ಯಾರು ಬಲ್ಲರು ಎಂಬ ಮಾತನ್ನು ಇನ್ನೊಂದಷ್ಟು ಎಳೆಯಬೇಕಿದೆ. ಬೇಸಗೆಯ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ದೇಶದ ಪೂರ್ವ ಮತ್ತು ಉತ್ತರ ದಿಕ್ಕುಗಳ ಪೂರ್ತಿ ‘ಲ ನಿನಾ’ ಎಂಬ ಮಳೆ-ಮಾರುತ ಹವಾಮಾನ ವಿಜೃಂಭಿಸಲಿದೆ. ಪೂರ್ವದುದ್ದಕ್ಕೂ ಮೈಚಾಚಿರುವ ಪೆಸಿಫಿಕ್ ಸಮುದ್ರವು ನಾಟ್ಯವಾಡಲಿದೆ. ಬಿಸಿಲಿನ ಜೊತೆ ಒಂದಷ್ಟು ತಂಪು, ಅಗಾಧ ಮಳೆ ಮತ್ತು ಚಂಡಮಾರುತವು ಜನಜೀವನದಲ್ಲಿ ಆಟವಾಡಲಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ. ಅದರ ಮುನ್ಸೂಚನೆಯೆಂಬಂತೆ ಈಗಾಗಲೇ ನ್ಯೂ ಸೌತ್ ವೇಲ್ಸ್ ಮತ್ತು ನಮ್ಮ ರಾಣಿರಾಜ್ಯದ ಕೆಲ ಭಾಗಗಳಲ್ಲಿ ಬೇಕಾದಷ್ಟು ಮಳೆಯಾಗಿ, ಕೆಲಕಡೆ ಪ್ರವಾಹವೂ ಉಂಟಾಗಿ ಚಿಕ್ಕಪುಟ್ಟ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಯಾಗಿದೆ.
ಡಾ. ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’

 

ಆಸ್ಟ್ರೇಲಿಯದ ಆಗುಹೋಗುಗಳಲ್ಲಿ ಅತ್ತಲೋ ಇತ್ತಲೋ ಎಂಬಂಥ ಗಾಳಿ ಬೀಸುತ್ತಿದೆ. ತಿಂಗಳುಗಟ್ಟಲೆ ಕರೋನ ವೈರಸ್ ನಿಮಿತ್ತ ಇದ್ದ ಲಾಕ್ ಡೌನ್ ಪರಿಸ್ಥಿತಿಯಿಂದ ಸಿಡ್ನಿ ಮತ್ತು ಮೆಲ್ಬೋರ್ನ್ ಮಹಾನಗರ ವಲಯಗಳು ಬಿಡುಗಡೆ ಪಡೆದು ಕೋವಿಡ್-೧೯ ಲಸಿಕೆ ಹಾಕಿಸಿಕೊಂಡ ಜನರು ನಗುನಗುತ್ತಾ ತಮ್ಮ ಹೊಸ ಜೀವನವನ್ನು ಆಹ್ಲಾದಿಸುತ್ತಿದ್ದಾರೆ. ಲಸಿಕೆ-ವಿರೋಧಿ ಜನರು ಪ್ರತಿವಾರಾಂತ್ಯದಲ್ಲಿ ಬೀದಿಗಿಳಿದು ಜಾಥಾ ನಡೆಸುತ್ತಿದ್ದಾರೆ. ಇವರೆಲ್ಲರ ಜೊತೆಗಿರುವ ವಸಂತಕಾಲದ ಹೂ ಚೆಲ್ಲಾಟ, ವನವಿಹಾರ, ಬೀಚ್ ಪಿಕ್ನಿಕ್, ಮತ್ತು ಕ್ರಿಸ್ಮಸ್ ಹಬ್ಬದ ಅಲಂಕಾರಗಳು. ಶಾಲಾ ಮಕ್ಕಳಲ್ಲಿ ಮತ್ತು ಕಾಲೇಜು, ಯೂನಿವರ್ಸಿಟಿಗಳಲ್ಲಿ ಓದುತ್ತಿರುವವರಲ್ಲಿ ಇನ್ನೇನು ಈ ಶೈಕ್ಷಣಿಕ ವರ್ಷ ಮುಗಿಯುತ್ತಿದೆ ಎನ್ನುವ ಯೋಚನೆಯೆ ಉಲ್ಲಾಸ ತಂದಿದೆ.

