ಯುಗಾದಿಗೆ ಪರಿಸರದ ಕುರಿತ ಮಾತೇಕೆ? ಎಂದು ಪ್ರಶ್ನಿಸಬಹುದು ನೀವು!! ಚೈತ್ರಮಾಸದ ಪ್ರಾರಂಭದ ದಿನ ಯುಗಾದಿಯ ಆಚರಣೆ. ಪ್ರಕೃತಿಯ ಜೊತೆ ನಮ್ಮ ಸಂಬಂಧವನ್ನು ಆಚರಣೆಗಳ ಮುಖಾಂತರ ಗಟ್ಟಿಗೊಳಿಸಿಕೊಳ್ಳುತ್ತಾ ಬಂದ ದೇಶ ನಮ್ಮದು. ಪ್ರಕೃತಿ ಪೂಜೆಯೇ ನಮ್ಮ ಪೂರ್ವಿಕರ ನೈಜ ಆಚರಣೆಗಳಾಗಿದ್ದವು ಎಂಬುದು ನಮಗೆಲ್ಲ ತಿಳಿದ ಸಂಗತಿಯೇ.. ಆದರಿಂದು ಪರಿಸರಕ್ಕೆ ನಾವು ಚೆಲ್ಲುತ್ತಿರುವ ತ್ಯಾಜ್ಯ ಎಂಥದ್ದು?
ಪ್ರಕೃತಿ ಜೊತೆಗೆ ನಂಟಿರುವ ಯುಗಾದಿ ಹಬ್ಬ ಇಂದಿನ ದಿನಗಳಲ್ಲಿ ಹೇಗೆ ಆಚರಿಸಲ್ಪಡುತ್ತಿದೆ ಎನ್ನುವುದರ ಕುರಿತು ಬರೆದಿದ್ದಾರೆ ನಾಗರೇಖಾ ಗಾಂವಕರ

ಯುಗಾದಿ ಮತ್ತೆ ಬಂದಿದೆ. ಬದುಕಿನಲ್ಲಿ ಎದುರಾಗುವ ನೋವು ನಲಿವುಗಳನ್ನು ಬಂದಂತೆ ಎದುರಿಸಿ ಬದುಕುವ ಸಂಕೇತವಾಗಿ ಬೇವು ಬೆಲ್ಲ ಸವಿದು , ಹೊಸ ಅಕ್ಕಿ ಪಾಯಸ ಉಂಡು, ಹೊಸ ಬಟ್ಟೆ ತೊಟ್ಟು ಮತ್ತೆ ಹೊಸತಾಗುವ ಕಾಲ. ಯುಗದ ಆದಿಯ ಹಬ್ಬವಾಗಿ ನಮ್ಮಲ್ಲಿ ಹೊಸತನವನ್ನು, ಹೊಸಹುರುಪನ್ನು ಮೂಡಿಸುವ ಹಬ್ಬ. ಆದರೆ ನಮ್ಮ ಸುಖದ ಸಂತೃಪ್ತಿಯ ಬದುಕಿಗೆ ಪ್ರಕೃತಿ ನೀಡಿದ ಈ ಕೊಡುಗೆಯನ್ನು, ಅವಳ ದಯೆಯಾದ ಈ ಭೂಮಿಯ ಮೇಲೆ ನಮ್ಮ ವಾಸವನ್ನು, ನೆನಪಿಸಿಕೊಳ್ಳುವ ಈ ಹಬ್ಬ ಇಂದಿನ ವಿಜ್ಞಾನದ ಯುಗದಲ್ಲಿ ಯಾಂತ್ರಿಕ ಬದುಕಿನ ಒಂದು ಆಚರಣೆ ಮಾತ್ರ ಆಗಿ ಬದಲಾಗಿದೆ. ಇಂದಿಗೆ ಹೂ ಹಣ್ಣು, ಸಿಹಿ ತಿಂಡಿಗಳು, ತಿನಿಸುಗಳು ಯಾವುದಕ್ಕೂ ಅಂತಹ ಬರವಿಲ್ಲ. ಹಣವೊಂದಿದ್ದರೆ ಎಲ್ಲವನ್ನೂ ಖರೀದಿಸಬಹುದು. ಕಳೆದ ಸಲ ಖರೀದಿಸಿದ ಬಟ್ಟೆಯನ್ನೇ ಇನ್ನೂ ಹಾಕಲು ಆಗದೇ ಇದ್ರೂ ಮತ್ತೆ ಖರೀದಿ ಜೋರಾಗಿಯೇ ಇದೆ. ನಿನ್ನೆ ಮಾರ್ಕೆಟ್ಟಿನಲ್ಲಿ ಸಿಕ್ಕ ಗೆಳತಿಯೊಬ್ಬಳು ಶಾಪಿಂಗ್ ಖುಷಿಯಲ್ಲಿ “ನಾನು ಏನೆ ತಪ್ಪಿದರೂ ಪ್ರತಿ ಹಬ್ಬಕ್ಕೂ ಒಂದು ಸೀರೆ ಇಲ್ಲದಿದ್ದರೆ ಒಂದು ನೈಟ್‌ ಡ್ರೆಸ್ ಖರೀದಿ ಮಾಡ್ತಿನಿ. ಸಾಕಷ್ಟು ಇನ್ನು ಧರಿಸಲಾಗದಿದ್ರೂ ಇದೊಂದು ಖಯಾಲಿ ನಂಗಿದೆ”. ಎಂದಳು. ಇದೆಲ್ಲ ಸರಿ. ತಪ್ಪೇನು ಇಲ್ಲ. ಉತ್ಪಾದಕರು ಇದ್ದ ಮೇಲೆ ಖರೀದಿಗಾರರು ಬೇಕಲ್ಲವೇ?

