರದಕ್ಷಿಣೆಯಾಗಿ ಕೊಟ್ಟಿದ್ದ ಜಮೀನನ್ನು, ನೀರಿಲ್ಲದ ಕೆರೆಯನ್ನು ನೆನೆಸಿಕೊಂಡು ಭಾವುಕಳಾಗುತ್ತಿದ್ದುದೂ ಇತ್ತು. ಆದರೆ ಅವೆಲ್ಲಾ ಕ್ಷಣಮಾತ್ರದ ಭಾವದೇರಿಳಿತಗಳಷ್ಟೇ. ನಿಜಕ್ಕೂ ಆಕೆ ಉಸುಕಿನ ದಿಣ್ಣೆಯ ಮೇಲೂ ಹೆಜ್ಜೆ ಗುರುತು ಮೂಡಿವಸುವಂತಹ ದಿಟ್ಟೆ. ಅಷ್ಟಿಲ್ಲದಿದ್ದರೆ ಎಲ್ಲಿಂದಲೋ ಬಂದು ಇಲ್ಲಿ ಬದುಕು ಕಟ್ಟಿಕೊಳ್ಳಲಾಗುತ್ತಿತ್ತೇ?
ಸುಭಗರು, ಶಿಷ್ಟರು, ಸಭ್ಯರು ಅಂತೆಲ್ಲಾ ವಿಶೇಷಣ ಭಾರಗಳನ್ನು ನಮ್ಮ ಹೆಗಲ ಮೇಲೆ ನಾವೇ ಹೊತ್ತುಕೊಂಡಿರುವ ದಕ್ಷಿಣ ಕನ್ನಡದ ಮಹಿಳೆಯರ ನಡುವೆ, ಉತ್ತರ ಕರ್ನಾಟಕದ ಯಾವುದೋ ಹಳ್ಳಿಯ, ಮಂಡಿಯವರೆಗೆ ಸೀರೆ ಎತ್ತಿಕಟ್ಟುತ್ತಿದ್ದ ಫಕೀರಮ್ಮ ನಮಗೆಲ್ಲಾ ಆಪ್ತ ಅನ್ನಿಸಿಬಿಡುತ್ತಿದ್ದಳು. ಯಾಕೋ ಗೊತ್ತಿಲ್ಲ ಅವಳ ಹಾವ ಭಾವ, ಮಾತು, ಕೆಲ ಪದಗಳು ಎಲ್ಲಾ ನಮ್ಮನ್ನು ಒಂದು ವಿಚಿತ್ರ ಆಕರ್ಷಣೆಗೆ ದೂಡಿದ್ದವು. ಅಮ್ಮಂದಿರೆಲ್ಲಾ ನಮ್ಮನ್ನು ಆಕೆಯಿಂದ ದೂರವಿಡಲು ಪ್ರಯತ್ನಿಸುತ್ತಿದ್ದರೆ ನಾವು ಆಕೆಗೆ ಮತ್ತಷ್ಟು ಹತ್ತಿರವಾಗುತ್ತಿದ್ದೆವು.
ಕೆಲವೊಮ್ಮೆ ಅವಳು ಶುದ್ಧ ತತ್ವಜ್ಞಾನಿಯಂತೆ ಮಾತಾಡುತ್ತಿದ್ದಳು. ಮಣಿಕಂಠನೂ ತಿಳಿಸಿಕೊಡದ ನನ್ನ ಯೋಗ್ಯತೆಯನ್ನು ಈ ಮಣ್ಣು ನನಗೆ ತಿಳಿಸಿಕೊಟ್ಟಿದೆ. ಹಾಗಾಗಿಯೇ ನೆಲದ ನೆಂಟನ್ನು ನಾನಿನ್ನೂ ಕಳೆದುಕೊಂಡಿಲ್ಲ ಅನ್ನುತ್ತಿದ್ದಳು. ನಮಗಾಗ ತತ್ವಜ್ಞಾನವೊಂದೂ ಅರ್ಥವಾಗುವ ವಯಸ್ಸಲ್ಲ. ಅವಳ ಕೈಯಲ್ಲಿ ಮಣ್ಣು ಮಡಕೆಯಾಗುವುದಕ್ಕಿಂತ ದೊಡ್ಡ ತತ್ವಜ್ಞಾನ ನಮಗೆ ಬೇಕಿರಲೂ ಇಲ್ಲ. ಬರ್ತಡೇ ಕಪ್ ಗಳಿನ್ನೂ ಚಾಲ್ತಿಯಲ್ಲಿರದ ಆ ಕಾಲದಲ್ಲಿ ಆಕೆ ಮಡಕೆಯ ಮೇಲೆ ನಮ್ಮ ಕಣ್ಣುಮುಂದೆಯೇ ನಾಲ್ಕು ಬಣ್ಣದ ಗೆರೆ ಎಳೆದು ಕೊಟ್ಟುಬಿಟ್ಟರೆ ನಮ್ಮ ಪಾಲಿಗದೇ ಅಮೂಲ್ಯ ಕಲಾಕೃತಿ.
