ಒಮ್ಮೆ ಚಿಂತೆಗಳ ಕಂತೆ ಗಂಟುಕಟ್ಟಿ ಕಿತ್ತೆಸೆದು ಬಿಸಾಕಿ ಬನ್ನಿ. ಒಂದ್ಸಲ, ಒಂದೇ ಒಂದ್ಸಲ ಅಂಗಳಕ್ಕೋ ಟೆರೆಸಿಗೋ ಹೋಗಿ ಸುರಿವ ಮಳೆಯಲ್ಲಿ ನಿಂತು ನೋಡಿ. ಅದೊಂದು ತಪನೆಯಂತಹ ಅನುಭಾವ. ಒಮ್ಮೊಮ್ಮೆ ಜೀವನದ ಕರಕಷ್ಟ ಕಾಲದಲ್ಲಿ ಸಮಸ್ಯೆಗಳ ಸಂತೆಯಲ್ಲಿ ದಿಕ್ಕು ತಪ್ಪಿ ನಿಂತಿರುವವನ ಹೆಗಲ ಮೇಲೆ ಬಹುಕಾಲದ ಹಳೆಯ ಗೆಳೆಯನೊಬ್ಬ ಕೈ ಇಟ್ಟಂತೆ. ಮತ್ತೊಮ್ಮೆ ಮಾಧುರ್ಯದ ಗಳಿಗೆಯಲ್ಲಿ ಕೈಯೊಳಗೆ ಕೈಬೆಸೆದು ಪ್ರೇಮಿಯೊಬ್ಬ ಜೊತೆಯಲ್ಲಿ ಹೆಜ್ಜೆ ಹಾಕಿದಂತೆ. ಮಗದೊಮ್ಮೆ ವಿಷಾದದ ಮೊಗದಲ್ಲೂ ಮುಂದೆ ಬಂದು ಮುಗ್ಧವಾಗಿ ನಕ್ಕು ಜೀವನ್ಮುಖಿಯಾಗಿಸುವ ಹಸುಳೆಯಂತೆ, ಇನ್ನೊಮ್ಮೆ ಉಕ್ಕಿಬರುವ ದುಃಖದ ಹನಿಗಳ ಒರೆಸಿ ಅಕ್ಕರೆಯಿಂದ ಬಾಚಿ ತಬ್ಬಿ ಸಂತೈಸುವ ತಾಯ ಕೈಗಳಂತೆ.
ಮುರ್ತುಜಾಬೇಗಂ ಕೊಡಗಲಿ ಬರೆದ ಲೇಖನ

 

“ತತ್ವಕ್ಕೆ ಕಾವ್ಯಕ್ಕೆ ಪ್ರಕೃತಿ ಸೌಂದರ್ಯಕ್ಕೆ
ವಿಜ್ಞಾನಕ್ಕೆ, ಭೋಗಕ್ಕೆ, ತ್ಯಾಗಕ್ಕೆ
ಮೇಣ್ ಬ್ರಹ್ಮಚರ್ಯಕ್ಕೆ, ಪ್ರೇರಕಂ ಪರಮಗತಿ
ಸರ್ವಮುಂ ನೀನಕ್ಕೆ”.

ಎಲ್ಲೋ ಮಳೆಯಾಗಿದೆ ಎಂದು ತಂಗಾಳಿಯು ಹೇಳಿದರೆ ಸಾಕು ಬಾನಂಗಳದ ತುಂಬ ಮೋಡಗಳ ಸಾಲು. ಅಡರಿ ಬರುವ ಮಣ್ಣ ಘಮಲು. ಭಾವದ ಹಣತೆಗಳ ತುಂಬೆಲ್ಲ ಜೀವದ ಬೆಳಕು. ಮೌನದ ಗೂಡು ಸೇರುವ ಮಾತುಗಳಿಗೆಲ್ಲ ಭಾವಗೀತೆಗಳ ಗುನುಗು. ಬಣ್ಣದ ಗೆಜ್ಜೆ ಕಟ್ಟಿಕೊಂಡ ಛತ್ರಿಗಳಿಗೆ ಹೊರ ಬರುವ ತವಕ. ಮನದ ಕ್ಯಾನ್ವಾಸ್ ಮೇಲಂತೂ ಚಿತ್ರಗಳ ಸಂತೆ.

ನನ್ನಂತಹ ಮಳೆಪ್ರಿಯರಿಗಂತೂ ಹೊರಗೆ ಮಳೆ ಸುರಿದರೂ ಎದೆನೆಲವೆಲ್ಲ ಒದ್ದೆ ಒದ್ದೆ. ಒಂದಷ್ಟು ಖುಷಿಯ ಅಮಲು. ನೆನಪುಗಳ ಧಾರೆ ಪುಂಖಾನುಪುಂಖ. ಕವಿಮನಸುಗಳಿಗೆ ಅದೊಂದು ಸುಗ್ಗಿ, ಕೆಲವರಿಗೆ ಮುನಿಸು ಮುಗಿವ ಹೊತ್ತು. ಹಲವರಿಗೆ ಕನಸು ಚಿಗುರುವ ಕಾಲ.

ಮಳೆ ಒಂದು ಬೆರಗು-ಸೋಜಿಗ ಹೇಗೋ, ಹಾಗೆಯೇ ಮಳೆಗೂ ಕಾವ್ಯಕ್ಕೂ ಇರುವ ನಂಟು ನನಗೆ ತಣಿಯದ ಕುತೂಹಲ. ‘ಮಳೆ’ ಎಂಬ ಶಬ್ದ ಕೇಳಿದರೆ ಸಾಕು, ಕವಿಗಳ ಎದೆ ಹಿಗ್ಗುವ ಪರಿಯೇ ಅಚ್ಚರಿ. ಸುರಿವ ಮಳೆಹನಿಗಳ ತಾಳಕ್ಕೆ ಕವಿಮನದಲ್ಲಿ ಧಾರೆಧಾರೆ ಕಾವ್ಯಕಛೇರಿ.

ಏನೆಲ್ಲ ಭಾವಗಳ ಧ್ವನಿಸುವ ಮಳೆಹಾಡುಗಳ ಪರಿಯಂತೂ ಅದ್ಭುತವೇ ಹೌದು. ಮಳೆಗಾಲದ ಈ ಹೊತ್ತಲ್ಲಿ ಒಂದಷ್ಟು ಮಳೆಹಾಡುಗಳ ಮೆಲುಕು ಹಾಕೋಣವೇ.

ಮಳೆಗೂ ಪ್ರೇಮಕ್ಕೂ ಜನ್ಮಾಂತರದ ನಂಟಿದೆ ಅನಿಸುತ್ತೆ. ಸುರಿವ ಮಳೆ ನೋಡುತ್ತಲೇ ಎಷ್ಟೋ ಮನಸುಗಳಲ್ಲಿ ಪ್ರೀತಿಯ ಬೀಜ ಮೊಳಕೆಯೊಡೆಯಲು ಹಾತೊರೆಯತೊಡಗುತ್ತದೆ.

‘ತುಂತುರು ಅಲ್ಲಿನೀರ ಹಾಡು
ಕಂಪನ ಇಲ್ಲಿ ಪ್ರೀತಿ ಹಾಡು
ಹಗಲಿರಲಿ ಇರುಳಿರಲಿ
ನೀನಿರದೇ ಹೇಗಿರಲಿ’
ಎನ್ನುವ ಪ್ರೇಮಿಯ ಮನಕ್ಕೆ ದೂರವಾಗುವದೆಂದರೆ ವಿಲವಿಲ. ನೀರಹಾಡನ್ನೂ, ಪ್ರೀತಿ ಹಾಡನ್ನೂ ಸಾಮ್ಯೀಕರಿಸಿರುವ ರೀತಿ ನೋಡಿ.

