ಇಸ್ಲಾಮಿಕ್ ಮದರಸಾಗಳ ಸುತ್ತಮುತ್ತ ಅನುಮಾನಗಳ ಹೊಗೆ ಎದ್ದಿರುವ ಈ ಹೊತ್ತಲ್ಲಿ  ಶಾಲೆಯ ಜೊತೆ ಜೊತೆಯಲ್ಲೇ ಮದರಸಾದಲ್ಲೂ ಓದಿ ಬೆಳೆದು ದೊಡ್ಡವರಾಗಿ ಕನ್ನಡದ ಒಳ್ಳೆಯ ಲೇಖಕರೂ ಆದ  ಫಕೀರ್ ಮುಹಮ್ಮದ್ ಕಟ್ಪಾಡಿ ಯವರ ಲೇಖನ ಮಾಲೆ.

ರಷ್ಯಾದ ಉಜ್ಬೆಕಿಸ್ತಾನದ ಅರಸ ನಿಜಾಮ್ ಎ ಮಾಲಿಕ್ ಎಂಬವನು ಸಮರ್‌ಖಂಡ್ ನಗರದಲ್ಲಿ ವಿಶ್ವದಲ್ಲೇ ಪ್ರಖ್ಯಾತವಾದ ಅತೀದೊಡ್ಡ ಮದ್ರಸಾವನ್ನು ಸ್ಥಾಪಿಸಿದ್ದ. ಅದರಲ್ಲಿ ದೇಶವಿದೇಶದಿಂದ ಜ್ಞಾನಾರ್ಜನೆಗಾಗಿ ವಿದ್ಯಾರ್ಥಿಗಳು ಬರುತ್ತಿದ್ದರು. ಇಲ್ಲಿ ಅನೇಕ ದೊಡ್ಡ ಆಲಿಮ್ ವಿದ್ವಾಂಸರು ಮಕ್ಕಳಿಗೆ ವಿದ್ಯಾದಾನ ಮಾಡುತ್ತಿದ್ದರು. ಈ ವಿದ್ಯಾಕೇಂದ್ರದ ಸಾಫಲ್ಯವನ್ನು ಕಂಡ ಅರಸ ತುಂಬ ಪ್ರಸನ್ನನಾಗಿದ್ದ. ಒಮ್ಮೆ ಖಾಸಗಿಯಾಗಿ ತನ್ನ ನಿಕಟವರ್ತಿಯೊಂದಿಗೆ ಮಾತಾಡುತ್ತಿದ್ದಾಗ ತನ್ನ ಕಾಲದಲ್ಲಿ ಸ್ಥಾಪಿಸಲಾದ ಈ ಮದ್ರಸಾದ ಬಗ್ಗೆ ಖುಶಿಯಿಂದ ಹೇಳಿಕೊಂಡ. ಆದರೆ ಆ ಸ್ನೇಹಿತ ‘ಬರಿಯ ಸ್ಥಾಪನೆ ಮಾಡಿದ್ದಕ್ಕೆ ಬೀಗಿಕೊಂಡರೆ ಸಾಲದು ಅಲ್ಲಿನ ವಿದ್ಯಾಭ್ಯಾಸದಿಂದ ಎಷ್ಟರಮಟ್ಟಿಗೆ ವಿದ್ಯಾರ್ಥಿಗಳಿಗೆ ಉಪಯೋಗವಾಗುತ್ತಿದೆ? ನಿಮ್ಮ ಉದ್ದೇಶ ಸಫಲವಾಗಿದೆಯೇ ಎನ್ನುವುದನ್ನು ನೀವು ಸ್ವತಹ ಹೋಗಿ ಪರಿಶೀಲಿಸಿದ್ದೀರಾ?’ ಎಂದು ಕೇಳಿದ. ಸ್ನೇಹಿತನ ಸಲಹೆಯನ್ನು ಒಪ್ಪಿದ ಅರಸ ವೇಷಪಲ್ಲಟ ಮಾಡಿಕೊಂಡು ತನ್ನ ಮದ್ರಸಾದೊಳಗೆ ಹೋದ. ಅಲ್ಲಿ ವಿದ್ಯಾರ್ಥಿಗಳು ಓದುವುದರಲ್ಲಿ ಮಗ್ನರಾಗಿದ್ದರು. ಮಾರುವೇಷದಲ್ಲಿದ್ದ ಅರಸ ವಿದ್ಯಾರ್ಥಿಗಳ ಬಳಿ ಹೋಗಿ ಒಬ್ಬೊಬ್ಬರನ್ನಾಗಿ ಮಾತಾಡಿಸಿದ. ‘ಇಲ್ಲಿ ಕಲಿಯಲು ಬಂದದ್ದರ ಉದ್ದೇಶವೇನು?’ ಎನ್ನುವುದು ಅವನ ಮುಖ್ಯ ಪ್ರಶ್ನೆ. ಅದೂ ಇದೂ ಮಾತಾಡಿ ಕೊನೆಗೆ ಕೇಳಿದ, ‘ಯಾವ ಉದ್ದೇಶದಿಂದ ನೀವಿಲ್ಲಿ ಕಲಿಯಲು ಬಂದಿದ್ದೀರಿ?’. ಒಬ್ಬೊಬ್ಬರ ಉದ್ದೇಶ ಒಂದೊಂದು ತರವಿತ್ತು. ಒಬ್ಬ ತನ್ನ ತಂದೆ ಹಾಫಿಸ್ ಆಗಿದ್ದಾರೆ, ನಾನು ಕೂಡ ಹಾಫಿಸ್ ಆಗಬೇಕೆಂಬ ಉದ್ದೇಶದಿಂದ ಬಂದಿದ್ದೇನೆ ಎಂದರೆ, ಇನ್ನೊಬ್ಬ ನನ್ನ ತಂದೆ ಮುಫ್ರಿಯಾಗಿದ್ದಾರೆ, ನಾನೂ ಮುಫ್ತಿಯಾಗಬೇಕೆಂದ. ಮತ್ತೊಬ್ಬ ತಮ್ಮ ಊರ ಮಸೀದಿಯಲ್ಲಿ ನೌಕರಿ ಸಿಗುತ್ತದೆ ಅದಕ್ಕಾಗಿ ಇಮಾಮ್ ಆಗುವುದಕ್ಕೆ ಬೇಕಾದಷ್ಟು ಕಲಿಯಲು ಬಂದಿದ್ದೇನೆ ಎಂದ. ಯಾರ ಉತ್ತರವೂ ಅವನಿಗೆ ಸಮಾಧಾನ ತರಲಿಲ್ಲ. ತಾನು ಇಷ್ಟು ದೊಡ್ಡ ಸಂಸ್ಥೆಯನ್ನು ಕಟ್ಟಿರುವುದು ಇಂತಹ ಸಂಕುಚಿತ ಉದ್ದೇಶಕ್ಕಾಗಿಯೆಂದಾದರೆ, ಈ ಮದ್ರಸಾವನ್ನು ಮುಚ್ಚಿಬಿಡುವುದು ಒಳ್ಳೆಯದೆಂದು ಯೋಚಿಸಿದ.

ಮದ್ರಸಾದಿಂದ ಹಿಂತಿರುಗುವಾಗ ದೂರದಲ್ಲಿ ಒಬ್ಬನೇ ಕೂತು ಓದಿನಲ್ಲಿ ತಲ್ಲೀನನಾದ ಬಾಲಕನ ಬಳಿ ಬಂದ. ಅವನು ಅರಸನನ್ನು ತಲೆಯೆತ್ತಿ ಕೂಡ ನೋಡಲಿಲ್ಲ. ಅರಸನೇ ಅವನನ್ನು ಕರೆದು ‘ನನ್ನ ಜೊತೆ ಮಾತಾಡಲು ನಿನಗೆ ಸಮಯವಿಲ್ಲವೇನು?’ ಎಂದ. ‘ಅನಗತ್ಯವಾದ ಮಾತುಗಳನ್ನಾಡಿ ಸಮಯ ಕಳೆಯುವುದಕ್ಕಿಂತ ಪಾಠದ ಅಭ್ಯಾಸ ಮಾಡುವುದು ಒಳ್ಳೆಯದು ಅಂತ ನನ್ನ ಅಭಿಪ್ರಾಯ’ ಎಂದ ಹುಡುಗ. ನಿನ್ನನ್ನು ಒಂದು ಪ್ರಶ್ನೆ ಕೇಳಬೇಕಾಗಿದೆ ಎಂದು ಅರಸ ಉಳಿದ ವಿದ್ಯಾರ್ಥಿಗಳಿಗೆ ಕೇಳಿದ ಪ್ರಶ್ನೆಯನ್ನೇ ಕೇಳಿದ. ‘ನನ್ನನ್ನು ಈ ಜಗತ್ತಿನಲ್ಲಿ ದೇವರು ಸೃಷ್ಟಿಸಿದ್ದಾನೆ. ಇದಕ್ಕಾಗಿ ನಾನು ಅವನಿಗೆ ಧನ್ಯವಾದವನ್ನು ಸಲ್ಲಿಸುತ್ತೇನೆ. ಅವನನ್ನು ತೃಪ್ತಿಪಡಿಸುವಂತಹ ಕೆಲಸವನ್ನು ಮಾಡಬೇಕೆಂಬ ಉದ್ದೇಶದಿಂದ ನಾನು ಇಲ್ಲಿ ವಿದ್ಯೆ ಕಲಿಯಲು ದೂರದ ನನ್ನ ದೇಶದಿಂದ ಬಂದಿದ್ದೇನೆ’ ಎಂದ ಹುಡುಗ. ಒಬ್ಬ ಹುಡುಗನಾದರೂ ನನಗೆ ತೃಪ್ತಿಯಾಗುವಂತಹ ಉತ್ತರ ನೀಡಿದ್ದಾನಲ್ಲ, ಸಾಕು, ಎಂದು ಮದ್ರಸಾ ಮುಚ್ಚಬೇಕೆನ್ನುವ ತನ್ನ ಯೋಚನೆಗೆ ನಾಚಿಕೊಂಡ. ಮುಂದೆ ಈ ಹುಡುಗ ಬೆಳೆದು ಇಮಾಮ್ ಅಲ್ ಗಝ್ಝಾಲಿ ಎಂಬ ಹೆಸರಿನ ವಿಶ್ವವಿಖ್ಯಾತ ಇಸ್ಲಾಮಿಕ್ ವಿದ್ವಾಂಸನಾದ.

ಇಂದು ನಮ್ಮ ದೇಶದಲ್ಲಿ ಲಕ್ಷಾಂತರ ಕುರಾನ್, ಧಾರ್ಮಿಕ ತತ್ವಶಾಸ್ತ್ರ ಅಥವಾ ದೀನಿಯಾತ್ ಕಲಿಸುವ ಪಾಠಶಾಲೆ ಅಥವಾ ಮದ್ರಸಾಗಳು ಕಾರ್ಯೋನ್ಮುಖವಾಗಿವೆ. ಇವುಗಳು ಸಾಮಾನ್ಯ ಮುಸ್ಲಿಮರ ಮಕ್ಕಳಿಗೆ ಪ್ರಾಥಮಿಕ ಮಟ್ಟದ ಧಾರ್ಮಿಕ ಜ್ಞಾನವನ್ನು ಕೊಡುವುದು ಮಾತ್ರವಲ್ಲ, ಪೂರ್ಣಪ್ರಮಾಣದ ಮುಫ್ತಿ, ಮೌಲವಿ, ಹಾಫಿಸ್‌ಗಳನ್ನು ತಯಾರು ಮಾಡುತ್ತವೆ. ಸಾಮಾನ್ಯವಾಗಿ ಶಾಲೆಗಳಿಗೆ ಹೋಗುವ ಮಕ್ಕಳು ಬೆಳಿಗ್ಗೆ ಶಾಲೆ ಶುರುವಾಗುವುದಕ್ಕೆ ಮೊದಲು ಒಂದು ಗಂಟೆ ಮತ್ತು ಸಂಜೆ ಶಾಲೆ ಬಿಟ್ಟನಂತರ ಒಂದು ಗಂಟೆ ಈ ಮದ್ರಸಾಗಳಿಗೆ ಹೋಗಿ ಧಾರ್ಮಿಕ ಪಾಠಗಳನ್ನು ಕಲಿಯುತ್ತಾರೆ. ಇಲ್ಲಿ ನಿಲ್ಲಲು ವಸತಿ, ಊಟ, ಬಟ್ಟೆ, ಊರ ದಾನಿಗಳ ಔದಾರ್ಯದಿಂದ ಧರ್ಮಾರ್ಥವಾಗಿ ದೊರೆಯುತ್ತದೆ. ಹೆಚ್ಚಾಗಿ ಅನಾಥ ಮಕ್ಕಳು, ಬಡ ಕುಟುಂಬಗಳಿಗೆ, ಕೆಳ ಮಧ್ಯಮ ವರ್ಗಕ್ಕೆ ಸೇರಿದ ಮಕ್ಕಳು, ಧರ್ಮಬೀರು ಕುಟುಂಬಕ್ಕೆ ಸೇರಿದವರು ಆಧುನಿಕ ವಿದ್ಯಾಭ್ಯಾಸ ವಂಚಿತರು ಈ ಮದ್ರಸಾ ವಿದ್ಯಾಭ್ಯಾಸವನ್ನು ಪೂರ್ಣ ಪ್ರಮಾಣದಲ್ಲಿ ಕಲಿತು ಶುಭ್ರ ಬಿಳಿ ಬಟ್ಟೆ ತೊಟ್ಟು ಮುಂಡಾಸು ಕಟ್ಟಿಕೊಂಡು ಗಡ್ಡ ಬಿಟ್ಟ ಮೌಲವಿ, ಹಾಫಿಸ್, ಮುಫ್ತಿಗಳಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳುತ್ತಾರೆ.

ಹೀಗೆ ಕಲಿತು ಹೊರ ಬಂದ ಮೌಲವಿ, ಹಾಫಿಸ್, ಮುಫ್ತಿ ಯುವಕರ ಬದುಕು ಹೇಗೆ ಸಾಗಬೇಕು? ಒಂದೋ ಇಂತಹ ಮದ್ರಸಾಗಳಲ್ಲಿ ಉಸ್ತಾದ್ ಅಥವಾ ಉಪಾಧ್ಯಾಯರಾಗಿ ವೃತ್ತಿ ಮಾಡಬೇಕು. ಇಲ್ಲವೇ ಮಸೀದಿಗಳಲ್ಲಿ ಇಮಾಮ್‌ಗಳಾಗಬೇಕು. ಈ ಮದ್ರಸಾಗಳಿಂದ ಪ್ರತೀವರ್ಷವೂ ಹೊರಬರುವ ಲಕ್ಷಾಂತರ ಇಂತಹ ಪದವೀಧರರಿಗೆ ಎಲ್ಲರಿಗೂ ಎಲ್ಲಿ ಅವಕಾಶ? ಬೇರೆ ನೌಕರಿಗೆ ಸೇರಿಕೊಳ್ಳಲು ಇವರಿಗೆ ಅವಕಾಶವಿಲ್ಲ. ವ್ಯಾಪಾರ ವಹಿವಾಟಿನಲ್ಲಿ ತೊಡಗಿಕೊಳ್ಳಲು ಸಾಮಾನ್ಯರಂತೆ ಬದುಕಬೇಕು. ಇದು ಸಾಧ್ಯವಾದ ಕೆಲವರೇನೋ ಬದುಕು ಸಾಗಿಸುತ್ತಾರೆ. ಉಳಿದವರು ನಿರುದ್ಯೋಗಿಗಳಾಗಿ ಸಮಾಜಕ್ಕೆ ಹೊರೆಯಾಗುತ್ತಾರೆ. ಈ ಥರ ಬದುಕಿನಲ್ಲಿ ಸೋತ ಯುವಕರು ತಾಲಿಬಾನ್, ಲಷ್ಕರೆ ತೌಯಿಬಾ ಮುಂತಾದ ಸಂಘಟನೆಗಳ ಮುಷ್ಠಿಯೊಳಗೆ ಸುಲಭವಾಗಿ ಬಿದ್ದುಬಿಡುತ್ತಾರೆ.

ಮದರಸಾಗಳ ಸುತ್ತಮುತ್ತ೨:ಅಷ್ಟಕ್ಕೂ ಇಲ್ಲಿ ಏನು ಕಲಿಸಲಾಗುತ್ತಿದೆ?

ಸಾಮಾನ್ಯವಾಗಿ ಮದ್ರಸಾ ವಿದ್ಯಾಭ್ಯಾಸದಲ್ಲಿ ಯಾವರೀತಿಯ ರಾಜಕೀಯ ಪಾಠವನ್ನು ಕಲಿಸುವುದಾಗಲೀ, ಪರಧರ್ಮ ದೂಷಣೆಗಾಗಲೀ ಅವಕಾಶವಿಲ್ಲ. ಕುರಾನ್ ಸಂದೇಶಗಳನ್ನು ಅನುಸರಿಸಿದ ದೀನಿಯಾತ್ ಅಥವಾ ಧರ್ಮ ತತ್ವಗಳ ಪಾಠ ಮತ್ತು ಸಹನೆ, ಗುರು ಹಿರಿಯರಿಗೆ ಮತ್ತು ಹೆತ್ತವರಿಗೆ ಗೌರವ, ಪರಮತ ಸಹಿಷ್ಣುತೆ ಮುಂತಾದ ನೀತಿ ಬೋಧೆಯಾಗುತ್ತದೆಯೇ ಹೊರತು, ಹಿಂಸಾ ಪ್ರಚೋದನೆ ನಡೆಸುವುದಕ್ಕೆ ಸಂಬಂಧಿಸಿದಂತೆ ಬೋಧಿಸುವ ಅವಕಾಶವಿರುವುದಿಲ್ಲ. ಮದ್ರಸಾಗಳು ಅನುಸರಿಸುವ ಈ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗುತ್ತದೆ. ಮದ್ರಸಾಗಳಿಂದ ಹೊರಗೆ ಬಂದು ತಮ್ಮ ಬದುಕನ್ನು ರೂಪಿಸುವುದಕ್ಕೆ ಅಸಾಧ್ಯವೆಂದು ಹತಾಶರಾದ ಕೆಲವು ವಿದ್ಯಾರ್ಥಿಗಳನ್ನು ರಾಜಕೀಯ ಪ್ರೇರಿತ ಹಿಂಸಾಪ್ರವೃತ್ತಿಯ ಹಿನ್ನೆಲೆಯ ಸಂಘಟನೆಗಳ ಕೆಲವು ನಾಯಕರು ವಶಪಡಿಸಿಕೊಳ್ಳುತ್ತಾರೆ. ಅಫಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಇಂತಹ ಕೆಲವು ಹತಾಶ ತಾಲಿಬಾನ್ ಯುವಕರಿಗೆ ಅಮೇರಿಕಾ ಮಿಲಿಟರಿ ತರಬೇತು ನೀಡಿ, ಅತ್ಯಾಧುನಿಕ ಮಿಲಿಟರಿ ಹತ್ಯಾರುಗಳನ್ನು ನೀಡಿ ಅಫಘಾನಿಸ್ತಾನವನ್ನು ಆಕ್ರಮಿಸಿದ ರಷ್ಯನರನ್ನು ಓಡಿಸುವ ತಂತ್ರವನ್ನು ಹೂಡಿದ್ದು, ಅಮೇರಿಕಾದ ವರಪಡೆದ ಬಸ್ಮಾಸುರರೇ ಇಂದು ಅವರಿಗೆ ತಿರುಗಿ ನಿಂತಿರುವುದು ನಮ್ಮ ಕಣ್ಣಮುಂದಿನ ಇತಿಹಾಸ.

ಅಮೇರಿಕಾದ ಸಪ್ಟೆಂಬರ್ ಹನ್ನೊಂದರ ಘಟನೆಯ ನಂತರ ಭಯೋತ್ಪಾದಕರನ್ನು ಸೃಷ್ಟಿಸುವ ಕಾರ್ಖಾನೆಗಳೆಂದು ಆರೋಪ ಹೊತ್ತಿರುವ ಈ ಮದ್ರಸಾಗಳು, ಎಲ್ಲರ ಅನುಮಾನಕ್ಕೆ ಗುರಿಯಾಗಿವೆ. ಆಳುವವರ ಹುಂಬತನಕ್ಕೆ ಸಾಕ್ಷಿಯಾಗಿ ಭಯೋತ್ಪಾದಕರಿಗೆ ಆಶ್ರಯ ನೀಡಿದ ಪಾಕಿಸ್ತಾನ ಮತ್ತು ಬಂಗ್ಲಾದೇಶಗಳಲ್ಲಿನ ಒಂದೆರಡು ಮದ್ರಸಾಗಳನ್ನು ಹೊರತುಪಡಿಸಿದರೆ, ವಿಶ್ವದಾದ್ಯಂತ ಲಕ್ಷಾಂತರ ಮದ್ರಸಾಗಳು ತಮ್ಮ ಪಾಡಿಗೆ ತಾವು ಧಾರ್ಮಿಕ ಪಾಠಗಳನ್ನು ಮಕ್ಕಳಿಗೆ ಹೇಳಿಕೊಡುವುದನ್ನು ಬಿಟ್ಟರೆ ಮತ್ತಿನ್ನಾವ ಸಾಮಾಜಿಕ ಮಹತ್ವವನ್ನು ಪಡೆದಿಲ್ಲವೆನ್ನಬಹುದು. ಆಧುನಿಕ ವಿದ್ಯಾಭ್ಯಾಸದ ಜೊತೆಗೆ ಕುರಾನನ್ನು ಓದುವಷ್ಟಾದರೂ ಜ್ಞಾನವಿರಲೆಂಬ ಕಾರಣಕ್ಕೆ ಹೆಚ್ಚಿನ ಮುಸ್ಲಿಮರು ತಮ್ಮ ಮಕ್ಕಳನ್ನು ಶಾಲೆಗೆ ಬಿಡುವಾದಾಗಲೆಲ್ಲ ಮದ್ರಸಾಗಳಿಗೆ ಕಳುಹಿಸುತ್ತಾರೆ. ವಿಶ್ವದಾದ್ಯಂತ ಈ ಮದ್ರಸಾಗಳು ಕುರಾನ್ ಪಠಣ, ಕಂಠ ಪಾಠ ಮತ್ತು ಅರ್ಥಗ್ರಹಣ, ಇಸ್ಲಾಮಿಕ್ ನ್ಯಾಯಶಾಸ್ತ್ರ, ಹದೀಸ್ ಅರ್ಥವ್ಯಾಪ್ತಿ, ಪ್ರವಚನಗಳ ಪಾಠವನ್ನು ತನ್ನ ವಿದ್ಯಾರ್ಥಿಗಳಿಗೆ ಬೋಧಿಸುತ್ತವೆ. ಸೂಫಿ ಪಂಥದ ಆಧ್ಯಾತ್ಮಿಕ ತರಬೇತಿ, ರಹಸ್ಯಗಳ ಬೋಧನೆಯೂ ನಡೆಯುವುದು ಇಂತಹ ಮದ್ರಸಾಗಳಲ್ಲೇ. ಇತಿಹಾಸ ಪ್ರಸಿದ್ಧ ಮದ್ರಸಾಗಳು, ಇಸ್ಲಾಮಿಕ್ ಯುನಿವರ್ಸಿಟಿಗಳು ಇರುವುದು ಈಜಿಪ್ಟ್, ಸೌದಿ ಅರೇಬಿಯಾ, ಇರಾಕ್, ಇರಾನ್, ರಷ್ಯಾ, ಉಜ್ಬೆಕಿಸ್ತಾನ್, ಡಮಾಸ್ಕಸ್, ಅಫಘಾನಿಸ್ತಾನ, ಪಾಕಿಸ್ತಾನ ಮತ್ತು ಭಾರತಗಳಲ್ಲಿ. ಭಾರತದ ಮದ್ರಸಾಗಳಲ್ಲಿ ಮಕ್ಕಳಿಗೆ ಉರ್ದು, ಫಾರಸಿ ಕಲಿಸುವ ವ್ಯವಸ್ಥೆ ಕೆಲವೆಡೆ ಇದೆ. ಈಗೀಗ ಇಂಗ್ಲಿಷ್ ಭಾಷೆ, ಕಂಪ್ಯೂಟರ್ ಜ್ಞಾನವನ್ನು ಕೆಲವು ಮದ್ರಸಾಗಳು ತಮ್ಮ ವಿದ್ಯಾರ್ಥಿಗಳಿಗೆ ಬೋಧಿಸುತ್ತಿವೆ.

