ಹೀಗೆ ಏನಾಯಿತು ಯಾಕಾಯಿತು ಎಂದೇನೂ ತಿಳಿಯದ ಆ ಹುಡುಗಿ ಮೊದಮೊದಲು ಇದನ್ನೆಲ್ಲಾ ಅಲಕ್ಷ್ಯ ಮಾಡಿದರೂ ನಂತರದಲ್ಲಿ ಇವರ ಕಾಟ ಹೆಚ್ಚಾಗಿ ಹೋಯಿತು. ಬೈಗುಳಕ್ಕೂ ಬಗ್ಗದ ನೀಚ ಗುಂಪೊಂದು ಸದಾ ಆಕೆಯನ್ನು ಗೋಳಾಡಿಸತೊಡಗಿತು. ಮೊದಮೊದಲು ತಲೆ ಮೇಲಿದ್ದ ಸೆರಗನ್ನು ಮುಖವೆಲ್ಲಾ ಹೊದ್ದು ಓಡಾಡುತ್ತಿದ್ದ ಈ ಚೆಲುವೆ, ಆಮೇಲಾಮೇಲೆ ಅಲ್ತಾಫನ ಅಂಗಡಿಯ ಕಡೆ ಬರುವುದನ್ನೇ ಕಡಿಮೆ ಮಾಡಿದಳು. ಯಾವಾಗಲೊಮ್ಮೆ ಯಾರೂ ಇಲ್ಲದಾಗ ಬಂದು ಎರಡು ನಿಮಿಷವೂ ನಿಲ್ಲದೆ ಓಡಿ ಹೋಗುತ್ತಿದ್ದಳು.
ಮಧುರಾಣಿ ಬರೆಯುವ ಮಠದಕೇರಿ ಕಥಾನಕ

 

ಮಠದ ಕೇರಿಯ ಎಡಬದಿಗೆ ಬಳ್ಳಿಯಂತೆ ಹಬ್ಬಿದ್ದ ಸಾಬರ ಕೇರಿ, ಬಿಟ್ಟರೆ ಬಲಬದಿಯ ಮಾರುಕಟ್ಟೆಗೆ ಹೊಂದಿಕೊಂಡಂತೆ ಒಂದು ಸಾಲು ಮರಾಠಿಗರ ಮನೆಗಳು, ಇನ್ನುಳಿದಂತೆ ಲಿಂಗಾಯತರ ಬೀದಿ ಹಾಗೂ ಇತರೆ ಬೀದಿಗಳು ಮಠದ ಕೇರಿಯನ್ನು ವೃತ್ತಾಕಾರವಾಗಿ ಸುತ್ತುವರಿದಿದ್ದವು. ಈ ಮರಾಠಿಗರ ಕೆಲವು ಮನೆಗಳು ಸುಭದ್ರವಾದ ಕೋಟೆಗಳಂತಿದ್ದು ಸಾಮಾನ್ಯರಿಗೆ ಪ್ರವೇಶವಿಲ್ಲದಂತೆ ಏಕಾಂತದಲ್ಲಿದ್ದವು. ಅದರೊಳಗಿನ ಜನಗಳೂ ಅಷ್ಟೇ, ನೀರಿಗೆ ಬೆರೆತ ಎಣ್ಣೆಯಂತೆ ಬೆರೆತೂ ಬೆರೆಯದ ಹಾಗೆ ವರ್ಷಾನುಗಟ್ಟಲೆಯಿಂದ ಈ ಖಾಸಗಿ ಬಂಗಲೆಯೊಳಗಿದ್ದರು.

ಇವರು ಶುದ್ಧ ರಜಪೂತರಂತೆ. ಯಾವುದೋ ಪಾಳೆಗಾರರ ಕಾಲದಲ್ಲಿ ರಾಜಕಾರಣಕ್ಕಾಗಿ ಬಂದವರು ಇಲ್ಲೇ ಉಳಿದು ಇಷ್ಟು ಮನೆಗಳಾಗಿವೆ ಎಂಬ ಐತಿಹ್ಯ ಎಷ್ಟು ನಿಜವೋ ಎಷ್ಟು ಸುಳ್ಳೋ ಯಾರೂ ಎಂದೂ ತಲೆಕೆಡಿಸಿಕೊಂಡಿಲ್ಲ. ಆದರೆ ಅವರಂತೂ ದೇವಲೋಕದಿಂದ ಧರೆಗಿಳಿದ ಯಕ್ಷರಂತೆ ನಮ್ಮೂರ ಜನರೆಡೆಗೆ ತಪ್ಪಿಯೂ ದೃಷ್ಟಿ ಹಾಯಿಸದೆ ತಮ್ಮ ಲೋಕದಲ್ಲಿ ತಾವಿದ್ದರು. ಆದರೂ ಊರ ಮಾರಮ್ಮನ ಗುಡಿಗೋ ಗಣೇಶನ ಹಬ್ಬಕ್ಕೋ ವಂತಿಗೆ ಕೇಳಲು ಅವರ ಮನೆಗಳಿಗೆ ಹೋದರೆ ಜೇಬು ತುಂಬಾ ತುಂಬಿ ಕಳಿಸುತ್ತಿದ್ದರು. ಕೇರಿಗಳವರೆಲ್ಲಾ ಸೇರಿ ಊರ ಕೆಲಸವೇನಾದರೂ ಮೊದಲಿಟ್ಟರೇ, ಮೊದಲು ಬಂದು ಕೈಜೋಡಿಸುತ್ತಿದ್ದರು. ಇಷ್ಟಾದರೂ ಈ ಮರಾಠಿಗರನ್ನು ತೀರಾ ಹತ್ತಿರದಿಂದ ಬಲ್ಲವರು ಯಾರೂ ಇರಲಿಲ್ಲ.