ಒಂದು ಸಂಜೆ ಬೆಳಕಿನ ನಡುವೆ, ಏದುಸಿರು ಬಿಡುತ್ತಾ ಕ್ಷಣಕ್ಕೊಮ್ಮೆ ಯಾರಿಗೋ ಬಯ್ಯುತ್ತಾ ಧುಮುಗುಟ್ಟುತ್ತಾ ಬಂದ ಫಕೀರಮ್ಮ ನೆಲ ಯಾವುದು ಮಣ್ಣು ಯಾವುದು ಎಂದೂ ಯೋಚಿಸದೆ ದೊಪ್ಪನೆ ಕುಳಿತು ತೀರದ ದಾಹದಿಂದ ಬಳಲುತ್ತಿರುವಂತೆ “ಅಮ್ಮಾ ನೀರು” ಎಂದಳು. ಆ ಸಂಜೆ ಅವಳು ಎಂದಿನಂತಿರಲಿಲ್ಲ. ಹಣೆಯ ನೆರಿಗೆ, ಮೂಗಿನ ಕೆಳಗೆ ಹರಿಯುತ್ತಿದ್ದ ಬೆವರು, ಸಣ್ಣಗೆ ಉಬ್ಬಿದ ಗಂಟಲು ಅವಳಿಗೆ ಹೊಸ ಅವತಾರವನ್ನು ಕೊಟ್ಟಿತ್ತು.
ಅಜ್ಜಿ ಒಳಗಿಂದ ಹೆಸರು ಬೇಳೆಯ ಪಾನಕ ತಂದುಕೊಟ್ಟರು. ಅವಳು ಅವರೊನ್ನಮ್ಮೆ ಕೃತಜ್ಞತೆಯಿಂದ ಆಪಾದಮಸ್ತಕ ದಿಟ್ಟಿಸಿ ಗಟಗಟನೆ ಕುಡಿದು ಲೋಟ ಕೆಳಗಿಟ್ಟಳು. ನಮಗೆಲ್ಲಾ ಸಣ್ಣ ಅಚ್ಚರಿ. ಅಜ್ಜಿ ಅವಳ ಪಕ್ಕ ಕೂತು ಏನಾಯ್ತು ಅಂತ ಕೇಳಿದ್ರು. ಆಕೆ ಯಾವ ಪೀಠಿಕೆಯೂ ಇಲ್ಲದೆ “ನಾಚಿಕೆ ಇಲ್ಲದ ಈ ಗಂಡು ಜಾತಿಗೇ ವಿಷ ಇಕ್ಕಿಬಿಡಬೇಕು, ಪ್ರಪಂಚದಲ್ಲಿ ಒಂದೇ ಒಂದು ಗಂಡಸೂ ಉಳಿಯಬಾರದು” ಅಂದಳು. ನಾವು ನಮ್ಮ ಗುಂಪಿನಲ್ಲಿದ್ದ ಅಷ್ಟೂ ಗಂಡು ಮಕ್ಕಳನ್ನು ಪಿಳಿ ಪಿಳಿ ಕಣ್ಣುಬಿಡುತ್ತಾ ನೋಡುತ್ತಿದ್ದರೆ, ಆಕೆ “ಏನ್ರೇ, ಅವರನ್ಯಾಕೆ ನೋಡ್ತಿದೀರಿ, ಗಂಡು ಜಾತೀನ ಒಂದು ಚಣಕ್ಕೂ ನಂಬಬೇಡ್ರವ್ವಾ” ಎಂದು ಮತ್ತೆ ಉರಿದು ಬಿದ್ದಳು.
