ಮಗ ಇಸ್ಮಾಯಿಲ್ ಗೆ ಮನೆಯ ಹತ್ತಿರ ಇರುವ ರೈಲ್ ಲೈನಿನ ಬದಿಯಲ್ಲಿರುವ ಸಿಮೆಂಟ್‌ ಕಂಬಗಳ ಕಾಂಪೌಂಡ್ ಮೇಲೇರಿ ದಾಟಿ ಹೋಗುವ ಅಭ್ಯಾಸ. ಅವನ ಮನಸ್ಸಿನ ಪರಿಯನ್ನು ನಿರೂಪಿಸುವ ಈ ದೃಶ್ಯ ರೂಪಕ್ಕೆ ಬೆಂಬಲವಾಗಿ, ಓಡುವ ರೈಲಿನ ಶಬ್ದವನ್ನೂ ನಿರ್ದೇಶಕ ಬಳಸಿಕೊಳ್ಳುತ್ತಾನೆ. ಇಷ್ಟೇ ಅಲ್ಲದೆ ರೈಲಿನಲ್ಲಿ ಕುಳಿತು ಗಾಳಿಗೆದುರಾಗಿ ಮುಖವಿಟ್ಟು, ಮನಸ್ಸು ಹರಿಬಿಟ್ಟು‌, ತನ್ನದೇ ಲೋಕ ರಚಿಸಿಕೊಳ್ಳುವ ಸ್ಥಿತಿಯಲ್ಲಿದ್ದಾನೆ ಅವನು. ಅಮ್ಮನೆದೆಯಲ್ಲಿಯೋ ಗೂಡುಗಟ್ಟಿದ ಆತಂಕ. 
“ಲೋಕ ಸಿನಿಮಾ ಟಾಕೀಸ್‌”ನಲ್ಲಿ ಟರ್ಕಿಯ ‘ತ್ರೀ ಮಂಕೀಸ್‌’ ಸಿನಿಮಾದ ಬಗ್ಗೆ ಬರೆದಿದ್ದಾರೆ ಎ.ಎನ್.‌ ಪ್ರಸನ್ನ

 

ಅಲ್ಲಿ ಇಲ್ಲಿ ಎಲ್ಲ ಕಡೆ ಸಾಮಾನ್ಯವಾಗಿ ಮಧ್ಯಮ ವರ್ಗದ ಕುಟುಂಬದವರು ವರ್ತಿಸುವ, ಆಲೋಚಿಸುವ ರೀತಿ ಸರಿಸುಮಾರು ಒಂದೇ ಬಗೆಯಲ್ಲಿರುತ್ತದೆ. ಅವೆಲ್ಲಕ್ಕೂ ಸುತ್ತುವರಿದಿರುವ ಪರಿಧಿ ಹೆಚ್ಚುಕಡಿಮೆ ಏಕರೀತಿ ಎನ್ನಬಹುದು. ದೈನಂದಿನ ಅಗತ್ಯಗಳನ್ನು ಪೂರೈಸುವ ಜವಾಬ್ದಾರಿಯನ್ನು ಬಿಟ್ಟರೆ ಉಳಿದಂತೆ ಇತರ ಚಟುವಟಿಕೆ ಮತ್ತು ಮನಸ್ಸಿನ ವಿಸ್ತಾರಕ್ಕೆ ಆಸ್ಪದಗಳು ಅತ್ಯಂತ ಕಡಿಮೆ; ಸೂಕ್ಷತೆಗೆ ಯಾವುದರದೋ ಕಡಿವಾಣ. ಗೊತ್ತೇ ಆಗದಂತೆ ದಿನ, ವಾರ, ತಿಂಗಳು, ವರ್ಷಗಳು ಸುಮ್ಮನೇ ಉರುಳುತ್ತವೆ. ಇನ್ನು ಸೂರ್ಯೋದಯ-ಸೂರ್ಯಾಸ್ತಗಳನ್ನು ಗ್ರಹಿಸುವುದಂತೂ ಸಮಾನ ರೀತಿ. ಜಾಗೃತ ಪ್ರಜ್ಞೆ ಪುಡಿಯಾಗಿ ಕೆಳಗೆ ಉದುರಿದ್ದರೂ ಆಶ್ಚರ್ಯಗೊಳ್ಳಬೇಕಿಲ್ಲ. ಹಾಗಾದರೆ ಎಲ್ಲ ನೆಲಸಮವೇ, ಬರಿದು ಬೊಗಸೆಯೇ ಎಂದರೆ ಸುಳ್ಳು. ಇದಕ್ಕೆ ಅಲ್ಲಲ್ಲಿ ಹೊಳೆದು ಜೊತೆಗೂಡುವ ಪ್ರಸಂಗಗಳೆಂದರೆ ಸಂತಾನ ವೃದ್ಧಿ, ಮದುವೆ, ಓದಿನ ಪ್ರಗತಿ, ಅಲ್ಲೊಂದಿಷ್ಟು-ಇಲ್ಲೊಂದಿಷ್ಟು ಅಂಟಿಕೊಂಡಿರುವ ಹವ್ಯಾಸ ಇತ್ಯಾದಿಗಳು. ಕುಟುಂಬದವರ ಹಿತಾಸಕ್ತಿಯನ್ನು ಗಮನಿಸುವುದರ ಕಡೆಗೆ ಜೊತೆಗೆ ತಮ್ಮ ಕನಸಿನ ಬದುಕಿನ ದಿಕ್ಕಿನಲ್ಲಿ ಇರುತ್ತದೆ. ಹೀಗೆ ತಮಗೆ ನಿಲುಕುವುದರ ಬಗ್ಗೆ ಇರುವ ಸಮಾಧಾನಕ್ಕಿಂತ ಎಟುಕದಿರುವ ನೆಲೆಯ ಬಗ್ಗೆ ಅಸಮಾಧಾನ, ಸಂಕಟ ಜೊತೆಗೂಡಿರುವುದೇ ಸಾಮಾನ್ಯ. ಅದರ ಪ್ರಮಾಣ ವೈಯಕ್ತಿಕ ಕುಟುಂಬದ ವ್ಯಕ್ತಿಗಳ ಮೇಲೆ ಕೂಡ ಅವಲಂಬಿಸಿರುವುದು ಸಹಜವೇ.

