ಪುಟ್ಟ ಕತೆಗೆ ಅದರದೇ ಆದ ಸೊಗಸಿದೆ. ಕತೆ ಯಾರಿಗೂ ನೋವುಂಟುಮಾಡುವುದಿಲ್ಲ. ಭಯ ಮನುಷ್ಯನನ್ನು ಹೇಗೆಲ್ಲ ವರ್ತಿಸುವಂತೆ ಮಾಡುತ್ತದೆ ಎನ್ನುವುದನ್ನು ನೋಡಿದಾಗ ಭಯವಾಗುತ್ತದೆ. ಕತ್ತಲಿಗೆ ಹೆದರಿದ ಜನ ಊಹಿಸಲು ಆಗದಷ್ಟು ಭಯಾನಕವಾದ ಕೃತ್ಯಗಳಲ್ಲಿ ತೊಡಗಿದರು. ಹಿಂದೆಂದೂ ಅನುಭವಿಸದೇ ಇದ್ದ ಕತ್ತಲು ಜನರಲ್ಲಿ ಎಂತಹ ಹೆದರಿಕೆ ಹುಟ್ಟಿಸಿತ್ತು ಎನ್ನುವುದನ್ನು ಊಹಿಸಲು ಕೂಡ ಸಾಧ್ಯವಿಲ್ಲ. ಭಯ ಎಲ್ಲ ತಾರ್ಕಿಕತೆಯನ್ನು ನಾಶಮಾಡಿಬಿಡುತ್ತದೆ. ತನ್ನ ಅಕ್ಕಪಕ್ಕ ಏನಿದೆ ಎನ್ನುವುದೇ ಕಾಣದಾದಾಗ ಮನುಷ್ಯ ಸರಿತಪ್ಪುಗಳ ವಿವೇಚನೆಯನ್ನೇ ಕಳೆದುಕೊಂಡು ಗೊಂದಲದಲ್ಲಿ ಬೀಳುತ್ತಾನೆ. “ಕತ್ತಲು ರಾಕ್ಷಸನಂತೆ ಜನರನ್ನು ಹೆದರಿಸುತ್ತದೆಎನ್ನುವ ಮಾತು ನಿಜ.
ಹೇಮಾ ಎಸ್. ಅನುವಾದಿಸಿರುವ ಅಕಿರ ಕುರೊಸಾವ ಆತ್ಮಕಥೆಯ ಪುಟ

 

ಕಾಂಟೊ ಭೂಕಂಪ ನನ್ನ ಪಾಲಿಗೆ ಅತ್ಯಂತ ಮುಖ್ಯವಾದ ಹಾಗೂ ಭಯಾನಕವಾದ ಅನುಭವ. ಅದರಿಂದ ಪ್ರಕೃತಿಯ ಅದ್ವಿತೀಯ ಶಕ್ತಿ ಮತ್ತು ಮನುಷ್ಯನಾಳದಲ್ಲಿರುವ ಅಸಾಧ್ಯ ಜೀವಶಕ್ತಿಯ ಅರಿವಾಯಿತು. ನನ್ನ ಸುತ್ತಲನ್ನು ಇದ್ದಕ್ಕಿದ್ದಂತೆ ಬದಲಾಯಿಸಿಬಿಡುವ ಮೂಲಕ ಈ ಭೂಕಂಪ ಅಚ್ಚರಿಯ ಕೂಪಕ್ಕೆ ತಳ್ಳಿಬಿಟ್ಟಿತು.

