ಹೇಗಾದ್ರು ಮಾಡಿ ಅಮೇರಿಕಾದಲ್ಲಿ ಮೊಸರನ್ನು ಹೆಪ್ಪಾಕ್ಬೇಕು ಅಂತ ಶಪಥ ಮಾಡಿ, ಯೋಗರ್ಟ್ ಅನ್ನು ಹಾಲಿಗೆ ಸೇರಿಸಿ ರಾತ್ರಿ ಇಟ್ಟ. ಅವನಿಗೆ ರಾತ್ರಿಯೆಲ್ಲಾ ಸಂಭ್ರಮ, ಇನ್ನು ನಾಳೆಯಿಂದ ನನ್ನ ಊರಿನಲ್ಲಿ ಸಿಗುವ ಗಟ್ಟಿ ಮೊಸರಿನ ತರಹ ಇಲ್ಲೂ ಕೂಡ ತಯಾರಿಸಬಹುದೆಂದು. ಬೆಳಿಗ್ಗೆ ಬಲಗಡೆ ಎದ್ದು ಮೊಬೈಲ್ ನೋಡದೆ ಮೊಸರನ್ನು ನೋಡಲು ಓಡಿದ. ಪಾತ್ರೆಯ ಮುಚ್ಚಳ ತೆಗೆದು ಸ್ವಲ್ಪ ಮೊಸರಂತೆ ಇರುವ ಪದಾರ್ಥವನ್ನು ಹಲ್ಲುಜ್ಜದ ಬಾಯಿಗೆ ಸುರಿದುಕೊಂಡ. ಒಂದು ರೀತಿ ಹೆಂಡ ಕುಡಿದ ಹಾಗಾಯಿತು… ಕೆಟ್ಟ ವಾಸನೆ ಇಂದ ಬಾಯಿ ಬಚ್ಚಲಾಯಿತು. ಇಲ್ಲ ಇದಕ್ಕೆ ಒಂದು ಸೊಲ್ಯೂಷನ್ ಕಂಡು ಹಿಡಿಯಲೇಬೇಕೆಂದು, ಅವರಮ್ಮನಿಗೆ ಫೋನಾಯಿಸಿದ.
ವಾಸುದೇವ ಕೃಷ್ಣಮೂರ್ತಿ ಬರೆದ ಲೇಖನ

 

ದಕ್ಷಿಣ ಭಾರತೀಯರಿಗೆ ಮೊಸರನ್ನ ಇರದಿದ್ದರೆ ಅದು ಜೀವನವೇ ಇಲ್ಲ. ಅವರು ಭಾರತದಲ್ಲಿರಲಿ ಇಲ್ಲ ಜಗತ್ತಿನ ಯಾವ ಮೂಲೆಯಲ್ಲಿರಲಿ ಮೊಸರನ್ನ ಮೂತಿಗೆ ಮೆತ್ತಿಕೊಂಡು ಸವಿದಾಗಲೇ ಮನಸ್ಸಿಗೆ ಸಮಾಧಾನ ಮತ್ತು ಹೊಟ್ಟೆಗೆ some-ತೃಪ್ತಿ.

ಈ ಮೊಸರನ್ನದ ಮಹಿಮೆ ಗೊತ್ತಿರದ ಆಗತಾನೆ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದ ನನ್ನ ಆಫೀಸಿನ ಉತ್ತರ ಭಾರತೀಯ ಪ್ರವೀಣ ನಾವು ಮೊಸರನ್ನ ತಿನ್ನುತ್ತಿದ್ದಾಗ ಯಾವಾಗಲು ರೇಗಿಸುತ್ತಿದ್ದ – “ಮೊಸರನ್ನು ಪರಾಟ ಜೊತೆ ತಿನ್ನಬೇಕು, ಇಲ್ಲ ಅಂದರೆ ಲಸ್ಸಿ ಮಾಡಿ ಕುಡಿಬೇಕು ಅಥವಾ ರಾಯಿತ ಮಾಡಿ ಸವಿಯಬೇಕು… ಅದೇನು ಅನ್ನಕ್ಕೆ ಬೆರೆಸಿ ಬಾರಿಸುತ್ತಿರೋ… ನಿಮ್ಮನ್ನು ಮದರಾಸಿ ಅನ್ನೋ ಬದಲು ಮೊಸರನ್ನಸಿಗಳು ಅನ್ನಬೇಕು”.

ನಾವು ಪ್ರವೀಣನಿಗೆ ಹೇಳ್ತಾ ಇದ್ದೆವು, ‘ಮನುಷ್ಯರಿಗೆ ಮಾತ್ರ ಗೊತ್ತು ಮೊಸರನ್ನದ ಮಹಿಮೆ – ನಿಂಗೆ ಒಂದು ದಿನ ಖಂಡಿತ ಅದರ ಮಹಿಮೆ ಗೊತ್ತಾಗೇ ಗೊತ್ತಾಗುತ್ತೆ’ ಅಂತ.

