ನನ್ನ ಖಂಡಾಂತರದ ಎಡಬಿಡಂಗಿ ಸ್ಥಿತಿಯಿಂದ ಇಲ್ಲಿಯ ಬಣ್ಣಬಣ್ಣದ ನೋಟುಗಳಿಗೆ ನನ್ನ ಕಣ್ಣುಗಳು ಒಗ್ಗಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತಿತ್ತು. ಒಮ್ಮೆ ಇಪ್ಪತ್ತರ ಎರಡು ನೋಟುಗಳಿಗೆ ಬದಲಾಗಿ ಇನ್ನೂರರ ಎರಡು ನೋಟುಗಳನ್ನು ಕೊಟ್ಟುಬಿಟ್ಟಿದ್ದೆ. ಅವನು ಅದನ್ನು ಮುಗುಮ್ಮಾಗಿ ಜೇಬಿನೊಳಗೆ ಇಳಿಸಿಯೂ ಆಯಿತು, ಬಾಗಿಲಿಂದ ಹೋಗಿಯೂ ಆಯಿತು. ಇತ್ತ ನಾನು ಉಳಿದ ದುಡ್ಡನ್ನು ಎಣಿಸಿ ಬೆಚ್ಚಿಬಿದ್ದು ಆತನ ಹೆಸರನ್ನು ಕರೆದೆ. ಪುಣ್ಯಕ್ಕೆ ಲಿಫ್ಟ್ ಇನ್ನೂ ಮೇಲೆ ಬಂದಿಲ್ಲದ್ದರಿಂದ ಅಲ್ಲೇ ನಿಂತಿದ್ದ. ಕೇಳಿದಾಗ, ‘ಹೌದಾ, ನಾನೂ ಸಹ ನೋಡಿಕೊಳ್ಳಲಿಲ್ಲವೇ! ಇಲ್ಲೇ ಇದೆ ನೋಡಿ,’ ಅಂತ ಅನಿವಾರ್ಯವಾಗಿ ಹಿಂತಿರುಗಿಸಿದ.
‘ಕನಾರಳ್ಳಿ ಕಾರ್ನರ್’ ನಲ್ಲಿ ಸುಕನ್ಯಾ ವಿಶಾಲ ಕನಾರಳ್ಳಿ ಮಿಡ್ಲ್‌ಕ್ಲಾಸ್‌ ಮೆಲೋಡಿಗಳ ಕತೆಯನ್ನು ಬರೆದಿದ್ದಾರೆ.

 

ನಾವು ಐದು ವರ್ಷಗಳ ಹಿಂದೆ ಹೊಸದಾಗಿ ಕಟ್ಟಿದ್ದ ಈ ಅಪಾರ್ಟ್‌ಮೆಂಟಿಗೆ ಬಂದಾಗ ಆತ ಎಲ್ಲರ ಮ್ಯಾನ್ ಫ್ರೈಡೆ ತರ ಲಗುಬಗೆಯಿಂದ ಓಡಾಡುತ್ತಿದ್ದ. ಮುಖದಲ್ಲಿ ಹದವಾದ ಖದೀಮ ಕಳೆ ಇತ್ತೇನೋ ಸರಿಯೆ. ‘ನಿಮಗೆ ಏನು ಬೇಕು ಹೇಳಿ. ತಂದುಕೊಟ್ಟರಾಯ್ತೋ ಇಲ್ಲವೋ?ʼ ಅಂತ ಆಪದ್ಬಾಂಧವನಂತಹ ಸ್ವಭಾವಕ್ಕೆ ತಕ್ಕದಾದ ನಗುವಿನಲ್ಲಿ ನಮಗೂ ಹೇಳಿದ.