ಎಡೋಗಾವ ನದಿಯ ಪಕ್ಕದಲ್ಲಿನ ರಸ್ತೆ ಸಂಪೂರ್ಣ ಬಿರುಕುಬಿಟ್ಟು ಹಾಳಾಗಿತ್ತು. ನದಿಯ ತಳದಲ್ಲಿನ ಮಣ್ಣೆಲ್ಲ ಎದ್ದು ಹೊರಬಂದು ದ್ವೀಪಗಳಂತಾಗಿತ್ತು. ವಾಲಿಕೊಂಡಿದ್ದ ಮನೆಗಳು ಕಣ್ಣಿಗೆ ಬಿದ್ದವೇ ಹೊರತು ಬಿದ್ದುಹೋಗಿದ್ದ ಮನೆಗಳು ಕಣ್ಣಿಗೆ ಬೀಳಲಿಲ್ಲ. ಎಡೋಗಾವ ನದಿಯ ಜಿಲ್ಲೆಯ ತುಂಬ ಧೂಳಿನ ನರ್ತನ ಸಾಗಿತ್ತು. ಆ ಧೂಳಿನಲ್ಲಿ ಸೂರ್ಯನಿಗೆ ಗ್ರಹಣ ಹಿಡಿದಂತೆ ಕಾಣುತ್ತಿತ್ತು. ನನ್ನ ಅಕ್ಕಪಕ್ಕದಲ್ಲಿ ನಿಂತಿದ್ದ ಜನ ನರಕದಿಂದ ಬಂದ ನಿರಾಶ್ರಿತರಂತೆ ಕಾಣುತ್ತಿದ್ದರು. ಇಡೀ ಪ್ರದೇಶ ವಿಲಕ್ಷಣವಾಗಿತ್ತು. ನದಿ ದಂಡೆಯ ಮೇಲಿದ್ದ ಚಿಕ್ಕ ಚೆರ್ರಿ ಮರವನ್ನು ಹಿಡಿದು ನಿಂತಿದ್ದೆ. ಈ ದೃಶ್ಯವನ್ನು ನೋಡುತ್ತಾ “ಬಹುಶಃ ಇದೇ ಪ್ರಪಂಚದ ಕೊನೆಯಿರಬೇಕು” ಎಂದೆನ್ನಿಸಿ ನಡುಗುತ್ತಿದ್ದೆ.

ಇಷ್ಟನ್ನು ಬಿಟ್ಟರೆ ಆ ದಿನದ ಕುರಿತು ಬೇರೇನೂ ನೆನಪಿಲ್ಲ. ಆದರೆ ಭೂಮಿ ಮತ್ತೆ ಮತ್ತೆ ಕಂಪಿಸುತ್ತ ಇದ್ದದ್ದು ನೆನಪಿದೆ. ಪೂರ್ವದಲ್ಲೆದ್ದ ಬೆಂಕಿಹೊಗೆಯ ಮೋಡವು ನಿಧಾನವಾಗಿ ಆಕಾಶವನ್ನೆಲ್ಲ ಆಕ್ರಮಿಸುತ್ತಾ ಮಧ್ಯ ಟೊಕಿಯೋವನ್ನು ಮುಚ್ಚಿತು. ನಾವಿದ್ದ ಯಮ ನೋ ತೆ ಪರ್ವತ ಪ್ರದೇಶದಲ್ಲಿ ಬೆಂಕಿಯಿರಲಿಲ್ಲ. ಆದರೆ ಟೊಕಿಯೊದ ಉಳಿದ ಭಾಗಗಳಂತೆ ಇಲ್ಲೂ ಸಹ ವಿದ್ಯುತ್ ಸಂಪರ್ಕವಿರಲಿಲ್ಲ. ಎಲ್ಲೂ ದೀಪ ಹಚ್ಚಿರಲಿಲ್ಲ. ಆದರೆ ಬೆಟ್ಟದ ಕೆಳಗಿನ ಪಟ್ಟಣಗಳಲ್ಲಿ ಹೊತ್ತಿದ್ದ ಬೆಂಕಿ ಅನಿರೀಕ್ಷಿತವಾಗಿ ಹೆಚ್ಚಿ ಬೆಟ್ಟದ ಮೇಲೆ ಅದರ ಬೆಳಕನ್ನು ಚೆಲ್ಲಿತ್ತು.. ಆ ರಾತ್ರಿ ಇನ್ನೂ ಎಲ್ಲರ ಮನೆಯಲ್ಲಿ ಕ್ಯಾಂಡಲ್ ಗಳು ಇದ್ದವು. ಹಾಗಾಗಿ ಯಾರಿಗೂ ಕತ್ತಲೆಯ ಭಯ ಕಾಡಲಿಲ್ಲ. ಶಸ್ತ್ರಾಗಾರದಲ್ಲಾದ ಸದ್ದಿಗೆ ಎಲ್ಲರೂ ಬೆಚ್ಚಿಬಿದ್ದರು.