“ನನಗೇನಾದ್ರೂ ಅಯ್ಯಪ್ಪ ವರ ಕೊಟ್ರೆ ಇಡೀ ಗಂಡು ಕುಲವನ್ನು ಸುಟ್ಟುಬಿಡುವ ವರ ಕೇಳುತ್ತೇನೆ” ಎಂದು ಮತ್ತೆ ಅಜ್ಜಿ ಮುಖ ನೋಡಿದಳು. ಮಟ್ಟುಗತ್ತಿಯ ಮೇಲೆ ಕುಳಿತು ಅಡಕೆ ಸುಲಿಯುತ್ತಿದ್ದ ಅಮ್ಮನೂ ಕತ್ತಿ ಪಕ್ಕಕ್ಕಿಟ್ಟು ಅವಳ ಪಕ್ಕ ಬಂದು ಕೂತರು. ಅಷ್ಟಾಗುವಾಗ ನಮಗೂ ಇದ್ಯಾವುದೋ ಗಹನ ವಿಚಾರವೇ ಇರಬೇಕು ಅನ್ನಿಸಿ ಹುಡುಗರಿಗೆಲ್ಲಾ ದೂರ ಹೋಗುವಂತೆ ಸನ್ನೆ ಮಾಡಿ ನಾವು ಚಕ್ಕಳಮಕ್ಕಳ ಹಾಕಿ ಅಲ್ಲೇ ಕುಳಿತುಕೊಂಡೆವು. ಇಷ್ಟು ಸಿಟ್ಟಾಗಲು ಕಾರಣವಾದರೂ ಏನಿರಬಹುದು ಅನ್ನುವ ಪ್ರಶ್ನೆಗೆ ಉತ್ತರ ಸಿಗುವುದರ ಮುಂದೆ ಉಳಿದೆಲ್ಲಾ ಸಂಗತಿಗಳು ಗೌಣವಾಗಿಬಿಟ್ಟವು.
ಆದದ್ದಿಷ್ಟೇ… ಫಕೀರಮ್ಮ ಮಡಕೆ ಎತ್ತಿಕೊಂಡು ಬರಬೇಕಾದರೆ ಪಕ್ಕದಲ್ಲೇ ನಡೆಯುತ್ತಿದ್ದ ಕಟ್ಟಡ ಕೆಲಸಗಾರ ನಡು ವಯಸ್ಕನೊಬ್ಬ ಆಗಷ್ಟೇ ಲಂಗ ದಾವಣಿ ತೊಡಲಾರಂಭಿಸಿದ್ದ ಬಾಯಿ ಬರದ, ಕಿವಿ ಕೇಳದ ಹುಡುಗಿಯ ಮೈ ಮೇಲೆ ಕೈ ಹಾಕಿದ್ದ. ಪ್ರತಿಭಟಿಸಬೇಕು ಅನ್ನುವುದೂ ಗೊತ್ತಾಗದ ಆ ಹುಡುಗಿ ಸುಮ್ಮನೆ ಕೊಸರಾಡುತ್ತಿದ್ದಳು. ದೂರದಿಂದಲೇ ಇದನ್ನು ನೋಡಿದ್ದ ಫಕೀರಮ್ಮನ ಹೊಟ್ಟೆಯೊಳಗೆ ಬೆಂಕಿ ಹತ್ತಿಕೊಂಡಿತ್ತು. ಆಚೀಚೆ ನೋಡದ ಆಕೆ ಸೀದಾ ಅವನ ಬಳಿ ಧಾವಿಸಿ ಅವಳನ್ನು ಪಕ್ಕಕ್ಕೆಳೆದು ಅವನ ಕೆನ್ನೆಗೆರಡು ಬಾರಿಸಿದ್ದಳು. ಅಷ್ಟಕ್ಕೇ ಸುಮ್ಮನಾಗದೇ ಅಲ್ಲಿದ್ದ ಅಷ್ಟೂ ಮಂದಿಯನ್ನು ಸೇರಿಸಿ ಉಗಿದು ಬಂದಿದ್ದಳು. ಅಷ್ಟಾಗಿಯೂ ಅವಳ ಕೋಪ ತಣ್ಣಗಾದಂತೆ ಕಾಣುತ್ತಿರಲಿಲ್ಲ. ಗಂಡು ಜಾತಿಯ ಅಹಂಕಾರವನ್ನು ಮರ್ಯಾದೆಯ ಹೆಸರಲ್ಲಿ ಮೌನವಾಗಿ ಸಹಿಸಿಕೊಂಡೇ ಬಂದಿರುವ ಬುದ್ಧಿವಂತರ ಜಿಲ್ಲೆಯ ಎಲ್ಲಾ ಹೆಂಗಸರಿಗೆ ಸಹಸ್ರ ನಾಮಾರ್ಚನೆ ಮಾಡುತ್ತಿದ್ದರೆ ಅಜ್ಜಿ, ಅಮ್ಮ ಎದ್ದು ಒಳನಡೆದು ಅಡುಗೆ ಮನೆ ಸೇರಿಕೊಂಡರು. ಅಮ್ಮ ಅಡಕೆ ಸುಲಿಯುತ್ತಿದ್ದ ಮಟ್ಟುಗತ್ತಿ ತನ್ನ ಗಂಟಲಿಗೆ ಅಡಕೆ ಸಿಕ್ಕಿಸಿಕೊಂಡು ಸುಲಿಯಲೂ ಆಗದೆ ಸುಲಿಯದಿರಲೂ ಆಗದೆ ಒದ್ದಾಡುತ್ತಿತ್ತು.