ಆದರೆ ಅಂದಿನಂತೆ ವರ್ಷದಲ್ಲಿ ಒಂದು ಬಾರಿ ಈ ಚಂದದ ಹಬ್ಬವನ್ನು ಕೂಡು ಕುಟುಂಬದ ಪರಿಸರದಲ್ಲಿ ಮಾಡುತ್ತಿದ್ದ ಸಂಭ್ರಮ ಇದೆಯೇ? ಅಜ್ಜಿ ಅಮ್ಮ ಸೇರಿ ಮಾಡುತ್ತಿದ್ದ ಕಜ್ಜಾಯಗಳು, ಹಬ್ಬದ ಅಡುಗೆಯ ರುಚಿ ಇಂದಿನ ಹಣಕೊಟ್ಟು ತಂದ ತಿನಿಸುಗಳಲ್ಲಿ ಇದೆಯೇ? ಎಂದು ಕೇಳಿದರೆ ನನ್ನ ಉತ್ತರವೇ ನಿಮ್ಮದೂ ಇರಬಹುದು. ಹೌದು!! ಇದು ಹೆಸರಿಗೆ ಮಾತ್ರ ಹಬ್ಬ. ನಿಜದ ಹಬ್ಬದ ಸುಖವೆಲ್ಲೋ ಮರೆಯಾಗಿದೆ. ಕಳೆದ ನೆನಪುಗಳು ಮಾತ್ರ ಹಾಗೇ ಉಳಿದುಬಿಟ್ಟಿವೆ. ಎಲ್ಲೋ ಕೆಲವು ಕಡೆ, ಸಣ್ಣಪುಟ್ಟ ಹಳ್ಳಿಗಳಲ್ಲಿ ಹಿಂದಿನ ಸಂತಸ, ಆಚರಣೆ ಉಳಿದಿರಬಹುದು. ಇಲ್ಲವೇ ಇಲ್ಲ ಎನ್ನಲೂ ಆಗದು. ಆದರೆ ಬಹುತೇಕ ಅಂದಿನ ಸಂಭ್ರಮ ಇಂದಿಲ್ಲ. ಮನೆಯ ಜನರೆಲ್ಲ ಸೇರಿ ವರ್ಷಗಳೇ ಕಳೆದುಹೋಗುತ್ತವೆ. ಹಬ್ಬಗಳು ವಿಭಕ್ತ ಕುಟುಂಬದಲ್ಲಿ ಗಂಡ ಹೆಂಡತಿ ಮಗು ಇಷ್ಟೇ ಜನ ಸೇರಿ ಅಂಗಡಿಯ ಸಿಹಿ ತಿಂಡಿ ಖರೀದಿಸಿ ತಂದು, ಸಂಜೆ ಹೊತ್ತಿಗೆ ಹೊಟೆಲ್ಲಿಗೇ ಹೋಗಿ ಅದೇನನ್ನೋ ತಿಂದು ಮೂರುಪಟ್ಟು ಹಚ್ಚಿದ ಬಿಲ್ಲು ಪಾವತಿಸಿ ಬಂದು ಮತ್ತೇ ಹಳೆಯ ದಿನಗಳ ಒಂದಿಷ್ಟು ನೆನಪು ತೆಗೆದು ದೊಡ್ಡದಾಗಿ ಆಕಳಿಸಿ ನಿದ್ದೆಗೆ ಜಾರಿದರೆ ಮತ್ತೆ ಬೆಳಗಾದಾಗ ಅದೇ ಯಾಂತ್ರಿಕ ಬದುಕು.