ಇತಿಹಾಸ
ಇಸ್ಲಾಮ್ ಧರ್ಮದ ಆರಂಭಿಕ ಹಂತದಿಂದ ಹಿಡಿದು ಹೆಚ್ಚುಕಮ್ಮಿ ಒಂಭತ್ತನೆಯ ಶತಮಾನದ ತನಕವೂ ಇಸ್ಲಾಮಿಕ್ ವಿದ್ಯಾಭ್ಯಾಸ ಕ್ರಮವು ಮೌಖಿಕವಾಗಿಯೇ ಇತ್ತೆನ್ನಬಹುದು. ಮಸೀದಿಗಳಲ್ಲಿ ಒಂದು ಭಾಗದಲ್ಲಿ ‘ಮಖ್ತಬ್’ ಎಂಬ ಪಾಠಶಾಲೆಯಲ್ಲಿ ಕುರಾನ್ ಓದು, ಅರಬಿಕ್ ಭಾಷೆಯ ಕಲಿಕೆ ಸಾಮಾನ್ಯವಾಗಿತ್ತು. ಕ್ರಿ.ಶ. ೮೫೯ರಲ್ಲಿ ಮೊರಕ್ಕೊ ದೇಶದ ಫಾಸ್ ನಗರದಲ್ಲಿ ಅಲ್ ಖರವ್ಯಿನ್ ಮಸೀದಿಯಲ್ಲಿ ಕಾರ್ಯೋನ್ಮುಖವಾದ ಜಮಯ್ಯತ್ ಅಲ್ ಖರವ್ಯಿಯಿನ್ ಎಂಬ ಪಾಠಶಾಲೆ ಪ್ರಥಮ ಮದ್ರಸಾ ಎನಿಸಿದೆ. ಈಜಿಪ್ಟ್‌ನ ಕೈರೋ ನಗರದ ೯೫೯ರಲ್ಲಿ ಸ್ಥಾಪನೆಗೊಂಡ ಇಂದಿನ ಅಲ್ ಅಜ಼ರ್ ಯುನಿವರ್ಸಿಟಿ ಕೂಡ ಇತಿಹಾಸ ಪ್ರಸಿದ್ಧ ಮದ್ರಸ. ಇಸ್ಲಾಮಿಕ್ ಜಗತ್ತನ್ನು ಖಲೀಫಾಗಳು ಆಳುತ್ತಿದ್ದ ಸಂದರ್ಭದಲ್ಲಿ ಮುಖ್ಯವಾಗಿ ಅಬ್ಬಾಸಿದ್ ಮತ್ತು ಉತ್ಮಾನ್ ಖಲೀಫಾ ಕುಟುಂಬಗಳು ಆಳುತ್ತಿದ್ದ ಸಂದರ್ಭದಲ್ಲಿ ಈ ಮದ್ರಸಾಗಳಿಗೆ ಪ್ರಾಶಸ್ತ್ಯ ದೊರಕಿತು. ಈ ಸಂದರ್ಭಗಳಲ್ಲಿ ಬರಿಯ ಕುರಾನ್ ಮತ್ತು ಧಾರ್ಮಿಕ ಸಂಬಂಧಿತ ಪಾಠಗಳು ಮಾತ್ರವಲ್ಲ, ಜೊತೆಗೆ ಗಣಿತಶಾಸ್ತ್ರ, ಭೌಗೋಲಿಕ ಶಾಸ್ತ್ರ, ಖಗೋಳ ಶಾಸ್ತ್ರ, ಜ್ಯೋತಿಶ್ಶಾಸ್ತ್ರ, ಜೀವ ಶಾಸ್ತ್ರ, ವೈದ್ಯಕೀಯ ಶಾಸ್ತ್ರ, ತತ್ವಶಾಸ್ತ್ರ, ಜಾದೂ ವಿದ್ಯೆ, ತಂತ್ರವಿದ್ಯೆ, ಮುಂತಾದ ವಿದ್ಯೆಗಳನ್ನು ವಿದ್ಯಾರ್ಥಿಗಳಿಗೆ ಕಲಿಸಿಕೊಡುವ ಏರ್ಪಾಡು ಇತ್ತು.ಫಿರ್ದಾಸ್ ಮದ್ರಸಾ

ಆರಂಭದಲ್ಲಿದ್ದ ಮಖ್ತಬ್‌ಗಳಲ್ಲಿ ಆರು ವರ್ಷಗಳ ವಯಸ್ಸಿನ ಮಕ್ಕಳಿಗೆ ಕುರಾನ್ ಓದು, ಕಂಠಪಾಠ, ಅರಬಿಕ್, ಉರ್ದುಭಾಷಾ ಕಲಿಕೆ, ಇಸ್ಲಾಮಿಕ್ ನೀತಿಬೋಧೆ ಮುಂತಾದ ಪ್ರಾಥಮಿಕ ಹಂತದ ವಿದ್ಯಾಭ್ಯಾಸ ಶುರುವಾಗುತ್ತದೆ. ೧೪ನೇ ವಯಸ್ಸಿನಿಂದ ಮಕ್ಕಳಿಗೆ ಪ್ರೌಢ(ಸೆಕೆಂಡರಿ) ಹಂತದ ಮದ್ರಸ ಶಾಲೆಯ ಪಠ್ಯಕ್ರಮಗಳಲ್ಲಿ ಧಾರ್ಮಿಕ ಪ್ರವಚನ, ಸಾಹಿತ್ಯ ಬೋಧನೆ, ಔಷಧ-ಆರೋಗ್ಯ, ರೇಖಾಗಣಿತ, ವ್ಯಾಪಾರ-ವಾಣಿಜ್ಯ, ಕರಕುಶಲ ಮುಂತಾದ ವಿಭಾಗಗಳಲ್ಲಿ ವಿದ್ಯಾರ್ಥಿಯ ಆಯ್ಕೆಯ ಪ್ರಕಾರ ಕಲಿಸಲಾಗುತ್ತಿತ್ತು. ಉನ್ನತ ಪ್ರೌಢ ಶಿಕ್ಷಣದ ಹಂತದಲ್ಲಿ ತತ್ವಶಾಸ್ತ್ರ, ವಿಜ್ಞಾನ, ಸಂಗೀತ, ಇಸ್ಲಾಮಿಕ್ ಆಧ್ಯಾತ್ಮಿಕ ಸಿದ್ಧಾಂತ(ಒeಣಚಿಠಿhಥಿsiಛಿs) ವೈದ್ಯಕೀಯ ಶಾಸ್ತ್ರ, ಜ್ಯೋತಿಶ್ಶಾಸ್ತ್ರ, ರಸಾಯನ ಶಾಸ್ತ್ರ ಕಲಿಯಲು ವಿದ್ಯಾರ್ಥಿಗಳಿಗೆ ಆಯ್ಕೆಯ ಸ್ವಾತಂತ್ರ್ಯವಿತ್ತು. ೧೦ನೇ ಶತಮಾನದಲ್ಲಿ ಕೈರೋದ ಅಲ್-ಅಜ಼ರ್ ಮತ್ತು ೧೧ನೇ ಶತಮಾನದಲ್ಲಿ ಕೈರೋದ ನಿಜ಼ಾಮಿಯ್ಯ ವಿಶ್ವವಿದ್ಯಾಲಯಗಳು ಈ ಪಠ್ಯಕ್ರಮವನ್ನು ಅವಲಂಬಿಸಿದ್ದವು. ಈಜಿಪ್ಟಿನ ೭೫ ಕಾಲೇಜುಗಳು ಇವುಗಳ ಅಧೀನದಲ್ಲಿದ್ದವು. ಡಮಾಸ್ಕಸ್‌ನಲ್ಲಿ ೫೧ ಕಾಲೇಜುಗಳಿದ್ದವು. ಈ ಇಸ್ಲಾಮಿಕ್ ಕಾಲೇಜುಗಳು ಇಸ್ಲಾಮಿಕ್ ಕಾನೂನುಶಾಸ್ತ್ರ(ಫಿಕ್ಹ್) ಕಲಿಸುತ್ತಿದ್ದವು. ಮುಫ್ತಿ ಅಥವಾ ಇಸ್ಲಾಮಿಕ್ ತಾತ್ವಿಕ ಆಧಾರದ ಅಭಿಪ್ರಾಯ (ಫತ್ವಾ) ನೀಡುವ ಕ್ರಮವನ್ನು ಕಲಿಸುತ್ತಿದ್ದವು. ಇಸ್ಲಾಮಿಕ್ ವೈದ್ಯಶಾಸ್ತ್ರವನ್ನು ಈ ಕಾಲೇಜುಗಳ ಅಧೀನದಲ್ಲಿರುವ ‘ಬೀಮಾರಿಸ್ತಾನ್’ ಅಥವಾ ಆಸ್ಪತ್ರೆಗಳಲ್ಲಿ ಕಲಿಸಲಾಗುತ್ತಿತ್ತು. ಇವಲ್ಲದೆ ಮತ್ತಿತರ ಅನೇಕ ವಿಷಯಗಳನ್ನು ಕಲಿಸಲಾಗುತ್ತಿತ್ತು. ವಿಶ್ವವಿದ್ಯಾಲಯಗಳನ್ನು ‘ಜಾಮಿಯ್ಯ’ ಎಂದು ಸಂಬೋಧಿಸಲಾಗುತ್ತಿತ್ತು.

ಈ ಮದ್ರಸಾಗಳನ್ನು ವಿಶ್ವವಿದ್ಯಾಲಯಗಳೆಂದು ಪರಿಗಣಿಸುವುದು. ಮಾನ್ಯತೆ ನೀಡುವುದರ ಬಗ್ಗೆ ಬಹಳಷ್ಟು ಪರ ವಿರೋಧಿ ಚರ್ಚೆಗಳು ನಡೆಯುತ್ತಲೇ ಇವೆ. ಇಸ್ಲಾಮಿಕ್ ಧಾರ್ಮಿಕ ವಿಷಯಗಳ ಬಗ್ಗೆ ಅರ್ಹರಿಗೆ ಡಾಕ್ಟರೇಟ್ ಪದವಿಯನ್ನು ನೀಡುವುದಕ್ಕೆ ಸಂಬಂಧಿಸಿದಂತೆ ವಿರೋಧವಿಲ್ಲವಾದರೂ, ಇತರ ಸಾಮಾನ್ಯ ವಿಷಯಗಳನ್ನು ಆರಿಸಿಕೊಳ್ಳುವುದಕ್ಕೆ ಇರುವ ಕೊರತೆಯನ್ನು ಮುಂದಿರಿಸಿ ಭಿನ್ನಾಭಿಪ್ರಾಯಗಳು ತಲೆಯೆತ್ತುತ್ತಿವೆ. ಈ ಮದ್ರಸಾಗಳು ಹೆಚ್ಚಾಗಿ ಸ್ವಾಯತ್ತ ಸಂಸ್ಥೆಗಳಾಗಿದ್ದು ಸರಕಾರದ ಆರ್ಥಿಕ ಸಹಾಯವನ್ನು ಪಡೆಯದೆ ವಕ್ಫ್ ಮತ್ತು ಸ್ಥಳೀಯ ದಾನಿಗಳ ನೆರವಿನಿಂದ ನಡೆಯುತ್ತಿರುವುದರಿಂದ ಇವು ತಮ್ಮದೇ ಆದ ನಿಯಮಗಳನ್ನು ಪಾಲಿಸುತ್ತಿರುವುದು ಕೂಡ ಒಂದುರೀತಿಯಲ್ಲಿ ಅಡಚಣೆಯುಂಟಾಗಿವೆ.

ಇವಲ್ಲದೆ ಈ ಮದ್ರಸಾಗಳಲ್ಲಿ ಕೆಲವು ದಾನಿಗಳು ವೈಯಕ್ತಿಕವಾಗಿ ನಡೆಸುವ ಯತೀಮ್‌ಖಾನಾಗಳು ಇಂದು ಪ್ರತೀ ಊರಲ್ಲೂ ಹಲವಾರು ತಲೆಯೆತ್ತಿವೆ. ಇವು ಅನಾಥ ಮುಸ್ಲಿಮ್ ಮಕ್ಕಳಿಗೆ ಮದ್ರಸಾ ವಿದ್ಯಾಭ್ಯಾಸವನ್ನು, ಬಟ್ಟೆ, ಊಟ ವಸತಿಗಳನ್ನು ಒದಗಿಸಿಕೊಡುವ ಕೆಲಸ ಮಾಡುತ್ತಿವೆ. ಈ ಮದ್ರಸಾಗಳ ಪೈಕಿ ಕೆಲವು ಒಳಗೊಳಗೆ ಈ ಅನಾಥ ಮಕ್ಕಳನ್ನು ದುಡಿಸಿಕೊಂಡು ಶೋಷಿಸುತ್ತಿರುವ ಬಗ್ಗೆ ಕೆಲವು ಪತ್ರಿಕೆಗಳು(ಮುಖ್ಯವಾಗಿ ತೆಹಲ್ಕಾ) ವರದಿಮಾಡಿದ್ದೂ ಇದೆ.

ಮಹಿಳೆಯರ ವಿದ್ಯಾಭ್ಯಾಸ
ಪೈಗಂಬರರ ಕಾಲದಲ್ಲಿ ಇಂತಹ ಮದ್ರಸಾಗಳ ಸ್ಥಾಪನೆಯಾಗದಿದ್ದರೂ, ಧಾರ್ಮಿಕ ವಿದ್ಯಾಭ್ಯಾಸಕ್ಕೆ ಮಹತ್ವವಿತ್ತು. ಇಂತಹ ಧಾರ್ಮಿಕ ವಿದ್ಯಾಭ್ಯಾಸದಲ್ಲಿ ಪುರುಷರಷ್ಟೇ ಮಹಿಳೆಯರು ಕೂಡ ಭಾಗವಹಿಸುತ್ತಿದ್ದರು. ವ್ಯಾಪಾರ, ರೋಗಿಗಳ ಶುಶ್ರೂಷೆ, ಧಾರ್ಮಿಕ ಪ್ರಚಾರ ಮುಂತಾದವುಗಳಲ್ಲಿ ಮಹಿಳೆಯರು ಪ್ರಮುಖವಾಗಿ ಪಾಲ್ಗೊಳ್ಳುತ್ತಿದ್ದರು. ಉಮ್ಮ್ ವರಾಖ ಎಂಬ ಮಹಿಳೆ ಧಾರ್ಮಿಕ ಪಂಡಿತಳಾಗಿ ಪೈಗಂಬರರ ಗಮನಸೆಳೆದಾಗ ಅವರನ್ನು ಗೌರವಿಸಿ ‘ನಿಮ್ಮ ಕಬೀಲಾದ ಇಮಾಮ್ ಅಥವಾ ನೇತೃತ್ವವನ್ನು ವಹಿಸಿ’ ಎಂದು ಸಲಹೆ ನೀಡಿದ್ದರು. ಪೈಗಂಬರರ ಕಾಲದಲ್ಲಿ ಮಹಿಳೆಯರ ವಿದ್ಯಾಭ್ಯಾಸಕ್ಕೆ ಯಾವ ಅಡೆತಡೆಯೂ ಇದ್ದಿರಲಿಲ್ಲ. ಕ್ರಿ.ಶ. ೭೫೦ರಲ್ಲಿ ಅಬ್ಬಾಸಿದ್ ಕುಟುಂಬ ಖಲೀಫಾ ಆಗಿದ್ದ ಸಂದರ್ಭದಲ್ಲಿ ಮಹಿಳೆಯರು ಧಾರ್ಮಿಕ ವಿದ್ಯಾಭ್ಯಾಸ ಮತ್ತು ಪ್ರಚಾರಗಳಲ್ಲಿ ಮುಂಚೂಣಿಯಲ್ಲಿದ್ದರು. ೧೨ನೇ ಶತಮಾನದ ಕೊನೆಯಲ್ಲಿ ಶುಹದಾ ಎಂಬ ಮಹಿಳೆ ಬಗ್ದಾದಿನ ಅತ್ಯಂತ ಉನ್ನತ ಮಟ್ಟದ ಧಾರ್ಮಿಕ ಪಂಡಿತರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದರು. ಕ್ರಿ.ಶ. ೮೫೯ರಲ್ಲಿ ಮೊರಕ್ಕೊ ದೇಶದ ಫಾಸ್ ನಗರದಲ್ಲಿ ವಿಶ್ವದ ಮೊತ್ತ ಮೊದಲ ಮದ್ರಸಾ ಅಲ್ ಕರವಿಯ್ಯಿನನ್ನು ಫಾತಿಮಾ ಅಲ್ ಫಿಹಿರಿ ಎಂಬ ಮಹಿಳೆಯ ನೇತೃತ್ವದಲ್ಲಿ ಸ್ಥಾಪಿಸಲಾಗಿತ್ತು. ೧೨ನೇ ಶತಮಾನದಲ್ಲಿ ಡಮಾಸ್ಕಸ್‌ನಲ್ಲಿ ಸ್ಥಾಪಿಸಲಾದ ೧೬೦ ಮದ್ರಸಾಗಳ ಪೈಕಿ ೨೬ ಮದ್ರಸಾಗಳನ್ನು ಮಹಿಳೆಯರ ನೇತೃತ್ವದಲ್ಲಿ ಸ್ಥಾಪಿಸಲಾಗಿತ್ತು. ಈ ಕಾಲಘಟ್ಟದಲ್ಲಿ ಮದ್ರಸಾ ಪಾಠಶಾಲೆಗಳ ಸ್ಥಾಪನೆಯಲ್ಲಿ ಮಹಿಳೆಯರ ಕೊಡುಗೆ ಅಪಾರವಾಗಿತ್ತು. ಮಹಿಳೆಯರು ತಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ತುಂಬ ಆಸಕ್ತಿ ವಹಿಸಿದ್ದರು. ೧೩ನೇ ಶತಮಾನದ ಕೊನೆಯಲ್ಲಿ ಮುಸ್ಲಿಮ್ ಮಹಿಳೆಯರಿಗಾಗಿ ಪ್ರತ್ಯೇಕ ಮದ್ರಸಾಗಳನ್ನು ತೆರೆಯುವ ಕ್ರಮವು ಜಾರಿಗೆ ಬಂತೆನ್ನಬಹುದು. ಇಂದಿಗೂ ಹೆಣ್ಣು ಮಕ್ಕಳು ೧೩ವರ್ಷ ಪ್ರಾಯದ ವರೆಗೂ ಸ್ಥಳೀಯ ಮದ್ರಸಾಗಳಲ್ಲಿ ಧಾರ್ಮಿಕ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿಕೊಡುವ ಕ್ರಮವಿದೆ. ದೊಡ್ಡ ಪಟ್ಟಣಗಳಲ್ಲಿ ಇಸ್ಲಾಮಿಕ್ ಮಹಿಳಾ ಪಾಠಶಾಲೆ, ಕಾಲೇಜುಗಳ ಸ್ಥಾಪನೆಯಾಗಿದ್ದು ಇಲ್ಲಿ ಸ್ತ್ರೀಯರಿಗೆ ಪ್ರತ್ಯೇಕವಾಗಿ ಧಾರ್ಮಿಕ ವಿದ್ಯಾಭ್ಯಾಸದ ಜೊತೆಗೆ ಉರ್ದು, ಇಂಗ್ಲಿಷ್ ಭಾಷೆಗಳನ್ನು ಕಲಿಸಿಕೊಡುವ ಏರ್ಪಾಡಿದೆ.

ಕಲಿಯುತ್ತಿರುವ ಹೆಣ್ಣುಮಕ್ಕಳುಕೆಲವು ಪ್ರಖ್ಯಾತ ಮದ್ರಸಗಳು
ಇಸ್ಲಾಮಿಕ್ ವಿದ್ಯಾ ಸಂಸ್ಥೆಗಳಿಗೆ ಇಸ್ಲಾಮ್ ಧರ್ಮದ ಹುಟ್ಟುವ ಸಂದರ್ಭದ ಇತಿಹಾಸವಿದ್ದರೂ ಜಾಮಿಯ್ಯ ಅಥವಾ ವಿಶ್ವವಿದ್ಯಾಲಯದ ದರ್ಜೆಯ ವಿದ್ಯಾಸಂಸ್ಥೆಗಳನ್ನು ಪರಿಗಣಿಸಿದರೆ ಮೊತ್ತಮೊದಲ ಜಾಮಿಯ್ಯ ೮೫೯ರಲ್ಲಿ ಮೊರಕ್ಕೋದ ಫಾಸ್ ನಗರದಲ್ಲಿ ಸ್ಥಾಪನೆಗೊಂಡ ಅಲ್ ಕೊರವಿಯ್ಯಿನ್ ವಿಶ್ವವಿದ್ಯಾಲಯವು ಮೊತ್ತಮೊದಲ ಇಸ್ಲಾಮಿಕ್ ಯುನಿವರ್ಸಿಟಿ ಎಂಬ ಗೌರವಕ್ಕೆ ಪಾತ್ರವಾಗಿದೆ. ಧಾರ್ಮಿಕ ವಿದ್ಯಾಭ್ಯಾಸದ ಜೊತೆಗೆನೇ ಅಲ್ಲದೆ ಮುಸ್ಲಿಮರಿಗೆ ಆಧುನಿಕ ವಿದ್ಯಾಭ್ಯಾಸದ ಮಹತ್ವವನ್ನು ಕಂಡುಕೊಂಡ ಭಾರತದ ಅಲಿಘರ್ ಮುಸ್ಲಿಮ್ ಯುನಿವಿರ್ಸಿಟಿ, ಜಾಮಿಯ್ಯ ಮಿಲಿಯ ಇಸ್ಲಾಮಿಯ, ಈಜಿಪ್ಟಿನ ಕೈರೋ ಯುನಿವರ್ಸಿಟಿ ಮುಂತಾದ ಹಲವಾರು ಸೆಕ್ಯೂಲರ್ ವಿದ್ಯಾಸಂಸ್ಥೆಗಳು ವಿಶ್ವದಾದ್ಯಂತ ಇದ್ದರೂ, ಇಸ್ಲಾಮಿಕ್ ವಿದ್ಯಾಭ್ಯಾಸವನ್ನೇ ಮೂಲಭೂತವಾಗಿ ಪಠ್ಯವನ್ನಾಗಿಸಿದ ಹಲವು ಮದ್ರಸಾ ವಿಶ್ವವಿದ್ಯಾಲಯಗಳ ಪೈಕಿ ಈಜಿಪ್ಟಿನ ಅಲ್-ಅಜ಼ರ್ ವಿಶ್ವವಿದ್ಯಾಲಯ, ಬಗ್ದಾದಿನ ಅಲ್ ಜಾಮಿಯ್ಯ ವಿಶ್ವವಿದ್ಯಾಲಯ, ಮಕ್ಕಾ ಮುಕರ್ರಮಾ, ಮದೀನಾ ಯುನಿವರ್ಸಿಟಿ, ೧೨೩೩ರಲ್ಲಿ ಅಬ್ಬಾಸಿದ್ ಖಲೀಫಾ ಮುಂತಸಿರಿ ಸ್ಥಾಪಿಸಿದ ಮುಂತಸಿರಿಯಾ ಯುನಿವರ್ಸಿಟಿ, ಭಾರತದ ಉತ್ತರಪ್ರದೇಶದ ದೇವ್‌ಬಂದ್‌ನಲ್ಲಿರುವ ದಾರುಲ್ ಉಲೂಮ್, ಹೈದರಾಬಾದ್‌ನಲ್ಲಿರುವ ಜಾಮಿಯ ನಿಜಾಮಿಯ ವಿಶ್ವವಿದ್ಯಾಲಯ ಮುಂತಾದವು ಬಹು ಮುಖ್ಯವಾದವು.