ಸಿಲಿಂಡರಿಗೆ ಬೇಕಾದದ್ದೇನನ್ನೊ ತಂದೂ ಕೊಟ್ಟಾಗ, ಅರೆ! ಇದು ಹೇಗೆ ಹೊರಗೆಲ್ಲೊ ಸಿಕ್ಕಿತು? ಅಂತ ನನ್ನ ಕಣ್ಣುಗಳು ಕೇಳಿದವು. ‘ಯಾಕೆ ಮೇಡಮ್ ಚಿಂತೆ, ನಿಮ್ಮ ಅಡಿಗೆ ಆಗುತ್ತದೆ, ಸೇಫೂ ಕೂಡ’ ಅಂತ ಹೇಳಿ ತನ್ನ ಗಿಡ್ಡ ಕಾಲುಗಳನ್ನು ಬೀಸಿದಂತೆ ನಡೆದು ಹೋದಾಗ ತಲೆ ಕೊಡವಿದ್ದೆ. ಅವನು ಕೇಳಿದ ದುಡ್ಡನ್ನು ಮರು ಮಾತಾಡದೆ ಕೊಟ್ಟದ್ದೂ ಹೌದು. ಪಾಪ, ಒಂದು ಇನ್ನೂರು ರೂಪಾಯಿ ಹೆಚ್ಚಿಗೆ ಪಡೆದುಕೊಂಡಿದ್ದಿರಬಹುದು. ನಾನು ಅದನ್ನು ಹುಡುಕಿಕೊಂಡು ಹೋಗುವ ಹಾಗಿತ್ತೆ?

ಮಿಡಲ್ ಕ್ಲಾಸ್ ಮೆಲೊಡೀಸ್

ಆತ ಹಾಲು-ಪೇಪರು ಹಾಕುತ್ತಿದ್ದ ಸುಮಾರು ಅರವತ್ತು ವಯಸ್ಸಿನವ. ನಂದಿನಿ ಉತ್ಪನ್ನಗಳು ಏನು ಬೇಕಿದ್ದರೂ ಆತನಿಗೆ ಹೇಳಿದರೆ ತಕ್ಷಣವೇ ಬಂದು ಬೀಳುತ್ತಿತ್ತು.

ಕೋವಿಡ್ ಬಂದೆರಗಿದಾಗ ಎಲ್ಲರೂ ಹೊರಗೆ ಬರಲು ಹೆದರುತ್ತಿದ್ದರೂ ಸಹ ಆತ ಮಾತ್ರ ತರಕಾರಿ ಹಣ್ಣು ಹಂಪಲು, ಔಷಧಿ ಅದು ಇದೂ ಏನು ಬೇಕಾದರೂ, ಯಾರಿಗೆ ಬೇಕಾದರೂ ಹೇಳಿ ತಂದುಕೊಡುತ್ತೇನೆ ಅಂತ ಅಸೋಸಿಯೇಷನ್ ಸೆಕ್ರೆಟರಿಣಿ ಹತ್ತಿರ ಹೇಳುತ್ತಿದ್ದಾಗ ಪರವಾಗಿಲ್ಲವೇ, ಗಟ್ಟಿ ಆಸಾಮಿ ಅಂತ ಅನ್ನಿಸಿತ್ತು. ಒಂದೆರಡು ಸಲ ನಿಯಮಕ್ಕೆ ವಿರುದ್ಧವಾಗಿ ನನ್ನ ಹತ್ತಿರ ಸಾಲವನ್ನೂ ಕೇಳಿದ್ದ. ಏನೋ ಪಾಪ ಅಂತ ಕೊಟ್ಟೂ ಇದ್ದೆ.