ರಾಜ್ಯಗಳ ನಡುವಿನ ಗಡಿಗಳು ಮುಕ್ತವಾಗಿವೆ. ಅಂತರಾಷ್ಟ್ರೀಯ ಗಡಿ ಕೂಡ ತೆರೆದಿದ್ದು ಕೋವಿಡ್-೧೯ ದೆಸೆಯಿಂದ ಹೊರದೇಶಗಳಲ್ಲೆ ನಿಂತುಹೋಗಿದ್ದ ದೇಶೀಯರು ಮನೆಗೆ ಮರಳುತ್ತಿದ್ದಾರೆ. ವಿಮಾನನಿಲ್ದಾಣಕ್ಕೆ ಹೋಗಿ, ತಮ್ಮವರನ್ನು ಸ್ವಾಗತಿಸಿ ಅಪ್ಪಿಕೊಂಡು ಕಣ್ಣೀರು ಒರೆಸಿಕೊಳ್ಳುವ ದೃಶ್ಯಗಳು ಟಿವಿ ಪರದೆಯ ಮೇಲೆ ಇನ್ನೂ ಕಾಣುತ್ತಿವೆ. ಮುಂದಿನ ತಿಂಗಳು ಬೇಸಗೆಯಲ್ಲಿ ಬರಲಿರುವುದು ಬರಿಯ ಕ್ರಿಸ್ಮಸ್ ಹಬ್ಬವಷ್ಟೇ ಅಲ್ಲ, ಆಯ್ದ ದೇಶಗಳ ಟೂರಿಸ್ಟುಗಳು ಕೂಡ ಆಸ್ಟ್ರೇಲಿಯಕ್ಕೆ ಬಂದು ಇಲ್ಲಿನ ಮನಮೋಹಕ ಹೊರಾಂಗಣ ಸ್ಥಳಗಳನ್ನು ಸಂದರ್ಶಿಸಲಿದ್ದಾರೆ. ಪ್ರವಾಸ ಉದ್ಯಮಕ್ಕೆ ಮರುಚೇತನವನ್ನು ಕೊಡಲು ಹಾತೊರೆಯುತ್ತಿರುವ ಖಾಸಗಿ ಸಂಸ್ಥೆಗಳ ಜೊತೆ ಆಯಾ ರಾಜ್ಯ ಸರಕಾರಗಳು ಪೈಪೋಟಿ ಹೂಡಿ ಪ್ರವಾಸಿಗರನ್ನು ಆಕರ್ಷಿಸುತ್ತಾ, ಕೈಬೀಸಿ ಕರೆಯುತ್ತಿವೆ. ಒಟ್ಟಾರೆ ಇಡೀ ದೇಶಕ್ಕೆ ಅದೇನೋ ಹೊಸ ಚೈತನ್ಯ ಬಂದಂತಾಗಿದೆ.