(ನೂರಿ ಬೀಕೆ ಜೈಲಾ)

ಸದ್ಯದ ಬದುಕಿನ ಚೌಕಟ್ಟನ್ನು ಮೀರುವ, ಹೊಸದಕ್ಕೆ ಹಾತೊರೆಯುವ ತಮ್ಮ ಅಭಿಲಾಷೆಗೆ ಆಂತರಿಕ ಶಕ್ತಿ ಎಷ್ಟಿದೆ ಎನ್ನುವುದನ್ನು ವಿವೇಚಿಸುವ, ಸರಿಯಾಗಿ ಪರಿಭಾವಿಸುವ ಪ್ರಸಂಗಗಳು ಕಡಿಮೆಯೇ. ಇದರಿಂದಾಗಿಯೇ ತೋರಿಕೆಗೆ ನೆಮ್ಮದಿಯ ಜೀವನ ಎಂದು ಇತರರು ಭಾವಿಸುವ ರೀತಿಯಲ್ಲಿರುವ ಮಧ್ಯಮವರ್ಗದ ವ್ಯಕ್ತಿಗಳು ಸಾಮಾನ್ಯವಾಗಿ ಅಂತರಂಗದಲ್ಲಿ ಯಾವಾಗಲೂ ತಳಮಳ ಮತ್ತು ತಲ್ಲಣ ಆಕ್ರಮಿಸಲು ಬಿಟ್ಟುಕೊಟ್ಟಿರುತ್ತಾರೆ ಎನ್ನುವುದು ತಿಳಿಯದ ವಿಚಾರವೇನಲ್ಲ. ಇದಾವುದೂ ಇಲ್ಲದೆ ಸುಮ್ಮನೆ ನೆಮ್ಮದಿಯಿಂದ ಬದುಕುವವರ ಸಂಖ್ಯೆ ಕಡಿಮೆಯೇ. ಹೊರಗಿನ ಪ್ರಪಂಚದ ವಿಸ್ತಾರ ಬಗೆಬಗೆಯ ಬಣ್ಣದ ಆಕರ್ಷಣೆಗಳನ್ನು ತೆರೆದಿಡುತ್ತವೆ. ಜೊತೆಗೆ ತಾವು ನೋಡುತ್ತಿದ್ದಂತೆಯೇ ತಾವು ಬಲ್ಲ ಇತರೆ ಕೆಲವು ವ್ಯಕ್ತಿಗಳು ಮತ್ತೊಂದು ಜಗತ್ತಿಗೆ ಜಿಗಿದ ಉದಾಹರಣೆಗಳು ಮತ್ತು ತಮ್ಮೊಳಗಿನ ಕೊರತೆ ಇವುಗಳು ಒಟ್ಟೊಟ್ಟಾಗಿ ಅಸಮಾಧಾನ ಉಕ್ಕಿಸಲು ಕಾರಣವಾಗುತ್ತವೆ ಎನ್ನುವುದೂ ನಿಜವೇ. ಇವುಗಳ ಪರಿಣಾಮವಾಗಿ ಆ ಸೌಲಭ್ಯ ಇಲ್ಲದ ಕುಟುಂಬದವರು ಹೆಚ್ಚಿನ ಸಂಕಟಕ್ಕೆ ಒಳಗಾಗುವುದನ್ನು ಕಲ್ಪಿಸಿಕೊಳ್ಳುವುದು ಕಷ್ಟವೇನಲ್ಲ. ಇವೆಲ್ಲಕ್ಕೆ ಕಾರಣ ವ್ಯಕ್ತಿಯ ಅಥವ ಕುಟುಂಬದ ಒಟ್ಟಾರೆ ಸುಖದ ಬಗೆಬಗೆಯ ಕಲ್ಪನೆ. ಅವುಗಳಿಗೆಲ್ಲ ಸಾಮಾನ್ಯವಾಗಿ ಲೌಕಿಕ ಅಂಶಗಳೇ ಬುನಾದಿ.

