ಮನೆಯಲ್ಲಿ ಅಷ್ಟು ವರ್ಷಗಳ ಕಾಲ ಬದುಕಿದ್ದರಿಂದ ಎಲ್ಲ ವಸ್ತುಗಳು ಅಸ್ಪಷ್ಟವಾಗಿದ್ದರೂ ಪತ್ತೆ ಹಚ್ಚುವಷ್ಟು ಚುರುಕಾಗಿತ್ತು ಅಜ್ಜಿ. ಕೊನೆಗೆ ಅಜ್ಜಿಗೆ ಕಣ್ಣು ಕಾಣುತ್ತೋ ಇಲ್ಲವೋ ಅಂತ ಪತ್ತೆ ಹಚ್ಚಲು ನಮ್ಮ ತಂದೆ ಒಂದು ಉಪಾಯ ಮಾಡಿದ್ದರು. ಅಜ್ಜಿಯನ್ನು ಸಿನೆಮಾಕ್ಕೆ ಕರೆದುಕೊಂಡುಹೋಗಿ ಪರದೆಯ ಮುಂದೆ ಕೂರಿಸದೆ, ಹಿಂದು ಮುಂದಾಗಿ ಕೂರಿಸಿದ್ದರು. ಪ್ರೊಜೆಕ್ಟರ್ ರೂಮಿನಿಂದ ಬೆಳಕು ಬರುತ್ತಲ್ಲ, ಅದು ಅಜ್ಜಿಯ ಕಣ್ಣಿಗೆ ಕುಕ್ಕುತ್ತಿತ್ತು. 
ಎಂ. ಆರ್. ಕಮಲ ಅವರ ಲೇಖನಗಳ ಹೊಸ ಪುಸ್ತಕ “ಊರ ಬೀದಿಯ ಸುತ್ತು”ದಿಂದ ಒಂದು ಲೇಖನ ನಿಮ್ಮ ಓದಿಗೆ

 

ಮೊನ್ನೆ ಸೌರ ಕನ್ನಡಕ ಹಾಕ್ಕೊಂಡು ಸೂರ್ಯಗ್ರಹಣವನ್ನು ಕಾಳ ನೋಡಿದ ಅಂತ ಒಂದು ಫೋಟೋ ಹಾಕಿದ್ದೆ. ನೀವೆಲ್ಲ ಮೆಚ್ಚಿ ಕೊಂಡಾಡಿದಿರಿ. ಆ ಬಡ್ಡಿಮಗ ಯಾವ ಕಡೆ ತಿರುಗಿಕೊಂಡಿದ್ದ ಅಂತ ಒಂಚೂರಾದರೂ ಗಮನಿಸಿದಿರಾ? ಅವನು ನಮ್ಮ ಮನೆಯ ಕಡೆ ತಿರುಗಿಕೊಂಡು ನಾನು ತೋರಿಸೋ ಬಿಸ್ಕತ್ತು ನೋಡಿಕೊಂಡು ನಿಂತು ನಿಮಗೆಲ್ಲ ಬಿಸ್ಕತ್ತು ಹಾಕಿದ ಅಷ್ಟೇ! ಸೂರ್ಯಗ್ರಹಣ ತೋರಿಸೋದಕ್ಕೆ ಟೆರೇಸ್ ಮೇಲೆ ಕರ್ಕೊಂಡು ಹೋಗಿದ್ದೆ. ಈ ಮಹರಾಯ ಕತ್ತೆತ್ತಿ ಕೂಡ ನೋಡಲಿಲ್ಲ. ಅಲ್ಲೆಲ್ಲೋ ಹರಿದಾಡ್ತಿದ್ದ ಇರುವೆ, ಗೊದ್ದ ಹುಡುಕಿಕೊಂಡು, ಕಂಡ ಕಂಡಿದ್ದನ್ನೆಲ್ಲ ಮೂಸಿಕೊಂಡು ಓಡಾಡ್ತಿದ್ದ ಅಷ್ಟೇ. ಇವನಿಗಾಗಿ ಪ್ಲಾನಿಟೇರಿಯಂನಿಂದ ದುಡ್ಡು ಕೊಟ್ಟು ತಂದಿದ್ದ ಕನ್ನಡಕ ವೇಸ್ಟ್ ಆಯ್ತು ಅಷ್ಟೇ.