ಈ ನಡುವೆ ಮಾನವ ವೃತ್ತಿ-ಪೃವೃತ್ತಿ ಚೇಷ್ಟೆಗಳ ಮೆರೆಯಲೆಂಬಂತೆ ಅಧಿಕಾರ ಸ್ಥಾನದಲ್ಲಿರುವ ಅಥವಾ ಹೆಸರು, ಅಂತಸ್ತು, ಜವಾಬ್ದಾರಿ ಹೊಂದಿದವರು ಯಾಕೊ ಸ್ವಲ್ಪ ಗಲಾಟೆ ಮಾಡಿಕೊಂಡಿದ್ದಾರೆ. ನಾನು ಈ ಹಿಂದೆ ಬರೆದಿದ್ದ ನ್ಯೂ ಸೌತ್ ವೇಲ್ಸ್ ರಾಜ್ಯದ ಮುಖ್ಯಮಂತ್ರಿ ತಮ್ಮ ಪದವಿಗೆ ರಾಜೀನಾಮೆ ಕೊಟ್ಟು ಎರಡು ತಿಂಗಳುಗಳ ಮೇಲಾಗಿದೆ. ರಾಜ್ಯ ಆಡಳಿತದ ಚುಕ್ಕಾಣಿಯನ್ನು ಹಿಡಿದು ಮುಖ್ಯಮಂತ್ರಿ (premier) ಪದವಿಯ ಅಧಿಕಾರವನ್ನು ಅವರು ತಮ್ಮ ಸ್ವಾರ್ಥಕ್ಕಾಗಿ ದುರ್ಬಳಕೆ ಮಾಡಿಕೊಂಡು, ತಮ್ಮ ಹಿಂದಿನ ಪ್ರಿಯಕರನಿಗೆ ಅನುಕೂಲವಾಗುವಂತೆ ಹಣಕಾಸು ವಹಿವಾಟು ನಡೆಸಿದ್ದರು ಎಂಬ ಆಪಾದನೆಯನ್ನು ಅಲ್ಲಗೆಳೆಯುತ್ತ ಆಕೆಯಿನ್ನೂ ತಮ್ಮ ನಡತೆಯನ್ನು ಸಮರ್ಥಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.

ನ್ಯೂ ಸೌತ್ ವೇಲ್ಸ್ ರಾಜ್ಯದ ಮುಖ್ಯಮಂತ್ರಿ ಹಗರಣದ ಬಿಸಿ ತಣ್ಣಗಾಗುವ ಹೊತ್ತಿನಲ್ಲೆ ಹೋದವಾರ ಆಸ್ಟ್ರೇಲಿಯನ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಟಿಮ್ ಪೇನ್ ರಾಜೀನಾಮೆ ನೀಡಿದ್ದಾರೆ. ಇನ್ನೇನು ಇಂಗ್ಲೆಂಡ್ ತಂಡದೊಡನೆ Ashes ಕ್ರಿಕೆಟ್ ಸರಣಿ ಪಂದ್ಯ ಆರಂಭವಾಗುವ ಈ ದಿನಗಳಲ್ಲಿ ಸೃಷ್ಟಿಯಾಗಿರುವ ಈ ಹೊಚ್ಚಹೊಸ ಹಗರಣ ದೇಶೀಯ ಮಟ್ಟದ ಕ್ರಿಕೆಟ್ ಪ್ರಪಂಚದಲ್ಲಿ ಅಲ್ಲೋಲಕಲ್ಲೋಲವನ್ನೆಬ್ಬಿಸಿದೆ. ಕ್ರಿಕೆಟ್ ಪ್ರಿಯರಿಗೆ ಗೊಂದಲವಾಗಿದೆ. ೨೦೧೭ರಲ್ಲಿ ಟಿಮ್ ಪೇನ್ ತಮ್ಮ ಮಹಿಳಾ ಸಹೋದ್ಯೋಗಿಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದರು. ಅದು ಬಹಿರಂಗವಾದಾಗ ತಾವು ಮತ್ತು ಆ ಮಹಿಳಾ ಸಹೋದ್ಯೋಗಿ ಇದ್ದ ಕ್ರಿಕೆಟ್ ಟಾಸ್ಮೆನಿಯ ತಂಡ, ತಮ್ಮ ಅಭಿಮಾನಿಗಳ ಮತ್ತು ಹೆಂಡತಿಯ ಬಳಿ ಕ್ಷಮಾಪಣೆ ಯಾಚಿಸಿದ್ದರು.