ಆ ದಿನ ಬಂದೇಬಿಡ್ತು… ಪ್ರವೀಣ ಪಾರ್ಟಿಗೆ ಹೋಗೋದ್ರಲ್ಲಿ ಪ್ರವೀಣ… ಯಾವ ಒಂದು ಜಂತು ಪಾರ್ಟಿ ಅಂದರೆ ಮೊದಲು ಹಾಜರಿ ಆಗ್ತಿದ್ದವನೇ ಪ್ರವೀಣ. ಇದ್ದದ್ದು ಇಲ್ಲದಿದ್ದು ಎಲ್ಲ ತಿಂದು ಕುಡಿದು ಅರಗಿಸಿಕೊಳ್ಳಬಲ್ಲೆ ಎಂಬ ಜಂಭ ಬೇರೆ ಅವನಿಗಿತ್ತು. ಆ ಪಾರ್ಟಿಯಲ್ಲಿ ಹಾಗೆ ಕುಡಿದು ತಿಂದು ರೂಮಿಗೆ ಹೋಗಿ ಬೀಗ ತೆಗಿಯೋ ಅಷ್ಟರಲ್ಲಿ ಅವನ ಬೀಗ ತೆರೆದಿತ್ತು. ಆ ರಾತ್ರಿಯೆಲ್ಲಾ ಕಮೋಡಿನ ಜೊತೆ ಕಾದಾಡಿ ಇಡೀ ಬಿಲ್ಡಿಂಗಿನ ನೀರನೆಲ್ಲ ಬೇಸಿಗೆಯಲ್ಲಿ ಮುಗಿಸಿದ್ದ. ಬೆಳಿಗ್ಗೆ ಏಳಲಾರದೆ ಆಫೀಸಿನ ಶ್ರೀಧರನಿಗೆ ಫೋನಾಯಿಸಿ ಸಹಾಯಕ್ಕಾಗಿ ಗೋಗರೆದ. ಶ್ರೀಧರ ಅವನನ್ನು ಮನೆಯ ಬಳಿಯಿದ್ದ ಡಾಕ್ಟರ್ ಹತ್ತಿರ ಕರೆದೊಯ್ದ. ಡಾಕ್ಟರ್ ರೋಗಿಗೆ ಗುಳಿಗೆ ಬರೆದು, ಇವತ್ತಿನಿಂದ ಇನ್ನು ಮೂರು ದಿನ ಆಪಲ್ ಮತ್ತು ಉಪ್ಪಿರದ ಮೊಸರನ್ನ ಮಾತ್ರ ತಿನ್ನುವಂತೆ ಸಲಹಿದರು. ಆಗಲೇ ಮುಸುಡಿಯನ್ನು ರಾತ್ರಿಯಿಂದ ಮಡಚಿಕೊಂಡಿದ್ದ ಪ್ರವೀಣ ಮೊಸರನ್ನ ಪದ ಕೇಳಿ ತಡಬಡಾಯಿಸಿದ. ಅವತ್ತು ಆ ಮುಸುಡಿ ಮೊಸರನ್ನದ ಸವಿಯುವಂತಾಯಿತು.

ಒಂದು ವಾರ ಸುಧಾರಿಸಿಕೊಂಡು ಆಫೀಸಿಗೆ ಬಂದ ಪ್ರವೀಣ. ಎಂದಿನಂತೆ ಎಲ್ಲರು ಊಟಕ್ಕೆ ಕೂತಾಗ ಡಬ್ಬಿ ತೆಗೆದ… ಎಲ್ಲರಿಗೂ ಆಶ್ಚರ್ಯ, ಮೊಸರನ್ನ ತಂದಿದ್ದ ಅವನ ಅಡುಗೆಯವನಿಂದ ಮಾಡಿಸಿಕೊಂಡು. ಅವತ್ತು ಮದವಿಳಿದ ಪ್ರವೀಣ ಮೊಸರನ್ನವಿಲ್ಲದೆ ಊಟ ಮುಗಿಸುತ್ತಿರಲಿಲ್ಲ. ತನಗೆ ಮರುಜೀವಕೊಟ್ಟ ಮೊಸರನ್ನವನ್ನು ಅವನ ಇನ್ನಿತರ ಉತ್ತರೀಯರ ಜೊತೆ ಹಂಚಿಕೊಂಡು ಧಹಿಬಾತ್ ಸಂಸ್ಕೃತಿಯನ್ನು ಅವರಿಗೂ ಹಚ್ಚಿಸಿದ.

ಬೇರೆ ದೇಶಕ್ಕೆ ಹೋದ ಮೊಸರನ್ನ ಪ್ರಿಯ ಮಂದಿ ಸ್ವಲ್ಪ ತಡಬಡಾಯಿಸುವುದು ಸಹಜ. ಅನ್ನ ಹ್ಯಾಗೋ ಮಾಡ್ಕೊಳ್ತಾರೆ, ಆದರೆ ಸರಿಯಾದ ಮೊಸರು ಅವರಿಗೆ ಸಿಗಬೇಕಲ್ಲವೇ? ಬೆಂಗ್ಳೂರಲ್ಲಾದರೆ ನಂದಿನಿ ಇಲ್ಲಾಂದ್ರೆ ಪಕ್ಕದ ಮನೆಯವರತ್ರ ‘ರೀ ಸ್ವಲ್ಪ ಮೊಸರು ಕೊಡ್ತೀರಾ’ ಅಂತ ಸಾಲ ಆದ್ರೂ ತಗೋಳ್ಬೋದು. ಆದ್ರೆ ಪಕ್ಕದ ಮನೆಯ ಅಮೆರಿಕನ್ನ ಇಲ್ಲ ಆಫ್ರಿಕನ್ನ ಇಲ್ಲ ಯೂರೋಪಿಯನ್ನನ ಹತ್ತಿರ ಮೊಸರನ್ನ ಕೇಳೋಕಾಗುತ್ಯೇ? ಅವುಗಳು ಬ್ರೆಡ್ಡು, ಪಿಜ್ಜಾ, ಹಾಗು ಓಡಾಡುವ, ಹರಿಯುವ, ತೆವಳುವ, ಈಜುವ ಜೀವಗಳನ್ನು ತಿಂದು ದಷ್ಟ ಪುಷ್ಟವಾಗಿರುತ್ತವೆ. ಯೋಗರ್ಟ್ ಅಂತ ವಿಧ ವಿಧವಾದ ಸೊಗಡಿನಿಂದ ತುಂಬಿರುವ ಬಾಟ್ಲಿಗಳಿಂದ ಕೆಲವರು ಸವಿಯುತ್ತಾರೆ. ನಾವು ಅವರಿವರ ಆಹಾರ ತಿನ್ನಲು ಆಕರಿಸುತ್ತೇವೆ, ಆದರೆ ಬೇರೆ ದೇಶದವರಿಗೆ ಬಟರ್ ಚಿಕನ್, ಕೆಬಾಬ್, ಸಮೋಸ, ಬಿರಿಯಾನಿ ಮತ್ತು ಚಪಾತಿ ಬಿಟ್ಟು ಬೇರೇನೂ ಅಷ್ಟು ತಿಳಿದಿಲ್ಲ. ಮೊಸರನ್ನದ ಮಹತ್ವ ಇನ್ನೂ ಅವರಿಗೆ ನಾವು ತಿಳಿಸಿಲ್ಲ. ಆದರೆ ಒಂದುದಿನ ಖಂಡಿತ ನಮ್ಮ ನಾಯಕರು ಮೀಟಿಂಗ್ ವಿಥ್ ಮೊಸರನ್ನ ಅಂತ ಒಂದು ಕಾರ್ಯಕ್ರಮ ಮಾಡುತ್ತಾರೆ ಎಂದು ನಮ್ಮ ಮೊಸರನ್ನ ಪ್ರಿಯರ ನಂಬಿಕೆ.

