ನನ್ನ ಅಪ್ಪ ಕ್ರೂರವಾಗಿದ್ದರು. ಬರ್ಬರತೆಯ ಪ್ರಚಂಡ ವ್ಯಕ್ತಿಯಾಗಿದ್ದರು.  ಅವರ ಹಂಗಿನಲ್ಲಿದ್ದರು ಕೇರಿಯ ಜನರೆಲ್ಲ. ಬಹಳವೇ ಪಾಳೇಗಾರಿಕೆ ಮಾಡುತ್ತಿದ್ದರಿಂದ, ಅವರನ್ನು ನೋಡಿದಾಗ ಒಂದು ರೀತಿಯ ಭಯವೂ ಆವರಿಸಿದಂತೆ ಅನಿಸುತ್ತಿತ್ತು. ಅವರ ಕುರಿತು ಬರೆಯುವ ನೆಪದಲ್ಲಿ ನಾನು ನನ್ನ ಪೂರ್ವಿಕರನ್ನೆಲ್ಲ ತುಂಬಿಕೊಂಡು ಹೀಗೊಂದು ಆತ್ಮಕತೆಯನ್ನು ಬರೆಯಲು ಹೊರಟಿದ್ದೇನೆ. ಓದುಗರು ಈ ಬರಹವನ್ನು ಹೇಗೆ ಸ್ವೀಕರಿಸುವರೋ ಎಂಬ ಕುತೂಹಲವಿದೆ.  ನನ್ನ ಬಹಳ ಕಾಲದ ಗೆಳಯ ಅಬ್ದುಲ್ ರಶೀದ್ ಈ ಬರಹಕ್ಕೆ ಒತ್ತಾಯಿಸಿದ್ದರಿಂದ ಬರವಣಿಗೆ ಶುರು ಮಾಡಿದೆ. ಆ ಪ್ರೀತಿಯು ಸದಾ ಕಾಲ ಹೀಗೇ ಇರಲಿ ಎಂದು ಹಾರೈಸುವೆ.
ಕತೆಗಾರ ಮೊಗಳ್ಳಿ ಗಣೇಶ್ ಬರೆಯುವ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಎಂಬ ಹೊಸ ಸರಣಿಯ ಮೊದಲನೆಯ ಕಂತು ಇಲ್ಲಿದೆ. 

 

ಆ ರಾತ್ರಿ ಮನೆ ಮಂದಿಯೆಲ್ಲ ಗಿಜಿಗುಟ್ಟುತಿತ್ತು. ನಾಳೆ ವಿಶೇಷವಿತ್ತು. ಅದು ವರ್ಷಕ್ಕೆ ಒಮ್ಮೆ ನಡೆವ ಅದ್ಧೂರಿ ಮಾಂಸದೂಟದ ಜಾತ್ರೆ. ಯಾವ ಕೊಂಡ ಬಂಡಿಯು ಇಲ್ಲಾ… ಸುಮ್ಮನೆ ಮಾರಮ್ಮನಿಗೆ ಕೈಮುಗಿದು ಹರಕೆಗೆ ಬಿಟ್ಟಿದ್ದ ಹೆಮ್ಮಾರಿ ಕೊಬ್ಬಿದ ಕೋಣಗಳ ಕಡಿದು ಇಡೀ ಎರಡೂ ಹೊಲಗೇರಿಗಳ ಒಂದೊಂದು ಮನೆಗೂ ಬುಟ್ಟಿ ತುಂಬ ಮಾಂಸ ಹಂಚಿಬಿಡುತ್ತಿದ್ದರು.

ಅದು ಅವರ ಮಾಂಸ ಪರಂಪರೆಯ ಪರಮ ಸಂಭ್ರಮಾಚರಣೆಯ ದಿನ. ಆ ಸವಿಯೂಟದ ದಿನವನ್ನು ಯಾರೂ ತಪ್ಪಿಸಿಕೊಳ್ಳುತ್ತಿರಲಿಲ್ಲ. ಸಾಧಾರಣ ಹಬ್ಬಗಳಂತಲ್ಲಾ ಅದು. ಎಂತದೊ ದಿವ್ಯತೆ ಇಡೀ ಕೇರಿಯ ಮೂಲೆ ಮುಡುಕಲಲ್ಲೂ ಆವರಿಸಿರುತ್ತಿತ್ತು. ಅದನ್ನು ವಿವರಿಸಲು ಬಹಳ ಕಷ್ಟವಾಗುತ್ತದೆ. ಪ್ರತಿಯೊಬ್ಬನ ಮುಖದಲ್ಲೂ ಮಂದಹಾಸ. ಯಾರೊಬ್ಬರ ಬಾಯಲ್ಲೂ ಉಲ್ಲಾಸ, ಸವಿನುಡಿಯ ಸೊಲ್ಲು ಸುಗ್ಗಿ, ಎಂದೆಂದೂ ಮುಗಿಯದಂತೆ ಹೆಂಗಸರ ಒಂದು ಮನೆಯ ನಗು ಹರಿದಾಡಿ ಮುಂದೆಮುಂದೆ ಅಲೆಯಾಗಿ ತೇಲಿ, ಸ್ವರ್ಗದವರು; ಅಲ್ಲೇನದು ಆ ನಗೆ ನದಿಯ ಹಬ್ಬ ಎಂದು ಕಿವಿಗೊಡುವಂತಿತ್ತು.