ಮಧ್ಯಮ ವರ್ಗದವರೆಂದರೆ ಕೆಳ ಮಧ್ಯಮ ಮತ್ತು ಉತ್ತಮ ವರ್ಗದವರ ದೃಷ್ಟಿಯಲ್ಲಿ ಶಾಪಗ್ರಸ್ಥರು. ತಮ್ಮ ಜೀವನದ ಏಳಿಗೆಗೆ ಅವಕಾಶವೇ ಸೊನ್ನೆ ಎಂದು ಹುಟ್ಟಿನಿಂದಲೇ ಮನದಟ್ಟಾಗುವುದು ಮೊದಲನೆಯದಾದರೆ ಇನ್ನೊಂದಕ್ಕೆ ಆ ಬಗ್ಗೆ ಅರಿತುಕೊಳ್ಳುವ ಅಗತ್ಯವೇ ಇಲ್ಲ. ಎಲ್ಲ ಸುಲಿದ ಬಾಳೆಯ ಹಣ್ಣಿನ ರೀತಿ. ಪ್ರಾಪಂಚಿಕ ಅನುಕೂಲಗಳಿಗೆ ಹಾತೊರೆಯುವುದು ಸುಲಭ. ಆದರೆ ಅವುಗಳ ಗಳಿಕೆಗೆ ಬೇಕಾದ ಮೌಲ್ಯಾಧಾರಿತ ಬಲ, ಆಂತರಿಕ ಶಕ್ತಿಗಳ ಕೊರತೆ ಅನೇಕ ಸಂದರ್ಭಗಳಲ್ಲಿ ವ್ಯಕ್ತಿತ್ವದ ನಾಶ ಮತ್ತು ಅದಕ್ಕೂ ಮೀರಿದ ಬೆಲೆಯನ್ನು ತೆರಬೇಕಾಗುತ್ತದೆ.

ಮೇಲಿನಂಶಗಳನ್ನು ಒಟ್ಟಾರೆಯಾಗಿ ಪರಿಭಾವಿಸಿ, ಅವುಗಳಿಗೆ ಕಥನ ರೂಪಕೊಟ್ಟು ಮತ್ತು ದೃಶ್ಯ ರೂಪದಲ್ಲಿ ಬೆಳ್ಳಂಬೆಳಗಿನಷ್ಟು ಸ್ಪಷ್ಟವಾಗಿ ಎಲ್ಲ ಸೂಕ್ಷತೆಗಳನ್ನು ಒಳಗೊಂಡು ನಿರೂಪಿಸಿ ವಿಜಯದ ಪತಾಕೆ ಎನ್ನುವಂತೆ ಕಾನ್‌ ಚಿತ್ರೋತ್ಸವದಲ್ಲಿ ಶ್ರೇಷ್ಠ ನಿರ್ದೇಶಕ ಪ್ರಶಸ್ತಿ ಗಳಿಸಿದ ಚಿತ್ರ ʻತ್ರೀ ಮಂಕೀಸ್ ʼ.

ನೂರಿ ಬೀಕೆ ಜೈಲಾ ಈ ಚಿತ್ರಕ್ಕೆ ನೇಯ್ದಿರುವ ಕಥನ ಅತ್ಯಂತ ಸರಳವಾದದ್ದು. ಪುಟಾಣಿ ಚಿಗುರಿನಂತಿರುವ ಅದು ನಿರೂಪಣಾ ಕ್ರಮದಲ್ಲಿ ನಿರ್ದೇಶಕನ ಕಲ್ಪನೆ, ಶೈಲಿ ಮತ್ತು ಸಂಬಂಧಿಸಿದ ಇತರ ಸಿನಿಮಾ ಭಾಷೆಯ ಪರಿಕರಗಳನ್ನು ಬಳಸಿ, ದೃಶ್ಯದಿಂದ ದೃಶ್ಯಕ್ಕೆ ಚಿಗುರು ಬೆಳೆದು ರೆಂಬೆ, ಕೊಂಬೆ ಹಾಗೂ ರುಚಿಕರ ಫಲಗಳನ್ನು ಉಣಬಡಿಸುತ್ತ ಹೋಗುತ್ತದೆ.