ಬೆಂಗಳೂರಿನಲ್ಲಿದ್ದಾಗ ಹಸುವಿನ ಹಾಲಿಂದ ಹೆಪ್ಪು ಹಾಕಿದ ಗಟ್ಟಿ ಮೊಸರನ್ನವನ್ನು ಪ್ರತಿದಿನ ಸವಿದಿದ್ದ ಯುವಕ ಈಶ, ಅಮೇರಿಕಾದಲ್ಲಿ ಕೆಲಸಕ್ಕೆಂದು ಜಿಗಿದ. ಒಂದೆರಡು ದಿನ ಮ್ಯಾಕ್ ಡೊನಾಲ್ಡ್ ನಂಥ ಫಾಸ್ಟ್ ಫುಡ್ ತಿಂದು ಖುಷಿಪಟ್ಟ. ಮೂರನೇದಿನ ತನ್ನ ಮನೆಯ ಗಟ್ಟಿ ಮೊಸರಿನ ಅನ್ನ ನೆನೆಸಿಕೊಂಡು ಕಣ್ಣಿನಿಂದ ನೀರಾವತಾರಣ ಶುರುವಾಗಿತ್ತು. ಬೇಕೇಬೇಕು ಅನ್ನಿಸಿ ಮೊಸರಿಗಾಗಿ ಅಲೆದಲೆದು ಪ್ಲೈನ್ ಯೋಗರ್ಟ್ ಅನ್ನು ಎಲ್ಲೋ ಖರೀದಿಸಿ ಅನ್ನದ ಜೊತೆ ಉಪ್ಪಿನೊಂದಿಗೆ ಬೆರೆಸಿ ತಿನ್ನಲಾರಂಭಿಸಿದ. ಆದರೆ ನಮ್ಮ ಅನ್ನ ಆ ಯೋಗಾರ್ಟಿಗೆ ಅಂಟಿಕೊಳ್ಳದೆ ವಿಚಿತ್ರ ರುಚಿ ಕೊಟ್ಟಿತು.

ಹೇಗಾದ್ರು ಮಾಡಿ ಅಮೇರಿಕಾದಲ್ಲಿ ಮೊಸರನ್ನು ಹೆಪ್ಪಾಕ್ಬೇಕು ಅಂತ ಶಪಥ ಮಾಡಿ, ಯೋಗರ್ಟ್ ಅನ್ನು ಹಾಲಿಗೆ ಸೇರಿಸಿ ರಾತ್ರಿ ಇಟ್ಟ. ಅವನಿಗೆ ರಾತ್ರಿಯೆಲ್ಲಾ ಸಂಭ್ರಮ, ಇನ್ನು ನಾಳೆಯಿಂದ ನನ್ನ ಊರಿನಲ್ಲಿ ಸಿಗುವ ಗಟ್ಟಿ ಮೊಸರಿನ ತರಹ ಇಲ್ಲೂ ಕೂಡ ತಯಾರಿಸಬಹುದೆಂದು. ಬೆಳಿಗ್ಗೆ ಬಲಗಡೆ ಎದ್ದು ಮೊಬೈಲ್ ನೋಡದೆ ಮೊಸರನ್ನು ನೋಡಲು ಓಡಿದ. ಪಾತ್ರೆಯ ಮುಚ್ಚಳ ತೆಗೆದು ಸ್ವಲ್ಪ ಮೊಸರಂತೆ ಇರುವ ಪದಾರ್ಥವನ್ನು ಹಲ್ಲುಜ್ಜದ ಬಾಯಿಗೆ ಸುರಿದುಕೊಂಡ. ಒಂದು ರೀತಿ ಹೆಂಡ ಕುಡಿದ ಹಾಗಾಯಿತು… ಕೆಟ್ಟ ವಾಸನೆ ಇಂದ ಬಾಯಿ ಬಚ್ಚಲಾಯಿತು. ಇಲ್ಲ ಇದಕ್ಕೆ ಒಂದು ಸೊಲ್ಯೂಷನ್ ಕಂಡು ಹಿಡಿಯಲೇಬೇಕೆಂದು, ಅವರಮ್ಮನಿಗೆ ಫೋನಾಯಿಸಿದ.