ಅವರ ಮನೆಯ ಹೊರಗೋಡೆಗಳು ಅರಮನೆಯ ಪ್ರಾಂಗಣವನ್ನು ನೆನಪಿಸುತ್ತಿದ್ದವು. ಅದಕ್ಕೆ ಎಲ್ಲೂ ಒಂದು ಕಿಟಕಿಯಾಗಲಿ ಸಂದಾಗಲೀ ನಾವು ಕಂಡಿರಲಿಲ್ಲ. ರಸ್ತೆಗೆ ಅಂಟಿಕೊಂಡೇ ಇದ್ದರೂ, ಅದರ ಜಂಜಡಗಳಿಂದ ದೂರವಾಗಿದ್ದವು. ಮರಾಠಿ ಮಾತಾಡಿದರೂ ಇವರು ದರ್ಜಿಗಳಲ್ಲವೆಂಬುದಕ್ಕೆ ಎರಡು ಕಾರಣ. ಒಂದು ನಾವು ಕಂಡಂತೆ ಇವರ ಮನೆಗಳಲ್ಲಾಗಲೀ, ಇವರ ನೆಂಟರಿಷ್ಟರಲ್ಲಾಗಲೀ, ಯಾರೂ ಬಟ್ಟೆ ಹೊಲಿಯುವವರು ಇರಲಿಲ್ಲ. ಆಧುನಿಕವಾಗಿ ರೆಡಿಮೇಡ್ ಗಾರ್ಮೆಂಟ್ ಇಟ್ಟವರೂ ಇರಲಿಲ್ಲ. ಅಸಲು ಮನೆಯೊಳಗಿಂದ ಎಂದೂ ಹೊಲಿಗೆಯ ಶಬ್ದವೂ ಕೇಳಿ ಬರುತ್ತಿರಲಿಲ್ಲ. ಎರಡನೆಯದು ಇವರ ಠೀವಿ ಹಾಗೂ ಗಾಂಭೀರ್ಯದ ಜೀವನಶೈಲಿ. ಹಣೆಗೆ ಕುಂಕುಮದ ತಿಲಕವಿಟ್ಟು, ಜಂಗಿ ಮೀಸೆ ಬಿಟ್ಟು, ಗರಿ-ಗರಿ ಬಿಳಿ ಬಟ್ಟೆ ತೊಟ್ಟು ಬುಲೆಟ್ಟು, ಕಾರುಗಳಲ್ಲಿ ಓಡಾಡುತ್ತಿದ್ದ ಈ ಮನೆಯ ಗಂಡಸರು. ಯಾವಾಗಲೂ ಸಾಧಾರಣ ಕೆಂಪನ್ನೇ ಹೋಲುವ ಸೀರೆಯುಟ್ಟು ಸೆರಗನ್ನು ತಲೆಗೆ ಹೊದ್ದು, ನೆಲ ನೋಡುತ್ತಲೇ ನಡೆಯುತ್ತಿದ್ದ ಮನೆಯ ಹೆಂಗಸರು.

ಇವರು ನೊಸಲಿಗೆ ಬೈತಲೆ ತುಂಬುವ ಹಾಗೆ ಕುಂಕುಮ ತುಂಬಿರುತ್ತಿದ್ದರು. ಸರಳವಾದ ಉಡುಗೆ-ತೊಡುಗೆಗಳಲ್ಲಿಯೂ ಅಪ್ರತಿಮ ಸುಂದರಿಯರೆಂದರೆ ಸುಳ್ಳಲ್ಲ. ಹಾಲಿನ ಬಣ್ಣದ ಬಟ್ಟಲುಗಂಗಳ ಅಪರೂಪದ ಚೆಲುವೆಯರೇ ಮನೆ ಸೊಸೆಯರಿದ್ದು, ಇವರನ್ನೆಲ್ಲ ಯಾವ ಊರುಗಳಿಂದ ಹಿಡಿದು ತಂದರೋ? ಎಂದು ನೋಡಿದವರೆಲ್ಲ ಅಚ್ಚರಿ ಪಡುತ್ತಿದ್ದರು.

ಆಗಿನ್ನೂ ಗುಜರಾತಿ ಮಾರ್ವಾಡಿಗರು ನಮ್ಮ ಜನಜೀವನದಲ್ಲಿ ಇಂದಿನಷ್ಟು ಬೆರೆತು ಬಂದಿರಲಿಲ್ಲ. ಹಾಗಾಗಿ ದಢೂತಿ ದೇಹದ ದಪ್ಪ ಮೂಗಿನ ಜೋರು ಮಾತಿನ ನಮ್ಮೂರಿನ ಗಲಾಟೆ ಹೆಂಗಳೆಯರ ನಡುವೆ ಈ ಮನೆಯ ಹೆಂಗಳೆಯರು ಸ್ವಲ್ಪ ವಿಶೇಷವಾಗಿದ್ದರು. ಮನೆಯ ಹಿರಿ-ಮುತ್ತೈದೆಯಿಂದ ಹಿಡಿದು ಕಾಲೇಜು ಓದುತ್ತಿದ್ದ ಯೌವನದ ಬೆಡಗಿಯ ತನಕ ಮನೆಗೆ ಐದಾರರಂತೆ ಇದ್ದ ಹೆಂಗಳೆಯರ ರೂಪು, ಮೈಕಟ್ಟು, ಹಾವಭಾವಗಳು ಮಾತ್ರ ಒಂದೇ ತೆರನಾದವು.