ಈ ಶಸ್ತ್ರಾಗಾರ ಮತ್ತು ಕೆಂಪು ಇಟ್ಟಿಗೆಯ ದೊಡ್ಡ ಕಟ್ಟಡಗಳ ಕಾರ್ಖಾನೆಗಳೆಲ್ಲವೂ ಈ ಹಿಂದೆ ಹೇಳಿದ ಆ ಕೆಂಪು ಕಲ್ಲಿನ ಗೋಡೆಯಿಂದ ಸುತ್ತವರೆದಿತ್ತು. ಅತ್ತ ಕಡೆಯಿಂದ ಹರಿದು ಬರುತ್ತಿದ್ದ ಬೆಂಕಿಗೆ ಇದು ತಡೆಗೋಡೆಯಾಗಿತ್ತು. ಇದು ಯಮ – ನೋ – ತೆ ಜಿಲ್ಲೆಯನ್ನು ರಕ್ಷಿಸಿತು. ಆದರೆ ಶಸ್ತ್ರಾಗಾರದಲ್ಲಿದ್ದ ಸ್ಪೋಟಕಗಳಿಗೆ ಕಂದ ಇಂದ ಸೂದಬಾಶಿಯವರೆಗೆ ಎಲ್ಲವನ್ನೂ ಆಪೋಶನ ತೆಗೆದುಕೊಳ್ಳುತ್ತ ಬರುತ್ತಿದ್ದ ಬೆಂಕಿಯ ಬಿಸಿ ತಾಗಿತು. ಶಸ್ತ್ರಾಗಾರದಲ್ಲಿದ್ದ ಯಾವುದೋ ಸ್ಪೋಟಕಕ್ಕೆ ಬೆಂಕಿ ಹೊತ್ತಿ ಒಂದೇ ಸಮ ಸಿಡಿಯಲಾರಂಭಿಸಿತು. ಈ ಸದ್ದು ಜನರನ್ನು ನಡುಗಿಸಿಬಿಟ್ಟಿತು.

ಎಡೋಗಾವ ನದಿಯ ಪಕ್ಕದಲ್ಲಿನ ರಸ್ತೆ ಸಂಪೂರ್ಣ ಬಿರುಕುಬಿಟ್ಟು ಹಾಳಾಗಿತ್ತು. ನದಿಯ ತಳದಲ್ಲಿನ ಮಣ್ಣೆಲ್ಲ ಎದ್ದು ಹೊರಬಂದು ದ್ವೀಪಗಳಂತಾಗಿತ್ತು. ವಾಲಿಕೊಂಡಿದ್ದ ಮನೆಗಳು ಕಣ್ಣಿಗೆ ಬಿದ್ದವೇ ಹೊರತು ಬಿದ್ದುಹೋಗಿದ್ದ ಮನೆಗಳು ಕಣ್ಣಿಗೆ ಬೀಳಲಿಲ್ಲ. ಎಡೋಗಾವ ನದಿಯ ಜಿಲ್ಲೆಯ ತುಂಬ ಧೂಳಿನ ನರ್ತನ ಸಾಗಿತ್ತು.

ಈ ಸದ್ದು ದಕ್ಷಿಣ ಕೊರಿಯಾದಿಂದ ನೂರು ಮೈಲಿ ದೂರದಲ್ಲಿದ್ದ ಇಜು ದ್ವೀಪದಲ್ಲಿನ ಜ್ವಾಲಾಮುಖಿ ಸ್ಪೋಟಗೊಂಡ ಸದ್ದು ಎಂದು ನಮ್ಮ ಪಕ್ಕದ ಮನೆಯವನು ಕಣ್ಣಾರೆ ಕಂಡವನಂತೆ ಹೇಳಿದ. ನಿರಂತರವಾಗಿ ಸ್ಪೋಟಗೊಳ್ಳುತ್ತ ಅಲ್ಲಿಂದಲೇ ಉರುಳಿಕೊಂಡು ಉತ್ತರದತ್ತ ಅಂದರೆ ನಮ್ಮ ಕಡೆಯೇ ಬರುತ್ತಿದೆ ಎಂದು ಹೇಳಿದ. “ಒಂದು ವೇಳೆ ಪರಿಸ್ಥಿತಿಯೇನಾದರೂ ಹದಗೆಟ್ಟರೆ ನಾನಂತೂ ಏನು ಬೇಕೋ ಅದಷ್ಟೇ ಸಾಮಾನುಗಳನ್ನು ಇದರಲ್ಲಿ ಹಾಕಿಕೊಂಡು ಇಲ್ಲಿಂದ ಹೊರಟುಬಿಡುತ್ತೇನೆ” ಎಂದು ಆತನಿಗೆ ಎಲ್ಲೋ ಸಿಕ್ಕಿದ್ದ ಹಾಲಿನ ಗಾಡಿಯನ್ನು ತೋರಿಸಿ ಹೇಳಿದ.