ಬೆಂಗಳೂರಲ್ಲಿ ಆಗ ರಾತ್ರಿ 12 ಗಂಟೆ, ಅವನಮ್ಮನಿಗೆ ಗಾಭರಿಯಾಗಿ “ಏನಾಯ್ತೋ ಈಶ?” ಅಂತ ಕಿರುಚಿದಾಗ ಮನೆಯವರೆಲ್ಲ ಎದ್ದರು. ಈಶ ಹೇಳ್ದ, ‘ಅಮ್ಮ ನಾಳೆ ನನ್ನ ಆಫೀಸಿನಿಂದ ಸೀನ ಅಂತ ಅಮೆರಿಕಾಗೆ ಬರ್ತಿದ್ದಾನೆ. ಅವನ ಅಡ್ರೆಸ್, ಫೋನ್ ನಂಬರ್ ನಿನಗೆ ಮೆಸೇಜ್ ಮಾಡ್ತೀನಿ. ಅವನ ಜೊತೆ ಹೆಪ್ಪಾಕೊಕ್ಕೆ ಅಂತ ಗಟ್ಟಿ ಮೊಸರು ಒಂದು ಕಾಲು ಲೀಟರ್ ಕಳಿಸು. ಸೀನನಿಗೆ ತಿಳಿಸಿರುತ್ತೇನೆ ಅದನ್ನು ತರಲು’. ಅಮ್ಮನ ಕರುಳು ಚುರ್ ಚುರ್ ಅಂತು. ಸರಿ ಬೆಳಿಗ್ಗೆ ಸೀನನಿಗೆ ತಲುಪಿಸಲು ‘ಹೆಪ್ ಮೊಸರು’ ಪ್ರಾಜೆಕ್ಟ್ ರೆಡಿ ಆಯಿತು.

ಈಶನ ತಮ್ಮ ಹೆಪ್ ಮೊಸರನ್ನು ಎರಡು ಕವರಿನಲ್ಲಿ ಸೀಲ್ ಮಾಡಿ, ಅದನ್ನು ಒಂದು ಪ್ಲಾಸ್ಟಿಕ್ ಬಾಕ್ಸ್ ಅಲ್ಲಿ ಹಾಕಿ, ಸೀನನಿಗೆ ಫೋನ್ ಹಚ್ಚಿದ ‘ಎಲ್ಲಿ ಸಿಗ್ತೀರಾ ಹೆಪ್ ಮೊಸರು ಅಣ್ಣನಿಗೆ ನಿಮ್ಮೊಂದಿಗೆ ಕಳಿಸಬೇಕು’. ಮೊದಲ ಸಲ ಏರೋಪ್ಲೇನ್ ಹತ್ತುತ್ತಿರುವ ಸೀನನಿಗೆ ಏನು ಮಾಡೋದು ಅಂತ ತಿಳಿಯದೆ, ‘ನಾನು ಮೀಟಿಂಗ್ ಅಲ್ಲಿ ಇದ್ದೇನೆ ಆಮೇಲೆ ತಿಳಿಸುತ್ತೇನೆ’ ಅಂತ ಸಬೂಬು ಹೇಳಿ ತಪ್ಪಿಸಿಕೊಳ್ಳೋಕೆ ಪ್ರಯತ್ನಿಸಿದ.

ಸೀನ ಅವನ ತಾತನಿಗೆ ‘ಹೆಪ್ ಮೊಸರು’ ವಿಷಯ ತಿಳಿಸಿ, ಅದನ್ನು ಅಮೆರಿಕಕ್ಕೆ ತೆಗೆದುಕೊಂಡು ಹೋಗಬಹುದೇ ಎಂದು ಪ್ರಶ್ನೆ ಹಾಕಿದ. ಕವಡೆ ಶಾಸ್ತ್ರ ಕೇಳಿ, ಊರಿನ ಉಸಾಬರಿಯೆಲ್ಲ ತನ್ನ ತಲೆಯ ಮೇಲಿದೆ ಅಂತ ಹೇಳಿಕೊಳ್ಳುವ ತಾತ ‘ಹಾಗೆ ಮಾಡಲೇ ಬೇಡ. ಅಮೇರಿಕಾದಲ್ಲಿ ನೀನು ಇಳಿದಾಗ ಏರ್ಪೋರ್ಟ್ ಅಲ್ಲಿ ನಾಯಿಗಳು ನಿನ್ನ ಪ್ರತಿಯೊಂದು ಪದಾರ್ಥವನ್ನು ಮೂಸಿ ಸಮ್ಮತಿಸಿದರೆ ಮಾತ್ರ ನಿನ್ನನ್ನು ಒಳಗೆ ಬಿಡುತ್ತಾರೆ. ಇಲ್ಲದ್ದಿದ್ದರೆ ವಾಪಾಸ್ ಅದೇ ಫ್ಲೈಟ್ ಅಲ್ಲಿ ಕಳಿಸುಬಿಡುತ್ತಾರೆ’ ಅಂತ ಆಜ್ಞೆ ಮಾಡಿದರು.

ಸೀನನಿಗೆ ಈಶನ ಮನೆಯಿಂದ ಫೋನೋ ಫೋನು, ಈಶನಿಂದಲೂ ಸಹ. ಇದೇನಪ್ಪ ಮೊಸರು ನುಂಗೋ ಹಾಗಿಲ್ಲ ಉಗಿಯೋ ಆಗಿಲ್ಲ ಅಂತ ಊಟಕ್ಕೆ ಕೂತರೆ ಅಜ್ಜಿ ಮೊಸರನ್ನ ಬಡಿಸಬೇಕೇ? ಈಶನ ಸಹಾಯದಿಂದಲೇ ಅಮೆರಿಕಾಗೆ ಹೋಗುತ್ತಿರುವುದು ಮತ್ತು ನಾಳೆಯಿಂದ ಅವನ ರೂಮಲ್ಲೇ ಇರಬೇಕು, ಏನ್ಮಾಡೋದು ಅಂತ ಯೋಚಿಸುವಾಗ ಮೊಸರನ್ನ ಅವನನ್ನ ವಿಷವಾಗಿ ಕಾಡತೊಡಗಿತು.