(ಎಂ. ಆರ್. ಕಮಲ)

ಆದರೆ ಕನ್ನಡಕ ಹಾಕಿಕೊಂಡು ನಿಂತಿದ್ದ ಇವನ ಪೋಸ್ ನೋಡಿದರೆ ಯಾರಾದರೂ ಇವನು ಸೂರ್ಯಗ್ರಹಣ ನೋಡೇಬಿಟ್ಟ ಅಂದುಕೋಬೇಕು ಹಾಗಿತ್ತು. ನನಗೆ ನಮ್ಮಜ್ಜಿಯ ನೆನಪು ಬಂತು. ಅಜ್ಜಿಗೆ ಸರಿಯಾಗಿ ಕಣ್ಣು ಕಾಣುತ್ತಿರಲಿಲ್ಲ. ಅಭ್ಯಾಸಬಲದ ಮೇಲೆ ಮನೆಯಲ್ಲಿ ಓಡಾಡಿಕೊಂಡಿತ್ತು. `ನಿನಗೆ ಕಣ್ಣು ಕಾಣಿಸಲ್ಲ’ ಅಂದರೆ ವಿಪರೀತ ಸಿಟ್ಟು ಬರ್ತಿತ್ತು. ಅದು ಕಾಣುತ್ತೆ, ಇದು ಕಾಣುತ್ತೆ ಅಂತ ಸುಳ್ಳು ಹೇಳ್ತಿತ್ತು. ಹೀಗೆ ಸುಳ್ಳು ಹೇಳ್ಕೊಂಡು ಕೊನೆಗೆ ಗ್ಲಾಕೋಮದಿಂದ ಕುರುಡೇ ಆಯ್ತು. ಮನೆಯಲ್ಲಿ ಅಷ್ಟು ವರ್ಷಗಳ ಕಾಲ ಬದುಕಿದ್ದರಿಂದ ಎಲ್ಲ ವಸ್ತುಗಳು ಅಸ್ಪಷ್ಟವಾಗಿದ್ದರೂ ಪತ್ತೆ ಹಚ್ಚುವಷ್ಟು ಚುರುಕಾಗಿತ್ತು ಅಜ್ಜಿ. ಕೊನೆಗೆ ಅಜ್ಜಿಗೆ ಕಣ್ಣು ಕಾಣುತ್ತೋ ಇಲ್ಲವೋ ಅಂತ ಪತ್ತೆ ಹಚ್ಚಲು ನಮ್ಮ ತಂದೆ ಒಂದು ಉಪಾಯ ಮಾಡಿದ್ದರು. ಅಜ್ಜಿಯನ್ನು ಸಿನೆಮಾಕ್ಕೆ ಕರೆದುಕೊಂಡುಹೋಗಿ ಪರದೆಯ ಮುಂದೆ ಕೂರಿಸದೆ, ಹಿಂದು ಮುಂದಾಗಿ ಕೂರಿಸಿದ್ದರು. ಪ್ರೊಜೆಕ್ಟರ್ ರೂಮಿನಿಂದ ಬೆಳಕು ಬರುತ್ತಲ್ಲ, ಅದು ಅಜ್ಜಿಯ ಕಣ್ಣಿಗೆ ಕುಕ್ಕುತ್ತಿತ್ತು. ಸಂಭಾಷಣೆಗಳನ್ನು ಕೇಳಿಕೊಂಡು, `ರಾಮು, ಎಷ್ಟು ಚೆನ್ನಾಗಿ ಕಾಣ್ತಿದ್ದೀಯೋ, ಸಿನೆಮಾ ತುಂಬಾ ಚೆನ್ನಾಗಿದೆ’ ಅಂತು. ನಮ್ಮ ತಂದೆಗೆ ಅಜ್ಜಿಯ ಕಣ್ಣಿಗೆ ಏನೋ ಆಗಿದೆ ಅಂತ ಖಾತ್ರಿಯಾಗಿ ನಮ್ಮ ಡಾಕ್ಟರ್ ಚಿಕ್ಕಪ್ಪನ ಹತ್ತಿರ ಕಳಿಸಿದ್ದರು. ಆರು ತಿಂಗಳು ಅಲ್ಲಿದ್ದು ಬಂದರು, ಆದರೆ ಯಾವುದೇ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಅಜ್ಜಿ ಸಿನೆಮಾನೇ ನೋಡದೆ ನೋಡಿದೆ ಅಂತ ಹೇಳಿಕೊಂಡ ಹಾಗೆ ನಮ್ಮ ಕಾಳ ಗ್ರಹಣ ನೋಡದೆ ನೋಡಿದೆ ಅಂದ! ನೀವವನನ್ನು ಕ್ಷಮಿಸಬೇಕು ಅಷ್ಟೇ.