ಮುಂದಿನ ತಿಂಗಳು ಬೇಸಗೆಯಲ್ಲಿ ಬರಲಿರುವುದು ಬರಿಯ ಕ್ರಿಸ್ಮಸ್ ಹಬ್ಬವಷ್ಟೇ ಅಲ್ಲ, ಆಯ್ದ ದೇಶಗಳ ಟೂರಿಸ್ಟುಗಳು ಕೂಡ ಆಸ್ಟ್ರೇಲಿಯಕ್ಕೆ ಬಂದು ಇಲ್ಲಿನ ಮನಮೋಹಕ ಹೊರಾಂಗಣ ಸ್ಥಳಗಳನ್ನು ಸಂದರ್ಶಿಸಲಿದ್ದಾರೆ. 

ಟಿಮ್ ೨೦೧೮ ರಲ್ಲಿ ನಡೆದ ಘಟನೆಯ ಬಗೆಗಿನ ವಿಚಾರಣೆಯನ್ನು ಎದುರಿಸಿದ್ದಲ್ಲದೆ, ಗಂಡ-ಹೆಂಡತಿ ತಮ್ಮ ವೈವಾಹಿಕ ಜೀವನ/ಸಂಬಂಧ ಮುರಿಯದಂತೆ ಶ್ರಮಿಸಿದ್ದರು. ಎಲ್ಲರ ಒಪ್ಪಿಗೆಯ ಮೇರೆಗೆ ನಡೆಯುತ್ತ ಟಿಮ್ ಕ್ರಿಕೆಟ್ ಆಸ್ಟ್ರೇಲಿಯದ ಜೊತೆ ಉಳಿದು, ತಂಡದ ನಾಯಕನಾಗಿ ಜವಾಬ್ದಾರಿ ಜೀವನವನ್ನು ನಡೆಸಿದ್ದರು. ನಂತರದ ದಿನಗಳಲ್ಲಿ ಆ ಘಟನೆ ಪರದೆಯ ಹಿಂದೆ ಹೋಗಿತ್ತು. ಹೋದ ವಾರ ಅದು ಪುನಃ ತಲೆಯೆತ್ತಿ ನಾಯಕ ಪಟ್ಟದಿಂದ ಟಿಮ್ ತಲೆ ಉರುಳಿದೆ. ಮರೆತುಹೋಗಿದ್ದ ಆ ಘಟನೆ ಮತ್ತು ತಮ್ಮ ನಡತೆಯ ಬಗ್ಗೆ ವಿಚಾರಣೆ ಮತ್ತೆ ವಿವಾದಕ್ಕೆ ಬಂದಿರುವುದನ್ನು ಕಂಡು ಟಿಮ್ ನೊಂದುಕೊಂಡು ಕಣ್ಣೀರಿಟ್ಟು ನಾಯಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು. ಅವರ ತಂಡದ ಆಟಗಾರರು ತೀವ್ರ ಅಸಮಾಧಾನವನ್ನು ಸೂಚಿಸಿದ್ದಾರೆ. ಅವರ ಬಹಿರಂಗ ಗೊಣಗಾಟಕ್ಕೆ ಕಾರಣವಾಗಿರುವುದು ಕ್ರಿಕೆಟ್ ಆಸ್ಟ್ರೇಲಿಯ ಮಂಡಳಿಯ ಸದಸ್ಯರು ತಮ್ಮನ್ನು ಗೌರವದಿಂದ ನಡೆಸಿಕೊಳ್ಳದೆ ಅವರದ್ದೇ ಆದ ಕ್ರಮಗಳನ್ನು ಆಟಗಾರರ ಮೇಲೆ ಹೇರಿ ಅವರನ್ನು ಒತ್ತಡಕ್ಕೆ ಸಿಲುಕಿಸಿ ಶಿಕ್ಷಿಸುತ್ತಿದ್ದಾರೆ ಎನ್ನುವುದು. ಮಂಡಳಿ ತಮಗೆ ಬೇಕಾದ ಬೆಂಬಲವನ್ನು, ಸಹಕಾರವನ್ನು ಕೊಡುತ್ತಿಲ್ಲ ಎಂದು ಆಟಗಾರರು ದೂರುತ್ತಿದ್ದಾರಂತೆ. ಇವೆಲ್ಲದರ ಪರಿಣಾಮವೆಂದರೆ ತಂಡದ ಬಹುತೇಕ ಆಟಗಾರರು ರಾಣಿರಾಜ್ಯದ ಗೋಲ್ಡ್ ಕೋಸ್ಟ್ ನಲ್ಲಿ Ashes ಪಂದ್ಯ ಪ್ರಯುಕ್ತ ತರಬೇತಿ ನಡೆಸುತ್ತಿದ್ದರೆ, ಟಿಮ್ ದೂರದ ಟಾಸ್ಮೆನಿಯದಲ್ಲಿ ಉಳಿದಿದ್ದು, ಅಲ್ಲಿಯೇ ಕ್ರಿಕೆಟ್ ಅಭ್ಯಾಸ ಮುಂದುವರೆಸಿದ್ದಾರೆ. ಸದ್ಯಕ್ಕೆ ಅವರು ದೇಶದ ಅತ್ಯುತ್ತಮ ವಿಕೆಟ್ ಕೀಪರ್. ಡಿಸೆಂಬರ್ ತಿಂಗಳ ಮೊದಲ ವಾರಾಂತ್ಯದಲ್ಲಿ ನಡೆಯುವ ಪಂದ್ಯಾವಳಿಗೆ ಮುಂಚೆ ಇನ್ನೇನೆಲ್ಲಾ ಆಗುತ್ತದೆಯೋ ಯಾರು ಬಲ್ಲರು.

ಯಾರು ಬಲ್ಲರು ಎಂಬ ಮಾತನ್ನು ಇನ್ನೊಂದಷ್ಟು ಎಳೆಯಬೇಕಿದೆ. ಬೇಸಗೆಯ ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ದೇಶದ ಪೂರ್ವ ಮತ್ತು ಉತ್ತರ ದಿಕ್ಕುಗಳ ಪೂರ್ತಿ ಲ ನಿನಾ ಎಂಬ ಮಳೆ-ಮಾರುತ ಹವಾಮಾನ ವಿಜೃಂಭಿಸಲಿದೆ. ಪೂರ್ವದುದ್ದಕ್ಕೂ ಮೈಚಾಚಿರುವ ಪೆಸಿಫಿಕ್ ಸಮುದ್ರವು ನಾಟ್ಯವಾಡಲಿದೆ. ಬಿಸಿಲಿನ ಜೊತೆ ಒಂದಷ್ಟು ತಂಪು, ಅಗಾಧ ಮಳೆ ಮತ್ತು ಚಂಡಮಾರುತವು ಜನಜೀವನದಲ್ಲಿ ಆಟವಾಡಲಿದೆ ಎಂದು ಹವಾಮಾನ ಇಲಾಖೆ ಘೋಷಿಸಿದೆ. ಅದರ ಮುನ್ಸೂಚನೆಯೆಂಬಂತೆ ಈಗಾಗಲೇ ನ್ಯೂ ಸೌತ್ ವೇಲ್ಸ್ ಮತ್ತು ನಮ್ಮ ರಾಣಿರಾಜ್ಯದ ಕೆಲ ಭಾಗಗಳಲ್ಲಿ ಬೇಕಾದಷ್ಟು ಮಳೆಯಾಗಿ, ಕೆಲಕಡೆ ಪ್ರವಾಹವೂ ಉಂಟಾಗಿ ಚಿಕ್ಕಪುಟ್ಟ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹಾನಿಯಾಗಿದೆ. ಒಂದು ದಶಕದ ಹಿಂದೆ ಇದೇ ರೀತಿ ಚಂಡಮಾರುತ ಮಳೆ ಪ್ರವಾಹ ಪ್ರಕೋಪದಿಂದ ಮಾನವ ಜೀವನಕ್ಕೆ ಬಹಳಷ್ಟು ಧಕ್ಕೆಯುಂಟಾಗಿತ್ತು. ರಾಷ್ಟ್ರಮಟ್ಟದಲ್ಲಿ ತುರ್ತುಪರಿಸ್ಥಿತಿ ಉಂಟಾಗಿತ್ತು.