ಅವರು ನಕ್ಕದ್ದನ್ನು ನಾವು ಎಂದೂ ಕಂಡಿರಲಿಲ್ಲ. ಅಂಗಡಿಗೋ ಮಾರ್ಕೆಟ್ಟಿಗೋ ದೇವಸ್ಥಾನಕ್ಕೋ ಅಪರೂಪಕ್ಕೆ ಬಂದರೆ ಮಾತಿಲ್ಲದ ಮೌನ ಸಂಭಾಷಣೆ! ಮತ್ತೆ ತಲೆತಗ್ಗಿಸಿ ಮನೆಯೊಳಗೆ ಹೊಕ್ಕು ಬಾಗಿಲಿಕ್ಕಿಕೊಂಡರಾಯಿತು. ಅವರ ಪ್ರಪಂಚದ ಬಾಗಿಲಿಕ್ಕಿದಂತೆ! ಎಷ್ಟೋ ದಶಕಗಳಿಂದ ನಮ್ಮೂರಿನಲ್ಲೇ ಬದುಕಿದ್ದರೂ ಅಂತರದಲ್ಲಿ ಸಂಚರಿಸುವ ಆತ್ಮಗಳಂತೆ ಒಂದು ಅದೃಶ್ಯ ಬದುಕು ಅವರದ್ದು! ತಾವು ಇಲ್ಲಿಗೆ ಸೇರಿಲ್ಲದವರೆಂಬ ಬಲವಾದ ನಂಬಿಕೆ. ಅರಿಶಿನ ಕುಂಕುಮವೆಂದೂ ನಮ್ಮವರನ್ನು ಮನೆಯೊಳಗೆ ಬಿಟ್ಟುಕೊಂಡವರಲ್ಲ. ಮಠದ ಕೇರಿಯ ಕೆಲವು ಹಿರಿ ಹೆಂಗಳೆಯರಿಗೆ ಹೊರತಾಗಿ ಅವರ ಹೆಸರುಗಳು ಕೂಡ ಯಾರಿಗೂ ತಿಳಿಯದು.

ಇಂತಿಪ್ಪ ಮರಾಠಿಗರ ಕೆಲವೇ ಮನೆಗಳಲ್ಲಿನ ಒಂದು ಮನೆಯ ಕಥೆ ಇದು. ಆ ಮನೆಯಲ್ಲೂ ಐದಾರು ಜನ ಹೆಂಗಸರು. ಮುತ್ತಿನಂತಹ ಒಂದು ಕಿರಿ ಸೊಸೆ. ಆಕೆಯನ್ನು ಅಪರೂಪಕ್ಕೆ ನೋಡಿದರೆ ಹಿಂದಿ ಸಿನಿಮಾಗಳ ಅತ್ತಿಗೆ ಪಾತ್ರದ ನೆನಪು! ಮದುವೆಯಾಗಿ ಇಲ್ಲಿಗೆ ಬಂದ ಹೊಸತರಲ್ಲಿ ಅವಳು ಹೀಗೆ ತನ್ನ ಮನೆಯ ಹಿರಿ ಹೆಂಗಳೆಯರಂತೆ ತಲೆಗೆ ಸೆರಗು ಹೊದ್ದೇ ನಡೆಯುತ್ತಿದ್ದಾಕೆ. ಯಾರ ಕಣ್ಣಿಗೂ ವಿಶೇಷವೆಂಬಂತೆ ಎಂದೂ ಕಂಡಿರಲಿಲ್ಲ. ಸುಮ್ಮನಿದ್ದಿದ್ದರೆ ಇಂದು ಈ ಕತೆಯೂ ಇರುತ್ತಿರಲಿಲ್ಲ. ಆದರೆ ಇರುತ್ತಿರುತ್ತಾ ಅದೇನು ಮೋಡಿ ನಡೆಯಿತೋ… ಎರಡು ಬೀದಿ ಆಚೆಗಿದ್ದ ಸಾಬರ ಕೇರಿಯ ಅಲ್ತಾಫನ ಜೊತೆ ಈಕೆಗೆ ಸ್ನೇಹವೇರ್ಪಟ್ಟಿತ್ತು. ಕೇಳಲು ವಿಚಿತ್ರವೆನಿಸಿದರೂ ಯಾವುದೋ ಶುಭಗಳಿಗೆಯಲ್ಲಿ (ಮಿಕ್ಸಿ ಕೆಟ್ಟಾಗಲೋ ಗ್ಯಾಸ್ ಸ್ಟೋವ್ ಸರಿ ಮಾಡಿಸುವಾಗಲೋ ಗೊತ್ತಿಲ್ಲ! ಅಲ್ತಾಫನದು ರಿಪೇರಿ ಅಂಗಡಿ…) ಇವರಿಬ್ಬರಿಗೆ ಪರಿಚಯವಾಗಿ ಪದೇಪದೇ ಭೇಟಿಗಳಾಗಿ ಅದು ಸಲುಗೆಗೆ ತಿರುಗಿದ್ದಿತು.