ಇವತ್ತು ಬೆಳಗ್ಗೆ ಕಾಳನನ್ನು ವಾಕ್ ಕರೆದೊಯ್ಯುವಾಗ ನಿನ್ನೆ ನೋಡಿದ `ಬೆಂಗಳೂರು ನಾಗರತ್ನಮ್ಮ’ ನಾಟಕದ ಬಗ್ಗೆ ಹೇಳಿದೆ. ಎರಡು ಕಾರಣಕ್ಕೆ ಅದರ ಬಗ್ಗೆ ಕುತೂಹಲ ಇತ್ತು. ಒಂದು: ಬೆಂಗಳೂರು ನಾಗರತ್ನಮ್ಮನ ಬಗ್ಗೆ ಚಿಕ್ಕಂದಿನಿಂದ ಕೇಳಿರುವ ವಿಷಯಗಳು. ಎರಡು: ನಾಟಕ ರೂಪಕ್ಕೆ ತರುವ ಕೆಲಸವನ್ನು ಪ್ರತಿಭಾ ಮಾಡಿದ್ದಾರೆ ಎನ್ನುವುದು. ಊರಿನಲ್ಲಿದ್ದಾಗ ಅಣ್ಣ ನನಗೆ ಈ ವಿಷಯವನ್ನೆಲ್ಲ ಹೇಳಿದ್ದರು. ಅಣ್ಣನಿಗೆ ತುಂಬಾ ಮೆಚ್ಚುಗೆಯಾಗಿದ್ದ ಜಾವಳಿ ಅಂದರೆ ಬೆಂಗಳೂರು ನಾಗರತ್ನಮ್ಮ ನರಹರಿರಾಯರ ಮೇಲೆ ಬರೆದಿದ್ದ `ಮಾತಾಡಬಾರದೇನೋ ಮಾರಮಣನೇ’ . ಅದನ್ನಂತೂ ಅಣ್ಣ ಸೊಗಸಾಗಿ ಹಾಡ್ತಿದ್ದರು. ನಾನು ನೃತ್ಯ ಕಲಿಯುವಾಗ ಮೇಷ್ಟ್ರಿಗೆ ಈ ಜಾವಳಿಯನ್ನು ಹೇಳಿಕೊಡಿ ಅಂತ ಹೇಳಿದ್ದೆ. ನಮ್ಮ ಮೇಷ್ಟ್ರು ಕೋಲಾರ ಕಿಟ್ಟಣ್ಣನವರ ಪರಂಪರೆಯವರು. ಬೆಂಗಳೂರು ನಾಗರತ್ನಮ್ಮ ಕೂಡ ಅದೇ ನೃತ್ಯ ಪರಂಪರೆಯವರು ಅಂತ ಹೇಳ್ತಿದ್ದರು. ಹಾಗೆ ನೋಡಿದರೆ ನಮ್ಮ ಮೀನಾಕ್ಷಿ ಮೇಡಂ (ಮೇಷ್ಟ್ರು ಹೆಂಡತಿ) ನಾಗರತ್ನಮ್ಮನವರ ಮನೆಯಲ್ಲಿಯೇ ಇದ್ದು ಅವರ ಮಗಳ ಹತ್ತಿರ ಸಂಗೀತ ಕಲಿಯುತ್ತಿದ್ದೆ ಎಂದು ತರಗತಿಯಲ್ಲಿ ಹೇಳಿದ ನೆನಪು. ಒಟ್ಟಿನಲ್ಲಿ ಕಮಾಚ್ ರಾಗದಲ್ಲಿ ಆ ಜಾವಳಿಯನ್ನು ಮೇಷ್ಟ್ರು ಆರಂಭಿಸಿದ್ದರು. ಅದು ಪೂರ್ತಿ ಮಾಡಿದೆನೋ ಇಲ್ಲವೋ ನೆನಪಿಲ್ಲ. `ನನ್ನ ಕಾಲೇಜಿನ ಕೆಲಸ, ಬಸಿರು, ಬಾಣಂತನ ಇತ್ಯಾದಿಗಳಲ್ಲಿ ಒಂದನ್ನು ನೆಟ್ಟಗೆ ಮಾಡಲಿಲ್ಲ ಕಾಳ’ ಎಂದು ಗೋಳು ಹೇಳ್ಕೊಂಡೆ.