ಆಕೆ ನೆನಪಾದಂತೆಲ್ಲಾ ಈಗಿನ #metoo ಅಭಿಯಾನಕ್ಕೆ ಫಕೀರಮ್ಮನಂತಹ ಗಟ್ಟಿ ಧ್ವನಿಯ, ಮರ್ಯಾದೆಗಳಂತಹ ಕಾಟಾಚಾರಗಳಿಗೆ ಬಲಿಯಾಗದ, ಅನ್ಯಾಯವನ್ನು ಖಂಡಿಸುವ ಛಾತಿ ಮತ್ತು ಪ್ರಾಮಾಣಿಕತೆ ಇದ್ದ ಸ್ವತಂತ್ರ ಮಹಿಳೆಯರು ದಶಕಗಳಷ್ಟು ಹಿಂದೆಯೇ ಬೀಜ ಬಿತ್ತಿದ್ದರೇನೋ ಅನಿಸುತ್ತದೆ. ಇಂಟರ್ನೆಟ್, ಸೋಶಿಯಲ್ ಮೀಡಿಯಾ, ತಮಗಾದ ಅನ್ಯಾಯವನ್ನು ಹೇಳಿಕೊಳ್ಳಲು ಶಿಷ್ಟ ಭಾಷೆ ಮುಂತಾದ ಯಾವ ಸವಲತ್ತುಗಳೂ ಇಲ್ಲದೆ ಅನಾಚಾರಗಳನ್ನೂ, ದೌರ್ಜನ್ಯವನ್ನೂ ಭಿಡೆಯಿಲ್ಲದೆ ಖಂಡಿಸುತ್ತಿದ್ದರು, ವಿರೋಧಿಸುತ್ತಿದ್ದರು.
ಓಡುತ್ತಿದ್ದ ಕಾಲುಗಳು ನಡೆಯಲು ಪ್ರಾರಂಭಿಸಿದಂತೆ ಬದುಕು ನಿಧಾನವಾಗಲಾರಂಭಿಸಿತು. ನಿರ್ಮಲ ಸಂಜೆಗಳನ್ನು ಮತ್ತು ಅದರೊಡಲಿನ ಚೇತೋಹಾರಿ ಆಟಗಳನ್ನು ಬದುಕಿನ ಕಾರ್ಯತತ್ಪರತೆಗಳು ಕಬಳಿಸಿದಂತೆ ಫಕೀರಮ್ಮ ಮತ್ತವಳ ಕಥೆಗಳೂ ಆಕರ್ಷಣೆ ಕಳೆದುಕೊಂಡವು. ಇತ್ತ ಅಜ್ಜಿ ಕಾಲವಾದ ನಂತರ ಮಣ್ಣಿನ ಮಡಕೆಯ ಬಳಕೆ ಬಹಳಷ್ಟು ಕಡಿಮೆಯಾಯಿತು. ತಳ ಹಿಡಿಯದ, ಎಣ್ಣೆ ಬೇಕಿಲ್ಲದ ನಾನ್-ಸ್ಟಿಕ್ ಪಾತ್ರೆ ಬಂದ ಮೇಲಂತೂ ಮಣ್ಣಿನ ಪಾತ್ರೆಗಳನ್ನು ಕೇಳುವವರೇ ಇಲ್ಲ, ಜೊತೆಗೆ ಫಕೀರಮ್ಮನ ಅಸ್ತಿತ್ವವೂ ನಮ್ಮ ಜೀವನದಿಂದ ಮರೆಯಾಗಿಹೋಯಿತು. ಅಮ್ಮ ಈಗಲೂ ಕೆಲವೊಮ್ಮೆ ಫಕೀರಮ್ಮನನ್ನೂ, ಮಣ್ಣಿನ ಹೂಜಿಯನ್ನೂ, ಅದರ ಮೇಲಿನ ಕುಸುರಿಯನ್ನೂ, ತಣ್ಣನೆಯ ನೀರನ್ನೂ, ಅವಳ ಕಥೆಗಳನ್ನೂ ನೆನಪಿಸಿಕೊಳ್ಳುತ್ತಾರೆ, ಮಣ್ಣಿನ ಮಡಕೆಯಲ್ಲಿ ಮೀನು ಸಾರು ಮಾಡಿದರಷ್ಟೇ ರುಚಿ ಎಂದು ಗೊಣಗುತ್ತಿರುತ್ತಾರೆ ಅನ್ನುವುದು ಹೊರತುಪಡಿಸಿದರೆ ನಮ್ಮ ನೆನಪಿನ ಕೋಶದಲ್ಲಿ ಅವಳಿಲ್ಲವೇ ಇಲ್ಲ ಅನ್ನಬಹುದು.