ಅದೊಂದು ಕುಟುಂಬ. ಅದರ ಯಜಮಾನ‌ ಯೂಪ್, ರಾಜಕೀಯ ಮತ್ತು ಆರ್ಥಿಕ ಸೌಲಭ್ಯವಿರುವ ವ್ಯಕ್ತಿ ಸರ್ವೆಟ್‌ ಎಂಬುವನ ಕಾರಿನ ಡ್ರೈವರ್‌. ಕುಟುಂಬದಾಕೆ ಹೇಸರ್‌ ಗೆ ದೊಡ್ಡ ಕಿಚನ್‌ನಲ್ಲಿ ಅಡುಗೆ ಮಾಡುವ ಕೆಲಸ. ಅವರಿಗೊಬ್ಬ ಇಪ್ಪತ್ತರ ಸಮೀಪದ ಮಗ ಇಸ್ಮಾಯಿಲ್‌. ಯಾರದೇ ಕಣ್ಣಿಗೆ ಢಾಳಾಗಿ ಕಾಣುವಂತಿದೆ ಈ ಕುಟುಂಬದ ಆರ್ಥಿಕ ಮಟ್ಟ. ಎಲ್ಲವನ್ನೂ ಸರದೂಗಿಸುವ ಸೆಣಸಾಟ. ಉಸಿರಿನ ಜೊತೆಗೇ ಹೆಣೆದುಕೊಂಡಿರುವ ದೈನಂದಿನ ಆಗುಹೋಗುಗಳು. ಬೆಳಗಾಯಿತೆಂದು ತೋರುವಾಗಲೇ ಸಂಜೆಯಾಗಿ ಕತ್ತಲಿಣುಕುವುದು ನಿತ್ಯದ ಪರಿಪಾಠ. ಸುತ್ತಮುತ್ತಲಿರುವ ಜೀವಿಗಳ ಒಡನಾಟ ಮತ್ತು ಇತರ ವಿಷಯ ವಿಚಾರಗಳಿಗೆ ಸಮಯದ ಅಭಾವ. ಇರುವಷ್ಟರಲ್ಲಿ ಸಂತೃಪ್ತರಾಗಿ ಅವರು ಇಷ್ಟು ವರ್ಷವೂ ಕಾಲ ತಳ್ಳಿದ್ದಾಗಿದೆ. ಸುಮ್ಮನೆ ಉರುಳಿದ ಕಾಲದಲ್ಲಿ ಕಾಲದಲ್ಲಿ ಏರಿಲ್ಲ, ಇಳಿವಿಲ್ಲ. ಸುಮ್ಮನೆ ಬದುಕು ಸವೆಸುತ್ತ ಎಲ್ಲದರ ಸಮತೋಲನ ಕಾಪಾಡಿಕೊಳ್ಳುವುದರಲ್ಲಿಯೇ ಗಂಡ-ಹೆಂಡತಿ ಸುಸ್ತು. ಇದು ಅಷ್ಟಕ್ಕೇ ಮುಗಿಯುವಂಥದಲ್ಲ. ಮುಂದಿನ ಪೀಳಿಗೆಯವನಿದ್ದಾನೆ. ಅವನ ಭವಿಷ್ಯ, ಬದುಕು, ಅದರ ಬಗ್ಗೆ ಅವರ ಚಿಂತೆ ಅಗಾಧ. ಹೌದು ಚಿಂತೆ ಬೆಟ್ಟವಾಗಿರುವುದಕ್ಕೆ ಕಾರಣವಿದೆ. ಮಗ ಇಸ್ಮಾಯಿಲ್‌ಗೆ ವಿದ್ಯೆ ಎಂದರೆ ನೈವೇದ್ಯ. ಅವನು ಬಿಸಿ ರಕ್ತದ ಹರೆಯದವನು. ವಿವೇಕ, ವಿಚಾರಗಳು ಅವನ ಬುದ್ಧಿಯ ಬೌಂಡರಿಯಾಚೆ. ಆದರೆ ಮನಸ್ಸಿನ ಗೋಣಿ ಚೀಲದ ತುಂಬ ಒತ್ತೊತ್ತಿ ತುಂಬಿದ ಲೌಕಿಕ ಸವಲತ್ತುಗಳ ಆಪೇಕ್ಷೆ.

ಇಸ್ಮಾಯಿಲ್ ಮನೆಯ ಹತ್ತಿರ ಇರುವ ರೈಲ್ ಲೈನಿನ ಬದಿಯಲ್ಲಿರುವ ಸಿಮೆಂಟ್‌ ಕಂಬಗಳ ಕಾಂಪೌಂಡ್ ಮೇಲೇರಿ ದಾಟಿ ಹೋಗುವ ಅಭ್ಯಾಸ. ಅವನ ಮನಸ್ಸಿನ ಪರಿಯನ್ನು ನಿರೂಪಿಸುವ ಈ ದೃಶ್ಯ ರೂಪಕ್ಕೆ ಬೆಂಬಲವಾಗಿ ಓಡುವ ರೈಲಿನ ಶಬ್ದವನ್ನೂ ನಿರ್ದೇಶಕ ಬಳಸಿಕೊಳ್ಳುತ್ತಾನೆ. ಇಷ್ಟೇ ಅಲ್ಲದೆ ರೈಲಿನಲ್ಲಿ ಕುಳಿತು ಹೊರಗೆ ಗಾಳಿಗೆದುರಾಗಿ ಮುಖವಿಟ್ಟು, ಮನಸ್ಸು ಹರಿಬಿಟ್ಟು‌, ತನ್ನದೇ ಲೋಕ ರಚಿಸಿಕೊಳ್ಳುವ ಸ್ಥಿತಿಯಲ್ಲಿ ಅವನು. ಸಕಲ ರೀತಿಯಲ್ಲಿ ವಿವೇಕರಹಿತನಾದ ಇಸ್ಮಾಯಿಲ್‌ ಗೆ ಪುಂಡ ಪೋಕರಿಗಳ ಸಹವಾಸ. ಮುಖವೆಲ್ಲ ಜಜ್ಜಿ ರಕ್ತ ಸೋರುತ್ತಿರುವ ಸ್ಥಿತಿಯಲ್ಲಿ, ತಾಯಿಯ ಎದುರು ನಿಲ್ಲುತ್ತಾನೆ. ಇದೆಲ್ಲದರ ಚಿಂತೆ ಅವನ ಅಮ್ಮನಿಗೆ. ಗಂಡನ ಬಳಿಯೂ ಈ ಬಗ್ಗೆ ಮಾತೆತ್ತುವುದಿಲ್ಲ ಆಕೆ.. ಕುಟುಂಬದ ಸದಸ್ಯರ ನಡುವೆ ಮಾತುಗಳೇ ಅಪರೂಪ. ಮನೆಯಲ್ಲಿ ಮೌನದ ರಾಜ್ಯಭಾರ.

ಪ್ರಾಪಂಚಿಕ ಅನುಕೂಲಗಳಿಗೆ ಹಾತೊರೆಯುವುದು ಸುಲಭ. ಆದರೆ ಅವುಗಳ ಗಳಿಕೆಗೆ ಬೇಕಾದ ಮೌಲ್ಯಾಧಾರಿತ ಬಲ, ಆಂತರಿಕ ಶಕ್ತಿಗಳ ಕೊರತೆ ಅನೇಕ ಸಂದರ್ಭಗಳಲ್ಲಿ ವ್ಯಕ್ತಿತ್ವದ ನಾಶ ಮತ್ತು ಅದಕ್ಕೂ ಮೀರಿದ ಬೆಲೆಯನ್ನು ತೆರಬೇಕಾಗುತ್ತದೆ.