ಸಲುಗೆ ಎಂದರೆ ಸಾಧಾರಣದ್ದಾಗಿತ್ತೇ..! ನಮ್ಮಂಥ ಚಿಳ್ಳೆಪಿಳ್ಳೆಗಳಿಗೆಲ್ಲಾ ಅರಿವಾಗುವ ಕಾಲಕ್ಕಾಗಲೇ ಆಕೆ ಮಟಮಟ ಮಧ್ಯಾಹ್ನದಲ್ಲಿ ಸೆರಗನ್ನು ತಲೆಗೆ ಹೊದ್ದು ಹೊರಗೆ ಬಂದು ಎರಡು ಬೀದಿ ದಾಟಿ ಅಲ್ಲೇ ಕಾದಿರುತ್ತಿದ್ದ ಅಲ್ತಾಫ್ ಪಾಷನನ್ನು ದೂರದಿಂದಲೇ ‘ಅಲ್ತೂ…’ ಎಂದು ಕೂಗಿ ನಗುನಗುತ್ತಾ ಹತ್ತು ನಿಮಿಷ ಮಾತಾಡಿಸಿ ತಿರುಗಿ ಹೋಗುವಷ್ಟು! ಕೆಲವೊಮ್ಮೆ ಮೂಲೆ ಅಂಗಡಿಯಲ್ಲಿ ಒಟ್ಟಿಗೆ ಹಣ್ಣಿನ ಜ್ಯೂಸು ಕುಡಿಯುವಷ್ಟು!

ಆ ಸಮಯ ಆಕೆಯ ಗಂಡ ಪೇಟೆ ಬೀದಿಯ ತಮ್ಮ ಸ್ವಂತದ ಅಂಗಡಿಯಲ್ಲಿ ಗಲ್ಲಾದ ಮೇಲೆ ಕೂತಿರುವ ಹೊತ್ತೆಂದು ಇಡೀ ಕೇರಿಗೆ ಗೊತ್ತಿತ್ತು. ಆದರೂ ಇವರು ಜಾಣರು. ಒಂದು ದಿನವೂ ತಡಮಾಡಿ ಆತನ ಕೈಲಿ ಸಿಕ್ಕಿಹಾಕಿಕೊಂಡಿದ್ದಿಲ್ಲ. ಅವನ ಬುಲೆಟ್ ಸದ್ದಾಗುವ ಎರಡು ನಿಮಿಷಗಳ ಮೊದಲು ಆಕೆ ಅರಮನೆಯ ದ್ವಾರದ ಹಿಂದೆ ಸರಿದಾಗಿರುತ್ತಿತ್ತು. ಆದರೂ ಸಿಗುವ ಹತ್ತೇ ನಿಮಿಷದಲ್ಲಿ ಅವರು ಕೈಯಲ್ಲಿ ಹಿಡಿದಿದ್ದ ಕಾಗದವನ್ನು ಅದಲು-ಬದಲು ಮಾಡುತ್ತಿದ್ದರು, ರಾಜಾರೋಷವಾಗಿ ನಗುತ್ತಿದ್ದರು, ಅವರ ಸುತ್ತಲೂ ಪ್ರಪಂಚವೊಂದು ಸಾವು-ಬಾಳನ್ನು ಬದುಕುತ್ತಿದೆ ಎಂಬ ಪರಿವೆಯೇ ಇಲ್ಲದ ಹಾಗೆ ತಾವಿಬ್ಬರೇ ಉಸಿರಾಡುತ್ತಿರುವಂತೆ ಮನಃಪೂರ್ತಿ ಮಾತನಾಡುತ್ತಿದ್ದರು. ಹೊರಡುವ ಸಮಯ ಹತ್ತಿರವಾದಂತೆ ಕೆಲವೇ ಸೆಕೆಂಡುಗಳು ಕಣ್ಣೊಳಗೆ ಕಣ್ಣಿಟ್ಟು ನೋಡಿ ಮೌನದಲ್ಲಿ ನೋಟವನ್ನೇ ಸುಖಿಸುತ್ತಿದ್ದರು. ನಂತರ ತುಂಟ ನಗೆಯೊಂದನ್ನು ಮಾತ್ರ ಉಳಿಸಿಕೊಂಡು ತಮ್ಮ-ತಮ್ಮ ಪ್ರಪಂಚಗಳಿಗೆ ವಾಪಸಾಗುತ್ತಿದ್ದರು.

ಈ ಅಲ್ತಾಫ್ ಪಾಷನ ಬಗ್ಗೆ ಒಂದೆರಡು ಮಾತು ಹೇಳಲೇಬೇಕು. ಸಾಬರ ಕೇರಿಯ ಬೇರೆ ಹುಡುಗರಿಗೆ ಹೋಲಿಸಿಕೊಂಡರೆ ಅಲ್ತಾಫನು ದಿನವೂ ಇಸ್ತ್ರಿ ಮಾಡಿದ ಅಂಗಿ ಪ್ಯಾಂಟು ತೊಟ್ಟು ನೀಟಾಗಿ ಕ್ರಾಪು ಬಾಚಿ, ‘ಇದೋ… ಈಗ ಹೊರಟನೋ ಆಫೀಸಿಗೆ!’ ಎಂಬಂತೆ ತಯಾರಾಗಿ ತನ್ನ ಅಂಗಡಿಯಲ್ಲಿ ಕೂರುತ್ತಿದ್ದನು. ಕನ್ನಡ ಸಾಹಿತ್ಯದ ಬಗ್ಗೆ ಭಯಂಕರ ಮಾಹಿತಿ ಇದ್ದವ. ಯಾರಿಗೆ ಯಾವಾಗ ಯಾವ ಪ್ರಶಸ್ತಿ ಬಂತು? ಆ ಪುಸ್ತಕದಲ್ಲಿ ಲೇಖಕರು ಹೀಗೆ ಯಾಕೆ ಬರೆದರು? ಇಂಥವರ ಕವನ ಬರೀ ಡೂಸು, ಅಂಥವರ ಕವನಗಳಿಗೆ ಜೀವವಿದೆ… ಎಂದು ಮಾತಾಡಬಲ್ಲ ಏಕೈಕ ಸಾರಸ್ವತ ರಾಯಭಾರಿಯಾಗಿದ್ದವನು. ಹಾಗಾಗಿ ಮಠದ ಕೇರಿಯ ಹಲವರಿಗೆ ಹತ್ತಿರದ ದೋಸ್ತ ಕೂಡ ಆಗಿದ್ದನು. ಇದರ ತಲೆಬುಡಗಳ ಬಗ್ಗೆ ಎಂದು ತಲೆ ಕೆಡಿಸಿಕೊಂಡಿರದ ಕಾಯಕ ಯೋಗಿಗಳಂಥಾ ಅವನ ಕೇರಿಯ ಜನ ಇವನೊಬ್ಬ ಕಲಿತ ಹುಚ್ಚನೆಂದೇ ತಿಳಿದಿದ್ದರು.