ಅಲ್-ಅಜರ್ ಯುನಿವರ್ಸಿಟಿ
ಈಜಿಪ್ಟಿನ ಅತ್ಯಂತ ಪ್ರತಿಷ್ಠಿತ ಮತ್ತು ಇತಿಹಾಸ ಪ್ರಸಿದ್ಧ ಇಸ್ಲಾಮಿಕ್ ವಿಶ್ವವಿದ್ಯಾಲಯ ಅಲ್-ಅಜ಼ರ್ ಯುನಿವರ್ಸಿಟಿಯು ಸ್ಥಾಪನೆಗೊಂಡದ್ದು ಕ್ರಿ.ಶ. ೯೭೦-೯೭೨ರ ಸುಮಾರಿಗೆ. ಮೊದಲಿಗೆ ಕುರಾನ್ ಪಠಣ, ಅರೆಬಿಕ್ ಭಾಷೆ, ಸಾಹಿತ್ಯ, ಜ್ಯೋತಿಶ್ಶಾಸ್ತ್ರ, ಸುನ್ನಿ ಪಂಗಡಕ್ಕೆ ಸಂಬಂಧಿಸಿದ ಇಸ್ಲಾಮಿಕ್ ವಿದ್ಯಾಭ್ಯಾಸ ಇವೇ ಮುಂತಾದ ಪಾಠಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಸಾಮಾನ್ಯ ಮದ್ರಸಾ ರೂಪದಲ್ಲಿತ್ತು. ಈ ಮದ್ರಸಾ ಅಲ್-ಅಜ಼ರ್ ಮಸೀದಿಗೆ ಸಂಬಂಧಿಸಿದ್ದು ಸ್ಥಾಪನೆಯ ಮೂಲ ಉದ್ದೇಶ ಇಸ್ಲಾಮಿಕ್ ಸಂಸ್ಕೃತಿ ಮತ್ತು ಇಸ್ಲಾಮಿಕ್ ಧರ್ಮಜ್ಞಾನ ಬೋಧನೆ ಮತ್ತು ಪ್ರಸಾರವಾಗಿತ್ತು.

ಈ ಸಂಸ್ಥೆಯ ಇತಿಹಾಸದಲ್ಲಿ ಈಜಿಪ್ಟಿನ ಇತಿಹಾಸದ ಮುಖ್ಯ ಭಾಗವು ಕೂಡ ಒಳಗೊಂಡಿದೆ. ಈಜಿಪ್ಟ್ ಷಿಯಾ ಪಂಥದ ಫಾತಿಮತ್ ವಂಶಸ್ಥ ಖಲೀಫಾರ ಆಡಳಿತಕ್ಕೊಳಗಾಗಿದ್ದಾಗ ಸಾಮಾನ್ಯ ಮದ್ರಸಾ ರೂಪದಲ್ಲಿದ್ದ ಈ ಇಸ್ಲಾಮಿಕ್ ವಿದ್ಯಾಲಯ ಕ್ರಿ.ಶ. ೯೭೫ರಲ್ಲಿ ಪೈಗಂಬರರ ಮಗಳಾದ ಫಾತಿಮತ್ ಜೊಹರಾರವರ ಹೆಸರಲ್ಲಿ ಅಲ್-ಅಜ಼ರ್ ವಿಶ್ವವಿದ್ಯಾಲಯವಾಗಿ ರೂಪುಗೊಂಡಿತು. ಫಾತಿಮಾರವರ ಹೆಸರಲ್ಲಿರುವ ಜೊಹರಾ ಅಥವಾ ಬುದ್ಧಿವಂತೆ ಎಂಬ ಪದದ ಸಂಕ್ಷಿಪ್ತರೂಪವಾಗಿ ಈ ಸಂಸ್ಥೆಗೆ ಅಜ಼ರ್ ಎಂಬ ಹೆಸರನ್ನು ಇರಿಸಲಾಗಿತ್ತು. ಮುಂದೆ ಹನ್ನೆರಡನೇ ಶತಮಾನದಲ್ಲಿ ಫಾತಿಮತ್ ವಂಶಸ್ಥ ಅರಸರನ್ನು ಸೋಲಿಸಿ ಅಯ್ಯೂಬ್ ವಂಶಸ್ಥರ ಮೂಲಪುರುಷ ಸುಲ್ತಾನ್ ಸಲಾಹುದ್ದೀನ್ ಅಯ್ಯೂಬಿ ಈಜಿಪ್ಟನ್ನು ವಶಪಡಿಸಿಕೊಂಡ. ಫಾತಿಮತ್ ವಂಶಸ್ಥರು ಷಿಯಾ ಪಂಗಡಕ್ಕೆ ಸೇರಿದವರಾಗಿದ್ದರೆ, ಅಯ್ಯೂಬಿ ವಂಶಸ್ಥರು ಸುನ್ನಿ ಪಂಗಡದವರಾಗಿದ್ದರು. ಅಲ್-ಅಜ಼ರ್ ಯುನಿವರ್ಸಿಟಿಯಲ್ಲಿದ್ದ ಷಿಯಾ ಪಂಥದ ಅಧ್ಯಾಪಕರು ಮತ್ತು ಇಸ್ಲಾಮಿಕ್ ಪಂಡಿತರನ್ನು ಅಯ್ಯೂಬಿ ವಂಶಸ್ಥ ಅರಸರು ಗೌರವದಿಂದಲೇ ನೋಡಿಕೊಳ್ಳುವ ಜೊತೆಗೆ ಸುನ್ನಿ ಪಂಥದ ಒಲವಿನ ಇಸ್ಲಾಮಿಕ್ ಪಂಡಿತರನ್ನೂ ವಿಶ್ವವಿದ್ಯಾಲಯದ ಬೋಧಕರನ್ನಾಗಿಯೂ ನೇಮಕಗೊಳಿಸಿದರು. ಹೀಗಾಗಿ ಈ ಯುನಿವರ್ಸಿಟಿಯಲ್ಲಿ ಇಂದಿಗೂ ಧಾರ್ಮಿಕ ಬೋಧನಾಕ್ರಮದಲ್ಲಿ ಷಿಯಾ ಮತ್ತು ಸುನ್ನಿ ಪಂಥದ ಸಮನ್ವಯದ ಪಠ್ಯಕ್ರಮವಿದೆ. ಮೂಲತಹ ಧಾರ್ಮಿಕ ವಿದ್ಯಾಸಂಸ್ಥೆಯೆನಿಸಿದ್ದರೂ, ಇಂದು ಈಜಿಪ್ಟಿನ ಬಹುದೊಡ್ಡ ಆಧುನಿಕ ವಿದ್ಯಾಕ್ರಮದ ವಿಶ್ವವಿದ್ಯಾಲಯವೆನಿಸಿದ ಕೈರೋ ಯುನಿವರ್ಸಿಟಿಯ ನಂತರದ ಸ್ಥಾನವನ್ನು ಪಡೆದಿದೆ. ಅಲ್-ಅಜ಼ರ್ ಯುನಿವರ್ಸಿಟಿಯ ಲೈಬ್ರರಿಯು ಕೂಡ ಅನೇಕ ಐತಿಹಾಸಿಕ ಮಹತ್ವದ ಪುರಾತನ ಗ್ರಂಥಗಳನ್ನೊಳಗೊಂಡಿದ್ದು ಈಜಿಪ್ಟಿನ ಪ್ರಖ್ಯಾತ ಅತಿದೊಡ್ಡ ಲೈಬ್ರರಿಗಳ ಪೈಕಿ ಎರಡನೇ ಸ್ಥಾನವನ್ನು ಪಡೆದಿದೆ.ಅಲ್ ಖರಾವಿಯಿನ್ ಮಾಸ್ಕ್

೧೯೬೧ರಲ್ಲಿ ಈಜಿಪ್ಟಿನ ಅಧ್ಯಕ್ಷ ಅಬ್ದುಲ್ ಗಮಾಲ್ ನಾಸೆರ್ ಅಲ್ ಅಜ಼ರ್ ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಆಧುನಿಕ ಅವಶ್ಯಕತೆಗಳಿಗನುಗುಣವಾಗಿ ಮೂಲ ಧಾರ್ಮಿಕ ಉದ್ದೇಶಗಳಿಗೆ ಭಂಗವಾಗದಂತೆ ಬದಲಾವಣೆಯನ್ನು ತಂದರು. ಭೂಗೋಲ, ವಿಜ್ಞಾನ, ತಾಂತ್ರಿಕ, ಕೃಷಿ, ವೈದ್ಯಕೀಯ ವಿಷಯಗಳನ್ನು ಮತ್ತಿತರ ಆಧುನಿಕ ಪಠ್ಯಕ್ರಮಗಳನ್ನು ಅಳವಡಿಸಿದರು. ಇದರಿಂದಾಗಿ ಯುರೋಪ್ ದೇಶದಿಂದಲ್ಲದೆ ವಿಶ್ವದ ಇನ್ನೂ ಅನೇಕ ದೇಶಗಳಿಂದ ವಿದ್ಯಾರ್ಥಿಗಳು ಇಲ್ಲಿ ವ್ಯಾಸಂಗಕ್ಕಾಗಿ ಇಲ್ಲಿಗೆ ಬರತೊಡಗಿದರು.

ಇನ್ನೊಂದು ಮಹತ್ವದ ಸಂಗತಿ ಈ ವಿಶ್ವವಿದ್ಯಾಲಯದ ಮಟ್ಟಿಗೆ ಹೇಳಬೇಕೆಂದರೆ ಆಧುನಿಕ ಅವಶ್ಯಕತೆಗೆ ಅನುಗುಣವಾಗಿ ಅನೇಕ ಮಹತ್ವದ ಧಾರ್ಮಿಕ ಅರ್ಥವ್ಯಾಪ್ತಿ ಮತ್ತು ತೀರ್ಮಾನಗಳನ್ನು ಇಲ್ಲಿನ ಧಾರ್ಮಿಕ ಪಂಡಿತರು ಮುಫ್ತಿಗಳು ಫತ್ವಾ ಅಥವಾ ಅಭಿಪ್ರಾಯಗಳನ್ನು ನೀಡಿದ್ದಾರೆ. ಮುಖ್ಯವಾಗಿ ೯/೧೧ರ ಅಮೇರಿಕಾದ ಟ್ರೇಡ್ ಸೆಂಟರಿನ ಮೇಲೆ ಆತ್ಮಹತ್ಯಾ ಧಾಳಿಯನ್ನು ನಡೆಸಿದ ಕೃತ್ಯಗಳನ್ನು ಖಂಡಿಸಿ ಅಲ್-ಅಜ಼ರ್‌ನ ಇಮಾಮ್ ಮುಹಮ್ಮದ್ ಸೆಯ್ಯದ್ ಪಂತಾಲಿಯವರು ಇಂಡೋನೇಶ್ಯಾದ ಅರಬ್ ಇಸ್ಲಾಮಿಕ್ ಶೃಂಗ ಸಭೆಯಲ್ಲಿ ಈ ಕೃತ್ಯ ಇಸ್ಲಾಮಿನ ತತ್ವಗಳಿಗೆ, ಸತ್ಯವಿಶ್ವಾಸಿ ನಡೆವಳಿಕೆಗಳಿಗೆ, ಕುರಾನಿನ ಬೋಧನೆಗೆ ವಿರುದ್ಧವಾದದ್ದು ಎಂದು ಹೇಳಿಕೆ ನೀಡಿದ್ದರು. ಅಲ್-ಅಜ಼ರ್‌ಗೆ ಸಂಬಂಧಿಸಿದ ಮುಫ್ತಿಗಳು ನಿರಪರಾಧಿಗಳ ಕೊಲೆ, ಒತ್ತೆಸೆರೆ ಮುಂತಾದ ಭಯೋತ್ಪಾದಕರ ಕೃತ್ಯಗಳು ಇಸ್ಲಾಮ್ ವಿರೋಧಿಕೃತ್ಯವೆಂದು ಫತ್ವನೀಡಿದ್ದರು.

ಮದ್ರಸಾಗಳ ಸುತ್ತಮುತ್ತ ೩:ಹಳೆಯ ಪಳೆಯ ಸಂಗತಿಗಳು

ಇರಾಕ್ ದೇಶದ ಇತಿಹಾಸ ಪ್ರಸಿದ್ಧ ನಗರ ಬಗ್ದಾದಿನ ಅತ್ಯಂತ ಹಳೆಯ ಮತ್ತು ವಿಶ್ವವಿಖ್ಯಾತ ಇಸ್ಲಾಮಿಕ್ ವಿಶ್ವವಿದ್ಯಾಲಯವೆಂದು ಖ್ಯಾತ ಅಲ್-ನಿಜಾಮಿಯ್ಯ ವಿಶ್ವವಿದ್ಯಾಲಯ ಸ್ಥಾಪನೆಗೊಂಡದ್ದು ಜುಲೈ ೧೦೯೧ರಲ್ಲಿ. ಇಸ್ಮಾಯಿಲಿ (ಷಿಯಾ ಪಂಥದಡಿಯಲ್ಲಿ ಬರುವ ಒಂದು ಪಂಗಡ) ಪಂಥ ಪ್ರಸಿದ್ಧಿಗೆ ಬಂದಂತಹ ಸಂದರ್ಭದಲ್ಲಿ ಇದರ ಪ್ರಭಾವವನ್ನು ಕುಗ್ಗಿಸುವುದಕ್ಕಾಗಿ ಮತ್ತು ಇಸ್ಲಾಮಿಕ್ ತತ್ವಗಳನ್ನು ಹೆಚ್ಚು ಪ್ರಭಾವಶಾಲಿಯಾಗಿ ಪ್ರಚಾರ ಮಾಡುವ ಉದ್ದೇಶದಿಂದ ಈ ವಿದ್ಯಾಕೇಂದ್ರವನ್ನು ಸ್ಥಾಪಿಸಲಾಯಿತೆಂಬ ಹೇಳಿಕೆಗಳು ಪ್ರಚಾರದಲ್ಲಿವೆಯಾದರೂ, ಇದಕ್ಕೆ ಬಲವಾದ ಪುರಾವೆಗಳೇನೂ ಸಿಗುತ್ತಿಲ್ಲ. ಈ ಸಂಸ್ಥೆ ಪ್ರಖ್ಯಾತವಾಗಲು ಇಲ್ಲಿ ಬೋಧಿಸಲಾಗುವ ಉಚ್ಛಮಟ್ಟದ ವಿದ್ಯಾಭ್ಯಾಸ ಕ್ರಮ ಮತ್ತು ಇಸ್ಲಾಮಿಕ್ ಧಾರ್ಮಿಕ ಪಂಡಿತರಲ್ಲಿ ಇಂದಿಗೂ ಅತ್ಯಂತ ಪ್ರಮುಖರೆನಿಸಿದ ಹೆಸರಾಂತ ವಿದ್ವಾಂಸರು ಇಲ್ಲಿ ಅಧ್ಯಾಪಕರಾಗಿ ಮತ್ತು ಪ್ರಾಧ್ಯಾಪಕರಾಗಿ ಕೆಲಸಮಾಡಿದರೆಂಬ ಮುಖ್ಯ ಕಾರಣಕ್ಕೆ. ಬಗ್ದಾದ್ ಕೂಡ ಇಸ್ಲಾಮಿಕ್ ಇತಿಹಾಸದಲ್ಲಿ ಅತ್ಯಂತ ಪ್ರಖ್ಯಾತ ನಗರವಾಗಿದ್ದು, ಇಲ್ಲಿನ ಖಲೀಫಾಗಳು (ಅರಸರು), ಸೂಫಿ ಉಲೇಮಾಗಳು, ಧಾರ್ಮಿಕ ಪಂಡಿತರಲ್ಲಿ ಅನೇಕರು ವಿಶ್ವವಿಖ್ಯಾತರಾಗಿದ್ದರು. ಇಲ್ಲಿನ ಇಸ್ಲಾಮಿಕ್ ವಿದ್ಯಾಭ್ಯಾಸ, ಅಧ್ಯಾತ್ಮ, ಸಂಸ್ಕೃತಿ ಮತ್ತು ಸಮೃದ್ಧಿ ವಿಶ್ವದಲ್ಲಿ ಅತ್ಯಂತ ಪ್ರಸಿದ್ಧವಾದದ್ದು. ಈ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿದ ನಿಜಾಮುಲ್ ಮುಲ್ಕ್ ಎಂಬ ಇಲ್ಲಿನ ಖಲೀಫಾ ಇಂದಿಗೂ ಹಲವು ಹದೀಸ್ ಗ್ರಂಥಗಳನ್ನು ಬರೆದು ಅತ್ಯಂತ ಪ್ರಸಿದ್ಧರಾಗಿರುವ ಇಮಾಮ್ ಅಲ್-ಗಝ್ಝಾಲಿ (ಲೇಖನದ ಆರಂಭದಲ್ಲಿ ಹೇಳಲಾದ) ಇಸ್ಲಾಮಿಕ್ ಪಂಡಿತರನ್ನು ಇಲ್ಲಿನ ಇಮಾಮ್ ಅಥವಾ ಪ್ರಾಚಾರ್ಯರನ್ನಾಗಿ ನೇಮಿಸಿದ್ದ. ಪರ್ಸಿಯನ್ ಭಾಷೆಯ ಪ್ರಖ್ಯಾತ ಕವಿ ಸಅದಿ ಈ ವಿಶ್ವವಿದ್ಯಾಲಯದಲ್ಲಿ ಕಲಿತಿದ್ದ. ಬರ್‌ಬರ್ ಅಲ್ಮೊಹತ್ ವಂಶದ ಅರಸ ಇಬ್ನ್ ತುಮರ್ತ್ ಕೂಡ ಇಮಾಮ್ ಅಲ್ ಗಝ್ಝಾಲಿಯವರ ವಿದ್ಯಾರ್ಥಿಯಾಗಿ ೧೦೯೬ರಲ್ಲಿ ಈ ಸಂಸ್ಥೆಯಲ್ಲಿ ಕಲಿತಿದ್ದ. ಈ ವಿಶ್ವವಿದ್ಯಾಲಯದ ಆಡಳಿತದಲ್ಲಿ ಇರುವ ಮದ್ರಸಾಗಳ ಸಂಖ್ಯೆ ಮತ್ತು ವಿದ್ಯಾರ್ಥಿಗಳ ಸಂಖ್ಯೆಯನ್ನು ಗಮನಿಸಿದಾಗ ಮಧ್ಯಪೂರ್ವ ಏಷ್ಯಾದ ಅತಿದೊಡ್ಡ ವಿಶ್ವವಿದ್ಯಾಲಯವೆಂಬ ಖ್ಯಾತಿಯನ್ನು ಸಹಜವಾಗಿ ಪಡೆದಿದೆಯೆನ್ನಬಹುದು. ಈ ವಿದ್ಯಾಸಂಸ್ಥೆಯ ಶಾಖೆಗಳು ನಿಶಾಪುರ್, ಇಸ್ಫಾನ್, ಹೇರಾತ್, ಬಾಲ್ಕ್ ಮುಂತಾದ ಕಡೆಗಳಲ್ಲಿದ್ದು ಯುರೋಪಿನಲ್ಲಿ ಧಾರ್ಮಿಕ ವಿದ್ಯಾಭ್ಯಾಸದ ಅತ್ಯಂತ ಆಕರ್ಷಣೀಯ ಸಂಸ್ಥೆಯೆಂಬ ಗೌರವವನ್ನು ಪಡೆದಿತ್ತು.

ಷಿಯಾ ಮುಸ್ಲಿಮ್ ಪಂಥದ ತತ್ವಗಳನ್ನು ತನ್ನ ಪ್ರಸಿದ್ಧ ಪರ್ಸಿಯನ್ ಗ್ರಂಥ ‘ಸಿಯಾಸತ್‌ನಾಮಾ'(ರಾಜಕೀಯ ಗ್ರಂಥ)ದ ಒಂದು ಅಧ್ಯಾಯದಲ್ಲಿ ಟೀಕಿಸಿದ ಈ ವಿಶ್ವವಿದ್ಯಾಲಯದ ಸ್ಥಾಪಕ ನಿಜಾಮುಲ್ ಮುಲ್ಕ್‌ನನ್ನು ಬಗ್ದಾದಿನ ಇಸ್ಫಾನ್ ಪ್ರದೇಶದ ಪ್ರಯಾಣದಲ್ಲಿದ್ದಾಗ ಷಿಯಾ ಮುಸ್ಲಿಮರ ಹಶ್ಶಾಶಿನ್ ಎಂಬ ಸಂಘಟನೆಯ ಸದಸ್ಯನೊಬ್ಬ ೧೦೯೨ರಲ್ಲಿ ಕೊಲೆಮಾಡಿದ್ದ. ೧೨೫೮ರಲ್ಲಿ ಮಂಗೊಲರು ಬಗ್ದಾದಿನ ಮೇಲೆ ಧಾಳಿ ಮಾಡಿದಾಗ ಈ ವಿಶ್ವವಿದ್ಯಾಲಯವು ಅನೇಕ ಸಂಕಷ್ಟಗಳನ್ನು ಎದುರಿಸಬೇಕಾಗಿಬಂದಿತ್ತು.

ಭಾರತದ ದಾರುಲ್ ಉಲೂಮ್ ಮದ್ರಸಾ ದಾರುಲ್ ಉಲೂಮ್
ದಾರುಲ್ ಉಲೂಮ್ ಎಂಬ ಹೆಸರಿನ ಇತಿಹಾಸ ಪ್ರಸಿದ್ಧ ಮದ್ರಸಾ ಉತ್ತರಪ್ರದೇಶದ ದೇವಬಂದ್‌ನಲ್ಲಿ ೧೮೬೬ರಲ್ಲಿ ಹಲವಾರು ಸುನ್ನಿ ಉಲೇಮಾಗಳು ಸೇರಿ ಸ್ಥಾಪಿಸಿದ್ದರು. ಇವರ ಪೈಕಿ ಮುಖ್ಯರಾದವರು ಮೌಲಾನಾ ಮುಹಮ್ಮದ್ ಖಾಸಿಮ್ ನಾನೌತಾವಿಯವರು, ಮೌಲಾನಾ ರಾಶಿದ್ ಅಹ್ಮದ್ ಗಂಗೋಹಿ ಮತ್ತು ಹಾಜಿ ಸೈಯದ್ ಆಬಿದ್ ಹುಸೈನ್‌ರವರು. ಈ ಸಂಸ್ಥೆಯನ್ನು ಇಸ್ಲಾಮಿಕ್ ತತ್ವಗಳನ್ನು ಕಡೆಗಣಿಸದೆ, ಅಪ್ಪಟ ಭಾರತೀಯ ಇಸ್ಲಾಮ್ ಸಂಸ್ಕೃತಿಗೆ ಅನುಗುಣವಾಗಿ, ಸೂಫಿ ಪಂಥದ ಅಧ್ಯಾತ್ಮ ಪರಂಪರೆಗೆ ನಿಷ್ಠವಾಗಿ ಕಟ್ಟಿದ್ದರು. ಈ ಕಾಲಘಟ್ಟದಲ್ಲಿ ನಡೆದ ಸಿಪಾಯಿದಂಗೆಯಲ್ಲಿ (೧೮೫೭) ನಡೆದ ಬ್ರಿಟೀಷರ ಆಳ್ವಿಕೆಯ ವಿರುದ್ಧದ ಪ್ರತಿಭಟನೆಯ ಕೆಚ್ಚು ಉತ್ತರಭಾರತದಲ್ಲಿ ಸರ್ವವ್ಯಾಪಿಯಾಗಿದ್ದು ಮುಸ್ಲಿಮರ ಮನಸ್ಸು ಭಾರತ ಸ್ವಾತಂತ್ರ್ಯಸಂಗ್ರಾಮದಲ್ಲಿ ಗಾಢವಾಗಿ ಮುಳುಗಿತ್ತು. ಈ ಸಂದರ್ಭದಲ್ಲಿ ದಾರುಲ್ ಉಲೂಮಿನ ಸ್ಥಾಪನೆಯ ಜೊತೆಗೆ ಬ್ರಿಟೀಷರ ದಮನಕಾರಿ ಪ್ರವೃತ್ತಿಯ ವಿರುದ್ಧದ ಆಕ್ರೋಶ, ರಾಷ್ಟ್ರೀಯತೆಯ ಕೆಚ್ಚು ಕೂಡ ಸ್ಥಾಪಕರಾದ ಉಲೇಮಾಗಳಮೇಲೆ ಪ್ರಭಾವ ಬೀರಿತ್ತು. ೧೮೫೭ರಲ್ಲಿ ಸಿಪಾಯಿದಂಗೆ ಎದ್ದು ಬ್ರಿಟೀಷರ ವಿರುದ್ಧ ದೆಹಲಿಯ ಕೊನೆಯ ಮೊಗಲ್ ಚಕ್ರವರ್ತಿ ಬಹದ್ದೂರ್ ಷಾ ಜಫರ್‌ನನ್ನು ನಾಯಕನನ್ನಾಗಿ ಘೋಷಿಸಿ, ದೆಹಲಿಯ ಸಿಂಹಾಸನವನ್ನು ಮತ್ತೆ ಮುಂದುವರಿಸುವ ಯೋಜನೆಯನ್ನು ಸ್ವಾತಂತ್ರ್ಯ ಹೋರಾಟಗಾರರು ರೂಪಿಸಿದ್ದರಾದರೂ ಪ್ರಯತ್ನ ಫಲಿಸಲಿಲ್ಲ. ಈ ಸೋಲಿನಲ್ಲೂ ಕೂಡ ದೇಶಪ್ರೇಮಿಗಳ ಕೆಚ್ಚು ಆರಿರಲಿಲ್ಲ. ೧೮೬೬ರ ಮೇ ೨೧ರಂದು ಈ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದ್ದ ಮೌಲನಾಗಳನ್ನು ಸಂಘಟಿಸಿ, ಮೌಲಾನಾ ಮುಹಮ್ಮದ್ ಖಾಸಿಮ್ ನಾನೌತಾವಿಯವರ ನೇತೃತ್ವದಲ್ಲಿ ಮುಂದಿನ ಪೀಳಿಗೆಯ ಮೌಲಾನಾಗಳಿಗೆ ಸರಿಯಾದ ಮಾರ್ಗದರ್ಶನ, ಧಾರ್ಮಿಕ ತರಬೇತಿ, ಜ್ಞಾನಾರ್ಜನೆಯ ಉದ್ದೇಶದಿಂದ ‘ದಾರುಲ್ ಉಲೂಮ್ ಮದ್ರಸಾ’ವನ್ನು ದೇವಬಂದ್‌ನಲ್ಲಿ ಸ್ಥಾಪಿಸಿದರು.