ಇದೆಲ್ಲ ಪರಿಸ್ಥಿತಿಯಿಂದ ಬದಲಾವಣೆಗೆ ಕಾರಣವಾಗುವ ಘಟನೆ ಚಿತ್ರದ ಮೊದಲಿಗೇ ಸಂಭವಿಸುತ್ತದೆ. ಸರ್ವೆಟ್‌ ಕಾರನ್ನು ತಾನೇ ರಾತ್ರಿಯ ಸಮಯದಲ್ಲಿ ಓಡಿಸುತ್ತ ವ್ಯಕ್ತಿಯೊಬ್ಬನ ಸಾವಿಗೆ ಕಾರಣನಾಗುತ್ತಾನೆ. ಇಂಥ ಅನಿರೀಕ್ಷಿತಗಳನ್ನು ಆಪೋಷಣೆ ತೆಗೆದುಕೊಳ್ಳುವ ಉನ್ನತ ಸಾಮಾಜಿಕ ನೆಲೆಯಲ್ಲಿರುವ ಅವನಿಗೆ, ಅಪಘಾತವಾದ ಸ್ಥಳದ ಬಳಿಗೆ ಇನ್ನೊಂದು ಕಾರು ಬಂದದ್ದು ತೊಡಕೆನಿಸುತ್ತದೆ. ಅವರಿಗೆ ವ್ಯಕ್ತಿಯ ಸಾವಿಗೆ ತಾನು ಕಾರಣವೆಂದು ತಿಳಿದಿದೆ ಎಂಬ ಅನುಮಾನ. ಜೊತೆಗೆ ತನ್ನ ಕಾರಿನ ನಂಬರಿನಿಂದ ತೊಂದರೆಗೆ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸುವುದು ಕಷ್ಟವೆಂದು ತಕ್ಷಣವೇ ಅರಿವಾಗುತ್ತದೆ. ಅವನು ತನ್ನ ಡ್ರೈವರ್ ಯೂಪ್‌ಗೆ ವ್ಯಕ್ತಿಯ ಸಾವಿನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಹೇಳುತ್ತಾನೆ. ಯೂಪ್‌ ಅರೆ ಕ್ಷಣ ಯೋಚಿಸುತ್ತಾನೆ ನಿಜ. ಮುಖ್ಯವಾಗಿ ತನ್ನ ಸಂಸಾರದ ಯೋಗಕ್ಷೇಮ ಮುಂದಿನ ಗತಿ ಏನು ಎಂದು ಹೊಯ್ದಾಡುವುದು ಸಹಜವಾದರೂ ಬೇರೆ ಆಯ್ಕೆಗಳಿಲ್ಲ. ಹಲವು ಬಗೆಯ ಶಕ್ತಿಯುಳ್ಳ ಯಜಮಾನ ಸರ್ವೆಟ್‌ನ ಎದುರು ಅವನಲ್ಲಿರುವ ಶಕ್ತಿ ದಿಢೀರ್‌ ಕಮರಿ ಹೋಗುತ್ತದೆ. ಸರ್ವೆಟ್‌ ನ ಅಪೇಕ್ಷೆ‌ಯನ್ನು ನೆರವೇರಿಸಲು ಒಪ್ಪಿಕೊಳ್ಳುತ್ತಾನೆ. ಹೆಂಡತಿಯೊಂದಿಗೂ ಉಂಟಾಗಿರುವ ಸಂದಿಗ್ಧ ಪರಿಸ್ಥಿಯನ್ನು ಚರ್ಚಿಸುವುದಿಲ್ಲ. ಇನ್ನು ಮಗನಂತೂ ಇಂಥ ವಿಷಯದಿಂದ ಗಾವುದ ದೂರ. ಆಜಾನುಬಾಹುವಿನಂತೆ ಕಾಣುವ ಯೂಪ್ ಈಗ ಸಂಪೂರ್ಣವಾಗಿ ಶೋಷಿತ. ಆಶ್ಚರ್ಯವೇನೆಂದರೆ ಅದಕ್ಕೆ ಅವನು ಕೊಂಚವೂ ಪರಿತಪಿಸುವುದಿಲ್ಲ. ಸ್ಥಳೀಯ ಸಾಮಾಜಿಕ ಪರಿಯನ್ನು ಬಿಂಬಿಸುವ ಇದರ ರೀತಿಗೆ ಪರಿಹಾರವೇ ನಾಪತ್ತೆಯಂತೆ ತೋರುತ್ತದೆ. ಇವೆಲ್ಲದರ ಪರಿಣಾಮ ಯೂಪ್‌ಗೆ ಸುಮಾರು ಮುಕ್ಕಾಲು ವರ್ಷ ಜೈಲು ವಾಸ.