ಆದರೆ ಅವನು ಹೆಂಗಸರ ಹತ್ತಿರ ಮಾತ್ರ ತನ್ನ ‘ವೈವಾಟ್ ಗೋಳಿನ’ ಕತೆಯನ್ನು ಹೇಳುತ್ತಿದ್ದ ಅಂತ ಆಮೇಲೆ ಗೊತ್ತಾಯಿತು. ನಾನು ಅಂತರಖಂಡ ಪ್ರಯಾಣದಲ್ಲಿ ತ್ರಿಶಂಕುವಿನ ತರಹ ನೇತಾಡುತ್ತಿದ್ದೆನಲ್ಲ, ಅದಕ್ಕೆ ಒಂದು ದಿನ ಮಹಾ ಹಿತೈಷಿಯಂತೆ, ‘ಮನೆ ಗಲೀಜಾಗಲ್ವಾ? ನನಗೆ ಕೀ ಕೊಡಿ, ನಾನು ಮೇಂಟೇನ್ ಮಾಡ್ತೀನಿ’ ಅಂದಾಗ ಇವನ ಖದೀಮತನ ಹೆಚ್ಚಾಗುತ್ತಿದೆ ಅಂತನ್ನಿಸಿತ್ತು. ‘ಯಾವ ಧೈರ್ಯದಲ್ಲಿ ನನ್ನ ಮನೆಯ ಕೀನ ಯಾರಿಗೋ ಕೊಡ್ತೀನಿ ಅಂತ ಅಂದ್ಕೊಂಡ್ರಿ?’ ಅಂತ ಸ್ವಲ್ಪ ಘಟ್ಟಿಸಿಯೇ ಹೇಳಿದೆ. ಆಸಾಮಿ ‘ಅಲ್ಲ, ನಮ್ಮಿಂದ ಯಾರಿಗಾದರೂ ಉಪಯೋಗ ಆಗೋದಾದ್ರೆ ಯಾಕೆ ಬೇಡಾ ಅಂತ?’ ಎಂದು ಹೇಳುತ್ತಾ ಪೆಚ್ಚು ನಗೆ ನಕ್ಕಿತ್ತು. ಉಪಯೋಗ? ಯಾರಿಂದ, ಯಾರಿಗೆ, ಹೇಗೆ?

ನಾನು ಹಾಲಿನ ಕೂಪನ್ನುಗಳಿಗಾಗಲಿ, ಪೇಪರಿಗಾಗಲಿ, ಅಥವಾ ಸರ್ವಿಸ್ ಚಾರ್ಜಿಗಾಗಲಿ ಏನು ಎಷ್ಟು ಅಂತ ಕೇಳಿದವಳೇ ಅಲ್ಲ. ಬಿಲ್ ಕೊಟ್ಟಷ್ಟಕ್ಕೆ ದುಡ್ಡು ಕೊಡುತ್ತಿದ್ದನ್ನ ಇಲ್ಲಿಯ ನನ್ನ ಸ್ನೇಹಿತೆ ‘ಡಾಲರಿಗೆ ಹೋಲಿಸಿದರೆ ಈ ಅಮೌಂಟು ಸಸ್ತಾ ಅಲ್ವಾ?’ ಅಂತ ನನ್ನ ಛೇಡಿಸಿದ್ದೂ ಇದೆ.

ಹಾಗೆಯೇ ನನ್ನ ಖಂಡಾಂತರದ ಎಡಬಿಡಂಗಿ ಸ್ಥಿತಿಯಿಂದ ಇಲ್ಲಿಯ ಬಣ್ಣಬಣ್ಣದ ನೋಟುಗಳಿಗೆ ನನ್ನ ಕಣ್ಣುಗಳು ಒಗ್ಗಿಕೊಳ್ಳುವುದು ಸ್ವಲ್ಪ ಕಷ್ಟವಾಗುತ್ತಿತ್ತು. ಒಮ್ಮೆ ಇಪ್ಪತ್ತರ ಎರಡು ನೋಟುಗಳಿಗೆ ಬದಲಾಗಿ ಇನ್ನೂರರ ಎರಡು ನೋಟುಗಳನ್ನು ಕೊಟ್ಟುಬಿಟ್ಟಿದ್ದೆ. ಅವನು ಅದನ್ನು ಮುಗುಮ್ಮಾಗಿ ಜೇಬಿನೊಳಗೆ ಇಳಿಸಿಯೂ ಆಯಿತು, ಬಾಗಿಲಿಂದ ಹೋಗಿಯೂ ಆಯಿತು. ಇತ್ತ ನಾನು ಉಳಿದ ದುಡ್ಡನ್ನು ಎಣಿಸಿ ಬೆಚ್ಚಿಬಿದ್ದು ಆತನ ಹೆಸರನ್ನು ಕರೆದೆ. ಪುಣ್ಯಕ್ಕೆ ಲಿಫ್ಟ್ ಇನ್ನೂ ಮೇಲೆ ಬಂದಿಲ್ಲದ್ದರಿಂದ ಅಲ್ಲೇ ನಿಂತಿದ್ದ. ಕೇಳಿದಾಗ, ‘ಹೌದಾ, ನಾನೂ ಸಹ ನೋಡಿಕೊಳ್ಳಲಿಲ್ಲವೇ! ಇಲ್ಲೇ ಇದೆ ನೋಡಿ,’ ಅಂತ ಅನಿವಾರ್ಯವಾಗಿ ಹಿಂತಿರುಗಿಸಿದ. ದುಡ್ಡಿನ ಹುಳವೇ ಅಂತ ಗೊಣಗಿಕೊಂಡಿದ್ದೆ.