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದ ಉದ್ದಕ್ಕೂ ಜಾತ್ಯತೀತ ಸಂಘಟನೆಗಳ ಜೊತೆ ಸೇರಿ ಈ ವಿದ್ಯಾಸಂಸ್ಥೆಗೆ ಸೇರಿದ ಉಲೇಮಾಗಳು ಭಾಗವಹಿಸಿದ್ದರು. ಮುಸ್ಲಿಮ್ ಲೀಗ್ ಜನರನ್ನು ಮತಾಂಧತೆಯ ಕರೆನೀಡಿದಾಗಲೂ ಕೂಡ ಈ ಉಲೇಮಾಗಳು ವಿಚಲಿತರಾಗಿರಲಿಲ್ಲ. ಈ ಇತಿಹಾಸಪ್ರಸಿದ್ಧ ಮದ್ರಸಾ ಇಸ್ಲಾಮಿಕ್ ತತ್ವಪ್ರಚಾರ, ಇಸ್ಲಾಮಿಕ್ ಜ್ಞಾನಪ್ರಸಾರಕ್ಕೆ ಹೆಸರಾಗಿರುವಂತೆಯೇ ಭಾರತದ ಸ್ವಾತಂತ್ರ್ಯಸಂಗ್ರಾಮದಲ್ಲಿ ಮಹತ್ವವಾದ ಪಾತ್ರವಹಿಸಿದ ಗೌರವಕ್ಕೆ ಕೂಡ ಪಾತ್ರವಾಗಿದೆ. ಮಹಮ್ಮದಾಲಿ ಜಿನ್ನಾ ಮುಸ್ಲಿಮ್ ಲೀಗಿನ ಜೊತೆಗೆ ಸೇರಿ ಧರ್ಮಾಧಾರಿತ ನೆಲೆಯಲ್ಲಿ ದೇಶವನ್ನು ಒಡೆಯುವ ಸಂಚನ್ನು ಹೂಡಿ, ಪಾಕಿಸ್ತಾನದ ಬೇಡಿಕೆಯನ್ನು ಮುಂದಿಟ್ಟಾಗ ಈ ಮದ್ರಸಾದ ಪೋಷಕರು, ವಿದ್ಯಾರ್ಥಿಗಳು ಮತ್ತು ಉಲೇಮಾಗಳು ಬಲವಾಗಿ ವಿರೋಧಿಸಿದ್ದರು. ಷೇಖುಲ್ ಹದೀಸ್ ಎಂಬ ಬಿರುದಾಂಕಿತ ಖ್ಯಾತ ಇಸ್ಲಾಮಿಕ್ ಪಂಡಿತ ಮತ್ತು ಈ ಮದ್ರಸಾದ ಹದೀಸ್ ವಿಭಾಗದ ಮುಖ್ಯಸ್ಥರಾಗಿದ್ದ ಮೌಲಾನಾ ಹುಸೈನ್ ಅಹ್ಮದ್ ಮದನಿ ದೇಶದ ಹಿಂದು ಮುಸ್ಲಿಮರನ್ನು ಒಡೆದು ಪಾಕಿಸ್ತಾನವನ್ನು ಸ್ಥಾಪಿಸುವುದನ್ನು ಬಲವಾಗಿ ವಿರೋಧಿಸಿದ್ದ ಅಂದಿನ ಉಲೇಮಾಗಳಲ್ಲಿ ಮುಖ್ಯರಾಗಿದ್ದರು. ಈ ಸಂಸ್ಥೆಯ ಜೊತೆ ನಿಕಟ ಸಂಪರ್ಕವನ್ನು ಹೊಂದಿ ರಾಷ್ಟ್ರೀಯ ಚಳವಳಿಯಲ್ಲಿ ಸಕಾರಾತ್ಮಕವಾಗಿ ಭಾಗವಹಿಸಿದ್ದ ‘ಜಮಾಯತೆ ಉಲೇಮಾ ಎ ಹಿಂದ್’ ಸಂಸ್ಥೆಯ ನೇತಾರರಾಗಿ ಕೂಡ ಮೌಲಾನಾ ಹುಸೈನ್ ಅಹ್ಮದ್ ಮದನಿ ಪ್ರಖ್ಯಾತರಾಗಿದ್ದರು. “ಭಾರತದಲ್ಲಿ ಸ್ವತಂತ್ರ ಪ್ರಜಾಪ್ರಭುತ್ವ ಸರಕಾರವನ್ನು ಸ್ಥಾಪಿಸುವುದಕ್ಕೆ ಹಿಂದೂ, ಮುಸ್ಲಿಮ್, ಕ್ರೈಸ್ತ, ಸಿಖ್ ಎಲ್ಲರೂ ಒಂದಾಗಬೇಕು. ಈ ರೀತಿಯ ದೇಶದ ಪ್ರಜೆಗಳ ಒಗ್ಗಟ್ಟು ಇಸ್ಲಾಮ್ ತತ್ವಬೋಧನೆಗೆ ಅನುಗುಣವಾದದ್ದು” ಎಂದು ಇವರು ಹೇಳಿಕೆ ನೀಡಿದ್ದರು. ಇತಿಹಾಸದುದ್ದಕ್ಕೂ ಈ ಧಾರ್ಮಿಕ ವಿದ್ಯಾಸಂಸ್ಥೆ ಇಸ್ಲಾಮಿಕ್ ತತ್ವಗಳಿಗೆ ಬದ್ಧವಾಗಿದ್ದುಕೊಂಡು ಕೂಡ ಧಾರ್ಮಿಕ ಉಗ್ರವಾದವನ್ನು ಖಂಡಿಸುತ್ತಾ ಬಂದಿದೆ. ಭಯೋತ್ಪಾದನೆಯನ್ನು ಇಸ್ಲಾಮಿಕ್ ತತ್ವಗಳಿಗೆ ವಿರೋಧವಾದದ್ದೆಂದು ನಿರಪರಾಧಿಗಳ ಸಾಮೂಹಿಕ ಕೊಲೆಯನ್ನು ಖಂಡಿಸುವ ಫತ್ವಾವನ್ನು ಈ ಮದ್ರಸಾ ನೀಡಿದೆ.

ದಾರುಲ್ ಉಲೂಮ್ ಮದ್ರಸಾದ ಸ್ಥಾಪಕರಲ್ಲೊಬ್ಬರಾದ ಮೌಲಾನಾ ನಾನೌತಿಯವರು ಧಾರ್ಮಿಕ ವಿದ್ಯೆಯ ವಿವಿಧ ಹಂತಗಳನ್ನು ರೂಪಿಸಿ ಮದ್ರಸಾಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ತರಬೇತಿ ಕಕ್ಷೆಗಳನ್ನು ತೆರೆಯುವ ಕ್ರಮವನ್ನು ರೂಢಿಗೆ ತಂದರು. ಹನಫಿ ಪಂಗಡದ ಪರಂಪರೆಗಳಿಗೆ ಅನುಗುಣವಾಗಿ ಪಾಠಕ್ರಮ, ಪಠ್ಯಕ್ರಮಗಳನ್ನು, ಪರೀಕ್ಷಾ ಪದ್ಧತಿ, ಪ್ರತಿಭಾ ಪುರಸ್ಕಾರ ಮುಂತಾದುವನ್ನು ಅಳವಡಿಸಿದರು. ಕುರಾನ್ ಪಾಠಗಳ ಜೊತೆಗೆ ಅರಬಿ, ಫಾರಸಿ, ಉರ್ದು ಭಾಷೆಗಳ ಕಲಿಕೆಯ ವ್ಯವಸ್ಥೆಯನ್ನು ಮಾಡಿದ್ದರು. ಸರಕಾರ ಮತ್ತು ರಾಜಕೀಯದಿಂದ ಮುಕ್ತವಾತಾವರಣದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕಲಿಸುವ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಯಿತು. ಸಾಮಾನ್ಯ ಜನರ ದೇಣಿಗೆ, ಜಕಾತ್ (ದಾನ), ಕೊಡುಗೆಗಳ ಬಲದಲ್ಲಿ ಈ ಸಂಸ್ಥೆಯನ್ನು ಕಟ್ಟಿಬೆಳೆಸಲಾದುದರಿಂದ ಕೂಡ ಇಸ್ಲಾಮಿಕ್ ವಲಯದಲ್ಲಿ ವಿಶೇಷ ಮಹತ್ವವನ್ನು ಪಡೆದಿದೆ.

ಜಾಮಿಯಾ ನಿಜಾಮಿಯಾ, ಹೈದರಾಬಾದ್ಭಾರತದಲ್ಲಿ ಧರ್ಮ ಜಿಜ್ಞಾಸೆಯುಂಟಾಗುವ ಸಂದರ್ಭದಲ್ಲಿ ಹನಫಿ ಪಂಗಡದ ಧಾರ್ಮಿಕ ಅಭಿಪ್ರಾಯ(ಫತ್ವಾ) ಕರಾರುವಾಕ್ಕಾಗಿ ನೀಡುವ ಪ್ರಮುಖ ಕೇಂದ್ರಗಳಲ್ಲಿ ದಾರುಲ್ ಉಲೂಮ್ ಒಂದು. ಭಯೋತ್ಪಾದನೆಯನ್ನು ಬಹುಷಃ ಫತ್ವಾನೀಡಿ ನೇರವಾಗಿ ಖಂಡಿಸಿದ್ದ ಮೊದಲ ಸಂಸ್ಥೆಯಿದು. ಆದರೆ ಈ ಸಂಸ್ಥೆ ನೀಡಿದ ಫತ್ವಾಗಳೆಲ್ಲವೂ ನಿರ್ವಿವಾದವಾದವುಗಳಲ್ಲ. ಉದಾ. ಕೆಲವು ವರ್ಷಗಳ ಹಿಂದೆ ಈ ಸಂಸ್ಥೆಯ ಮುಫ್ತಿಗಳು ಇಮ್ರಾನಾ ಪ್ರಕರಣದಲ್ಲಿ ನೀಡಿದ ಫತ್ವಾ ದೇಶವಿದೇಶಗಳಲ್ಲಿ ಬಹಳಷ್ಟು ವಿರೋಧವನ್ನು ಎದುರಿಸಬೇಕಾಯಿತು.

ದೇವಬಂದ್‌ನ ಈ ಮದ್ರಸಾ ೧೭ನೇ ಶತಮಾನದ ದರ್ಸ್-ಎ-ನಿಜಾಮಿ ಪಠ್ಯಕ್ರಮವನ್ನು ಅವಲಂಬಿಸಿದ್ದು, ಕುರಾನ್ ಪಠಣ, ದೀನಿಯಾತ್ ಜೊತೆಗೆ ಇಸ್ಲಾಮಿಕ್ ಕಾನೂನು(ಷರೀಯ), ಇಸ್ಲಾಮಿಕ್ ನ್ಯಾಯಶಾಸ್ತ್ರ(ಫಿಕ್ಹ್), ಇಸ್ಲಾಮಿಕ್ ಅಧ್ಯಾತ್ಮ(ತಸವ್ವುಫ್) ಅಥವಾ ಸೂಫಿ ಪಂಥದ ತತ್ವಗಳು ಮುಖ್ಯ ಪಠ್ಯಗಳು ವಿದ್ಯಾರ್ಥಿಗಳಿಗೆ ಬೋಧಿಸಲಾಗುತ್ತಿತ್ತು. ಈ ಮದ್ರಸಾದಲ್ಲಿ ಕಲಿಯಲು ಭಾರತದಿಂದ ಮಾತ್ರವಲ್ಲ ವಿದೇಶಗಳಿಂದಲೂ ವಿದ್ಯಾರ್ಥಿಗಳು ಬರುತ್ತಾರೆ. ಈ ಮದ್ರಸಾದ ಪ್ರಭಾವ ಭಾರತದ ಮದ್ರಸಾಗಳ ಮೇಲೆ ಮಾತ್ರವಲ್ಲ, ಪಾಕಿಸ್ತಾನ, ಅಫಘಾನಿಸ್ತಾನ, ಬಂಗ್ಲಾದೇಶ, ದಕ್ಷಿಣ ಆಫ್ರಿಕಾ ಮುಂತಾದ ಹಲವು ದೇಶಗಳ ಮದ್ರಸಾಗಳ ಮೇಲೆ ಬೀರಿದೆ. ೧೯೯೬ರಿಂದ ಇಲ್ಲಿ ಇಂಗ್ಲಿಷ್ ಭಾಷಾ ಕಲಿಕೆ ಮತ್ತು ಕಂಪ್ಯೂಟರ್ ಕಲಿಕೆ ಪಠ್ಯಕ್ರಮಗಳಲ್ಲಿ ಸೇರಿಸಲಾಗಿದೆ. ಅರಬಿಕ್ ಭಾಷೆಯ ಬಿ.ಎ., ಎಂ.ಎ. ಪದವಿ ಕೂಡ ಇಲ್ಲಿ ನೀಡಲಾಗುತ್ತಿದೆ.

ಹೈದರಾಬಾದಿನ ಜಾಮಿಯ ನಿಜಾಮಿಯ
ಅಹ್ಲ್ ಸುನ್ನತ್ ವಲ್ ಜಮಾತ್ (ಸುನ್ನಿ) ಪಂಗಡದ ಪಥದಲ್ಲಿ ಸಾಗುತ್ತಿರುವ ಭಾರತ ಹಳೆಯ ಇಸ್ಲಾಮಿಕ್ ಪರಂಪರೆಗೆ ಸೇರಿದ ಮಹತ್ವದ ಮದ್ರಸಾಗಳ ಪೈಕಿ ಜಾಮಿಯ ನಿಜಾಮಿಯ ಕೂಡ ಒಂದು. ೧೮೭೬ರಲ್ಲಿ ಷೇಖುಲ್ ಇಸ್ಲಾಮ್ ಖ್ಯಾತಿಯ ಮುಹಮ್ಮದ್ ಅಸದುಲ್ಲಾ ಖಾನ್ ಫಾರೂಕಿ ಸ್ಥಾಪಿಸಿದರು. ಆಗಿನ ಏಳನೇ ನಿಜಾಮ್ ಮೀರುಸ್ಮಾನ್ ಅಲಿ ಖಾನ್‌ರವರು ಈ ಸಂಸ್ಥೆಯ ಪೋಷಕರಾಗಿದ್ದರು. ೧೩೪ ವರ್ಷಗಳಿಂದ ಈ ವಿಶ್ವವಿದ್ಯಾಲಯ ಇಸ್ಲಾಮಿಕ್ ವಿದ್ಯಾಭ್ಯಾಸವನ್ನು ಬೋಧಿಸುತ್ತಾ ‘ಮೌಲವಿ’, ‘ಆಲಿಮ್’, ‘ಫಾಝಿಲ್’ ಮತ್ತು ‘ಕಾಮಿಲ್’ ಮುಂತಾದ ಪದವಿಗಳನ್ನು ಅರ್ಹ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿದೆ. ಆದರೆ ಈ ಪದವಿಗಳ ಜೊತೆಗೆ ಆಧುನಿಕ ವಿದ್ಯಾಭ್ಯಾಸದ ಪಠ್ಯಕ್ರಮಗಳಿಗೆ ಕೂಡ ಮಹತ್ವವನ್ನು ನೀಡುತ್ತ ಬಂದಿದೆ. ಈ ವಿಶ್ವವಿದ್ಯಾಲಯ ದೇಶದ ೧೯೫೬ನಲ್ಲಿ ಸ್ಥಾಪಿಸಲಾದ ಯುನಿವರ್ಸಿಟಿ ಗ್ರ್ಯಾಂಟ್ ಕಮೀಷನ್‌ನ ವ್ಯಾಪ್ತಿಗೆ ಬಂದಿಲ್ಲ. ಇದಕ್ಕೆ ಎಲ್ಲ ಮದ್ರಸಾ ವಿಶ್ವವಿದ್ಯಾಲಯಗಳಂತೆ ಸರಕಾರದ ಯಾವುದೇ ಧನಸಹಾಯವನ್ನು ಸ್ವೀಕರಿಸದಿರುವ ತತ್ವಕ್ಕೆ ಬದ್ಧರಾಗಿರುವುದು ಮುಖ್ಯ ಕಾರಣವಾಗಿದೆ. ಆದರೂ ಇಲ್ಲಿ ನೀಡುವ ಕೆಲವು ಪದವೀಧರರನ್ನು ತಮ್ಮ ಯುನಿವರ್ಸಿಟಿಯಲ್ಲಿ ಸ್ವೀಕರಿಸುವ ಅವಕಾಶವನ್ನು ಕೆಲವು ವಿಶ್ವವಿದ್ಯಾಲಯಗಳಲ್ಲಿ ಕಲ್ಪಿಸಿಕೊಡಲಾಗಿದೆ. ಉದಾ: ಇಲ್ಲಿನ ಫಾಝಿಲ್ ಪದವೀಧರರನ್ನು ಆಧುನಿಕ ವಿದ್ಯಾಭ್ಯಾಸದ ಎಂ.ಎ. ಪದವಿಗೆ ಸೇರಿಸಿಕೊಳ್ಳಲು ಉಸ್ಮಾನಿಯ ಯುನಿವರ್ಸಿಟಿಯಲ್ಲಿ ಅವಕಾಶ ಕಲ್ಪಿಸಿಕೊಡಲಾಗಿದೆ.

ಜಾಮಿಯ ನಿಜಾಮಿಯ ಒಂದು ಮಹಿಳಾ ಕಾಲೇಜನ್ನೂ ನಡೆಸುತ್ತಿದೆ. ಇದರಲ್ಲಿ ಮಹಿಳೆಯರು ಎಲ್ಲ ತರದ ವಿದ್ಯಾಭ್ಯಾಸವನ್ನು ಪಡೆಯುತ್ತಿದ್ದಾರೆ. ಈ ವಿಶ್ವವಿದ್ಯಾಲಯವು ದೆಹಲಿಯ ಅಲಿಘರ್ ಮುಸ್ಲಿಮ್ ಯುನಿವರ್ಸಿಟಿ, ಈಜಿಪ್ಟಿನ ಅಲ್-ಅಜ಼ರ್, ಮಕ್ಕಾದ ಜಾಮಿಯ ಉಮ್ಮ್ ಅಲ್ ಕರಾ, ಮದೀನಾ ಇಸ್ಲಾಮಿಕ್ ಯುನಿವರ್ಸಿಟಿ, ಕುವೈತ್ ಯುನಿವರ್ಸಿಟಿ ಮುಂತಾದ ವಿಶ್ವದ ಖ್ಯಾತ ಇಸ್ಲಾಮಿಕ್ ವಿಶ್ವವಿದ್ಯಾಲಯಗಳ ಮಾನ್ಯತೆ ಪಡೆದಿದೆ. ಈ ವಿಶ್ವವಿದ್ಯಾಲಯವು ಸುಮಾರು ಒಂದು ಸಾವಿರದಷ್ಟು ಹನಫಿ ಪಂಗಡದ ವಿಚಾರಗಳನ್ನೊಳಗೊಂಡ ಇಸ್ಲಾಮಿಕ್ ಧಾರ್ಮಿಕ ಪುಸ್ತಕಗಳನ್ನು ಪ್ರಕಟಿಸಿದೆ. ಈ ವಿದ್ಯಾಸಂಸ್ಥೆಗೆ ಸೇರಿದ ಧಾರ್ಮಿಕ ಪಂಡಿತರು ಮುಫ್ತಿಗಳು ಹಲವು ಕ್ಲಿಷ್ಟ ಧರ್ಮ ಸೂಕ್ಷ್ಮ ವಿಚಾರಗಳನ್ನೊಳಗೊಂಡ ಸಾಧಾರಣ ಎರಡು ಸಾವಿರ ಭಿನ್ನ ವಿಚಾರಗಳ ಫತ್ವಾಗಳನ್ನು ನೀಡಿದ್ದಾರೆ. ಇವುಗಳಲ್ಲಿ ಕೆಲವು ಮಹತ್ವವಾದ ವಿಚಾರಗಳೆನಿಸಿದ್ದು, ಇನ್ನಿತರ ಕೆಲವು ವಿವಾದಾತ್ಮಕವೂ ಆಗಿವೆ. ಭಯೋತ್ಪಾದಕರ ಆತ್ಮಹತ್ಯಾ ಧಾಳಿಯನ್ನು ಇಸ್ಲಾಮ್ ವಿರೋಧಿಯೆಂದು ಅಕ್ಟೋಬರ್ ೨೦೦೫ರಲ್ಲಿ ನೀಡಿದ ಫತ್ವಾ ಮತ್ತು ೨೦೦೭ರಲ್ಲಿ ಮುಸ್ಲಿಮ್ ಸಮಾಜವನ್ನು ಜಾತಿವಾರು ವಿಂಗಡಿಸಿ ಆಂಧ್ರಪ್ರದೇಶ ಸರಕಾರರ ಹೊರಡಿಸಿದ ವಿದ್ಯಾಸಂಸ್ಥೆಗಳಲ್ಲಿ ಉದ್ಯೋಗದಲ್ಲಿ ಮೀಸಲಾತಿ ನೀಡುವ ಆದೇಶದ ವಿರುದ್ಧ ನೀಡಿದ ಫತ್ವಾಗಳು ಮುಖ್ಯವಾಗಿವೆ.