ನಮ್ಮ ಕೇರಿಗಳ ಬೇಸರದ ದಿನಗಳಲ್ಲಿ ಅಪ್ಪಿತಪ್ಪಿ ಸಭ್ಯರೇನಾದರು ಅಕಸ್ಮಾತ್ ದಾರಿ ತಪ್ಪಿ ಬಂದು ಬಿಟ್ಟರೆ ಅವರ ಅರ್ಧಜೀವ ಅಲ್ಲೇ ಹೊರಟು ಹೋಗುತಿತ್ತು. ಅಂತಂತಹ ಮಹಾ ಅಪಾಯಕಾರಿ ಬೈಗುಳದ ಮಾತುಗಳು ಚೂರಿಯಂತೆ ತಿವಿಯುತ್ತಿದ್ದವು. ‘ಲೇ, ನಿನ್ನ ಯೀಗಲೀಗ್ಲೆ ಅಗುದು ಬಗುದು ತಿಂದು ತೇಗಿ ಯಂಡ ಕುಡಿದು ಜೈಯಿಸ್ನತಿನಿ ಕಲಾ’ ಎಂದು ಭಯಂಕರ ಶಬ್ದ ಬಕಾಸುರರು ಅಲ್ಲಲ್ಲೆ ಕೈಕಾಲುಗಳಿಗೆ ಸಿಗುತ್ತಿದ್ದರು. ಸದ್ಯ ಆ ಸಂಗತಿಗಳಿಗಿಲ್ಲಿ ಅವಕಾಶವಿಲ್ಲ. ಇವತ್ತು ಅವರ ಕಣ್ಣುಗಳು ದೇವರ ಕಣ್ಣುಗಳಿಗಿಂತಲೂ ಹೆಚ್ಚು ಪ್ರೀತಿ ಕರುಣೆ ವಿಶ್ವಾಸದಲ್ಲಿ ಹೊಳೆಯುತ್ತಿದ್ದವು. ಪ್ರಾಯದ ಚೆಲುವೆಯರೂ! ಈ ರಾತ್ರಿ ಊಟ ಆದ ಮೇಲೆ ನಾ ನಿನಗೆ ತಾಂಬೂಲ ಕೊಡುವೆ ಎಂದು ಮುದ್ದಿನಿಂದ ವಯ್ಯಾರದಲ್ಲಿ ಹಿತ್ತಲ ಬೇಲಿ ಸಾಲಿನ ಮರೆಯಲ್ಲಿ ಬೇಕಾದವರಿಗೆ ಹೇಳಿಕೊಳ್ಳುತ್ತಿದ್ದರು. ಬೊಚ್ಚು ಬಾಯಿಯ ಮುದುಕರ ಭಾವದಲ್ಲಿ ಯಾವ ನಿರಾಸೆಯೂ ಇರುತ್ತಿರಲಿಲ್ಲ. ಹಲ್ಲಿಲ್ಲದವರಿಗೆಂದೇ ಮಾಂಸದ ಕೆಲವೊಂದು ಅವಯವಗಳನ್ನು ಚೆನ್ನಾಗಿ ಬೇಯಿಸಿ ಕೊಡುತ್ತಿದ್ದರು. ನಿಜಕ್ಕೂ ಅವರು ಮಾಂಸಾರಣ್ಯದ ಋಷಿ ಮುನಿಗಳಂತೆ ಕಾಣುತ್ತಿದ್ದರು. ಕೇರಿಯ ಮಕ್ಕಳೆಲ್ಲ ಯಾವುದೊ ತೊಟ್ಟಿಲ ಲೋಕದ ತೋಟದಲ್ಲಿ ಮೈಮರೆತಂತಿದ್ದರು.

ಅಪ್ಪ ಎರಡು ದಿನದಿಂದಲೂ ಕಂಡಿರಲಿಲ್ಲ. ಯಾವ ನಾರಿಯ ಜೊತೆ ಹೊಳೆ ಮೇಲೆ ಮರೆಯಲ್ಲಿದ್ದನೊ. ಎಲ್ಲಿಗೆ ಹೋಗುತ್ತಾನೆ? ಯಾವಾಗ ಬರುತ್ತಾನೆ ಎಂಬುದು ಯಾವತ್ತೂ ನಿಗೂಢವಾಗಿತ್ತು. ಅವನು ಧಡೀರನೆ ಬಂದು ಬಿಟ್ಟರೇ?! ಎಂಬ ಮುನ್ನೆಚ್ಚರಿಕೆ ನನಗಂತು ಯಾವಾಗಲೂ ಇತ್ತು. ‘ಆ ಪಾಪಿ ಬಂದಾ… ಅಕ್ಕಾ ಉಷಾರೂ…’ ಎಂದು ನನ್ನ ತಾಯಿಗೆ ಹೇಳಲು ಸದಾ ಜಾಗೃತನಿರುತ್ತಿದ್ದೆ. ನನ್ನ ತಾಯಿ ದೊಡ್ಡಮನೆಯ ದೇವರ ಪಟಗಳ ಮುಂದೆ ದೀನವಾಗಿ ಪಿಸುಮಾತಿನ ಪ್ರಾರ್ಥನೆಯನ್ನು ಹೇಳಲೂ ಮನಸ್ಸಾಗದೆ… ದೇವರನ್ನು ಹಳಿಯುತ್ತಲೊ… ಇಂತವನಿಗೆ ಕೊಟ್ಟು ಮದುವೆ ಮಾಡಿ ಕೈ ತೊಳೆದುಕೊಂಡರೊ ಎಂಬ ವಿಧಿ ವಿಲಾಸವ ನೆನೆಯುತ್ತ ಭಕ್ತಿಯಿಂದ ಕಲ್ಲಾಗಿ ನಿಂತು ಬಿಡುತ್ತಿದ್ದಳು. ಅಂತಹ ವೇಳೆ ಅಪ್ಪನಿಗೆ ಯಾಕೆ ರಿಯಾಯಿತಿ ಸಮಯ ಎನಿಸಿತ್ತೊ ಗೊತ್ತಿಲ್ಲಾ. ಅವನೆಂದೂ ದೈವ ಭಕ್ತನಲ್ಲ. ಅವನನ್ನು ನಾನು ಯಾವೊಂದು ದೇಗುಲದಲ್ಲೂ ಕೈ ಮುಗಿದಿದ್ದನ್ನು ಕಂಡೇ ಇರಲಿಲ್ಲ. ದೇವರ ಸಹವಾಸವೇ ಬೇಡ ಎಂದು ಹಬ್ಬಗಳಲ್ಲಿ ಮೋಜಿನ ಬೇಟೆಗಾರನಾಗಿರುತ್ತಿದ್ದ. ತಾಯಿ ಆಗಾಗ ಹಿಂಸೆಯ ಸುಳಿವು ಸಿಕ್ಕಾಗಲೆಲ್ಲ ಪೂಜೆಗೆ ತೊಡಗುತ್ತಿದ್ದಳು. ಅಪ್ಪ , ‘ನಾಳೆ ಅದೆ ನಿನ್ನೆ ಮಾರಿ ಹಬ್ಬ’ ಎಂದು ಹೊರಟು ಹೋಗುತಿದ್ದ. ಅಪ್ಪ ದೇವರನ್ನು ಯಾವತ್ತೂ ಹಳಿಯುತ್ತಲೂ ಇರಲಿಲ್ಲಾ ಹೊಗಳಿ ನಂಬಿಸುತ್ತಲೂ ಇರಲಿಲ್ಲ. ವಿಚಿತ್ರ ಮನುಷ್ಯ. ಮೈ ಮೇಲೆ ದೇವರು ದೆವ್ವ ಬಂದಿವೆ ಎಂಬುದು ಗೊತ್ತಾದ ಕೂಡಲೆ ಅಂತವರ ವಿರುದ್ಧ ಉಗ್ರವಾಗಿ ತಿರುಗಿ ಬೀಳುತ್ತಿದ್ದ. ಪೂಜಾರಿಯ ಕುತ್ತಿಗೆ ಹಿಡಿದೆಳೆದು ಉರುಳಿಸುತ್ತಿದ್ದ. ಕೇರಿಯವರಿಗೆ ದೇವ ಮಾನವರ ಈ ಕಾಳಗ ಇಷ್ಟವಾಗುತ್ತಿತ್ತು. ಕೆಲವರು ದೇವರ ಪರ ನಿಂತರೆ ಇನ್ನು ಕೆಲವರು ಅಪ್ಪನ ವಕಾಲತ್ತಿಗೆ ಬಂದು ಜಗಳ ಒಂದು ಹಂತಕ್ಕೆ ಬಂದು ಚಿತ್ ಆಗುವ ತನಕ ಬಿಡುತ್ತಿರಲಿಲ್ಲ. ‘ಇವರಪ್ಪ ಬಾರೀ ಕೇಡೀ! ದೇವರ ಮೇಲೇ ಕೈ ಮಾಡಿ ಹೊಡೆಯುವನಲ್ಲಾ…’ ದೇವರು ಹೊಡೆದರೆ ಸರ್ವನಾಶ ಅಂತಾರೆ… ಇಲ್ಲೇನಿದು ಒಬ್ಬರ ಮೇಲೊಬ್ಬರು ಹೊಟ್ಟೆ ದಬಾಕಂದು ಉರುಳಾಡ್ತಾ ಆಗಾಗ ಗೆಲುವಿನ ಆಕ್ರಂದನದ ಆಕ್ರೋಶ ಮೆರೆಯುತ್ತ; ಬುಸಬುಸನೆ ಎಂಡದ ಅಮಲಿನ ಗಾಳಿ ತುಂಬಿದ ಹೊಟ್ಟೆಗಳ ಡಿಕ್ಕಿ ಹೊಡೆಸಿಕೊಂಡು ಬಿದ್ದು ಎದ್ದು; ಕೊನೆಗೆ ಪೂಜಾರಪ್ಪನೇ ಸೋಲುತ್ತಿದ್ದುದು. ಮೈಮೇಲೆ ಬಂದಿದ್ದ ದೇವರು ಬೇಸರಗೊಂಡು ಹೊರಟು ಹೋಯಿತು ಎಂದು ಎದ್ದು ಕೂತು; ಈ ತನಕ ಏನೂ ಆಗಿಯೇ ಇಲ್ಲ ಎಂಬಂತೆ ವಾತಾವರಣ ತಿಳಿಯಾಗುತಿತ್ತು.

ನೆರದಿದ್ದ ಜನಕ್ಕೆ ಏನೋ ಅಪಶಕುನವಾಗಿತ್ತು. ಎಲ್ಲೂ ಮಾಯದಲ್ಲಿ ಇದ್ದು ಬಂದು ಮಾರಿ ಪೂಜಾರಿಯ ಹೊಡೆದುರುಳಿಸಬಾರದಿತ್ತು ಎಂಬುದು ಆ ಜನರ ಬಯಕೆ. ಆದರೇನು ಮಾಡುವುದೂ… ಪೂಜಾರಪ್ಪ ಆಗಲೇ ನಾಳಿನ ಕೋಣಗಳ ಮಾಂಸ ಸಂಭ್ರಮದಲ್ಲಿ ಮುಂಗಡ ವಿಪರೀತ ಕುಡಿದು ಹೋರಾಡಲಾರದೆ ಬಿದ್ದು ಕಾಲು ಉಳುಕಿಸಿಕೊಂಡಿದ್ದ. ಮತ್ತೆ ಮಾಯ. ಎಲ್ಲಿ ಅವನು ಎಂದು ಹುಡುಕಿದರೆ ಕಾಣಲಿಲ್ಲ. ಆ ಕತ್ತಲಲ್ಲಿ ಸೈಕಲ್ ಏರಿ ಆತ ಅಕ್ನೂರು ಪೋಲಿಸ್ ಸ್ಟೇಷನ್ ಕಡೆಗೇ ಹೊರಟನೆಂದು ಅಂತರಾಳ ತೀವ್ರವಾಗಿ ತಿಳಿಸುತಿತ್ತು.
‘ಅಕ್ಕಾ… ಇಂಗಾಯ್ತು! ಅವನು ದುಷ್ಟ… ದೆವ್ವ… ದೇವರಿಗೆ ಹೊಡೆದು ಬೀಳಿಸಿ ಬಿಟ್ಟ. ಇನ್ನು ಅವನು ನಮ್ಮನ್ನು ಬಿಟ್ಟಾನೆಯೇ… ಜನ ಸುಮ್ಮನೆ ಕೋತಿ ಆಟ ನೋಡುವಂಗೆ ನೋಡುತ್ತಿದ್ದರು. ಆ ಇನ್ನೊಬ್ಬ ಪಾಪಿ ಪೂಜಾರಿಯೂ ವಿಪರೀತ ಹುಳಿ ಎಂಡ ಕುಡಿದು ದೇವರಂತೆ ಆಡುತ್ತಿದ್ದ… ಇದು ಯಾವ ಊರೊ; ಮನೆಯೊ… ಎಲ್ಲಿಯಾದರೂ ದೂರ ತಪ್ಪಿಸಿಕೊಂಡು ಹೋಗೋಣವೇ… ಆಗ ಅಪ್ಪನ ನರಕ ನಮಗೆ ಇರುವುದೇ ಇಲ್ಲಾ…’