ವ್ಯಕ್ತಿಯೊಬ್ಬನ ಸಾವಿಗೆ ಹೋಲಿಸಿದರೆ ಜೈಲು ವಾಸದ ಅವಧಿ ಸ್ವಲ್ಪವೂ ಲೆಕ್ಕಕ್ಕಿಲ್ಲ, ನಿಜ. ಆದರೆ ಅದಕ್ಕೆ ಒಳಗಾಗಲು ಸರ್ವೆಟ್‌ ಸಿದ್ಧನಿರುವುದಿಲ್ಲ. ಇದಷ್ಟೇ ಕಾರಣವಲ್ಲದೆ ಬಹಳ ಬೇಗನೆ ಅವನು ಉಮೇದುವಾರನಾಗಿ ನಿಲ್ಲುವ ಎಲೆಕ್ಷನ್‌ ಇರುತ್ತದೆ. ಇವೆರಡರ ಜೊತೆಗೆ ಉನ್ನತ ಶ್ರೇಣಿಯಲ್ಲಿರುವ ಅವನ ಸಾಮಾಜಿಕ ಮಟ್ಟ ಮತ್ತು ಆರ್ಥಿಕ ಬಲ. ಇಷ್ಟಿದ್ದ ಮೇಲೆ ಅವನು ಬೇರೇನು ಮಾಡಲು ಸಾಧ್ಯ? ತನ್ನ ಬದಲಿಗೆ ಡ್ರೈವರನ್ನು ತೊಂದರೆಗೆ ಗುರಿಪಡಿಸುತ್ತಿದ್ದೇನೆ ಎನ್ನುವ ಪ್ರಜ್ಞೆಗೆ ಒಳಗಾಗಿ ಉದಾರವೆನ್ನಿಸುವವನ ಹಾಗೆ ನಡೆದುಕೊಳ್ಳುತ್ತಾನೆ. ಯೂಪ್‌ ನ ಆಸೆಯನ್ನು ಮತ್ತಷ್ಟು ಹಿಗ್ಗಿಸುವ ಸಲುವಾಗಿ ಶಿಕ್ಷೆಯ ಅವಧಿಯಲ್ಲಿ ಮಾಮೂಲಿನ ಸಂಬಳ ಮತ್ತು ತನ್ನ ಬದಲಿಗೆ ಜೈಲು ವಾಸ ಅನುಭವಿಸುವ ಅವನಿಗೆ ಅಪಾರ ಹಣ ಕೊಡುವ ವಾಗ್ದಾನ ಮಾಡುತ್ತಾನೆ.

ಸರ್ವೆಟ್‌ ಮೂಡಿಸುವ ಈ ಬಗೆಯ ಅನುಕೂಲಗಳು ಮಧ್ಯಮ ವರ್ಗದ ಯೂಪ್‌ ನ ಕುಟುಂಬಕ್ಕೆ ಹಲವು ರೀತಿಯ ತಿರುವುಗಳನ್ನು ಇದು ಒದಗಿಸುತ್ತದೆ. ಗಂಡ ಹೀಗೆ ಮಾಡಬಹುದೇ ಎಂದು ಹೆಂಡತಿ ಹೇಸರ್‌, ಅಥವ ಮಗ ಇಸ್ಮಾಯಿಲ್‌ ಸ್ವಲ್ಪವೂ ಯೋಚಿಸುವುದಿಲ್ಲ. ಅವರು ಹೀಗಲ್ಲದೆ ಯೂಪ್‌ ಬೇರೇನೂ ಮಾಡುವಂತಿಲ್ಲ ಎಂದು ತೋರುವಷ್ಟು ಪ್ರತ್ಯೇಕವಾಗಿರುತ್ತಾರೆ. ಹೀಗಾಗಿ ಮನೆಯಲ್ಲಿ ಮೂರು ಜನರಿದ್ದರೂ ಮೂವರೂ ತಮ್ಮಷ್ಟಕ್ಕೆ ಸ್ವತಂತ್ರರೇ. ಅವರನ್ನೆಲ್ಲ ಹಿಡಿದಿಡುವ ಸಂಬಂಧವೊಂದಿರುತ್ತದೆ. ಆದರೆ ಅವರನ್ನು ಬಂಧಿಸಿಟ್ಟ ಬಂಧನದ ಎಳೆ ಗಟ್ಟಿಯದಲ್ಲ. ಇದು ಕೂಡ ಬಹಳ ಬೇಗ ಬದಲಾಗುತ್ತದೆ. ಸರ್ವೆಟ್‌ ರಾಜಕೀಯ ಪಕ್ಷವೊಂದರ ಮೂಲಕ ಎಲೆಕ್ಷನ್ನಿಗೆ ನಿಂತು ಗೆಲ್ಲುವುದು ಅವನಿಗೊಂದು ಕಿರೀಟದಂತೆ. ಅವನ ಅಹಂಗೆ ಇನ್ನೊಂದು ಕೋಡು ಮೂಡುತ್ತದೆ. ಸಹಜವಾಗಿಯೇ ದುರ್ಗುಣಗಳ ಅಟ್ಟಹಾಸ ಅವನೊಳಗೆ. ಇದರಿಂದಾಗಿ ಅವನಿಗೆ ಯೂಪ್‌ ನ ಹೆಂಡತಿ ಹೇಸರ್‌ ಮೇಲೆ ಆಸಕ್ತಿ ಉಂಟಾಗುತ್ತದೆ. ಅವಳು ತಕ್ಷಣವೇ ಅದನ್ನು ಸ್ವೀಕರಿಸದೆ ನಂತರ ಸ್ವೀಕರಿಸುತ್ತಾಳೆ.

