ಇಲ್ಲಿನ ಕಥೆಗಳಲ್ಲಿ ಬರುವ ‘ಪರಸು, ತೇಜು ಮತ್ತು ಸಂಜು ಪಾತ್ರಗಳು ಒಂದು ಹೊಸ ನೆಲೆಗಟ್ಟಿನಲ್ಲಿ ನಿಲ್ಲುತ್ತವೆ. ಇವರೆಲ್ಲಾ ಬದುಕಿನ ಹೊಸ ಸಮಸ್ಯೆಯೊಂದರ ಪ್ರತಿರೂಪದಂತೆ ನಿಲ್ಲುತ್ತಾರೆ. ಮುಗಿಲ ದುಃಖ ಮತ್ತು ಹುಚ್ಚು ಕಥೆಗಳು ತುಂಬಾ ಭಾವನಾತ್ಮಕವಾಗಿವೆ. ನಿಮ್ಮ ಮನೆಯ ಪಕ್ಕದವರ ಕಥೆಯಷ್ಟೆ ಆಪ್ತವಾಗಿ ಬಂದಿದೆ. ಆಧುನಿಕ ಕಾಲದ ಅನಾಥ ಬದುಕನ್ನು ಈ ಎರಡು ಕಥೆಗಳು ತೆರೆದಿಡುತ್ತವೆ.
ಸದಾಶಿವ ಸೊರಟೂರು ಅವರ ಅರ್ಧ ಮಳೆ ಅರ್ಧ ಬಿಸಿಲು ಕಥಾ ಸಂಕಲನದ ಕುರಿತು ರಾಘವೇಂದ್ರ ಈ. ಹೊರಬೈಲು ಬರಹ

ಕನ್ನಡ ಕಥಾಲೋಕ ಅನೇಕ ಮಹಾನ್ ಕಥೆಗಾರರ ಕಥೆಗಳ ಕೊಡುಗೆಯಿಂದ ಶ್ರೀಮಂತವಾಗಿದೆ. ಮಾಸ್ತಿಯವರು ಹುಟ್ಟುಹಾಕಿದ ಸಣ್ಣಕಥೆಗಳ ಸಂಸ್ಕೃತಿ ಅಮೋಘವಾಗಿ ಮುಂದುವರಿದು, ಚಿರಂತನವಾಗಿ ಉಳಿಯುವ ಭರವಸೆ ನೀಡಿದೆ. ಇಂದಿನ ತಲೆಮಾರಿನ ಅನೇಕ ಯುವ ಬರಹಗಾರರೊಳಗೆ ಗಟ್ಟಿ ಕತೆಗಾರನನ್ನು ಕಾಣಬಹುದು. ವಿಶಿಷ್ಟವಾದ ಸಣ್ಣ ಕತೆಗಳ ಬಗ್ಗೆ ಭರವಸೆಯನ್ನು ಹೊಂದಬಹುದು. ಇತ್ತೀಚಿನ ಅಂತಹ ಗಟ್ಟಿ ಕತೆಗಾರರ ಸಾಲಿನಲ್ಲಿ ಸದಾಶಿವ ಸೊರಟೂರರ ಹೆಸರನ್ನು ಖಂಡಿತಾ ಸೇರಿಸಬಹುದು.

(ಸದಾಶಿವ ಸೊರಟೂರು)

ಸಾಕಷ್ಟು ಬಿಡಿ ಲೇಖನಗಳನ್ನು ಬರೆದಿರುವ ಸದಾಶಿವ್ ಸೊರಟೂರು ಅವರು ಮೊದಲ ಬಾರಿಗೆ ಕಥೆಗಳ ಸಂಕಲನವನ್ನು ಪುಸ್ತಕ ರೂಪದಲ್ಲಿ ಹೊರ ತಂದಿದ್ದಾರೆ. ‘ಅರ್ಧ ಬಿಸಿಲು ಅರ್ಧ ಮಳೆ’ ಎನ್ನುವ ಆಕರ್ಷಕ ಶೀರ್ಷಿಕೆಯಡಿಯಲ್ಲಿ ಬಂದಿರುವ ಈ ಕಥೆ ಪುಸ್ತಕವು ಒಟ್ಟು ಹತ್ತು ಕಥೆಗಳನ್ನು ಒಳಗೊಂಡಿದೆ. ಪ್ರತಿಯೊಂದು ಕಥೆಯೂ ಭಿನ್ನ, ಪ್ರತಿಯೊಂದೂ ಚೆನ್ನ. ಮೊದಲ ಕಥಾಸಂಕಲನ ಎನ್ನುವ ಯಾವ ವಿನಾಯಿತಿಯನ್ನೂ ಕೊಡದೆ ಓದುಗರು ಮೆಚ್ಚಬಹುದು.

‘ಈ ಜಗತ್ತಿನಲ್ಲಿ ಯಾರ ಉಸಾಬರಿ ಯಾರಿಗೂ ಇರುವುದಿಲ್ಲ..’ ಎನ್ನುವ ಸಾಲೊಂದು ‘ನೀಲಿ’ ಕಥೆಯಲ್ಲಿ ಬರುತ್ತದೆ. ನೀಲಿ ಎಂಬ ಪಾತ್ರದ ಮೂಲಕ ಜಗತ್ತಿನ ಪ್ರತಿಯೊಬ್ಬರು ಯಾವ ಉಸಾಬರಿಗೆ ಹೋರಾಡುತ್ತಾರೆ ಎಂಬುದನ್ನು ವಿಭಿನ್ನವಾದ ಕಥಾತಂತ್ರದ ಮೂಲಕ ಹೇಳಿದ್ದಾರೆ. ಬಯಲು ಕಥೆಯಲ್ಲಿ ಹೆಣ್ಣು ಮೀರುವ ಗೆರೆ, ವಿದಾಯ ಕಥೆಯಲ್ಲಿ ಗೆರೆಯೊಳಗೇ ಉಳಿದು ಹೋಗುವ ಹೆಣ್ಣಿನ ಪರಿ, ನೀಲಿ ಕಥೆಯಲ್ಲಿ ಅದೇ ಗೆರೆ ಅವಳನ್ನು ಆಪೋಶನ ತೆಗೆದುಕೊಂಡ ರೀತಿ, ‘ಕನಸಿನಲ್ಲಿ ಸುರಿದ ಕೆಂಪು ಮಳೆ’ ಕಥೆಯಲ್ಲಿ ಪೋರಿಯೊಬ್ಬಳು ಆ ಗೆರೆಯ ಮುಂದೆ ನಿಂತದ್ದು ಅದು ಹಂಬಲವೊ, ಪರಿತಾಪವೊ ಎಂಬುದು ಅರಿವಾಗದೆ ಉಳಿದು ಹೋಗುವ ರೀತಿ ಎಲ್ಲವೂ ಮನೋಜ್ಞವಾಗಿದೆ.

ಇಲ್ಲಿನ ಕಥೆಗಳಲ್ಲಿ ಬರುವ ‘ಪರಸು, ತೇಜು ಮತ್ತು ಸಂಜು ಪಾತ್ರಗಳು ಒಂದು ಹೊಸ ನೆಲೆಗಟ್ಟಿನಲ್ಲಿ ನಿಲ್ಲುತ್ತವೆ. ಇವರೆಲ್ಲಾ ಬದುಕಿನ ಹೊಸ ಸಮಸ್ಯೆಯೊಂದರ ಪ್ರತಿರೂಪದಂತೆ ನಿಲ್ಲುತ್ತಾರೆ. ಮುಗಿಲ ದುಃಖ ಮತ್ತು ಹುಚ್ಚು ಕಥೆಗಳು ತುಂಬಾ ಭಾವನಾತ್ಮಕವಾಗಿವೆ. ನಿಮ್ಮ ಮನೆಯ ಪಕ್ಕದವರ ಕಥೆಯಷ್ಟೆ ಆಪ್ತವಾಗಿ ಬಂದಿದೆ. ಆಧುನಿಕ ಕಾಲದ ಅನಾಥ ಬದುಕನ್ನು ಈ ಎರಡು ಕಥೆಗಳು ತೆರೆದಿಡುತ್ತವೆ.

