ವೃತ್ತಿಪರರ ನಡುವಿನ ಸ್ಪರ್ಧೆ! ಯಾಕೆ ಅಂತ ಗೊತ್ತಾಗುತ್ತಿರಲಿಲ್ಲ. ಮಾಡಿಸಿದ ಹೆರಿಗೆಗಳ ಲೆಕ್ಕ ಕೊಡಬೇಕಿತ್ತೊ ಏನೋ. ಅಮ್ಮ ಮಾತ್ರ ಕೆಲವೊಮ್ಮೆ ಬೈಯುವಾಗ ‘ಹುಟ್ಟಿದ ತಕ್ಷಣ ಆ ಕಿರಿಸ್ತಾನಿ ಬಜಾರಿ ನಿನ್ನ ಬಾಯೊಳಗೆ ಬೆರಳು ಹಾಕಿದಳೋ ಏನೋ, ಅದಕ್ಕೇ ಅವಳ ತರವೇ ಆಡ್ತೀಯಾ!’ ಅಂತ ಗೊಣಗುತ್ತಿದ್ದರು. ನನಗೆ ಯಾರನ್ನು ಆರಿಸಿಕೊಳ್ಳುವುದು ಅಂತ ಕಷ್ಟವಾಗುತ್ತಿತ್ತು. ಶಾಂತ ಕಣ್ಣುಗಳ ರಾಜಮ್ಮ ನರ್ಸು, ನಮ್ಮ ಸ್ಕೂಲು ಹೆಡ್ ಮಾಸ್ತರರ ಹೆಂಡತಿ. ನನ್ನ ಸ್ಕೂಲುಪ್ರೇಮದ ದೆಸೆಯಿಂದ ರಾಜಮ್ಮ ನರ್ಸನ್ನು ಆರಿಸಿಕೊಳ್ಳುತ್ತಿದ್ದೆ.
‘ಕನಾರಳ್ಳಿ ಕಾರ್ನರ್‌’ ನಲ್ಲಿ ಸುಕನ್ಯಾ ವಿಶಾಲ ಕನಾರಳ್ಳಿ ಬರಹ

 

ಪ್ರತಿವರ್ಷ ನನ್ನ ಹುಟ್ಟಿದ ದಿನದ ಹೊತ್ತಿಗೆ ಮಳೆ ಬಂದರೆ ನನಗೆ ಆಳದಲ್ಲಿ ಸಮಾಧಾನವಾಗುತ್ತದೆ. ಬಿರು ಬಿಸಿಲಿನಲ್ಲಿ ಈ ದಿನ ನಾನು ಹುಟ್ಟಿದ ದಿನ ಅಂತ ಅಂದುಕೊಳ್ಳುವುದೇ ನನ್ನಾತ್ಮವನ್ನು ವಿಲವಿಲ ಅಂತನ್ನಿಸುತ್ತದೆ.

ನಾನು ಹುಟ್ಟಿದ ದಿನ ಧೋ ಅಂತ ಮಳೆ ಸುರಿದಿತ್ತಂತೆ. ಕೊಡ್ಲೀಪೇಟೆಯ ಕೆಳ್ಳೆಬೀದಿಯ ಮನೆಯಲ್ಲಿ ರಾಜಮ್ಮ ನರ್ಸು ನನ್ನನ್ನು ಈ ಭೂಮಿಗೆ ಇಳಿಸಲು ಒದ್ದೆಮುದ್ದೆಯಾಗಿ ಬಂದಿದ್ದರಂತೆ. ಆಮೇಲೆ ಮನೆಗೆ ಹೋಗಲಾರದೇ ಆ ದಿನ ಅಲ್ಲೇ ಉಳಿದಿದ್ದರಂತೆ.

ಅಂತೆ ಕಂತೆಗಳ ಸಂತೆ!

ಎರಡು ಮನೆಯಾಚೆ ವಾಸವಾಗಿದ್ದ ಫಿಲೋಮಿನಾ ನರ್ಸ್ ಹೇಳುವ ಕತೆ ಮಾತ್ರ ಬೇರೆಯೇ.