ಕೇರಳದ ಪೊನ್ನಾನಿ ಮದ್ರಸಾ
ದಕ್ಷಿಣ ಭಾರತದ ಮದ್ರಸಾಗಳಲ್ಲಿ ಪ್ರಮುಖ ಮತ್ತು ಅತ್ಯಂತ ಹಳೆಯದೆನಿಸಿದ ಪೊನ್ನಾನಿ ಮದ್ರಸಾ ಕೇರಳದ ಮಲಪ್ಪುರಂ ಜಿಲ್ಲೆಗೆ ಸೇರಿದ ಪೊನ್ನಾನಿಯಲ್ಲಿದೆ. ಇದು ಈಜಿಪ್ಟಿನ ಅಲ್ ಅಜ಼ರ್ ವಿಶ್ವವಿದ್ಯಾಲಯಕ್ಕೆ ಸಮಾನವಾದದ್ದೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಆರನೇ ಶತಮಾನದ ಕೊನೆಯಲ್ಲಿ ಅರೇಬಿಯಾದಿಂದ ಭಾರತಕ್ಕೆ ಕರಾವಳಿಯ ಮೂಲಕ ಇಸ್ಲಾಮ್ ಧರ್ಮ ಪ್ರಚಾರಕ್ಕಾಗಿ ಆಗಮಿಸಿದ ಸೂಫಿ ಸಂತ ಮಾಲಿಕ್ ಇಬ್ನ್ ದೀನಾರ್ ಪೊನ್ನಾನಿಗೆ ಭೇಟಿ ನೀಡಿದ್ದ ಕಾರಣಕ್ಕೂ ಈ ನಗರ ಪ್ರಖ್ಯಾತವಾಗಿದೆ. ಪೊನ್ನಾನಿಗೆ ಹೆಚ್ಚುಕಮ್ಮಿ ೨೦ ಕಿ.ಮೀ. ದೂರದಲ್ಲಿರುವ ಕೊಡಂಗನಲ್ಲೂರಿನಲ್ಲಿ ಈ ಸಂತ ಮಸೀದಿಗೆ ಬುನಾದಿ ಹಾಕಿದ್ದರು. ಪೊನ್ನಾನಿಯಲ್ಲಿರುವ ಜಮಾತ್ ಪಳ್ಳಿ(ಮಸೀದಿ)ಯನ್ನು ೧೬ನೇ ಶತಮಾನದಲ್ಲಿ ಯೆಮನ್ ದೇಶದಿಂದ ಕೇರಳಕ್ಕೆ ವಲಸೆ ಬಂದಿದ್ದ ಮಕ್ದೂಮ್ ಕುಟುಂಬದ ಜೈನುದ್ದೀನ್ ಮಕ್ದೂಮ್ ಕಟ್ಟಿಸಿದರೆಂಬ ಐತಿಹಾಸಿಕ ಉಲ್ಲೇಖವಿದೆ. ಇಲ್ಲಿನ ಪೊನ್ನಾನಿ ಮದ್ರಸಾ ಕೂಡ ಇದೇ ಸಂದರ್ಭದಲ್ಲಿ ಸ್ಥಾಪಿಸಲಾಯಿತು. ಮೂಲದಲ್ಲಿ ಈ ಮಸೀದಿಯನ್ನು ೯೦ X ೬೦’ ವಿಸ್ತೀರ್ಣದಲ್ಲಿ ಕಟ್ಟಲಾಯಿತು. ಜೈನುದ್ದೀನ್ ಮಕ್ದೂಮ್ ಈ ಮಸೀದಿ ಮತ್ತು ಮದ್ರಸಾವನ್ನು ಕಟ್ಟಿಸುವುದಲ್ಲದೆ, ಜೊತೆಗೆ ಹಲವಾರು ಇಸ್ಲಾಮಿಕ್ ವಿಷಯಗಳಿಗೆ ಸಂಬಂಧಿಸಿದ ಗ್ರಂಥಗಳನ್ನು ಬರೆದಿದ್ದರು. ಇವುಗಳಲ್ಲಿ ಕೆಲವು ಗ್ರಂಥಗಳು ಈಜಿಪ್ಟ್ ಮತ್ತು ಅರೇಬಿಯಾದ ಕೆಲವು ಮದ್ರಸಾಗಳಲ್ಲಿ ಪಠ್ಯಪುಸ್ತಕಗಳಾಗಿವೆ. ಪೊನ್ನಾನಿಯ ಮದ್ರಸಾ ಕೇರಳ ರಾಜ್ಯದಲ್ಲಿ ಮಾತ್ರವಲ್ಲ, ಇಂಡೊನೇಷಿಯಾ, ತಮಿಳುನಾಡು, ದೀವ್, ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ಶಾಫಿ ಪಂಗಡದ ಮುಸ್ಲಿಮ್ ಪರಂಪರೆಯ ಪಠ್ಯಕ್ರಮಗಳಿಗಾಗಿ ಪ್ರಖ್ಯಾತ ವಿದ್ಯಾಕೇಂದ್ರವೆನಿಸಿದೆ. ಇಲ್ಲಿ ೧೮೫೭ರಲ್ಲೇ ಹೆಚ್ಚುಕಮ್ಮಿ ೪೦೦ ವಿದ್ಯಾರ್ಥಿಗಳು ದೇಶವಿದೇಶದಿಂದ ಬಂದು ಕಲಿಯುತ್ತಿದ್ದರೆನ್ನಲಾಗಿದೆ. ಇಲ್ಲಿ ಅನೇಕ ಪ್ರಖ್ಯಾತ ಆಲಿಮ್(ಪಂಡಿತರು) ಮೌಲವಿಗಳು, ಸ್ವಾತಂತ್ರ್ಯ ಹೋರಾಟಗಾರು, ಖ್ಯಾತ ರಾಜಕಾರಣಿಗಳು ಮುಖ್ಯವಾಗಿ ಕುಂಞಲಿ ಮುಸ್ಲಿಯಾರ್, ಉಮ್ಮರ್ ಹಾಜಿ, ಷೇಖ್ ಸಯ್ಯದ್ ಹಸನ್ ಜಾಫ್ರಿ, ಅಲಿ ಮುಸ್ಲಿಯಾರ್ ಮುಂತಾದವರು ವಿದ್ಯಾರ್ಥಿಗಳಾಗಿದ್ದರು.ಪೊನ್ನಾನಿ ಮಾಸ್ಕ್

ಮದ್ರಸಾವನ್ನು ಇಲ್ಲಿ ‘ದರ್ಸ್’ ಎಂದು ಕರೆಯಲಾಗಿ ಇಲ್ಲಿ ಕಲಿಸುವ ಅಧ್ಯಾಪಕರನ್ನು ‘ಮುದರ್ರಿಸ್’ ಎಂದು ಕರೆಯಲಾಗುತ್ತದೆ. ಇಲ್ಲಿ ಮಕ್ಕಳಿಗೆ ಇಸ್ಲಾಮಿಕ್ ವಿದ್ಯಾಭ್ಯಾಸದ ಜೊತೆಗೆ ಆಧುನಿಕ ವಿದ್ಯಾಭ್ಯಾಸವನ್ನು ಮಲಯಾಳ ಮಾಧ್ಯಮದ ಶಾಲೆಯಲ್ಲಿ ಕಲಿಯಲು ಅವಕಾಶ ಮತ್ತು ಪ್ರೋತ್ಸಾಹವನ್ನು ನೀಡುತ್ತದೆ. ಮಕ್ಕಳಿಗೆ ಸರಾಸರಿ ೧೨ವರ್ಷ ಪ್ರಾಯದ ತನಕ ಮದ್ರಸಾ ವಿದ್ಯಾಭ್ಯಾಸವನ್ನು ಪಡೆಯುವ ಅವಕಾಶವನ್ನು ಕಲ್ಪಿಸಿಕೊಡುತ್ತದೆ. ಹೀಗೆ ಧಾರ್ಮಿಕ ವಿದ್ಯಾಭ್ಯಾಸ ಮತ್ತು ಸೆಕ್ಯೂಲರ್ ವಿದ್ಯಾಭ್ಯಾಸದ ಮಧ್ಯೆ ಸಾಮರಸ್ಯವನ್ನು ಕಾಯ್ದುಕೊಳ್ಳುವ ಉದ್ದೇಶದಿಂದ ಈ ಪ್ರಾಂತ್ಯದಲ್ಲಿ ‘ಸಮಸ್ತ ಕೇರಳ ಜಮಾಯತುಲ್ ಉಲೇಮಾ’ ಸಂಘಟನೆಯನ್ನು ಸ್ಥಾಪಿಸಲಾಗಿದೆ. ಈ ಸಂಘಟನೆಗೆ ರಾಜ್ಯದ ಎಲ್ಲ ಮದ್ರಸಾಗಳ ಜೊತೆಗೆ ಸಂಪರ್ಕವಿರುತ್ತದೆ. ಇದರಿಂದಾಗಿ ಧಾರ್ಮಿಕ ವಿದ್ಯಾಭ್ಯಾಸ ಮತ್ತು ಆಧುನಿಕ ವಿದ್ಯಾಭ್ಯಾಸಗಳ ನಡುವೆ ಸಾಮರಸ್ಯ ಸ್ಥಾಪಿಸುವುದರಲ್ಲಿ ಯಶಸ್ವಿಯಾಗಿದೆ. ಕೇರಳದಲ್ಲಿ ಮದ್ರಸಾಗಳಲ್ಲಿ ಮಾತ್ರ ಕಲಿಯುವ ಮಕ್ಕಳು ಇಲ್ಲವೇ ಇಲ್ಲವೆನ್ನಬಹುದು. ಎಲ್ಲ ಮಕ್ಕಳು ಆಧುನಿಕ ವಿದ್ಯಾಭ್ಯಾಸವನ್ನು ವಾತಾವರಣ ಇಲ್ಲಿ ಕಡ್ಡಾಯವಾಗಿ ಕಲ್ಪಿಸಲಾಗಿದೆ.

ಪೊನ್ನಾನಿಯ ಮದ್ರಸಾದಲ್ಲಿ ಶಾಫಿ ಪಂಗಡದ ವಿದ್ಯಾಭ್ಯಾಸ ಕ್ರಮಕ್ಕೆ ಸರಿಯಾಗಿ ಮೌಲವಿ, ಸಖಾಫಿ, ಹಾಫಿಸ್, ದಾರಿಮಿ ಮುಂತಾದ ಪದವಿಗಳನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ.

ಮದ್ರಸಾಗಳ ಸುತ್ತಮುತ್ತ ೪: ಮದ್ರಸಾಗಳ ಸುತ್ತ ಯಾಕೆ ಗುಮಾನಿಯ ಹುತ್ತ?

೨೦೦೧ರ ಸೆಪ್ಟಂಬರ್ ೧೧ರಂದು ನ್ಯೂಯಾರ್ಕಿನ ಟ್ರೇಡ್ ಸೆಂಟರಿನ ಅವಳಿ ಕಟ್ಟಡಗಳ ಮೇಲಿನ ದಾಳಿಯ ನಂತರದಲ್ಲಿ ಮಧ್ಯಪೂರ್ವ ಏಷ್ಯಾಗಳಲ್ಲಿನ ಮದ್ರಸಾಗಳ ಮೇಲೆ ಅಮೇರಿಕಾದ ಅನುಮಾನ ಹೆಚ್ಚಿದೆ. ಅಲ್‌ಖಾಯಿದಾ ಮುಂತಾದ ಭಯೋತ್ಪಾದಕ ಸಂಘಟನೆಗಳ ಜೊತೆಗೆ ಮದ್ರಸಾಗಳು ಸೇರಿ ಕೆಲಸಮಾಡುತ್ತಿವೆ ಮಾತ್ರವಲ್ಲ, ಇಲ್ಲಿನ ಕೆಲವು ಮದ್ರಸಾಗಳು ಅಮೇರಿಕಾದ ವಿರುದ್ಧ ಭಯೋತ್ಪಾದಕರಿಗೆ ತರಬೇತಿ ನೀಡುತ್ತಿವೆ ಎಂಬ ಗುಮಾನಿ ಅಮೇರಿಕಾದ ಸರಕಾರಕ್ಕೆ ಬಲವಾಗಿ ಮೂಡಿದೆ. ತಾಲೀಬಾನ್ ಮತ್ತು ಅಲ್‌ಖಾಯಿದಾದ ಕೆಲವು ನಾಯಕರು ಪಾಕಿಸ್ತಾನದ ಮದ್ರಸಾಗಳ ಜೊತೆಗೆ ಸಂಪರ್ಕ ಹೊಂದಿರುವುದು, ಕೊಲ್ಲಿ ರಾಷ್ಟ್ರಗಳಿಂದ ಈ ಮದ್ರಸಾಗಳು ಧನಸಹಾಯ ಪಡೆಯುತ್ತಿರುವುದರ ಬಗ್ಗೆಯೂ ಅಮೇರಿಕಾ ತನಿಖೆ ನಡೆಸುತ್ತಿದೆ.

ಹೆಚ್ಚುಕಮ್ಮಿ ಬಾಯ್ದೆರೆಯಲ್ಲಿರುವ ಧಾರ್ಮಿಕ ಪಾಠಗಳು, ಕುರಾನ್ ಓದು ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಮದ್ರಸಾಗಳಲ್ಲಿ ಕಲಿಸುತ್ತಿದ್ದು, ಅರೆಬಿಕ್ ಅಕ್ಷರಾಭ್ಯಾಸ, ಭಾಷೆಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡದೆ ಇವು ನೀಡುವ ಶಿಕ್ಷಣಪದ್ಧತಿ ಸಾಮಾಜಿಕವಾಗಿ ಹಚ್ಚೇನೂ ಮಹತ್ವವನ್ನು ಪಡೆದಿರಲಿಲ್ಲ. ೧೯ನೇ ಶತಮಾನದಲ್ಲಿ ಆಧುನಿಕ ಶಿಕ್ಷಣಪದ್ಧತಿ ಮಹತ್ವವನ್ನು ಪಡೆಯುತ್ತಿರುವಾಗ ಮುಸ್ಲಿಮರಿಗೂ ಆಧುನಿಕ ವಿದ್ಯಾಭ್ಯಾಸ ಪದ್ಧತಿಯಲ್ಲಿ ಆಕರ್ಷಣೆ ಮೂಡತೊಡಗಿತು. ಇಸ್ಲಾಮಿಕ್ ದೇಶಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಬದಲಾವಣೆ ಮೂಡಿದ್ದರಿಂದ ಮದ್ರಸಾ ವಿದ್ಯಾಭ್ಯಾಸಕ್ಕೆ ಸ್ವಲ್ಪ ಹಿನ್ನಡೆಯುಂಟಾಯಿತು. ೧೯೭೦ರಲ್ಲಿ ಪಾಕಿಸ್ತಾನ, ಇರಾನ್ ಮುಂತಾದ ದೇಶಗಳಲ್ಲಿ ರಾಜಕೀಯ ಬದಲಾವಣೆಯಾದಾಗ ಮದ್ರಸಾ ವಿದ್ಯಾಭ್ಯಾಸಗಳಲ್ಲಿ ಬದಲಾವಣೆಯುಂಟಾಗಿ ಚೈತನ್ಯ ಮೂಡತೊಡಗಿತು. ಮೇರಿ ಆನ್ ಲೀವರ್ ತನ್ನ ‘ಚಿಲ್ಡ್ರನ್ ಆಫ್ ಜಿಹಾದ್’ನಲ್ಲಿ ಹೇಳುವಂತೆ ೧೯೮೦ರಲ್ಲಿ ಅಮೇರಿಕಾದ ಧನಸಹಾಯ ಪಡೆದು ಅಫಘಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಪ್ರದೇಶದ ಮದ್ರಸಾಗಳಿಗೆ ಹೊಸ ಶಕ್ತಿ ಮೂಡಿದಂತಾಯಿತು. ಅಮೇರಿಕಾದ ಕಂಗ್ರೇಶನಲ್ ರಿಸರ್ಚ್ ರಿಪೋರ್ಟ್(ಸಿ.ಆರ್.ಎಸ್) ಪ್ರಕಾರ ಸೋವಿಯತ್ ರಷ್ಯಾ ಅಫಘಾನಿಸ್ತಾನದಲ್ಲಿ ಪ್ರವೇಶಿಸಿ ತಳವೂರಿದಾಗ ಈ ಕಮ್ಯೂನಿಷ್ಟರನ್ನು ಹಿಮ್ಮೆಟ್ಟಿಸಲಿಕ್ಕಾಗಿ ೧೯೮೦ರಲ್ಲಿ ಯೂರೋಪಿಯನ್ ದೇಶಗಳು, ಸೌದಿ ಅರೇಬಿಯಾ, ಅಮೇರಿಕಾ ಮುಂತಾದ ದೇಶಗಳು ಪಾಕಿಸ್ತಾನ-ಅಫಘಾನಿಸ್ತಾನದ ಗಡಿಪ್ರದೇಶಗಳಲ್ಲಿ ಕೆಲವು ಮದ್ರಸಾಗಳಿಗೆ ಧನಸಹಾಯ ನೀಡುವ ಮೂಲಕ ಸೋವಿಯತ್ ವಿರೋಧಿ ಮುಜಾಹಿದೀನ್ ಹೋರಾಟಗಾರರನ್ನು ಸಂಘಟಿಸಿ ಯುದ್ಧದ ತರಬೇತಿ ನೀಡಲಾಯಿತು. ೧೯೯೦ರಲ್ಲಿ ಈ ಮದ್ರಸಾಗಳಲ್ಲಿ ಕಲಿಯುವ ಯುವ ವಿದ್ಯಾರ್ಥಿಗಳು ಅಥವಾ ತಾಲೀಬಾನ್‌ಗಳು ಸೌದಿ ಅರೇಬಿಯಾದ ವಹ್ಹಾಬಿಸಂ ಮತ್ತು ಸಲಫಿಯ್ಯ ತತ್ವಗಳಲ್ಲಿ ವಿಶೇಷ ತರಬೇತಿಯನ್ನು ಪಡೆದು ಇಸ್ಲಾಮಿ ಮೂಲಭೂತವಾದಿ ಮತಾಂಧತೆಯನ್ನು ಮೈಗೂಡಿಸಿಕೊಂಡು ರಾಜಕೀಯವಾಗಿ ಸಶಕ್ತವಾಗಿ ಬೆಳೆಯುವಂತಾಯಿತು. ಅಮೇರಿಕಾ ಮತ್ತಿತರ ಅನೇಕ ಮುಂದುವರಿದ ರಾಷ್ಟ್ರಗಳಿಂದ ಅಪಾರ ಆರ್ಥಿಕಸಹಾಯ ಪಡೆದ ಈ ತಾಲೀಬಾನಿಗಳು ಸೋವಿಯತ್ ಸೈನ್ಯವನ್ನು ಅಫಘಾನಿಸ್ತಾನದ ನೆಲದಿಂದ ಹಿಮ್ಮೆಟ್ಟಿಸಿದ ನಂತರ ರಾಜಕೀಯ ಶಕ್ತಿಯನ್ನು ಪಡೆದುಕೊಂಡವು. ಒಮ್ಮೆ ಸೋವಿಯತ್ ಸೈನ್ಯವನ್ನು ಅಫಘಾನಿಸ್ತಾನದಿಂದ ಹಿಮ್ಮೆಟ್ಟಿಸಿದ ನಂತರ ಅಮೇರಿಕಾ ಮತ್ತು ಮಿತ್ರರಾಷ್ಟ್ರಗಳ ಸೈನ್ಯವೂ ತಮ್ಮ ಉದ್ದೇಶವಾಯಿತೆಂದು ಅಲ್ಲಿಂದ ಕಾಲುಕಿತ್ತ ನಂತರ ತಾಲೀಬಾನಿಗಳಿಗೆ ಹಾದಿ ಸುಗಮವಾಯಿತು. ವಹ್ಹಾಬಿಸಂ ಮತ್ತು ಸಲಫಿಯ್ಯ ಪಂಗಡದ ವಿಚಾರಗಳಿಗೆ ಸರಿಯಾಗಿ ಆಧುನಿಕ ಶಿಕ್ಷಣ, ಆಧುನಿಕ ಅಭಿವೃದ್ಧಿಯ ವಿಧಾನಗಳು, ಪ್ರಜಾಪ್ರಭುತ್ವ ವ್ಯವಸ್ಥೆ, ಸ್ವಾತಂತ್ರ್ಯ, ಮಾನವೀಯ ಹಕ್ಕುಗಳೆಲ್ಲವನ್ನು ದೂರವಿರಿಸಿದ ತಾಲೀಬಾನ್, ಮದ್ರಸಾಗಳನ್ನು ಈ ವಿಚಾರಗಳಿಗೆ ಬದ್ಧವಾಗಿ ನಡೆಸಿ, ರಾಜ್ಯವಾಳುವ ಮೂಲಕ ಅಮಾನವೀಯ ಸಂಸ್ಕೃತಿಯನ್ನು ಮೆರೆಸಿ ವಿಜೃಂಭಿಸಿದರು. ತಾಲೀಬಾನಿಗಳು ಈ ವಿಚಾರಗಳ ತಳಹದಿಯಲ್ಲಿ ಅಫಘಾನಿಸ್ತಾನವನ್ನು ೨೦೦೨ರ ತನಕವೂ ಹೆಚ್ಚುಕಮ್ಮಿ ಆಳಿದರು.

ತಾಲೀಬಾನಿಗೆ ಒಸಾಮ ಬಿನ್ ಲಾದೆನ್ ಮತ್ತು ಅಲ್‌ಖಾಯಿದ ಸೇರಿಕೊಂಡು ಬೆಳೆದ ಶಕ್ತಿಯು ೨೦೦೧ರ ಸೆಪ್ಟೆಂಬರ್ ೧೧ರ ಅಮೇರಿಕಾದ ಟ್ರೇಡ್ ಸೆಂಟರಿನ ಮೇಲಿನ ದಾಳಿಯ ನಂತರ ಅಫಘಾನಿಸ್ತಾನದ ಮೇಲೆ ಅಮೇರಿಕಾದ ವಾಯು ದಾಳಿ ನಡೆದು ಕರ್ಜಾಯಿ ಸರಕಾರ ಸ್ಥಾಪನೆಯಾದ ನಂತರದ ವರ್ಷಗಳಲ್ಲಿ ಕಾಡು ಬೆಟ್ಟಗಳಲ್ಲಿ ಅಡಗಿ ಕೂತು ಗೆರಿಲ್ಲಾ ಯುದ್ಧದಲ್ಲಿ ನಿರತವಾಗಿವೆ. ಕರ್ಜಾಯಿ ಸರಕಾರ ಸ್ಥಾಪನೆಯಾದ ನಂತರದಲ್ಲಿ ಮದ್ರಸಾ ವಿದ್ಯಾಭ್ಯಾಸದ ಜೊತೆಗೆ ಪಾಶ್ಚಿಮಾತ್ಯ ವಿದ್ಯಾಭ್ಯಾಸದ ಒಲವು ಅಫಘಾನಿಸ್ತಾನ ಮಾತ್ರವಲ್ಲ ವಿಶ್ವದೆಲ್ಲೆಡೆ ಇಸ್ಲಾಮಿಕ್ ದೇಶಗಳಲ್ಲಿ ಹೆಚ್ಚತೊಡಗಿತು. ಆದರೆ ಈ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಗಳಲ್ಲಿ ಮುಸ್ಲಿಮರು ಬಡವರಾಗಿರುವುದರಿಂದ ಪಾಶ್ಚಿಮಾತ್ಯ ವಿದ್ಯಾಭ್ಯಾಸಕ್ಕೆ ತಗಲುವ ವಿಪರೀತ ವೆಚ್ಚವನ್ನು ಭರಿಸಲು ಅಶಕ್ತರಾದುದರಿಂದ, ವಿದ್ಯಾಸಂಸ್ಥೆಗಳ ಕೊರತೆಯಿಂದಾಗಿ ತಮ್ಮ ಮಕ್ಕಳನ್ನು ಯಾವುದೇ ಖರ್ಚುವೆಚ್ಚಗಳಿಲ್ಲದ ಮದ್ರಸಾ ವಿದ್ಯಾಭ್ಯಾಸಕ್ಕೆ ಕಳುಹಿಸುವ ಅನಿವಾರ್ಯತೆ ಇತ್ತು ಮತ್ತು ಇವರ ಸಂಖ್ಯೆ ಹೆಚ್ಚಿತ್ತು. ಇಲ್ಲಿನ ಸರಕಾರಗಳು ಈ ಸಮಸ್ಯೆಯನ್ನು ಕಂಡುಕೊಂಡು ಪರಿಹಾರ ಕ್ರಮವಾಗಿ ಶಾಲೆಗಳನ್ನು ತೆರೆಯಲು ಕಟ್ಟಡಗಳನ್ನು ಕಟ್ಟಿಸತೊಡಗಿದರು. ಕೆಲವೆಡೆಗಳಲ್ಲಿ ಈಗಿರುವ ಮದ್ರಸಾಗಳಲ್ಲಿ ಆಧುನಿಕ ಶಿಕ್ಷಣದ ಪಠ್ಯಕ್ರಮವನ್ನು ಅಳವಡಿಸಿಕೊಂಡು ಸುಧಾರಣೆಯ ನಿಟ್ಟಿನಲ್ಲಿ ವಿಧಾನಗಳನ್ನು ರೂಪಿಸಿ ಜಾರಿಗೊಳಿಸತೊಡಗಿದರು. ಈ ಎಲ್ಲ ಕಾರ್ಯಕ್ರಮಗಳ ಅವಶ್ಯಕತೆಯನ್ನು ಮನಗಂಡು ೨೦೦೩ರಲ್ಲಿ ಅಮೇರಿಕಾ US agency for International development (USAID) ಎಂಬ ಕಾರ್ಯಕ್ರಮದ ಮೂಲಕ ಪಾಕಿಸ್ತಾನ, ಅಫಘಾನಿಸ್ತಾನಗಳಲ್ಲಿ ಆರ್ಥಿಕ ಸಹಾಯ ಮಾಡ ತೊಡಗಿತು.