‘ಬನ್ನಿ ಭಾವಗಳೇ ಬನ್ನಿ ನನ್ನೆದೆಗೆ
ಕರೆಯುವೆ ಕೈಬೀಸಿ
ಬತ್ತಿದೆದೆಯಲಿ ಬೆಳೆಯರಿ ಹಸಿರನು
ಪ್ರೀತಿಯ ಮಳೆ ಸುರಿಸಿ’ ಎಂಬಲ್ಲಿ ಪ್ರೀತಿಯೇ ಮಳೆಯಾಗಿರುವ ಪರಿ ಅನನ್ಯ.

ಮಳೆಯಂದರೆ ಹಾಗಲ್ಲವೇ? ಒಮ್ಮೆ ಮುಗಿಲಿಗೆ ತೂತು ಬಿದ್ದಂತೆ ಮುಸಲಧಾರೆ. ಮತ್ತೊಮ್ಮೆ ಮಂದ್ರಭಾವ. ಮಗದೊಮ್ಮೆ ಶಾಂತ ಶಾಂತ. ಅದು ಸುರಿವ ಪರಿ ಬದಲಾದಂತೆ ಹರಿವ ಭಾವಗಳೂ ಭಿನ್ನ.

‘ಪ್ಯಾರ್ ಹುವಾ ಇಕರಾರ್ ಹುವಾಹೈ
ಪ್ಯಾರ್ ಸೇ ಫಿರ್ ಕ್ಯೂಂಢರತಾ ಹೈದಿಲ್’

ರಾಜಕಪೂರ ನಾಯಕಿಯೊಂದಿಗೆ ಕೊಡೆ ಹಿಡಿದು ಈ ಹಾಡಿಗೆ ಮೆಲ್ಲನೆ ಹೆಜ್ಜೆಯಿಡುತ್ತಾ ಹಾಡುತ್ತಿದ್ದರೆ ಕೇಳಿದ ಯಾರಾದರೂ ಪ್ರೇಮಿ ಆಗಲೇಬೇಕು. ಅವರಲ್ಲಿ ಮಳೆಯಲ್ಲಿ ಮೀಯುತ್ತಿದ್ದರೆ ಇಲ್ಲಿ ನೋಡುಗ ತೊಯ್ದು ತೊಪ್ಪೆಯಾಗುತ್ತಾನೆ.

ಬಾ ಮಳೆಯೇ ಬಾ
ಅಷ್ಟು ಬಿರುಸಾಗಿ ಬಾರದಿರು
ನನ್ನ ನಲ್ಲೆ ಬರಲಾಗದಂತೆ
ಅವಳಿಲ್ಲಿ ಬಂದೊಡನೆ
ಬಿಡದೆ ಬಿರುಸಾಗಿ ಸುರಿ
ಹಿಂತಿರುಗಿ ಹೋಗದಂತೆ

ಅಬ್ಬಾ! ನಲ್ಲೆ ಬರೋದಿಕ್ಕೆ ಮಳೆ ಅಡ್ಡಿಪಡಿಸುವ ಆತಂಕ, ಅವಳು ಒಂದೊಡನೆ ಹಿಂತಿರುಗಿ ಹೋಗದಷ್ಟು ಮಳೆ ಸುರಿಯಲೆಂಬ ಕವಿಯ ಆದ್ರತೆ ಹಾಗೂ ಆಗ್ರಹ ಗಮನಾರ್ಹ.

‘ಟಿಪ್ ಟಿಪ್ ಬರಸಾಪಾನೀ
ಪಾನಿ ಮೇ ಆಗ್ ಲಗಾಯಿ
ಆಗ್ ಲಗೀ ದಿಲ್ ಮೇ ಜೊ
ದಿಲ್ ಕೋ ತೇರಿ ಯಾದ್ ಆಯಿ’

ಎಂಬಂಥ ಹಾಡುಗಳು ಕೇಳಿದರೆ ಸುಪ್ತವಾಂಛಗಳ ಉತ್ಖನನ ಮಾಡಿ ಹೊರತೆಗೆಯಬೇಕಿಲ್ಲ, ತಂತಾನೇ ಪುಳಕಗೊಂಡು ತವಕಿಸಲು ಅಣಿಯಾಗುತ್ತವೆ. ಕೇದಿಗೆಯ ಬನದ ತುಂಬ ಹರಿವ ನಾಗರಗಳಂತೆ ವಾಂಛೆಗಳ ಸುಳಿದಾಟ, ಬೆನ್ನಹುರಿಗುಂಟ ‘ಜುಮ್’ ಎಂಬ ಭಾವ.

