ಲಂಡನ್ ಬದುಕಿನ ದೀರ್ಘ ಅನುಭವವನ್ನು ಹೀಗೆ ಬರೆದುಕೊಂಡಿದ್ದ ವಿ.ಕೆ. ಕೃಷ್ಣ ಮೆನನ್, ಅದಕ್ಕಿಂತ 43 ವರ್ಷಗಳ ಹಿಂದೆ 1920ರಲ್ಲಿ, ವಕೀಲಿಕೆಯ ವಿದ್ಯಾರ್ಥಿಯಾಗಿ ಮದ್ರಾಸಿನಲ್ಲಿದ್ದಾಗ ಅನ್ನಿ ಬೆಸೆಂಟರ ಹೋಂ ರೂಲ್ ಚಳವಳಿಯ ಪ್ರಭಾವಕ್ಕೆ ಒಳಗಾಗಿದ್ದರು. ಬೆಸೆಂಟರೂ ರಾಷ್ಟ್ರೀಯತೆಯ ಖಾತೆಗೆ ಇನ್ನೊಬ್ಬ ವ್ಯಕ್ತಿಯನ್ನು ಜಮಾ ಮಾಡುವ ಉದ್ದೇಶ ಇಟ್ಟು ಹುಡುಕಾಟದಲ್ಲಿ ಇದ್ದವರು. ಮೆನನ್‌ರನ್ನು “ಹೋಮ್ ರೂಲ್” ಕುಟುಂಬದ ಸದಸ್ಯನನ್ನಾಗಿ ಸ್ವೀಕರಿಸಿದರು ಮತ್ತು ಇಂಗ್ಲೆಂಡ್‌ನಲ್ಲಿ ಮೆನನ್‌ರ ಥಿಯೋಸ್ಪಿಯನ್ ಅರಿವನ್ನು ಹೆಚ್ಚಿಸಬಹುದಾದ ಓದಿನ ವಿದ್ಯಾರ್ಥಿವೇತನಕ್ಕಾಗಿ ಓಡಾಡಿದರು.
ʻನೀಲಿ ಫಲಕಗಳಲ್ಲಿ ನೆನಪಾಗಿ ನಿಂದವರುʼ ಸರಣಿಯಲ್ಲಿ ವಿ ಕೆ ಕೃಷ್ಣ ಮೆನನ್ ಅವರ ಲಂಡನ್‌ ವಾಸದ ಕುರಿತು ಬರೆದಿದ್ದಾರೆ ಯೋಗೀಂದ್ರ ಮರವಂತೆ

1963ರ “ದಿ ಸಂಡೆ ಟೈಮ್ಸ್” ಪತ್ರಿಕೆಯ ಬರಹವೊಂದರಲ್ಲಿ “ನಾನು ಇಂಗ್ಲೆಂಡ್‌ನಲ್ಲಿ 28 ವರ್ಷಗಳ ಕಾಲ ಬದುಕಿದೆ, ಅಂದರೆ ವಯಸ್ಕ ಜೀವನದ ಬಹುಭಾಗ. ಇದು ಮದ್ರಾಸಿನಂತಹ ಲಂಡನ್. ಮಿತಿಮೀರಿ ಬೆಳೆದ ಹಳ್ಳಿ, ಹುಟ್ಟೂರು ಎನಿಸುವಂತಹ ಊರು. ದೊಡ್ಡ ನಗರವಾದರೂ ಯಾರೂ ಇಲ್ಲಿ ಕಳೆದು ಹೋಗುವುದಿಲ್ಲ…” ಎಂದಿತ್ತು. ಲೇಖನವನ್ನು ಬರೆದಿದ್ದ ದಕ್ಷಿಣ ಭಾರತೀಯ ಮಾತ್ರ ಇನ್ನೆಲ್ಲಿಂದಲೋ ಕರೆ ಬರುವ ತನಕವೂ ಲಂಡನ್‌ನಲ್ಲಿ ಕಳೆದು ಕರಗಿ ಹೋದವರು.