ಒಮ್ಮೆ ಸ್ವಲ್ಪ ದಿನ ಕುತೂಹಲಕ್ಕೆ ಹಸುವಿನ ಹಾಲನ್ನು ಲೀಟರಿಗೆ ತೊಂಭತ್ತು ರೂಪಾಯಂತೆ ಕೊಳ್ಳುತ್ತಿದ್ದೆ. ಒಂದು ದಿನ ಹೊರಗೆ ಇಟ್ಟಿದ್ದ ಪಾತ್ರೆ ಮತ್ತು ಕೂಪನ್ನನ್ನ ನೋಡಿ, ‘ಏನು ಮೇಡಮ್, ನಾನು ಇಲ್ಲಿ ಏಜೆನ್ಸಿ ತಗೋಂಡಿರುವವನು. ನೀವು ಮತ್ತೆ ಯಾರ ಹತ್ರಾನೊ ಹಾಲು ತಗೊತೀರಲ್ಲಾ?’ ಅಂತ ಹಕ್ಕಿನ ಧ್ವನಿಯಲ್ಲಿ ಕೇಳಿದಾಗ, ‘ನೀವು ಈ ಹಾಲು ಮಾರುತ್ತೀರಾ? ತಂದುಕೊಡಿ ಮತ್ತೆ’ಅಂತ ಹೇಳಿ ಮಾತು ಜಾರಿಸುತ್ತಾ ನಿಮಗೆ ಯಾರ್ರೀ ನಾನು ಕೊಳ್ಳುವ ಹಾಲಿನ ಏಜೆನ್ಸಿ ಕೊಟ್ಟವರು? ಅಂತ ಆಡಬೇಕಾದ ಜಗಳವನ್ನು ಸ್ವಲ್ಪ ಮುಂದಕ್ಕೆ ಹಾಕಿದೆ. ಸ್ವಲ್ಪ ದಿನವಾದ ಮೇಲೆ ನಾನು ಮತ್ತೆ ಖಂಡಾಂತರಕ್ಕೆ ಜಿಗಿದದ್ದರಿಂದ ಮಾತು ಅಲ್ಲಿಗೇ ನಿಂತಿತು.

ಹೋದ ವಾರ ಆತ ಖಾಯಿಲೆ ಬಿದ್ದರಂತೆ. ಮೊನ್ನೆ ಸಿಕ್ಕಾಗ ‘ಅಂಗಡಿಯಲ್ಲಿ ನಿಮ್ಮ ಇನ್ನೊಬ್ಬ ಮಗನನ್ನ ನೋಡಿದೆ’ ಅಂತ ಅಂದೆ. ‘ಅಯ್ಯೋ, ಅವನು ನನ್ನ ಮಗನಲ್ಲ ಮೇಡಮ್. ನನಗಿರುವುದು ಒಬ್ಬನೇ ಮಗ. ಎತ್ತರವಾಗಿ ಮೈಕೈ ತುಂಬಿಕೊಂಡು ಹ್ಯಾಂಡ್ಸಮ್ಮಾಗಿ ಇದಾನಲ್ಲ, ಅವನು ನನ್ನ ಮಗ,’ ಅಂತ ಹೇಳಿದಾಗ ನನ್ನಷ್ಟೇ ಕುಳ್ಳಾಗಿರುವ ಅವರನ್ನ ನನ್ನ ಕಣ್ಣುಗಳು ಒಮ್ಮೆ ಅಳೆದವು.