ಇವತ್ತು ವಾಕಿಂಗ್ ನಲ್ಲಿ ಬರೀ `ಕನ್ನಡ ಜಾವಳಿ’ಗಳ ನೆನಪೇ! ಅಷ್ಟು ಹೊತ್ತಿಗೆ ದಾರಿಯಲ್ಲಿ ಸುಂದರಿ `ಜುಮ್ಮಿ’ ಸಿಕ್ಕಿದ್ದಳು. ಕಾಳ ಅದ್ಯಾಕೋ ಅವಳನ್ನು ಕ್ಯಾರೇ ಅನ್ನಲಿಲ್ಲ. ಹಿಂದೆ ಹಿಂದೆ ತಿರುಗಿ ಇವನನ್ನು ನೋಡಿಕೊಂಡು ಹೋಗುತ್ತಿದ್ದರೆ ಜಾವಳಿಗಳ ಲೋಕದಲ್ಲಿ ಸಿಲುಕಿದ್ದ ನಾನು, `ಪ್ರೀತಿ ತೋರಿದ ಪ್ರಾಣ ಕಾಂತೆಯೊಡನೆ ಬಂದು ಮಾತಾಡಬಾರದೇನೋ ಮಾರಮಣನೇ’ ಎಂದು ಕಾಳನನ್ನು ಬೈದೆ. `ಜಾಣ ನಿನ್ನಯ ಮುಖವನು ಕಾಣದೆ ಪ್ರಾಣವು ನಿಲ್ಲದು ಅರಗಳಿಗೆ’ ಎನ್ನುತ್ತಾ ಪಾಪ ಅವಳು ಹೋದಳು. `ನೋಡ್ತಾ ಇರು, ಪ್ರಾಣನಾಥ ಬಾರದೆ ಹೋದ, ಪ್ರಿಯ ಸಖನ ಕರತಾರೆ’ ಅಂತ ಈಗ ಯಾವುದಾದರೂ ನಾಯಿಯನ್ನು ಜುಮ್ಮಿ ಕಳಿಸ್ತಾಳೆ ಅಥವಾ `ಸಾಕೋ ನಿನ್ನ ಸ್ನೇಹ-ಸರಸ ಇನ್ಯಾತಕೆ’ ಎಂದು ನಿನ್ನನ್ನು ಉಗಿದು ಅಟ್ಟುತ್ತಾಳೆ ಅಂತ ಕಾಳನಿಗೆ ಹೇಳಿದೆ. `ನಿನಗೆ ಜಾವಳಿ ಹುಚ್ಚು ಹಿಡಿದಿದೆ ಅಂತ ನನ್ನ ಹತ್ತಿರ ನಿನ್ನ ಪಾಂಡಿತ್ಯ ತೋರಿಸಬೇಡ’ ಅಂತ ಕಾಳ ದುರುಗುಟ್ಟಿ ನಡೆದ.