ಸರಳವಾದ ಉಡುಗೆ-ತೊಡುಗೆಗಳಲ್ಲಿಯೂ ಅಪ್ರತಿಮ ಸುಂದರಿಯರೆಂದರೆ ಸುಳ್ಳಲ್ಲ. ಹಾಲಿನ ಬಣ್ಣದ ಬಟ್ಟಲುಗಂಗಳ ಅಪರೂಪದ ಚೆಲುವೆಯರೇ ಮನೆ ಸೊಸೆಯರಿದ್ದು, ಇವರನ್ನೆಲ್ಲ ಯಾವ ಊರುಗಳಿಂದ ಹಿಡಿದು ತಂದರೋ? ಎಂದು ನೋಡಿದವರೆಲ್ಲ ಅಚ್ಚರಿ ಪಡುತ್ತಿದ್ದರು.

ಮೂಗುನತ್ತಿಗೆ ಮುತ್ತು ಸೇರಿಸಿದಂತೆ ಇವನಿಗೆ ಮದುವೆ ಬೇರೆ ಆಗಿರಲಿಲ್ಲ! ಇವನ ಹುಚ್ಚು ಹೆಚ್ಚಾಗಿ ಮದುವೆ ಮಾತುಕತೆ ಮುರಿದು ಬಿದ್ದಿದೆ ಎಂಬ ದಂತಕಥೆಗಳಿಗೆ ಸಾಕ್ಷಿಯಾಗಿ ವಯಸ್ಸಾದ ಅಬ್ಬು-ಅಮ್ಮಿಯರ ಜೊತೆ ಒಂಟಿಯಾಗಿ ವಾಸವಾಗಿದ್ದ ಸಾಬರ ಕೇರಿಯ ಕಲಿತ ಹೀರೋ ಅಲ್ತಾಫ್ ಪಾಶ ಉರುಫ್ ಅಲ್ತೂ.

ಹೀಗಿರುತ್ತಿರುತ್ತಾ ಒಂದು ದಿನ ಊರಲ್ಲಿ ಯಾವುದೋ ದೊಡ್ಡ ಕಾರ್ಯಕ್ರಮದ ಅಂಗವಾಗಿ ನಮ್ಮೂರ ಹಿರಿಯ ಕಾದಂಬರಿಕಾರರೊಬ್ಬರಿಗೆ ಸನ್ಮಾನ ಹಾಗೂ ಯುವಜನರಿಗೆ ಕವಿಗೋಷ್ಠಿ ಕಾರ್ಯಕ್ರಮ ಏರ್ಪಾಡಾಗಿತ್ತು. ಗೋಷ್ಠಿಗಳೆಂದರೆ ಈಗಿನಂತೆ ವ್ಯರ್ಥಾಲಾಪದ ಹರಟೆಕಟ್ಟೆಗಳಂತಲ್ಲ. ಗೋಷ್ಠಿಯ ಅಧ್ಯಕ್ಷರು ಮಧ್ಯ ಕೂತು ಕವಿಗಳು ಹಾಡುವುದನ್ನು ಕೇಳಿ ತಮ್ಮ ಪ್ರಾಮಾಣಿಕ ಅಭಿಪ್ರಾಯವನ್ನು ಎಗ್ಗಿಲ್ಲದೆ ಪ್ರಚುರಪಡಿಸುತ್ತಿದ್ದ ನಿಜವಾದ ಗೋಷ್ಠಿಗಳು. ಅಂತಹ ವೇದಿಕೆಯ ಮೇಲೆ ಜಾಗ ಸಿಗುವುದೇ ಅದೃಷ್ಟ. ಅಂಥದ್ದರಲ್ಲಿ ಅಲ್ತಾಫನು ಅದು ಹೇಗೋ ಯುವಕವಿಗಳ ಪಟ್ಟಿಯಲ್ಲಿ ತನ್ನ ಹೆಸರು ತೂರಿಸಿಬಿಟ್ಟನು. ಕಾರ್ಯಕ್ರಮದ ದಿನ ದೊಡ್ಡ ವೇದಿಕೆಯ ಮೇಲೆ ತನ್ನ ಸ್ವರಚಿತ ಕವನ ವಾಚಿಸಲು ಕಾತುರದಿಂದ ಕಾದು ಕುಳಿತೂಬಿಟ್ಟನು.