ಈ ಕಾರ್ಯಕ್ರಮಕ್ಕೆ ಚಾಲನೆ ನೀಡುವಲ್ಲಿ ಎದುರಾಗುವ ಹಲವಾರು ಸಮಸ್ಯೆಗಳ ಪಟ್ಟಿಮಾಡಲಾಯಿತು. ಮುಖ್ಯವಾಗಿ ಅಮೇರಿಕಾದ ಈ ಪರಿಹಾರ ಕಾರ್ಯಕ್ರಮಕ್ಕೆ ಅಡ್ಡಿಯಾದದ್ದು ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಗಡಿಪ್ರದೇಶಗಳಲ್ಲಿನ ಹಿಂದೆ ಸೋವಿಯತ್ ವಿರುದ್ಧ ಮುಜಾಹಿದೀನ್‌ಗಳನ್ನು ಸೃಷ್ಟಿಮಾಡಲು ಅಮೇರಿಕಾದಿಂದ ಕುಮ್ಮಕ್ಕು ಮತ್ತು ಧನಸಹಾಯ ಪಡೆದ ಮದ್ರಸಾಗಳು. ಅವೀಗ ಬೆಳೆದು ತಾಲೀಬಾನ್‌ ತರದ ತಂಡಗಳನ್ನು ಸೃಷ್ಟಿಸತೊಡಗಿದ್ದವು. ಇವು ತನ್ನ ವಿದ್ಯಾರ್ಥಿಗಳಿಗೆ ಉಗ್ರವಾದವನ್ನು, ಮುಸ್ಲಿಮೇತರರ ಮೇಲೆ ಆಕ್ರಮಣವನ್ನು, ಪಾಶ್ಚಿಮಾತ್ಯ ವಿಚಾರಗಳು, ಶಿಕ್ಷಣಪದ್ಧತಿ, ನಾಗರಿಕತೆಯ ವಿರೋಧವನ್ನು ಬೋಧಿಸುತ್ತಿದ್ದವು. ಇವು ನೈಜ ಧಾರ್ಮಿಕ ಸಂದೇಶಗಳನ್ನು ಬದಿಗೆ ಸರಿಸಿ, ಬರೀ ಹಿಂಸಾತ್ಮಕ ವಿಚಾರಗಳನ್ನು ಬೋಧಿಸುತ್ತಿವೆಯೆಂಬುದು ಗಮನಕ್ಕೆ ಬಂತು. ಇಂತಹ ಮದ್ರಸಾಗಳು ಸಂಖ್ಯೆಯಲ್ಲಿ ಕಮ್ಮಿಯಾಗಿದ್ದರೂ ಇವು ಮಾಡುತ್ತಿರುವ ಕಾರ್ಯಕ್ರಮಗಳ ಪರಿಣಾಮ ಭೀಕರವಾದದ್ದೆಂಬ ಅಭಿಪ್ರಾಯ ತಾಳಲಾಯಿತು.

ಆದರೆ ನಿಜವಾಗಿ ನೋಡಿದರೆ, ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಕೆಲವು ಮದ್ರಸಾಗಳನ್ನು ಹೊರತುಪಡಿಸಿದರೆ, ಉಳಿದ ಸಹಸ್ರಾರು ಮದ್ರಸಾಗಳು ತಮ್ಮ ಪಾಡಿಗೆ ತಾವು ಊರಿನ ಮಕ್ಕಳಿಗೆ ಧಾರ್ಮಿಕ ಪಾಠಗಳನ್ನು ಹೇಳಿಕೊಡುತ್ತ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿವೆ. ಈ ಮದ್ರಸಾಗಳಲ್ಲಿ ಆಧುನಿಕ ಶಿಕ್ಷಣವನ್ನು ಅಳವಡಿಸುವ ಸುಧಾರಣೆಯ ಬಗ್ಗೆ ಉತ್ಸಾಹವನ್ನು ತೋರುವುದಿಲ್ಲ ಮಾತ್ರವಲ್ಲ ಇದರಿಂದ ಪಾಶ್ಚಿಮಾತ್ಯ ಅನೈತಿಕ ವಿಚಾರಗಳನ್ನು ತಮ್ಮ ಮಕ್ಕಳಿಗೆ ಬೋಧಿಸಲಾಗುತ್ತದೆ ಎಂದು ಅನುಮಾನಪಡುತ್ತಾರೆ. ಆಧುನಿಕ ಸುಧಾರಣೆಯೆಂದರೆ ಇಷ್ಟರ ತನಕ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿರುವ ಮದ್ರಸಾಗಳನ್ನು ಕುಲಗೆಡಿಸುವ ಕುತಂತ್ರವೆಂದು ಪರಿಗಣಿಸುತ್ತಾರೆ. ಇಂತಹ ಬದಲಾವಣೆಗೆ ಒಪ್ಪದ ಮದ್ರಸಾಗಳಿಂದ ಹೊರಬರುವ ವಿದ್ಯಾರ್ಥಿಗಳು ಆಧುನಿಕ ಸಮಾಜದಲ್ಲಿ ದುಡಿಯುವ ಯಾವುದೇ ನೈಪುಣ್ಯವಾಗಲೀ, ತಿಳುವಳಿಕೆಯಾಗಲಿ ಹೊಂದಿರದಿರುವುದರಿಂದ ಅವರ ಭವಿಷ್ಯದ ಬದುಕು ಸುಗಮವಾಗಿರುವುದಿಲ್ಲವೆಂದು ಒಂದು ಅಭಿಪ್ರಾಯವಾದರೆ, ಈ ಮದ್ರಸಾಗಳ ಪರವಾಗಿ ವಾದಿಸುವವರು ಇವು ಇಸ್ಲಾಮಿನ ನೈಜ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಕೊಡುಗೆಯನ್ನು ನೀಡುತ್ತಾ ಬಂದಿವೆ ಎಂದು ಹೇಳುತ್ತಾರೆ. ಈ ಮದ್ರಸಾಗಳಿಂದ ಹೊರಬರುವ ಪದವೀಧರರು ಇಸ್ಲಾಮಿಕ್ ಮದ್ರಸಾಗಳಲ್ಲಿ ಪಾಠಮಾಡುವ ಉಪಾಧ್ಯಾಯರಾಗಿ(ಮುದರ್ರಿಸ್) ಅಥವಾ ಮಸೀದಿಗಳ ಇಮಾಮ್ (ಧರ್ಮ ಬೋಧಕ) ನಾಯಕರಾಗಿ ಕಾರ್ಯ ನಿರ್ವಹಿಸಬೇಕಾಗುತ್ತದೆ. ಈಗೀಗ ಅನೇಕ ದೇಶಗಳಲ್ಲಿನ ಮದ್ರಸಾಗಳಲ್ಲಿ ಧಾರ್ಮಿಕ ವಿದ್ಯಾಭ್ಯಾಸವನ್ನು ಬೋಧಿಸುವ ಜೊತೆಗೆ ವಿದ್ಯಾರ್ಥಿಗಳಿಗೆ ಆಧುನಿಕ ಶಿಕ್ಷಣವನ್ನು ಸರಕಾರಗಳ ನೆರವಿನಿಂದ ಅಳವಡಿಸಲಾಗುತ್ತಿದೆ.

ಮುಖ್ಯವಾಗಿ ಪಾಕಿಸ್ತಾನ, ಅಪಘಾನಿಸ್ತಾನ, ಬಂಗ್ಲಾದೇಶ, ಕೊಲ್ಲಿ ರಾಷ್ಟ್ರಗಳು, ಮಧ್ಯ ಏಷ್ಯಾದ ದೇಶಗಳು, ಪಶ್ಚಿಮ ಯುರೋಪ್, ಸಂಯುಕ್ತ ರಾಷ್ಟ್ರ ಮುಂತಾದ ದೇಶಗಳಲ್ಲಿ ಮದ್ರಸಾಗಳ ಶೈಕ್ಷಣಿಕ ಆಧುನಿಕೀಕರಣಕ್ಕಾಗಿ ಮುಂದುವರಿದ ದೇಶಗಳ ಧನಸಹಾಯ ಪಡೆಯುತ್ತಿವೆ. ಆದರೆ ಈ ಧನಸಹಾಯವು ಉಗ್ರವಾದಿಗಳ ಕೈಗೆ ಸೇರದ ಹಾಗೆ ಕಟ್ಟುನಿಟ್ಟಿನ ನಿಯಮವನ್ನು ಈ ದೇಶಗಳು ಪಾಲಿಸಬೇಕೆಂದು ಸಹಾಯನೀಡುವ ರಾಷ್ಟ್ರಗಳು ಕರಾರುಗಳನ್ನು ಹಾಕಿವೆ. ಇನ್ನೊಂದು ಪ್ರಮುಖ ಬೆಳವಣಿಗೆಯೆಂದರೆ, ಕೊಲ್ಲಿಯ ಕೆಲವು ಇಸ್ಲಾಮಿಕ್ ದೇಶಗಳಲ್ಲಿ ಮತ್ತು ವಿಶ್ವದ ಇತರ ಭಾಗಗಳಲ್ಲಿ ಭೂಗತವಾಗಿ ಕಾರ್ಯಾಚರಣೆ ಮಾಡುತ್ತಿರುವ ಅಲ್ ಖಾಯಿದಾ ಮತ್ತಿತರ ಉಗ್ರವಾದಿ ಸಂಘಟನೆಗಳು ದಾನದತ್ತಿಗಳನ್ನು ಸಂಗ್ರಹಿಸಿ ತಮಗೆ ಬೇಕಾದಂತೆ ಕೆಲಸಮಾಡುವ ಮದ್ರಸಾಗಳಿಗೆ ಧನ ಸಹಾಯಮಾಡುವ ಕೆಲಸವನ್ನು ಮಾಡುತ್ತಿವೆ.

ಪಾಕಿಸ್ತಾನದಲ್ಲಿ ಉಗ್ರವಾದಿ ಸಂಘಟನೆಗಳು ಹೆಚ್ಚು ಚಟುವಟಿಕೆಯಲ್ಲಿರುವುದು ಸರ್ವವಿದಿತ. ಇಲ್ಲಿನ ಸರಕಾರ USAID ಧನಸಹಾಯದ ಮೂಲಕ ಹಲವಾರು ಸುಧಾರಣಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಪಾಕಿಸ್ತಾನ, ಅಫಘಾನಿಸ್ತಾನದ ಮದ್ರಸಾಗಳನ್ನು ಉಗ್ರವಾದಿ ಸಂಘಟನೆಗಳ ಮುಷ್ಠಿಯಿಂದ ಬಿಡಿಸಲು ಈ ಎರಡೂ ದೇಶಗಳ ಸರಕಾರಗಳು ಮದ್ರಸಾಗಳಲ್ಲಿ ಆಧುನಿಕ ಸುಧಾರಣೆ, ಧನಸಹಾಯ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಈ ರೀತಿಯ ಸುಧಾರಣಾ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಉಗ್ರವಾದಿಗಳ ಹಿಡಿತದಿಂದ ಮುಕ್ತಿಗೊಳಿಸಬಹುದೆಂದು ಇಲ್ಲಿನ ತಜ್ಞರು ಅಭಿಪ್ರಾಯ ಪಡುತ್ತಾರೆ. ಪಾಕಿಸ್ತಾನದ ಕೆಲವು ಮದ್ರಸಾಗಳು ಅಫಘಾನಿಸ್ತಾನದ ತಾಲೀಬಾನ್‌ಗಳ ಜೊತೆಗೆ ಸಂಬಂಧ ಬೆಳೆಸಿರುವುದು ಕೂಡ ಎರಡೂ ಸರಕಾರಗಳಿಗೆ ಚಿಂತಾಜನಕ ಸಂಗತಿಯಾಗಿದೆ. ಪಾಕಿಸ್ತಾನದ ಶೈಕ್ಷಣಿಕ ಕ್ಷೇತ್ರದ ಅತ್ಯಂತ ಕಳಪೆ ಸಾಧನೆಯಿಂದಾಗಿ ಯುವಜನಾಂಗ ಹತಾಶರಾಗಿರುವುದು, ದಿಕ್ಕೆಟ್ಟ ಪರಿಸ್ಥಿತಿಯಿಂದಾಗಿ ಭಯೋತ್ಪಾದನೆ ಹುಲುಸಾಗಿ ಬೆಳೆಯುತ್ತಿದೆ. ಈ ನಿಟ್ಟಿನಲ್ಲಿ ಪರಿಹಾರ ಕಾರ್ಯಗಳನ್ನು ತೀವ್ರಗತಿಯಲ್ಲಿ ನಡೆಸುವಂತೆ ಅಫಘಾನಿಸ್ತಾನದ ಅಧ್ಯಕ್ಷ ಹಮೀದ್ ಖರ್ಜಾಯಿಯವರು ೨೦೦೬ರ ಸೆಪ್ಟೆಂಬರಲ್ಲಿ ಪಾಕಿಸ್ತಾನದ ಸರಕಾರವನ್ನು ಕೇಳಿಕೊಂಡಿದ್ದರು.

೨೦೦೫ರ ಜುಲೈಯಲ್ಲಿ ಲಂಡನ್ ನಗರದ ಸಾರಿಗೆಯ ಮೇಲೆ ದಾಳಿ ನಡೆಸಿದ ಭಯೋತ್ಪಾದಕನನ್ನು ಹಿಡಿದು ವಿಚಾರಿಸಿದಾಗ ಅವನು ಪಾಕಿಸ್ತಾನದ ಮದ್ರಸಾವೊಂದರಲ್ಲಿ ತರಬೇತಿ ಪಡೆದಿದ್ದ ಸಂಗತಿ ಬಹಿರಂಗಗೊಂಡಿತು. ಈ ಗಂಭೀರ ಆರೋಪದಿಂದ ಎಚ್ಚರಗೊಂಡ ಪಾಕಿಸ್ತಾನ ಸರಕಾರ ತನ್ನ ನೆಲದಲ್ಲಿ ಕಾರ್ಯಚಟುವಟಿಕೆಯಲ್ಲಿ ನಿರತವಾಗಿರುವ ಎಲ್ಲ ಮದ್ರಸಾಗಲು ಸಂಬಂಧಪಟ್ಟ ಸರಕಾರಿ ಕಛೇರಿಗಳಲ್ಲಿ ನೋಂದಾಯಿಸಿಕೊಳ್ಳಬೇಕೆಂಬ ನಿಯಮವನ್ನು ಜಾರಿಗೊಳಿಸಿತು. ಇದಕ್ಕೆ ಪ್ರಾರಂಭದಲ್ಲಿ ಮುಲ್ಲಾಗಳ ಸಂಘಟನೆಗಳಿಂದ ವಿರೋಧ ಮತ್ತು ಪ್ರತಿಭಟನೆ ಎದುರಾದರೂ ಸರಕಾರದ ಗಟ್ಟಿ ನಿಲುವಿನಿಂದಾಗಿ ಮತ್ತು ಮದ್ರಸಾ ಸುಧಾರಣೆಗಾಗಿ ಸಹಾಯ ಮತ್ತು ಅಲ್ಲಿ ಅಧ್ಯಾಪಕರಾಗಿ ಕೆಲಸ ಮಾಡುತ್ತಿರುವ ಮುದರ್ರಿಸ್, ಉಸ್ತಾದ್‌ಗಳಿಗೆ ಸಂಬಳವನ್ನು ಸರಕಾರ ಕೊಡುವುದನ್ನು ಘೋಷಿಸಿದ್ದರಿಂದ ಹೆಚ್ಚುಕಮ್ಮಿ ೨೦೦೭ರ ಸುಮಾರಿಗೆ ಶೇಖಡಾ ೯೦ರಷ್ಟು ಮದ್ರಸಾಗಳು ನೋಂದಾಯಿಸಲ್ಪಟ್ಟವು. ಇದಕ್ಕಾಗಿ USAID ನಿಂದ ಹೆಚ್ಚುವರಿ ಧನಸಹಾಯವನ್ನು ಪಾಕಿಸ್ತಾನಿ ಸರಕಾರ ಪಡೆಯಿತು. ಜೊತೆಗೆ ೨೦೦೫ರ ಲಂಡನ್ನಿನ ಘಟನೆಯಿಂದ ಎಚ್ಚತ್ತ ಪಾಕಿಸ್ತಾನ ಸರಕಾರ ತಮ್ಮ ದೇಶದಲ್ಲಿನ ವಿವಿಧ ಕ್ಷೇತ್ರಗಳಲ್ಲಿನ ಮದ್ರಸಾಗಳಲ್ಲಿ ಓದುತ್ತಿರುವ ೧೭೦೦ ವಿದೇಶಿ ವಿದ್ಯಾರ್ಥಿಗಳನ್ನು ಗುರುತಿಸಿ ಡಿಸೆಂಬರ್ ೩೧ರ ಒಳಗೆ ರಹದಾರಿ ಪಡೆಯದೆ ಬಂದ ವಿದ್ಯಾರ್ಥಿಗಳು ಹಿಂತಿರುಗಿ ತಮ್ಮ ತಮ್ಮ ದೇಶಕ್ಕೆ ವಾಪಸಾಗಬೇಕೆಂದು ನೋಟೀಸು ಜಾರಿಮಾಡಿತು. ಇದರಂತೆ ೨೦೦೬ರ ಜನವರಿ೧ನೇ ದಿನಾಂಕದಂದು ೧೦೦೦ವಿದ್ಯಾರ್ಥಿಗಳು ದೇಶದಿಂದ ಹೊರಹಾಕಲ್ಪಟ್ಟರು. ಉಳಿದ ೭೦೦ ಮಂದಿ ಸರಕಾರಿ ರಹದಾರಿ ಪಡೆದು ಬಂದುದರಿಂದ ಪಾಕಿಸ್ತಾನದಲ್ಲಿ ಉಳಿದರು.

ಮದ್ರಸಾಗಳು ಭಯೋತ್ಪಾದಕ ಕೇಂದ್ರಗಳಲ್ಲ
ಇವೆಲ್ಲ ವಾದಗಳನ್ನು ವಿರೋಧಿಸುವ ಮದ್ರಸಾಗಳ ಪರವಾದ ವಿಶ್ವದಾದ್ಯಂತ ತಜ್ಞರ ಅಭಿಪ್ರಾಯಗಳು ಕೂಡ ಅಷ್ಟೇ ಪ್ರಭಾವಶಾಲಿಯಾಗಿದೆ. ಮುಖ್ಯವಾಗಿ ೧೯ನೇ ಶತಮಾನದಿಂದ ಭಯೋತ್ಪಾದನೆಯ ಚರಿತ್ರೆಯನ್ನು ಗಮನಿಸಿದರೆ ಈ ಮಾನವೀಯತೆ ಮತ್ತು ಪ್ರಗತಿ ವಿರೋಧಿ ಚಟುವಟಿಕೆಗಳು ಹುಟ್ಟಿದ್ದು ಬೆಳೆದದ್ದು ಸಾಮಾಜಿಕ, ಆರ್ಥಿಕ, ರಾಜಕೀಯ ಮುಂತಾದ ಅನೇಕ ಕಾರಣಗಳಿಂದಾಗಿ. ಯಾವುದೇ ಸಂದರ್ಭದಲ್ಲೂ ಭಯೋತ್ಪಾದನೆಯು ಮಧ್ಯಪೂರ್ವ ಏಷ್ಯಾ, ಯುರೋಪ್, ಅಮೇರಿಕಾ, ಆಫ್ರಿಕಾಗಳಲ್ಲಿ ನಡೆದದ್ದಕ್ಕೂ, ಮದ್ರಸಾಗಳಿಗೂ ಯಾವ ಸಂಬಂಧವೂ ಇಲ್ಲ. ಭಯೋತ್ಪಾದನೆಯ ಪರಿಚಯ ವಿಶ್ವಕ್ಕೆ ಆಗುವ ಮೊದಲೇ ಮದ್ರಸಾಗಳು ಧಾರ್ಮಿಕ ಪಾಠಗಳನ್ನು ತನ್ನ ವಿದ್ಯಾರ್ಥಿಗಳಿಗೆ ನೀಡುತ್ತಾ ಬಂದಿವೆ. ಯಾವುದೇ ಧರ್ಮದ ಮೂಲ ತತ್ವಗಳು ಭಯೋತ್ಪಾದನೆಯನ್ನು ಸಮರ್ಥಿಸುವುದಿಲ್ಲ, ಬೋಧಿಸುವುದಿಲ್ಲ. ಭಯೋತ್ಪಾದಕರಿಗೆ ಧರ್ಮವೂ ಇಲ್ಲ. ಇಂದು ವಿಶ್ವದಾದ್ಯಂತ ಭಯೋತ್ಪಾದನೆ ಆಧುನಿಕ ತಂತ್ರಜ್ಞಾನ, ವಿಜ್ಞಾನವನ್ನು ಬಳಸಿಕೊಂಡು ಕಾರ್ಯವೆಸಗುತ್ತಿರುವುದರಿಂದ, ಕುರಾನ್ ಕಲಿಯುವ ಮದ್ರಸಾಗಳ ಮೇಲೆ ಗೂಬೆ ಕೂರಿಸುವವರು ತಂತ್ರಜ್ಞಾನವನ್ನು ಒದಗಿಸುವ ಕಾಲೇಜು ವಿಶ್ವವಿದ್ಯಾಲಯಗಳ ಮೇಲೇಕೆ ಈ ಆರೋಪಗಳನ್ನು ಹೊರಿಸಲಾಗುವುದಿಲ್ಲ?

“ಪಾಕಿಸ್ತಾನ ಮತ್ತು ಅಫಘಾನಿಸ್ತಾನದ ಕೆಲವು ಮದ್ರಸಾಗಳಿಗೆ ಭಯೋತ್ಪಾದನೆಯ ಚಟುವಟಿಕೆಗಳನ್ನು ನಡೆಸಲು ಕುಮ್ಮಕ್ಕು ನೀಡಿದ್ದು ಅಮೇರಿಕಾ ಮತ್ತು ಅದರ ಮಿತ್ರರಾಷ್ಟ್ರಗಳು. ಈ ಮದ್ರಸಾಗಳಲ್ಲಿ ಕಲಿಯುತ್ತಿರುವ ಯುವಕರಲ್ಲಿ ತಮ್ಮ ದೇಶವನ್ನು ವಿದೇಶೀಯರು (ರಷ್ಯನರು) ಆಕ್ರಮಿಸಿದ್ದಕ್ಕೆ ಹುಟ್ಟಿದ್ದ ಸಹಜವಾದ ಸಿಟ್ಟು ಅಸಮಾಧಾನಗಳನ್ನು ತಮ್ಮ ಕಮ್ಯೂನಿಷ್ಟ್ ವಿರೋಧಿ ರಾಜಕಾರಣಕ್ಕೆ ಬಳಸಿಕೊಂಡರು. ಯುದ್ಧದ ಗಂಧಗಾಳಿ ತಿಳಿಯದ ಈ ತಾಲೀಬಾನ್ ಅಥವಾ ಮದ್ರಸಾ ವಿದ್ಯಾರ್ಥಿಗಳಿಗೆ ಆಧುನಿಕ ಗೆರಿಲ್ಲಾ ಯುದ್ಧದ ತರಬೇತಿ, ಆಧುನಿಕ ಯುದ್ಧ ತಂತ್ರ, ಯುದ್ಧದ ಆಧುನಿಕ ಆಯುಧಗಳು, ಟ್ಯಾಂಕರುಗಳ ಬಳಕೆ ಮುಂತಾದ ಯುದ್ಧ ನೈಪಪುಣ್ಯವನ್ನು ಕಲಿಸಿಕೊಟ್ಟು ಸೋವಿಯತ್ ವಿರುದ್ಧ ಹೋರಾಟಕ್ಕೆ ಬಳಸಿಕೊಂಡರು. ಇಷ್ಟೆಲ್ಲ ತಾಲೀಮನ್ನು, ತಂತ್ರವನ್ನು ನೀಡಿದ ನಂತರ ಸೋವಿಯತ್ ಸೈನಿಕರನ್ನು ಹಿಮ್ಮೆಟ್ಟಿಸಿ ಅಫಘಾನಿಸ್ತಾನವನ್ನು ಈ ಮುಜಾಹಿದಿನ್‌ಗಳಿಗೆ ಒಪ್ಪಿಸಿ ಅಮೇರಿಕಾ ಮತ್ತು ಮಿತ್ರ ರಾಷ್ಟ್ರಗಳು ಭಯೋತ್ಪಾದನೆಯನ್ನು ಬೆಳೆಯಲು ಸುಗಮವಾದ ಹಾದಿಯನ್ನು ಮಾಡಿಕೊಟ್ಟರು” ಎನ್ನುತ್ತಾರೆ ಯುನಿವರ್ಸಿಟಿ ಆಫ್ ಲೊಗೋಸ್‌ನ ಡೀನ್, ಪ್ರೊಫೆಸರ್ ಒಲುರೋದೆಯವರು. ಅಮೇರಿಕಾ ತನ್ನ ಅಪರಾಧವನ್ನು ಮರೆಮಾಚಲು ಮದ್ರಸಾಗಳ ಮೇಲೆ ಆರೋಪವನ್ನು ಹೊರಿಸುತ್ತಿದೆ ಎನ್ನುತ್ತಾರೆ.