ನಾವಿಬ್ಬರೂ ಹೀಗೆ ಮೈಮರೆತು ರಸ್ತೆಯ ಎಡಬದಿಯಲ್ಲಿ ಹೋಗಬೇಕಾದರೆ ಬಲಬದಿಯಲ್ಲಿದ್ದ ಇಬ್ಬರು ವಯಸ್ಸಾದ ಹೆಂಗಸರು ಕಿರುಚಿಕೊಂಡರು. ತಿರುಗಿ ನೋಡಿದರೆ ಅಲ್ಲೊಬ್ಬ ಸರಿಯಾಗಿ ಸ್ಕೂಟರ್ ಹೊಡೆಯಲು ಬಾರದವನು ಅವರ ಮೇಲೆ ಹೆಚ್ಚೂ ಕಡಿಮೆ ಬಿದ್ದೇ ಹೋಗಿದ್ದ ಸ್ಕೂಟರ್ ಮೇಲೆ ಎತ್ತುತ್ತಿದ್ದ. ಆ ಚಾಲಾಕಿ ಹೆಣ್ಣುಮಕ್ಕಳು ಅವನನ್ನು ಬೈಯದೆ, `ಹೋಗಲಿ ಬಿಡಪ್ಪ, ನಿಂದೇನು ತಪ್ಪಿಲ್ಲ. ಆ ಕಡೆ ನಿಂತಿದ್ದ ಕರಿನಾಯಿ ನೋಡಿ ಹೆದರಿಬಿಟ್ಟೆ ಪಾಪ’ ಎಂದು ಅವನ ತಪ್ಪನ್ನು ಎತ್ತಿ ಕಾಳನ ಮೇಲೆ ಹಾಕಲು ನೋಡಿದರು. ನನಗೆ ನಖಶಿಖಾಂತ ಉರಿದುಹೋಯಿತು. ತೇಜಸ್ವಿಯವರ `ಕೃಷ್ಣೇ ಗೌಡನ ಆನೆ’ ಯಲ್ಲಿ ಇದ್ದಬದ್ದವರೆಲ್ಲ ಆನೆಯ ಮೇಲೆ ತಪ್ಪು ಹೊರಿಸೋ ಹಾಗೆ ಕಾಳನ ಮೇಲೆ ಹೊರಿಸೋದಕ್ಕೆ ಬರ್ತಿದ್ದಾರೆ. `ವಯಸ್ಸಾಗಿದೆ ನಿಮಗೆ ಪಾಪ, (ನಾನು ಬಹಳ ಚಿಕ್ಕವಳು ಅನ್ನುವ ಹಾಗೆ) ಸ್ವಲ್ಪ ನೋಡಿಕೊಂಡು ನಡೀರಿ. ಇವತ್ತು ಸ್ಕೂಟರ್ ಮೈಮೇಲೆ ಬೀಳ್ತಿತ್ತು. ನಾಳೆ ಲಾರಿಯೇ ಮೈಮೇಲೆ ಬಿದ್ದರೆ ಏನ್ಮಾಡ್ತೀರಾ’ ಎಂದು ನಗುತ್ತಲೇ ಅಪಹಾಸ್ಯ ಮಾಡಿದೆ.

