ಕಂಬಳಿ ಹುಳುವಿನ ಪ್ರವಾಸ ಕಥನ

ಅತ್ತ ಪರ್ಶಿಯನ್ನಿಗೂ
ಇತ್ತ ಶಿರಡಿಗೂ
ಬುಳು-ಬುಳು ಬುಳು-ಬುಳು
ಹತ್ತಾಡುವ ಕಂಬಳಿ ಹುಳುವಿನ
ಪ್ರವಾಸ ಕಥನವನ್ನು
ಕೇಳುತ್ತಾ ಕೇಳುತ್ತಾ
ಕೆಂಪು ಹುಣ್ಣಿಮೆಯಲ್ಲಿ
ಹಸಿರು ಸೂಚಿಸುತ್ತಾಳೆ
ಕಂಬಳಿ ಹೊದಿಸುತ್ತಾ..

ತಾಮ್ರದ ಬಟ್ಟಲಿನಲ್ಲಿರುವ
ಹಾಲಿಗಾಗಿ ತುಟಿಗಳೆರಡು
ಯುದ್ಧಕ್ಕೆ ಬಿದ್ದಾಗಲೆಲ್ಲ
ಅವಳ ಹಲ್ಲೇ ಗೆದ್ದು, ಕೆನೆ ಒಡೆದು
ಹೆಪ್ಪಾಗಲು ಒಪ್ಪಿಗೆ ಸೂಚಿಸುತ್ತವೆ
ಮುಖ ತೊಳೆಯದ ಚಂದ್ರನು
ಅವಳ ಮುಂದೆ ಕಪ್ಪಾಗಿ
ಕಾಣಿಸುತ್ತಾನೆ, ನಾಲ್ಕು
ಮೂಲೆಯ ನಡುವೆ ಇರುವ
ಸೂರ್ಯನ ಶಾಖಕ್ಕೆ ಹೆದರಿ
ಅವಳ ಕೆನ್ನೆಗಂಟಿದ
ಮೊಡವೆಗೇನು ಗೊತ್ತು
ಚಿಟ್ಟೆಯ ಚಿತ್ರ ಬಿಡಿಸುವ
ಮೂಳೆ ಇಲ್ಲದ ಕುಂಚಕ್ಕೂ
ಬಣ್ಣ ಬಳಿದ ತಡರಾತ್ರಿಗೂ
ಇರುವ ನಂಟು
ಬಿದ್ದ ನಕ್ಷತ್ರದ ತೇವಕ್ಕೂ
ಕೈ ಜಾರಿಸಿದ ಆಕಾಶದ ಅಗಲಕ್ಕೂ
ನನ್ನ ದೇಹದ ಬಟ್ಟೆಯ ನೂಲು
ವಂದನೆ ಸೂಚಿಸಿತು,
ಮರಿ ಕಂಬಳಿ ಹುಳುವಿನ
ಚಿತ್ರ ಬರೆಯಲು

 

ಮಹಾಂತೇಶ್ ಆಧುನಿಕ್ ಆನೇಕಲ್ ನ ಹಾರಗದ್ದೆಯವರು. ಈಗ ಬೆಂಗಳೂರು ನಗರ ವಾಸಿ.
ಈಗಷ್ಟೆ ಕನ್ನಡ ಎಂ ಎ ಮುಗಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದ್ದಾರೆ.
ಪದ್ಯ ರಚನೆ ಮತ್ತು ವಾಚನ, ಫೊಟೊಗ್ರಫಿ, ಚಾರಣ ಮತ್ತು ಚರ್ಚೆ ಇವರ ಹವ್ಯಾಸಗಳು