ಇವನ ಬಗ್ಗೆ ತಿಳಿದಿದ್ದ ಹಲವರು ಇಂತಹ ಮಹದಾಶ್ಚರ್ಯವನ್ನು ವೇದಿಕೆಯಲ್ಲಿ ನೋಡಿ ಹೌಹಾರಿ ಹೆದರಿ ಮುಂದೇನಾಗುವುದೋ ಕಾದು ನೋಡಲೆಂದೇ ಭಯ ಮಿಶ್ರಿತ ಆಶ್ಚರ್ಯದೊಂದಿಗೆ ವೇದಿಕೆಗೆ ಕಣ್ಣುನೆಟ್ಟು ಕೂತರು. ಚಿಕ್ಕವರು, ದೊಡ್ಡವರು, ಹೆಂಗಸರು- ಗಂಡಸರು, ಗುರುತಿಸಿಕೊಂಡವರು, ಈ ವೇದಿಕೆಯಿಂದ ಗುರುತು ಹೆಚ್ಚಿಸಿಕೊಂಡವರು, ಧೈರ್ಯದವರು, ನಡುಗುತ್ತಿದ್ದವರು, ಕೆಮ್ಮುತ್ತಿದ್ದವರೂ ಎಲ್ಲರ ಸರದಿಯೂ ಮುಗಿದ ಮೇಲೆ ಮುಖದ ಮೇಲೆ ಮಂದಹಾಸ ಶೋಭಿತನಾಗಿ ಕುಳಿತಿದ್ದ ಪ್ರಸನ್ನವದನ ಅಲ್ತಾಫನು ತನ್ನ ಕವಿತೆ ಶುರುವಿಟ್ಟನು.

ಓಹೋ, ನನ್ನವಳೇ, ಚೆನ್ನಾರಿ ಚೆಲುವೆಯೇ…
ಅದ್ಯಾಕ್ ಹಾಗ್ ಮೈಮುಚ್ಕೊಂಡು ನಡೀತೀ,
ವಸಿ ಸೆರಗ ತೆಗೆದು ಸೊಂಟಕ್ ಸಿಗ್ಸು.
ಲಿಫ್ಟಿಕ್ ಜೋರಾಗಿ ಬಳಿ…
ಬಣ್ಣ ನನ್ನ ಕಣ್ಣು ಕುಕ್ಕಲಿ
ಓಹೋ ನನ್ನವಳೇ,
ನಡೀವಾಗ ಸೊಂಟ ಕುಲುಕ್ಸು…
ಏನಾಗಕ್ಕಿಲ್ಲ, ಪ್ರಳಯ ಆಯ್ತದೇ ಅಷ್ಟೇ!
ಎಲ್ಲಿ ಅಂತೀಯಾ…?
ಇಕೋ ನನ್ ರುದಯದ ಒಳಗೆ ಚೆಲುವೇ.
ವ್ಯಾನಿಟಿ ಬ್ಯಾಗ್ ಸರಿಯಾಗಿ ಇಡ್ಕೋ.
ಅದರೊಳಗೆ ನಾನ್ ಕೊಟ್ಟ
ಗುಲಾಬಿ ಐತೋ ಇಲ್ವೋ…!

….. ಹೀಗೆ ಓತಪ್ರೋತ ಹರಿದ ಅವನ ಸಾಹಿತ್ಯ ಗಂಗೆಯ ರಭಸಕ್ಕೆ ಹೆದರಿ ವೇದಿಕೆಯ ಮುಂದೆ ನೆರೆದಿದ್ದ ಪರಿಚಯಸ್ಥರು ದಿಕ್ಕಾಪಾಲಾಗಿ ಓಡಿಬಿಟ್ಟರು. ಕೆಲವು ‘ಮರ್ಯಾದಸ್ಥರು’ ಟವಲಿನಿಂದ ಮುಖ ಮುಚ್ಚಿಕೊಂಡು ಇನ್ನೂ ಅಲ್ಲೇ ಕೂತಿದ್ದರು. ಸಭಾಧ್ಯಕ್ಷರು ಇದನ್ನು ಹೇಗೆ ವಿಶ್ಲೇಷಿಸಬೇಕೋ ಬೇಡವೋ ಎಂಬ ಕವನದ ಅನಾಟಮಿಯ ವಿಚಾರವಾಗಿ ಜೀವನ್ಮರಣದ ಇಕ್ಕಟ್ಟಿಗೆ ಸಿಲುಕಿದರು. ಅವರು ಕಣ್ಣಿನಲ್ಲೇ ಪ್ರಾಣ ಬಿಡುವವರಂತೆ ಇಷ್ಟಗಲ ತೆರೆದ ಕಣ್ಣುಗಳಿಂದ ಬಾಯಿ ಬಿಟ್ಟುಕೊಂಡು ಎಲ್ಲರನ್ನೂ, ಮುಖ್ಯವಾಗಿ ಕಾರ್ಯಕ್ರಮ ನಿರ್ವಾಹಕರನ್ನು ನೋಡತೊಡಗಿದ್ದರು. ಪರಿಸ್ಥಿತಿ ಅರಿತ ಆಯೋಜಕರು ಹೇಗಾದರೂ ಅಲ್ತಾಫನ ಕೈಯಿಂದ ಮೈಕು ಕಸಿದುಕೊಳ್ಳಬೇಕೆಂದು ಹರಸಾಹಸಪಟ್ಟರು. ಪಟ್ಟರು ಅಷ್ಟೇ… ಪ್ರಯೋಜನವಾಗಲಿಲ್ಲ.