ಈ ಪುಟ್ಟ ಕತೆಗೆ ಅದರದೇ ಆದ ಸೊಗಸಿದೆ. ಈ ಕತೆ ಯಾರಿಗೂ ನೋವುಂಟುಮಾಡುವುದಿಲ್ಲ. ಭಯ ಮನುಷ್ಯನನ್ನು ಹೇಗೆಲ್ಲ ವರ್ತಿಸುವಂತೆ ಮಾಡುತ್ತದೆ ಎನ್ನುವುದನ್ನು ನೋಡಿದಾಗ ಭಯವಾಗುತ್ತದೆ. ಬೆಂಕಿ ಆರುವ ಹೊತ್ತಿಗೆ ಮನೆಯಲ್ಲಿದ್ದ ಮೇಣದ ಬತ್ತಿಗಳು ಮುಗಿದು ಜಗತ್ತು ಅಕ್ಷರಶಃ ಕತ್ತಲಿನಲ್ಲಿ ಮುಳುಗಿತ್ತು. ಕತ್ತಲಿಗೆ ಹೆದರಿದ ಜನ ಊಹಿಸಲು ಆಗದಷ್ಟು ಭಯಾನಕವಾದ ಕೃತ್ಯಗಳಲ್ಲಿ ತೊಡಗಿದರು. ಹಿಂದೆಂದೂ ಅನುಭವಿಸದೇ ಇದ್ದ ಕತ್ತಲು ಜನರಲ್ಲಿ ಎಂತಹ ಹೆದರಿಕೆ ಹುಟ್ಟಿಸಿತ್ತು ಎನ್ನುವುದನ್ನು ಊಹಿಸಲು ಕೂಡ ಸಾಧ್ಯವಿಲ್ಲ. ಭಯ ಎಲ್ಲ ತಾರ್ಕಿಕತೆಯನ್ನು ನಾಶಮಾಡಿಬಿಡುತ್ತದೆ. ತನ್ನ ಅಕ್ಕಪಕ್ಕ ಏನಿದೆ ಎನ್ನುವುದೇ ಕಾಣದಾದಾಗ ಮನುಷ್ಯ ಸರಿತಪ್ಪುಗಳ ವಿವೇಚನೆಯನ್ನೇ ಕಳೆದುಕೊಂಡು ಗೊಂದಲದಲ್ಲಿ ಬೀಳುತ್ತಾನೆ. “ಕತ್ತಲು ರಾಕ್ಷಸನಂತೆ ಜನರನ್ನು ಹೆದರಿಸುತ್ತದೆ” ಎನ್ನುವ ಮಾತು ನಿಜ.

ಕಾಂಟೊ ಪರ್ವತದ ಬುಡದಲ್ಲಿ ಭೂಕಂಪವು ಟೊಕಿಯೊದ ಸಾವಿರಾರು ಕೊರಿಯನ್ ಜನರ ಪ್ರಾಣವನ್ನು ಬಲಿತೆಗೆದುಕೊಂಡಿತು. ಈ ದುರಂತವು ಕತ್ತಲಿನೊಂದಿಗೆ ಜನರ ಭಯವನ್ನು ಮತ್ತಷ್ಟು ಹೆಚ್ಚಿಸಿತು. ಭಯದಿಂದ ಬಿಳುಚಿಗೊಂಡಿದ್ದ ಯುವಕರ ಗುಂಪೊಂದು “ಈ ಕಡೆ!”… “ಅಲ್ಲ ಈ ಕಡೆ…!” ಎನ್ನುತ್ತಾ ಕಿರುಚುತ್ತಾ ಓಡುತ್ತಿರುವುದನ್ನು ಕಣ್ಣಾರೆ ನೋಡಿದೆ. ಅವರೆಲ್ಲ ಉದ್ದಕ್ಕೆ ಗಡ್ಡವಿದ್ದ ವ್ಯಕ್ತಿಯೊಬ್ಬನನ್ನು ಅಟ್ಟಿಸಿಕೊಂಡು ಹೋಗುತ್ತಿದ್ದರು. ಅಷ್ಟೊಂದು ಗಡ್ಡವಿರುವಾತ ಜಪಾನಿಯವನಾಗಿರಲು ಸಾಧ್ಯವಿಲ್ಲ ಎಂದು ಅವರಂದುಕೊಂಡಿದ್ದರು.