ಅದನ್ನು ನೆನೆಸಿಕೊಂಡು ಇನ್ನೂ ಬರಲಿರುವ ಲ ನಿನಾ ತರಲಿರುವ ಮಳೆ, ಚಂಡಮಾರುತವನ್ನು ನಿಭಾಯಿಸಲು ರಾಜ್ಯಗಳ ಸಿಬ್ಬಂದಿ ಶ್ರಮಿಸುತ್ತಿದ್ದಾರೆ. ಪ್ರವಾಹವುಂಟಾಗುವ ಪ್ರದೇಶಗಳಲ್ಲಿ ಈಗಾಗಲೇ ಸಾವಿರಾರು ಮರಳು ಮೂಟೆಗಳನ್ನು ಪೇರಿಸಲಾಗಿದೆ. ಅಧಿಕ ಮಳೆ ನೀರು ಒಂದೇಕಡೆ ನಿಲ್ಲದೆ ಹರಿದು ಹೋಗಲು, ಇಂಗಲು ಉದ್ಯಾನವನಗಳಲ್ಲಿ, ರಕ್ಷಿತ ಅರಣ್ಯಪ್ರದೇಶಗಳಲ್ಲಿ ಚೆಕ್ ಡ್ಯಾಮ್ ನಿರ್ಮಿಸುತ್ತಿದ್ದಾರೆ. ಜನರು ತಮ್ಮ ಮನೆಮನೆಗಳ ಸೂರು ಪರೀಕ್ಷಿಸಿ ಎಲ್ಲವೂ ಸರಿಯಿದೆಯಾ ಎಂದು ಖಾತ್ರಿಪಡಿಸಿಕೊಳ್ಳುತ್ತಿದ್ದಾರೆ. ಮಳೆ ನೀರು ಬಿದ್ದು ಹರಿದುಹೋಗಲು ಮನೆ ಮಾಡಿನಂಚಿನ ಸುತ್ತ ಇರುವ ತೂಬುಗಳು, ಮತ್ತು ಮನೆಯ ಕೆಳಗಡೆ ಸುತ್ತ ಇರುವ ಚರಂಡಿ ವ್ಯವಸ್ಥೆಗೆ ಯಾವುದೇ ಅಡ್ಡಿಆತಂಕವಿಲ್ಲ ಎನ್ನುವುದನ್ನು ಮರೆಯಬೇಡಿ ಎಂದು ಸ್ಥಳೀಯ ನಗರಪಾಲಿಕೆಗಳು ಎಚ್ಚರಿಸುತ್ತಿವೆ.