ಇಡೀ ಕವಿತೆಯನ್ನು ಸಾಂಗವಾಗಿ ಓದಿದ ಮೇಲೆ ಏನೋ ಭಾರ ಕಳೆದು ಹಗುರಾದವನಂತೆ ಒಂದು ನಿಟ್ಟುಸಿರಿನೊಂದಿಗೆ ಇಡೀ ಸಭೆಯನ್ನು ಒಮ್ಮೆ ಪರಿವೀಕ್ಷಿಸಿ ತನ್ನ ಮಂದಸ್ಮಿತವನ್ನು ಮತ್ತೆ ಮೊಗದ ಮೇಲೆ ಧರಿಸಿ ಅಲ್ತಾಫನು ಹೊಗಳಿಕೆ ಕೇಳಲೇನೋ ಎಂಬಂತೆ ಕತ್ತು ಕೊಂಚ ಮುಂಚಾಚಿ ನಾಚುತ್ತ ಕೂತುಕೊಂಡನು. ಅವನ ಖಾಸಗಿ ವಿಚಾರಗಳ ಬಗ್ಗೆ ತಿಳಿದಿದ್ದ ಎರಡೂ ಕೇರಿಯವರಿಗೆ ಈ ಕವಿತೆಯ ನಾಯಕಿ ಯಾರೆಂದು ತಿಳಿದುಹೋಯಿತು. ಮಠದ ಕೇರಿ ಪಡ್ಡೆ ಹುಡುಗರೆಲ್ಲಾ ಕುಂಡೆಗೆ ಕೈ ಹೊಡೆದುಕೊಂಡು ಬಿದ್ದು ಬಿದ್ದು ನಗತೊಡಗಿದರು. ಅಲ್ತಾಫನ ಕಡೆ ಹಿರಿಯರು ಕೆಲವರು ‘ಅರೆ ಇಸ್ಕಿ ಮಾಕೀ… ಭೋಸ್ಡಿಕೇ… ಕೌನ ಲಿಖ್ತಾಂ ಕತ್ತೇ ಕೌನಾ… ಕ್ಯಾಕೀ ಕಾಮ್ ಬರಾಬರ್ ನ ಹೋಕು ಹೋ ತೋ ಐಸಾಚ್ ಪಾಗಲ್‌ಪನ್ ಸರ್ ಫಿರಾತಾ.. ಉಠಾಕು ಘರ್ಲೇ ಚಲೋ ರೇ ಲೌ… ಕೋ..’ ಎಂದು ಶಪಿಸುತ್ತಾ ಹೊರಟು ಹೋದರು.

ಕಾರ್ಯಕ್ರಮದ ಗಾಂಭೀರ್ಯ ಕರಗಿ ಹೋಗಿ ಆಯೋಜಕರು ಸಭಾಧ್ಯಕ್ಷರನ್ನು ಕ್ಷಮೆ ಯಾಚಿಸಿ ಹೇಗೋ ಕಾರ್ಯಕ್ರಮ ಕೊನೆಗೊಂಡು ಎಲ್ಲರೂ ಅವರ ಮೂಗಿನ ನೇರಕ್ಕೆ ಮಾತನಾಡುತ್ತಾ ಹೊರಟುಹೋದರು. ತೆರೆ ಹಿಂದೆ ಅಲ್ತಾಫನನ್ನು ಏನಾದರೂ ಕೊಂಕು ನುಡಿದು ತಡವಿಕೊಳ್ಳುವ ಧೈರ್ಯ ಯಾರಿಗೂ ಇಲ್ಲದಿದ್ದರಿಂದ ಅವನೂ ನೆಮ್ಮದಿಯಾಗಿ ಮನೆ ಸೇರಿದ. ಆದರೆ ಅವನ ಕವನದ ಅಡ್ಡಪರಿಣಾಮ ಶುರುವಾದದ್ದು ನಂತರದಲ್ಲಿ ರಾಜಪೂತರ ಕಿರಿ ಸೊಸೆಯ ಮೇಲೆ. ಆಕೆ ಓಡಾಡುವಾಗೆಲ್ಲಾ ಮಠದ ಕೇರಿಯ ಹಾಗೂ ಸಾಬರ ಕೇರಿಯ ಕಿರಾತಕ ಪಡ್ಡೆ ಸಂಘವು
ಅದ್ಯಾಕೆ ಹಂಗ್ ನಡೀತೀ
ಲಿಫ್ಟಿಕ್ ವಸಿ ಜೋರಾಗಿ ಬಳಿ…
ವ್ಯಾನಿಟಿ ಬ್ಯಾಗು ಸರಿಯಾಗಿ
ಹಿಡ್ಕೊಂಡು ನಡಿ…
ಎಂದೆಲ್ಲಾ ಕಿಚಾಯಿಸಲು ಶುರುವಿಟ್ಟುಕೊಂಡಿತು. ಹೀಗೆ ಏನಾಯಿತು ಯಾಕಾಯಿತು ಎಂದೇನೂ ತಿಳಿಯದ ಆ ಹುಡುಗಿ ಮೊದಮೊದಲು ಇದನ್ನೆಲ್ಲಾ ಅಲಕ್ಷ್ಯ ಮಾಡಿದರೂ ನಂತರದಲ್ಲಿ ಇವರ ಕಾಟ ಹೆಚ್ಚಾಗಿ ಹೋಯಿತು. ಬೈಗುಳಕ್ಕೂ ಬಗ್ಗದ ನೀಚ ಗುಂಪೊಂದು ಸದಾ ಆಕೆಯನ್ನು ಗೋಳಾಡಿಸತೊಡಗಿತು. ಮೊದಮೊದಲು ತಲೆ ಮೇಲಿದ್ದ ಸೆರಗನ್ನು ಮುಖವೆಲ್ಲಾ ಹೊದ್ದು ಓಡಾಡುತ್ತಿದ್ದ ಈ ಚೆಲುವೆ, ಆಮೇಲಾಮೇಲೆ ಅಲ್ತಾಫನ ಅಂಗಡಿಯ ಕಡೆ ಬರುವುದನ್ನೇ ಕಡಿಮೆ ಮಾಡಿದಳು. ಯಾವಾಗಲೊಮ್ಮೆ ಯಾರೂ ಇಲ್ಲದಾಗ ಬಂದು ಎರಡು ನಿಮಿಷವೂ ನಿಲ್ಲದೆ ಓಡಿ ಹೋಗುತ್ತಿದ್ದಳು. ಸಾಬರ ಕೇರಿ ಹಿರಿಯರು ಯಾರು ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಂತಿರಲಿಲ್ಲ. ಅವರೆಲ್ಲಾ ಅಲ್ತಾಫ್ ಅಯೋಗ್ಯತೆ ಗೊತ್ತಿದ್ದವರಂತೆ ಇದನ್ನೆಲ್ಲ ನಿರ್ಲಕ್ಷಿಸಿ ಸುಮ್ಮನಿದ್ದುಬಿಟ್ಟರು. ಆದರೆ ಆ ಹುಡುಗಿಗೆ ಪಡ್ಡೆಗಳ ಕಾಟ ದಿನೇದಿನೇ ಹೆಚ್ಚಿ ಹೋಯಿತು. ದಿನಗಳೆದಂತೆ ಆಕೆ ಹೊರಬರುವುದೇ ಅಪರೂಪವಾಯಿತು. ಅಪರೂಪಕ್ಕೆ ಹೊರಕ್ಕೆ ತಲೆ ಕಂಡರೂ ಛಕ್ಕನೆ ಬಂದ ಕೆಲಸ ಮುಗಿಸಿ ಕೋಟೆ ಗೋಡೆಗಳ ಬಾಗಿಲ ಹಿಂದೆ ಮರೆಯಾಗಿಬಿಡುತ್ತಿದ್ದಳು. ಕಡೆಗೊಂದು ದಿನ ಹೊರಬರುವುದನ್ನೇ ನಿಲ್ಲಿಸಿಬಿಟ್ಟಳು.

