ತಣಿಸಿ ಮಣಿಸಬೇಕಾಗಿದೆ ಒಲವು

ಕಳೆದು ಹೋಗುತ್ತಿದ್ದೇನೆ
ನಿನ್ನದೇ ಧ್ಯಾನದಲ್ಲಿ
ಸುರಿವ ಪ್ರತೀ ಮಳೆಯ
ಹನಿಯಲ್ಲು ಪುಟಿಯುವ
ನಿನ್ನದೇ ಬಿಂಬ
ಕಷ್ಟವಾಗಿದೆ ಸಂತೈಸುವುದು
ಚಳಿಯ ಅಲೆಗಳನ್ನು ಎಷ್ಟೆಂದು
ಸಹಿಸೀತು ತನು ಪದರ
ಬಯಸುವ ಮಗು ಮನಸಿಗೆ
ನಿನ್ನದೇ ನೆನಪಿನಾಧಾರ
ದೇಹದ ಇಕ್ಕೆಲಗಳ ಬಿಸಿಗೆ
ಪದೇಪದೇ ಅದೇ ಕನವರಿಕೆ
ಬಳಸಿದ ನಿನ್ನದೇ ಬಾಹುಗಳೆ
ಬೇಕೇಬೇಕೆಂಬ ಆಪ್ತ ಕಾತರಿಕೆ
ಕಾಣಬೇಕೆಂಬ ಬಯಕೆಗೆ ಅದೆಷ್ಟು
ಸಾರಿ ಕೂಗಿ ಹೇಳುವ ತೀವ್ರ ಭಾವ
ನದಿಗುಂಟ ಸಾಗಿದ ಸಣ್ಣತೊರೆ
ಬೆರೆತಂತೆ ಮರೆತಂತೆ ತನ್ನ ಅಸ್ಥಿತ್ವ
ಕಣಿವೆ, ಕೊರೆತಗಳಲ್ಲಿ ತಮ್ಮನೇ
ಮರೆವ ನುಣ್ಣನೆ ಮರಳಿನ ಹಾಗೆ
ತಣಿಸು ಮಣಿಸಬೇಕಾಗಿದೆ ಒಲವು
ಸುಮ್ಮನೆ ಬಂದುಬಿಡು ಹೀಗೆ

ಮಮತಾ ಹಾಸನ ಜಿಲ್ಲೆಯ ಅರಸೀಕೆರೆಯವರು. ‘ಸಂತೆ ಸರಕು’ ಅವರ ಕವನ ಸಂಕಲನ.
‘ಕಾಲಡಿಯ ಮಣ್ಣು’ ಎಂಬ ಅನುವಾದಿತ ಕೃತಿ ಪ್ರಕಟಿಸಿದ್ದಾರೆ.