ನವಿರು ಶೈಲಿಯ, ಕವಿತೆಯಂತಹ ಭಾಷೆಯ, ತೀರಾ ತಿರುವುಗಳಿಂದ ಕೂಡಿ ಓದುಗರನ್ನು ತಬ್ಬಿಬ್ಬುಗೊಳಿಸದೆ, ಸರಾಗವಾಗಿ ಓದಿಸುವ ಬರಹಗಳ ಕಥೆಗಳು ಓದುಗರನ್ನು ಕಾಡುತ್ತವೆ. ತೀರಾ ವಿಶೇಷವಾದ, ವಿಭಿನ್ನವಾದ ವಿಷಯಗಳನ್ನು ಹೊಂದಿರದಿದ್ದರೂ ತಮ್ಮ ಗಟ್ಟಿತನದಿಂದ, ನಮ್ಮ ನಡುವಿನ ಕಥೆಗಳಾಗಿ ಗಮನ ಸೆಳೆಯುತ್ತವೆ. ಯಾವುದೊ ಒಂದು ಧೋರಣೆ ಇಟ್ಟುಕೊಂಡು, ಬಲವಾದ ಸಿದ್ಧಾಂತ ಹೇರುವ ವಿಚಿತ್ರ ಹುಕಿ ಇಲ್ಲಿನ ಕಥೆಗಳಲ್ಲಿ ಇಲ್ಲ. ಯಾವುದೇ ಸಿದ್ಧಾಂತದ ಹಂಗಿಲ್ಲದೆ ಸಾಮಾನ್ಯರ ಸಾಮಾನ್ಯ ವಿಷಯ ಇಟ್ಟುಕೊಂಡು ಬರೆದ ಅಸಾಮಾನ್ಯ ಕಥೆಗಳಿವು.

ದಟ್ಟ ಸಂವೇದನೆ, ಬದುಕಿನ ಆಳ ಮತ್ತು ಸಂಕೀರ್ಣತೆ ಗಟ್ಟಿಯಾಗಿ ಬಂದಿದೆ. ಚಂದದ ರೂಪಕಗಳಿವೆ. ವಿಷಯ ಮತ್ತು ವಿಷದ ಭಿನ್ನವಾಗಿ ಹೇಳುವ ಕಲೆಯಿದೆ. ಚಿಕಿತ್ಸಕ ಗುಣವಿದೆ. ಮನೋವೈಜ್ಞಾನಿಕ ಲೇಪನವಿದೆ. ಕಲಾತ್ಮಕತೆ ಇದೆ. ಸುಲಲಿತ ಭಾಷೆ, ವಾಸ್ತವ ಲೋಕದ ತಲ್ಲಣಗಳಿವೆ. “ನೀಲಿ, ಬಿಸಿಲು ಕೋಲು, ಮುಗಿಲ ದುಃಖ, ವಿದಾಯ, ಹುಚ್ಚು” ಕಥೆಗಳು ಹೊಲದ ಗೊಬ್ಬರದ ಗುಡ್ಡಗಳಡಿಯ ‘ಮಂದಹಸುರು’ ಪೈರುಗಳಂತಿವೆ. ಇವು ಸಂಕಲನದ ಗಟ್ಟಿ ಕಥೆಗಳಷ್ಟೇ ಆಗಿರದೆ ಸೊರಟೂರರು ಕಥನಗಳ ದೋಣಿಗೆ ಸರಿದಿಕ್ಕು ಹಿಡಿಯುವ ಹುಟ್ಟು ಹಾಕಿದರೆ ಚುಳುಗುಟ್ಟುವ ಮೀನುಗಳಿರುವ ನೀರ್ಬಯಲಿಗೆ ನೇರ ಹೋಗುವ ನುರಿತ ಬೆಸ್ತನಾಗಬಹುದು” ಎಂದು ಮುನ್ನುಡಿಕಾರರು ತಮ್ಮ ಮುನ್ನುಡಿಯಲ್ಲಿ ಬರೆಯುತ್ತಾರೆ. ಈ ಕಥಾ ಸಂಕಲನವನ್ನು ಓದಿದರೆ ಸದಾಶಿವ್ ಸೊರಟೂರವರು ಖಂಡಿತ ಕನ್ನಡ ಕಥನ ಲೋಕಕ್ಕೆ ಹೊಸ ಭರವಸೆಯಾಗಬಲ್ಲರು ಎಂದು ಖಡಾಖಂಡಿತವಾಗಿ ಹೇಳಬಹುದು.