ಹಾಗೆ ನೋಡಿದರೆ ಮಳೆ ಅದೆಷ್ಟೋ ಪ್ರೇಮಕಥೆಗಳಿಗೆ ಮುನ್ನುಡಿ ಬರೆಯುತ್ತದೆ. ಆದರೂ ಅದು ಕಾವ್ಯವನ್ನು ಆವರಿಸಿಕೊಂಡಷ್ಟು ಬೇರೆ ಏನನ್ನೂ ನೇವರಿಸಿಲ್ಲ. ಸಾಧನಕೇರಿಯ ಬೇಂದ್ರೆಯಜ್ಜನಿಂದ ಹಿಡಿದು ಇಂದಿನವರೆಗೂ ಬಹುತೇಕ ಕವಿಗಳು ಮಳೆಕಾವ್ಯದ ಸ್ಪರ್ಶದ ಪುಳಕಕ್ಕೆ ಹಾತೊರೆದವರೇ!

ವರಕವಿಯ ‘ಗಂಗಾವತರಣ’ದ ಸಾಲುಗಳನ್ನೊಮ್ಮೆ ಓದಲೇಬೇಕು. ‘ಇಳಿದು ಬಾ ತಾಯಿ ಇಳಿದು ಬಾ’ ಆಂತರ್ಯದ ಧ್ವನಿತೀವ್ರತೆಗೆ ಯಾರಾದರೂ ತಲೆದೂಗಲೇಬೇಕು. ಮುಂದುವರೆದು ಶಬ್ದ ಗಾರುಡಿಗನ ಈ ಸಾಲುಗಳ ಕೇಳಿ.

‘ಸುರಸ್ವಪ್ನವಿದ್ದ ಪ್ರತಿಬಿಂಬ ಬಿದ್ದ ಉದ್ದುದ್ಧ ಶುದ್ಧನೀರೆ!
ಎಚ್ಚೆತ್ತು ಎದ್ದ ಆಕಾಶದುದ್ದ ಧರೆಗಿಳಿಯಲಿದ್ದ ಧೀರೆ!’.

ಸ್ವಾತಿಮುತ್ತಿನ ಮಳೆಹನಿಯನ್ನು ಮೆಲ್ಲಮಲ್ಲನೆ ಧರೆಗಳಿದು ಪ್ರೀತಿಯ ಮುತ್ತಿನ ಹಾರಕಟ್ಟಲು ಆಹ್ವಾನಿಸುತ್ತಾನೆ ಕವಿ ಒಂದೆಡೆ ಇಳೆಯ ಮೇಲೆ ಇಳಿದು ಬಂದದ್ದು ಹೂವಿನ ಮಳೆ ಎಂಬಂದು ಇನ್ನೊಂದು ಕವಿದನಿ. ಇನ್ನೂ ಮುಂಗಾರು ಮಳೆಯ ಹನಿಗಳ ಲೀಲೆ ಮೆಚ್ಚದವರೇ ಇಲ್ಲ.

ಈ ಮಳೆ ಎಂಬೋ ಮಳೆ ಕವಿಗಳ ಕಲ್ಪನೆಯನ್ನು ಪ್ರೇರೆಪಿಸುವದು ನೆನೆಸಿಕೊಂಡರೂ ನಾನು ದಿಗ್ಭ್ರಾಂತೆ. ಮಳೆಯನ್ನು ಪದಗಳಲ್ಲಿ ಕಟ್ಟುವ ರೀತಿಯಲ್ಲೇ ಒಂದು ನಾವಿನ್ಯತೆ ಗೋಚರಿಸುತ್ತದೆ.