ಅವತ್ತು ಮದವಿಳಿದ ಪ್ರವೀಣ ಮೊಸರನ್ನವಿಲ್ಲದೆ ಊಟ ಮುಗಿಸುತ್ತಿರಲಿಲ್ಲ. ತನಗೆ ಮರುಜೀವಕೊಟ್ಟ ಮೊಸರನ್ನವನ್ನು ಅವನ ಇನ್ನಿತರ ಉತ್ತರೀಯರ ಜೊತೆ ಹಂಚಿಕೊಂಡು ಧಹಿಬಾತ್ ಸಂಸ್ಕೃತಿಯನ್ನು ಅವರಿಗೂ ಹಚ್ಚಿಸಿದ.

ಇದಕ್ಕೆ ಉಪಾಯ ವಠಾರದಲ್ಲಿರುವ ತಿರುಪುರಜ್ಜಿ ಮಾತ್ರ ಕೊಡಲು ಸಾಧ್ಯ ಅಂದುಕೊಂಡು ಅವಳ ಮನೆಗೆ ಹೋದ. ತಿರುಪುರಜ್ಜಿ ಒಂದು ರೀತಿ ಲೋಕಲ್ ಗೂಗಲ್ ಮತ್ತು ಎಲ್ಲರ ರಹಸ್ಯ ವಿಷಯಗಳನ್ನೂ ತಿಳಿದಿರುವ ವಿಶೇಷ ಅಸಾಧ್ಯ ಹೆಂಗಸು. ಐದು ಭಾಷಾ ಪ್ರವೀಣೆ ಹಾಗು ರಿಟೈರ್ ಹಿಂದಿ ಟೀಚರ್. ರಿಟೈರ್ ಆಗಿ ಮೂರುವರೆ ದಶಕವಾಗಿದೆ – ಅವರಿವರಿಗೆ ಸಲಹೆ ಕೊಡುವುದು ಮಾತ್ರ ಈಗ ಆ ಅಜ್ಜಿಯ ಕಾಯಕ – ಪುಕ್ಕಟೆಯಾಗಿ ಅಲ್ಲ. ಹಾಗೋ ಹೀಗೋ ಸಲಹೆ ಕೊಟ್ಟ ಮೇಲೆ ತನಗೆ ಬೇಕಾದನ್ನು ಅವರಿಂದ ಪಡೆಯುವ ಸಕಲಕಲಾವಲ್ಲಭೆ…. ಸಾಕು ಅವಳ ವರ್ಣನೆ… ವಾಪಸ್ಸು ಸೀನನ ‘ಹೆಪ್ ಮೊಸರು’ ಪ್ರಾಜೆಕ್ಟ್ ಗೆ ಬರೋಣ.

ಸೀನ ಬಸವಳಿದು ತಿರುಪುರಜ್ಜಿಗೆ ತನ್ನ ಮೊಸರಿನ ವೇದನೆಯನ್ನು ತಿಳಿಸಿದ. ಅಜ್ಜಿ ಮಾಯಾಬಜಾರ್ ಸಿನಿಮಾದ ಘಟೋದ್ಗಜನಂತೆ ಗಹಗಹಿಸಿ ನಕ್ಕು, ನಾನು ನಿನಗೆ ಒಂದು ಸಲಹೆ ಕೊಡ್ತೇನೆ, ಆದರೆ ನನಗೆ ಬೇಕಾದಾಗ ಗೋಡಂಬಿ, ದ್ರಾಕ್ಷಿ, ಬಾದಾಮಿ, ಟೈಗರ್ ಬಾಮ್ ಮತ್ತು ಮಫ್ಲರ್ ಗಳನ್ನು ಅಮೆರಿಕದಿಂದ ಕಳಿಸುತ್ತೀಯಾ? ಅಂತ ಕೌಂಟರ್ ಹಾಕಿದ್ಲು. ಸೀನನಿಗೆ ಮೈಯೆಲ್ಲ ರಕ್ತದ ಬದಲು ಮೊಸರು ಹರಿದಂತಾಯ್ತು. ಇರಲಿ ಸಧ್ಯಕ್ಕೆ ಓಕೆ ಅಂದು ಈಗಿನ ಸಮಸ್ಯೆ ಬಗೆಹರಿಸುಕೊಳ್ಳೋಣ ಅಂದುಕೊಂಡು, ‘ಅಜ್ಜಿ ಆಯಿತು ನಿನಗಲ್ಲದೆ ಇನ್ಯಾರಿಗೆ ಕಳಿಸಲಿ – ನೀನು ಹೇಳಿದೊಡನೆಯೇ ಕಳಿಸುತ್ತೇನೆ.. ನನ್ನ ಹೆಪ್ ಮೊಸರು ಪ್ರಾಬ್ಲಮ್ ಸಾಲ್ವು ಮಾಡಜ್ಜಿ’ ಅಂದ. ‘ಸರಿ ಹಾಗಿದ್ದರೆ ಇವತ್ತು ಊಟ ಆದ್ಮೇಲೆ ವಠಾರದವರೆಲ್ಲ ಸೇರುವ ಕಟ್ಟೆ ಹತ್ತಿರ ಬಾ .. ನಾನು ಯೋಚಿಸಿ ನಿನಗೆ ಏನು ಮಾಡ್ಬೇಕೆಂದು ತಿಳಿಸುತ್ತೇನೆ. ಅಷ್ಟರಲ್ಲಿ ನೀನು ಈಶನ ತಮ್ಮನಿಗೆ ಹೆಪ್ ಮೊಸರು ತಂದು ಕೊಡೋಕ್ಕೆ ಹೇಳು’ ಅಂತ ತಿರುಪುರಜ್ಜಿ ಹೇಳಿತು.

ಖುಷಿ ಖುಷಿಯಾಗಿ ಮನೆಗೆ ಬಂದ ಸೀನ ಅವನಮ್ಮನಿಗೆ ತಿರುಪುರಜ್ಜಿಯ ತಿರುಮಂತ್ರಕ್ಕೆ ಕಾಯುವ ಅಂತ ತಿಳಿಸಿದ. ಅಮ್ಮನಿಗೆ ಕೋಪ ನೆತ್ತಿಗೇರಿತು ‘ಅಲ್ವೋ ನನ್ನ ನಾದಿನಿ ಮಗಳು ನಯನ ಖಾರದ ಪುಡಿಯನ್ನೇ ಅಮೆರಿಕಾಗೆ ರಾಜಾರೋಷವಾಗಿ ತಗೊಂಡು ಹೋಗಿ ವಾಟ್ಸಪ್ಪ್ ಅಲ್ಲಿ ಸಾರುಮಾಡೋ ವಿಡಿಯೋ ನಮ್ಮ ಗ್ರೂಪ್ನಲ್ಲಿ ಹಾಕಿ ಫೇಮಸ್ ಹಾಗಿದ್ದಾಳೆ. ನೀನು ನೋಡಿದ್ರೆ ನಿಮ್ಮ ತಾತ ಹೇಳಿದ ನಾಯಿಗಳಿಗೆ ಹೆದರಿ, ತಿರುಪುರಜ್ಜಿ ಒಂದು ಕಾಸಿನ ಮೊಸರಿನ ಉಪಾಯದ ಬದಲು ಸಾವಿರಾರು ಡಾಲರಿನ ಸಾಮಗ್ರಿಗಳನ್ನು ಪದೇ ಪದೇ ಕೇಳಿದ್ರೇನು ಮಾಡುತ್ತೀಯಾ? ನೀನು ಅಲ್ಲಿಂದ ಕಳಿಸ್ಲಿಲ್ಲಾ ಅಂದ್ರೆ ನಮಗೆ ಉಳಿಗಾಲ ಇಲ್ಲದಂತೆ ಅವಳು ಕಟ್ಟೆಯಲ್ಲಿ ದಿನಾ ಪಂಚಾಯ್ತಿ ಮಾಡ್ತಾಳೆ. ಅದಿಕ್ಕೆ ನೀನು ಎಲ್ಲರ ಮುಂದೆ ಇವತ್ತು ಕಟ್ಟೆ ಹತ್ರ ಅವಳ ಉಪಾಯ ಒಪ್ಪಿಕೊಳ್ಳೋಕ್ಕೆ ಪ್ಲಾನ್ ಮಾಡಿದ್ದಾಳೆ ಹುಷಾರ್’ ಅಂದುಬಿಟ್ಟರು. ಆಗವನಿಗೆ ತಲೆ ಕೆಟ್ಟು, ಈ ಪ್ರಾಬ್ಲಮ್ ಸಾಲ್ವೇ ಆಗೋಲ್ವೇ ಅಮೆರಿಕಾಗೆ ಹೋಗೋದೇ ಕಾನ್ಸಲ್ ಮಾಡ್ಲಾ ಅಂತ ಯೋಚನೆ ಮಾಡ್ತಿದ್ದಾಗ, ಅವನ ತಂಗಿ ಪ್ರಚಂಡ ಐಡಿಯಾ ಕೊಟ್ಟಳು ‘ತಿರುಪುರಜ್ಜಿಗೆ ಹೇಳು ನೀನು ಮೊಸರು ತಗೊಂಡು ಹೋಗಲ್ಲ ಎಂದು ಈಶನ ಮನೆಯವರಿಗೆ ತಿಳಿಸಿದ್ದಾಯ್ತು ಅಂತ. ಮೊಸರು ನಾಲ್ಕು ಕವರುಗಳ ಪ್ಯಾಕಿಂಗ್ ಮಾಡಿ ಸಾರುಪುಡಿ, ಖಾರದಪುಡಿ ಮತ್ತು ಸಂಡಿಗೆಗಳ ಮಧ್ಯ ಇಟ್ಟುಕೊಂಡು ಹೋಗು, ನಾಯಿಗಳು ಮೂಸಿದರೆ ಅಲ್ಲೇ ಬಿಸಾಕು ಅಷ್ಟೇ’ ಅಂದಳು. ವಾವ್ ಇವಳು ನಮ್ಮ ಮುಂದಿನ ತಿರುಪುರಂಭ ಅಂತ ಅಮ್ಮ ಬೀಗಿದಳು. ತಂಗಿಯ ಮಾತಿನಂತೆ ತಿರುಪುರಜ್ಜಿಯ ಚಕ್ರವ್ಯೂಹದಿಂದ ತಪ್ಪಿಸಿಕೊಂಡ ಸೀನ.