ಆಧುನಿಕತೆ ಎಂಬುದು ನಮ್ಮ ಮನಸ್ಸಿಗೂ ಮೈಗೂ ಬಡಿದುಕೊಂಡಿರೋ ಗರ. ಇವತ್ತಿನ ಕೈಗಾರಿಕೆಗಳು, ತಂತ್ರಜ್ಞಾನಗಳು ನಮ್ಮ ಬದುಕನ್ನು ಬದಲಿಸಿಬಿಟ್ಟಿವೆ. ಕ್ಷಣಾರ್ಧದಲ್ಲಿ ಜಗತ್ತಿನ ಸುದ್ದಿ ತಿಳಿಯುತ್ತೆ, ದೂರ ಎನ್ನುವುದು ಎಷ್ಟು ಹತ್ತಿರವಾಗಿದೆ. ಹಣ ಇದ್ದರೆ ಮನೆ ಬಾಗಿಲಿಗೆ ಎಲ್ಲವೂ ಬಂದು ಬೀಳುತ್ತೆ. ಬೇಡದ ವಸ್ತುಗಳು ಅಷ್ಟೇ ಬೇಗ ಮಾರಿಬಿಡಬಹುದು. ಹೀಗೆ ಹೊಸ ಜಗತ್ತಿನೊಂದಿಗೆ ಹೊಂದಾಣಿಕೆಗೆ ನಾವು ಬಹಳ ಬೇಗ ಅಪ್‌ಡೆಟ್ ಆಗ್ತಿದ್ದೀವಿ. ಇದೆಲ್ಲದ್ದಕ್ಕೆ ಪೂರಕವಾಗಿರುವಂತೆ ನಮ್ಮ ಬೇಡಿಕೆಗಳನ್ನು ಈಡೇರಿಸುವುದನ್ನೇ ಬಂಡವಾಳಶಾಹಿತ್ವ ತನ್ನ ಪ್ರಮುಖ ಗುರಿಯಾಗಿಸಿಕೊಂಡಿದೆ.. ಬದುಕನ್ನು ಆದಷ್ಟು ನೆಮ್ಮದಿದಾಯಕವಾಗಿಸಿಕೊಳ್ಳಬೇಕು. ಇದೇ ಅಲ್ಲವೇ ನಮ್ಮ ನಿಮ್ಮೆಲ್ಲರ ಆಶಯ. ಹಾಗಾಗಿ ಸಣ್ಣ ಕಿರಿಕಿರಿಗಳು ನಮಗೆ ಎಷ್ಟು ಯಾತನಾದಾಯಕ ಅನಿಸುತ್ತೆ ನೋಡಿ. ಇದನ್ನೇ ಐಷಾರಾಮಿ ಬದುಕು ಎನ್ನುವುದು. ಬೇಕಾದಕ್ಕಿಂತ ಹೆಚ್ಚು ಕೊಂಡುಕೊಂಡು ಸಂಗ್ರಹಿಸಿಕೊಳ್ಳುವುದು. ಇದನ್ನೇ ಕೊಳ್ಳುಬಾಕತನ ಎನ್ನುವುದು. ಮಾರಾಟಗಾರ ಲಫಂಗ ಎಂದರೆ ಗ್ರಾಹಕ ಖದೀಮ ಅನ್ನೋ ವ್ಯವಸ್ಥೆಯಲ್ಲಿ ನಮ್ಮೆಲ್ಲರ ಪಾಲೂ ಇದೆ.

ಹೊಸ ಜಗತ್ತಿನೊಂದಿಗೆ ಹೊಂದಾಣಿಕೆಗೆ ನಾವು ಬಹಳ ಬೇಗ ಅಪ್‌ಡೆಟ್ ಆಗ್ತಿದ್ದೀವಿ. ಇದೆಲ್ಲದ್ದಕ್ಕೆ ಪೂರಕವಾಗಿರುವಂತೆ ನಮ್ಮ ಬೇಡಿಕೆಗಳನ್ನು ಈಡೇರಿಸುವುದನ್ನೇ ಬಂಡವಾಳಶಾಹಿತ್ವ ತನ್ನ ಪ್ರಮುಖ ಗುರಿಯಾಗಿಸಿಕೊಂಡಿದೆ.. ಬದುಕನ್ನು ಆದಷ್ಟು ನೆಮ್ಮದಿದಾಯಕವಾಗಿಸಿಕೊಳ್ಳಬೇಕು. ಇದೇ ಅಲ್ಲವೇ ನಮ್ಮ ನಿಮ್ಮೆಲ್ಲರ ಆಶಯ. ಹಾಗಾಗಿ ಸಣ್ಣ ಕಿರಿಕಿರಿಗಳು ನಮಗೆ ಎಷ್ಟು ಯಾತನಾದಾಯಕ ಅನಿಸುತ್ತೆ ನೋಡಿ. ಇದನ್ನೇ ಐಷಾರಾಮಿ ಬದುಕು ಎನ್ನುವುದು

ಯುಗಾದಿಗೆ ಪರಿಸರದ ಕುರಿತ ಮಾತೇಕೆ? ಎಂದು ಪ್ರಶ್ನಿಸಬಹುದು ನೀವು!! ಚೈತ್ರಮಾಸದ ಪ್ರಾರಂಭದ ದಿನ ಯುಗಾದಿಯ ಆಚರಣೆ. ಪ್ರಕೃತಿಯ ಜೊತೆ ನಮ್ಮ ಸಂಬಂಧವನ್ನು ಆಚರಣೆಗಳ ಮುಖಾಂತರ ಗಟ್ಟಿಗೊಳಿಸಿಕೊಳ್ಳುತ್ತಾ ಬಂದ ದೇಶ ನಮ್ಮದು. ಪ್ರಕೃತಿ ಪೂಜೆಯೇ ನಮ್ಮ ಪೂರ್ವಿಕರ ನೈಜ ಆಚರಣೆಗಳಾಗಿದ್ದವು ಎಂಬುದು ನಮಗೆಲ್ಲ ತಿಳಿದ ಸಂಗತಿಯೇ.. ಆದರಿಂದು ಪರಿಸರಕ್ಕೆ ನಾವು ಚೆಲ್ಲುತ್ತಿರುವ ತ್ಯಾಜ್ಯ ಎಂಥದ್ದು?

ನಾವು ಚಿಕ್ಕಂದಿನಲ್ಲಿ ಹೈಸ್ಕೂಲು, ಕಾಲೇಜು ಹೋಗುವ ಸಮಯದಲ್ಲಿ ನೀರಿನ ಬಾಟಲಿಗೆ ಅಕ್ಕ ತಂಗಿಯರು ಜಗಳವಾಡುತ್ತಿದ್ದೆವು. ಒಂದು ಬಾಟಲಿ ಮನೆಗೆ ಬಂದರೆ ಅದನ್ನು ಯಾರು ತಗೊಳ್ಳೋದು ಎಂಬುದೇ ದೊಡ್ಡ ಗಲಾಟೆಗೂ ಕಾರಣವಾದದ್ದಿದೆ. ಅಪ್ಪ ಅಕ್ಕನ ಕೈಗೇನಾದರು ಕೊಟ್ಟರೆ ಹೊಟ್ಟೆ ಉರ್ಕೊಂಡು ಮಾತು ಬಿಡುತ್ತಿದ್ದೆ ನಾನು. ಪ್ರತಿದಿನ ತಂದೆಗೆ ರಾತ್ರಿ ಮಲಗುವಾಗ ಹಾಸಿಗೆ ಹಾಸಿಕೊಡುವುದು ನನ್ನ ಕೆಲಸವಾಗಿರುತ್ತಿತ್ತು. ಆ ನನ್ನ ಕೆಲಸವನ್ನು ಮಾಡದೇ ಮುಷ್ಕರ ಹೂಡುತ್ತಿದ್ದೆ. ಈ ನೀರಿನ ಬಾಟಲಿ ಅಷ್ಟು ಅಪರೂಪದ ವಸ್ತು ಆಗಿತ್ತು. ಆದರೆ ಇವತ್ತಿಗೆ ಯೂಸ್ ಎಂಡ್ ಥ್ರೋ ವಸ್ತುಗಳಂಥ ಇಂತಹ ಅದೆಷ್ಟು ಸಾಮಾನುಗಳು ಪರಿಸರಕ್ಕೆ ಸೇರುತ್ತಿವೆ. ಎಂಬುದನ್ನು ಲೆಕ್ಕ ಹಾಕಲು ಸಾಧ್ಯವಿಲ್ಲ. ಬಂಡವಾಳಶಾಹಿತ್ವದ ಪರಿಣಾಮವಾಗಿ ಮೆಗಾ ಮಾರುಕಟ್ಟೆಗಳು ತಲೆ ಎತ್ತಿದ ನಂತರದಿಂದ ಉತ್ಪಾದನೆಯ ವೇಗ ಹೆಚ್ಚಿತು. ಎಲ್ಲ ತ್ಯಾಜ್ಯಗಳ ಪ್ರಮಾಣವೂ ಹೆಚ್ಚಿತು. ಪರಿಸರದ ಮೇಲೆ ನಡೆಯುತ್ತಿರುವ ಅನಾಹುತಗಳು ದಂಗೆಡಿಸುತ್ತಿವೆ. ಕಾಡು ನಾಶದ ಪರಿಣಾಮಗಳನ್ನು ಪ್ರತಿಮಳೆಗಾಲ ನೆನಪಿಸುತ್ತದೆ. ಕಂಡಕಂಡಲ್ಲೆಲ್ಲಾ ಭೂಕುಸಿತ, ಪ್ರವಾಹ ನಡೆದರೂ ಮನುಷ್ಯ ಎಚ್ಚೆತ್ತುಕೊಳ್ಳಲಾರ. ಮತ್ತದೆ ಮರಗಳ ಮಾರಣ ಹೋಮ ನಡೆಯುತ್ತಿರುತ್ತದೆ.