ಆ ಮನೆಯ ಹಿರಿ ಸೊಸೆಯರೋ.. ಇದೆಲ್ಲಾ ಮೊದಲೇ ಗೊತ್ತಿದ್ದ ತ್ರಿಕಾಲ ಜ್ಞಾನಿಗಳಂತೆ ಮೌನದಲ್ಲೇ ಮುಂದುವರೆದರು. ಆದರೆ ಇನ್ನೂ ಹೆಚ್ಚಿನ ಬದಲಾವಣೆ ಆಗಿದ್ದು ಅಲ್ತಾಫನಲ್ಲಿ. ಅವನಿಗೆ ಈ ಪ್ರಪಂಚದ ಬಗೆಗಿನ ವ್ಯಾಮೋಹ ಕರಗಿದಂತೆ ತೋರುತ್ತಿತ್ತು. ದಿನೇದಿನೇ ಅಂತರ್ಮುಖಿಯಾಗಿಹೋದನು. ಅಂಗಡಿಗೆ ಯಾರೇ ಬಂದರೂ ಅಗತ್ಯದ ಮಾತಷ್ಟು ಬಿಟ್ಟರೆ ಇನ್ನು ಮಾತಿಲ್ಲ. ಕನ್ನಡ ಸಾಹಿತ್ಯದ ಮಾತಂತೂ ಮರೆತೇ ಹೋದವನಂತೆ, ಬೀಡಿ ಹೊಗೆಯಲ್ಲಿ ಎಲ್ಲವನ್ನೂ ಮುಚ್ಚಲು ಹಾತೊರೆಯುವವನಂತೆ ಒಂದಾದಮೇಲೆ ಒಂದರಂತೆ ಬೀಡಿಗೆ ಶರಣಾದನು. ಆಮೇಲೆ ಸಣ್ಣಗೆ ಕಂಕಾಲದಂತಾಗಿ ಅಂಗಡಿಯೋ ದರ್ಗಾದ ಬಳಿಯೋ ಕೂತಿರುತ್ತಿದ್ದ ಎಂಬುದು ವದಂತಿ.

ಕಾಲದಲ್ಲಿ ಅಮ್ಮಿ ಅಬ್ಬಂದಿರು ತೀರಿದ ಮೇಲೆ ಬಹಳ ಒಂಟಿಯಾದನಂತೆ. ಎಂದೋ ಒಮ್ಮೆ ನನ್ನ ಮಗುವಿಗೆ ತಾಯತ್ತು ಮಾಡಿಸಲು ಬಡಾಮಕಾನಿಗೆ ಹೋದಾಗ ಅಲ್ಲಿ ಕಂಡು ‘ಕ್ಯಾ ಅಮ್ಮೂ ಕೈಸಾ ಹೈ ಸಬ್? ಬಚ್ಚೀ ಕೋ ಲೇಕು ಆಯೀ?’ ಅಂತ ಮಾತಾಡಿಸಿದ ನೆನಪು. ಅಂದ ಹಾಗೇ ಇವನು ನಮ್ಮ ಧ್ಯಾನದ ಗುರು ಆತ್ಮಾರಾಮನ ಕುಚುಕು ದೋಸ್ತನಾಗಿದ್ದನೆಂಬುದ ಈಗಲಾದರೂ ನೆನೆಯಲೇ ಬೇಕು! ಅವನೂ ಇವನೂ ಪ್ರೈಮರಿ ಶಾಲೆಯಲ್ಲಿ ಚಡ್ಡಿ ಹಾಕುವಾಗಲೇ ಸೇದಿ ಬಿಸಾಡಿದ ಕ್ವಾರೆ ಬೀಡಿ ಊದಿ ಸೇದುವುದು ಕಲಿತವರು! ಅದು ಇನ್ನೊಂದು ಕಥೆ.