ಕ್ರಮೇಣ ಮನುಷ್ಯ ಸಹಜವಾದ ಮತ್ತು ಮಧ್ಯಮವರ್ಗದವರಿಗೆ ಎಟುಕದ ಆಶೋತ್ತರಳಿಗೆ ತುತ್ತಾಗುತ್ತಾಳೆ. ಇದರ ಜೊತೆ ಯೂಪ್‌ ಜೈಲಿನಿಂದ ಬಂದ ಮೇಲೆ ದೊರಕಬೇಕಿದ್ದ ಹಣ ಮೊದಲಿಗೇ ವಸೂಲು ಮಾಡಿ ಮಗ ಇಸ್ಮಾಯಿಲ್‌ಗೆ ಕಾರು ಖರೀದಿಸಲು ಅವಕಾಶ ಮಾಡಿಕೊಡುತ್ತಾಳೆ. ಸರ್ವೆಟ್ ಅವಳನ್ನು ಲೈಂಗಿಕವಾಗಿಯೂ ದುರುಪಯೋಗಪಡಿಸಿಕೊಳ್ಳುತ್ತಾನೆ. ಸಂಸಾರದಲ್ಲಿ ಉಂಟಾದ ಪಲ್ಲಟಗಳಿಂದ ಸಂತುಷ್ಟಳಾದಂತೆ ಹೇಸರ್‌ ಕಂಡರೂ ಅದು ಬಹಳ ಬೇಗನೆ ಕಮರಿಹೋಗುತ್ತದೆ. ತನಗೆ ಕಾರು ಲಭಿಸಿತೆಂದು ಖುಷಿಯಲ್ಲಿರುವ ಇಸ್ಮಾಯಿಲ್‌ಗೂ ಅಮ್ಮನ ಅನೈತಿಕ ಸಂಬಂಧದ ಪುರಾವೆ ಸಿಕ್ಕು ಅಮ್ಮ ಮತ್ತು ಸರ್ವೆಟ್‌ ಇಬ್ಬರ ಮೇಲೆ ರೋಷವುಕ್ಕುತ್ತದೆ. ಆದರೆ ವಸ್ತುಸ್ಥಿಯನ್ನು ಬದಲಿಸುವ ಯಾವ ಶಕ್ತಿಯೂ ಇರುವುದಿಲ್ಲ. ಅಷ್ಟೇಕೆ ಅಮ್ಮನನ್ನು ಪ್ರಶ್ನಿಸುವ ಗೋಜಿಗೇ ಹೋಗುವುದಿಲ್ಲ. ತನ್ನ ಜೀವನ ಬೇರೊಂದು ತಿರುವು ತೆಗೆದುಕೊಂಡಿತೆಂದು ತಿಳಿದು ಅದರಂತೆ ವರ್ತಿಸುವ ಹೇಸರ್‌, ಮಗನಿಗೂ ತಾನು ದಾರಿ ತಪ್ಪಿರುವುದು ಗೊತ್ತಾದದ್ದು ತಿಳಿದು ಭಾವನಾತ್ಮಕವಾಗಿ ಕುಗ್ಗುತ್ತಾಳೆ.

ಜೈಲು ಶಿಕ್ಷೆಯಿಂದ ಹೊರಬರುವ ಯೂಪ್‌ ಗೆ ಬಹಳ ಬೇಗನೆ ಇವೆಲ್ಲದರ ವಾಸನೆ ಸಿಗುತ್ತದೆ. ಅವನಿಗೆ ಹೆಂಡತಿಯ ಮುಖಚಹರೆ, ವರ್ತನೆಗಳು ವಿಪರೀತವೆನಿಸುತ್ತದೆ. ಅನುಮಾನಗೊಂಡು ಕೇಳಿದರೆ ಪ್ರತಿಯೊಂದಕ್ಕೂ ʻಸರ್ಪ್ರೈಸ್‌ʼ ಕೊಡಲು ಮಾಡಿದ್ದು ಎನ್ನುವ ಸಮಜಾಯಿಷಿ ಕೊಡುತ್ತಾಳೆ. ಇದನ್ನೊಪ್ಪದ ಅವನ ಸಂದೇಹ ಬಲವಾಗುತ್ತದೆ. ಆದರೆ ಅವನು ಏನೂ ಮಾಡಲಾಗುವುದಿಲ್ಲ. ಅವನ ಸ್ಥಿತಿ ಹೆಂಡತಿಗೂ ಗೊತ್ತಾಗುತ್ತದೆ. ಹಾಗೆಯೇ ಅಮ್ಮನ ಅವತಾರ ಅಪ್ಪನಿಗೆ ತಿಳಿದಿದೆ ಎಂದು ಮಗನಿಗೂ ಕೂಡ ತಿಳಿಯುತ್ತದೆ.