ಈಶನ ತಮ್ಮ ಫೋನ್ ಮಾಡಿ ಮಾಡಿ ಸುಸ್ತಾಗಿ ಮೆಸೇಜ್ ಹಾಕಿದ, ಒಡಿ ಸೀನ ಈ ಮೊಸರನ್ನು ನೀವು ಈಶನಿಗೆ ತಲುಪಿಸಲೇಬೇಕು ಇಲ್ಲದ್ದಿದ್ದರೆ ಅವನು ಹೇಳಿದ್ದಾನೆ ನನಗೆ ನಿಮ್ಮ ಮನೆಯ ಮುಂದೆ ಉಪವಾಸ ಸತ್ಯಾಗ್ರಹ ಮಾಡಿ ಟಿ ಅರ್ ಪಿ ಗೋಸ್ಕರ ಕಾದುಕುಳಿತಿರುವ ಟಿವಿ ಚಾನೆಲ್ ಗಳಿಗೆ ತಿಳಿಸುತ್ತೇನೆ ಎಂದು. ಇದೊಳ್ಳೆ ಗ್ರಹಚಾರದ ಅಪ್ಪ- ಮೊಸರಾಚಾರ ಇದು ಅಂದುಕೊಂಡ. ಸರಿ ಆಡಿದ್ದಾಗಲಿ ಮೊಸರು ಪ್ರಿಯ ಕೃಷ್ಣಾರ್ಪಣಮಸ್ತು ಅಂದುಕೊಂಡು, ಅವನ ಅಡ್ರೆಸ್ ಈಶನ ತಮ್ಮನಿಗೆ ಮೆಸೇಜಾಯಿಸಿದ. ಆ ಅಡ್ರೆಸ್ ನೋಡಿ ಭಯಭೀತನಾದ ಈಶನ ತಮ್ಮ, ಅದು ಅವನು ಜನ್ಮದಲ್ಲೇ ಕೇಳಿರದ ಜಾಗದ ಹೆಸರು, ‘ನಂಬರ್ 7865 , ರಾಮಾಂಜಯನೆಯ ರಸ್ತೆ, 10 ನೇ ಮೇನ್ ರೋಡ್, ಸರ್ವೇಶ್ವರ ಲೇಔಟ್, 38 ನೇ ಮೈಲಿ ಕಲ್ಲು, ಬೆಂಗಳೂರು – ಪುಣೆ ಹೈವೆ, ಬೆಂಗಳೂರು ಗ್ರಾಮಾಂತರ’. ಗೂಗಲ್ ಅಲ್ಲೂ ಸಹ ಸಿಗದ ಸ್ಥಳ. ಓಲಾ ಮತ್ತು ಊಬರ್ ಬರಾಕಿಲ್ಲ ಅಂದ್ರು. ಸರಿ ಅವನಿಗೆ ಗೊತ್ತಿದ್ದವರಿಗೆಲ್ಲ ಕೇಳಿದ, ಏನೂ ಸಹಾಯವಾಗಲಿಲ್ಲ. ಕೊನೆಗೆ ಅಲ್ಲೇ ಇದ್ದ ರಿಯಲ್ ಎಸ್ಟೇಟ್ ಏಜೆಂಟ್ ಗೆ ‘ಗುರು, ನಮ್ಮ ಅಣ್ಣ ಅಮೇರಿಕಾದಲ್ಲಿ ಇದ್ದಾನೆ. ಅವನಿಗೆ ಒಂದು 100 x 100 ಸೈಟ್ ಬೇಕು ಸರ್ವೇಶ್ವರ ಲೇ-ಔಟ್ ಅಲ್ಲಿ ಅರ್ಜೆಂಟ್ ಆಗಿ. ಆ ಜಾಗ ಎಲ್ಲಿ ಬರುತ್ತೆ ಕರೆದುಕೊಂಡು ಹೋಗ್ತಿಯ? ಅಲ್ಲಿ ರೇಟ್ ಎಷ್ಟು?’ ಅಂತ ಒಂದೇಸಮ ಹೇಳ್ದ.

ರಿಯಲ್ ಎಸ್ಟೇಟ್ ಗುರು ಅವನಿಗೆ ಗೊತ್ತಿದ ಅವನಂತ ಭಂಟರಿಗೆಲ್ಲ ಫೋನ್ ಹಚ್ಚಿ ಆ ಜಾಗದ ಸಂಪೂರ್ಣ ಮಾಹಿತಿ ಕೊಟ್ಟ. ‘ನನಗೆ ಆ ಜಾಗಕ್ಕೆ ಈಗ ಬರಲು ಕಷ್ಟ, ಬೇಕಾದರೆ ನಮ್ಮ ಹುಡುಗನನ್ನು ಕಳಿಸುತ್ತೇನೆ, ಸೈಟ್ ತೋರಿಸುತ್ತಾನೆ’ ಅಂದ. ಸಂತಸಗೊಂಡ ಈಶನ ತಮ್ಮ, ನನಗೆ ಆ ಜಾಗಕ್ಕೆ ಹೇಗೆ ಹೋಗುವುದು ಅಂತ ಮ್ಯಾಪ್ನಲ್ಲಿ ತೋರಿಸಿ. ಅಣ್ಣನಿಗೆ ಇವತ್ತೇ ತಿಳಿಸಿ ಸಾಯಂಕಾಲ ಖಂಡಿತ ಹೇಳುತ್ತೇನೆ ಅಂದುಬಿಟ್ಟು, ಕಂಪ್ಲೀಟ್ ರೂಟ್ ಮ್ಯಾಪ್ ಬರೆಸಿಕೊಂಡು ತಗೊಂಡ. ಕೊನೆಗೆ ಸೀನನ ಮನೆ ತಲುಪಲು ಮೂರು ಗಂಟೆ ಆಯಿತು. ಪಾಪ ಹೆಪ್ ಮೊಸರು ಏನು ಪುಣ್ಯ ಮಾಡಿತ್ತೋ ಕೈ ಇಂದ ಕೈಗೆ ಸೇರಿ, ಅಮೇರಿಕ ತಲುಪಲು ವೀಸಾ ಇಲ್ಲದೇ ತಯಾರ್ ಆಯಿತು.