ಆದರೆ ಈ ಬಾರಿ ಊರಿಗೆ ಹೋಗಿದ್ದಾಗ, ಮುಂಜಾವು ಮೆಲ್ಲ ಮೆಲ್ಲನೆ ಕಣ್ಣುಬಿಡುವ ಹೊತ್ತು ಹಂಡೆಯೊಲೆಯ ಮುಂದೆ ಕೂತು ಚಳಿ ಕಾಯಿಸುತ್ತಿದ್ದಾಗ ಪಕ್ಕದ ಮದರಸದಲ್ಲಿ ಹಿಂದಿನ ದಿನದ ಪಾಠವನ್ನು ಮಕ್ಕಳು ರಾಗವಾಗಿ ಒಪ್ಪಿಸುತ್ತಿದ್ದುದು ಕೇಳಿ ಬರುತ್ತಿತ್ತು. ಪಕ್ಕನೆ ನೆನಪು ಬಾಲ್ಯಕ್ಕೋಡಿತು. ಆ ದಿನಗಳ ಸಂಜೆ, ಹರಟೆ, ಆಟ, ಹೆಂಚಿನ ಮನೆಗಳು, ಫಕೀರಮ್ಮ, ಆಕೆಯ ಮಡಕೆ ಎಲ್ಲಾ ನೆನಪಾದವು. ಒಮ್ಮೆ ಆಕೆಯನ್ನು ಕಾಣಬೇಕು, ಮಾತಾಡಬೇಕು ಅಂತ ತೀವ್ರವಾಗಿ ಅನಿಸತೊಡಗಿತು. ಅವಳನ್ನು ಮತ್ತೆ ಹುಡುಕಬೇಕು ಅಂದುಕೊಳ್ಳುತ್ತಲೇ ಇದ್ದೆ, ಆದರೆ ಆ ದಿನ ಬರಲೇ ಇಲ್ಲ. ನಾನು ಊರಿನಿಂದ ಮತ್ತೆ ಮರಳುವ ಗಳಿಗೆಯೂ ಬಂತು. ಫಕೀರಮ್ಮನ ಹುಡುಕಾಟವನ್ನು ಮುಂದಿನ ಸಲಕ್ಕೆ ಮುಂದೂಡಿ ಕಾರು ಹತ್ತಿ ಕುಳಿತುಕೊಂಡೆ. ಆದರೆ ಆಕೆ ನನಗೆ ಸಿಗಲೇಬೇಕು ಅನ್ನುವುದು ಮೊದಲೇ ನಿರ್ಧಾರವಾಗಿದ್ದರೆ ಯಾರಾದರೂ ತಡೆಯಲು ಸಾಧ್ಯವೇ? ಒಂದೆರಡು ಕಿ.ಮೀ ಬರುವಷ್ಟರಲ್ಲಿ ಕಾರು ಕೆಟ್ಟು ನಿಂತಿತು. ಹೊತ್ತು ಬೇರೆ ಮೀರಿತ್ತು. ಮೆಕ್ಯಾನಿಕ್ ಅನ್ನು ಕರೆದುಕೊಂಡು ಬರುವಷ್ಟರಲ್ಲಿ ನನ್ನ ತಾಳ್ಮೆ ಸಂಪೂರ್ಣ ಒಡೆದುಹೋಗಿತ್ತು. ಒಳಗಿನ್ನು ಕೂತಿರಲಾರೆ ಅನ್ನಿಸಿ ಕೆಳಗಿಳಿದು ಅಲ್ಲೇ ಇದ್ದ ಮೈಲಿಗಲ್ಲೊಂದರ ಮೇಲೆ ಕುಳಿತುಕೊಂಡೆ.