ಚಿತ್ರದಲ್ಲಿ ʻತ್ರೀ ಮಂಕೀಸ್‌ʼ ಶೀರ್ಷಿಕೆಯನ್ನು ಮೂರು ಪಾತ್ರಗಳಿಗೆ ರೂಪಕದ ಹಾಗೆ ಸಮರ್ಥವಾಗಿ ಬಳಸಿದ್ದಾನೆ.
ಅನುಕೂಲಕ್ಕೆ, ಲೌಕಿಕ ಹಂಬಲಗಳ ಈಡೇರಿಕೆಗೆ ಒಳಗಾದ ವ್ಯಕ್ತಿಗಳಿಗೆ ಬೇರೆ ಯಾವುದೇ ರೀತಿಯ ಸಂಬಂಧವೂ ಪರಿಗಣನೆಗೆ ಸಿಗುವುದಿಲ್ಲ ಎನ್ನುವುದನ್ನು ನಿರ್ದೇಶಕ ಹೇಸರ್ಳ ವರ್ತನೆಯಿಂದ ನಿರೂಪಿಸುತ್ತಾನೆ. ಸರ್ವೆಟ್‌ ಗೆ ನಡೆದಿರುವ ಸಂಗತಿಗಳನ್ನು ಸಂಕೀರ್ಣಗೊಳಿಸುವುದರಲ್ಲಿ ಆಸಕ್ತಿ ಇರುವುದಿಲ್ಲ. ಯೂಪ್‌ ಬಿಡುಗಡೆಯಾಗಿ ಬಂದ ಮೇಲೆ ಹೇಸರ್ಳ ಮೇಲಿದ್ದ ಮೋಹ ನಶಿಸಿ ಹೋಗಿರುತ್ತದೆ. ಅವಳು ಇನ್ನಿಲ್ಲದಷ್ಟು ದುಂಬಾಲು ಬಿದ್ದರೂ ಸರ್ವೆಟ್‌ ಕರಗುವುದಿಲ್ಲ. ಅನಂತರವೇ ಹೇಸರ್‌ ಮತ್ತು ಇಸ್ಮಾಯಿಲ್‌ ಮುಂದೇನು ಮಾಡಬೇಕೆಂದು ಯೋಚಿಸಿ ನಿರ್ಧರಿಸುತ್ತಾರೆ.

ಚಿತ್ರದ ನಿರೂಪಣೆಗೆ ತಮ್ಮದೇ ಆದ ಶೈಲಿಯನ್ನು ರೂಪಿಸಿಕೊಂಡಿದ್ದಾರೆ ನಿರ್ದೇಶಕ ನೂರಿ ಬೀಕೆ ಜೈಲಾ ಅಂದರೆ ದೃಶ್ಯಗಳಿಂದ ದೃಶ್ಯಗಳಿಗೆ ಬದಲಾಗುವಾಗ ನಡುವಿನ ಅಂತರದಲ್ಲಿ ನಡೆದ ಸಾಕಷ್ಟನ್ನು ನಮ್ಮ ಕಲ್ಪನೆಗೆ ಬಿಡುತ್ತಾರೆ. ಛಾಯಾಗ್ರಹಣ ವಿನ್ಯಾಸದಲ್ಲಿ ಸಾಧಾರಣವಾಗಿ ಪಾತ್ರದ ಪೂರ್ಣ ರೂಪ ಇರುವುದಿಲ್ಲ. ಅರ್ಧ ಮುಕ್ಕಾಲು ಭಾಗ ಇರುತ್ತವೆ ಮತ್ತು ಹಿನ್ನೆಲೆಯಲ್ಲಿ ಆಯಾ ದೃಶ್ಯದ ಭಾವವನ್ನು ಪ್ರಕಟಿಸಲು ಸಾಧ್ಯವಾಗುವಂತೆ ಸೌಂಡ್‌ ಟ್ರ್ಯಾಕ್‌ ಬಳಸಿರುವುದು ಕಾಣುತ್ತದೆ. ಮನಸ್ಸಿನ ತಾಕಲಾಟವೇ ಹೆಚ್ಚಾಗಿರುವ ಪಾತ್ರಗಳ ರಚನೆಯಲ್ಲಿ ಅವು ಮೌನವಾಗಿ ಏಕಾಂತದಲ್ಲಿ ಇರುವುದನ್ನು ಕಾಣುತ್ತೇವೆ. ಹಾಗಿರುವಾಗ ಅವರಲ್ಲಿರುವ ತಳಮಳವನ್ನು ಸೂಚಿಸಲು, ಅಗತ್ಯ ಭಾವ ಕಲ್ಪಿಸಲು ಅನುವು ಮಾಡಿಕೊಟ್ಟಿದ್ದಾರೆ. ಚಿತ್ರದಲ್ಲಿ ಪಾತ್ರ ಪೋಷಣೆ ಎಷ್ಟು ಪ್ರಾಧಾನ್ಯವೋ ಚಿತ್ರದ ಛಾಯಾಗ್ರಹಣಕ್ಕೂ ಅಷ್ಟೇ ಪ್ರಾಧಾನ್ಯತೆಯಿದ್ದು ಛಾಯಾಗ್ರಾಹಕ(ಗೆಕಾನ್‌ ತಿರಿಯಾಚಿ) ಸೂಕ್ತ ರೀತಿಯಲ್ಲಿ ಬೆಂಬಲ ಕೊಟ್ಟಿರುವುದನ್ನು ಕಾಣುತ್ತೇವೆ. ಇವೆಲ್ಲದರಿಂದ 2008ರ ಕಾನ್‌ ಚಿತ್ರೋತ್ಸವದಲ್ಲಿ ನೂರಿ ಬೀಕೆ ಜೈಲಾ ಶ್ರೇಷ್ಠ ನಿರ್ದೇಶಕ ಪ್ರಶಸ್ತಿಯನ್ನು ಪಡೆದಿರುವುದು ಅತ್ಯಂತ ಸೂಕ್ತ. ಹಾಗೆಯೇ ಅವರಿಗೆ ಎಲ್ಲ ಕೆಲಸಗಳಲ್ಲಿ ಬೆಂಬಲ ನೀಡಿರುವ ಅವರ ಮಡದಿ(ಎಬ್ರು ಜೈಲಾ) ಇರುವುದು ನಿಜಕ್ಕೂ ವಿಶೇಷ.