ಮಳೆ ಒಂದು ಬೆರಗು-ಸೋಜಿಗ ಹೇಗೋ, ಹಾಗೆಯೇ ಮಳೆಗೂ ಕಾವ್ಯಕ್ಕೂ ಇರುವ ನಂಟು ನನಗೆ ತಣಿಯದ ಕುತೂಹಲ. ‘ಮಳೆ’ ಎಂಬ ಶಬ್ದ ಕೇಳಿದರೆ ಸಾಕು, ಕವಿಗಳ ಎದೆ ಹಿಗ್ಗುವ ಪರಿಯೇ ಅಚ್ಚರಿ. ಸುರಿವ ಮಳೆಹನಿಗಳ ತಾಳಕ್ಕೆ ಕವಿಮನದಲ್ಲಿ ಧಾರೆಧಾರೆ ಕಾವ್ಯಕಛೇರಿ.

ಹಿರಿಯರಾದ ಡಿ.ವಿ. ಪ್ರಹ್ಲಾದರ ಈ ಸಾಲುಗಳನ್ನೊಮ್ಮೆ ಓದಿನೋಡಿ.

“ಗಗನದಿಂದ ಇಳಿಬಿದ್ದ ನೂಲ ಎಳೆ
ನೆಲಕ್ಕೆ ನೇಯುತ್ತಿದೆ ನೀರ ಬಟ್ಟೆ”.

ಮೊದಲ ಬಾರಿ ಓದಿದಾಗ ‘ಅಬ್ಬಾ’ ಎಂಬ ಉದ್ಧಾರ ತೆಗೆದ ನೆನಪಿನ್ನೂ ಹಸಿಯಾಗಿದೆ.

ಇಳೆಯ ಎದೆ ವೀಣೆಗೆ
ಬಾರಿಬಾರಿ ಬಂದು ಮಿಡಿಯೆ
ವರುಣನ ಕೈಬೆರಳು
ಮೂಡದಿಹುದೇ ಒಲವರಾಗ
ಉಲಿಯದಿಹುದೇ ಮನದ ಹಕ್ಕಿ

ಇವು ನನ್ನದೇ ‘ಒಂದು ಮಳೆ ಪ್ರೀತಿಯ ಹಾಡಿನ ಸಾಲುಗಳು. ಇನ್ನೂ ಯಾವ ಯಾವ ಪುಣ್ಯಾತ್ಮ ಕವಿಮಿತ್ರರು ಹೇಗೆ ಕಲ್ಪಿಸಿಕೊಂಡು ಗುನುಗಿದ್ದಾರೊ!.
ಮಳೆಯೆಂದರೆ ಸಂಭ್ರಮ. ಅದೊಂದು ಸುಗ್ಗಿ. ಗರಿಬಿಚ್ಚುವ ಕಾಲ. ಸಂತಸದ ಸಂತೆ. ಇಷ್ಟೆಲ್ಲ ಆಗಿರುವ ಮಳೆಯ ಮನಸ್ಸು ಅದೆಷ್ಟು ವಿಶಾಲ ಗೊತ್ತಾ? ಅಷ್ಟಿಲ್ಲದೇ ಜಗತ್ತಿನ ಹೆಸರಾಂತ ನಗೆದೊರೆ ಚಾರ್ಲಿ ಚಾಪ್ಲಿನ್ ಹೇಳ್ತಾನಾ?-“ಜೋರಾಗಿ ಸುರಿವ ಮಳೆಯಲ್ಲಿ ನಡೆಯುವದೆಂದರೆ ನನಗೆ ಇಷ್ಟ. ಯಾಕೆಂದರೆ ಆಗ ನನ್ನ ಕಣ್ಣೀರು ಯಾರಿಗೂ ಕಾಣದು” ಅಂತ.