ತಾಯಿ ನನ್ನ ಮಾತಿಗೆ ಉತ್ತರಿಸಲೇ ಇಲ್ಲ. ಒಳ ಜಗತ್ತೇ ಇಷ್ಟು; ಇನ್ನು ಆ ಅಪರಿಚಿತ ಹೊರಜಗತ್ತು ಇನ್ನೆಷ್ಟು ಕ್ರೂರಿಯಾಗಿರಬಹುದು ಎಂಬುದನ್ನು ನನ್ನ ತಾಯಿ ಅಕ್ಷರಶಃ ಅನುಭವಿಸಿ ತೊಡೆ ಮೇಲೆ ನನ್ನ ತಲೆ ಇರಿಸಿಕೊಂಡು ಬಿಸಿ ಕಣ್ಣೀರ ಹಣೆ, ಕೆನ್ನೆ, ಕಿವಿಗಳ ಮೇಲೆ ಬೀಳಿಸಿ; ಸೆರಗಿಂದ ತಾನೇ ಒರೆಸಿ ನನ್ನ ಮುಗ್ಧತೆಯ ಬಗ್ಗೆ ಅನುಕಂಪ ಪಡುತ್ತಿದ್ದಳು. ನನ್ನ ತಾಯನ್ನು ಉಳಿಸಿಕೊಳ್ಳಲು ತಾನು ಸಾಧ್ಯಂತ ಏನು ಮಾಡಬಹುದು ಎಂದು ಕನಸು ಕಾಣುವುದು ನನಗೆ ಗೀಳಾಗಿಬಿಟ್ಟಿತ್ತು.

ಇವತ್ತು ಅವರ ಕಣ್ಣುಗಳು ದೇವರ ಕಣ್ಣುಗಳಿಗಿಂತಲೂ ಅಷ್ಟೊಂದು ಪ್ರೀತಿ ಕರುಣೆ ವಿಶ್ವಾಸದಲ್ಲಿ ಹೊಳೆಯುತ್ತಿದ್ದವು. ಪ್ರಾಯದ ಚೆಲುವೆಯರೂ! ಈ ರಾತ್ರಿ ಊಟ ಆದ ಮೇಲೆ ನಾ ನಿನಗೆ ತಾಂಬೂಲ ಕೊಡುವೆ ಎಂದು ಮುದ್ದಿನಿಂದ ವಯ್ಯಾರದಲ್ಲಿ ಹಿತ್ತಲ ಬೇಲಿ ಸಾಲಿನ ಮರೆಯಲ್ಲಿ ಬೇಕಾದವರಿಗೆ ಹೇಳಿಕೊಳ್ಳುತ್ತಿದ್ದರು.

ದೊಡ್ಡವರು ಕೋಣಗಳ ದಿವ್ಯ ಮೌನದಲ್ಲಿ ಕರೆದೊಯ್ದು ಮೈ ತೊಳೆದು ಅದೇ ಹೊಳೆಯಲ್ಲಿ ಪೂಜೆ ಮಾಡಿ ಕರೆತರುವ ಹೊತ್ತಿಗೆ ಎಡಾಗಲಾಗುತ್ತಿತ್ತು. ಆ ಕ್ಷಣ ಇನ್ನೇನೊ ಬರುತ್ತದೆ ಎಂದು ದುಂಡಂಗಣದಲ್ಲಿ ಕಾಯುತ್ತಿದ್ದರು. ಬಲಾಢ್ಯ ಗಂಡಸರು. ಅಷ್ಟು ಸುಲಭ ಅಲ್ಲ ಕೋಣಗಳ ಕತ್ತು ಮುರಿದು ಹೊಟ್ಟೆಗೆ ಎರಡು ಸುತ್ತು ಹಗ್ಗ ಬಿಗಿದು ಆ ಕಡೆ ಹತ್ತು ಈ ಕಡೆ ಹತ್ತು ಜನ ಬಲಬಿಟ್ಟು ಎಳೆದ ಕೂಡಲೆ ಕಣಕಾಲುಗಳಿಗೆ ಕಟ್ಟಿದ್ದ ಹಗ್ಗಗಳನ್ನು ಮೂರು ಮೂರು ಮಂದಿ ಒಂದೇ ಅಳತೆಯಲ್ಲಿ ಎಳೆದುರುಳಿಸಿ ಬಿಡುತ್ತಿದ್ದರು. ಎಚ್ಚರ ತಪ್ಪಿದರೆ ಕೋಣಗಳ ಕೊಂಬುಗಳು ಇರಿದು ಬಿಡುತಿದ್ದವು. ಕೊರಳಗ್ಗವನ್ನು ಮೊದಲೆ ಅತ್ತಿತ್ತ ಹಿಡಿದೆಳೆದಿರುತ್ತಿದ್ದರು. ಆದರೂ ಕೋಣಗಳು ಅಪಾಯ ಅರಿತು ಬಾರೀ ಹೋರಾಟ ಮಾಡುತ್ತಿದ್ದವು. ಅವುಗಳು ಬಿದ್ದು ವದರಾಡುವ ರಭಸಕ್ಕೆ ಧೂಳೆದ್ದ ಆ ಕೆಮ್ಮುಗಿಲ ಸಂಜೆಯ ಆಗಮನದಲ್ಲಿ ಏನಾಗುತ್ತಿದೆ ಎಂಬುದೇ ತಿಳಿಯುತ್ತಿರಲಿಲ್ಲ.

ಕತ್ತು ಕೊಯ್ಯಲು ಚಾಣಾಕ್ಷರಿರಬೇಕು. ಛೇ; ನನಗಂತೂ ಅದನ್ನು ನೋಡಲು ಸಾಧ್ಯವಿರಲಿಲ್ಲ. ತಮಟೆ ನಗಾರಿ ಸಡಗರವಿಲ್ಲ. ಕದ್ದು ಮುಚ್ಚಿ ತಿಂದು ಕದ್ದು ಮುಚ್ಚಿ ಸಡಗರ ಪಡಬೇಕೊ. ಎಂತಹದೊ ಮಾಂಸದ ಯಜ್ಞ ಯಾಗವೇ ನಡೆದು ಹೋಗುತಿತ್ತು. ಹೆಂಗಸರು ತಮ್ಮ ಸರದಿಯ ದೊಡ್ಡ ದೊಡ್ಡ ಬಿದಿರು ಬುಟ್ಟಿಗಳ ಹಿಡಿದು ಕಾತರಿಸುತ್ತಿದ್ದರು. ಬೇಗ ಕಾರ್ಯಾಚರಣೆ ಮುಗಿಯಬೇಕಿತ್ತು. ಹತ್ತಾರು ಕೈಗಳು ಕೊರಳ ದೊಡ್ಡ ಮಚ್ಚಿನಿಂದ ಚರಚರ ಕೊಯ್ಯುತ್ತಿರುವಂತೆ ರಕ್ತ ಚಿಮ್ಮುತಿತ್ತು. ಆ ರಕ್ತವನ್ನು ದೊಡ್ಡ ದಬರಿಯಲ್ಲಿ ತುಂಬಿಕೊಂಡು ಉಪ್ಪು ಈರುಳ್ಳಿ ಮೆಣಸಿನಕಾಯಿಗಳ ದೊಡ್ಡ ಬಾಂಡ್ಲಿಗೆ ಹಾಕಿ ಎಣ್ಣೆಯಲ್ಲಿ ಕರಿದು ದಬರಿಯ ನೆತ್ತರ ಸುರಿದು ಕದಡಿ ಆ ಕ್ಷಣದಲ್ಲೇ ನೆರೆದಿದ್ದ ಎಲ್ಲರಿಗೂ ಮುತ್ತುಗದ ಎಲೆಯಲ್ಲಿ ಹಾಕಿಕೊಟ್ಟು ಅವರ ಮಾಂಸ ಬಯಕೆಯ ದಾಹವನ್ನು ಕ್ಷಣ ಮಾತ್ರದಲ್ಲಿ ತಣಿಸುತ್ತಿದ್ದರು.