ಇಂಟರ್ನೆಟ್, ಸೋಶಿಯಲ್ ಮೀಡಿಯಾ, ತಮಗಾದ ಅನ್ಯಾಯವನ್ನು ಹೇಳಿಕೊಳ್ಳಲು ಶಿಷ್ಟ ಭಾಷೆ ಮುಂತಾದ ಯಾವ ಸವಲತ್ತುಗಳೂ ಇಲ್ಲದೆ ಅನಾಚಾರಗಳನ್ನೂ, ದೌರ್ಜನ್ಯವನ್ನೂ ಭಿಡೆಯಿಲ್ಲದೆ ಖಂಡಿಸುತ್ತಿದ್ದರು, ವಿರೋಧಿಸುತ್ತಿದ್ದರು.
ಓಡುತ್ತಿದ್ದ ಕಾಲುಗಳು ನಡೆಯಲು ಪ್ರಾರಂಭಿಸಿದಂತೆ ಬದುಕು ನಿಧಾನವಾಗಲಾರಂಭಿಸಿತು. ನಿರ್ಮಲ ಸಂಜೆಗಳನ್ನು ಮತ್ತು ಅದರೊಡಲಿನ ಚೇತೋಹಾರಿ ಆಟಗಳನ್ನು ಬದುಕಿನ ಕಾರ್ಯತತ್ಪರತೆಗಳು ಕಬಳಿಸಿದಂತೆ ಫಕೀರಮ್ಮ ಮತ್ತವಳ ಕಥೆಗಳೂ ಆಕರ್ಷಣೆ ಕಳೆದುಕೊಂಡವು.

(ಚಿತ್ರಗಳು: ರೂಪಶ್ರೀ ಕಲ್ಲಿಗನೂರ್)
ಮುಸ್ಸಂಜೆಯ ತಂಪುಗಾಳಿ ಕದಪುಗಳನ್ನು ಸವರುತ್ತಿದ್ದಂತೆ ಹಿತವಾದ ಅನುಭಾವವೊಂದು ಕಚಗುಳಿ ಇಡಲಾರಂಭಿಸಿತು. ಆ ಗಾಳಿಯಲ್ಲಿ, ಶೀತಲತೆಯಲ್ಲಿ ಕಳೆದುಹೋಗುವ ಮುನ್ನ ಒಂದು ನಿಡಿದಾದ ಉಸಿರುಬಿಟ್ಟು ಕಣ್ಣು ಮುಚ್ಚಬೇಕು ಅನ್ನುವಷ್ಟರಲ್ಲಿ ಅಸ್ಪಷ್ಟ ಆಕೃತಿ, ಪರಿಚಿತ ನಡಿಗೆಯೊಂದು ನಮ್ಮೆಡೆಗೆ ಬರುವುದು ಕಾಣಿಸಿತು. ಕಣ್ಣುಜ್ಜಿ ಮತ್ತೆ ನೋಡಿದೆ, ಕಾಲ ಒಂದು ಕ್ಷಣದ ಮಟ್ಟಿಗೆ ಸ್ತಂಭಿಸಿತು. ಮರುಕ್ಷಣ ನಾನು ಆಕೆಯ ಪಕ್ಕದಲ್ಲಿದ್ದೆ. ಯಾವ ಫಕೀರಮ್ಮನನ್ನು ಹುಡುಕಲು ಕಾಲವನ್ನು ಮುಂದೂಡಿದ್ದೆನೋ ಅದೇ ಫಕೀರಮ್ಮ ಕಾಲವನ್ನು ಹಿಂದಿಕ್ಕಿ ನನ್ನ ಮುಂದೆ ನಿಂತಿದ್ದಳು. ಹೆಗಲಲ್ಲಿ ಮಡಕೆ ಇರಲಿಲ್ಲ ಅನ್ನುವುದು ಬಿಟ್ಟರೆ ಆಕೆ ಹಿಂದಿನಂತೆಯೇ ಇದ್ದಳು. ಕಂಡೂ ಕಾಣದಂತೆ ನೆರಿಗಟ್ಟಿದ ಮುಖ ಅವಳಿಗೆ ವಯಸ್ಸಾಗಿದೆ ಎಂದು ಸೂಚಿಸುತ್ತಿದ್ದರೂ ಅವಳೇನು ತೀರಾ ಇಳಿದು ಹೋಗಿರಲಿಲ್ಲ. ನಾನು ಪರಿಚಯ ಹೇಳಿ ಹಳೆಯ ಆತ್ಮೀಯತೆಯಿಂದ ಮಾತಿಗಿಳಿಯಲು ಯತ್ನಿಸಿದೆ.