ಅಮೇರಿಕಾದ ಎಂ. ಮಮದಾನಿ ೨೦೦೪ರಲ್ಲಿ ನ್ಯೂಯಾರ್ಕ್‌ನಲ್ಲಿ ಪ್ರಕಟಿಸಿದ `Good Muslim, Bad Muslim- The Cold War and Roots of Terror’ ಪುಸ್ತಕದಲ್ಲಿ ಸೋವಿಯತ್ ರಷ್ಯಾದ ಕಮ್ಯೂನಿಷ್ಟರ ಆಕ್ರಮಣದ ವಿರುದ್ಧ ಸಿ.ಐ.ಎ. ತಾಲೀಬಾನನ್ನು ಆಯ್ಕೆಮಾಡಿ ತರಬೇತಿ ನೀಡಿದ್ದರ ಬಗ್ಗೆ ವಿವರವಾಗಿ ಬರೆಯುತ್ತಾರೆ. ಇವೆಲ್ಲವನ್ನು ಗಮನಿಸುವಾಗ ಆಧುನಿಕ ನಾಗರಿಕತೆ, ಆಧುನಿಕ ಶಿಕ್ಷಣದ ಸೋಂಕೇ ಇಲ್ಲದ ಆಧುನಿಕ ಜಗತ್ತಿನ ಪರಿಚಯವೇ ಇಲ್ಲದ ಗುಡ್ಡಗಾಡಿನಲ್ಲಿ ಬದುಕುತ್ತಿರುವ ಯುವಕರಿಗೆ ಆಧುನಿಕ ಯುದ್ಧ ನೈಪುಣ್ಯದ ತರಬೇತಿ ನೀಡಿ ಸೋವಿಯತ್ ವಿರುದ್ಧ ಬಳಸಿ ಹಿಮ್ಮೆಟ್ಟಿಸಿದ ನಂತರ ಅಫಘಾನಿಸ್ತಾನವನ್ನು ಈ ಯುವಕರ ಸುಪರ್ದಿಗೆ ಒಪ್ಪಿಸಿ ಒಮ್ಮೆಲೇ ಹೊರಹೋದದ್ದು ಸಿಐಎ ಮತ್ತು ಅಮೇರಿಕಾ ಮಾಡಿದ ದೊಡ್ಡ ತಪ್ಪು. ಈ ತಪ್ಪಿನಿಂದಾಗಿ ಒಸಾಮಾ ಬಿನ್ ಲಾದೆನ್, ಅಲ್‌ಖಾಯಿದಾ, ತಾಲೀಬಾನ್ ಹುಲುಸಾಗಿ ಬೆಳೆಯಲು ಅವಕಾಶ ದೊರೆತಂತಾಯಿತು. ಬರಿಯ ಮದ್ರಸಾಗಳನ್ನು ಭಯೋತ್ಪಾದನೆಯನ್ನು ತರಬೇತಿ ಕೊಡುವ ಕೇಂದ್ರಗಳೆಂದು ಆರೋಪಿಸುವ ಬದಲು ಈ ವಿಶ್ವ ಬಸ್ಮಾಸುರರಿಗೆ ತರಬೇತಿ ನೀಡಿ ಅವಕಾಶ ಮಾಡಿಕೊಟ್ಟ ಅಮೇರಿಕಾ ತನ್ನ ಶಕ್ತಿಯ ಬಗೆಗಿನ ಹಮ್ಮು, ಬೆಳೆಸಿಕೊಂಡ ಉದ್ಧಟತನ, ತನಗೆ ಬೇಕಾದುದನ್ನು ಸಾಧಿಸಿಕೊಂಡ ನಂತರ ಪರಿಣಾಮಗಳ ಬಗ್ಗೆ ಬೆಳೆಸಿಕೊಂಡ ದುರಹಂಕಾರಿ ಅಸಡ್ಡೆಗಳಿಂದಾಗಿ ಇಂದು ಇಡೀ ವಿಶ್ವವೇ ಭೀಕರ ದುರಂತವನ್ನು ಎದುರಿಸಬೇಕಾಗಿದೆ.

ಮದ್ರಸಾ ಸರಣಿ ಕೊನೇ ಕಂತು:ಒಬ್ಬರು ಮುದರ್ರಿಸರರ ಮಾತುಗಳು

ಭಾರತದಲ್ಲಿರುವ ಮದ್ರಸಾಗಳು ಯಾವುದೇ ಸರಕಾರದ್ದಾಗಲೀ, ಸಂಸ್ಥೆಗಳಿಂದಾಗಲಿ ಧನ ಸಹಾಯ ಪಡೆಯದೆ ತನ್ನ ವಿದ್ಯಾರ್ಥಿಗಳಿಂದ ಶುಲ್ಕವನ್ನೂ ಪಡೆಯದೆ ಊರಿನ ಮಸೀದಿ ಮತ್ತು ಅದಕ್ಕೆ ಸಂಬಂಧಪಟ್ಟ ಸದಸ್ಯರ ವಂತಿಗೆಯ ಹಣದಿಂದ ನಡೆಸಲಾಗುತ್ತಿದೆ. ಮದ್ರಸಾ ವಿದ್ಯಾಭ್ಯಾಸದಿಂದ ತಮ್ಮ ಭವಿಷ್ಯದ ವೃತ್ತಿ ಜೀವನವನ್ನು ರೂಪಿಸಿಕೊಳ್ಳಬೇಕೆಂದು ತೀರ್ಮಾನ ಮಾಡಿಕೊಂಡವರು ಮತ್ತು ಶಾಲೆಯ ಬಿಡುವಿನ ಸಮಯದಲ್ಲಿ ಧಾರ್ಮಿಕ ವಿದ್ಯಾಭ್ಯಾಸದ ಮೂಲಕ ತಮಗೆ ಧರ್ಮದ ತತ್ವಗಳನ್ನು ತಿಳಿದುಕೊಳ್ಳಲು ಬಯಸುವ ವಿದ್ಯಾರ್ಥಿಗಳು ಮದ್ರಸಾಕ್ಕೆ ಸೇರುತ್ತಾರೆ. ಹೆಚ್ಚಿನ ಶ್ರೀಮಂತ ಮುಸ್ಲಿಮರು ತಮ್ಮ ಮಕ್ಕಳಿಗೆ ಧಾರ್ಮಿಕ ವಿದ್ಯಾಭ್ಯಾಸ ಬೇಕೆಂದು ಬಯಸುವವರು ತಮ್ಮ ಮನೆಗೆ ಮುಲ್ಲಾಗಳನ್ನು ಕರೆಸಿಕೊಳ್ಳುತ್ತಾರೆ. ಆದರೆ ಶ್ರೀಮಂತರು ತಮ್ಮ ದಾನದ ಹಣವನ್ನು ಮದ್ರಸಾಗಳಿಗೆ ಕೊಡಬಯಸುತ್ತಾರೆ. ಹೀಗೆ ಮುಸ್ಲಿಮ್ ಸಮಾಜದ ಕೆಳವರ್ಗದ ಮತ್ತು ಮಧ್ಯಮ ವರ್ಗದ ಮಕ್ಕಳು ಮದ್ರಸಾ ವಿದ್ಯಾಭ್ಯಾಸದಲ್ಲಿ ಆಸಕ್ತಿ ವಹಿಸುತ್ತಾರೆ. ಮದ್ರಸಾದ ವಿದ್ಯಾಭ್ಯಾಸದಲ್ಲಿ ಅಧ್ಯಯನ ವಿಷಯಗಳು, ಪಠ್ಯಕ್ರಮಗಳು, ಅಭ್ಯಾಸ ಮಾರ್ಗಗಳು ಮತ್ತು ಪಠ್ಯ ಪುಸ್ತಕಗಳನ್ನು ಆಯಾಯ ಮದ್ರಸಾಕ್ಕೆ ಸಂಬಂಧಪಟ್ಟ ಮುದರ್ರಿಸ್/ಹಜ್ರತ್/ಉಸ್ತಾದ್‌ಗಳು (ಉಪಾಧ್ಯಾಯರು) ನಿರ್ಧರಿಸುತ್ತಾರೆ. ಇಂತಹ ನಿರ್ಧಾರದಲ್ಲಿ ಊರವರಾಗಲೀ, ದಾನಿಗಳಾಗಲಿ ಮಧ್ಯೆ ಪ್ರವೇಶಿಸುವುದಿಲ್ಲ. ತಮ್ಮದೇ ಆದ ರೀತಿಯ ಪರೀಕ್ಷಾ ಪದ್ಧತಿ, ಸನದುಗಳನ್ನು ನೀಡುವ ಕ್ರಮಗಳು, ಸ್ಪರ್ಧೆಗಳನ್ನು ಅಳವಡಿಸಿಕೊಳ್ಳುತ್ತಾರೆ. ಇದರಿಂದಾಗಿ ವಿದ್ಯಾಭ್ಯಾಸದ ನಿಯಮಗಳು, ಗುಣಮಟ್ಟ ಎಲ್ಲ ಮದ್ರಸಾಗಳಲ್ಲೂ ಒಂದೇ ರೀತಿಯಲ್ಲಿರುವುದಿಲ್ಲ. ಮದ್ರಸಾಗಳಿಂದ ಹೊರಬರುವ ಹೆಚ್ಚಿನ ವಿದ್ಯಾರ್ಥಿಗಳು ಧಾರ್ಮಿಕ ಕ್ಷೇತ್ರಗಳಲ್ಲಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ. ಧಾರ್ಮಿಕ ಜ್ಞಾನ, ನೈತಿಕ ನಿಯಮಗಳು, ಆಧ್ಯಾತ್ಮಿಕ ಜ್ಞಾನ, ವೈಚಾರಿಕ ಶುದ್ಧತೆ, ಪಾರಮಾರ್ಥಿಕ ವಿಚಾರ ಮುಂತಾದುವನ್ನು ಬೋಧಿಸಿಕೊಂಡು ಮದ್ರಸಾದಿಂದ ಹೊರಬರುವ ವಿದ್ಯಾರ್ಥಿಗಳಿಗೆ ಆಧುನಿಕ ಉದ್ಯೋಗದ ಮಾರುಕಟ್ಟೆಯಲ್ಲಿ ಪೈಪೋಟಿಗಿಳಿಯುವುದು ಬಿಡಿ, ಪ್ರವೇಶಿಸಲು ಕೂಡ ಸಾಧ್ಯವಾಗದು.

ಇಸ್ಲಾಮಿಕ್ ರಾಷ್ಟ್ರಗಳಂತೆ ನಮ್ಮ ದೇಶದಲ್ಲಿ ಮದ್ರಸಾಗಳ ಚಟುವಟಿಕೆಗಳನ್ನು ನಿಯಂತ್ರಿಸುವುದು ಅಗತ್ಯವೆಂದು ಕಂಡುಬಂದರೂ ನಿಯಂತ್ರಣಕ್ಕೆ ಒಳಪಡಿಸುವುದು ಸುಲಭಸಾಧ್ಯವೇನಲ್ಲ. ಆದರೆ ಕಳೆದ ಒಂದೆರಡು ದಶಕಗಳಿಂದ ಮದ್ರಸಾಗಳು ತಮ್ಮ ಮುಂದೆ ಎದುರಾಗುತ್ತಿರುವ ಸಮಸ್ಯೆಗಳು, ಆಧುನಿಕ ಸಮಾಜವನ್ನು ಅರ್ಥೈಸುವಲ್ಲಿ ತಮಗಿರುವ ತೊಡಕುಗಳನ್ನು ನಿವಾರಿಸದಿದ್ದಲ್ಲಿ ಭವಿಷ್ಯದಲ್ಲಿ ತುಂಬ ಕಷ್ಟಗಳನ್ನು ಎದುರಿಸಬೇಕಾಗುತ್ತದೆಂಬ ಎಚ್ಚರಿಕೆ ಮೂಡಿದೆ ಎಂದು ಕಾಣಬಹುದಾಗಿದೆ. ಈ ಕಾರಣದಿಂದಾಗಿ ಮದ್ರಸಾಗಳಲ್ಲಿ ಕೆಲವು ಸಾಮಾನ್ಯ ಬದುಕಿಗೆ ಬೇಕಾಗುವ ವಿಷಯಗಳನ್ನು, ವೃತ್ತಿ ತರಬೇತಿಗಳನ್ನು ನೀಡಲು ತೊಡಗಿವೆ. ಮದ್ರಸಾ ವಿದ್ಯಾಭ್ಯಾಸದ ಬಹುಮುಖ್ಯ ಕೊರತೆಯೆಂದರೆ ಒಂದು ನಿಗದಿತ ಗುಣಮಟ್ಟವನ್ನು ಕಾಯ್ದುಕೊಳ್ಳದಿರುವುದು. ಇದರಿಂದಾಗಿ ಮದ್ರಸಾಗಳು ಆಧುನಿಕ ವಿಷಯಗಳನ್ನು, ಸ್ಥಳೀಯ ಮತ್ತು ವಿದೇಶಿ ಭಾಷೆ ಮುಖ್ಯವಾಗಿ ಇಂಗ್ಲಿಷ್, ಕಂಪ್ಯೂಟರ್ ವಿದ್ಯಾಭ್ಯಾಸವನ್ನು ಅಳವಡಿಸಿಕೊಂಡರೂ ಒಂದು ನಿಯಮಿತ ಪಠ್ಯಕ್ರಮ, ಶಿಕ್ಷಣದ ಗುಣಮಟ್ಟವನ್ನು ಕಾಯ್ದುಕೊಳ್ಳದೆ ಹೋದರೆ ಮುಂದಿನ ಆಧುನಿಕ ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳಲ್ಲಿ, ಪ್ರಾಥಮಿಕ, ಹೈಸ್ಕೂಲು, ಕಾಲೇಜುಗಳಲ್ಲಿ ದಾಖಲಾತಿಗೆ ತೊಡಕುಂಟಾಗುತ್ತದೆ. ಮದ್ರಸಾಗಳಲ್ಲಿ ಮತ್ತು ಮದ್ರಸಾ ಕಾಲೇಜು, ವಿಶ್ವವಿದ್ಯಾಲಯಗಳಲ್ಲಿ ಕಲಿತು ಪದವಿಗಳನ್ನು ಪಡೆದವರಿಗೂ ಕೂಡ ಇದರಿಂದಾಗಿ ಉಚ್ಛಮಟ್ಟದ ಪದವಿ ದಾಖಲಾತಿಗೆ ನಿಯಮಿತ ಮಟ್ಟದ ಜ್ಞಾನದ ಕೊರತೆಯ ಕಾರಣಕ್ಕೆ ತಿರಸ್ಕರಿಸಲ್ಪಡುತ್ತದೆ.

ಈ ಕಾರಣಗಳಿಂದಾಗಿ ನಮ್ಮ ದೇಶದ ಕೆಲವು ರಾಜ್ಯಗಳಲ್ಲಿ ಮದ್ರಸಾ ಎಜುಕೇಶನ್ ಬೋರ್ಡುಗಳ ಸ್ಥಾಪನೆಯಾಗಿವೆ. ಇನ್ನು ಕೆಲವು ರಾಜ್ಯಗಳಲ್ಲಿ ಸರಕಾರ ಮದ್ರಸಾಗಳಿಗೆ ಧನಸಹಾಯ, ಮುದರ್ರಿಸ್‌ಗಳಿಗೆ, ಬೋಧಕರಿಗೆ ಸಂಬಳ ಮುಂತಾದ ಸಹಾಯವನ್ನು ಮಾಡುತ್ತಿವೆ. ಕೇಂದ್ರ ಸರಕಾರ ಕೂಡ ಈ ಮದ್ರಸಾಗಳ ಆಧುನೀಕರಣಕ್ಕಾಗಿ ಬಜೆಟ್‌ನಲ್ಲಿ ಸ್ವಲ್ಪ ಹಣವನ್ನು ಮೀಸಲಾಗಿಟ್ಟಿದೆ. ಇಷ್ಟೆಲ್ಲಾ ಆದರೂ ಈ ಆಧುನೀಕರಣಕ್ಕೆ ಒಪ್ಪದ ತಮ್ಮದೇ ಆದ ಕಾರಣಗಳಿಗಾಗಿ ಅನುಮಾನದಿಂದ ನೋಡುವ ಮದ್ರಸಾಗಳು ನಿಂತನೀರಿನಂತೆ ಕೆಲಸ ಮಾಡುತ್ತಲೇ ಇವೆ. ಇನ್ನೊಂದು ಕಾರಣವೆಂದರೆ ಸರಕಾರದ ಧನಸಹಾಯವನ್ನು ಪಡೆದ ಮದ್ರಸಾಗಳು ಕೂಡ ಎರಡು ದಶಕಗಳು ಕಳೆದರೂ ಯಾವುದೇ ಮಹತ್ವವನ್ನು ಸಾಧಿಸಿಲ್ಲವೆನ್ನುವುದು.

ನಾನು ಒಬ್ಬ ಮದ್ರಸಾವನ್ನು ನಡೆಸುತ್ತಿರುವ ಜವಾಬ್ದಾರಿಯುತ ಮುದರ್ರಿಸ್‌ರವರೊಂದಿಗೆ ಮಾತಾಡುತ್ತ ‘ನೀವು ಯಾಕೆ ಸರಕಾರದಿಂದ ಧನಸಹಾಯ ಪಡೆಯುತ್ತಿಲ್ಲ?’ ಎಂದು ಕೇಳಿದೆ ಅವರ ಉತ್ತರ ಹೀಗಿತ್ತು, “ಸರಕಾರ ಹಣ ಸುಮ್ಮನೆ ಕೊಡುವುದಿಲ್ಲ ತಾನೆ? ಹಣ ಪಡೆದ ನಂತರ ಸರಕಾರ ಒಂದೊಂದೇ ನಿಯಮಗಳನ್ನು ಹೇರಲು ತೊಡಗುತ್ತದೆ. ಪಾಠ ಮತ್ತು ಪಠ್ಯಕ್ರಮವನ್ನು ಬದಲಾಯಿಸಲು ಹೇಳುತ್ತಾರೆ. ನೀವು ಹೇಳುವ ಸಾಯನ್ಸ್, ಮ್ಯಾಥ್ಸ್ ಮುಂತಾದವನ್ನು ಸೇರಿಸಿ ಸಿಲೆಬಸ್ ಮಾಡಿ ಅಂತೀರಿ. ಮದ್ರಸಾದ ಮುಖ್ಯ ಉದ್ದೇಶ ಧಾರ್ಮಿಕ ಜ್ಞಾನವನ್ನು ನೀಡುವುದು. ಬದಲಾದ ಸಿಲೆಬಸ್ ನಿಂದಾಗಿ ಧಾರ್ಮಿಕ ಪಾಠಗಳಿಗೆ ಕ್ರಮೇಣ ಮಹತ್ವ ಕಮ್ಮಿಯಾಗಿ ಮೂಲೆಗುಂಪಾಗುವ ಸಾಧ್ಯತೆ ಇದೆ. ಇದಕ್ಕಾಗಿ ನಾವು ಹೇಳುತ್ತಿರೂದು ನಮಗೆ ನಮ್ಮಷ್ಟಕ್ಕೆ ಮಕ್ಕಳಿಗೆ ಧರ್ಮಜ್ಞಾನವನ್ನು ನೀಡುವ ಪಾಠಶಾಲೆಯನ್ನಾಗಿ ಉಳಿಯಲು ಬಿಡಿ. ಇಷ್ಟಕ್ಕೂ, ಮದ್ರಸಾದಲ್ಲಿ ಕಲಿಯುವ ಮಕ್ಕಳ ಪೈಕಿ ಪೂರ್ಣ ಪ್ರಮಾಣದಲ್ಲಿ ಬರೀ ಧಾರ್ಮಿಕ ಪಾಠವನ್ನು ಕಲಿಯುವವರು ಕೆಲವರು ಮಾತ್ರ. ಇವರು ಮುಂದೆ ಮಸೀದಿಯ ಇಮಾಮ್‌ಗಳಾಗಿಯೋ, ಮುದರ್ರಿಸ್‌ಗಳಾಗಿಯೋ ಉದ್ಯೋಗ ಮಾಡಿಕೊಂಡಿರುತ್ತಾರೆ. ಉಳಿದ ಶೇಖಡಾ ೯೦ಕ್ಕಿಂತ ಹೆಚ್ಚು ಮಂದಿ ದಿನಕ್ಕೆ ಒಂದು ಗಂಟೆಗಳ ಕಾಲವೋ ಎರಡು ಗಂಟೆಗಳ ಕಾಲವೋ ಮದ್ರಸಾಗಳಲ್ಲಿ ಕಲಿತು ಉಳಿದ ಸಮಯಗಳಲ್ಲಿ ಶಾಲೆ ಹೈಸ್ಕೂಲುಗಳಲ್ಲಿ ಆಧುನಿಕ ವಿದ್ಯಾಭ್ಯಾಸವನ್ನು ಮಾಡುತ್ತಾರೆ. ನಿಮ್ಮಂತೆ ಇವರೆಲ್ಲರೂ ಮದ್ರಸಾಗಳಲ್ಲಿ ಧರ್ಮಜ್ಞಾನ ಸಾಕಷ್ಟು ಪಡೆಯುವುದರ ಜೊತೆಗೆ ಕಾಲೇಜು, ಯುನಿವರ್ಸಿಟಿಗಳಲ್ಲಿ ಕಲಿತು ಪದವೀಧರರಾಗಿ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುತ್ತಾರೆ”.

“ನನಗೆ ಚಿಂತೆಯಾಗುವುದು ಈ ಕೆಲವೇ ಮಂದಿಯ ಬಗ್ಗೆ. ಪೂರ್ಣ ಪ್ರಮಾಣದ ಮದ್ರಸಾವಿದ್ಯೆ ಕಲಿತು ಹೊರಬರುವ ಆಲಿಮ್. ಹಾಫಿಜ್‌ಗಳಿಗೆ ಎಷ್ಟು ಅವಕಾಶಗಳು ಸಿಗುತ್ತವೆ? ಬಹಳ ಕಮ್ಮಿ. ಅವಕಾಶ ಸಿಗದವರು ಏನು ಮಾಡಬೇಕು?” ಎಂದು ಕೇಳಿದೆ.

“ನೀವು ಅಂತಹ ಧಾರ್ಮಿಕ ಕ್ಷೇತ್ರದಲ್ಲಿ ಉದ್ಯೋಗವನ್ನು ನೆಚ್ಚಿಕೊಂಡವರ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ. ಯಾಕೆಂದರೆ ಅವರಿಗೆ ಆದಾಯ ಮುಖ್ಯವಲ್ಲ. ಅವರು ತಮ್ಮ ಬದುಕನ್ನು ಧಾರ್ಮಿಕ ಜ್ಞಾನ ಮತ್ತು ಅದನ್ನು ಬೋಧಿಸುವ ಕೆಲಸದಲ್ಲಿ ಯಾವುದೇ ಲೌಕಿಕ ಐಷಾರಾಮದ ಗಣನೆಯಿಲ್ಲದೆ ಮಾಡಿಕೊಳ್ಳುತ್ತಾರೆ. ನೀವು ಹೇಳುವ ಹಾಗೆ ನಮ್ಮಲ್ಲಿ ಇಂತಹ ಇಮಾಮ್, ಹಾಫಿಜ಼್‌ಗಳು ನಿರುದ್ಯೋಗಿಗಳಾಗಿರುವುದಿಲ್ಲ. ಇವರು ತಮ್ಮ ಬದುಕನ್ನು ತಮ್ಮದೇ ಆದ ಇತಿಮಿತಿಗಳಲ್ಲಿ ರೂಪಿಸಿಕೊಳ್ಳುವುದನ್ನು ಕಲಿತಿರುತ್ತಾರೆ. ಈ ಕಾರಣಕ್ಕಾಗಿಯೇ ನಾವು ಹೇಳುತ್ತಿರುವುದು ನಮ್ಮ ಇಮಾಮ್‌ಗಳಿಗೆ ಸರಕಾರದ ಸಹಾಯದ ಅಗತ್ಯವಿಲ್ಲ. ನಮಗೆ ನಿಮ್ಮಂತಹ ಖರ್ಚುವೆಚ್ಚಗಳಿಲ್ಲ, ನಮಗೆ ನಿಮ್ಮಂತಹ ಸ್ಟಾಂಡರ್ಡ್ ಆಫ್ ಲಿವಿಂಗ್‌ನ ಅಗತ್ಯವೂ ಇಲ್ಲ.” ಎಂದರು.