ಯೆನೊ ಜಿಲ್ಲೆಯಲ್ಲಿ ಬೆಂಕಿಗೆ ಆಹುತಿಯಾದ ನಮ್ಮ ಸಂಬಂಧಿಕರನ್ನು ನೋಡಲು ಹೋಗಿದ್ದೆವು. ನಮ್ಮಪ್ಪನಿಗೆ ಉದ್ದ ಗಡ್ಡವಿತ್ತು. ಅವರನ್ನು ನೋಡಿ ಕೋಲು ಹಿಡಿದ ಗುಂಪೊಂದು ನಮ್ಮನ್ನು ಸುತ್ತುವರೆಯಿತು. ಹೆದರಿಕೆಯಿಂದ ನಮ್ಮಣ್ಣನತ್ತ ನೋಡಿದಾಗ ಅವನು ವ್ಯಂಗ್ಯದಿಂದ ಮುಗುಳ್ನಗುತ್ತಿದ್ದ. ಅಪ್ಪ ಸಿಟ್ಟಿನಲ್ಲಿ “ಇಡಿಯೆಟ್ಸ್!” ಎಂದು ಗುಡುಗಿದರು. ಅವರು ತಕ್ಷಣ ಅಲ್ಲಿಂದ ಕಾಲುಕಿತ್ತರು.

ಪ್ರತಿ ರಾತ್ರಿ ಒಬ್ಬರು ಕಾವಲು ಕಾಯಬೇಕೆಂದು ನಮ್ಮ ನೆರೆಹೊರೆಯವರೆಲ್ಲ ನಿರ್ಧರಿಸಿದರು. ಈ ಐಡಿಯಾ ಕೊಟ್ಟವನು ನಮ್ಮಣ್ಣ. ಅವನು ಮಾತ್ರ ಕಾವಲು ಕಾಯುವ ಕೆಲಸ ಮಾಡಲಿಲ್ಲ. ಬೇರೆ ದಾರಿಯಿಲ್ಲದೆ ನನ್ನ ಮರದ ಕತ್ತಿಯನ್ನು ತೆಗೆದುಕೊಂಡು ಹೊರಟೆ. ಒಂದು ಬೆಕ್ಕು ಕೂಡ ನುಸುಳಲು ಸಾಧ್ಯವಿಲ್ಲದ ಮೋರಿಯೊಂದರ ಹತ್ತಿರ ನನ್ನನ್ನು ಕಾವಲಿಗೆ ನಿಲ್ಲಿಸಿ “ನೋಡು ಕೊರಿಯನ್ನರು ಇಲ್ಲಿಂದ ಒಳಗೆ ನುಸುಳಬಹುದು ಎಚ್ಚರ” ಎಂದರು. ಇದಕ್ಕಿಂತ ತಮಾಷೆಯ ಮತ್ತೊಂದು ಘಟನೆ ನಡೆಯಿತು.

ಆ ಕಡೆಯ ಮನೆಯಲ್ಲಿರುವ ಬಾವಿಯ ನೀರನ್ನು ಕುಡಿಬೇಡ. ಆ ಗೋಡೆಯ ಮೇಲೆ ಸೀಮೆಸುಣ್ಣದಲ್ಲಿ ಏನೋ ವಿಚಿತ್ರವಾಗಿ ಬರೆದಿದ್ದಾರೆ. ಬಹುಶಃ ಆ ಬಾವಿಯ ನೀರಿಗೆ ವಿಷ ಹಾಕಿರೋದನ್ನು ಈ ರೀತಿ ಕೊರಿಯನ್ ಸಂಕೇತದಲ್ಲಿ ಬರೆದಿರಬೇಕು ಎಂದು ಹೇಳಿದರು. ಅದನ್ನು ಕೇಳಿ ಬೆಚ್ಚಿಬಿದ್ದೆ. ಅದನ್ನು ಬರೆದವನು ನಾನೇ ಎಂದು ಹೇಳಲಾಗದೆ ಚಡಪಡಿಸಿದೆ. ಅವರ ಮಾತಿಗೆ ಹೂಂ ಎನ್ನುವಂತೆ ತಲೆಯಾಡಿಸುವುದನ್ನು ಬಿಟ್ಟು ಬೇರೆ ದಾರಿಯಿರಲಿಲ್ಲ. ಮನುಷ್ಯನ ಸ್ವಭಾವದ ವೈಚಿತ್ರ್ಯಗಳನ್ನು ನೋಡಿ ಆಶ್ಚರ್ಯವಾಯಿತು.