ಮೊದ-ಮೊದಲು ಆಕೆಗೆ ನಾನ್ಯಾರೆಂದು ತಿಳಿಯಲೇ ಇಲ್ಲ. ಅಜ್ಜಿ, ಅಮ್ಮ, ತೋಡು ಎಲ್ಲಾ ನೆನಪಿಸಿದಂತೆ ಅವಳಿಗೂ ನನ್ನ ನೆನಪಾಯಿತೇನೋ? ಅಮ್ಮನನ್ನೂ, ಅಜ್ಜಿಯನ್ನೂ ಪದೇ ಪದೇ ಕೇಳಿದಳು. ಅವಳಿಲ್ಲ ಎಂದಾಗ ಮಾತ್ರ ಒಮ್ಮೆ ಬೆಚ್ಚಿದಂತೆ ಕಂಡುಬಂದಳು. ಅವಳ ಕತ್ತಿನ ಸೆರಗು ಸರಿಸಿ ಹಚ್ಚೆಯನ್ನು ನೋಡಬೇಕು ಅಂತ ಅನ್ನಿಸುತ್ತಿದ್ದರೂ ಯಾವುದೋ ಮುಜುಗರವೊಂದು ಅಡ್ಡ ಬಂದು ಕೇಳಲಾಗದೆ ಸುಮ್ಮನಿದ್ದೆ.
ಆದರೆ ಆಕೆ ಮಾತಾಡುತ್ತಲೇ ಇದ್ದಳು. ಇಷ್ಟು ವರ್ಷಗಳ ಅಂತರ ಅವಳಲ್ಲಿ ಯಾವ ಬದಲಾವಣೆಯನ್ನೂ ಹುಟ್ಟುಹಾಕಿರಲಿಲ್ಲ. ನಾನು ಮಾತ್ರ ಇಷ್ಟು ಬೇಗ ಮಾತೆಲ್ಲಾ ಖಾಲಿಯಾದಂತೆ ಅವಳ ಮಾತಿಗೆ ಬರಿದೇ ಹೂಂಗುಟ್ಟುತ್ತಿದ್ದೆ. ನಡು ನಡುವೆ ಈಕೆ ಇಷ್ಟು ಜೀವನ್ಮುಖಿಯಾಗಿರಲು ಯಾವ ಅಂಶ ಕಾರಣವಾಗಿರಬಹುದು ಎಂದು ಅಚ್ಚರಿಯಿಂದ ಅವಳ ಮುಖ ನೋಡುತ್ತಿದ್ದೆ.