‘ಅಂಥಾ ಜಡಿ ಮಳೆಯಲ್ಲಿ ಹತ್ತಿರವಿದ್ದ ನಾಂತಾನೆ ಹೆರಿಗೆ ಮಾಡಿಸೋದಕ್ಕೆ ಬಂದದ್ದು? ನೀನು ಹುಟ್ಟಿದ್ದು ಬೆಳಗಿನ ಜಾವದಲ್ಲಿ. ಅವಳು, ಆ ರಾಜಮ್ಮ ಕಡೇಪೇಟೆಯಿಂದ ಏನು ಹಾರಿಕೊಂಡು ಬಂದ್ಲಾ, ಕೇಳು?’

‘ಕಡೇಪೇಟೆಯಿಂದ ಕೆಳ್ಳೆಬೀದಿಗೆ ಅಡ್ಡದಾರಿ ಇರೋದೂ ಅವಳಿಗೆ ಗೊತ್ತಿಲ್ಲವಾಂತಾ, ಕೇಳು, ’ ಅಂತ ರಾಜಮ್ಮ ನರ್ಸು ತಣ್ಣಗಿನ ಧ್ವನಿಯಲ್ಲಿ ಚುಚ್ಚುತ್ತಿದ್ದರು.

ವೃತ್ತಿಪರರ ನಡುವಿನ ಸ್ಪರ್ಧೆ! ಯಾಕೆ ಅಂತ ಗೊತ್ತಾಗುತ್ತಿರಲಿಲ್ಲ. ಮಾಡಿಸಿದ ಹೆರಿಗೆಗಳ ಲೆಕ್ಕ ಕೊಡಬೇಕಿತ್ತೊ ಏನೋ.
ಅಮ್ಮ ಮಾತ್ರ ಕೆಲವೊಮ್ಮೆ ಬೈಯುವಾಗ ‘ಹುಟ್ಟಿದ ತಕ್ಷಣ ಆ ಕಿರಿಸ್ತಾನಿ ಬಜಾರಿ ನಿನ್ನ ಬಾಯೊಳಗೆ ಬೆರಳು ಹಾಕಿದಳೋ ಏನೋ, ಅದಕ್ಕೇ ಅವಳ ತರವೇ ಆಡ್ತೀಯಾ!’ ಅಂತ ಗೊಣಗುತ್ತಿದ್ದರು.

ನನಗೆ ಯಾರನ್ನು ಆರಿಸಿಕೊಳ್ಳುವುದು ಅಂತ ಕಷ್ಟವಾಗುತ್ತಿತ್ತು. ಶಾಂತ ಕಣ್ಣುಗಳ ರಾಜಮ್ಮ ನರ್ಸು ನಮ್ಮ ಸ್ಕೂಲು ಹೆಡ್ ಮಾಸ್ತರರ ಹೆಂಡತಿ. ನನ್ನ ಸ್ಕೂಲುಪ್ರೇಮದ ದೆಸೆಯಿಂದ ರಾಜಮ್ಮ ನರ್ಸನ್ನು ಆರಿಸಿಕೊಳ್ಳುತ್ತಿದ್ದೆ.

ಫಿಲೋಮಿನಾ ನರ್ಸು ನನ್ನದೇ ವಯಸ್ಸಿನ ಬೆಳ್ಳಗಿನ ಮುದ್ದು ಮುಖದ ರೀನಾಳ ತಾಯಿ. ಆಕೆಯ ಬಾಯಾಳಿತನಕ್ಕೆ ನಾನು ಹಲವೊಮ್ಮೆ ಬೆರಗಾಗಿ ಬಾಯಿ ಕಳೆದು ನಿಲ್ಲುತ್ತಿದ್ದೆ.

‘ನಮ್ಮ ರೀನಾಳನ್ನ ಹೆತ್ತು ಎರಡು ತಿಂಗಳ ಬಾಣಂತಿ ನಾನು. ಆದರೂ ಪಾಪ ಕಷ್ಟ ಅಂತ ಎರಡು ಮನೆ ಜಗುಲಿ ದಾಟಿ ಬಂದು ನಾನೇ ನಿನ್ನ ಈಚೆ ಎಳೆದು ಹಾಕಿದ್ದು,’ ಅಂತ ಆ ಬಜಾರಿ ಬಿಡುಬೀಸಾಗಿ ಹೇಳುವಾಗ ಆಯ್ಯಮ್ಮ! ಅಂತನ್ನಿಸುತ್ತಿತ್ತು.
ಯಾರನ್ನ ನಂಬುವುದೋ!