ಈ ಅಭಿವೃದ್ಧಿ ಪರ ಚಿಂತನೆಯ ಪರಿಣಾಮವೋ ಏನೋ ನಾವು ಬದುಕನ್ನು ನೋಡುವ ಪರಿ ಬದಲಾಗಿದೆಯೋ ತಿಳಿಯುತ್ತಿಲ್ಲ. ಒಟ್ಟಾರೆ ಬದುಕಿನ ಕಲೆಗೆ ಬೇಕಾದ ಬಣ್ಣ, ನೈಸರ್ಗಿಕ ಜೀವನದ ಗಮ್ಮತ್ತು ನಾಶವಾಗಿದೆ. ಹಣ, ರೂಪ, ಯೌವನಗಳು ಇದ್ದಾಗಲೂ ವ್ಯಕ್ತಿ ಸುಖಿಯೆಂದು ಹೇಳಲಾಗದು. ಸಂಬಂಧಗಳಲ್ಲಿ ಮೂಡುವ ಜಟಿಲತೆ, ಕುಟಿಲತೆಗಳಿಂದ ಬದುಕಿನ ಅರ್ಥ ಕುಸಿದಿದೆ. ವ್ಯಾವಹಾರಿಕ ಜಟಿಲತೆಗಳು ಸಂಬಂಧಗಳನ್ನು ದೂರ ಮಾಡುತ್ತಿವೆ. ಮನುಷ್ಯನ ಸ್ವಾರ್ಥಪರತೆ, ಹಿಂಸಾತ್ಮಕ ಮನೋಭಾವ, ಎಲ್ಲವನ್ನೂ ಗೆಲ್ಲಬೇಕೆನ್ನುವ ಹುಚ್ಚು ಬದುಕಿನ ಮೆರಗನ್ನು ಕಸಿದುಕೊಂಡು ಅಹಿತಕರ ಸ್ಪರ್ಧೆಯ ಜಗತ್ತನ್ನು ಸೃಷ್ಠಿಸಿದೆ. ಹಣದ ಹಿಂದೆ ಬಿದ್ದ ನಾವುಗಳು ಎಷ್ಟು ಸುಖಿ ಎಂಬುದು ಖುದ್ದಾಗಿ ಕೇಳಿಕೊಳಬೇಕಾದ ಪ್ರಶ್ನೆ. ನಮ್ಮ ಬದುಕು ಬಹಳ ಆತುರಾತುರವಾಗಿ ನಡೆಯುತ್ತಿದೆ. ಯಾರಿಗೂ ಸಮಯವಿಲ್ಲ. ಹಾಗಾಗಿ ಸಮಾಧಾನವಿಲ್ಲ. ಒಟ್ಟಾರೆ ನಮ್ಮ ಬದುಕು ಮತ್ತು ಪರಿಸರ ಎರಡನ್ನೂ ಒಟ್ಟಿಗೆ ನಾವೇ ಬೆಂಕಿಗೆ ತಳ್ಳುತ್ತಿದ್ದೇವೆ…. ಅಲ್ಲವೇ? ಭಯದ ನೆರಳಲ್ಲಿ ಮುಂದಿನ ಯುಗಾದಿಗೆ ಏನಾಗಿರುತ್ತೋ? ಎಂಬ ಒಂದು ಆತಂಕ ನಿರಂತರ ಕಾಡುತ್ತಿದೆ.