ಈ ನಡುವೆ ಯಾಕೋ ಗೊತ್ತಿಲ್ಲ, ಅವಳ ಊರು, ಜಮೀನು, ಕೆರೆ ನೆನಪಾದವು. ಊರಿಗೆ ಹೋಗಿಲ್ವಾ ಅಂತ ಕೇಳಿದೆ. ಆಕೆ “ನನಗೀಗ ಇದೇ ನನ್ನೂರು, ಅಲ್ಲಿ ಸಿಕ್ಕ ಬೆಲೆಗೆ ಎಲ್ಲಾ ಮಾರಿ ಇಲ್ಲೇ ಬಂದು ಇದ್ದೇನೆ” ಅಂದಳು. ನನಗೋ ಎಲ್ಲಾ ಅಯೋಮಯ. ತನ್ನ ಅಪ್ಪ ಕೊಟ್ಟಿದ್ದ, ಅಷ್ಟೊಂದು ಪ್ರೀತಿಸುತ್ತಿದ್ದ ಜಮೀನನ್ನು ಆಕೆ ಮಾರುವಂಥದ್ದು ಏನಾಯಿತು ಅಂತ ಅನಿಸಿತು. ಹಿಂದಿನಂತೆಯೇ ಮತ್ತೆ ಕೇಳಲಾಗದೆ ಸುಮ್ಮನಾದೆ. ಆದರೆ ಆಕೆಯೇ “ಇಲ್ಲಿನ ಬದುಕು ಸಾಕು ಅನ್ನಿಸಿ ಮತ್ತೆ ನಮ್ಮೂರಿಗೇ ಹೋಗಿದ್ದೆ. ಜಮೀನು, ಕಂಬಾರಿಕೆ ಅಂತ ಖುಶಿಯಾಗಿಯೇ ಇದ್ದೆ. ಆದರೆ ಇದ್ದೊಬ್ಬ ಮಗ ಯಾವಾಗ ಕುಡಿತ ಕಲಿತನೋ ಗೊತ್ತಿಲ್ಲ, ದಿನಪೂರ್ತಿ ಹಟ್ಟಿಯಲ್ಲಿ ಕುಡಿದು ಬಿದ್ದುಕೊಳ್ಳುತ್ತಿದ್ದ. ನೋಡುವಷ್ಟು ನೋಡಿ ಒಂದು ದಿನ ಕುಡಿದರೆ ಊಟ ಹಾಕಲಾರೆ ಎಂದು ಮಡಕೆ ಮಾರಲು ಹೋದೆ. ಕುಡಿದ ಅಮಲಿನಲ್ಲಿದ್ದನೋ ಅಥವಾ ನಿಜಕ್ಕೂ ಅವನಿಗೆ ಬದುಕು ಸಾಕೆನ್ನಿಸಿತ್ತೋ ಗೊತ್ತಿಲ್ಲ, ಸಂಜೆ ಬರುವಷ್ಟರಲ್ಲಿ ಅವನ ಹೆಣ ಮರದಲ್ಲಿ ನೇತಾಡುತ್ತಿತ್ತು. ಎಷ್ಟು ಅತ್ತರೂ ಕರೆದರೂ ಮಗ ಮರಳಿ ಬಾರನು ಎನ್ನುವ ಸತ್ಯ ತಿಳಿಯುತ್ತಿದ್ದಂತೆ ಎಲ್ಲಾ ಮಾರಿ ಆ ಊರಿನ ಋಣ ಹರಿದುಕೊಂಡು ಇಲ್ಲಿಗೇ ಮತ್ತೆ ಬಂದೆ. ಈ ಬದುಕಿನ ಋಣ ಇರುವಷ್ಟು ದಿನ ಇಲ್ಲೇ ಇರುತ್ತೇನೆ” ಅಂದಳು.
ಎಲ್ಲಾ ಮುಗಿದ ಮೇಲೂ ಯಾವುದೋ ಉಳಿದಿದೆ ಎಂಬಂತೆ ಬದುಕುವ ಫಕೀರಮ್ಮನಂಥವರು ಮತ್ತು ಸಣ್ಣ ಪುಟ್ಟ ವಿಚಾರಗಳಿಗೆಲ್ಲಾ ಮನಸು ಕೆಡಿಸಿಕೊಂಡು ಬದುಕು ಇಷ್ಟೇ ಅಂತ ನಿರ್ಧರಿಸಿಬಿಡುವ ನಮ್ಮಂಥವರು, ಮಧ್ಯೆ ಸಂಜೆಯ ಕುಳಿರ್ಗಾಳಿ… ಒಂದು ಕೇಂದ್ರದಿಂದ ಆರಂಭವಾದ ಬದುಕು ನಿಶ್ಚಿತ ಪರಿಧಿಯಲ್ಲೇ ಸಾಗಿ ಒಂದು ಸುತ್ತು ಬಂದಿತೇನೋ ಅಂತ ಅನಿಸಿತು. ಸುಮ್ಮನೆ ಅವಳ ಕತ್ತಿನ ಸೆರಗು ಸರಿಸಿದೆ, ಮಣಿಕಂಠ ಎಂದಿನಂತಿರದೆ ನಗುತ್ತಿದ್ದ, ಫಕೀರಮ್ಮನ ಮುಖ ನೋಡಿದೆ ಅವನಿಗಿಂತಲೂ ಚೆಂದ ಅವಳು ನಗುತ್ತಿದ್ದಳು.
Fatima,
Nimma Barahagali nanu kayuttene .
You write so well .
Regards
medha