ಇದಾದ ಕೂಡಲೇ ಕೋಣಗಳ ಚರ್ಮ ಸುಲಿದು ಅಂಗಾಂಗಗಳ ಬೇರ್ಪಡಿಸಿ ಅಳತೆ ಪ್ರಕಾರ ದಪ್ಪ ತುಂಡು ಮಾಡಿ ದಿವ್ಯವಾದ ಯಾವುದೊ ದೇವತಾ ಕಾರ್ಯದಲ್ಲಿ ಲೀನವಾದವರಂತೆ ತೊಡಗುತ್ತಿದ್ದರು. ಕೆಲವರಂತು ತತಾನ್ ತೂತಾದ ಬನಿಯನ್‌ಗಳಲ್ಲಿ ನೆತ್ತರು ಹಾರಿಸಿಕೊಂಡು ವಿಚಿತ್ರವಾಗಿ ಕಾಣುತ್ತಿದ್ದರು. ಯಾರೂ ಅಡ್ಡ ಮಾತಾಡುವಂತಿಲ್ಲ. ಎಲ್ಲವೂ ಮಚ್ಚು ಕೊಡಲಿ ಚಾಕು ಬಾಕು ಚೂರಿ ಇತ್ಯಾದಿಗಳೇ ಸದ್ದು ಮಾಡುತ್ತಿದ್ದುದು. ಒಂದೊಂದರ ತೊಡೆ ಸೀಳಿ ಬೇರ್ಪಡಿಸುವುದು ರೇಜಿಗೆ ಹಿಡಿಸುತ್ತಿತ್ತು. ಕೋಣಗಳ ಕಳ್ಳು ಪಚ್ಚಿ ಜಠಾರ, ಗೊಮ್ಮೆಗಳನ್ನೆಲ್ಲ ಪ್ರತ್ಯೇಕಿಸಿ ನೀಟಾಗಿ ತೊಳೆದು ಅವುಗಳನ್ನು ತುಂಡು ಮಾಡಿ ಗುಡ್ಡೆಗೆ ಹಂಚುತ್ತಿದ್ದರು. ಅಂತಹ ಮಾಂಸ ನ್ಯಾಯ ನಿಷ್ಠೆ! ಒಬ್ಬರಿಗೂ ಒಂದು ತುಂಡು ಬಾಡು ಹೆಚ್ಚಿಲ್ಲ ಕಡಿಮೆ ಇಲ್ಲ. ಯಾವ ತೂಕವೂ ಇರಲಿಲ್ಲ ಅಂತಹ ಮಾಂಸ ಸಮಾನತೆ ಅವರಲ್ಲಿತ್ತು.

ಆಗಾಗ ಕೆಲವರು ಊರ ಮುಂದೆ ಹೋಗಿ ಕದ್ದುಮುಚ್ಚಿ ಏನಾದರೂ ಅಪಾಯ ಉಂಟೇ ಎಂದು ಗಮನಿಸಿ ಬರುತ್ತಿದ್ದರು. ಮನೆ ಮನೆಗಳಲ್ಲಿ ಮಾಂಸ ಬೇಯಿಸಲು ಬಲವಾದ ಸೌದೆಗಳು ಒಲೆ ಮುಂದೆ ಆಗಲೇ ಕಾದಿದ್ದವು. ಕೆಲವರು ರಸವತ್ತಾದ ಕಾರ ಮಸಾಲೆಗಳ ರೆಡಿಮಾಡಿಕೊಳ್ಳುತ್ತಿದ್ದರು. ಯಾವ ಆತಂಕವೂ ಇರಲಿಲ್ಲ. ಮೆಲ್ಲಗೆ ಈಗ ಮಾಂಸವ ಪಾಲು ಹಾಕುವ ಹೊತ್ತಿಗೆ ನಿರಾಳತೆ ಬಂದು ಜನ ಮಾಂಸದ ಗುಣಗಾನ ಮಾಡುತ್ತಿದ್ದರು. ಆ ಇಪ್ಪತ್ತು ವರ್ಷಗಳ ಹಿಂದೆ ನೋಡಪ್ಪ ಮಳೆ ಬೆಳೆ ಚೆನ್ನಾಗಿ ಆಗಿ ಹೊಳೆಬಂದು ಐನಾತಿ ಕೋಣಗಳ ಮಾಂಸವ ತಿಂದಿದ್ದೋ.. ಅದಾದ ನಂತರಕ್ಕೆ ಇದೇ ಮೊದಲ ಸಲ ನೋಡಪ್ಪಾ ಎಂದು ಮಾಂಸ ಹಂಚುವ ಯಜಮಾನರು ಗತಕಾಲದ ಎಮ್ಮೆ ದನಗಳ ಮಾಂಸದ ಸವಿಯನ್ನು ನೆನೆದು ತಮಾಷೆ ಮಾಡುತ್ತಿದ್ದರು.