ಎಷ್ಟೋ ಮೊಗಗಳಲ್ಲಿ ನಗೆಮಿಂಚು ಸ್ಪುರಿಸುವ ಮಳೆ ಅದಿನ್ನೆಷ್ಟು ಹೃದಯಗಳ ಕಣ್ಣೀರನ್ನು ತನ್ನೊಡಲಲ್ಲಿ ಬಚ್ಚಿಟ್ಟುಕೊಂಡು ಏನೂ ಗೊತ್ತಿಲ್ಲದಂತೆ ಗುಪ್ತಗಾಮಿನಿಯಾಗಿ ಹರಿಯುತ್ತದೊ!.

ಮಳೆ ಹೀಗೆ ಬರಲಿ
ಬರುತ್ತಲೇ ಇರಲಿ
ಸುಮ್ಮನೆ ನಿಂತು
ಸುರಿವ ಮಳೆಯಲಿ
ಕಣ್ಣಂಚ ಕಂಬನಿ
ಕರಗಿ ಹೋಗಲಿ
ಆ ಹನಿಯೊಂದಿಗೆ
ಈ ಹನಿ ಬೆರೆತು ಹೋಗಲಿ- ಮತ್ತೆ ನನ್ನ ಸಾಲುಗಳಿವು.

****

ಮಳೆ ಬಂದರೂ ಕಾವ್ಯ. ಬಾರದಿದ್ದರೂ ಕೂಡ. ಮಾಯದಂಥ ಮಳೆ ಬಂದಾಗ ಭೂರಮೆಯ ಸಿಂಗಾರ. ಮಳೆ ಮುನಿಸಿಕೊಂಡಾಗಲೂ, ಬರದ ತಾಂಡವದಲ್ಲೂ ಮಳೆ, ಅದರ ಹಹಹಪಿ ಕಾವ್ಯವನ್ನು ಆಕ್ರಮಿಸಿಕೊಳ್ಳುತ್ತದೆ.

ನನ್ನ ಪ್ರಕಾರ ಬರ ಎಂದರೆ ಮಳೆರಾಯನ ಮುನಿಸಿನ ಕೂಸು.

ಯಾತಕ್ಕೆ ಮಳೆ ಹೋದವೋ ಶಿವ ಶಿವ
ಲೋಕ ತಲ್ಲಣಿಸತಾವೋ

ಹೀಗೆ ಲೋಕದ ತಲ್ಲಣಕ್ಕೂ ಮಳೆಯ ಗೈರುಹಾಜರಿಯೇ ಸಾಕ್ಷಿ. ಬೆಂಕಿಯ ಮಳೆಯನ್ನಾದರೂ ಸುರಿಸೆಂಬ ಆದ್ರ ಕೂಗು ಮಳೆಯ ಹಪಹಪಿಗೆ ದನಿಯಾದವರಿಗಷ್ಟೇ ವೇದ್ಯ.

***

ಅನಂತ ಆಗಸದಿಂದ ಬೇರಿನ ಬಸಿರಿಗೆ ಇಳಿದು ಭೂ ಒಡಲಿನಲ್ಲಿ ಹಸಿರು ಚಿಗುರಿಸುವ ಮಳೆ ನಿಸರ್ಗದ ದಿವ್ಯಶಕ್ತಿ. ಭೂರಮೆಯ ತುಂಬ ಹರದಿಕೊಂಡ ಹಸಿರು ಹಂದರಕ್ಕೆ ಮಳೆ ಸುರಿದಾಗಿನ ಸೊಬಗೇ ಒಂದು ವಿಸ್ಮಯ.

ನಮ್ಕಡೆ ಒಬ್ರು ಹೇಳ್ತಿದ್ರು- “ಮೇಡಂ ಗಿಡ ನೋಡ್ರಿ, ಮಳಿ ಬಂದ್ರ ಹೆಂಗ ಕಾಣಸ್ತಾವು, ಎರೆದು ಮಲಗಿಸಿದ ಕೂಸಿನಂಗ ಸ್ವಚ್ಛ” ಅಂತ ಅವರ ಆಡುಮಾತಿನಲ್ಲೂ ಅಡಗಿರುವ ಕಾವ್ಯಭಾವ ನೋಡಿ.