ಹೋದ ಎರಡು ವಾರಗಳ ಹಿಂದೆ ಬೆಂಗಳೂರು ಮಳೆಯ ಬಗ್ಗೆ ನಾನು ತವರುಮನೆಯವರನ್ನು, ಸ್ನೇಹಿತರನ್ನು ಕೇಳಿ ವಿಚಾರಿಸುವುದೇ ಆಗಿತ್ತು. ಬೆಂಗಳೂರಿನಲ್ಲಿ ಭಾರಿ ಮಳೆ, ಚಳಿ ಎಂದು ಕೇಳಿದಾಗಲೆಲ್ಲ ಹೊಟ್ಟೆಯುರಿಯಾಗುತ್ತಿತ್ತು. ನಮ್ಮೂರು ಬ್ರಿಸ್ಬೇನ್ ನಗರದಲ್ಲಿ ಸ್ಥಿರವಾಗಿದ್ದ ಬಿಸಿಲು, ಸೆಕೆ, ಮಳೆಯೇ ಇಲ್ಲದ ಬರಡುಬೆಂಗಾಡು ಹವಾಮಾನ, ಒಣಗುತ್ತಿದ್ದ ಗಿಡಮರಹೂ ಚಿಂತೆ ಹುಟ್ಟಿಸುತ್ತಿತ್ತು. ನಗರಕ್ಕೆ ನೀರೊದಗಿಸುವ ಜಲಾಶಯಗಳು ಬರಿದಾಗುತ್ತಿದ್ದವು. ಈ ಬಾರಿಯ ಬೇಸಗೆ ಮಳೆ ಆರಂಭವಾಗುವ ಮುನ್ನ ಮತ್ತೊಂದು ಮಳೆನೀರು ಶೇಖರಣೆ ನೀರಿನ ಟ್ಯಾಂಕ್ ಕೊಳ್ಳಲು ಸಾಧ್ಯವೇ ಎನ್ನುವ ಜಿಜ್ಞಾಸೆಯಾಗುತ್ತಿತ್ತು. ಕೊಳ್ಳುವುದು ಸುಲಭ, ಅದಕ್ಕೆ ತಕ್ಕುದಾದ ಜಾಗ ಹುಡುಕುವುದು, ಭೂಮಿ ಸಮತಟ್ಟು ಮಾಡಿ ಅದನ್ನು ಸ್ಥಾಪಿಸುವುದು, ಅವೆಲ್ಲ ಹೆಚ್ಚಿನ ಕೆಲಸಗಳು ಎಂದು ಮನೆಯವರೆಲ್ಲರ ಗೊಣಗಾಟ. ಅವರೆಲ್ಲರಿಗೂ ತಿಳಿದಿದೆ, ಮಳೆ ಬಂತೆಂದರೆ ಇವಳ ಬಾಯಲ್ಲಿ ಬರುವುದು ನೀರಿನ ಟ್ಯಾಂಕ್ ಜಪ! ಈ ಜಪಧ್ಯಾನ ಯಾವಾಗ ಫಲ ಕೊಡುವುದೊ ಯಾರಿಗೆ ಗೊತ್ತು!

ಸದ್ಯಕ್ಕಂತೂ ಈ ವಾರ ಪೂರ್ತಿ ಮಳೆ ಬೀಳುತ್ತಿದೆ. ಎಲ್ಲೆಲ್ಲೂ ಕಡುಹಸಿರು ಬಣ್ಣ ರಾರಾಜಿಸುತ್ತಿದೆ. ಅದೆಲ್ಲೊ ಮುಖಮುಚ್ಚಿಕೊಂಡು ಅವಿತಿದ್ದ ಪುಟಾಣಿ ಗಿಡಗಳು ನಗುನಗುತ್ತ ಕಣ್ಣಿಗೆ ಕಾಣಿಸುತ್ತಿವೆ. ಮನೆಯಂಗಳದಲ್ಲಿ ನಿಂತು ಮಳೆಯನ್ನು ನೋಡುವುದೆ ಬದುಕಿನ ಪರಮಧ್ಯೇಯವೆನಿಸಿಬಿಟ್ಟಿದೆ. ಜಿಟಿಜಿಟಿ ಮಳೆ, ಧೋ ಮಳೆ, ಸುಮಾರು ಮಳೆ, ಮಂದ್ರಮಳೆ ಲಾಸ್ಯವಾಡುತ್ತಿದೆ. ಜೋಗ ಜಲಪಾತದ ರಾಜ, ರೋರರ್, ರಾಕೆಟ್, ರಾಣಿ ಧಾರೆಗಳು ನೆನಪಾಗುತ್ತಿವೆ.