ಅಷ್ಟೊತ್ತಿಗಾಗಲೇ ಹಲವರು ಎಂಡ ಸೇವಿಸಿದ್ದರು. ಮೂಳೆಗಳನ್ನು ಸಮನಾಗಿ ಹಂಚುತ್ತಿದ್ದರು. ಎಮ್ಮೆ ಕೋಣದ ಚರ್ಮಗಳ ಬಿಡಿಸಿ ಅದಾಗಲೇ ಅವನ್ನು ನಾಳೆ ನಗಾರಿ ಮಾಡಲು ಎತ್ತಿಟ್ಟಿದ್ದರು. ಅಂತೂ ಮಾಂಸ ಹಂಚಿ ಆಯಿತು. ಅದಕ್ಕೊಂದು ವಿಧಿಯಿತ್ತು. ಮುಸ್ಸಂಜೆ ಹೊತ್ತು. ಹಾಗೆ ಹಂಚಿದ ಮೇಲೆ ಒಂದು ಮರಿ ನಾಯಿಯೂ ಅಲ್ಲಿ ಇರುವಂತಿರಲಿಲ್ಲ. ಹಸಿರು ತೆಂಗಿನ ಗರಿಗಳ ಹೆಣೆದು ಸಾರಿಸಿದ್ದ ದುಂಡಂಗಳದಲ್ಲಿ ಹಾಕಿ ಅವುಗಳ ಮೇಲೆ ಗುಡ್ಡೆ ಬಾಡನ್ನು ಹಂಚಲಾಗುತಿತ್ತು. ಆ ಸಾಕ್ಷಾತ್ ಮಾರವ್ವನೆ ಬಂದು ಮಾಂಸದ ಗುಡ್ಡೆಗೆ ಹಾರೈಸಿ; ತಾನು ತಿಂದು ಬಿಟ್ಟಿದ್ದನ್ನು ನೀವೀಗ ತಿನ್ನುತ್ತೀರಿ… ತಿನ್ನಿ ತಿನ್ನಿ ನಿಮಗೆ ಒಳ್ಳೆಯದಾಗಲಿ ಎಂದು ಆಶೀರ್ವದಿಸುತ್ತಾಳೆಂದು ನಂಬಿಕೆ. ಹಾಗೆ ಆಕೆ ಆ ತಾಯಿ ಮಾರೆಯ ಕಣ್ಣಿಗೆ ನಾವು ಬೀಳಬಾರದು ಎಂದು ಎಲ್ಲರೂ ಅಲ್ಲೇ ಇದ್ದ ಮರೆಯಲ್ಲಿ ಕಣ್ಣು ಮುಚ್ಚಿ ಐದು ನಿಮಿಷ ಗಪ್‌ಚಿಪ್ಪಾಗಿ ಕೂತುಬಿಡುತ್ತಿದ್ದರು. ಏನೇ ಸದ್ದಾದರೂ ತಿರುಗಿ ನೋಡುವಂತಿರಲಿಲ್ಲ!

ಏನೋ ಬೇಲಿ ಗುಂಪಿನಿಂದ ನಿರ್ದಯ ಸದ್ದು. ಇಬ್ಬರು ಅಜಾನುಬಾಹುಗಳು. ಅಲ್ಲಿ ತಳದ ಮರೆಯಲ್ಲಿ ಆ ಜನರ ಮುಗ್ಧ ಪ್ರಾರ್ಥನೆ. ಬಾಡು ತಿನ್ನುವ ಆಸೆಯಲ್ಲ. ಎಂಡ ಕುಡಿದು ಮಜ ಮಾಡುವ ಕ್ಷಣ ಗಣನೆ ಅಲ್ಲ.

‘ಅಹಾ ತಾಯಿ ಮಾರೀ… ನಾವು ಪಾಪಿಗಳು. ಏನು ತಪ್ಪು ಮಾಡುತ್ತೇವೊ ತಿಳಿಯದು. ನೀನು ಆದಿಶಕ್ತಿ ಮಹಾಂಕಾಳಿಕಾ ದೇವಿ. ನಿನ್ನ ಮಕ್ಕಳು ನಾವು. ನೀನೇ ತಾನೇನವ್ವಾ ತಿನ್ನಿ ಎಂದು ಕೋಣಗಳ ನಮಗೆ ಕೊಟ್ಟಿದ್ದು… ನಮ್ಮನ್ನು ಬಿಟ್ಟು ಬೇರೆ ಯಾರು ತಿನ್ನುತ್ತಾರೆ. ನೀನು ಹೇಸಿಗೆ ಕೊಟ್ಟರೂ ತಿನ್ನುತ್ತೇವೆ. ಕೃಪೆತೋರಿ ಕೋಣದ ಮಾಂಸ ಪ್ರಸಾದವ ಕೊಟ್ಟರೂ ತಿನ್ನುತ್ತೇವೆ ತಾಯೇ… ತಾಯೀ, ದೊಡ್ಡವರ ನೀತಿಯಲ್ಲಿ ನಮ್ಮದೆಲ್ಲ ತಪ್ಪು… ಕ್ಷಮಿಸು ತಾಯೀ, ತಿಂದ ಪ್ರಸಾದವಾದರೂ ಕೊನೆಗೆ ಏನಾಗುವುದು ತಾಯೀ…’ ಎನ್ನುತ್ತಿದ್ದಂತೆಯೆ ಐದು ನಿಮಿಷ ಮುಗಿದಿತ್ತು. ನನ್ನ ಅಪ್ಪ ಪೇದೆಯ ಜೊತೆ ಬಂದೂಕು ಹಿಡಿದು ಬಂದಿದ್ದ.

ಆಗಲೂ ಅದೇ ಕಷ್ಟ ನರಕ. ಎಮ್ಮೆ ದನಗಳ ಮಾಂಸ ತಿನ್ನುವಂತಿರಲಿಲ್ಲಾ… ಯಾವ ಕಾಲದ ಚರಿತ್ರೆ! ಸಾಧ್ಯವಾದರೆ ದನದ ಮಾಂಸ ತಿಂದು ಶಾಲೆಗೆ ಹಾಜರಾಗಿದ್ದರಿಂದ ನಾವು ಹುಡುಗರು ಏನೇನು ನರಕ ಅನುಭವಿಸುತ್ತಿದ್ದೆವು ಎಂಬುದೇ ಭೀತಿ. ಹೊಲಗೇರಿಗಳಲ್ಲಿ ದನ ಕತ್ತರಿಸುವುದನ್ನು ಸರ್ಕಾರ ನಿಷೇಧಿಸಿತ್ತು. ‘ಅಯ್ಯೋ, ನಮ್ ಬದ್ನೆಕಾಯಿ ನಾವು ತುಂಡ್ಮಾಡ್ಕಂಡು ತಿಂತೀವಿ… ಪೋಲೀಸರ ಪರ್ಮಿಸನ್ ನಮಗೆ ಯಾಕೆ ಬೇಕು’ ಎಂದು ಕೆಲವು ಹಿರಿಯರು ಕೂಗಾಡುತ್ತಿದ್ದರು. ಪ್ರಯೋಜನ ಇರಲಿಲ್ಲಾ.