ಲಂಡನ್ ಬದುಕಿನ ದೀರ್ಘ ಅನುಭವವನ್ನು ಹೀಗೆ ಬರೆದುಕೊಂಡಿದ್ದ ವಿ.ಕೆ. ಕೃಷ್ಣ ಮೆನನ್, ಅದಕ್ಕಿಂತ 43 ವರ್ಷಗಳ ಹಿಂದೆ 1920ರಲ್ಲಿ, ವಕೀಲಿಕೆಯ ವಿದ್ಯಾರ್ಥಿಯಾಗಿ ಮದ್ರಾಸಿನಲ್ಲಿದ್ದಾಗ ಅನ್ನಿ ಬೆಸೆಂಟರ ಹೋಂ ರೂಲ್ ಚಳವಳಿಯ ಪ್ರಭಾವಕ್ಕೆ ಒಳಗಾಗಿದ್ದರು. ಬೆಸೆಂಟರೂ ರಾಷ್ಟ್ರೀಯತೆಯ ಖಾತೆಗೆ ಇನ್ನೊಬ್ಬ ವ್ಯಕ್ತಿಯನ್ನು ಜಮಾ ಮಾಡುವ ಉದ್ದೇಶ ಇಟ್ಟು ಹುಡುಕಾಟದಲ್ಲಿ ಇದ್ದವರು. ಮೆನನ್‌ರನ್ನು “ಹೋಮ್ ರೂಲ್” ಕುಟುಂಬದ ಸದಸ್ಯನನ್ನಾಗಿ ಸ್ವೀಕರಿಸಿದರು ಮತ್ತು ಇಂಗ್ಲೆಂಡ್‌ನಲ್ಲಿ ಮೆನನ್‌ರ ಥಿಯೋಸ್ಪಿಯನ್ ಅರಿವನ್ನು ಹೆಚ್ಚಿಸಬಹುದಾದ ಓದಿನ ವಿದ್ಯಾರ್ಥಿವೇತನಕ್ಕಾಗಿ ಓಡಾಡಿದರು. 1924ರಲ್ಲಿ ಕೃಷ್ಣ ಮೆನನ್ ತಮ್ಮ ಪ್ರೀತಿಯ ಮದ್ರಾಸ್ ಬಿಟ್ಟು ಲಂಡನ್‌ಗೆ ಹೊರಟರು.

ಇಂಗ್ಲೆಂಡ್‌ಗೆ ಬಂದಿಳಿದ ಮೇಲೆ ರಾಜಕೀಯ ಶಾಸ್ತ್ರ ಓದುವುದರ ಜೊತೆಗೆ ಸೈನ್ಟ್ ಕ್ರಿಸ್ಟೋಫರ್ ಶಾಲೆಯಲ್ಲಿ ಪಾಠ ಮಾಡಲೂ ಆರಂಭಿಸಿದರು. ಆ ಮೂಲಕ ಡಿಪ್ಲೋಮವೊಂದು ಅವರಿಗೆ ದೊರೆಯುವುದಿತ್ತು. ಲಂಡನ್ ವಾಸದ ಮೊದಲ ಕೆಲ ವರ್ಷಗಳು ಬಹುಮುಖಿ ವಿದ್ಯಾರ್ಜನೆಯಲ್ಲಿ ಕಳೆದವು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಸೇರಿದರು. ರಾಜಕೀಯ ಶಾಸ್ತ್ರದಲ್ಲಿ ಪದವಿ ಪಡೆದ ನಂತರ 1930ರಲ್ಲಿ “ಯೂನಿವರ್ಸಿಟಿ ಕಾಲೇಜ್‌ ಆಫ್ ಲಂಡನ್” ಅಲ್ಲಿ ‘ಎಂ ಎ’ ಮಾಡಿದ ಮೆನನ್‌ರು, “ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್” ನಲ್ಲಿ ‘ಎಂ ಎಸ್ ಸಿ’ ಮುಗಿಸಿದರು. ಅಲ್ಲಿಯೇ ಅವರ ಶೈಕ್ಷಣಿಕ ಬೆಳವಣಿಗೆ ಹೆರಾಲ್ಡ್ ಲಾಸ್ಕಿಯವರ ಸಮಾಜವಾದಿ ಸಿದ್ಧಾಂತಗಳಿಂದ ರೂಪುಗೊಂಡವು. ಲಾಸ್ಕಿಯವರ ದೀರ್ಘ ಶೈಕ್ಷಣಿಕ ವೃತ್ತಿ ಮುಂದೆ ಎರಡನೆಯ ಮಹಾಯುದ್ಧದ ನಂತರ ಲೇಬರ್ ಪಕ್ಷದ ಚೇರ್ಮನ್ ಆಗುವುದಕ್ಕೆ ಕಾರಣವಾಯಿತು. ಫ್ಯಾಬಿಯನ್ ಸಮಾಜದ ಸಕ್ರಿಯ ಸದಸ್ಯರಾಗಿರುವುದರ ಜೊತೆಗೆ 1920ರಲ್ಲಿ ಲಂಡನ್ ಸ್ಕೂಲ್‌ ಆಫ್ ಎಕನಾಮಿಕ್ಸ್ ನಲ್ಲಿ ರಾಜಕೀಯ ಶಾಸ್ತ್ರದ ಉಪನ್ಯಾಸಕರಾಗಿ ಸೇರಿದರು. ಫ್ಯಾಬಿಯನ್ ಸಮಾಜವಾದ ಎನ್ನುವುದು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಮೂಲಭೂತ ಸಮಾಜವಾದ ಮಾತ್ರವಲ್ಲದೇ ಮೆನನ್‌ರನ್ನು ರೂಪಿಸಿದ ಸಿದ್ಧಾಂತವೂ ಹೌದು. ನಾಲ್ಕು ವರ್ಷಗಳ ನಂತರ ಬ್ಯಾರಿಸ್ಟರ್ ಕೂಡ ಆದರು. ಲಂಡನ್ನಿನ ಅವಿರತ ಓದಿನಲ್ಲಿ ಫ್ಯಾಬಿಯನ್ ಸಮಾಜದ ಸಂಪರ್ಕ ತಗ್ಗಿದ್ದರೂ ಬೆಸೆಂಟರ ಜೊತೆಗಿನ ಸ್ನೇಹ ಕಡಿಮೆ ಆಗಿರಲಿಲ್ಲ. ಮದ್ರಾಸಿನಲ್ಲಿ ವಿದ್ಯಾರ್ಥಿಯಾಗಿದ್ದ ಕಾಲದಲ್ಲಿ ಬೆಸೆಂಟರು ಪರಿಚಯಿಸಿದ ಹೋಂ ರೂಲ್ ಚಳವಳಿ, ಐರಿಶ್ ಸ್ವಾತಂತ್ಯ್ರದ ಮಾದರಿಯಲ್ಲಿ ಭಾರತಕ್ಕೂ ಸ್ವರಾಜ್ಯ ಒದಗಿಸುವ ಯತ್ನದಲ್ಲಿತ್ತು. ಆ ಪ್ರಯತ್ನದ ಮುಂದುವರಿದ ಭಾಗವಾಗಿ ಮೆನನ್‌ರು ಲಂಡನ್‌ಗೆ ಬಂದ ಕೂಡಲೇ ಭಾರತೀಯ ಹೋಂ ರೂಲ್ ಚಳವಳಿಯ ಇಂಗ್ಲೆಂಡ್ ಶಾಖೆಗೆ ಸೇರಿದರು. ಮೊದಲ ಮಹಾಯುದ್ಧದ ನಂತರ ಇಂಗ್ಲೆಂಡ್‌ನ ಹೋಂ ರೂಲ್ ಸಂಘಟನೆ “ಕಾಮನ್ ವೆಲ್ತ್ ಆಫ್ ಇಂಡಿಯಾ ಲೀಗ್” ಎಂದು ಹೆಸರು ಬದಲಿಸಿಕೊಂಡಿತು.

ಆಗಲೇ ಬ್ರಿಟಿಷ್ ಸರಕಾರದ ಗಮನ ಸೆಳೆದಿದ್ದ ಲೀಗ್, ಸರಕಾರಿ ಅಧಿಕಾರಿಗಳ ತನಿಖೆಗೊಳಗಾಯಿತು. ತೀವ್ರವಾದಿಗಳ ಜೊತೆಗೆ ಸಂಬಂಧದ ಯಾವ ಆಧಾರವೂ ಸಿಗದ ಕಾರಣ ಬ್ರಿಟಿಷ್ ಸರಕಾರಿ ಕಚೇರಿ ‘ಕಾಮನ್ ವೆಲ್ತ್ ಆಫ್ ಇಂಡಿಯಾ ಲೀಗ್’ ಗೆ ಖುಲಾಸೆ ನೀಡಿತು. ಮೆನನ್‌ರು 1928ರಲ್ಲಿ ಸಂಘಟನೆಯ ಜೊತೆ ಕಾರ್ಯದರ್ಶಿ ಆದಾಗ, ಸೈಮನ್ ಕಮಿಷನ್ ಸೂಚಿಸಿದ್ದ ಮೂರನೆಯ ದರ್ಜೆ ಸ್ಥಾನದ ಬದಲಿಗೆ ಭಾರತಕ್ಕೆ ಸಂಪೂರ್ಣ ಸ್ವಾತಂತ್ಯ್ರ ನೀಡಬೇಕೆನ್ನುವ ನಿಲುವನ್ನು ಬಿಗಿಗೊಳಿಸಲಾಯಿತು. ಲೀಗ್‌ನ ಹೆಸರಿನಿಂದ ಕಾಮನ್ ವೆಲ್ತ್ ಶಬ್ದವನ್ನು ತ್ವರಿತವಾಗಿ ಕೈಬಿಡಲಾಯಿತು. “ಇಂಡಿಯಾ ಲೀಗ್” ಎನ್ನುವ ಹೆಸರಿನಿಂದ, ಸಂಘಟನೆ ಇನ್ನೊಂದು ಮಾರ್ಪಾಟು ಕಂಡಿತು. ನೂರಾರು ಜನ ಹೊಸ ಸದಸ್ಯರು ಲಂಡನ್‌ನ ಹದಿಮೂರು ಶಾಖೆಗಳಲ್ಲಿ ಮತ್ತು ಇತರ ಊರುಗಳ ಶಾಖೆಗಳಲ್ಲಿ ಸೇರಿಕೊಂಡರು.

ಬ್ರಿಟಿಷ್ ರಾಜಕೀಯದ ಮೇರು ವ್ಯಕ್ತಿಗಳಾಗಿದ್ದ ಬೆರ್ಟ್ರಂಡ್ ರಸ್ಸೆಲ್, ಹೆರಾಲ್ಡ್ ಲಾಸ್ಕಿ, ಮೈಕೆಲ್ ಫುಟ್, ಫೆನ್ನೆರ್ ಬ್ರೋಕ್ವೇ ಮತ್ತು ಬ್ರಿಟನ್ನಿನಲ್ಲಿದ್ದ ಇತರ ಭಾರತೀಯರ ಜೊತೆ ಸೇರಿ ಮುಂದಿನ ಎರಡು ದಶಕಗಳ ಕಾಲ ಇಂಡಿಯಾ ಲೀಗಿಗೋಸ್ಕರ ಅವಿಶ್ರಾಂತವಾಗಿ ಮೆನನ್‌ರು ಚಳವಳಿ ನಡೆಸಿದರು. ಹೆಚ್ಚಿನ ಕಾರ್ಯಕ್ರಮಗಳಿಗೆ ತಾವೇ ಆರ್ಥಿಕ ಸಹಾಯ ನೀಡಿದರು. ಸಭೆ ನಡೆಸಿದರು, ಕಾರ್ಯಕ್ರಮಗಳನ್ನು ಆಯೋಜಿಸಿದರು, ಭಾಷಣ ಮಾಡಿದರು, ಲೇಖನಗಳನ್ನು ಬರೆದರು, ಕರಪತ್ರಗಳನ್ನು ಹಂಚಿದರು, ಲೇಬರ್ ಪಕ್ಷದ ಸಂಸದರ ಬಳಿ ಭಾರತದ ಪರವಾಗಿ ಲಾಬಿ ಮಾಡಿದರು. ಮೆನನ್‌ರು ಬ್ರಿಟನ್ನಿನ ರಾಜಕೀಯ ವ್ಯವಸ್ಥೆಯೊಳಗೆ ಲೇಬರ್ ಚಳವಳಿಯ ಭಾಗವಾಗುವ ಮೂಲಕ ತೊಡಗಿಕೊಂಡವರು, ಸಹಜವಾಗಿ ಕಮ್ಯುನಿಸ್ಟ್ ಚಳವಳಿಕಾರ ಸಕ್ಲತ್ವಾಲಾರ ಆಂದೋಲನದ ಪ್ರಭಾವಕ್ಕೂ ಒಳಗಾಗಿದ್ದವರು. ಸಕ್ಲತ್ವಾಲಾರು ಬ್ರಿಟನ್ನಿನಲ್ಲಿ ಭಾರತೀಯ ಮೂಲದ ಮೊದಲ ಲೇಬರ್ ಪಕ್ಷದ ಸಂಸದರು. ಮೆನನ್‌ರು 1929ರಲ್ಲಿ ಲೇಬರ್ ಸಂಸದರ ಸಹಾಯದೊಂದಿಗೆ, ಭಾರತದ ರಾಜಕೀಯ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸುವ ನಿಯೋಗದಲ್ಲಿ ಭಾಗವಹಿಸಿದರು. “Condition of india”, ಎನ್ನುವ ಹೆಸರಿನಲ್ಲಿ ರಸ್ಸೆಲ್‌ರ ಮುನ್ನುಡಿಯೊಡನೆ, ಎರಿಕ್ ಗಿಲ್‌ರ ವಿನ್ಯಾಸದಲ್ಲಿ ವರದಿಯನ್ನು ಪ್ರಕಟಿಸಿದರು. ಆದರೆ ಭಾರತದಲ್ಲಿ ವರದಿಯ ಪ್ರಕಟಣೆಯನ್ನು ಬ್ರಿಟಿಷ್ ಸರಕಾರ ನಿಷೇಧಿಸಿತು. ಮೆನನ್ ನೆಹರೂರವರಿಗೆ ಆತ್ಮೀಯರಾಗಿದ್ದವರು, ಕಾಂಗ್ರೆಸ್ ಅನ್ನು ಬ್ರಿಟನ್ನಿನಲ್ಲಿ ಪರಿಚಯಿಸಲು ಕಾರಣರಾದರು. 1935ರಲ್ಲಿ ನೆಹರೂರ ಇಂಗ್ಲೆಂಡ್ ಭೇಟಿಯನ್ನು ಕೂಡ ಮೆನನ್ ರೇ ರೂಪಿಸಿದ್ದರು.

ಮೆನನ್‌ರು 1928ರಲ್ಲಿ ಸಂಘಟನೆಯ ಜೊತೆ ಕಾರ್ಯದರ್ಶಿ ಆದಾಗ, ಸೈಮನ್ ಕಮಿಷನ್ ಸೂಚಿಸಿದ್ದ ಮೂರನೆಯ ದರ್ಜೆ ಸ್ಥಾನದ ಬದಲಿಗೆ ಭಾರತಕ್ಕೆ ಸಂಪೂರ್ಣ ಸ್ವಾತಂತ್ಯ್ರ ನೀಡಬೇಕೆನ್ನುವ ನಿಲುವನ್ನು ಬಿಗಿಗೊಳಿಸಲಾಯಿತು. ಲೀಗ್‌ನ ಹೆಸರಿನಿಂದ ಕಾಮನ್ ವೆಲ್ತ್ ಶಬ್ದವನ್ನು ತ್ವರಿತವಾಗಿ ಕೈಬಿಡಲಾಯಿತು. “ಇಂಡಿಯಾ ಲೀಗ್” ಎನ್ನುವ ಹೆಸರಿನಿಂದ, ಸಂಘಟನೆ ಇನ್ನೊಂದು ಮಾರ್ಪಾಟು ಕಂಡಿತು.

1932-35 ರ ನಡುವೆ ಬೊಡ್ಲಿ ಹೆಡ್‌ಗೆ ಇಪ್ಪತ್ತನೆಯ ಶತಮಾನ ಲೈಬ್ರರಿ ಸರಣಿಯ ಸಂಪಾದಕರಾದರು; ಪೆಂಗ್ವಿನ್ ಪುಸ್ತಕ ಸಂಸ್ಥೆಯ ಶೆಕ್ಷಣಿಕ ಅಂಗಸಂಸ್ಥೆಯಾದ ಪೆಲಿಕನ್ ಪ್ರಕಾಶನದ ಮೊದಲ ಸಂಪಾದಕರಾದರು. ಕಟ್ಟಾ ಸಮಾಜವಾದಿಯಾಗಿದ್ದ ಮೆನನ್‌ರು, ಇಂಗ್ಲೆಂಡ್ ನಲ್ಲಿರುವ ಭಾರತೀಯ ನೌಕರರ ಸ್ಥಿತಿಗತಿಗಳ ಬಗ್ಗೆ ಯಾವಾಗಲೂ ಚಿಂತಿಸುತ್ತಿದ್ದರು. 1930ರ ದಶಕದ ಕೊನೆಯಲ್ಲಿ ಬ್ರಿಟನ್ನಿನಲ್ಲಿ ನಡೆದ ಲಾಸ್ಕರ್ ಮುಷ್ಕರವನ್ನು ಬೆಂಬಲಿಸಿದರು. 1934-39ರ ನಡುವೆ ಲೇಬರ್ ನಗರ್ ಸಭೆಯ ಸದಸ್ಯರಾಗಿದ್ದರು. 1944-47ರ ನಡುವೆ ಬಾರ್ಬರಾ ಕಾಸಲ್ ಜೊತೆಯಲ್ಲಿ ಕೆಲಸ ಮಾಡಿದರು. 1940-44ರ ನಡುವೆ ಸ್ವತಂತ್ರ ಕೌನ್ಸಿಲರ್ ಆಗಿಯೂ ಕೆಲಸ ಮಾಡಿದರು. ಭಾರತಕ್ಕೆ ಮರಳಲುವ ತನಕವೂ ಅಂತಹದೇ ಹೊಣೆಗಾರಿಕೆಗಳನ್ನೂ ಬೇರೆ ಬೇರೆ ನಗರಸಭೆಗಳಲ್ಲಿ ನಿರ್ವಹಿಸಿದರು. ಆ ನಡುವೆ 1939ರಲ್ಲಿ ಲೇಬರ್ ಪಕ್ಷದಿಂದ ಖಂಡಿತ ಗೆಲ್ಲಬಹುದು ಎನಿಸಿದ್ದ ಸಂಸತ್ ಕ್ಷೇತ್ರವಾದ ದಂಡಿಯಿಂದ ಅಭ್ಯರ್ಥಿಯಾಗುವುದರಲ್ಲಿ ಇದ್ದರು. ಆದರೆ ಭಾರತದ ರಾಷ್ಟ್ರೀಯ ಚಳವಳಿಯ ಜೊತೆ ನೇರ ಸಂಬಂಧ ಇದ್ದ ಕಾರಣ ಮೆನನ್‌ರಿಗೆ ಅವಕಾಶ ನಿರಾಕರಿಸಲಾಯಿತು. ಲೇಬರ್ ಪಕ್ಷದ ನಿರ್ಧಾರವನ್ನು ಪ್ರತಿಭಟಿಸಿ ರಾಜೀನಾಮೆ ಸಲ್ಲಿಸಿದರು. ಹಾಗಂತ 1944ರಲ್ಲಿ ಮತ್ತೆ ಪಕ್ಷ ಸೇರಿಕೊಂಡರು. ತಮ್ಮ ಅಧಿಕಾರಾವಧಿಯಲ್ಲಿ ಸಂಚಾರಿ ಪುಸ್ತಕಾಲಯಗಳನ್ನು ಶುರು ಮಾಡಿದರು. ಮಕ್ಕಳಿಗೆ ಆಟದ ಸ್ಥಳಗಳನ್ನು ಸ್ಥಾಪಿಸಿದರು, ಗ್ರಾಮಫೋನ್ ಮುದ್ರಣಗಳನ್ನು ಬಾಡಿಗೆಗೆ ನೀಡಿದರು. ತಮ್ಮ ನಗರಸಭೆ ವ್ಯಾಪ್ತಿಯಲ್ಲಿ ಆಂಗ್ಲರ ಅಚ್ಚುಮೆಚ್ಚಿನ ಪಬ್‌ಗಳಿಗಿಂತ ಹೆಚ್ಚು ಲೈಬ್ರರಿಗಳನ್ನು ಸ್ಥಾಪಿಸಬೇಕೆಂಬುದು ಅವರ ನನಸಾಗದ ಕನಸಾಗಿತ್ತು. ಇನ್ನು ಭಾರತ ಸ್ವಾತಂತ್ಯ್ರ ಪಡೆದ ಮೇಲೆ 1947ರಲ್ಲಿ ಮೊದಲ ಭಾರತೀಯ ಹೈ ಕಮಿಷನ್ ಆಗಿ ಬ್ರಿಟನ್ನಿನಲ್ಲಿ ನಿಯುಕ್ತಿಗೊಂಡರು. 1952ರಲ್ಲಿ ಭಾರತಕ್ಕೆ ಮರಳಿ ರಾಜಕೀಯ ಮತ್ತು ನ್ಯಾಯಾಂಗ ವೃತ್ತಿಯನ್ನು ಮುಂದುವರಿಸಿದರು.

ದಕ್ಷಿಣ ಭಾರತದ ಕ್ಯಾಲಿಕಟ್‌ನಲ್ಲಿ ಜನಿಸಿ, ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿ ಪಡೆಡಿದ್ದ ವಿ.ಕೆ. ಕೃಷ್ಣ ಮೆನನ್ ಲಂಡನ್‌ನಲ್ಲಿ ಪಡೆದ ಸ್ನಾತಕೋತ್ತರ ಪದವಿಗಳ ಜೊತೆ ಚಳವಳಿಗಾರ, ಕೌನ್ಸಿಲರ್, ರಾಯಭಾರಿ, ವಕೀಲ, ಸಂಪಾದಕ ಎನ್ನುವ ಹಲವು ಗುರುತುಗಳನ್ನು ಪಡೆದರು. ಬ್ರಿಟಿಷ್ ಸಾಮ್ರಾಜ್ಯಶಾಹಿಯ ವಿರೋಧಿಯಾಗಿದ್ದರೂ ಲಂಡನ್ ಹಾಗು ಬ್ರಿಟಿಷ್ ಜನಸಾಮಾನ್ಯರೊಡನೆ ಗಾಢ ಸಂಬಂಧ ಬೆಳೆಸಿಕೊಂಡರು.

2013ರ ಜುಲೈ ತಿಂಗಳ ಬ್ರಿಟಿಷ್ ಬೇಸಿಗೆಯ ಬಿರು ಬಿಸಿಲಿನ ಒಂದು ದಿನ, ಆಹ್ವಾನಿತರ ಸಣ್ಣ ಗುಂಪು ಮತ್ತು ಕೆಲವು ಅಭ್ಯಾಗತರ ಸಮ್ಮುಖದಲ್ಲಿ 30 ನಂಬ್ರದ ಲ್ಯಾಂಗ್ಡ್ಯಾನ್ ಪಾರ್ಕ್ ರಸ್ತೆಯ ಮನೆಯಲ್ಲಿ ಕೃಷ್ಣ ಮೆನನ್‌ರ ನೀಲಿ ಫಲಕ ಅನಾವರಣಗೊಂಡಿತು.1929ರಿಂದ 1931ರ ತನಕ ಕೆಲವೊಮ್ಮೆ ದಿನಕ್ಕೆ ಮೂವತ್ತು ಕಪ್ ಚಹಾ ಕುಡಿದು ಹಸಿವೆ ನೀಗಿಸುತ್ತ ಅಲ್ಲದಿದ್ದರೆ ಟೋಸ್ಟ್, ಬಿಸ್ಕಿಟ್, ಬ್ರೆಡ್‌ಗಳಲ್ಲಿ ಹೊಟ್ಟೆ ತುಂಬಿಸಿಕೊಳ್ಳುತ್ತ ತಪಸ್ವಿಯಂತೆ ಬದುಕಿದ್ದ ಮನೆಯಲ್ಲಿ ನೆನಪಿನ ಫಲಕ ನೆಡಲಾಯಿತು. ಇನ್ನು ಉರುಟು ನೀಲಿ ಫಲಕದ ಹೊರಗೂ ಕೃಷ್ಣ ಮೆನನ್‌ ಅವರು ಲಂಡನ್‌ನಲ್ಲಿ ನೆನಪಾದದ್ದಿದೆ. 2021ರಲ್ಲಿ ಲಂಡನ್ನಿನ ನೆಹರು ಸೆಂಟರ್ ಮೆನನ್‌ರ 125ನೆಯ ಜನ್ಮದಿನದ ಆಚರಣೆಯನ್ನು ಆಯೋಜಿಸಿತ್ತು. ಕೋವಿಡ್ ಕಾಲದಲ್ಲಿ ನಡೆದ ಅಂದಿನ ಅಂತಾರಾಷ್ಟ್ರೀಯ ಆನ್ಲೈನ್ ಸಭೆಯಲ್ಲಿ ಭಾಗವಹಿಸಿದ ಭಾಷಣಕಾರರು ಕೃಷ್ಣ ಮೆನನ್‌ರನ್ನು ಬಗೆಬಗೆಯಲ್ಲಿ ಸ್ಮರಿಸಿದ್ದರು. “ಭಾರತೀಯ ಮೂಲದವರು