ಸರಿ ಹಾಗೂ ಹೀಗೂ ಪ್ಯಾಕ್ ಮಾಡಿಕೊಂಡು ಸೀನ, ನಾಯಿಗಳ ಗಮನದಿಂದ ತಪ್ಪಿಸಿಕೊಂಡು, ಪ್ರಾಜೆಕ್ಟ್ ‘ಹೆಪ್ ಮೊಸರು’ ಅಮೇರಿಕಾದಲ್ಲಿ ಈಶನಿಗೆ ಸೀನ ತಲುಪಿಸಿಯೇಬಿಟ್ಟ. ಕೈಗೆ ಮೊಸರು ಬಂದದ್ದೇ ಸೀನನನ್ನು ಗಟ್ಟಿಯಾಗಿ ತಬ್ಬಿಕೊಂಡ ಈಶ ಗಟ್ಟಿ ಮೊಸರನ್ನ ತಿಂದಷ್ಟೇ ಸಂಭ್ರಮಿಸಿದ. ಹೆಪ್ ಮೊಸರನ್ನು ಹುಷಾರಾಗಿ ಸ್ವಲ್ಪ ಮೊಸರಿಗೆ ಆಗಲೇ ಹೆಪ್ಪು ಹಾಕಿಟ್ಟ. ಮಿಕ್ಕಿದ್ದನ್ನು ಫ್ರೀಜರಿನಲ್ಲಿ ಭದ್ರಿಸಿದ.

ಮಾರನೇ ದಿನ ಮಂಗಳವಾರ ಮನೆಯಿಂದಲೇ ಕೆಲಸ ಮಾಡುತ್ತೇನೆ ಅಂತ ಮ್ಯಾನೇಜರ್ ಗೆ ಇಮೈಲಿಸಿದ. ಅನ್ನ ಮಾಡಿ, ಹೆಪ್ಪು ಹಾಕಿದ ಮೊಸರನ್ನು ಅನ್ನಕ್ಕೆ ಉಪ್ಪಿನ ಜೊತೆ ಬೆರೆಸಿ ಮೊದಲ ತುತ್ತು ಸೀನನ ಜೊತೆ ತಿಂದಾಗ ಸಂತಸದಿಂದ ಆನಂದಭಾಷ್ಪ ಉದುರಿ, ಸೀನನನ್ನ ಗಟ್ಟಿಯಾಗಿ ಮತ್ತೊಮ್ಮೆ ತಬ್ಬಿಕೊಂಡ.

ಈಶ, ಆಗಿನಿಂದ ಪ್ರತಿದಿನ ಹೆಪ್ ಮೊಸರನ್ನು ಬಂಗಾರಕ್ಕಿಂತ ಭದ್ರವಾಗಿ ಕಾಪಾಡಿಕೊಳ್ಳುತ್ತಿದ್ದ. ಅವನು ಅಮೆರಿಕದಿಂದ ಫೋನ್ ಮಾಡಿದಾಗಲೆಲ್ಲ ಕೇಳುತ್ತಿದ್ದ ಮೊದಲ ಕೊಶ್ಶನ್ನೆ ‘ಹೆಪ್ ಮೊಸರು ಹೇಗಿದೆ’ ಅಂತ. ಈಶನಿಗೆ ಪ್ರಾಜೆಕ್ಟ್ ಮೇಲೆ ಒಂದು ವಾರ ಬೇರೆ ಸಿಟಿಗೆ ಹೋಗಬೇಕಾಯಿತು. ಅವನು ಹೋಗುವ ಮುಂಚೆ ಅವನ ಜೊತೆಯಲ್ಲಿ ಇದ್ದ ಗೆಳೆಯರಿಗೆ ಹೆಪ್ ಮೊಸರನ್ನು ಕಾಪಾಡುವಂತೆ ಆಜ್ಞೆ ಮಾಡಿ ಹೋಗಿದ್ದ. ಒಂದು ವಾರದ ನಂತರ ಹಿಂತಿರುಗಿದ ಈಶ ಓಡಿಬಂದು ಫ್ರೀಜರ್ ಓಪನ್ ಮಾಡಿದ್ರೆ ಹೆಪ್ ಮೊಸರು ಕಾಣೆಯಾಗಿತ್ತು. ಸ್ನೇಹಿತರನ್ನು ವಿಚಾರಿಸಿದಾಗ ಅವರು ಹೇಳಿದರು ಒಂದು ರೀತಿ ಕೆಟ್ಟ ವಾಸನೆ ಬಂದಿದ್ದರಿಂದ ಅವನ ಆಸ್ತಿಯನ್ನು ಕಸಕ್ಕೆ ಎಸೆದರು ಅಂತ. ಅದನ್ನು ಕೇಳಿದ ಈಶ ಎಲೆಕ್ಷನ್ ನಲ್ಲಿ ಟಿಕೆಟ್ ಸಿಗದೇ ಅಳುವ ಅಭ್ಯರ್ಥಿಯಂತೆ ಬಿಕ್ಕಿ ಬಿಕ್ಕಿ ಅತ್ತ. ಸುತ್ತಲಿದ್ದ ಗೆಳೆಯರು ಆಶ್ಚರ್ಯದಿಂದ ಮೌನವಾದರು.

ಇಲ್ಲ ಇನ್ನು ಮೇಲೆ ಮೊಸರನ್ನು ತಿನ್ನಲೇಬಾರದು, ಇದು ನನಗೆ ವೀಕ್ನೆಸ್ಸ್ ಆಗುತ್ತಿದೆ ಅಂದುಕೊಂಡು ಅವತ್ತೇ ಪರುಶುರಾಮನ ತರಹ ಪ್ರತಿಜ್ಞೆಯನ್ನು ಮಾಡಿದ.