ಪೋಲೀಸರು ಸೈಕಲ್ ಮೇಲೆ ಬಂದ ಕೂಡಲೆ ಎಲ್ಲರೂ ಬಿಲ ಸೇರುತ್ತಿದ್ದರು. ಅಪ್ಪ ಯಶಸ್ವಿಯಾಗಿದ್ದ. ಐದು ಲೀಟರ್ ಟಿನ್ನಿನ ಸೀಮೆ ಎಣ್ಣೆ ಕ್ಯಾನನ್ನು ಆ ಇಡೀ ಮಾಂಸದ ದುಂಡು ಅಂಗಳಕ್ಕೆ ಎಚ್ಚರದಲ್ಲಿ ಚೆಲ್ಲಿಬಿಟ್ಟಿದ್ದ. ಇದೇನಿದು ಸೀಮೆಣ್ಣೆ ವಾಸನೆ ಎಂದು ಜನ ಹೆದರಿ; ಹೇಯ್ ಯಾರದು ಎಂದ ಕೂಡಲೆ ಅಪ್ಪ ದೊಡ್ಡ ಬ್ಯಾಟರಿ ಬಿಟ್ಟಿದ್ದ. ಪೋಲೀಸನು ಬಂದೂಕಿನಿಂದ ಗುಂಡು ಹಾರಿಸಿದ್ದ. ಭಗ್ ಎಂದು ಮಾಂಸದ ಗುಡ್ಡೆಗಳೆಲ್ಲ ಉರಿಯತೊಡಗಿದವು. ಪೋಲೀಸನು ಆರ್ಭಟಿಸುತ್ತ, ನಿಮ್ಮನ್ನೆಲ್ಲ ಕಂಬಿ ಎಣಿಸುವಂತೆ ಮಾಡುವೆ ಎಂದು ಕೂಗಿದ ಕೂಡಲೆ… ಮತ್ತೆ ಒಂದು ಗುಂಡನ್ನು ಗಾಳಿಗೆ ತೂರಿದ ಕೂಡಲೇ ಅಲ್ಲಿದ್ದವರೆಲ್ಲಾ ತಮ್ಮ ಹಣೆಗೆ ಗುಂಡು ಬಡಿಯಿತು ಎಂಬಂತೆ ದಿಕ್ಕಾಪಾಲಾಗಿ ಚದುರಿದರು. ಭಾಗಶಃ ಆತನೇ ಭೀತಿಗೆ ಒಳಗಾಗಿ; ಹಾಗೆ ಎರಡನೆ ಗುಂಡು ಹಾರಿಸಿದ್ದ. ಏನು ಸದರವೇ; ಇಡೀ ಕೇರಿಯ ಮಾಂಸ ಭಕ್ಷ್ಯದ ಜನರನ್ನು ತಡೆಯುವುದು. ಚರಿತ್ರೆ ಕೇವಲ ಒಂದು ಬಂದೂಕು, ಪಿಸ್ತೂಲು, ರಿವಾಲ್ವಾರ್… ಆ ಮೊದಲು ಬಾಬರ್ ತಂದ ಒಂದು ಪಿರಂಗಿ… ಮಣ್ಣಿನಲ್ಲಿ ಎಷ್ಟೊಂದು ನೆತ್ತರ ಕರಗಿಸಿವೆಯೋ.

ಅಪ್ಪನನ್ನೂ ಪೇದೆಯನ್ನು ಕಂಡಕೂಡಲೆ ಇಡೀ ಕೇರಿಗಳು ಯಮಧೂತರನ್ನು ಕಂಡಂತೆ ಬೆದರಿ ಯಾವ ಬಾಡು ಬಳ್ಳೆಯೂ ಬೇಡ ಎಂದು ದಿಕ್ಕಾಪಾಲಾಗಿದ್ದರು. ಇನ್ನೇನು ಮಾಂಸವನ್ನು ಬಿದಿರು ಬುಟ್ಟಿಗೆ ತುಂಬಿಕೊಳ್ಳಲು ಸಿದ್ಧವಿದ್ದ ಆ ಪ್ರಾಯದ ಹೆಣ್ಣು ಮಕ್ಕಳು ಬುಟ್ಟಿ ಬಿಸಾಡಿ; ಆ ತಾಂಬೂಲ ಎಸೆದು ಕತ್ತಲಲ್ಲಿ ಎತ್ತೆತ್ತಲೊ ನುಗ್ಗಿ ಮನೆ ಸೇರಿ ಬಟ್ಟೆ ಬದಲಿಸಿಕೊಂಡು ಸ್ಮಶಾನ ಮೌನದಲ್ಲಿ ಮಲಗಿಬಿಟ್ಟಿದ್ದರು. ತಾಳ್ಮೆಗೆಟ್ಟ ಹೈಕಳು ಬಾಯಿಗೆ ಬಾಡು ಸಿಗಲಿಲ್ಲ ಎಂದು ಕಿರುಚುತ್ತಿದ್ದವು. ತಾಯೆಂದಿರು ಬಡಿದು ಬಾಯಿ ಮುಚ್ಚಿಸಿದ್ದರು.