ಮತ್ತೆ ಅವರ ಭಾರತದ ಸ್ನೇಹಿತರು, ಗಾಂಧೀಜಿ, ಸರ್ದಾರ್ ಪಟೇಲ್, ನೆಹರು, ಬೋಸ್, ಅಂಬೇಡ್ಕರ್‌ರ ತ್ಯಾಗ ಸೇವೆಗಳನ್ನು ನೆನಪಿಸುತ್ತಾರೆ. ಆದರೆ ಕೃಷ್ಣ ಮೆನನ್‌ರು ಸ್ವಾತಂತ್ಯ್ರ ಹೋರಾಟದ ಕೊನೆಯ ಮಜಲಿನಲ್ಲಿ ವಹಿಸಿದ ನಿರ್ಣಾಯಕ ಪಾತ್ರವನ್ನು ಮರೆತು ಬಿಡುತ್ತಾರೆ” ಎಂದು, ವಿ ಕೆ ಕೃಷ್ಣ ಮೆನನ್ ಸಂಸ್ಥೆಯ ನಿರ್ವಾಹಕ, ಡಾ ಸೈರಿಯಾಕ್ ಮಾಪ್ರಾಯಲಿ ಹೇಳಿದ್ದರು. ಸರ್ ಪೀಟರ್ ಲೋಯ್ಡ್, ಮಾಜಿ ಸಚಿವ, “ಭಾರತದ ಈ ತನಕದ ಅದ್ಭುತ ಮತ್ತು ಅತ್ಯಂತ ಯಶಸ್ವಿ ರಾಯಭಾರಿ” ಎಂದು ಕೊಂಡಾಡಿದ್ದರು. ಮೆನನ್‌ರನ್ನು, ಅಲಿಪ್ತ ನೀತಿಯ ಪ್ರಮುಖ ವಕ್ತಾರರಾಗಿ ಕೆಲವರು ನೆನಪಿಸಿಕೊಂಡರು. 1952ರಲ್ಲಿ ಭಾರತದ ಮುಖ್ಯ ರಾಯಭಾರಿಯಾಗಿ ವಿಶ್ವ ಸಂಸ್ಥೆಯಲ್ಲಿ “ಅಲಿಪ್ತ ನೀತಿ” ಎನ್ನುವ ಪದ ಬಳಕೆಯನ್ನು ಮೊದಲಬಾರಿಗೆ ಮಾಡಿದ್ದನ್ನು, ಕಾಶ್ಮೀರ ವಿವಾದವನ್ನು ಬಗೆಹರಿಸುವ ಪ್ರಯತ್ನದಲ್ಲಿ ಅವರ ಪಾಲನ್ನು ಕೂಡ ಸ್ಮರಿಸಲಾಯಿತು.

ವಿಶ್ವಸಂಸ್ಥೆಯಲ್ಲಿ ಕಾಶ್ಮೀರದ ಕುರಿತಾಗಿ ಮಾಡಿದ ದೀರ್ಘ ಭಾಷಣ ಅಂದಿನ ಸೋವಿಯತ್ ಒಕ್ಕೂಟದ ಬೆಂಬಲ ಪಡೆಯುವಲ್ಲಿ ಯಶಸ್ವಿಯಾಯಿತು. ಪಶ್ಚಿಮದ ದೇಶಗಳು ಆಗ ಪಾಕಿಸ್ತಾನದ ಪರವಾಗಿದ್ದವು. ಆದರೆ ಮೆನನ್ ರ ಭಾಷಣದ ನಂತರ ಪಾಕಿಸ್ತಾನದ ವಾದಕ್ಕೆ ಸಿಗಬಹುದಾಗಿದ್ದ ಅಂತಾರಾಷ್ಟ್ರೀಯ ಬೆಂಬಲ ಇಲ್ಲದಾಯಿತು. ಎರಡು ದಿನಗಳ ಕಾಲ ಸಾಗಿದ 160 ಪುಟಗಳ ಸುದೀರ್ಘ ಭಾಷಣ ಐತಿಹಾಸಿಕ ದಾಖಲೆಯಾಗುವುದರ ಜೊತೆಗೆ, ಜಮ್ಮು ಮತ್ತು ಕಾಶ್ಮೀರದ ಜನರ ಪಾಲಿಗೂ ಮಹತ್ವಪೂರ್ಣವಾಗಿತ್ತು ಎಂದು ಅಂದು ಸೇರಿದವರು ನೆನೆದಿದ್ದರು.