ಇರಲಿ, ಮುಖ್ಯವಾದ ಮಾತೇನು ಅಂದರೆ ಪೇಪರ್ ಹಾಕುವ ಕೆಲಸವನ್ನು ಇನ್ಯಾವುದೋ ಹುಡುಗನಿಗೆ ಕೊಟ್ಟು ಬಿಟ್ಟಿದಾರಂತೆ. ಹ್ಯಾಂಡ್ಸಮ್ ಮಗ, ‘ಬದುಕಲ್ಲಿ ತುಂಬಾ ಕಷ್ಟ ಪಟ್ಟಿದೀರಾ, ಇನ್ಮೇಲಿಂದ ರೆಸ್ಟ್ ತಗೋಳಿ ಡ್ಯಾಡಿ,’ ಅಂತ ಹೇಳಿದನಂತೆ. ‘ಸರಿ, ಒಳ್ಳೆಯದೇ ಆಯಿತು ಬಿಡಿ. ಹಾಗೆ ಹೇಳುವ ಮಗನಿರುವುದು ನಿಮ್ಮ ಪುಣ್ಯವೇ,’ ಅಂತ ಅವರು ಕೇಳಬಯಸುವ ಪದಗಳನ್ನು ಉದುರಿಸಿ ಸುಮ್ಮನಾದೆ.

ಆದರೆ ನಿಜವಾದ ವಿಷಯ ಅದಲ್ಲ. ಇನ್ನು ಮುಂದೆ ಪೇಪರ್ ಹಾಕುವ ಸರ್ವೀಸ್ ಚಾರ್ಜಿನಲ್ಲಿ ನಲ್ವತ್ತನ್ನ ಅವರಿಗೇ ಕೊಟ್ಟು ಉಳಿದ ಇಪ್ಪತ್ತನ್ನ ಮಾತ್ರ ಹೊಸಬನಿಗೆ ಕೊಡಬೇಕಂತೆ. ಯಾಕೆ ಅಂತ ಕೇಳಿದೆ. ‘ಮೇಡಮ್, ಈ ಅಪಾರ್ಟ್‌ಮೆಂಟಿನಲ್ಲಿ ಪೇಪರ್ ಹಾಕೋದನ್ನ ತಗೊಳದಿಕ್ಕೆ ನಾನು ಕಷ್ಟ ಪಟ್ಟಿದೀನಲ್ಲಾ? ಅದೇನು ಸುಮ್ಮನೆ ಬಂತಾ?’ ಅಂತ ಅಂದರು. ‘ಸರಿ, ಅವನ ಹತ್ತಿರವೂ ಕಮಿಷನ್ ತಗೊತೀರಲ್ಲಾ?’ ಅಂತ ಅಂದೆ. ‘ಅದೆಲ್ಲಾ ವ್ಯವಾರ ಬಿಡಿ,’ ಅಂತ ಮಾತನ್ನ ತೇಲಿಸಿದರು.

ಅಂದ ಹಾಗೆ ರೈಲ್ವೇ ಸ್ಟೇಷನ್ನಿನ ಎದುರು ಕೂತು ಭಿಕ್ಷೆ ಬೇಡುತ್ತಿದ್ದವ ‘ಆ ಜಾಗವನ್ನ ನನ್ನ ಅಳಿಯನಿಗೆ ವರದಕ್ಷಿಣೆಯಾಗಿ ಕೊಟ್ಟೆ’ ಅಂತ ಅಂದಾಗ ಯಾಕೆ ನಗು ಬರಬೇಕು?
ಬದುಕ ಮನ್ನಿಸೊ ಪ್ರಭುವೆ!