ನನ್ನ ತಾಯಿ ಮಡಕೆ ಗುಡಾಣಗಳ ಸಂದಿಯಲ್ಲಿ ಬಿಕ್ಕಿ ಬಿಕ್ಕಿ ಅತ್ತು ಮಲಗಿದ್ದಳು. ಇಂತಹ ಕೇಡಿಗಂಡನ ಹೆಂಡತಿ ಎಂದು ಯಾರೂ ನನ್ನ ತಾಯನ್ನು ಪ್ರೀತಿಸುತ್ತಿರಲಿಲ್ಲ. ನೀರು ಸೇದುವ ಬಾವಿಗಳ ಹತ್ತಿರವೂ ಮಾತಾಡುತ್ತಿರಲಿಲ್ಲ. ಅತ್ತ ಗಂಡನ ಅನುಮಾನದ ಚೂರಿ; ಇತ್ತ ಜನರ ನಿರಾಕರಣೆಯ ಯಃಕಶ್ಚಿತ್ ಉಪೇಕ್ಷೆ. ನನ್ನ ಜೀವಿತದಲ್ಲಿ ನನ್ಯಾವತ್ತೂ ಹುಡುಃಹುಡುಕಿ ತಾಯ ಸಮಾಧಾನಕ್ಕಾಗಿ; ಅಪ್ಪನ ಹಿಂಸೆಯ ತಪ್ಪಿಸಲು ಬಹಳ ಬಾಲಿಷ ಧೀತ್ಯಾರಗಳನ್ನು ಮಾಡುತ್ತಿದ್ದೆ. ಅದು ಯಾರಿಗೂ ತಟ್ಟುತ್ತಿರಲಿಲ್ಲ. ದೊಡ್ಡವರೆಲ್ಲರೂ ಮಕ್ಕಳ ಹಾಹಾಕಾರವನ್ನು ಯಾಕೆ ಸುಮ್ಮನೆ ನಿರ್ಲಕ್ಷಿಸಿ ಬಿಡುತ್ತಾರೊ… ಅವರ ಧಾವಂತ ಏನೇನೊ… ಗೊತ್ತಾಗುತ್ತಿರಲಿಲ್ಲ ನನಗೆ.

ಅಪ್ಪ ತನ್ನ ಯಾವತ್ತಿನ ಆಪ್ತ ರಕ್ಷಣಾ ಕೋಟೆಗೆ ಬಂದಿದ್ದ. ಬಂದೂಕು ಸಿಡಿಸಿದ ನಂತರ ಇಡೀ ಊರೇ ಖಾಲಿ ಆದಂತಿತ್ತು. ಸಂಭ್ರಮ ಮನುಷ್ಯರ ಕೈಯಿಂದಲೇ, ಯಕಶ್ಚಿತ್ ಆಯುಧದಿಂದಲೇ ಹೇಗೆ ಧ್ವಂಸವಾಗಿ ಬಿಡುತ್ತದೆ ಎಂದು ಯೋಚಿಸುವ ಶಕ್ತಿ ಅವರಿಗಿರಲಿಲ್ಲ. ಆದರೆ ಅಂತಹ ಒಂದು ಬಂದೂಕು ತನ್ನ ಕೈಗೆ ಸಿಕ್ಕರೆ ನೂರೊಂದು ಗುಂಡ ಹಾರಿಸಬಹುದಲ್ಲಾ ಎಂದು ಯೋಚಿಸುತ್ತಿದ್ದೆ. ತಂದೆಯನ್ನು ಹಾಗೆ ನಿರ್ದಯವಾಗಿ ಕೊಲ್ಲಬೇಕು ಎನಿಸಿಬಿಟ್ಟಿತ್ತು. ತಾಯಿ ನನ್ನ ಆ ಬಯಕೆಯನ್ನು ಕೇಳಿ, ನಿಮ್ಮಪ್ಪನ ಶನಿ ಬುದ್ಧಿ ನಿನಗೂ ಬಂದು ಬಿಡುತ್ತದೆ ಎಂದು ಬೈಯ್ದಿದ್ದಳು.

ಚರಚರ ಚಿಟಿ ಚಿಟಿ ಕರಕರ ಮಾಂಸದ ಗುಡ್ಡೆಗಳು ಕೊಬ್ಬಿನ ಜೊತೆಗೆ ಬೇಯುತ್ತಿದ್ದವು. ಊರ ತುಂಬ ಗಾಳಿ ಬೀಸಿದಂತೆಲ್ಲ ಸುಟ್ಟು ಕರಕಲಾಗಿ ಮಸಿಯಿಡಿಯುತ್ತಿದ್ದ ಗುಡ್ಡೆ ಬಾಡುಗಳು, ಆ ಯಾವುದೊ ಆದಿ ಮಾನವರ ಆತ್ಮದ ಸಮಾಧಿಯಂತೆ ಉರಿಯುತ್ತಿದ್ದವು. ಇಡೀ ಹೊಲಗೇರಿ ಬೆದರಿ ಬಿಲಗಳಲ್ಲೇ ಬಿಕ್ಕಿ ಬಿಕ್ಕಿ ಅಳುತ್ತಿತ್ತು. ಮೇಲು ಕೇರಿಗಳು ಇದೇನಿದು ಇನ್ನೊಂದು ಸುಟ್ಟ ಘಮಲು ಎಂದು ನಟ್ಟಿರುಳ ನಿದ್ದೆಯಲ್ಲೂ ಉಸಿರನ್ನು ಆಗ್ರಾಣಿಸುತ್ತಿದ್ದವು. ನಮ್ಮಪ್ಪನಿಗೆ ಎಲ್ಲರ ಬೆಂಬಲವಿತ್ತು ದುರ್ದೈವ ಎಂದರೆ ಅವನೇ ನಮಗೆ ವಿರುದ್ಧವಾಗಿದ್ದ. ಆ ಹೊಲಸು ಮಾಂಸ ಎಂದು ಯಾರು ಅವನಿಗೆ ತುಂಬಿದ್ದರೊ… ಅವರಣ್ಣ ಒಬ್ಬ ಆ ಕಾಲಕ್ಕೆ ದೊಡ್ಡ ಅಧಿಕಾರಿಯಾಗಿದ್ದ.

ಮತ್ತೆ ಮಧ್ಯರಾತ್ರಿ ಆಗಿತ್ತು. ಉಚ್ಚೆ ಉಯ್ಯಲು ಎಚ್ಚರವಾಗಿತ್ತು. ನನ್ನ ಮೂವರು ಅತ್ತೆಯರಿಗೆ ಅಂಟಿಕೊಂಡು ಬೆಳೆದಿದ್ದೆ. ನಮ್ಮ ಹಿತ್ತಲಲ್ಲೇ ಆ ದುಂಡು ಮಾಂಸಕಣ ಇದ್ದಿದ್ದು. ನಾವು ನೋಡಿದೆವು. ಒಂದೊಂದು ಮಾಂಸದ ತುಂಡುಗಳೂ ಪೂರ್ವಿಕರ ಹಣತೆಯಂತೆ ಉರಿಯುತ್ತಿದ್ದವು. ಅತ್ತೆಯರು ಕೈಮುಗಿದರು. ಅತ್ತ ಕೂತು ಜೋರು ಉಚ್ಚೆ ಉಯ್ದರು. ಹೆದರಬೇಡ ಬಾ ಎಂದು ಕರೆದು ತಪ್ಪಿಕೊಂಡು ಮಲಗಿದರು.