“ಈ ಮದ್ರಸಾಗಳು ಟೆರರಿಷ್ಟುಗಳನ್ನು ತರಬೇತಿ ಮಾಡುವ ಕೇಂದ್ರಗಳಾಗಿ ಪರಿವರ್ತಿಸಲ್ಪಟ್ಟಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರಲ್ಲಾ?” ಎಂದು ಕೇಳಿದೆ.

‘ನಮಗೆ ಈ ತರದ ಪ್ರಶ್ನೆಗಳಿಗೆ ಉತ್ತರಿಸಿ ಉತ್ತರಿಸಿ ಸಾಕಾಗಿ ಹೋಗಿದೆ. ನಾವು ವೈಯಕ್ತಿಕವಾಗಿ ಪ್ರಶ್ನೆಗೆ ಉತ್ತರ ಎಷ್ಟು ಕೊಟ್ಟರೂ, ನಮ್ಮನ್ನು ಡಿಫೆಂಡ್ ಮಾಡಿಕೊಂಡಷ್ಟೂ ಪದೇ ಪದೇ ಈ ಪ್ರಶ್ನೆ ನಮ್ಮ ಮುಂದೆ ಬರುತ್ತಲೇ ಇರುತ್ತವೆ. ಇತ್ತೀಚೆಗೆ ನಮ್ಮ ಉಲೇಮಗಳ ಸಂಘಟನೆಯಲ್ಲಿ ಒಂದು ತೀರ್ಮಾನವನ್ನು ಮಾಡಿಕೊಂಡಿದ್ದೇವೆ. ಈ ಥರದ ಪ್ರಶ್ನೆಗಳನ್ನು ಮಾಡುವವರಿಗೆ ನಾವು ಭಾರತದ ಯಾವುದೇ ಮೂಲೆಯಲ್ಲಿರುವ ಮದ್ರಸಾಗಳನ್ನು ಯಾವ ಸಮಯದಲ್ಲಾದರೂ ಬೇಕಿದ್ದರೆ ಮಧ್ಯರಾತ್ರಿಯಲ್ಲಿ ಕೂಡ ಬಂದು ಪರೀಕ್ಷಿಸಲಿ ಎಂಬ ಬಹಿರಂಗ ಆಹ್ವಾನವನ್ನು ನೀಡುತ್ತೇವೆ. ನಾವು ಕುರಾನ್ ಓದುವ ಕ್ರಮವನ್ನು, ಅರ್ಥವನ್ನು, ದೀನಿಯಾತ್ ಅಥವಾ ಧಾರ್ಮಿಕ ತತ್ವವನ್ನು, ಗುರುಹಿರಿಯರಿಗೆ ಹೆತ್ತವರಿಗೆ ಗೌರವವನ್ನು, ಮುಸ್ಲಿಮೇತರರ ಜೊತೆಗೆ ಸೌಹಾರ್ದ ಸಂಬಂಧ ಬೆಳೆಸುವುದನ್ನು, ಸಹನೆ, ಸತ್ಯವಿಶ್ವಾಸವನ್ನು ಬೋಧಿಸುತ್ತೇವೆ. ನಮ್ಮ ಪಾಠ ನಡೆಯುವ ಸಮಯದಲ್ಲಿ ಬಂದು ನಾವು ಮಕ್ಕಳಿಗೆ ಏನು ಹೇಳುತ್ತೇವೆನ್ನುವುದನ್ನು ಗಮನಿಸಲಿ. ಸುಮ್ಮನೆ ಎಲ್ಲೋ ಒಂದೆಡೆ ಒಬ್ಬ ಭಯೋತ್ಪಾದಕ ತನಗೂ ಮದ್ರಸಾಕ್ಕೂ ಸಂಬಂಧವಿದೆಯೆಂದ ಕೂಡಲೇ ವಿಶ್ವದ ಎಲ್ಲ ಮದ್ರಸಾಗಳು ಅಪರಾಧಿಗಳೆಂದು ಘೋಷಿಸಬೇಕೆ? ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಒಂದು ಕ್ಷಣ ಅವಲೋಕಿಸಿದರೆ ಈ ಮದ್ರಸಾಗಳು ಬ್ರಿಟೀಷರ ವಿರುದ್ಧ ಮಾಡಿದ ಹೋರಾಟದ ವಿವರಗಳು ಸಿಗುತ್ತದೆ. ಉತ್ತರ ಪ್ರದೇಶದ ದಾರುಲ್ ಉಲೂಮ್ ದೇವ್‌ಬಂದ್, ಲಕ್ನೋದ ನದ್ವತ್ ಅಲ್ ಉಲೇಮಾ ಮುಂತಾದವು ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದುವು. ಒಂದು ವೇಳೆ ವಿಶ್ವದ ಎಲ್ಲಾ ಮದ್ರಸಾಗಳು ಒಬ್ಬೊಬ್ಬ ಟೆರ್ರರಿಸ್ಟರನ್ನು ತಯಾರು ಮಾಡಿದ್ದರೂ ಕೂಡ ಇಂದು ವಿಶ್ವದ ಎಲ್ಲೆಡೆ ಲಕ್ಷಾಂತರ ಭಯೋತ್ಪಾದಕರು ತುಂಬಿಹೋಗುತ್ತಿದ್ದರು. ಭಾರತದ ಉಲೇಮಾಗಳು ಖ್ಯಾತ ಮುಫ್ತಿಗಳೆಲ್ಲರೂ ‘ಭಯೋತ್ಪಾದನೆ ಇಸ್ಲಾಮ್ ವಿರೋಧಿಯಾದದ್ದು, ಕುರಾನ್ ಭಯೋತ್ಪಾದನೆಯನ್ನು, ನಿರಪರಾಧಿಗಳನ್ನು ಕೊಲ್ಲುವುದನ್ನು, ಆತ್ಮಹತ್ಯಾ ದಾಳಿಯನ್ನು ಖಂಡಿಸುತ್ತದೆ. ಇದು ಜಿಹಾದ್ ಆಗಲು ಸಾಧ್ಯವೇ ಇಲ್ಲ’ ಎಂದು ಒಕ್ಕೊರಳಿನಿಂದ ಹೇಳಿಕೆ ನೀಡಿದ್ದಾರೆ ಮತ್ತು ಫತ್ವಾ ಕೂಡ ನೀಡಿದ್ದಾರೆ. ವಾಸ್ತವದಲ್ಲಿ ಹೀಗಿದ್ದು, ಭಾರತದ ಯಾವ ಮದ್ರಸಾ ಯಾವ ಟರ್ರರಿಸ್ಟನೊಂದಿಗೆ ಸಂಬಂಧಹೊಂದಿದೆ ಎಂಬುದನ್ನು ತೋರಿಸಿನೋಡುವ” ಎಂದ ಸವಾಲೆಸೆದಿದ್ದರು.

೨೦೦೨ರ ಮೇ ೬ರಂದು ಭಾರತ ಸರಕಾರ ತನ್ನ ಎಲ್ಲ ರಾಜ್ಯಗಳ ಮತ್ತು ಕೇಂದ್ರಾಡಳಿದ ಪ್ರದೇಶಗಳಲ್ಲಿನ ವಿದ್ಯಾ ವಿಭಾಗದ ಕಾರ್ಯದರ್ಶಿಗಳಿಗೆ Memo no. F3-5/99-D III(L) ಮೂಲಕ “ಭಾರತ ಸರಕಾರದ ಸಹಾಯಧನವನ್ನು ಯಾಚಿಸಿ ಅರ್ಜಿ ಸಲ್ಲಿಸುತ್ತಿರುವ ಮತ್ತು ಈಗಾಗಲೇ ಸಲ್ಲಿಸಿರುವ ಮದ್ರಸಾಗಳ ಅರ್ಜಿಗಳನ್ನು ಕಳುಹಿಸುವಾಗ ಅವು ದೇಶದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಲ್ಲವೆನ್ನುವುದನ್ನು ಮತ್ತು ಭಾಗವಹಿಸಿಲ್ಲವೆನ್ನುವುದನ್ನು ಖಾತ್ರಿ ಮಾಡಿಕೊಳ್ಳತಕ್ಕದ್ದು. ರಾಜ್ಯಸರಕಾರ ಈ ಬಗ್ಗೆ ಒಂದು ಸರ್ಟಿಫಿಕೇಟನ್ನೂ ಜೊತೆಗೆ ಕಳುಹಿಸತಕ್ಕದ್ದು” ಎಂದು ಸೂಚಿಸಲಾಗಿತ್ತು. ಇದಕ್ಕೆ ಉತ್ತರವಾಗಿ ಮಧ್ಯಪ್ರದೇಶದ ಆಗಿನ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್‌ರವರು ಈ ಬಗ್ಗೆ ೨೦೦೨ರ ಜುಲೈ ತಿಂಗಳ ೨೨ರಂದು ಪತ್ರ ಕ್ರಮ ಸಂಖ್ಯೆ: ೨೮೨೬/CMO/D2 ಮೂಲಕ ಹೀಗೆ ಉತ್ತರಿಸಿದ್ದರು:

“ಒಂದು ಸಮುದಾಯಕ್ಕೆ ಸೇರಿದ ಪಾಠಶಾಲೆಯನ್ನು ದೇಶದ್ರೋಹದ ಅನುಮಾನದಲ್ಲಿ ನೋಡುವುದು ನಮ್ಮ ಜಾತ್ಯತೀತ ಸಂವಿಧಾನಕ್ಕೆ ಮಾಡುವ ದ್ರೋಹವೆಂದೇ ತಿಳಿಯುತ್ತೇನೆ. ಒಂದು ಸಮುದಾಯದ ಪಾಠಶಾಲೆಗಳನ್ನು ಹೆಕ್ಕಿ ತೆಗೆದು ದೇಶದ್ರೋಹದ ಪರೀಕ್ಷೆಗೆ ಒಳಪಡಿಸುವುದೆಂದರೆ ಆ ಸಮುದಾಯದ ಮೇಲೆ ದೇಶದ್ರೋಹದ ಚಟುವಟಿಕೆಗಳನ್ನು ಮಾಡುತ್ತಿರುವ ಗುರುತರವಾದ ಆರೋಪವನ್ನು ಹೊರಿಸುವುದಕ್ಕೆ ಸಮಾನವಾದದ್ದು. ದೇಶದ ಇತರ ಶಾಲೆಗಳಿಗೆ ಅನುದಾನವನ್ನು ನೀಡುವಾಗ ಪಾಲಿಸುವ ನಿಯಮಗಳಂತೆಯೇ ಈ ಸಮುದಾಯದ ಪಾಠಶಾಲೆಗಳಿಗೂ ಅನ್ವಯಿಸುವಂತೆ ಮಾಡಬೇಕೆನ್ನುವುದು ನನ್ನ ಕಳಕಳಿಯ ವಿನಂತಿ”.

ಉತ್ತರ ಭಾರತದಲ್ಲಿ ಮದ್ರಸಾಗಳು ಸ್ಥಾಪನೆಯಾದದ್ದು ಹೆಚ್ಚುಕಮ್ಮಿ ೧೩ನೇ ಶತಮಾನದಲ್ಲಿ. ದೆಹಲಿಯೊಂದರಲ್ಲೇ ೧೪ನೇ ಶತಮಾನದ ಹೊತ್ತಿಗೆ ಒಂದು ಸಾವಿರ ಮದ್ರಸಾಗಳಲ್ಲಿ ಪಾಠ ನಡೆಯುತ್ತಿದ್ದವು. ಇಲ್ಲಿ ಕುರಾನ್ ಓದಲು ಕಲಿಯುವುದು ಮುಖ್ಯ ಪಾಠವಾಗಿತ್ತು. ಭಾರತದ ಮದ್ರಸಾಗಳಲ್ಲಿ ಕಲಿಸುವ ವಿಧಾನ, ವಿಷಯಗಳ ಬಗ್ಗೆ ಚರ್ಚೆಗಳು ಮೊಗಲರ ಕಾಲದಲ್ಲೇ ಶುರುವಾಗಿತ್ತೆಂಬ ಮಾತಿದೆ. ಚಕ್ರವರ್ತಿ ಔರಂಗಜೇಬ ತನಗೆ ಲೌಕಿಕ ಬದುಕಿಗೆ ಬೇಕಾದ ಮತ್ತು ರಾಜ್ಯವಾಳುವುದಕ್ಕೆ ಸಂಬಂಧಿಸಿದ ವಿಷಯಗಳನ್ನು ಬಿಟ್ಟು ಅರೆಬಿಕ್ ವ್ಯಾಕರಣ ಮತ್ತು ತತ್ವಶಾಸ್ತ್ರವನ್ನು ಮಾತ್ರ ಕಲಿಸಿಕೊಟ್ಟದ್ದಕ್ಕೆ ತನ್ನ ಮದ್ರಸಾದ ಗುರುಗಳನ್ನು ತರಾಟೆಗೆ ತೆಗೆದುಕೊಂಡಿದ್ದನಂತೆ. ಅಲಿಘರ್ ಮುಸ್ಲಿಮ್ ಯುನಿವರ್ಸಿಟಿಯ ಸ್ಥಾಪಕ ಮತ್ತು ಮುಸ್ಲಿಮರು ಇಂಗ್ಲಿಷ್ ವಿದ್ಯಾಭ್ಯಾಸ ಮಾಡಬೇಕೆಂದು ಒತ್ತಾಯಿಸಿದ್ದ ಸರ್ ಸಯ್ಯದ್ ಅಹ್ಮದ್ ಖಾನ್‌ರವರು ಮದ್ರಸಾಗಳ ಬಗ್ಗೆ “ಆಧುನಿಕ ಜಗತ್ತಿನ ಅಗತ್ಯಗಳಿಗೆ ಇದು ಸಾಲದು” ಎಂದು ಹೇಳಿದ್ದರು.

ಭಾರತದಲ್ಲಿ ಇಂದಿಗೂ ಹಲವು ಹಳ್ಳಿಗಳಲ್ಲಿ ಮತ್ತು ಪಟ್ಟಣಗಳಲ್ಲಿ ಬಡ ಮುಸ್ಲಿಮರು ದುಬಾರಿ ಆಧುನಿಕ ವಿದ್ಯಾಭ್ಯಾಸವನ್ನು ಕೊಡಿಸಲಾಗದೆ ತಮ್ಮ ಮಕ್ಕಳಿಗೆ ಬರೀ ಮದ್ರಸಾವಿದ್ಯಾಭ್ಯಾಸವನ್ನೇ ನೆಚ್ಚಿಕೊಂಡಿದ್ದಾರೆ. ಕೇರಳ ರಾಜ್ಯದ ಮಲಪ್ಪುರಂ ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಅನಕ್ಷರಸ್ಥರಿರುವುದು ಗೊತ್ತಾಗಿ ನಾನು ಅಲ್ಲಿನ ಒಬ್ಬ ಮುಸ್ಲಿಮ್ ಪುಸ್ತಕದ ಅಂಗಡಿಯವನನ್ನು ಈ ಬಗ್ಗೆ ವಿಚಾರಿಸಿದೆ. “ಮಳಯಾಳಂ ಅಥವಾ ಇಂಗ್ಲಿಷ್‌ನಲ್ಲಿ ಬರಿಯ ಸಹಿಮಾಡಿದಾಗ ಅಕ್ಷರಸ್ಥನೆಂದು ಪರಿಗಣಿಸುವುದಾದರೆ, ಮದ್ರಸಾದಲ್ಲಿ ಕಲಿತು ಅರೆಬಿಕ್‌ನಲ್ಲಿ ಸಹಿಮಾಡುವುದು ತಿಳಿದವನನ್ನು ಅಕ್ಷರಸ್ಥನೆಂದು ಯಾಕೆ ಪರಿಗಣಿಸಲ್ಪಡುವುದಿಲ್ಲ?” ಎಂದು ಆತ ಪ್ರಶ್ನಿಸಿದ್ದ.

ಬಡ ಮತ್ತು ಕೆಳ ಮಧ್ಯಮ ವರ್ಗದ ಮುಸ್ಲಿಮರು ತಮ್ಮ ಮಕ್ಕಳನ್ನು ಮದ್ರಸಾಗಳಲ್ಲಿ ಕುರಾನ್ ಓದುವುದನ್ನು ಕಲಿಯುವುದು ಕಂಠಪಾಠವನ್ನು ಮಾಡುವುದನ್ನೇ ವಿದ್ಯಾಭ್ಯಾಸವೆಂದು ತಿಳಿದಿದ್ದಾರೆ. ಭಾರತದ ಉದ್ದಗಲಕ್ಕೂ ಲಕ್ಷಾಂತರ ಮದ್ರಸಾಗಳಲ್ಲಿ ಕೋಟ್ಯಂತರ ಮಕ್ಕಳು ಬರಿಯ ಮದ್ರಸಾಗಳಲ್ಲಿ ಕುರಾನ್ ಪಠಣ ಮತ್ತು ಹೆಚ್ಚೆಂದರೆ ಉರ್ದು ಓದು ಬರಹ ಕಲಿಯುತ್ತಾರೆ. ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಸುಧಾರಣೆಯಾಗಿದ್ದರೂ ಇನ್ನೂ ಬಹಳಷ್ಟು ಸುಧಾರಣೆ ಆಗಬೇಕಿದೆ.

ಪ್ರಖ್ಯಾತ ಸಮಾಜ ಸೇವಕ, ವಕೀಲ, ಮುಸ್ಲಿಮ್ ಚಿಂತಕರಾಗಿರುವ ಸೈಯ್ಯದ್ ಶಾಬುದ್ದೀನ್‌ರವರು ಈ ಮದ್ರಸಾಗಳ ಬಗ್ಗೆ ಹೀಗೆ ಹೇಳುತ್ತಾರೆ:

“೯೫ ಶೇಖಡಾ ಮದ್ರಸಾಗಳಲ್ಲಿ ಕಲಿಯುವ ಮಕ್ಕಳು ನಾಲ್ಕೈದು ವರ್ಷ ಕಲಿತು ಹೊರಬಂದು ತಮ್ಮ ಬದುಕಿಗಾಗಿ ಒಂದಲ್ಲ ಒಂದು ಹಾದಿ ಹಿಡಿಯುತ್ತಾರೆ. ಉಳಿದ ೫ಶೇಕಡಾ ಮಂದಿ ಮಾತ್ರ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಾರೆ. ಇವರು ಸಂಕಷ್ಟದ ಸಮಯದಲ್ಲಿ ಧಾರ್ಮಿಕ ಅನನ್ಯತೆಯನ್ನು, ಗೌರವವನ್ನು ಎತ್ತಿಹಿಡಿದು, ಪರಂಪರೆಯನ್ನು ಮುಂದುವರಿಸಲು ಸಮಾಜದ ಬೆನ್ನಲುಬಾಗಿ ನಿಲ್ಲುತ್ತಾರೆ. ಜಗತ್ತು ಗುರುತು ಸಿಗದಷ್ಟು ಬದಲಾವಣೆಗೊಂಡು ಆಧುನಿಕೀಕರಣಗೊಳ್ಳುತ್ತಿರುವಾಗ, ಮುಂದುವರಿಯುತ್ತಿರುವಾಗ ಮದ್ರಾಸಗಳು ತಟಸ್ಥವಾಗಿ ನಿಂತು ವಿಶಾಲ ಜಗತ್ತಿನಲ್ಲಿ ಹೇಳಹೆಸರಿಲ್ಲದೆ ಮಾಯವಾಗುವಂತಾಗ ಕೂಡದು. ಮದ್ರಸಾಗಳು ತಾವೇ ತಮ್ಮ ಶಕ್ತಿ, ಬಲಹೀನತೆಯನ್ನು ಪರಾಮರ್ಶಿಸಿಕೊಂಡು, ಎಂದಿನಂತೆ ತಮ್ಮ ಅನನ್ಯತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ಪಠ್ಯಕ್ರಮಗಳು, ಪಠ್ಯಪುಸ್ತಕಗಳು ಮತ್ತು ಕಲಿಸುವ ವಿಧಾನದಲ್ಲಿ ಬದಲಾವಣೆಯನ್ನು ತರಬೇಕಾಗಿದೆ. ಒಟ್ಟಾರೆ ಹೇಳುವುದಿದ್ದರೆ, ದೇಶದ ಪ್ರಖ್ಯಾತ ಮದ್ರಸಾಗಳ ಉಲೇಮಾಗಳು, ಆಡಳಿತದವರು ಒಂದೆಡೆ ಕೂತು ಮದ್ರಸಾಗಳ ಒಕ್ಕೂಟ ಅಥವಾ Examination Boardನ್ನು ISCSE, CBSE ರೀತಿಯಲ್ಲಿ ಸ್ಥಾಪಿಸಬೇಕು. ತಾವು ನೀಡುವ ಸನದು, ಪದವಿಗಳನ್ನು ನಮ್ಮ ದೇಶದ ಸರಕಾರ ಮಾನ್ಯತೆ ಮಾಡುವಂತೆ ಒತ್ತಾಯಿಸಬೇಕು. ಹೀಗೆ ಸ್ಥಾಪಿಸಲಾದ ಸಂಸ್ಥೆಗಳು ನೀಡಿದ ಸರ್ಟಿಫಿಕೇಟುಗಳು ಪದವಿಗಳು ಉಳಿದ ವಿದ್ಯಾಸಂಸ್ಥೆಗಳಂತೆ ಮಾನ್ಯತೆ ಪಡೆಯಬೇಕು. ಇದಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಸಹಕಾರ ನೀಡುವಂತಾಗಬೇಕು.

ಸಮುದಾಯದ ಬದುಕಿನಲ್ಲಿ ಮದ್ರಸಾಗಳ ಪಾತ್ರವನ್ನು ಗುರುತಿಸಿ ಸರಕಾರ ಮಾನ್ಯತೆ ಮಾಡಬೇಕು ಮತ್ತು ಮದ್ರಸಾಗಳ ಸಂಭಾವ್ಯ ಸಾಧ್ಯತೆ, ರಾಷ್ಟ್ರವನ್ನು ಕಟ್ಟುವ ಸಾಮರ್ಥ್ಯವನ್ನು ಕಡೆಗಣಿಸಕೂಡದು. ಮದ್ರಸಾಗಳ ಕತ್ತುಹಿಸುಕುವ ಕೆಲಸವನ್ನು ಸರಕಾರ ಮಾಡಕೂಡದು ಅಥವಾ ಅವುಗಳ ಸ್ವರೂಪವನ್ನೇ ಬದಲಾಯಿಸುವ ಕೆಲಸವನ್ನು ಮಾಡಕೂಡದು. ಮದ್ರಸಾಗಳ ರಾಷ್ಟ್ರೀಕರಣ ಅಥವಾ ಅವುಗಳ ಚಟುವಟಿಕೆಗಳಿಗೆ ಕಡಿವಾಣ ಹಾಕುವಂತಹ ಕ್ರಮಗಳನ್ನು ಸರಕಾರ ಕೈಗೊಂಡರೆ ಸಮುದಾಯ ಸರ್ವಥಾ ಒಪ್ಪದು. ಸರಕಾರ ಈ ಮನೋಭಾವವನ್ನು ಗುರುತಿಸುವ ಜೊತೆಗೆ ಒಂದು ವಿಶಾಲವಾದ ಸಾಮಾಜಿಕ ಉದ್ದೇಶವನ್ನು ಸಾಧಿಸುವತ್ತ ಹೆಜ್ಜೆ ಹಾಕಬೇಕು.

(ಮುಗಿಯಿತು)