ಇತ್ತೀಚೆಗೆ ಮಳೆ ಹಾಗೂ ಕಾವ್ಯಗಳ ಏಕಕಾಲದ ಅನುಭವಕ್ಕೆ ಪಕ್ಕಾಗುವ ಅವಕಾಶ ಸಿಕ್ಕದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳದಿದ್ರೆ ಆತ್ಮದ್ರೋಹ ಆದೀತು! ಕುಪ್ಪಳ್ಳಿಯ ಕಾಜಾಣ ಕಾವ್ಯ ಕಮ್ಮಟದ ಆ ಮೂರು ದಿನಗಳೂ ಹೇಮಾಂಗಣದ ಒಳಗಿರುವಾಗ ಕಾವ್ಯಸಿಂಚನ ಹೊರಗೆ ಹೋದರೆ ಹನಿ ಪ್ರೋಕ್ಷಣೆ. ಅದರಲ್ಲೂ ನನ್ನಂತಹ ಬಯಲು ಸೀಮೆಯವರಿಗೆ ಮಳೆಗೆ ಮುಖ ಕೊಡುವದೇ ಅಮಿತಾನಂದ. ಹಗಲೂ ರಾತ್ರಿಯೂ ಸುರಿವ ಹನಿಗಳ ಆ ತಾಳಕ್ಕೆ ನಾನು ನಿರಂತರ ನಾಟ್ಯರಾಣಿ.

ಮಸುಕಾದ ಮುಂಜಾವಿನಲ್ಲಿ ನವಿಲುಕಲ್ಲುಗುಡ್ಡದ ನೆತ್ತಿ ಹತ್ತಿಳಿಯುವಷ್ಟರಲ್ಲಿ ಎದೆತುಂಬ ಸಾವಿರ ನವಿಲುಗಳು. ಛತ್ರಿಯ ಹಂಗೂ ಇಲ್ಲದೇ… selfie ಯ ಗುಂಗೂ ಇಲ್ಲದೇ ಧಾರೆಯಾದ ಮಳೆಗೆ ಮೈಮನವೊಡ್ಡಿ ನಿಂತೆ ನೋಡಿ. ಈಗಲೂ ಮನ ತೋಯ್ದ ಗುಬ್ಬಚ್ಚಿ.

ಅದೇ ಸಂಜೆ, ಕವಿಶೈಲಕ್ಕೆ ಏರಿ ಹೋಗಿ, ಕವಿ-ಕಾವ್ಯದ ಬಗ್ಗೆ ಧ್ಯಾನಸ್ಥಳಾದರೆ ಮನಸಿಡೀ ಸಮಾಧಿಭಾವ ಆಗಲೂ ಮಳೆಯ ಧೋಸುರಿತ. ಅಲ್ಲಿರುವ ಅಷ್ಟೂ ಸಮಯ ಕಾವ್ಯ ಮತ್ತು ಮಳೆಯ ಜುಗಲಬಂಧಿ ಅತ್ಯದ್ಭುತ.

ನಾವು ಸಣ್ಣವರಿದ್ದಾಗ ಕನ್ನಡ ಶಾಲೆಗೆ ಹೋಗುವಾಗ ಗುಡುಗಿನ ಶಬ್ದ ಕೇಳಿದರೆ ಸಾಕು; ರಾಗವಾಗಿ ‘ಗುಡುಗುಡು ಮುತ್ಯಾ ಒಂದಾನ’ ಅಂತ ಹಾಡಿದ್ದೇ ಹಾಡಿದ್ದು. ಹರಿವ ನೀರಲ್ಲಿ ಪುಸ್ತಕದ ಹಾಳೆ ಹರಿದು ಮಾಡಿದ ದೋಣಿಯನ್ನು ತೇಲಿಬಿಡುವ ಸಂಭ್ರಮ ಇನ್ನೂ ಹಸಿರು. ದಾರಿಗುಂಟ ನಿಂತ ನೀರಲ್ಲಿ ಯಾರು ಹೇಳಿದರೂ ಕೇಳದೇ ‘ಛಂಗ್’ ಅಂತ ಜಿಗಿದರೆ ಬಟ್ಟೆಯಲ್ಲ ಕೊಳೆ. ನೆನಪಿಸಿಕೊಂಡರೆ ಮನಸ್ಸು ಇಂದಿಗೂ ಸ್ವಚ್ಚ.

ಅಲ್ಲಿಲ್ಲಿ ಹಸಿರು ಪಾಚಿ. ಜಾರಿ ಬೀಳುವ ಭಯ. ತಲೆ ತೋಯಿಸಿಕೊಂಡು ನೆಗಡಿ ಬರುವ ಭೀತಿ, ಇವೆಲ್ಲ ಹಿರಿಯರ ಬೆದರಿಕೆಗಳು. ಅವನ್ನೆಲ್ಲ ಮೀರಿ ಮಳೆಯಲ್ಲಿ ನೆನೆದು ಬರುವದೇ ನಮ್ಮ ಅಲಿಖಿತ ಜನ್ಮಸಿದ್ಧ ಹಕ್ಕು ಆಗ.

ಈಗಲೂ ಏನಂತೆ? ಒಮ್ಮೆ ಚಿಂತೆಗಳ ಕಂತೆ ಗಂಟುಕಟ್ಟಿ ಕಿತ್ತೆಸೆದು ಬಿಸಾಕಿ ಬನ್ನಿ. ಒಂದ್ಸಲ, ಒಂದೇ ಒಂದ್ಸಲ ಅಂಗಳಕ್ಕೋ ಟೆರೆಸಿಗೋ ಹೋಗಿ ಸುರಿವ ಮಳೆಯಲ್ಲಿ ನಿಂತು ನೋಡಿ. ಅದೊಂದು ತಪನೆಯಂತಹ ಅನುಭಾವ.

ಒಮ್ಮೊಮ್ಮೆ ಜೀವನದ ಕರಕಷ್ಟ ಕಾಲದಲ್ಲಿ ಸಮಸ್ಯೆಗಳ ಸಂತೆಯಲ್ಲಿ ದಿಕ್ಕು ತಪ್ಪಿ ನಿಂತಿರುವವನ ಹೆಗಲ ಮೇಲೆ ಬಹುಕಾಲದ ಹಳೆಯ ಗೆಳೆಯನೊಬ್ಬ ಕೈ ಇಟ್ಟಂತೆ. ಮತ್ತೊಮ್ಮೆ ಮಾಧುರ್ಯದ ಗಳಿಗೆಯಲ್ಲಿ ಕೈಯೊಳಗೆ ಕೈಬೆಸೆದು ಪ್ರೇಮಿಯೊಬ್ಬ ಜೊತೆಯಲ್ಲಿ ಹೆಜ್ಜೆ ಹಾಕಿದಂತೆ. ಮಗದೊಮ್ಮೆ ವಿಷಾದದ ಮೊಗದಲ್ಲೂ ಮುಂದೆ ಬಂದು ಮುಗ್ಧವಾಗಿ ನಕ್ಕು ಜೀವನ್ಮುಖಿಯಾಗಿಸುವ ಹಸುಳೆಯಂತೆ, ಇನ್ನೊಮ್ಮೆ ಉಕ್ಕಿಬರುವ ದುಃಖದ ಹನಿಗಳ ಒರೆಸಿ ಅಕ್ಕರೆಯಿಂದ ಬಾಚಿ ತಬ್ಬಿ ಸಂತೈಸುವ ತಾಯ ಕೈಗಳಂತೆ.

ಹೀಗೆ ಏನೆಲ್ಲ ಆಗಿಬಿಡುತ್ತದೆ ಮಳೆ… ನೀವೂ ಒಮ್ಮೆ ಅನುಭವಿಸಿ ನೋಡಿ.