ಅಷ್ಟು ಹೊತ್ತಿಗೆ ನಮ್ಮ ಪ್ರಸಾರ ಕೀರ್ತಿ, `ಸಾರಸಾಕ್ಷಿ ಸಖನು ಎಲ್ಲಿ? ಸರಸದಿಂದೆಲ್ಲಿರುವನೋ?’ ಎಂದು ಕಾಳನನ್ನು ಹುಡುಕಿಕೊಂಡು ಬಂದಳು. ಅಂಡಾವುಂಡಿ ನಾಯಿಗಂತೂ ಕಾಳನ ಮೇಲೆ ವಿಪರೀತ ಪ್ರೇಮ. `ವಿರಹವು ಹೆಚ್ಚಿ ಪ್ರಾಯವು ವ್ಯರ್ಥವಾಗಿ ಹೋಯಿತಲ್ಲೇ’ ಎಂದು ಹಾಡಿಕೊಂಡೇ ಬಂದಳು. ಈ ಅಂಡಾವುಂಡಿ ಒಂದು ತಿಂಗಳ ಹಿಂದೆ ಹತ್ತು ಮರಿಗಳನ್ನು ಅದೆಲ್ಲೋ ಹಾಕಿ, ಓಡಾಡುತ್ತಿದ್ದಳು. ಸದ್ಯ, ಹೋದ ಸಲದ ತರಹ ನಮ್ಮ ಮನೆಯ ಮುಂದೆ ತಂದು `ರೋದನೆ’ ಕೊಡಲಿಲ್ಲ ಅಂತ ಸಂತೋಷವಾಗಿದ್ದೆ. ಆದರೆ ನಿನ್ನೆ ರಾತ್ರಿ `ಅವನೇ ಶ್ರೀಮನ್ನಾರಾಯಣ’ ಸಿನೆಮಾ ನೋಡ್ಕೊಂಡು ರಾತ್ರಿ ಒಂದು ಗಂಟೆಗೆ ಮನೆಗೆ ಬಂದರೆ ನಮ್ಮ ಮನೆಯ ಮುಂದಿನ ಚರಂಡಿಯಲ್ಲಿ ಎರಡು ನಾಯಿಮರಿಗಳು ಕುಯ್ಯೋ ಮರ್ರೋ ಎನ್ನುತ್ತಿವೆ. ಒಂದು ಚಿಪ್ಪಿನಲ್ಲಿ ಹಾಲಿಟ್ಟು `ದರಿದ್ರದವಳು, ನಮ್ಮ ಮನೆಯ ಮುಂದೆ ನಾಯಿ ಮರಿ ತಂದಿಟ್ಟರೆ ಊಟ ಹಾಕ್ತಾರೆ ಅಂತ ಕಂಡುಕೊಂಡಿದ್ದಾಳೆ. ನಾಳೆಯಿಂದ ಇವು ಸತ್ತರೂ ಹಾಲು ಹಾಕೋದಿಲ್ಲ’ ಅಂತ ಬೈಕೊಂಡು ನಿದ್ದೆ ಮಾಡಿದೆ.

ಬೆಳಗ್ಗೆ ಎದ್ದು ನೋಡಿದರೆ ನಾಯಿಮರಿಗಳು ಕಾಣಲಿಲ್ಲ. ನಿಟ್ಟುಸಿರು ಬಿಟ್ಟು ಕಾಳನನ್ನು ವಾಕಿಂಗ್ ಕರೆದುಕೊಂಡು ಬಂದರೆ ಬಾಲ ಅಲ್ಲಾಡಿಸಿಕೊಂಡು ಬಂದು ಜಾವಳಿಯ ಅಭಿನಯ ಮಾಡ್ತಿದ್ದಾಳೆ! ‘ನಿನ್ನ ಮಾರಮಣ ಮಾತಾಡೋದಿಲ್ಲ ತೊಲಗೆ’ ಎಂದು ಉಗಿದು ಬಂದೆ.

 

(ಪುಸ್ತಕ: ಊರ ಬೀದಿಯ ಸುತ್ತು (ವರ್ತಮಾನದ ದಿನಚರಿಯ ಪುಟಗಳು) ಲೇಖಕರು: ಎಂ.ಆರ್. ಕಮಲ, ಪ್ರಕಾಶಕರು: ಕಥನ ಪ್ರಕಾಶನ, ಬೆಲೆ: 175)