ನಾನು ಹುಟ್ಟಿದ ದಿನ ಧೋ ಅಂತ ಮಳೆ ಸುರಿದಿತ್ತಂತೆ. ಕೊಡ್ಲೀಪೇಟೆಯ ಕೆಳ್ಳೆಬೀದಿಯ ಮನೆಯಲ್ಲಿ ರಾಜಮ್ಮ ನರ್ಸು ನನ್ನನ್ನು ಈ ಭೂಮಿಗೆ ಇಳಿಸಲು ಒದ್ದೆಮುದ್ದೆಯಾಗಿ ಬಂದಿದ್ದರಂತೆ. ಆಮೇಲೆ ಮನೆಗೆ ಹೋಗಲಾರದೇ ಆ ದಿನ ಅಲ್ಲೇ ಉಳಿದಿದ್ದರಂತೆ.

ನನ್ನ ಹುಟ್ಟಿನ ಸಂದರ್ಭದಲ್ಲಿ ನಿನಗೆ ಹೆರಿಗೆ ಮಾಡಿಸಿದವರು ಯಾವ ನರ್ಸಮ್ಮ ಅಂತ ಒಂದು ದಿನ, ಅಮ್ಮ ಒಳ್ಳೆಯ ಮೂಡಿನಲ್ಲಿದ್ದಾಗ ಕೇಳಿದ್ದೆ.

‘ಅಯ್ಯೋ, ಯಾರಿಗೆ ನೆನಪಿರುತ್ತದೆ ಹೋಗು! ಒಂದೋ ಎರಡೋ ಆಗಿದ್ದರೆ ತಲೇನಲ್ಲಿ ಇರುತ್ತಿತ್ತು,’ ಅಂತ ಅಮ್ಮ ಒಣಗಿದ ಧ್ವನಿಯಲ್ಲಿ ಹೇಳಿದಾಗ, ಗರ್ಭಪಾತಗಳೂ ಸೇರಿದಂತೆ ಅಮ್ಮ ಎಂಟು ಹೊತ್ತಿದ್ದರು, ಜೊತೆಗೆ ಐದು ಬಲಮಕ್ಕಳು ಬೇರೆ ಎನ್ನುವ ಲೆಕ್ಕ ತಲೆಯಲ್ಲಿ ಹಾದು ಹೋಗಿತ್ತು.

‘ಯಂತಾ ಭೋರು ಮಳೆ! ನಿನ್ನ ಮಗಳಿಗೆ ‘ಮಳೆ’ ಅಂತ ಹೆಸರಿಡು ಅಂತ ವಿಶಾಲನಿಗೆ ಹೇಳಿದ್ದೆ’  ಎನ್ನುತ್ತ ಹಹಹಾ ಅಂತ ನಗುತ್ತಿದ್ದರು ಫಿಲೋಮಿನಾ ನರ್ಸಮ್ಮ.

ಸ್ಕೂಲಿಗೆ ಹೋಗಿ ಸಂಸ್ಕೃತ ಪದಗಳನ್ನ ಕಲಿಯಲು ಹತ್ತಿದ ಮೇಲೆ, ನನಗೆ ವರ್ಷಿಣಿ ಅಂತ ಇಡಬಹುದಿತ್ತೊ ಏನೋ ಅಂತ ಅಂದುಕೊಳ್ಳುತ್ತಿದ್ದೆ. ನಾನು ಹುಟ್ಟಿದ್ದು ಆ ‘ಸ್ಟೈಲಾದ’ ಹೆಸರುಗಳು ಚಾಲ್ತಿಯಲ್ಲಿದ್ದ ಕಾಲದಲ್ಲಿ ಅಲ್ಲವಲ್ಲಾ?

‘ಸುಕನ್ಯಾ ಅಂದರೆ ಒಳ್ಳೆ ಹುಡುಗಿ ಅಂತ ಅರ್ಥ – ಅಂತ ಬಸವಣ್ಣಯ್ಯ ಮೇಷ್ಟ್ರು ಹೇಳಿದ್ರು,’ ಅಂತ ಒಂದು ಸಲ ಸ್ಕೂಲಿನಿಂದ ಬಂದಾಗ ಹೇಳಿದ್ದೆ. ‘ಎಲ್ಲಾ ಬಿಟ್ಟು ನಿನಗೆ ಆ ಹೆಸರಿಟ್ಟೆನಲ್ಲಾ,’ ಅಂತ ಅಮ್ಮ ಗೊಣಗಿದ್ದರು.

