ನಿನ್ನ ಹಾಗೆ

ಮೌನವಾಗಿಯೆ ಮುಂಗುರಳ ಸವರಿದ್ದು ತಂಗಾಳಿ ನಿನ್ನ ಹಾಗೆ
ಮೌನವಾಗಿಯೆ ತಬ್ಬಿ ಕಡಲನ್ನು ನದಿಪಾತ್ರ ಬೆಸೆದಿದೆ ನಿನ್ನ ಹಾಗೆ

ಮೌನದಲ್ಲೆ ಎಲ್ಲವನ್ನೂ ಆವರಿಸುವ ಘಳಿಗೆ ಯಾವುದು ಹೇಳು
ಮೌನವಾಗಿಯೇ ಕಾಯುವ ಚೈತನ್ಯ ನನಗೂ ಅಳಿದಿದೆ ನಿನ್ನ ಹಾಗೆ

ಮೌನವೆಂಬುದು ಮಾತಿನ ಬೆಳಕಾಗುತ್ತದೆಂಬ ನಿರೀಕ್ಷೆಯಿದೆ ಶಿಶಿರಕ್ಕೆ
ಮೌನಮನಸ್ಸೂ ಕಾಯವೂ ಬೆಚ್ಚಗಾಗುವ ಆಸೆಯಿದೆ ನಿನ್ನ ಹಾಗೆ

ಮೌನವೆಂಬ ತಪ ವರದ ಆಕಾಂಕ್ಷೆ ಹೊತ್ತು ಸ್ತಬ್ಧವಾಗಿದೆ ಈಗ
ಅದಕೂ ಲವಲವಿಕೆಯ ಪುಳಕ ಬೇಕೆಂಬ ತಾಪವಿದೆ ನಿನ್ನ ಹಾಗೆ

ಮೌನದಲ್ಲಿಯೆ ಎಲ್ಲವನ್ನೂ ತೀರಿಸಿಕೊಳ್ಳುವ ಬಯಕೆ ಹೆಚ್ಚಿದೆ ನೋಡು
ಶಮಾ ಧುಮ್ಮಿಕ್ಕಿ ವಿಜೃಂಭಿಸುವ ಆಕಾಂಕ್ಷೆ ಈ ಜೀವಕ್ಕಿದೆ ನಿನ್ನ ಹಾಗೆ

ಮಮತಾ ಹಾಸನ ಜಿಲ್ಲೆಯ ಅರಸೀಕೆರೆಯವರು. ‘ಸಂತೆ ಸರಕು’ ಅವರ ಕವನ ಸಂಕಲನ.
‘ಕಾಲಡಿಯ ಮಣ್ಣು’ ಎಂಬ ಅನುವಾದಿತ ಕೃತಿ ಪ್ರಕಟಿಸಿದ್ದಾರೆ.