ಥತ್! ಯಾರಿಗೆ ಬೇಕು ಒಳ್ಳೆ ಹುಡುಗಿಯ ಪಟ್ಟ? ಅದಕ್ಕೇ ನನಗೆ ‘ಸುಖಿ’ ಅನ್ನೊ ಹೆಸರೇ ಇಷ್ಟ.

ಈಗ ಮಳೆ ಬಿದ್ದು ಸ್ವಲ್ಪವಾದರೂ ತಂಪಾಗಿದೆ. ಕೊಡಗಿನಲ್ಲಿ, ಕೇರಳದಲ್ಲಿ ಭಾರೀ ಮಳೆ ಬರಲಿದೆ ಅಂತ ನಮ್ಮ ಹವಾಮಾನ ವರದಿ ಹೇಳುತ್ತಿದೆ. ಮೈಸೂರಿನಲ್ಲಿ ಕೊನೇ ಪಕ್ಷ ಮೋಡ ಕವಿದ ವಾತಾವರಣವಾದರೂ ಇರಲಿ ಎನ್ನುವ ಆಸೆ.

ವಯಸ್ಕಳಾದ ಮೇಲೆ ನಾನ್ಯಾವತ್ತೂ ಹುಟ್ಟಿದ ದಿನದ ಸಂಭ್ರಮಕ್ಕೆ ಹೋಗಿಲ್ಲ. ಈಗ, ಸುತ್ತಮುತ್ತ ಖಾಯಿಲೆ, ಸಾವುಗಳು ವಿಜೃಂಭಿಸುತ್ತಿರುವಾಗ ಹುಟ್ಟಿದ ದಿನ ಅಂತ ಸಂಭ್ರಮಿಸುವುದೂ ಸಹ ವ್ಯಂಗ್ಯ ಕ್ರೌರ್ಯಗಳ ರೂಪದಂತೆ ಕಾಣಿಸುತ್ತಿದೆ.

ಮೈರಿಗೆ ಬಂದಾಗಿನಿಂದ ಬೆಳಗಿನ ಪೇಪರನ್ನು ಓದುವಾಗ ನನಗೆ ಗೊತ್ತಿಲ್ಲದಂತೆ ಶ್ರದ್ಧಾಂಜಲಿಗಳ ಕಡೆಗೆ ಕಣ್ಣು ಹೋಗುತ್ತದೆ. ಮುಂಚೆ ಮದುವೆ ಜಾಹೀರಾತುಗಳನ್ನು ನನ್ನ ಸಮಾಜಶಾಸ್ತ್ರೀಯ ಆಸಕ್ತಿಗೋಸ್ಕರ ಗಮನಿಸುವ ಹವ್ಯಾಸವಿತ್ತು. ಈಗ ಕರೋನಾ ದೆಸೆಯಿಂದ ನನ್ನ ಪರಿಚಿತರು ಯಾರಾದರೂ ಸತ್ತು ಹೋಗಿರಬಹುದೇನೋ ಎಂಬ ಕಹಿಯಾದ ಕುತೂಹಲದಲ್ಲಿ, ಭಯದಲ್ಲಿ ಸತ್ತವರ ಫೋಟೋಗಳನ್ನು ನೋಡುವ ಅಭ್ಯಾಸ ಬೆಳೆದಿದೆ.


ಆದರೂ ಹುಟ್ಟಿದ ದಿನ ಅಂದರೆ ಖಾಸಾ ಲೆಕ್ಕದ ದಿನ. ಕಳೆದ ವರ್ಷಗಳಲ್ಲಿ ನಾನೇನು ಮಾಡಿದೆ? ಯಾರಿಗಾದರೂ ಕಿಂಚಿತ್ತಾದರೂ ಉಪಯೋಗವಾಯಿತಾ? ಉಳಿದ ಕಾಲ ಎಷ್ಟಿರಬಹುದು? ಪರದೆ ಜಾರುವ ಗಳಿಗೆಯಲ್ಲಿ ಹಳಹಳಿಕೆ ಇಲ್ಲದೇ ಕಣ್ಣು ಮುಚ್ಚಿಕೊಳ್ಳಲು ಏನು ಮಾಡಬಹುದು?

ಮಳೆಯ ದಿವ್ಯ ಸಂಗೀತದ ನಡುವೆಯೇ ಲೆಕ್ಕದ ದಿನಕ್ಕೆ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದೇನೆ.